Tumbe Group of International Journals

Full Text


ಪಾವಗಡ ಪಾಳೇಗಾರರ ಕಾಲದ ಜಾನಪದ ಧರ್ಮ ಮತ್ತು ಆಚರಣೆ

ಡಾ. ಪ್ರಸನ್ನ

ಸಹ ಪ್ರಾಧ್ಯಾಪಕರು ಮತ್ತು

ಇತಿಹಾಸ ವಿಭಾಗದ ಮುಖ್ಯಸ್ಥರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ


ಪ್ರಸ್ತಾವನೆ

ಮಾನವನ ಬದುಕನ್ನು ಪ್ರಾಚೀನ ಕಾಲದಿಂದಲೂ ಧರ್ಮ ಕಾರಣ ಮತ್ತು ರಾಜಕಾರಣ ಎಂಬ ಎರಡು ಮಹಾನ್ ಶಕ್ತಿಗಳು ನಿಯಂತ್ರಿಸಿಕೊಂಡು ಬಂದಿವೆ. ಈ ಸಮಾಜದಲ್ಲಿ ಇವು ಬೇಲಿ ಮತ್ತು ಬೆಳೆ ಇದ್ದಂತೆ ಎಂದು ಹೇಳಬಹುದು. ಮಾನವನ ಪ್ರಗತಿ ಇವುಗಳ ರಕ್ಷಣೆಯ ಕಕ್ಷೆಯಲ್ಲಿಯೇ ಸಾದಿತವಾಗಿದೆ. ಅವನ ಸಂಸ್ಕಂತಿ ನಾಗರೀಕತೆ, ಸಾಹಿತ್ಯ, ವಿಜ್ಞಾನ, ಶಿಕ್ಷಣ ಮಾನವೀಯತೆ ಎಲ್ಲವೂ ಇದರಲ್ಲಿ ಪೋಷಣೆ ಪಡದಿದೆ.[1] ರಾಜಕೀಯ ಯಾವುದೇ ಇರಬಹುದು ಅದು ಮನುಷ್ಯನ ಬದುಕಿನ ಬಾಹ್ಯ ಬೆಳವಣಿಗೆಗೆ ಬೆನ್ನಲುಬಾಗಿ ನಿಂತರೆ ಧರ್ಮ ಆಂತರಿಕ ಆತ್ಮ ವಿಕಾಸಕ್ಕೆ ತಾಯಿಯ ಮಡಿಲಾಗಿ ಮಮತೆ ತೋರಿ ಇವು ಮಾನವನ ಜವಾಬ್ದಾರಿಗಳ ಅರಿವನ್ನು ಮಾಡಿಕೊಟ್ಟರುವುದುಂಟು. ಭಾರತೀಯ ಬದುಕಿನಲ್ಲಿ ಈ ಎರಡು ಭಾವನೆಗಳು ನಿರಂತರವಾಗಿ ಬೆಳೆದುಕೊಂಡು ಬಂದಿರುವುದನ್ನು ನೋಡಬಹುದು.

ಕೀ ವರ್ಡ್: ಪಾವಗಡ, ನಾಗರೀಕತೆ, ಸಾಹಿತ್ಯ, ವಿಜ್ಞಾನ, ಶಿಕ್ಷಣ ಮಾನವೀಯತೆ, ಶೈವ ಧರ್ಮ, ವೈಷ್ಣವ ಧರ್ಮ, ವೀರಶೈವ ಧರ್ಮ

ಪಿಠೀಕೆ

ಭಾರತೀಯ ಜನಾಂಗದ ಜೀವದ್ರವ್ಯ ಧರ್ಮ, ಸಮಾಜ ಜೀವನ ವ್ಯವಹಾರದ ಕೇಂದ್ರ ಮಠ-ದೇವಾಲಯಗಳಾಗಿ ಎನ್ನಬಹುದು.[2] ಈ ನಂಬಿಕೆ ಪ್ರಾಚೀನ ಕಾಲದಿಂದಲೂ ಇದೆ. ವಿಶ್ವದ ಎಲ್ಲ ಧರ್ಮಗಳಲ್ಲೂ ಅವರದೇ ಆದ ಪೂಜಾಮಂದಿರ, ಮಠ ಮಾನ್ಯಗಳು ಕಂಡು ಬರುತ್ತವೆ. ಆದರೆ ಆಯಾ ಧರ್ಮಗಳ ಅನ್ವಯವಾಗುವಂತೆ ಪೂಜಾಮಂದಿರಗಳ ಸ್ವರೂಪದಲ್ಲಿ ಮಾಡಿದ ಭಿನ್ನತೆಯನ್ನು ಕಾಣುತ್ತೇವೆ. ಭಾರತ ದೇಶದಲ್ಲಿ ದೇವಾಲಯಗಳ ಮತ್ತು ದೇವರ ಕಲ್ಪನೆ ಸ್ಥಾಪನೆಯಾಗುವುದಕ್ಕೆ ಮೊದಲು ಪ್ರಕೃತಿ ಆರಾಧನೆ ಮಾಡಲಾಗುತ್ತಿತ್ತು. ಪ್ರಕೃತಿಯನ್ನು ದೇವರೆಂದು ಯಜ್ಞಯಾಗದಿ ಮೂಲಕ ಪೂಜಿಸಲಾಗುತ್ತಿತ್ತು. ಪುರಾಣದಲ್ಲಿ ಆಗೋಚರವಾದ ಶಕ್ತಿಗೆ ದೇವರ ಸ್ವರೂಪವನ್ನು ನೀಡಿ ಶಿವನನ್ನು ಸೃಷ್ಠಿಸಲಾಯಿತು. ಶಿವನಿಗೆ ಸಂಬಂಧಪಟ್ಟ ಹತ್ತು ಪುರಾಣಗಳಿರುವುದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಿಕೊಳ್ಳಬಹುದು. ಇಂತಹ ದೇವರಿಗೆ ಮೊದಲು ದೇವಾಲಯಗಳನ್ನು ನಿರ್ಮಿಸಿದ್ದು, ಗುಪ್ತರ ಕಾಲದಲ್ಲಿ. ಒಟ್ಟಾರೆ ಹೇಳುವುದಾದರೆ ಬಾಹ್ಯವಾಗಿದ್ದ ಧರ್ಮಚರಣೆ ಗುಪ್ತರ ಕಾಲದಲ್ಲಿ ದೇವಾಲಯವನ್ನು ಪ್ರವೇಶಿಸಿ ಈ ಹಿನ್ನಲೆಯಲ್ಲಿ ಅಂದಿನಿಂದಲು ಇಲ್ಲಿಯವರೆಗೆ ಧರ್ಮಚರಣೆಗಳಲ್ಲಿ ದೇವಾಲಯಗಳಲ್ಲಿ ನಡೆಯುತ್ತಾ ಬಂದಿರುವುದನ್ನು ಕಾಣುತ್ತೇವೆ. ಹೀಗೆ ಧರ್ಮ ಎನ್ನುವುದು ಸಮಾಜದ ಅವಿಬಾಜ್ಯ ಅಂಗವಾಗಿ ಬೆಳೆಯಿತು. ಬೇರೆ ಬೇರೆ ಮತ ಧರ್ಮಗಳು ಸಮಾಜವನ್ನು ಪೋಷಿಸುತ್ತಾ ಸಂಬಂಧದಿಂದ ಪೋಷಿಸಲ್ಪಡುತ್ತಾ ಬೆಳೆದು ಬಂದಿದ್ದನ್ನು ಪಾವಗಡ ನಾಯಕ ಪ್ರದೇಶದಲ್ಲಿಯೂ ಕಾಣಬಹುದು. ಪಾಗೊಂಡೆ (ಪಾವಗಡ) ನಾಯಕ ಧಾರ್ಮಿಕ ಕ್ಷೇತ್ರದಲ್ಲಿ ಯಾವ ಬದಲಾವಣೆಯನ್ನು ತರುವ ಪ್ರಯತ್ನ ಮಾಡಲಿಲ್ಲ. ವಿಜಯನಗರ ಚಕ್ರವರ್ತಿಗಳು ಸಮಕಾಲೀನರಾಗಿ ಮತ್ತು ನಂತರವು ಆಳ್ವಿಕೆ ನಡೆಸುತ್ತಿದ್ದು, ಅವರ ಸಂಪ್ರದಾಯದ ಧಾರ್ಮಿಕ ಪರಂಪರೆಯನ್ನು ಅವರ ಅಧೀನ ಪ್ರಭುಗಳಾಗಿ ಈ ಪ್ರದೇಶದಲ್ಲಿ ವಿಸ್ತರಿಸಿದರು. ಧಾರ್ಮಿಕ ದೃಷ್ಟಿಯಿಂದ ಈ ಪ್ರದೇಶವನ್ನು ಪರಿಶೀಲಿಸಿದರೆ ಧಾರ್ಮಿಕ ಏಕತೆಗಿಂತ ವೈವಿಧ್ಯತೆಯಿತ್ತೆಂದು ಆ ಭಾಗದ ಸಮಕಾಲೀನ ಆಧಾರಗಳು ದೃಢಪಡುತ್ತದೆ. ಉದಾಹರಣೆಗೆ ಆ ಪ್ರದೇಶ ಸಮಕಾಲೀನ ಶಾಸನಗಳಲ್ಲಿ ದೇವಾಲಯಗಳಿಗೆ ದಾನ ನೀಡಿದ್ದನ್ನು ಅಥವಾ ಸಾಹಿತ್ಯ ಕೃತಿಗಳಲ್ಲಿ ಜನಪದ ಪೂಜಾ ಪರಂಪರೆ ಇತ್ಯಾದಿ ನೋಡಬಹುದು. ಇಂತಹ ವೈವಿಧ್ಯತೆಯಿಂದ ಕೂಡಿದ ಧರ್ಮಚರಣೆಯನ್ನು ನಾವು ಆಧಾರಗಳನ್ನು ಅನುಸರಿಸಿ ಈ ಕೆಳಕಂಡಂತೆ ವಿಭಾಗಿಸಿ ಅಧ್ಯಯನ ಮಾಡಬಹುದು.

  1. ಧರ್ಮದ ಬಗೆಗಿದ್ದ ಪರಿಕಲ್ಪನೆ
  2. ಶೈವ ಧರ್ಮ
  3. ವೈಷ್ಣವ ಧರ್ಮ
  4. ವೀರಶೈವ ಧರ್ಮ
  5. ಜಾನಪದ ಧರ್ಮ ಅದರ ಆಚರಣೆ

ಧರ್ಮದ ಪರಿಕಲ್ಪನೆ

ಈ ಅಧ್ಯಾಯದಲ್ಲಿ ಪಾವಗಡ ಪ್ರದೇಶದಲ್ಲಿನ ಶೈವ, ವೈಷ್ಣವ, ವೀರಶೈವ ಮತ್ತು ಜಾನಪದ ಧಾರ್ಮಿಕ ನಂಬಿಕೆಗಳ ಹಾಗೂ ಆಚರಣೆಗಳ ಬಗೆಗೆ ಸ್ಥೂಲವಾಗಿ ನೋಡಬಹುದು. ವೀರಶೈವ ಧರ್ಮವನ್ನು ಹೊರತುಪಡಿಸಿದರೆ ಉಳಿದ ಎಲ್ಲ ಮತ ಧರ್ಮಗಳು ದೇವಾಲಯಗಳ ನಿರ್ಮಾಣವನ್ನು ತಾತ್ವಿಕವಾಗಿ ಒಪ್ಪಿದ್ದವು. ಆದರೆ ವೀರಶೈವ ಧರ್ಮ ತಾತ್ವಿಕವಾಗಿ ದೇವಾಲಯ ನಿರಾಕರಣೆ ಮಾಡಿ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡಿತ್ತು. ಉದಾ: 12ನೇ ಶತಮಾನದ ವಚನಕಾರರ ವಚನದಿಂದ ಇದನ್ನು ಸಮರ್ಥಿಸಬಹುದು.

ಉಳ್ಳವರು ಶಿವಾಲಯ ಮಾಡುವರು

ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇಕಂಬ ದೇಹವೇ ದೇಗುಲ ಶಿರವೇ ಹೊನ್ನಕಳಸವಯ್ಯ

ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ.

ಕೂಡಲ ಸಂಗಮದೇವ ಕೇಳಯ್ಯ[3]

ಆದಾಗ್ಯೂ ವೀರಶೈವರು ದೇವಾಲಯಗಳನ್ನು ತಿರಸ್ಕರಿಸಲಿಲ್ಲ. ಉದಾಹರಣೆ ದೃಷ್ಟಿಯಿಂದ ಅವರು ಆ ದೇವಾಲಯಗಳಿಗೂ ಹೋಗುವುದನ್ನು ಬಿಡಲಿಲ್ಲ. ಬೇರೆ ಧರ್ಮಿಯರು ದೇವಾಲಯಗಳನ್ನು ನಿರ್ಮಿಸಿ ಪೂಜಿಸಿದರು. ಏಕೆಂದರೆ ಅವರ ಧರ್ಮದಲ್ಲಿ ಒಂದು ಪ್ರಚಲಿತವಾದ ಮೌಲ್ಯವಿತ್ತು[4] ಸಂಪತ್ತು ಶಾಶ್ವತವಾದುದಲ್ಲ. ಧರ್ಮವೇ ನಿಜವಾದ ಸಂಪತ್ತು ದೇವಾಲಯಗಳು ಜನಜೀವನದ ಭಾಗವೇ ಆಗಿ ಅವರನ್ನು ತಿದ್ದವ. ಶಕ್ತಿಯಾಗಿರಬೇಕೆಂಬುದೇ ಅವುಗಳ ನಿರ್ಮಾಣದ ಹಿಂದಿನ ಉದ್ದೇಶವಾಗಿತ್ತು.[5]

ಇಂತಹ ದೇವಾಲಯಗಳಲ್ಲಿ ಅನೇಕ ರೀತಿಯ ಸೇವೆಗಳು ನಡೆಯುತ್ತಿದ್ದವು. ಜಾತ್ರೆಗಳು ಮತ್ತು ಉತ್ಸವಗಳು ಆಚರಿಸಲ್ಪಡುತ್ತಿದ್ದವು. ಮತ ಧರ್ಮಗಳನ್ನು ಜೀವಂತವಾಗಿಡಲು ದೇವಾಲಯ ಮತ್ತು ಅದರ ಆವರಣದಲ್ಲಿ ಒಳಗೆ ಮತ್ತು ಹೊರಗೆ ಆಚರಿಸುತ್ತಿದ್ದ ಇಂತಹ ಧಾರ್ಮಿಕ ನಂಬಿಕೆ ಕ್ರಿಯೆಗಳು ಅತ್ಯವಶ್ಯಕವಾಗಿದ್ದವು. ಪಾಗೊಂಡೆ ರಾಜ್ಯದ ವ್ಯಾಪ್ತಿಯಲ್ಲಿ ದೊರೆತ ಶಾಸನಗಳ ಆಧಾರದ ಮೇಲೆ ಕೆಲವು ವಿವರಗಳು ಇದರ ಬಗೆಗೆ ದೊರೆಯುತ್ತವೆ. ಉದಾ: ಪಡಿ ಸೇವೆ ದೀಪಾ ಮಾಲೆ ಕಂಬದ ಸೇವೆ ರಂಗಬೋಗ ರುದ್ರಭಿಷೇಕ ನಂದ ದೀಪ ನಿತ್ಯೋತ್ಸವ ಮಾಸೋತ್ಸವ ಪಾಕ್ಷಿಕೋತ್ಸವ ಪಾತಳ ಮಂಟಪ ಸೇವೆ, ರಥೋತ್ಸವ ಇತ್ಯಾದಿ ಇಂತಹ ಸೇವೆಗಳಿಗೆ ದಾನಿಗಳಿಂದ ನೆರವು ದೊರೆಯುತ್ತಿತ್ತು.

ಇದು ಅಂದು ಜನರು ಧರ್ಮದ ಬಗೆಗೆ ಇಟ್ಟಿದ್ದ ಪ್ರೀತಿ ಮತ್ತು ನಂಬಿಕೆ ತೋರಿಸುತ್ತದೆ. ಜನರು ಅಂದು ಧರ್ಮದ ಬಗೆಗೆ ತಮ್ಮದೇ ಆದ ಅಮೂಲ್ಯವಾದ ಮೌಲ್ಯಾಧಾರಿತ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದರೆಂದು ಕಾಣುತ್ತದೆ. ಅವುಗಳಲ್ಲಿ ಅತ್ಯಂತ ಪ್ರಭಾವ ಪೂರ್ಣವಾಗಿದ್ದದ್ದು ದಾನದ ಪರಿಕಲ್ಪನೆ ಹಾಗೂ ದಾನದ ಶ್ರೇಷ್ಠತೆ ದಾನ ಅಪರಿಗ್ರಹಕ್ಕೆ ಮಾರ್ಗವೆಂದು ಜನ ಭಾವಿಸಿದ್ದಂತೆ ಕಾಣುತ್ತದೆ. ಗಳಿಸಿದ ಹಣದಲ್ಲಿ ಸ್ವಲ್ಪವನ್ನಾದರು ಧಾರ್ಮಿಕ ಕೇಂದ್ರಗಳಾಗಿದ್ದ ದೇವಾಲಯ ಮತ್ತು ಮಠಗಳಿಗೆ ನೀಡುವುದು ಪುಣ್ಯದ ಕೆಲಸವೆಂದು ಭಾವಿಸಿದ್ದವು. ದೇವಾಲಯ ನಿರ್ಮಾಣವಾದ ನಂತರ ಅದರ ವ್ಯವಸ್ಥೆಗೆ ಅಲ್ಲದೇ ಅಭಿವೃದ್ದಿಗೆ ಉಳ್ಳವರ ದಾನ ಹರಿದು ಬರುತ್ತಿತ್ತು. ಕಾಲಕಾಲಕ್ಕೆ ಅದರ ಜೀರ್ಣೋದ್ಧಾರ ಪೂಜಾದಿ ಕ್ರಿಯೆಗಳು ಸಾಂಗವಾಗಿ ನೆರವೇರಲು ಕೆಲವರು ದಾನ ನೀಡುತ್ತಿದ್ದರು. ಆದ್ದರಿಂದ ಅಂದು ದೇವಾಲಯವೇ ಧರ್ಮಚರಣೆಯ ಪ್ರಮುಖ ಕೇಂದ್ರವಾಗಿತ್ತು. ಆದರೆ ವೀರಶೈವರು ತಮ್ಮ ಆಚರಣೆಯನ್ನು ದೇವಾಲಯಗಳಲ್ಲಿ ಮಾಡದೇ ಅವರಿಗೆ ಸಂಬಂಧಿಸಿದ ವೀರಶೈವ ಮಠಗಳಲ್ಲಿ ಮನೆಗಳಲ್ಲಿ ಆಚರಿಸುತ್ತಿದ್ದರು. ಅಂದಿನ ಕಾಲದ ಜನರು ಆಳುವ ವರ್ಗದವರು ತಾವು ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ದೇವಾಲಯಗಳಿಗೆ ಅಲ್ಲದೆ ಬ್ರಾಹ್ಮಣರಿಗೂ ನೀಡುವುದು. ಪುಣ್ಯದ ಕೆಲಸವೆಂದು ಭಾವಿಸಿದ್ದರು. ಬ್ರಾಹ್ಮಣ ನೀಡಿದ ದಾನಗಳನ್ನು ಬ್ರಹ್ಮದೇಯ ಎಂದು ಕರೆಯುವರು. ಹೀಗೆ ಬ್ರಾಹ್ಮಣ ಮಾಡಿದ ಬ್ರಹ್ಮದೇಯಗಳು ಅಥವಾ ಅಗ್ರಹಾರಗಳು ಕೃಷಿಕರಲ್ಲದ ವರ್ಗದವರು ಕೂಡ ಭೂ ಒಡೆತನವನ್ನು ಪಡೆದು ಕೊಳ್ಳುವಂತಾಯಿತು.

ಜಾನಪದ ನಂಬಿಕೆಗಳು ಮತ್ತು ಆಚರಣೆಗಳು

ಜನಸಾಮಾನ್ಯರು ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುತ್ತಿದ್ದ ಮತ್ತು ಊಹಿಸಿದ ದೇವರು ಅಲ್ಲದೇ ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನು ಪರಿಶೀಲಿಸಬೇಕಾಗಿದೆ. ಇದು ಪಾವಗಡ ರಾಜ್ಯದಲ್ಲಿ ವಾಸಿಸುತ್ತಿದ್ದ ಬಹು ಸಂಖ್ಯಾತರ ಧರ್ಮವಾಗುತ್ತದೆ. ಆದ್ದರಿಂದ ಇದನ್ನು ನಾವು ಜಾನಪದ ಧರ್ಮವೆಂದು ಕರೆಯಬಹುದು. ಜನಪದರಿಗೂ ಹಾಗೂ ದೇವರು ಇರುವ ಸಂಬಂಧ ವಿಶಿಷ್ಟವಾದದು ದೇವರು ದಿಂಡರಗಳಲ್ಲದ ಜನಪದ ಸಮಾಜವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಿಂದ ಅವರ ಜೀವನ ಜನಪದ ದೈವಗಳು ಒಂದು ರೀತಿಯಲ್ಲಿ ಅವರ ಅಂತರಂಗದಿಂದಲೇ ಉದ್ಬವಿಸಿ ಸ್ಥಾನ ಪಡೆದವುಗಳಾಗಿವೆ. ಅವುಗಳ ಸೃಷ್ಠಿ ಅವರ ಮನದಾಳದಿಂದಲೇ ಆಗಿರುತ್ತದೆ. ಅಂತಹ ದೇವತೆಗಳಿಗೆ ಸಂಬಂಧಿಸಿದಂತೆ ಅವರು ತಮ್ಮದೇ ಆದ ವಿವರಣೆಯನ್ನು ಕೊಡುತ್ತಾರೆ. ಈ ಹಿನ್ನಲೆಯಲ್ಲಿ ನಾವು ಪಾವಗಡ ಪಾಳೆಗಾರನ ಜಾನಪದ ಸಮಾಜವನ್ನು ಅವಲೋಕಿಸಿದರೆ ಅನೇಕ ಉದಾಹರಣೆಗಳು ಸಿಗುತ್ತದೆ. ಇಂತಹವುಗಳನ್ನು ನಾವು ಹೀಗೆ ಪಟ್ಟಿ ಮಾಡಬಹುದು. ಇದರ ಜೊತೆಗೆ ಸಮಾಜದ ಜನರಿಗೆ ಉಪಯುಕ್ತವಾದ ಕಾರ್ಯಕ್ಕೆ ಹಣವನ್ನು ತೊಡಗಿಸುವುದು ಧರ್ಮವೆಂದು ಭಾವಿಸಿದರು.

ಶಿಷ್ಟ ಮತಧರ್ಮಗಳ ಜೊತೆ ಜೊತೆಗೆ ಜಾನಪದ ಧರ್ಮ ಮತ್ತು ಆಚರಣೆಗಳು ಅಸ್ಥಿತ್ವದಲ್ಲಿದ್ದವು. ಜಾನಪದ ಸ್ತ್ರೀದೇವತೆಗಳ ಪೂಜೆ ಇವುಗಳು ಉತ್ತಮ ಉದಾಹರಣೆಗಳಾಗಿವೆ. ಮೂರ್ತ ಸ್ವರೂಪದಲ್ಲಿ ದೇವಾಲಯದಲ್ಲಿ ಧರ್ಮ ಆಚರಿಸಲ್ಪಡುತ್ತಿತ್ತು. ಅನೇಕ ರೀತಿಯ ಅಂತರಂಗ ಬೋಗಿಗಳು ಇಲ್ಲಿನ ಶೈವ ಮತ್ತು ವೈಷ್ಣವ ದೇವಾಲಯಗಳಲ್ಲಿ ನಡೆಯುತ್ತಿದ್ದವು. ಅವುಗಳಿಗಾಗಿ ದಾನದತ್ತಿಗಳನ್ನು ಸಮಾಜದ ಎಲ್ಲಾ ವರ್ಗದವರು ಬಿಟ್ಟಿದ್ದರು. ಮತ ಧರ್ಮದ ಆಚರಣೆ ಎಂದರೆ ಕೇವಲ ದೇವರ ಪೂಜೆ ಅಲ್ಲ ಸಮಾಜಕ್ಕೆ ಹಿತವಾದ ಕಾರ್ಯಗಳನ್ನು ಮಾಡುವುದು ಸಹ ಧರ್ಮ ಎಂದು ಅಂದಿನ ಜನಬಾವಿಸಿದ್ದರು. ಆದುದರಿಂದ ದೇವಾಲಯ ಮಠ ಅಗ್ರಹಾರ ಕೆರೆ ಬಾವಿ ಮತ್ತು ಅರವಟ್ಟಿಗಳಿಗೆ ಧನಸಹಾಯ ಉಳ್ಳವರಿಂದಲೇ ಒದಗಿ ಬಂದಿದ್ದಿತು ಎಂಬುದಾಗಿ ದಾಖಲೆ ತೋರಿಸುತ್ತದೆ.

ಈ ಕೆಳಗಿನ ಹಲವು ಆಚರಣೆಗಳು ಪಾವಗಡ ಪಾಳೇಪಟ್ಟಿನ ಪಕ್ಕದ ವೈ.ಎನ್.ಹೊಸಕೋಟೆಯಲ್ಲಿ ಆಚರಿಸಿತ್ತಿದ್ದವು, ಪಾವಗಡದಲ್ಲಿಯೂ ಅದೇ ಮಾದರಿಯಲ್ಲಿ ಆಚರಿಸುತ್ತಿದ್ದಾರೆ.

ರಾಸುಗಳ ಹಬ್ಬ

ಕೃಷಿ ಪ್ರಧಾನವಾದ ಭಾರತದ ಕೃಷಿಯಾಧಾರಿತ ಸಮಾಜದಲ್ಲಿ ಒಡಮುಡುವ ಶ್ರಮಿಕ ಸಂಸ್ಕಂತಿಯ ಆಚರಣೆಗಳದೆಷ್ಟೋ, ಭೂತಾಯಿಯ ಪೂಜೆ, ಗಂಗಾಪೂಜೆ, ಅಗ್ನಿ ಪೂಜೆ, ಗೋಪೂಜೆ, ಗಿಡಮರಗಳ ಪೂಜೆ, ಪ್ರಾಣಿ ಪಕ್ಷಿಗಳ ಪೂಜೆ ಇತ್ಯಾದಿಯಾಗಿ ಪ್ರಕೃತಿಯ ಪ್ರತಿಯೊಂದು ಅಂಶವನ್ನು ಶಕ್ತಿಯ ರೂಪವೆಂದು ಆರಾಧಿಸುವ ವೈವಿದ್ಯಮಯವಾದ ಆಚರಣೆಗಳು ಭೂತಾಯಿಯ ಮಕ್ಕಳೆಂದು ಭಾವಿಸಿಕೋಮಡಿರುವ ಭಾರತೀಯ ರೈತ ಸಮಾಜದಲ್ಲಿ ಸರ್ವೇಸಾಮಾನ್ಯ.

ಇವರ ಆಚರಣೆಗಳಲ್ಲಿ ಕೆಲವು ಅನ್ನ ನೀಡುವ ಭೂತಾಯಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಇದ್ದರೆ, ಮತ್ತೆ ಕೆಲವು ಭುಮಿಯಲ್ಲಿ ಸುಖಮಯ ಜೀವನ ನಡೆಸಲು ಅವಕಾಶಗಳನ್ನು ಒದಗಿಸಿರುವ ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಆಚರಣೆಗಳಾಗಿವೆ. ಇನ್ನೂ ಹಲವು ಕೃಷಿಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯಕವಾಗಿ ಜೊತೆಯಲ್ಲಿರುವ ಬಸವಗಳನ್ನು ಅಥವಾ ಇತರೆ ಪ್ರಾಣಿಗಳನ್ನು ಪೂಜಿಸುವ ಆಚರಣೆಗಳಾಗಿವೆ. ಪ್ರದೇಶದಿಂದ ಪ್ರದೇಶಕ್ಕೆ ವೈವಿದ್ಯತೆಯಿಂದ ಕೂಡಿರುವ ಇಂತಹ ಆಚರಣೆಗಳು ಇಂದು-ನಿನ್ನೆಯವಲ್ಲ. ಕೃಷಿಕ ಜೀವನದೊಂದಿಗೆ ಆರಂಭವಾಗಿ ತಲೆತಲಾಂತರಗಳಿಂದ ಸಾಗಿಬರುತ್ತಿರುವ ಸಾಂಪ್ರದಾಯಿಕ ರೂಢಿಗಳಾಗಿವೆ. ಇಂತಹ ವಿಶಿಷ್ಟ ಆಚರಣೆಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆದಿರುವುದು. ಭೂತಾಯಿಯ ಪೂಜೆ ನಂತರದ ಸ್ಥಾನ ಗೋಪೂಜೆಗೆ. ಈಡುಹಬ್ಬ, ರಾಸುಗಳ ಹಬ್ಬ, ದೀವಣಿಗೆ, ಬಸವ ಪೂಜೆ ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸುಗ್ಗಿಹಬ್ಬ ಪಾವಗಡ ಗ್ರಾಮದ ಕೃಷಿಕ ಸಮಾಜದ ವಿಶೇಷ ಆಚರಣೆಗಳಲ್ಲಿ ಒಂದಾಗಿದೆ.

ಸಾಮಾನ್ಯವಾಗಿ ‘ಸುಗ್ಗಿ ಹಬ್ಬ’ ಅಥವಾ ಅವುಲದ್ಯಾವರ’ (ತೆಲುಗು ಭಾಷೆಯಲ್ಲಿ ಅವುಲು ಎಂದರೆ ಗೋವುಗಳು ಎಂದರ್ಥ)ವನ್ನು ಗ್ರಾಮದ ಸುಗ್ಗಿಕಾಲವಾದ ಅಕ್ಟೋಬರ್/ನವೆಂಬರ್ ತಿಂಗಳುಗಳಲ್ಲಿ ಆಚರಿಸುವುದು ವಾಡಿಕೆ. ನಿಗದಿತ ದಿನದಂದು ಪ್ರಮುಖ ಗ್ರಾಮದೇವತೆಗಳಾದ ದೇವಿಗಳನ್ನು ನಿಗದಿತ ಪ್ರದೇಶಕ್ಕೆ (ಸಾಮಾನ್ಯವಾಗಿ ದೊರೆಗಳ ಸಮಾಧಿಯ ಮುಂಭಾಗದ ವಿಶಾಲವಾದ ಪ್ರದೇಶ) ಕರೆದೊಯ್ದು ಆ ವಿಶಾಲವಾದ ಪ್ರದೇಶದ ಮಧ್ಯದಲ್ಲಿ ಎತ್ತರದ ಸ್ಥಳದಲ್ಲಿ ಕೂರಿಸುತ್ತಾರೆ. ಗ್ರಾಮದ ಹಕ್ಕುದಾರರಾದ ಗೊಲ್ಲಗೌಡರ ಮನೆಯಿಂದ ಹಾಲುಕಾವಡಿಯನ್ನು ಗ್ರಾಮಗೌಡರ ಮನೆಯಿಂದ ಹೂವಿನಹೆಡಿಗೆಯನ್ನು ಹಾಗೂ ಕುರುಬಗೌಡರ ಮನೆಯಿಂದ ಗುಗ್ಗರಿ ಹೆಡಿಗೆ (ಪ್ರಸಾದ ಬುಟ್ಟಿ) ಗಳನ್ನು ದೊರೆಯರ ಮನೆಗೆ ತರಲಾಗುತ್ತದೆ. ಆ ವೇಳೆಗಾಗಲೇ ಗ್ರಾಮದ ಮುಖಂಡರು, ಹಕ್ಕುದಾರರು ಮತ್ತು ಜನತೆಯು ದೊರೆಯರ ಮನೆಯಲ್ಲಿ ಸೇರಿರುತ್ತಾರೆ. ಸಕಲರೂ ಸೇರಿದ ನಂತರ ವಾದ್ಯಸಮೇತವಾಗಿ ದೊರೆ ಮತ್ತು ಪ್ರಮುಖರನ್ನು ಒಳಗೊಂಡ ಮೆರವಣಿಗೆ ಪ್ರಾರಂಭವಾಗಿ ಆವುಲ ದ್ಯಾವರ ನಡೆಯುವ ನಿಗದಿತ ಸ್ಥಳಕ್ಕೆ ಬಂದು ಸೇರುತ್ತದೆ. ಹೀಗೆ ಗ್ರಾಮದ ರಾಜವಂಶದವರನ್ನು ಮತ್ತು ಗ್ರಾಮದ ಹಕ್ಕುದಾರರು ಹಾಗೂ ಹಿರಿಯರನ್ನು ಕರೆತಂದು ಅವರ ಸಮ್ಮುಖದಲ್ಲಿ ಜಾಡು ಹಾಕಿ ಅಂದರೆ ವಿಶಾಲವಾದ ಪ್ರದೇಶದಲ್ಲಿ ನೆಲಶುದ್ದಿ ಮಾಡಿ ಅಲ್ಲಿ ಒಂದು ಕರಿಕಂಬಳಿಯನ್ನು ಚೌಕಕಾರದಲ್ಲಿ ಹಾಸಿ ಅದರ ಪೂರ್ವ ಪಶ್ಚಿಮ ಉತ್ತರ ಮತ್ತು ದಕ್ಷಿಣದ ನಾಲ್ಕು ಮೂಲೆಗಳಿಗೂ ವಿಭೂತಿಯನ್ನು ಹಚ್ಚಿ ಅರಿಸಿನ ಕುಂಕುಮ ಇಟ್ಟು ಅಕ್ಕಿಕಾಳು ಹಾಕಿ ಹೂವು-ಪ್ರಸಾದವನ್ನಿಟ್ಟು ಸಿದ್ದಗೊಳಿಸುತ್ತಾರೆ. ಅಲ್ಲದೇ ಅದರ ಮೇಲೆ ದೇವಿಯರ ಚಾಟಿ, ವೀರಲಗು ಇತ್ಯಾದಿಗಳನ್ನು ಪೂಜೆಗೆ ಇಡುತ್ತಾರೆ. ಈ ರೀತಿಯಲ್ಲಿ ಸರ್ವಸಿದ್ದತೆಗೊಂಡ ಪವಿತ್ರ ಪೀಠಕ್ಕೆ ಸಕಲದೇವಿಯರನ್ನು ಗ್ರಾಮದ ಪೂರ್ವಜರನ್ನು ಹಾಗೂ ಸಮಸ್ತ ದೇವಾನುದೇವತೆಗಳನ್ನು ಅವಾಹನೆಗೈದು ನಾಲ್ಕು ದಿಕ್ಕುಗಳಿಂದ ಪೂಜಿಸುತ್ತಾರೆ. ನಂತರ ಗ್ರಾಮದ ದೊರೆ, ರೆಡ್ಡಿ, ಪಟೇಲ, ಶ್ಯಾನುಭೋಗ, ತಳವಾರ ಇತ್ಯಾದಿ ಸಕಲಹಕ್ಕುದಾರರಿಂದ ಮತ್ತು ಜನತೆಯಿಂದ ಅವುಲದ್ಯಾವರ ಮುಂದುವರೆಯಲು ಅನುಮತಿ ಪಡೆಯಲಾಗುತ್ತದೆ. ಅಪ್ಪಣೆ ದೊರೆತ ನಂತರ ರಾಜಗೋವನ್ನು ಕರೆತಂದು ಪೂಜಿಸಿ ಮಹಾಮಂಗಳಾರತಿ ಮಾಡಲಾಗುವುದು. ಇದೇ ರೀತಿ ಗೌಡ, ಪಟೇಲ, ರೆಡ್ಡಿ, ಶಾನುಭೋಗ, ಗುರಿಕಾರ, ತಳವಾರ ಹಾಗೂ ಗ್ರಾಮದ ಎಲ್ಲಾ ಜನತೆಯ ಜಾನುವಾರುಗಳನ್ನ ಪ್ರದಕ್ಷಣೆ ಮಾಡಿದುತ್ತಾರೆ. ಇದರಿಂದ ಜಾನುವಾರುಗಳಿಗೆ ರೋಗ-ರುಜಿನಗಳ ಕಾಟ ಇಲ್ಲದೆ ಆರೋಗ್ಯವಾಗಿರುತ್ತವೆಂಬ ನಂಬಿಕೆ ಇರುವುದು ತಿಳಿಯುತ್ತದೆ. ಹೀಗೆ ಎಲ್ಲಾ ಜಾನುವಾರುಗಳ ಪ್ರದಕ್ಷಣೆ ಮುಗಿದ ನಂತರ ಗ್ರಾಮದ ಹಸ್ತಂಗತ ವೀರರನ್ನು ನೆನೆದು ಅವರಿಗೆ ಜಾಡು ಹಾಕಿ ಪೂಜೆ ಸಲ್ಲಿಸುತ್ತಾರೆ. ನಂತರ ಸಮೃದ್ದಿಯ ಸಂಕೇತವಾದ “ಸಜ್ಜೆ ಮುದ್ದೆ ಮತ್ತು ಬದನೆಕಾಯಿ ಚಟ್ನಿಯ ಪ್ರಸಾದಸದವನ್ನು ಎಲ್ಲರಿಗೂ ಹಂಚಲಾಗುತ್ತದೆ. ಇಂತಹ ಪ್ರಸಾದ ತಯಾರಿಕೆಯ ಹಕ್ಕುದಾರರೆಂದರೆ ಗ್ರಾಮದ ಕುರುಬ ಗೌಡರು, ಹಾಗಾಗಿ ಇಂದಿಗೂ ಸಹ ಕುರುಬ ಜನಾಂಗದ ದುಬ್ಬೆಲ್ಲಪ್ಪ ಮತ್ತು ಸಂದಪ್ಪನವರ ಮನೆತನದಿಂದಲೇ ಸಜ್ಜೆ ಮುದ್ದೆ ಮತ್ತು ಬದನೆಕಾಯಿ ಚಟ್ನಿಯ ಪ್ರಸಾದದ ಬುಟ್ಟಿಯನ್ನು ಪ್ರತಿ ವರ್ಷವೂ ತರುತ್ತಿರುವ ಸಂಪ್ರದಾಯವಿದೆ.

ರಾಸು ಮತ್ತು ಜಾನುವಾರುಗಳೆಲ್ಲವೂ ಅವುಲದೇವರ ಪ್ರದೇಶದಿಂದ ಹಿಂತಿರುಗಿದ ನಂತರ ಗ್ರಾಮದೇವತೆಗಳನ್ನು ಅಲ್ಲಿಂದ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆಯಲ್ಲಿ ತಂದು ಅವರವರ ಆಲಯದಲ್ಲಿ ಗುಡಿ ತುಂಬಿಸುತ್ತಾರೆ. ಅಂದು ರಾತ್ರಿ ಗ್ರಾಮದ ಎಲ್ಲಾ ಮನೆಗಳಲ್ಲೂ ಪಾಯಸ, ಚಿತ್ರಾನ್ನ ಮತ್ತು ಪಕೋಡಗಳನ್ನು ಒಳಗೊಂಡ ಊಟವನ್ನು ತಯಾರಿಸಿ ಭುಜಿಸಿ ರಾಸುಗಳ ಹಬ್ಬವನ್ನು ಮುಕಾಯಗೊಳಿಸಲಾಗುವುದು.

ವಿಜಯದಶಮಿ

ಪಾವಗಡ ಪ್ರದೇಶದಲ್ಲಿ ವಿಜಯದಶಮಿ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿರುವ ಐತಿಹಾಸಿಕ ಸಂಪ್ರದಾಯವಾಗಿದೆ. ಈ ಉತ್ಸವವು ಆಚರಿಸಲ್ಪಡುತ್ತಿದ್ದು ಪ್ರತಿವರ್ಷ ವಿಜಯದಶಮಿ ದಿನದಂದು ನವರಾತ್ರಿ ದಿನಗಳ ಕೊನೆಯ ದಿನವಾದ ನವಮಿಯಂದು ಗ್ರಾಮದೇವತೆಯಾನ್ನು ವಿಧಿವತ್ತಾಗಿ ಪೂಜಿಸಿದ ನಂತರ ಅದರಂತೆ ಮರುದಿನ ಅಂದರೆ ವಿಜಯದಶಮಿ ದಿನದಂದು ಗ್ರಾಮದ ಹಕ್ಕುದಾರರಾದ ಗೌಡ, ಪಟೇಲ, ಶ್ಯಾನುಭೋಗ, ತಳವಾರ ಮತ್ತು ಗುರಿಕಾರ ಇತ್ಯಾದಿ ಎಲ್ಲರೂ ನಗರಿ (ದೊರೆಯ ಮನೆ) ಯಲ್ಲಿ ಸಭೆ ಸೇರಿದ ನಂತರ ಕಂಕಣಬದ್ದವಾದ ದೊರೆಯು ಸರ್ವರ ಸಮ್ಮುಖದಲ್ಲಿ ತಮ್ಮ ಪೂರ್ವಿಕರು ಹಾಗೂ ಶಸ್ತ್ರಾಗಾರಕ್ಕೆ ಪೂಜೆಗೈದು ವೀರಖಡ್ಗ ಮತ್ತು ಬಿಲ್ಲುಬಾಣಗಳನ್ನು ಹಿಡಿದು ಮಂಗಳವಾದ್ಯಗಳೊಂದಿಗೆ ರಾಜಪುರೋಹಿತರ ಮಂತ್ರೋಪಚಾರಗಳೊಂದಿಗೆ ಒಂದು ನಿರ್ಧರಿತ ಶುಭಮುಹೂರ್ತದಲ್ಲಿ ಅಶ್ವರೂಢನಾಗಿ ಜಂಬೂಸವಾರಿ ಹೊರಟರೆ ಅಂಗರಕ್ಷಕರೆಂದು ಕರೆಸಿಕೊಂಡ ಗುರಿಕಾರರು ತಳವಾರರಂತಹ ದೊರೆಯ ಆಪ್ತ ಪರಿವಾರವು ದೊರೆಯ ಮುಂಭಾಗದಲ್ಲಿ ಖಡ್ಗವನ್ನು ಹಿಡಿದು ಛತ್ರಿ ಚಾಮರಗಳನ್ನು ಹಿಡಿದು ಕೆಲವರು ಅಶ್ವವನ್ನು ಹಿಡಿದು ಇನ್ನು ಕೆಲವರು ತಮ್ಮ ವಂಶಪಾರಂಪರಿತ ಹಕ್ಕುಗಳನ್ನು ಸಾಬೀತುಪಡಿಸುತ್ತಾ ಠೀವಿಯಿಂದ ಸಾಗಲು ಅವರನ್ನು ಹಿಂಬಾಲಿಸಿದ ಗ್ರಾಮದ ಪ್ರಮುಖರು ಹಾಗೂ ಗ್ರಾಮದ ಇತಿಹಾಸದೊಂದಿಗೆ ನಂಟುಹೊಂದಿರುವ ಹಲವು ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಗ್ರಾಮ ಜನತೆಯು ಹಿಂಬಾಲಿಸುತ್ತಾರೆ. ಹೀಗೆ ದೊರೆಯು ದಂಡು, ದಳವಾಯಿ, ಛತ್ರಿ-ಚಾಮರ, ಕೊಂಬು, ಕಹಳೆ, ಓಲಗ, ಮದ್ದಳೆಗಳನ್ನೊಳಗೊಂಡ ವೈಭವಯುತವಾದ ಸವಾರಿಯು ಹಿರಿಯಕಿರಿಯಾದಿ ಗ್ರಾಮದ ಸಮಸ್ತ ಜನತೆಯೊಂದಿಗೆ ಹೊರಟು ಸಾಗುವ ಈ ಪರಿಯು ನೋಡುಗರಿಗೆ ಮೈಸೂರಿನ ದಸರಾವನ್ನು ನೆನಪಿಗೆ ತರಿಸುತ್ತಾರೆ.

ಈ ಸಂಪ್ರದಾಯವು ವಿಜಯನಗರ ಅರಸರ ನವರಾತ್ರಿಯ ಉತ್ಸವದಿಂದ ಒಡಮೂಡಿ ಬಂದಿರುವ ಆಚರಣೆಯಾಗಿದೆ ಎನ್ನಬಹುದು. ಏಕೆಂದರೆ ಪಾವಗಡ ಪಾಳೆಪಟ್ಟು ವಿಜಯನಗರ ಸಾಮ್ರಾಜ್ಯದ ಒಂದು ಪಾಳೆಪಟ್ಟು ಆಗಿದ್ದಿತು. ಎಂಬುದು ಐತಿಹಾಸಿಕ ಸತ್ಯವಾಗಿದೆ. ಅಲ್ಲದೇ ಪಾಳೆಪಟ್ಟುವಿನ ಇತಿಹಾಸ ಗ್ರಾಮದ ಇತಿಹಾಸ ಹಾಗಾಗಿ ಆ ಮರೆಯಲಾಗದ ಸಾಮ್ರಾಜ್ಯದ ಕೆಲವೊಂದು ಆಚರಣೆಗಳು ಇಲ್ಲಿಯೂ ಜೀವತುಂಬಿಕೊಂಡು ವಂಶಪಾರಂಪರ್ಯವಾಗಿ ಬೆಳೆದುಬಂದಿರಬಹುದು.[6]

ದೇವರ ಭೇಟಿ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂಬ ಕವಿವಾಣಿಯಂತೆ ಯುಗಾದಿ ಹಬ್ಬ ಸರ್ವ ಹಿಂದುಗಳಿಗೂ ಆದಿ ಹಬ್ಬ ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷದ ಆರಂಭದ ದಿನ. ಪ್ರಕೃತಿಯೆಲ್ಲಾ ಚಿಗುರಿ ವಸಂತರಾಜನ ಆಗಮನವನ್ನು ಸ್ವಾಗತಿಸುತ್ತಿರುವ ಸಮಯ. ಪ್ರಕೃತಿಯ ಆರಾಧಕರಾದ ನಮ್ಮ ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ಹೊಸವರ್ಷವನ್ನು ಸ್ವಾಗತಿಸುತ್ತಾ ಹೊಸ ಹೊಸ ಕನಸುಗಳನ್ನು ಹೊತ್ತು ಅಸೆ ಆಕಾಂಕ್ಷೆಗಳನ್ನು ಬಿತ್ತುತ್ತಾ ವರ್ಷಪೂರ್ತಿ ಸಮೃದ್ದ ಜೀವನವನ್ನು ಕಾಣಲು ಹಲವಾರು ಆಚರಣೆಗಳನ್ನು ತಪ್ಪದೇ ನೆರೆವೇರಿಸುವ ಸುದಿನ. ಅದರಲ್ಲೂ ಬುಡಕಟ್ಟು ಸಂಸ್ಕಂತಿಯಲ್ಲಿ ಈ ದಿನದ ಅಂಗವಾಗಿ ನಡೆಯುವ ಆಚರಣೆಗಳು ಅಪಾರ. ದೇವಾಲಯಗಳಿಗೆ ಹೋಗಿಬರುವುದು. ಹಿರಿಯರಿಗೆ ಪೂಜೆ ಸಲ್ಲಿಸುವುದು, ದೇವರನ್ನು ಹೊರಡಿಸುವುದು, ಭಜನೆ, ಹಾಡು, ಕುಣಿತ, ಉತ್ಸವ ಇತ್ಯಾದಿ. ಇಂತಹ ಸಂಸ್ಕಂತಿಯಿಂದ ಹೊರತಾಗಿರದ ದೇವರಭೇಟಿ ಎಂಬ ಒಂದು ಮೆರವಣಿಗೆ ಸಂಪ್ರದಾಯವಾಗಿ ಉಳಿದು ಬಂದಿರುವುದು ವಿಶೇಷವೇ ಸರಿ.

ಅವರು ಪ್ರತಿವರ್ಷ ಯುಗಾದಿಯ ದಿನದಂದು ತಪ್ಪದೇ ತಮ್ಮ ದೇವರು ಮತ್ತು ಕುಟುಂಬಗಳ ಸಮೇತರಾಗಿ ಮೆರವಣಿಗೆ ಹೊರಟು ತಮ್ಮ ಪೂರ್ವಿಕರ ಸಮಾದಿಗಳಿಗೆ ಶ್ರದ್ದಾಪೂರ್ವಕವಾಗಿ ಪೂಜಾವಿಧಿಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿ ಸಂತೋಷದಿಂದ ಹಿಂತಿರುಗುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದರು. ಹೀಗೆ ಹುಟ್ಟಿಕೊಂಡ ದೇವರ ಭೇಟಿ ಸಂಪ್ರದಾಯ ಇಂದಿಗೂ ನಿರ್ವಿಘ್ನವಾಗಿ ಸಾಗುತ್ತಿದೆ.

ನಾಗಲಮಡಿಕೆ ಸುಬ್ರಮಣ್ಯ ಕ್ಷೇತ್ರ

ಈ ಸ್ಥಳವನ್ನು 10-11ನೇ ಶತವಾನದಲ್ಲಿ ಹೆಂಜೇರನ್ನು ರಾಜಧಾನಿಯನ್ನಾಗಿ ಮಾಡಿಕೊಂಡುನೊಳಂಬ ಪಲ್ಲವರು ಆಳ್ವಿಕೆ ಮಾಡುತ್ತಿದ್ದರು. ಅವರ ಕಾಲದಲ್ಲಿ ಈ ಸ್ಥಳ ರೊದ್ದಂ ಮುನ್ನೂರು ವಿಭಾಗಕ್ಕೆ ಸೇರಿತ್ತು.

ಪುರಾಣ ಕಥೆಗಳ ಪ್ರಕಾರ ರಾವಣನೊಡನೆ ಯುದ್ದ ಮಾಡಿ ಶ್ರೀರಾಮನು ಅಯೋಧ್ಯೆಗೆ ಹಿಂತಿರುಗುವ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲ ದಿನಗಳ ಕಾಲ ತಂಗಿದ್ದನೆಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ ಇದುವರೆಗೂ ಶ್ರೀರಾಮನಿಗೆ ವಿಧೇಯತೆಯಿಂದ ನಡೆದುಕೊಳ್ಳುತ್ತಿದ್ದ ಆತನ ಸೋದರ ಲಕ್ಷ್ಮಣನು ಆತನೊಂದಿಗೆ ವಿರುದ್ದವಾಗಿ ಮಾತನಾಡಿದನೆಂದು ಹೇಳುವರು. ಅದ್ದರಿಂದಲೇ ಈ ಪ್ರದೇಶದ ಜನರು ವಿರೋಧಾತ್ಮಕ ಗುಣವನ್ನು ಬೆಳೆಸಿಕೊಂಡಿರುವುದು ಎಂದು ಈಗಲೂ ಆ ಹಳ್ಳಿಯ ಜನ ಹೇಳುವರು.

ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ನಾಗಲಮಡಿಕೆಯು ಅಗ್ರಹಾರವಾಗಿತ್ತು[7]. ನೂರಾರು ಬ್ರಾಹ್ಮಣ ಕುಟುಂಬಗಳು ಇಲ್ಲಿ ನೆಲೆಸಿದ್ದವು. ಈ ವೇಳೆಗೆ ಅಂಜನೇಯನ ಗುಡಿಯನ್ನು ಅಲ್ಲಿನ ಶಾನುಭೋಗ ಸುಬ್ಬಣ್ಣ ಮತ್ತು ಪಾಗೊಂಡೆಯ ಆನÀಂದಣ್ಣ ಕಟ್ಟಿದರು ಎಂಬುದನ್ನು ಶಾಸನವು ತಿಳಿಸುತ್ತದೆ ಇಲ್ಲಿ ಅನಂತಭಟ್ಟರ ಕುಟುಂಬ ನೆಲೆಸಿತ್ತು. ಇವರು ಸುಬ್ರಮಣ್ಯನ ಆರಾಧಕರಾಗಿದ್ದು, ಪ್ರತಿ ವರ್ಷ ಕುಕ್ಕೆಸುಬ್ರಮಣ್ಯಕ್ಕೆ ಸ್ವಾಮಿಯ ರಥೋತ್ಸವಕ್ಕೆ ಹೋಗುವ ವಾಡಿಕೆಯನ್ನಿಟ್ಟುಕೊಂಡಿದ್ದರು. ವಯಸಾಗಿದ್ದ ಅವರು ಒಂದು ವರ್ಷ ರಥೋತ್ಸವದ ಸಮಯಕ್ಕೆ ಕುಕ್ಕೆಯನ್ನು ತಲುಪಲಾಗಲಿಲ್ಲ. ಜಾತ್ರೆ ಆರಂಭವಾಗಿ ಬ್ರಹ್ಮರಥೋತ್ಸವದ ಸಮಯ ಮೀರಿತು ಆದರೆ ಭಕ್ತಾಧಿಗಳಿಗೆಲ್ಲಾ ಆಶ್ಚರ್ಯವಾಗುವಂತೆ, ಸುಬ್ರಮಣ್ಯನ ರಥವನ್ನು ಭಕ್ತರು ಎಳೆದರೆ ಅದು ಚಲಿಸಲೇ ಇಲ್ಲ. ಇದೇ ಸಂದರ್ಭದಲ್ಲಿ ಸುಬ್ರಮಣ್ಯ ಸ್ವಾಮಿಯು ವಟುವಿನ ವೇಷದಲ್ಲಿ ಬಂದು ಸುಬ್ರಮಣ್ಯನ ಭಕ್ತನೊಬ್ಬ ಇಲ್ಲಿಗೆ ಬರಬೇಕಾಗಿದೆ, ಅವನು ಬರುವವರೆಗೂ ಈ ಆಚರಣೆಯನ್ನು ನಿಲ್ಲಿಸಿ. ಅವನು ಇಲ್ಲಿಗೆ ಸಮೀಪದ ಮರದ ಬಳಿ ವಿಶ್ರಾಂತಿ ಪಡೆಯುತ್ತಾನೆ. ಹೋಗಿ ಕರೆದುಕೊಂಡು ಬನ್ನಿ ಎಂದು ಹೇಳಿದನೆಂದು ಹೇಳಲಾಗಿದೆ. ಅದೇ ರೀತಿ ಮಾಡಿ ಅನಂತಭಟ್ಟರನ್ನು ಆ ಸ್ಥಳಕ್ಕೆ ಕರೆತಂದ ನಂತರ ರಥ ಚಲಿಸಿತು ಎಂದು ನಾಗಲಮಡಿಕೆಯಲ್ಲಿರುವ ಅವರ ವಂಶಸ್ಥರು ಹೇಳುವರು. ನಂತರ ಅನಂತರ ಭಟ್ಟರಿಗೆ ವಟುವಿನ ರೂಪದಲ್ಲಿ ಸುಬ್ರಮಣ್ಯ ಕಾಣಿಸಿಕೊಂಡು ನಾಗಲಮಡಿಕೆಯಲ್ಲಿಯೇ ಪೂಜಾ ಕಾರ್ಯಗಳನ್ನು ಮುಂದವರಿಸು ಈ ನಾಗಭರಣವನ್ನು ತೆಗೆದುಕೊಂಡು ಹೋಗು ಎಂದು ಹೇಳಿತು. ಅನಂತಭಟ್ಟರು ಆ ನಾಗಭರಣವನ್ನು ಕುಕ್ಕೆಸುಬ್ರಮಣ್ಯದಿಂದ ನಾಗಲಮಡಿಕೆ ತಂದು ಪೂಜಿಸಲಾರಂಭಿಸಿದರು. ಇಂದಿಗೂ ಕೂಡ ರಥೋತ್ಸವದ ಸಂದರ್ಭದಲ್ಲಿ ನಾಗಭರಣವನ್ನು ಪೂಜಿಸಲಾಗುತ್ತಿದೆ.

ನಾಗಲಮಡಿಕೆಯಲ್ಲಿ ನೆಲಸಿದ್ದ ಅನಂತಭಟ್ಟರ ಕನಸಿನಲ್ಲಿ ಮತ್ತೊಮ್ಮೆ ಸುಬ್ರಮಣ್ಯ ಕಾಣಿಸಿಕೊಂಡು ಉತ್ತರ ಪಿನಾಕಿನಿ ನದಿಯ ತೀರದಲ್ಲಿ ತನಗಾಗಿ ಒಂದು ದೇವಾಲಯ ನಿರ್ಮಿಸು ಎಂದು ಕೇಳಿತಂತೆ. ಅದಕ್ಕೋಸ್ಕರ ದೇವರನ್ನು ಪ್ರತಿಷ್ಟಾಪಿಸಲು ನಾಗರ ಕಲ್ಲಿಗಾಗಿ ಹುಡುಕಾಟ ನಡೆಯಿತು. ಕೊನೆಗೆ ಆ ನದಿಯ ತೀರದಲ್ಲಿನ ಜಮೀನನ್ನು ಉಳುಮೆ ಮಾಡುತ್ತಿರುವಾಗ ನಾಗರೂಪದ ಕಲ್ಲು ಸಿಕ್ಕಿತು. ಅದು ನೇಗಿಲಿಗೆ ತಾಗಿ ಮೇಲೆ ಬಂದಿತು ಆ ನಾಗರಕಲ್ಲನ್ನೇ ಅನಂತಭಟ್ಟರು ಸುಬ್ರಮಣ್ಯನೆಂದು ಪೂಜಿಸತೊಡಗಿ ಅದಕ್ಕೆ ಚಿಕ್ಕದಾದ ದೇವಾಲಯವೊಂದನ್ನು ಕಟ್ಟಿದರು.

ಈ ದೇವಾಲಯ          ದಲ್ಲಿನ ಮೂಲ ವಿಗ್ರಹ ಸರ್ಪಾಕೃತಿಯಲ್ಲಿದ್ದು 3 ಅಡಿ 9 ಅಂಗುಲ ಎತ್ತರವಾಗಿದೆ. ಏಳು ಹೆಡೆಗಳನ್ನು ಅರಳಿಸಿಕೊಂಡು ಮಿಕ್ಕ ತನ್ನ ದೇಹದ ಭಾಗದಿಂದ ಮೂರು ಸುತ್ತು ಸುತ್ತಿಕೊಂಡು ಪೀಠದ ಮೇಲೆ ಪ್ರತಿಷ್ಠಾಪಿತವಾಗಿದೆ. ಕಪ್ಪು ಶಿಲೆಯಲ್ಲಿರುವ ಮೂರ್ತಿಗೆ ಪ್ರತಿ ನಿತ್ಯ ಪಂಚಾಮೃತ ಅಭಿಷೇಕ ಸರ್ಪಪೂಜೆ ನಡೆಯುತ್ತದೆ. ಪುಷ್ಯಮಾಸದಲ್ಲಿ ಶುದ್ದಪಂಜೆಯಿಂದ ಶುದ್ದನವಮಿಯವರೆಗೆ ಐದು ದಿನಗಳ ಕಾಲ ಜಾತ್ರಾಮಹೋತ್ಸವವನ್ನು ಆಚರಿಸುವರು. ಜಾನುವಾರು ಜಾತ್ರೆಯು ಹತ್ತು ದಿನಗಳ ಕಾಲ ಜರುಗುವುದು ನಾಗಲಮಡಿಕೆ ಸುಬ್ರಮಣ್ಯ ಕ್ಷೇತ್ರದ ವಿಶೇಷವೇನೆಂದರೆ ಕಿರುಷಷ್ಠಿ ಸಂದರ್ಭದಲ್ಲಿ ಆಚರಿಸುವ ಜಾತ್ರೆ ಮತ್ತು ಮಡೆಸ್ನಾನ, ಪ್ರತಿ ವರ್ಷ ಷಷ್ಠಿ ಪ್ರಯುಕ್ತ ನಡೆಯುವ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವದ ವೇಳೆ ಈ ಮಡೆಸ್ನಾನ ನಡೆಯುತ್ತದೆ. ಆದರೆ ಇಲ್ಲಿ ಉಂಡ ಎಲೆ ಮೇಲೆ ಭಕ್ತರು ಉರುಳುವುದಿಲ್ಲ ಬದಲಾಗಿ ಬ್ರಾಹ್ಮಣರು ಊಟ ಮಾಡಿಬಿಟ್ಟ ಎಲೆಗಳನ್ನು ತಲೆ ಮೇಲೆ ಹೊತ್ತುಕೊಂಡು ನದಿಯಲ್ಲಿ ಹಾಕಿ ಅಲ್ಲಿಯೇ ಸ್ನಾನ ಮಾಡುವುದು. ಈ ಕ್ಷೇತ್ರದ ಪದ್ದತಿಯಾಗಿದೆ.

ಮಳೆ ಸಂಬಂಧಿ ಜನಪದ

ಮಳೆ ರೈತರ ಪ್ರಾಣ. ಸಕಲ ಜೀವರಾಶಿಗೂ ಜೀವಧಾತು. ನೀರಿಲ್ಲದೆ ಯಾರೂ ಬದುಕಿ ಉಳಿಯಲಾರರು. ಜೀವದ ಸಂಕೇತವಾಗಿ ಮಳೆಯನ್ನು ವಿಶ್ವದ ಎಲ್ಲಾ ಕಡೆಗಳಲ್ಲೂ ಗೌರವಿಸಲಾಗುತ್ತದೆ. ಜನರು ನ್ಯಾಯಪರವಾಗಿ ಬಾಳಿದರೆ, ನಡೆದುಕೊಂಡರೆ, ಮಳೆ ಬೆಳೆಯಾಗುತ್ತದೆ. ಇಲ್ಲದಿದ್ದರೆ ಆಗವುದಿಲ್ಲ ಎಂಬ ನಂಬಿಕೆ ಜನಪದರಲ್ಲಿ ದಟ್ಟವಾಗಿದೆ. ಮಳೆ ಸರಿಯಾದ ಕಾಲಕ್ಕೆ ಬಾರದೇ ಹೋದಾಗ ಬರಗಾಲ ಆರಂಭ. ಇದಕ್ಕೆ ಗೊಟ್ಟು ಕಾಲ ಎಂತಲೂ ಕರೆಯುತ್ತಾರೆ. ಇಂಥ ಸಂದರ್ಭದಲ್ಲಿ ಮಳೆಯನ್ನು ಭರಿಸುವುದಕ್ಕಾಗಿ ಈ ಮೂಲಕ ವರುಣನನ್ನು ಒಲಿಸಿಕೊಳ್ಳುವುದಾಗಿ ಹಲವಾರು ಆಚರಣೆಯನ್ನು ಪ್ರಪಂಚದಾದ್ಯಂತ ಪಾಲಿಸಿಕೊಂಡು ಬಂದಿದ್ದಾರೆ. ಭಾರತದಲ್ಲೂ ಈ ಸಂಬಂಧಿಸಿದ ಆಚರಣೆಗಳನ್ನು ಕಾಣಬಹುದು.

ಪಾವಗಡ ತಾಲ್ಲೂಕಿನ ಎಲ್ಲಾ ಭಾಗಗಳಲ್ಲೂ ಮಳೆಗೆ ಸಂಬಂಧಿಸಿದ ಆಚರಣೆ ರೂಢಿಯಲ್ಲಿರುವುದನ್ನು ಕಾಣಬಹುದು. ಮಳೆ ಬಾರದೇ ಹೋದ ಸಂzರ್ಭದಲ್ಲಿ ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಮಳೆರಾಯನ ಆಚರಣೆ ಮಾಡುತ್ತಾರೆ. ಇದನ್ನು ಮಳೆದೇವರು ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಯುವಕರೇ ಸೇರಿ ಆಚರಿಸುವ ಮಳೆದೇವರು ಮೊದಲು ಮೂರು ಕೆರೆಗಳ ಜೇಡಿಮಣ್ಣನ್ನು ತಂಧು ತುಂಬಿದ ಕೊಡದ ನೀರಿನ ಸಹಾಯದಿಂದ ಮನುಷ್ಯಾಕೃತಿಯನ್ನು ಮಾಡಲಾಗುವುದು. ಇದು ದೇವೇಂದ್ರನ ಪ್ರತಿರೂಪ. ಆದುದರಿಂದ ದೇವೇಂದ್ರನ ಹಾಗೆಯೇ ಗೊಂಬೆ ಮಾಡುತ್ತಾರೆ. ಈ ಗೊಂಬೆ 10 ರಿಂದ 20 ಕೆಜಿ ತೂಕವುಳ್ಳದ್ದಾಗಿರುತ್ತದೆ. ಹಸಿಯ ಮಣ್ಣಿನಿಂದ ತಯಾರಿಸಿದ ದೇವೇಂದ್ರನ ಮೂರ್ತಿಯನ್ನು 2 ಅಡಿ ಉದ್ದ 1 1/2 ಅಡಿ ಅಗಲ ಮರದ ಹಲಗೆಯ ಮೇಲೆ ಇಡಲಾಗುತ್ತದೆ. ಹಸಿಯ ಜೇಡಿಮಣ್ಣು ಹಲಗೆಗೆ ಅಂಟಿಕೊಳ್ಳುವ ಹಾಗೆ ಮಾಡಲಾಗುತ್ತದೆ. ನಂತರ ನಾಲ್ಕು ಮೂಲೆಗೂ ರಂಧ್ರ ಕೊರೆದು ದೆಬ್ಬೆಯಿಂದ ಮಂಟಪ ಮಾಡಿ, ಬಾಳೆಯ ಕಂದು ಮಾವಿನ ತೋರಣ ಹಜಾಗೂ ಕಣಗಲೆ ಹೂಗಳಿಂದ ಅಲಂಕಾರ ಮಾಡಲಾಗುತ್ತದೆ. ನಂತರ ಮೂರ್ತಿಯನ್ನು ಗ್ರಾಮಗಳಲ್ಲಿರುವ ದೇವಸ್ಥಾನದಲ್ಲಿ ಇಡಲಾಗುತ್ತದೆ. ವಿವಾಹವಾಗದ ಯುವಕ ಮೊದಲು ಪೂಜೆ ಮಾಡುತ್ತಾನೆ. ನೆನೆಯಕ್ಕಿ, ನೆನೆಗಡಲೆ, ಬೆಲ್ಲ, ತೆಂಗಿನಕಾಯಿ ತುರಿಯನ್ನು ಬೆರೆಸಿ ಫಲಹಾರ ತಯಾರಿಸುತ್ತಾರೆ. ಪೂಜೆಯಾದ ನಂತರ ಮಳೆದೇವರನ್ನು ಒಬ್ಬ ವ್ಯಕ್ತಿಯ ತಲೆಯ ಮೇಲೆ ಕೂರಿಸುತ್ತಾರೆ. ಜೊತೆಗೆ 20 ರಿಂದ 30 ಜನರ ಮೆರವಣಿಗೆ ಹೊರಡುತ್ತದೆ. ಕೆಲವೊಮ್ಮೆ ಹೆಚ್ಚು ಕಡಿಮೆ ಇರುತ್ತದೆ. ಪ್ರತಿ ದಿನ ಸಂಜೆ ಸಮೀಪದ ಊರುಗಳಿಗೆ ಮೆರವಣಿಗೆ ಹೊರಡುತ್ತದೆ. ಆ ಸಂದರ್ಭದಲ್ಲಿ ಒಬ್ಬರು ಮಳೆದೇವರನ್ನು ಕುರಿತು ಪದ ಹೇಳಿಕೊಡುತ್ತಾರೆ. ಉಳಿದವರು ಹಿಮ್ಮೇಳದ ಮಾದರಿಯಲ್ಲಿ ಹಾಡುತ್ತಾರೆ.

ಬಾರೋ ಬಾರೋ ಮಳೆರಾಯ

ಬಂದುಯ್ಯೋ ದೇವೇಂದ್ರ

ನೀನು ಬಂದಂತಾ ಕಾಲಕ್ಕೆ ನಾವೆಲ್ಲ ಬದುಕೇವೋ

ಬಾರೋ ಬಾರೋ ಮಳೆರಾಯ ಬಾಳೆ ಗಿಡಕೆ ನೀರಿಲ್ಲ

ಹುಯ್ಯೋ ಹುಯ್ಯೋ ಮಳೆರಾಯ

ಹೂವಿನ ಗಿಡಕ್ಕೆ ನೀರಿಲ್ಲ

ಮೊದಲಾದ ಹಾಡುಗಳನ್ನು ಮುಮ್ಮೇಳ ಹಾಗೂ ಹಿಮ್ಮೇಳವಾಗಿ ಹಾಡಲಾಗುತ್ತದೆ. ಹೀಗೆ ಮನೆ ಮನೆಗೆ ಬಂದ ಮಳೆದೇವರನ್ನು ಪ್ರತಿ ಮನೆಯ ಬಾಗಿಲಲ್ಲಿ ನಿಲ್ಲಿಸಿ, ತುಂಬಿದ ಕೊಡದಿಂದ ನೀರನ್ನು ಮಳೆದೇವರ ಮೇಲೆ ಸುರಿಯಲಾಗುತ್ತದೆ. ನಂತರ ಅರಿಶಿನ ಕುಂಕುಮ, ಹೂ ಇಟ್ಟು ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ಆಯಾಯಾ ವರ್ಗದ ಧಾರ್ಮಿಕ ವ್ಯಕ್ತಿಗಳನ್ನು ಪೂಜೆಗಾಗಿ ಕರೆಸಲಾಗುತ್ತದೆ. ಗೊರವಯ್ಯ ಜಂಗಮ, ದಾಸಯ್ಯ ಹೀಗೆ ಅವರವರ ಅನುಕೂಲಕ್ಕೆ ತಕ್ಕಂತೆ ಧಾರ್ಮಿಕ ಪೂಜೆ ನಡೆದು ಮಳೆದೇವರಿಗೆ ಅಡಿಗೆ ನೈವೇದ್ಯ ನಡೆಯುತ್ತದೆ. ನಂತರ ಆ ಮಳೆದೇವರನ್ನು ಆ ಊರಿನ ಗಡಿಯಿಂದ ಆಚೆಗೆ ಒಂದು ಹುತ್ತದ ಬುಡ ಅಥವಾ ಮರದ ಬಳಿ ಇಟ್ಟು ಹಿಂತಿರುಗಿ ನೋಡದೇ ಬರುತ್ತಾರೆ. ಇದಕ್ಕೆ ಮಳೆ ದೇವರ ಸಾಗುವಿಕೆ ಎಂದು ಕರೆಯುತ್ತಾರೆ.

ಈ ರೀತಿ ಪಾವಗಡ ಪಾಳೆಪಟ್ಟಿನಲ್ಲಿ ಹಲವು ಜನಪದ ಧರ್ಮಕ್ಕೆ ಸಂಬಂಧಿಸಿದ ಆಚರಣೆಗಳಿದ್ದವು, ಆ ಆಚರಣೆಗಳಲ್ಲಿ ಕೆಲವನ್ನ ಇಂದಿಗೂ ಅನುಸರಿಸುತ್ತಿದ್ದಾರೆ.

ಅಡಿ ಟಿಪ್ಪಣಿಗಳು:

  1. ಡಾ. ಯೋಗೀಶ್ವರಪ್ಪ ಡಿ.ಎನ್, ಶ್ರೀ ಸಿದ್ದಗಂಗಾ ಶೈಕ್ಷಣಿಕ ಸಂಸ್ಥೆಗಳು, ಪು-1, ಸಿದ್ದಗಂಗ ಪ್ರಕಾಶನ, ಸಿದ್ದಗಂಗ ಮಠ, ತುಮಕೂರು
  2. ಕಲ್ಬುರ್ಗಿ ಎಂ.ಎಂ, ಸಂ: ಬಸವೇಶ್ವರ ವಚನ ಸಂಪುಟ, ವಚನ 821, ಕನ್ನಡ ಪುಸ್ತಕ ಪ್ರಾಧಿಕಾರ, ಸಂ-1, 2001.
  3. ಜೀವನದಲ್ಲಿ ಒಂದು ಗುಡಿಯನ್ನಾದರು ನಿರ್ಮಿಸಬೇಕು, ಇಲ್ಲವೇ ಈಗಾಲೇ ಕಟ್ಟಿರುವ ಗುಡಿಗೆ ದಾನವನ್ನಾದರು ನೀಡಬೇಕು, ಅಂತವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.
  4. ತಿಪ್ಪೇರುದ್ರಸ್ವಾಮಿ. ಹೆಚ್ (1985), ಕನ್ನಡ ಸಂಸ್ಕತಿ ಸಮೀಕ್ಷೆ, ಪು-269, ಮೈಸೂರು
  5. ಡಾ ಚಲುವರಾಜು ವಿ.ಆರ್, (2009), ಪಾವಗಡ ಕ್ಷೇತ್ರ ದರ್ಶನ, ಪು-37,38. ಅಲಂಕಾರ್ ಪಬ್ಲಿಕೇಷನ್, ಪಾವಗಡ.
  6. ಡಾ. ಯೋಗೀಶ್ವರಪ್ಪ ಡಿ.ಎನ್, 2012, ಕಲ್ಪಶೋದ, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು
 

[1] ಡಾ. ಯೋಗೀಶ್ವರಪ್ಪ ಡಿ.ಎನ್, ಶ್ರೀ ಸಿದ್ದಗಂಗಾ ಶೈಕ್ಷಣಿಕ ಸಂಸ್ಥೆಗಳು, ಪು-1, ಸಿದ್ದಗಂಗ ಪ್ರಕಾಶನ, ಸಿದ್ದಗಂಗ ಮಠ, ತುಮಕೂರು

[2] ಡಾ. ಯೋಗೀಶ್ವರಪ್ಪ ಡಿ.ಎನ್, ಶ್ರೀ ಸಿದ್ದಗಂಗಾ ಶೈಕ್ಷಣಿಕ ಸಂಸ್ಥೆಗಳು, ಪು-1, ಸಿದ್ದಗಂಗ ಪ್ರಕಾಶನ, ಸಿದ್ದಗಂಗ ಮಠ, ತುಮಕೂರು

[3] ಕಲ್ಬುರ್ಗಿ ಎಂ.ಎಂ, ಸಂ: ಬಸವೇಶ್ವರ ವಚನ ಸಂಪುಟ, ವಚನ 821, ಕನ್ನಡ ಪುಸ್ತಕ ಪ್ರಾಧಿಕಾರ, ಸಂ-1, 2001.

[4] ಜೀವನದಲ್ಲಿ ಒಂದು ಗುಡಿಯನ್ನಾದರು ನಿರ್ಮಿಸಬೇಕು, ಇಲ್ಲವೇ ಈಗಾಲೇ ಕಟ್ಟಿರುವ ಗುಡಿಗೆ ದಾನವನ್ನಾದರು ನೀಡಬೇಕು, ಅಂತವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.

[5] ತಿಪ್ಪೇರುದ್ರಸ್ವಾಮಿ. ಹೆಚ್ (1985), ಕನ್ನಡ ಸಂಸ್ಕತಿ ಸಮೀಕ್ಷೆ, ಪು-269, ಮೈಸೂರು

[6] ಡಾ ಚಲುವರಾಜು ವಿ.ಆರ್, (2009), ಪಾವಗಡ ಕ್ಷೇತ್ರ ದರ್ಶನ, ಪು-37,38. ಅಲಂಕಾರ್ ಪಬ್ಲಿಕೇಷನ್, ಪಾವಗಡ.

[7] ಡಾ. ಯೋಗೀಶ್ವರಪ್ಪ ಡಿ.ಎನ್, 2012, ಕಲ್ಪಶೋದ, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal