Tumbe Group of International Journals

Full Text


ಶಿವಮೊಗ್ಗ ಜಿಲ್ಲೆಯ ನಾಯಕರು ಮೌಲ್ಯಾಧಾರಿತ ರಾಜಕಾರಣಿಗಳು

ಡಾ. ನಾಗರಾಜು. ಎಂ.ಎಸ್.

ರಾಜ್ಯಶ್ಯಾಸ್ತ್ರ ಸಹಾಯಕ ಪ್ರಾದ್ಯಾಪಕರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು

Email – msnmakam@gmail.com     Mobile- 9886857139


ಪ್ರಸ್ತಾವನೆ

ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಗೆ ವಿಶಿಷ್ಟ ಹಿರಿಮೆ ಇದೆ. ಅರೆಮಲೆನಾಡಿನ ಸೊಬಗು, ಬಯಲು ನಾಡಿನ ಬೆಡಗುಗಳನ್ನು ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆ ಸಂಸ್ಕೃತಿಯ ಹಿರಿಮೆ, ಆರ್ಥಿಕ ಪ್ರಗತಿ, ಸಾಹಿತ್ಯದ ಶ್ರೀಮಂತಿಕೆ, ಧಾರ್ಮಿಕ ಸಮನ್ವಯತೆ, ಸಾಮಾಜಿಕ ಪ್ರಜ್ಞೆಯನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಗ್ಗಳಿಕೆಯೂ ಇದೆ.

            ನಾಯಕತ್ವ ವಿವಿಧ ರಾಜ್ಯ ಮತ್ತು ಸರ್ಕಾರ ಪದ್ಧತಿಗಳಲ್ಲಿ ಮಹತ್ವವಾದದ್ದು. ನಾಯಕರಾದವರು ಜನರನ್ನು, ಸರ್ಕಾರವನ್ನು ಮುನ್ನಡೆಸುವ ಹೊಣೆಗಾರಿಕೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಜನನಾಯಕರು ದೂರದೃಷ್ಟಿ, ನಿಷ್ಷಕ್ಷಪಾತತೆ, ಪಾರದರ್ಶಕತೆಯನ್ನು ತನ್ನ ಆಡಳಿತದ ಉಸಿರನ್ನಾಗಿಸಿಕೊಂಡಿರಬೇಕು. ಆಗ ಮಾತ್ರ ಇವರು ರಾಜ್ಯಕ್ಕೆ ಏನಾದರೂ ಕೊಡುಗೆ ನೀಡಲು ಸಾಧ್ಯ.

ಪ್ರಮುಖ ಪದಗಳು:  ಶಿವಮೊಗ್ಗ ಜಿಲ್ಲೆ, ಕಡಿದಾಳ್ ಮಂಜಪ್ಪನವರು, ಶಾಂತವೇರಿ ಗೋಪಾಲ ಗೌಡರು, ಜೆ.ಹೆಚ್. ಪಟೇಲರು, ಸಾರೇಕೊಪ್ಪ ಬಂಗಾರಪ್ಪನವರು, ಕಾಗೋಡು ತಿಮ್ಮಪ್ಪನವರು, ಯಡಿಯೂರಪ್ಪನವರು, ಮತ್ತು ಡಿ.ಹೆಚ್. ಶಂಕರಮೂರ್ತಿಯವರು.

ಶಿವಮೊಗ್ಗ ಜಿಲ್ಲೆ ಮೂಲತಃ ಕನ್ನಡನಾಡಿನ ಸಾಂಸ್ಕೃತಿಕ ಕೇಂದ್ರವಾಗಿದೆ. ಇದನ್ನು ಮಲೆನಾಡಿನ ರಾಜಧಾನಿ ಎಂದೇ ಕರೆಯಲಾಗಿದೆ. ಏಕೆಂದರೆ ಜಗತ್‍ಪ್ರಸಿದ್ಧವಾದ ಪ್ರಕೃತಿ ರಮ್ಯತಾಣಗಳನ್ನು, ಜೋಗ ಜಲಪಾತವನ್ನು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಹಾಗೆ 12ನೇ ಶತಮಾನದಲ್ಲಿ ನಡೆದಿರುವ ವಚನಕ್ರಾಂತಿಗೆ ಮೂಲ ಕಾರಣಕರ್ತರಾದ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಇವರುಗಳು ಈ ಜಿಲ್ಲೆಯಲ್ಲಿ ಜನಿಸಿದ್ದರಿಂದ ಇದನ್ನು ಶರಣರ ನಾಡೆಂದು ಕರೆಯಲಾಗಿದೆ.

            ಶಿವಮೊಗ್ಗ ಜಿಲ್ಲೆಯ ರಾಜಕೀಯ ನಾಯಕರು ಕರ್ನಾಟಕಕ್ಕೆ ಮಾದರಿಯಾದವರು. ಈ ನಾಯಕರು ದೇಶದ ಇತರ ನಾಯಕರಿಗೆ ಸಮಾನವಾಗಿ ತಮ್ಮ ವರ್ಚಸ್ಸನ್ನು ತಮ್ಮ ಕೊಡುಗೆಗಳಿಂದ ಹೆಚ್ಚಿಸಿಕೊಂಡವರು. ಈ ಜಿಲ್ಲೆಯ ನಾಯಕರ ಕೊಡುಗೆಗಳನ್ನು ವಿವರಿಸಲು ಇವರ ಸೈದ್ಧಾಂತಿಕ ಬದ್ಧತೆ ಮತ್ತು ಜನಪರ ಹೋರಾಟಗಳನ್ನು ವಿಶ್ಲೇಷಿಸಬೇಕಾಗಿದೆ. ಈ ಜನಪರ ಹೋರಾಟಗಳು ಸಮಾನತೆ ಮತ್ತು ಸಾಮಾಜಿಕ ನ್ಯಾಯ ನೀಡುವ ಗುರಿಯನ್ನು ಸಮಾಜವಾದ ಸಿದ್ಧಾಂತದ ಮೂಲಕ ಅನುಷ್ಠಾನಗೊಳಿಸಿದರು. ಇದರಿಂದ ಇದನ್ನು ‘ಸಮಾಜವಾದದ ತೊಟ್ಟಿಲು’ ಎಂದು ಕರೆದಿದ್ದಾರೆ. ಪ್ರಸ್ತುತ ಅಧ್ಯಯನದ ನಾಯಕರು ಮುಖ್ಯಮಂತ್ರಿಗಳು, ಮಂತ್ರಿಗಳು ಮತ್ತು ಜನಪರ-ಜನಪ್ರಿಯ ಹೋರಾಟಗಾರರಾಗಿದ್ದರು.

            ಶಿವಮೊಗ್ಗ ಜಿಲ್ಲೆಯ ನಾಯಕರೆಂದರೆ ಕಡಿದಾಳ್ ಮಂಜಪ್ಪನವರು, ಶಾಂತವೇರಿ ಗೋಪಾಲ ಗೌಡರು, ಜೆ.ಹೆಚ್. ಪಟೇಲರು, ಸಾರೇಕೊಪ್ಪ ಬಂಗಾರಪ್ಪನವರು, ಕಾಗೋಡು ತಿಮ್ಮಪ್ಪನವರು, ಯಡಿಯೂರಪ್ಪನವರು, ಮತ್ತು ಡಿ.ಹೆಚ್. ಶಂಕರಮೂರ್ತಿಯವರು. ಇವರುಗಳ ಕೊಡುಗೆಗಳನ್ನು ಅಧ್ಯಯನ ಮಾಡುವುದು ಪ್ರಮುಖ ಉದ್ದೇಶವಾಗಿದೆ.

            ಮಾನವ ಸಮಾಜದಲ್ಲಿ ಹೆಚ್ಚು ಜನರಿಗೆ ಉಪಯುಕ್ತವಾಗುವ ವಸ್ತುಗಳು, ವಿಷಯಗಳು, ಸಿದ್ಧಾಂತಗಳು, ಸರ್ಕಾರಗಳು, ವ್ಯಕ್ತಿಗಳು ಮಹತ್ವ ಪಡೆದುಕೊಳ್ಳುತ್ತವೆ. ಸಮಾಜದಲ್ಲಿ ಹಲವಾರು ಆದರ್ಶ ವ್ಯಕ್ತಿಗಳು ಬಾಳಿ ಬದುಕಿ ತನ್ನ ಬದುಕಿನ ಸಾರ್ಥಕ ಹೆಜ್ಜೆಗುರುತುಗಳು ಇತರರಿಗೆ ಮಾದರಿಯಾಗುತ್ತವೆ. ಮತ್ತು ಮಹತ್ವ ಪಡೆದುಕೊಳ್ಳುತ್ತದೆ. ಜಿಲ್ಲೆಯ ನಾಯಕರು ರಾಜಕೀಯ ತಾತ್ವಿಕ ನಿಷ್ಠೆಗೆ ಹೆಸರಾದವರು. ಬಹುತೇಕ ಅಧ್ಯಯನಕ್ಕೆ ಒಳಪಡಿಸಿರುವ ನಾಯಕರು ಅನೇಕ ವರ್ಷಗಳ ಸುದೀರ್ಘ ರಾಜಕೀಯ ಅನುಭವದಿಂದ ಪಕ್ಷದಲ್ಲಿ ವಿವಿಧ ಹಂತಗಳನ್ನು ಸವಾಲನ್ನಾಗಿ ಜಯಿಸಿ ಸಂಘಟನೆಯಿಂದ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡವರು. ಇವರು ಚುನಾಯಿತ ಜನಪ್ರತಿನಿಧಿಗಳಾಗಿ, ಮಂತ್ರಿಗಳಾಗಿ ತಮ್ಮ ಕಾರ್ಯವನ್ನು ಸೇವೆಯ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದವರು. ಇಂದಿಗೂ ಇವರೆಲ್ಲರ ರಾಜಕೀಯ ಜೀವನ ಹಲವಾರು ಅನುಯಾಯಿಗಳನ್ನು ಹುಟ್ಟುಹಾಕಿದೆ. ಹಾಗೆ ಇವರು ಅನುಷ್ಟಾನಕ್ಕೆ ತಂದ ಅನೇಕ ಜನಪರ ಕಾರ್ಯಕ್ರಮಗಳು ಸಮಾಜದ ಅಭಿವೃದ್ಧಿಯನ್ನು ಉಂಟು ಮಾಡಿರುವುದು ಐತಿಹಾಸಿಕ ಆದರ್ಶದ ಉದಾಹರಣೆಗಳಾಗಿವೆ. ಇದರಿಂದ ಈ ಅಧ್ಯಯನ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದೆ.

            ಈ ಜಿಲ್ಲೆಯ ಪ್ರಬುದ್ಧ ರಾಜಕೀಯ ನಾಯಕರು ಸ್ವಾತಂತ್ರಕ್ಕಾಗಿ ದೇಶಭಕ್ತಿಯಿಂದ ಹೋರಾಟ ಮಾಡಿ ತಮ್ಮನ್ನು ತಾವೇ ಅರ್ಪಿಸಿಕೊಂಡ ಮಹನೀಯರು. ಇವರಲ್ಲಿ ಬಹುತೇಕರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಇವರು ಹೋರಾಟದ ಮುಖೇನ ಜನಪರ ಕೆಲಸಮಾಡಿ ಜನಪ್ರಿಯರಾದವರು. ಇವರೆಲ್ಲರೂ ಭೂಹೀನರಿಗೆ, ಬಡವರಿಗೆ, ಭೂಮಿಯ ಒಡೆತನ ನೀಡಿ ಬದುಕಿಗೆ ಆಧಾರವನ್ನು ಒದಗಿಸಿದವರು. ಶ್ರೀ ಯಡಿಯೂರಪ್ಪ ಮತ್ತು ಡಿ.ಹೆಚ್. ಶಂಕರಮೂರ್ತಿಯವರು ರಾಷ್ಟ್ರೀಯವಾದದ ಹಿನ್ನೆಲೆಯಿಂದ ಬಂದ ನಾಯಕರು. ಇವರೂ ಸಹ ದೇಶಪ್ರೇಮ, ತಾತ್ವಿಕ ಬದ್ಧತೆ, ಅರ್ಪಣೆಯಿಂದ ಜನನಾಯಕರಾಗಿ ಪ್ರಸಿದ್ಧಿ ಪಡೆದವರು.

             ಕಡಿದಾಳ್ ಮಂಜಪ್ಪನವರು ಗಾಂಧೀಜಿಯವರನ್ನು ಭೇಟಿ ಮಾಡಿ ಅವರ ಸರಳತೆ ಮತ್ತು ತತ್ವಗಳಿಗೆ ಮಾರುಹೋಗಿ ಅಂದಿನಿಂದಲೇ ಗಾಂಧಿವಾದಿಯಾದರು. ಇವರು ಸ್ವತಂತ್ರ ಹೋರಾಟಗಾರರಾಗಿ ಅನೇಕ ಚಳುವಳಿಗಳಲ್ಲಿ ಪಾಲ್ಗೊಂಡಿದ್ದರು. ಇವರು ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಇದರಿಂದ ಇವರು 32 ವರ್ಷಗಳ ಕಾಲ ರಾಜ್ಯ ಮತ್ತು ದೇಶದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇವರು ಕೇವಲ ಮಂತ್ರಿಗಳಾಗಿ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಇವರು ಭೂಸುಧಾರಣಾ ಚಳುವಳಿಯಲ್ಲಿ ಭಾಗವಹಿಸಿ, ಅನೇಕ ಬಡವರಿಗೆ ಭೂಮಿಯ ಹಕ್ಕನ್ನು ಕೊಡಿಸಿದರು.

            ಕಡಿದಾಳ್ ಮಂಜಪ್ಪನವರು ದೇಶಭಕ್ತಿ, ನಿಸ್ವಾರ್ಥ ಸೇವೆ, ಹೋರಾಟ, ಪ್ರಾಮಾಣಿಕತೆ, ಸರಳತೆ ಯುವಜನಾಂಗಕ್ಕೆ ಮಾದರಿಯಾಗಿದೆ. ಇವರ ವ್ಯಕ್ತಿತ್ವವು ಕೇವಲ ಶಿವಮೊಗ್ಗ ಜಿಲ್ಲೆ, ಕರ್ನಾಟಕಕ್ಕೆ ಸೀಮಿತವಾಗದೆ ದೇಶದ ಎಲ್ಲಾ ದೇಶಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದೆ ಅಜರಾಮರವಾಗಿದೆ.

            ಶಾಂತವೇರಿ ಗೋಪಾಲಗೌಡರು ಸಮಾಜವಾದ ಸಿದ್ಧಾಂತದ ಹಿನ್ನೆಲೆಯಿಂದ ತಮ್ಮ ಹೋರಾಟವನ್ನು ಪ್ರಾರಂಭಿಸುತ್ತಾರೆ. ಹಾಗೆ ಕಾಗೋಡು ಸತ್ಯಾಗ್ರಹ ಇವರ ರಾಜಕೀಯ ಬದುಕನ್ನೇ ಬದಲಾಯಿಸಿತು. ಇವರು 1952 ರಿಂದ 1972 ರವರೆಗೆ ‘ಉಳುವವನೆ ಭೂಮಿಯ ಒಡೆಯ’ ಎಂಬ ವಿಚಾರಧಾರೆಯನ್ನು ಶಾಸನಸಭೆಯ ಒಳಗೆ ಹೊರಗೆ ಹೋರಾಟ ನಡೆಸಿದವರು. ಕರ್ನಾಟಕ ಏಕೀಕರಣಕ್ಕೂ ಇವರ ಕೊಡುಗೆ ಪ್ರಮುಖವಾದದ್ದು. ಇವರು ಬಡವರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ನಿರಂತರ ಹೋರಾಟ ನಡೆಸಿ ಯಶಸ್ಸು ಕಂಡವರು. ಇವರು ಲೋಹಿಯಾ ಸಿದ್ಧಾಂತದ ಆಧಾರದ ಮೇಲೆ ರಾಜ್ಯದ ರಾಜಕೀಯಕ್ಕೆ ಭದ್ರ ನೆಲೆಯನ್ನು ಕಟ್ಟಿಕೊಟ್ಟ ಪ್ರಾಮಾಣಿಕ ರಾಜಕಾರಣಿ.

            ಜೆ.ಹೆಚ್. ಪಟೇಲ್‍ರವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರಿನವರು. ಇವರು ಕರ್ನಾಟಕದ ಬೌದ್ಧಿಕ ಮತ್ತು ರಾಜಕೀಯ ಚರಿತ್ರೆಯಲ್ಲಿ ಇವರದು ವಿಶಿಷ್ಟಸ್ಥಾನ. ಜೆ.ಹೆಚ್. ಪಟೇಲರು ಸಮಾಜವಾದಿ ಆಂದೋಲನದ ಒಬ್ಬ ಸೃಜನಶೀಲ ಹೋರಾಟಗಾರ. ಇವರು ಚಿಂತಕರಾಗಿ ಸ್ಫೂರ್ತಿದಾಯಕ ಚೈತನ್ಯಶೀಲ ಪ್ರಬುದ್ಧ ನಾಯಕರಾಗಿ ಬೆಳೆದವರು. ಇವರು ತಾವು ಪ್ರತಿಪಾದಿಸಿದ ಗುರಿಗಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಇವರೊಬ್ಬ ರಾಜಕೀಯ ಮುತ್ಸದ್ಧಿ, ಲವಲವಿಕೆಯ ಚಿಂತನಶೀಲ ರಾಜಕಾರಣಿ. ಜೆ.ಹೆಚ್. ಪಟೇಲರು ಶೋಷಿತ ಜನಸಮುದಾಯದ ಧ್ವನಿಯಾಗಿ, ಬುಡಕಟ್ಟು ವರ್ಗಗಳ ಧೀಮಂತ ನಾಯಕರಾಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದವರು.

            ಜೆ.ಹೆಚ್. ಪಟೇಲರು ಕರ್ನಾಟಕ ಕಂಡ ಅತ್ಯಂತ ಪ್ರತಿಭಾಶಾಲಿ ಪ್ರಬುದ್ಧ ರಾಜಕೀಯ ನಾಯಕ. ಅಭಿವೃದ್ಧಿಯ ಹರಿಕಾರ, ಪ್ರಾಮಾಣಿಕತೆ, ಚತುರತೆ ಅವರಲ್ಲಿತ್ತು. ಇವರ ತತ್ವನಿಷ್ಟೆ ಅಚಲವಾಗಿತ್ತು. ಇವರು ತಮ್ಮ ರಾಜಕೀಯ ಜೀವನದ ಕೊನೆಯವರೆಗೂ ಸಮಾಜವಾದಿಯಾಗಿಯೇ ಉಳಿದಿದ್ದರು. ಇವರು ರಾಷ್ಟ್ರದ ಉತ್ತಮ ಸಂಸದೀಯಪಟುವಾಗಿದ್ದರು.

            ಸಾರೆಕೊಪ್ಪ ಬಂಗಾರಪ್ಪನವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಮಟೂರಿನವರು. ಬಂಗಾರಪ್ಪನವರ ರಾಜಕಾರಣವನ್ನು ರಂಗು ರಂಗಿನ ರಾಜಕಾರಣ ಎಂದು ಕರೆದಿದ್ದಾರೆ. ಇವರು ರಾಜಕಾರಣವಲ್ಲದೆ ಸಿನಿಮಾ, ಸಂಗೀತ, ಕ್ರೀಡೆ, ಕುಣಿತ ಮೊದಲಾದವುಗಳಲ್ಲಿ ಆಸಕ್ತಿ ಹೊಂದಿದ್ದರು. ಇವರು ಕಾಂಗ್ರೆಸ್‍ಪಕ್ಷ ಸೇರಿ ಮುಖ್ಯಮಂತ್ರಿಯಾಗಿ ಎಲ್ಲಾ ಪಕ್ಷದಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಹಾಗೆ ಇವರು ಕರ್ನಾಟಕ ವಿಕಾಸ ಪಾರ್ಟಿ, ಕರ್ನಾಟಕ ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಕ್ಷಗಳನ್ನು ಸ್ಥಾಪಿಸಿದ್ದರು. ಇವರು 1967 ರಲ್ಲಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು ಹಾಗೂ 7 ಬಾರಿ ವಿಧಾನಸಭೆಗೆ ಮತ್ತು 4 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇವರನ್ನು ಸೋಲಿಲ್ಲದ ಸರದಾರ ಎಂದು ಕರೆಯುತ್ತಿದ್ದರು.

            ಇವರು ಜೀವನದಲ್ಲಿ ಬಹುಮುಖ ಆಸಕ್ತಿಗಳ ಒಡೆಯರಾಗಿದ್ದರು. ಇವರು ಹಿಂದೂಸ್ತಾನಿ ಸಂಗೀತವನ್ನು ಪ್ರೀತಿಸುತ್ತಿದ್ದರು. ಚಲನಚಿತ್ರಗಳಲ್ಲಿ ನಟಿಸುವ ಆಸೆ, ಕ್ರೀಡೆಗಳಲ್ಲಿ ಆಸಕ್ತಿ, ಡೊಳ್ಳುಕುಣಿತ, ಯೋಗಾಭ್ಯಾಸ ಮೊದಲಾದವುಗಳನ್ನು ಸದಭಿರುಚಿಯಿಂದ ಅನುಭವಿಸುತ್ತಿದ್ದರು. ಇವರು ಖಾದಿ ಸಿಲ್ಕ್ ಷರ್ಟ್‍ಗಳನ್ನು ಕನ್ನಡಕಗಳನ್ನು ಧರಿಸುತ್ತಿದ್ದರು. ಇದರಿಂದ ಇವರ ಜೀವನ ರಾಜಕಾರಣದೊಂದಿಗೆ ಬೆರೆತು ರಂಗುರಂಗಾಗಿತ್ತು. ಇವರ ಪ್ರಮುಖ ಯೋಜನೆಗಳೆಂದರೆ  ಆರಾಧನೆ, ಆಶ್ರಯ ಮತ್ತು ವಿಶ್ವ.

            ಕಾಗೋಡು ತಿಮ್ಮಪ್ಪನವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡಿನವರು. ಕಾಗೋಡು ತಿಮ್ಮಪ್ಪನವರು ಲೋಹಿಯಾರವರಿಂದ ಪ್ರಭಾವಿತರಾಗಿ ಸಮಾಜವಾದದ ಅನುಯಾಯಿಯಾಗಿದ್ದರು ಮತ್ತು ಗೋಪಾಲಗೌಡರಿಂದಲೂ ಪ್ರಭಾವಿತರಾಗಿದ್ದರು. ಇವರ ಹುಟ್ಟೂರಾದ ಕಾಗೋಡು ಒಂದು ಬೃಹತ್ ಚಳುವಳಿಯ ಕೇಂದ್ರವಾಗಿತ್ತು. ತಿಮ್ಮಪ್ಪನವರೂ ಸಹ ಕಾಗೋಡು ಸತ್ಯಾಗ್ರಹದ ಪ್ರೇರಣೆಯಿಂದ ಬೆಳೆದು ಬಂದವರು. ಇವರು ರೈತ ಪರವಾಗಿದ್ದು ಉಳುವವನೇ ಭೂಮಿಯ ಒಡೆಯನಾಗಬೇಕೆಂಬ ಧೋರಣೆಗೆ ಮೊದಲಿಂದಲೂ ಬದ್ಧರಾಗಿದ್ದರು.

            ಇವರು 1980 ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಹಾಗೆ ಮಂತ್ರಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಸಿದ್ಧರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಹಾಗೆ ಬಗರ್ ಹುಕುಂ ಪತ್ರವನ್ನು ರೈತರಿಗೆ ಕೊಡಿಸಲು ಕೊನೆಯವರೆಗೂ ಪ್ರಯತ್ನಪಟ್ಟರು. ಇವರ ನೇರ ನುಡಿ, ಸರಳತೆ, ನಿಷ್ಪಕ್ಷಪಾತ ಅಭಿಪ್ರಾಯ ಎಲ್ಲರ ಮನಸ್ಸಿನಲ್ಲಿ ಉನ್ನತ ಭಾವನೆ ಮೂಡಿಸುತ್ತಿತ್ತು. ಕಾಗೋಡು ಸತ್ಯಾಗ್ರಹ ತಿಮ್ಮಪ್ಪನವರಂತೆ ಅನೇಕರನ್ನು ಧೀಮಂತ ನಾಯಕರನ್ನಾಗಿಸಿದ ಹೋರಾಟವಾಗಿ ತನ್ನ ಪ್ರಭಾವಬೀರಿತ್ತು.

            ಬಿ.ಎಸ್. ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯ, ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಜನಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಂಡವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಾರಂಭಗೊಂಡು ಸಮಾಜಮುಖಿಯಾಗಿ ಇವರ ಹೋರಾಟ ನಿರಂತರವಾಗಿ ಬೆಳೆದು ಬಂದಿತು. ಇವರು ಹೋರಾಟದ ಮನೋಭಾವದವರು. ಒಂದೇ ಕಡೆ ಕೂರುವ ಜಾಯಮಾನವೂ ಇವರದಲ್ಲ”. ಇಡೀ ನಾಡನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು.

            ಯಡಿಯೂರಪ್ಪನವರ ರಾಜಕೀಯ ಜೀವನ ಪುರಸಭೆಯಿಂದ ಪ್ರಾರಂಭವಾಗಿ ರಾಜ್ಯದ ಮುಖ್ಯಮಂತ್ರಿಯಾದದ್ದು, ಇವರ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಇವರು 1983 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ನಂತರ ನಿರಂತರವಾಗಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ಹಾಗೆ ಒಂದು ಬಾರಿ ಲೋಕಸಭಾ ಸದಸ್ಯರಾಗಿದ್ದರು. ಇವರು ಉಪಮುಖ್ಯಮಂತ್ರಿಯಾಗಿ, ಮುಖ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷರಾಗಿ ಮತ್ತು ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಸಂಧ್ಯಾಸುರಕ್ಷ ಯೋಜನೆ, ಆಸರೆ, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು, ವಿಶ್ವ ಬಂಡವಾಳ ಹೂಡಿಕೆ ಮೊದಲಾದುವನ್ನು ಜಾರಿಗೊಳಿಸಿ ಜನಪ್ರಿಯ ವ್ಯಕ್ತಿಯಾಗಿ ಬೆಳೆದರು.

            ಡಿ.ಹೆಚ್. ಶಂಕರಮೂರ್ತಿಯವರು ನಿಷ್ಥಾವಂತ ರಾಜಕಾರಣಿ. ಇವರು ಹಿರಿಯ ಮುತ್ಸದ್ಧಿ ಮತ್ತು ಉತ್ತಮ ಸಂಘಟನಾಕಾರ. ಇವರು ಬಾಲ್ಯದಿಂದಲೇ ಹಿರಿಯ ರಾಜಕಾರಣಿಗಳಿಂದ ದೇಶಪ್ರೇಮ ಮತ್ತು ಆಡಳಿತದ ತರಬೇತಿ ಪಡೆದವರು. ಇವರ ಬೌದ್ಧಿಕ ವ್ಯಕ್ತಿತ್ವದಂತೆ ಬಾಹ್ಯ ವ್ಯಕ್ತಿತ್ವವು ವಿಶಿಷ್ಟ ಮತ್ತು ಸೂಕ್ಷ್ಮವಾದುದು.

                ಇವರು ಬಾಲ್ಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಮನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎಲ್ಲಾ ದಿಗ್ಗಜರು ಭೇಟಿ ಮಾಡಿ, ಇವರ ಮನೆಯಲ್ಲೇ ತಂಗುತ್ತಿದ್ದರು. ಹೀಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದÀ ಸರಸಂಘ ಸಂಚಾಲಕರಾಗಿದ್ದ ಗುರೂಜಿಯವರು, ಬಾಳಾಸಾಹೇಬ್ ದೇವರಸ್ ಮೊದಲಾದವರ ಸಂಪರ್ಕ ಶಂಕರಮೂರ್ತಿಯವರಿಗೆ ಲಭ್ಯವಿತ್ತು. ಹಾಗೆ ಜನಸಂಘದ ಮುಖಂಡರಾದ ವಾಜಪೇಯಿ, ಆಡ್ವಾಣಿ, ಜಗನ್ನಾಥ್‍ರಾವ್ ಜೋಷಿ ಮೊದಲಾದವರು ಇವರ ಮನೆಯಲ್ಲಿ ಉಳಿದು ಆತಿಥ್ಯ ಪಡೆದವರಾಗಿದ್ದರು. ಇವರೆಲ್ಲರೊಂದಿಗೆ ತಾತ್ವಿಕ ಚಿಂತನೆ ನಡೆಸಿ ತಮ್ಮ ಅನುಭವದ ಮೂಸೆಯಲ್ಲಿ ಮತ್ತಷ್ಟು ರಾಜಕೀಯ ಸ್ಪಷ್ಟತೆಯನ್ನು ಪಡೆದುಕೊಂಡಿದ್ದರು. ಹೀಗಾಗಿ ಇವರ ಕುಟುಂಬದ ಪರಿಸರ ಉತ್ತಮ ಸಾಂಸ್ಕೃತಿಕ ಸಭ್ಯತೆಯನ್ನು ದೇಶಪ್ರೇಮವನ್ನು ಬಿತ್ತುವ ಮೂಲ ನೆಲೆಯಾಗಿತ್ತು. ಇಡೀ ಕುಟುಂಬ ದೇಶಭಕ್ತಿ ತರಬೇತಿ ನೀಡುವ ಕೇಂದ್ರವಾಗಿ ತನ್ನ ಶೋಭೆಯನ್ನು ಹೆಚ್ಚಿಸಿಕೊಂಡಿತ್ತು.

            ಡಿ.ಹೆಚ್. ಶಂಕರಮೂರ್ತಿಯವರು ಬಾಲ್ಯದಿಂದ ಯೌವನಾವಸ್ಥೆವರೆಗೆ ದೇಶದ ಉದಾತ್ತ ನಾಯಕರ ಆದರ್ಶಗಳನ್ನು ನೋಡಿ ಆದರಿಸಿ ಅವುಗಳನ್ನು ತನ್ನಲ್ಲಿ ಅಳವಡಿಸಿಕೊಂಡವರು. ಇವರ ರಾಜಕಾರಣ ಸೈದ್ಧಾಂತಿಕ ಶಿಸ್ತಿನಿಂದ ಕೂಡಿತ್ತು. ಇವರು ರಾಷ್ಟ್ರೀಯ ವಾದಿಗಳಾಗಿ ದೇಶಭಕ್ತಿಯನ್ನು ತನ್ನ ಜೀವನದಲ್ಲಿ ಮತ್ತು ರಾಜಕಾರಣದಲ್ಲಿ ಅಳವಡಿಸಿಕೊಂಡಿದ್ದರು. ಶಂಕರಮೂರ್ತಿಯವರು ಹಲವಾರು ಹೋರಾಟಗಳನ್ನು ನಡೆಸಿ ರಾಜಕಾರಣವನ್ನು ಪ್ರಾರಂಭಿಸಿದವರು.        ದೇಶದ ಮೇಲೆ ಶ್ರೀಮತಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಆಗ ವಿರೋಧಪಕ್ಷದ ಕರ್ನಾಟಕ ಶಾಖೆಯ ಪದಾಧಿಕಾರಿಯಾಗಿದ್ದ ಶಂಕರಮೂರ್ತಿಯವರು ಮತ್ತು ಇವರ ಕುಟುಂಬದ ಅನೇಕರು ತುರ್ತು ಪರಿಸ್ಥಿತಿ ವಿರೋಧಿಸಿ ಪ್ರತಿಭಟನೆ ಮಾಡಿ ಜೈಲು ವಾಸಿಯಾಗುತ್ತಾರೆ. ಇವರ ಕುಟುಂಬದ 5 ಮಂದಿ ಮಹಿಳೆಯರು ಮತ್ತು 12 ಮಂದಿ ಪುರುಷರು ಸೇರಿದಂತೆ 17 ಮಂದಿಯನ್ನು ಬಂಧಿಸಿ ವಿವಿಧ ಜೈಲುಗಳಿಗೆ ಕಳುಹಿಸುತ್ತಾರೆ. ಒಂದೇ ಕುಟುಂಬದ 17 ಮಂದಿಯನ್ನು ತುರ್ತು ಪರಿಸ್ಥಿತಿಯಲ್ಲಿ ಬಂಧಿಸಿ ಜೈಲುಪಾಲು ಮಾಡಿದ್ದು ಒಂದು ರಾಷ್ಟ್ರೀಯ ದಾಖಲೆ. ಶಂಕರಮೂರ್ತಿಯವರು 19 ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದರು. ಶಂಕರಮೂರ್ತಿಯವರು ಸೆರೆಮನೆಯಲ್ಲಿದ್ದಾಗ ತಂದೆ ಮರಣಿಸುತ್ತಾರೆ, ಇವರ ತಂದೆಯ ಅಂತಿಮ ಸಂಸ್ಕಾರ ನೆರವೇರಿಸಲೂ ಸಾಧ್ಯವಾಗದೆ ದುಃಖಿತರಾಗುತ್ತಾರೆ. ತುರ್ತು ಪರಿಸ್ಥಿತಿ ಎಲ್ಲಾ ವಿರೋಧ ಪಕ್ಷದವರನ್ನೂ ಒಂದುಗೂಡಿಸುತ್ತದೆ. ಒಂದು ಹೊಸ ರಾಜಕೀಯ ಪಕ್ಷದ ಉದಯಕ್ಕೆ ಕಾರಣವಾಗುತ್ತದೆ.

            ಶಂಕರಮೂರ್ತಿಯವರು ಸಹೃದಯಿ ಕರುಣಾಮಯಿಯಾಗಿದ್ದರು. ಇವರು ಬಾಲ್ಯದಿಂದ ಎಲ್ಲರ ಜೊತೆ ಸಹನೆಯಿಂದ, ವಿಶ್ವಾಸ ಪೂರ್ವಕವಾಗಿ ಸ್ನೇಹಮಯಿಯಾಗಿರುವುದು ಇವರ ವ್ಯಕ್ತಿತ್ವದ ವಿಶೇಷ. ಇವರು ದೊಡ್ಡ ಕೂಡು ಕುಟುಂಬ ಹೆಚ್ಚು ಜನರಿಂದ ಕೂಡಿದ್ದು, ಇದರಿಂದ ಎಲ್ಲರೊಡನೆ ಹೊಂದಾಣಿಕೆಯಿಂದ ಜೀವನ ಮಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಇವರು ಬಾಲ್ಯದಿಂದ ಜನಸಂಘದ ಪ್ರಭಾವ ಹೊಂದಿ ಎಲ್ಲರ ಜೊತೆ ಶಿಸ್ತಿನಿಂದ ಸಹವರ್ತಿಯಾಗಿ ಕೂಡಿದ ಜೀವನ ಇವರದಾಗಿತ್ತು. ಇವರು ಶ್ರೀಮಂತ ಕುಟುಂಬದಿಂದ ಬಂದರೂ ಅಹಂಕಾರವಿಲ್ಲದೆ ಸೌಜನ್ಯ ಪೂರಕ ನಡವಳಿಕೆಯನ್ನು ಹೊಂದಿರುತ್ತಾರೆ. ಇವರು ಪರಿಪಕ್ವ ಮನಸ್ಸು ಉದಾತ್ತ ಧ್ಯೇಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿತ್ತು. ಇವರು ಬಾಲ್ಯದಿಂದ ಮುಂದುವರೆದಂತೆ ಎಲ್ಲಾ ಹಂತಗಳಲ್ಲಿ ತಮ್ಮ ಸಾಮೀಪ್ಯ ಇರುವ ಎಲ್ಲಾ ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿರುವ ಕೆಲವು ಉದಾಹರಣೆಗಳನ್ನು ಪ್ರಸ್ತುತ ಪಡಿಸಿರುವುದು ಇವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹುದ್ದಾಗಿದೆ.

            ಡಿ.ಹೆಚ್.ಶಂಕರಮೂರ್ತಿಯವರು ಪ್ರಾಮಾಣಿಕತೆಗೊಂದು ಸಾಕ್ಷಿಯಾಗಿ ಹೆಗ್ಗಡೆಯವರ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ  ಧಾರವಾಡದ ಡೈರಿ ಸಮುಚ್ಛಯ ಕಟ್ಟಲು 7 ಕೋಟಿ 70 ಲಕ್ಷ ರೂಪಾಯಿಯನ್ನು ನಿಗದಿ ಮಾಡಲಾಯಿತು. ಈ ಸಮುಚ್ಛಯದ ಕಾಮಗಾರಿಯನ್ನು ಕೈಗೆತ್ತಿಕೊಂಡು ನಿಗದಿತ ಸಮಯಕ್ಕಿಂತ ಮೊದಲೇ ಪೂರ್ಣಗೊಳಿಸಿದರು. ಅಷ್ಟೇ ಅಲ್ಲದೆ ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಕಡಿಮೆ ವೆಚ್ಚ ಮಾಡಿ ಉಳಿದ 1 ಕೋಟಿ 10 ಲಕ್ಷ ಹಣವನ್ನು ಸರ್ಕಾರಕ್ಕೆ ಉಳಿಸಿ ಹಿಂದಿರುಗಿಸಿದರು. ಇದು ಇವರ ಕಾರ್ಯದಲ್ಲಿ ತೋರಿದ ಶ್ರದ್ಧೆ ಮತ್ತು ಪ್ರಾಮಾಣಿಕತೆಗೆ ದ್ಯೋತಕವಾಗಿದೆ.

            ಡಿ.ಹೆಚ್. ಶಂಕರಮೂರ್ತಿಯವರು ಹೊಸದಾಗಿ ಸ್ಥಾಪಿತಗೊಂಡ ನೈರುತ್ಯ ಪದವೀಧರ ಕ್ಷೇತ್ರವನ್ನು 1988 ರಿಂದ 2018 ರವರೆಗೆ ಪ್ರತಿನಿಧಿಸಿ ಸತತವಾಗಿ ವಿಜೇತರಾಗಿದ್ದರು. ಇವರ ರಾಜಕೀಯ ಜೀವನ ಸೋಲನ್ನು ಹಾಸಿ, ಹೊದ್ದು ಮಲಗಿದ್ದು ನಂತರ ಸೋಲಿಲ್ಲದ ಸರದಾರನನ್ನಾಗಿ ಮಾಡಿದ್ದು ಜೀವನದ ಒಂದು ಹೊಸ ಶೆಖೆಯನ್ನು ಉಂಟು ಮಾಡಿತು. ಡಿ.ಹೆಚ್. ಶಂಕರಮೂರ್ತಿಯವರು ಶಾಸಕರಾಗುವ ಮುನ್ನವೇ ಆಡಳಿತದ ಅನುಭವ ಮತ್ತು ಸೂಕ್ಷ್ಮತೆಯ ಅರಿವನ್ನು ಹೊಂದಿದವರು. ಇದರ ಹಿನ್ನೆಲೆಯಲ್ಲಿ ಇವರು ಸರ್ಕಾರದ ಎಲ್ಲಾ ಇಲಾಖೆಗಳ ಬಗ್ಗೆ ತಿಳುವಳಿಕೆ ಪಡೆದು ಜನಪರ ವಿಚಾರಗಳನ್ನು ಸದನದಲ್ಲಿ ಚರ್ಚಿಸುತ್ತಿದ್ದರು. ಸದನದಲ್ಲಿ ಕೇವಲ ಹಾಜರಾತಿಯನ್ನಲ್ಲದೆ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇವರು ಶಿಸ್ತಿನಿಂದ ಸದನದ ಹಾಗೂ ಸಮಿತಿಗಳ ಕಲಾಪಗಳಲ್ಲಿ ಕ್ರಿಯಾಶೀಲರಾಗಿದ್ದರು.

            ಇವರು ಉನ್ನತ ಶಿಕ್ಷಣ ಇಲಾಖೆಯನ್ನು ಕ್ರಿಯಾಶೀಲವಾಗುವಂತೆ ಮಾಡಿದರು. ಹಾಗೆ ಎಲ್ಲಾ ಯುವಕರು ಉನ್ನತ ಶಿಕ್ಷಣ ಪಡೆಯಬೇಕೆಂದು ಮಹದಾಸೆಯಿಂದ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳನ್ನು ಸ್ಥಾಪಿಸಿದರು. ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಪದವಿ ಕಾಲೇಜುಗಳು ಇರಲಿಲ್ಲ. ಹಾಗೆ ವಿಜ್ಞಾನ ಪದವಿ ಕಾಲೇಜುಗಳೂ ಇರಲಿಲ್ಲ. ಇವರು ಉನ್ನತ ಶಿಕ್ಷಣ ಸಚಿವರಾಗಿ ರಾಜ್ಯದಲ್ಲಿ 184 ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಿದರು. ಈ ಎಲ್ಲಾ 184 ಪದವಿ ಕಾಲೇಜುಗಳ ಕಟ್ಟಡ ಮತ್ತು ಮೂಲ ಸೌಕರ್ಯ ಒದಗಿಸಲು ಪ್ರತಿ ಕಾಲೇಜಿಗೂ ಕೋಟಿ, ಕೋಟಿ ಹಣ ಮಂಜೂರು ಮಾಡಿದರು. ಇದರಿಂದ ಪ್ರತಿ ಕಾಲೇಜುಗಳ ಕಟ್ಟಡಕ್ಕೆ 3 ಕೋಟಿ, ಹುದ್ದೆ ಸಮೇತ ಉಪನ್ಯಾಸಕರನ್ನು, ಮೂಲ ಸೌಕರ್ಯಗಳಿಗೆ 10 ಲಕ್ಷ ನೀಡಿ ವ್ಯವಸ್ಥಿತವಾಗಿ ಕಾಲೇಜುಗಳು ನಡೆಯಲು ಸಾಧ್ಯವಾಗುವಂತೆ ಮಾಡಿದರು. ಈ ರೀತಿಯ ಕಾರ್ಯ ಇಡೀ ರಾಷ್ಟ್ರದ ಇತಿಹಾಸದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿತ್ತು ಹಾಗೂ ವೃತ್ತಿಪರ ತಾಂತ್ರಿಕ ಪದವಿ ಕಾಲೇಜುಗಳನ್ನು ಸ್ಥಾಪಿಸಿದರು. 

             ಸಮಾಜ ಅನಾಗರೀಕತೆಯಿಂದ ನಾಗರೀಕತೆ ಎಡೆಗೆ ಬದಲಾವಣೆಯಾದಂತೆ ಸರ್ಕಾರದ ಪದ್ಧತಿಗಳಲ್ಲೂ ವಿಕಾಸದ ಸ್ಥಿತ್ಯಂತರಗಳಾದವು. ಅವುಗಳೆಂದರೆ ನಿರಂಕುಶಪ್ರಭುತ್ವ,    ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವಗಳು ಉಂಟಾದವು. ಈ ದಿಸೆಯಲ್ಲಿ ನಾಯಕತ್ವವೂ ಸಹ ಸ್ಥಿತ್ಯಂತರಕ್ಕೊಳಗಾಯಿತು. ನಿರಂಕುಶ ರಾಜರಿಂದ ಪ್ರಜಾಪ್ರತಿನಿಧಿಗಳಾಗಿ ಬದಲಾವಣೆ ಪಡೆದುಕೊಂಡಿದ್ದು ಒಂದು ಇತಿಹಾಸ. ನಾಯಕತ್ವ ವಿವಿಧ ರಾಜ್ಯ ಮತ್ತು ಸರ್ಕಾರ ಪದ್ಧತಿಗಳಲ್ಲಿ ಮಹತ್ವವಾದದ್ದು. ನಾಯಕರಾದವರು ಸರ್ಕಾರವನ್ನು, ಜನರನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ. ಜನನಾಯಕರು ದೂರದೃಷ್ಟಿ ನಿಷ್ಪಕ್ಷಪಾತತೆ, ಪಾರದರ್ಶಕತೆಯನ್ನು ತಮ್ಮ ಆಡಳಿತದ ಉಸಿರನ್ನಾಗಿಸಿಕೊಂಡಿರಬೇಕು. ಆಗ ಮಾತ್ರ ಇವರು ರಾಜ್ಯಕ್ಕೆ ಏನಾದರೊಂದು ಕೊಡುಗೆ ನೀಡಲು ಸಾಧ್ಯ.

            ಶಿವಮೊಗ್ಗ ಜಿಲ್ಲೆಯ ರಾಜಕೀಯ ನಾಯಕರು ಸ್ವಾತಂತ್ರ್ಯ ಹೋರಾಟಗಾರರು ಈ ನಾಯಕರು ಸ್ವಾತಂತ್ರಕ್ಕಾಗಿ ದೇಶ ಭಕ್ತಿಯಿಂದ ಹೋರಾಟ ಮಾಡಿ ನಾಡಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡವರು. ಇವರಲ್ಲಿ ಅನೇಕರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಇವರು ಜನಪರ ಹೋರಾಟದಿಂದ ಸಮಾಜದ ಅಭಿವೃದ್ಧಿಗೆ ನಿಷ್ಪಕ್ಷಪಾತ ಆಡಳಿತ ನಡೆಸಿದವರು. ಇವರ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚು ಜನಪ್ರಿಯವಾಗಿತ್ತು. ಇವರಲ್ಲಿ ಕಡಿದಾಳ್ ಮಂಜಪ್ಪ ಮತ್ತು ಶಾಂತವೇರಿ ಗೋಪಾಲಗೌಡರ ಸರಳತೆ, ಸಜ್ಜನಿಕೆ, ಸತ್ಯನಿಷ್ಟೆ ಅಪಾರ ಜನಮನ್ನಣೆ ಗಳಿಸಿತ್ತು.

            ‘ಕಾಗೋಡು ಸತ್ಯಾಗ್ರಹ’ ಜಿಲ್ಲೆಯ ಹೋರಾಟದ ನಾಯಕರನ್ನು ಸೃಷ್ಟಿ ಮಾಡಿದ ಕೀರ್ತಿಗೆ ಭಾಜನವಾಗಿದೆ. ಇವರು ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ತಮ್ಮ ಉಸಿರನ್ನಾಗಿಸಿಕೊಂಡಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿದ್ದ ಭೂಮಾಲೀಕರು ಮತ್ತು ಗೇಣಿದಾರರ ನಡುವೆ ಇದ್ದಂತಹ ಅಸಮಾನತೆಯನ್ನು ಸಂಘರ್ಷವಿಲ್ಲದೆ ತಮ್ಮ ರಾಜಕೀಯ ಚತುರತೆಯಿಂದ ನಿವಾರಣೆ ಮಾಡಿದವರು. ಇವರೆಲ್ಲರೂ ಭೂ ಹೀನರಿಗೆ ಗೇಣಿದಾರರಿಗೆ ಭೂ ಒಡೆತನವನ್ನು ನೀಡಿ ಜೀವನಾಧಾರ ಉತ್ಪಾದನಾ ಆಕರವನ್ನು ಒದಗಿಸಿದ ಮಹನೀಯರು. ಕಡಿದಾಳ್ ಮಂಜಪ್ಪನವರು ಗೇಣಿದಾರರನ್ನು, ದೇವಸ್ಥಾನದ ಕೊಡಿಗೆ ಜಮೀನಲ್ಲಿ ಗೇಣಿದಾರರಾಗಿದ್ದ ರೈತರನ್ನು ಭೂ ಒಡೆಯರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಕಾರ್ಯದಲ್ಲಿ ಶಾಂತವೇರಿ ಗೋಪಾಲಗೌಡರು, ಬಂಗಾರಪ್ಪನವರು, ಕಾಗೋಡು ತಿಮ್ಮಪ್ಪನವರು ಮತ್ತು ಜೆ.ಹೆಚ್. ಪಟೇಲರು ಸಮಾಜವಾದಿ ಹಿನ್ನೆಲೆಯಿಂದ ತಮ್ಮ ಹೋರಾಟ ಮಾಡಿ ಜಿಲ್ಲೆಯ ಬಡ ರೈತರಿಗೆ ಭೂ ಒಡೆತನದ ಹೊಸ ಅಂತಸ್ತನ್ನು ನೀಡಿದವರು. ಬಂಗಾರಪ್ಪನವರು 50 ಸಾವಿರ ಗೇಣಿದಾರರಿಗೆ ಭೂ ಒಡೆತನವನ್ನು ನೀಡಿದವರು. ಶಿವಮೊಗ್ಗ ಜಿಲ್ಲೆಯನ್ನು ‘ಸಮಾಜವಾದದ ತೊಟ್ಟಿಲು’ ಎಂದು ಕರೆದಿದ್ದಾರೆ. ಜೆ.ಹೆಚ್. ಪಟೇಲರು ಕರ್ನಾಟಕ ಕಂಡ ಒಬ್ಬ ಅಪ್ರತಿಮ ಸೃಜನಶೀಲ ಸಮಾಜವಾದಿ ಹೋರಾಟಗಾರ. ಇವರು ಚಿಂತಕರಾಗಿ ಸ್ಫೂರ್ತಿದಾಯಕ ಚೈತನ್ಯಶೀಲ ಪ್ರಬುದ್ಧನಾಯಕರಾಗಿ ಬೆಳೆದವರು. ಇವರು ತಮ್ಮ ಆಡಳಿತಾವಧಿಯಲ್ಲಿ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಒದಗಿಸುವ ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡಿ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದವರು.

            ಬಿ.ಎಸ್. ಯಡಿಯೂರಪ್ಪ ಮತ್ತು ಡಿ.ಹೆಚ್. ಶಂಕರಮೂರ್ತಿಯವರು ಇವರೂ ಸಹ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಜನನಾಯಕರಾದವರು. ಇವರು ಜನಸಂಘ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳೆದು ದೇಶಪ್ರೇಮವನ್ನು ಮೈಗೂಡಿಸಿಕೊಂಡವರು. ಇವರುಗಳೆಲ್ಲಾ ಮುಖ್ಯಮಂತ್ರಿಗಳಾಗಿ, ಮಂತ್ರಿಗಳಾಗಿ ಜನಪರ ಹೋರಾಟದಲ್ಲಿ ತೊಡಗಿಸಿಕೊಂಡು ಬಡವರ ಪರ ಕಾರ್ಯ ನಿರ್ವಹಿಸಿ ಜನಪ್ರಿಯ ನಾಯಕರಾದವರು. ಕಾಗೋಡು ತಿಮ್ಮಪ್ಪನವರು ತಮ್ಮ ಅಧಿಕಾರದ ಕೊನೆಯ ದಿನಗಳಲ್ಲೂ ಸಹ ಬಡ ಭೂ ರಹಿತರಿಗೆ ಬಗರ್ ಹುಕುಂ ಪತ್ರ ಕೊಡಿಸುವಲ್ಲಿ ಯಶಸ್ವಿಯಾದವರು. ಈ ಎಲ್ಲಾ ಜಿಲ್ಲೆಯ ನಾಯಕರ ಸೈದ್ಧಾಂತಿಕ ನಿಲುವು, ತಾತ್ವಿಕ ಬದ್ಧತೆ, ಜನಪರ ಹೋರಾಟಗಳು ಇಡೀ ಕರ್ನಾಟಕಕ್ಕೆ ಮಾದರಿಯಾಗಿವೆ ಮತ್ತು ಅನುಕರಣೀಯವಾಗಿವೆ.

             ನಮ್ಮ ಪ್ರಸ್ತುತ ಅಧ್ಯಯನದ ಕೇಂದ್ರ ವ್ಯಕ್ತಿ ಶಂಕರಮೂರ್ತಿಯವರು ಕರ್ನಾಟಕ ಕಂಡ ಒಬ್ಬ ನಿಷ್ಟಾವಂತ ರಾಜಕಾರಣಿ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮತ್ತು ಜನಸಂಘದ ಸಂಪರ್ಕದಿಂದ ಶಿಸ್ತು ಮತ್ತು ದೇಶ ಭಕ್ತಿಯನ್ನು ತನ್ನದನ್ನಾಗಿಸಿಕೊಂಡವರು. ಇವರ ಕುಟುಂಬವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಜನಸಂಘದ ಕೇಂದ್ರವಾಗಿತ್ತು. ಶಂಕರಮೂರ್ತಿಯವರು ರಾಷ್ಟ್ರಭಕ್ತಿ, ತಾತ್ವಿಕ ಬದ್ಧತೆ ಮತ್ತು ದೇಶಪ್ರೇಮವನ್ನು ತನ್ನ ವ್ಯಕ್ತಿತ್ವದಲ್ಲಿ ಬೆಳೆಸಿಕೊಂಡವರು. ಇವರು ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿ ಸಮಾಜಮುಖಿಯಾಗಿದ್ದರು.

            ರಾಜಕಾರಣದ ಅಪರೂಪದ ಆದರ್ಶ : ಪ್ರಸ್ತುತ ಅಧ್ಯಯನದ ನಾಯಕರ ವ್ಯಕ್ತಿತ್ವದ ಲಕ್ಷಣಗಳೆಂದರೆ ನಿಸ್ವಾರ್ಥಸೇವೆ, ಪ್ರಾಮಾಣಿಕತೆ, ಪಾರದರ್ಶಕ ಆಡಳಿತ, ಸರಳತೆ ಮೊದಲಾದುವು ಇವರ ಮೌಲ್ಯಯುತ ರಾಜಕಾರಣವಾಗಿದ್ದವು. ಶಿವಮೊಗ್ಗ ಜಿಲ್ಲೆಯ ಕಡಿದಾಳ್ ಮಂಜಪ್ಪನವರು ಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ 32 ವರ್ಷ ರಾಜಕಾರಣ ಮಾಡಿದರೂ ಒಂದು ಸ್ವಂತ ಮನೆಯನ್ನು ಹೊಂದಿರಲಿಲ್ಲ. ಹಾಗೆ ಮಂತ್ರಿ ಪದವಿ ಬಿಟ್ಟ ಮೇಲೆ ಪುನಃ ವಕೀಲಿ ವೃತ್ತಿ ಅನುಸರಿಸಿ ತನ್ನ ಜೀವನ ಸಾಗಿಸಿದ ಅಪ್ರತಿಮ ಪ್ರಾಮಾಣಿಕ, ಇದು ಚರಿತ್ರಾರ್ಹ ಘಟನೆ. ಕಡಿದಾಳ್ ಮಂಜಪ್ಪನವರ ಬಗ್ಗೆ ಸರ್.ಎಂ. ವಿಶ್ವೇಶ್ವರಯ್ಯನವರು ಒಂದು ಮಾತನ್ನು ಹೇಳುತ್ತಾ “ನಾನು ತಿಂಗಳಿಗೊಮ್ಮೆ ಕರ್ನಾಟಕದ ಪ್ರಾಮಾಣಿಕ ರಾಜಕಾರಣಿಯನ್ನು ಭೇಟಿ ಮಾಡಿ ಚೈತನ್ಯ ಪಡೆಯುತ್ತೇನೆ”. ಈ ಅಭಿಪ್ರಾಯ ಮಂಜಪ್ಪನವರ ಮೌಲ್ಯಯುತ ನಿಸ್ವಾರ್ಥ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ. ಇವರಂತೆ ಶಾಂತವೇರಿ ಗೋಪಾಲಗೌಡರು ಪ್ರಾಮಾಣಿಕ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಇವರು ಪಕ್ಷ ನಿಷ್ಟೆ ಮತ್ತು ತತ್ವ ನಿಷ್ಟೆಗೆ ಹೆಸರಾಗಿದ್ದರು. ಇವರು ಎಂದೂ ಯಾರ ಜೊತೆಯೂ ತಾತ್ವಿಕ ಹೊಂದಾಣಿಕೆಯನ್ನು ಮಾಡಿಕೊಂಡವರಲ್ಲ. ಇವರದು ಆದರ್ಶದ ಅನುಕರಣೀಯ ರಾಜಕಾರಣವಾಗಿತ್ತು. ಶಿವಮೊಗ್ಗ ಜಿಲ್ಲೆಯ ಇತರ ಎಲ್ಲಾ ನಾಯಕರು ಜನಪರವಾಗಿದ್ದರು ಮತ್ತು ಬಡವರ ಪರವಾಗಿದ್ದರು. ಇವರೆಲ್ಲರ ಪ್ರಮುಖಗುರಿ ‘ಉಳುವವನೇ ಭೂಮಿಯ ಒಡೆಯ’ ಎಂಬ ಧೋರಣೆಗೆ ಬದ್ಧರಾಗಿ ಬಡಗೇಣಿದಾರರಿಗೆ ಭೂಮಿಯ ಒಡೆತನ ನೀಡಿದರು. ಇವರು ಹೊಸ ಅಂತಸ್ತನ್ನು ಜೀವನಾಧಾರ ಉತ್ಪಾದನಾ ಆಕರದ ಒಡೆತನದ ಭದ್ರತೆಯನ್ನು ನೀಡಿದ ಮಹನೀಯರು.

            ಡಿ.ಹೆಚ್. ಶಂಕರಮೂರ್ತಿಯವರು ಸರ್ಕಾರದ ಹಣವನ್ನು ಅಪವ್ಯಯ ಮಾಡದಂತೆ ಪಾರದರ್ಶಕವಾಗಿ ಆಡಳಿತ ನಡೆಸಿದವರು. ಇವರು ಶ್ರೀಮಂತ ವಣಿಕ ಕುಟುಂಬಕ್ಕೆ ಸೇರಿದವರಾಗಿದ್ದರೂ ಇನ್ನಷ್ಟು ಹಣವನ್ನು ಸಂಪಾದಿಸಬೇಕೆಂಬ ಆಮಿಷಕ್ಕೆ ಒಳಗಾಗದ ನೈಜ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯಾಗಿದ್ದಾರೆ. ಇವರು ತತ್ವಬದ್ಧರು, ಪಕ್ಷ ನಿಷ್ಟರು, ಪ್ರಾಮಾಣಿಕವಾಗಿ ಆಡಳಿತ ನಡೆಸಿದವರು. ಇತ್ತೀಚಿನ ಕಲುಷಿತ ಮತ್ತು ಭ್ರಷ್ಟ ರಾಜಕಾರಣದಿಂದ ಬೇಸತ್ತು ನಮ್ಮ ಯುವಕರು ಶಿವಮೊಗ್ಗ ನಾಯಕರನ್ನು ಮೆಚ್ಚಿ ಇಂಥಹ ಮೌಲ್ಯಯುತ ರಾಜಕಾರಣಿಗಳನ್ನು ಚುನಾಯಿಸಬೇಕೆಂದು ಪಣತೊಟ್ಟರೆ ಅಧ್ಯಯನದ ಫಲಿತಾಂಶ ಹೆಚ್ಚು ಮೌಲ್ಯಯುತವಾಗುತ್ತದೆ ಎಂಬ ಆಶಯ.

ಕೊನೆಯ ಮಾತು/ ಉಪಸಂಹಾರ

ರಾಜ್ಯದ ಸ್ವತಂತ್ರ ಪೂರ್ವದಲ್ಲಿದ್ದ ನಾಯಕರು ಸಮಾಜ ಸೇವೆಯನ್ನು ತಮ್ಮ ರಾಜಕಾರಣದಲ್ಲಿ ಅನ್ವಯಿಸಿ ಸಮಾಜದ ಮೆಚ್ಚುಗೆ ಪಡೆಯುತ್ತಿದ್ದರು. ನಂತರದ ದಿನಗಳಲ್ಲಿ ರಾಜಕಾರಣದಲ್ಲಿ ಸ್ಥಿತ್ಯಂತರ ಉಂಟಾಗಿ ಕಂಟ್ರಾಕ್ಟರುಗಳು, ಹಣವಂತರು ನಂತರ ರೌಡಿಗಳು, ಭೂಮಾಫಿಯಾದವರು ಮತ್ತು ಗಣಿ ಧಣಿಗಳು ಹಂತ ಹಂತವಾಗಿ ರಾಜಕಾರಣದ ಮುನ್ನೆಲೆಗೆ ಬಂದರು. ಈಗ ಒಬ್ಬ ರಾಜಕಾರಣಿ ಬಹುವೃತ್ತಿಯ ಪ್ರವೃತ್ತಿ ಅಂದರೆ ಭೂಮಾಫಿಯಾ, ಗಣಿದಣಿಯಾಗಿ ರಾಜಕಾರಣವನ್ನು ಹಿಡಿದು ರಾಜಕಾರಣವನ್ನು ಹಣ ಅಧಿಕಾರ ಪಡೆಯುವ ದಂಧೆಯನ್ನಾಗಿಸಿರುವುದು ಶೋಚನೀಯ ಸಂಗತಿಯಾಗಿದೆ.

ಪರಾಮರ್ಶನ ಗ್ರಂಥಗಳು

  1. K.K. Ghai- Rural development in India  - Himalaya Publishing house
  2. Dr. Nishi Sharma – E-Governance.
  3. H.M.Rajashekara – Indian Government and Politics.
  4. ಕಡಿದಾಳ್ ಮಂಜಪ್ಪ - ನನಸಾಗದ ಕನಸು, ಕಡಿವಾಳ್ ಪ್ರಕಾಶನ, ಬೆಂಗಳೂರು, 1987.
  5. ಸಾಧನೆಯ ಹರಿಕಾರ ಶ್ರಿ ಕಾಗೋಡು ತಿಮ್ಮಪ್ಪ ಅಭಿನಂದನಾ ಗ್ರಂಥ - ಹೆಚ್. ಸಿ. ಬೋರಲಿಂಗಯ್ಯ.
  6. ಸ್ಥಿತ ಪ್ರಜ್ಞ - ಶ್ರಿ ಡಿ.ಹೆಚ್. ಶಂಕರಮೂರ್ತಿ ಅಭಿನಂದನಾ ಗ್ರಂಥ. ಎಮ್ ಎನ್. ಸುಂದರ್‍ರಾಜ್ - ಡಿ.ಹೆಚ್. ಶಂಕರಮೂರ್ತಿ ಅಭಿನಂದನಾ ಸಮಿತಿ ಶಿವಮೊಗ್ಗ.
  7. Dr.Thippeswamy :  Deemanthanayaka -J.H.Patel
  8. ಶಾಂತವೇರಿ ಗೊಪಾಲಗೌಡ- ರಾಜಕೀಯ ಹಾಗೂ ಸಾಂಸ್ಕøತಿಕ ಸಂದರ್ಭದಲ್ಲಿ – ಒಂದು ಅಧ್ಯಯನ - ಪ್ರೌಢ ಪ್ರಬಂಧ. ಡಾ. ಹೊನ್ನಾಂಜನೇಯ.
  9. ಕಾಗೋಡು ಸತ್ಯಾಗ್ರಹ – ಜಿ. ರಾಜಶೇಖರ್
  10. ರಮೇಶ್.ಬಿ.ಜೆ. ಕರ್ನಾಟಕದ ಮುಖ್ಯಮಂತ್ರಿಗಳು, ದಿವ್ಯಚಂದ್ರ ಪ್ರಕಾಶನ, ಬೆಂಗಳೂರು,
  11. ವಿಧಾನಸಭಾ ಮತ್ತು ಪರಿಷತ್ತಿನ ನಡಾವಳಿಗಳು.
  12. Karnataka – A Vision for Development  (Vision – 2020) Karnataka state planning board.

 


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal