Tumbe Group of International Journals

Full Text


ಕನ್ನಡ ಸಾಹಿತ್ಯ ಪರಂಪರೆ: ಬಹುಮುಖಿ ನೆಲೆಗಳು

ಡಾ. ಜಿ ಅಜ್ಜಪ್ಪ

ಕನ್ನಡ ಸಹಾಯಕ ಪ್ರಾಧ್ಯಾಪಕ

ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ), ಚಿತ್ರದುರ್ಗ


ಪ್ರಸ್ತಾವನೆ

ಯಾವುದೇ ಬೆಳೆಯುತ್ತಿರುವ ಭಾಷೆಯಲ್ಲಿ ಯಾವುದೋ ಒಂದು ಕಾಲಕ್ಕೆ ಗ್ರಂಥಸ್ಥವಾದ ಸಾಹಿತ್ಯವು ತಲೆದೋರುತ್ತದೆ. ಮುಂದೆ     ಕಾಲಾನಂತರದಲ್ಲಿ ಆ     ಸಾಹಿತ್ಯವೇ ಪರಂಪರೆಯಾಗಿ ಸಾಗುತ್ತದೆ. ಸಾಹಿತ್ಯವು ಬೆಳೆದಂತೆ ಅದು      ತನ್ನ ಬಹುಮುಖಿ ನೆಲೆಗಳಲ್ಲಿ ವಿಸ್ತರಿಸುತ್ತಾ ಹೋಗುತ್ತದೆ.  ಕನ್ನಡ ಸಾಹಿತ್ಯಕ್ಕೂ ಈ ಮಾತನ್ನು       ಅನ್ವಯಿಸುವ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಹಾಗೂ ಅದರ ಬಹುಮುಖಿ ನೆಲೆಗಳನ್ನು  ತಿಳಿಯುವುದು ಈ ಲೇಖನದ ಉದ್ದೇಶ.

ಪ್ರಮುಖ ಪದಗಳು: ಪರಂಪರೆ,   ಬಹುಮುಖಿ ನೆಲೆಗಳು ,ಶ್ರೀ ವಿಜಯ, ವಡ್ಡಾರಾಧನೆ, ಪಂಪ, ಪೊನ್ನ, ರನ್ನ, ನಾಗವರ್ಮ,  ನಾಗಚಂದ್ರ,      ಹರಿಹರ,  ರಾಘವಾಂಕ,  ಕುಮಾರವ್ಯಾಸ,   ಲಕ್ಷ್ಮೀಶ, ರತ್ನಾಕರವರ್ಣಿ, ವಚನ ಸಾಹಿತ್ಯ, ದಾಸ ಸಾಹಿತ್ಯ.

ಪೀಠಿಕೆ

ಸಾಹಿತ್ಯವು ಉದಯವಾಗಲು ಕಾರಣಗಳೇನು ಎಂಬುದನ್ನು ತಿಳಿಯಬೇಕಾಗುತ್ತದೆ. ಇದಕ್ಕೆ ಕಾರಣಗಳೆಂದರೆ ಎಲ್ಲಾ ಸಾಹಿತ್ಯಗಳಿಗೆ ಸಮಾನವಾದವು ಕೆಲವಿದ್ದರೆ ವಿಶಿಷ್ಟ ಪರಿಸ್ಥಿತಿಯಲ್ಲಿ ಭಿನ್ನವಾದವೂ  ಕೆಲವು ಇರಬಹುದು .  ಸಾಹಿತ್ಯದ     ಉದಯಕ್ಕೆ     ಇರಬಹುದಾದ    ಕಾರಣಗಳು ಆಂತರಿಕ, ಬಾಹ್ಯ ಎಂದು ಎರಡು ಬಗೆಯಲ್ಲಿರುತ್ತವೆ.ಇವುಗಳಲ್ಲಿ ಕೆಲವು ಏಕಕಾಲಕ್ಕೆ ಕೂಡಿ ಬಂದಾಗ ಸಾಹಿತ್ಯವು ಉದಯವಾಗುತ್ತದೆ .

ಪರಂಪರೆ

ಮನುಷ್ಯನ    ಮನಸ್ಸು ಬೆಳೆದಂತೆ ಅವನು ಹೊಸ ಹಂಬಲಗಳನ್ನು ಪಡೆಯುತ್ತಾನೆ.      ಹೊಸ ಸಂಸ್ಕಾರಗಳನ್ನು ಹೊಂದುತ್ತಾನೆ. ಅಂದಂದಿನ ಮಟ್ಟಿಗೆ ಯೋಚಿಸುವ ಅವನು ಹಿಂದು ಮುಂದ ನ್ನು ಬಗೆಯುತ್ತಾನೆ. ತಾನು ಕಂಡ ಚೆಲುವು, ಉಂಡ ನಲಿವು    ತನ್ನಂತೆ   ಇತರರಿಗೆ    ದೊರೆಯಲಿ, ಇಂದಿನಂತೆ ಮುಂದೆಯೂ ದೊರೆಯಲಿ ಎಂಬ ಸಾಮಾಜಿಕ ಪ್ರೇರಣೆ,ಕೀರ್ತಿಯ ಹಂಬಲಿಕೆ ಅವನಲ್ಲಿ ಹುಟ್ಟುತ್ತದೆ. ನಾಗರಿಕತೆ ಈ ನೆಲೆಗೆ ಬಂದಾಗ ಗ್ರಂಥಸ್ಥವಾದ ಸಾಹಿತ್ಯಕ್ಕೆ ಭೂಮಿಕೆ ಸಿದ್ಧವಾಗುತ್ತದೆ. ಇದರಲ್ಲಿ ವ್ಯಕ್ತಿಯ ಆಂತರಿಕ ಆಕಾಂಕ್ಷೆಯಂತೆ    ಸಮಾಜದ   ಸಾಮೂಹಿಕ  ಅಪೇಕ್ಷೆ ಅಷ್ಟೇ ಮಹತ್ವ ದ್ದಾಗಿದೆ. ಸಮಾಜದಲ್ಲಿ ಪರಂಪರೆಯ ಪ್ರೀತಿ ಪ್ರಗತಿಯ ಒಲವುಗಳ ಉದಯವಾದರೆ ಸಾಹಿತ್ಯೋದ ಯಕ್ಕೆ ಪ್ರೋತ್ಸಾಹಿಸುವ ಅರಸರೂ ಇನ್ನೂ ಹೆಚ್ಚಾದ ಸಾಹಿತ್ಯ ನಿರ್ಮಾಣದ ಸ್ಥಾಯಿಗೆ ವಿಕಾಸಗೊಳ್ಳು ತ್ತಿರುವ   ಜೀವನವೇ  ಉದ್ದೀಪಕವಾಗುತ್ತದೆ.  ನಿರ್ಮಾಣವಾದ  ಸಾಹಿತ್ಯವನ್ನು ಮೆಚ್ಚಬಲ್ಲ ರಸಿಕರೂ ಆಶ್ರಯಕೊಟ್ಟು ಪ್ರೋತ್ಸಾಹಿಸುವ ಅರಸರೂ ಇನ್ನೂ ಹೆಚ್ಚಾದ ಸಾಹಿತ್ಯ ನಿರ್ಮಾಣಕ್ಕೆ ಕಾರಣರಾಗು ತ್ತಾರೆ.   ಬರೀ  ಜನದ   ಮಾತಾಗಿ  ಯಾವುದೊಂದು ಭಾಷೆ ಇದ್ದರೆ, ಜನದ ಮಾತಾಗಿರದ ಬೇರೆಯ ದೊಂದು ಭಾಷೆ ಪರಂಪರೆಯಿಂದ   ಗ್ರಂಥರಚನೆಯ   ಭಾಷೆಯಾಗಿದ್ದರೆ,   ಜನದ ಮಾತನ್ನು ಗ್ರಂಥ ರಚನೆಯ ನುಡಿಯಾಗಿಸಿ  ಅದಕ್ಕೆ ಮನ್ನಣೆ ಕೊಡಲು ಕ್ರಾಂತಿಕಾರಕವಾದ ಘಟನೆಗಳೂ, ಆಂದೋಲ ನಗಳೂ ಉಂಟಾಗುತ್ತವೆ. ಹೊಸ ದೃಷ್ಟಿ  ತಲೆದೋರುತ್ತದೆ.   ಹಳೆಯ   ದೃಷ್ಟಿಯೊಡನೆ    ತಾಕಲಾಡಿ ಮಿನುಗುತ್ತದೆ. ಆಗ ಸಾಹಿತ್ಯೋದಯಕ್ಕೆ ತಕ್ಕ   ಸಂದರ್ಭವು    ಒದಗುವುದು   ಹೊಸ ತತ್ವ, ಹೊಸ ಧರ್ಮ  ಇವುಗಳ ಪ್ರಸಾರಕ್ಕೆ ಹೊಸ ವಾಹಕವಾಗಿ   ಜನ   ಭಾಷೆ.   ತಲೆಯೆತ್ತುವುದು    ಹೀಗೆ. ಜನ ಜೀವನದ ತಿದ್ದುಪಡಿಗೆ ಮತ್ತು ಮತ ಪ್ರಚಾರಕ್ಕೆ ಒಂದು ಸಾಧನವಾಗಿ   ಜನ ಭಾಷೆಯಲ್ಲಿ ಸಾಹಿತ್ಯವು ಕಣ್ದೆರೆಯುತ್ತದೆ. ಒಟ್ಟಿನಲ್ಲಿ ಬಾಹ್ಯ    ಜೀವನದ    ವ್ಯವಸ್ಥೆಯ. ಗುರುತಾದ      ನಾಗರಿಕತೆ, ಆಂತರಿಕ ಜೀವನದ ಗುರುತಾದ ಸಂಸ್ಕೃತಿ -ರಸಿಕತೆಗಳು    ಒಂದು   ಮಟ್ಟಕ್ಕೆ ಬಂದಾಗ.  ಮಾತ್ರ ಸಾಹಿತ್ಯವು ಉದಯವಾಗುತ್ತದೆ, ಪರಂಪರೆಯಾಗಿ ಮುನ್ನಡೆಯುತ್ತದೆ .

ಕನ್ನಡ ಸಾಹಿತ್ಯ ಪರಂಪರೆ :

ಕನ್ನಡ ಸಾಹಿತ್ಯವು ಶ್ರೀ ವಿಜಯನ ಕವಿರಾಜ ಮಾರ್ಗದಿಂದ ಆರಂಭವಾಗಿ, ವಡ್ಡಾರಾಧನೆ, ಪಂಪ, ಪೊನ್ನ, ರನ್ನ, ನಾಗವರ್ಮ,ನಾಗಚಂದ್ರ, ವಚನಕಾರರು, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ, ದಾಸರು ಹೀಗೆ ವಿವಿಧ ಕವಿಗಳು ಬರೆದ ಸಾಹಿತ್ಯ ಕೃತಿಗಳಿಂದ ಸಮೃದ್ಧ ವಾಗಿದೆ. ಇವರೆಲ್ಲರ ಸಾಹಿತ್ಯ ಕೃತಿಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ.

ಬಹುಮುಖಿ ನೆಲೆಗಳು :

ಭಾಷೆಯು ಆರಂಭಿಕ ಹಂತದಲ್ಲಿದ್ದಾಗ ಜಾನಪದ ಸಾಹಿತ್ಯವು, ನಂತರ ಭಾಷೆ ಬೆಳವಣಿಗೆಯಾದಾಗ ಶಿಷ್ಟ ಸಾಹಿತ್ಯವು ರೂಪುಗೊಳ್ಳುತ್ತದೆ. ಜಾನಪದ ಸಾಹಿತ್ಯವು   ಜನಪದ ಕಥೆ,    ಜನಪದ ಗೀತೆಗಳು, ಗಾದೆ, ಒಗಟು, ಲಾವಣಿ, ಖಂಡಕಾವ್ಯ, ಮಹಾಕಾವ್ಯ ಹೀಗೆ   ವಿವಿಧ ರೂಪಗಳಲ್ಲಿ ಸಮಾಜದ ಮುಖ ವಾಣಿಯಾಗಿ ಬಹುಮುಖಿ   ನೆಲೆಯ    ಭಾಷೆಯ ಲ್ಲಿ ವಿನ್ಯಾಸ ಪಡೆಯುತ್ತಾ ಹೋಗುತ್ತದೆ. ಜಾನಪದ ಸಾಹಿತ್ಯದ ವಿಶಿಷ್ಟತೆ ಎಂದರೆ ಒಂದೇ ಒಂದು     ಪ್ರದೇಶದಲ್ಲಿದ್ದ    ರೀತಿಯ    ಜಾನಪದ    ಸಾಹಿತ್ಯ ಇನ್ನೊಂದು ಪ್ರದೇಶದಲ್ಲಿ ಭಿನ್ನವಾಗಿರುತ್ತದೆ. ಇದಕ್ಕೆ ಕಾರಣಗಳೆಂದರೆ ಆಯಾ ಪ್ರದೇಶದ ಸಂಸ್ಕೃತಿ, ಜನಜೀವನ, ಆಚಾರ,   ವಿಚಾರ, ಜನರ  ನಂಬಿಕೆಗಳು, ಜಾನಪದ ಸಾಹಿತ್ಯದಲ್ಲಿ ಭಾವನೆಗಳ ರೂಪ ದಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ. ಇದನ್ನು    ಜಾನಪದ   ಸಾಹಿತ್ಯದ     ಬಹುಮುಖಿ ನೆಲೆಗಳ ಹಿನ್ನೆಲೆಯಲ್ಲಿ ಗುರುತಿಸಬಹುದು.

ಒಂದು ಕಡೆ ಜಾನಪದ ಸಾಹಿತ್ಯವು ರೂಪುಗೊಳ್ಳುತ್ತಿದ್ದರೆ     ಇನ್ನೊಂದು ಕಡೆ ಶಿಷ್ಟ ಸಾಹಿತ್ಯವು ತನ್ನ ಅಭಿವ್ಯಕ್ತಿಯನ್ನು ಒಳಗೊಳ್ಳುತ್ತಾ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಂಪರೆಯನ್ನು ಅವಲೋಕಿಸಿದಾಗ ಅದರ ಬಹುಮುಖಿ ನೆಲೆಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ.

          ಹಂಪನಾ ಅವರು ಹೇಳುವಂತೆ ಕನ್ನಡದ ಆದಿಕವಿ ಶ್ರೀ ವಿಜಯ ಬರೆದಿರುವ ಕವಿರಾಜಮಾರ್ಗ ಮೇಲ್ನೋಟಕ್ಕೆ ಸಂಸ್ಕೃತದ ದಂಡಿಯ ಕಾವ್ಯಾದರ್ಶದ ಕನ್ನಡ ರೂಪಾಂತರವೆನಿಸಿದರೂ ಅದೊಂದು ಲಕ್ಷಣ ಗ್ರಂಥವಾದರೂ ಛಂದಸ್ಸು, ವ್ಯಾಕರಣ, ಭಾಷಾ ವಿಷಯಗಳನ್ನು ಹೇಳುತ್ತದೆ. ಕನ್ನಡ ಭಾಷೆಯ ಗಡಿಗಳನ್ನು ಕಾವೇರಿಯಿಂದ     ಗೋದಾವರಿಯವರೆಗೆ ಎಂದು ಗುರುತಿಸುತ್ತದೆ. ಪುಲಿಗೆರೆ,ಒಕ್ಕುಂದ, ಮಹಾ ಕೊಪಣನಗರ ಮುಂತಾದ   ಪ್ರದೇಶಗಳನ್ನು    ತಿರುಳ್ಗನ್ನಡ ಪ್ರದೇಶಗಳೆಂದು ಹೆಸರಿಸುತ್ತದೆ. ಅಲ್ಲಿಯವರೆಗೆ ಕನ್ನಡದಲ್ಲಿದ್ದ ಗದ್ಯ ಕವಿಗಳನ್ನೂ,   ಪದ್ಯ ಕವಿಗಳನ್ನೂ ಹೆಸರಿಸುತ್ತದೆ. ಕನ್ನಡ ನಾಡಿನ ಜನರ ಸ್ವಭಾವಗಳನ್ನು ಕುರಿತು ಹೇಳುತ್ತದೆ. ಇದೆಲ್ಲ         ಕವಿರಾಜಮಾರ್ಗದ ಬಹುಮುಖಿ ನೆಲೆಯೇ ಆಗಿದೆ.

ವಡ್ಡಾರಾಧನೆಯು ಬಹುಮುಖಿ ನೆಲೆಯ ಗದ್ಯಕಾವ್ಯ. ಧಾರ್ಮಿಕ ಪ್ರಚಾರದ ಹಿನ್ನೆಲೆಯಲ್ಲಿ ಬರೆದಿರುವ ಕಾವ್ಯವಾಗಿದ್ದರೂ ಸಾಂಪ್ರದಾಯಿಕ ರೀತಿಯ ಕಥೆಗಳಾಗಿದ್ದರೂ ಅಲ್ಲಿನ ಕಥೆಗಳಲ್ಲಿ ಒಂದು ಆಕರ್ಷಣೆ ಯಿದೆ, ವಿಶೇಷ ರುಚಿಯಿದೆ. ಕಥೆಯೊಳಗೊಂದು ಕಥೆ, ಗದ್ಯ ಶೈಲಿ, ಸಂಸ್ಕೃತ ಕನ್ನಡಗಳ ಸರಿಬೆರಕೆ, ದೇಸಿ ಮಾರ್ಗಗಳ ಸಮನ್ವಯ ಇಲ್ಲಿದೆ ಕನ್ನಡ ದೇಸಿಗೆ ವಿಶೇಷವಾದ      ರೀತಿಯಲ್ಲಿ ಪ್ರಾಧಾನ್ಯವನ್ನು ಕೊಟ್ಟು ಸಂಸ್ಕೃತವನ್ನು ತ್ಯಾಗ ಮಾಡದ ಒಂದು ಸಮನ್ವಯ ಇಲ್ಲಿದೆ. ವಡ್ಡಾರಾಧನೆಯ ಕತೆಗಾರಿಕೆ ಹಾಗೂ ಮಾತುಗಾರಿಕೆ  ಸಾಮಾನ್ಯವಾದುದಲ್ಲ.        ಅಂದಿನ ಭಾರತೀಯ ಮತ್ತು ಕನ್ನಡ ಸಂಸ್ಕೃತಿ ಇಲ್ಲಿದೆ. ಕಥೆಯೊಳಗೊಂದು ಕಥೆ       ಒಳಗೊಂಡಿರುವ       ಸುಕುಮಾರ ಸ್ವಾಮಿಯ ಕಥೆಯೇ ಕನ್ನಡ ಸಾಹಿತ್ಯದ ಬಹುಮುಖಿ ನೆಲೆಗೆ ಉದಾಹರಣೆಯಾಗಿದೆ.

ಹತ್ತನೇ ಶತಮಾನದಲ್ಲಿಪಂಪ ಪೊನ್ನ. ರನ್ನ ನಾಗಚಂದ್ರ    ಮುಂತಾದ    ಜೈನ   ಕವಿಗಳು ರಚಿಸಿದ ಧಾರ್ಮಿಕ, ಲೌಕಿಕ ನೆಲೆಯ ಕಾವ್ಯಗಳಲ್ಲಿ ಸಂಸ್ಕೃತದ ರಾಮಾಯಣ, ಮಹಾಭಾರತ, ಜೈನ ಪುರಾಣ ಗಳನ್ನು ಕನ್ನಡಕ್ಕೆ ತರುವ ಮೂಲಕ ಬಹುಮುಖಿ ನೆಲೆಯನ್ನು ಕನ್ನಡ ಸಾಹಿತ್ಯಕ್ಕೆತಂದು ಕೊಟ್ಟಿದ್ದಾರೆ. ಮಾರ್ಗ ಶೈಲಿ, ದೇಸಿ ಮಾರ್ಗಗಳ    ಸಮನ್ವಯದಿಂದ   ಕೂಡಿದ  ಭಾಷೆ, ಚಂಪೂ ಶೈಲಿ, ಪಾಂಡಿತ್ಯ ಪೂರ್ಣ ಭಾಷೆ, ಸಂಸ್ಕೃತ ವೃತ್ತಗಳಮೂಲಕ ಕಾವ್ಯವನ್ನು ಕಟ್ಟಿ   ಕೊಡುವ ರೀತಿ, ರಾಜಾಶ್ರಯವನ್ನು ಪಡೆದು ಆಶ್ರಯದಾತರಾದ     ರಾಜರನ್ನು    ರಾಮಾಯಣ,     ಮಹಾಭಾರತಗಳ   ನಾಯಕ ಪಾತ್ರ ಗಳೊಂದಿಗೆ ಸಮೀಕರಿಸಿ ಹೇಳುವ ರೀತಿ ಖಳ ನಾಯಕರನ್ನು ಪ್ರತಿನಾಯಕರನ್ನಾಗಿ ಸೃಷ್ಟಿಸಿದ ರೀತಿ ಇವೆಲ್ಲಾ ಬಹುಮುಖಿ ನೆಲೆಗಳನ್ನು ಹೊಂದಿವೆ.

ಪಂಪನು ವ್ಯಾಸ ಭಾರತವನ್ನು ವಿಕ್ರಮಾರ್ಜುನ ವಿಜಯವೆಂದು ಕರೆಯುವುದರಲ್ಲಿಯೇ ವಿಶೇಷತೆ ಯಿದೆ. ಮಹಾಭಾರತದ ಕಥೆಯ ಜೊತೆಗೆ        ಆಶ್ರಯದಾತ ಅರಿಕೇಸರಿಯ ಚರಿತ್ರೆಯನ್ನು ಕೂಡಿಸಿ ಹೇಳಿರುವುದು ಬಹುಮುಖಿ ನೆಲೆಯೇ ಆಗಿದೆ. ಮಹಾಭಾರತ ಕಾವ್ಯವು ಪಂಪನ ಕೈಯಲ್ಲಿ ತತ್ಕಾಲೀನ ಇತಿಹಾಸ ಗರ್ಭಿತವಾದ ಕಾವ್ಯವೂ   ಆಗಿದೆ. ಮಹಾಭಾರತ   ಕಥೆಯನ್ನು ಹೇಳುವಾಗ ಪಂಪ ಮಾಡಿ ಕೊಂಡಿರುವ ಮಾರ್ಪಾಡುಗಳು ಕರ್ಣನ    ಸಂದರ್ಭದಲ್ಲಿ ಕುಲವನ್ನು ಕುರಿತು ಪರಿಣಾಮಕಾರಿಯಾಗಿ ಹೇಳುವ ಮಾತು. ಭೀಷ್ಮರ ಸೇನಾಧಿಪತಿ   ಪಟ್ಟದ ಸಂದರ್ಭದಲ್ಲಿ ಕರ್ಣ-ದ್ರೋಣರ ಮಾತು. ಓಲೈಸಿ ಬಾಳ್ವುದೇ ಕಷ್ಟಂ ಇಳಾಧಿನಾಥರಂ ಎಂಬ ಮಾತು     ಬನವಾಸಿ ನಾಡಿನ ವರ್ಣನೆ ಇವೆಲ್ಲಾ ಪಂಪನ ಬಹುಮುಖಿ ಪ್ರತಿಭೆಗೆ ಕನ್ನಡಿಯಾಗಿವೆ.

ಪಂಪನ ಆದಿಪುರಾಣದಲ್ಲಿ     ಬರುವ ಭರತ-ಬಾಹುಬಲಿಯರ     ಯುದ್ಧ ಪ್ರಸಂಗ ಕನ್ನಡ ಸಾಹಿತ್ಯದ ಬಹುಮುಖಿ ನೆಲೆಗೆ ಉದಾಹರಣೆಯಾಗಿದೆ. ವೀರಯುಗವೆಂದು      ಹತ್ತನೇ ಶತಮಾನವನ್ನು ಕನ್ನಡ ನಾಡಿನ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. ಸೈನ್ಯದ         ಬಲದಿಂದ ದಿಗ್ವಿಜಯ ಪಡೆದು ರಾಜ್ಯಕ್ಕೆ ಮರಳಿದ ಭರತ ಚಕ್ರವರ್ತಿಗೆ “ನಮ್ಮಿಬ್ಬರ ಹಗೆತನಕ್ಕೆ ಸೈನ್ಯವನ್ನೇಕೆ ಬಲಿಕೊಡಬೇಕು ನಾವಿಬ್ಬರೇ ದೃಷ್ಟಿ ಯುದ್ಧ, ಜಲಯುದ್ಧ, ಮಲ್ಲಯುದ್ಧಗಳ. ಮೂಲಕ ಹೋರಾಡಿ ಗೆಲ್ಲೋಣ “ಎಂದು ಹೇಳುವ  ಬಾಹುಬಲಿಯ ಮಾತು ಪಂಪನ ಮಾತುಗಳೇ ಆಗಿವೆ.   ಇದು ಪಂಪನ ಯುದ್ಧ ವಿರೋಧಿ ನಿಲುವನ್ನು ಸೂಚಿಸುತ್ತದೆ. ಭೂಮಿ ರಾಜ್ಯ ಇವುಗಳು ಅಣ್ಣ ತಮ್ಮಂದಿರು, ತಂದೆ ಮಕ್ಕಳನ್ನು ಕಾದಾಡುವಂತೆ ಮಾಡುತ್ತವೆ ಎಂದು ಹೇಳುವ ಪಂಪನ ಮಾತುಗಳು ಬಹುಮುಖಿ ನೆಲೆಯ ಮಾತುಗಳಾಗಿವೆ. ರಾಜರಾದವರು ತಮ್ಮ ಸಾರ್ವಭೌಮತೆಗಾಗಿ ಅಪಾರ       ಸೈನ್ಯವನ್ನೇಕೆ ಬಲಿಕೊಡಬೇಕು ಯಾರಿಗೆ ತೋಳ್ಬಲ, ಬಾಹುಬಲವಿದೆಯೋ ಅವರೇ ಯುದ್ಧ ಮಾಡಬೇಕು ಇದು ಪಂಪನ ಮಾತು.

ಪಂಪ ಬರೆದ ಮಹಾಭಾರತದ ಕಥೆಯನ್ನೇ ಸಾಹಸಭೀಮ  ವಿಜಯವೆಂದು ಕರೆಯುವ ರನ್ನನ ದೃಷ್ಟಿಕೋನ ವಿಭಿನ್ನವಾಗಿದೆ. ಭೀಮನನ್ನು ನಾಯಕನನ್ನಾಗಿ ದುರ್ಯೋಧನನನ್ನು ಪ್ರತಿನಾಯಕ ನನ್ನಾಗಿ ಚಿತ್ರಿಸಿದ್ದಾನೆ. ದುರ್ಯೋಧನ     ದೊಡ್ಡ ವೀರನೂ ತೇಜಸ್ವಿಯೂ, ಮಾನಿಯೂ ಎಂಬುದನ್ನು ರನ್ನ ಬಾಯ್ತುಂಬ ಹೊಗಳಿದರೂ ಅವನ ದುಷ್ಟ ವೃತ್ತಿಗಳಿಂದಲೂ ದುರ್ನಡತೆಯಿಂದಲೂ ತನ್ನ ನಾಶಕ್ಕೆ ತಾನೇ ಕಾರಣನಾದನೆಂಬುದನ್ನು ರನ್ನ ಕವಿ ತೋರಿಸಿದ್ದಾನೆ. ದುರ್ಯೋಧನನನ್ನು ಸುಯೋಧನ ಎಂದು  ಕರೆಯುವುದರಲ್ಲಿಯೇ ವಿಶೇಷತೆಯಿದೆ. ದ್ರೌಪದಿಯ ಪಾತ್ರಕ್ಕೊಂದು ಗಟ್ಟಿತನ ವನ್ನು ತಂದು ಕೊಟ್ಟಿರುವ ರನ್ನ ಅವಳನ್ನು ಅಗ್ನಿಪುತ್ರಿಯೆಂದು ಕರೆದು ಅವಳ ಸ್ವಭಾವ ಅಗ್ನಿಯಷ್ಟೇ ತೀಕ್ಷ್ಣವಾದುದೆಂದು ಹೇಳಿದ್ದಾನೆ. ರನ್ನನ ಕೃತಿಯ ನಿರ್ಮಾಣ ಅದ್ಭುತ ನಾಟ್ಯ ನಿರ್ಮಾಣದಲ್ಲಿದೆ ಇದಕ್ಕೆ ಬಿ.ಎಂ. ಶ್ರೀ. ಯವರ ಗದಾಯುದ್ಧ ನಾಟಕವೇ ಸಾಕ್ಷಿ. ರನ್ನ ತನ್ನ ಕೃತಿಯನ್ನು ಬರೆದಿರುವ ಸಿಂಹಾವಲೋಕನ ಕ್ರಮವೇ ಕಾವ್ಯವನ್ನು ರಚಿಸುವ ಬಹುಮುಖಿ ನೆಲೆಗೆ ಪ್ರೇರಣೆ.

ಅಜಿತಪುರಾಣ ರನ್ನನ ಧಾರ್ಮಿಕ ಕಾವ್ಯ ಅದರಲ್ಲಿ ಸಾವನ್ನು ಕುರಿತು’ ಸತ್ತವರನೆತ್ತುವುದೆಂಬುದದೆತ್ತ ಣದ ಮಾತೊ ‘ಎಂಬ ಹೇಳಿಕೆ ಸಾವನ್ನು ಕುರಿತು ರನ್ನನ ಬಹುಮುಖಿ ನೆಲೆಯ ಆಲೋಚನೆಯಾಗಿದೆ.

ನಾಗಚಂದ್ರ ಕವಿ ಕನ್ನಡದಲ್ಲಿ ಮೊದಲ ಜೈನ ರಾಮಾಯಣವನ್ನು ಬರೆದನು. ವಾಲ್ಮೀಕಿ ರಾಮಾಯಣ ವನ್ನು ಜೈನ ರಾಮಾಯಣವನ್ನಾಗಿ ಬದಲಿಸಿ ಹೇಳುವಲ್ಲಿ ನಾಗಚಂದ್ರ ಕವಿಯ ಪ್ರತಿಭೆಯ ಅನಾವ ರಣಗೊಂಡಿದೆ.ವಾಲ್ಮೀಕಿ ರಾಮಾಯಣದಲ್ಲಿ ದುಷ್ಟನಾಗಿ ಕಾಣುವ ಸೀತಾಪಹರಣ ಮಾಡಿ ಖಳ ನಾಯಕನಾಗುವ ರಾವಣ ಇಲ್ಲಿ ಉದಾತ್ತ ಮತ್ತು ಸದ್ಗುಣಗಳನ್ನೊಳಗೊಂಡ ವ್ಯಕ್ತಿ ಯಾಗಿದ್ದಾನೆ. ದುರ್ವಿಧಿ ವಶದಿಂದ ಒಂದು ದುರ್ಬಲ ನಿಮಿಷದಲ್ಲಿ ಸೀತೆಯನ್ನು ಕಾಮಿಸಿದನು. ವಶಪಡಿಸಿಕೊಳ್ಳ ಬೇಕೆಂದು ಪ್ರಯತ್ನಿಸಿದನು. ಅವಳ     ಪತಿ ಭಕ್ತಿಯನ್ನು ನೋಡಿ ಪಶ್ಚಾತ್ತಾಪದಿಂದ ಪುನೀತನಾದನು. ರಾಮ, ಲಕ್ಷ್ಮಣ, ಸೀತೆಯ ಪಾತ್ರ,        ಸೀತಾಪಹರಣ ಸನ್ನಿವೇಶ, ಹನುಮಂತನ ಸಮುದ್ರಲಂಘನ ಸಂದರ್ಭ ಇಲ್ಲೆಲ್ಲ ನಾಗಚಂದ್ರ ಕವಿಯ ಬಹುಮುಖಿ ನೆಲೆಯ ಪ್ರತಿಭೆಯ ಅನಾವರಣಗೊಂಡಿದೆ .

ಮಧ್ಯ ಕಾಲೀನ ಕನ್ನಡ ಸಾಹಿತ್ಯದ ನೆಲೆ ಭಕ್ತಿ. ವಚನಕಾರರು ಸಾಮಾನ್ಯ ಜನತೆಯ ಪರ ,ಅಧಿಕಾರ ಶಾಹಿಯ ವಿರುದ್ಧ ಅದುವರೆಗೆ ಇದ್ದ ಪಂಡಿತ ಭಾಷೆಯ    ಅಭಿವ್ಯಕ್ತಿಯ ವಿರುದ್ಧ, ಸಂಸ್ಕೃತ ಛಂದಸ್ಸಿನ ವಿರುದ್ಧ, ವೈದಿಕ ಪುರಾಣಗಳನ್ನು ವಿರೋಧಿಸಿ ತಮ್ಮ    ವಚನಗಳನ್ನು ರಚಿಸಿದರು.ಸಾಮಾನ್ಯ ನಿಗೂ ಅಭಿವ್ಯಕ್ತಿ ಸಾಧ್ಯವಿದೆ. ಸ್ತ್ರೀಯರೂ ತಮ್ಮ      ಅಭಿಪ್ರಾಯಗಳನ್ನು ಅಭಿವ್ಯಕ್ತಿಸಬಹುದೆಂದು ತೋರಿಸಿ ಕೊಟ್ಟರು. ಜಾತಿ, ಲಿಂಗ ಭೇದವನ್ನು ವಿರೋಧಿಸಿದರು.    ತಮ್ಮ ಆರಾಧ್ಯ ದೈವವನ್ನು ಅಂಕಿತವಾಗಿ ಮಾಡಿಕೊಂಡು ಸಮಾಜದ ಕುಂದು ಕೊರತೆಗಳನ್ನು  ನಿರ್ದಾಕ್ಷಿಣ್ಯವಾಗಿ ತೋರಿಸಿ ಕೊಟ್ಟರು. ಹೊಸ ಸಮಾಜ ವ್ಯವಸ್ಥೆಯ ಸೂತ್ರಗಳನ್ನು ಸಾರಿದರು. ವಿಡಂಬನೆ, ಉಪದೇಶಗಳನ್ನು ವಚನಗಳ ಮೂಲಕ ಅಭಿವ್ಯಕ್ತಿ ಸಿದರು. ವೈದಿಕರು ಅವೈದಿಕರು, ಭವಿಗಳು, ಭಕ್ತರು      ಯಾರೇ ಇರಲಿ  ಅವರಲ್ಲಿಯ ಹುಸಿ ಮೋಸಗಳನ್ನು ಬಯಲಿಗೆಳೆದರು. ಯಾವೊಂದು ವ್ಯಕ್ತಿ       ಇಲ್ಲವೆ ಗುಂಪಿನ ದ್ವೇಷವನ್ನು ಮಾಡಲಿಲ್ಲ. ಬದಲಾಗಿ ಅನ್ಯಾಯ ವೈಷಮ್ಯಗಳಿಂದ ಕೂಡಿದ      ಅಂದಿನ     ಸಮಾಜ ವ್ಯವಸ್ಥೆಯ ಬಗ್ಗೆ ತಾತ್ಸಾರ ತಾಳಿದರು. ಅಕ್ಕಮಹಾದೇವಿಯ ವಚನಗಳು     ಸಾಂಪ್ರದಾಯಿಕ     ಸಮಾಜದ ಸಂಕೋಲೆಗಳನ್ನು ಮುರಿದೊಗೆದು ಲಗ್ನ ಸಂಸ್ಥೆಯನ್ನು ಅತಿಗಳೆದು   ಚನ್ನಮಲ್ಲಿಕಾರ್ಜುನ ನೆಂಬ ಅಲೋಕ  ಪತಿಯನ್ನೇ ಪತಿಯಾಗಿ ವರಿಸಿ ಅವಳು ಮಾಡಿದ ಉಗ್ರವಾದ        ಸಾಧನೆ ಪಡೆದ ಸಿದ್ಧಿ ಆಶ್ಚರ್ಯ ಕರವಾದದ್ದು. ಸತಿಪತಿಭಾವದಲ್ಲಿ ಅವಳು ಹೇಗೆ ಪ್ರಗತಿ ಹೊಂದುತ್ತ ಪರಿಣತಳಾದಳೆಂಬು ದನ್ನು ,ಸಂಸಾರ ಹೇಯ ವಿಕಳಾವಸ್ಥೆ       ಸತಿಪತಿಭಾವ   ಇವಕ್ಕೆ ಸಂಬಂಧಿಸಿದ ವಚನಗಳಿಂದ ತಿಳಿಯಬಹುದು. ಅಕ್ಕಮಹಾ ದೇವಿಯು     ಜ್ಞಾನ     ಭಕ್ತಿಗಳ   ಬಲದಿಂದ ಉಂಟಾದ ನಿಶ್ಚಿಂತ ನಿರ್ಭೀತ ಮಾನಸಿಕ ಧೈರ್ಯಗಳು ವಿಲಕ್ಷಣವಾದವು ಅವುಗಳಿಂದ ದೊರೆಯುವ ಸ್ಪೂರ್ತಿ ಮೇಲಾದುದು.

ವಚನ ಸಾಹಿತ್ಯ ಕೇವಲ    ಮಾನವನ ಬಹಿರಂಗ          ಸಮಾನತೆಗಾಗಿ ಮಾತ್ರ ಹೆಣಗಲಿಲ್ಲ. ಅವನ ಅಂತರಂಗ ಬಹಿರಂಗ ಉಭಯ.        ಶುದ್ಧಿಗಾಗಿ ಶ್ರಮಿಸಿತು. ಸಮಾಜವನ್ನು ಸುವ್ಯವಸ್ಥಿತವಾಗಿಡಲು ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದ ವಿವಿಧ ಬಗೆಯ ಶ್ರಮ ಜೀವಿಗಳಿಗೂ ಕುಟುಂಬ ನಿರ್ವಹಣೆ ಯ ಪ್ರಧಾನ ಪಾತ್ರ ವಹಿಸುತ್ತಿದ್ದ    ಮಹಿಳೆಯರಿಗೂ ಸಮತ್ವವನ್ನು ಕಲ್ಪಿಸಿಕೊಟ್ಟಿತು.ವಚನ ಸಾಹಿತ್ಯ ರಚಿಸಿದ ಶರಣರು ವಿವಿಧ ವರ್ಗ ಮತ್ತು ಜಾತಿಯ ಹಿನ್ನೆಲೆಯಲ್ಲಿ ಬಂದವರಾಗಿದ್ದರೂ ಅವರೆಲ್ಲ ಸಮತೆ ಯ ನೆಲೆಗಟ್ಟಿನಲ್ಲಿ ಒಂದುಗೂಡಿದರು. ತಮ್ಮ ಕಾಯಕಗಳ ಹಿನ್ನೆಲೆಯಲ್ಲಿ ಸಾಮಾಜಿಕ ಗೌರವ ಗಳಿಸಿ ದರು. ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ,ದೇವರ ದಾಸಿಮಯ್ಯ ಹೀಗೆ ನೂರಾರು ವಚನಕಾರರು ಬರೆದ ವಚನ   ವಾಜ್ಞಯವನ್ನು     ಕನ್ನಡದ ಉಪನಿಷತ್ತುಗಳೆಂದು ಕರೆದಿರುವುದು ವಚನ ಸಾಹಿತ್ಯದ ಬಹುಮುಖಿ ನೆಲೆಗೆ ಕಾರಣವಾಗಿದೆ.

ವಚನಕಾರರ ನಂತರ      ಬಂದ ಹರಿಹರ ಕವಿ ಬಹುಮುಖಿ ನೆಲೆಯ ಇನ್ನೊಬ್ಬ ಕವಿ. ಅದುವರೆಗೆ ಇದ್ದ ಸಂಸ್ಕೃತ ವೃತ್ತಗಳ           ಮಾರ್ಗ    ಛಂದಸ್ಸನ್ನು ಬಿಟ್ಟು ತನ್ನ ಅಭಿವ್ಯಕ್ತಿಗೆ ಸರಳ ಭಾಷೆಯ ತಾಳಕ್ಕೆ ಅಳವಡುವ ರಗಳೆ ಎಂಬ ಛಂದಸ್ಸನ್ನು       ಆಯ್ಕೆ ಮಾಡಿಕೊಂಡು ಕಾವ್ಯ ರಚಿಸಿದನು. ರಾಮಾಯಣ ಮಹಾಭಾರತಗಳ ಕಥೆಯನ್ನು      ಬಿಟ್ಟು     ಅದಾಗ    ತಾನೇ ಆಗಿ ಹೋಗಿದ್ದ ಪುರಾಣ ಪುರುಷರಲ್ಲದ ಸಾಮಾನ್ಯ     ಮನುಷ್ಯರಾಗಿ ಜೀವನ       ನಡೆಸಿದ್ದ      ವಚನಕಾರರನ್ನು  ಹರಿಹರನ ತನ್ನ  ಕಾವ್ಯಕ್ಕೆ ನಾಯಕರನ್ನಾಗಿ ಮಾಡಿಕೊಂಡು ಕಾವ್ಯ ರಚಿಸಿದನು.      ಅವು ಶಿವಶರಣರ ರಗಳೆಗಳೆಂದು ಪ್ರಸಿದ್ಧಿ ಯಾಗಿವೆ.’ಗಿರಿಜಾ ಕಲ್ಯಾಣ ‘ ಎಂಬ ಚಂಪೂಕಾವ್ಯದ ಮೂಲಕ ಗಿರಿಜೆಯನ್ನು ಕಾವ್ಯ ನಾಯಕಿಯಾಗಿ ಮಾಡಿಕೊಂಡು ಕಾವ್ಯ ರಚಿಸಿದನು. ಅಕ್ಕಮಹಾದೇವಿಯನ್ನು    ಕುರಿತು’ ಮಹಾದೇವಿಯಕ್ಕನ ರಗಳೆ ‘ಬರೆದು ಅದುವರೆಗೂ ಸ್ತ್ರೀ ಪ್ರಧಾನ ಪಾತ್ರಗಳನ್ನು ಕಾವ್ಯದ ನಾಯಕಿಯಾಗಿ ಮಾಡಿದ ಉದಾಹರಣೆ ಕನ್ನಡ ಸಾಹಿತ್ಯದಲ್ಲಿರಲಿಲ್ಲ. ಅದನ್ನು ಮಾಡಿ ತೋರಿಸಿದವನು   ಹರಿಹರ ಕವಿ. ನಿಜವಾಗಿಯೂ ಇದು ಕನ್ನಡ ಸಾಹಿತ್ಯದ ಹಾಗೆಯೇ ಹರಿಹರ ಕವಿಯ ಬಹುಮುಖಿ ನೆಲೆಯೇ ಆಗಿದೆ.

ಹರಿಹರನ ನಂತರ ಅವನ ಶಿಷ್ಯನೂ ಸೋದರಳಿಯನೂ   ಆದ ರಾಘವಾಂಕನು’ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು’ಎಂದು         ಪ್ರತಿಪಾದಿಸುವ ಹರಿಶ್ಚಂದ್ರ ಕಾವ್ಯವನ್ನು ಬರೆದ. ಸತ್ಯದ ದಾರಿ ಸರಳವಲ್ಲ ಆದರೆ    ಅದನ್ನು ಪಡೆಯುವುದು ಜೀವನದ ಧ್ಯೇಯವಾಗಬೇಕೆಂದು ತೋರಿಸಿಕೊಟ್ಟನು. ಸತ್ಯದ ದಾರಿಯೇ        ಶಿವ ಸಾಕ್ಷಾತ್ಕಾರಕ್ಕೆ        ಮೆಟ್ಟಿಲು ಎಂದು ತೋರಿಸಿ ಕೊಟ್ಟನು. ಸಾಮಾನ್ಯ ವ್ಯಕ್ತಿಗಳಾಗಿದ್ದ ಸಿಧ್ಧರಾಮ, ಆದಯ್ಯ ಮುಂತಾದವರನ್ನು ಕಾವ್ಯದ ನಾಯಕರನ್ನಾಗಿ ಮಾಡಿಕೊಂಡು ಕಾವ್ಯ ರಚಿಸಿದನು. ಷಟ್ಪದಿ  ಎಂಬ ಹೊಸ ಛಂದೋ ಪ್ರಕಾರವನ್ನು ಬಳಸಿ, ಗಮಕಿಗಳು ಹಾಡಬಹು ದಾದ ರೀತಿಯ ಪದ್ಯಗಳ ಕಾವ್ಯಗಳನ್ನು ರಚಿಸಿದ್ದು, ರಾಘವಾಂಕನ ಬಹುಮುಖಿ ನೆಲೆಯಾಗಿದೆ.

ಕುಮಾರವ್ಯಾಸನೆಂಬ ಇನ್ನೊಬ್ಬ ಭಕ್ತ ಕವಿ ಷಟ್ಪದಿಯನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ‘ಕರ್ಣಾಟ ಭಾರತ ಕಥಾಮಂಜರಿ’ ಎಂಬ ಕಾವ್ಯವನ್ನು ಬರೆದನು. ತಿಳಿಯ ಹೇಳುವೆ ಕೃಷ್ಣ ಕತೆಯನು ಇಳೆಯ ಜಾಣರು ಮೆಚ್ಚುವಂದದಿ ಎಂದು ಕಾವ್ಯವನ್ನು ಆರಂಭಿಸುವ ಕುಮಾರವ್ಯಾಸ ತನ್ನ ಕಾವ್ಯದ ಮೂಲಕ ಸಾಮಾನ್ಯ ಜನರಿಗಾಗಿ ಮಹಾಭಾರತ ಕತೆಯನ್ನು ಹೇಳಿದ್ದಾನೆ. ಹತ್ತನೇ ಶತಮಾನದ ಮಾರ್ಗ ಅಥವಾ ಪ್ರೌಢ ಕಾವ್ಯ ಇಲ್ಲಿ ದೇಸಿ ಕಾವ್ಯವಾಗಿ ರೂಪುಗೊಂಡಿದೆ.ದೇಸಿಯ ಮುಖ್ಯ ತತ್ವ ಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜನತಾದೃಷ್ಟಿ ಇವು ಈ ಕಾಲದಲ್ಲಿ ಹೆಚ್ಚು ಪ್ರಮಾಣದಲ್ಲಿ ತೋರಿದ್ದು  ಈ ಯುಗದ ವೈಶಿಷ್ಟ್ಯ.

ಲಕ್ಷ್ಮೀಶನ ಜೈಮಿನಿ ಭಾರತ, ರತ್ನಾಕರವರ್ಣಿಯು ಸಾಂಗತ್ಯದಲ್ಲಿ ಬರೆದಿರುವ ಭರತೇಶ ವೈಭವ ಇವು ಇನ್ನೊಂದು ವಿಧದಲ್ಲಿ ಬಹುಮುಖಿ ನೆಲೆಯ ಕಾವ್ಯಗಳಾಗಿವೆ. ಭರತನನ್ನು ಕಾವ್ಯ ನಾಯಕ ನನ್ನಾಗಿ ವರ್ಣಿಸುವ ರತ್ನಾಕರವರ್ಣಿ ಹತ್ತು ಸಾವಿರ ಪದ್ಯಗಳ ಮೂಲಕ ವಿಶೇಷ ವರ್ಣನೆಗಳ ಮೂಲಕ ಭರತನ ಪಾತ್ರಕ್ಕೊಂದು ಹೊಸತನ, ವೈಭವವನ್ನೇ ತಂದುಕೊಟ್ಟಿದ್ದಾನೆ. ಕನ್ನಡ ಸಾಹಿತ್ಯ ದಾಸ ಸಾಹಿತ್ಯದ ಮೂಲಕ ಅಭಿವ್ಯಕ್ತಿಯ ಹೊಸನೆಲೆಗೆ ಸರಿಯಿತು. ಭಕ್ತಿಯೇ ಪ್ರಧಾನವಾದ ದಾಸರ ಅಭಿವ್ಯಕ್ತಿ ಗಳು ಹಾಡಬಹುದಾದ ರೀತಿಯಲ್ಲಿ ರಚನೆಗೊಂಡು ಗಮಕ ಸಾಹಿತ್ಯಕ್ಕೆ ಹೊಸ ನೆಲೆಯನ್ನು ಕೊಟ್ಟವು. ಜನರ ಮೇಲೆ ನಿತಾಂತ, ನಿರಂತರ ಪ್ರಭಾವವನ್ನು ಬೀರುವ ಜನ ಸಮ್ಮುಖತೆ ಇದು ದಾಸ ಸಾಹಿತ್ಯದ ಲಕ್ಷಣಗಳಲ್ಲೊಂದು ದಾಸರು     ಭಾಗವತ      ಧರ್ಮವನ್ನು ಮತ್ತು ಭಕ್ತಿ ತತ್ವವನ್ನು ತಮ್ಮ ಜೀವನದಲ್ಲಿ        ಅಳವಡಿಸಿಕೊಂಡು      ಅದನ್ನು ಪ್ರತಿಪಾದಿಸಿದರು. ಪುಸ್ತಕ ಓದಿ ಸ್ವಂತ ಜೀವನಕ್ಕೆ ಸಂಬಂಧವಿಲ್ಲದ ತತ್ವಗಳನ್ನು ಪ್ರತಿಪಾದಿಸಿದಂತೆ ಮಾಡಬಲ್ಲ     ಅಲ್ಲದೇ ಮತವನ್ನು ಮೀರಿದ ನೀತಿ, ಧರ್ಮ, ಮಾನವ ಮೌಲ್ಯಗಳು ಇವನ್ನು ದಾಸರು ಅರಿತವರಾಗಿದ್ದರು.ಇವಕ್ಕೆ ಹೆಚ್ಚಿನ ಬೆಲೆ ಕೊಡುವ ವರಾಗಿದ್ದರು. ಇವಿಲ್ಲದ ತಮ್ಮ ಮತವೇ ಇರಲಿ ಅದನ್ನು ಅವರು ಒಪ್ಪುವವರಲ್ಲ. ಇಂತಹ ಬಹುಮುಖಿ ನೆಲೆಗಳಿಂದಲೇ ದಾಸ ಸಾಹಿತ್ಯಕ್ಕೆ ಸರ್ವ ಮಾನ್ಯತೆ ದೊರೆತಿದೆ.

ದಾಸ ಸಾಹಿತ್ಯವು ಕೀರ್ತನೆ, ಸುಳಾದಿ,   ಉಗಾಭೋಗ ಮುಂತಾದ ಬಹುಮುಖಿ ನೆಲೆಯಲ್ಲಿ ತನ್ನ ಅಭಿವ್ಯಕ್ತಿಯನ್ನು ಮಾಡಿದೆ. ವಿಷಯಾನುಗುಣವಾದ ರೂಪದಲ್ಲಿ ಆಯ್ದುಕೊಳ್ಳುವ ರೀತಿಯಲ್ಲಿ ಅದು ಭಾವಗೀತೆಗಳ        ಲಕ್ಷಣವನ್ನು ಸ್ವೀಕರಿಸಿದೆ. ಸ್ವಯಂ ಪೂರ್ಣವಾದ ಏಕಮೇವ ಭಾವದ ನಿರೂಪಣೆ ಯಿಂದಲೂ ಅದು ಭಾವಗೀತೆಯ ಸ್ವರೂಪ ತಾಳಿದೆ.     ಕೀರ್ತನೆಯಲ್ಲಿ ರಾಗ ತಾಳ ಬದ್ಧವಾಗಿ ಪಲ್ಲವಿ ಅನುಪಲ್ಲವಿ ನುಡಿಗಳ ಯೋಜನೆಯಿರುತ್ತದೆ. ಕೊನೆಯಲ್ಲಿ   ದಾಸರ ಅಂಕಿತ ಇರುತ್ತದೆ. ಮಾತ್ರೆಗಿಂತ ಲಯಕ್ಕೆ ಪ್ರಾಧಾನ್ಯವಿದ್ದರೂ ಕೆಲವು ಸಲ ಎರಡೂ ಹೊಂದಿಕೊಳ್ಳಬಹುದು.

ಭಾಷೆಯ ದೃಷ್ಟಿಯಿಂದ ದಾಸ ಸಾಹಿತ್ಯ ಜನ     ಭಾಷೆಯ    ಅಶುದ್ಧ ರೂಪಗಳನ್ನು ಬೇಕಾದಂತೆ ಎತ್ತಿ ತೋರಿಸಿ ತನ್ನ ವಿಶಿಷ್ಟತೆಯನ್ನು ತೋರಿದೆ. ಸಲಿಗೆ, ತಿಳಿನಗೆ, ಕಟಕಿಯಿದ್ದಲ್ಲಿ ಅದು ಬಹಳ ಸೊಗಸಾಗಿ ಪರಿಣಮಿಸುತ್ತದೆ. ವಿಷಯ,ರೂಪ,     ಭಾಷೆಗಳಲ್ಲಿ       ದಾಸ     ಸಾಹಿತ್ಯ ವಿಶಿಷ್ಟ ಕಾಂತಿಯುಳ್ಳದ್ದಾಗಿ ಕನ್ನಡಿಗರ   ಚಿರಸ್ಥಾಯಿಯಾದ ಸೊತ್ತಾಗಿದೆ. ಜನಕ್ಕೆ ಅದು ಹತ್ತಿರ ಬಂದಂತೆ ಜನವೂ ಅದರ ಹತ್ತಿರ ಹೋಗಿ ಸಂಸ್ಕೃತಿ ವರ್ಧನ ಕಾರ್ಯದಲ್ಲಿ ಅದರಿಂದ ಸ್ಪೂರ್ತಿ ಪಡೆಯಬೇಕು.

ಉಪಸಂಹಾರ

ಇಲ್ಲಿಯವರೆಗೆ ವಿವರಿಸಿದಂತೆ  ಕನ್ನಡ ಸಾಹಿತ್ಯ ಪರಂಪರೆಯು ಕವಿರಾಜಮಾರ್ಗದಿಂದ ಮೊದಲು ಗೊಂಡು ಆಧುನಿಕ ಕನ್ನಡ ಸಾಹಿತ್ಯದ ನವೋದಯ, ಪ್ರಗತಿಶೀಲ,   ನವ್ಯ,ದಲಿತ ಮತ್ತು ಬಂಡಾಯ, ಮಹಿಳಾ ಸಂವೇದನೆ ಮುಂತಾದ ಪ್ರಕಾರದ ಸಾಹಿತ್ಯದ ಮೂಲಕ ತನ್ನ ಬಹುಮುಖಿ ನೆಲೆಗಳನ್ನು ಪ್ರಕಟಿಸುತ್ತಾ, ವಿಸ್ತರಿಸುತ್ತಾ ಬೆಳೆದು ಬಂದಿದೆ.      ನಾನು   ಕಂಡಂತೆ     ಅದು ಬಹುಮುಖಿ ನೆಲೆಯ ಸಾಹಿತ್ಯವೇ ಆಗಿದೆ.ಅದಕ್ಕೆ ಸಂಬಂಧಿಸಿದ  ಮಾಹಿತಿಗಳನ್ನು ಪರಾಮರ್ಶನ ಗ್ರಂಥಗಳ ಅಧ್ಯಯನ ಹಾಗೂ ನನ್ನ ಅಧ್ಯಾಪನದ ಸಂದರ್ಭದಲ್ಲಿ   ನಾನು     ಕಂಡುಕೊಂಡ ವಿಚಾರಗಳನ್ನು ಈ ಲೇಖನದ ಮೂಲಕ ಚರ್ಚಿಸಿರುವೆನು.

ಪರಾಮರ್ಶನ ಗ್ರಂಥಗಳು

  1. ರಂ. ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ ಹದಿನೈದನೆ ಮುದ್ರಣ ಗೀತಾ ಬುಕ್ ಹೌಸ್ ಮೈಸೂರು 2008
  2. ಕೀರ್ತಿನಾಥ ಕುರ್ತಕೋಟಿ, ಯುಗಧರ್ಮ ಹಾಗೂ ಸಾಹಿತ್ಯ ದರ್ಶನ ಐದನೇ ಮುದ್ರಣ, ಮನೋಹರ ಗ್ರಂಥಮಾಲಾಧಾರವಾಡ 2002
  3. ಕೀರ್ತಿನಾಥ ಕುರ್ತಕೋಟಿ ಕನ್ನಡ ಸಾಹಿತ್ಯ ಸಂಗಾತಿ ಎರಡನೆಯ ಮುದ್ರಣ ಕನ್ನಡ ವಿಶ್ವವಿದ್ಯಾಲಯ ಹಂಪಿ 1997
  4. ಡಿ.ಎಲ್. ನರಸಿಂಹಾಚಾರ್ (ಸಂ) ವಡ್ಡಾರಾಧನೆ ಹದಿಮೂರನೇ ಮುದ್ರಣ ಡಿವಿಕೆ ಮೂರ್ತಿ ಪ್ರಕಾಶಕರು ಮೈಸೂರು 2008


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal