Tumbe Group of International Journals

Full Text


ಕಾಡುಗೊಲ್ಲ ಮತ್ತು ಊರುಗೊಲ್ಲ ಸಂಸ್ಕೃತಿಯ ವೈರುಧ್ಯಗಳು

ಡಾ. ರಾಧಾಮಣಿ ಟಿ. ಆರ್

ಸಹ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ, ಜಕ್ಕೇನಹಳ್ಳಿ, ತುಮಕೂರು ತಾಲ್ಲೂಕು

ತುಮಕೂರು ಜಿಲ್ಲೆ-572106.

ಕರ್ನಾಟಕ ಮೊ. 9741292221

Email : radha996@gmail.com


 

ಪ್ರಸ್ತಾವನೆ

ಕಾಡುಗೊಲ್ಲರು ಮತ್ತು ಊರುಗೊಲ್ಲರು ಒಂದೇ ಆದರೂ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ವೈರುಧ್ಯಗಳು ಬೇರೆಯಾಗಿವೆ. ಒಂದು ವಿಧದಲ್ಲಿ ಬುಡಕಟ್ಟು ಆದರೂ ಬುಡಕಟ್ಟು ನೆಲೆಯ ಕೇಂದ್ರಬಿಂದುವಿನಿಂದ ಹೊರದಬ್ಬಲ್ಪಟ್ಟವರು. ಈ ಅಧ್ಯಯನದ ಉದ್ದೇಶ ಗೊಲ್ಲ ಸಮುದಾಯದ ನಂಬಿಕೆ ಮತ್ತು ಆಚರಣೆಗಳ ವ್ಯತ್ಯಾಸ ತಿಳಿಯುವುದು. ಇದನ್ನು ತಿಳಿಯಲು ಸಹಬಾಗೀ ಅವಲೋಕನ, ಸಂಗತಿ ಅಧ್ಯಯನ, ಪ್ರಶ್ನಾವಳಿ ವಿಧಾನವನ್ನು ಅನುಸರಿಸಲಾಗಿದೆ. ಕಾಡುಗೊಲ್ಲ ಸಮುದಾಯ ಜನವಸತಿ ಪ್ರದೇಶದಿಂದ ದೂರದಲ್ಲಿರುವ ಮುಕ್ತವಾದ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಹಟ್ಟಿಗಳೆಂದು ಕರೆದುಕೊಂಡು ಅಲ್ಲಿ ವಾಸವಾಗಿದ್ದಾರೆ. ಈ ಲೇಖನದಲ್ಲಿ ನಾಮಕರಣ, ಋತುಮತಿಶಾಸ್ತ್ರ, ವಿವಾಹ, ಸಾವಿನ ಸೂತಕ ನೋಡಬಹುದು. ನಿಷೇಧಗಳು, ಆಹಾರಾಭ್ಯಾಸಗಳು, ಶಿಕ್ಷಣ, ರಾಜಕೀಯ ಬೆಳವಣಿಗೆಯನ್ನು ಅಧ್ಯಯನ ಮಾಡಲಾಗಿದೆ. ಈ ಜನರಿಗೆ ಮೀಸಲಾತಿಯಲ್ಲಿ ಅನೇಕ ತಾರತಮ್ಯಗಳಿವೆ. ಈ ಸಮುದಾಯದಲ್ಲಿ ಬಂಡವಾಳದ ಕೊರತೆ ಮತ್ತು ನಾಯಕತ್ವದ ಕೊರತೆಯಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಈ ಸಮುದಾಯಕ್ಕೆ ಸರ್ಕಾರ ಸವಲತ್ತುಗಳನ್ನು ಕಲ್ಪಿಸಿಕೊಡಬೇಕಾಗಿದೆ.

ಪ್ರಮುಖ ಪದಗಳು: ಕಾಡುಗೊಲ್ಲ,  ಊರುಗೊಲ್ಲ, ಸಂಸ್ಕೃತಿಯ ವೈರುಧ್ಯಗಳು

ಪೀಠಿಕೆ

            ಅಖಂಡ ಭಾರತ ದೇಶಕ್ಕೆ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ, ಭೌಗೋಳಿಕ ಇತಿಹಸವಿದೆ. ಅಂತಹ ಭಾರತದ ಇತಿಹಾಸದಲ್ಲಿ ಕರ್ನಾಟಕ ಒಂದು ಅದ್ಭುತ ಕಲ್ಪನೆಯ ಕೂಸು. ಕರ್ನಾಟಕದ ಇತಿಹಾಸ ಕೂಡ ವಿಶ್ವದಾದ್ಯಂತ ಮನೆಮಾತಾದ ಭೌಗೋಳಿಕ ಸೀಮೆ ಇದು ಅನೇಕ ಜಾತಿ, ಧರ್ಮ, ಸಂಸ್ಕೃತಿಕ ವಿಭಿನ್ನತೆ ಮತ್ತು ವಿವಿಧತೆಯನ್ನು ಹೊಂದಿ ತನ್ನ ಅಸ್ತಿತ್ವವನ್ನು ಬಹಳ ಶ್ರೀಮಂತವಾದ ಸಂಸ್ಕೃತಿಯಿಂದ ಉಳಿಸಿಕೊಂಡಿದೆ.

ಇದರಲ್ಲಿ ನಾವು ಕರ್ನಾಟಕ ಗೊಲ್ಲ ಜನಸಮುದಾಯದ ಬಗ್ಗೆ ಯೋಚಿಸುತ್ತಾ ಒಂದೇ ಮೂಲವನ್ನು ಹೊಂದಿದ್ದರೂ ವಿಭಿನ್ನವಾಗಿ ಬದುಕಿ ಕಠಿಣ ವೈರುದ್ಯವನ್ನು ಅನುಸರಿಸುತ್ತಿರುವ ಅನೇಕ ಸಂಗತಿಗಳನ್ನು ಗಮನಿಸಬಹುದು. ಕಾಡುಗೊಲ್ಲ ಮತ್ತು ಊರುಗೊಲ್ಲ ಸಮುದಾಯ ಒಂದೇ ಬುಡಕಟ್ಟಿಗೆ ಸೇರಿದವರಾಗಿದ್ದರೂ ಇವರಲ್ಲಿ ಅನೇಕ ಸಾಂಸ್ಕೃತಿಕ ವೈರುಧ್ಯಗಳನ್ನು ಗಮನಿಸಬಹುದು. ನನ್ನ ಅಧ್ಯಯನಕ್ಕೆ ನಿಲುಕಿದ ಅಂತಹ ಅಂಶಗಳನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ. 

ಅಧ್ಯಯನದ ಉದ್ದೇಶ

1.         ಕಾಡುಗೊಲ್ಲ ಮತ್ತು ಊರುಗೊಲ್ಲರ ಸಾಂಸ್ಕೃತಿಕ ವಿಭಿನ್ನತೆ ತಿಳಿಯುವುದು

2.         ಧಾರ್ಮಿಕ ಆಚರಣೆ ನಂಬಿಕೆ ವ್ಯತ್ಯಾಸ ತಿಳಿಯುವುದು.

3.         ಈ ಎರಡೂ ಸಮುದಾಯಗಳ ಸಮಸ್ಯೆ ತಿಳಿಯುವುದು.       

ಅಧ್ಯಯನದ ವಿಧಾನ

1.         ಸಹಭಾಗಿ ಅವಲೋಕನ, ಸಂಗತಿ ಅಧ್ಯಯನ, ತೌಲನಿಕ ಅಧ್ಯಯನ ಹಾಗೂ ಅವಶ್ಯಕತೆ ಇರುವ ಕಡೆ ಪ್ರಶ್ನಾವಳಿ ವಿಧಾನವನ್ನು ಅನುಸರಿಸಲಾಗಿದೆ.  

2.         ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ಅವಲೋಕನ ಮಾಡಿ ಮಾಧ್ಯಮಿಕ ಮಾಹಿತಿ ಸಂಗ್ರಹಿಸಲಾಗಿದೆ.       

ಇತಿಹಾಸ

ಬಹಳ ಹಿಂದೆ ಈ ಎರಡು ಸಮುದಾಯಗಳು ವಿಭಿನ್ನವಾಗಿರಲಿಲ್ಲ. ಆದಿವಾಸಿಗಳಾದ ಇವರು ಕಾಡು ಮೇಡು ಸುತ್ತಿಕೊಂಡು ಜೀವನದ ಅವಶ್ಯಕತೆಯನ್ನು ಪೂರೈಸಿಕೊಂಡು ಬದುಕುತ್ತಿದ್ದರು. ಈ ಸಮುದಾಯದ  ಅಣ್ಣ ತಮ್ಮಂದಿರ ನಡುವೆ ಜಗಳ ಸಂಭವಿಸಿ ಇವರಲ್ಲಿ ಒಬ್ಬರು ಕಾಡಿನಿಂದ ಇತರ ಜನ ಸಮುದಾಯಗಳು ವಾಸಿಸುವ ಹಳ್ಳಿಗಳ ಕಡೆಗೆ ಬಂದು ನೆಲೆನಿಂತನು. ಇನ್ನೊಬ್ಬನು ಕಾಡಿನಲ್ಲಿ ಉಳಿದು ಮೂಲ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋದನು. ಈ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು, ಕಾಡಿನಲ್ಲಿ ಉಳಿದು ನಿಷಿದ್ಧಗಳನ್ನು ಮುಂದುವರಿಸಿದÀ ಸಮುದಾಯವನ್ನು ಕಾಡುಗೊಲ್ಲರೆಂದು, ಊರಿನ ಕಡೆಗೆ ಧಾವಿಸಿ ಇತರ ಜನರ ನಡುವೆ ಬೆರೆತ ಸಮುದಾಯವನ್ನು ಊರು ಗೊಲ್ಲರೆಂದು ಕರೆಯಲಾಗಿದೆ.

            ಇವರಿಬ್ಬರು ಅಣ್ಣ ತಮ್ಮಂದಿರಾದ್ದರಿಂದಲೇ ಇವರುಗಳ ನಡುವೆ ವೈವಾಹಿಕ ಬಾಂದವ್ಯ ಏರ್ಪಡಿಸುವುದಿಲ್ಲ, ನಿಷೇಧಗಳನ್ನು (ಖಿಚಿboos) ಅನುಸರಿಸುತ್ತಾರೆ. ಈ ಲೇಖನಕ್ಕೆ ಸಂಬಂಧಪಟ್ಟಂತೆ ಕಾಡುಗೊಲ್ಲ ಮತ್ತು ಊರುಗೊಲ್ಲರ ಎರಡು ಹಳ್ಳಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕಾಡುಗೊಲ್ಲರ ಬಗೆಗಿನ ಮಾಹಿತಿಗೆ ನೆಲಹಾಳ ಗೊಲ್ಲರಹಟ್ಟಿಯನ್ನು ತೆಗೆದುಕೊಳ್ಳಲಾಗಿದೆ.  ನೆಲಹಾಳ ಗ್ರಾಮವನ್ನು ಇತ್ತೀಚೆಗೆ ಹುಕ್ಕಡದ ಗೊಲ್ಲರಹಟ್ಟಿ ಎಂದು ಕರೆಯುತ್ತಾರೆ. ಇದು ನೆಲಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಕೋರಾ ಹೋಬಳಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆಗೆ ಸೇರಿದೆ. ಕಾಡುಗೊಲ್ಲರ ಸಂಸ್ಕೃತಿಯನ್ನು ಹುಕ್ಕಡದಹಟ್ಟಿಯವರು ಅಚ್ಚಳಿಯದೇ ಉಳಿಸಿಕೊಂಡು ಅನುಸರಿಸಿಕೊಂಡು ಬಂದಿರುತ್ತಾರೆ. ಇನ್ನು ಊರುಗೊಲ್ಲರ ಮಾಹಿತಿಗಾಗಿ ಚಿಕ್ಕಸಾಗ್ಗೆರೆ ಹಳ್ಳಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇದು ದೊಡ್ಡಸಾಗ್ಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಳವನಹಳ್ಳಿ ಹೋಬಳಿ ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆಗೆ ಸೇರಿದೆ.

ಈ ಎರಡು ಸಮುದಾಯಗಳನ್ನು ತೌಲನಿಕ (ಛಿomಠಿಚಿಡಿಚಿಣive sಣuಜಥಿ) ಅಧ್ಯಯನಕ್ಕೆ ಒಳಪಡಿಸಿಕೊಂಡು ಪರಸ್ಪರ ಎರಡು ಸಮುದಾಯಗಳ ನಡುವೆ ಇರುವ ವೈರುಧ್ಯ (ಆeಜಿeಡಿeಟಿಛಿe) ವನ್ನು ದಾಖಲಿಸಲಾಗಿದೆ. ಈ ಎರಡೂ ಸಮುದಾಯದವರು ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ ಮುಂತಾದ ಕಡೆ ವಾಸಿಸುತ್ತಾರೆ.

 

ಸಾಮಾಜಿಕ ಜೀವನದ ವೈರುಧ್ಯಗಳು

            ಈ ಎರಡೂ ಸಮುದಾಯಗಳು ಹೊಂದಿರುವ ಭಿನ್ನತೆಗಳು ಈ ರೀತಿ ಇವೆ.

ಈ ಬುಡಕಟ್ಟು ಸಮುದಾಯದವರು ಜನವಸತಿ ಪ್ರದೇಶದಿಂದ ದೂರದಲ್ಲಿರುವ ಮುಕ್ತವಾದ ಜಾಗಗಳನ್ನು ಆಯ್ಕೆಮಾಡಿಕೊಂಡು ಅವುಗಳನ್ನು ‘ಹಟ್ಟಿ’ ಗಳೆಂದು ಕರೆದುಕೊಂಡು, ಪಶುಪಾಲನಾ ವೃತ್ತಿಯನ್ನು ಮೊದಲಿನಿಂದಲೂ ರೂಢಿಸಿಕೊಂಡವರಾದ್ದರಿಂದ ಈಗಲೂ ಅದನ್ನು ಮುಂದುವರೆಸುತ್ತಾ ಬಂದಿದ್ದಾರೆ. ಇವರನ್ನು ಕಾಡುಗೊಲ್ಲರು, ಕರಡಿಗೊಲ್ಲರು, ಅಡವಿಗೊಲ್ಲರು, ಹಟ್ಟಿಗೊಲ್ಲರು ಎಂಬ ಅನೇಕ ಹೆಸರುಗಳಿಂದ ಕರೆದುಕೊಂಡಿದ್ದಾರೆ. ಹೆಂಗಸರು ಬಲಗೈಗೆ ಕೃಷ್ಣಗೊಲ್ಲ ಕಡಗ ಧರಿಸುತ್ತಿದ್ದರು. ಇನ್ನು ಇತ್ತೀಚೆಗೆ ಆಧುನಿಕತೆಯ ಪ್ರಭಾವದಿಂದ ಅವರು ತಮ್ಮ ಉಡುಪಿನಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಕಾಡುಗೊಲ್ಲ ಹೆಂಗಸರು ಮೊದಲು ರವಿಕೆಯನ್ನು ತೊಡುತ್ತಿರಲಿಲ್ಲ, ಆದರೆ ಈಗ ಎಲ್ಲರಂತೆ ಅವರು ರವಿಕೆಯನ್ನು ತೊಡುತ್ತಾರೆ.

            ಇನ್ನೂ ಊರುಗೊಲ್ಲರನ್ನು ಕೃಷ್ಣಗೊಲ್ಲರೆಂದು ಕರೆಯುತ್ತಾರೆ. ಇವರು ಸಾಮಾನ್ಯ ಜನರು ವಾಸಿಸುವ ಊರುಗಳಲ್ಲಿಯೇ ವಾಸಿಸುತ್ತಾ ಸರಳವಾದ ನಿಯಮಗಳನ್ನು ಅನುಸರಿಸುತ್ತಾ ಜೀವಿಸುತ್ತಿದ್ದಾರೆ.

ಹುಟ್ಟಿನ ಸಂದರ್ಭದಲ್ಲಿ ಕಾಡುಗೊಲ್ಲರ ಆಚರಣೆಗಳು:

            ಕಾಡುಗೊಲ್ಲರಲ್ಲಿ ಹುಟ್ಟಿನ ಸೂತಕ ಬಹು ಮೈಲಿಗೆಯಿಂದ ಕೂಡಿದ್ದು, ಹೆರಿಗೆಯಾಗುವ ಮುನ್ನವೇ ಬಾಣಂತಿಗಾಗಿ ಒಂದು ಗುಡಿಸಲನ್ನು ನಿರ್ಮಿಸುತ್ತಾರೆ. ಹೆರಿಗೆಯ ಸಮಯದಲ್ಲಿ ಊರಿನ ಸೂಲಗಿತ್ತಿ ಮಹಿಳೆ ಹೆರಿಗೆ ಮಾಡಿಸುತ್ತಿದ್ದಳು. ಆದರೆ ಇತ್ತೀಚೆಗೆ ಎಲ್ಲರಂತೆ ಅವರೂ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಾರೆ, ಆನಂತರದಲ್ಲಿ ಅವರ ಸಂಪ್ರದಾಯದಂತೆ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಾಣಂತಿಯನ್ನು ನೇರವಾಗಿ ಹೊಸದಾಗಿ ನಿರ್ಮಿಸಿರುವ ಗುಡಿಸಲಿಗೆ ಬಿಡುತ್ತಾರೆ. ಮಗುವಿಗೆ ಮೂರು ತಿಂಗಳು ತುಂಬುವವರೆಗೂ ಮಗು ಮತ್ತು ಬಾಣಂತಿ ಆ ನಿಷಿದ್ಧ ಗುಡಿಸಲಿನಲ್ಲಿಯೇ ವಾಸಿಸಬೇಕು. ಆ ಗುಡಿಸಲಿಗೆ ಗಂಡಸರ ಪ್ರವೇಶ ಇರುವುದಿಲ್ಲ. ಮಗು ಮತ್ತು ತಾಯಿಯ ಆರೈಕೆಯನ್ನು ಮನೆಯ ಇನ್ನಿತರ ಮಹಿಳೆಯರು ನೋಡಿಕೊಳ್ಳುತ್ತಾರೆ. ಮೂರು ತಿಂಗಳು ತುಂಬಿದ ಮಗುವನ್ನು ಎಣ್ಣೆ ನೀರಿನಲ್ಲಿ ಸ್ನಾನ ಮಾಡಿಸಿ ಕುರಿ ಹಾಲು ಮತ್ತು ಗೋಮೂತ್ರವನ್ನು ಮಗು ಮತ್ತು ಬಾಣಂತಿಗೆ ಕುಡಿಸಿ ಶುದ್ಧೀಕರಣ ಮಾಡಿ ಮನೆಗೆ ಕರೆದುಕೊಳ್ಳುತ್ತಾರೆ. ಈ ಸಂಪ್ರದಾಯವನ್ನು ʻಜನಿಗೆʼ ಎಂದು ಕರೆಯುತ್ತಾರೆ.

 ಹುಟ್ಟಿನ ಸಂದರ್ಭದಲ್ಲಿ ಊರುಗೊಲ್ಲರ ಆಚರಣೆಗಳು

            ಊರುಗೊಲ್ಲರಲ್ಲಿ ಹೆರಿಗೆಯಾದ ಹೆಂಗಸನ್ನು ಮನೆಯಲ್ಲಿಯೇ ಇಟ್ಟುಕೊಂಡು, 9 ದಿನದ ನಂತರ ಸೂತಕ ಕಳೆದುಕೊಳ್ಳುವ ಶಾಸ್ತ್ರ ಮಾಡುತ್ತಾರೆ. ನೀರಿನ ಜೊತೆಯಲ್ಲಿ ಎಣ್ಣೆ, ಹಾಗೂ ಬೇವು, ನೀಲಗಿರಿ, ಹೊಂಗೆ, ನಿಂಬೆ, ತಂಗಡಿ, ಎಳ್ಳಿ ಸೊಪ್ಪನ್ನು ಹಾಕಿ ನೀರನ್ನು ಚನ್ನಾಗಿ ಕಾಯಿಸಿ, ಸ್ನಾನ ಮಾಡಿಸಿ ಸೂತಕ ಕಳೆಯುತ್ತಾರೆ. ಮಗುವಿಗೆ ಶೀತ ತಾಗದೇ ಇರಲಿ ಎಂಬ ಉದ್ದೇಶದಿಂದ ನೀರು ಹಾಕುವವರೆಗೂ ಮಗುವನ್ನು ಮೊರದ ಮೇಲೆ ರಾಗಿ ಹುಲ್ಲುಹಾಕಿ ಮಲಗಿಸುತ್ತಾರೆ. ಸೂತಕ ಕಳೆದ ನಂತರ ಮಗುವನ್ನು ತೊಟ್ಟಿಲಿಗೆ ಹಾಕುತ್ತಾರೆ.

ನಾಮಕರಣದ ಸಂದರ್ಭದಲ್ಲಿ ಕಾಡುಗೊಲ್ಲರ ಆಚರಣೆಗಳು

            ಕಾಡುಗೊಲ್ಲರಲ್ಲಿ ನಾಮಕರಣ ಐದರಿಂದ ಒಂಬತ್ತನೇ ತಿಂಗಳಿನಲ್ಲಿ ನಡೆಸುತ್ತಾರೆ. ಸಾಮಾನ್ಯವಾಗಿ ಮಗುವಿಗೆ ಮನೆದೇವರ ಹೆಸರನ್ನು ಇಡುವ ಸಂಸ್ಕೃತಿ ಇದೆ.  ಮಗುವಿಗೆ ಹೆಸರಿಡುವ ಶಾಸ್ತ್ರವನ್ನು ಅದರ ಸೋದರಮಾವ ಅಥವಾ ಸೋದರತ್ತೆಯಿಂದ ಮಾಡಿಸುತ್ತಾರೆ. ಮಗುವಿನ ಕಿವಿಯಲ್ಲಿ ಮೂರು ಸಲ ಹೆಸರು ಹೇಳಿ, ಅನಂತರ ಎಲ್ಲರಿಗೂ ಕೇಳುಸುವಂತೆ ಮಗುವಿನ ಹೆಸರನ್ನು ಹೇಳಿ, ಎಲ್ಲರಿಗೂ ಸಿಹಿ ಹಂಚುತ್ತಾರೆ.

ನಾಮಕರಣದ ಸಂದರ್ಭದಲ್ಲಿ ಊರುಗೊಲ್ಲರ ಆಚರಣೆಗಳು

ಊರುಗೊಲ್ಲರೂ ಸಹ ಕಾಡುಗೊಲ್ಲರ ರೀತಿಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇವರು ಹೆಚ್ಚಾಗಿ ನರಸಿಂಹ ದೇವರ ಆರಾಧಕರು ಮನೆಯ ದೇವರ ಹೆಸರು ಅಥವಾ ಹಿರಿಯರ ಹೆಸರನ್ನು ಮಗುವಿಗೆ ಇಡುತ್ತಾರೆ. ಉದಾ : ನರಸಿಂಹ, ಉಗ್ರನರಸಿಂಹ, ಬುಗುಲುನರಸಿಂಹ, ಚಿಕ್ಕನರಸಿಂಹ, ಹನುಮ, ವೆಂಕಟೇಶ.....ಇತ್ಯಾದಿ ಆದರೆ ಇತ್ತೀಚೆಗೆ ಆಧುನಿಕ ಪ್ರಭಾವದಿಂದ ಮಕ್ಕಳಿಗೆ ಬೇರೆ ಬೇರೆ ಹೆಸರುಗಳನ್ನು ದೇವರ ಹೆಸರನ್ನು ಹೊರತುಪಡಿಸಿ ಇಡುತ್ತಾರೆ. ಉದಾ: ಚೈತ್ರ, ಮುರಳಿ, ಮೋಹನ, ವೇಣುಗೋಪಾಲ, ಸುಬ್ರಹ್ಮಣ್ಯ ಇತ್ಯಾದಿ.

ಕಾಡುಗೊಲ್ಲರಲ್ಲಿ ಋತುಮತಿಶಾಸ್ತ್ರ:       

            ಕಾಡುಗೊಲ್ಲರಲ್ಲಿ ಋತುಮತಿ ಶಾಸ್ತ್ರವನ್ನು ಬಹಳ ಕಟ್ಟುನಿಟ್ಟಾಗಿ ನಡೆಸುತ್ತಾರೆ. ಮಗು 10-12 ವರ್ಷದಲ್ಲಿ ಮೈನೆರೆದಾಗ ಅವಳಿಗೆ ಪ್ರತ್ಯೇಕವಾದ ಹೊಗೆಸೊಪ್ಪಿನ ಹಸಿರು ಗುಡಿಸಲನ್ನು ಆಕೆಯ ಸೋದರ ಮಾವನಿಂದ ನಿರ್ಮಿಸಿ, ಆ ಗುಡಿಸಲಿನಲ್ಲಿ ಎರಡು ರಾತ್ರಿ ಒಂದು ಹಗಲು ಇರಿಸುತ್ತಾರೆ. ಹೆಣ್ಣುಮಗಳು ರಾತ್ರಿ ನಿದ್ರೆ ಮಾಡುವಂತಿಲ್ಲ. ಎರಡನೇ ದಿನದ ನಂತರ ಊರಿನ ಆಚೆ ಆ ಹಸಿರು ಗುಡಿಸಲನ್ನು ಸುಡುತ್ತಾರೆ. ಆಕೆಯಿಂದ ಮನೆದೇವರಿಗೆ ಪೂಜೆ ಮಾಡಿಸಿ ಮನೆಗೆ ಕರೆದುಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ಅವಳಿಗೆ ಪೌಷ್ಟಿಕ ಆಹಾರ ನೀಡುತ್ತಾರೆ. ಅನ್ನ, ತುಪ್ಪ, ಎಳ್ಳಿನುಂಡೆ, ಕೊಬ್ಬರಿಬೆಲ್ಲ, ಜೊತೆಗೆ ಕಲ್ಲಿನ ಮೇಲೆ ಊಟ ಹಾಕುತ್ತಾರೆ. ಒಂದು ತಿಂಗಳು ತುಂಬುವವರೆಗೂ ಆಕೆಗೆ ಪೌಷ್ಟಿಕ ಆಹಾರ ನೀಡಿ ವಿಶ್ರಾಂತಿ ನೀಡುತ್ತಾರೆ. ದೈಹಿಕವಾಗಿ ಆಕೆಯು ಯಾವ ಕೆಲಸವನ್ನೂ ನಿರ್ವಹಿಸುವಂತಿಲ್ಲ.

            ಆನಂತರ ಪ್ರತಿ ತಿಂಗಳು ಮುಟ್ಟಾದಾಗ ಅವರಿಗಾಗಿಯೇ ಹಟ್ಟಿಯಲ್ಲಿ ಒಂದು ಪ್ರತ್ಯೇಕ ಗುಡಿಸಲನ್ನು ನಿರ್ಮಿಸಿರುತ್ತಾರೆ. ಹಟ್ಟಿಯಲ್ಲಿ ಮುಟ್ಟಾದ ಎಲ್ಲಾ ಹೆಂಗಸರು, ಮುಟ್ಟಾಗುವ ಎಲ್ಲ ಹೆಣ್ಣು ಮಕ್ಕಳು ಮೂರು ದಿನ ಅಲ್ಲಿಯೇ ಇರಬೇಕು. ಅದನ್ನು ‘ಮುಟ್ಟೋದೋರ ಮನೆ’ ಅಥವಾ ‘ಹೊಲೆತ್ತಿನ ಮನೆ’ ಎಂದು ಕರೆದು ಕೊಂಡಿದ್ದಾರೆ. ಸರ್ಕಾರದವರೇ ಇತ್ತೀಚೆಗೆ ಅವರಿಗೆ ಮನೆಯನ್ನು ನಿರ್ಮಿಸಿರುವುದರಿಂದ ಅದನ್ನು ‘ಕೃಷ್ಣ ಕುಟೀರ’ ಎಂದು ಕರೆಯುತ್ತಾರೆ.

ಊರುಗೊಲ್ಲರಲ್ಲಿ ಋತುಮತಿಶಾಸ್ತ್ರ:

ಊರುಗೊಲ್ಲರಲ್ಲಿ ಮುಟ್ಟಾದಾಗ ಮನೆಯಲ್ಲಿಯೇ ಇರುತ್ತಾರೆ. ಸೂತಕವನ್ನು ಮನೆಯಲ್ಲಿಯೇ ಆಚರಿಸುತ್ತಾರೆ. ಮೂರು ದಿನ ಅಡುಗೆಮನೆ, ದೇವರಮನೆಗೆ ಹೋಗುವುದಿಲ್ಲ. ಮೂರನೇ ದಿನ ಗೋವಿನಮೂತ್ರ ಸಿಂಪಡಿಸಿಕೊಂಡು ಸೂತಕ ಕಳೆದು ಮನೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ.

ವಿವಾಹ

            ಕಾಡುಗೊಲ್ಲರಲ್ಲಿ ವಿವಾಹ ಸಮಬಳಿ ಅಥವಾ ಸಮಗೋತ್ರದಲ್ಲಿ ವಿವಾಹವಾಗುವಂತಿಲ್ಲ. ಹುಕ್ಕಡದ ಹಟ್ಟಿಯಲ್ಲಿ ಕರಡಿಗೊಲ್ಲ ಮತ್ತು ಸೋಮನೋರು ಎಂಬ ಎರಡು ಪಂಗಡಗಳಿದ್ದು, ಪರಸ್ಪರ ವಿವಾಹ ಮಾಡಿಕೊಳ್ಳಬಹುದು. ಹಿರಿಯರು ಒಪ್ಪಿದ ಮದುವೆಗೆ ಹೆಚ್ಚು ಮನ್ನಣೆ ಕೊಡುತ್ತಾರೆ.

            ಊರುಗೊಲ್ಲರಲ್ಲಿ ಅನೇಕ ಪಂಗಡಗಳಿದ್ದು ಚಿಕ್ಕಸಾಗ್ಗೆರೆ ಗ್ರಾಮದ ಊರುಗೊಲ್ಲರಲ್ಲಿ ಆನೇರು, ಪನೇರು, ರಾಮೋರು, ಹರಿಶೇಣೇರು ಎಂಬ ನಾಲ್ಕು ಕುಲದವರಿದ್ದು ಇವರಲ್ಲಿಯೂ ಸಮ ಬೆಡಗು ಬಿಟ್ಟು ಉಳಿದವರಲ್ಲಿ ವಿವಾಹ ಏರ್ಪಡಿಸಬಹುದು. ಬಾಲ್ಯವಿವಾಹ ಇವರಲ್ಲಿ ಇಲ್ಲ. 18 ವರ್ಷ ತುಂಬಿದ ಹುಡುಗಿ ಹಾಗೂ 21 ವರ್ಷಗಳು ತುಂಬಿದ ಹುಡುಗನಿಗೆ ವಿವಾಹ ನಿಶ್ಚಯಿಸುತ್ತಾರೆ. ಪ್ರೇಮ ವಿವಾಹಗಳೂ ಚಾಲ್ತಿಯಲ್ಲಿವೆ. ಹಿರಿಯರೂ ಒಪ್ಪಿ ಮಾಡುವ ವಿವಾಹಗಳೂ ಇವೆ.

ಸಾವಿನ ಸೂತಕ

            ಕಾಡುಗೊಲ್ಲರಲ್ಲಿ ಯಾರಾದರೂ ಸಾವನ್ನಪಿದ್ದರೆ, ಹಟ್ಟಿಯಿಂದ ಆಚೆಗೆ ಶವವನ್ನು ಇರಿಸಿ ಹಟ್ಟಿಯ ಎಲ್ಲಾ ಜನರೂ ಸೇರಿ ಹಿರಿಯರು ನಡೆಸಿಕೊಂಡು ಬಂದಂತಹ ಆಚರಣೆಗಳನ್ನೂ ಅನುಸರಿಸಿ ಶವವನ್ನು ಹೂಳುತ್ತಾರೆ. 3ನೇ ದಿನದಲ್ಲಿ ಹಾಲುತುಪ್ಪ ಬಿಡುತ್ತಾರೆ. 11ನೇ ದಿನದಲ್ಲಿ ತಿಥಿಯನ್ನು ಮಾಡುತ್ತಾರೆ. ಸ್ವ ಕುಲದವರೆಲ್ಲಾ ಸೂತಕ ಕಳೆಯುವವರೆಗೂ ದೇವಸ್ಥಾನಕ್ಕೆ ಪ್ರವೇಶ ಮಾಡುವಂತಿಲ್ಲ. ಹಟ್ಟಿಯನ್ನು ಗೋಮೂತ್ರ ಸಿಂಪಡಿಸಿ ಸಗಣಿಯಿಂದ ಸಾರಿಸುತ್ತಾರೆ.

            ಊರುಗೊಲ್ಲರಲ್ಲಿ ಶವವನ್ನು ಹೂಳುತ್ತಾರೆ. 3ನೇ ದಿನ ಮತ್ತು 11ನೇ ದಿನ ಮೂರು ದಿನದಶಾಸ್ತ್ರ ಹಾಗೂ 11ನೇ ದಿನಕ್ಕೆ ತಿಥಿ ನಂತರ 1 ವರ್ಷ ತುಂಬಿದಾಗ ವಾರ್ಷಿಕ ತಿಥಿ ಆಚರಿಸುತ್ತಾರೆ. 3ನೇ ದಿನದ ಸೂತಕ ಕಳೆಯುವಾಗ ಮಾಂಸಾಹಾರ ತಯಾರಿಸಿ ಅಣ್ಣ ತಮ್ಮಂದಿರಾಗುವವರು ಮಾತ್ರ ತಿನ್ನುತ್ತಾರೆ. ಅದನ್ನು ʻಒಂದು ಕೂಳಿಗೆ ಕಲೆತೋರು’ ಎಂದು ಕರೆಯುತ್ತಾರೆ. ಆ ಸೂತಕದ ಮನೆಯ ಹೆಣ್ಣು ಮಕ್ಕಳು ವಿವಾಹವಾಗಿ ಗಂಡನ ಮನೆಗೆ ಹೋಗಿದ್ದರೆ ಅವರು ‘ಕೂಳು’ ತಿನ್ನುವಂತಿಲ್ಲ. ಸೂತಕದ ಮನೆಗೆ ವಿವಾಹವಾಗಿ ಬಂದ ಸೊಸೆಯಂದಿರು ತಿನ್ನಬಹುದು. ಮರಣ ಹೊಂದಿದ ವ್ಯಕ್ತಿ ಇಷ್ಟಪಡುವ ಆಹಾರವನ್ನು ತಯಾರಿಸಿ ದೇವರಿಗೆ ಎಡೆಯನ್ನು ಮಾಳಿಗೆಯ ಮೇಲೆ ಇಟ್ಟು ದೀಪ ಹಚ್ಚಿ ದಿಬ್ಬಣದ ತಟ್ಟೆಯನ್ನು ಬೋರಲಾಗಿ ಎಡೆಗೆ ಹಾಕುತ್ತಾರೆ. 10ನೇ ದಿನದ ತಿಥಿಯಲ್ಲಿ ಶವ ಸಂಸ್ಕಾರದ ಸ್ಥಳದಲ್ಲಿ ಮತ್ತು ಸೂತಕದ ಮನೆಯಲ್ಲಿ ಪೂಜಿಸುತ್ತಾರೆ.

ಧಾರ್ಮಿಕ ವೈರುಧ್ಯಗಳು:

            ಕಾಡುಗೊಲ್ಲರು ವಾಸಿಸುವ ಹಟ್ಟಿಗಳಲ್ಲಿ ತಮ್ಮ ಗುಡಿಸಲುಗಳಿಗೆ ಕಾಣುವಂತೆ ಅವರ ಆರಾಧ್ಯ ದೈವವಾದ ಜುಂಜಪ್ಪ, ಕ್ಯಾತಪ್ಪ, ಸಿರಿಯಣ್ಣ, ಪಾಪಣ್ಣನವರ ಗುಡಿಗಳನ್ನು ಕಟ್ಟುತ್ತಾರೆ. ಅವುಗಳಿಗೆ ಮುಳ್ಳು ಬೇಲಿಯನ್ನು ಹಾಕಿರುತ್ತಾರೆ. ಶತ್ರುಗಳನ್ನು ತಡೆಗಟ್ಟುವುದಕ್ಕೆ ಈ ವಿಧಾನ ಅನುಸರಿಸುತ್ತಾರೆ. ಪ್ರತಿ ಶನಿವಾರ ಪೂಜೆ ಸಲ್ಲಿಸುತ್ತಾರೆ. ಶುಭ ಸಮಾರಂಭಗಳಲ್ಲಿ ಪೂಜೆ ಮಾಡಿ ಮುಂದಿನ ಕಾರ್ಯ ಕೈಗೊಳ್ಳುತ್ತಾರೆ. ಅಶುಭ ಸಂದರ್ಭದಲ್ಲಿ ಗುಡಿಗಳನ್ನು ಗೋಮೂತ್ರದಿಂದ ಶುದ್ಧಿಗೊಳಿಸಿ ಆನಂತರ ಪೂಜೆ ಸಲ್ಲಿಸುತ್ತಾರೆ

ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪ, ಕ್ಯಾತಪ್ಪ,ನವರ ಮುಂದೆ ʻಗಣೆʼ ಯನ್ನು ಊದುತ್ತಾರೆ.  ʻಗಣೆʼ ಎಂಬುವುದು ಕೊಳಲಿನ ಆಕಾರದ ಸಂಗೀತವಾದ್ಯ ಜುಂಜಪ್ಪನು ಇದನ್ನು ದನ ಕಾಯುವಾಗ ಊದುತ್ತಿದ್ದನೆಂಬ ನಂಬಿಕೆಯಿಂದ ಹಬ್ಬ ಹರಿದಿನಗಳಲ್ಲಿ ಇದನ್ನು ನುಡಿಸುತ್ತಾರೆ. ಕಾಡುಗೊಲ್ಲರ ಹಾಲು ಉಯ್ಯುವ ಹಬ್ಬದ ದಿನ ದೇವರ ಮುಂದೆ ಇದನ್ನು ನುಡಿಸಲೇಬೇಕು ಹಾಲು ಉಯ್ಯುವ ವಸ್ತುವಿಗೆ ‘ಜೆನಿಗೆ’ ಎಂದು ಕರೆಯುತ್ತಾರೆ. ಹೀಗೆ ವಿಶಿಷ್ಟ ಆಚರಣೆಯ ಧಾರ್ಮಿಕತೆಯನ್ನು ಹೊಂದಿದ್ದಾರೆ. ಇತ್ತೀಚೆಗೆ ಸಂಕ್ರಾಂತಿ, ಯುಗಾದಿ, ದೀಪಾವಳಿ ಇತ್ಯಾದಿ ಹಬ್ಬಗಳನ್ನು ಆಚರಿಸುತ್ತಾರೆ.

ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹಟ್ಟಿಗಳಲ್ಲಿ ವಿಜೃಂಬಣೆಯಿಂದ ಆಚರಿಸುತ್ತಾರೆ. ಪ್ರತಿಯೊಂದು ಗುಡಿಸಲಿನಲ್ಲಿಯೂ ಕೃಷ್ಣನ ಭಾವಚಿತ್ರ ಇಟ್ಟು ಮನೆಯ ಹೊರಗಿಂದ ಒಳಗಿನವರೆಗೂ ಶ್ರೀಕೃಷ್ಣನ ಹೆಜ್ಜೆಯ ಗುರುತನ್ನು ರಂಗೋಲಿ ಮೂಲಕ ಬಿಡಿಸುತ್ತಾರೆ. ಹಬ್ಬದ ಸಿಹಿ ಊಟ ಮಾಡಿ ತಿನ್ನುತ್ತಾರೆ.

ಊರುಗೊಲ್ಲರು ಸಾಮಾನ್ಯವಾಗಿ ನರಸಿಂಹಸ್ವಾಮಿ ಆರಾಧಕರು, ಇವರು ಸಂಕ್ರಾಂತಿ, ಯುಗಾದಿ, ದೀಪಾವಳಿ, ಶ್ರೀಕೃಷ್ಣಜನ್ಮಾಷ್ಟಮಿ ಹಬ್ಬಗಳನ್ನು ಮಾಡುತ್ತಾರೆ. ಪ್ರತಿ ತಿಂಗಳು ಅಮಾವಾಸ್ಯೆ ಪೂಜೆಗಳನ್ನು ಆಚರಿಸುತ್ತಾರೆ.

ನಿಷೇಧಗಳು:

            ಕಾಡುಗೊಲ್ಲರು ಅನೇಕ ನಿಷೇಧಗಳನ್ನು ಅನುಸರಿಸುತ್ತಾರೆ. ವಿಧವೆಯರು ತಾಳಿ, ಕಾಲುಂಗುರ, ಬಳೆ, ಅರಿಶಿಣ, ಕುಂಕುಮ ತೆಗೆಯುವುದಿಲ್ಲ. ನಾವು ಶ್ರೀಕೃಷ್ಣನ ಆರಾಧಕರು ಕೃಷ್ಣನೇ ನಮ್ಮ ಪತಿ ದೇವರು ಎಂಬ ನಂಬಿಕೆಯನ್ನು ಬಲವಾಗಿ ಹೊಂದಿದ್ದಾರೆ. ಜೊತೆಗೆ ಆಧುನೀಕರಣವೂ ಒಂದು ಕಾರಣವಿರಬಹುದು.

            ಹುಕ್ಕಡದ ಹುಟ್ಟಿಯಲ್ಲಿ ಆಚರಿಸುವ ನಿಷೇಧಗಳಲ್ಲಿ ಬಹಳ ಪ್ರಮುಖವಾದ ಅಂಶವೆಂದರೆ ಆದಿ ಕರ್ನಾಟಕ ಜಾತಿಯ ಜನ ಹಟ್ಟಿಯೊಳಗೆ ಬರುವುದನ್ನು ನಿಷೇಧಿಸಿದೆ. ಆದಿ ದ್ರಾವಿಡರು ಹಟ್ಟಿಯೊಳಗೆ ಬರಬಹುದು. ಇದಕ್ಕೆ ಬಹಳ ಹಿಂದೆ ನಡೆದ ಒಂದು ಘಟನೆಯು ಈ ನಿಷೇಧಕ್ಕೆ ಸಾಕ್ಷಿಯಾಗಿದೆ.

            ಬಹಳ ಹಿಂದೆ ಹಿರಿಯರು, ಜುಂಜಪ್ಪನ ಉತ್ಸವ ಆಚರಿಸುತ್ತಿದ್ದರು. ಉತ್ಸವಕ್ಕೆ ಅರೆ ತಪ್ಪಟೆ ಬಡಿಯುತ್ತಿದ್ದರು. ಅರೆ ಬಡಿಯುತ್ತಿದ್ದ ಆದಿ ದ್ರಾವಿಡರು ದೇವರ ಮುಂದೆ ಹಟ್ಟಿಯನ್ನು ಪ್ರವೇಶಿಸಿದ್ದರು. ಆದರೆ ತಪ್ಪಟೆಯನ್ನು ಬಡಿಯಲು ಆದಿ ಕರ್ನಾಟಕ ಜನರು ತಟ್ಟೆಗಳನ್ನು ಹಿಡಿದಿದ್ದರು. ಅವುಗಳನ್ನು ಕಾಯಿಸಿ ಕೊಳ್ಳಲು ಗರಿಯನ್ನು ರಾಶಿ ಹಾಕಿ ಸುಡಲು ಪ್ರಾರಂಭಿಸಿದ್ದರು. ಆಗ ಹಿರಿಯರು ಅವರು ಹಟ್ಟಿಯೊಳಗೆ ಬರುವುದು ಬೇಡ ಏಕೆಂದರೆ ನಮ್ಮ ಗುಡಿಸಲುಗಳು ಗರಿ ಚಪ್ಪರದಿಂದ ಕೂಡಿರುವುದರಿಂದ ನಮ್ಮ ಗುಡಿಸಲುಗಳಿಗೆ ಬೆಂಕಿ ತಗುಲಿದರೆ ಗುಡಿಸಲು ನಾಶವಾಗುತ್ತದೆ. ಆದ್ದರಿಂದ ಆದಿ ಕರ್ನಾಟಕರು ನಮ್ಮ ಹಟ್ಟಿಗೆ ಬರುವುದು ಬೇಡವೆಂದು ಅಂದಿನಿಂದ ನಿಷೇಧವನ್ನು ಹಿರಿಯ ಮುಖಂಡರು ಘೋಷಿಸಿದರು. ಅಂದಿನಿಂದ ಇಂದಿನವರೆಗೂ ಅವರು ಗೊಲ್ಲರ ಹಟ್ಟಿಗಳನ್ನೂ ಪ್ರವೇಶಿಸಿಲ್ಲ, ಈಗಲೂ ಪ್ರವೇಶಿಸುವಂತಿಲ್ಲ… ಈ ನಿಯಮವನ್ನು ಇಂದಿಗೂ ಕಠಿಣವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.

            ಊರುಗೊಲ್ಲರಲ್ಲಿ ವಿಧವೆಯರು ಹಿಂದೆ ತಾಳಿ, ಕಾಲುಂಗುರ ತೆಗೆಯುತ್ತಿದರು. ಈಗ ಅವರೂ ಕೂಡ ಆಧುನಿಕತೆಗೆ ಒಳಪಟ್ಟು ನಿಷೇಧಗಳನ್ನು ಮುರಿದಿದ್ದಾರೆ.

ಆಹಾರ ಅಭ್ಯಾಸಗಳು:

            ಕಾಡುಗೊಲ್ಲರು ಮೂಲತಃ ಕಾಡಿನ ವಾಸಿಗಳಾದ್ದರಿಂದ ಸಹಜವಾಗಿಯೇ ಪ್ರಾಣಿ ಬೇಟೆಯನ್ನು ರೂಢಿಸಿಕೊಂಡು ಮಾಂಸಾಹಾರ ಸೇವನೆಯನ್ನು ಮಾಡುತ್ತಾರೆ. ತಾವಿರುವ ಹಟ್ಟಿಗಳಲ್ಲಿಯೇ ಕುರಿ, ಕೋಳಿ, ಬೆಕ್ಕು, ಮೇಕೆ, ಇನ್ನಿತರ ಪ್ರಾಣಿಗಳನ್ನು ಸಾಕುತ್ತಾರೆ. ಇದು ಇವರಿಗೆ ಆರ್ಥಿಕ ಮೂಲವನ್ನು ಒದಗಿಸುವ ಜೊತೆಗೆ ಆಹಾರವನ್ನು ಒದಗಿಸಿವೆ. ಇನ್ನು ಗೋವನ್ನು ದೇವರೆಂದು ಶ್ರೀಕೃಷ್ಣನ  ಪ್ರತಿಬಿಂಬವೆಂದು ತಿಳಿದು ಪೂಜಿಸಿ ಪೋಷಿಸುತ್ತಾರೆ. ಇದರ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪವನ್ನು ಆಹಾರವಾಗಿ ಬಳಕೆ ಮಾಡುತ್ತಾರೆ.

            ಊರುಗೊಲ್ಲರು ಸಹ ಮಾಂಸಹಾರಿಗಳು ಆಹಾರಾಭ್ಯಾಸದಲ್ಲಿ ಕಾಡುಗೊಲ್ಲರಿಗೆ ಹೊಂದುವ ಅಭ್ಯಾಸವನ್ನೇ ಇವರೂ ಕೂಡ ಹೊಂದಿದ್ದಾರೆ.

ಶಿಕ್ಷಣ:

            ಹುಕ್ಕಡದ ಹಟ್ಟಿಯ ಕಾಡುಗೊಲ್ಲರಲ್ಲಿ ಒಟ್ಟು ಇಲ್ಲಿ 38-40 ಮನೆಗಳಿದ್ದು ಬಹುತೇಕರು ಶಿಕ್ಷಣವನ್ನು ಪಡೆದಿರುವ ಕುಟುಂಬದವರಾಗಿದ್ದಾರೆ. ಹಟ್ಟಿಯ ಒಟ್ಟು ಜನಸಂಖ್ಯೆ 295, ಅದರಲ್ಲಿ 120 ಜನರು 18 ವರ್ಷ ಮೇಲ್ಪಟ್ಟ ಮತ ಚಲಾಯಿಸುವ ಹಕ್ಕು ಹೊಂದಿರುವವರು. 175 ಜನರು ವಿದ್ಯಾರ್ಥಿಗಳು ಮಕ್ಕಳು ಇದ್ದಾರೆ.

ಒಟ್ಟಾರೆ ಹಟ್ಟಿಯಲ್ಲಿ ಒಬ್ಬರು ಡಾಕ್ಟರ್ ರಾಜು (54 ವರ್ಷ) ಒಬ್ಬರು ಇಂಜಿನೀಯರ್ 4 ಜನ ಶಿಕ್ಷಕರು, (ಕೃಷ್ಣಪ್ಪ ಸಣ್ಣಗಂಗಯ್ಯ ನಾಗರಾಜು, ರಂಗಯ್ಯ) ಒಬ್ಬರು ಅರೆಕಾಲಿಕ ಉಪನ್ಯಾಸಕರು (ಸರೋಜ) ಹಾಗೂ ಬಿಎಂಟಿಸಿ ಕಂಡಕ್ಟರ್ (ಸಿದ್ದಪಾಲಯ್ಯ) ಸರ್ಕಾರಿ ನೌಕರಿಯಲ್ಲಿರುವವರಾಗಿದ್ದಾರೆ. ಇತ್ತೀಚೆಗೆ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದೆ. 50 ವರ್ಷದ ಹಿಂದಿನವರೆಲ್ಲಾ ನಿರಕ್ಷರಕುಕ್ಷಿಗಳೆಂದು ಕೃಷ್ಣಪ್ಪರವರ ಅಭಿಪ್ರಾಯ. ಹಾಡಿಯಲ್ಲಿ ಕನ್ನಡ ಮಾತನಾಡುತ್ತಾರೆ.

ಹಾಗೆ ಚಿಕ್ಕಸಾಗ್ಗೆರೆಯ ಊರುಗೊಲ್ಲರು ಕೂಡ ವಿದ್ಯಾಭ್ಯಾಸದ ಕಡೆ ಮುಖ ಮಾಡಿದ್ದಾರೆ. ಗ್ರಾಮದಲ್ಲಿ ಒಟ್ಟು 60 ಕುಟುಂಬಗಳಿವೆ. ಕನ್ನಡ, ತೆಲುಗು ಮಾತನಾಡುತ್ತಾರೆ.

ಸರ್ಕಾರಿ ನೌಕರರು ಪೋಲೀಸ್ ಇಲಾಖೆಯಲ್ಲಿ ವೆಂಕಟೇಶ (55), ನರಸಿಂಹ (34), ನಾಗೇಶ (28) ಇದ್ದು ಸೈನಿಕ ಸೇವೆಯಲ್ಲಿ ನವೀನ (29), ರಾಗು (21) ಇದ್ದಾರೆ. ಶಿಕ್ಷಕ ವೃತ್ತಿಯಲ್ಲಿ ವಿಜಯ್ ಯಾದವ್ (36) ಸಿದ್ದಪ್ಪ (60) ವೆಂಕಟೇಶ (38), ಗೀತ (28), ಮಂಜುಳ (28) ರಮೇಶ (37) ಇದ್ದಾರೆ.

ಇಡೀ ಸಮುದಾಯದಲ್ಲಿ ವಿಜಯ್ ಯಾದವ್ ಅತೀ ಹೆಚ್ಚು ಪದವಿಯನ್ನು ಪಡೆದ ಯುವಕ (ಎಂ.ಪಿ.ಎಡ್.) ಪ್ರಸ್ತುತ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದವರು ಕೃಷಿ, ಕೂಲಿ, ವ್ಯಾಪಾರದಲ್ಲಿ ತೊಡಗಿದ್ದಾರೆ.

ರಾಜಕೀಯವಾಗಿ ಬೆಳವಣಿಗೆ:

            ಹುಕ್ಕಡದ ಹಟ್ಟಿಯಲ್ಲಿ ಇಲ್ಲಿಯವರೆಗೂ ಕೆಲವು ಜನ ಮಾತ್ರ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದಾರೆ. ಶ್ರೀ ವೀರಣ್ಣ ಇವರು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು, ನೇತ್ರಾವತಿ ಹಾಲಿ ಗ್ರಾಮ ಪಂಚಾಯ್ತಿ ಸದಸ್ಯರು ಚಿಕ್ಕಸಾಗ್ಗೆರೆಯಲ್ಲಿ ರಾಮಲಕ್ಷಮ್ಮ (45) ಇವರು ಹಾಲಿ ಗ್ರಾಮ ಪಂಚಾಯ್ತಿ ಸದಸ್ಯರು.

ಸಂಘಟನೆ:

            ಕಾಡುಗೊಲ್ಲರು ಎಲ್ಲಾ ವಿಷಯದಲ್ಲೂ ಸಂಘಟಿತರಾಗುತ್ತಿದ್ದಾರೆ. ಎರಡು ಸ್ವಸಹಾಯ ಸಂಘಗಳನ್ನು ನಿರ್ಮಿಸಿಕೊಂಡು ಹಣ ಉಳಿತಾಯ ಮಾಡುತ್ತಿದ್ದಾರೆ. ರಾಧ ಸ್ವಸಹಾಯ ಸಂಘ, ಲಕ್ಷ್ಮೀ ಸ್ವಸಹಾಯ ಸಂಘ ಎಂಬ ಸಂಘಗಳಿವೆ.

ಸಲಹೆಗಳು :

  1. ಕಾಡುಗೊಲ್ಲ ಸಮುದಾಯ ತನ್ನ ವಿಶಿಷ್ಠವಾದ ಕಟ್ಟುಪಾಡುಗಳ ಜೊತೆ-ಜೊತೆಗೆ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ.
  2. ಊರುಗೊಲ್ಲ ಸಮುದಾಯ ಇನ್ನಷ್ಟು ವೈಚಾರಿಕತೆÉಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ.
  3. ಗೊಲ್ಲ ಸಮುದಾಯ ಸಂಘಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ಅರಿವು ಮೂಡಿಸಬೇಕು.
  4. ನಾಯಕತ್ವವನ್ನು ರೂಢಿಸಿಕೊಳ್ಳಬೇಕು.
  5. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಇನ್ನು ಸಾಕಷ್ಟು ಪ್ರಬಲರಾಗಬೇಕು.

ಉಪಸಂಹಾರ

            ಈ ಮೇಲಿನ ಎಲ್ಲಾ ಅಂಶಗಳು ವಾಸ್ತವವಾಗಿದ್ದು, ಸಮುದಾಯದ ಆಚರಣೆ, ನಂಬಿಕೆ, ಜೀವನದ ವಿಧಾನ, ಸಮುದಾಯದ ಸಮಸ್ಯೆಗಳನ್ನು ಸಮುದಾಯದ ಜನರೊಡನೆ ಚರ್ಚಿಸಿ ಅವರು ಹೇಳಿದ ಮಾಹಿತಿಯನ್ನು ನಮುದಿಸಲಾಗಿದೆ. ಒಟ್ಟಾರೆ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸರ್ವತೋಮುಖ ಬೆಳವಣಿಗೆ ಹೊಂದಲು, ಸಮಾಜಮುಖಿಯಾದ ಕಾರ್ಯದಲ್ಲಿ ಸಮುದಾಯದ ಜನರು  ತೊಡಗಬೇಕು ಎಂಬ ಅರಿವು ಮೂಡಿಸಬೇಕು. ಈ ಸಮುದಾಯದವರು ಸಮಾಜದ ಒಂದು ಶಕ್ತಿಯಾಗಿ ಬೆಳೆಯಲು ಎಲ್ಲರೂ ಸಹಕರಿಸಬೇಕು ಪ್ರೋತ್ಸಾಹಿಸಬೇಕು ಎಂಬುದು ನನ್ನ ಆಶಯ.

ಮಾಹಿತಿದಾರರು:

  1. ಕಾಡುಗೊಲ್ಲ ಸಮುದಾಯ ಹುಕ್ಕಡದ ಹಟ್ಟಿ:
  2. ಕಾಟಮ್ಮ 90 ವರ್ಷ ಶ್ರೀಮತಿ ದೊಡ್ಡಮ್ಮ 70 ವರ್ಷ ಶ್ರೀಮತಿ ಗಂಗಮ್ಮ 60 ವರ್ಷ, ಶ್ರೀಮತಿ ಚಿಕ್ಕರಮ್ಮ 60 ವರ್ಷ ಶ್ರೀ ದೊಡ್ಡ ಮುದ್ದಯ್ಯ 70 ವರ್ಷ ಶ್ರೀ ದಾಸಪ್ಪ 80 ವರ್ಷ ಶ್ರೀ ಕೃಷ್ಣಪ್ಪ ಶಿಕ್ಷಕರು 54 ವರ್ಷ, ಶ್ರೀಮತಿ ನೇತ್ರಾವತಿ 32ವರ್ಷ (ಗ್ರಾಮ ಪಂಚಾಯ್ತಿ ಸದಸ್ಯರು), ಶ್ರೀಮತಿ ಸರೋಜ – ಅರೆ ಕಾಲಿಕ ಉಪನ್ಯಾಸಕರು ವಾಣಿಜ್ಯಶಾಸ್ತ್ರ.
  3. ಊರುಗೊಲ್ಲ ಸಮುದಾಯ – ಚಿಕ್ಕಸಾಗ್ಗೆರೆ:
  4. ‍ಯಾದವ್ – 36 ವರ್ಷ, ಶ್ರೀ ಕದುರಪ್ಪ -70 ವರ್ಷ ಶ್ರೀ ರಾಜು-38 ವರ್ಷ ಶ್ರೀ ವೆಂಕಟೇಶ-35 ವರ್ಷ (ಶಿಕ್ಷಕರು) ಶ್ರೀಮತಿ ರಾಮಲಕ್ಷಮ್ಮ-45 ವರ್ಷ, ಶ್ರೀಮತಿ ಗೀತ-28 ವರ್ಷ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal