Tumbe Group of International Journals

Full Text


ಸಂಸ ಅವರ ಬಿರುದಂತೆಂಬರ ಗಂಡ

ಡಾ. ಕೆ. ಶಿವಾನಂದಯ್ಯ

ಸಹಪ್ರಾಧ್ಯಾಪಕರು

ಸ್ನಾತಕೋತ್ತರ ಕನ್ನಡ ವಿಭಾಗ

ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ)

ಚಿತ್ರದುರ್ಗ-577501

kscta68@gmail.com


ಪ್ರಸ್ತಾವನೆ:

ಆಧುನಿಕ ಕನ್ನಡ ನಾಟಕ ಪರಂಪರೆಯಲ್ಲಿ ಐತಿಹಾಸಿಕ ನಾಟಕಗಳನ್ನು ಮೊದಲು ರಚಿಸಿದ ಪ್ರಮುಖರಲ್ಲಿ ಸಂಸರು ಒಬ್ಬರು. ಮೈಸೂರು ಅರಸರ ಬಗೆಗಿನ ತಮ್ಮ ಭಕ್ತಿಯ ಕಾರಣದಿಂದ ಮೈಸೂರು ಅರಸರನ್ನು ಕುರಿತು ಇಪ್ಪತ್ಮೂರು ಐತಿಹಾಸಿಕ ನಾಟಕಗಳನ್ನು ರಚಿಸಿದ ಕೀರ್ತಿ ಸಂಸ ಅವರಿಗೆ ಸಲ್ಲುತ್ತದೆ. ಆ ಮೂಲಕ ಕನ್ನಡ ಐತಿಹಾಸಿಕ ನಾಟಕ ಪರಂಪರೆಗೆ ಭದ್ರ ನೆಲೆ ಒದಗಿಸಿದರು. ವಸಾಹತುಶಾಹಿಗೆ ಪ್ರತಿಕ್ರಿಯೆಯಾಗಿ ಸಂಸರು ಐತಿಹಾಸಿಕ ನಾಟಕಗಳನ್ನು ರಚಿಸಿದರು. ಇತಿಹಾಸದ ಘಟನೆಗಳನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ನೋಡುವ ಚಾರಿತ್ರಿಕ ದೃಷ್ಟಿಕೋನವನ್ನು ಅವರ ನಾಟಕಗಳಲ್ಲಿ ಕಾಣಬಹುದು. ಆಧುನಿಕ ಕನ್ನಡ ನಾಟಕ ಪರಂಪರೆಯಲ್ಲಿ ಸಂಸರದ್ದು ಬಹುದೊಡ್ಡ ಕೊಡುಗೆ.

ಪ್ರಮುಖ ಪದಗಳು: ನಾಟಕ ಪರಂಪರೆ, ಐತಿಹಾಸಿಕ ನಾಟಕ, ಚಾರಿತ್ರಿಕ ದೃಷ್ಟಿಕೋನ, ನವೋದಯ, ಪೌರಾಣಿಕ

ಪೀಠಿಕೆ:

‘ಸಂಸ’ ಕನ್ನಡದ ಪ್ರಮುಖ ನಾಟಕಕಾರರಲ್ಲಿ ಒಬ್ಬರು. ಅವರ ಪೂರ್ಣ ಹೆಸರು ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್. ಆಧುನಿಕ ಕನ್ನಡ ನಾಟಕ ಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ ಪ್ರತಿಭಾವಂತ ನಾಟಕಕಾರ. ಸಂಸರು 23 ನಾಟಕಗಳನ್ನು ರಚಿಸಿರುವುದಾಗಿ ಸ್ವತಃ ಅವರೇ ಬರೆದುಕೊಂಡಿದ್ದಾರೆ. ಅವೆಂದರೆ; ಸುಗುಣಗಂಭೀರ(1571-76), ಮಹಾಪ್ರಭು (1578-1608), ದೃಷ್ಟಿದಾನ(ಏಕಾಂಕ), ಶರಣಾಗತ ಪರಿಪಾಲಕ (1608-9), ರತ್ನಸಿಂಹಾಸನಾರೋಹಣ (1610), ಮುತ್ತಿನಮೂಗುತಿ (1610), ರಾಜವಿಭವೋತ್ಸವ, ತೆರಕಣಾಂಬಿ (1614), ಅಮಂಗಳಾವಾಪ (1617), ಬೊಕ್ಕಳಿಕ(1617-20), ಬೆಟ್ಟದಅರಸು (1621-30), ಜಗಜಟ್ಟಿ(ಏಕಾಂಕ), ವಿಗಡವಿಕ್ರಮರಾಯ (1637), ಚಲಗಾರಚನ್ನಯ್ಯ (1638-39), ವಿಜಯನಾರಸಿಂಹ, ಮುಸ್ತಾಫವಿಜಯ (1639-40), ತುಂಗನಿರ್ಯಾತನ (1643), ನಂಜುಂಡನರಿ (1645), ಶಪಥಮಂಗಳ (1646), ಹಂಗಳ (1667-1672), ಸಂಚಿಯ ಹೊನ್ನಿ (1672), ಬಿರುದಂತೆಂಬರಗಂಡ (ಏಕಾಂಕ), ಮಂತ್ರಶಕ್ತಿ (1646)- ಇಪ್ಪತ್ತಮೂರು ನಾಟಕಗಳಲ್ಲಿ ಉಪಲಬ್ಧ ಕೃತಿಗಳೆಂದರೆ: ಬಿರುದಂತೆಂಬರ ಗಂಡ (1936), ಸುಗುಣಗಂಭೀರ (1918-19), ಬೆಟ್ಟದಅರಸು, ವಿಗಡವಿಕ್ರಮರಾಯ (1925), ವಿಜಯನಾರಸಿಂಹ(1926),  ಮಂತ್ರಶಕ್ತಿ(1938)-ಈ ಆರು ನಾಟಕಗಳನ್ನು ‘ಸಂಸ ನಾಟಕಗಳು’ ಎಂಬ ಹೆಸರಿನಲ್ಲಿ ಬಿ.ವಿ.ವೈಕುಂಟರಾಜು ಅವರು ಸಂಪಾದಿಸಿ 1988ರಲ್ಲಿ ಪ್ರಕಟಿಸಿದ್ದಾರೆ.

ಕನ್ನಡ ನಾಟಕ ಪರಂಪರೆಯನ್ನು ಅವಲೋಕಿಸಿದಾಗ ಆರಂಭದಲ್ಲಿ ಪೌರಾಣಿಕ ನಾಟಕಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದ್ದದ್ದು ಕಂಡುಬರುತ್ತದೆ. ಚಾರಿತ್ರಿಕ ಪ್ರಜ್ಞೆಯ ಅಭಾವ ಮತ್ತು ನಮ್ಮ ಜನರಿಗಿದ್ದ ಪೌರಾಣಿಕ ಶ್ರದ್ಧೆಯಿಂದಾಗಿ ಚಾರಿತ್ರಿಕವಾದುದನ್ನೂ ಪೌರಾಣಿಕಗೊಳಿಸುವ ಪ್ರವೃತ್ತಿ ಬೆಳೆದು ಬಂದಿರುವುದನ್ನು ಕಾಣುತ್ತೇವೆ. ಇದಕ್ಕೆ ಮುಖ್ಯ ಕಾರಣ ಭಾರತ ಧಾರ್ಮಿಕವಾಗಿ ಅಖಂಡವಾಗಿದ್ದುದು. ರಾಜಕೀಯವಾಗಿ ವಿವಿಧ ಸ್ಥಳೀಯ ರಾಜಮನೆತನಗಳಲ್ಲಿ ಹಂಚಿಹೋಗಿದ್ದರಿಂದ ನಾಡಿನ ಜನರಲ್ಲಿ ಸ್ಥಳೀಯ ರಾಜಪ್ರಭುತ್ವದ ಬಗೆಗೆ ನಿಷ್ಠೆ ಬೆಳೆಯಿತು. ಇನ್ನು ಐತಿಹಾಸಿಕ ವಸ್ತುವನ್ನಾಧರಿಸಿದ ನಾಟಕಗಳನ್ನು ರಚಿಸುವುದು ಸವಾಲಿನ ಕೆಲಸವೇ ಆಗಿತ್ತು. ಏಕೆಂದರೆ ವಾಸ್ತವವನ್ನು ನಿಷ್ಠುರ ವಿಮರ್ಶೆಗೆ ಒಳಪಡಿಸುವುದು ಕಷ್ಟವಾಗಿತ್ತು. ಆದುದರಿಂದ ಐತಿಹಾಸಿಕ ವಸ್ತುವಿಗೆ ಬದಲಾಗಿ ಪೌರಾಣಿಕ, ಸಾಮಾಜಿಕ ಇಲ್ಲವೇ ಕಾಲ್ಪನಿಕ ವಸ್ತುವನ್ನು ಆಶ್ರಯಿಸುವುದು ಸುಲಭವೂ ಅನಿವಾರ್ಯವೂ ಆಯಿತು. ಭಾರತದ ನವೋದಯವು ಜನರಲ್ಲಿ ದೇಶಪ್ರೇಮ, ಭಾಷಾಪ್ರೇಮ ಮತ್ತು ರಾಜನಿಷ್ಠೆಗಳನ್ನು ಪ್ರೇರೇಪಿಸಿತು. ಅದರ ಫಲವಾಗಿ ಸಂಸರು ಮೈಸೂರು ಇತಿಹಾಸ ಮತ್ತು ಮೈಸೂರು ಅರಸರನ್ನು ಕುರಿತು ನಾಟಕಗಳನ್ನು ರಚಿಸಿದರು. ಆ ಮೂಲಕ ಕನ್ನಡದಲ್ಲಿ ಐತಿಹಾಸಿಕ ನಾಟಕಗಳ ಒಂದು ಪರಂಪರೆ ನಿರ್ಮಾಣವಾಗಲು ಸಂಸರು ಕಾರಣರಾದರು. ಈ ದೃಷ್ಟಿಯಿಂದ ಸಂಸರನ್ನು ಆಧುನಿಕ ಕನ್ನಡ ಐತಿಹಾಸಿಕ ನಾಟಕಗಳ ಹುಟ್ಟಿಗೆ ಕಾರಣರಾದವರೆಂದು ಹೇಳಬಹುದು. ಮೈಸೂರು ಅರಸರ ಇತಿಹಾಸವನ್ನು ಆಧರಿಸಿ ಇಪ್ಪತ್ತಮೂರು ನಾಟಕಗಳನ್ನು ರಚಿಸುವ ಮೂಲಕ ಸಂಸರು ಆಧುನಿಕ ಕನ್ನಡ ಐತಿಹಾಸಿಕ ನಾಟಕಗಳಿಗೆ ಗಟ್ಟಿ ನೆಲೆ ಒದಗಿಸಿದರು. ಐತಿಹಾಸಿಕ ಸಂಗತಿಯನ್ನು ಸಮಕಾಲೀನ ನೆಲೆಯಲ್ಲಿ ಶೋಧಿಸುವುದೇ ಅತ್ಯುತ್ತಮ ಕೃತಿಯ ಗುರಿ ಎಂಬ ಮಾತನ್ನು ಸಂಸರು ಸಾರ್ಥಕಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತಿಹಾಸದ ಕಥಾವಸ್ತುವನ್ನು ಅತ್ಯಂತ ಗಂಭೀರನೆಲೆಯಲ್ಲಿ ರಚಿಸುವುದರ ಜೊತೆಗೆ ಉತ್ತಮ ಕಲಾಕೃತಿಯನ್ನಾಗಿ ರೂಪಿಸಿರುವ ಕಾರಣಕ್ಕೆ ಸಂಸರು ಕನ್ನಡದ ಶ್ರೇಷ್ಠ ನಾಟಕಕಾರರೆನಿಸಿದ್ದಾರೆ.

            ‘ಬಿರುದಂತೆಂಬರ ಗಂಡ’ ಇದು ಸಂಸರ ಉಪಲಬ್ದ ಏಕೈಕ ಏಕಾಂಕ ನಾಟಕ. ಮೈಸೂರಿನ ಕಡಲೆಯ ವ್ಯಾಪಾರಿ ನಂಜಸೆಟ್ಟಿಯು ಇಮ್ಮಡಿ ತಿಮ್ಮರಾಜ ಒಡೆಯರಿಗೆ ‘ಬಿರುದಂತೆಂಬರ ಗಂಡ’ ಎಂಬ ಬಿರುದನ್ನು ನೀಡಿದ ಐತಿಹಾಸಿಕ ವಸ್ತುವನ್ನು ಆಧರಿಸಿದೆ. ನಾಟಕದ ಆರಂಭದಲ್ಲಿ ಸೂತ್ರದಾರ ಹೀಗೆ ಹೇಳುತ್ತಾನೆ:

ಗಿರಿಸುತೆ ಮೈಸೂರೆನಿಸಿದು

ದಿರೆ ಯಾದವ ರಾಜಧಾನಿಗೊಂಡಧಟನೃಪಂ

ಬಿರುದಂತೆಂಬರ ಗಂಡನ

ಭರದೆ ಮಹೀಶೂರಪುರಮನಾಗಿಸಿ ನೆಗಳ್ವಂ1

ಇದು ಸ್ಪಷ್ಟವಾಗಿ ಸಂಸರು ಮೈಸೂರು ಅರಸರಿಗೆ ದೊರೆತ ಬಿರುದನ್ನು ಕೊಂಡಾಡುವ ಸಲುವಾಗಿ ಬರೆದ ನಾಟಕ.

ನಂಜನಗೂಡು ನಂಜುಂಡೇಶ್ವರನ ಜಾತ್ರೆಯಂದು ದೇವಸ್ಥಾನದ ಎದುರಿನ ವಿಶಾಲವಾದ ಬಯಲಿನಲ್ಲಿ ನಾಟಕ ಜರುಗುತ್ತದೆ. ಮೈಸೂರು ಕಡಲೆ ವ್ಯಾಪಾರಿ ನಂಜಸೆಟ್ಟಿ ಅಲಿಯಾಸ್ ಅಪ್ಪಣ್ಣನು ಪಾಳೆಯಗಾರರು ತಮ್ಮ ತಮ್ಮ ಬಿರುದುಗಳಿಂದ ಹೊಗಳಿಸಿಕೊಳ್ಳುತ್ತಿದ್ದುದನ್ನು ಕಂಡು ವಿರೋಧಿಸುತ್ತಾನೆ. ಅಂತು ಇಂತು ಎಂಬರ ಗಂಡ ‘ಬಿರುದಂತೆಂಬರ ಗಂಡ’ ಎಂಬ ಬಿರುದಿಗೆ ನಮ್ಮ ಮಹಾರಾಜರು ಮಾತ್ರ ಅರ್ಹರೆಂದು ಘೋಷಿಸುತ್ತಾನೆ. ಇದರಿಂದ ಕುಪಿತರಾದ ಪಾಳೆಯಗಾರರು ನಂಜಸೆಟ್ಟಿಯನ್ನು ಬೆನ್ನುಹತ್ತಿ ಓಡಿಸಿಕೊಂಡು ಜಾತ್ರೆ ನಡೆಯುವಲ್ಲಿಗೆ ಬರುತ್ತಾರೆ. ಆಗ ಜನರ ನಡುವೆ ಗದ್ದಲ ಏರ್ಪಡುತ್ತದೆ.  ಮಹೀಶೂರ ಮಹಾರಾಜ, ಸಿಂಧುವಳ್ಳಿ ಹಾಗು ಹುಣಸನಾಳಿನ ಪಾಳೆಯಗಾರರು ಉಮ್ಮತ್ತೂರಿನ ರಾಜ ವೀರಮಲ್ಲರಾಜ ಒಡೆಯ ಮತ್ತು ಆತನ ಪತ್ನಿ ಮಾದೇವಮ್ಮಣ್ಣಿ, ಸೈನಿಕರು, ವಂದಿಮಾಗದರು, ರಾಜಪರಿವಾರ ಮತ್ತು ಸಮಸ್ತ ಪ್ರಜೆಗಳನ್ನು ಸಾಕ್ಷಿಯಾಗಿರಿಸಿ ಅವರ ಸಮ್ಮುಖದಲ್ಲೇ ಘಟನೆ ನಡೆಯುತ್ತದೆ.

ಕುಪಿತಗೊಂಡ ಪಾಳೆಯಗಾರ ನಂಜಸೆಟ್ಟಿಯನ್ನು ನಿನ್ನ ಹೆಸರೇನು? ಎಂದು ಪ್ರಶ್ನಿಸುತ್ತಾನೆ. ಆಗ ನಂಜಸೆಟ್ಟ ಹೀಗೆ ಉತ್ತರಿಸುತ್ತಾನೆ: “ಬಿರುದಂತೆಂಬರ ಗಂಡ ಶ್ರೀಮನ್ಮಹಿಶೂರಪುರವರಾಧೀಶ್ವರ ಶ್ರೀಮನ್ಮಹಾರಾಜ ಶ್ರೀ ಇಮ್ಮಡಿ ತಿಮ್ಮರಾಜ ಒಡೆಯ ಮಹಾಸ್ವಾಮಿಯವರ ಪ್ರಜೆ”2 ನಂಜಸೆಟ್ಟಿಯ ಮಾತನ್ನು ಕೇಳಿದ ಪಾಳೆಯಗಾರ ಮತ್ತು ಪ್ರತಿಪಕ್ಷದ ವೀರರು ಆಯುಧಗಳನ್ನಿಡಿದು ಮುನ್ನುಗ್ಗಲು ಯತ್ನಿಸುತ್ತಿದ್ದಾಗ ಬಲ್ಲಪ್ಪ ದೊರೆ ದೊರೆಗಳ ವ್ಯಾಜ್ಯ ಬೇಡ ತೆರಳಿರಿ ಎನ್ನುತ್ತಾನೆ. ಆಗ ಪಾಳೆಯಗಾರರು ನಮಗೂ ಬಿರುದುಗಳುಂಟೆಂದು ಅವರ ಪಾಠಕರಿಂದ ಹೇಳಿಸುತ್ತಾರೆ. ಅದಕ್ಕೆ ನಂಜಸೆಟ್ಟಿಯು ಹೀಗೆ ಪ್ರತಿಕ್ರಿಯೆ ನೀಡುತ್ತಾನೆ. “ಅಂತು-ಎಂಬರ-ಗಂಡ, ಅಂತೆಂಬರ ಗಂಡ, ಶ್ರೀಮನ್ಮಹೀಶೂರ ಸಿಂಹಾಸನಾಧೀಶ್ವರ ಶ್ರೀ ಇಮ್ಮಡಿ ತಿಮ್ಮರಾಜ ಒಡೆಯ ಮಹಾಸ್ವಾಮಿ! ಅಂತೆಂಬರಗಂಡ- ಶ್ರೀ ಮಹೀಶೂರ ತಿಮ್ಮರಾಜ ಒಡೆಯರು! … ಬಿರುದಂತೆಂಬರ ಗಂಡ- ಮಹೀಶೂರ ತಿಮ್ಮರಾಜ ಒಡೆಯರು!3 ಎಂದು ಮತ್ತೆ ಮತ್ತೆ ಪುನರುಚ್ಚರಿಸುತ್ತಾನೆ. ನಂಜಸೆಟ್ಟಿ, ಬಲ್ಲಪ್ಪ ಮತ್ತು ಉಳಿದವರೊಂದಿಗೆ ಪಾಳೆಯಗಾರರು ಮತ್ತು ಅವರ ಸೈನಿಕರು ಸಂಘರ್ಷಕ್ಕಿಳಿದಾಗ ಕೋಲಾಹಲವುಂಟಾಗುತ್ತದೆ. ಮೈಸೂರು ಸೇನೆ ಪ್ರತಿಪಕ್ಷದವರನ್ನು ನಿರಾಯುಧರನ್ನಾಗಿಸುತ್ತದೆ. ಅದೇ ಸಮಯಕ್ಕೆ ಪರಿವಾರ ಸಮೇತ ಮೈಸೂರು ಮಹಾರಾಜ ಶ್ರೀ ಇಮ್ಮಡಿ ತಿಮ್ಮರಾಜ ಒಡೆಯರು ಆಗಮಿಸುತ್ತಾರೆ. ಗದ್ದಲದ ಹಿನ್ನೆಲೆಯನ್ನು ವಿಚಾರಿಸುತ್ತಾನೆ. ಅದಕ್ಕೆ ಬಲ್ಲಪ್ಪ ಪಾಳೆಯಗಾರರು ತಮ್ಮನ್ನು ಅಂತೆಂಬರ ಗಂಡ- ಬಿರುದಂತೆಂಬರ ಗಂಡ ಎಂದು ಹೊಗಳಿಸಿಕೊಳ್ಳುತ್ತಿದ್ದರು. ಅದನ್ನು ಸಹಿಸದೆ ನಾವು ಅದು ನಮ್ಮ ರಾಜರಿಗಲ್ಲದೆ ಅನ್ಯರಿಗಲ್ಲ ಎಂದು ತಡೆದೆವು ಎಂದು ಹೇಳುತ್ತಾನೆ. ಆಗ ಮೈಸೂರು ಮಹಾರಾಜರು ನಂಜಸೆಟ್ಟಿಯನ್ನು ವಿಚಾರಿಸುತ್ತಾ ಆತನ ಹೆಸರು, ಊರು ಕೇಳಿದಾಗ ಆತ ಮಹೀಶೂರಪುರ ತನ್ನ ಊರು ಮತ್ತು  ತಾನು ಮಹಾಸ್ವಾಮಿ, ಬಿರುದಂತೆಂಬರ ಗಂಡ ಶ್ರೀಮನ್ಮಹೀಶೂರ ಪುರವರಾಧೀಶ್ವರ ಶ್ರೀಮನ್ಮಹಾರಾಜ ಶ್ರೀ ಇಮ್ಮಡಿ ತಿಮ್ಮರಾಜ ಒಡೆಯ ಮಹಾಸ್ವಾಮಿವರ ಪ್ರಜೆ –ನಾನು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಆಗ ಮಹಾರಾಜರು “ ಅಂತು-ಇಂತು-ಎಂಬರ-ಗಂಡ, ಬಿರುದಂತೆಂಬರ ಗಂಡ, ಎಂದು ಎರಡಿಲ್ಲದ ಬಿರುದು, ಅಪ್ಪಣ್ಣನಿಗೂ, ಆತನ ಸಮಾನತೆಗೇರಲಾರ್ಪ ಸ್ವದೇಶಪ್ರೇಮದ ವೀರಧರ್ಮದ ವರ್ಚಸ್ಸಿನ ಪ್ರತಿಯೊಬ್ಬ ಪರಮಪ್ರಜೆಗೂ, ಮಾತ್ರವೇ ಅನ್ವಯಿಸತಕ್ಕದ್ದು. ಮಹೀಶೂರ ಬಿರುದಂತೆಂಬರ ಗಂಡ, ಎಂಬ ಪ್ರಶಸ್ತಿಯು ಪ್ರಸಿದ್ಧಿ4 ಎನ್ನುತ್ತಾರೆ. ಅಪ್ಪಣ್ಣ ಧನ್ಯನಾದೆನು ಮಹಾಸ್ವಾಮಿ ಎನ್ನುತ್ತಾನೆ.

ಅದೇ ಸಮಯಕ್ಕೆ ಉಮ್ಮತ್ತೂರು ವೀರಮಲ್ಲರಾಜನ ರಾಣಿ ಮಾದೇವಮ್ಮಣ್ಣಿಯವರು ನಂಜುಂಡೇಶ್ವರ ಸನ್ನಿಧಿಗೆ ಕಾಣಿಕೆಯೊಪ್ಪಿಸಲು ಆಗಮಿಸುತ್ತಾರೆ. ಉಮ್ಮತ್ತೂರು ಪ್ರಭುಗಳನ್ನು ಕೈವಾರಿಗಳು ಹೊಗಳಿದಾಗ ಅಲ್ಲಿಯೇ ಇದ್ದ ನಂಜಸೆಟ್ಟಿಯು;

‘ಅಂತೆಂಬರ ಗಂಡ ಶ್ರೀಮನ್ಮಹೀಶೂರ ಪುರವರಾಧೀಶ್ವರ ಶ್ರೀಮನ್ಮಹಾರಾಜ ಶ್ರೀ ಇಮ್ಮಡಿ ತಿಮ್ಮರಾಜ ಒಡೆಯ ಮಹಾಸ್ವಾಮಿಯವರಿಗೆ ಜಯವಾಗಲಿ5 ಎಂದು ಜಯಘೋಷ ಮಾಡುತ್ತಾನೆ. ಇದರಿಂದ ಕೆರಳಿದ ಮಾದೇವಮ್ಮಣ್ಣಿ ನಂಜಸೆಟ್ಟಿಯ ನಾಲಗೆಯನ್ನು ತುಂಡಿಸಿ, ಹದ್ದು ನಾಯಿಗಳಿಗೆ ಔತಣವಾಗಲಿ ಎಂದು ಆದೇಶಿಸುತ್ತಾಳೆ. ಆಗ ಮಹೀಶೂರ ಮಹಾರಾಜರು ‘ಅಮ್ಮಯ್ಯ ಶಾಂತೆಯಾಗಿರಿ. ಇಂತಹ ಈ ಉರವಣೆಯ ವಾಚಾಳತೆಯಿಂದ ಆವ ಅರಮನೆಯ ಗೌರವ ಮರ್ಯಾದೆಗಳು ಅನುವೇರುವಂತಿಲ್ಲ’6 ಎನ್ನುತ್ತಾರೆ. ಮಹಾರಾಜರ ಮಾತಿಗೆ ಸಮಾಧಾನಗೊಳ್ಳದೆ ಉಮ್ಮತ್ತೂರು ರಾಣಿ ಮಹಾರಾಜರ ಮೇಲೆ ಖಡ್ಗ ಹಿಡಿದು ಮುನ್ನುಗ್ಗುತ್ತಾಳೆ. ಮಹಾರಾಜರ ಅಂಗವಸ್ತ್ರ ಕೆಳಗೆ ಬೀಳುತ್ತದೆ. ಆಗ ಸೈನ್ಯಾಧಿಪತಿ ಸೈನಿಕರು, ನಂಜಸೆಟ್ಟಿ-ಎಲ್ಲರೂ ಮುಗಿಬೀಳುತ್ತಾರೆ. ಆಗ ಮಹಾರಾಜರು ಕಣ್ಣಸನ್ನೆಯಿಂದ ಅವರನ್ನು ಹಿಂದೆ ಸರಿಸುತ್ತಾರೆ. ಆನಂತರದಲ್ಲಿ ಉಮ್ಮತ್ತೂರು ದೊರೆ ಮತ್ತು ಮೈಸೂರು ಮಹಾರಾಜರ ನಡುವೆ ಖಡ್ಗಾದಂಡಿ ಯುದ್ಧ ನಡೆದು, ಉಮ್ಮತ್ತೂರು ಮಲ್ಲರಾಜನನ್ನು ಸೋಲಿಸಿ ಅವನಿಂದ ಅಂಗವಸ್ತ್ರವನ್ನು ಧಾರಣಮಾಡಿಸಿಕೊಂಡು ಈ ಅವಗಡಕ್ಕಾಗಿ ಉಮ್ಮತ್ತೂರು ಪಾಳೆಯಪಟ್ಟಿನ ಎಲ್ಲ ರಾಜಾದಾಯಗಳಲ್ಲಿ ನಾಲ್ಕನೆಯ ಒಂದು ಭಾಗವನ್ನು ಮಹೀಶೂರ ಅರಮನೆಗೆ ಪೌಜುಗಂದಾಯವಾಗಿ ತಪ್ಪದೇ ಸಲಿಸುವಂತೆ ಆದೇಶಿಸುತ್ತಾನೆ. ಆದಾಗ್ಯೂ ಆನೆ, ಕುದುರೆ ಮುಂತಾದವುಗಳನ್ನು ಸ್ವಾಧೀನ ಮಾಡಿಕೊಳ್ಳದೇ ಗೌರವದಿಂದ ನಡೆಸಿಕೊಳ್ಳಿ. ನಾಳಿನ ರಥೋತ್ಸವದವರೆಗೂ ನಮ್ಮ ಅರಮನೆಯೊಳಗೆ ಗೌರವದ ರಾಜಮರ್ಯಾದೆಯ ಅತಿಥಿಗಳಾಗಿರಲಿ ಎಂದು ಆದೇಶಿಸುತ್ತಾನೆ. ಸಿನ್ದುವಳ್ಳಿ ಪಾಳೆಯಗಾರ ರಾಜಯ್ಯ ಅರಸು ಮತ್ತು ಹುಣಸವಾಳಿನ ಪಾಳೆಯಗಾರ ಸಿದ್ದರಾಜಯ್ಯರನ್ನು ಕರೆದು ಅಡಿಗಡಿಗೆ ವಿಶ್ವಾಸದ್ರೋಹವೆಸಗುತ್ತಿರುವುದನ್ನು ನೆನಪಿಸಿ ಅವರನ್ನು ಎಚ್ಚರಿಸುತ್ತಾರೆ.

ಪಾಳೆಯಗಾರರ ಎದುರು ಮೈಸೂರು ಮಹಾರಾಜರ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಗೌರವಿಸಲ್ಪಟ್ಟ ನಂಜಸೆಟ್ಟಿ ಉಮ್ಮತ್ತೂರು ಮಹಾದೇವಮ್ಮಣ್ಣಿಯನ್ನು ಅವಮಾನಿಸಿದ್ದಕ್ಕೆ ಮಹಾರಾಜರು ಕೆರಳುತ್ತಾರೆ. ಮೈಸೂರು ರಾಜ್ಯ ಮತ್ತು ರಾಜರಿಗಷ್ಟೇ ಅಲ್ಲ ನಿನಗೂ ಅವಮಾನ. ‘ಮರವೆಗಾರದ ಹೇಯದ ನಾಣ್ಣುಡಿಯಾಗಿ ಬೀಳ್ವಂತಾಯ್ತು’7 ಎಂದು ಹೇಳಿದ್ದಲ್ಲದೆ ಹೆಣ್ಣಿನ ಅವಮಾನ ಮಾಡಿದ್ದರಿಂದ ನಂಜಸೆಟ್ಟಿಯನ್ನು ತನ್ನೆರಡು ಕೆನ್ನೆಗಳನ್ನು ಫಟಫಟನೆ ಹೊಡೆದುಕೊಂಡು ಕಿವಿಗಳನ್ನು ಹಿಡಿದುಕೊಂಡು ನಾಲ್ಕಾರು ಬಾರಿ ಮಂಡಕನ್ನಾಚರಿಸಿ ಮಣಿದು ಮುಖವನ್ನು ಮಣ್ಣಲ್ಲಿ ಹೊರಳಿಸಿ, ಧೂಳನ್ನು ತಲೆಮೇಲೆ ಸುರಿದುಕೊಂಡು ಕ್ಷಮಿಸಬೇಕು, ಮಹಾತಾಯಿ ಕ್ಷಮಿಸಬೇಕು’ ಎಂದು ಕೇಳಿಸುತ್ತಾರೆ. ಮಹಾರಾಜರ ಅಣತಿಯಂತೆ ನಂಜಸೆಟ್ಟಿ ಮಹಾದೇವಮ್ಮಣ್ಣಿಯ ಕ್ಷಮೆ ಕೇಳುತ್ತಾನೆ. ಕಣ್ಣೀರು ಸುರಿಸುತ್ತ ನಿಂತಿದ್ದ ನಂಜಸೆಟ್ಟಿಯನ್ನು  ಮಹಾರಾಜರು ಸಂತೈಸುತ್ತಾರೆ. ಮತ್ತು ಯಾವ ಬಿರುದು ನನಗೆ ಸಂತೃಪ್ತಿಯನ್ನು ನೀಡಿಲ್ಲ. ಮತ್ತೊಂದು ಬಿರುದಿನಲ್ಲಿ ಅಪೇಕ್ಷೆಯುಂಟಾಗಿದೆ ಎನ್ನುತ್ತಾ..’ ಆ ಹೊಸ ಬಿರುದನ್ನು ನಮ್ಮ ವಂಶಾನುಕ್ರಮವಾಗಿ ಬಾಳುತ್ತಿರಲೆನ್ನಲೂ ನಮಗೆ ಇಷ್ಟವಿಲ್ಲ; ಅದು ನಮಗೆ- ವ್ಯಕ್ತಿಶಃ ನನಗೆ-ಮಾತ್ರವೇ ಅನ್ವಯಿಸಬೇಕು. ಆ ಬಿರುದು-ಧೀರನೂ ಶೂರನೂ, ಸ್ವದೇಶ ವತ್ಸಲನೂ, ರಾಜಭಕ್ತನೂ, ಪ್ರಜಾಗೌರವ ಜ್ಞಾನಿಯೂ, ವೀರಧರ್ಮಾವತಾರನೂ, ಮಹೀಶೂರ ಬಿರುದಂತೆಂಬರ ಗಂಡನೂ ಆಗಿರುವ ಈ ತುಂಟ ನಂಜಸೆಟ್ಟಿಯ ಮುದ್ದಿನ ಹೆಸರು- ‘ಅಪ್ಪಣ್ಣ’ ಎಂಬುದು ಎಂದು ಹೇಳುತ್ತಾ8 ತಿಮ್ಮರಾಜ ಒಡೆಯರು ‘ಶ್ರೀ ಅಪ್ಪಣ್ಣ ತಿಮ್ಮರಾಜ ಒಡೆಯ’ ಎಂದಿಟ್ಟುಕೊಳ್ಳಬಯಸುತ್ತಾರೆ. ನಂಜಸೆಟ್ಟಿ ಕಯ್ಮುಗಿದು, ಆನಂದ ಬಾಷ್ಪ ಗದ್ಗದಸ್ವರದಿಂದ ಮಹಾಸ್ವಾಮಿ! ಮಹಾಸ್ವಾಮಿ! ನಾನು ಧನ್ಯ! ಪರಮ ಧನ್ಯ! ಮಹಾಸ್ವಾಮಿ! ನಾನು ಹುಟ್ಟಿದ್ದು- ಸಾರ್ಥಕವಾಯ್ತು! ಎಂದು ಕೃತಜ್ಞತೆ ಸಲ್ಲಿಸುತ್ತಾನೆ. ರಾಜ ನಸುನಗುತ್ತಾ ಮಹೀಶೂರಪುರದ ಎಲ್ಲರೂ ಹಾಗೆಂದೇ ಒಪ್ಪಿಕೊಳ್ಳುವವರಾಗಬೇಕಾದ ಸುಯೋಗದ ಸುದಿನವಿದು ಅಪ್ಪಣ್ಣ ಎನ್ನುತ್ತಾರೆ. ಆಗ ವಂದಿಮಾಗದರು:

ಸ್ವಸ್ತಿ ಶ್ರೀಮನ್ಮಹಿಷಾಸುರಮರ್ದಿನೀಪದಾರವಿನ್ದಮಧುಕರಾಯಿತಚಿತ್ತ!

ಮತ್ತರಿಪುಷಣ್ಡನೋದ್ದಣ್ಡದೋರ್ದಣ್ಡ!

ಅರ್ಥಿಜನೇಪ್ಸಿತಾರ್ಥದಾನಶೌಣ್ಡ

ಅಂಗನಾಜನಕುಸುಮಕೋದಣ್ಡ!

ಬಾಹುದಣ್ಡಧೃತವಿವಿಧಾಯುಧಪ್ರಕಾಣ್ಡ!

ಮಿತ್ರಕುಲಕಮಲಮಾರ್ತಾಣ್ಡ!

ಬಿರುದಂತೆಂಬರ ಗಂಡ!

ಮೊನೆಗಾರ!’

ಶ್ರೀಮನ್ಮಹೀಶೂರಪುರವರಾಧೀಶ್ವರ!ಪ

ಶ್ರೀಮನ್ಮಹಾರಾಜ!’

ಶ್ರೀ ಅಪ್ಪಣ್ಣ ತಿಮ್ಮರಾಜ ಒಡೆಯ!

ಮಹಾಸ್ವಾಮಿ!

ವಿಜಯೀಭವ! ದಿಗ್ವಿಜಯೀಭವ!9

ಬಿರುದುಗಳ ಜೊತೆಗೆ ಮಹಾರಾಜವಾದ್ಯಗಳು ಮೊಳಗುವುದರೊಂದಿಗೆ  ನಾಟಕ ಮುಗಿಯುತ್ತದೆ.

ಐತಿಹಾಸಿಕ ಹಿನ್ನೆಲೆ:

ಮೂರನೇ ಬೆಟ್ಟದ ಚಾಮರಾಜ ಒಡೆಯರ ಹಿರಿಯ ಮಗ ಇಮ್ಮಡಿ ತಿಮ್ಮರಾಜ ಒಡೆಯರು. ಇವರು ಕ್ರಿ.ಶ.1553 ರಿಂದ ಕ್ರಿ.ಶ,1572ರ ವರೆಗೆ ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾಗಿ ಇತಿಹಾಸದಿಂದ ತಿಳಿದುಬರುತ್ತದೆ. ಇವರು ವಿಜಯನಗರದ ಅರಸರಾದ ಸದಾಶಿವ ಮತ್ತು ಒಂದನೆಯ ತಿರುಮಲರಾಯನ ಸಾಮಂತರಾಗಿದ್ದರು. ಇಮ್ಮಡಿ ತಿಮ್ಮರಾಜ ಒಡೆಯರನ್ನು ಮೈಸೂರು ಗೆಜೆಟಿಯರ್ ನಲ್ಲಿ  ಅಪ್ಪಣ್ಣ ತಿಮ್ಮರಾಜ ಒಡೆಯರ್ ಎಂದು ಕರೆಯಲಾಗಿದೆ. ಚಾಮರಾಜೇಂದ್ರ ಒಡೆಯರ ‘ವಂಶರತ್ನಾಕರ’ದಲ್ಲಿ ನಂಜನಗೂಡು ಜಾತ್ರೆಯಲ್ಲಿ ಇಮ್ಮಡಿ ತಿಮ್ಮರಾಜ ಒಡೆಯರಿಗೆ ಮೈಸೂರು ವ್ಯಾಪಾರಿ ನಂಜಸೆಟ್ಟಿಯಿಂದ ‘ಬಿರುದಂತೆಂಬರ ಗಂಡ’ ಬಿರುದು ಪ್ರಾಪ್ತವಾಯಿತೆಂಬ ಉಲ್ಲೇಖವಿದೆ. ಈ ಬಗ್ಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. ಸ್ವತಃ ಸಂಸರು ಮೈಸೂರು ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದ್ದರಿಂದ ‘ವಂಶರತ್ನಾಕರ’ ಕೃತಿಯನ್ನೇ ಆಧರಿಸಿದ್ದಾರೆ.  ಇಮ್ಮಡಿ ತಿಮ್ಮರಾಜ ಒಡೆಯರು ಸಿಂಧುವಳ್ಳಿ ಮತ್ತು ಹುಣಸಿನಹಾಳು ಪಾಳೆಪಟ್ಟನ್ನು ರಕ್ಷಿಸಿದ ಬಗ್ಗೆ, ಉಮ್ಮತ್ತೂರನ್ನು ಗೆದ್ದಿರುವ ಕುರಿತು ಪ್ರಸ್ತಾಪವಿದೆ. 

ವಸ್ತು ವಿಶ್ಲೇಷಣೆ:

ಬಿರುದಿನ ಸಾರ್ಥಕತೆಯನ್ನು ಬಣ್ಣಿಸುವ ಉದ್ದೇಶವನ್ನು ಹೊಂದಿದ್ದ ನಾಟಕ ಅದನ್ನು ಮೀರಿ ಪ್ರಜೆ ರಾಜನ ನಡುವಿನ ವಾತ್ಸಲ್ಯಪೂರ್ಣ ಸಂಬಂಧವನ್ನು ನಿರೂಪಿಸಿರುವುದು ವಿಶಿಷ್ಟವಾಗಿದೆ. ಐತಿಹಾಸಿಕ ವಸ್ತುವನ್ನು ಆಧರಿಸಿ ನಾಟಕ ರಚಿಸಲು ಹೊರಟ ಸಂಸರಿಗೆ ರಾಜ ಮಹಾರಾಜರ ಶೌರ್ಯ ಪರಾಕ್ರಮ, ಯುದ್ಧ ವಿಜಯಗಳಿಗಿಂತ ಮುಖ್ಯವಾಗಿ ರಾಜನ ನಾಗರಿಕ ನಡವಳಿಕೆ, ಸ್ತ್ರೀ ಗೌರವಾದರಗಳು ಮತ್ತು ಮಾನವೀಯತೆಯನ್ನು ದರ್ಶಿಸುವುದು ಮುಖ್ಯವಾಗಿದೆ. ಕಾಲ, ಸ್ಥಳ ಮತ್ತು ಕ್ರಿಯೆಯ ಐಕ್ಯತೆಯ ದೃಷ್ಟಿಯಿಂದಲೂ ನಾಟಕ ಗಮನಸೆಳೆಯುತ್ತದೆ. ನಾಟಕ ಜರುಗುವುದು ನಂಜನಗೂಡು ನಂಜುಂಡೇಶ್ವರ ದೇವಸ್ಥಾನ ಮುಂಭಾಗದ ಬಯಲಿನಲ್ಲಿ. ಜಾತ್ರೆಗೆ ವಿವಿಧ ಮತ, ಪ್ರಾಂತದ ಜನ ನೆರೆದಿದ್ದಾರೆ. ಜಾತ್ರೆಯ ಸಡಗರ ಸಂಭ್ರಮದ ನಡುವೆ ಅದರಲ್ಲೂ ಧಾರ್ಮಿಕ ಸ್ಥಳದಲ್ಲಿ ಗದ್ದಲವೇರ್ಪಟ್ಟು ಅಹಂಕಾರ, ದರ್ಪಗಳ ನಾಶದೊಂದಿಗೆ ಗೌರವಾದರ, ವಿನಯ, ಸುಸಂಸ್ಕೃತ ಸನ್ನಡತೆಯ ಪ್ರದರ್ಶನದೊಂದಿಗೆ ನಾಟಕ ಮುಕ್ತಾಯವಾಗುವುದು ಅರ್ಥಪೂರ್ಣವಾಗಿದೆ.        

 ‘ಬಿರುದಂತೆಂಬರಗಂಡ’- ನಾಟಕವು ಹಲವು ಕಾರಣಗಳಿಗಾಗಿ ನಮ್ಮ ಗಮನಸೆಳೆಯುತ್ತದೆ. ಒಂದು- ಇಮ್ಮಡಿ ತಿಮ್ಮರಾಜ ಒಡೆಯರ ಪ್ರಜಾವತ್ಸಲ ಗುಣ. ಎರಡು- ಮೈಸೂರು ಅರಸರು ಸ್ತ್ರೀಯರ ಬಗ್ಗೆ ಹೊಂದಿದ್ದ ಗೌರವಾದರಗಳು. ಮೂರು- ಇಮ್ಮಡಿ ತಿಮ್ಮರಾಜ ಒಡೆಯರ ಶೌರ್ಯಪರಾಕ್ರಮ ಮತ್ತು ಸನ್ನಡತೆ ಎರಡನ್ನೂ ಒಟ್ಟಿಗೆ ಪ್ರದರ್ಶಿಸಿದ ಬಗೆ. ನಾಲ್ಕು- ಇತಿಹಾಸದ ಕಥಾವಸ್ತುವನ್ನು ಸಮಕಾಲೀನ ಸಂದರ್ಭದಲ್ಲಿ ನೋಡುವ ಚಾರಿತ್ರಿಕ ದೃಷ್ಟಿಕೋನ.

ಬ್ರಿಟಿಶ್ ವಸಾಹತುಶಾಹಿಗೆ ಪ್ರತಿಕ್ರಿಯೆಯಾಗಿ ರಚಿತವಾಗಿರುವ ಸಂಸರ ಎಲ್ಲ ನಾಟಕಗಳಂತೆ ‘ಬಿರುದಂತೆಂಬರ ಗಂಡ’ ಸಹ ಸ್ಥಳೀಯ ಅರಸರುಗಳ ಶೌರ್ಯ ಪರಾಕ್ರಮದ ಜೊತೆಗೆ ಅವರ ಪ್ರಜಾಸ್ನೇಹಿ ಆಡಳಿತ ಮತ್ತು ಪ್ರಜಾವತ್ಸಲ ಗುಣವನ್ನು ಚಿತ್ರಿಸುತ್ತದೆ. ಸಂಸರು ಬ್ರಿಟೀಶರನ್ನು ವಿರೋಧಿಸಿದಂತೆ ಸ್ಥಳೀಯ ನಿರ್ದಯಿ ಹಾಗು ದುರ್ಬಲ ರಾಜರನ್ನೂ ವಿರೋಧಿಸುತ್ತಿದ್ದರು. ಮೈಸೂರು ಸಾಮ್ರಾಜ್ಯವನ್ನು ಆಳಿದ ಅರಸರುಗಳಲ್ಲಿ ಸಮರ್ಥರೆನಿಸಿದ ಆಯ್ದ ರಾಜರುಗಳ ಕಥೆಯನ್ನು ತಮ್ಮ ನಾಟಕಗಳಿಗೆ ವಸ್ತುವಾಗಿ ಸ್ವೀಕರಿಸಿದ್ದಾರೆ. ಪ್ರಸ್ತುತ ‘ಬಿರುದಂತೆಂಬರ ಗಂಡ’ ನಾಟಕವು ಪ್ರಜೆ- ಪ್ರಭುವಿನ ಸಂಬಂಧ ಕುರಿತ ಆದರ್ಶವೊಂದನ್ನು ನಮ್ಮ ಮುಂದಿಡುತ್ತದೆ. ನಂಜನಗೂಡು ನಂಜುಂಡೇಶ್ವರ ಜಾತ್ರೆಗೆ ನೆರೆದ ಪಾಳೆಯಗಾರರೆದುರು ಮೈಸೂರು ವ್ಯಾಪಾರಿ ನಂಜಸೆಟ್ಟಿ ತನ್ನ ರಾಜಭಕ್ತಿಯನ್ನು ಮೆರೆದು ಕೋಲಾಹಲವುಂಟಾಗಲು ಕಾರಣನಾಗುತ್ತಾನೆ. ಇದರಿಂದ ಇಮ್ಮಡಿ ತಿಮ್ಮರಾಜ ಒಡೆಯರು ಅಸಂತುಷ್ಟರಾದರೂ ತನ್ನ ಪ್ರಜೆಯು ನಾಡು ಮತ್ತು ನಾಡಿನ ದೊರೆಯ ಬಗ್ಗೆ ಇರಿಸಿಕೊಂಡಿದ್ದ ಭಕ್ತಿಯನ್ನು ಕಂಡು ವಿಸ್ಮಿತರಾಗುತ್ತಾರೆ. ನಂಜಸೆಟ್ಟಿಯ ಕಾರಣದಿಂದಾಗಿ ‘ಬಿರುದಂತೆಂಬರ ಗಂಡ’ ಬಿರುದು ಸೇರಿದಂತೆ ನನಗೆ ಯಾವ ಬಿರುದೂ ಅಷ್ಟೊಂದು ತೃಪ್ತಿಯನ್ನು ತಂದಿಲ್ಲ ಎನ್ನುತ್ತಾರೆ. ವಂಶಪಾರಂಪರ್ಯ ಬಿರುದಿಗಿಂತ ತನಗೆ ಮಾತ್ರ ಸೀಮಿತವಾದ ಬಿರುದಿನ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾರೆ. ತನ್ನ ಪ್ರಜೆಯ ಮೇಲಿನ ಗೌರವದ ನೆನಪಿಗಾಗಿ ನಂಜಸೆಟ್ಟಿಯ ಅಡ್ಡ ಹೆಸರು ಅಪ್ಪಣ್ಣ ಎಂಬುದನ್ನು ತನ್ನ ಹೆಸರಿನ ಹಿಂದೆ ಇರಿಸಿಕೊಳ್ಳಬಯಸುತ್ತಾರೆ. ಅಂದಿನಿಂದ ಅಪ್ಪಣ್ಣ ತಿಮ್ಮರಾಜ ಒಡೆಯರು ಎಂದು ಕರೆಯಲ್ಪಡುತ್ತಾರೆ. ಈ ಪ್ರಸಂಗಕ್ಕೆ ಜಾತ್ರೆಗೆ ನೆರೆದಿದ್ದ ಸಮಸ್ತ ಪ್ರಜೆಗಳೂ ಸಾಕ್ಷಿಯಾಗುತ್ತಾರೆ. ಸಂಸರು ಮೈಸೂರು ಅರಸರ ಬಗ್ಗೆ ಹೊಂದಿದ್ದ ಭಕ್ತಿ ಗೌರವ ಇದಕ್ಕೆ ಕಾರಣ. ‘ರಾಜಾ ಪ್ರತ್ಯಕ್ಷ ದೇವತಾ’ ಎಂದು ನಂಬಿದ್ದ ಕಾಲದ ಸಮಾಜದಲ್ಲಿನ ಜನರ ಭಾವನೆ, ನಂಬಿಕೆ, ಗೌರವ ಮತ್ತು ರಾಜನಿಷ್ಠೆಯನ್ನು ಸಂಸರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

‘ಬಿರುದಂತೆಂಬರ ಗಂಡ’ ನಾಟಕದಲ್ಲಿ ಇಮ್ಮಡಿ ತಿಮ್ಮರಾಜ ಒಡೆಯರ ಸ್ತ್ರೀಗೌರವಾದರಗಳ ಚಿತ್ರಣ ಮನನೀಯವಾಗಿದೆ. ಉಮ್ಮತ್ತೂರು ವೀರಮಲ್ಲರಾಜನ ರಾಣಿ ಮಾದೇವಮ್ಮಣ್ಣಿ ತನ್ನ ಖಡ್ಗದಿಂದ ಮಹಾರಾಜರ ಅಂಗವಸ್ತ್ರವನ್ನು ನೆಲಕ್ಕೆ ಬೀಳಿಸಿದರೂ ‘ಹೆಣ್ಣಿನ ಮೇಲೆ ಕೈ ಮಾಡಬಾರದು’ ಎಂಬ ಕಾರಣಕ್ಕೆ ಮಹಾರಾಜರು ಮೌನವಾಗಿರುತ್ತಾರೆ. ಸ್ವತಃ ಮಹಾರಾಜರು ಶಾಂತಳಾಗಿರುವಂತೆ ವಿನಂತಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಸುಮ್ಮನಿರದೆ ಮಾದೇಮ್ಮಣ್ಣಿ ಸ್ವಾಭಿಮಾನವನ್ನೇ ಕೆಣಕುತ್ತಾಳೆ. ಸೈನ್ಯಾಧಿಕಾರಿ, ಸೈನಿಕರು ಆಕೆಯ ಮೇಲೆ ಮುನ್ನುಗ್ಗಲೆತ್ನಿಸಿದಾಗ ಕಣ್ಸನ್ನೆಯಿಂದಲೇ ತಡೆಯುತ್ತಾರೆ. ಇಷ್ಟೆಲ್ಲಾ ನಡೆದರೂ ಮಹಾರಾಜರು ಸಂಯಮದಿಂದಿರುತ್ತಾರೆ. ಮೈಸೂರು ಅರಸರು ಪಾಲಿಸಿಕೊಂಡು ಬಂದ ಪರನಾರಿ ಸೋದರ ಗುಣಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಾದೇವಮ್ಮಣ್ಣಿ ಪ್ರಸಂಗ ಇಡೀ ನಾಟಕದ ಸಂಘರ್ಷದ ತುತ್ತತುದಿ ಎಂದು ಹೇಳಬಹುದು. ಮೈಸೂರು ದೊರೆ ಇಮ್ಮಡಿ ತಿಮ್ಮರಾಜ ಒಡೆಯರು, ಪಾಳೆಯಗಾರರು,  ರಾಜಪರಿವಾರ ಮತ್ತು ಸಮಸ್ತ ಪ್ರಜೆಗಳು ನೆರೆದ ಜಾತ್ರೆಯಲ್ಲಿ ಮಾದೇವಮ್ಮಣ್ಣಿ ಘಟನೆಯಿಂದಾಗಿ ಗಂಭೀರವಾಗುತ್ತದೆ. ಆದರೆ ಉಮ್ಮತ್ತೂರು ಪಾಳೆಯಗಾರರನ್ನು ಸೋಲಿಸುವ ಮೂಲಕ ತಮ್ಮ ಶೌರ್ಯ, ಪರಾಕ್ರಮವನ್ನು ಸಾಬೀತುಮಾಡುತ್ತಾರೆ. ಪಾಳೆಯಗಾರನ ಕೈಯಿಂದಲೇ ಆತನ ಪತ್ನಿ ಕೆಳಗೆ ಬೀಳಿಸಿದ್ದ ಅಂಗವಸ್ತ್ರವನ್ನು ಧಾರಣಮಾಡಿಸಿಕೊಳ್ಳುತ್ತಾರೆ. ಮತ್ತು ರಾಜಾದಾಯದಲ್ಲಿ ನಾಲ್ಕನೆಯ ಒಂದು ಭಾಗವನ್ನು ಪೌಜುಗಂದಾಯ ನೀಡುವಂತೆ ಆದೇಶಿಸುತ್ತಾರೆ. ಆದಾಗ್ಯೂ ಪಾಳೆಯಗಾರರು ಮತ್ತು ಅವರ ಪತ್ನಿಗೆ ಅರಮನೆಯ ಆತಿಥ್ಯ ನೀಡುವುದರ ಜೊತೆಗೆ ಗೌರವದಿಂದ ಕಾಣುವಂತೆ ಸೂಚಿಸುತ್ತಾರೆ. ಮಹಾರಾಜರು ತಮ್ಮ ಶಕ್ತಿ ಸಾಮರ್ಥ್ಯವನ್ನು ಸಜ್ಜನಿಕೆಯನ್ನೂ ಕಂಡು ಮಾದೇವಮ್ಮಣ್ಣಿ ತಲೆತಗ್ಗಿಸುತ್ತಾಳೆ. ತನ್ನ ಅವಿವೇಕ ಹಾಗು ಅನುಚಿತ ವರ್ತನೆಗೆ ಪಶ್ಚಾತ್ತಾಪ ಪಡುತ್ತಾಳೆ. ಇಡೀ ಪ್ರಸಂಗದಲ್ಲಿ ಸಂಸರು ಇಮ್ಮಡಿ ತಿಮ್ಮರಾಜ ಒಡೆಯರ ಮೂಲಕ ಮೈಸೂರು ಅರಸರು ಸ್ತ್ರೀಯರಿಗೆ ನೀಡುತ್ತಿದ್ದ ಗೌರವ ಆದರಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಈ ನಾಟಕದ ಮತ್ತೊಂದು ವಿಶೇಷ ಅಂದರೆ, ಶೌರ್ಯ ಪರಾಕ್ರಮ ಮತ್ತು ಸಜ್ಜನಿಕೆ ಸದ್ವರ್ತನೆ ಎರಡನ್ನೂ ಒಟ್ಟಿಗೆ ನಿರ್ವಹಿಸುವುದು ನಿಜಕ್ಕೂ ಸವಾಲೇ ಸರಿ. ಸಂಸರು ಇದನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಮ್ಮಡಿ ತಿಮ್ಮರಾಜ ಒಡೆಯರು ಮಾದೇಮ್ಮಣ್ಣಿ ಅವಮಾನಿಸಿದರೂ ಆಕೆಯ ಮೇಲೆ ಕೈ ಮಾಡುವುದಿಲ್ಲ, ಕೈಮಾಡಲು ಬಿಡುವುದೂ ಇಲ್ಲ. ಆಕೆಯ ಪತಿಯನ್ನು ಸೋಲಿಸಿದ ನಂತರವೂ ಅಹಂನಿಂದ ಬೀಗುವುದಿಲ್ಲ. ಬದಲಾಗಿ ಮಾನವೀಯವಾಗಿ ನಡೆದುಕೊಳ್ಳುತ್ತಾರೆ. ಉಮ್ಮತ್ತೂರು ಮಹಾದೇವಮ್ಮಣ್ಣಿಯವರು ಅರಸರ ಮೇಲೆ ಖಡ್ಗ ಬೀಸಿ ಅವರ ಅಂಗವಸ್ತ್ರವನ್ನು  ಕೆಳಗೆ ಬೀಳಿಸಿದರೂ ಸ್ವಲ್ಪವೂ ಕೋಪ ಮಾಡಿಕೊಳ್ಳದೆ ತಾವೇ ಶಾಂತಳಾಗಿರುವಂತೆ ಹೇಳುತ್ತಾರೆ. ಅರಸರು ಸಮಾಧಾನ ಚಿತ್ತ, ಸಂಯಮ, ಶಾಂತ ಮನೋಭಾವದಿಂದ ವರ್ತಿಸುತ್ತಾರೆ.  ಹೀಗೆ ಸಂಸರು ಮೈಸೂರು ಅರಸರ ಮೂಲಕ ಒಬ್ಬ ನಾಯಕನಲ್ಲಿರಬೇಕಾದ ಪ್ರಜಾಸ್ನೇಹಿ ಗುಣ, ಹೆಣ್ಣನ್ನು ಗೌರವಿಸುವ ಗುಣ ಮತ್ತು ಸಂಯಮವನ್ನು ಹೇಳಲು ಪ್ರಯತ್ನಿಸಿದಂತಿದೆ. ಸಂಸರಿಗೆ ರಾಜರ ಶಕ್ತಿ ಪ್ರದರ್ಶನಕ್ಕಿಂತ ಅವನ ಮಾನವೀಯ ನಡೆ ಮುಖ್ಯವೆನಿಸಿದೆ. ಯುದ್ಧದಲ್ಲಿ ಸೋತ ಪಾಳೆಯಗಾರರಿಗೆ ರಾಜಾತಿಥ್ಯ ನೀಡುವ ಮೂಲಕ ಆದರ್ಶಪ್ರಾಯ ನಡೆಗೆ ಸಾಕ್ಷಿಯಾಗುತ್ತಾರೆ.

ಉಪಸಂಹಾರ:

ಸಂಸರಿಗೆ ಇತಿಹಾಸದ ವಸ್ತು ಒಂದು ನೆಪ. ಇತಿಹಾಸದ ವಸ್ತುವನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ನೋಡುವ ಚಾರಿತ್ರಿಕ ದೃಷ್ಟಿಕೋನ ಅವರ ನಾಟಕಗಳ ಮತ್ತೊಂದು ವೈಶಿಷ್ಟ್ಯ. ‘ಬಿರುದಂತೆಂಬರ ಗಂಡ’ ನಾಟಕ ಕೂಡ ಮಾನವ ಸ್ವಭಾವವನ್ನು ವಿವಿಧ ಆಯಾಮಗಳಲ್ಲಿ ಶೋಧಿಸುತ್ತದೆ. ಪ್ರಭುತ್ವದ ವೈಭವೀಕರಣಕ್ಕಿಂತ ಮುಖ್ಯವಾಗಿ ರಾಜನ ಅಂತರಂಗ ಶೋಧ ಮುಖ್ಯವಾಗಿದೆ.”ಮಹಾರಾಜರ ನಾಗರಿಕ ನಡವಳಿಕೆ ಸಂಸರಿಗೆ ಮುಖ್ಯ. ತಮ್ಮ ನಾಯಕರ ಶೌರ್ಯಕ್ಕೆ ನಾಟಕಕಾರರು ಒತ್ತುಕೊಟ್ಟಿದ್ದಾರೆ ಎಂದು ಮೇಲು ನೋಟಕ್ಕೆ ಅನ್ನಿಸಿದರೂ ಸಂಸರಿಗೆ ನಿಜಕ್ಕೂ ಮುಖ್ಯವಾಗುವುದು ಮನುಷ್ಯನ ನಾಗರಿಕ ನಡವಳಿಕೆಗಳೇ”10 ಸಂಸರು ಹಂತ ಹಂತವಾಗಿ ಮೈಸೂರು ಅರಸ ಇಮ್ಮಡಿ ತಿಮ್ಮರಾಜ ಒಡೆಯರನ್ನು ಪರೀಕ್ಷೆಗೊಳಪಡಿಸಿ ಅವರ ಅಂತರಾಳದಲ್ಲಿರುವ ಮಾನವೀಯತೆಯ ವಿವಿಧ ಮುಖಗಳನ್ನು ದರ್ಶಿಸುತ್ತಾರೆ. ಹೀಗೆ ಸಂಸರು ಇತಿಹಾಸದ ಮೂಲಕ ಎಲ್ಲ ಕಾಲದ ಸಾಮಾಜಿಕರು ಅಪೇಕ್ಷಿಸುವ ಆದರ್ಶ ಜನಪರ ಕಾಳಜಿಯ ನಾಯಕನನ್ನು ಚಿತ್ರಿಸುವುದನ್ನು ಕಾಣಬಹುದು. ಮಾನವೀಯತೆಯೇ ಅಂತಿಮವಾಗಿ ಗೆಲುವು ಸಾಧಿಸುತ್ತದೆ ಎಂಬುದನ್ನು ಸಂಸರ ‘ಬಿರುದಂತೆಂಬರ ಗಂಡ’ ನಾಟಕ ದರ್ಶಿಸುತ್ತದೆ.

ಕೊನೆಟಿಪ್ಪಣಿಗಳು:

  1. ಸಂಸ ನಾಟಕಗಳು ಪುಟ.66
  2. ಅದೇ ಪುಟ.71 
  3. ಅದೇ ಪುಟ.75
  4. ಅದೇ ಪುಟ.78
  5. ಅದೇ ಪುಟ.81
  6. ಅದೇ ಪುಟ.83
  7. ಅದೇ ಪುಟ.89
  8. ಅದೇ ಪುಟ.91
  9. ಅದೇ ಪುಟ.92
  10. ಸಾಹಿತ್ಯ ಸಂದರ್ಭ ಪುಟ.198

ಪರಾಮರ್ಶನ ಗ್ರಂಥಗಳು:

  1. ಸಂಸ ನಾಟಕಗಳು – ಬಿ.ವಿ.ವೈಕುಂಠರಾಜು
  2. ಆಧುನಿಕ ಕನ್ನಡ ನಾಟಕ - ಕೆ.ಮರುಳಸಿದ್ದಪ್ಪ
  3. ಸಂಸ ದರ್ಪಣ - ಡಾ.ಬಿ.ಸಿ.ರಾಜಕುಮಾರ್
  4. ಸಂಸ ಕವಿ -  ಜಿ.ಪಿ.ರಾಜರತ್ನಂ


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal