Tumbe Group of International Journals

Full Text


ಕೊಳಚೆ ಪ್ರದೇಶದ ಪರಿಕಲ್ಪನೆ: ಲಿಂಗಸಂಬಂಧಿ ಆಯಾಮಗಳು

ಶ್ರೀಮತಿ. ಉಮಾಶ್ರೀ ಕುಲಕರ್ಣಿ

ಪಿ ಹೆಚ್ ಡಿ ಸಂಶೋಧನಾ ವಿದ್ಯಾರ್ಥಿನಿ ಮಹಿಳಾ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ -೫೮೩೨೭೬ ,   ಫೋ ನಂ: ೯೯೭೨೨೧೭೮೨೫

ಮಾರ್ಗದರ್ಶಕರು

ಡಾ. ಚಿದಾನಂದ ಎನ್. ಕುಳಗೇರಿ

ಸಹಾಯಕ ಪ್ರಾಧ್ಯಾಪಕರು ಸಿಕ್ಯಾಬ ಎ.ಆರ್.ಎಸ್ ಇನಾಮದಾರ ಕಲಾ ವಿಜ್ಞಾನ

ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ವಿಜಯಪುರ.


ಪ್ರಸ್ತಾವನೆ:

      ಮಾನವ ಇತಿಹಾಸದ ಸುದೀರ್ಘವಾದ ನಡಿಗೆಯಲ್ಲಿ ದಾಪುಗಾಲಿರಿಸುತ್ತ ಈಗ ನಾಗರಿಕತೆಯ ಅತ್ಯುನ್ನತ ಮಟ್ಟವನ್ನು ತಲುಪಿದ್ದಾನೆ.ಆದಿವಾಸಿ ಸ್ಥಿತಿಯಿಂದ ಗ್ರಾಮಜೀವನದತ್ತ ಮತ್ತು ಗ್ರಾಮದಿಂದ ನಗರಗಳತ್ತ ಸಾಗುವ ನಗರೀಕರಣ ಪ್ರಕ್ರಿಯೆ ಕೂಡ ಅವಿರತವಾಗಿ ನಡೆದೇ ಇದೆ. ನಗರ ಜೀವನದ ಬಗೆಗಿನ ಮೋಹ ಒಂದು ಅಂಟುಜಾಡ್ಯವಿದ್ದಂತೆ. ನಂಬಲು ಅಸಾಧ್ಯವೆಂಬಂತೆ ಪ್ರಪಂಚದ ಮೂಲೆಮೂಲೆಗಳಲ್ಲಿರುವ ಜನರನ್ನು ನಗರಗಳ ಕಡೆ ದಾವಿಸುವಂತೆ ಮಾಡಿದೆ. ಇದರಿಂದ ಹಳೆಯ ನಗರಗಳು ಬೃಹದಾಕಾರವಾಗುತ್ತಿವೆ ಮತ್ತೆ ಹೊಸ ಹೊಸ ನಗರಗಳು ಹುಟ್ಟಿಕೊಳ್ಳುತ್ತಲೇ ಇವೆ. ಇಲ್ಲಿ ಕಾಣಬರುವ ವೃತ್ತಿಗಳು, ಜನರ ಪ್ರವೃತ್ತಿಗಳು, ಸಮಯಪ್ರಜ್ಞೆ, ಸಂಘಟನಾ ಚಟುವಟಿಕೆಗಳು, ಸಾಧನ-ಸಲಕರಣೆಗಳು ನಗರ ಜೀವನವನ್ನು ವೈವಿಧ್ಯಮಯವಾಗಿಸಿವೆ. ನಗರ ಜೀವನ ಎಷ್ಟು ಸುಂದರವೋ ಅದರ ಇನ್ನೊಂದು ಮುಖ ಅಷ್ಟೇ ಕರಾಳವಾದದ್ದು ಮತ್ತು ಅಪಾಯಕಾರಿಯಾದುದು. ಇಲ್ಲಿ ಕಂಡುಬರುವ ಅನೈತಿಕ ವ್ಯವಹಾರಗಳಾದ ಬಾಲಾಪರಾಧ, ವೇಶ್ಯಾವೃತ್ತಿ, ಅತ್ಯಾಚಾರ, ಸಾಮಾನ್ಯ ಜನರ ಜೀವನವನ್ನು ನರಳುವಂತೆ ಮಾಡುವ ನಿರುದ್ಯೋಗ, ಮದ್ಯಪಾನ, ಭಿಕ್ಷಾಟನೆ, ಕೊಳಚೆ ಪ್ರದೇಶಗಳು ಎಲ್ಲವೂ ನಗರಜೀವನದಿಂದ ರೋಸಿ ಹೋಗುವಂತೆ ಮಾಡುತ್ತಿವೆ.

ನಗರ ಪ್ರದೇಶಗಳಲ್ಲಿ ಕಂಡುಬರುವ ದೇಶದ ಅಭಿವೃದ್ಧಿಗೆ ಮಾರಕವಾಗಿರುವಂತಹ ಅತಿ ದೊಡ್ಡ ಸಮಸ್ಯೆಯೆಂದರೆ ಕೊಳಚೆ ಪ್ರದೇಶಗಳು ಹೆಚ್ಚು ಹೆಚ್ಚು ನಿರ್ಮಾಣವಾಗುತ್ತಿರುವುದು. ನಗರದ ದುಸ್ಥಿತಿಯನ್ನು ಹಾಗೂ ಅಲ್ಲಿ ಕಂಡುಬರುವ ದುರಂತಮಯ ಜೀವನವನ್ನು ನಗರದಲ್ಲಿರುವ ಕೊಳಚೆ ಪ್ರದೇಶಗಳನ್ನು ಕಂಡಾಗಲೇ ನಮಗೆ ತಿಳಿಯುತ್ತದೆ.ಕೊಳಚ ಪ್ರದೇಶಗಳನ್ನು ನಗರಗಳ ಜೀವಂತ ಕಸದಬುಟ್ಟಿಗಳು ಎನ್ನಲಾಗಿದೆ.ಹಾಗಿದ್ದರೆ ಕುಟುಂಬದ ಸರ್ವ ಜವಾಬ್ದಾರಿಯನ್ನು ನಿಭಾಯಿಸುವ ಕೊಳಚೆ ಪ್ರದೇಶದ ಮಹಿಳೆಯರ ಜೀವನ ಅತ್ಯಂತ ಕಷ್ಟಕರವಾಗಿರುತ್ತದೆ. ವಾಸಕ್ಕೆ ಯೋಗ್ಯವಲ್ಲದಂತಹ ಚಿಕ್ಕ ಚಿಕ್ಕ ಮನೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಜೀವನ ಸಾಗಿಸುತ್ತಿರುವ ಮಹಿಳೆಯರು ಅನೇಕ ತೊಂದರೆಗಳನ್ನು ಎದುರಿಸುತ್ತಾರೆ.ಇಲ್ಲಿ ವಾಸಿಸುವ ಮಹಿಳೆಯರು ತುಂಬಾ ಕಷ್ಟಸಹಿಷ್ಣುಗಳು.ಬಡತನ, ಆರ್ಥಿಕ ಹಿನ್ನಡೆ, ಪುರುಷಪ್ರಧಾನ ವ್ಯವಸ್ಥೆಯ ದಬ್ಬಾಳಿಕೆಯಿಂದಾಗಿ ಅವರು ತೃಪ್ತಿಕರವಾದ ಜೀವನ ಸಾಗಿಸಲಾಗದೆ ತೊಂದರೆಗಳನ್ನು ಎದುರಿಸುತ್ತಲೇ ಬದುಕು ಸಾಗಿಸುತ್ತಾರೆ. ಲಿಂಗ ಸಂಬಂಧಿ ತಾರತಮ್ಯಗಳಂತೂ ಈ ಕೊಳಚೆ ಪ್ರದೇಶಗಳಲ್ಲಿ ಹಾಸುಹೊಕ್ಕಾಗಿವೆ.

ಕೊಳಚೆ ಪ್ರದೇಶದ ಪರಿಕಲ್ಪನೆ:

     ವಾಸಕ್ಕೆ ಸರಿಯಾದ ನೆಲೆ ಇಲ್ಲದ ಪ್ರದೇಶ, ಹೊಲಸುಗೇರಿ, ಕೊಳಗೇರಿ, ಕೊಂಪೆ, ಕೊಳಚೆ ಪ್ರದೇಶ, ಇಂಗ್ಲಿಷ್ನಲ್ಲಿ ಸ್ಲಂ ಎಂದು ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಸಿಕೊಳ್ಳುವ ಈ ಪ್ರದೇಶಗಳೇ ಕೊಳಚೆ ಪ್ರದೇಶಗಳು. ಬೇರೆಬೇರೆ ನಿಘಂಟುಗಳು ಕೊಳಚೆ ಪದದ ಅರ್ಥವನ್ನು ಈ ಕೆಳಗಿನಂತೆ ನೀಡಿವೆ.

ಕೊಳಗೇರಿಗಳು ನಗರಗಳಲ್ಲಿ ಒಂದು ಪ್ರದೇಶವಾಗಿದ್ದು ವಾಸಿಸುವ ಸ್ಥಳ ಅತಂತ್ರ ಕೆಟ್ಟದಾಗಿದ್ದು ಅವರ ಮನೆಗಳು ಕೆಟ್ಟ ಸ್ಥಿತಿಯಲ್ಲಿ ಇವೆ ಎಂದು ಅರ್ಥೈಸುತ್ತದೆ. ೧೯೫೭ ರಲ್ಲಿ ಮುಂಬಯಿಯಲ್ಲಿ ನಡೆಸಿದ ಕೊಳಚೆ ಪ್ರದೇಶ ನಿರ್ಮೂಲನೆಯ ವಿಚಾರಗೋಷ್ಠಿಯ ಪ್ರಕಾರ "ಶಿಥಿಲಗೊಂಡ ಹಾಗೂ ನಿರ್ಲಕ್ಷಿಸಲ್ಪಟ್ಟ ಕಟ್ಟಡಗಳಿಂದ ಅನಾನುಕೂಲಕರ ವಕ್ರ ರಚನೆಯುಳ್ಳ ಅವ್ಯವಸ್ಥಿತವಾಗಿ ಬೆಳೆದಿರುವ ಮತ್ತು ಕಿಕ್ಕಿರಿದ ಜನಸಂದಣಿಯಿಂದ ಕೂಡಿದ ಪ್ರದೇಶವೇ ಕೊಳಚೆ ಪ್ರದೇಶ"ಎಂದು ಕರೆದಿದೆ.  ವಿಶ್ವಸಂಸ್ಥೆಯ ನಗರ ಭೂಮಿತಿ ವರದಿಯ ಪ್ರಕಾರ "ಕೊಳಚೆ ಪ್ರದೇಶಗಳು ಎಂದರೆ ಕಿಕ್ಕಿರಿದ ಜನಸಂದಣಿ, ಶಿಥಿಲಗೊಂಡ ನೈರ್ಮಲ್ಯ ರಹಿತವಾದ ಒಂದು ಕಟ್ಟಡ ಅಥವಾ ಕಟ್ಟಡಗಳ ಸಮುಚ್ಚಯವಾಗಿದ್ದು,ಈ ಪರಿಸ್ಥಿತಿಗಳಲ್ಲಿ ಯಾವುದಾದರೊಂದು ಸ್ಥಿತಿಯಿಂದ ಇಲ್ಲವೇ ಎಲ್ಲಾ ಸ್ಥಿತಿಗಳಿಂದ ನಿವಾಸಿಗಳ ಅಥವಾ ಸಮುದಾಯದ ಆರೋಗ್ಯ, ರಕ್ಷಣೆ ಮತ್ತು ನೈತಿಕ ಜೀವನಕ್ಕೆ ಸಂಚಕಾರವಾಗಿರುತ್ತದೆ"ಎಂದು ಹೇಳುತ್ತದೆ.

        ಮೇಲ್ಕಾಣಿಸಿದ ಎಲ್ಲಾ ಅಂಶಗಳನ್ನು ಗಮನಿಸಿದರೆ ಕೊಳಚೆ ಪ್ರದೇಶ ಎನ್ನುವ ಪದವನ್ನು ಕೀಳು ಎಂಬ ರೀತಿಯಲ್ಲಿ ನೋಡಲಾಗುತ್ತಿದೆ. ಈ ಕೊಳಚೆ ಪ್ರದೇಶಗಳು ಆಧುನಿಕ ನಗರಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳಾಗಿವೆ.ಕೊಳಚೆ ಪ್ರದೇಶಗಳು ನಗರದ ಮಧ್ಯೆ ಇದ್ದರೂ ಹೊರಗಿನ ಪ್ರಪಂಚದಿಂದ ಪ್ರತ್ಯೇಕ ಗೊಂಡಿವೆ. ಇಲ್ಲಿ ವಾಸಿಸುವ ಜನರು ತಮ್ಮದೇ ಆದ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಇವರು ಕೆಳಮಟ್ಟದ ಜೀವನ ಅಲ್ಲಿಯ ಮಕ್ಕಳು ಮತ್ತು ಮಹಿಳೆಯರ ಜೀವನದ ಮೇಲೆ ತುಂಬಾ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಇದರಿಂದಾಗಿ ನಾಗರಿಕ ಪ್ರಜ್ಞೆ ಕೊರತೆಯಿಂದಾಗಿ ಹಕ್ಕು ಬಾಧ್ಯತೆಗಳ ಅರಿವಿಲ್ಲದೆ ಕೀಳಿರಿಮೆ ಹೊಂದಿರುತ್ತಾರೆ. ಶಿಕ್ಷಣದ ಕೊರತೆಯಿಂದಾಗಿ ಅಸಭ್ಯವಾದ ವರ್ತನೆಗಳನ್ನು ರೂಢಿಸಿಕೊಳ್ಳಲು ಕಾರಣವಾಗುತ್ತವೆ. ಇಂತಹ ಪರಿಸರದಲ್ಲಿ ವಾಸಿಸುವ ಮಹಿಳೆಯರು ಮತ್ತು ಮಕ್ಕಳ ಶೋಚನೀಯ ಬದುಕನ್ನು ಸಾಗಿಸುತ್ತಿದ್ದಾರೆ.ಕೊಳಚೆ ಪ್ರದೇಶದ ಜನರನ್ನು ಇತರರು ಅತ್ಯಂತ ಕೊಂಕು ದೃಷ್ಟಿಯಿಂದ, ಸಂಕುಚಿತ ಮತ್ತು ಸಂಶಯಾತ್ಮಕ ದೃಷ್ಟಿಯಿಂದ ಕಾಣುತ್ತಾರೆ. ಈ ಪ್ರದೇಶಗಳಲ್ಲಿ ಲಿಂಗ ತಾರತಮ್ಯವನ್ನು ಹೆಚ್ಚಾಗಿ ಕಾಣುತ್ತೇವೆ. ಆದ್ದರಿಂದ ಕೊಳಚೆ ಪ್ರದೇಶಗಳನ್ನು ಕೇವಲ ಭೌತಿಕವಾಗಿ ನೋಡದೆ ಅದರಲ್ಲಿರುವ ಜೀವಿಗಳ ಜೀವನವನ್ನು ಪರಿಗಣಿಸಿ ಲಿಂಗಸೂಕ್ಷ್ಮತೆ ನೆಲೆಯಲ್ಲಿ ಕಾಣುವುದು ಅವಶ್ಯಕವಾಗಿದೆ.

ಕೊಳಚೆ ಪ್ರದೇಶಗಳನ್ನು ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲೂ ಕಾಣಬಹುದು. ಆದರೆ ಎಲ್ಲಾ ದೇಶಗಳಲ್ಲೂ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರದೇ ಕೆಲವು ಭಿನ್ನತೆಗಳಿಂದ ಕೂಡಿವೆ. ಕೆಲವು ಸಾಮಾನ್ಯ ಲಕ್ಷಣಗಳನ್ನು ನಾವು ನೋಡುವುದಾದರೆ ಕಿಕ್ಕಿರಿದ ಜನಸಂದಣಿಯಿಂದ ಕೂಡಿದ ಪ್ರದೇಶಗಳಾಗಿದ್ದು, ಅನಾರೋಗ್ಯ ಮತ್ತು ಅನೈರ್ಮಲ್ಯದ ಕೋಪಗಳಾಗಿರುತ್ತವೆ. ಇಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಇಲ್ಲದಿರುವುದು, ಸ್ವಚ್ಛವಾದ ಗಾಳಿ, ಬೆಳಕು ಇಲ್ಲದಿರುವುದು ಮತ್ತು ಉತ್ತಮವಾದ ರಸ್ತೆಗಳ ಅಭಾವ ಎದ್ದುಕಾಣುತ್ತವೆ. ಕಸ, ಕೊಳಕು ಧೂಳು, ಬಚ್ಚಲು ಗುಂಡಿಗಳಿಂದ ಹೊರಗೆ ರಸ್ತೆ ಮಧ್ಯದಲ್ಲಿ ಹರಿಯುವ ಹೊಲಸು ನೀರು, ಇವೆಲ್ಲವುಗಳಿಂದಾಗಿ ಕೊಳಚೆ ಪ್ರದೇಶಗಳು ರೋಗಗಳ ತಾಣಗಳಾಗಿವೆ. ಹೊರನೋಟಕ್ಕೆ ಕೊಳಚೆ ಪ್ರದೇಶಗಳು ತುಂಬಾ ಅಸಹ್ಯವಾಗಿ ಕಾಣುವಂತಿರುತ್ತವೆ. ಡಾ ಬಲ್ಯಾರ್ ಅವರು  ನಗರಗಳ ವಸತಿ ಸಮಸ್ಯೆಯನ್ನು ಈ ರೀತಿ ವಿವರಿಸಿದ್ದಾರೆ"ನಮ್ಮ ನಗರಗಳಲ್ಲಿ ವಸತಿ ಸಮಸ್ಯೆ ತೀವ್ರವಾಗಿದ್ದು, ಶೇ ೬೦ ರಿಂದ ೭೦ ರಷ್ಟು ನಗರವಾಸಿಗಳು ಒಂದು ಕಿರಿದಾದ ಕೊಠಡಿಯುಳ್ಳ ವಸತಿಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ಮನೆಗಳಲ್ಲೂ ಐದಕ್ಕಿಂತ ಹೆಚ್ಚು ಜನರು ವಾಸಿಸುತ್ತಾರೆ. ಬೃಹತ್ ನಗರಗಳಾದ ಕಲ್ಕತ್ತಾ, ಮುಂಬೈ, ದೆಹಲಿ, ಚೆನ್ನೈಗಳಲ್ಲಿ ಮನೆಗಳು ಗುಡಿಸಲುಗಳು ಅಡುಗೆ ಮಾಡುವ,ಊಟ ಮಾಡುವ, ಮಲಗುವ, ವಿವಿಧೋದ್ದೇಶ ಸ್ಥಳಗಳಾಗಿವೆ. ನಮ್ಮ ನಗರಗಳ ಕೊಳಚೆ ಪ್ರದೇಶಗಳ ಮತ್ತು ಬಡವರ ನಿವಾಸಿಗಳಿಗಿಂತ ಡೆನ್ಮಾರ್ಕ್ ದೇಶದ ಹಂದಿಗಳ ಕೊಟ್ಟಿಗೆ ಹೆಚ್ಚು ಶುಚಿಯಾಗಿದೆ" ಎಂದು ವಿವರಿಸಿದ್ದಾರೆ. ಇಲ್ಲಿ ವಾಸಿಸುವ ಜನರಲ್ಲಿ ಅಶಿಕ್ಷಿತರೇ ಹೆಚ್ಚಾಗಿ ಕಂಡುಬರುತ್ತಾರೆ. ನೈತಿಕ ಮೌಲ್ಯಗಳ ಕುಸಿತವನ್ನು ಇಲ್ಲಿ ಕಾಣಬಹುದು. ಜನರಲ್ಲಿ ಸೌಜನ್ಯ, ಶಿಷ್ಟಾಚಾರ ಕಂಡುಬರುವುದು ಕಡಿಮೆ. ಕಳ್ಳತನ, ಸುಳ್ಳುತನ, ಮೋಸ ಮಾಡುವುದು, ಅನೈತಿಕ ಲೈಂಗಿಕತೆ, ಕಳ್ಳಸಾಗಾಣಿಕೆಯಂತಹ ಚಟುವಟಿಕೆಗಳು ಇಲ್ಲಿ ಕಂಡುಬರುತ್ತವೆ.

ಕೊಳಚೆ ಪ್ರದೇಶದ ಮಹಿಳೆ ಮತ್ತು ಲಿಂಗ ಸಂಬಂಧಿ ಆಯಾಮಗಳು:

ಸಾಮಾನ್ಯವಾಗಿ ಹೇಳುವುದಾದರೆ ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳೆಲ್ಲವೂ ಲಿಂಗ ನಿರಪೇಕ್ಷ ಸಿದ್ಧಾಂತಗಳೆಂದು ಕರೆಯಲ್ಪಟ್ಟಿವೆ. ಕಾರಣ ಅವು ಮಹಿಳೆಯರು ನಿರ್ವಹಿಸುತ್ತಿರುವ ಅನೇಕ ಚಟುವಟಿಕೆಗಳನ್ನು ಅರ್ಥಶಾಸ್ತ್ರದ ಅಭಿವೃದ್ಧಿಯ ಪರಿಧಿಯಿಂದ ಹೊರಗಿಟ್ಟಿದೆ. ಮಹಿಳೆಯರ ಸ್ಥಿತಿಗತಿಗಳನ್ನು ಅಲ್ಲಿ ವಿಶ್ಲೇಷಿಸಲು ಅವಕಾಶವೇ ಇಲ್ಲ. ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳಾ ಅಭಿವೃದ್ಧಿ ಬಹುದೊಡ್ಡ ಶಕ್ತಿಯಾಗಿದೆ. ಆದರೆ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಮಹಿಳೆಯರ ದುಡಿಮೆ ವಿಷಯವು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಮಹಿಳೆಯರನ್ನು ಕೇವಲ ಸಂಖ್ಯೆಗಳ ಮೂಲಕ ನೋಡಿ ಪರಿಗಣಿಸಬಾರದು ಏಕೆಂದರೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಅವಳ ಕೊಡುಗೆ ಅನನ್ಯ ಹಾಗೂ ಅಗಣಿತ. ಹೆಣ್ಣಿನ ದುಡಿಮೆ ದಾಖಲಾಗಿ ಅವಳ ದುಡಿಮೆಗೆ ಪುರುಷರಷ್ಟೇ ಸಮಾನ ಮಾನ್ಯತೆ ಸಿಗಬೇಕು. ಸಮಾಜದಲ್ಲಿ ವ್ಯಕ್ತಿಯ ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳು ಅವರ ಆರ್ಥಿಕ ಬಲವನ್ನು ಅವಲಂಬಿಸಿರುತ್ತದೆ. ಆದರೆ ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಮಹಿಳೆಯ ದುಡಿಮೆಯನ್ನು ಅಭಿವೃದ್ಧಿ ಸಿದ್ಧಾಂತದಲ್ಲಿ ವಿಲೀನಗೊಳಿಸುವ ಪ್ರಯತ್ನವನ್ನು ನಡೆಸುತ್ತಿದೆ. ಪ್ರಸ್ತುತ ಈ ಭಾಗದಲ್ಲಿ ಅಭಿವೃದ್ಧಿಯ ಲಿಂಗ ಸಂಬಂಧಿ ನೆಲೆಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

ಕುಟುಂಬದಲ್ಲಿ ಲಿಂಗ ವ್ಯವಸ್ಥೆ:

         ಕುಟುಂಬವೆಂಬುದು ತನ್ನ ಎಲ್ಲಾ ಸದಸ್ಯರುಗಳ ಹಿತಾಸಕ್ತಿಯನ್ನು ಕಾಪಾಡುವ ಒಂದು ಸಂಸ್ಥೆಯಾಗಿದೆ ಎಂದು ನಾವು ವರ್ಣಿಸುತ್ತವೆ. ಇದು ಸತ್ಯವೇ ಆಗಿದೆ. ಆದರೆ ಕುಟುಂಬದ ಒಳಗೆ ನಡೆಯುವ ಲಿಂಗ ಸಂಬಂಧಿ ಆಯಾಮಗಳಲ್ಲಿ ಇರುವ ಲಿಂಗಸಮಾನತೆ ಎಂಬ ಅಂಶವನ್ನು ಪರಿಗಣಿಸಿ ನೋಡಿದಾಗ ಅದರ ಆಳವು ನಾವು ತಿಳಿದುಕೊಂಡಷ್ಟು ಆದರ್ಶ ರೂಪದಲ್ಲಿ ಇಲ್ಲ. ಲಿಂಗ ಅಸಮಾನತೆ ಎಂಬುದು ಸಾಮಾನ್ಯರಲ್ಲಷ್ಟ ಅಲ್ಲದೆ ಕೊಳಚೆ ಪ್ರದೇಶದ ಕುಟುಂಬಗಳಲ್ಲಿಯೂ ಹೆಚ್ಚು ಎದ್ದುಕಾಣುತ್ತದೆ. ಇಲ್ಲೇ ಮಹಿಳೆಯರಿಗೆ ಸಿಗುವ ಸಹಕಾರ, ಸ್ಥಾನಮಾನ, ಅಧಿಕಾರದ ವಿಷಯದಲ್ಲಿ ಕುಟುಂಬ ಎಷ್ಟು ಸಮಾನತೆಯನ್ನು ಒದಗಿಸಿಕೊಟ್ಟಿದೆ? ಕುಟುಂಬದ ಒಳಗೆ ಮಹಿಳೆಯರಿಗೆ ಪುರುಷರಿಗೆ ಇರುವಷ್ಟು ಅಧಿಕಾರಗಳು ಇಂದಿಗೂ ಲಭ್ಯವಾಗಿಲ್ಲ. ಕುಟುಂಬದಲ್ಲಿ ಆಹಾರ ಹಂಚಿಕೆ, ಹಣಕಾಸು ವ್ಯವಹಾರ, ಆಸ್ತಿ ವಿಷಯದಲ್ಲಾಗಲಿ ಮಹಿಳೆಯರಿಗೆ ಪುರುಷರಷ್ಟೇ ಸಹಭಾಗಿತ್ವದ ಅವಕಾಶವಿರುವುದಿಲ್ಲ. ಅನೇಕ ಅಧ್ಯಯನಗಳು ತೋರಿಸಿಕೊಟ್ಟಿರುವಂತೆ ಮಹಿಳೆಯರು ಮನೆಯ ಹೊರಗೆ ಎದುರಿಸುತ್ತಿರುವ ಲಿಂಗಸಂಬಂಧಿ ದೌರ್ಜನ್ಯಗಳನ್ನು ಕುಟುಂಬದ ಒಳಗೆ ಎದುರಿಸುತ್ತಿದ್ದಾರೆ. ಮಹಿಳೆಯರಿಂದ ಸಹಕಾರವನ್ನು ಮಾತ್ರ ಅಪೇಕ್ಷಿಸಲಾಗುತ್ತದೆ. ಅವರಿಗೆ ಹಕ್ಕು ಬದ್ಧವಾಗಿ ಲಭಿಸಬೇಕಾದ ಅವಕಾಶಗಳು ಮತ್ತು ಸವಲತ್ತುಗಳು ಸಂಪೂರ್ಣವಾಗಿ ಸಿಗುತ್ತಿಲ್ಲ. ಕುಟುಂಬವನ್ನು ಆವರಿಸಿರುವುದು ಮೌನದ ಒಂದು ಸಂಸ್ಕೃತಿ. ಎದುರಿಸುವುದಕ್ಕಿಂತ ಅನುಭವಿಸುವುದೇ ಮೇಲು ಎಂಬ ಧೋರಣೆಯೇ ನಮ್ಮ ಹೆಣ್ಣುಮಕ್ಕಳು ಕೌಟುಂಬಿಕ ಹಿಂಸೆಗೆ ಬಲಿಯಾಗಲು ಪ್ರಮುಖ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಂದು ಕಡೆ ಕೊಳಚೆ ಪ್ರದೇಶಗಳ ಸಮಾಜದಲ್ಲಿ ಉಂಟಾಗುತ್ತಿರುವ ಬದಲಾವಣೆಗಳ ಪ್ರಭಾವದಿಂದ ಕುಟುಂಬದ ನಿಯಂತ್ರಣ ಕಡಿಮೆಯಾಗುತ್ತಿದೆ. ಈ ಪರಿಸ್ಥಿತಿ ವಿಶೇಷವಾಗಿ ಅನ್ವಯಿಸುವುದು ಮಹಿಳೆಯರಿಗೆ. ಕೌಟುಂಬಿಕ ಹಿಂಸೆ ಹೆಣ್ಣು ಹುಟ್ಟುವ ಮೊದಲೇ ಪ್ರಾರಂಭವಾಗಿ ಆಕೆಯ ಜೀವನದುದ್ದಕ್ಕೂ ಮುಂದುವರೆಯುತ್ತದೆ. ಹೆಣ್ಣು ಎಂದಾಕ್ಷಣ ಆಕೆಯನ್ನು ಬೆಳೆಸುವ ರೀತಿಯಲ್ಲಿ ಒಂದು ಬಗೆಯ ತಾರತಮ್ಯ ಪ್ರಾರಂಭವಾಗಿ ಬಿಡುವುದನ್ನು ನಾವು ಇಂದಿಗೂ ಕಾಣುತ್ತೇವೆ. ಮಹಿಳೆಗೆ ಮನೆಕೆಲಸ ಮಗನಿಗೆ ಆಚೆ ಕೆಲಸ ಇದೇ ಸಾಕಲ್ಲ ಹೆಣ್ಣು ಮತ್ತು ಗಂಡು ಮಕ್ಕಳ ಬದುಕಲ್ಲಿ ತಾರತಮ್ಯದ ಬೀಜ ಬಿತ್ತೋದಕ್ಕೆ. ಹೆಣ್ಣು ಮಕ್ಕಳನ್ನು ಮನೆಯೊಳಗಿನ ಕೆಲಸಕ್ಕೆ ಮೀಸಲಾಗಿರಿಸಿ ಬಿಡುತ್ತಾರೆ. ಮಹಿಳೆಯರನ್ನು ಕುಟುಂಬ ಗಂಡ-ಮಕ್ಕಳಿಗೆ ಸಂವಾದಿಯಾಗಿ ಪರಿಭಾವಿಸಿಕೊಳ್ಳಲಾಗಿದೆ. ಮಹಿಳೆ ಎಂದರೆ ಹೆದರಿ ನಡೆಯುವ, ಸಹನಾಮೂರ್ತಿ, ಮನೆಯ ಗೃಹಲಕ್ಷ್ಮಿ, ಮನೆಯ ಘನತೆ ಕಾಪಾಡುವಳು, ಹಿರಿಯರು ಮಾತ್ತು ಪತಿ ಹೇಳಿದಂತೆ ಚಾಚೂತಪ್ಪದೆ ತಲೆಬಾಗಿ ಒಪ್ಪಿಕೊಂಡು ನಡೆಯುವ ಎಂದೂ, ಪುರುಷ ಮನೆಗೆ ಆಧಾರಸ್ತಂಭ ಧೈರ್ಯ, ಕೋಪಲ ಮನೆತನ ನಿರ್ವಹಣೆ ಇವೆಲ್ಲ ಗಂಡು ಸ್ವತ್ತಾಗಿದ್ದು ಈ ಗುಣಗಳನ್ನು ಮಕ್ಕಳು ಬೆಳೆಯುತ್ತಿರುವಾಗಲೇ ಬೆಳೆಸಿಬಿಡುತ್ತಾರೆ. ಹೀಗೆ ಕುಟುಂಬದಲ್ಲಿ ಮಕ್ಕಳನ್ನು ಬೆಳೆಸುವಾಗ ಈ ಗುಣಗಳನ್ನು ಲಿಂಗಸಂಬಂಧಿ ನೆಲೆಗಳಲ್ಲಿ ಬಳಸುವುದರಿಂದಾಗಿ ಮಹಿಳೆಯರು ಕುಟುಂಬದಲ್ಲಿ ಅನೇಕ ಅನ್ಯಾಯಗಳಿಗೆ ಒಳಗಾಗಬೇಕಾಗಿದೆ.

ದುಡಿಮೆಯಲ್ಲಿ ಲಿಂಗ ವ್ಯವಸ್ಥೆ:

        ಲಿಂಗ ಸಮಾನತೆಯನ್ನು ಆದರಿಸಿದ ಸಮಾಜ ರೂಪುಗೊಳ್ಳಬೇಕಾದರೆ ಸ್ತ್ರೀ-ಪುರುಷರಿಬ್ಬರೂ ಎಲ್ಲ ಕೆಲಸಗಳನ್ನು ಸಮಾನವಾಗಿ ಹಂಚಿಕೊಂಡು ಮಾಡಬೇಕು. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಇಬ್ಬರೂ ಸಮಾನವಾಗಿರಬೇಕು. ಆದರೆ ದುಡಿಮೆ ಎಂದಾಕ್ಷಣ ಕಣ್ಣ ಮುಂದೆ ಬರುವುದು ಮತ್ತು ನೆನಪಾಗುವುದು ಮನೆಯಿಂದ ಹೊರಗೆ ಮಾಡುವ ಕೆಲಸಗಳಾಗಿವೆ. ಮನೆಯಿಂದ ಹೊರಗೆ ಮಾಡುವ ಕಾರ್ಯಗಳನ್ನು ಸಂಪಾದನಾ ದುಡಿಮೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಪುರುಷ ನಿರ್ವಹಿಸುವ ಕೆಲಸಗಳೆಲ್ಲವೂ ಉತ್ಪಾದನೆ ಕೆಲಸಗಳಾಗಿವೆ. ಅವರು ಮಾಡುವ ಕಾರ್ಯಗಳಿಗೆ ಮಾರುಕಟ್ಟೆ ಮೌಲ್ಯಗಳಿವೆ. ಆದರೆ ಮಹಿಳೆಯರು ಮಾಡುವ ಕಾರ್ಯಗಳೆಲ್ಲವೂ ಸಾಮಾನ್ಯವಾಗಿ ಜೈವಿಕವೆಂದು, ಅವುಗಳಿಗೆ ಮಾರುಕಟ್ಟೆಯ ಮೌಲ್ಯವಿಲ್ಲವೆಂದು, ಕ್ರಯ ರಹಿತ ದುಡಿಮೆ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರನ್ನು ಕೇವಲ ಗೃಹಿಣಿಯರು ಎಂದು ಪರಿಭಾವಿಸಿಕೊಳ್ಳಲಾಗಿದೆಯೇ ವಿನಃ ದುಡಿಮೆಗಾರರನ್ನಾಗಿ ಅಲ್ಲ. ಮಹಿಳೆಯರು ಮುಂಜಾನೆಯಿಂದ ರಾತ್ರಿ ಮಲಗುವವರೆಗೂ ಅವರು ಇಡೀ ದಿನ ಮಾಡುವ ಕೆಲಸಗಳೆಲ್ಲವೂ ಅರ್ಥಶಾಸ್ತ್ರದಲ್ಲಿ ದುಡಿಮೆ ಎನಿಸಿಕೊಳ್ಳಲಾರವು.ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಅತ್ಯಂತ ಶ್ರಮಜೀವಿಗಳು ಸಾಮಾನ್ಯವಾಗಿ ಕೊಳಚೆ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳು ಬಡತನ ಪರಿಸ್ಥಿತಿಯನ್ನು ಎದುರಿಸುತ್ತವೆ. ಇಂತಹ ಕುಟುಂಬಗಳಲ್ಲಿ ಮಹಿಳೆಯರು ಕುಟುಂಬ ನಿರ್ವಹಣೆ ಮಾಡುವಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕುಟುಂಬ ನಿರ್ವಹಣೆಗಾಗಿ ಎಷ್ಟೋ ಜನ ಮಹಿಳೆಯರು ಮನೆಯಿಂದ ಹೊರಗೆ ದುಡಿಯಲು ತೆರಳುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ೧೨ ರಿಂದ ೧೫ ತಾಸು ದುಡಿಮೆ ಮಾಡುತ್ತಾರೆ. ಮಹಿಳೆಯರು ಇಂದು ಎರಡು ಬಗೆಯ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ. ಮೊದಲನೆಯದು ಕೌಟುಂಬಿಕ ಹೊಣೆಗಾರಿಕೆ ಯಾದರೆ ಎರಡನೆಯದು ಮನೆಯ ಹೊರಗಿನ ಹೊಣೆಗಾರಿಕೆ .ಇಲ್ಲಿ ಮಹಿಳೆ ಎರಡು ಬಗೆಯ ಹೊಣೆಗಾರಿಕೆಯನ್ನು ನಿರ್ವಹಿಸಿದರೆ ಪುರುಷರಿಗೆ ಮಾತ್ರ ಇದರಿಂದ ವಿನಾಯಿತಿ. ಅವರು ಮನೆಯಿಂದ ಹೊರಗಿನ ಹೊಣೆಗಾರಿಕೆಯನ್ನು ಮಾತ್ರ ನಿಭಾಯಿಸುತ್ತಾರೆ. ಇದನ್ನು ಜೈವಿಕ ನೀತಿಯ ದೃಷ್ಟಿಕೋನವೆಂದು ಹೇಳಬಹುದು. ಹೀಗೆ ದುಡಿಮೆಯಲ್ಲೂ ಅನೇಕ ಕುಟುಂಬಗಳಲ್ಲಿ ಲಿಂಗ ಅಸಮಾನತೆ ಮತ್ತು ತಾರತಮ್ಯ ಕಾಣಬಹುದಾಗಿದೆ .ಇಂದಿಗೂ ಸಹ ನಮ್ಮ ಸಮಾಜದಲ್ಲಿ ಲಿಂಗ ಸಂಬಂಧಿ ಶ್ರಮ ನಮ್ಮ ಸಮಾಜದಲ್ಲಿ ನೆಲೆಯೂರಿದೆ. ಅದು ಗಟ್ಟಿಯಾಗುತ್ತಲೇ ನಡೆದಿದೆ.

ನಮ್ಮ ಸಮಾಜದಲ್ಲಿ ಕೆಲವು ಬೆರಳೆಣಿಕೆಯಷ್ಟು ಉನ್ನತ ಶ್ರೀಮಂತ ವಿದ್ಯಾವಂತ ಕುಟುಂಬಗಳಲ್ಲಿ ಈ ಅಸಮಾನತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಕೊಳಚೆ ಪ್ರದೇಶದ ಕುಟುಂಬಗಳಲ್ಲಿ ಲಿಂಗ ಅಸಮಾನತೆ ಇನ್ನೂ ಜೀವಂತವಾಗಿ ನೆಲೆಯೂರಿದೆ. ಮನೆಯಲ್ಲಿ ಪುರುಷ ಒಪ್ಪಿದ ಕೆಲಸವನ್ನೇ ಮಹಿಳೆ ಮಾಡಬೇಕು. ಅವರು ಒಪ್ಪದಿದ್ದರೆ ಅವಳಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಂಡು ಕೆಲಸಕ್ಕೆ ಹೋಗುವ ಅಧಿಕಾರವಿಲ್ಲ. ಈ ಪ್ರದೇಶಗಳಲ್ಲಿ ಪುರುಷ ಪ್ರಧಾನತೆಯೇ ಎದ್ದು ಕಾಣುತ್ತದೆ. ಪುರುಷ ಶಾಹಿಯ ಮಾರ್ಗದರ್ಶನದಂತೆ ಎಲ್ಲ ಕಾರ್ಯಗಳು ನಡೆಯುತ್ತಿರುವ ಸಾಮಾಜಿಕರಣದಿಂದಾಗಿ ಅದರ ನೆಲೆಯಲ್ಲಿಯೇ ಅದನ್ನು ಪರಿಭಾವಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪುರುಷಪ್ರಧಾನ ಸಮಾಜದ ತೀಕ್ಷ್ಣತೆ ಅಷ್ಟೊಂದು ತೀವ್ರವಾಗಿದೆ. ಹೊರಗಿನ ಉದ್ಯೋಗಗಳಿಗೆ ಆರಂಭವು ಇದೆ. ಅಂತ್ಯವು ಇದೆ .ಅವುಗಳಿಗೆ ಆರ್ಥಿಕ-ಸಾಮಾಜಿಕ ಮಾನ್ಯತೆಯೂ ಇದೆ. ಆದರೆ ಮನೆಯ ಒಳಗೆ ಹೆಂಗಸರು ದುಡಿಯುವ ದುಡಿಮೆಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಸ್ತ್ರೀ-ಪುರುಷರ ಅಸಮಾನತೆಯ ಮೂಲಗಳಲ್ಲಿ ಮನೆಯ ಒಳಗೆ ಕಂಡುಬರುವ ಭಿನ್ನ ಜವಾಬ್ದಾರಿ ಹಂಚಿಕೆಯು ಒಂದಾಗಿದೆ.

ಮನೆಯ ಹೊರಗೆ ದುಡಿಯುವ ಮಹಿಳೆಯರಲ್ಲಿ ೮೩% ರಷ್ಟು ಮಂದಿ ಮಹಿಳೆಯರು ಅನಿಶ್ಚಿತ ಸ್ಥಿತಿಯಲ್ಲಿ ಇದ್ದಾರೆ. ಸುರಕ್ಷಿತವೆನಿಸುವ ಒಳ್ಳೆ ಸಂಬಳವನ್ನು ತರುವ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಪ್ರಮಾಣ ೧೭%ರಷ್ಟು ಮಾತ್ರ. ಹೆಚ್ಚು ದುಡಿಮೆ ಕಡಿಮೆ ಸಂಬಳ ಇದು ಮಹಿಳೆಯರು ಮಾಡುವ ಬಹುತೇಕ ಉದ್ಯೋಗಗಳ ಲಕ್ಷಣವಾಗಿದೆ.

ಹಿತಾಸಕ್ತಿಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಲಿಂಗ ವ್ಯವಸ್ಥೆ:

        ಈಗಾಗಲೇ ಮಹಿಳೆಯೆಂದರೆ ಸಹನೆ, ಸಹಕಾರ, ತ್ಯಾಗ ಮುಂತಾದ ಗುಣವುಳ್ಳವಳು. ಇವಳನ್ನು ತಾಯಿಗೆ, ಮಕ್ಕಳಿಗೆ, ಹೆಂಡತಿಗೆ, ಕುಟುಂಬಕ್ಕೆ ಸಂವಾದಿಯಾಗಿ ಪರಿಭಾವಿಸಿಕೊಂಡು ಬರಲಾಗಿದೆ. ಮಹಿಳೆಯರಿಗೆ ತಮ್ಮದೇ ಆದಂತಹ ಹಿತಾಸಕ್ತಿಗಳು ಇರುವುದಿಲ್ಲ. ಅವಳಿಗೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲವೆಂದು ಪರಿಭಾವಿಸಿಕೊಂಡು ಬರಲಾಗಿದೆ. ವಿವಾಹದ ನಂತರ ಅವಳ ಹಿತಾಸಕ್ತಿಗಳೇನಿದ್ದರೂ ಕುಟುಂಬ,ಗಂಡ, ಮಕ್ಕಳು ಆಗಿರುತ್ತವೆಯೇ ವಿನಃ ಅವಳದೆನ್ನುವ ವಿಚಾರಗಳೇನೂ ಇರುವುದಿಲ್ಲ ಎನ್ನಲಾಗುತ್ತದೆ. ಅವಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಸಕ್ತಿಗಳನ್ನು ಕಸಿದುಕೊಂಡು ಪುರುಷಶಾಹಿಯು ಅವಳಿಗೆ ತ್ಯಾಗಮಯಿ ಗುಣವನ್ನು ಹೇರಿದೆ. ಕೊಳಚೆ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಕೂಡ ಸಾಮಾನ್ಯ ಜನರಂತೆ ಅನೇಕ ಆಸಕ್ತಿಗಳನ್ನು ಹೊಂದಿದವರೇ, ಆದರೆ ಬಡತನದ ಕಾರಣದಿಂದಾಗಿ ಅವರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಾರೆ. ಅವರು ದುಡಿದು ತಂದ ಹಣದಲ್ಲಿ ಹೊಟ್ಟೆ ಹೊರೆಯುವುದಕ್ಕೆ ಸಾಕಾಗುವುದಿಲ್ಲ. ಅವರ ಎಲ್ಲಾ ಹಿತಾಸಕ್ತಿಗಳನ್ನು ಬದಿಗಿಟ್ಟು ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಪಾಲನೆ ಪೋಷಣೆಯೇ ಅವರ ಗುರಿಯಾಗಿರುತ್ತದೆ.ಈ ನಿರಂತರ ಹೊಣೆಗಾರಿಕೆಯಲ್ಲಿ ಮಹಿಳೆಯರು ತಮ್ಮ ಹಿತಾಸಕ್ತಿಗಳನ್ನು ಬದಿಗೊತ್ತಿ ಜೀವನ ನಡೆಸುತ್ತಾರೆ. ಅವರ ಮನದಲ್ಲಿ ಅನೇಕ ಆಸೆ ಹಿತಾಸಕ್ತಿಗಳು ಇದ್ದರೂ ಅವರಿಗೆ ಅವುಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇರುವುದಿಲ್ಲ. ಅಮರ್ತ್ಯಸೇನ್ ಅವರು ಹೇಳುವಂತೆ ಅಭಿವೃದ್ಧಿಯನ್ನು ಜನರು ತಾವು ಏನು ಮಾಡಬೇಕೆಂದಿದ್ದಾರೆ ಅದನ್ನು ಮಾಡಲು ಮತ್ತು ಅವರು ಏನು ಆಗಬೇಕೆಂದಿದ್ದಾರೆ ಅದರಂತೆ ಆಗಲು ಅಗತ್ಯವಾದ ಜನರ ಸಾಮರ್ಥ್ಯ ಮತ್ತು ಸ್ವಾತಂತ್ರ್ಯವೆಂದು ನಿರ್ವಚಿಸಿದ್ದಾರೆ. ಈ ದೃಷ್ಟಿಯಿಂದ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಎಲ್ಲಾ ಸ್ವತಂತ್ರವೂ ಲಭಿಸಿವೆಯೇ ಎಂದು ಕೇಳಿದರೆ ಉತ್ತರಿಸುವುದು ತುಂಬಾ ಕಷ್ಟವಾಗುತ್ತದೆ.

ವಿವಾಹ ಮತ್ತು ಲಿಂಗ ವ್ಯವಸ್ಥೆ:

 ನಮ್ಮ ಸಮಾಜದಲ್ಲಿ ಕಂಡುಬರುವ ವಿವಾಹದ ವಿಧಿವಿಧಾನಗಳಲ್ಲಿಯೂ ಪುರುಷ ಪಕ್ಷಪಾತತೆಯೂ ಕಂಡುಬರುವುದು. ಹೆಚ್ಚುಕಡಿಮೆ ವಿವಾಹದ ವಿಧಿವಿಧಾನಗಳೆಲ್ಲವೂ ಪುರುಷನ ಪ್ರಾಧಾನ್ಯತೆ ಸ್ತ್ರೀಯರ ಪರಾಧಿನತೆಯನ್ನು ಎತ್ತಿ ತೋರಿಸುವಂತೆ ಇವೆ. ವಿವಾಹ ಸಂದರ್ಭದಲ್ಲಿ ಗಂಡಿನ ಕಡೆಯವರು ಆಜ್ಞಾಧಾರಕವಾಗಿ ಹೆಣ್ಣಿನ ಕಡೆಯವರು ಅವರು ಹೇಳಿದಂತೆ ತಲೆ ಬಾಗುವುದನ್ನು ನಾವು ಈಗಲೂ ಕಾಣುತ್ತೇವೆ.ಈ ಪದ್ಧತಿ ಆಚರಣೆಗಳು ಜ್ಞಾನವಂತ ಸಮಾಜದಲ್ಲಿ ಹೆಚ್ಚು ಕಂಡು ಬರುತ್ತಿರುವಾಗ ಕೊಳಚೆ ಪ್ರದೇಶಗಳಲ್ಲಿ ಇನ್ನೂ  ಹೆಚ್ಚು ಕಂಡುಬರುತ್ತವೆ. ಕೊಳಚೆ ಪ್ರದೇಶಗಳಲ್ಲಿ ಅಕ್ಷರ ಜ್ಞಾನ ಹೊಂದಿರುವ ಪೋಷಕರು ಕಡಿಮೆ. ಹೆಣ್ಣು ಮಗು ಹುಟ್ಟಿದರೆ ಹುಟ್ಟಿದ ಕ್ಷಣದಿಂದಲೇ ಅವಳ ಕುರಿತು ಯೋಚಿಸುತ್ತಾರೆ. ಹೆಣ್ಣುಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರೆ ಸಾಕು ಅವರ ಆಸಕ್ತಿಯನ್ನು ಪರಿಗಣಿಸದೆ, ಅವರ ಒಪ್ಪಿಗೆಯನ್ನು ಕೇಳದೆ, ಚಿಕ್ಕವಯಸ್ಸಿನಲ್ಲೇ ವಿವಾಹ ಮಾಡಿಕೊಟ್ಟು ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುವ ಪೋಷಕರೇ ಹೆಚ್ಚು. ಕೊಳಚೆ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ನಡೆಯುವುದು ಹೆಚ್ಚು ಇಲ್ಲಿ ಸ್ತ್ರೀಯ ಆಸೆ-ಆಕಾಂಕ್ಷೆ ಅಭಿಪ್ರಾಯ ಸ್ವತಂತ್ರಗಳೆಲ್ಲವೂ ಕಸಿದುಕೊಳ್ಳಲ್ಪಡುತ್ತವೆ. ವಿವಾಹವಾಗದ ಹೊರತು ಹೆಣ್ಣಿನ ಜೀವನಕ್ಕೆ ಮುಕ್ತಿ ಎಂಬುದಿಲ್ಲ ಎಂದು ನಮ್ಮ ಸಂಸ್ಕೃತಿಯು ಹೇಳುತ್ತದೆ. ವಿವಾಹವಾದ ನಂತರ ಪತಿಯು ಹೇಳಿದಂತೆ ಸತಿಯು ನಡೆಯಬೇಕು. ಪತಿಯ ಮಾತನ್ನು ಮೀರಿ ಬದುಕುವ ಸತಿಗೆ ಸಮಾಜದಲ್ಲಿ ಗೌರವಗಳಿಲ್ಲ. ಮುಂದೆ ದಾಂಪತ್ಯ ಜೀವನದಲ್ಲಿ ಏನೇ ತೊಡಕುಗಳುಂಟಾದರೂ ಅದಕ್ಕೆ ಸ್ತ್ರೀಯನ್ನೆ ಹೊಣೆಗಾರರನ್ನಾಗಿ ಮಾಡಿಬಿಡುತ್ತಾರೆ.ಕೊಳಚೆ ಪ್ರದೇಶಗಳಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಮದುವೆಯಾದ ನಂತರ ವಿವಾಹಿತ ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸುವುದು ತರದೇ ಇದ್ದರೆ ಹಿಂಸಿಸುವುದು,ಇಲ್ಲವೆ ಮನೆಯಿಂದ ಹೊರಹಾಕುವುದು,ತವರು ಮನೆಯಲ್ಲೇ ಬಿಟ್ಟು ಬರುವುದು ಹೀಗೆ ಅನೇಕ ಕಾರಣಗಳಿಂದ ಈ ಪ್ರದೇಶಗಳಲ್ಲಿ ಸ್ತ್ರೀಯರು ಸಮಸ್ಯೆಗಳನ್ನು ಹೊತ್ತುಕೊಂಡೆ ಜೀವನ ಸಾಗಿಸುತ್ತಾರೆ. ಹಾಗೆ ದಾಂಪತ್ಯದಲ್ಲಿ ತೊಡಕುಗಳು ಉಂಟಾದಾಗ ಪುರುಷನು ಸಹಜವಾಗಿ ವಿಚ್ಛೇದನ ಪಡೆದು ಮತ್ತೊಂದು ಮರ ವಿವಾಹವಾಗಬಹುದು. ಸ್ತ್ರೀಯು ಸಹ ವಿಚ್ಛೇದನ ಪಡೆದು ಮರು ವಿವಾಹವಾಗಲು ನಮ್ಮಸಂವಿಧಾನ ಅವಕಾಶ ನೀಡಿದೆ. ಆದರೆ ಸ್ತ್ರೀಯರು ಇಂತಹ ಕಾರ್ಯಗಳನ್ನು ಮಾಡಲು ಇಚ್ಛಿಸುವುದಿಲ್ಲ. ಕಾರಣ ಮರು ವಿವಾಹವಾದ ಪುರುಷನಿಗೆ ಇರುವ ಬೆಲೆ ಮರು ವಿವಾಹವಾಗುವ ಸ್ತ್ರೀಗೆ ನಮ್ಮ ಸಮಾಜ ನೀಡಲಾರದು. ಸಮಾಜದಲ್ಲಿ ಇಂತಹ ಮಹಿಳೆ ಅನೇಕ ಸಮಸ್ಯೆಗಳನ್ನು, ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಸಮಾಜದಲ್ಲಿರುವ ಎಲ್ಲಾ ಆಚರಣೆಗಳನ್ನು ಲಿಂಗತಾರತಮ್ಯಗಳನ್ನು ಕಾಣುತ್ತಲೇ ಬಂದಿದ್ದೇವೆ. ಸ್ತ್ರೀಯನ್ನು ಎರಡನೇ ದರ್ಜೆಯ ವಳೆಂದು ಅಚ್ಚೊತ್ತಿ ಆಗಿದೆ. ಗಂಡು-ಹೆಣ್ಣು ಸಮಾಜದ ಸಮತೋಲನಕ್ಕೆ ಸಮಾನವಾಗಿ ಅವಶ್ಯವಾದವರು.ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಹುಟ್ಟಿನಲ್ಲಾಗಲಿ ಸಾವಿನಲ್ಲಾಗಲಿ ಗಂಡನಿಂದಲೇ ಎಲ್ಲಾ  ಎಂಬ ಭ್ರಮೆಯಿಂದ ಮಹಿಳೆಯರು ಹೊರಬಂದು ತಮ್ಮತನವನ್ನು ಉಳಿಸಿಕೊಳ್ಳಲು ಮನಸ್ಸು ಮಾಡಬೇಕಾಗಿದೆ.

ಶಿಕ್ಷಣ ಸೌಲಭ್ಯ ಮತ್ತು ಲಿಂಗ ಅಸಮಾನತೆ:

            ಅಭಿವೃದ್ಧಿಯ ಪ್ರಾಥಮಿಕ ಸಂಗತಿಗಳಲ್ಲಿ ಶಿಕ್ಷಣವು ಒಂದಾಗಿದೆ. ಅಮರ್ತ್ಯಸೇನ್ ಅವರ ಪ್ರಕಾರ ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ನಡುವೆ ಸಮಾನತೆ ಇದ್ದಿದ್ದರೆ ಪ್ರಾಥಮಿಕ ಸಂಗತಿಯಾದ ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ಉದ್ಯೋಗ ಮುಂತಾದ ಸಂಗತಿಗಳಲ್ಲಿ ಮಹಿಳೆಯರು ತಾರತಮ್ಯ ಎದುರಿಸುತ್ತಿರಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆ ಮತ್ತು ಪುರುಷರ ಸಾಕ್ಷರತೆ ಪ್ರಮಾಣ ಸಮನಾಗಿಲ್ಲ. ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಹಳಷ್ಟು ಮಹಿಳೆಯರು ಶಿಕ್ಷಣ ವಂಚಿತರಾಗಿದ್ದಾರೆ.ಸ್ತ್ರೀಯರೂ ಶಿಕ್ಷಣ ಪಡೆದಷ್ಟು ಸಮಾಜ ಸದೃಢವಾಗುತ್ತದೆ.ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಸಾಮಾನ್ಯವಾಗಿ ಅನಕ್ಷರಸ್ಥರು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ದೊರೆತಿದೆ. ಆದರೆ ಇದು ಕೊಳಚೆ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿದೆ.ಕುಟುಂಬದಲ್ಲಿ ಶಿಕ್ಷಣ ಪಡೆಯುವಲ್ಲಿ ಗಂಡು ಮಕ್ಕಳಿಗೆ ಸಿಗುವಷ್ಟು ಪ್ರೋತ್ಸಾಹ ಹೆಣ್ಣುಮಕ್ಕಳಿಗೆ ಸಿಗುತ್ತಿಲ್ಲ.ಈ ತಾರತಮ್ಯದಿಂದಾಗಿ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿಯುತ್ತಿದ್ದಾರೆ. ಸರ್ವರಿಗೂ ಉಚಿತ ಶಿಕ್ಷಣದ ಬೃಹತ್ ಅವಕಾಶ ದೇಶದಾದ್ಯಂತ ಇದ್ದರೂ ಈಗಲೂ ದೇಶದ ವಿವಿಧ ಭಾಗಗಳಲ್ಲಿ ಗಂಡು ಮಕ್ಕಳ ಶಿಕ್ಷಣಕ್ಕೇ ಆದ್ಯತೆ ನೀಡಲಾಗುತ್ತಿದೆ. ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟರೆ ಆಯಿತು ಅವಳು ಗಂಡನ ಮನೆ ಸೇರುತ್ತಾಳೆ. ಆದ್ದರಿಂದ ಅವಳಿಗೆ ಹೆಚ್ಚು ಓದಿಸುವ ಅವಶ್ಯಕತೆ ಇಲ್ಲ. ಆದರೆ ಪುರುಷ ಮುಂದೆ ಕುಟುಂಬಕ್ಕೆ ಆಧಾರ ಎಂದು ಅವನಿಗೆ ಹೆಚ್ಚು ಹೆಚ್ಚು ಖರ್ಚು ಮಾಡಿ ಗಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾರೆ. ಆದರೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸ್ತ್ರೀ ಶಿಕ್ಷಣ ಹೊಸಯುಗದ ತುರ್ತು ಅಗತ್ಯವಾಗಿದೆ. ಸಮಾಜದಲ್ಲಿ ಲಿಂಗ ತಾರತಮ್ಯವನ್ನು ತೊಡೆದು ಹಾಕಬೇಕಾದರೆ ಸ್ತ್ರೀಯರಿಗೂ ಸಹ ಪುರುಷರಂತೆ ಉನ್ನತ ಶಿಕ್ಷಣ ಪಡೆಯಲು ಹೆಚ್ಚು ಹೆಚ್ಚು ಅವಕಾಶಗಳು ದೊರೆಯಬೇಕಾಗಿದೆ. ಅಂದಾಗ ಮಾತ್ರ ಕೊಳಚೆ ಪ್ರದೇಶಗಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ.

ಲಿಂಗಾನುಪಾತ:

            ಲಿಂಗ ಅಸಮಾನತೆ ಎಂಬುದು ಮಹಿಳೆಯರ ಹುಟ್ಟು ಮತ್ತು ಸಾವಿನ ಸಂಗತಿಗಳೊಂದಿಗೆ ತಳಕುಹಾಕಿಕೊಂಡಿವೆ. ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಸಮಾನತೆ ಇದ್ದರೆ ಲಿಂಗ ಅನುಪಾತ ಸಾವಿರಕ್ಕಿಂತ ಅಧಿಕವಿರಬೇಕು. ೨೦೦೧ರಲ್ಲಿ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತವು ತೀವ್ರಗತಿಯಲ್ಲಿ ಕುಸಿತಕ್ಕೆ ಒಳಗಾಗಿದೆ. ೧೯೯೧ ರಲ್ಲಿ ೯೬೦ ರಷ್ಟಿದ್ದು ೨೦೦೧ರಲ್ಲಿ ೯೪೮ಕ್ಕೆ ಇಳಿದಿದೆ.೨೦೧೧ರಲ್ಲಿ ೯೪೩ಕ್ಕೆ ಇಳಿದಿದೆ.ಇದು ಸಮಾಜದಲ್ಲಿ ನೆಲೆಗೊಂಡಿರುವ ಲಿಂಗ ಅಸಮಾನತೆಯ ಸೂಚಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಶಿಶು ಮರಣ ಪ್ರಮಾಣದಲ್ಲಿ ಲಿಂಗ ಅಸಮಾನತೆ, ಲಿಂಗವನ್ನು ಗರ್ಭದಲ್ಲೇ ಪತ್ತೆಮಾಡುವ ತಂತ್ರಜ್ಞಾನದ ಆವಿಷ್ಕಾರದಿಂದ ಹೆಣ್ಣು ಭ್ರೂಣ ಹತ್ಯೆ ಸಮಸ್ಯೆಯು ಉಲ್ಬಣಗೊಳ್ಳುತ್ತಿದೆ. ಈ ಸಂಗತಿಯು ಸಮಾಜದಲ್ಲಿ ಅನೇಕ ಕೌಟುಂಬಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ಹುಟ್ಟುಹಾಕಬಹುದು.ಇಂತಹ ಹಿಂದುಳಿದ ಕೊಳಚೆ ಪ್ರದೇಶಗಳಲ್ಲಿ ಬಹುಪತ್ನಿತ್ವ ಹೆಚ್ಚಾಗಲು ಕಾರಣವಾಗಬಹುದು. ಹೆಣ್ಣಿನ ಮೇಲಿನ ಅತ್ಯಾಚಾರಗಳು ಅಧಿಕವಾಗಬಹುದು.

ಉಪಸಂಹಾರ :

        ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರೆದು ಭಾಗವಹಿಸುತ್ತಿದ್ದಾಳೆ. ತನ್ನ ಸಾಮರ್ಥ್ಯವನ್ನು ಅರಿತು ಮುಂದೆ ಬರಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಮೇಲೆ ಗಮನಿಸಿದ ಎಲ್ಲ ಅಂಶಗಳಲ್ಲೂ ಲಿಂಗ ಅಸಮಾನತೆ ಈಗಲೂ ಸಹ ಹೆಚ್ಚಾಗಿದೆ. ಸಾಮಾನ್ಯವಾಗಿ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೇ ಆಗಿವೆ. ಇಲ್ಲಿ ಲಿಂಗತಾರತಮ್ಯವೆನ್ನುವುದು ಹಾಸುಹೊಕ್ಕಾಗಿದೆ. ಮಹಿಳೆಯರು ಎಷ್ಟೇ ಶ್ರಮವಹಿಸಿ ಕೆಲಸಮಾಡಿರು ಕುಟುಂಬದಲ್ಲಿ ಅವಳ ಸ್ಥಾನಮಾನಗಳು ಪುರುಷನಿಗಿಂತ ಕೆಳಸ್ತರದಲ್ಲಿದೆ. ಕುಟುಂಬದಲ್ಲಿ ನೆಮ್ಮದಿಯಾಗಲಿ, ವೈವಾಹಿಕ ವ್ಯವಸ್ಥೆಯಲ್ಲಾಗಲಿ, ಶಿಕ್ಷಣ ಕ್ಷೇತ್ರದಲ್ಲಿ ಆರ್ಥಿಕವಾಗಿ ಸ್ವಾವಲಂಬನೆ ಹೊಂದುವುದರಲ್ಲಿ ಎಲ್ಲ ಕ್ಷೇತ್ರದಲ್ಲೂ ದ್ವಿತೀಯ ದರ್ಜೆಯವಳೆ.ಈ ಕೊಳಚೆ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಪುರುಷರೇ ಪ್ರಧಾನವಾಗಿರುವ ಈ ಸಮಾಜದಲ್ಲಿ ಬಾಳಲು ತುಂಬಾ ಶ್ರಮಪಡುತ್ತಿದ್ದಾರೆ. ಸಮಾಜದಲ್ಲಿ ಲಿಂಗಸಮಾನತೆ  ಬರದ ಹೊರತು ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ನಮ್ಮ ಸಮಾಜದಲ್ಲಿರುವ ಮೂಢ ನಂಬಿಕೆ ಆಚರಣೆಗಳು ಪದ್ಧತಿಗಳಲ್ಲಿ ಬದಲಾವಣೆಗಳಾಗಬೇಕು. ಜೈವಿಕವಾಗಿ ರೂಪಿಸಿಕೊಂಡು ಬಂದಿರುವ ನೀತಿ ನಿಯಮಗಳಲ್ಲಿ ಬದಲಾವಣೆಗಳಾಗಬೇಕು. ಮಹಿಳೆಯರು ಇಂದು ತಮ್ಮ ಬದುಕಿನ ನೆಲೆಗಳನ್ನು ಸ್ವಮೌಲ್ಯಮಾಪನ ಮಾಡಿಕೊಳ್ಳಬೇಕಾಗಿದೆ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿದು ಸರಿಯಾದದ್ದನ್ನು ಆಯ್ದುಕೊಳ್ಳುವ ಸ್ವತಂತ್ರತೆಯನ್ನು ಪಡೆದುಕೊಳ್ಳಲು ಮುಂದೆ ಬರಬೇಕು. ಸರಕಾರವು ಮಹಿಳೆಯರ ಅಭಿವೃದ್ಧಿಗೆ ಜಾರಿಗೊಳಿಸಿರುವ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕಾಗಿದೆ. ಹಾಗೆ ಸರಕಾರವು ಇನ್ನೂ ಹೆಚ್ಚು ಹೆಚ್ಚು ಮಹಿಳಾ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಕಾನೂನುಗಳನ್ನು ಜಾರಿಗೆ ತರುವುದು ಅವಶ್ಯವಾಗಿದೆ.

ಪರಮರ್ಷನ ಗ್ರಂಥಗಳು:

  1. ಡಿ. ಮಂಗಳ ಪ್ರಿಯದರ್ಶಿನಿ, ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನ ಒಂದು ಪ್ರವೇಶಿಕೆ, ಹೇಮಂತ ಸಾಹಿತ್ಯ ಪ್ರಕಾಶನ, ೨೦೧೮, ಬೆಂಗಳೂರು
  2. ಪುಪ್ಪಾ ಬಸನಗೌಡರ, ಮಹಿಳಾ ಸಬಲೀಕರಣ, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ೨೦೧೫           
  3. ಮೀನಾ ಆರ್ ಚಂದಾವರಕರ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸ್ತ್ರೀಶಕ್ತ್ರಿ, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ೨೦೦೯


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal