ಜನಪದ ವೈದ್ಯ ಪರಂಪರೆ
ಡಾ. ಸೋಮಣ್ಣ ಹೊಂಗಳ್ಳಿ
ಕನ್ನಡ ಪ್ರಾಧ್ಯಾಪಕರು,
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ,
ಮಂಗಳೂರು ವಿಶ್ವವಿದ್ಯಾಲಯ, ಮಂಗಳ ಗಂಗೋತ್ರಿ, ಕೊಣಾಜೆ-574199.
ಮೊ.ಸೊ-9886165134. Email- krssomanna@gmail.com
ಪ್ರಸ್ತಾವನೆ
ಮನುಷ್ಯ ಪ್ರಾಚೀನ ಕಾಲದಿಂದಲೂ ಆರೋಗ್ಯ ಬಗ್ಗೆ ಕಾಳಜಿ ವಹಿಸುತ್ತಾ ಬಂದಿದ್ದಾನೆ. ಸಾಮಾನ್ಯವಾಗಿ ಆದಿಮ ವೈದ್ಯ ಪದ್ಧತಿಯನ್ನು ಜನಪದ ವೈದ್ಯ ಎನ್ನಲಾಗುತ್ತಿದೆ. ಜನಪದ ವೈದ್ಯಕ್ಕೆ ನಾಟಿ ಔಷಧಿ, ಹಸಿರು ಜೌಷಧಿ, ಹಳ್ಳಿ ಮದ್ದು, ಮನೆ ಮದ್ದು, ಗಂವಟಿ ಮದ್ದು, ನಾಡಮದ್ದು, ಹಿತ್ತಲ ಔಷಧ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ. ಜನಪದ ವೈದ್ಯದ ಪ್ರಾಚೀನತೆ ಬಗ್ಗೆ ನಿಖವಾದ ಕಾಲ ಘಟ್ಟವು ಇಂತಹದ್ದೇ ಎಂದು ಗುರುತಿಸಲಾಗುವುದು ಕಷ್ಟಕರವಾಗಿದೆ. ಆದರೆ ಜನಪದ ವೈದ್ಯ ಚಿಕಿತ್ಸೆಯು ಆಯುರ್ವೇದ ಔಷಧಗಳಿಗೆ ಮೂಲವಾಗಿದೆ ಎಂದು ತಿಳಿದುಬರುತ್ತದೆ. ಆಯುರ್ವೇದ ಪದ್ಧತಿಯನ್ನುಕುರಿತು ಒಬ್ಬನೇ ಬರೆದು ಇಡಲಿಲ್ಲ. ಇದನ್ನು ಕಾಲಕಾಲಕ್ಕೆ ತಿದ್ದಿ, ಕಾಲಾನುಕ್ರಮದ ಜನಪದ ವೈದ್ಯದ ಚಿಕಿತ್ಸೆಗಳನ್ನು ಅನ್ವೇಷಣೆಯೊಂದಿಗೆ ತಿಳಿದುಕೊಂಡು, ದಾಖಲಿಸಿಕೊಂಡು, ಆನಂತರ ಕಾಲಕಾಲಕ್ಕೆ ತಕ್ಕಂತೆ ತಿದ್ದಿ ಬರೆಯಲಾಗಿದೆ ಹಾಗೂ ಸೇರ್ಪಡೆ ಮಾಡಲಾಗಿದೆ. ಜನಪದರಲ್ಲಿದ್ದ ಚಿಕಿತ್ಸೆಯ ವಿಧಾನಗಳ ವಿವರಗಳೇ ಇಂದು ಆಯುರ್ವೇದವಾಗಿ ಬೆಳೆದು ಬಂದಿದೆ ಎಂದರೆ ತಪ್ಪಾಗಲಾರದು. ಜನ ಸಾಮಾನ್ಯರಲ್ಲಿದ್ದ ಜ್ಞಾನವೇ ಇಂದು ಜನಪದ ಜ್ಞಾನವಾಗಿದೆ. ಜನಪದ ಜ್ಞಾನವು ಇಂದು ಮಾತಿನ ಮೂಲಕ ಪ್ರಸಾರವಾಗುತ್ತಿದೆ. ಹೀಗೆಯೇ ಜನಪದ ವೈದ್ಯದ ಜ್ಞಾನವೂ ಪ್ರಸಾರವಾಗಿದೆ. ಹೀಗೆ ಜನಪದ ವೈದ್ಯದ ಜ್ಞಾನ ಪ್ರಸಾರವಾದುದನ್ನು ಸುಶ್ರುತ ಸಂಹಿತಾ ಕೃತಿಯಲ್ಲಿ ದಾಖಲಿಸಲಾಗಿದೆ.
ಕೀ ವರ್ಡ್: ಆದಿಮ ವೈದ್ಯ ಪದ್ಧತಿ, ನಾಟಿ ಔಷಧಿ, ಹರ್ಬಲಿಸಂ, ಅಲೋಫಥಿಕ್ ಮೆಡಿಸಿನ್, ಕೋಳಿರೋಗ, ಪ್ರಾಣಿ ವೈದ್ಯರ
ಜನಪದ ವೈದ್ಯದ ಪ್ರಾಚೀನತೆ:
ಮನುಷ್ಯ ಪ್ರಾಚೀನ ಕಾಲದಿಂದಲೂ ಆರೋಗ್ಯ ಬಗ್ಗೆ ಕಾಳಜಿ ವಹಿಸುತ್ತಾ ಬಂದಿದ್ದಾನೆ. ಸಾಮಾನ್ಯವಾಗಿ ಆದಿಮ ವೈದ್ಯ ಪದ್ಧತಿಯನ್ನು ಜನಪದ ವೈದ್ಯ ಎನ್ನಲಾಗುತ್ತಿದೆ. ಜನಪದ ವೈದ್ಯಕ್ಕೆ ನಾಟಿ ಔಷಧಿ, ಹಸಿರು ಜೌಷಧಿ, ಹಳ್ಳಿ ಮದ್ದು, ಮನೆ ಮದ್ದು, ಗಂವಟಿ ಮದ್ದು, ನಾಡಮದ್ದು, ಹಿತ್ತಲ ಔಷಧ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ. ಜನಪದ ವೈದ್ಯದ ಪ್ರಾಚೀನತೆ ಬಗ್ಗೆ ನಿಖವಾದ ಕಾಲ ಘಟ್ಟವು ಇಂತಹದ್ದೇ ಎಂದು ಗುರುತಿಸಲಾಗುವುದು ಕಷ್ಟಕರವಾಗಿದೆ. ಆದರೆ ಜನಪದ ವೈದ್ಯ ಚಿಕಿತ್ಸೆಯು ಆಯುರ್ವೇದ ಔಷಧಗಳಿಗೆ ಮೂಲವಾಗಿದೆ ಎಂದು ತಿಳಿದುಬರುತ್ತದೆ. ಆಯುರ್ವೇದ ಪದ್ಧತಿಯನ್ನುಕುರಿತು ಒಬ್ಬನೇ ಬರೆದು ಇಡಲಿಲ್ಲ. ಇದನ್ನು ಕಾಲಕಾಲಕ್ಕೆ ತಿದ್ದಿ, ಕಾಲಾನುಕ್ರಮದ ಜನಪದ ವೈದ್ಯದ ಚಿಕಿತ್ಸೆಗಳನ್ನು ಅನ್ವೇಷಣೆಯೊಂದಿಗೆ ತಿಳಿದುಕೊಂಡು, ದಾಖಲಿಸಿಕೊಂಡು, ಆನಂತರ ಕಾಲಕಾಲಕ್ಕೆ ತಕ್ಕಂತೆ ತಿದ್ದಿ ಬರೆಯಲಾಗಿದೆ ಹಾಗೂ ಸೇರ್ಪಡೆ ಮಾಡಲಾಗಿದೆ. ಜನಪದರಲ್ಲಿದ್ದ ಚಿಕಿತ್ಸೆಯ ವಿಧಾನಗಳ ವಿವರಗಳೇ ಇಂದು ಆಯುರ್ವೇದವಾಗಿ ಬೆಳೆದು ಬಂದಿದೆ ಎಂದರೆ ತಪ್ಪಾಗಲಾರದು. ಜನ ಸಾಮಾನ್ಯರಲ್ಲಿದ್ದ ಜ್ಞಾನವೇ ಇಂದು ಜನಪದ ಜ್ಞಾನವಾಗಿದೆ. ಜನಪದ ಜ್ಞಾನವು ಇಂದು ಮಾತಿನ ಮೂಲಕ ಪ್ರಸಾರವಾಗುತ್ತಿದೆ. ಹೀಗೆಯೇ ಜನಪದ ವೈದ್ಯದ ಜ್ಞಾನವೂ ಪ್ರಸಾರವಾಗಿದೆ. ಹೀಗೆ ಜನಪದ ವೈದ್ಯದ ಜ್ಞಾನ ಪ್ರಸಾರವಾದುದನ್ನು ಸುಶ್ರುತ ಸಂಹಿತಾ ಕೃತಿಯಲ್ಲಿ ದಾಖಲಿಸಲಾಗಿದೆ.
ಅಹಂ ಹಿ ಧನ್ವಂತರಿರಾದಿದೇವೋ ಜರಾರು ಜಾಮೃತ್ಯ ಹರೋಮರಾಣಾಮ್
ಶಲ್ಯಾಙಗೈರ ಪರೈರುಪೇತಂ ಪ್ರಾಪ್ತೋಸ್ಮಿಗಾಂ ಭೂಯ ಇಹೋಪದೇಷ್ಟುಮ್
(ಸುಶ್ರುತ ಸಂಹಿತಾ-ಪೂರ್ವಾರ್ಧ-ಶ್ಲೋಕ-8)
ಜಾನಪದ ವೈದ್ಯದ ಇತಿಹಾಸ ಮಾನವನ ಇತಿಹಾಸದಷ್ಟೇ ಪ್ರಾಚೀನವಾದದ್ದು. ಭಾರಧ್ವಾಜನಿಂದ ಧನ್ವಂತರಿಯು, ಧನ್ವಂತರಿಯಿಂದ ದಿವೋದಾಸನೂ, ದಿವೋದಾಸನಿಂದ ಬ್ರಹ್ಮದತ್ತನೂ ಒಬ್ಬರಿಂದ ಒಬ್ಬರು ಆಯುರ್ವೇದ ವಿದ್ಯೆಯನ್ನು ತಿಳಿದರು. ಹಾಗೂ ದನ ಕಾಯುವವರು, ತಪಸ್ವಿಗಳು, ಬೇಡರು, ಕಾಡಿನಲ್ಲಿ ಸಂಚರಿಸುವ ಇತರರಿಗೆ ವೈದ್ಯ ತಿಳಿದಿದೆ. ಇವರನ್ನು ಮೂಲಾಹಾರಿಗಳು ಅಥವಾ ಭೇಷಜ ವ್ಯಕ್ತಿಗಳು ಎಂದು ಹೇಳಲಾಗಿದೆ. ಭೇಷಜ ಅಥವಾ ಭಿಷಜ ಎಂದರೆ ವೈದ್ಯ ಎಂದು ಅರ್ಥ. ಇಂಥವರಿಂದ ಸಂಗ್ರಹಿಸಿದ ಮಾಹಿತಿಗಳು ಆಯುರ್ವೇದ ಗ್ರಂಥಗಳಲ್ಲಿವೆ. ಜನಪದ ವೈದ್ಯದ ಪ್ರಾಚೀನತೆ ಕ್ರಿ.ಪೂ. 2500 ವರ್ಷಗಳ ಹಿಂದಿನಿಂದಲೂ ಬಂದಿದೆ ಎಂಬುದನ್ನು ಇವು ತಿಳಿಸಿಕೊಡುತ್ತವೆ.
ಜನಪದ ವೈದ್ಯ ಪ್ರಾಚೀನವಾದದ್ದು, ತಲೆಮಾರಿನಿಂದ ತಲೆಮಾರಿಗೆ ಪ್ರಸಾರವಾಗಿ ಬಂದಿರುವಂತದ್ದು, ಮೌಖಿಕ ಪ್ರಸಾರದಿಂದ ಮತ್ತು ರೂಢಿಯಿಂದ ಸಾಂಪ್ರದಾಯಿಕವಾಗಿ ಮುಂದುವರಿದ ವಿಧಾನ. ಜನಪದ ವೈದ್ಯಕ್ಕೆ ನಿರ್ವಚನ ಹೇಳುವ ಪ್ರಯತ್ನಗಳು ನಡೆದಿವೆ. ಇಂಥ ಪ್ರಯತ್ನಗಳ ಹಿಂದೆ ಅನೇಕ ಶತಮಾನಗಳ, ಸಹಸ್ರಮಾನಗಳ ಇತಿಹಾಸವಿದೆ, ಅನಾರೋಗ್ಯವನ್ನು ಕುರಿತಂತೆ ಜನಪದರಲ್ಲಿ ಸಾಂಪ್ರದಾಯಿಕವಾಗಿ ಮೂಡಿ ಬಂದಿರುವ ಅಭಿಪ್ರಾಯಗಳ ಸಾರವೇ ಜನಪದ ವೈದ್ಯವೆಂದು ಹೇಳಬಹುದು (ಡಾ. ಆರ್.ವಿ.ಎಸ್. ಸುಂದರಂ. ಜನಪದ ಸಾಹಿತ್ಯ ದರ್ಶನ, 2009; 31)
ಜನಪದರು ತಮ್ಮ ಆಹಾರ, ಪಾನೀಯ ಸೇವನೆಯ ಕ್ರಮದಲ್ಲಿ, ಪ್ರಸಾಧನ ವ್ಯವಸ್ಥೆಯಲ್ಲಿ, ಹಬ್ಬಹರಿದಿನ, ರೂಢಿ ಸಂಪ್ರದಾಯ, ನಂಬಿಕೆ ಇತ್ಯಾದಿಗಳ ರೀತಿ-ನೀತಿಗಳಲ್ಲಿ ಕೆಲವು ವಿಧಿ ನಿಷೇಧಗಳನ್ನು ಅನುಸರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮುಂಜಾಗ್ರತೆಯನ್ನು ವಹಿಸುತ್ತಿದ್ದರು.
ಭಾರತದ ಜನಪದ ವೈದ್ಯ ಗ್ರೀಕ್ ನಾಗರೀಕತೆ, ಸಾಕ್ರಟೀಸ್, ಪ್ಲೇಟೋ ಮತ್ತು ಅರಿಸ್ಟಾಟಲ್‍ಗಿಂತ ಹಿಂದಿನದು ಎಂದು ಈ ಬಗ್ಗೆ ಅಧ್ಯಯನ ಮಾಡಿದ ಗಿರಿಜಾ ಪ್ರಸನ್ನ ಮಜುಂದಾರ್ ಹೇಳುತ್ತಾರೆ. ಸಸ್ಯಗಳನ್ನು ಕುರಿತ ತಿಳಿವಳಿಕೆಗಳು ಪ್ರಾಚೀನ ಕಾಲದಲ್ಲಿ ‘ವೃಕ್ಷಾಯುರ್ವೇದ ಎಂಬ ಹೆಸರಿನಲ್ಲಿವೆ. ಇದನ್ನು ವೇದಗಳ ಉಪವೇದ ಎಂದು ತಿಳಿಯಲಾಗಿದೆ.
ಪ್ರಾದೇಶಿಕತೆ:
ಜನಪದ ವೈದ್ಯಕ್ಕೆ ಪ್ರಾದೇಶಿಕವಾಗಿ ಬೇರೆ ಬೇರೆ ರೀತಿಯಲ್ಲಿ ಹೆಸರುಗಳಿವೆ. ಹಳೇ ಮೈಸೂರು ಪ್ರಾಂತದಲ್ಲಿ ಹಸಿರು ಔಷಧಿ, ಕರಾವಳಿ ಪ್ರಾಂತ್ಯದಲ್ಲಿ ಹಳ್ಳಿ ಮದ್ದು, ಉತ್ತರ ಕರ್ನಾಟಕದಲ್ಲಿ ಗೌಂಡಿ ಔಷಧಿ, ಬಯಲು ಸೀಮೆಯಲ್ಲಿ ನಾಡಮದ್ದು ಎಂದು ಕರೆಯುತ್ತಾರೆ. ಹೀಗೆ ಹೆಸರು ಬೇರೆಯಾದಂತೆ ಜನಪದ ವೈದ್ಯದ ಸಾಮಗ್ರಿ ತಯಾರಿಕೆ, ಚಿಕಿತ್ಸಾ ವಿಧಾನಗಳು ಭಿನ್ನವಾಗುತ್ತಾ ಹೋಗುತ್ತದೆ. ಇದಕ್ಕೆ ಆಯಾ ಪ್ರಾಂತದ ಪರಿಸರ, ಹವಾಗುಣ, ಸಸ್ಯ ಪ್ರಭೇಧಗಳು ಕಾರಣವಾಗಿವೆ. ಮಲೆನಾಡಿನ ಪ್ರಾಂತ್ಯದಲ್ಲಿ ಬೇವಿನ ಮರ ಅಷ್ಟಾಗಿ ಬೆಳೆಯುವುದಿಲ್ಲ. ಇದಕ್ಕೆ ಹವಾಗುಣ ಕಾರಣ. ಬಯಲು ಸೀಮೆಯವರು ಬೇವಿನ ಮರದಿಂದ ಪಡೆಯುವ ಉಪಯೋಗವನ್ನು ಮಲೆನಾಡಿನಲ್ಲಿ ಕೊಡಸಿಗ ಮತ್ತು ಜಂತಾಲೆ ಮರಗಳಿಂದ ಪಡೆಯುವರು. ಆಯಾ ಪ್ರದೇಶದಲ್ಲಿ ದೊರಕುವ ಮತ್ತು ಬೆಳೆಯುವ ಬೇರು, ಬಳ್ಳಿ, ಕಾಂಡ, ಸಸ್ಯಗಳ ಮೂಲಿಕೆಗಳಿಂದ ಜನಪದ ವೈದ್ಯದ ಸಾಮಗ್ರಿಗಳು ರೂಪುಗೊಳ್ಳುತ್ತವೆ. ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣರು ವೈದ್ಯಕ್ಕೆ ಮದ್ದು ಎಂದು ಕರೆಯುವುದೇ ಹೆಚ್ಚು. ಮದ್ದು ಎನ್ನುವ ಶಬ್ದವು ಮರಂದು>ಮರ್ದು>ಮದ್ದು (ವನಸ್ಪತಿ-ಸಸ್ಯ) ದಿಂದ ತಯಾರಿಸಿದ್ದು ಎಂಬ ಅರ್ಥವನ್ನು ಹೊರಗೆಡವಿ ಜನಪದ ವೈದ್ಯದಲ್ಲಿ ವನಸ್ಪತಿಗಳ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ’. (ಸಂ. ಪಾಟೀಲ್ ವ್ಹಿ.ಎಲ್: ನಾಯಕ ಎನ್,ಆರ್, 2009, ಪುಟ-17). ಚಕ್ರಾಣಿಬೇರು, ಕೋವೆ ಬೇರು, ಇಸನಿ ಬೇರು, ಗಾಳಿಚೆಕ್ಕೆ, ಅವಸತಿ ಚೆಕ್ಕೆ ಮುಂತಾದ ಸಸ್ಯ ಜನ್ಯ ನಾರುಬೇರುಗಳನ್ನು ಗರುಡನ ತಲೆ, ಉಡದ ತಲೆ, ಮುಕ್ಕಳಕ್ಕಿ, ಎಲುಬು, ಮುಂತಾದ ಪ್ರಾಣಿಜನ್ಯ ಔಷಧಿ ವಸ್ತುಗಳನ್ನು ಸಂಗ್ರಹಿಸಿ ಇಡುತ್ತಿದ್ದರು. ಅವರ ಮನೆಯ ಸಂಚಾರ ಬಟ್ಟಲಲ್ಲಿ ಬೆಳ್ಳುಳ್ಳಿ, ಉಳಾಗಡ್ಡೆ, ಸಾಸಿವೆ, ಜೀರಿಗೆ, ಕರಿಮೆಣಸು, ಯಾಲಕ್ಕಿ, ಲವಂಗ, ನೇಗಿಲಮುಳ್ಳು, ಗೋಡಾಕಾಷ್ಟ, ದಾಲ್ಪಿನಿ ಮುಂತಾದ ಆಹಾರ ಪಾನೀಯಗಳು ಸೇರಿವೆ.
ಜಾನಪದ ಸಾಹಿತ್ಯಿಕ, ಭಾಷಿಕ, ಕ್ರಿಯಾತ್ಮಕ ಹಾಗೂ ವೈಜ್ಞಾನಿಕವೆಂಬ ಚತುರ್ಮುಖಗಳಲ್ಲಿ ಒಂದಾದ ವೈಜ್ಞಾನಿಕ ಮುಖದ ಒಂದು ಭಾಗವಾದ ಜನಪದ ವೈದ್ಯದ ಕುರಿತು ವಿವೇಚಿಸುವುದು ಅಗತ್ಯವಿದೆ. ಜನಪದ ವೈದ್ಯರು ವೃತ್ತಿ ವೈದ್ಯರಲ್ಲ. ಇವರು ಕೃಷಿ ಅಥವಾ ಇತರೇ ಕೆಲಸವನ್ನು ಮಾಡುತ್ತಿರುತ್ತಾರೆ. ಅವರ ಪ್ರವೃತ್ತಿ ಮಾತ್ರ ವೈದ್ಯವಾಗಿರುತ್ತದೆ. ವಾರದಲ್ಲಿ ಕೆಲವು ದಿನಗಳನ್ನು ಮಾತ್ರ ಜನಪದ ವೈದ್ಯದ ಚಿಕಿತ್ಸೆಗೆ ಸಮಯವನ್ನು ಮೀಸಲಿಡುತ್ತಾರೆ. ಹಿಂದೂ ಪಂಚಾಂಗದಂತೆ, ಅಮಾವಾಸ್ಯೆ, ಮಂಗಳವಾರ, ಹುಣ್ಣಿಮೆ, ಪಿತೃಗಳ ದಿನ ಮುಂತಾದ ಸಂದರ್ಭಗಳಲ್ಲಿ ಜನಪದ ವೈದ್ಯದ ಚಿಕಿತ್ಸೆಯನ್ನು ನೀಡಲು ನಿಷೇಧವಿರುತ್ತದೆ. ಸ್ತ್ರೀಯರು ಋತುಮತಿಯಾಗಿರುವ ಸಂದರ್ಭದಲ್ಲಿ ಔಷಧ ನೀಡುವ ಕ್ರಮ ಇರುವುದಿಲ್ಲ. ಇಲ್ಲಿ ವೈದ್ಯರ ನಂಬಿಕೆ ಬಲವಾಗಿರುತ್ತದೆ. ಜನಪದ ವೈದ್ಯರು ತವು ನೀಡುವ ಯಾವುದೇ ಔಷಧವನ್ನು ದೇವರ ಹೆಸರಿನಲ್ಲಿ ನೀಡುತ್ತಾರೆ. ಕೆಲವರು ಇಂಥ ಔಷಧಿಗೆ ಯಾವುದೇ ಹಣವನ್ನು ಪಡೆಯುವುದಿಲ್ಲ. ಪ್ರತಿಫಲ ಪಡೆದರೆ ಔಷಧ ನಾಟುವುದಿಲ್ಲ ಎಂದು ತಿಳಿಯುತ್ತಾರೆ. ಆದರೆ, ಚಿಕಿತ್ಸೆ ಮಾಡಿಸಿಕೊಂಡವರು ಗೌರವದಿಂದ ವೈದ್ಯನಿಗೆ ವೀಳ್ಯದೆಲೆ, ತೆಂಗಿನಕಾಯಿ, ದವಸ ಧಾನ್ಯ, ಕೋಳಿ, ಕುರಿ, ಮೇಕೆಗಳನ್ನು ನೀಡುತ್ತಾರೆ. ಪಶುಗಳಿಗೆ ಜನಪದ ವೈದ್ಯ ಮಾಡಿದ್ದಕ್ಕೆ ಹಣ ಪಡೆದರೆ ಪಾಪವೆಂದು ಭಾವಿಸುತ್ತಾರೆ. ಪಶು ಚಿಕಿತ್ಸೆ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕುರಿ, ಮೇಕೆ, ಎಮ್ಮೆ, ದನಗಳ ಚಿಕಿತ್ಸೆಗೆ ಗೊಲ್ಲರು, ಹಂದಿ ರೋಗಗಳಿಗೆ ಹಂದಿ ಜೋಗಿಗಳು ಹಾವು ಚೇಳಿನ ಕಡಿತಕ್ಕೆ ಹಾವಾಡಿಗರು, ಮಂತ್ರ ವೈದ್ಯಕ್ಕೆ ಬುಡು ಬುಡುಕೆಯವರು, ಸುಡುಗಾಡು ಸಿದ್ಧರು ಹೆಸರಾದ ಜನಪದ ವೈದ್ಯರಾಗಿದ್ದಾರೆ. ಸೋಲಿಗರು, ಗೊಂಡರು, ಕಾಡುಗೊಲ್ಲರು, ಕುರುಬರು ಮುಂತಾದ ಆದಿವಾಸಿಗಳಲ್ಲಿ ಜನಪದ ವೈದ್ಯ ವಿಧಾನ ಇಂದಿಗೂ ಪ್ರಚುರದಲ್ಲಿದೆ. ನಾಗರಿಕತೆಯ ಪ್ರಭಾವದಿಂದಾಗಿ ಕ್ರಮೇಣ ಕ್ಷೀಣಿಸುತ್ತಿರುವುದನ್ನು ಕಾಣಬಹುದಾಗಿದೆ.
ಸಾಮಗ್ರಿಗಳು:
ಜನಪದ ವೈದ್ಯರಲ್ಲಿ ತಮ್ಮ ಪರಿಸರದ ಸುತ್ತಮುತ್ತಲಿನ ತರಕಾರಿ, ಸೊಪ್ಪು, ಗಿಡ, ಬಳ್ಳಿ ಸಸ್ಯಗಳೇ ಚಿಕಿತ್ಸಾ ಸಾಮಗ್ರಿಗಳಾಗಿವೆ. ತೋಟ, ಹೊಲ, ಗದ್ದೆಗಳ ಅಂಚಿನಲ್ಲಿನಲ್ಲಿರುವ ಅಣ್ಣೆಸೊಪ್ಪು, ಹೊನಗೊನೆ ಸೊಪ್ಪು, ಹೊನ್ನೆ ಸೊಪ್ಪು, ಮುರಗಲ ನಿತ್ಯ ಪುಷ್ಪ, ಬಸಲೆ, ಶುಂಠಿ, ಅರಿಸಿಣ, ಭೂತದ ಸೊಪ್ಪು, ಒಂದೆಲಗ, ಹಾಡಿಬಳ್ಳಿ, ಕಾಡುಜೀರಿಗೆ, ದಾಸಾಳ, ಇಲಿಕಿವಿ ಸೊಪ್ಪು, ಅಡೆಕೆ ಬೆಟ್ಟಿನ ಸೊಪ್ಪು, ತುಪ್ಪಗೀರೆ ಸೊಪ್ಪು, ಕನ್ನೆ ಕುಡಿ, ಕಿರ್‍ಕಿರೆ ಸೊಪ್ಪು, ಕೃಷ್ಣಕಾಂತಿ ಸೊಪ್ಪು, ದೊಡ್ಡಗೋಣಿ ಸೊಪ್ಪು, ಕಿರುಗೋಣಿ ಸೊಪ್ಪು, ಕರಿಗಣಿಕೆ ಸೊಪ್ಪು, ಕೆಂಪು ಗಣಿಕೆ ಸೊಪ್ಪು, ಮೆಣಸಿನ ಕುಡಿ, ಬಸಳೆ ಸೊಪ್ಪು, ಮರಣ್ಣೆ ಸೊಪ್ಪು, ಕುಂಬಳ ಕುಡಿ, ನುಗ್ಗೆ ಕುಡಿ ಇತ್ಯಾದಿ ಸೊಪ್ಪುಗಳು ಪ್ರಮುಖ ಔಷಧ ಸಾಮಗ್ರಿಗಳಾಗಿವೆ.
ಆಧುನಿಕ ವೈದ್ಯಕೀಯ ಪದ್ಧತಿಗಳು ಜಾರಿಗೆ ಬರುವ ಪೂರ್ವದಲ್ಲಿ ಜನಪದ ವೈದ್ಯವೇ ಹೆಚ್ಚಾಗಿ ರೂಢಿಯಲ್ಲಿತ್ತು ಆದಿಮಾನವ ಈಗಲೂ ಹಳ್ಳಿಗರು ತನ್ನ ಸುತ್ತಮುತ್ತಲಿನ ಗಿಡ, ಮರ, ಬಳ್ಳಿ, ಪಶು, ಪಕ್ಷಿ ಹಾಗೂ ವಸ್ತು ವಿಶೇಷಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪುನಃ ಪುನಃ ಪರಿಶೀಲಿಸಿ ಪರೀಕ್ಷಿಸುತ್ತಲೇ ಬಂದಿರುತ್ತಾರೆ. ಅವನ್ನು ತಮ್ಮ ರೋಗ ರುಜಿನಗಳಿಗೆ ಕಾಲಕಾಲಕ್ಕೆ ಪ್ರಯೋಗಿಸಿ ಅವುಗಳ ಪರಿಣಾಮಗಳನ್ನು ನಿರೀಕ್ಷಿಸಿ ತಮ್ಮ ಆರೋಗ್ಯ ವರ್ಧನೆಗೆ ಮದ್ದಾಗಿ (ಆಹಾರವಾಗಿ) ಪ್ರಯೋಗಿಸಿ ಚಲಾವಣೆಗೆ ತಂದಿದ್ದಾನೆ. ಉದಾಹರಣೆಗೆ: ಒಬ್ಬ ಯಾವನೋ ಕತ್ತಿಯಿಂದ ತನ್ನ ಕೈಕೊಯ್ದುಕೊಂಡಾಗ, ಅಕ್ಕ ಪಕ್ಕದಲ್ಲಿದ್ದ ಹಳುಗಳನ್ನು, ಎಲೆಯನ್ನು ಅರೆದು ಮದ್ದು ರಸ ಮಾಡಿ ಇಲ್ಲವೇ ಕರವೀರಗಿಡದ ರಸವನ್ನು (ಗೊಂಡೆಹಳು)ವನ್ನು ಗಾಯಕ್ಕೆ ಲೇಪಿಸಿಕೊಂಡು ಗಾಯ ವಾಸಿ ಮಾಡಿಕೊಂಡು ಇತರರಿಗೂ ತೋರಿಸುತ್ತಾನೆ. ಅದನ್ನು ಉಳಿದವರು ಗ್ರಾಮೀಣ ಜನ ಅನುಸರಿಸುತ್ತಾರೆ ಅದರ ಫಲವನ್ನು ಅನುಭವಿಸಿ ಮುಂದಿನವರಿಗೆ ಮಾರ್ಗವನ್ನು ಸೂಚಿಸುತ್ತಾರೆ. ಮುಂದಿನ ದಿನಗಳಲ್ಲಿ ಅದೇ ಗಾಯಕ್ಕೆ ಮದ್ದಾಗುತ್ತದೆ ಈ ಬಗೆಯ ನೂರಾರು ಮದ್ದುಗಳನ್ನು ಜನಪದರು ತಮ್ಮ ಅನುಭವಗಳಿಂದ ಪರಿಶೋಧಿಸಿ ರೂಢಿಗತಗೊಳಿಸಿಕೊಳ್ಳುತ್ತಾರೆ. ಈ ರೀತಿಯ ಮದ್ದುಗಳು ಬಡಬಗ್ಗರಿಗೆ ವರದಾನವಾಗುತ್ತವೆ. ಜನಪದ ನಂಬಿಕೆ, ಪ್ರಯೋಗ ಅನುಭವಗಳಿಂದ ರೂಢಿಗತವಾಗಿ ಹಲವಾರು ಔಷಧಗಳು ಮುಮ್ದಿನ ಹಂತಕ್ಕೆ ಆಧುನಿಕ ಔಷಧಕ್ಕೆ ಅಸ್ತಿ ಭಾರವಾಗುತ್ತದೆ ಜಾನಪದ ವೈದ್ಯದಲ್ಲಿ ಪ್ರಕೃತಿದತ್ತವಾಗಿ ದೊರೆಯುವ ವಸ್ತುಗಳ ನೇರ ಬಳಕೆ ಇರುತ್ತದೆ.
ಮರಗಳ ಬೇರು ಚೆಕ್ಕೆಗಳನ್ನು, ತೊಗಟೆಗಳನ್ನು ಔಷಧಕ್ಕಾಗಿ ಕೀಳುವಾಗಿ ಕತ್ತಿ, ಮಚ್ಚು ಮತ್ತಿತರ ಲೋಹದಿಂದ ಅವನ್ನು ಕೀಳದೆ ಕಲ್ಲು, ಮರದ ಸಾಮಗ್ರಿಗಳಿಂದ ಕಿತ್ತು ತರುತ್ತಾರೆ. ಲೋಹದ ಅಂಶಗಳು ಚಿಕಿತ್ಸೆಯಲ್ಲಿ ದುಷ್ಪರಿಣಾಮ ಬೀರುತ್ತವೆ ಎಂದು ತಿಳಿಯಲಾಗುತ್ತದೆ. ಜನಪದ ವೈದ್ಯದಂತೆಯೇ ಅದರ ಸಾಮಗ್ರಿಗಳು ಸರಳವಾದವಾದವು, ಸತ್ವಯುತವಾದವು, ಒರಟಾದವು ಮತ್ತು ಔಷಧಯುಕ್ತವಾದವುಗಳಾಗಿವೆ.
ಆಧುನೀಕರಣ, ನಾಗರೀಕರಣ ಮತ್ತು ಜಾಗತೀಕರಣದ ಹಿನ್ನಲೆಯಲ್ಲಿ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿ ಅಳಿದುಳಿದ ಜನಪದ ವೈದ್ಯವನ್ನು ಹಲವು ಹತ್ತು ವಿಭಾಗವಾಗಿ ವಿಂಗಡಿಸಿಕೊಳ್ಳಬಹುದು. ಮೂಲಿಕೆ ವೈದ್ಯ, ಪಶುವೈದ್ಯ, ಮೂಳೆ ಕಟ್ಟುವ ವೈದ್ಯ, ವಿಷ ವೈದ್ಯ, ರಸ ವೈದ್ಯ, ವ್ರಣ ವೈದ್ಯ, ಏಕರೋಗ ವೈದ್ಯ, ಸೂತಿಕೋಪಚಾರ ವೈದ್ಯ, ಮಂತ್ರವೈದ್ಯ ಹಾಗೂ ಗೃಹ ವೈದ್ಯ ಮೊದಲಾದ ಪರಂಪರೆಗಳಿವೆ. ಯುರೋಪಿನಲ್ಲಿ “ಹರ್ಬಲಿಸಂ” ಎಂಬ ಹೆಸರಿನಡಿ ಗುರುತಿಸುವ ಮೂಲಿಕೆ ತಜ್ಞಕೆ ನಮ್ಮ ಗ್ರಾಮೀಣ ಹಾಗೂ ಬುಡಕಟ್ಟು ಪರಂಪರೆಯಲ್ಲಿ ಜೀವಂತವಾಗಿವೆ. (ಡಾ. ಸತ್ಯನಾರಾಯಣ ಭಟ್.ಪಿ; 2009; 37)
ವೈದ್ಯದ ವಿಧಗಳು:
ಜನಪದ ವೈದ್ಯವನ್ನು ಅದರ ಚಿಕಿತ್ಸಾ ದೃಷ್ಟಿಯಿಂದ ಗಮನಿಸಿದಾಗ ಅನೇಕ ವಿಧಗಳಾಗಿ ವಿಂಗಡಿಸಿಕೊಳ್ಳಬಹುದಾಗಿದೆ.
ಮಾನವ ವೈದ್ಯ:
ಇದು ವಿಸ್ತøತವಾದುದು. ಇದರಲ್ಲೂ ವಿಷವೈದ್ಯ, ಸರಳ ಕಾಯಿಲೆಗಳು, ಗಾಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಮುಂತಾದವು ಕಂಡುಬರುತ್ತವೆ.
ವಿಷವೈದ್ಯ:
ವಿಷಜಂತುಗಳಾದ ಹಾವು, ಚೇಳುಗಳು ಕಡಿದಾಗ ವಿಷ ಏರಿ ವ್ಯಕ್ತಿ ಮರಣ ಹೊಂದುವ ಸಂದರ್ಭವಿರುತ್ತದೆ. ಹಾವು ಚೇಳುಗಳ ವಿಷಕ್ಕೆ ಒಂದೇ ಬಗೆಯ ಔಷಧ ನೀಡಲಾಗುತ್ತದೆ. ಹಾವು ಕಡಿದಾಗ ಸರ್ಪಗಂಧಿ ಸಸ್ಯದ ಬೇರನ್ನು ಕಡಿತದ ಗಾಯಕ್ಕೆ ತಳೆದು ಲೇಪಿಸಲಾಗುತ್ತದೆ. ಬಿಳಿ ಕಣಗಲೆ ಗಿಡದ ರಸವನ್ನು ವಿಷ ಏರಿದವನ ಮೂಗಿನಲ್ಲಿ ಹಾಕಿ ಇನ್ನೊಂದು ಮೂಗಿನಲ್ಲಿ ಮೆಲ್ಲಗೆ ಊದುವರು. ಹಾಡೆ ಬಳ್ಳಿಯನ್ನು ಸುಟ್ಟು ಅದರ ಬೂದಿಯನ್ನು ಗಾಯಕ್ಕೆ ಲೇಪಿಸುವರು.
ಕೈ ಮಸಗು ವಿಷದ ಪರಿಣಾಮ ಎನ್ನುತ್ತಾರೆ. ಕೈಮಸಗು ಬಿದ್ದವರಿಗೆ ಆಹಾರ ಅಪ್ರಿಯವಾಗುತ್ತದೆ. ಸಣ್ಣಗಾಗುತ್ತ ಬಂದು ನಿಧಾನ ವಿಷದಿಂದ ಸಾಯುತ್ತಾರೆ. ಕೈ ಮದ್ದು ಹಾಕಿದ್ದು ನಿಜವಾದರೆ ಅದು ಗಟ್ಟಿಯಾಗುತ್ತದೆ. ಹುಳಿಕಾಳನ್ನು ರೋಗಿಯ ಮೂತ್ರದಲ್ಲಿ ರಾತ್ರಿ ನೆನೆಹಾಕಿದರೆ ಬೆಳಿಗ್ಗೆ ವೇಳೆಗೆ ಮೆತ್ತಗಾಗಿರುತ್ತದೆ. ಇವುಗಳ ಆಧಾರದಲ್ಲಿ ಕೈ ಮದ್ದು ಹಾಕಿದ ಪ್ರಮಾಣ, ಅವಧಿ ತಿಳಿದು ರೋಗಿಗೆ ವಾಂತಿ-ಭೇದಿಯ ಔಷಧ ನೀಡಲಾಗುತ್ತದೆ. ಕೈ ಮದ್ದು ಹೊರ ಹೋಗಿ ರೋಗಿ ಗುಣಮುಖನಾಗುತ್ತಾನೆ.
ಸರಳ ಕಾಯಿಲೆಗಳು:
ಜ್ವರ, ನೆಗಡಿ, ಕೆಮ್ಮು, ಬೇಧಿ, ಹಲ್ಲು ನೋವು, ಮೈ ಕೈ ನೋವು ಮುಂತಾದವು ಸರಳ ಕಾಯಿಲೆಗಳಾಗಿವೆ. ಜ್ವರ ಬಂದರೆ ಮೆಣಸು ಬೆಳ್ಳುಳ್ಳಿ ಖಾರದೊಂದಿಗೆ ರಾಗಿ ರೊಟ್ಟಿ ಅಥವಾ ಮುದ್ದೆ ಸೇವಿಸುವುದು, ಕಿರುನಾಲಗೆ ಬೆಳೆದರೆ, ಮೆಣಸು-ಉಪ್ಪುಗಳನ್ನು ಸೇರಿಸಿ ಲೇಪಿಸುವುದು, ಕುರುವಾಧರೆ ಹರಳೆಣ್ಣೆ ಸವರಿದ ಬಿಸಿ ರಾಗಿಮುದ್ದೆ, ಬಾಳೆಹಣ್ಣು ಸಿಪ್ಪೆ ಕಟ್ಟುವುದು, ಬಾಯಿ ಹುಣ್ಣಿಗೆ ಬಸಳೆ ಸೊಪ್ಪನ್ನು ತಿನ್ನಿಸುವುದು, ಕೆಮ್ಮು ಉಂಟಾದರೆ, ಮೆಣಸು ಲವಂಗಗಳನ್ನು ಸೇವಿಸುವುದು, ಹೊಟ್ಟೆ ನೋವಿಗೆ ವೀಳ್ಯೆದೆಲೆಯಲ್ಲಿ ಒಂದೆರಡು ಹರಳು ಉಪ್ಪು ಸೇರಿಸಿ ಅಗಿದು ತಿನ್ನುವುದು ಇತ್ಯಾದಿ ಚಿಕಿತ್ಸೆಗಳು ಮನೆಯ ಹಿರಿಯರಿಗೆ ತಿಳದೇ ಇರುತ್ತದೆ.
ಸರಳ ಚಿಕಿತ್ಸೆಗಳು ಇರುವಂತೆಯೆ ಕೆಲವು ಸಂಕೀರ್ಣ ಸ್ವರೂಪದ ಕಾಯಿಲೆಗಳೂ ಇವೆ ಸರ್ಪಸುತ್ತು, ಜಾಂಡೀಸ್ ಮುಂತಾದವು ಈ ಬಗೆಯ ಕಾಯಿಲೆಗಳಾಗಿವೆ. ಇವುಗಳಿಗೆ ಅಲೋಫಥಿಕ್ ಮೆಡಿಸಿನ್‍ನಲ್ಲಿ ತುಂಬಾ ದುಬಾರಿಯಾದ ಮೆಡಿಸಿನ್‍ಗಳಿವೆ. ಆದರೆ ಪ್ರಾರಂಭದ ಹಂತದಲ್ಲಿ ಮಾತ್ರ ಇವು ಕೆಲಸ ಮಾಡಬಲ್ಲವು. ಹಳ್ಳಿ ಔಷಧಿಯಲ್ಲಿ ಪಥ್ಯ ಸಮೇತ ಇರುವ ಔಷಧಗಳು ಅಂತಿಮ ಹಂತದಲ್ಲೂ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರುಮಾಡಬಲ್ಲವು. ಕಾಮಾಲೆ ರೋಗಕ್ಕೆ ಎಲೆ ಉರಿಗೆ ಸೊಪ್ಪು, ಅದರ ಬೇರು ಅರಿಸಿನ ಗೋರಂಟಿಯ ಬೇರು ಮತ್ತು ಮಧ್ಯಾಹ್ನ ಮಲ್ಲಿಗೆಯ ಸೊಪ್ಪನ್ನು ದತ್ತೂರಿ ಬೇರಿನೊಂದಿಗೆ ಸೇರಿಸಿ ಕಷಾಯ ಮಾಡಿ ಒಂದು ಗ್ಲಾಸಿನಷ್ಟು ಕುಡಿಸುತ್ತಾರೆ. ಎಣ್ಣೆಯಲ್ಲಿ ಕರಿದ ಪದಾರ್ಥ, ಮಸಾಲೆ ಪದಾರ್ಥ, ಮದ್ಯ ಮಾಂಸಗಳನ್ನು ತ್ಯಜಿಸುವ ಪಥ್ಯವನ್ನು ಹೇಳುತ್ತಾರೆ.
ಸರ್ಪ ಸುತ್ತು ಕಾಯಿಲೆಗೆ ರಾಗಿ ಮತ್ತು ಬಸಳೆ ಬಳ್ಳಿಯನ್ನು ಸರಿಯಾದ ಪ್ರಮಾಣದಲ್ಲಿ ತೆಗೆದು ಲೇಪಿಸುವರು ಪಥ್ಯ ಕಡ್ಡಾಯ.
ಗಾಯ ಚಿಕಿತ್ಸೆ:
ಹುಣ್ಣು, ಸೆಕೆಗುಳ್ಳೆ, ಸುಟ್ಟಗಾಯ, ಹುಳಕಡ್ಡಿ, ಉಗುರುಸುತ್ತು, ಕಜ್ಜಿ ಮುಂತಾದವು ಈ ಬಗೆಯ ಚಿಕಿತ್ಸೆಯಲ್ಲಿ ಬರುತ್ತವೆ. ಇವುಗಳಿಗೆ ಔಷಧಿಗಳ ಲೇಪನ ಮಾಡಲಾಗುತ್ತದೆ. ಕಜ್ಜಿ ತುರಿಗೆ ಶ್ರೀಗಂಧವನ್ನು ತೇಯ್ದು ಲೇಪಿಸುವರು. ಬಹುಪಾಲು ಚರ್ಮರೋಗಗಳಲ್ಲಿ ಬೇವು ಬಿಲ್ವಗಳು ಔಷಧಗಳಾಗಿ ಕೆಲಸ ಮಾಡುತ್ತವೆ. ಪ್ರಾದೇಶಿಕವಾಗಿ ಬಗೆ ಬಗೆಯ ಸರಳ ಔಷಧಗಳು ಚಾಲ್ತಿಯಲ್ಲಿವೆ.
ಶಸ್ತ್ರ ಚಿಕಿತ್ಸೆ:
ಮುಳ್ಳು, ಗಾಜಿನ ಚೂರು, ಕೈಕಾಲುಗಳಿಗೆ ಇನ್ನೇನಾದರೂ ಚುಚ್ಚಿದರೆ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಚಿಮ್ಮಟದಿಮದ ಇಲ್ಲವೇ ಚೂಪಾದ ಪಿನ್ನು, ಮುಳ್ಳಿನಿಂದ ಇವುಗಳನ್ನು ತೆಗೆಯಲಾಗುತ್ತದೆ. ಎಕ್ಕದ ಹಾಲು ಹಾಕಿದರೆ ಕಾಲಿನಲ್ಲಿ ಸೇರಿದ ಮುಳ್ಳು ಹೊರಬರುತ್ತದೆ ಎಂದು ಸಾಮಾನ್ಯವಾಗಿ ತಿಳಿಯಲಾಗುತ್ತದೆ. ಎಕ್ಕದ ಹಾಲು ರಕ್ತಕ್ಕೆ ಸೇರಿದರೆ ಅಪಾಯವೆಂದು ಆಧುನಿಕ ವೈದ್ಯ ಅಭಿಪ್ರಾಯಪಡುತ್ತದೆ. ಕಣ್ಣು, ಕಿವಿ ದೇಹದ ಒಳಭಾಗಗಳ ಸೂಕ್ಷ್ಮ ಶಸ್ತ್ರ ಕ್ರಿಯೆ ಜನಪದ ಚಿಕಿತ್ಸೆಯಲ್ಲಿ ಲಭ್ಯವಿಲ್ಲ.
ಮಾನವ ವೈದ್ಯದಲ್ಲಿ ಮಕ್ಕಳ ವೈದ್ಯ ಮತ್ತು ಸ್ತ್ರೀ ವೈದ್ಯಗಳು ಇವೆ. ಮಕ್ಕಳನ್ನು ಸಾಮಾನ್ಯ ರೋಗಗಳಲ್ಲಿ ಸೇರಿಸಲಾಗದು. ಅವರ ದೇಹ ಸೂಕ್ಷ್ಮ, ಮಕ್ಕಳ ಚಿಕಿತ್ಸೆಗೆ ಅಪಾರ ತಿಳಿವಳಿಕೆ ಇರಬೇಕಾದುದು ಅಗತ್ಯ. ಅವರ ದೇಹಕ್ಕೆ ರೋಗ ನಿರೋಧ ಶಕ್ತಿ ತೀವ್ರವಾಗಿರುವುದಿಲ್ಲ. ಮಕ್ಕಳಿಗೆ ಸಂಬಂಧಿಸಿದ ಚವಿ ಚಂಬಾರ, ಬಾಲಗ್ರಹ, ದಡಾರ, ಸೀತಾಳೆ ಸಿಡುಬು, ನಾಯಿಕೆಮ್ಮು, ಲೋಳಗಿವಿ, ಬಾಯಿ ಬೊಸಳೆ, ಭೇದಿ, ಮುಂದಾಗುವುದು, ಜಂತು ಹುಳು ತೊಂದರೆ, ಕಿವಿನೋವು ಮುಂತಾದವುಗಳಿಗೆ ಚಿಕಿತ್ಸೆ ನೀಡುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ತಜ್ಞ ಜನಪದ ವೈದ್ಯ ಮಾತ್ರ ಮಕ್ಕಳಿಗೆ ಚಿಕಿತ್ಸೆ ಮಾಡಬಲ್ಲ ಸಾಮಾನ್ಯವಾಗಿ ಎಲ್ಲ ಮನೆಯ ಹಿರಿಯರಿಗೂ ಇವುಗಳ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ.
ಹೆಂಗಸರಿಗೆ ಸಂಬಂಧಿಸಿದ ಗರ್ಭಿಣಿ ವೈದ್ಯ, ಬಾಣಂತಿ ವೈದ್ಯ, ಬಂಜೆತನದ ವೈದ್ಯ, ಮುಟ್ಟಿನ ತೊಂದರೆ ಮುಂತಾದವುಗಳಿಗೆ ವಿಶಿಷ್ಟ ಚಿಕಿತ್ಸೆಗಳಿವೆ. ಕಿವಿ, ಮೂಗು ಚುಚ್ಚಿದಾಗ ಆಗುವ ಗಾಯ ಚಿಕಿತ್ಸೆಯೂ ಇಲ್ಲಿ ಸೇರಿವೆ. ಜನಪದ ಸೂಲಗಿತ್ತಿಯರಿಗೆ ಈ ಬಗ್ಗೆ ಅಪಾರ ಅರಿವು ಇರುತ್ತದೆ.
ಪಶುವೈದ್ಯ:
ಮಾನವ ಕೆಲವು ಪ್ರಾಣಿಗಳೊಂದಿಗೆ ನಿಕಟ ಸಂಪರ್ಕವನ್ನು ಇಟ್ಟು ಕೊಂಡಿದ್ದಾನೆ. ಕುರಿ, ಮೇಕೆ, ಎಮ್ಮೆ, ದನ, ಕೋಳಿ ಇವು ಆತನ ಸಾಕು ಪ್ರಾಣಿಗಳಾಗಿವೆ. ಹಂದಿಗಳ ಕಾಯಿಲೆಗೆ ಹಂದಿ ಜೋಗಿಗಳು ವಿಶಿಷ್ಟ ಚಿಕಿತ್ಸೆ ಮಾಡುತ್ತಾರೆ.
ಸಾಕು ಪ್ರಾಣಿಗಳನ್ನು ಜನಪದರು ಮಕ್ಕಳಂತೆ ಸಾಕಿ ಪೋಷಿಸುತ್ತಾರೆ. ಸಾಕು ಪ್ರಾಣಿಗಳಿಗೆ ಅನೇಕ ಬಗೆಯ ಕಾಯಿಲೆ ಬರುತ್ತದೆ. ಪ್ರಾಣಿ ವೈದ್ಯರು ರೈತರಿರುವಲ್ಲಿ ಇದ್ದೇ ಇರುತ್ತಾರೆ. ಹಳ್ಳಿ ಗಾಡಿನಲ್ಲಿ ಆಧುನಿಕ ಪ್ರಾಣಿ ವೈದ್ಯರ ಲಭ್ಯತೆ ಹೇಳಿಕೊಳ್ಳುವಂಥದಲ್ಲ. ದನಗಳು ಹುಷಾರು ತಪ್ಪಿದರೆ ರೈತರೇ ಚಿಕಿತ್ಸೆ ನಡೆಸುತ್ತಾರೆ. ಸಾಕು ಪ್ರಾಣಿಗಳಿಗೆ ಬರುವ ಸಾಮಾನ್ಯ ಕಾಯಿಲೆಗಳಲ್ಲಿ ದನಗಳ ಸೆಲೆರೋಗ; ಹುಲ್ಸಲೆ, ನೀರ್ಸೆಲೆ, ಕಾರ್ಲು, ಕೆಮ್ಮು, ಗೂಬೆರೋಗ, ಬಾಯಿಕಾಲು ಹುಣ್ಣು (ಜ್ವರ), ಕೆಚ್ಚಲು ಬಾವು, ಹೆಗಲುಬಾವು, ಬಾಲ ಗಿಡಕ, ಚಪ್ಪೆ ರೋಗ, ನಾಗೇರು, ಮೇಕೆ ಸೊಕ್ಕಿದರೆ, ಕಾಲು ಕೋಡು ಮುರಿದರೆ, ಬೀಜ ಹೊಡೆಯಲು ಚಿಕಿತ್ಸೆಗಳಿವೆ. ‘ಕೋಳಿರೋಗ’ ಸಾಮಾನ್ಯವಾಗಿ ಕೋಳಿಗಳಿಗೆ ತಗಲುವ ಕಾಯಿಲೆ, ಕೋಳಿಗಳು ಬೆಳ್ಳಗೆ ಉಚ್ಚಿಕೊಳ್ಳುತ್ತವೆ. ಮೇವು ತಿನ್ನುವುದಿಲ್ಲ ಜೂಗಡಿಸುತ್ತ ನಿಂತಿರುತ್ತವೆ. ಈ ಲಕ್ಷಣವನ್ನು ಕೋಳಿ ರೋಗ ಎನ್ನುವರು ಇವುಗಳಿಗೆ ಆಧುನಿಕ ಪಶು ವೈದ್ಯ ನೀಡುವ ಔಷಧಿಗಳಿಗಿಂತ ಪರಿಣಾಮಕಾರಿ ಚಿಕಿತ್ಸೆ ಜನಪದರಲ್ಲಿದೆ.
ಜನಪದ ವೈದ್ಯ ನಮ್ಮ ಹಿಂದಿನವರು ಕಂಡುಕೊಂಡ ಸರಳ ವಿಧಾನವಾಗಿದೆ. ಗಾಯ ಅಥವಾ ರೋಗವನ್ನು ವಾಸಿಮಾಡಿಕೊಳ್ಳುವ ಪ್ರಯೋಗ ಇದಕ್ಕೆ ಕಾರಣ. ಇದು ಒಂದು ಬಗೆಯ ಹುಡುಕಾಟ. ಜನಪದ ವೈದ್ಯಕ್ಕೆ ಸರಳ ಪ್ರಯೋಗಗಳು ಮತ್ತು ನಂಬಿಕೆಗಳೇ ಆಧಾರಗಳಾಗಿವೆ. ಜನಪದ ವೈದ್ಯದಲ್ಲಿ ಬಳಸುವ ಚಿಕಿತ್ಸಾ ಸಾಮಗ್ರಿಗಳು ಕೈಗೆಟಗುವ ವಸ್ತುಗಳಾಗಿವೆ. ಅವು ಪ್ರಾದೇಶಿಕವಾಗಿ ಭಿನ್ನ ಭಿನ್ನವಾಗಿರುತ್ತವೆ. ಬಯಲು ಸೀಮೆಯಲ್ಲಿ ನೆಗ್ಗಿಲು ಸೊಪ್ಪು ಮತ್ತು ಮುಳ್ಳು ಕಾಲು ಉಳುಕಿನ ಔಷಧಿಗಳಾದರೆ, ಮಲೆನಾಡಿನಲ್ಲಿ ದತ್ತೂರಿ ಸೊಪ್ಪು ಔಷಧಿಯಾಗುತ್ತದೆ.
ಸಸ್ಯ ಮೂಲ ಔಷಧಿಗಳಲ್ಲಿ ಗರಿಕೆ ಹುಲ್ಲು, ನೊದೆ ಹುಲ್ಲು, ಕೆಂಪು ಗಡಕೆ, ಕರಿಗಣಿಕೆ, ಕೆಂಪು ಗಣಿಕೆ ಸೊಪ್ಪು, ನುಗ್ಗೆ, ಅಮಟೆ ಸೊಪ್ಪು, ಬಸಳೆ ಸೊಪ್ಪು, ವಿಷ್ಣುಕಾಂತಿ ಸೊಪ್ಪು, ಬೇವಿನ ಎಲೆ ಬೇರು, ಚಕ್ಕೆ, ನಾಗದಾಳಿ, ನೆಲವರಿಕೆ ಸೊಪ್ಪು, ಕೈಸೋರೆ, ಎಕ್ಕದ ಹಾಲು, ವೀಳ್ಯದ ಎಲೆ, ಒಂದೆಲಗ, ಕಕ್ಕೆ ಸೊಪ್ಪು, ಆಲದ ಬಳ್ಳಿ, ಉತ್ತರಾಣಿ, ಬಸರಿ, ಅರಳಿ, ಆಲ, ತುಂಬೆಸೊಪ್ಪು, ತುಳಸಿ, ನಿಂಬೆ, ಈರುಳ್ಳಿ, ಬೆಳ್ಳುಳ್ಳಿ, ಬಾಳೆ, ಮೆಣಸು, ಶುಂಠಿ, ಅರಿಸಿನ, ಬಜೆ, ಜೀರಿಗೆ, ಹಾಗಲ, ಹುಣಸೆ, ಕೊಬ್ಬರಿ ಇತ್ಯಾದಿ ಇತ್ಯಾದಿಗಳು ಔಷಧಿಗಳಾಗಿವೆ.
ಪ್ರಾಣಿ ಮೂಲದ ಔಷಧಿಗಳಲ್ಲಿ ಹಸುವಿನ ಗಂಜಲ, ಸಗಣಿ, ಹಾಲು ಮತ್ತು ಅದರ ಉತ್ಪನ್ನಗಳು ಎಮ್ಮೆ ಹಾಲು, ಅದರ ಉತ್ಪನ್ನಗಳು, ಎಮ್ಮೆ ಸೆಗಣಿ, ಆನೆ ಲದ್ದಿ, ಕತ್ತೆ ಹಾಲು, ಮೇಕೆ ಹಾಲು, ನಾಯಿ ಹಲ್ಲು, ಹುಲಿಯ ಹಲ್ಲು, ಉಗುರು, ಕೋಳಿ ಮಾಂಸ, ಉಡದ ಎಣ್ಣೆ, ಜೇನುತುಪ್ಪ, ಹಂದಿ ಕೊಬ್ಬು, ಮೀನಿನ ಎಣ್ಣೆ ಮುಂತಾದವು ಸೇರಿವೆ.
ನೆಲದ ಮಣ್ಣು, ಹುತ್ತದ ಮಣ್ಣು, ವಿಭೂತಿ, ಖನಿಜಗಳು, ಹೆಂಚಿನ ಚೂರು, ಕಲ್ಲು, ಕೆಮ್ಮಣ್ಣು ಮುಂತಾದವು ಔಷಧೀಯ ಬಳಕೆ ಬರುತ್ತವೆ.
ಸ್ವತಃ ಮಾನವ ಸ್ವಮೂತ್ರ ಪಾನ, ತಾಯಿಯ ಹಾಲು ಮುಂತಾದವುಗಳನ್ನು ಔಷಧವಾಗಿ ರೂಢಿಸಿಕೊಂಡಿದ್ದಾನೆ. ಜನಪದ ವೈದ್ಯದ ಈ ಎಲ್ಲಾ ಸಾಮಗ್ರಿಗಳು ತಮ್ಮ ಪರಿಸರದಲ್ಲಿ ದೊರೆಯುವಂತೆಯೇ ಆರ್ಥಿಕವಾಗಿ ದುಬಾರಿ ಅಲ್ಲದವು ಆಗಿವೆ ಎಂಬುದನ್ನು ಗಮನಿಸಬೇಕು. ಇಂದು ಜಗತ್ತಿನಾದ್ಯಂತ ಅನೇಕ ಭಯಂಕರರೋಗಗಳು ಹುಟ್ಟಿ ಪ್ರಸಾರವಾಗುತ್ತಿವೆ. ಡೆಂಗ್ಯೂ, ಮಲೇರಿಯ, ಸಾರ್ಸ್, ಕೋವಿಡ್-19, ಕೊರೊನಾ, ಪ್ಲೇಗ್, ಕಾಲರ ಪ್ಲೂ ಮೊದಲಾದ ರೋಗಗಳಿಗೂ ಆಧುನಿಕ ವೈದ್ಯಕೀಯ ಸಂಶೋಧನೆಗಳಿಂದ ಪೂರ್ಣ ಪ್ರಮಾಣದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಜಗತ್ತಿನ ಅನೇಕ ವೈದ್ಯಕೀಯ ಸಂಶೋಧಕರು ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೇಂಡ್, ಅಮೇರಿಕಾ ಮುಂತಾದ ದೇಶಗಳಲ್ಲಿ ವಾಸವಾಗಿರುವ ಆದಿವಾಸಿಗಳ ವೈದಕೀಯ ಜ್ಞಾನ ಪರಂಪರೆಯನ್ನು ಅಧ್ಯಯನ ಮಾಡುತ್ತಿರುವುದು ಜನಪದ ವೈದ್ಯದ ಮಹತ್ವವನ್ನು ತಿಳಿಸುತ್ತದೆ ಎಂದರೆ ತಪ್ಪಾಗಲಾರದು.
ಪರಾಮರ್ಶನ ಗ್ರಂಥಗಳು: