Tumbe Group of International Journals

Full Text


ಭಾರತದಲ್ಲಿ ಅಂಗವಿಕಲರ ಸ್ಥಿತಿಗತಿ ಮತ್ತು ಸುಧಾರಣಾ ಕ್ರಮಗಳು

ಡಾ. ನಾರಾಯಣಪ್ಪ ಎನ್.ಕೆ.

ರಾಜ್ಯಶಾಸ್ತ್ರ ವಿಭಾಗ,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.


ಪ್ರಸ್ತಾವನೆ

ವಿಶ್ವದ ಯಾವುದೇ ದೇಶದಲ್ಲಿ ವಿಕಲಚೇತನರು ಸಹಜವಾಗಿ ಇರುವುದು ಕಂಡುಬರುತ್ತದೆ. ಇದು ಜೀವನದ ಸಾಧನೆಗೆ ಮತ್ತು ಸಮಾಜದಲ್ಲಿ ಪಾಲ್ಗೊಳ್ಳುವಿಕೆಗೆ ಕ್ಲಿಷ್ಟವಾದ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಅಂಗವಿಕಲತೆಯು ಒಂದು ಜಾಗತಿಕ ಸಮಸ್ಯೆಯಾಗಿದೆ.

ವಿಶ್ವದಲ್ಲಿ ಪ್ರಾಚೀನ ಕಾಲದಿಂದಲೂ ಅಂಗವಿಕಲತೆಯನ್ನು ವಿಭಿನ್ನ ದೃಷ್ಠಿಕೋನದಿಂದ ನೋಡಲಾಗಿದೆ. ಹಲವಾರು ಶತಮಾನಗಳಲ್ಲಿ ಸಂಭವಿಸಿದ ಯುದ್ಧಗಳು, ಕ್ರಾಂತಿಗಳು, ಮಾನವ ನಿರ್ಮಿತ ಹಾಗೂ ಪ್ರಕೃತಿ ವಿಕೋಪ, ದುಶ್ ಪರಿಣಾಮಗಳಿಂದಾಗಿ ಇಂದಿಗೂ ಜನಿಸುವ ಮಕ್ಕಳು ಅಂಗವಿಕಲರಾಗಿ ಹುಟ್ಟುವುದರ ಜೊತೆಗೆ ಅಂಗವಿಕಲತೆಯ ಸಂಖ್ಯೆ ಹೆಚ್ಚುತ್ತಿದೆ.

ಈ ಘಟನೆಗಳು ವಿಶ್ವದ ಕಣ್ಣನ್ನು ತೆರೆಸಿತು. 1948ರಲ್ಲಿ ವಿಶ್ವ ಸಂಸ್ಥೆಯು, ವಿಶ್ವಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಘೋಷಿಸಿತು. Universal declaration of human rights.

ಎಲ್ಲಾ ರಾಷ್ಟ್ರಗಳು ಅಂಗವಿಕಲ ಸಬಲೀಕರಣ ಮಾಡಬೇಕೆಂಬ ದೃಷ್ಟಿಯಿಂದ “ಅಂತರ ರಾಷ್ಟ್ರೀಯ ಅಂಗವಿಕಲ ವ್ಯಕ್ತಿಗಳ ವರ್ಷ”ವನ್ನು ಆಚರಿಸುವ ಮೂಲಕ ಎಲ್ಲಾ ರೀತಿಯ ಅಂಗವಿಕಲರಿಗೆ ಸಮಾನ ಅವಕಾಶವನ್ನು ಕಲ್ಪಿಸುವುದರ ಜೊತೆಗೆ ಸಮಾಜಿಕ ಭದ್ರತೆಯನ್ನು ಒದಗಿಸಲಾಗುತ್ತದೆ. ಆದ್ದರಿಂದ ಸರ್ಕಾರಗಳು ಅಂಗವಿಕಲರ ಕಲ್ಯಾಣ ಕಾಯ್ದೆಗಳು ಮತ್ತು ಅಭಿನಿಯಮ, ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಅಂಗವಿಕಲರ ಸಬಲೀಕರಣ.

ಅಂಗವಿಕಲತೆಯು ವಿಶ್ವದ ಸಮಸ್ಯೆಯಾಗಿದೆ. ಇದರ ನಿವಾರಣೆಗೆ - ಎಲ್ಲಾ ರಾಷ್ಟ್ರಗಳು Prevention is better than rehabilitation ತಡೆಗಟ್ಟುವ ನಿಟ್ಟಿನಿಂದ “ಪಲ್ಸ್ ಪೋಲಿಯೋ ಲಸಿಕೆ”ಹಾಗೂ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿವಾರಣೆಗೆ ಪ್ರಯತ್ನಿಸಲಾಗುತ್ತದೆ.“ಅಂತರಾಷ್ಟ್ರೀಯ ಅಂಗವಿಕಲ ವ್ಯಕ್ತಿಗಳ ವರ್ಷ”ವನ್ನು ಆಚರಿಸುವ ಮೂಲಕ ಅಂಗವಿಕಲ ವ್ಯಕ್ತಿಗಳಿಗೆ ಸೂಕ್ತ ವಿದ್ಯಾಭ್ಯಾಸ, ತರಬೇತಿ, ಉದ್ಯೋಗ ಮತ್ತು ಆರ್ಥಿಕ ಸಮಾಜಿಕ ಸಂಸ್ಕೃತಿಕ ಇನ್ನು ಮುಂತಾದ ಕ್ಷೇತ್ರಗಳಲ್ಲಿ ಭಾಗವಹಿಸುವಂತೆ ಮಾಡುವುದರ ಜೊತೆಗೆ ಅಂಗವಿಕಲರ ಹಕ್ಕುಗಳು ಮತ್ತು ಸಂರಕ್ಷಣೆಗಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿನ ಸರ್ಕಾರಗಳು ನಾಗರಿಕ ಸಮಾಜ ಹಾಗೂ ಕುಟುಂಬಗಳು ಅಂಗವಿಕಲರಿಗೆ ಸಮಾನ ಅವಕಾಶವನ್ನು ಕಲ್ಪಿಸಬೇಕೆಂಬುದು ಆಶಯವಾಗಿದೆ.

ಕೀ ವರ್ಡ್ಸ್:  ಅಂಗವಿಕಲತೆ, ಅದಿನಿಯಮಗಳು, ಆರ್ಥಿಕ ಸೌಲಭ್ಯಗಳು, ಪುನರ್ವಸತಿ, ಹಕ್ಕುಗಳ ಸಂರಕ್ಷಣೆ, ಸಮಾನ ಅವಕಾಶ, ಸಬಲೀಕರಣ.

ಪೀಠಿಕೆ

ವಿಶ್ವದಲ್ಲಿ ಮಾನವ ಸೃಷ್ಟಿಯು ವೈಶಿಷ್ಟ್ಯವಾದದ್ದು, ನೈಸರ್ಗಿಕ ಹಾಗೂ ಸಾಮಾಜಿಕ ಜೀವನವು ಮಾನವನ ನಾಗರಿಕತೆ ಹಾಗೂ ಸಾಂಸ್ಕೃತಿಕ ವಿಕಾಸದ ಬಹುಮುಖ್ಯ ಅಂಶವಾಗಿ ಬೆಳೆದು ಬಂದಿದೆ. ಈ ಸೃಷ್ಟಿಯಲ್ಲಿ ಜನಿಸಿದ ಪ್ರತಿಯೊಬ್ಬ ಮನುಷ್ಯನು ತನ್ನ ಅಸ್ತಿತ್ವಕ್ಕಾಗಿ ಹಕ್ಕು ಹಾಗೂ ಅವಕಾಶಗಳನ್ನು ಬಯಸುತ್ತಾನೆ. ಈ ನಿಟ್ಟಿನಲ್ಲಿ ರಾಜಕೀಯ ಚಿಂತಕರಾದ ‘ರೂಸೋ’ ಅವರು ನೈಸರ್ಗಿಕ ಹಕ್ಕಿನ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. “ಪ್ರತಿಯೊಬ್ಬರು ನೈಸರ್ಗಿಕವಾಗಿ ಸ್ವತಂತ್ರರಾಗಿ ಹುಟ್ಟುತ್ತಾರೆ, ನಂತರ ಸಮಾಜದ ಸಂಕೋಲೆಗಳಲ್ಲಿ ಬಂದಿತರಾಗುತ್ತಾರೆ ಎಂದು ಹೇಳಿದ್ದಾರೆ. ಈ ದೃಷ್ಟಿಯಲ್ಲಿ ಹಿಂದಿನಿಂದಲೂ ಮಾನವ ಸಮಾಜವು ಅಸಮಾನತೆ, ಹಾಗೂ ತಾರತಮ್ಯಗಳನ್ನು ಹೊಂದಿದ್ದು ಸಾಮಾಜಿಕ ಸಮಾನತೆಯನ್ನು ಕಡೆಗಣಿಸುತ್ತಾ ಬರಲಾಗಿದೆ. ಆದರೆ ವಿಶ್ವದಲ್ಲಿ ಮಾನವೀಯ ಮೌಲ್ಯಗಳು, ವೈಚಾರಿಕ ಚಿಂತನೆಗಳು ಹಾಗೂ ಸುಧಾರಣಾ ಕ್ರಮಗಳು ಮೂಡಿಬಂದಿದುದ್ದರ ಫಲವಾಗಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಮತ್ತು ಸಬಲೀಕರಣದ ಪರಿಕಲ್ಪನೆಗಳು ಹುಟ್ಟಿಕೊಂಡವು.

ವಿಶ್ವದ ಯಾವುದೇ ಸಮಾಜ ಅಥವಾ ದೇಶದಲ್ಲಿ ‘ಅಂಗವಿಕಲರು’ (Disabled) ಇರುವಿಕೆಯು ಸಹಜವಾಗಿ ಕಂಡುಬರುತ್ತದೆ. ಅಂಗವಿಕಲತೆ ‘ಜನನಪೂರ್ವ’ (Pre nartal) ಹಾಗೂ ಜನನ ನಂತರದ (Post nartal) ಅನೇಕ ಕಾರಣಗಳಿಂದ ಉಂಟಾಗಿದ್ದು ಅದು ಆ ವ್ಯಕ್ತಿಯ ಜೀವನ ಸಾಧನೆಗೆ ಮತ್ತು ಸಮಾಜದಲ್ಲಿ ಪಾಲ್ಗೊಳ್ಳುವಿಕೆಯಲ್ಲಿ ಕ್ಲಿಷ್ಟವಾದ ಸಮಸ್ಯೆಯನ್ನು ಉಂಟುಮಾಡುತ್ತದೆ. ಹೀಗೆ ಮಾನವ ಸಮಾಜದಲ್ಲಿ ಅಂಗವಿಕಲತೆ ಮತ್ತು ಅಂಗವಿಕಲರು ಒಂದು ಜಾಗತಿಕ ಪ್ರಶ್ನೆಯಾಗಿದ್ದು, ಪುರಾತನ ಕಾಲದಿಂದಲೂ ಸಮಾಜದಲ್ಲಿ ಅಂಗವಿಕಲರು ಜೀವಿಸುವ ಹಕ್ಕನ್ನು ಕಳೆದುಕೊಂಡಿದ್ದರು, ವಿಶ್ವದಲ್ಲಿ ಪ್ರಾಚೀನ ಸಮಾಜದಿಂದಲೂ ಅಂಗವಿಕಲತೆಯುಳ್ಳ ವ್ಯಕ್ತಿಗಳನ್ನು ವಿಭಿನ್ನ ದೃಷ್ಠಿಕೋನದಲ್ಲಿ ನೋಡಲಾಗಿದೆ. ಆರಂಭದಲ್ಲೂ ಮೂರನೇ ಅಥವಾ ನಾಲ್ಕನೇ ಶತಮಾನದಲ್ಲಿ ‘ಸುಮಾತ್ರ’ ಮತ್ತು ‘ಪಾಲಿನೇಷಿಯ’ ದ್ವೀಪಗಳ ಬುಡಕಟ್ಟು ಜನರು ಅಂದರು ಮತ್ತು ಅಂಗವಿಕಲರನ್ನು ಕೊಂದು ಬೇಯಿಸಿ ತಿನ್ನುತ್ತಿದ್ದರು. ಉದಾ:- ಗ್ರೀಕ್ ನಾಟಕಕಾರ ಈಡಿಪಸ್ ಆತ್ಯಹತ್ಯೆಗೆ ಅಂಧರನ್ನು ಪ್ರೇರೇಪಿಸುತ್ತಿದ್ದುದನ್ನು, ಹಾಗೂ ಗ್ರೀಕ್ ಗಣಿತಶಾಸ್ತ್ರಜ್ಞ ಮತ್ತು ಖಗೋಳ ಶಾಸ್ತ್ರಜ್ಞ ಇರಟೋಸ್ತೆನಿಸ್ ಅಂಧತ್ವದಿಂದ ಉಪವಾಸ ಮಾಡಿ ಸಾವನ್ನಪ್ಪಿದ, ಎಂದು ತಿಳಿದು ಬಂದಿದೆ.

ವಿಶ್ವದಲ್ಲಿ ಮಾನವೀಯ ಯುಗದ ಚಿಂತನಾ ಕ್ರಮಗಳು ಹಾಗೂ ಸುಧಾರಣೆಗಳು ಮೂಡಿದಂತೆ ನಾಗರಿಕತೆ ಹಾಗೂ ಆಧುನಿಕತೆಯ ಬೆಳವಣಿಗೆಗೆ ಕಾರಣವಾಯಿತು ಮತ್ತು ಅಂಗವಿಕಲರಿಗೆ ಕರುಣೆ ಬದಲಾಗಿ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಲಾಯಿತು. ಮಾನವ ಸಾಧನೆಗೆ ಅಂವಿಕಲತೆ ತೊಡಕಲ್ಲ ಎಂದು ತಿಳಿಸಿದ ಸುಧಾರಕರು ಆತ್ಮವಿಶ್ವಾಸದೊಂದಿಗೆ ಬದುಕುವಂತಹ ಪ್ರೇರಣೆಗಳನ್ನು ಮೂಡಿಸಿದರು. ಈ ದಿಸೆಯಲ್ಲಿ ಅಂಗವಿಕಲತೆ, ಸಾಧನೆಗೆ ಅಡ್ಡಿಯಲ್ಲ. ಅವರ ಸಾಧನೆ ಮತ್ತು ಸಲ್ಲಿಸುವ ಸೇವೆ ಅಮೋಘ ಹಾಗೂ ಅಸಾಧಾರಣವಾಗಿರುತ್ತದೆ ಎನ್ನಬಹುದು. ಹೀಗೆ ಆತ್ಮವಿಶ್ವಾಸದಿಂದ ಜಗತ್ತಿನ ಇತಿಹಾಸದ ವಿವಿಧ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದು ಸಮಾಜಕ್ಕೆ ಪ್ರೇರಣೆಯಾಗಿರುವ ಅನೇಕ ಸಾಧಕರನ್ನು ಇಲ್ಲಿ ಸ್ಮರಿಸಬಹುದು. ಅವರುಗಳೆಂದರೆ ಲೂಯಿಸ್ ಬ್ರೈಲ್, ಜಾನ್ ಕಿಡ್ಸ್, ಹೆಲನ್ ಕೆಲರ್, ಜಾನ್ ಎಫ್ ಕೆನಡಿ, ಸೂರ್ ದಾಸ್, ಗಾನಯೋಗಿ ಪಂಚಾಕ್ಷರಿ ಗವಾಯಿ, ಡಾ.ಪುಟ್ಟರಾಜು ಗವಾಯಿ, ಪ್ರಸ್ತುತ ಅಮೇರಿಕದ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಹಾಗೂ ವಿವಿಧ ಕ್ಷೇತ್ರಗಳಾದ ಕಲೆ, ಸಾಹಿತ್ಯ, ಸಂಸ್ಕೃತಿ, ನೃತ್ಯ, ಶಿಕ್ಷಣ, ವಿಜ್ಞಾನ, ವ್ಯಾಪಾರ, ಸಂಶೋಧನಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ನಮ್ಮ ನಡುವಿನ ಅನೇಕ ವಿಕಲಚೇತನ ಸಾಧಕರು ದೇಶದ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಮಾನವ ಕೇಂದ್ರಿತ ಹಾಗೂ ಜೀವನ ಕ್ರಮಗಳ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಿರುವ ವಿಶ್ವದಲ್ಲಿ ಅಭಿವೃದ್ಧಿ ಮಾದರಿಯ ಚಿಂತನೆ ಹಾಗೂ ಸಬಲೀಕರಣದ ಪರಿಕಲ್ಪನೆಗಳು ಆಯಾ ಕಾಲಮಾನಗಳಲ್ಲಿ ಬದಲಾಗುತ್ತಾ ಬಂದಿವೆ. ಮಾನವನ ಜ್ಞಾನ ಮತ್ತು ವಿಜ್ಞಾನದಲ್ಲಿನ ನೈಪುಣ್ಯತೆಯ ಬೆಳವಣಿಗೆಯು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ನಾಂದಿಯಾಗಬೇಕಾಗಿದೆ. ಈ ವಿಶಿಷ್ಟ ಚಿಂತನೆಗಳು ಮಾನವ ವಿಕಾಸದ ಮೂಲ ಆಶಯವಾಗಿ ಬೆಳೆದು ಬಂದಿದ್ದು ಅದು ವಿಶ್ವದ ಅನೇಕ ಅಂಗವಿಕಲ ಸಾಧಕರ ಜೀವನ ಸಾಧನೆಯಿಂದ ದೃಢಪಟ್ಟಿದೆ.

ಪ್ರಾಚೀನ ಭಾರತದಲ್ಲಿ ಅಂಗವಿಕಲರ ಸ್ಥಿತಿಗತಿ

ಪ್ರಾಚೀನಕಾಲದ ಭಾರತ ದೇಶವು ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿತು. ಇದೇ ತತ್ವವನ್ನು ಸಮಾಜಸುಧಾರಕರು ಮತ್ತು ರಾಜಪ್ರಭುತ್ವದ ಆಳ್ವಿಕೆಯಲ್ಲಿಯೂ ಪ್ರತಿಪಾದಿಸಿದ್ದಾರೆ. ಜಮೀನ್ದಾರಿ ಪದ್ಧತಿಯಲ್ಲೂ ತನ್ನ ಸಹಚರರಿಗೆ ಸಹಾಯ ಮಾಡುವುದು ರೂಢಿಯಲ್ಲಿತ್ತು. ಈ ಸಂಪ್ರದಾಯದಂತೆ ಅಂಗವಿಕಲತೆಯುಳ್ಳ ಮನುಷ್ಯರಿಗೆ ಸಮಾಜ ರಕ್ಷಣೆ ಮತ್ತು ಸಹಾಯವನ್ನು ನೀಡುತ್ತಾ ಬಂದಿದೆ.

ಮಹಾಭಾರತದಲ್ಲಿನ ಉಲ್ಲೇಖದಂತೆ ಅಂಗವಿಕಲರನ್ನು ಕರುಣೆಯಿಂದ ನೋಡಲಾಗುತ್ತಿತ್ತು. ನಾರದರು ಯುಧಿಷ್ಟಿರನನ್ನು ಒಮ್ಮೆ ಕೇಳುತ್ತಾರೆ. ನೀನು ನಿನ್ನ ಪ್ರಜೆಗಳಲ್ಲಿರುವ ಕುರುಡರು, ಕಿವುಡರು ಮತ್ತು ಇತರೆ ನ್ಯೂನತೆಗಲಿಂದ ಬಳಲುತ್ತಿರುವವರನ್ನು ತಂದೆಯಂತೆ ಸಲಹುವೆಯಾ? ಯುದ್ಧದಲ್ಲಿ ಅಂಗವಿಕಲರಾದವರನ್ನು ಸಲಹುವುದು ರಾಜನ ಕರ್ತವ್ಯವಾಗಿತ್ತು. ನಿನ್ನ ಪರವಾಗಿ ಯುದ್ಧ ಮಾಡಿ ಅಂಗವಿಕಲರನ್ನು ನೀನು ಸಲಹುವೆಯಾ? ಎಂದು ನಾರದರು ಯುಧಿಷ್ಟಿರನನ್ನು ಕೇಳುತ್ತಾರೆ.

ಬೌದ್ಧಾಯಣದಲ್ಲಿ ಹೇಳಿರುವಂತೆ, ಅಂಗವಿಕಲರಿಗೆ ಮತ್ತು ಅಸಮರ್ಥರಿಗೆ ಆಹಾರ, ಬಟ್ಟೆ ಮತ್ತು ವಸತಿಯನ್ನು ಒದಗಿಸುವುದು ರಾಜನ ಕರ್ತವ್ಯವಾಗಿತ್ತು. ಅಷ್ಟಾವಕ್ರ (ಎಂಟು ಶಾರೀರಿಕ ನ್ಯೂನತೆಗಳುಳ್ಳವನು)ನನ್ನು ಶತ್ರುಗಳು ಮೊದಲಿಗೆ ಅಪಹಾಸ್ಯ ಮಾಡಿದರೂ ನಂತರದಲ್ಲಿ ಅವನ ಬುದ್ಧಿಮತ್ತೆಗೆ ತಲೆದೂಗುತ್ತಾರೆ. ರಾಮಾಯಣದಲ್ಲಿ ಕೈಕೇಯಿಯ ಪ್ರಿಯ ಸೇವಕಿಯಾಗಿದ್ದ, ಗೂನು ಬೆನ್ನುಗಳನ್ನುಳ್ಳ ಮಂಥರೆ, ವಿಷ್ಣುವಿನ ಅವತಾರವಾದ ವಾಮನ  (ಕುಳ್ಳುಗಿನ ವ್ಯಕ್ತಿ) - ಈ ಎಲ್ಲ ಉದಾಹರಣೆಗಳು, ಹಿಂದೂ ಸಮಾಜ ಅಂಗವಿಕಲರ ಸಾಮಾರ್ಥ್ಯವನ್ನು ಗುರುತಿಸಿದೆ ಎಂಬ ಅಂಶವನ್ನು ತೋರಿಸುತ್ತದೆ.

ಬೌದ್ಧಮತದ ಪ್ರಭಾವದಿಂದಾಗಿ ಗುಪ್ತರ ಕಾಲದಲ್ಲಿ ಅಂಗವಿಕಲರ ಬಗ್ಗೆ ಸಹಿಷ್ಣುತೆ ಇರುವುದನ್ನು ಕಾಣಬಹುದು. ಬೌದ್ಧತತ್ವ ಕರುಣೆ, ಸಹಾಯ, ಸತ್ಯ, ಪವಿತ್ರತೆ, ಒಳ್ಳೆಯತನ ಮತ್ತು ಅಹಿಂಸೆ ಮುಂತಾದ ಗುಣಗಳನ್ನು ಬೋಧಿಸಿದೆ. ಬುದ್ಧನ ಅನುಯಾಯಿಗಳು ತಮ್ಮ ಗುರುವಿನ ಬೋಧನೆಗಳಾದ ಅಂಗವಿಕಲರನ್ನು ಕರುಣೆಯಿಂದ ನೋಡುವ ಸ್ವಭಾವವನ್ನು ರೂಢಿಸಿಕೊಂಡಿದ್ದರು. ಇದೇ ಸಮಯದಲ್ಲಿ ಕ್ರಿ.ಪೂ 6ನೇ ಶತಮಾನದಲ್ಲಿ ಜೈನಧರ್ಮ ಜನ್ಮತಾಳಿತು. ಜೈನ ಧರ್ಮವೂ ಅಹಿಂಸೆ ಮತ್ತು ಇತರರಿಗೆ ಸಹಾಯ ಮಾಡುವ ಗುಣಗಣನ್ನು ಬೋಧಿಸಿದೆ.

ಖ್ಯಾತ ಅರ್ಥಶಾಸ್ತ್ರಜ್ಞನಾದ ಕೌಟಿಲ್ಯನು ಕುಳ್ಳಗಿನ ವ್ಯಕ್ತಿಗಳನ್ನು ಮತ್ತು ಗೂನುಬೆನ್ನುಳವರನ್ನು ಬೇಹುಗಾರರನ್ನಾಗಿ ನೇಮಿಸಿಕೊಳ್ಳಬೇಕೆಂದು ಸಲಹೆಯನ್ನು ನೀಡಿದ್ದಾನೆ. ಸಮುದ್ರಗುಪ್ತನ ಕಾಲದಲ್ಲಿನ ನಾಣ್ಯಗಳಲ್ಲಿ ರಾಜನ ಪಕ್ಕದಲ್ಲಿ ಕುಳ್ಳವ್ಯಕ್ತಿಯಿರುವ ಚಿತ್ರವನ್ನು ಕಾಣಬಹುದು. ಕ್ರಿ.ಶ 400ರಲ್ಲಿ ಭಾರತಕ್ಕೆ ಬಂದಿದ್ದ ಫಾಹೆಯಾನ್ ಹೀಗೆ ಬರೆಯುತ್ತಾರೆ. ‘ಈ ದೇಶದಲ್ಲಿರುವವರು ಉತ್ತಮ ವ್ಯಕ್ತಿಗಳು, ಎಲ್ಲಾ ದೇಶಗಳಲ್ಲಿರುವ ಬಡವರು ಮತ್ತು ಅಂಗವಿಕಲತೆಯಿಂದ ಬಳಲುತ್ತಿರುವ ಜನರಿಗೊಸ್ಕರ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ.

ಭಾರತೀಯ ಡಾರ್ವಿನಿಸಂ ಪ್ರಕಾರ ‘ಅಂಗವಿಕಲತೆ ಕರ್ಮದ ಸಿದ್ಧಾಂತ’ವೆಂದು ಪುರಾತನ ಭಾರತ ತಿಳಿದಿತ್ತು ಈ ಸಿದ್ಧಾಂತದ ಪ್ರಕಾರ ಒಬ್ಬ ವ್ಯಕ್ತಿಯ ಅಂದಿನ ಸ್ಥಿತಿಗತಿ ಆತ ಹಿಂದೆ ಮಾಡಿದ ಕರ್ಮದ ಫಲ. ಅದೇ ರೀತಿಯಲ್ಲಿ ಇಂದಿನ ಕೆಲಸ ಅಥವಾ ಕಾರ್ಯ ಅವನ ಮುಂದಿನ ಜೀವನದ ಬಗೆಯನ್ನು ತೀರ್ಮಾನಿಸುತ್ತದೆ. ಅಂದರೆ ಇಂದು ಒಳ್ಳೆಯದಾಗುತ್ತದೆ ಎಂಬ ನಂಬಿಕೆ.  ಅಂಗವಿಕಲತೆಯ ಬಗ್ಗೆ ಮೊದಲ ಉಲ್ಲೇಖ ಕ್ರಿ.ಪೂ ಸುಮಾರು 5000 ವರ್ಷಗಳ ಹಿಂದಿನ ಕೃತಿಯಾದ ರಾಮಾಯಣದಲ್ಲಿ ಕೈಕೇಯಿಯ ದಾಸಿ ಮಂಥರೆ ಕುರೂಪಿಯಾಗಿ ಕಂಡು ಬರುವ ಮೂಲಕ ಲಭ್ಯವಾಗುತ್ತದೆ. ನಾನಾ ವಿಧವಾದ ಬುದ್ಧಿಶಕ್ತಿಯ ತೊಂದರೆಗಳು ‘ಸಂಖ್ಯಾ’ ವೇದಾಂತದಲ್ಲಿದೆ. ಮಾನಸಿಕ ನ್ಯೂನತೆಯಿಂದ ಬಳಲುತ್ತಿರುವ ತಾಯಿ-ತಂದೆಯರು ಅಂಗವಿಕಲತೆವುಳ್ಳ ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ಗಾರ್ಗೆಯ ಉಪನಿಷತ್ತಿನಲ್ಲಿದೆ. ಕ್ರಿ.ಪೂ. ಸುಮಾರು 500ರಲ್ಲಿ ಶಿಶು ಸಹಜ ಮಾದರಿಯನ್ನೂ ಮಾನಸಿಕ ತೊಂದರೆಯನ್ನೂ ಉಪನಿಷತ್ತಿನಲ್ಲಿ ವಿವರಿಸಲ್ಪಟ್ಟಿದೆ. ಕ್ರಿ.ಪೂ.185-71ರಲ್ಲಿ ಪ್ರಸ್ತಾಪಿಸಿದ್ದಾನೆ. ಪತಂಜಲಿ ಅಂಗವಿಕತೆಯುಳ್ಳ ವ್ಯಕ್ತಿಗೆ ಯೋಗ ಚಿಕಿತ್ಸೆಯನ್ನು ಕ್ರಿ.ಪೂ. 4ನೇ ಶತಮಾನದಲ್ಲಿ ಅಂದರೆ ಮೌರ್ಯರ ಕಾಲದಲ್ಲಿ ಕೌಟಿಲ್ಯ ಮುಂದೆ ಬಂದು ಅಂಗವಿಕತೆವುಳ್ಳವರ ಬಗ್ಗೆ ಮಾತಿನಲ್ಲಿ ಅಥವಾ ನಡವಳಿಕೆಯಲ್ಲಿ ಅವಹೇಳನ ಮಾಡುವುದರ ಬಗ್ಗೆ ನಿಷೇದಾಜ್ಞೆಯನ್ನು ಹೊರಡಿಸಿದನು. ಅಂಗವಿಕಲರಿಗೆ ಆಸ್ತಿಯ ಹಕ್ಕು ಭಾಧ್ಯತೆಗಳನ್ನು ನೀಡಿ ಅನೇಕರನ್ನು ಆತನ ಸ್ಥಳದಲ್ಲಿ ಬೇಹುಗಾರರನ್ನಾಗಿ ನೇಮಿಸಿದನು. ನಂತರ ಅಶೋಕ ಚಕ್ರವರ್ತಿ, ಆಸ್ಪತ್ರೆಗಳನ್ನು, ಹುಚ್ಚಾಸ್ಪತ್ರೆಗಳನ್ನು ತೊಂದರೆವುಳ್ಳವರಿಗೆ ಸ್ಥಾಪಿಸಿದನು. ಕ್ರಿ.ಪೂ.ಮೊದಲನೇ ಶತಮಾನದಲ್ಲಿ ವಿಷ್ಣುಶರ್ಮನು ದಡ್ಡಾ ರಾಜಪುತ್ರರಿಗಾಗಿ ವಿಶೇಷ ವಿಧ್ಯಾಭ್ಯಾಸ ನೀಡುವ ‘ಪಂಚತಂತ್ರ’ ಎಂಬ ಹೆಸರಿನ ಕೃತಿ ರಚಿಸಿದೆ. ಇದರಲ್ಲಿ ದಡ್ಡ ಪುತ್ರರಾಗಿ ವಿಶೇಷ ವಿದ್ಯಾಭ್ಯಾಸಕ್ಕೆ ಮಹತ್ವ ನಿಡಿದ್ದನ್ನು ಇಲ್ಲಿ ಕಾಣಬಹುದು.

ಮಧ್ಯಕಾಲದ ಭಾರತದಲ್ಲಿ ಅಂಗವಿಕಲರ ಸ್ಥಿತಿಗತಿ ಬಗ್ಗೆ ಹೇಳುವುದಾದರೆ

ಭಾರತದಲ್ಲಿ ಮಧ್ಯಕಾಲೀನ ಯುಗವು ಸುಧಾರಣಾ ಯುಗವಾಗಿದ್ದು, ಈ ಕಾಲದ ರಾಜರ ಆಳ್ವಿಕೆಯಲ್ಲಿ ಅನೇಕ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಈ ಸಂದರ್ಭದ ಸಾಮಾಜಿಕ ಸುಧಾರಣೆಗಳು, ಹಾಗೂ ಭಕ್ತಿಚಳುವಳಿಯ ದೇಶದ ತುಂಬೆಲ್ಲಾ ಹರಡಿಕೊಂಡಿದ್ದವು. ಹಿಂದೂ ರಾಜರ ಹಾಗೆ ಮೊಘಲ್ ಅರಸರು ಕೂಡ ಅಂಗವಿಕಲರು ಮತ್ತು ವಯೋವೃದ್ಧರ ಕಲ್ಯಾಣವನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮಹಮದ್ ತೊಘಲಕ್ ರಂತಹ ಸುಲ್ತಾನರು ದುರ್ಬಲ ವರ್ಗಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಸಾರ್ವಜನಿಕ ದತಿಯನ್ನು, ಅವರ ಕಲ್ಯಾಣಕ್ಕಾಗಿ ಬಳಸುತ್ತಿದ್ದರು. ಬಹುಮುಖ್ಯವಾಗಿ ಫಿರೋಜ್ ಷಾ ತುಘಲಕ್ ಹಾಗೂ ಷೇರ್ ಷಾ ರವರು ಜನರ ಕ್ಷೇಮಾಭಿವೃದ್ಧಿ, ಸಾಧಿಸಲು ಮಾದರಿ ಆಡಳಿತವನ್ನು ನೀಡಿದ್ದಾರೆ. ಈ ಆಡಳಿತದ ಅವಧಿಯಲ್ಲಿ ಸಾರ್ವಜನಿಕ ದತ್ತಿ ಸಂಸ್ಥೆಗಳು ಮಸೀದಿಗಳು, ಆಸ್ಪತ್ರೆಗಳು ಮತ್ತು ಅನಾಥಾಲಯಗಳನ್ನು ಆರಂಭಿಸುವುದರೊಂದಿಗೆ ಅಂಗವಿಕಲರು ಮತ್ತು ಅನಾಥರ ಅಭಿವೃದ್ಧಿಗಾಗಿ ಹಮ್ಮಿಕೊಂಡ ಕಲ್ಯಾಣ ಕಾರ್ಯಕ್ರಮಗಳನ್ನು ಮನಗಾಣಬಹುದಾಗಿದೆ. ಹಾಗೆಯೇ ರಾಜ ಅಕ್ಬರ್ ಮಹಾಶಯನು ಬಡವರ, ಅಂಗವಿಕಲತೆಯುಳ್ಳ ವ್ಯಕ್ತಿಗಳ ಮತ್ತು ಅನಾಥರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸಿರುವುದನ್ನು ಸಹ ನೋಡಬಹುದಾಗಿದೆ. ಈ ಮಧ್ಯಕಾಲದಲ್ಲಿ ಭಕ್ತಿ ಚಳುವಳಿಯು ಜನರಲ್ಲಿ ಆಧ್ಯಾತ್ಮಿಕತೆ ಮತ್ತು ಪರೋಪಕಾರ ತತ್ವಗಳನ್ನು ದೇಶದ ತುಂಬೆಲ್ಲಾ ಪ್ರಚುರಪಡಿಸಿತು. ಇದರಿಂದ ಪ್ರಭಾವಿತರಾದ ಅನೇಕ ಜನರು ಸುಧಾರಣಾ ಪ್ರಕ್ರಿಯೆಯಲ್ಲಿ ತೊಡಗಿದರು. ಈ ರೀತಿಯಲ್ಲಿ ಅಂಧ ಕವಿ ಸೂರ್ ದಾಸ್ ಅಗ್ರಮಾನ್ಯನಾಗಿದ್ದು ತನ್ನ ಅಶುಕವಿತೆಗಳನ್ನು ರಚಿಸುವ ಮೂಲಕ ತುಳಸೀದಾಸರಷ್ಟೇ ಮಾನ್ಯತೆಯನ್ನು ಪಡೆದಿದ್ದರು. ಆ ಕಾಲದ ನಾಯಕರು ಮತ್ತು ಜನರು ಆಧ್ಯಾತ್ಮಿಕ ಭಾವನೆಯನ್ನು ಹೊಂದಿದ್ದು, ದೇವರ ಹೃದಯದಲ್ಲಿ ಎಲ್ಲಾ ಮಾನವರಿಗೂ ಸ್ಥಾನ ಇದ್ದು, ಎಲ್ಲರ ಹೃದಯದಲ್ಲಿ ದೇವರು ವಾಸವಾಗಿದ್ದಾನೆ ಎಂದು ಭಾವಿಸಿದ್ದರು. ಹಾಗಾಗಿ ಅವರು ವಿಶಾಲ ಹೃದಯವಂತರಾಗಿ ಅಂಗವಿಕಲರನ್ನು ಪ್ರೀತಿಯಿಂದ ಕಾಣುವಂತಹವರಾಗಿದ್ದರು.

ಆಧುನಿಕ ಭಾರತದಲ್ಲಿ ಅಂಗವಿಕಲರ ಸ್ಥಿತಿಗತಿ ನೋಡುವುದಾದರೆ

19ನೇ ಶತಮಾನದಿಂದ ಈಚೆಗೆ ಅಂಗವಿಕಲರ ಬಗ್ಗೆ ಸಮಾಜ ಹೊಂದಿದ್ದ ದೃಷ್ಠಿಕೋನವೆ ಬದಲಾಯಿತು ಎಂದರೆ ತಪ್ಪಾಗಲಾರದು. ಕಾರಣ ವೈಜ್ಞಾನಿಕತೆ ಬೆಳೆದಂತೆ ಮಾನವ ಸಂಪನ್ಮೂಲದ ಮಹತ್ವ ಹೆಚ್ಚಾಯಿತು. ನಂತರ ಮಾನವ ಹಕ್ಕುಗಳ ರಕ್ಷಣೆಗೆ ಸರ್ಕಾರಗಳು ಮತ್ತು ಸಾಮಾಜಿಕ ವ್ಯವಸ್ಥೆಗೆ ಹೆಚ್ಚು ಹೆಚ್ಚು ಒತ್ತು ನೀಡತೊಡಗಿತು. ಅಂಗವಿಕಲರಿಗೂ ಸೂಕ್ತ ರೀತಿಯ ಸೌಲಭ್ಯಗಳನ್ನು ಒದಗಿಸಿದಲ್ಲಿ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬಲ್ಲರು ಎಂಬ ಸಕಾರಾತ್ಮಕ ಮನೋಭಾವನೆ ಜನರಲ್ಲಿ ಮೂಡಿತು. ಹಾಗೆಯೆ ಅಸಮರ್ಥರಿಗೆ ರಕ್ಷಣೆ ನೀಡಿ ಅವರ ಹಕ್ಕುಗಳನ್ನು ಕಾಪಾಡಬೇಕು ಎಂಬ ಸಾಮಾಜಿಕ ಕಳಕಳಿ ಸಮುದಾಯಗಳಲ್ಲಿ ಇತ್ತು. ಆಯಾದೇಶಗಳಲ್ಲಿ ರಾಜರುಗಳು, ಧರ್ಮಾಧಿಕಾರಿಗಳು ಮುಂದುವರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗವಿಕಲರಿಗೆ ಅನುಕಂಪ ತೋರುವುದದರ ಬದಲಿಗೆ ಅವರ ಸಬಲೀಕರಣಕ್ಕೆ ಬೇಕಾದ ಪುನರ್ವಸತಿ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾಯಿತು.

19ನೇ ಶತಮಾನದ ನಂತರದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಪುನರುಜ್ಜೀವನ ಸುಧಾರಣೆಗಳು ಮಾನವೀಯತೆಯನ್ನು ಎತ್ತಿ ಹಿಡಿದವು. ಮನುಷ್ಯರನ್ನು ಹಿಂಸಿಸಬಾರದು, ಅಂಗವಿಕಲರ ಸಂರಕ್ಷಣೆಯಿಂದ ಮೋಕ್ಷ ಪ್ರಾಪ್ತವಾಗುತ್ತದೆ, ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು ಹಾಗೂ ಪ್ರತಿಭೆಗೆ ಅದ್ಯತೆ ನೀಡಬೇಕೆಂದು ಚಿಂತಕರಾದ ‘ಜಾನ್ ಮಿಲ್ಟನ್’ ತಮ್ಮ ಪ್ಯಾರಿಡೈಸ್ ಲಾಸ್ಟ್ ಮತ್ತು ‘ಪ್ಯಾರಡೈಸ್ ರಿ ಗೈಡ್’ ಎಂಬ ಗ್ರಂಥಗಳಲ್ಲಿ ಉಲ್ಲೇಖಿಸಿದರು. ಹಾಗೆಯೇ ಮಾನವೀಯ ಯುಗವು ಕ್ರೈಸ್ತನ ಕಾಲದಲ್ಲಿ ಆರಂಭವಾಯಿತು. ಯೇಸುವು ಅಂಧರ, ಅಂಗವಿಕಲರ ದೀನರ, ದುರ್ಬಲರ ಉದ್ಧಾರಕ್ಕೆ ಜನಿಸಿದನು ಎನ್ನಲಾಗಿದೆ. ಈ ಯುಗವು ಮಾನವೀಯ ಹಾಗೂ ಧಾರ್ಮಿಕ ಭಾವನೆಯ ಬೆಳವಣಿಗೆಯೊಂದಿಗೆ ಅಂಗವಿಕಲರ ಕಲ್ಯಾಣಕ್ಕೆ ನಾಂದಿ ಹಾಡಿತು. ವ್ಯಕ್ತಿಗೆ ಜೀವಿಸುವ ಹಕ್ಕು ಒದಗಿಸಿಕೊಟ್ಟಿದ್ದು ಈ ಯುಗದ ಪ್ರಮುಖ ಲಕ್ಷಣವಾಗಿದೆ. ಶ್ರವಣ ನ್ಯೂನತೆ ಇರುವವರನ್ನು ಶಪಿಸಿಬಾರದು, ದೇವರಿಗೆ ಅಂಜಿ ಜೀವಿಸಬೇಕು ಇತ್ಯಾದಿ ಜೀಸಸ್ ಕ್ರೈಸ್ತನ ಭೋಧನೆಯ ತತ್ವಗಳು ಇದಕ್ಕೆ ನಿದರ್ಶನವಾದವು.

ಮುಂದುವರಿದಂತೆ ಅಂಗವಿಕಲರ ಅಭಿವೃದ್ಧಿ ಚಿಂತನೆ ಹಾಗೂ ಕಲ್ಯಾಣ ಕಾರ್ಯಕ್ರಮಗಳು ಜಾರಿಗೊಂಡವು. ಹೆಲನ್ ಕೆಲರ್ ಅಮೆರಿಕಾದ ಪ್ರತಿಭಾನ್ವಿತ ಬಹುಸ್ವರೂಪದ ಅಂಗವಿಕಲ ಮಹಿಳೆ ವಿಶ್ವದಾದ್ಯಂತ ಸಂಚರಿಸಿ ಅಂಗವಿಕಲರ ಕಲ್ಯಾಣ ಕುರಿತು ಹಲವು ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಂಡು ಅನೇಕ ಗ್ರಂಥಗಳನ್ನು ರಚಿಸಿ ವಿಶ್ವವಿಖ್ಯಾತಿಯಾಗಿ ಸಮಾಜದ ಮೆಚ್ಚುಗೆಗೆ ಪಾತ್ರರಾದರು. ಹೀಗೆ 21ನೇ ಶತಮಾನದಲ್ಲಿ ಬಹುವಿಧದ ಅಂಗವಿಕಲ ವ್ಯಕ್ತಿಯಾದ ಯುವ ವಿಜ್ಞಾನಿ ಸ್ವೀಪನ್ ಹಾಕಿನ್ಸ್ ರವರು, ಐಸಾಕ್ ನ್ಯೂಟನ್ ನಂತರದ ಬಾಹ್ಯಕಾಶದ ಸಂಶೋಧನೆಯಲ್ಲಿ ಹೊಸ ಸಾಧನೆಗೈದರು. ಗ್ರಹಾಂಬೆಲ್ ರವರು ಕಿವುಡ ಮತ್ತು ಮೂಕರಾಗಿದ್ದರೂ ದೂರವಾಣಿ ಕಂಡು ಹಿಡಿದು ಅಂಗವಿಕಲರು ಏನನ್ನು ಬೇಕಾದರೂ ಸಾಧಿಸಬಹುದು ಮತ್ತು ಸಮಾಜದಲ್ಲಿ ಅವರು ಒಂದು ಭಾಗ ಎಂಬುದನ್ನು ತೋರಿಸಿಕೊಟ್ಟಿರುವುದು ಗಮನಾರ್ಹವಾದುದು.

ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿ ಆಡಳಿತದ ಸ್ಥಾಪನೆ ಹಾಗೂ ಆಧುನಿಕತೆ ಆರಂಭಗೊಂಡರೂ ಭಾರತದಲ್ಲಿ ಅಂಗವಿಕಲರ ಏಳ್ಗೆಗೆ ಬ್ರಿಟಿಷ್ ಸರ್ಕಾರ ಆರಂಭದಲ್ಲಿ ಆಸಕ್ತಿ ಮತ್ತು ಉತ್ಸಾಹದಿಂದ ಕೆಲಸಗಳನ್ನು ನಿರ್ವಹಿಸಲಿಲ್ಲ. ಆದರೆ ಕ್ರಿಶ್ಚಿಯನ್ ಸಂಸ್ಥೆಗಳು ಮತ್ತು ಧನಿಕ ಮಾಲೀಕರು ಸಮಾಜ ಸೇವೆಯಲ್ಲಿ ಆಸಕ್ತಿವಹಿಸಿ ಆಸ್ಪತ್ರೆಗಳು, ಅನಾಥಾಶ್ರಮಗಳನ್ನು ತೆರೆದರು. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಅಮೃತಸರದಲ್ಲಿ 1887ರಲ್ಲಿ ಕುರುಡ ಮಕ್ಕಳಿಗಾಗಿ ಶಾಲೆಯೊಂದನ್ನು ಆರಂಭಿಸಲಾಯಿತು. ಈ ಹಿಂದೆ 1884ರಲ್ಲಿ ಬಾಂಬೆಯಲ್ಲಿ ಕಿವುಡ ಮತ್ತು ಮೂಕ ಮಕ್ಕಳಿಗಾಗಿ ಶಾಲೆ ಆರಂಬಿಸಲಾಯ್ತು. 1896ರಲ್ಲಿ ‘ಪಲಾಯತ್ ಮಾರೆತ್’ ಎಂಬ ಸ್ಥಳದಲ್ಲಿ ಮತ್ತೊಂದು ಶಾಲೆಯನ್ನು ಆರಂಭಿಸಲಾಯಿತು. 1904 ರಿಂದ 1918ರವರೆವಿಗೆ ಕಿವುಡ ಮತ್ತು ಮೂಕ ಮಕ್ಕಳಿಗಾಗಿ ಶಾಲೆಗಳು ವಿವಿಧ ಕಡೆಗಳಲ್ಲಿ ಪ್ರಾರಂಭವಾದವು. ಅಂಗವೈಕಲ್ಯತೆಯಿಂದ ಬಳಲುತ್ತಿರುವವರಿಗೆ ಎರಡನೇ ಪ್ರಪಂಚ ಯುದ್ಧದವರೆವಿಗೆ ಯಾವುದೇ ಸಹಾಯ, ಸಹಕಾರ ಮತ್ತು ಜನಮನ್ನಣೆ ಲಭಿಸಿರಲಿಲ್ಲ. ಆದರೆ ಎರಡನೇ ಮಹಾಯುದ್ಧದ ನಂತರ ಸುಧಾರಣಾವಾದಿಯಾದ ಡಾ.ಎಂ.ಜಿ.ಕಿನಿಯವರು ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯ ಜನರ ಕಲ್ಯಾಣಕ್ಕಾಗಿ ಭಾರತದಲ್ಲಿ ಚಳುವಳಿಯನ್ನು ಆರಂಭಿಸುವ ಮೂಲಕ ಜಾಗೃತಿ ಮೂಡಿಸಿದರು.

ಸ್ವತಂತ್ರೋತ್ತರ ಭಾರತದ ಸಂವಿಧಾನ, ಅಂಗವಿಕಲರ ಕಾಯ್ದೆಗಳು ಮತ್ತು ಅಧಿನಿಯಮಗಳು

ಭಾರತವು ವಿಶ್ವದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನ ಪಡೆದಿದೆ. ಭಾರತವು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಸ್ವಾತಂತ್ರ್ಯಾನಂತರ ಭಾರತ ಸರ್ಕಾರವು ಹಲವಾರು ಯೋಜನೆಗಳನ್ನು ರಾಷ್ಟ್ರದ ಪ್ರಗತಿಗಾಗಿ ರೂಪಿಸಿ 1951ರಿಂದಲೂ ಅಳವಡಿಸಿಕೊಂಡು ಬಂದಿದೆ. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು ಅಲ್ಪಸಂಖ್ಯಾತ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು, ಕಲ್ಯಾಣನೀತಿಗಳನ್ನು ಜಾರಿಗೊಳಿಸಿದ್ದಾರೆ. ಈ ನೀತಿಗಳಿಂದ ಅಂಗವಿಕಲರು ಪ್ರಗತಿಯನ್ನು ಕಂಡಿವೆ ಎಂದು ಹೇಳಬಹುದು. ಈ ರೀತಿಯಲ್ಲಿ ಅಂಗವಿಕಲರು ದಯನೀಯ ಪರಿಸ್ಥಿತಿಯಲ್ಲಿದ್ದು ದೇಶ ಹಿಂದುಳಿಯಲು ಕಾರಣರಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯದ ನಂತರ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಅಂಗವಿಕಲರ ಪುನರ್ವಸತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಭಾರತ ಸಂವಿಧಾನವು ತಾತ್ವಿಕ ತಳಹದಿಯ ಮೇಲೆ ರಚಿತವಾಗಿದ್ದು, ಸಾಮಾಜಿಕ ಸಮಾನತೆ ಹಾಗೂ ಶೋಷಿತವರ್ಗಗಳ ಕಲ್ಯಾಣದಲ್ಲಿ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕೆಂಬುದು ಡಾ.ಬಿ.ಆರ್. ಅಂಬೇಡ್ಕರ್ ರವರ ಆಶಯವಾಗಿದೆ.

ಈ ನಿಟ್ಟಿನಲ್ಲಿ ಭಾರತ ಸಂವಿಧಾನವು 1950ರಲ್ಲಿ ಗಣರಾಜ್ಯವಾಗಿ ಮಾರ್ಪಟ್ಟು ತನ್ನ ದೇಶದ ಎಲ್ಲಾ ನಾಗರಿಕರ ಸರ್ವತೋಮುಖ ಅಭಿವೃದ್ಧಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಅದರಲ್ಲಿ ಅಂಗವಿಕಲರು ಹೊರತಾಗಿಲ್ಲ. ಸ್ವತಂತ್ರಾನಂತರ ಅಂಗವಿಕಲರು ಎಂದಾಕ್ಷಣ ಅಂಗವಿಕಲರ ಬಗ್ಗೆ ಎಲ್ಲಿಲ್ಲದ ಅನುಕಂಪ ಮತ್ತು ಕರುಣೆ, ಸಹಾನುಭೂತಿ ವ್ಯಕ್ತಪಡಿಸುವುದು ನಾಗರಿಕ ಸಮಾಜದ ಲಕ್ಷಣವೆಂದು ನಂಬಿದ್ದ ಕಾಲವೊಂದಿತ್ತು. 1995ರ ಫ್ರೆಬ್ರವರಿ 12ರಂದು ಸಂಸತ್ತಿನಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಅನುಮೋದಿಸಲ್ಪಟ್ಟು ದಿನಾಂಕ 7-2-1996ರಂದು ಅಧಿಸೂಚನೆಯನ್ನು ಹೊರಡಿಸಲಾಯಿತು. ಅಂಗವಿಕಲರನ್ನು ರಾಷ್ಟ್ರದ ಉಪಯುಕ್ತ ಪ್ರಜೆಗಳನ್ನಾಗಿ ಪರಿವರ್ತಿಸಲು ಅವರಿಗೆ ಸಮಾನ ಅವಕಾಶ ಮತ್ತು ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ, ರಾಜ್ಯಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಜವಾಬ್ದಾರಿಯನ್ನು ಹೊಂದಿದೆ. ಅಂಗವಿಕಲರಿಗಾಗಿ ಇರುವ ಹಕ್ಕುಗಳು ಮತ್ತು ಅವುಗಳನ್ನು ಜಾರಿಗೊಳಿಸುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ.

ಈ ದಿಸೆಯಲ್ಲಿ ಸ್ವಾತಂತ್ರ್ಯ ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ದೇಶದ ಸಮಸ್ತ ಪ್ರಜೆಗಳಿಗೆ ಹಕ್ಕುಗಳ ರಕ್ಷಣೆ ಹಾಗೂ ಸಮಾನ ಅವಕಾಶ ಕಲ್ಪಸಬೇಕೆಂದು ತಿಳಿಸಿದೆ. ಸಂವಿಧಾನದ 2 ಮತ್ತು 3ನೇ ಭಾಗದಲ್ಲಿ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನೀತಿ ನಿರ್ದೇಶಕ ತತ್ವಗಳು ಜನರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿದೆ. ಸಂವಿಧಾನದ ಆಶೆಯದಂತೆ ಸರ್ಕಾರವು ತನ್ನ ನೀತಿ ಮತ್ತು ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಶಿಕ್ಷಣ ಮತ್ತು ತರಬೇತಿ ಜ್ಞಾನದ ಬಲದಿಂದ ಅಂಗವಿಕಲರನ್ನು ಸಹ ದೈಹಿಕ ಹಾಗೂ ಮಾನಸಿಕವಾಗಿ ಸಶಕ್ತರನ್ನಾಗಿ ಮಾಡಬಹುದು. ಈ ದೃಷ್ಟಿಯಲ್ಲಿ ಮಹಾತ್ಮ ಗಾಂಧೀಜಿಯವರು 1920ರಲ್ಲಿ “strength does not come from physical capacity. It comes from an indomitable will” ಎಂದಿದ್ದಾರೆ. ಈ ನಿಟ್ಟಿನಲ್ಲಿ ಭಾರತದ ಸರ್ಕಾರವು ಅಂಗವಿಕಲರ ಸಬಲೀಕರಣಕ್ಕೆ ಸಂಬಂಧಿಸಿದಂತೆ 1995ರ ಅಂಗವಿಕಲರ ಅಧಿನಿಯಮವನ್ನು ಜಾರಿಗೊಳಿಸಿದೆ. (The persons with disabilities equal opportunities, protection of rights and full participation Act 1995)  ಈ ಕಾಯಿದೆಯ 4ನೇ ಅಧ್ಯಾಯದಲ್ಲಿ ಅಂಗವಿಕಲತೆಯ ಸಬಲೀಕರಣ ಕಾರ್ಯಕ್ರಮಗಳು ಜಟಿಲವಾದ ಸಮಸ್ಯೆಗಳೆಂದು ತಿಳಿಸಲಾಗಿದ್ದು ಸರ್ಕಾರವು ತನ್ನ ಯೋಜನೆಗಳನ್ನು ಈ ಕಾಯಿದೆಯ ಮೂಲಕ ಜಾರಿಗೊಳಿಸುವಲ್ಲಿ ನಾಗರೀಕ ಸಮಾಜ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಜನತೆಯಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ. ಜೊತೆಗೆ ಅಂಗವಿಕಲತೆ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸೂಚಿಸುತ್ತದೆ.

ಭಾರತ ಸಂವಿಧಾನದ ವಿಧಿ 15(4), 16(4) ಪ್ರಕಾರ ಸಮಾನತೆ, ಗೌರವ, ಘನತೆ ಹಾಗೂ ಅಂಗವಿಕಲರ ಹಕ್ಕುಗಳ ರಕ್ಷಣೆಯೊಂದಿಗೆ ಅವರಿಗೆ ಶಿಕ್ಷಣ, ಉದ್ಯೋಗ, ಸಾಮಾಜಿಕ ಭದ್ರತೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಬೇಕೆಂದು ತಿಳಿಸುತ್ತದೆ. ಭಾರತದಲ್ಲಿ 1905ರಲ್ಲಿ ತರಲಾದ ಸಂವಿಧಾನ ತಿದ್ದುಪಡಿಯಲ್ಲಿ (ಅಂಗವಿಕಲರ ವ್ಯಕ್ತಿಗಳ ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮವನ್ನು ಅಂಗೀಕರಿಸಿ ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ ಮತ್ತು ತರಬೇತಿ, ಪುನರ್ವಸತಿ, ಸಾಮಾಜಿಕ ಭದ್ರತೆ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಅಂಗವಿಕಲರು ತಮ್ಮ ಸಾಮರ್ಥ್ಯವನ್ನು ಎಲ್ಲ ಕ್ಷೇತ್ರಗಳಲ್ಲೂ ಪೂರ್ಣವಾಗಿ ಭಾಗವಹಿಸಲು ಅವಕಾಶ ನೀಡಿ, ಕ್ರಿಯಾಶೀಲ ಪ್ರಜೆಗಳನ್ನಾಗಿ ಮಾಡಬೇಕೆಂದು ಈ ಕಾಯ್ದೆಯಲ್ಲಿ ತಿಳಿಸಲಾಗಿದೆ. ಸರ್ಕಾರವು (ಎನ್.ಪಿ.ಆರ್.ಪಿ.ಡಿ) ರಾಷ್ಟ್ರೀಯ ಪುನರ್ವಸತಿ ಯೋಜನೆಯಡಿಯಲ್ಲೂ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಅಂಗವಿಕಲರ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದರೂ, ಅದು ಪೂರ್ಣ ಪ್ರಮಾಣದಲ್ಲಿ ಸಾಧಿಸಲಾಗಿಲ್ಲ ಎನ್ನುವುದು ನೋವಿನ ಸಂಗತಿಯಾಗಿದೆ.

ಭಾರತದಲ್ಲಿ ಅಂಗವಿಕಲರ ಕಲ್ಯಾಣ ಕಾಯ್ದೆಗಳು ಮತ್ತು ಅಧಿನಿಯಮ

ಕಲ್ಯಾಣ ರಾಜ್ಯದ ಆಶಯಗಳನ್ನೇ ಸರ್ಕಾರಗಳು ತನ್ನ ಶಾಸನಗಳು ಹಾಗೂ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಸಹಕಾರಗೊಳಿಸುತ್ತವೆ. ಈ ದಿಸೆಯಲ್ಲಿ ಅಂಗವಿಕಲರ ಸಬಲೀಕರಣಕ್ಕೆ ಸಹಾನುಭೂತಿ, ಕರುಣೆ, ಅನುಕಂಪ ಅಗತ್ಯವಿಲ್ಲ. ಅಂಗವಿಕಲರಿಗೆ ಬೇಕಾಗಿರುವುದು ಬದುಕಲು ಸಮಾನ ಅವಕಾಶಗಳು, ಈ ಅವಕಾದಿಂದ ವಂಚಿತರಾಗಿ ಮತ್ತು ಪರಾವಲಂಬಿಗಳಾಗಿ ಸಮಾಜಕ್ಕೆ ಹೊರೆಯಾಗುವುದನ್ನು ತಪ್ಪಿಸಲು ಅಂಗವಿಕಲರ ಬದುಕಿಗೆ ನಿಶ್ಚಿತ ರೂಪುರೇಷೆಗಳನ್ನು ಒದಗಿಸಿ ಅಂಗವಿಕಲರೂ ಕೂಡ ಇತರರಂತೆ ಸಮಾನವಾಗಿ ಬದಕಲು ಸಮಾನ ಅವಕಾಶಗಳನ್ನು ಒದಗಿಸಲು ಭಾರತದಲ್ಲಿ ರೂಪಿಸಲಾದ ಅಂಗವಿಕಲ ವ್ಯಕ್ತಿಗಳ ಅಧಿನಿಯಮ 1995 ಮತ್ತು ಅನೇಕ ಕಾಯ್ದೆಗಳು ಪ್ರೇರಣೆಯಾಗಿವೆ.

ಈ ನಿಟ್ಟಿನಲ್ಲಿ ಅಂಗವಿಕಲರ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಗೌರವಯುತ ಜೀವನ ನಡೆಸಲು ಹಲವಾರು ಶಾಸನಗಳು ಮತ್ತು ಕಾಯ್ದೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳು ಜಾರಿಗೆ ತಂದಿವೆ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ದೇಶದಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಹಲವಾರು ಕಾಯ್ದೆಗಳನ್ನು ಅನುಷ್ಠಾನಗೊಳಿಸಲಾಯಿತು. ಅವುಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ವಿಶ್ಲೇಷಿಸಲಾಗಿದೆ.

  1. ಮಾನಸಿಕ ಆರೋಗ್ಯ ಕಾಯಿದೆ - 1987 (MHA Act-1987)
  2. ಭಾರತೀಯ ಪುನರ್ವಸತಿ ಪರಿಷತ್ತು ಕಾಯ್ದೆ - 1992 (RCI Act-1992)
  3. ಅಂಗವಿಕಲರ ಅಧಿನಿಯಮ - 1995 (PWD Act-1995)
  4. ರಾಷ್ಟ್ರೀಯ ಟ್ರಸ್ಟ್ ಕಾಯಿದೆ - 1999 (NTA-1999)
  5. ಇತ್ತೀಚಿನ ಅಂಗವಿಕಲರ ಕಾನೂನು ಸುಧಾರಣಾ ಕ್ರಮಗಳು.

ಮಾನಸಿಕ ಆರೋಗ್ಯ ಕಾಯಿದೆ, 1987

1987ರ “ಮಾನಸಿಕ ಆರೋಗ್ಯ ಕಾಯಿದೆ” ಮಾನಸಿಕ ಆರೋಗ್ಯ ಮತ್ತು ಚಿಕಿತ್ಸೆಯ ಬಗ್ಗೆ ರೂಪುರೇಷೆಗಳನ್ನು ನಿರೂಪಿಸುವ ಕಾನೂನು. ಈ ಕಾಯಿದೆ ಜಾರಿಗೆ ಬಂದಿದ್ದು 1993ರಲ್ಲಿ ಆದರೆ ಕೆಲವು ರಾಜ್ಯಗಳಲ್ಲಿ ಕಾಯಿದೆಯನ್ನು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ. ಈ ಕಾಯಿದೆ ‘ಭಾರತದ ಹುಚ್ಚರ ಕಾಯಿದೆ, 1912ಯನ್ನು ರದ್ದುಗೊಳಿಸಿದೆ. ‘ಮಾನಸಿಕ ಆರೋಗ್ಯ ಕಾಯಿದೆ’ಯ ಉದ್ದೇಶ ಮಾನಸಿಕ ಅಸ್ವಸ್ಥರ ಚಿಕಿತ್ಸೆ ಮತ್ತು ಅವರ ಹಕ್ಕುಗಳ ಮತ್ತು ಆಸ್ತಿಪಾಸ್ತಿಗಳ ಬಗ್ಗೆ ನಿಯಮಗಳನ್ನು ರೂಪಿಸುವುದು. ಈ ಕಾಯಿದೆಯಲ್ಲಿ ಮುಖ್ಯವಾಗಿ ಕೆಳಕಂಡ ವಿಷಯಗಳ ಬಗ್ಗೆ ಕ್ರಮ, ನೀತಿ, ನಿಯಮಗಳನ್ನು ನಿರೂಪಿಸಲಾಗಿದೆ.

ಅಸ್ವಸ್ಥರು ತಾವೇ ಸ್ವತಃ ಸೇರಿಕೊಳ್ಳುವುದು, ಅಥವಾ ಪಾಲಕರು ಸೇರಿಸುವುದು, ಇವೆರಡೂ ಇಲ್ಲದಿದ್ದಲ್ಲಿ ಸ್ಥಳೀಯ ಮಾನಸಿಕ ಆಸ್ಪತ್ರೆಯ ವೈದ್ಯಾಧಿಕಾರಿ, ಸ್ಥಳೀಯ ದಂಡಾಧಿಕಾರಿಗೆ ಅರ್ಜಿ ಸಲ್ಲಿಸಿ ಆಸ್ಪತ್ರೆಯಲ್ಲಿ ದಾಖಲು ಮಾಡುವುದು. ಸಮಾಜದ ಮತ್ತು ಮಾನಸಿಕ ಅಸ್ವಸ್ಥರ ಹಿತವನ್ನು ರಕ್ಷಿಸಿ ಪರಸ್ಪರ ತೊಂದರೆ ಮತ್ತು ಅಪಾಯ ಆಗದಂತೆ ರಕ್ಷಿಸುವುದು ಮತ್ತು ಈ ಉದ್ದೇಶಕ್ಕಾಗಿ ಅಸ್ವಸ್ಥರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡುವುದು.

ಮಾನಸಿಕ ಅಸ್ವಸ್ಥರ ಪೋಷಕರು ಅವರಿಗೆ ಚಿಕಿತ್ಸೆ ಕೊಡಿಸಬೇಕು. ಸೂಕ್ತ ಚಿಕಿತ್ಸೆ ಕೊಡಸದಿದ್ದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿ, ದಂಡಾಧಿಕಾರಿಗಳ ಅನುಮತಿ ಪಡೆದು ಪೋಷಕರು ಸರಿಯಾದ ಚಿಕಿತ್ಸೆ ಮತ್ತು ಪೋಷಣೆ ನೀಡುವಂತೆ ಆದೇಶ ತರಬಹುದು. ಮಾನಸಿಕ ಆರೋಗ್ಯ ಕಾಯಿದೆಯನ್ನು ಜಾರಿಗೆ ತರುವ ಮುನ್ನ ರಾಜ್ಯಗಳು ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವುಗಳಲ್ಲಿ ‘ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ’ವನ್ನು ಸ್ಥಾಪಿಸುವುದು. ‘ಮೇಲ್ವಿಚಾರಕರ ಮಂಡಳಿ’ಯನ್ನು ರಚಿಸುವುದು.

ಈ ಕಾಯಿದೆಯು ಕೆಲವು ಪದಗಳನ್ನು ಮತ್ತು ವ್ಯಾಖ್ಯೆಗಳನ್ನು ಬದಲಾಯಿಸಿದೆ. ಕಾಯಿದೆಯು, ಹುಚ್ಚ, ಮಾನಸಿಕ, ಅಸ್ವಸ್ಥತೆಯುಳ್ಳ ಮಂದಿ, ಎಂಬ ಪದಗಳ ಬದಲಾಗಿ ‘ಮಾನಸಿಕ ಆಸ್ಪತ್ರೆಯುಳ್ಳ ವ್ಯಕ್ತಿ’ ಎಂಬ ಪದವನ್ನು ಉಪಯೋಗಿಸುತ್ತದೆ. ‘ಹುಚ್ಚಾಸ್ಪತ್ರೆ’ ಎಂಬ ಪದದ ಬದಲು ‘ಮನೋವ್ಯಾಧಿ ಆಸ್ಪತ್ರೆ’ ‘ಮನೋವ್ಯಾಧಿ ಪೋಷಣಾಲಯ’ ಮತ್ತು ‘ಮನೋವ್ಯಾಧಿ ತಜ್ಞ’ ಎಂಬ ಹೊಸ ಪದಗಳನ್ನು ಉಪಯೋಗಿಸುತ್ತದೆ.

ಕರ್ನಾಟಕದಲ್ಲಿ ಪ್ರತಿ ಜಿಲ್ಲೆಯಲ್ಲೂ ‘ಮಾನಸಿಕ ಆರೋಗ್ಯ ಮಂಡಳಿ’ಗಳು ರಚಿಸಲ್ಪಟ್ಟಿವೆ. ಈ ಮಂಡಳಿಯಲ್ಲಿ ಮನೋವ್ಯಾಧಿ ತಜ್ಞರು, ವೈದ್ಯರು, ವೈದ್ಯಕೀಯ ಮೇಲ್ವಿಚಾರಕರು, ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಇತರರು ಇದ್ದಾರೆ. ಮಾನಸಿಕ ಅಸ್ವಸ್ಥರಿಗೆಂದು ವಿಶೇಷವಾಗಿ ಸೌಲಭ್ಯಗಳನ್ನು ಹೇಳಿಲ್ಲವಾದರೂ, 1995ರ ಅಂಗವಿಕಲರ ಕಾಯಿದೆ, ಮಾನಸಿಕ ಅಸ್ವಸ್ಥರನ್ನೂ ‘ಅಂಗವಿಕಲ’ ಎಂದು ಪರಿಗಣಿಸಿರುವುದರಿಂದ ಆ ಕಾಯಿದೆಯಡಿ ದೊರಕುವ ಎಲ್ಲಾ ಸೌಲಭ್ಯಗಳನ್ನು ಅವರು ಪಡೆಯಬಹುದಾಗಿದೆ.

ಭಾರತೀಯ ಪುನರ್ವಸತಿ ಪರಿಷತ್ ಕಾಯಿದೆ (1992)

ಭಾರತೀಯ ಪುನರ್ವಸತಿ ಪರಿಷತ್ 1986ರಲ್ಲಿ ಒಂದು ನೋಂದಾಯಿತ ಸಂಸ್ಥೆಯಾಗಿ ರೂಪುಗೊಂಡಿತು. ಇತರೆ ಸಂಘಸಂಸ್ಥೆಗಳು ಈ ಸಂಸ್ಥೆಯನ್ನು ಸರಿಯಾದ ರೀತಿಯಲ್ಲಿ ಗುರುತಿಸಲಿಲ್ಲ. ಆ ಕಾರಣ ಶೀಘ್ರ ಎಚ್ಚೆತ್ತುಕೊಂಡ ಸಂಸತ್ತು ಭಾರತೀಯ ಪುನರ್ವಸತಿ ಪರಿಷತ್ ಕಾಯಿದೆಯನ್ನು 1992ರಲ್ಲಿ ಜಾರಿಗೆ ತಂದಿತು. ಈ ಕಾಯಿದೆಯು 1993 ಜೂನ್ 22ರಂದು ಶಾಸಬಬದ್ಧ ಸಂಸ್ಥೆಯಾಯಿತು.

ಭಾರತೀಯ ಪುನರ್ವಸತಿ ಪರಿಷತ್ ಕಾಯಿದೆಯ ಉದ್ದೇಶಗಳು

ಅಂಗವಿಕಲ ವ್ಯಕ್ತಿಗಳ ಪುನರ್ವಸತಿಯಲ್ಲಿ ತರಬೇತಿ ನಿಯಮಗಳು ಮತ್ತು ಕಾರ್ಯಕ್ರಮಗಳನ್ನು ಕ್ರಮಗೊಳಿಸುವುದು. ಅಂಗವಿಕಲತೆಗೆ ಒಳಗಾದ ವ್ಯಕ್ತಿಗಳೊಡನೆ ವ್ಯವಹರಿಸುವ ವೃತ್ತಿನಿರತ ವ್ಯಕ್ತಿಗಳಿಗಾಗಿ ತರಬೇತಿ ಕೋರ್ಸುಗಳನ್ನು ತೆರೆಯುವುದು. ಅಂಗವಿಕಲ ವ್ಯಕ್ತಿಗಳ ಜೊತೆ ವ್ಯವಹರಿಸುವ ವಿವಿಧ ವರ್ಗಗಳ ವೃತ್ತಿಪರ ವ್ಯಕ್ತಿಗಳಿಗೆ ಹೆಚ್ಚಿನ ಪ್ರಮಾಣದ ವಿದ್ಯಾಭ್ಯಾಸವನ್ನು ನಿಗದಿಪಡಿಸುವುದು. ದೇಶದಾದ್ಯಂತ ಇರುವ ತರಬೇತಿ ಸಂಸ್ಥೆಗಳ ಗುಣಮಟ್ಟವನ್ನು ಕ್ರಮಬದ್ಧ ಮತ್ತು ಏಕರೂಪಗೊಳಿಸುವುದು. ಅಂಗವಿಕಲತೆಗೆ ಒಳಗಾದ ವ್ಯಕ್ತಿಗಳ ಪುನರ್ವಸತಿಗೆ ಸ್ನಾತಕೋತ್ತರ ಪದವಿ, ಡಿಪ್ಲೋಮೋ ಕೋರ್ಸುಗಳನ್ನು ನಡೆಸುವ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಂಘಸಂಸ್ಥೆಗಳನ್ನು ಮಾನ್ಯಮಾಡುವುದು, ಪರಸ್ಪರ ವಿನಿಮಯದ ಆಧಾರದ ಮೇಲೆ ವಿದೇಶಿ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆ ನೀಡುವ ವರದಿ, ಡಿಪ್ಲೋಮ ಕೋರ್ಸುಗಳನ್ನು ಮಾನ್ಯಮಾಡುವುದು. ಪುನರ್ವಸತಿ ಮತ್ತು ವಿಶೇಷ ಶಿಕ್ಷಣದಲ್ಲಿನ ಸಂಶೋಧನೆಗಳನ್ನು ವ್ಯವಸ್ಥಿತವಾಗಿ ರೂಪಿಸುವುದು. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಅಂಗವಿಕಲ ವ್ಯಕ್ತಿಗಳ ಪುನರ್ವಸತಿ ಕ್ಷೇತ್ರದ ಬಗೆಗಿನ ತರಬೇತಿ ಮತ್ತು ಶಿಕ್ಷಣದ ಕ್ರಮಬದ್ಧತೆ, ಮಾಹಿತಿಗಳನ್ನು ಸಂಗ್ರಹಿಸುವುದು. ಅಂಗವಿಕಲ ಪುನರ್ವಸತಿ ಕ್ಷೇತ್ರದಲ್ಲಿ ತೊಡಗಿರುವ ಸಂಘಟನೆಗಳ ಸಹಯೋಗದೊಂದಿಗೆ ನಿರಂತರ ಶಿಕ್ಷಣ ಮತ್ತು ವಿಶೇಷ ಶಿಕ್ಷಣಕ್ಕೆ ಉತ್ತೇಜನ ನೀಡುವುದು. ವೃತ್ತಿ ನಿರತ ಪುನರ್ವಸತಿ ಕೇಂದ್ರಗಳನ್ನು ತೆರೆದು ಅಲ್ಲಿ ಕಾರ್ಯನಿರ್ವಹಿಸುವ ಭೋಧಕರನ್ನು ಪ್ರೋತ್ಸಾಹಿಸುವುದು. ಸಾಮಾಜಿಕ ನ್ಯಾಯ ಮತ್ತು ಉನ್ನತಾಧಿಕರಣ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸಂಸ್ಥೆಗಳು ಮತ್ತು ಉನ್ನತ ಸಂಸ್ಥೆಗಳ ಸಿಬ್ಬಂದಿಯನ್ನು ನೋಂದಾಯಿಸುವುದು.

ಭಾರತೀಯ ಪುನರ್ವಸತಿ ಪರಿಷತ್ ಕಾಯಿದೆಯ ವ್ಯಾಪ್ತಿಯನ್ನು ವಿಸ್ತರಿಸಲು ಅನುಕೂಲವಾಗುವಂತೆ 2000ನೇ ವರ್ಷದಲ್ಲಿ ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಅಂಗವಿಕಲತೆಯಿಂದ ಬಳಲುವ ವ್ಯಕ್ತಿಗಳಿಗೆ ಸೇವೆ ಸಲ್ಲಿಸುವ ವ್ಯಕ್ತಿಯು ಭಾರತೀಯ ಪುನರ್ವಸತಿ ಕಾಯಿದೆ ಮಾನ್ಯ ಮಾಡುವ ಅರ್ಹತೆಗಳನ್ನು ಹೊಂದಿಲ್ಲದಿದ್ದರೆ ಶಿಕ್ಷೆಗೆ ಒಳಗಾಗುತ್ತಾರೆ. ಈ ರೀತಿ ಪುನರ್ವಸತಿ ಕಾಯಿದೆಯು ಅಂಗವಿಕಲರ ಶಿಕ್ಷಣ, ತರಬೇತಿ, ಸಿಬ್ಬಂದಿ ಇತ್ಯಾದಿ ಹೊಣೆಗಾರಿಕೆಯನ್ನು ಹೊಂದಿದೆ.

ರಾಷ್ಟ್ರೀಯ ಟ್ರಸ್ಟ್ ಕಾಯಿದೆ - 1999

(ಬುದ್ದಿಮಾಂದ್ಯತೆ, ಮಿದುಳುವಾತ ಮುಂತಾದ ಅಂಗವಿಕಲರ ಕಲ್ಯಾಣಕ್ಕಾಗಿ ಕಾಯಿದೆ)

ತಮ್ಮ ಹಿತಾಸಕ್ತಿಗಳನ್ನು ಸ್ವತಃ ನೋಡಿಕೊಳ್ಳಲು ಅಸಮರ್ಥರಾಗಿರುವಂತಹ, ಗಂಭೀರ ಮತ್ತು ತೀವ್ರವಾದ ಮಾನಸಿಕ ಹಾಗೂ ಶಾರೀರಿಕ ವಿಕಲತೆ ಉಳ್ಳವರ ರಕ್ಷಣೆಗಾಗಿ 1999ರಲ್ಲಿ ಕೇಂದ್ರ ಸರಕಾರ ಒಂದು ರಾಷ್ಟ್ರೀಯ ಟ್ರಸ್ಟ್ (ನ್ಯಾಸ) ಕಾಯಿದೆಯನ್ನು ಹೊರಡಿಸಿದೆ. ಇದು ಈ ಕೆಳಕಂಡ ರೀತಿಯ ಅಂಗವಿಕಲರಿಗೆ ಅನ್ವಯಿಸುತ್ತದೆ. ಈ ಕಾಯ್ದೆಯನ್ವಯ ರಚಿಸಲಾದ ರಾಷ್ಟ್ರೀಯ ಟ್ರಸ್ಟ್ ಕಾಯಿದೆ ಎನ್ನುವುದು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯಡಿಯಲ್ಲಿ ಬರುವ ಒಂದು ಶಾಸನಬದ್ಧ ಘಟಕವಾಗಿದೆ.

ಮಿದುಳುವಾತ ಎಂದರೆ “ಹುಟ್ಟುವ ಮುನ್ನ, ನಂತರ ಅಥವಾ ಬಾಲ್ಯಾವಸ್ಥೆಯಲ್ಲಿ ಮಿದುಳಿಗೆ ಆದ ಆಘಾತದಿಂದ ಅಂಗಾಂಗಳ ಚಲನೆಯಲ್ಲಿ ಹೊಂದಾಣಿಕೆ ಇಲ್ಲದಿರುವುದು.” ಬುದ್ದಿ ಮಾಂದ್ಯತೆ - ಬುದ್ದಿಯ ಬೆಳವಣಿಗೆಯಲ್ಲಿ ಆಡಚಣೆಯಿದ್ದು, ಬುದ್ದಿ ಕುಂಠಿತವಾಗಿರುವವರು.

ಟ್ರಸ್ಟ್ನ ಲಕ್ಷಣಗಳು:- ಅಮಗವಿಕಲರು ಸಾಧ್ಯವಾದಷ್ಟೂ ಸ್ವತಂತ್ರರಾಗಿ ಮತ್ತು ಸ್ವಾಲಂಬಿಗಳಾಗಿ, ತಮ್ಮ ಸಮುದಾಯದಲ್ಲಿ, ತಮ್ಮ ೂರು/ಹಳ್ಳಿಗಳಲ್ಲಿಯೇ, ಅಥವಾ ಹತ್ತಿರದಲ್ಲೇ, ನೆಲೆಸುವಂತೆ ಅನುಕೂಲ ಮಾಡುವುದು. ಅಂಗವಿಕಲರು ತಮ್ಮ ಕುಟುಂಬದೊಡನೆಯೇ ಇರಲು ಅನುಕೂಲವಾಗುವಂತೆ ಸೌಕರ್ಯಗಳನ್ನು ಒದಗಿಸುವುದು. ಈ ಕಾಯಿದೆಯಡಿ ನೋಂದಾಯಿಸಿಕೊಂಡಿರುವ ಸಂಸ್ಥೆಗಳು, ಅಂಗವಿಕಲರ ಕುಟುಂಬಗಳಿಗೆ, ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯವಾದ ಸಹಾಯ ನೀಡಲು ಅನುವು ಮಾಡಿಕೊಡುವುದು. ಕುಟುಂಬ ಅಥವಾ ಪರಿವಾರದ ನೆರವಿಲ್ಲದ ಅಂಗವಿಕಲರ ಸಮಸ್ಯೆಗಳನ್ನು ಪರಿಹರಿಸುವುದು. ಅಂಗವಿಕಲ ವ್ಯಕ್ತಿಯ ತಂದೆ-ತಾಯಿ ಅಥವಾ ಪಾಲಕರು ತೀರಿಕೊಂಡಾಗ ಅವರ ರಕ್ಷಣೆ ಮತ್ತು ಪಾಲನೆಗೆ ಸೂಕ್ತ ಏರ್ಪಾಟು ಮಾಡುವುದು. ರಕ್ಷಣೆ ಮತ್ತು ಪಾಲನೆ ಅಗತ್ಯವಿರುವ  ಅಂಗವಿಕಲರಿಗೆ ಪಾಲಕರನ್ನು ನೇಮಿಸುವ ಕ್ರಮವನ್ನು ರೂಢಿಸುವುದು. ಅಂಗವಿಕಲರಿಗೆ ಸಮಾನ ಅವಕಾಶಗಳನ್ನು ದೊರಕಿಸಿಕೊಡುವುದು ಅವರ ಹಕ್ಕಗಳನ್ನು ಕಾಪಾಡಿ ಅವರು ಸಮಾಜದಲ್ಲಿ ಪೂರ್ಣವಾಗಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡುವುದು.

ಸರಕಾರದ ಕಾರ್ಯಕ್ರಮಗಳು:- ಅಂಗವಿಕಲರಿಗೆ ಅನುಕೂಲವಾಗುವಂತೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಯೋಜಿಸಿರುತ್ತವೆ.

  1. ಅಂಗವಿಕಲರು ಸಮುದಾಯದಲ್ಲಿ ಸ್ವತಂತ್ರಯ ಬಾಳ್ವೆ ನಡೆಸಲು ಅನುಕೂಲವಾಗುವಂತಹ ವಾತಾವರಣ ಕಲ್ಪಿಸುವ ಕಾರ್ಯಕ್ರಮ.
  2. ಅಂಗವಿಕಲರ ಕುಟುಂಬ ಸದಸ್ಯರಿಗೆ ಸಲಹೆ, ಮಾರ್ಗದರ್ಶನ ನೀಡುವಂತಹ ಻ಥವಾ ಅಂಗವಿಕಲರನ್ನು ನೋಡಿಕೊಳ್ಳಲು ಅಗತ್ಯವಾದ ತರಬೇತಿಯನ್ನು ನೀಡುವ ಕಾರ್ಯಕ್ರಮ.
  3. ವಯಸ್ಕ ಅಂಗವಿಕಲರು ಉದ್ಯೋಗ ನಿರತರಾಗಲು ತರಬೇತಿ, ಇದು ಒಂದು ಕೇಂದ್ರದಲ್ಲಾಗಬಹುದು ಅಥವಾ ಅವರವರ ಮನೆಗಳಲ್ಲಾಗಬಹುದು.
  4. ಅಂಗವಿಕಲರಿಗೆ ತಾತ್ಕಾಲಿಕವಾಗಿ ಪಾಲನೆ ಅಥವಾ ವಸತಿ ಏರ್ಪಾಡು ಮಾಡುವುದು, ಹಗಲು ಹೊತ್ತು ನೋಡಿಕೊಳ್ಳುವುದು.
  5. ಅಂಗವಿಕಲರಿಗೆ ತಮ್ಮ ಹಕ್ಕುಗಳನ್ನು ಜ್ ಅಥವಾ ದೊರಕಿಸಿಕೊಡುವಂತಹ ಸ್ವ-ಸಹಾಯ ಗುಂಪುಗಳ ಸ್ಥಾಪನೆ.
  6. ಅಂಗವಿಕಲರಿಗೆ ಪೋಷಕರನ್ನು ನೇಮಿಸುವಂತಹ ಸ್ಥಳೀಯ ಸಾಮುದಾಯಿಕ ಸಮಿತಿಗಳ ಸ್ಥಾಪನೆ.
  7. ಟ್ರಸ್ಟ್ ಲಕ್ಷ್ಯಗಳಿಗೆ ಪೂರಕವಾದಂತಹ ಇತರ ಯಾವಯದೇ ಕಾರ್ಯಕ್ರಮಗಳು, ಹಣ ಸಹಾಯ ಮಾಡುವಾಗ ಅಂಗವಿಕಲ ಮಹಿಳೆಯರು, ವೃದ್ದರು (65 ವರ್ಷಕ್ಕೆ ಮೇಲ್ಪಟ್ಟವರು) ಮತ್ತು ತೀವ್ರತರವಾದ ಅಂಗವಿಕಲತೆಯುಳ್ಳವರಿಗೆ ಆದ್ಯತೆ ನೀಡುವಂತಾಗಬೇಕು.

ಅಂಗವಿಕಲರ ವ್ಯಕ್ತಿಗಳ ಅಧಿನಿಯಮ 1995

1995 ಅಧಿನಿಯಮವು ಸಂಸತ್ತಿನಲ್ಲಿ ದಿನಾಂಕ 12-2-1995ರಂದು ಅನುಮೋದಿಸಲ್ಪಟ್ಟಿತು. ದಿನಾಂಕ 7-2-1996ರಂದು ಅಧಿಸೂಚನೆಯನ್ನು ಹೊರಡಿಲಾಯಿತು. ಅಂಗವಿಕಲರು ರಾಷ್ಟ್ರದ ಉಪಯುಕ್ತ ಪ್ರಜೆಗಳಾಗಲು ಅವರಿಗೆ ಸಮಾನ ಅವಕಾಶ ಮತ್ತು ಮೂಲಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ, ರಾಜ್ಯಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಜವಾಬ್ದಾರಿಯನ್ನು ಹೊಂದಿರುತ್ತವೆ. ಅಂಗವಿಕಲರಿಗಾಗಿ ಇರುವ ಹಕ್ಕುಗಳನ್ನು ಜಾರಿಗೊಳಿಸಲು ಈ ಅಧಿನಿಯಮವು ಒಂದು ಮೈಲಿಗಲ್ಲಾಗಿದೆ.

ಭಾರತ ಸರ್ಕಾರವು 1995ರಲ್ಲಿ ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ, ಪೂರ್ಣ ಭಾಗವಹಿಸುವಿಕೆ) ಅಧಿನಿಯಮ 1995ನ್ನು ಜಾರಿಗೊಳಿಸಿತು. ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ, ತರಬೇತಿ, ಪುನರ್ವಸತಿ, ಸಾಮಾಜಿಕ ಭದ್ರತೆ ಹಾಗೂ ಇತರ ಸೌಲಭ್ಯ ಕಲ್ಪಿಸಿ ಅಂಗವಿಕಲರು ತಮ್ಮ ಸಾಮರ್ಥ್ಯವನ್ನು ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ಬಳಸಲು ಅವಕಾಶ ಕಲ್ಪಿಸಿಕೊಟ್ಟು ಕ್ರಿಯಾಶೀಲ ಪ್ರಜೆಗಳಾಗಲು ಅನುವು ಮಾಡಿಕೊಡುವುದರ ಜೊತೆಗೆ ಅಂಗವಿಕಲ ವ್ಯಕ್ತಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು  ಶ್ರಮಿಸುತ್ತಿದೆ.

ಭಾರತದಲ್ಲಿ ಅಂಗವಿಕಲರ ಕಾನೂನು ಹಾಗೂ ಸುಧಾರಣಾ ಕ್ರಮಗಳು

ಭಾರತದ ಸಂಸತ್ತು ಅಂಗವಿಕಲ ವ್ಯಕ್ತಿಗಳ ಅಧಿನಿಯಮ 1995ರಂದು ಜಾರಿಗೆ ತಂದಿತು. ಈ ಅಧಿನಿಯಮವು ಅಂಗವಿಕಲರಿಗೆ ಸಮಾನಾವಕಾಶ, ಪೂರ್ಣಭಾಗವಹಿಸುವಿಕೆ ಮತ್ತು ಹಕ್ಕುಗಳ ಸಂರಕ್ಷಣೆ ಅನ್ವಯ ಕಳೆದ 15 ವರ್ಷಗಳಿಂದ ಅಂಗವಿಕಲರ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಆದರೆ ಈ ಕಾಯ್ದೆಯು ಯು.ಎನ್.ಸಿ.ಆರ್.ಪಿ.ಡಿ (ವಿಶ್ವಸಂಸ್ಥೆ) ಒದಗಿಸಿರುವ ಎಲ್ಲಾ ಹಕ್ಕುಗಳನ್ನು ಒಳಗೊಂಡಿಲ್ಲ.

ಭಾರತವು ವಿಶ್ವಸಂಸ್ಥೆಯ ಯು.ಎನ್.ಸಿ.ಆರ್.ಪಿ.ಡಿ. ಕಾಯ್ದೆಯನ್ನು ಅಂಗೀಕರಿಸಿದೆ. ಸಮಾಜದಲ್ಲಿ ಅಂಗವಿಕಲರಿಗೆ ಸಮರ್ಪಕವಾದ ಸಮಾನತೆಯನ್ನು ನೀಡಲು ಹೊಸ ಕಾನೂನುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಯೋಚಿಸಿದೆ. ವಿಶ್ವಸಂಸ್ಥೆಯ ಪ್ರಕಾರ ಅಂಗವಿಕಲರನ್ನು ಸಬಲೀಕರಣಗೊಳಿಸುವ ಪರಿಕಲ್ಪನೆಯಾಗಿದೆ. ಈ ಕಾಯ್ದೆಯ ಪ್ರಕಾರ ಕೆಲವರನ್ನು ಅಂಗವಿಕಲರೆಂದು ಪರಿಗಣಿಸಲಾಗಿದೆ. ಬೇರೆ ರೀತಿಯ ಅಂಗವಿಕಲತೆಗೆ ಒಳಗಾದ ಈ ಅಂಗವಿಕಲ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿ ತರಬೇಕೆಂಬ ನಿರಂತರ ಬೇಡಿಕೆಗಳು, ವಿವಿಧ ಸಂಘಸಂಸ್ಥೆಗಳು, ಚಿಂತಕರು ಹಾಗೂ ಅಂಗವಿಕಲ ವ್ಯಕ್ತಿಗಳಿಂದ ಮೂಡಿಬಂದಿದೆ. ಸಮಾಜಕಲ್ಯಾಣ ನ್ಯಾಯ ಸಬಲೀಕರಣ ಇಲಾಖೆಯು ತನ್ನ ಕಾರ್ಯಕ್ರಮಗಳನ್ನು ರೂಪಿಸಿದೆ.

ಭಾರತದಲ್ಲಿ ಅಂಗವಿಕಲರ ಶಾಸನಾತ್ಮಕ ಕಾನೂನುಗಳು

1995ರಲ್ಲಿ ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ ಹಕ್ಕುಗಳ ಸಂರಕ್ಷಣೆ ಪೂರ್ಣಭಾಗವಹಿಸುವಿಕೆ) ಕಾಯ್ದೆಯನ್ನು ಅಂಗೀಕರಿಸಿತು. ಈ ಕಾಯ್ದೆಯ ರಾಷ್ಟ್ರೀಯ ನೀತಿಯು ಅಂಗವಿಕಲರನ್ನು ದೇಶದ ಮಾನವ ಸಂಪತ್ತು ಎಂದು ಗುರುತಿಸಿ ಅವರ ವಿದ್ಯಾಭ್ಯಾಸ, ಉದ್ಯೋಗಕ್ಕೆ ಅವಕಾಶ ಕಲ್ಪಿಸಲು ಉತ್ತಮ ಪರಿಸರವನ್ನು ಸೃಷ್ಟಿಸಬೇಕೆಂದು ತಿಳಿಸುತ್ತದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಅಂಗವಿಕಲ ಪ್ರವೇಶಕ್ಕಾಗಿ 5 ವರ್ಷಗಳ ವಯೋಮಾನ ಸಡಿಲಿಸಬೇಕೆಂದು 2006ರಲ್ಲಿ ನಿರ್ದೇಶಿಸಿತು. ಈ ನಿಟ್ಟಿನಲ್ಲಿ ಹಲವಾರು ವಿದ್ಯಾಸಂಸ್ಥೆಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ, ಅಂಗವಿಕಲ ಹಕ್ಕುಗಳು ಸಬಲೀಕರಣ ಸಾಧಿಸುವಲ್ಲಿ ಈ ಕಾಯ್ದೆಯು ಸಹಕಾರಿಯಾಗಿದೆ.

ಭಾರತದಲ್ಲಿ ಅಂಗವಿಕಲತೆಯುಳ್ಳ ವ್ಯಕ್ತಿಗಳ ಮೀಸಲಾತಿ ನೀತಿ ಮತ್ತು ಅನುಷ್ಠಾನ

ಭಾರತದ ಶ್ರೇಣಿಕೃತ ಸಮಾಜದ ವ್ಯವಸ್ಥೆಯಲ್ಲಿ ಕೆಳಸ್ಥರದ ಸಮುದಾಯಗಳು ಶತಮಾನಗಳು ಶತಮಾನಗಳಿಂದ ಶಿಕ್ಷಣ, ಉದ್ಯೋಗ, ಮತ್ತು ನಾಗರೀಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಬಹುಪಾಲು ಸೌಲಭ್ಯಗಳನ್ನು ಹೊಂದಿದ ಮೇಲುವರ್ಗಗಳ ಆಳ್ವಿಕೆಯಲ್ಲಿ ಸಮಾನತೆಯನ್ನು ಕಾಣದ ಈ ವರ್ಗಗಳ ವಿಮೋಚನೆಗಾಗಿ ಸಿದ್ಧಾಂತಗಳು ಸುಧಾರಣಾವಾದಿಗಳು ಹಾಗೂ ಸುಧಾರಣೆಗಳು ಜಾಗೃತಿ ಮತ್ತು ಆಂದೋಲನ ರೂಪದಲ್ಲಿ ಮೂಡಿ ಬಂದಿದ್ದು ಎಲ್ಲಾ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ನೆಲೆಗೊಳಿಸಲು ಮೀಸಲಾತಿ ಹಾಗೂ ವಿಶೇಷ ಅವಕಾಶಗಳನ್ನು ಸಂವಿಧಾನದಆಶೆಯಗಳ ಅಡಿಯಲ್ಲಿ ನೀಡಲಾಗಿದೆ. ಭಾರತದಲ್ಲಿ ಸ್ವತಂತ್ರ ಪೂರ್ವ ಮತ್ತು ಸ್ವಾತಂತ್ರ ನಂತರದಲ್ಲಿ ಜಾತಿ ವರ್ಗ ಮತ್ತು ಲಿಂಗ ಆಧಾರಿತ ಮೀಸಲಾತಿಯನ್ನು ನೀಡಿರುವುದನ್ನು ತಿಳಿಯಲಾಗಿದ್ದು ಅದೇ ರೀತಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಿ ಸಮಾನ ಅವಕಾಶಗಳನ್ನು ಕಲ್ಪಿಸುವುದಕ್ಕಾಗಿವಿಶ್ವಸಂಸ್ಥೆ ತನ್ನ ಘೋಷಣೆಯಲ್ಲಿ ತಿಳಿಸಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ 1977ರಿಂದ ಅಂಗವಿಕಲರಿಗೆ ಮೀಸಲಾತಿ ಪ್ರಾರಂಭವಾಯಿತು. ಗ್ರೂಪ್-ಸಿ ಮತ್ತು ಗ್ರೂಪ್-ಡಿ ಕೆಲಸದಲ್ಲಿ ಅಂಗವಿಕಲರಿಗೆ ಮೀಸಲಾತಿ ದೊರೆಯಿತು. ದೃಷ್ಟಿದೋಷವುಳ್ಳವರಿಗೆ ಶೇಕಡ 1ರಷ್ಟುಶಿಕ್ಷಣಸಂಸ್ಥೆಗಳಲ್ಲಿ ಸರ್ಕಾರಿ ನೌಕರಿಗಳಲ್ಲಿ ಶೇಕಡ 3ರಷ್ಟು ಮೀಸಲಾತಿಯನ್ನು ಅಂಗವಿಕಲರಿಗೆ ಒದಗಿಸಲಾಗಿದೆ. ಅದರಂತೆ ಭಾರತದ ಸಂವಿಧಾನದ ತಿದ್ದುಪಡಿ ಕಾಯ್ದೆ 1995 ಅಧಿನಿಯಮವು ಅಂಗವಿಕಲ ವ್ಯಕ್ತಿಗಳಿಗೆ ಎಲ್ಲಾ ರಂಗಗಳಲ್ಲಿ ಅಗತ್ಯವಾಗಿ ಮೀಸಲಾತಿಯನ್ನು ನೀಡಿ, ಅವುಗಳನ್ನು ಜಾರಿಗೊಳಿಸುವ ಮಾನದಂಡಗಳನ್ನು ಸೂಚಿಸಿದೆ.

ಭಾರತದಲ್ಲಿನ ಅಂಗವಿಕಲರಿಗೆ ನೀಡಿರುವ ಮೀಸಲಾತಿ ವ್ಯವಸ್ಥೆಯನ್ನು ಇತರೆ ದೇಶದೊಂದಿಗೆ ಹೋಲಿಕೆ ಮಾಡಬಹುದಾದರೆ ಅವುಗಳಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರತಿ 15ರಲ್ಲಿ ಒಬ್ಬರಿಗೆ, ನಂತರ 20ರಲ್ಲಿ ಒಬ್ಬರಿಗೆ ಉದ್ಯೋಗವಕಾಶವನ್ನು ಕೇವಲ ದೃಷ್ಟಿದೋಷವುಳ್ಳವರಿಗೆ, ಕೈಗಾರಿಕಾ ಅನಾಹುತಗಳಲ್ಲಿ ಅಂಗವಿಕಲತೆ ಹೊಂದಿದವರಿಗೆ ನೀಡಲಾಗಿದೆ. ಫ್ರಾನ್ಸ್ ಅಲ್ಲಿ ಹುದ್ಧಕಾಲದಲ್ಲಿ ಅಂಗವಿಕಲರಾದವರಿಗೆ ಶೇಕಡ 10ರಷ್ಟು, ಗ್ರೀಕ್ ಅಲ್ಲಿ ಶೇಕಡ 7ರಷ್ಟು, ಹಾಲೆಂಡ್ ಅಲ್ಲಿ ಶೇಕಡ 2ರಷ್ಟು, ಇಟಲಿಯಲ್ಲಿ ಶೇಕಡ 15ರಷ್ಟು, ಇಂಗ್ಲೆಂಡಿನಲ್ಲಿ ಶೇಕಡ 3ರಷ್ಟು ಮೀಸಲಾತಿಯನ್ನು ಅಂಗವಿಕಲರಿಗೆ ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು 3% ಮೀಸಲಾತಿ ನೀತಿಯನ್ನು ರೂಪಿಸಿವೆ. ಅದರಂತೆ ಹಲವು ರಾಜ್ಯಸರ್ಕಾರಗಳು ಅಂಗವಿಕಲರ ಸ್ಥಿತಿಗತಿನ್ವಯ ತಮ್ಮದೇ ಪ್ರತ್ಯೇಕ ಮೀಸಲಾತಿಯನ್ನು ಒದಗಿಸಿವೆ ಎಂಬುದನ್ನು ಈ ಅಧ್ಯಾಯದಲ್ಲಿ ತಿಳಿಸಲಾಗಿದೆ.

ಅಂಗವಿಕಲರ ಅಧಿನಿಯಮ 1995ರ ಅನ್ವಯ ಅಂಗವಿಕಲರಿಗೆ ಯಾವುದೇ ಉದ್ಯೋಗದಲ್ಲಿ ಮೀಸಲಾತಿ ನೀಡದಿದ್ದರೆ, ಅಂಗವಿಕಲರ ಮುಖ್ಯ ಆಯುಕ್ತರ ಮೊರೆಹೋಗಬಹುದು. ನಂತರ ಹೈಕೋರ್ಟ್ ಮತ್ತು ಸುಪ್ರೋಂಕೋರ್ಟಿಗೂ ಮೊರೆಹೋಗಬಹುದು. ಉದಾಹರಣೆಗೆ: ಶೃತಿಕರ್ಲಾ ವರ್ಸಸ್ ಯೂನಿವರ್ಸಿಟಿ ಆಫ್ ಡೆಲ್ಲಿ, ಇತರರು ಕೇಸಿನಡಿ ಅಂಧ ಅಭ್ಯರ್ಥಿಗಳಿಗೆ ಮೀಸಲಾತಿ ನೀಡದೇ ಇದ್ದ ಕಾರಣ ದೆಹಲಿ ಹೈಕೋರ್ಟ್ ಮೀಸಲಾತಿ ನೀಡಬೇಕೆಂದು ತೀರ್ಪು ನೀಡಿತು.

ಭಾರತದಲ್ಲಿ ಹಲವಾರು ಮಹತ್ತರ ಬಡತನ ನಿರ್ಮೂಲನಾ ಯೋಜನೆಗಳಲ್ಲಿ ಉದ್ಯೋಗವಕಾಶಗಳನ್ನು ನೀಡುವುದು ಪ್ರಮುಖವಾದುದೆಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಸೆಕ್ಷನ್ 40 ತಿಳಿಸುತ್ತದೆ. ಇದನ್ನು ಶೇಕಡ 3ರಷ್ಟು ಮೀಸಲಾತಿಯನ್ನು ಅಂಗವಿಕಲರಿಗೆ ನೀಡಬೇಕೆಂದು ಗ್ರಾಮೀಣ ಅಭಿವೃದ್ಧಿ ಸಚಿವಾಲಯ, ನಗರಾಭಿವೃದ್ಧಿ ಮತ್ತು ಉದ್ಯೋಗ ವಿನಿಮಯ ಕೇಂದ್ರ ಕಛೇರಿ ಮೇಲ್ವಿಚಾರಣೆ ವಹಿಸುತ್ತದೆ. ಇವುಗಳಲ್ಲಿ ಸಂಪೂರ್ಣ ಗ್ರಾಮೀಣ ರೋಜಗಾರ್ ಯೋಜನೆ, ಸ್ವರ್ಣಜಯಂತಿ ಗ್ರಾಮ ಸ್ವರಾಜ್ ಯೋಜನೆ, ಸ್ವರ್ಣಜಯಂತಿ ಶಹರಿ ರೋಜಗಾರ್ ಯೋಜನೆಗಳು ಪ್ರಮುಖವಾಗಿವೆ.

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ 2005ರಲ್ಲಿ ಜಾರಿಗೆ ಬಂದಿದ್ದು, ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕಾಯ್ದೆಯಡಿಯಲ್ಲಿ ಅಂಗವಿಕಲರಿಗೂ ಈ ಯೋಜನೆಯು ಅನ್ವಯಿಸುತ್ತದೆ. ಇದಕ್ಕೆ 2008 ಫೆಬ್ರವರಿಯಲ್ಲಿ ಕೇಂದ್ರ ಸಂಪುಟವು 1800ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಈ ಹಣವನ್ನು ಅಂಗವಿಕಲರ ಸಂಸ್ಥೆಗಳಿಗೆ ನೀಡಬೇಕೆಂದು ನಿರ್ಧರಿಸಿತು. ಮೀಸಲಾತಿ ಮತ್ತು ನೀತಿ ವ್ಯವಸ್ಥೆಯಡಿ ಜಪಾನ್, ಜರ್ಮಿನಿ ಮತ್ತು ಇತರೆ ದೇಶಗಳು ಯಶಸ್ವಿಯಾಗಿ ಖಾಸಗಿ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಉಸ್ಯೋಗವಕಾಶಗಳನ್ನು ಒದಗಿಸಿವೆ. ಅದರಂತೆ ಖಾಸಗಿ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಉದ್ಯೋಗ ನೀಡುವುದು ವೈಯಕ್ತಿಕ ಒಪ್ಪಂದವೆಂದು ಭಾರತೀಯ ಖಾಸಗಿ ಕರಾರು ಅಧಿನಿಯಮ ತಿಳಿಸಿದೆ.

ಅಂಗವಿಕಲ ವ್ಯಕ್ತಿಗಳಿಗಾಗಿ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀತಿ

•          ನೇರನೇಮಕಾತಿಯ ಎಲ್ಲ ರೀತಿಯ ಹುದ್ದೆಗಳಲ್ಲಿ ಪ್ರತಿ 3 ಹುದ್ದೆಗಳನ್ನು ಅಂಗವಿಕಲತೆಯಿರುವ ವ್ಯಕ್ತಿಗಳಿಗೆ ಮೀಸಲಿಡಬೇಕು; ಅದರಲ್ಲಿ ಪ್ರತಿಶತ 1ನ್ನು ಈ ಮುಂದಿನ ಅಂಗವಿಕಲತೆಯಿಂದ ಬಳಲುವವರಿಗೆ ಒಳಮೀಸಲಾತಿಯನ್ನು ಕಲ್ಪಿಸಬೇಕು: 1) ದೃಷ್ಟಿದೋಷ ಅಥವಾ ಕಡಿಮೆ ದೃಷ್ಟಿಯಿರುವವರು; 2) ಶ್ರವಣದೋಷ; ಮತ್ತು 3) ಕಾಲು/ಕೈಗಳ ವಿಕಲತೆ ಅಥವಾ ಮಸ್ತಿಷ್ಕ ಪಾರ್ಶ್ವಾಯು ಇರುವವರಿಗೆ ಆಯಾ ಅಂಗವಿಕತೆಗೆಂದು ಗುರುತಿಸಲ್ಪಟ್ಟ ಹುದ್ದೆಗಳಿಗೆ ಮೀಸಲು;

•          ‘ಸಿ’ ಮತ್ತು ‘ಡಿ’ ಗುಂಪಿನ ಹುದ್ದೆಗಳ ಬಡ್ತಿಯಲ್ಲಿ ಉದ್ಭವಿಸುವ ಹುದ್ದೆಗಳಲ್ಲಿ, ಒಟ್ಟೂ ಹುದ್ದೆಗಳಲ್ಲಿ ಶೇ.75ನ್ನು ಮೀರದಂತೆ ಪ್ರತಿಶತ 3ನ್ನು ಅಂಗವಿಕಲತೆಯಿರುವ ವ್ಯಕ್ತಿಗಳಿಗೆ ಮೀಸಲಿಡಬೆಕು. ಅದರಲ್ಲಿ ಪ್ರತಿಶತ 1ನ್ನು ಈ ಮುಂದಿನ ಅಂಗವಿಕಲತೆಯಿಂದ ಬಳಲುವವರಿಗೆ ಒಳಮೀಸಲಾತಿಯನ್ನು ಕಲ್ಪಿಸಬೇಕು. 1) ದೃಷ್ಟಿದೋಷ ಅಥವಾ ಕಡಿಮೆ ದೃಷ್ಟಿಯಿರುವವರು; 2) ಶ್ರವಣದೋಷ; ಮತ್ತು 3) ಕಾಲು/ಕೈಗಳ ವಿಕಲತೆ ಅಥವಾ ಮಸ್ತಿಷ್ಕ ಪಾರ್ಶ್ವಾಯು ಇರುವವರಿಗೆ ಆಯಾ ಅಂಗವಿಕತೆಗೆಂದು ಗುರುತಿಸಲ್ಪಟ್ಟ ಹುದ್ದೆಗಳಿಗೆ ಮೀಸಲು ನೀಡಲಾಗಿದೆ.

ರಾಜಕೀಯ ನೀತಿ ಕ್ರಮಗಳು ಮುಕ್ತಾಂತರ ರೈಲು ದರ ರಿಯಾಯಿತಿ Train fee concession ಫಲಾನುಭವಿಗಳಿಗೆ, ವಿಮಾನ ದರ ರಿಯಾಯಿತಿ, ಬಸ್ ದರ ರಿಯಾಯಿತಿ ಉದ್ಯೋಗ ಸ್ಥಾನ ಅಂಗವಿಕಲರಿಗೆ ಬಡ್ತಿಯಂತಹ ಸೌಲಭ್ಯಗಳನ್ನು ನೀಡುವ ಮೂಲಕ ವರ್ಗಾವಣೆಯಲ್ಲಿ ವಾಸಸ್ಥಳಕ್ಕೆ ಹತ್ತಿರಕ್ಕೆ ನೇಮಿಸುವ ಮೂಲಕ ಅತ್ಯುತ್ತಮ ಪ್ರತಿಭೆಯುಳ್ಳ ಅಂಗವಿಲತೆಗೆ ರಾಷ್ಟ್ರ ಪ್ರಶಸ್ತಿಗಳನ್ನು ನೀಡುವ ಮೂಲಕ ಹಾಗೂ ಅಂಧ ಮಕ್ಕಳಿಗೆ ಅಭಿರ್ಜಿ ಸಹಾಯದ ಜೊತೆಗೆ Income Tax  Exemption ನೀಡುವ ಮೂಲಕ ಉಚಿತ ಶಿಕ್ಷಣ ಒದಗಿಸುವುದರ ಜೊತೆಗೆ ಉನ್ನತ ವ್ಯಾಸಂಗಕ್ಕೆ ಹಣದ ಸಹಾಯ ಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡಲಾಗುತ್ತಿದೆ. ಅಂಗವಿಕಲರಿಗಾಗಿ ಸಾಧನ ಸಲಕರಣೆಗಳನ್ನು ತಯಾರಿಸಲು ಸಾಲ ಸೌಲಭ್ಯ ಈಗೇ ಹಲವಾರು ರೀತಿಯಲ್ಲಿ ವಿಕಲಚೇತನರುಗಳಿಗೆ ಸಹಾಯ ಸಹಕಾರ ಅನುಷ್ಠಾನಗೊಳಿಸುವ ಮೂಲಕ ಎಲ್ಲಾ ರೀತಿಯ ಅಂಗವಿಕಲರನ್ನು ಸ್ವಾವಲಂಬಿ ಜೀವನ ನಡೆಸಲು ಅಣಿಮಾಡಿಕೊಡಲಾಗುತ್ತಿದೆ.

ಅದರಂತೆ ಕರ್ನಾಟಕ ರಾಜ್ಯದಲ್ಲಿ ಸ್ಥಾಪನೆಗೊಂಡಿರುವ ಅನೇಕ ಸರ್ಕಾರೇತರ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು ಅಂಗವಿಕಲತೆಯುಳ್ಳ ವ್ಯಕ್ತಿಗಳಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತರಬೇತಿಗೊಂಡಿರುವ ವಿದ್ಯಾವಂತ ವಿಕಲಚೇತನ ವ್ಯಕ್ತಿಗಳಿಗೆ ಕಂಪನಿಗಳು ತನ್ನ ನಿಯಾಮಾವಳಿಯ ಅನುಸಾರ ಉದ್ಯೋಗ ಅವಕಾಶಗಳನ್ನು ನೀಡುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಜಾಗತಿಕ, ಆರ್ಥಿಕ ಕುಸಿತದ ಪರಿಣಾಮಗಳು ಕಂಪನಿಗಳ ನಿರ್ವಹಣೆಗೆ ದೊಡ್ಡ ಸವಾಲನ್ನು ಹೂಡಿದ್ದರ ಕಾರಣದಿಂದ ಅನೇಕ ಅಂಗವಿಕಲರ ಸಬಲೀಕರಣವನ್ನು ಸಾಧಿಸುವಲ್ಲಿ ಕಳೆದುಕೊಂಡರು. ಕಲ್ಯಾಣ ರಾಜ್ಯಗಳು ಇತ್ತೀಚಿಗೆ Covid-19 ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಂಗವಿಕಲರ ಸಬಲೀಕರಣವನ್ನು ಸಾಧಿಸುವಲ್ಲಿ ವಿಫಲವಾಗಿರುವುದನ್ನು ಕಾಣಬಹುದಾಗಿದೆ.

ಉಪಸಂಹಾರ

ಅಂಗವಿಕಲರನ್ನು ಸಾಮಾನ್ಯ ಜನರಂತೆ ಬದುಕಲು ಅರ್ಹರೆಂದು ಪರಿಗಣಿಸಿ, ಅವರಿಗೆ ಕರುಣೆ, ಮಾನವೀಯತೆ, ಸಹಾನುಭೂತಿ, ಕಾಳಜಿಯನ್ನು ತೋರುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಪ್ರೇರೇಪಿಸುವುದು ಅತ್ಯವಶ್ಯಕವಾಗಿದೆ. ಹಾಗೂ ಅಂಗವಿಕಲರು ಕೂಡ ಸಮಾಜದ ಅವಿಭಾಜ್ಯ ಅಂಗವಾಗಿರುವುದರಿಂದ ಅವರೂ ಕೂಡ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಬಲೀಕರಣ ಹೊಂದುವಂತೆ ಮಾಡುವಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅತಿ ಮುಖ್ಯವಾಗಿದೆ.

ಈ ದೃಷ್ಠಿಯಲ್ಲಿ ಅಂಗವಿಕಲತೆ ಎಂದಿಗೂ ಶಾಪವಲ್ಲ, ಅದು ಸೃಷ್ಟಿಯ ಹಾಗೂ ಮಾನವ ನಿರ್ಮಿತ ವೃಚಿತ್ರಗಳ ಫಲವಾಗಿದೆ. ಹಾಗೆಯೇ ಅಂಗವಿಕಲರೂ ಸಮಾಜದ ಅವಿಭಾಜ್ಯ ಅಂಗ. ಅವರಿಗೂ ಸಾಮಾನ್ಯರಂತೆ ಬದುಕುವ ಹಕ್ಕಿದೆ. ಈಗ ಅಂಗವಿಕಲರ ಬಗ್ಗೆ ತೋರುವ ಅನುಕಂಪ, ಸಹಾನುಭೂತಿ, ಕಾಳಜಿಗಿಂತ ಅವರಿಗೆ ಸೂಕ್ತ ವಾತಾವರಣ, ಸಮಾನ ಅವಕಾಶ ಮತ್ತು ಸಹಕಾರ ನೀಡುವುದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಅಂಗವಿಕಲರ ಸಬಲೀಕರಣಕ್ಕಾಗಿ ಸರ್ಕಾರ ಮತ್ತು ಸಕಾರೇತ್ತರ ಸಂಸ್ಥೆಗಳು ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ. ಹೀಗೆ ಅಂಗವಿಕಲರು ಜಾಗೃತರಾಗಿ ಸರ್ಕಾರದ ಸೇವಾಸೌಲಭ್ಯ ಮತ್ತು ಸವಲತ್ತುಗಳನ್ನು ಸದುಪಯೋಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಸದೃಢರಾಗಬೇಕು ಮತ್ತು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕು. ಹೀಗಾದಾಗ ಮಾತ್ರ ಅಂಗವಿಕಲರ ಕಲ್ಯಾಣ ಹಾಗೂ ‘ಸಬಲೀಕರಣ’ ಪರಿಕಲ್ಪನೆಗಳಿಗೆ ಮಹತ್ವ ಹಾಗೂ ಅರ್ಥವನ್ನು ಕಲ್ಪಿಸಬಹುದು. ಆದರೂ ಕೂಡ ವಿಶೇಷ ಮೌಲ್ಯಗಳ ಶಿಕ್ಷಣವು ಎಲ್ಲರೂ ಮನುಷ್ಯ ಸ್ವಾವಲಂಬಿಯಾಗಿ ಬದುಕಲು ಅನುವು ಮಾಡಿಕೊಟ್ಟಿದೆ. ಹಾಗೆಯೆ ಭೌತಿಕ ಸೇವೆ ಕ್ರಮಗಳು Physical policy measures ಅಂಗವಿಕಲ ವ್ಯಕ್ತಿಗಳಿಗೆ ಪುನರ್ವಸತಿ ಕಲ್ಪಿಸುವ ಸ್ವಯಂ ಸಂಸ್ಥೆಗಳ ಮೂಲಕ ಹಾಗೂ ಆರ್ಥಿಕ ನೀತಿ ಕ್ರಮಗಳು, ರಾಷ್ಟ್ರೀಯ ಉದ್ಯೋಗ ಸೇವಾ ಯೋಜನೆ (National Employment service scheme) ಉದ್ಯೋಗ, ಸ್ವ-ಉದ್ಯೋಗ, ರಾಷ್ಟ್ರೀಯ ಹಣಕಾಸು ಆಯೋಗ, ಅಭಿವೃದ್ಧಿ ಕಾರ್ಪೋರೇಷನ್ ಯೋಜನೆ ಮುಕಾಂತರ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಸಹ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ.

ಹೀಗೆ ಜಗತ್ತೀನ ಭಾಗದಂತಹ ಅನೇಕ ರಾಷ್ಟ್ರಗಳು ಅಂಗವಿಕಲರ ಸಬಲೀಕರಣ ಮತ್ತು ಹಕ್ಕುಗಳ ರಕ್ಷಣೆಯಲ್ಲಿ ನಿರತವಾಗಿವೆ. ವಿಶ್ವದಲ್ಲಿ 1999 - 2000 ವರ್ಷವನ್ನು ಅಂಗವಿಕಲರಿಗಾಗಿ “ಅಕ್ಸಸೆಬಿಲಿಟಿ ವರ್ಷ” (Accssability Year) ವೆಂಬ ಹಾಗೂ 1993 - 2002ರ ವರ್ಷವನ್ನು “ಸಬಲೀಕರಣ ದಶಕ” Empowerment Decade) ಎಂದು ಘೋಷಿಸಲಾಗಿದೆ.

ಅಂಗವಿಕಲರ ವ್ಯಕ್ತಿಗಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಸಬಲೀಕರಣಕ್ಕೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ವಿಕಲಚೇತರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಕಾರ್ಯನಿರ್ವಹಿಸುತ್ತದೆ. ವಿಕಲಚೇತರನ್ನು ಮುಖ್ಯವಾಹಿನಿಗೆ ತಂದು ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು, ಅವರ ಹಕ್ಕುಗಳನ್ನು ರಕ್ಷಿಸಲು ಮತ್ತು ಪೂರ್ಣವಾಗಿ ಭಾಗವಹಿಸುವಂತೆ ಮಾಡಲು ಇಲಾಖೆಯು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅಂಗವಿಕಲರಲ್ಲಿ ಜಾಗೃತಿ ಮೂಡಬೇಕಾಗಿದ್ದು, ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿಯಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕು ಹೀಗಾದಾಗ ಮಾತ್ರ ಅಂಗವಿಕಲರ ಕಲ್ಯಾಣ ಹಾಗೂ ಸಬಲೀಕರಣವನ್ನು ಕಾಣಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಅಂಗವಿಕಲರ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದರೂ, ಅದು ಪೂರ್ಣ ಪ್ರಮಾಣದಲ್ಲಿ ಸಾಧನೆ ಆಗಿಲ್ಲ, ಎನ್ನುವುದು ನೋವಿನ ಸಂಗತಿಯಾಗಿದೆ ಆದರೆ ಪೂರ್ಣ ಪ್ರಮಾಣದಲ್ಲಿ ಸಾಧನೆಯಾಗಬೇಕು ಎಂಬುದು ನನ್ನ ಆಶಯ.

ಟಿಪ್ಪಣಿಗಳು:

  1. ಹೇಮಲತಾ. ಹೆಚ್, “ವಿಕಲಚೇತನರಿಗೆ ಕೇವಲ ಅನುಕಂಪನ ಉಪಚಾರ ಸಾಕೆ? ವಿಜಯಕರ್ನಾಟಕ, 2018, ಪು.ಸಂ.2018.
  2. ಪಾಂಡೆ, ಆರ್.ಎಸ್. ಅದ್ವಾನಿ ಲಾಲ್’ ಪ್ರಾಸ್ ಪೆಕ್ಟೀವ್ಸ್ ಇನ್ ಡಿಸೆಬಿಲಿಟಿ ಅಂಡ್ ರಿಹ್ಯಾಬಿಲೀಟೇಷನ್, ವಿಕಾಸ್ ಪಬ್ಲಿಕೇಷನ್ ಹೌಸ್, ನ್ಯೂಡೆಲ್ಲಿ, 1996, ಪು.ಸಂ.15
  3. ವಿಷನ್-ಕನ್ ವೆನ್ ಷನ್-ಆಕ್ಷನ್, ಅಂಗವಿಕಲತೆಯುಳ್ಳ ವ್ಯಕ್ತಿಗಳ ಹಕ್ಕುಗಳ ಕುರಿತು ಒಡಂಬಡಿಕೆಯ ಸಾರಾಂಶ ಮತ್ತು ಅನುಷ್ಠಾನ ಸಾಧನಗಳು, ಎನೆಬಲ್ ನವ್, ಸಿಬಿಆರ್ ನೆಟ್ ವರ್ಕ್ 9ಸೌತ್ ಏಷಿಯಾ) ಬೆಂಗಳೂರು. 2007. ಪು.ಸಂ.3
  4. ರುಮಾ ಬ್ಯಾನರ್ಜಿ, ಮಂಜುಳ ನಂಜುಂಡಯ್ಯ, “ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣ ಪೋಷಕರ ಕೈಪಿಡಿ,” ಆಕ್ಷನ್ ಪಾರ್ ಇನ್ ಕ್ಲೂಷನ್ ಸಂಪನ್ಮೂಲ ಕೇಂದ್ರ, ಬೆಂಗಳೂರು.
  5. ಹಕ್ಕುಗಳನ್ನಾಧರಿಸಿದ ಮಾರ್ಗ, “ನ್ಯೂನತೆ” ನ್ಯಾಷನಲ್ ಟ್ರಸ್ಟ್, ಸಾಮಾಜಿಕ ನ್ಯಾಯ ಮತ್ತು ಸಶಕ್ತೆ ಮಂತ್ರಾಲಯ, ಭಾರತ ಸರ್ಕಾರ, 2010, ಪು.ಸಂ.13
  6. ಜನಾರ್ಧನ ಡಾ. ಜನಾರ್ಧನ್, ಎನ್., ಮಾನಸಿಕ ಅಸ್ವಸ್ಥತೆ ಮತ್ತು ಅಂಗವಿಕಲತೆ ವಿವಿಧ್ಯೊದ್ದೇಶ ಪುನರ್ವಸತಿ ಕಾರ್ಯಕರ್ತರ ಕೈಪಿಡಿ-ಕರ್ನಾಟಕ ಸರ್ಕಾರ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಬೆಂಗಳೂರು.
  7. ಡಾ. ಕನ್ನೆಕಂಟಿ ಪರಮೇಶ್ವರ್ ಮತ್ತು ಡಾ. ಪೂರ್ವಾಚಾರ್. ಎಂ, “ಸೋಷಿಯಲ್ ಡಿಸ್ಕ್ರಿಮಿನೇಷನ್ ಅಗೆನೆಸ್ಟ್ ಪರ್ಸನ್ ವಿತ್ ಡಿಸೆಬಿಲಿಟಿ ಅಂಡ್ ದೆರ್ ರಿಹ್ಯಾಬಿಲಿಟೇಷನ್ ಇನ್ ಕರ್ನಾಟಕ,” ನಿರುತ ಪಬ್ಲಿಕೇಷನ್, 2012, ಪು.ಸಂ.22
  8. ಅಂಗವಿಕಲತೆಯ ಸ್ವರೂಪ ಮತ್ತು ಅವಶ್ಯಕತೆಗಳು, ಪರಿಚಯ, ಸಿಬಿಸಿರ್ ನೆಟ್ ವರ್ಕ್, (ದಕ್ಷಿಣ ಏಷಿಯಾ) ಮತ್ತು ರಿಹೆಬಿಲಿಟೇಷನ್ ಕೌನ್ಸಿಲ್ ಆಫ್ ಇಂಡಿಯಾ, 2006, ಪು.ಸಂ.46.
  9. ಕರ್ನಾಟಕ ಸರ್ಕಾರ, ಅಂಗವಿಕಲ ವ್ಯಕ್ತಿಗಳ ಅಧಿನಿಯಮ 1995, ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರ ಕಛೇರಿ ಬೆಂಗಳೂರು.
  10. ಗಂಗಾಬಿಕೆ ಎಸ್, “ಭಾರತದಲ್ಲಿ ವಿಕಲಚೇತನರಿಗೆ ಕಾನೂನು ಬೆಂಬಲ” ಸ್ಪರ್ಧಾಚೈತ್ರ, 2020, ಪು.ಸಂ.90 ಮತ್ತು 96.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal