Tumbe Group of International Journals

Full Text


ಸಂಶೋಧನೆಯ ಸ್ವರೂಪ : ತೌಲನಿಕ ವಿಶ್ಲೇಷಣೆ - ಡಾ.ಎಂ ಎಂ ಕಲರ್ಬುಗಿ ಮತ್ತು ಡಾ. ಕೆ ವಿ ನಾರಯಣ

NAGAPPA K

RESEARCH SCHOLAR -DEPARTMENT OF HISTORY

DEPARTMENT OF HISTORY IN KANNADA UNIVERSITY. HAMPI

nagappak4545@gmail.com


 

ಪ್ರಸ್ತಾವನೆ

ಈ ಜಗತ್ತಿನಲ್ಲಿ ನಾವು ಏನನ್ನು ಹುಡುಕುತ್ತಿದ್ದೇವೆ. ಬದುಕಲು ಏನು ಮಾಡಬೇಕು. ಅವುಗಳೆಲ್ಲವು ಸಂಶೋಧನೆಗೆ ಸಂಬಂಧಿಸಿದವುಗಳೆ. ಕಲೆ, ಸಾಹಿತ್ಯ, ಸಂಸ್ಕೃತಿ, ಮುಂತಾದವುಗಳು ಭಿನ್ನ ನೆಲೆಗಳಲ್ಲಿ, ಸಂಶೋಧನೆಯ ಹಾದಿಯಲ್ಲಿ ಆಕರಗಳನ್ನು ಶೋಧಿಸುತ್ತವೆ. ಮನುಷ್ಯ ಸಂದರ್ಭಕ್ಕೆ ತಕ್ಕಂತೆ ತನ್ನ ಒಳಗಿನ ನೋವುಗಳನ್ನು ಅಭಿವ್ಯಕ್ತಗೊಳಿಸುತ್ತಾನೆ. ಭೂ ಮಂಡಲದಲ್ಲಿರುವ ಜೀವರಾಶಿಗಳಗಿಂತ ಭಿನ್ನ ನೆಲೆಯಲ್ಲಿ ಯೋಚಿಸುತ್ತಾನೆ. ಒಂದು ಸಮಾಜದ ಸಂಘಟನೆಯ ಮಧ್ಯೆ ಬದುಕುವ ಚಾಣಕ್ಷತನ ಸಂಶೋಧಕನಿಗೆ ಇದೆ. ಹಾಗೆಯೇ ಆಲೋಚಿಸುವ ಬುದ್ದಿವಂತಿಕೆ ಭಾಷೆಗಳ ಬಳಕೆಯ ಅರಿವು ಅವನಿಗೆಗೊತ್ತಿದೆ. ಚಿಂತಿಸುವ, ತರ್ಕ ಮಾಡುವ ಭೌದ್ದಿಕ ಜ್ಞಾನ ಸಂಶೋಧನೆಯ ಸ್ವರೂಪದ ಚಾಪನ್ನು ಮೂಡಿಸಿದೆ. ಸಮಾಜ ಮತ್ತು ಮನುಷ್ಯ ಇವೆರಡು ಪರಿಕಲ್ಪನೆಗಳು ಸಂಶೋಧನೆಯ ಕ್ಷೇತ್ರಕ್ಕೆ ಶೈಕ್ಷಣಿಕ ಗುರಿಯತ್ತ ತನ್ನನ್ನು ಒಪ್ಪಿಸಿಕೊಂಡಿದೆ. ಸಮಾಜವು ವಿಶಾಲವಾದ ಹಲವು ಕ್ಷೇತ್ರಗಳಲ್ಲಿ ತನ್ನ ವ್ಯಾಪ್ತಿಯ ಮಹತ್ವದ ಜೀವನೋಪಾಯವನ್ನು ಸೃಷ್ಟಿಸಿದೆ. ಈ ಸಂಶೋಧನೆಯು ರಾಷ್ಟ್ರೀಯ ಪ್ರಜ್ಞೆಯ ತಳಪಾಯದಲ್ಲಿ ಕಾರ್ಯಕ್ರಮ ಹಾಕಿಕೊಂಡು ಸತ್ಯಾಸತ್ಯತೆಯನ್ನು ಹೊರಹಾಕುವ, ವಿಶ್ಲೇಷಣಿ ಮಾಡುವ, ವಿಷಯವಿನಿಮಯ ಮಾಡುವ, ವ್ಯಾಖ್ಯಾನಿಸುವ ಸಾಂಸ್ಕೃತಿಕ, ನೈತಿಕ ಮೌಲ್ಯವು ಸಂಶೋಧನೆಯ ಅವಿಷ್ಕಾರಗಳಾಗಿ ಬಳಕೆಗೊಂಡಿವೆ.

ಪ್ರಮುಖ ಪದಗಳು: ಸಂಶೋಧನೆಯ ಸ್ವರೂಪ, ತೌಲನಿಕ ವಿಶ್ಲೇಷಣೆ, ಡಾ.ಎಂ ಎಂ ಕಲರ್ಬುಗಿ, ಡಾ. ಕೆ ವಿ ನಾರಯಣ

ಪೀಠಿಕೆ

“ಸಂಶೋಧನೆ ಎನ್ನುವುದು ಜ್ಞಾನದದಿಗಂತವನ್ನು ವಿಸ್ತರಿಸುವಕಾರ್ಯ “ಎಂದು ಡಾ.ಎಂಚಿದಾನಂದಮೂರ್ತಿಯವರು ಸಂಶೋಧನೆಯ ಸ್ವರೂಪವನ್ನು ವಿಶ್ಲೇಷಿಸಿದ್ದಾರೆ. ಅದೇ ದಾರಿಯಲ್ಲಿ ಎಂ ಎಂ ಕಲಬುರ್ಗಿ ಮತ್ತು ಕೆ ವಿ ನಾರಯಣ ಅವರ ಅಭಿಪ್ರಾಯ ಭಿನ್ನನೆಲೆಯಲ್ಲಿ ಅಬಿವ್ಯಕ್ತವಾಗಿದೆ. ಭೂತಕಾಲದಲ್ಲಿ ಗತಿಸಿ ಹೋದ ಸಮಾಜದ ಜೀವಂತ ಚಿತ್ರಣವನ್ನು ವರ್ತಮಾನದಲ್ಲಿ ಜೀವಂತಿಕೆಯ ರೂಪವನ್ನು ಕೊಟ್ಟು ಭವಿಷ್ಯತ್ಕಾಲದಲ್ಲಿ ಊಹೆ ಮೂಲಕ  ಸತ್ಯವನ್ನು ಶೋಧಿಸುವುದೇ ವೈಜ್ಞಾನಿಕತೆಯ ಮುನ್ನಡೆಯಾಗಿದೆ. ಇವುಗಳೆಲ್ಲಾ ಭೌದ್ದಿಕ ಜ್ಞಾನದ, ಕವಿ ಸಹೃದಯರ, ವಿಮರ್ಶಕರ, ಸಾಹಿತಿಗಳ, ಸಾಂಸ್ಕೃತಿಕ ವಿವಿಧ ನೆಲೆಗಳನ್ನು ಭಿನ್ನ ಸ್ವರೂಪದಲ್ಲಿ ಸ್ವಯಂ ಪ್ರತಿಬಿಂಬಿಸುವ ತಂತ್ರಗಾರಿಕೆಯಾಗಿದೆ. ಸಂಶೋಧನೆಗೆ ಒಂದು ವ್ಯವಸ್ಥಿತ ಸ್ಥಾನದ ಅಡಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದೆ.

ಸಾಂಸ್ಕೃತಿಕ ಸಂಶೋಧನೆಯು 850 ರಲ್ಲಿಯೇ “ಕವಿರಾಮಾರ್ಗ”  ಕೃತಿಯಲ್ಲಿಯಿಂದಲೆ ಪ್ರಾರಂಭವಾಗುತ್ತದೆ. ನಂತರ ತಾಂತ್ರಿಕವಾಗಿ ಬೆಳಕಿಗೆ ಬಂದದ್ದು 16 ನೇ ಶತಮಾನದಲ್ಲಿ. ಮನುಷ್ಯನ ಭೌದ್ದಿಕತೆಯಿಂದ ಕಾಲದ ಚಕ್ರವನ್ನು ಕಂಡು ಹಿಡಿಯುವ,  ಭೂಮಿ ವೃತ್ತಾಕಾರದಲ್ಲಿ ತಿರುಗುತ್ತದೆ. ಮೇಲೆ ಎಸೆಯುವ ಕಲ್ಲು,  ಸೇಬುಹಣ್ಣು ಕೆಳಕ್ಕೆ ಬೀಳುತ್ತದ. ವೈಜ್ಞಾನಿಕ ಸತ್ಯದ ಜೊತೆಗೆ ಸಾಹಿತ್ಯಿಕ ಅಂಶಗಳು ಸತ್ಯದ ಶೋಧನೆಗೆ ತನ್ನನ್ನು ಅರ್ಪಿಸಿಕೊಂಡಿದೆ.

ಡಾ. ಎಂ ಎಂ ಕಲರ್ಬುಗಿಯವರ ಸಂಶೋಧನೆಯ ಸ್ವರೂಪದ ವಿಶ್ಲೇಷಣಿ :

“ಮಗುವಿಗೆ ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠ ಶಾಲ” ತಾಯಿಯು ತನ್ನ ಮಗುವಿಗೆ ಮೊದಲು ಶಿಸ್ತನ್ನು ಕಲಿಸುತ್ತಾಳೆ. ಹಾಗೆಯೇ  “ಸಂಶೋಧನೆ ಎಂದರೆ ಇದೊಂದು ಶೈಕ್ಷಣಿಕ ಶಿಸ್ತು”. ಯಾವುದೇ ವಿಷಯದ ಸಮಸ್ಯೆಗೆ ಸಿಲುಕಿಕೊಂಡ ಸಂಶೋಧಕನು ಒಂದು ವ್ಯವಸ್ತೆಗೆ ಬದ್ದನಾಗಿ ಕ್ರೀಯಾತ್ಮಕ ಚಟುವಟಿಕೆಯಲ್ಲಿ ತನ್ನನ್ನು ಅರ್ಪಿಸಿಕೊಂಡಾಗ, ತನ್ನ ಸಂಶೋಧನೆಯ ವಿಷಯದ ಆಕರಗಳ ಸಾಮಗ್ರಿ ಹೆಚ್ಚು ದೊರೆತಾಗ ಅವನ ಸಂಶೋಧನೆಯು ಮತ್ತೊಷ್ಟು ಬಲಾಢ್ಯತೆಯನ್ನು ಪಡೆದುಕೊಳ್ಳುತ್ತದೆ. ಅವನಲ್ಲಿರುವ ಸೃಜನಾತ್ಮಕತೆ ಭೌಧ್ಧಿಕ ಪ್ರತಿಭೆ ತನ್ನನ್ನು ಕಾಡುತ್ತಿರುವ ವಿಷಯ ಸಮಸ್ಯೆಯ ಪ್ರಶ್ನೆಗೆ ಪರಿಹಾರ ಒದಗಿಸುವ ಭೌಧ್ಧಿಕ ಕ್ರಿಯೆ ಪತ್ತೆದಾರಿಕೆ ಕೆಲಸವನ್ನು ನಿರ್ವಹಿಸುತ್ತದೆ. ಸಂಶೋಧನೆಯು ಎರಡು ಪ್ರಕಾರಗಳಲ್ಲಿ ತನ್ನ ವ್ಯಕ್ತಿತ್ವವನ್ನು ಆವರಿಸಿಕೊಂಡಿದೆ. “ಒಂದು: ಇದ್ದು ಕಣ್ಮರೆಯಾಗಿರುವ, ಹಳೆಯದನ್ನು ಹುಡುಕುವ, ಭೂತಕಾಲಕ್ಕೆ ಸಂಬಂಧಿಸಿದುದು. ಇದು discovery  ,ಕಲೆ, ಸಂಸ್ಕೃತಿ ವೈಜ್ಞಾನಿಕ ಕ್ಷೇತ್ರಕ್ಕೆ ಸಂಬಂಧಿಸಿದುದು. ಇನೊಂದು ಇಲ್ಲೀಯವರಗೆ ಇಲ್ಲದ ಹೊಸದನ್ನು ಹುಡುಕುವ ಭವಿಷತ್ಕಾಲಕ್ಕೆ ಸಂಬಂಧಿಸಿದುದು. ಇದು invention ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದುದು. ಹೀಗೆ ಶೋಧಕ್ರಿಯೆಯನ್ನು ಇಂಗ್ಲೀಷಿನಲ್ಲಿ discovery ಮತ್ತು invention ಎಂಬ ಪದಗಳಿಂದ ಬಿಡಿಸಿ ಹೇಳುತ್ತಾರೆ. ಕನ್ನಡದಲ್ಲಿ ಈ ಎರಡು ಪ್ರಕ್ರಿಯೆಗಳಿಗೆ ಸಂಶೋಧನೆ ಎಂಬ ಒಂದೇ ಪದವನ್ನು ಬಳಸತ್ತಲಿರುವುದರಿಂದ ಈ ವಿಷಯದ ಬಗೆಗೆ ಒಂದಿಷ್ಟು ಗೊಂದಲ ಉಳಿದುಕೊಂಡಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ನಾವುಗಳು  discovery ಗೆ ಪರ್ಯಾಯವಾಗಿ,  ಅನ್ವೇಷಣಿ ಎಂಬ ಹೊಸ ಪದವನ್ನು invention  ಪರ್ಯಾಯವಾಗಿ, ಆವಿಷ್ಕರಣವೆಂಬ ಹೊಸ ಪದವನ್ನು ಕಟ್ಟುನಿಟ್ಟಾಗಿ ಬಳಸಬೇಕಾಗಿದೆ.

ಸಾಹಿತ್ಯಿಕವಾಗಿ ನಮ್ಮ ಮನಸ್ಸಿನ ಭಾವನೆಗಳನ್ನು ಸತ್ಯದ ರೂಪಕಗಳನ್ನು ಗ್ರಹಿಸಿಕೊಂಡು ಸಮಾಜದಲ್ಲಿನ ಮೌಢ್ಯತೆಯನ್ನು ಅನಾವರಣಗೊಳಿಸುವಂತದ್ದು. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಹೀಗೆ ಅನೇಕ ಆಯಾಮಗಳು ಶೋಧದ ಮೂಲಕ ಸೂಕ್ಷ್ಮವಾಗಿ ವಿಮರ್ಶಿಸುವ ಕೆಲಸ ಸಂಶೋಧನೆ ಮಾಡುತ಼್ತದೆ. ದೇಶಿಯ ವಿವಿಧ ಕ್ಷೇತ್ರಗಳಲ್ಲಿ ಕಲೆ, ಸಾಹಿತ್ಯ ಇವುಗಳ ಮೇಲೆ ಹೇಗೆ ಸಂಶೋಧನೆಯ ಪ್ರಭಾವ ಬೀರುತ್ತವೆ. ಅವುಗಳ ಮೇಲೆ ಅನ್ವೇಷಣಾತ್ಮಕ ಮಾನವೀಯ ನೆಲೆಯಲ್ಲಿ ಆಕರಗಳ ಸಾಮಗ್ರಿಯನ್ನು ಸಂಗ್ರಹಿಸುವಲ್ಲಿ ವೈಯಕ್ತಿಕ ಗುರಿಯನ್ನು ಹೊಂದಿರುತ್ತಾನೆ. ಆಕರಗಳ ಸಂಶೋಧನೆಯನ್ನು ಕಲಬುರ್ಗಿಯವರು no source, no research ಎಂದು ಹೇಳುತ್ತಾರೆ ನಿಜವಾದ ಅರ್ಥದಲ್ಲಿ ಹೇಳುವುದಾದರೆ ಗತಕಾಲದಲ್ಲಿ ಬಿಟ್ಟುಹೋಗಿರುವ ಹಸ್ತಪ್ರತಿಗಳು, ಶಾಸನಗಳು, ಸ್ಮಾರಕಗಳು, ಹಾಗೂ ಮೌಕಿಕ ಪರಂಪರೆಯ, ದೇಶಿಯ ಆಲಿಖಿತ ಬರಹಗಳು, ವಸ್ತುಸಾಮಗ್ರಿಗಳನ್ನು ಮೊದಲು ನಾವುಗಳು ಆಕರಗಳ ಮೂಲಭೂತ ಸಾಮಗ್ರೀಗಳನ್ನು ಸಂಗ್ರಹಿಸಬೇಕಾಗುತ್ತದೆ. ಇವುಗಳು ಬಹುಮಟ್ಟಿಗೆ ಶೋಧಿಸುವವನ ಪ್ರಮಾಣಿಕತೆಯನ್ನು ಕುರಿತು ಪ್ರಶ್ನೇಗಳೋಪಾದಿಯಲ್ಲಿ ಅವನ ಶೋಧನೆಯ ನೀಲಿನಕ್ಷೆ ಇರುತ್ತದೆ.

ಸಂಶೋಧಕನಿಗೆ ಮೊದಲ ಮೂರು ಹಂತಗಳಲ್ಲಿ ಆಕರಗಳ ಪರಿಶೋಧನೆ ನಡೆಯುತ್ತದೆ. ಅವುಗಳೆಂದರೆ, ಮೊದಲನೆಯ ಹಂತದಲ್ಲಿ ಆಕರವನ್ನು ಶೋಧಿಸುವುದು. ಎರಡನೆಯ ಹಂತದಲ್ಲಿ ಶೋಧಿತ ಆಕರವನ್ನು ಪರೀಕ್ಷಿಸುವುದು, ಮೂರನೇಯ ಹಂತದಲ್ಲಿ ಈ ಪರೀಕ್ಷಿತ ಆಕರಗಳ ಸಹಾಯದಿಂದ ಸತ್ಯವನ್ನು ಹುಡುಕುವುದು. ಹೀಗೆ ಭೂತಕಾಲದ ಆಕರಗಳನ್ನು ವರ್ತಮಾನದಲ್ಲಿ ನಡೆಯುವ ಹಾಗೂ ನಮ್ಮ ಭವಿಷತ್ತಿನ ನೆಲೆಗಟ್ಟಿನಲ್ಲಿ ಸಂಶೋಧನೆ ಆಗಬೇಕಿದೆ. ಅಲ್ಲದೆ ಶೋಧಿಸಬೇಕಾದ ಆಕರಗಳು ನಾಲ್ಕು ಬಗೆಯಲ್ಲಿ ಕಾಣುತ್ತವೆ. ಅವುಗಳು 1).ವಸ್ತು ಸಾಮಗ್ರಿ 2). ಭಾಷ ಸಾಮಗ್ರಿ 3). ಕ್ರಿಯಾ ಸಾಮಗ್ರಿ ಮತ್ತು  4). ಜ್ಞಾನ ಸಾಮಗ್ರಿ. ಇವುಗಳೆಲ್ಲವೂ ಸಂಶೋಧಕನ ಮಹಾಪ್ರಬಂಧಕ್ಕೆ ಬೇಕಾದ ಎಲ್ಲ ರೀತಿಯ ಮಾಹಿತಿಗಳ ಸಮೇತ ಒಂದೇ ವಿಷಯದ ವಸ್ತು ಬೇರೆಯಾದರೂ ಸಹ ಹಲವು ಬಗೆಯ ಸತ್ಯದ ಬೇರೆ ಬೇರೆ ಪರ್ಯಾಯಾರೂಪಗಳಾಗಿವೆ.

ಹುಡುಕಾಟದ ಕಾರ್ಯ ನಿರ್ವಹಿಸುವ ಸಂಶೋಧಕನಿಗೆ ಮುಖ್ಯವಾಗಿ ಪ್ರೌವೃತ್ತಿ ಮನೋಭಾವನೆ ಇರಬೇಕು. ಜೊತೆಗೆ ಅವನಲ್ಲಿ ಕೆಲವು ಮೂಲಭೂತ ಅಹ9ತೆಗಳು ಅವಶ್ಯಕ. ಅವುಗಳೆಂದರೆ,  ಕುತೂಹಲ, ಪ್ರಮಾಣಿಕತೆ, ಧೈರ್ಯ, ವ್ಯುತ್ಪತ್ತಿ, ಪ್ರತಿಭೆ ಮತ್ತು ಕ್ರಿಯಾಶೀಲತೆ ಇವೆಲ್ಲವು ಅವನ ಸೃಜನಶೀಲ ವ್ಯಕ್ತಿತ್ವಕ್ಕೆ ಹಾಗೂ ಸಂಶೋಧನೆಯ ಸ್ವರೂಪದ ಹಲವು ಆಯಾಮಗಳಾಗಿವೆ. ಸಂಶೋಧಕನಾದವನಿಗೆ ಶ್ರಧ್ದೆ,  ಶ್ರೆಯಸ್ಸು , ತಾಳ್ಮೆ  ,ಕಠಿಣ ಪರಿಶ್ರಮ, ಶಿಸ್ತು, ನೋಡುವ ಭಾವನೆಗಳು ಮುಖ್ಯವಾಗುತ್ತದ. ಅಲ್ಲದೆ ಸಂಶೋಧಕನಾದವನಿಗೆ ಗುರಿ, ಉದ್ದೇಶಗಳು ಈಡೇರಿಸುವ ಸಂದರ್ಭದಲ್ಲಿ ಕಠಿಣವಾದ ಶಿಕ್ಷೆಗೆ ಗುರಿಯಾಗಬಹುದು. ನಮ್ಮ ದೇಶದ ಹಿರಿಮೆಯನ್ನು ಎತ್ತಿಹಿಡಿದ ದೊಡ್ಡದೊಡ್ಡ ಸಾಧಕರು ಸಹ ಅನ್ವೇಷಣಾತ್ಮಕ ಸತ್ಯ ಸಂಗತಿಗಳನ್ನು ಹೇಳಲೂ ಹೋಗಿ ತಾವುಗಳೇ ಸಿಲುಬೆಗೆ ಸಿಲುಕಿ ಮರಣದಂಡನೆಗೆ ಗುರಿಯಾದವರನ್ನು ಕಾಣುತ್ತೇವೆ. ಇಂತಹ ವ್ಯಕ್ತಿತ್ವವುಳ್ಳ ಮಹಾತ್ಮರು ವಿಷಪ್ರಾಶನಕ್ಕೆ ಗುರಿಯಾದರೂ ಸಹ ಅವರ ಸಾಹಸಧರ್ಯ ಸಂಶೋಧಕರಾದ ನಾವುಗಳಿಗೆ ಜೀವಂತ ನಿದರ್ಶನ ಹಾಗು ಸಾಕ್ಷೀಕರಿಸಿದ್ದಾರೆ. ಸಂಶೋಧನೆಯು ರೂಪನಿಷ್ಟವಾಗಿದೆ. ಆದುದರಿಂದ ಇದೊಂದು fact finding ಇದರ ಗುರಿಯಗಿದೆ.  ಇಲ್ಲಿ ಸುಲಭವಾಗಿ ಆಕರಗಳನ್ನು ಪಡೆಯುವುದರ ಮೂಲಕ ಅಲ್ಲಿನ ಸಂವೇದನೆ ಸಹಿತ ಆಕರಗಳನ್ನು ಬಳಸಿಕೊಂಡು ತನ್ನ ಮಹಾಪ್ರಬಂಧದ ಫಲಿತಗಳನ್ನು ಪ್ರಕಟಿಸುವುದು. ಪ್ರಕಟಿಸಿದ ಫಲಿತಗಳನ್ನು ಕುರಿತು ವ್ಯಾಖ್ಯಾನನೀಡುವುದೇ ಸಂಶೋಧನೆ. ಇದನ್ನೆ ಣhoughಣ ಜಿiಟಿಜiಟಿg ಈ ಶೋಧನೆಯ ಗುರಿಯಾಗಿದೆ. ಈ ವ್ಯಾಖ್ಯಾನ ಕೊಟ್ಟನಂತರದಲ್ಲಿ ಅದರ ಸತ್ಯಾಸತ್ಯತೆಯನ್ನ ತಿಳಿಯಲು ಮುಖ್ಯಾವಾಗಿ ವಿಶ್ಷ್ಲೇಷಣೆ ಮಾಡುವುದು ಅಗತ್ಯ. ಆದುದರಿಂದ ವಿಶ್ಷ್ಲೇಷಣೆಯೆ ಬೇರೆ ವ್ಯಾಖ್ಯಾನವೇ ಬೇರೆ . ಮೊದಲನೆಯದು ವಸ್ತುನಿಷ್ಠವಾಗಿದ್ದು, ಎರಡನೆಯದು ಹೆಚ್ಚಿನದಾಗಿ ವ್ಯಕ್ತಿನಿಷ್ಟತೆಯನ್ನು ತೋರಿಸಿಕೊಡುತ್ತದೆ. ಹೀಗಾಗಿ ವಿಶ್ಷ್ಲೇಷಣಾತ್ಮಕ ಸಂಶೋಧನೆ ಕೆಲವೊಮ್ಮೆ ವಿಮರ್ಶೆಯಾಗಿ ರೂಪಗೊಳ್ಳುತ್ತದೆ. ಸಂಶೋಧನೆಯ ದಾರಿಯಲ್ಲಿ ಅನೇಕ ಪ್ರಕಾರಗಳಿದ್ದರೂ ಅವನ ಆಯ್ಕೆ ಸತ್ಯವನ್ನು ಹೊರಹಾಕುವ ಗುರಿಯಾಗಿದೆ. ಈ ನಿಷ್ಠ ಸತ್ಯಶೋಧವನ್ನು ಕುರಿತು ಹಲವು ವಿದ್ವಾಂಸರು ಅನೇಕ ವೈಧಾನಿಕತೆಯನ್ನು ಗುರಿತಿಸಿದ್ದಾರೆ.  ಅವುಗಳು ವಿಷಯ ನಿಷ್ಠ, ಉದ್ದೇಶ ನಿಷ್ಠವಿಧಾನ ನಿಷ್ಠ, ಸ್ವರೂಪ ನಿಷ್ಟ, ಆನ್ವಯಿಕ, ಬಹುಶಿಸ್ತೀಯ , ಸಂಖ್ಯಾನಿಷ್ಠ, ಘಟಕನಿಷ್ಠ ಮತ್ತು ಸಂಸ್ಕೃತಿ ನಿಷ್ಠವೆಂದು ಬೇರೆ ಬೇರೆ ವಿಧಾನಗಳಲ್ಲಿ ಸಂಶೋಧನೆಯ ಸ್ವರೂಪವನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.  ಸಂಶೋಧನೆಯು ಶೈಕ್ಷಣಿಕ ಜ್ಞಾನದ ವಿಧ್ಯಾಭ್ಯಾಸದ ಬದುಕಿನ ಭಾಗವಾಗಿದೆ. ಪ್ರತಿ ಕ್ಷೇತ್ರಗಳಲ್ಲಿ ಸಂಶೋಧನೆಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೇ ಬದುಕಿನ ಭಾಗವಾಗಿ ಅಭ್ಯಾಸಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಂಶೋಧನೆ ಅನಾಕರ್ಶಕವಾಗುತ್ತಲಿದೆ. ಲೌಕಿಕವಾಗಿ ಅಪ್ರಯೋಜಕ ಸ್ಥಿತಿಗೆ ತಳ್ಳಲ್ಪಟ್ಟಿದೆ. ಈ ಎರಡು ನೆಲೆಗಳಲ್ಲಿ ಪ್ರಗತಿಸಾಧಿಸಿದರೆ ಸಂಶೋಧನೆಯು ವಿಮರ್ಶೆಯ ಸ್ವರೂಪದಲ್ಲಿ, ಸಾಹಿತ್ಯ ಆಕಾಂಕ್ಷಿಗಳತೆ ಗರಿಬಿಚ್ಚಿ ಬೆಳೆಯುವುದಾಗಿದೆ . 

ಆದರೆ ಸಂಶೋಧನೆ ಕ್ಷೇತ್ರ ಇಂದು ಬಡವಾಗುತ್ತ ನಡೆದಿದೆ. ಮೊದಲು ಸಂಶೋಧಕರಿಗೆ ಉನ್ನತ ಮಟ್ಟದ ಸ್ಥಾನ, ಮಾನ,  ಗೌರವ,  ಧನಸಹಾಯ,  ಹಾಗು ಉನ್ನತ ಹುದ್ದೆಗಳನ್ನು ನೀಡಬೇಕು. ಹೊಸ ಹೊಸ ಪ್ರಯೋಗಳಲ್ಲಿ ತೊಡಗುವಂತೆ ವಾತವರಣ ಕಲ್ಪಿಸಬೇಕು. ಆಗ ಸಂಶೋಧಕನ ಬದುಕಿಗೆ ಲವಲವಿಕೆಯಿಂದ ಬದುಕಿನ ಭಾಗವಾಗಿ ಸಂಶೋಧನೆಯು ಬೆಳೆಯಬೇಕಾಗಿದೆ . ಇದೊಂದು ಪರಂಪರೆಯ ಪ್ರಜ್ಞೆ, ಸಂಸ್ಕೃತಿ ನಾಡಿನ ಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸಾಂಸ್ಕೃತಿಕವಾಗಿ ಹಿಂದಿರುವ ಗತಕಾಲದ ಶೋಧನೆಯು ವರ್ತಮಾನದಲ್ಲಿ ನಡೆಯುವ ಸಾಧ್ಯತೆಯನ್ನು ತಿದ್ದುವ ಪ್ರಯತ್ನವೆನಿಸಿದೆ.

ಉದಾಹರಣಿಗೆ “ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟೀಸಲಾರರು” ಎಂದು ಡಾ. ಬಿ.ಆರ್ ಅಂಬೇಡ್ಕರ್ ರವರು ಹೇಳಿದರು. ಇವತ್ತಿನ ದಿನಮಾನಗಳಲ್ಲಿ ಸಂಶೋಧನೆ ಎನ್ನುವುದು ಶೈಕ್ಷಣಿಕವಾಗಿ ಶಾಲಾ ಕಾಲೇಜುಗಳಲ್ಲಿ ತನ್ನದೆ ಆದ ಛಾಪನ್ನು ಮೂಡಿಸುವಲ್ಲಿ,  ವಿದ್ಯಾರ್ಥಿಗಳಿಗೆ ಕಲಿಸುವ ವಿಷಯಗಳಾದ ವಿಜ್ಞಾನ, ಸಮಾಜ ವಿಜ್ಞಾನ , ಗಣಿತ ಇಂತಹ ವಿಷಯಗಳಲ್ಲಿ ಹುಡುಕುವ,  ಅನ್ವೇಷಣಿ ಮಾಡುವ ವಿಧಾನವೇ ಶೈಕ್ಷಣಿಕ ಶಿಸ್ತು. ಈ ತರಹದ ಕಲಿಕೆಯ ಮೂಲಕ ಜೀವನದಲ್ಲಿನ ವಿವಿಧ ಆಯಾಮಗಳನ್ನು ಭೌಧ್ಧಿಕ ಕಲಿಕೆಯಾಗಿ ಗುರಿತಿಸಿಕೊಂಡು ಸಂಶೋಧಿಸುವ ವ್ಯಕ್ತಿಗಳಾಗಿ ಬದಲಾಗಬೇಕು. ಆಗಮಾತ್ರ ಸಂಶೋಧಕನಿಗೆ ಸಮಾಜದಲ್ಲಿ  ಒಂದು ಮೌಲ್ಯದೊರಕುತ್ತದೆ. ಮೌಲ್ಯವನ್ನು ಪಡೆಯುವ ಸಂಶೋಧಕನಿಗೆ ಪ್ರಮಾಣಿಕತೆ ಅಷ್ಟೇ ಮುಖ್ಯವಾಗುತ್ತದೆ.  ಪ್ರಮಾಣಿಕತೆ ತೀಕ್ಷ್ಣವಾಗಿದ್ದಷ್ಟು ನಮ್ಮಲ್ಲಿರುವ ಪರಿಸರಕ್ಕೆ ಹೆಚ್ಚು ಕಹಿ ಎನಿಸುತ್ತದೆ.  ಈ ಪ್ರಾಕೃತಿಕ ಸಮಾಜದಲ್ಲಿ ದೊರಕುವ ಆಕರ ಸಾಮಗ್ರೀಗಳು ಅಧಿಕವಾಗಿದ್ದಷ್ಟು ಸಂಶೋಧನೆ ಸಬಲವಾಗುತ್ತ ಹೋಗುತ್ತದೆ . ಕವಿಗೆ ಇರುವ ಕಾಲ್ಪನಿಕ ಪ್ರತಿಭೆ ಸಂಶೋಧಕನಿಗೂ ಇರುತ್ತದೆ . 

ಈ ಶೋಧಕನ ಪ್ರತಿಭೆಯು ಸಮಾಜದಲ್ಲಿನ ಆಕರಗಳ ಸತ್ಯದ ಒಳಗಿರುವ ನಿಜ ಸ್ವರೂಪವನ್ನು ಧರ್ಯವಾಗಿ ತಿಳಿಸುವುದಾಗಿದೆ . ಸಂಶೋಧಕನ ಧೇಯವೇ ಸತ್ಯವನ್ನು ಹೇಳುತ್ತೇನೆ, ಎಂಬುದು ಆ ಕ್ಷಣದಲ್ಲಿ ದೊರೆತ ಆಕರಗಳ ಶೋಧವಾಗಿದೆ. ಉದಾಹರಣಿಗೆ “ನೂರು ಕುರಿಗಳು ಇವೆ ಆದರೆ ಅವುಗಳಲ್ಲಿ ಕೆಲವು ಕುರಿಗಳು ಸತ್ತುಹೋಗಿವೆ, ಕೆಲವು ದಿನಗಳ ನಂತರ ಮತ್ತೇ ಅವುಗಳನ್ನು ಎಣಿಕೆ ಮಾಡಿದಾಗ ಲೆಕ್ಕದಲ್ಲಿ ಕಡಿಮೆಯಾಗ ತೊಡಗಿದೆ. ಇದಕ್ಕೆ ಕಾರಣ ಸಂಶೋಧಕನ ಹೇಳಿಕೆ ತಪ್ಪೆಂದು ಭಾವಿಸಬಾರದು, ಆ ಸಂದರ್ಭದಲ್ಲಿ ಅವನ ಹೇಳಿಕೆಗಳು ಸರಿಯಾಗಿದ್ದು, ನಂತರದಲ್ಲಿನ ಸಶೋಧಕನ ಸತ್ಯದ ಶೋಧನೆಯು ಸರಿಯಾಗಿಯೇ ಇವೆ ಎಂಬುದು ಅಷ್ಟೇ ಸತ್ಯ. ಇದು ಅನ್ವೇಷಣಾತ್ಮಕ ಸಂಗತಿಯಿಂದ ಕೂಡಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಈ ವಿಷಯವು ಇವರಿಬ್ಬರ ನಡುವೆ ಅಂತರ ಇದೆ. ಭೂತ ಮತ್ತು ವರ್ತಮಾನಕಾಲಗಳಲ್ಲಿ ಸಂಶೋಧನೆಯ ಸ್ವರೂಪ ವಿಸ್ತರಿಸುತ್ತದೆ. ಈ ಎರಡು ಕಾಲಗಳ ಅನ್ವೇಷಣಿಯನ್ನು past is perfect ಎಂದು ಸಂಶೋಧಕನ ಪ್ರಮಾಣಿಕತೆಯನ್ನು ಕುರಿತು ಹೇಳುವುದುಂಟು. ಹೀಗೆ ನಿರ್ದಿಷ್ಟಗೊಂಡ ಸತ್ಯವನ್ನು ಹುಡುಕಿ ಹೇಳುವಲ್ಲಿ ಆ ವ್ಯಕ್ತಿಯೂ ನೂರಕ್ಕೆ ನೂರರಷ್ಟು ಪ್ರಮಾಣಿಕತೆಯನ್ನು ಮೆರೆಯಬೇಕು. ಈ ಪ್ರಮಾಣಿಕತೆ ತನ್ನ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಆಗ ಅವನ ಪ್ರಮಾಣಿಕ ಪ್ರಜ್ಞೇಗೆ ನಿಜಸ್ವರೂಪದ ಆದಿಯಲ್ಲಿಯೇ ಸಾಗುವಂತಾಗುತ್ತದೆ. ಹೀಗೆ ನಿತ್ಯದ ಬದುಕು, ಬರಹದ ಬದುಕು ಈ ಎರಡು ಪರಿಕಲ್ಪನೆಗಳಿಗೆ ವ್ಯತ್ಯಾಸವಿದೆ. ತನ್ನ ಪ್ರಮಾಣಿಕತಗೆ ಸಮಾಜದಲ್ಲಿ ಬೆಲೆಸಿಗುವುದಿಲ್ಲ. ಎಷ್ಟೇ ಆಕರ ಸಾಮಗ್ರಿಗಳನ್ನು ಪಡೆದರೂ ಲೋಕವಿರೋಧಿಯಾಗಿ ಬದುಕುವುದು ಸಹಜ ಪ್ರಕ್ರಿಯೆಯಾಗಿದೆ. ಅವನ ಸಂಶೋಧನೆಯ ಪರಿಣಿತಿಯು ಅಧಿಕ ಆಕರಗಳು ಸಿಕ್ಕಷ್ಟು ಮಹಾಪ್ರಬಂಧವು ಮತ್ತೋಷ್ಟು ಬಲಾಢ್ಯತೆಯಿಂದ ಕೂಡಿರುತ್ತದೆ.   ಅದರ ವ್ಯಾಪ್ತಿ,  ವಿಸ್ತಾರ,  ಹರವು,  ವೈವಿಧ್ಯ ಪೂರ್ಣತೆಯಿಂದ ಕೂಡಿದಷ್ಟು ಅದು ಸಂಶೋಧಕನಲ್ಲಿರಬೇಕಾದ ವ್ಯುತ್ಪತ್ತಿ ಎಂದೇನಿಸಿಕೊಳ್ಳುತ್ತದೆ.

ಸಂಶೋಧಕನಲ್ಲಿ ಪ್ರತಿಭೆ ಮುಖ್ಯವಾಗುತ್ತದೆ. ತನ್ನ ಅಧ್ಯಯನವನ್ನು ಕುರಿತು ಕೆಲವು ಸಂದರ್ಭಗಳಲ್ಲಿ  ಸಂಶೋಧಕನಾದವನು ಪೂರ್ವಪೀಡಿತ ಕಲ್ಪನೆಯ ಜೊತೆಗೆ “ಮೂಲ ಊಹೆ”ಯ ರೂಪದಲ್ಲಿ ಅಧ್ಯಯನ ಮಾಡಬೇಕು. ಸಾಹಿತಿಗಳು ಕಾಲ್ಪನಿಕ ಕಥೆಗಳನ್ನು ಬರೆಯುತ್ತಾರೆಯೊ ಹಾಗೆಯೇ ಸಂಶೋಧಕನು ಕಂಡ ಸತ್ಯವನ್ನು ಹೇಳುವ ಕವಿಯಂತೆ ವಾಚ್ಯ, ಲಕ್ಷ, ವ್ಯಂಗ್ಯ, ಇಂಥ ಅನೇಕ ಪಾತಳಿಗಳ ಭಾಷೆಯಲ್ಲಿ ಅಭಿವ್ಯಕ್ತಗೊಳಿಸುತ್ತಾರೆ. ಆದರೆ ಸಂಶೋಧಕನು ವಾಚ್ಯಪಾತಳಿ ಭಾಷೆಯಲ್ಲಿ ತನ್ನ ಅಭಿಪ್ರಾಯಗಳನ್ನು ಹೇಳುತ್ತಾರೆ.

 ಸಶೋಧಕನಲ್ಲಿರಬೇಕಾದ ಮತ್ತೋಂದು ಗುಣಕ್ರಿಯಾಶೀಲತೆ.  ಕ್ರೀಯಾತ್ಮಕ ಚಟುವಟಿಕೆ ಅಧಿಕವಾಗಿದ್ದಷ್ಟು ಸಂಶೋಧನ ಪ್ರಜ್ಞೆಹರಿತವಾಗುತ್ತಾ,  ಬಲಾಢ್ಯದಿಂದ ಕೂಡಿರುತ್ತದೆ.  ಆತನ ಯೋಚನೆಗಳು  ಸೃಜನಾತ್ಮಕತೆಯಿಂದ ಕೂಡಿರಬೇಕು. ಆಗಿದ್ದಾಗ ಮಾತ್ರ ಸಂಶೋಧಕ ವಿಶ್ಲೇಷಣಾತ್ಮಕ ವ್ಯಾಖ್ಯಾನಾತ್ಮಕ ಇಂಥಹ ಹಂತಗಳನ್ನು ಕ್ರೀಯಾತ್ಮಕ ಚಟುವಟಿಕೆಗಳ ಮೂಲಕ ಪೂರೈಸಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಒಂದಾದ ವಿಶ್ಲೇಷಣಾತ್ಮಕ ಸಂಶೋಧನೆಯು ರೂಪನಿಷ್ಠವಾಗಿದ್ಧು, fact finding ಇದರ ಗುರಿಹೊಂದಿದೆ. ಇಲ್ಲಿ ಆಕರಗಳು ಮುಖ್ಯವಾಗಿ ಸಂವೇಧನ ರಹಿತ ಬಳಸಿಕೊಂಡಾಗ ಮಾತ್ರ ಫಲಿತಗಳನ್ನು ಪ್ರಕಟಿಸಲು ಸಾಧ್ಯ. ಅನ್ವೇಷಣಿ ಎನ್ನುವುದೇ ಗತಿಸಿದ ಪರಂಪರೆಯ ಹಿಂದಿನಕಾಲದ, ಗತಿಸಿಹೋದ ಪಾಪಕಾರ್ಯಗಳನ್ನೂ ಮುಚ್ಚಿಹಾಕದೇ,  ಅದರಲ್ಲಿನ ಸತ್ಯಾನ್ವೇಷಣಿಯನ್ನು ಭೌಧ್ಧಿಕ ಕ್ರೀಯಾತ್ಮಕ ಶಕ್ತಿಯಿಂದ ಹೊರಹಾಕುವುದು ಒಳಿತು.   ಇಲ್ಲದಿದ್ದರೆ ಸಂಶೋಧನೆ ಬಡವಾಗುತ್ತ ಹೋಗುತ್ತದೆ. ಸಂಶೋಧನ ಕ್ಷೇತ್ರವನ್ನು ಸತ್ಯದ ನೆಲೆಯಲ್ಲಿ ಕೈಹಿಡಿದು ನೆಡಸುವಂತಾಗುವುದು. ಗತಕಾಲದ ಸಂಶೋಧನೆ ಎನ್ನುವುದು ವರ್ತಮಾನಕಾಲದಲ್ಲಿ ಬದುಕುವ ಕಾರ್ಯವು ನಿರಂತರ ಸಾಗಬೇಕು.

ಡಾ. ಕೆ ವಿ ನಾರಯಣ ಅವರ ಸಂಶೋಧನೆಯ ಸ್ವರೂಪದ ವಿಶ್ಲೇಷಣೆ :

ಸಂಶೋಧನೆ ಎನ್ನುವಂತದ್ದು ಹಲವು ಕ್ಷೇತ್ರಕ್ಕೆ ಮೀಸಲಿದೆ. ಆ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರೂ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡಿರುತ್ತಾರೆ. ಒಂದೊಂದು ಕ್ಷೇತ್ರಗಳಲ್ಲಿ ಬೇರೆ ಬೇರೆ ಬಗೆಯ ಪ್ರತಿಭೆಗಳಿರುತ್ತಾರೆ. ಒಂದು ಸಮಾಜ ಎಂದ ಮೇಲೆ ಅಲ್ಲಿ ಹಲವು ಕ್ಷೇತ್ರಗಳಿರುತ್ತವೆ. ಅವುಗಳೆಂದರೆ, ಕೈಗಾರಿಕೆಗಳು, ಸಂಘ ಸಂಸ್ಥೆಗಳು, ಶೈಕ್ಷಣಿಕ ಹಾಗು ತಾಂತ್ರಿಕ, ವೈಜ್ಞಾನಿಕ, ಈ ಕ್ಷೇತ್ರಗಳು ಸಹ ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ನಾಗರೀಕರೆ ತೊಡಗಿಕೊಳ್ಳಲು ಸಾಧ್ಯವಿದೆ. ಸಂಶೋಧಕರ ಜೋತೆಗ ನಾಗರೀಕರು ಸಹ ದೇಶದ ಅಭಿವೃಧ್ಧಿಯತ್ತ ಕರೆದು ಕೊಂಡು ಹೋಗುತ್ತದೆ. ಇಲ್ಲಿ ಉತ್ಪನ್ನ ಮತ್ತು ಮಾರಾಟ ಈ ಪರಿಕಲ್ಪನೆಯ ಸ್ವರೂಪದಲ್ಲಿ ಸಮೀಕ್ಷೆಗಳು ನೇರವಾಗಿಯೇ ಸತ್ಯದ ಅನ್ವೇಷಣಿ ನಡೆಯುತ್ತವೆ.

ಭೌಧ್ದಿಕವಾಗಿ, ಸಾಮಾಜಿಕ ಸಹಯೋಗದಲ್ಲಿ ಭೌಧ್ಧಿಕ ಶ್ರಮ ತನ್ನ ಸಂಶೋಧನೆಯ ಮೇಲೆ ಪ್ರಭಾವ ಬೀರುತ್ತದೆ. ಮೂರ್ತ ಮತ್ತು ಅಮೂರ್ತ ಎರಡು ಬಗೆಯಲ್ಲಿ ಸಂಶೋಧನೆಯ  ಭ್ರಮೆ ಇದೆ. ಈ ಭ್ರಮೆಗಳೆಲ್ಲವು ಸತ್ಯವಲ್ಲ.

1. ಸಂಶೋಧಕರು ಸತ್ಯವನ್ನು ಶೋಧಿಸುತ್ತಾರೆ - ಸಂಶೋಧಕನಿಗೆ ಸತ್ಯವನ್ನು ಹೇಳುತ್ತಿದ್ದೇನೆ ಎಂಬ ನಂಬಿಕೆ ಇದೆ. ಆಸತ್ಯ ಗಳೆಲ್ಲವು ಕಥೆಗಳಾಗಿಯೆ ಕಾಣುತ್ತವೆ. ಅವುಗಳನ್ನು ಕೆಳಕಂಡ ನಿದರ್ಶನಗಳ ಮೂಲಕ ಸತ್ಯವನ್ನು ತಿಳಿದುಕೊಳ್ಳಲಾಗಿದೆ.

ಉದಾಹರಣಿಗೆ  “ಹರಪ್ಪಾ ಮೊಹೆಂಜೊದಾರೋ ಉತ್ಖನನಗಳಲ್ಲಿ ದೊರಕಿರುವ ಮುದ್ರೇಗಳಲ್ಲಿರುವ ಲಿಪಿ ಬರಹವನ್ನು ಓದಲು ನಡೆಸಿರುವ ಸಂಶೋಧನೆಗಳು ಹಲವು. ಬೇರೆ ನಿರ್ಧಾರಗಳನ್ನು ಮಂಡಿಸುತ್ತಿರುವ ಈ ಸಂಶೋಧಕರ ಉದ್ಧೇಶವನ್ನು ಯಾರು ಸಂಧೇಹದಿಂದ ನೋಡುವುದು ಸಾಧ್ಯವಿಲ್ಲ. ಎಲ್ಲರೂ ಸತ್ಯವನ್ನು ಶೋಧಿಸುವ ಉದ್ದೇಶವನ್ನು ಹೊಂದಿರುತ್ತಾರೆ. ತಮ್ಮ ಶೋಧನೆಯ ಫಲಿತಗಳನ್ನು ಸತ್ಯವೆಂದೇ ತಿಳಿದಿರುತ್ತಾರೆ.  ಹಾಗಿದ್ದಲ್ಲಿ ಇವರಲ್ಲಿ ಯಾರೋ ಒಬ್ಬರನ್ನು ಹೊರತುಪಡಿಸಿ ಉಳಿದವರು ಅಸತ್ಯವನ್ನು ಸಾಧಿಸುತ್ತಿದ್ದಾರೆ ಎಂದು ಆರೋಪಿಸಲು ಬರುವುದಿಲ್ಲ.”  ಈ ಸಂದರ್ಭದಲ್ಲಿ ಮಂಡಿಸಲಾಗುವ ಸಂಶೋಧನೆಗಳು ಪೂರ್ಣ ಸತ್ಯಗಳಲ್ಲ. ನಮಗೆ ಲಭಿಸಿರುವ ಮಾಹಿತಿಯ ಪ್ರಕಾರ ವಿಶ್ಲೇಷಣಾ ಪರಿಕರಗಳನ್ನೂ ಅವಲಂಭಿಸಿ ಸದ್ಯಕ್ಕೆ ಸತ್ಯವೆಂದು ತಿಳಿಯಬಹುದು. ಹೊಸ ಮಾಹಿತಿಗಳ ಪತ್ಯೆಯಾದಾಗ, ವಿಶ್ಲೇಷಣಾ ಪರಿಕರಗಳು ದೊರಕಿದ ಹಾಗೆ. ಆಗ ಈ ಶೋಧವು ಪರಿಷ್ಕೃತಗೊಳ್ಳುತ್ತದೆ. ಈ ರೀತಿಯ ವಿವರಣಿಯಲ್ಲಿ ನಮ್ರತೆಯಿದೆ. ಆದರೆ ಈ ವಿಷಯ ನಿರುಪಯುಕ್ತ. ಸಂಶೋಧನೆ ಮಂಡಿಸುವ ಸತ್ಯ 1.ಆಂಶಿಕ, 2. ಪಾರ್ಶ್ವಿಕ, 3. ರಚಿತ, 4. ಕಾಲದೇಶಾದಿಗಳಿಂದ ನಿಯಂತ್ರಿತವಾಗಿರುತ್ತದೆ.

2. ಸಂಶೋಧನೆಯೆಂಬುದು ಒಂದು ವಸ್ತುನಿಷ್ಠ, ವಸ್ತುನಿರಪೇಕ್ಷೆವಾದ ಚಟುವಟಿಕೆ. ಸತ್ಯವನ್ನೇ ಶೋಧಿಸುತ್ತೇನೆ ಎಂಬ ದೃಢನಿರ್ಧಾರವಿದೆ. ಯಾವುದೇ ವೈಯಕ್ತಿಕ ಬದುಕಿನ ರಾಗದ್ವೇಷಗಳಿರಬಾರದು. ಅಸೂಯೇ ಇರಬಾರದು. ಸ್ವಾಹಿತಾಸಕ್ತಿಯಿಂದ ಕೂಡಿದ್ದು, ಯಾವುದೆ ಒಲುಮೆಗಳಿಂದ ಕೂಡಿರದೇ ಮುಕ್ತನಾಗಿ ಸತ್ಯವನ್ನು ಪ್ರತಿಪಾದಿಸಬೇಕು.

3. ಸಂಶೋಧನೆ ಎಂಬುದು ಮೌಲ್ಯ ನಿರಪೇಕ್ಷಿ ಚಟುವಟಿಕೆ. ನಿರ್ಧಿಷ್ಟವಾದ ಕಾಲ-ದೇಶಗಳಲ್ಲಿ ನಡೆಯುವ ಸಂಶೋಧನೆಗಳು,  ಆಯಾ ಸನ್ನಿವೇಶಗಳಲ್ಲಿ ಮೌಲ್ಯವ್ಯವಸ್ಥೆಗಳ ಸ್ವರೂಪವನ್ನು ಪ್ರತಿನಿಧಿಸುತ್ತವೆ. ವೇಗವಾಗಿ ಚಲಿಸುವ ವಾಯುಯಾನವೊಂದನ್ನು ದೂರನಿಯಂತ್ರಣದಿಂದ ಅವಕಾಶಪಡೆದು, ಆ ಯಾನವನ್ನು ವಿಜ್ಞಾನಿಗಳು ಆವಿಷ್ಕರಿಸುತ್ತಿದ್ದಾರೆಂದು ತಿಳಿಯೋಣ. ಈ ಸಂಶೋಧನೆಯು ಮಾನವನ ಒಳಿತಿಗಾಗಿ ಎಂದೆ ತಿಳಿದಿರುತ್ತಾರೆ. ಆದರೆ ಇಂತಹ ಶೋಧಗಳು ಶಸ್ತ್ರಾಸ್ತ್ರಗಳ ತಯಾರಿಕೆಗೆ ನೆರವಾಗುತ್ತವೆ. ಮಾನವ ಸಂಪನ್ಮೂಲದ ವಿನಾಶಕ್ಕೆ ಪ್ರಯೋಗವಾಗುತ್ತವೆ. ವೈಜ್ಞಾನಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಬೆಳೆಯುತ್ತಿರುವ ಈ ಕಾಲದಲ್ಲಿ, “ವೇಗವೇ ಅಭಿವೃದ್ಧಿ” ಎಂದು ತಿಳಿಯುವ ಆ ಮೌಲ್ಯಕ್ಕೆ ಸಮ್ಮತಿ ನೀಡಿ ನಿರ್ಧಿಷ್ಟ ಮೌಲ್ಯವನ್ನು ಸಂಶೋಧನೆ ಒಪ್ಪಿಕೊಂಡಿದೆ. ಸಂಶೋಧನೆಯು ಈ ಭೂಮಿಯ ಮೇಲಿರುವ ಆಕರ ಸಾಮಗ್ರೀಗಳನ್ನು ಆಧರಿಸಿಯೇ ಸಂಶೋಧನೆಯ ವಿಸ್ತಾರ, ವ್ಯಾಪ್ತಿ, ಮಹತ್ವವನ್ನು ವಿಶ್ಲೇಷಿಸುತ್ತದೆ. ಕನ್ನಡ ಸಾಹಿತ್ಯ ಸಂಶೋಧನೆಯು ಭೂಪ್ರದೇಶದಲ್ಲಿನ ಭಾಷೆ, ವಸ್ತು, ಶೈಲಿ, ಇವುಗಳನ್ನು ಆಧರಿಸಿ ರಚನೆಯಾಗುತ್ತದೆ. ಇವುಗಳನ್ನೇ, ಸತ್ಯವೆಂದು, ಅಂತಿಮವೆಂದು ಒಪ್ಪಿಕೊಳ್ಳಲು ಬರುವುದಿಲ್ಲ.

ಕನ್ನಡ ಸಾಹಿತ್ಯ ಸಂಶೋಧನೆಯು ಕವಿರಾಜಮಾರ್ಗ ಕೃತಿಯಿಂದಲೇ ಆರಂಭಿಸುತ್ತದೆ. ಕನ್ನಡದ ಅಸ್ಮಿತೆಯನ್ನು ಚರ್ಚಿಸುತ್ತದೆ. ಕನ್ನಡ ಕವಿಗಳ ವಿವರ, ಗಡಿರೇಖೆ, ಸಂಸ್ಕೃತಿ, ವ್ಯಾಕರಣ, ಇವುಗಳ ಶೋಧನಡೆದಿದೆ. ಕನ್ನಡ ವ್ಯಾಕರಣಕಾರರ ಶೋಧವು ಸಹ ಆಕರ ಸಾಮಗ್ರಿಯಾಗಿ, ಮಾಹಿತಿ ಸಿಗುತ್ತದೆ. ಸಂಶೋಧನೆಯ ಆಕರಗಳು 850ರಲ್ಲಿಯೇ ಪಳಯುಳಿಕೆಗಳಾಗಿ ನಮಗೆ ದೊರಕುತ್ತವೆ. ನಂತರ ಹತ್ತೊಬತ್ತನೇಯ ಶತಮಾನದ ಉತ್ತರಾರ್ಧದಿಂದಲೇ ಕನ್ನಡ ಸಂಶೋಧನೆಯ ಆರಂಭ ಗುರುತಿಸಿದ್ದೇವೆ. ಮೌಖಿಕ ಪರಂಪರೆಯ ವಾಸ್ತವಿಕ ಆಕರಗಳು, ಬರವಣಿಗೆಯ ರೂಪದಲ್ಲಿ ಬಂದಿವೆ. ಲಿಖಿತ ಬರಹಗಳು ಯಾಂತ್ರಿಕತೆಯಿಂದ ಪರಿವರ್ತನೆಯಾಗಿವೆ. ಹಸ್ತಪ್ರತಿಯ ಸ್ವರೂಪದಲ್ಲಿ ದೊರೆತಿರುವ ಸಾಮಗ್ರಿಗಳು, ಹಲವು ಕೃತಿಕಾರರ ಪ್ರತಿಗಳು ಮತ್ತೋಂದು ಕೃತಿಯ ಪ್ರತಿಯೊಡನೆ ಅನುಸಂಧಾನ ಮಾಡಿಕೊಂಡು, ಪಾಠಗಳನ್ನು ನಿರ್ಧರಿಸಿರುವ ಶಕ್ತಿ ಸಂಶೋಧಕನಿಗೆ ಇರಬೇಕು.

ಸಂಶೋಧನೆಯು ಭಾಷಿಕನೆಲೆಗಟ್ಟಿನಲ್ಲಿ ಸಾಮಾಗ್ರೀಗಳನ್ನು ಸಂಗ್ರಹಿಸಬಹುದು. ಯಾವುದೇ ಒಂದು ಸಾಮುದಾಯಿಕ, ಸಂಕಥನಗಳು, ಜನಾಂಗ, ಅವರುಗಳ ಮಾತನಾಡುವ ಭಾಷೆ, ನಮ್ಮ ಸಂಶೋಧನೆಗೆ ಆಕರಗಳಾಗಿ ಅಧಿಕವಾಗಿ ದೊರೆಯುತ್ತವೆ. ಅವುಗಳು ಪಠ್ಯಪುಸ್ತಕರೂಪದಲ್ಲಿ ಸಹ ದೊರೆಯುತ್ತವೆ. ಕೆಲವು ಸಂದರ್ಭದಲ್ಲಿ ಸಾಂಸ್ಕೃತಿಕ ಸ್ವರೂಪದಲ್ಲಿ ಮಾಹಿತಿಗಳು, ಮೂಲ ಸ್ವರೂಪದಿಂದ ಬಿಡುಗಡೆ ಹೊಂದುತ್ತವೆ.

ಸಂಶೋಧನೆಯು ಸಾಂಸ್ಕೃತಿಕ ಪುನಾರಚನೆ :- ಸಂಶೋಧನೆ ಮಾಡುವವರು ಮೂರು ಹಂತಗಳಲ್ಲಿ ಅಧ್ಯಯನ ಮಾಡುವುದು ಅಗತ್ಯ .

  1. ಮಾಹಿತಿಯ ನೆಲೆ
  2. ವರ್ಣ್ಣನೆಯ ನೆಲೆ
  3. ವ್ಯಾಖ್ಯಾನ ಅಥವಾ ವಿಶ್ಲೇಷಣಿಯ ನೆಲೆ

ಸಂಶೋಧನೆಯು ಹಲವು ಕ್ಷೇತ್ರಗಳಲ್ಲಿ ಮಾಹಿತಿ ಪಡೆದು ಕಾರ್ಯಾತ್ಮಕ ಚಟುವಟಿಕಗಳನ್ನು ತೊಡಗಿಸಿಕೊಳ್ಳುತ್ತದೆ. ಅಲ್ಲದೆ ಮಾನವಿಕ ಅಧ್ಯಯನಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅದೇ ನೆಲೆಯಲ್ಲಿ ಅಧಿಕೃತವಾಗಿ, ಪರಿಪೂರ್ಣಮಾಹಿತಿಪಡೆದು, ಪರಿಶೀಲಿಸಿ, ಕಾಲಾನುಕ್ರಮದಲ್ಲಿ,  ಅದುಬದಲಾಗುತ್ತದೆ. ಇನ್ನೊಂದು ನೆಲೆಯೊಳಗೆ ನೋಡುವುದಾದರೆ, ಒಂದು ಪ್ರದೇಶದ ಜಾನುವಾರುಗಳ ಗಣತಿಯನ್ನು ಮಾಡಲು ತೊಡಗಿದರೆ ದೊರಕುವ ಮಾಹಿತಿ ಗಣತಿ ನಡೆಯುವ ಅವಧಿಯಲ್ಲಿ ಬದಲಾಗಬಹುದು. ಆ ಸಂದರ್ಭದಲ್ಲಿ ದನ,  ಕರುಗಳು ಹುಟ್ಟಿರುತ್ತವೆ. ಕೆಲವು ದಿನಗಳ ಹಿಂದೆ ಸತ್ತುಹೋಗಿರಬಹುದು. ಮತ್ತೆ ಕೆಲವು ಮಾರಾಟವಾಗಿರುತ್ತವೆ, ಸಂಶೋಧಕನು ಹೋಗಿರುವ ಆ ಸಂದರ್ಭದಲ್ಲಿ ಸಂಖ್ಯೆಗಳು ಏರೀಳಿತ ಗೊಂಡಿರುತ್ತವೆ. ಆದರೆ ಮೊದಲ ಸಂಶೋಧಕನ ಮಾಹಿತಿ ಅನಧಿಕೃತವೆಂದು ಹೇಳುವಂತಿಲ್ಲ. ಈ ರೀತಿಯ ಮಾಹಿತಿಯು ಸಾಮಾಜಿಕ ಕ್ಷೇತ್ರದಲ್ಲಿ ಪಡೆಯಲು ಸಾಧ್ಯವಿದೆ. ಆದರೆ ಜನಸಾಮಾನ್ಯರಂತೆಯೇ ಇದ್ದು, ಅವರ ಮನೋಭಾವನೆಗಳನ್ನು ಅರಿತು,   ಅವಶ್ಯಕವಾದ ಮಾಹಿತಿಪಡೆಯಲಾಗಿದೆ. ಕಠಿಣವಾದ ಸಂದರ್ಭದಲ್ಲಿ ಆತ್ಮವಿಶ್ವಾಸ ಇಲ್ಲದೇ ಇರುವ ಸಂದರ್ಭದಲ್ಲಿ ಸಹ ಮಾಹಿತಿ ಸಂಗ್ರಹ ದೊರಕದೆ ಹೋಗಬಹುದು.

ಯಾವುದೇ ವಿಷಯವನ್ನು ಕುರಿತಾದ ಮಾಹಿತಿ ಪಡೆಯುವಾಗ, ಮೊದಲು ಅದರ ಮುಖ್ಯಾನೆಲೆಯನ್ನು ಕಂಡುಕೊಳ್ಳಬೇಕು. ಆ ಸ್ಥಳದ “ನೀಲಿನಕ್ಷೆ” ಹಾಕಿಕೊಳ್ಳಬೇಕು. ತಾನು ಹಾಕಿಕೊಂಡ ಪ್ರಮೇಯದ ನಿಯಮಾವಳಿಗಳು ಮುಖ್ಯವಾಗುತ್ತವೆ. ತಾನು ಸಂಶೋಧಿಸಿದ ಅಧ್ಯಯನದ ವಿವರಣಿ ವಿಷಯ, ಸಿದ್ಧಾಂತ ವ್ಯಾಖ್ಯಾನ ಇವುಗಳು ಇದ್ದಾಗ ಮಾತ್ರ ಅಧ್ಯಯನ ಪರಿಪೂರ್ಣಗೊಳ್ಳುತ್ತದೆ. ಪ್ರಾಚೀನ ಭಾಷೆಯಲ್ಲಿನ ಮೂಲ ಆಕರಗಳ ಹಂತಗಳು, ಸಂಶೋಧನೆಯ ಕ್ಷೇತ್ರಕ್ಕೆ ಮುಖ್ಯವಾಗುತ್ತವೆ. “ಭಾಷೆಯ ಪ್ರಾಚೀನ ಹಂತಗಳನ್ನು ಅಥವಾ ಭಾಷೆಗಳ ಸಮಾನ ಮೂಲವನ್ನು ಮರಳಿ ಕಾಣಲು ಯತ್ನಿಸುವುದೇ ಪುನಾರಚನೆ. ಪಳೇಯುಳಿಕೆಯಂತಹ ಆಕರಗಳನ್ನು ಬಳಸಿಕೊಂಡು ಆ ಅಧ್ಯಯನದ ಭಾಷಿಕ ಪದಗಳ ಉಪಯುಕ್ತತೆ ಪಡೆದುಕೊಳ್ಳಲಾಗಿದೆ”. ಪುನಾರಚನೆ ಪಡೆದುಕೊಳ್ಳುವ ಸಾಂಸ್ಕೃತಿಕ ಸಂದರ್ಭದಲ್ಲಿ ಸಂಬಂಧಗಳ ಪರಿಶೀಲನೆ ಅಗತ್ಯವಿದೆ. ಮೂಲಭಾಷೆಗಳ ಆಕರಗಳ ಪರಿಕಲ್ಪನೆಗಳು, ಜ್ಞಾನಶಾಖೆಯನ್ನು ಪ್ರವೇಶಿಸುತ್ತದೆ. ಉದಾಹರಣಿಗೆ “ಡಾರ್ವಿನ್ನನ ವಿಕಾಸವಾದದ ಮಂಡನೆ ಒಂದರ್ಥದಲ್ಲಿ ತಿರುವು-ಮುರುವಾದ ಪುನಾರಚನೆಯೆ ಆಗಿದೆ. ಮೂಲಪುರಾತನದ ಪಳೆಯುಳಿಕೆಗಳು ಊಹಿಸಲಾಗದಷ್ಟು ತೊಡಕಿಗೆ ಸಿಲುಕಿಕೊಳ್ಳುತ್ತವೆ. ಈ ರೀತಿಯ ಸಂಶೋಧನೆಯೂ ಪುನಾರಚನೆಯಲ್ಲಿ ಹೊಸತನ್ನು ಹೇಳುವಾಗ, ಅಲ್ಲಿನ ಸಮುದಾಯದ ವ್ಯಕ್ತಿಗಳ ಜೀವನ, ಶೈಲಿ ಕುರಿತ ವಿಷಯ ಸಾಮಗ್ರಿ, ಅತೀ ಹೆಚ್ಚು ಆಕರಗಳು, ಸಂಶೋಧನೆಯ ಸ್ವರೂಪ ಕುರಿತು ವಿಶ್ಲೇಷಿಸಲು ಸಾಧ್ಯವಿದೆ.

ಪುರಾತನದ ಪಳೆಯುಳಿಕೆಯಾದ ವಿಜಯ ನಗರವು ಕಾಲ ದೇಶಗಳ ವೈಪರಿತ್ಯಕ್ಕೆ ಸಿಲುಕಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿತು. ಅಲ್ಲಿನ ಧರ್ಮಗಳೇ ಅದರ ಫತನದಯೆಡೆಗೆ ಕೊಂಡ್ಯೋಯ್ದಿತು. ಕೆಲವು ಧರ್ಮಗಳಾದ ಶೈವ, ವೈಷ್ಣವ, ಫಂಥಗಳು ಹಾಗು ಹಿಂದೂ ಮುಸ್ಲಿಂ ರ್ಮಗಳ ನಡುವಿನ ಸಂರ್ಷಗಳು ಪತನಕ್ಕೆ ಕಾರಣವಾಗಿದೆ. ಇಂದಿಗೂ ಅಲ್ಲಿರುವ ದೇವಾಲಯಗಳು, ಅಂದಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿನ ಪ್ರತಿಯೊಂದು ದೇವಾಲಯಗಳ ವೈಶಿಷ್ಟತೆ ತನ್ನದೇ ಆದ ಪರಿಕಲ್ಪನೆಗಳ ಮೂಲಕ ಸಾಂಸ್ಕೃತಿಕ ಜೀವನವನ್ನು ಪುನಾರಚನೆಯ ಜೋಡಣಿಯು, ಊಹಾತ್ಮಕ ರಚನೆಯನ್ನು ಕಟ್ಟಿಕೊಡುತ್ತದೆ.

ಒಟ್ಟಾರೆ ಹೇಳುವುದಾದರೆ, ಮಾನವ ಬಹುಮುಖಿ ಚಿಂತನಾಶೀಲವುಳ್ಳ ಸಮಜ ಮತ್ತು ಸಂಘಜೀವಿ. ತಾತ್ವಿಕ, ಭೌತಿಕ, ವೈಜ್ಞಾನಿಕ, ಮನೋಭಾವನೆಯುಳ್ಳ ಚಿಂತನೆಗಳು ಮಾನವ ಪ್ರಗತಿಯ ಜೊತೆಗೆ ಸಂಶೋಧನೆಯ ಆಕರಗಳಾಗಿ ಮಾರ್ಪಡುತ್ತವೆ. ಮನೋವೈಜ್ಞಾನಿಕ  ಚಿಂತನೆಗಳು ಸತ್ಯಾನ್ವೇಷಣಿಯ ಪ್ರಗತಿಯನ್ನು ಕಾಣಲು ಹಲವಾರು ಕ್ಷೇತ್ರಗಳ ಪ್ರಗತಿ ಪರ ತಿಳುವಳಿಕೆ ಪಡೆಯಲು ನಿರಂತರವಾಗಿ ಪ್ರಯತ್ನಿಸುತ್ತಾನೆ. ಮನುಷ್ಯ ಹುಟ್ಟಿ ಬಂದಂದಿನಿಂದ ಹಲವಾರು ವಸ್ತುಗಳ ಹುಡುಕಾಟದಲ್ಲಿ ತೊಡಗಿದ್ದಾನೆ

ಈ ಶೋಧದ ಪ್ರವೃತ್ತಿ ನಿರಂತರ ಸಾಗಿದೆ. ಈ ಸಂಶೋಧನೆಗೆ ಒಂದು ವ್ಯವಸ್ಥಿತ ರೂಪ ಒದಗಿದ್ದು 19ನೇ ಶತಮಾನದಲ್ಲಿ. ಆದರೆ ಇದರ ಪ್ರಾರಂಭ ಎನ್ನಬಹುದು ಬ್ರಿಟೀಷರಿಗೆ. ದೇಶವೊಂದನ್ನು ವಶಪಡಿಸಿಕೊಂಡು ಆಳುವುದಕ್ಕಾಗಿ. ಆ ದೇಶದ ನಾಡಿನ ಜನರ ಭಾಷೆ, ಸಂಸ್ಕೃತಿ, ಧರ್ಮ, ಸಾಹಿತ್ಯ, ಕುರಿತು ಸಶೋಧನೆಯ ಚರಿತ್ರೆಯನ್ನು ಕಟ್ಟಿಕೊಳ್ಳಬೇಕಿತ್ತು. ಈ ಚರಿತ್ರೆಯಿಂದ ಜನರ ಮತ್ತು ಅವರ ಭಾಷೆ ಸಾಹಿತ್ಯ , ಸಂಸ್ಕೃತಿಗಳ, ಸ್ವರೂಪವಾಗಿ ರಚಿಸಿಕೊಳ್ಳುವ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಸಂಶೋಧನೆಯು ಆಕರಗಳ ಸ್ವರೂಪವಾಗಿ ಬೆಳೆದುಬಂದಿದೆ.

ಎಂ ಎಂ ಕಲಬುರ್ಗಿ ಮತ್ತು. ಕೆ ವಿ ನಾರಯಣ ಇವರಿಬ್ಬರ ಸಂಶೋಧನೆಯ ಸ್ವರೂಪ ಬಿನ್ನನೆಲೆಯಲ್ಲಿ ಸಾಗಿದೆ. ಇಲ್ಲಿ ಮುಖ್ಯವಾಗಿ ಆಕರಗಳ ಶೋಧ ಮತ್ತು ಮಾನವೀಯ ಮೌಲ್ಯಗಳು, ಹಾಗೂ ಸತ್ಯಾನ್ವೇಷಣಿಯೇ ಪ್ರಧಾನ ಅಂಶವಾಗಿದ. ಈ ಸಂಶೋಧನೆಯು ಪರಂಫರೆಯ ಪ್ರಜ್ಞೆಯನ್ನು ಜಾಗೃತವಾಗಿಸುವ ವಿದ್ವತ್ ಪ್ರಪಂಚದ ವಾತವರಣವನ್ನು ನಿರ್ಮಾಣಮಾಡುತ್ತವೆ. ಶಾಸನ, ಹಸ್ತಪ್ರತಿ, ದಾಖಲೆ, ವಸ್ತು, ನಾಣ್ಯ, ವಿಗ್ರಹ, ಜನರ ಹಾಡು , ಆಚರಣಿ, ಇತ್ಯಾದಿಗಳು, ಆಕರ ಸಾಮಗ್ರಿಗಳಾಗಿ ಗ್ರಹಿಸಿಕೊಳ್ಳಲಾಗಿದೆ. ಗ್ರಾಮೀಣಾ ಬದುಕಿನ ಜೀವನದ ಕಥೆ, ಗೀತೆಗಳು, ಸಾಹಿತ್ಯ ಮುಂತಾದವುಗಳು ಸಂಶೋಧನೆಯ ಸ್ವರೂಪವಾಗಿ, ಸಂಶೋಧಕನ ಅಧ್ಯಯನವನ್ನು ಕೈಹಿಡಿದು ಮುಂದೆ ನೆಡೆಸಿದೆ. ಇಂತಹ ಅಧ್ಯಯನವು ಸಾಂಸ್ಕೃತಿಕ ಚರಿತ್ರೆಯಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನವಾಗಿದೆ. ಆಕರಗಳ ಗುಣ ನಿಷ್ಟಶೋಧವು ವಿಮರ್ಶೆಯ ಕಡೆಗೆ ವಾಲಿತು. ಈ ವಿಮರ್ಶೆಯು ಒಂದು ಕೃತಿಯ ಸಾಹಿತ್ಯಿಕ ಅಂಶದ ಜೋತೆಗೆ ಸಾಹಿತ್ಯೇತರ ಅಂಶವನ್ನು ವ್ಯಾಖ್ಯಾನಿಸುವ ನೆಲೆಗೆ ಹೊರಳಿತು. ವಿಮರ್ಶೆಕರು ಸಾಹಿತ್ಯೇತರ ಶೋಧ ಮತ್ತು ಸಂಶೋಧಕರ ವ್ಯಾಖ್ಯಾನಾತ್ಮಕ ವಿಮರ್ಶೆಗೆ ಕಾರಣವಾಗಿ ಈಗ ವಿಮರ್ಶೆ ಮತ್ತು ಸಂಶೋಧಕರ ಸಂಶೋಧನೆಗಳ ಅಂತರ ಗುರುತಿಸಲು ಸುಲಭ ಮಾರ್ಗವಾಯಿತು. ಈ ರೀತಿಯ ಆಕರಗಳ ಶೋಧನೆಯು, ಇದು ಸಂಶೋಧನೆಯೇ ಅಥವಾ ವಿಮರ್ಶೆಯೇ ಎಂಬ ಪ್ರಶ್ನೆಯು ಸಂಶೋಧನ ಬರಹಗಳ ಧೋರಣಿಯಾಗಿ ನಮ್ಮ ಮುಂದೆ ಪ್ರಶ್ನೆಯಾಗಿಯೇ ಉಳಿದಿದೆ. ಕೆಲವು ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಸಂಶೋಧನೆಯ ಕ್ರೀಯೆಯು ಯಜಮಾನ ಪರ ದೃಷ್ಠಿಯಿಂದ ನೋಡದೆ ಜನಪರ ದೃಷ್ಠಿಯಿಂದ ಶೋಧಿಸುವ ಪರಿಕಲ್ಪನೆ ಸಂಶೋಧನೆಯ ಸ್ವರೂಪವಾಗಿ ಬೆಳೆಯಿತು. ಸಂಶೋಧನೆಯ ಸ್ವರೂಪದಲ್ಲಿ ಶೈಕ್ಷಣಿಕ ಶಿಸ್ತು ಸಹ ಒಂದು. ಆಕರಗಳ ವಿಶ್ಲೇಷಣಾತ್ಮಕ, ವ್ಯಾಖ್ಯಾನಾತ್ಮಕ, ಸ್ವರೂಪವಾಗಿ ಸಂಶೋಧನೆಯು ಬೃಹಧಾಕಾರದಲ್ಲಿ ಬೆಳೆದುಬಂದಿದೆ. ಭೌಧ್ಧಿಕ ಜ್ಞಾನದ ಜೊತೆಗೆ ಸಶೋಧಕರನ್ನು ಚಿಂತಿಸುವ, ತರ್ಕಿಸುವ, ಸವಾಲುಗಳನ್ನು ಎದುರಿಸುವ, ಮಾನವೀಯ ನೆಲೆಯಲ್ಲಿ ಬದುಕುವ, ಸಹೃದಯವುಳ್ಳ ವ್ಯಕ್ತಿಯಾಗಿ ಬೆಳೆಸುವಲ್ಲಿ ಸಂಶೋಧನೆಯ ಸ್ವರೂಪ ಕೆಲಸಮಾಡಿದೆ. ರಾಷ್ಟ್ರೀಯ, ಸಾಮಾಜಿಕ, ಶೈಕ್ಷಣಿಕ, ಮಾನವೀಯ ಪ್ರಜ್ಞೆಯ ಹರವು ಈ ಸಂಶೋಧನೆಯಲ್ಲಿ ಕಾಣಿಸುತ್ತಿವೆ. ಕಲೆ, ಸಂಸ್ಕೃತಿ, ದೇಶಿಯತೆಯನ್ನು ಪ್ರತಿಬಿಂಬಿಸುತ್ತಿವೆ. ಹೊಸವಿಚಾರಗಳನ್ನು ಸೃಷ್ಠಿಸುತ್ತಿವೆ. ವೈಜ್ಞಾನಿಕ, ತಾಂತ್ರಿಕ, ವಿದ್ಯುನ್ಮಾನ ಯಂತ್ರಗಳ ಕಡೆ ಸಂಶೋಧನೆಯ ಸ್ವರೂಪ ವಿಸ್ತಾರವಾಗುತ್ತಿದೆ. ಹೊಸ ಹೊಸ ಆವಿಷ್ಕಾರಗಳನ್ನು ಗುರುತಿಸುತ್ತಿದೆ. ಸಂಶೋಧನೆಯು ನಿಂತ ನೀರಲ್ಲ. ಅದು ಯಾವಾಗಲೂ ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತದೆ. ಇದು ವಿಶಾಲವಾದ, ಬೃಹದಾಕಾರವಾಗಿ ಬೆಳೆದು ನಿಂತ ಮಾನವೀಯ ನೆಲೆಗಟ್ಟಿನಲ್ಲಿ ಸತ್ಯದ ಕಡೆಗೆ ಕೋಂಡ್ಯೊಯ್ಯುತ್ತಿದೆ. ಶ್ರಮದಾಯಕವಾದ ಭೌಧ್ಧಿಕಜ್ಞಾನವುಳ್ಳ, ಅಭಿವೃದ್ಧಿ ಹೊಂದುತ್ತಿರುವ, ಸಂಶೋಧನೆಯು ವಿದ್ಯುನ್ಮಾನ ಯಂತ್ರವಾಗಿದೆ. ಅಲ್ಲದೇ ವಾಣಿಜ್ಯೊದ್ಯಮ ಕೈಗಾರಿಕೆ ಉತ್ಪನ್ನಗಳ ಮಾರಾಟವಾಗಿದೆ. ಇಂದಿನ ದಿನಮಾನಗಳಲ್ಲಿ ಸಂಶೋಧನೆಯ ಸ್ವರೂಪ ಬದಲಾಗತ್ತಿದೆ. ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಕೈಗಾರಿಕೆಯಂತಹ ವೈಚಾರಿಕ ಸಾಹಿತ್ಯದೆಡೆಗೆ ದಾಪುಗಾಲು ಹಾಕುತ್ತಿದೆ. ಜ್ಞಾನದ ಜೊತೆಗೆ ನಗರೀಕರಣದ ಒಲವು ಮಾನವನ ಮನಸ್ಸಿನ ಮೇಲೆ ಗಮನಸೆಳೆದಿದೆ. ಈ ರೀತಿಯ ಸಾಹಿತ್ಯಿಕ ಸಂಶೋಧನೆಯ ಸ್ವರೂಪದ ಬದಲಾವಣಿಯನ್ನು ಕಾಣುತ್ತಿದ್ದೇವೆ.

ಆಧಾರಗ್ರಂಥಗಳು

ಮೂಲ ಆಕರಗಳು:

  1. ಕಲಬುರ್ಗಿ.ಎಂ. ಎಂ. , (ಡಾ)., ಕನ್ನಡ ಸಂಶೋಧನಶಾಸ್ತ್ರ , ಸಪ್ನಬುಕ್ಹೌಸ್, ಮೂರನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009 , ಏಪ್ರೀಲ್ 2016.
  2. ನಾರಾಯಣ ಕೆ. ವಿ. ತೊಂಡುಮೇವು, ಸಂಪುಟ1,
  3. ಸದಾನಂದ ಕನವಳ್ಳಿ, ವೀರಣ್ಣ ರಾಜೂರ (ಸಂ), ಮಹಾಮರ್ಗ, ಡಾ. ಎಂ. ಎಂ. ಕಲಬುರ್ಗಿ ಅಭಿನಂದನಗ್ರಂಥ, ಪ್ರಕಾಶಕರು ವೀರಶೈವ ಅಧ್ಯಯನಸಂಸ್ಥೆ, ಶ್ರೀಜಗದ್ಗುರು ತೋಂಟದರ್ಯಮಠ , ಗದಗ, ವೀರಶೈವ ಅಧ್ಯಯನ ಅಕಾಡೆಮಿ, ಶ್ರೀನಾಗನೂರು ರುದ್ರಾಕ್ಷಿ ಮಠ. ಬೆಳಗಾವಿ, ನವಂಬರ್28 , 1998.

ಆನುಷಂಗಿಕ ಆಕರಗಳು:

  1. ಅಮರೇಶ ನುಗಡೋಣಿ , (ಸಂ) ,ಕನ್ನಡ ಸಂಶೋಧನೆಯ ವೈಧಾನಿಕತೆಗಳು, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, 2011.
  2. ಚಂದ್ರಪೂಜಾರಿ ಎಂ , “ಸಂಶೋಧನೆ, ಎನು? ಎಕೆ? ಹೇಗೆ”? , ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, 2011.
  3. ಚಂದ್ರಪೂಜಾರಿ. ಎಂ , ಸಂಶೋಧನ ಪರಿಭಾಷೆ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2014
  4. ಚಂದ್ರಪೂಜಾರಿ ಎಂ, ಸಂಶೋಧನ ಪ್ರಸ್ತಾವ, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, 2011
  5. ಚಂದ್ರಪೂಜಾರಿ. ಎಂ, ಸಂಶೋಧನ ಜವಾಬ್ಧಾರಿ, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, 2011
  6. ಪುಟ್ಟಯ್ಯ. ಬಿ. ಎಂ. , ಸಂಶೋಧನೆ ತಾತ್ವಿಕ ಆಯಾಮಗಳು, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯಹಂಪಿ, 2015
  7. ರಹಮತ್ ತರೀಕೆರೆ, ಕನ್ನಡ ಸಂಶೋಧನೆ ತಾತ್ವಿಕ ವಿಚಾರ , ಪ್ರಸಾರಂಗ ಕನ್ನ ಡವಿಶ್ವವಿದ್ಯಾಲಯ , ಹಂಪಿ, 2009.
  8. ಶಿರೂರ .ಬಿ.ವ್ಹಿ. (ಡಾ) , ಸಂಶೋಧನ ಸ್ವರೂಪ, .ಅನ್ನಪರ್ಣ ಪ್ರಕಾಶನ, ನಂ. 13, ಮಂಜುನಾಥ ನಗರ, ಹುಬ್ಬಳ್ಳಿ, 2014.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal