ಯಲುರಾಜನ ಮಡದಿ : ಸಾಂಸ್ಕೃತಿಕ ಒಳನೋಟ
ಸೈಯದ್ ಬಿ.
ಪಿ.ಎಚ್.ಡಿ. ಸಂಶೋಧಕರು
ಭಾಷಾಂತರ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-೫೮೩೨೭೬
ಮೊ : ೯೮೮೦೦೫೧೯೯೮, Gmail : syducta@gmail.com
ಪ್ರಸ್ತಾವನೆ
ಜನಪದ ಸಾಹಿತ್ಯ ಸಮಾಜವನ್ನು ವಾಸ್ತವ ನೆಲೆಗಟ್ಟಿನಲ್ಲಿ ನೋಡುವ, ಕಟ್ಟಿಕೊಡುವ ಲಕ್ಷಣ ಹೊಂದಿದೆ. ಅದು ಜನಸಾಮಾನ್ಯರಿಂದ ನಿರ್ಮಾಣವಾಗಿವುದರಿಂದ ಅವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ಒಂದು ಕಾಲಘಟ್ಟದ ಸಾಂಸ್ಕೃತಿಕ ಬದುಕಿನ ವಾಸ್ತವತೆಯನ್ನು ಜನಪದ ಸಾಹಿತ್ಯದಲ್ಲಿ ಮಾತ್ರ ನೋಡಲು ಸಾಧ್ಯವಿದೆ. ಇದರಲ್ಲಿ ಕಾಣುವ ಪ್ರತಿಭಟನೆ ಶಿಷ್ಟ ಸಾಹಿತ್ಯದಲ್ಲಿ ಕಾಣುವುದು ವಿರಳ. ಶಿಷ್ಟ ಸಾಹಿತ್ಯ ಒಂದು ಶೈಕ್ಷಣಿಕವಾಗಿ ಪ್ರಬುದ್ಧವಾದ ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಜನಪದ ಸಾಹಿತ್ಯದ ವ್ಯಾಪ್ತಿ ಅದನ್ನು ಮೀರಿ ಇಡೀ ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುತ್ತದೆ. ಶಿಷ್ಟ ಸಾಹಿತ್ಯದಲ್ಲಿ ಕಾಣುವ ಪಂಡಿತ ವರ್ಗವಾಗಲಿ, ಇನ್ನೊಬ್ಬರನ್ನು ಮೆಚ್ಚಿಸಲೆಂದು ಬರೆಯುವ ಪ್ರವೃತ್ತಿಯಾಗಲಿ ಜನಪದ ಸಾಹಿತ್ಯದಲ್ಲಿ ಕಾಣಲು ಸಾಧ್ಯವಿಲ್ಲ. ಇಲ್ಲಿ ಸಾಮಾನ್ಯ ಜನರೇ ಮೌಖಿಕ ರಚನಾಕಾರರಾಗಿದ್ದಾರೆ. ಅವರು ಯಾಜಮಾನ್ಯ ವ್ಯವಸ್ಥೆ, ಸಂಪ್ರದಾಯ ಪ್ರಧಾನ ವ್ಯವಸ್ಥೆ ಹಾಗೂ ಜಂಡರ್ ವ್ಯವಸ್ಥೆಗಳಿಂದ ಕೂಡಿರುವ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಎದುರಿಸಿದ ಅನೇಕ ಸಮಸ್ಯೆ, ಸವಾಲುಗಳನ್ನು ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ.
ಕೀಲಿ ಪದಗಳು: ಸಂಸ್ಕೃತಿ, ಯಲುರಾಜನ ಮಡದಿ, ಶಿಷ್ಟ ಸಾಹಿತ್ಯ, ಪ್ರತಿಭಟನ ಸಾಹಿತ್ಯ, ಮನರಂಜನ ಸಾಹಿತ್ಯ
ಪಿಠೀಕೆ
ಈ ಸಾಹಿತ್ಯವೆಲ್ಲ ಸಾಮಾನ್ಯ ಜನರ ಅನುಭವ ಕಥನವೆಂದರೆ ತಪ್ಪಿಲ್ಲ. ಇಂತಹ ಜನಪದ ಸಾಹಿತ್ಯವನ್ನು ಅಧ್ಯಯನ ದೃಷ್ಟಿಯಿಂದ ‘ಪ್ರತಿಭಟನ ಸಾಹಿತ್ಯ’ ಮತ್ತು ‘ಮನರಂಜನ ಸಾಹಿತ್ಯ’ವೆಂದು ವಿಭಾಗಿಸಿ ನೋಡುವುದು ಉತ್ತಮ. ‘ಪ್ರತಿಭಟನ ಸಾಹಿತ್ಯ’ದಲ್ಲಿ ಜನಪದರು ಅನುಭವಿಸಿದ ಶೋಷಣೆ, ದಬ್ಬಾಳಿಕೆ, ಸಮಸ್ಯೆ ಹಾಗೂ ಸವಾಲುಗಳಿವೆ. ‘ಮನರಂಜನ ಸಾಹಿತ್ಯ’ದಲ್ಲಿ ಅವರ ಬದುಕಿನ ಸಂತೋಷದ ಕ್ಷಣಗಳಿಗೆ ಕಾರಣವಾದ, ಕಾರಣವಾಗುವ ಸಂಗತಿಗಳಿರುತ್ತವೆ. ಹೀಗೆ ರಚನೆಯಾದ ಜನಪದ ಸಾಹಿತ್ಯ ಮೌಖಿಕ ಪರಂಪರೆಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಕೊಂಡು ಬಂದು ತನ್ನದೇ ಆದ ದೀರ್ಘವಾದ ಚರಿತ್ರೆಯನ್ನು ಕಟ್ಟಿಕೊಂಡಿದೆ. ಇಂತಹ ದೀರ್ಘವಾದ ಚರಿತ್ರೆಯಲ್ಲಿ ಜನಪದ ಸಾಹಿತ್ಯ ಕಾವ್ಯ, ಕಥನ ಹಾಗೂ ಮಹಾಕಾವ್ಯದಂತಹ ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿಕೊಂಡಿದೆ. ಶಿಷ್ಟ ಸಾಹಿತ್ಯ ಸಂದರ್ಭದಲ್ಲಿ ಒಂದು ಕೃತಿ ಜನ್ಮತಾಳುವುದು ಒಬ್ಬ ಶಿಷ್ಟ ರಚನಾಕಾರನಿಂದ. ಆ ಕೃತಿ ಅವನಿಂದಲೇ ರಚನೆಯಾಗಿದೆ ಎಂಬುದಕ್ಕೆ ಅನೇಕ ಸ್ಪಷ್ಟ ಪುರಾವೆಗಳಿರುತ್ತವೆ. ಆದರೆ ಜನಪದ ಸಾಹಿತ್ಯ ಸಂದರ್ಭದಲ್ಲಿ ಇಂತಹ ಪುರಾವೆಗಳು ವಿರಳ. ಇದು ಮೌಖಿಕ ಸ್ವರೂಪ ಹೊಂದಿದ್ದು, ಅನೇಕ ಜನಪದರ ಸಮೂಹದಿಂದ ಸಾಹಿತ್ಯ ನಿರ್ಮಾಣ ಆಗಿರುತ್ತದೆ. ಉದಾಹರಣೆಗೆ ಒಂದು ಕಥನ ಆರಂಭದಲ್ಲಿ ಒಬ್ಬ ಜನಪದನಿಂದ ಅಭಿವ್ಯಕ್ತಿಯಾದರೆ, ಅದೇ ಕಥನ ಮುಂದೆ ಅನೇಕ ಜನಪದರಿಂದ ಅಭಿವ್ಯಕ್ತಿಗೊಳ್ಳುತ್ತ ವಿಸ್ತಾರಗೊಳ್ಳುತ್ತದೆ. ಈ ವಿಸ್ತಾರಗೊಳ್ಳುವಿಕೆಯ ಸಂದರ್ಭದಲ್ಲಿ ಆಯಾಯ ಕಾಲಘಟ್ಟದ ಸಾಮಾಜಿಕ ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಅನೇಕ ಸೇರ್ಪಡೆ, ಮಾರ್ಪಾಡುಗಳಾಗುತ್ತವೆ. ಹೀಗೆ ಜನಪದ ಸಾಹಿತ್ಯ ಅನೇಕ ಜನಪದರಿಂದ ನಿರ್ಮಾಣ ಆಗಿರುವುದಿಂದ ಇದರಲ್ಲಿನ ಕಾವ್ಯ, ಕಥನ ಹಾಗೂ ಮಹಾಕಾವ್ಯಗಳ ಕರ್ತೃ ಯಾರೆಂದು ನಿರ್ಣಯಿಸುವುದು ಕಷ್ಟ.
ಜನಪದ ಸಾಹಿತ್ಯ ಮನುಷ್ಯನ ಜೀವನಾನುಭವದ ಮೇಲೆ ನಿಂತಿದ್ದು, ಆ ಅನುಭವಗಳೇ ಅದರ ಅಡಿಪಾಯ ಮತ್ತು ಜೀವಾಳ. ಆದ್ದರಿಂದ ಇಲ್ಲಿನ ರಚನೆಗಳೆಲ್ಲವೂ ಮನುಷ್ಯ ದಿನನಿತ್ಯ ತನ್ನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎದುರಿಸಿದ, ಎದುರಿಸುತ್ತಿರುವ, ಅನುಭವಿಸಿದ ನೋವು, ನಲಿವುಗಳ ಪ್ರತಿನಿಧಿಯಾಗಿದೆ. ಹಾಗೆ ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯ ಪ್ರತಿನಿಧಿಯೂ ಹೌದು. ಈ ನೆಲೆಗಟ್ಟಿನಲ್ಲಿಯೇ ರಚನೆಯಾಗಿರುವ ‘ಯಲುರಾಜನ ಮಡದಿ’ ಕಥನಗೀತೆ ಒಂದು ಕಾಲಘಟ್ಟದ ಸಾಂಸ್ಕೃತಿಕ ಲೋಕವನ್ನು ಅನಾವರಣ ಮಾಡುತ್ತದೆ. ‘ಯಲುರಾಜನ ಮಡದಿ’ ಕಥನಗೀತೆಯನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ ಶ್ರೀಮಂತ-ಬಡವ, ಮೇಲು-ಕೀಳು, ಗಂಡು-ಹೆಣ್ಣು ಹಾಗೂ ಶ್ರೇಷ್ಠ-ಕನಿಷ್ಠವೆಂಬ ಸಾಂಸ್ಕೃತಿಕ ಮನೋಧರ್ಮಗಳನ್ನು ಮುರಿಯುವ, ಮೀರುವ, ಪ್ರತಿಭಟಿಸುವ ಉದ್ದೇಶ ಹೊಂದಿದೆ.
ಜನಪದರ ದೃಷ್ಟಿಯಲ್ಲಿ ಸಮಾನತೆ
ಸಾವಿರಾರು ವರ್ಷಗಳಿಂದ ಮಹಿಳೆ ಪುರುಷ ಪ್ರಧಾನ ಸಮಾಜದಲ್ಲಿ ಅಸಮಾನತೆ ಮತ್ತು ಶೋಷಣೆಗೆ ಒಳಗಾಗಿದ್ದಾಳೆ. ಆದರೆ ಅವಳಿಗೂ ಕೂಡ ಪುರುಷನಿಗೆ ಸಮಾನವಾಗಿ ತನ್ನ ಹಕ್ಕನ್ನು ಮಂಡಿಸುವ, ಪಡೆಯುವ ಸರ್ವ ಸ್ವತಂತ್ರವಿದೆ. ಆ ಹಕ್ಕುಗಳನ್ನು ಲಿಂಗತಾರತಮ್ಯತೆ ಅನುಸರಿಸದೆ ಪುರುಷ ಪ್ರಧಾನ ಸಮಾಜ ನೀಡಬೇಕಾದ ಜರೂರಿದೆ. ಅದೇ ರೀತಿ ಮಹಿಳಾ ಸಮೂಹದಲ್ಲೇ ಮಹಿಳೆಯರಿಂದ, ಮಹಿಳೆಯರ ಮೇಲೆ ನಡೆಯುತ್ತಿರುವ, ನಡೆಸುತ್ತಿರುವ ಸಾಮಾಜಿಕ, ಧಾರ್ಮಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿನ ದೈಹಿಕ, ಮಾನಸಿಕ ಶೋಷಣೆ, ಅಸಮಾನತೆಗಳನ್ನು ಕೂಡ ವಿರೋಧಿಸಬೇಕಾಗಿದೆ. ಅತ್ತೆಯ ಅಧೀನ ಸೊಸೆ, ಮನೆಯ ಯಜಮಾನಿಯ ಅಡಿಯಾಳು ಮನೆಕೆಲಸದಾಕೆ, ಮೇಲುಜಾತಿವಳು ಶ್ರೇಷ್ಠ, ಕೆಳಜಾತಿವಳು ಕನಿಷ್ಠವೆಂಬ ಮನೋಧರ್ಮ ಬದಲಾಗಬೇಕಾಗಿದೆ. ಮಹಿಳೆಯರೆಲ್ಲರೂ ಒಂದೇ ಎಂಬ ಮನೋಧರ್ಮ ಸ್ತ್ರೀಲೋಕದಲ್ಲಿ ಬಲವಾದಷ್ಟು ಪುರುಷ ಪ್ರಧಾನತೆಯನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ಎದುರಿಸುವ ಮನೋಧರ್ಮದ ಎಳೆಗಳು ‘ಯಲುರಾಜನ ಮಡದಿ’ ಕಥನಗೀತೆಯಲ್ಲಿ ಹೊರಹೊಮ್ಮುವ ಪ್ರಯತ್ನದಲ್ಲಿವೆ.
ಕಥನಗೀತೆಯ ಆರಂಭ ರಾಜವಂಶಕ್ಕೆ ಸೇರಿದ ಸ್ತ್ರೀಯರಿಬ್ಬರು(ಅಕ್ಕತಂಗಿಯರು) ಹೊಳೆಗೆ ನೀರಿಗೆಂದು ಹೋಗುವ ಮೂಲಕ ಶುರುವಾಗುತ್ತದೆ. ಈ ಆರಂಭ ಯಜಮಾನ್ಯ ವ್ಯವಸ್ಥೆಯನ್ನು ಅಣಕಿಸಿದಂತಿದೆ. ರಾಜವಂಶದ(ಮೇಲು ವರ್ಗವೆಂದು ಭಾವಿಸೋಣ) ಸ್ತ್ರೀಯರು ಸಾಮಾನ್ಯ ಸ್ತ್ರೀಯರಂತೆ ನೀರು ತರಲು ಹೋಗುವುದು ಸಾಧ್ಯವೇ? ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಆದರೆ ಜನಪದರು ಅದನ್ನು ಸಾಧ್ಯವಾಗಿಸುತ್ತಾರೆ. ತನಗೆ ಬೇಕಾಗಿರುವುದನ್ನು ಕ್ಷಣಾರ್ಧದಲ್ಲಿ ಶ್ರಮವಿಲ್ಲದೇ ತರಿಸಿಕೊಳ್ಳುವ ಫ್ಯೂಡಲಿಸಂ ಅಧಿಕಾರ ಆ ಹೆಣ್ಣು ಮಕ್ಕಳಲ್ಲಿದೆ. ಆದರೆ ಇಲ್ಲಿ ಜನಪದರು ಅವರನ್ನು ಸಾಮಾನ್ಯ ಸ್ತ್ರೀಯರಂತೆ ಕಟ್ಟಿಕೊಟ್ಟಿದ್ದಾರೆ. ಅವರ ದೃಷ್ಟಿಯಲ್ಲಿ ಸರ್ವರು ಸಮಾನ ಎಂಬುದಿರಬೇಕು. ಅದು ರಾಣಿಯೇ(ರಾಜನು ಆಗಿರಬಹುದು) ಆಗಿರಲಿ ಅಥವಾ ಸಾಮಾನ್ಯ ವರ್ಗದ ಸ್ತ್ರೀ(ಪ್ರಜೆ)ಯೇ ಆಗಿರಲಿ. ಎಲ್ಲರೂ ಸಮಾನವಾಗಿ ಜೀವಿಸಬೇಕು. ಜೀವನ ಅನುಭವಿಸಬೇಕು. ಆದ್ದರಿಂದ ಸಾಮಾನ್ಯ ವರ್ಗದ ಸ್ತ್ರೀಯರಂತೆ ರಾಜವಂಶದ ಸ್ತ್ರೀಯರನ್ನು ನೀರು ತರಲು ಕಳಿಸುವ ಚಿತ್ರ ಕಟ್ಟಿಕೊಟ್ಟಂತಿದೆ. ಅಲ್ಲದೇ ಕಥನದಲ್ಲಿ ಹೆಸರಿಗೆ ರಾಜವಂಶದ ಸ್ತ್ರೀಯರಂತೆ ಕಂಡರು ಅವರ ವರ್ತನೆಗಳೆಲ್ಲವು ಸಾಮಾನ್ಯ ಸ್ತ್ರೀಯರಂತಿರುವುದು ಸ್ತ್ರೀಯರಲ್ಲಿ ಇರಬೇಕಾದ ಸಮಾನತೆಗೆ ಸಾಕ್ಷಿಯಾದಂತಿದೆ.
ಅಷ್ಟೇ ಅಲ್ಲದೆ ಕಥನಗೀತೆಯಲ್ಲಿ ಮೇಲು ವರ್ಗದ ಹೆಣ್ಣು ಮಕ್ಕಳು ತನ್ನ ಸುತ್ತ ಇರುವ ಸಿರಿಸಂಪತ್ತಿನ ಮಧ್ಯೆಯೂ ಅನುಭವಿಸುವÀ ಕೃತಕ ಬದುಕಿನ ಸೂಕ್ಷ್ಮತೆಗಳಿವೆ. ಪುರುಷನಂತೆ ಹೆಣ್ಣಿಗೂ ಕೂಡ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸರ್ವಸ್ವತಂತ್ರವಿದೆ ಎಂಬುದನ್ನು ಕಥನಗೀತೆ ಸಮರ್ಥಿಸುತ್ತದೆ. ಹೆಣ್ಣು ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಸಮಾಜದ ಸಾಂಸ್ಕೃತಿಕ ಕಟ್ಟುಪಾಡುಗಳನ್ನು ಮೀರಿನಿಲ್ಲುವ, ಎದುರಿಸುವ, ಪ್ರತಿಭಟಿಸುವ ಮನೋಧರ್ಮವನ್ನು ಎತ್ತಿ ಹಿಡಿಯುವಲ್ಲಿ ಕಥನಗೀತೆ ಯಶಸ್ವಿಯಾಗಿದೆ.
ಸಂಪ್ರದಾಯ ಮತ್ತು ಹೆಣ್ಣು
ಸಾವಿರಾರು ವರ್ಷಗಳಿಂದ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ಪುರುಷ ಪ್ರಧಾನ ಸಮಾಜ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕುತಂತ್ರ ಮಾಡುತ್ತ ಬಂದಿದೆ. ಇವುಗಳನ್ನು ಮೀರುವ, ಪ್ರಶ್ನಿಸುವ ಕೆಲಸ ನಡೆದಾಗ ಸಂಪ್ರದಾಯಕ್ಕೆ ಮುಖಾಮುಖಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಅದೇ ರೀತಿ ಇಲ್ಲಿ ಯಲುರಾಜನ ಮಡದಿ ಸಂಪ್ರದಾಯಕ್ಕೆ ಮುಖಾಮುಖಿ ಆಗಿದ್ದಾಳೆ. ಹೊಳೆಗೆ ನೀರು ತರಲೆಂದು ಹೋಗುವ ಅವಳು ಹೊಲೆಯ ಬಿಡಿಸಿದ ಚಿತ್ರವನ್ನು ಕಂಡು ಮೋಹಗೊಳ್ಳುತ್ತಾಳೆ. ಅವನನ್ನೇ ತನ್ನ ಬಾಳಸಂಗಾತಿಯಾಗಿ ಸ್ವೀಕರಿಸಲು ಸಿದ್ಧಳಾಗಿ ತನ್ನಕ್ಕನ ಬಳಿ ಹೀಗೆ ಹೇಳುತ್ತಾಳೆ.
“ಕೇಳಲೇ ನsನ್ನಕ್ಕಾss,
ಹೊಲಿರ್ನ್ ಸಂsಗsಡ್ ಹೊಗುತೇನೆ.
ಹೊಲಿನ್ ’’
ಯೇನಾದಾsರೇನ – ಕ್ಕಾsss?
ಹೊಲಿನ್ ಸಂಗಡ ಹೊಗುತೇನೆ”(ಗೀತೆ-೪)
ಅವಳು ಹೊಲೆಯನ ಸಂಗಡ ‘ಹೊಗುತೇನೆ’, ‘ಹೊಗುತೇನೆ ಎಂದು ಪುನರುಚ್ಚರಿಸುವ ಮೂಲಕ ತನ್ನ ದೃಢ ನಿರ್ಧಾರವನ್ನು ಅಕ್ಕನ ಬಳಿ ಸ್ಪಷ್ಟಪಡಿಸಿದ್ದಾಳೆ. ಹಾಗೆ ‘ಯೇನಾದಾರೇನಕ್ಕಾ’ ಅವನೊಂದಿಗೆ ಹೋಗೆ ತಿರುತ್ತೇನೆಂದು ಹೇಳುವಲ್ಲಿ ಸಮಾಜ, ಸಂಪ್ರದಾಯ, ಪುರುಷ ಪ್ರಧಾನತೆ ಹಾಗೂ ಪ್ರಭುತ್ವದಿಂದ ಏನೇ ಶಿಕ್ಷೆ, ನಿಂದನೆ, ಸಮಸ್ಯೆ ಹಾಗೂ ಸವಾಲುಗಳು ಬಂದರು ಎದುರಿಸಲು ಸಿದ್ಧನೆಂಬ ದೃಢ ನಿರ್ಧಾರ ತಿಳಿಸುತ್ತದೆ. ಅಷ್ಟೇ ಅಲ್ಲದೆ ಮುಂಚೆಯೇ ಒಬ್ಬನನ್ನು ವಿವಾಹವಾಗಿರುವ ಈಕೆ ತನ್ನ ನಿರ್ಧಾರದ ಸಂದರ್ಭದಲ್ಲಿ ಗಂಡನ(ಯಲುರಾಜ) ಬಗ್ಗೆ ಕಿಂಚಿತ್ತು ಯೋಚಿಸದೆ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅದಕ್ಕೆ ಯಲುರಾಜನಲ್ಲಿ ಕಾಣದ ನೈಜ ಪ್ರೀತಿ ಮತ್ತು ಆತನೊಂದಿಗೆ ಅನುಭವಿಸಿದ ಕೃತಕ ಬದುಕೆಂದು ಊಹಿಸಬಹುದಾಗಿದೆ. ಆದ್ದರಿಂದ ಹೊಲೆಯನಲ್ಲಿ ನೈಜ ಪ್ರೀತಿ, ಬದುಕನ್ನು ಹುಡುಕಿಕೊಂಡಿದ್ದಾಳೆ. ಆತನ ಪ್ರೀತಿಗಾಗಿ ಯಲುರಾಜನನ್ನು, ತನ್ನ ವೈಭೋಗ ಜೀವನವನ್ನು ಕೂಡ ತ್ಯಜಿಸಿದ್ದಾಳೆ. ತನ್ನ ನಿರ್ಧಾರದಿಂದ ತನ್ನ ಸುತ್ತಲಿನ ಸಮಾಜ, ಸಂಪ್ರದಾಯ, ಪ್ರಭುತ್ವ ಹಾಗೂ ಸಾಮಾಜಿಕ ವ್ಯವಸ್ಥೆಗಳಿಗೆ ಸವಾಲೊಡ್ಡಿದ್ದಾಳೆ. ಅವಳ ನಿರ್ಧಾರಗಳಲ್ಲಿ ಪುರುಷ ಪ್ರಧಾನ ಸಮಾಜ ಹೆಣ್ಣಿನ ಮೇಲೆ ಹೇರಿರುವ ನಿರ್ಬಂಧಗಳನ್ನು ಮೀರುವ, ವಿರೋಧಿಸುವ ಸಣ್ಣ ಧ್ವನಿಯಿದ್ದಂತಿದೆ.
ತಂಗಿಯ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡುವ ಅವಳ ಅಕ್ಕನ ಪ್ರಶ್ನೆಗಳಿಲ್ಲಿ ಸಾಂಸ್ಕೃತಿಕ ದೃಷ್ಟಿಯಿಂದ ಮುಖ್ಯವಾಗಿವೆ. ಅದರಲ್ಲೊಂದು ಕೆಳಗಿನಂತಿದೆ.
“ಕೇಳಲ್ಲೆ ನನು ತಂಗೀss,,
ಹೊಲೆನ್ ಸಂಗಾsಡ್ ಹೋsದಾsರೇ
ಜಾತೀಯಾ ಬಿಡುವ್ಯಾಲೆs.” (ಗೀತೆ-೪)
ಅಕ್ಕನ ಈ ಪ್ರಶ್ನೆಗಳು ಸಾಮಾಜಿಕ ವ್ಯವಸ್ಥೆಯಲ್ಲಿ ನಿರ್ಮಾಣವಾಗಿರುವ ಶ್ರೇಷ್ಠ-ಕನಿಷ್ಠವೆಂಬ ಜಾತಿ ಶ್ರೇಷ್ಠತೆಯ ಕುರಿತದ್ದಾಗಿದೆ. ‘ಯಲುರಾಜನ ಮಡದಿ’ ಮೇಲು ಜಾತಿಗೆ ಸೇರಿದ್ದರಿಂದ ಸಮಾಜದ ಗೌರವ ಸ್ಥಾನದಲ್ಲಿದ್ದಾಳೆ. ಆದರೆ ಅವಳ ಈ ನಿರ್ಧಾರದಿಂದ ಜಾತಿ ಗೌರವ, ಘನತೆಗಳೆಲ್ಲವನ್ನು ಬಿಡಬೇಕಾಗುತ್ತದೆ. ಅಷ್ಟೆಯಲ್ಲದೆ ಅವುಗಳಿಂದ ಶಿಕ್ಷೆ, ನಿಂದನೆಗಳಿಗೆ ತುತ್ತಾಗಬೇಕಾಗುತ್ತದೆ ಎಂಬ ಭಯದ ಸೂಚನೆ ಇದ್ದಂತಿದೆ. ಆದ್ದರಿಂದ ಸ್ಪಷ್ಟವಾಗಿಯೆ “ಕೇಳೇಲೇ ನsನ್ನಕ್ಕಾs, ಜಾತೀ ಹೋದಾsರೇನೇs?” ಎಂದು ಹೇಳುವ ಮೂಲಕ ತನ್ನ ದೃಢ ನಿರ್ಧಾರಕ್ಕೆ ಬದ್ಧಳಾಗುತ್ತಾಳೆ. ಈ ನಿರ್ಧಾರದಲ್ಲಿ ಅವಳಿಗೆ ಜಾತಿಯಿಂದ ಸಿಗುವ ಗೌರವ, ಘನತೆಯ ಅಗತ್ಯವಿಲ್ಲ. ಹಾಗೂ ಸಂಪ್ರದಾಯ ಪ್ರಧಾನತೆ, ಪ್ರಭುತ್ವ ಮುಂತಾದ್ದರಿಂದ ಒದಬಹುದಾದ ಶಿಕ್ಷೆ, ನಿಂದನೆಗಳಿಗೆ ಭಯವಿಲ್ಲ ಎಂಬುದಿಲ್ಲಿ ಸ್ಪಷ್ಟ. ಅವಳು ತನ್ನ ಪ್ರೀತಿಗಾಗಿ ಸಂಪ್ರದಾಯ, ಸಾಮಾಜಿಕ ವ್ಯವಸ್ಥೆ ನಿರ್ಮಿಸಿರುವ ಅಡ್ಡಗೋಡೆಯನ್ನು ಮೀರಿ ನಿಂತಿದ್ದಾಳೆ. ಆದ್ದರಿಂದ ತನ್ನ ಸಾಮಾಜಿಕ ಗೌರವ, ಸ್ಥಾನಮಾನ ಬಿಡಲು ಸಿದ್ಧಳಾಗಿ ಎಲ್ಲವನ್ನು, ಎಲ್ಲರನ್ನು ಎದುರಿಸಬಲ್ಲೆ ಎಂಬ ದೃಢವಾದ ಧೈರ್ಯ ಹೊಂದಿದ್ದಾಳೆ. ಹಾಗಾಗಿ “ಕೇಳೇಲೇ ನsನ್ನಕ್ಕಾs, ಜಾತೀ ಹೋದಾsರೇನೇs?” ಎಂದು ಹೇಳುವ ಮೂಲಕ ತನ್ನ ನಿರ್ಧಾರ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಖಚಿತಪಡಿಸಿದ್ದಾಳೆ. ಆದರೆ ಅಕ್ಕ ತನ್ನ ಮಾತು ಇನ್ನೂ ಮುಂದುವರೆಸುತ್ತ ಹೀಗೆ ಹೇಳುತ್ತಾಳೆ.
“ಕೇಳಲ್ಲೇ ನನು ತಂಗೀs
ನಿನು ದಂಡಿಗ್ಹೋs ದ ಗಂsಡನೆ
ಬಂದಾsರೇ ಹೊಡುನಾsಲೇs” (ಗೀತೆ-೭).
ಇಲ್ಲಿ ಅಕ್ಕ ದಂಡಿಗೆ ಹೋಗಿರುವ ‘ಯಲುರಾಜ’ ಬಂದ ಕೂಡಲೇ ನಿನ್ನ ನಿರ್ಣಯ ತಿಳಿದು ಶಿಕ್ಷೆ ನೀಡುತ್ತಾನೆ. ಆದ್ದರಿಂದ ನೀನು ನಿರ್ಧಾರ ಬದಲಾಯಿಸೆಂದು ಎಚ್ಚರಿಸುತ್ತಿದ್ದಾಳೆ. ಇಲ್ಲಿ ಅಕ್ಕನ ಪಾತ್ರ ಸಂಪ್ರದಾಯ, ಜಾತಿ, ಅಂತಸ್ತುಗಳ ಒತ್ತಡಕ್ಕೆ ಮಣಿದು ತಂಗಿ(ರಾಣಿ)ಯ ನಿರ್ಧಾರವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ. ಅದರೆ ತನ್ನ ಸಂಪ್ರದಾಯ, ಜಾತಿ, ಅಂತಸ್ತಿನಲ್ಲೇ ಉಳಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿಲ್ಲ. ಅವಳ ಪ್ರಯತ್ನವೆಲ್ಲವೂ ಯಜಮಾನ್ಯ ಸಂಸ್ಕೃತಿ, ಸಂಪ್ರದಾಯವನ್ನು ಮೀರಲು ಅವಕಾಶ ಮಾಡಿ ಕೊಡುವಷ್ಟು ಸಡಿಲತೆ ಹೊಂದಿವೆ. ಅಕ್ಕನ ಪಾತ್ರ ಸಮಾಜದಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆ ಕಟ್ಟುಪಾಡು, ನಿರ್ಬಂಧಗಳಲ್ಲೇ ಜೀವನ ಸಾಧ್ಯವೆಂದು ನಂಬಿಕೊಂಡು ಕೂತಿದೆ. ಅಷ್ಟೇ ಅಲ್ಲದೆ ಅವಳಿಗೆ ಪುರುಷ ಪ್ರಧಾನತೆಯನ್ನು ವಿರೋಧಿಸುವಷ್ಟು ಧೈರ್ಯವಿಲ್ಲ. ಅವಳಿಗೆ ತದ್ವಿರುದ್ದವಾಗಿ ಅವಳ ತಂಗಿ ‘ಯಲುರಾಜನ ಮಡದಿ’ಯ ಪಾತ್ರವಿದೆ. ಅವಳು ತನಗಿಷ್ಟವಿಲ್ಲದ ಜೀವನವನ್ನು ನೇರವಾಗಿ ವಿರೋಧಿಸುತ್ತಾಳೆ. ಅವಳು ಪುರುಷ ಪ್ರಧಾನತೆ ಮತ್ತು ಸಂಪ್ರದಾಯದ ಸಂಕೋಲೆಗಳ ಅಧೀನದಿಂದ ವಿಮುಕ್ತಳಾಗಲು ಹವಣಿಸುತ್ತಾಳೆ. ಈ ಹವಣಿಸುವಿಕೆ ಮೇಲಿನ ಸಂಕೋಲೆಗಳು ಸಾವಿರಾರು ವರ್ಷಗಳಿಂದ ತನ್ನ ಸ್ವಾತಂತ್ರ್ಯವನ್ನೆ ಕಳೆದುಕೊಂಡಿರುವ ಅನೇಕ ಸ್ತ್ರೀಯರ ಪ್ರತಿನಿಧಿಯಾದಂತಿವೆ.
ಯುದ್ಧದಿಂದ ಬರುವ ‘ಯಲುರಾಜ’ ತನ್ನ ಹೆಂಡತಿ ಹೊಲೆಯನೊಂದಿಗೆ ಹೋಗಿರುವ ವಿಚಾರ ತಿಳಿದು ಆಕ್ರೋಶಕ್ಕೆ ಒಳಗಾಗದೆ ತಾಳ್ಮೆಯಿಂದ ವರ್ತಿಸುತ್ತಾನೆ. ಅವನಿಗೆ ಅವರಿಬ್ಬರನ್ನು ಶಿಕ್ಷಿಸುವ ಅವಕಾಶ, ಅಧಿಕಾರವಿದ್ದರು ಅವಳ ನಿರ್ಧಾರಕ್ಕೆ ಸಮ್ಮತಿಸುವ ಮೂಲಕ ಸ್ತ್ರೀ ಸ್ವಾತಂತ್ರ್ಯಕ್ಕೆ ಧ್ವನಿ ಆಗುತ್ತಾನೆ. ತನ್ನ ಹೆಂಡತಿ ಹೊಲೆಯನೊಂದಿಗೆ ಹೋಗಿರುವುದು ಅವಳ ಸ್ವಾತಂತ್ರ್ಯವೆಂದು ಸಂಪ್ರದಾಯದ ಆಚೆ ನಿಂತು ಯೋಚಿಸುವ ಮನಸ್ಥಿತಿ ಆತನಲ್ಲಿದೆ. ಆದ್ದರಿಂದ ಅವರಿಬ್ಬರನ್ನು ಸಂತೋಷವಾಗಿ ಜೀವಿಸಲು ಅವಕಾಶ ಮಾಡಿಕೊಡುತ್ತಾನೆ. ಹೆಂಡತಿಯ ಮೇಲಿನ ಪ್ರೀತಿ, ಕಾಳಜಿಯಿಂದ ಹೊಲೆಯನ ಬಳಿ ಹೋಗಿ ‘ನಾನು ನಿಂಗೆ ಹೊಡೆಯುವುದಿಲ್ಲ’, ‘ಬಯ್ಯುವುದಿಲ್ಲ’. ಆದರೆ ‘ನನ್ನ ಹೆಂಡತಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು’ ಎಂದು ಹೇಳುವಲ್ಲಿ ಅವನ ಕಾಳಜಿ, ಪ್ರೀತಿ ಸಾಭೀತಾಗುತ್ತದೆ. ಯಲುರಾಜ ತನ್ನ ನಿರ್ಧಾರ, ಚಿಂತನೆಗಳಿಂದ ಸಮಕಾಲೀನ ಸಂದರ್ಭದಲ್ಲು ಬಹುಮುಖ್ಯ ಆಗುತ್ತಾನೆ. ಏಕೆಂದರೆ ಇಂದಿಗೂ ನಮ್ಮ ಸಮಾಜದಲ್ಲಿ ಹೆಣ್ಣಿಗೆ ತನ್ನ ಜಾತಿ, ಅಂತಸ್ತು, ಸಂಪ್ರದಾಯವನ್ನು ಮೀರಿ ತನ್ನ ಮನಸ್ಸಿಗೆ ಇಷ್ಟವಾದ ಪುರುಷನನ್ನು ವರಿಸುವ, ಪ್ರೀತಿಸುವ ಸ್ವಾತಂತ್ರ ಇಲ್ಲವಾಗಿದೆ. ಅದನ್ನು ಮೀರಿದ, ಮೀರಲು ಪ್ರಯತ್ನಿಸಿದವರನ್ನು ‘ಮರ್ಯಾದಾ ಹತ್ಯೆ’ ಹೆಸರಿನಲ್ಲಿ ನಿರ್ದಾಕ್ಷಿಣ್ಯವಾಗಿ ಕೊಂದಿರುವ ಅನೇಕ ಘಟನೆಗಳನ್ನು ಸಮಕಾಲೀನ ಸಂದರ್ಭದಲ್ಲಿ ನೋಡುತ್ತಿದ್ದೇವೆ. ಅದರಲ್ಲು ಮದುವೆಯಾದ ಹೆಣ್ಣು ಪರಪುರುಷರೊಂದಿಗೆ ಮಾತನಾಡಿದ್ದರ ಪರಿಣಾಮಕ್ಕೆ ಹತ್ಯೆಗೆ ಈಡಾಗಿರುವ ನಿದರ್ಶನಗಳಿವೆ. ಇಂತಹ ನರಭಕ್ಷಕ ಪುರುಷ ಪ್ರಧಾನ, ಸಂಪ್ರದಾಯ ಮನಸ್ಥಿತಿಗಳ ಮಧ್ಯೆ ಕೂಡ ಹೆಣ್ಣಿನ ಸ್ವಾತಂತ್ರ್ಯದ ಪರ ನಿಲ್ಲುವ ಮನಸ್ಥಿತಿಗಳಿವೆ. ಅಂತಹ ಮನಸ್ಥಿತಿಗಳ ಅನಿವಾರ್ಯತೆ ಸಮಾಜದ ತುರ್ತು ಕೂಡ ಆಗಿದೆ. ಆದ್ದರಿಂದ ನಮ್ಮ ಜನಪದರು ಇಂತಹ ಮನಸ್ಸುಳ್ಳ ಯಲುರಾಜನನ್ನು ತಮ್ಮ ಕಥನದಲ್ಲಿ ಕಟ್ಟಿಕೊಟ್ಟಿದ್ದಾರೆ. ಇವನಂತಹ ಮನಸ್ಸುಗಳು ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿ ಆದಷ್ಟು ಸಮಾಜದ ಸ್ವಾಸ್ಥ್ಯವು ಉತ್ತಮವಾಗುತ್ತದೆ.
ಜನಪದರ ದೃಷ್ಟಿಯಲ್ಲಿ ರಾಜನ ಪರಿಕಲ್ಪನೆ
ಜನಪದರ ಮುಖ್ಯ ಉದ್ದೇಶ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದಾಗಿದೆ. ಆದ್ದರಿಂದ ಅವರು ಯಲುರಾಜನಂತಹ ಆದರ್ಶ ರಾಜನ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ. ಪ್ರಭುತ್ವವು ತನ್ನ ಪ್ರಜೆಗಳಿಗೆ ನೀಡಬೇಕಾದ ಅಭಿವ್ಯಕ್ತಿ ಸ್ವತಂತ್ರ, ಅಯ್ಕೆ ಸ್ವತಂತ್ರ, ಸಮಾನತೆಯ ಮಹತ್ವವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಆಳ್ವಿಕೆ ಮಾಡುವ ವ್ಯಕ್ತಿಗೆ ಇರಬೇಕಾದ ಮಾನವೀಯ ಅಂಶಗಳ ಬಗ್ಗೆ ಕಟ್ಟಿಕೊಟ್ಟಿದ್ದಾರೆ. ‘ಯಲುರಾಜನ ಮಡದಿ’ ಒಂದು ಚಿಕ್ಕ ಕಥನಗೀತೆ ಆದರೂ ಅದರಲ್ಲಿ ಚರ್ಚೆಗೆ ಒಳಪಡುವ ಅನೇಕ ವಿಚಾರಗಳಿವೆ. ಸಾಮಾನ್ಯವಾಗಿ ಜನಪದ ಕಥೆಗಳ ಆರಂಭ ‘ಒಂದು ಊರಲ್ಲಿ ಒಬ್ಬ ರಾಜನಿದ್ದ’ ಎನ್ನುವುದರಿಂದ ಆಗುತ್ತದೆ. ಇಲ್ಲಿ ನಮಗೆ ಕಾಡುವ ಪ್ರಶ್ನೆ ಒಂದು ಊರನ್ನು ಆಳ್ವಿಕೆ ಮಾಡಲು ಒಬ್ಬ ರಾಜ ಇರಲು ಸಾಧ್ಯನಾ? ಎಂಬುದು. ಆದರೆ ಅದು ಜನಪದರ ದೃಷ್ಟಿಯಲ್ಲಿ ಸಾಧ್ಯವಾಗುತ್ತದೆ. ಅವರ ದೃಷ್ಟಿಯಲ್ಲಿ ರಾಜನೆಂದರೆ ಅನುಭವಕ್ಕೆ ಬರುವ, ಸ್ಥಳೀಯತೆಯನ್ನು ಪ್ರತಿನಿಧಿಸುವ ವ್ಯಕ್ತಿ(ರಾಜ) ವಿನಃ ಅವನು ಲಿಖಿತ ಸಾಹಿತ್ಯದ ಚಿತ್ರಣದಲ್ಲಿ ಮೂಡಿರುವ ಮಹಾರಾಜನಲ್ಲ. ಜನಪದರ ರಾಜ ಅವರ ಸಾಂಸ್ಕೃತಿಕ ಬದುಕಿನ ಆದರ್ಶ ವ್ಯಕ್ತಿಯಾಗಿರುತ್ತಾನೆ. ಅಥವಾ ಪ್ರಭುತ್ವದಿಂದ ಜನಸಾಮಾನ್ಯರ ಮೇಲೆ ನಡೆಯುವ ಸಾಂಸ್ಕೃತಿಕ ದಬ್ಬಾಳಿಕೆಗಳನ್ನು ಪ್ರತಿಭಟಿಸುವಾಗ ಟೀಕೆ, ನಿಂದನೆ ಹಾಗೂ ವಿಡಂಬನೆಗೆ ಒಳಗಾಗುವ ಪಾತ್ರ ಕೂಡ ಆಗುತ್ತಾನೆ. ಇಲ್ಲಿ ಮಾತ್ರ ಆದರ್ಶ ರಾಜನಿಗೆ ಸಾಕ್ಷಿಯಾಗಿ ‘ಯಲುರಾಜ’ನಿದ್ದಾನೆ.
ಫ್ಯೂಡಲಿಸಂ ಮತ್ತು ಪ್ರತಿರೋಧ
ಕಥನಗೀತೆಯಲ್ಲಿ ಫ್ಯೂಡಲಿಸಂ ವ್ಯವಸ್ಥೆಯನ್ನು ಪ್ರತಿಭಟಿಸುವ ಅನೇಕ ಸೂಕ್ಷ್ಮ ಅಂಶಗಳಿವೆ. ಕಥನಗೀತೆಯ ಆರಂಭವೇ ಫ್ಯೂಡಲಿಸಂನ ವಿರುದ್ಧ ಪ್ರತಿಭಟಿಸುವ ಮೂಲಕ ಆಗಿದೆ. ಸಾಮಾನ್ಯ ಸ್ತ್ರೀಯರಂತೆ ರಾಣಿಯನ್ನು ನೀರು ತರಲೆಂದು ಹೊಳೆಗೆ ಕಳುಹಿಸುವುದು, ರಾಣಿಯನ್ನು ಹೊಲೆಯನೊಂದಿಗೆ ಅನುರಕ್ತಳಾಗಿಸುವುದು, ರಾಜನೇ ಹೊಲೆಯನ ಮನೆಯ ಮುಂದೆ ಹೋಗಿ ನಿಲ್ಲುವಂತೆ ಮಾಡಿರುವುದು. ರಾಜನೇ ತನ್ನ ಕೆಲಸ ಮಾಡಿಸಿಕೊಳ್ಳಲು ಕೆಳವರ್ಗದ ಆಯಾಗಾರಿಕೆಯವರ ಮನೆಗಳಿಗೆ ಹೋಗುವಂತೆ ಮಾಡಿರುವುದು. ಇವೆಲ್ಲ ಮೌನವಾಗಿ ಇಡೀ ಯಜಮಾನ್ಯ ಸಂಸ್ಕೃತಿಯಲ್ಲಿನ ದರ್ಪ, ಅಹಂಕಾರಗಳಿಗೆ ಒಡ್ಡಿರುವ ಪ್ರತಿರೋಧಗಳೇ ಆದಂತಿವೆ. ಇದೇ ರೀತಿ ಪ್ರತಿರೋಧ ತಂತ್ರವನ್ನು ಆಧುನಿಕ ಬಂಡಾಯ-ದಲಿತ ಸಾಹಿತ್ಯದಲ್ಲಿ ಗುರುತಿಸಲು ಸಾಧ್ಯವಿದೆ.
ದ್ರಾವಿಡ ಸಂಸ್ಕೃತಿ ಮತ್ತು ಯಲುರಾಜನ ಮಡದಿ
ದ್ರಾವಿಡ ಸಂಸ್ಕೃತಿಯ ಹಿನ್ನೆಲೆಯಲ್ಲಿ ಕಥನಗೀತೆ ಇನ್ನೊಂದು ಮಗ್ಗುಲಿನ ಅರ್ಥವನ್ನು ನೀಡುತ್ತದೆ. ಅಖಂಡ ಭಾರತವನ್ನು ಪ್ರಾದೇಶಿಕವಾಗಿ ಉತ್ತರ ಭಾರತ, ದಕ್ಷಿಣ ಭಾರತವೆಂದು ವಿಭಾಗಿಸಿ ನೋಡಲಾಗುತ್ತದೆ. ಹಾಗೆ ಜನಾಂಗೀಯವಾಗಿ ಆರ್ಯ, ದ್ರಾವಿಡ ಎಂಬ ನೆಲೆಯಲ್ಲಿಯೂ ಗುರುತಿಸಲಾಗುತ್ತದೆ. ದಕ್ಷಿಣ ಭಾರತವನ್ನು ದ್ರಾವಿಡ ಪ್ರದೇಶ(ದ್ರಾವಿಡದೇಶ) ಎಂಬ ನೆಲೆಯಲ್ಲಿ ನೋಡುವ ಪರಿಕಲ್ಪನೆ ಇದೆ. ಈ ಪ್ರದೇಶಗಳಲ್ಲಿ(ದಕ್ಷಿಣ ಭಾರತ) ಸಾಂಸ್ಕೃತಿಕವಾಗಿ ಶೈವ ಧರ್ಮದ ಪ್ರಭಾವ ಮತ್ತು ಶೈವ(ಶಿವ ಸಂಸ್ಕೃತಿ) ಆರಾಧನೆ ಹೆಚ್ಚಾಗಿದೆ. ಶತ ಶತಮಾನಗಳಿಂದ ಶೈವಧರ್ಮಕ್ಕೆ ವಿರುದ್ಧವಾಗಿ ಇಲ್ಲಿ ಅನೇಕ ಧರ್ಮಗಳು ಪ್ರಾಬಲ್ಯ ಸಾಧಿಸುವಾಗ ಶೈವ ಧರ್ಮದೊಂದಿಗೆ ಸಂಘರ್ಷ ಮಾಡಿಕೊಂಡು ಬಂದಿವೆ. ಇಂತಹ ಸಂಘರ್ಷಗಳಿಗೆ ವಿರುದ್ಧವಾಗಿ ಅನೇಕ ಹೋರಾಟಗಳು ತಮ್ಮ ಅಸ್ಮಿತೆಯ ಉಳಿವಿಗಾಗಿ ನಡೆದಿವೆ. ಇಲ್ಲಿ ‘ಯಲುರಾಜನ ಮಡದಿ’ ಕಥನಗೀತೆ ದ್ರಾವಿಡ ಸಂಸ್ಕೃತಿಯ ಅಸ್ಮಿತೆಯ ಕುರುಹಾಗಿ ಕಾಣುತ್ತದೆ. ಕಥನಗೀತೆಯ ಆರಂಭದ ಸಾಲಿನಿಂದ ಹಿಡಿದು ಕೊನೆಯವರೆಗೂ ‘ಸಿವ, ಸಿವ’ ಎಂದು ಪುನರ್ ಉಚ್ಚಾರಿಸುವಲ್ಲಿ ದ್ರಾವಿಡ ಪ್ರದೇಶದ ಶೈವ ಪರಂಪರೆಯ ಶಿವನ ಸ್ಮರಣೆಯನ್ನು ಮಾಡಲಾಗಿದೆ. ಇಂದಿಗೂ ಸಾಮಾನ್ಯ ಜನರಿಗೆ ಏನಾದರೂ ಸಮಸ್ಯೆಗಳು ಎದುರಾದಾಗ ‘ಶಿವ-ಶಿವ, ‘ಸೀವ-ಸೀವ’ ಹಾಗೂ ‘ಶಿವನೇ’ ಎಂದು ಉದ್ಗಾರಗಳನ್ನು ಎಳೆಯುವುದು ಇಲ್ಲಿನ ಉಲ್ಲೇಖಗಳಿಗೆ ಪುಷ್ಟಿ ಕೊಡುತ್ತದೆ. ಕಥನ ಗೀತೆಯಲ್ಲಿ ಶೈವ ಸಂಸ್ಕೃತಿಗೆ, ದ್ರಾವಿಡ ಸಂಸ್ಕೃತಿಗೆ ಇನ್ನೂ ಪುಷ್ಟಿಯಾಗಿ ಶವ ‘ಊಳುವ ಪದ್ದತಿ’ ಇದೆ. ಶವ ಊಳುವ ಪದ್ದತಿ ದ್ರಾವಿಡ ಸಂಸ್ಕೃತಿಯಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ರಾಜ ಹೊಲೆಯನಲ್ಲಿ ತನ್ನ ಹೆಂಡತಿ ಸತ್ತ ನಂತರ ಅವಳ ಶವವನ್ನು ಸುಡದೆ ಊಳಬೇಕೆಂದು ಹೇಳುವುದು ಇದಕ್ಕೆ ನಿದರ್ಶನವಾಗಿದೆ. ಅಷ್ಟೇ ಅಲ್ಲದೆ ಶವವನ್ನು ಸುಡದೆ ಊಳಬೇಕೆಂದು ಸ್ಪಷ್ಟವಾಗಿ ಹೇಳಿರುವಲ್ಲಿ ಕಥನಗೀತೆ ರಚನೆಯಾದ ಕಾಲಘಟ್ಟದಲ್ಲಿ ಊಳುವ ಸಂಸ್ಕೃತಿಯೊಂದಿಗೆ, ಸುಡುವ ಇನ್ನೊಂದು ಸಂಸ್ಕೃತಿ ಕೂಡ ಇತ್ತೆಂಬುದು ಸಾಭೀತಾಗುತ್ತದೆ. ಅಂದರೆ ಶೈವದೊಂದಿಗೆ ಇನ್ನೊಂದು ಧರ್ಮ ಅಥವಾ ಸಂಸ್ಕೃತಿ ಎಂದು ಅಭಿಪ್ರಾಯಿಸಬಹುದಾಗಿದೆ. ಹಾಗೆ ಈ ಕಥನ ಗೀತೆ ಮಧ್ಯಕಾಲೀನ ಕರ್ನಾಟಕಕ್ಕೆ ಸಂಬಂಧಿಸಿದಂತಿದ್ದು ಆ ಕಾಲಘಟ್ಟದಲ್ಲಿ ಇರಬಹುದಾದ ಶೈವ, ಶೈವೇತರ ಧರ್ಮಗಳ ಸಾಂಸ್ಕೃತಿಕ ತಿಕ್ಕಾಟಗಳನ್ನು ನಿರೂಪಿಸುವ ನಿಟ್ಟಿನಲ್ಲಿ ಶವ ಸಂಸ್ಕಾರದ ಪದ್ಧತಿಯನ್ನು ಇಲ್ಲಿ ಬಳಕೆ ಮಾಡಿರುವಂತಿದೆ.
ಯಲುರಾಜನಲ್ಲಿ ಅಪಾವಿತ್ರ್ಯದ ಪ್ರಶ್ನೆ?.
‘ಯಲುರಾಜನ ಮಡದಿ’ ಕಥನಗೀತೆಯಲ್ಲಿ ಚರ್ಚೆಗೆ ಒಳಪಡಿಸಬಹುದಾದ ಇನ್ನೊಂದು ಅಂಶವೆಂದರೆ. ಅದು ರಾಜನಲ್ಲಿರಬಹುದಾದ ಅಪಾವಿತ್ರ್ಯದ ಪ್ರಶ್ನೆ. ಆತ ತನ್ನ ಹೆಂಡತಿ ಹೊಲೆಯನೊಂದಿಗೆ ಹೋಗಿರುವ ವಿಚಾರ ತಿಳಿದ ಮೇಲೆ ಹೊಲೆಯನ ಬಳಿ ಹೋಗುತ್ತಾನೆ. ಅವನಲ್ಲಿ ‘ನಾನು ನಿಮಗೆ ತೊಂದರೆ ಮಾಡುವುದಿಲ್ಲ, ನನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೋ’ ಎಂದು ಹೇಳುವಲ್ಲಿ ಅವರಿಬ್ಬರ ಸಂಬಂಧಕ್ಕೆ ಮನ್ನಣೆಯನ್ನಂತು ನೀಡಿದ್ದಾನೆ. ಆದರೆ ಆತನ ಬಳಿ ನನ್ನ ಹೆಂಡತಿ ‘ಯಾವ ದಿನಕೆ ಮಡಿತಾಳೋ’ ಅಂದು ಅವಳ ದೇಹವನ್ನು ಸುಡದೆ ಮಣ್ಣಿನಲ್ಲಿ ಊಳಬೇಕು. ನಲವತ್ತೊಂದು ದಿನಗಳ ನಂತರ ಅವಳ ತಲೆಯನ್ನು ಮಾತ್ರ ಹರಿಯುವ ನೀರಿನಲ್ಲಿ ತೊಳೆದು ನನಗೆ ನೀಡಬೇಕೆಂಬ ಷರತ್ತನ್ನು ವಿಧಿಸಿದ್ದಾನೆ. ಈ ಷರತ್ತಿನಲ್ಲಿ ಅವಳ ತಲೆಯನ್ನು ಮಾತ್ರ ಏಕೆ ಕೇಳುತ್ತಾನೆ? ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಯಲುರಾಜ ರಾಣಿಯ ತಲೆಯನ್ನು ಮಾತ್ರ ಕೇಳಿರುವಲ್ಲಿ ಆತನಲ್ಲಿ ಕಾಡಿರುವ, ಕಾಡುತ್ತಿರುವ ಪಾವಿತ್ರ್ಯತೆ, ಅಪಾವಿತ್ರ್ಯತೆ ಎಂಬ ಮಾನಸಿಕ ತೊಳಲಾಟ ಕಾರಣವಿರಬಹುದೆ? ಎಂಬ ಪ್ರಶ್ನೆಯಂತು ಎದುರಾಗುತ್ತದೆ. ಅದು ಸತ್ಯವೂ ಆಗಿರಬಹುದು!. ಇಲ್ಲದೆಯೂ ಇರಬಹುದು. ಆದರೆ ಇಲ್ಲಿ ಇಂತಹ ಚರ್ಚೆಗಂತೂ ಅವಕಾಶ ಹುಟ್ಟಿಸುತ್ತದೆ. ಮೇಲುನೋಟಕ್ಕೆ ಯಲುರಾಜನಲ್ಲಿ ತನ್ನ ಹೆಂಡತಿ ಇನ್ನೊಬ್ಬನೊಂದಿಗೆ ಹಂಚಿಕೊಂಡಿರುವ ದೇಹ ಅಪಾವಿತ್ರ್ಯ ಎಂಬ ನಿಲುವಿಗೆ ಬಂದತಿದೆ. ಅಥವಾ ನಾನು ಅವಳ ದೇಹ ಇಷ್ಟಪಡದೆ. ಅವಳ ಮನಸ್ಸನ್ನು ಮಾತ್ರ ಇಷ್ಟಪಟ್ಟಿರುವೆ ಎಂಬುದನ್ನು ಸಮರ್ಥಿಸುತ್ತಿರುವಂತಿದೆ. ಈ ಎರಡೂ ಸಾಧ್ಯತೆಗಳಿಂದ ಅವಳ ತಲೆಯನ್ನು ಮಾತ್ರ ಕೇಳಿರುವ ಸಾಧ್ಯತೆ ಇರಬಹುದಾಗಿದೆ. ಆದರೆ ಅದೇ ಅಂತಿಮ ತೀರ್ಮಾನವೆಂದು ಒಪ್ಪಿಕೊಳ್ಳಲಾಗದು. ಅವನಲ್ಲಿ ಅಪಾವಿತ್ರ್ಯತೆ ಪ್ರಶ್ನೆ ಕಾಡಿರಬಹುದೆಂಬುದಕ್ಕೆ ಪುಷ್ಟಿಯಾಗಿ ರಾಣಿಯ ತಲೆಯನ್ನು ಮಾತ್ರ ಹಾಳಾಗದಂತೆ ಎಣ್ಣೆ ಮುಂತಾದ ಲೇಪನಗಳಿಂದ ಸಂರಕ್ಷಿಸುತ್ತಾನೆ. ಅದಕ್ಕೆ ಕೃತಕ ದೇಹವನ್ನು ಜೋಡಿಸುತ್ತಾನೆ. ಈ ರೀತಿ ಕೃತಕ ದೇಹ ಅವಳ ‘ಮುಂಡಕ್ಕೆ’ ಜೋಡಿಸುವುದು ಅವನಲ್ಲಿ ಅಪಾವಿತ್ರ್ಯತೆ ಪ್ರಶ್ನೆ ಕಾಡಿದೆ ಎಂಬುದಕ್ಕೆ ಸಾಕ್ಷಿ ಆಗಬಹುದಾಗಿದೆ. ಏಕೆಂದರೆ ಆ ಪ್ರಶ್ನೆಗಳು ಮೂಡದಿದ್ದರೆ ಅವಳ ಇಡೀ ದೇಹವನ್ನು ಸಂರಕ್ಷಿಸುತ್ತಿದ್ದ. ಆದರೆ ತಲೆ ಮಾತ್ರ ಸಂರಕ್ಷಿಸಿದ್ದು ಆತನಲ್ಲಿ ಕಾಡಿರಬಹುದಾದ ಅಪಾವಿತ್ರ್ಯತೆಯನ್ನು ಸಮರ್ಥಿಸುತ್ತದೆ. ಅಷ್ಟೇ ಅಲ್ಲದೆ ಹೊಲೆಯನೊಂದಿಗೆ ಹೋಗಿರುವ ಹೆಂಡತಿ ಸತ್ತ ಬಳಿಕ ಅವಳ ತಲೆ ಪಡೆದು, ಅದಕ್ಕೆ ಕೃತಕ ದೇಹ ಸೇರಿಸಿ ಆ ಶವದೊಂದಿಗೆ ಜೀವನ ಕಳೆಯುತ್ತಾನೆ. ಇದು ಆತನ ಪ್ರೀತಿ ಎಂದೆನಿಸಿದರೂ, ಹೆಣ್ಣು ಸತ್ತರೂ ಗಂಡನ ಅಧೀನ ಎಂಬ ಧೋರಣೆಯನ್ನು ಸಮರ್ಥಿಸಿದಂತಿದೆ.
ಲಿಖಿತ ಸಾಹಿತ್ಯದ ಪ್ರಭಾವ
ಒಂದು ಸಾಹಿತ್ಯದ ಮೇಲೆ ಇನ್ನೊಂದು ಸಾಹಿತ್ಯ ಕ್ಷೇತ್ರದ ಪ್ರಭಾವ, ಪ್ರೇರಣೆಗಳು ಆಗುವುದು ಸಹಜವಾದ ಪ್ರವೃತ್ತಿ. ಅದು ಲಿಖಿತ ಸಾಹಿತ್ಯ ಆಗಿರಲಿ ಅಥವಾ ಮೌಖಿಕ ಸಾಹಿತ್ಯವೇ ಆಗಿರಲಿ. ಇದಕ್ಕೆ ಜನಪದ ಸಾಹಿತ್ಯದಲ್ಲಿನ ‘ಯಲುರಾಜನ ಮಡದಿ’ ಕಥನಗೀತೆ ನಿದರ್ಶನವಾಗುತ್ತದೆ. ಇದರ ಮೇಲೆ ಜನ್ನನ ‘ಯಶೋಧರ ಚರಿತೆ’ಯ ದಟ್ಟ ಪ್ರಭಾವವಿದೆ. ಯಶೋಧರ ಚರಿತ್ರೆಯಲ್ಲಿ ‘ಯಶೋಧರ’ನ ಹೆಂಡತಿ ‘ಅಮೃತಮತಿ’ ಅಷ್ಟಾವಂಕ ‘ಬದಗ’ನ ಕೊಳಲ ನಾದಕ್ಕೆ ಮನಸೋಲುತ್ತಾಳೆ. ‘ಯಲುರಾಜನ ಮಡದಿ’ ಗೀತೆಯಲ್ಲೂ ಕೂಡ ರಾಜನ ಮಡದಿ ‘ಹೊಲೆಯ’ ಬಿಡಿಸಿದ ಚಿತ್ರಕ್ಕೆ ಮನಸೋತಿದ್ದಾಳೆ. ಅಲ್ಲಿನ ಕೊಳಲಿಗೆ ಬದಲು ಇಲ್ಲಿ ಚಿತ್ರವಿದೆ ಅಷ್ಟೆ. ಆದರೆ ಮನಸೋಲುವ ಕ್ರಿಯೆ ಮಾತ್ರ ಒಂದೇ ಆಗಿದೆ. ಯಶೋಧರ ತನ್ನ ಹೆಂಡತಿ ಬದಗನೊಂದಿಗೆ ಹೊಂದಿರುವ ಸಂಬಂಧ ತಿಳಿದು ಅವರಿಬ್ಬರನ್ನು ಶಿಕ್ಷಿಸಲು ಮುಂದಾಗುತ್ತಾನೆ. ಅದು ತಪ್ಪೆಂದು ತಿಳಿದ ಮೇಲೆ ಶಿಕ್ಷಿಸದೆ ಸುಮ್ಮನಾಗುತ್ತಾನೆ. ಅದೇ ರೀತಿ ಯಲುರಾಜ ಕೂಡ ತನ್ನ ಮಡದಿ ಹೊಲೆಯನೊಂದಿಗೆ ಹೋಗಿದ್ದಾಳೆಂಬ ವಿಚಾರ ತಿಳಿದು ಶಿಕ್ಷಿಸದೇ ಅವರನ್ನು ಸಂತೋಷವಾಗಿ ಜೀವಿಸಲು ಬಿಡುತ್ತಾನೆ. ಯಲುರಾಜನ ಮಡದಿ ಹಣೆಬರಹದಲ್ಲಿ ‘ಅರಸಾಗಿ ಹುಟ್ಟಿ, ರಾಜನಿಗೆ ಮದುವೆಯಾಗಿ ಮೂರು ವರ್ಷ ರಾಜ್ಯ ಆಳಿದ ಮೇಲೆ, ನಾಲ್ಕನೆ ವರ್ಷಕ್ಕೆ ದಂಡಿಗೆ ಹೋಗಬೇಕು. ನಾಲ್ಕನೇ ವರ್ಷಕ್ಕೆ ಹೊಲೆಯನ ಸಂಗಡ ಹೋಗಬೇಕು’ ಎಂಬ ವಿಧಿಯ ಕೈವಾಡ ಹೇಳಲಾಗಿದೆ. ಇದೇ ರೀತಿ ವಿಧಿಯ ಕೈವಾಡ ‘ಯಶೋಧರ ಚರಿತೆ’ಯಲ್ಲಿಯೂ ಕಾಣುತ್ತದೆ. ಹೀಗೆ ಈ ಎರಡು ಕಾವ್ಯಗಳಲ್ಲಿ ನಡೆಯುವ ಅನೇಕ ಘಟನೆಗಳ ಮಧ್ಯೆ ಸಾಮ್ಯತೆಯಿದೆ. ಇಲ್ಲಿನ ಕಾರಣ, ಪರಿಣಾಮಗಳಿಗೂ ವಿಧಿಯ ಕೈವಾಡ ಕಾರಣವೆಂಬ ವಾದವನ್ನು ಎರಡೂ ಕಾವ್ಯಗಳಲ್ಲಿ ಮುಂದಿಡಲಾಗಿದೆ. ‘ಯಶೋಧರ ಚರಿತೆ’ ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಜೈನ ಪರಂಪರೆಯ ಕೃತಿರತ್ನವಾಗಿದೆ. ‘ಯಲುರಾಜನ ಮಡದಿ’ ಜನಪದರಲ್ಲಿ ಸೃಷ್ಟಿಯಾಗಿರುವ ಸಾಂಸ್ಕೃತಿಕ ಕಥನವಾಗಿದೆ. ಯಶೋಧರ ಚರಿತೆಯಂತೆ ಭಾಷೆ, ವರ್ಣನೆ, ಪರಂಪರೆಯಲ್ಲಿ ಗಟ್ಟಿ ಸಾಧಿಸದಿದ್ದರು ವಸ್ತು ದೃಷ್ಟಿ, ಸಾಂಸ್ಕೃತಿಕ ದೃಷ್ಟಿಯಿಂದ ‘ಯಲುರಾಜನ ಮಡದಿ’ ಮಹತ್ವ ಪಡೆಯುತ್ತದೆ. ‘ಯಶೋಧರ ಚರಿತೆ’ಗೆ ಧರ್ಮದ ತತ್ವ, ಸಿದ್ಧಾಂತಗಳ ಬೇಲಿಯಿದೆ. ಆದರೆ ‘ಯಲುರಾಜ ಮಡದಿ’ಗೆ ಅಂತಹ ಬೇಲಿಯ ಅಡ್ಡಗೋಡೆಗಳಿಲ್ಲ. ಅದೊಂದು ಸಾಂಸ್ಕೃತಿಕ ಕಥನವಾಗಿ ನಿರ್ಮಾಣವಾಗಿದೆ. ಜೈನಧರ್ಮದ ಪ್ರಕಾರ ಹೆಣ್ಣು ಮೋಕ್ಷಕ್ಕೆ ಅರ್ಹಳಲ್ಲವೆಂಬುದನ್ನು ವಾದಿಸುತ್ತದೆ. ಈ ವಾದವನ್ನು ಯಶೋಧರ ಚರಿತೆ ಪ್ರತಿಪಾದಿಸಿದೆ ಇಲ್ಲಿ ಅಮೃತಮತಿಯ ಮೋಕ್ಷದ ಉಲ್ಲೇಖ ಅಸ್ಪಷ್ಟದಂತಿದೆ. ಆದರೆ ಯಲುರಾಜನ ಮಡದಿಯಲ್ಲಿ ಇಂತಹ ಗೋಜಿಲ್ಲ. ಇದರಲ್ಲಿ ಎಲ್ಲರಿಗೂ ಬದುಕನ್ನು ಅನುಭವಿಸುವ ಹಕ್ಕಿದೆ ಎಂಬ ಜೀವನ ದರ್ಶನವಿದೆ.
ಹೀಗೆ ಈ ಎರಡು ಕಾವ್ಯಗಳ ಮಧ್ಯೆ ಇರುವಂತಹ ಸಾಮ್ಯತೆಯಿಂದ ಒಂದು ಲಿಖಿತ ಪಠ್ಯ, ಒಂದು ಮೌಖಿಕ ಕಥನಗೀತೆಯ ಮೇಲೆ ಬೀರಿರುವ ಪ್ರೇರಣೆ, ಪ್ರಭಾವ ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಒಂದು ಲಿಖಿತ ಸಾಹಿತ್ಯ ಪಠ್ಯ, ಮೌಖಿಕ ಸಾಹಿತ್ಯಕ್ಕೆ ಪ್ರವೇಶ ಪಡೆದಾಗ ಅದು ತನ್ನ ಸಾಂಸ್ಕೃತಿಕ ಜಗತ್ತಿಗೆ ಹೊಂದಿಕೊಳ್ಳುವಂತೆ ಅನೇಕ ಬದಲಾವಣೆ ಮಾಡಿಕೊಳ್ಳುತ್ತದೆ. (ಇದು ಶಿಷ್ಟ ಸಾಹಿತ್ಯಕ್ಕೂ ಕೂಡ ಅನ್ವಯ ಆಗುತ್ತದೆ) ಜೊತೆಗೆ ತನ್ನ ಜಾಯಮಾನಕ್ಕೆ ಹೊಂದುವಂತೆ ಪಾತ್ರ ಸೃಷ್ಟಿ, ತಂತ್ರ ಮುಂತಾದವುಗಳನ್ನು ಬದಲಾವಣೆ ಮಾಡಿಕೊಳ್ಳುತ್ತದೆ. ಇದಕ್ಕೆ ನಿದರ್ಶನವಾಗಿ ‘ಯಲುರಾಜನ ಮಡದಿ’ ಕಥನಗೀತೆ ಕಾಣುತ್ತದೆ. ಇಂತಹ ಅನೇಕ ನಿದರ್ಶನಗಳನ್ನು ಮೌಖಿಕ, ಲಿಖಿತ ಸಾಹಿತ್ಯಗಳಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ‘ಯಲುರಾಜನ ಮಡದಿ’ ಶಿಷ್ಟ ಸಾಹಿತ್ಯದ ‘ಯಶೋಧರ ಚರಿತೆ’ಯ ಮಟ್ಟಕ್ಕೆ ನಿಲ್ಲದಿದ್ದರೂ, ತನ್ನ ಗಟ್ಟಿತನದ ವಸ್ತುವಿನಿಂದ ಇಡೀ ಸಾಂಸ್ಕೃತಿಕ ಲೋಕದ ವಾಸ್ತವತೆಯನ್ನು ಪ್ರತಿನಿಧಿಸುವ ಮೂಲಕ ಎಂದಿಗೂ ಸಮಕಾಲೀನವಾಗುತ್ತದೆ.
ಜನಪದರು ಮತ್ತು ಯಜಮಾನ್ಯ ಸಂಸ್ಕೃತಿ
ಕಥನಗೀತೆಯ ತುಂಬ ಯಜಮಾನ್ಯ ಸಂಸ್ಕೃತಿಯನ್ನು ಒಂದಿಲ್ಲೊಂದು ಮಾರ್ಗದಲ್ಲಿ ಟೀಕಿಸುವ, ನಿಂದಿಸುವ ಕೆಲಸ ನಡೆದಿದೆ. ಅವುಗಳನ್ನು ಈ ಮೂರು ಸನ್ನಿವೇಶಗಳ ಹಿನ್ನೆಲೆಯಲ್ಲಿ ಗುರುತಿಸಿ ಚರ್ಚಿಸಲಾಗಿದೆ.
ಸನ್ನಿವೇಶ ಒಂದು : ರಾಣಿಯನ್ನು ಸಾಮಾನ್ಯ ಸ್ತ್ರೀಯರಂತೆ ಹೊಳೆಗೆ ಕಳುಹಿಸಿರುವುದು.
ಇದರ ಉದ್ದೇಶ ಸಾಮಾನ್ಯ ಹೆಂಗಸರ ಜೀವನ ಅನಾವರಣ ಮತ್ತು ಅವರು ದಿನನಿತ್ಯ ಅನುಭವಿಸುವ ಕಷ್ಟಗಳೆಲ್ಲವನ್ನು ಮೇಲ್ವರ್ಗದವರಿಗೆ ತಿಳಿಸುವ, ಟೀಕಿಸುವ ಪ್ರಯತ್ನದಂತಿದೆ.
ಸನ್ನಿವೇಶ ಎರಡು : ಮೇಲ್ವರ್ಗದ ಸ್ತ್ರೀಯನ್ನು ಕೆಳವರ್ಗದ ಹೊಲೆಯನೊಂದಿಗೆ ಅನುರಕ್ತಳಾಗುವಂತೆ ಮಾಡಿರುವುದು.
ಮೇಲುವರ್ಗಗಳಿಂದ ಕೆಳವರ್ಗದ ಮೇಲೆ ಶತಶತಮಾನಗಳಿಂದ ಅತ್ಯಾಚಾರ, ದಬ್ಬಾಳಿಕೆಯಂತಹ ಶೋಷಣೆಗಳು ನಡೆದುಕೊಂಡು ಬಂದಿವೆ. ಆದರೆ ಈ ಶೋಷಣೆ, ದಬ್ಬಾಳಿಕೆಗಳನ್ನು ನೇರವಾಗಿ ಪ್ರತಿಭಟಿಸುವ ಧೈರ್ಯವನ್ನು ಯಜಮಾನ್ಯ ಸಂಸ್ಕೃತಿ ಕಿತ್ತುಕೊಂಡಿದೆ. ಆದ್ದರಿಂದ ಜನಪದರು ಸಾಹಿತ್ಯದ ಮುಖೇನ ಮೇಲುವರ್ಗದವಳನ್ನು ಕೆಳವರ್ಗದವನೊಂದಿಗೆ ಅನುರಕ್ತಳಾಗುವಂತೆ ಮಾಡುವ ಮೂಲಕ ಪ್ರತಿಭಟಿಸಿದಂತಿದೆ.
ಸನ್ನಿವೇಶ ಮೂರು : ರಾಜನಾದವನು ಹೊಲೆಯನ ಮನೆಗೆ ಮತ್ತು ಕೆಳವರ್ಗದ ಆಯಾಗಾರಿಕೆ ವೃತ್ತಿ ಮಾಡುವವರ ಮನೆಗಳ ಮುಂದಕ್ಕೆ ಹೋಗುವಂತೆ ಮಾಡಿರುವುದು.
ಈ ಸನ್ನಿವೇಶಗಳು ಮುಖ್ಯವಾಗಿ ಪ್ರತಿ ಒಬ್ಬ ವ್ಯಕ್ತಿಗೂ, ಸಮುದಾಯಕ್ಕೂ ಅದರದ್ದೆ ಸ್ವಾಭಿಮಾನವಿದೆ ಎಂಬುದನ್ನು ಪ್ರತಿಪಾದಿಸುವ ಉದ್ದೇಶ ಹೊಂದಿದಂತಿದೆ. ಅವರವರ ಸ್ವಾಭಿಮಾನಕ್ಕೆ ಎಲ್ಲರೂ ಬೆಲೆ ಕೊಡಬೇಕೆಂಬುದು ಇಲ್ಲಿನ ದೃಢ ನಿಲುವಿರುವಂತಿದೆ. ಆದ್ದರಿಂದ ಇಲ್ಲಿ ರಾಜನಾದವನು ತನ್ನ ಹೆಂಡತಿ ವಿಚಾರಕ್ಕೆ ಹೊಲೆಯನ ಬಳಿ ಹೋಗುವಂತೆ ಮಾಡಲಾಗಿದೆ. ಇದರ ಉದ್ದೇಶ ಹೊಲೆಯನಂತಹ ಅನೇಕ ಕೆಳವರ್ಗದವರ ಸ್ವಾಭಿಮಾನಕ್ಕೆ ಕೊಡುತ್ತಿರುವ ಬೆಲೆ ಆಗಿದೆ. ಇಲ್ಲಿ ಹೊಲೆಯನಿಗೆ ರಾಜನ ಬಳಿ ಯಾವುದೇ ಕೆಲಸವಿಲ್ಲ. ಆದರೆ ರಾಜನಿಗೆ ಈತನಿಂದ ಕೆಲಸ ಆಗಬೇಕಾಗಿದೆ. ಆದ್ದರಿಂದ ರಾಜನೇ ಹೋಗಬೇಕಾಗಿರುವುದು ಅವನ ಕರ್ತವ್ಯವೆಂಬುದು ಜನಪದರ ದೃಢ ನಿಲುವಿನಂತಿದೆ. ಹಾಗಾಗಿ ಇಲ್ಲಿ ಯಲುರಾಜ ತನ್ನ ಕಾರ್ಯದ ಉದ್ದೇಶದಿಂದ ಹೊಲೆಯ ಮನೆಯ ಬಾಗಿಲಿಗೆ ಹೋಗುತ್ತಾನೆ. ಅದೇ ರೀತಿ ಆಯಾಗಾರಿಕೆ ವೃತಿಗಾರರ ಮನೆಗಳಿಗೆ ಸ್ವತಃ ರಾಜನೇ ಹೋಗುವುದು ಕೂಡ ಇದೆ ಉದ್ದೇಶ ಹೊಂದಿದಂತಿದೆ.
ಇದರ ಮೂಲಕ ಅದರ್ಶ ರಾಜನಾದವನೂ ರಾಜ್ಯದ ಎಲ್ಲ ಜನತೆಯನ್ನು ಹತ್ತಿರದಿಂದ ನೋಡಬೇಕೆಂಬ ಸಮಾನ ದೃಷ್ಟಿಯಿದ್ದಂತಿದೆ. ಅಲ್ಲದೆ ಯಜಮಾನ್ಯ ಸಂಸ್ಕೃತಿ ತನ್ನ ಅಧಿಕಾರದ ಶಕ್ತಿಯಿಂದ ಕೆಳವರ್ಗಗಳನ್ನು ಇಚ್ಚಿಸಿದ ರೀತಿ ನಡೆಸಿಕೊಳ್ಳುವ ಮನೋಧರ್ಮವನ್ನು ಟೀಕಿಸಿದೆ. ಆದ್ದರಿಂದ ಇಲ್ಲಿ ಯಜಮಾನ್ಯ ಸಂಸ್ಕೃತಿಯ ಸ್ಥಾನದಲ್ಲಿದ್ದವರನ್ನು ಕೆಳವರ್ಗಗಳ ಮನೆಬಾಗಿಲಿಗೆ ಬರುವಂತೆ ಮಾಡಲಾಗಿದೆ. ಇದರಿಂದ ಫ್ಯೂಡಲಿಸಂನ ದರ್ಪತನ, ಗರ್ವತನವನ್ನು ಟೀಕಿಸಿದಂತಿದೆ. ಈ ದರ್ಪತನ, ಗರ್ವತನಗಳನ್ನು ಬಿಟ್ಟು ‘ಯಲುರಾಜ’ನಂತೆ ಎಲ್ಲರನ್ನು ಸಮಾನ ದೃಷ್ಟಿಯಲ್ಲಿ ನೋಡಬೇಕೆಂಬ ಆದರ್ಶದ ಮನಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ.
ಜನಪದರು ಯಜಮಾನ್ಯ ಸಂಸ್ಕೃತಿಯನ್ನು ಸಾಹಿತ್ಯದ ಮೂಲಕ ಏನೋ ಟೀಕಿಸಿ ಬಿಡುತ್ತಾರೆ. ಆದರೆ ಅವರು ದಿನನಿತ್ಯ ಸಾಮಾಜಿಕ ವ್ಯವಸ್ಥೆಯಲ್ಲಿ ಯಜಮಾನ್ಯ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಬೇಕಾಗುತ್ತದೆ. ಆ ಸಂದರ್ಭದಲ್ಲಿ ಅಪಾಯ ಆಗಬಹುದೆಂಬ ಮುನ್ಸೂಚನೆಯಿಂದ ಸಾಹಿತ್ಯ ರಚನೆಯಲ್ಲಿ ತಂತ್ರಗಳನ್ನು ಬಳಸುತ್ತಾರೆಂದು ಅನಿಸುತ್ತದೆ. ಆ ತಂತ್ರಕ್ಕೆ ನಿದರ್ಶನವಾಗಿ ‘ಯಲುರಾಜನ ಮಡದಿ’ಯಲ್ಲಿ ‘ವಿಧಿಯ ಕೈವಾಡ’ವನ್ನು ಬಳಸಿರುವ ಸಾಧ್ಯತೆಯಿದೆ. ಮೇಲ್ವರ್ಗದ ಯಲುರಾಜನ ಹೆಂಡತಿಯನ್ನು ಕೆಳವರ್ಗದ ‘ಹೊಲೆಯ’ನೊಂದಿಗೆ ಅನುರಕ್ತಳನ್ನಾಗಿಸುವುದು ಯಜಮಾನ್ಯ ಸಂಸ್ಕೃತಿಯ ಪ್ರಾಬಲ್ಯವಿರುವಾಗ ಸಣ್ಣ ವಿಚಾರವಲ್ಲ. ಆದರೆ ಈ ಕಥನ ಗೀತೆಯಲ್ಲಿ ಅದನ್ನು ಮಾಡಲಾಗಿದೆ. ಆದ್ದರಿಂದ ಇದರ ಪರಿಣಾಮದಿಂದ ತಪ್ಪಿಸಿಕೊಳ್ಳಲು ರಾಣಿಯ ಜೀವನದಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ‘ವಿಧಿಯ ಕೈವಾಡ’ ಕಾರಣವೆಂದು ಹೇಳಿದ್ದಾರೆ. ಇದರ ಮೂಲಕ ತಮ್ಮ ರಕ್ಷಣೆ ಮಾಡಿಕೊಂಡಿರುವಂತಿದೆ. ಇಂತಹ ತಂತ್ರಗಳಿಂದ ಅವರು ಯಜಮಾನ್ಯ ಸಂಸ್ಕೃತಿಯನ್ನು ಪ್ರತಿಭಟಿಸುತ್ತಲೇ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆಂದು ಅಭಿಪ್ರಾಯಿಸಬಹುದು.
ಒಟ್ಟಿನಲ್ಲಿ ‘ಯಲುರಾಜನ ಮಡದಿ’ ಕಥನಗೀತೆ ಒಂದು ಕಾಲಘಟ್ಟದ ಸಾಂಸ್ಕೃತಿಕ ಲೋಕವನ್ನು ಅನಾವರಣ ಮಾಡುವುದರ ಜೊತೆಗೆ ಅನೇಕ ಹೊಸ ವಿಚಾರಗಳ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ಇಂತಹ ಅನೇಕ ಜನಪದ ಕಥನಗೀತೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಅಧ್ಯಯನಕ್ಕೆ ಒಳಪಡಿಸುವ ಜರೂರಿದೆ. ಜನಪದ ಸಾಹಿತ್ಯ ಶಿಷ್ಟ ಸಾಹಿತ್ಯಕ್ಕಿಂತ ಹೆಚ್ಚು ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದು ಜನಪದರ ಮುಸುಕಿನ ಪರದೆಯಾಗಿದೆ. ಆ ಮುಸುಕಿನ ಪರದೆಯ ಹಿಂದೆ ಅನೇಕ ಜನಪದರ ಜೀವನದ ಅನುಭವದ ಚಿತ್ರಗಳಿವೆ. ಇಂತಹ ಅನುಭವದ ಚಿತ್ರಗಳನ್ನು ಗುರುತಿಸಿ ಹೆಚ್ಚಿನ ಅಧ್ಯಯನ ಮಾಡಬೇಕಾಗಿರುವುದು ಇಂದಿನ ಸಮಾಜದ ತುರ್ತಾಗುತ್ತದೆ.
ಪರಾಮರ್ಶನ ಗ್ರಂಥ :