ಪ್ರಸ್ತಾವನೆ :
ವೃತ್ತಿ ಆಧಾರಿತ ಜಾತಿಗಳಲ್ಲಿ ಒಂದಾದ ಉಪ್ಪಾರರು ಇತರೆ ಜಾತಿ-ಬುಡಕಟ್ಟುಗಳಂತೆ ಸಂಪ್ರದಾಯ ಮತ್ತು ಸಂಸ್ಕಾರ ಎಂಬ ಚೌಕಟ್ಟಿನ ಕಟ್ಟುಪಾಡುಗಳಿಗೆ ಒಳಪಟ್ಟವರು. ಆಯಾ ಜಾತಿ-ಸಮುದಾಯದ ಚೌಕಟ್ಟಿನಲ್ಲಿ ಕಟ್ಟುನಿಟ್ಟಾಗಿ ಪಾಲನೆಗೆ ಒಳಗಾಗುತ್ತಿದ್ದ ಸಾಂಪ್ರದಾಯಿಕ ಕಾನೂನುಗಳೇ ಕಟ್ಟೇಮನೆಗಳು. ಕಟ್ಟೇಮನೆ ಎಂಬುವುದು ಒಂದು ನ್ಯಾಯಾಂಗ ವ್ಯವಸ್ಥೆ. ನಂಜುಂಡಯ್ಯ ಎಚ್.ವಿ ರವರು ಮೈಸೂರು ಕ್ಯಾಸ್ಟ್ ಅಂಡ್ ಟ್ರೈಬ್ಸ್, ಸಂಪುಟ ೪ ರಲ್ಲಿ ಉಪ್ಪಾರರ ಕಟ್ಟೇಮನೆಯ ಬಗ್ಗೆ ವಿವರಿಸಿದ್ದಾರೆ. ಎಡ್ಗರ್ ಥರ್ಸ್ಟನ್ ಮತ್ತು ಕೆ.ರಂಗಾಚಾರಿ, “ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ ಸಂಪುಟ-೭ (ಟಿ-ಝಡ್)”, ಮತ್ತು ಎಸ್ ಎಸ್ ಹಿರೇಮಠರವರ ಉಪ್ಪಾರರು, ಮೈಸೂರು ಗ್ಯಾಝೇಟಿಯರ್‌ಗಳು, ಕರ್ನಾಟಕದ ಜಿಲ್ಲಾವಾರು ಗ್ಯಾಝೇಟಿಯರ್‌ಗಳು, ಜನಗಣತಿ ವರದಿಗಳು, ಮುಂತಾದ ಹಲವಾರು ಹೊತ್ತಿಗೆಗಳಲ್ಲ್ಲಿ ಉಪ್ಪಾರ ಸಮುದಾಯದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿಯಲು ಸಹಾಯಕವಾಗಿವೆ.
ಉಪ್ಪಾರರ ಚಾರಿತ್ರಿಕ ಹಿನ್ನೆಲೆ :
ಉಪ್ಪಾರರು ಮೂಲತಃ ಸಗರ ರಾಜನ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಪೂರಕವೆಂಬಂತೆ ವಿಷ್ಣುಪುರಾಣದಲ್ಲಿ ಒಂದು ಕಥೆಯು ಇದೆ. “ಇವರು ಪೂರ್ವದಲ್ಲಿ ಉಪ್ಪು ಮಾಡುತ್ತಿದ್ದ ಕಾರಣ ಇವರಿಗೆ ಉಪ್ಪಾರರೆಂಬ ಹೆಸರು ಬಂದಿದೆ.”೧ ಕಿಟಲ್ ಕೋಶದಲ್ಲಿ “ಉಪ್ಪಾರ ಎಂಬ ಪದಕ್ಕೆ “A Man of the salt maker caste”೨ ಎಂಬ ಅರ್ಥವಿದೆ. “their proper occupation is the building of mud walls, especially those of forts." A very important occupation of these people was the manufacture of earth salt and saltpetre, of which the latter was an important ingredient in the manufacture of gunpowder”.೩ ಈ ವಿವರಣೆಯ ಪ್ರಕಾರ ಉಪ್ಪಾರರು ಮಣ್ಣಿನ ಗೋಡೆಗಳನ್ನು ಕಟ್ಟುವುದು, ಅದರಲ್ಲಿಯೂ ಕಟ್ಟಡಗಳ ನಿರ್ಮಾಣದಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಉಪ್ಪಾರರು ಕೇವಲ ಉಪ್ಪನ್ನು ಮಾತ್ರ ತಯಾರಿಸದೆ ಸಿಡಿಮದ್ದಿಗೆ ಬಳಸುವ ‘ಯವಕ್ಷಾರ’ವನ್ನು ತಯಾರಿಸುತ್ತಿದ್ದರು. ಭಾರತ ದೇಶದಲ್ಲಿ ಈ ಉಪ್ಪಾರರಿಗೆ ಉಪ್ಪಾರ, ಬೆಲ್ದರ್, ಚುನಾರ್, ಗಾವಾಡಿ, ಗೌಂದಿ, ಕಲ್ಲು ಕುಟಿಗ ಉಪ್ಪಾರ, ಲೋನಾರಿ, ಮೇಲು ಸಕ್ಕರೆ, ನಾಮದ ಉಪ್ಪಾರ, ಸಗರ, ಸುಣ್ಣ ಉಪ್ಪಾರ, ಉಪ್ಪಳಿಗ, ಉಪ್ಪಳಿಗ ಶೆಟ್ಟಿ, ಉಪ್ಪಳಿಯನ್, ಉಪ್ಪೇರ, ಯಕಲಾರ, ಎಕ್ಕಲಿ, ಲಿಂಗಾಯಿತ ಉಪ್ಪಾರ ಮುಂತಾದ ಪರ್ಯಾಯ ಹೆಸರುಗಳಿಂದ ಕರೆಯುತ್ತಾರೆ. ಉಪ್ಪಾರರು ಮಣ್ಣಿನಿಂದ ಉಪ್ಪು ತಯಾರಿಸುವ ಕೌಶಲ್ಯವನ್ನು ಹೊಂದಿದ್ದರು. ಮಣ್ಣಿನಿಂದ ಉಪ್ಪನ್ನು ಅಷ್ಟೇ ಅಲ್ಲದೆ ಸಿಡಿಮದ್ದಿನ ಪುಡಿಯನ್ನು ತಯಾರಿಸುತ್ತಿದ್ದರು. ಬ್ರಿಟಿಷರು ಹೊರಡಿಸಿದ ಉಪ್ಪಿನ ಕಾಯಿದೆ ಇಂದ ಉಪ್ಪು ತಯಾರಿಕೆ ಸಂಪೂರ್ಣವಾಗಿ ನಿಂತು ಉಪ್ಪಾರರು ಬೇರೆ ಬೇರೆ ಉದ್ಯೋಗಗಳಲ್ಲಿ ನಿರತರಾದರು.
ರಾಯದುರ್ಗ ಪ್ರದೇಶದ ಚಾರಿತ್ರಿಕ ಹಿನ್ನೆಲೆ :
ರಾಯದುರ್ಗ ಪ್ರದೇಶವು ಚಾರಿತ್ರಿಕವಾಗಿ ಕರ್ನಾಟಕದ ಪ್ರದೇಶ ಮತ್ತು ಕನ್ನಡಿಗರ ನಾಡಗಿತ್ತು. ರಾಯದುರ್ಗ ಪ್ರದೇಶವು ಕರ್ನಾಟಕದಿದ ಆಂಧ್ರಪ್ರದೇಶಕ್ಕೆ ಸೇರ್ಪಡೆಗೊಳ್ಳಲು ಮತ್ತು ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಮುನ್ನಡಿ ಬರೆದ ಪ್ರದೇಶವೇ ಬಳ್ಳಾರಿ. ಬಳ್ಳಾರಿ ಮದ್ರಾಸ್ ಪ್ರಾಂತ್ಯದ ಕನ್ನಡ ನಾಡಿನ ಪ್ರದೇಶ. ಭಾಷಾವಾರು ರಾಜ್ಯ ರಚನೆಯ ಹೋರಾಟದ ಸಂದರ್ಭದಲ್ಲಿ ಬಳ್ಳಾರಿ ಒಟ್ಟು ೧೦ ತಾಲ್ಲೂಕುಗಳನ್ನು ಒಳಗೊಂಡಿತ್ತು.(ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ, ಸಂಡೂರು, ಸಿರುಗುಪ್ಪ, ಬಳ್ಳಾರಿ, ಆಲೂರು, ಆದವಾನಿ, ರಾಯದುರ್ಗ) “ಮಾರ್ಚ್ ೨೫, ೧೯೫೩ ರಂದು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು, ಲೋಕಸಭೆಯಲ್ಲಿ ಹೊಸ ಆಂಧ್ರರಾಜ್ಯದ ರಚನೆ ಬಗ್ಗೆ ತಮ್ಮ ಹೇಳಿಕೆ ನೀಡುತ್ತಾ, ಹತ್ತು ತಾಲ್ಲೂಕುಗಳಲ್ಲಿ ಆಲೂರು, ಆದವಾನಿ, ಹಾಗೂ ರಾಯದುರ್ಗಗಳನ್ನು ಆಂಧ್ರಕ್ಕೆ ಬಿಟ್ಟುಕೊಡುವುದಾಗಿಯೂ ಮತ್ತು ೬ ತಾಲ್ಲೂಕುಗಳಾದ ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ, ಸಂಡೂರು ಹಾಗೂ ಸಿರುಗುಪ್ಪಗಳು ಮೈಸೂರು ರಾಜ್ಯದ ಭಾಗವಾಗಿರುತ್ತವೆ ಎಂದು ಸ್ಪಷ್ಟಪಡಿಸಿದ್ದರು. ಸಖೇದಾಶ್ವರ್ಯವೆಂದರೆ ಬಳ್ಳಾರಿ ತಾಲೂಕುಗಳ ಬಗ್ಗೆ ಅವರು ದಿವ್ಯ ಮೌನವನ್ನು ವಹಿಸಿದ್ದರು.”೪ ಕರ್ನಾಟಕಕ್ಕೆ ೭ ತಾಲ್ಲೂಕುಗಳಾದ ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ, ಸಂಡೂರು, ಸಿರುಗುಪ್ಪ, ಬಳ್ಳಾರಿಗಳು, ಆಂಧ್ರಪ್ರದೇಶಕ್ಕೆ ೩ ತಾಲೂಕುಗಳಾದ ಆಲೂರು, ಆದವಾನಿ, ರಾಯದುರ್ಗಗಳನ್ನೂ ವರ್ಗಾವಣೆಗೊಂಡವು. “೧೯೨೧ರಲ್ಲಿ ಎನ್.ಸಿ ಕೇಳ್ಕರರು ಈ ವಿಷಯದಲ್ಲಿ ವಿಚಾರಣೆ ನಡೆಸಿ ಆಲೂರು, ಆದವಾನಿ ಹಾಗೂ ರಾಯದುರ್ಗಗಳನ್ನೂ ಆಂಧ್ರಪ್ರಾಂತೀಯ ಕಾಂಗ್ರಸ್ಸಿಗೆ ಬಿಟ್ಟುಕೊಟ್ಟರು. ಈ ನಿರ್ಧಾರವನ್ನು ಯಾವುದೇ ಪರಿಮಿತಿಗೊಳಪಡದೇ ೧೯೪೮ ರಲ್ಲಿ ಧಾರ್ ಸಮಿತಿ ವರದಿಯು, ೧೯೪೯ ರಲ್ಲಿ ಜೆ.ವಿ.ವಿ ವರದಿ ಹಾಗೂ ೧೯೪೯ ರಲ್ಲೇ ಮದ್ರಾಸ್ ಸರ್ಕಾರದಿಂದ ರಚಿತಗೊಂಡಿದ್ದ ವಿಂಗಡನಾ ಸಮಿತಿಗಳು ಒಪ್ಪಿಕೊಂಡಿದ್ದವು.”೫ ಪ್ರಸ್ತುತ ಕರ್ನಾಟಕದ ಗಡಿಭಾಗದಲ್ಲಿರುವ ರಾಯದುರ್ಗವು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು ಮಂಡಲ(ಗ್ರಾಮಪಂಚಾಯಿತಿ)ಆಗಿದ್ದು, ಜವಳಿ ವಸ್ತುಗಳು ಮತ್ತು ಉದ್ಯಮಕ್ಕೆ ಹೆಸರುವಾಸಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ೫೪೪ಡಿಡಿ ಹೆದ್ದಾರಿಯ ಮೂಲಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ಸಂಪರ್ಕವನ್ನು ಹೊಂದಿದೆ. ೨೦೧೧ರ ಜನಗಣತಿಯ ಪ್ರಕಾರ ೬೧.೭೪೯ ಜನಸಂಖ್ಯೆಯನ್ನು ಹೊಂದಿದ್ದು, ತೆಲುಗು ಅಧೀಕೃತ ಭಾಷೆಯಾಗಿದ್ದು, ಕನ್ನಡ, ಉರ್ದು ಈ ಪ್ರದೇಶದಲ್ಲಿ ಮಾತನಾಡುವ ಇತರೆ ಭಾಷೆಗಳಾಗಿವೆ. ರಾಯದುರ್ಗದಲ್ಲಿ ಇರುವ ರೈಲ್ವೆ ನಿಲ್ದಾಣವು ನೈರುತ್ಯರೈಲ್ವೆ ವಲಯ ಕರ್ನಾಟಕದ ಹುಬ್ಬಳ್ಳಿ ರೈಲ್ವೇ ವಿಭಾಗದ ವ್ಯಾಪ್ತಿಗೆ ಒಳಪಟ್ಟಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ೨೬೯ ಕಿ.ಮೀ ದೂರದಲ್ಲಿ ರಾಯದುರ್ಗವಿದ್ದು, ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಿಂದ ಕೇವಲ ೧೩ ಕಿ.ಮೀ ದೂರದಲ್ಲಿದೆ.
ಕಟ್ಟೇಮನೆಯ ಚಾರಿತ್ರಿಕ ಹಿನ್ನೆಲೆ :
“ಕಟ್ಟೇಮನೆ ಎಂದರೆ ಕಟ್ಟುಕಟ್ಟಳೆಗಳನ್ನು ನಿರ್ವಹಿಸುವ ಮನೆ. ಸಾಮಾಜಿಕವಾಗಿ ಜನ ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ವಿಧಿಸುವ ಜವಾಬ್ದಾರಿ ಊರಿನ ಪಂಚಮರದಾಗಿರುತ್ತದೆ. ಅಲ್ಲಿ ನ್ಯಾಯ ಬಗೆಹರಿಯದಿದ್ದರೆ ಮುಂದೆ ಗುಡಿಕಟ್ಟೆಯ ನ್ಯಾಯಸ್ಥಾನಕ್ಕೆ ಕೊಂಡೊಯ್ಯುತ್ತಾರೆ. ಅಲ್ಲಿಯೂ ಬಗೆಹರಿಯದಿದ್ದರೆ ನೇರವಾಗಿ ಜನಪದರ ಸುಪ್ರೀಂ ಕೋರ್ಟ್ ಎಂದೆ ಹೆಸರಾಗಿರುವ ಕಟ್ಟೆಮನೆಗೆ ತಮ್ಮ ಅಹವಾಲನ್ನು ಕೊಂಡೊಯ್ಯುತ್ತಾರೆ.”6 ಕರ್ನಾಟಕದಲ್ಲಿ ವಾಸಿಸುತ್ತಿರುವ ಉಪ್ಪಾರರ ಕಟ್ಟೇಮನೆಗಳಲ್ಲಿ ಸರ್ವೆ ಸಾಮಾನ್ಯವಾಗಿ ೪ ರೀತಿಯ ಸ್ಥಾನಗಳನ್ನು ಗುರುತಿಸಿಕೊಂಡಿದ್ದರು. ಅವುಗಳು
ಸಮಾಜದ ಹಲವು ಜಾತಿ-ಸಮುದಾಯಗಳಲ್ಲಿ ಇರುವಂತೆ ಉಪ್ಪಾರ ಸಮುದಾಯದಲ್ಲಿಯು ಸಹ ಕಟ್ಟೇಮನೆ ಮತ್ತು ಅದರ ಗೌಡಿಕೆ ವ್ಯವಸ್ಥೆ ಇತ್ತು, ಇಂದಿಗೂ ಇದೆ. ಕಟ್ಟೇಮನೆಯ ಗೌಡಿಕೆ ಸ್ಥಾನ ಪಡೆದ ಕುಟುಂಬವು ಬಡವರಾಗಲಿ, ಶ್ರೀಮಂತರಾಗಲಿ ವಂಶಪಾರಂಪರ್ಯವಾಗಿ ಸಾಗುತ್ತಿತ್ತು. ಗೌಡ ಸ್ಥಾನದಲ್ಲಿ ಯಾವುದೇ ಬದಲಾವಣೆಗಳು ಇರುತ್ತಿದ್ದಿಲ್ಲ. ಇಂದು ಹವ್ಯಾಸಿಯಾಗಿ ನಾಮಾಂಕಿತಗಳ ಜೊತೆಯಲ್ಲಿ ಬರುತ್ತಿರುವ ಕಟ್ಟೇಮನೆ, ಕಟ್ಟಿಮನಿ, ಇತರೆ ಅಡ್ಡಹೆಸರುಗಳು ವಂಶಪಾರ್ಯವಾಗಿ ಬಂದ ಪದ್ಧತಿಯ ಪ್ರಭಾವವಿರಬಹುದು? ಈ ಹುದ್ದೆಗೆ ಯಾವುದೇ ಸಂಭಾವನೆ ಇಲ್ಲ. ಆದರೆ ಸಮುದಾಯದಲ್ಲಿ ಗೌರವಯುತ ಸ್ಥಾನವನ್ನು ಹೊಂದಿತ್ತು.
ಕಟ್ಟೇಮನೆಗಳಲ್ಲಿ ಇರುವಂತ ಯಜಮಾನನ ಸ್ಥಾನವು ವಂಶಪಾರಂಪರ್ಯವಲ್ಲ. ಇದು ಆಯಾ ಕಾಲಘಟ್ಟಗಳಲ್ಲಿ ಇದ್ದಂತಹ ಉತ್ತಮ ನಡತೆ, ಸಭ್ಯಸ್ಥ, ಗೌರವಯುತ, ಶಿಕ್ಷಣಸ್ಥ, ಆರ್ಥಿಕವಾಗಿ ಸಬಲನು, ಹಿರಿಯನು ಮತ್ತು ಜೀವನದ ಅನುಭವ ಉಳ್ಳಂತಹ ವ್ಯಕ್ತಿಗಳು ಯಜಮಾನನ ಸ್ಥಾನವನ್ನು ಹೊಂದಿರುತ್ತಿದ್ದರು. ಕಟ್ಟೇಮನೆಯ ತೀರ್ಪು, ಅದರ ಸಾಧಕ-ಬಾಧಕಗಳನ್ನು ಕುರಿತು ಮುಕ್ತವಾಗಿ ಚರ್ಚಿಸುತಿದ್ದರು. ಸಮಾಜದ, ಸಮುದಾಯದ ಯಾವುದೇ ಶುಭ-ಅಶುಭ ಕಾರ್ಯಗಳಿದ್ದಲ್ಲಿ ಹಣ ಸಂಗ್ರಹ, ಉಸ್ತುವಾರಿ, ಇತರೆ ಜವಾಬ್ದಾರಿಗಳು ಯಜಮಾನ ನಿರ್ವಹಿಸಬೇಕಾದ ಕರ್ತವ್ಯಗಳಾಗಿದ್ದವು. ಈ ಹುದ್ದೆಗೆ ಯಾವುದೇ ರೀತಿಯ ಸಂಭಾವನೆ ಇಲ್ಲ.
ಕಟ್ಟೇಮನೆಗಳಲ್ಲಿ ಬುದ್ಧಿವಂತ ಎಂಬ ಜವಾಬ್ದಾರಿಯುತ ಸ್ಥಾನವು ಸಹ ಯಜಮಾನ ಸ್ಥಾನದಂತೆ ವಂಶಪಾರಂಪರ್ಯವಾಗಿರಲಿಲ್ಲ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣಸ್ಥ, ವೈಚಾರಿಕ ಪ್ರಜ್ಞೆ, ಸಮಾಜದ ಕಾಳಜಿ ಜೊತೆ ಜೊತೆಯಲ್ಲಿ ಸಾಧಕ-ಬಾಧಕಗಳನ್ನು ಚರ್ಚಿಸಿ ಸೂಕ್ತ ನಿರ್ಣಯಗಳನ್ನು ತಿಳಿಸುವಂತಹ ವ್ಯಕ್ತಿಯನ್ನು ಕಟ್ಟೇಮನೆಯ ಬುದ್ಧಿವಂತನನ್ನಾಗಿ ಆಯ್ಕೆಮಾಡಲಾಗುತ್ತಿತ್ತು. ಕಟ್ಟೇಮನೆಯ ಸ್ಥಾನಕ್ಕೆ ಬಂದ ದೂರಿನ ಸ್ಥಿತಿ, ಅದರ ಯೋಚನೆ, ಉದ್ದೇಶ, ಅದರಿಂದಾಗಾವು ಲಾಭ-ನಷ್ಟಗಳನ್ನು ಗ್ರಹಿಸಿ ಕಟ್ಟೇಮನೆ ನ್ಯಾಯ ನಿರ್ಣಯ ಸ್ಥಾನಕ್ಕೆ ತಿಳಿಸಿ ಸೂಕ್ತ ನಿರ್ಣಯ, ದಂಡ, ಶಿಕ್ಷೆ, ಬಹುಮಾನ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತಹ ವಿಷಯಗಳನ್ನು ಚರ್ಚಿಸುವ ಜವಾಬ್ದಾರಿ ಹೊಂದಿದ್ದು, ಈ ಸ್ಥಾನದಲ್ಲಿರುವವರಿಗೂ ಯಾವುದೇ ಸಂಭಾವನೆ ಇಲ್ಲ.
ಕೋಲ್ಕಾರ ಎಂಬುವುದು ಕಟ್ಟೇಮನೆಯ ರಚನೆಯಲ್ಲಿ ಬಹುಮುಖ್ಯ ಪಾತ್ರವನ್ನು ಒಳಗೊಂಡಿತ್ತು. ಸಮುದಾಯದ ಯಾವುದೇ ಶುಭ-ಅಶುಭ, ವ್ಯಾಜ್ಯಗಳು, ಕೌಟುಂಬಿಕ ಸಮಸ್ಯೆಗಳು, ಆಚರಣೆಗಳು, ಇತರೆ ಕಾರ್ಯಗಳಲ್ಲಿ ಕೋಲ್ಕಾರ ಆಯಾ ಸಂಬಂಧಿತ ಕುಂಟುಂಬ ಅಥವಾ ಸಮುದಾಯ ನಿಗಧಿತ ವ್ಯಕ್ತಿಗಳಿಗೆ ಸುದ್ಧಿ ಮುಟ್ಟಿಸುವ, ನ್ಯಾಯಸ್ಥಾನಕ್ಕೆ ಬರುವಂತೆ ಆಹ್ವಾನ ನೀಡುವ ಜವಾಬ್ದಾರಿ ಹೊಂದಿದ್ದ. ಈ ಹುದ್ದೆ ಕಟ್ಟೇಮನೆ ಗೌಡನಂತೆ ವಂಶಪಾರಂಪರ್ಯವಾಗಿತ್ತು. ಕೋಲ್ಕಾರ ಎಂಬ ಸ್ಥಾನಕ್ಕೆ ಹೆಚ್.ವಿ ನಂಜುಂಡಯ್ಯನವರು(೧೯೩೧) ಮಣಿ, ಭಂಡಾರಿ, ಕೋಲ್ಕಾರ ಎಂಬ ನಾನಾರ್ಥಗಳನ್ನು ನೀಡಿದ್ದಾರೆ. ಕೋಲ್ಕಾರ ಹುದ್ದೆಯು ಸಮುದಾಯದ ಬಡ ಕುಟುಂಬದವರು, ಆರ್ಥಿಕವಾಗಿ ಕೆಳಸ್ಥಾನವನ್ನು ಹೊಂದಿದವರಾಗಿದ್ದರು. ಈ ವೃತ್ತಿಗೆ ಸಂಭಾವನೆ ಕೊಡುವ ಪದ್ಧತಿ ಇತ್ತು. ಸಮುದಾಯದಿಂದ ಇಂತಿಷ್ಟು ಭೂಮಿಯನ್ನು ಕೋಲ್ಕಾರ ಕುಟುಂಬ ವರ್ಗಕ್ಕೆ ನೀಡಲಾಗುತ್ತಿತ್ತು. ಕೋಲ್ಕಾರರು ಆ ಜಮೀನಿನಲ್ಲಿ ಕೃಷಿ ಕಾಯಕದಿಂದ ಜೀವನ ಸಾಗಿಸಬೇಕಾಗಿತ್ತು. ಇದನ್ನು ಹೊರತುಪಡಿಸಿ ಕೆಲವೆಡೆ ವರ್ಷಕ್ಕೆ ಇಂತಿಷ್ಟು ಎಂಬಂತೆ ಸಮುದಾಯದಿಂದ ದವಸ-ಧಾನ್ಯ, ಹಣವನ್ನು ನೀಡುತ್ತಿದ್ದರು.
ಹೆಚ್.ವಿ ನಂಜುಂಡಯ್ಯನವರ ಮೈಸೂರು ಕ್ಯಾಸ್ಟ್ ಅಂಡ್ ಟ್ರೈಬ್ಸ್ ಸಂಪುಟಗಳಲ್ಲಿನ ೪ ನೇ ಸಂಪುಟದಲ್ಲಿ ಉಪ್ಪಾರರ ಕಟ್ಟೇಮನೆ ಬಗ್ಗೆ ಹೀಗೆ ಉಲ್ಲೇಖಿಸಿದೆ. “Upparas have a tribal constitution like other castes of a similar status. The kattemanes are presided over by the Setties and yajamans, who have under them a beadle, styled Bandari or Kolkar. Their offices are hereditary, and they get the usual perquisites of pan-supari on all important occasions. The Upparas belong to the Eighteen Phana section, and as such, command the services of the Chalavadi, the servant of this faction. His insignia are the bell, and the ladle, as also the Upparas’ professional mark”7 ಈ ವಿವರಣೆಯ ಪ್ರಕಾರ ಬೇರೆ ಜಾತಿಯಲ್ಲಿರುವಂತೆ ಉಪ್ಪಾರ ಜಾತಿಯಲ್ಲಿಯು ಬುಡಕಟ್ಟು ಕಾನೂನು ವ್ಯವಸ್ಥೆ ಇದ್ದು, ಸೆಟ್ಟಿಗಳೂ, ಯಜಮಾನರು ಕಟ್ಟೆಮನೆಯ ಅಧ್ಯಕ್ಷತೆವಹಿಸುತ್ತಾರೆ. ಇವರ ಕೆಳ ಹಂತದ ಸ್ಥಾನಗಳನ್ನು ಮಣಿ, ಭಂಡಾರಿ ಅಥವಾ ಕೋಲ್ಕಾರ ಅಲಂಕರಿಸಿರುತ್ತಾರೆ. ಇವರ ಕಛೇರಿಗಳು ವಂಶಪಾರ್ಯವಾಗಿ ಬಂದಿವೆ. ಮುಖ್ಯವಾದ ಸಂದರ್ಭಗಳಲ್ಲಿ ಎಲೆ-ಅಡಿಕೆಯ ರೂಪದಲ್ಲಿ ಸಂಭಾವನೆಯನ್ನು ಪಡೆಯುತ್ತಾರೆ. ಉಪ್ಪಾರರು ೧೮ ಫಣಗಳ ಗುಂಪಿಗೆ ಒಳಪಟ್ಟಿದ್ದು, ಈ ಗುಂಪಿನ ಸೇವಕನಾದ ಛಲವಾದಿ ಅಪ್ಪಣೆಯನ್ನು ಮಾಡುತ್ತಾನೆ. ಇವನ ಗುರುತುಗಳು ಗಂಟೆ, ತೊಟ್ಟಿಲು, ಮತ್ತು ಉಪ್ಪಾರರ ವೃತ್ತಿ ಚಿಹ್ನೆ ಎಂದು ಉಲ್ಲೇಖಿಸಿದೆ. ಬಹುಷಹ ಇಲ್ಲಿರುವ ೧೮ ಫಣಗಳ ಗುಂಪು ಎಂದರೆ ಹದಿನೆಂಟು ಜಾತಿ ಜನರ ಕಾಯಕಗಳ ವರ್ಗವನ್ನು ಫಣಗೆಳೆಂದು ಕರೆದಿರಬಹುದು? “ಸೊಡ್ಡಳ ಬಾಚರಸನ ಪ್ರಕಾರ ಪ್ರತಿ ವ್ಯಕ್ತಿಯಲ್ಲೂ ಇವೆ.
೧ |
ಬ್ರಾಹ್ಮಣ |
ಶಿಖಿ |
೨ |
ಕ್ಷತ್ರೀಯ |
ನಯನ |
೩ |
ಬಣಜಿಗ |
ನಾಸಿಕ |
೪ |
ಒಕ್ಕಲಿಗ |
ಅಧರ, ತುಟಿ |
೫ |
ಗೊಲ್ಲ |
ಕರ್ಣ |
೬ |
ಕುಂಬಾರ |
ಕೊರಳು |
೭ |
ಪಂಚಾಳ |
ಬಾಹು |
೮ |
ಉಪ್ಪಾರ |
ಅಂಗೈ |
೯ |
ನಾಯಿಂದ |
ನಖ, ಉಗುರು |
೧೦ |
ಡೊಂಬ |
ಒಡಲು |
೧೧ |
ಅಗಸ |
ಬೆನ್ನು |
೧೨ |
ಬೇಡ |
ಚರ್ಮ |
೧೩ |
ಕಬ್ಬಿಲ |
ಪೃಷ್ಠ, ಕುಂಡೆ |
೧೪ |
ಹೊಲೆಯ |
ಒಳದೊಡೆ |
೧೫ |
ಈಳಿಗ |
ಮಣಿಕಾಲು |
೧೬ |
ಸಮಗಾರ |
ಕಣಗಾಲು |
ಇಂತೀ ಹದಿನೆಂಟು ಜಾತಿ ತನ್ನಲ್ಲಿ ಉಂಟು ಎನ್ನುತ್ತಾನೆ ಸೊಡ್ಡಳ ಬಾಚರಸ.”8 ಈ ಮೇಲ್ಕಂಡ ಪಟ್ಟಿಯಲ್ಲಿ ಮಾನವನ ತಲೆಯ ಕೂದಲಿನಿಂದ ಹಿಡಿದು ಪಾದದ ಅಂಗಾಲಿನವರೆಗೂ ಸಮೀಕರಿಸುತ್ತಾ ಒಂದೊಂದು ಜಾತಿಯನ್ನಾಗಿ ವಿವರಿಸುತ್ತಾ ಸಾಗಲಾಗಿದೆ. ಪ್ರತಿಯೊಂದು ಜಾತಿಯು ಸಹ ವರ್ಗವೃತ್ತಿಯಾಗಿ ನೆಲೆಕಂಡಿದ್ದು, ಮಾನವ ಸಂಘ ಜೀವಿ ಮತ್ತು ಸಹಬಾಳ್ವೆಯೇ ವೃತ್ತಿಯಿಂದ ಜಾತಿಯಾಗಿ ಮಾರ್ಪಟ್ಟಿರಬಹುದು.
ಹಸ್ತಪ್ರತಿ -೧
ಶುಭಮಸ್ತು
ವಿಭವಸಂಮಾರ್ಗ ಶಿರಶಿಕೆಯಲ್ಲು ಪಾವಗಡ ತಾಲ್ಲೂಕು ಗುಡ್ಲಹಳ್ಳಿಯಲ್ಲಿರುವ ಮೇಲುಸಕ್ಕರೆ ಮತಸ್ಥರು ಅಂದರೆ ೧ನೇ ಬೈಲಪ್ಪನ ಮಕ್ಕಳು ೧.ಹನುಮಂತಪ್ಪ ೨.ಅತಲಪ್ಪ ೩.ಕಾನಲೆಪ್ಪ ೪.ಮಾಸಶಲ್ಲಿ ಹನುಮಂತಪ್ಪ ೫.ಚಿಕ್ಕ ಅತಲೆಪ್ಪ ಗೋರ್ಜಿಮಾ ಮಡಿವನು. ಇರಪ್ಪನ ಮಗ ಹನುಮಂತಪ್ಪಯಾವುಭಯರಿಗೆ ಹಿರಿಯರು ತಾಲ್ಕು ಧರ್ಮಪುರಸಮ್ಮುಕು ಮಜರ ಅಳ್ಳಿಕೆರೆಯಲ್ಲಿರುವ ಉ.ಸಕ್ಕಾರೆ ಮತಸ್ಥರು ಅಂದರೆ ರಾಯದುರ್ಗದ ಕಟ್ಟೇಮನೆ ವಂಶಸ್ಥರು ಕಂದಿಕೆರೆ ಗುಡಿಕಟ್ಟಿಗೆ ಸೇರಿದ ತರೆಲ್ಲಕು ಹುಚ್ಚಮಲ್ಲಪ್ಪ ಮೈಲಾರಪ್ಪ ಕರಿಯಾಲಪ್ಪನ ಮಗ ಗೋರಪ್ಪ ಮೈರಾಲಾರಪ್ಪನ ಮಗ ಮೈಲಾರಪ್ಪ ಹೈಮಂಗಳ ಸಮ್ಮೆಕು ಕಂದಿಕೆರೆ ಗ್ರಾಮದಲ್ಲಿರುವ ಅರ್ಕಿಕಟ್ಟೆಮನೆ ಕಂದಿಕೆರೆ ಗುಡಿಕಟ್ಟಿಗೆ ಕುಂಡಿದೇವರ ಗಣಾಚಾರಿ ಹುಚ್ಚಣ್ಣನ ಮಗ ಕುಂಶಪ್ಪ. ಹಿರಿಯೂರು ಗುಡಿಕಟ್ಟು ಸರ‍್ಯದ ಕಟ್ಟಿಗೆ ಸೇರಿದ ಗೋರಪ್ಪನ ಮಗ ಅಳ್ಳಿಕೆರೆ ಸಂಕಣ್ಣ ಮಡಕಶಿರಾ ತಾಲ್ಕು ಅಮರಾಪುರ ಸಮ್ಮೆಕು ವಲಸೆ ಗ್ರಾಮದಲ್ಲಿರುವ ಪೂಜಾರಾ ಕರಿಯಣ್ಣನ ಮಗ ಮಾಶಪ್ಪ ನಡುವುಲ್‌ಡೇದ ತೊಜಿರೇದ ಮಾರಪ್ಪ ಸಕಮ್ಮ ಸಣ್ಣ ಮಾರಪ್ಪ ಯಿನ್ನು ಮುಂತಾದವರು ಬಂದು ಬರೆಸಿಕೊಟ್ಟ ಕುಲದಾನ ಅಯುಸಜಯೇದರೆ, (ಯಾಮುಂದು ಪುಜಾರಿ ಚಿಕ್ಕಣ ಬಂಗಾರಪ್ಪನ ಪಾಳ್ಯದಲ್ಲಿರುವ ತುಂಶಪ್ಪ ನಡುವುಲು ಚೆದಲ್ಲಿರುವ ರಾಯದುರ್ಗದ ಕಟ್ಟೆಮನೆ ಮೈಲಾರಪ್ಪ ನಡುವುಲು ಚೇದದಲ್ಲಿರುವ ಪುಲ್ಲಿಕುಂಟಿ ತಿಮ್ಮಣ್ಣಯ್ಯನ ನಾಲ್ಕುಜನಗಳು ತಮ್ಮ ಗುಂಡ್ಲಹಳ್ಳಿ ಗ್ರಾಮಕ್ಕೆ ಹೋಗಿ ಮೇಲಿನ ರುಜು ಮಾಡಿರುವ ಮೇಲುಸಕ್ಕರೆ ಬೈಲಪ್ಪನ ಮಗಳು ತಾರಲ್ಲೆಮ್ಮಯಿಂಬ ಕನ್ಯವನ್ನು ನಡುವುಲು ಚೇದಲ್ಲಿರುವ ಪುಲ್ಲಿಕುಂಟೆ ತಿಮ್ಮಯ್ಯನ ಮೊಮ್ಮಗ ಮಾರಪ್ಪನಿಗೆ ನಿಶ್ಚಯ ಮಾಡಿಕೊಂಡದಲ್ಲಿ ಸದರಿ ನಡುವುಲು ಚೇದಗ್ರಾಮದಲ್ಲಿರುವ ಮೇಲುಸಕ್ಕರೆ ಬಂಗಾರಪ್ಪನ ಮಗಳು ದೊಡ್ಡತ್ತಾಯೆಂಬ ಕನ್ಯವನ್ನು ಗುಂಡ್ಲಹಳ್ಳಿ ಬೈಲಪ್ಪನ ಯರಡನೆ ಮಗ ಅತಲೆಪ್ಪನಿಗೆ ನಿಶ್ಚಯ ಮಾಡಿರುತ್ತಾರೆ ಯಂದು ಸರಾಯಿ ನಡುವುಲು ಚೇದಲ್ಲಿರುವ ಬಂಗಾರಪ್ಪನ ಮಗ ಯರಡನೆ ಮಗ ಬಡಮಾರಪ್ಪನು ಮೂರನೆ ಮಗ ಕಳ್ಳಪ್ಪ ಅಂದರೆ ಬಡಮಾರಪ್ಪನಿಗೆ ಗೋರ್ಜೀಮಾ ಮಡಿ ದಾಸಪ್ಪನ ಮಗಳು ಸುಬ್ಬಮ್ಮ ಯಂಬ ಕನ್ಯವನ್ನು ಕಳ್ಳಪ್ಪನಿಗೆ ಗೋರ್ಜೀಮಾ ಮಡಿ ಇರಪ್ಪನ ಮಗಳು ತ್ರೀಚಳಮ್ಮ ಯಂಬ ಕನ್ಯವನ್ನು ಆ ದಿನ ನಿಶ್ಚಯಮಾಡಿದ್ದದ್ದರಿಂದ) ಸದರಿ ಮೇಲೆ ನಮೂದು ಮಾಡಿರುವ ಮೇಲುಸಕ್ಕರೆ ಮತಸ್ತರು ಗುಂಡ್ಲಹಳ್ಳಿ ಮೇಲುಸಕ್ಕರೆ ಮತಸ್ಥರ ನಮ್ಮಗಳರಾಡಿತೆ ಯಿಲ್ಲದ್ದರಿಂದ ಯಾಸಕಲ್ವರೆಗೂ ನಡವಳಿಕೆ ಬಿಟ್ಟುಕೊಂಡುಯಿದ್ದಿನಿ. ಯಾದಿವಸ ನಾವುಗಳಿಂತಲು ಗುಂಡ್ಲಹಳ್ಳಿಯವರ ಸಂತರಗಲ್ಲು ಗುರುಗಳ ಕಡೆಯಿಂದ ಅವರ ನಡವಳಿಕೆ ನಂಟರು ಗುರುಗಳು ಪೂಜಾರಿ ಕಟ್ಟಿಸ್ತತರು ಸಹ ಯಿವರುಗಳ ವಿಚಾರವಾಗಿ ಗುರುಗಳ ಕಡೆಯಿಂದ ಪತ್ರಿಕೆಯನ್ನು ಕರಿಸಿಯಿದ್ದೆವು. ಆ ಪತ್ರಿಕೆಯನ್ನು ನಮ್ಮಗಳರಾಧೀನದಲ್ಲಿಯಿಟ್ಟುಕೊಂಡು ಗುಂಡ್ಲಹಳ್ಳಿಯವರನ್ನು ನಿಮ್ಮ ಗುರುಗಳಲಿಯಾ ಕಟ್ಟಿಮನೆ ಯಾವುದು ಯೆಂದು ಕೇಳಿದರೆ ನಮ್ಮ ಗುರುಗಳ ಕಡೆಯಿಂದ ನಮ್ಮ ವಿಚಾರವಾದ ಪತ್ರಿಕೆಯನ್ನು ಕರಿಸುತ್ತೇನೆಂದು ಹೇಳಿದರು. ಅನಂತರ ಪತ್ರಿಕೆಯನ್ನು ಕರಿಸಿದರು. ಪತ್ರಿಕೆಯಲ್ಲಿ ಪೆನಗೊಂಡೆ ರಾಯರಸಿಂಹಾಸನ ಪೀಠಸ್ತರಾದಂಥ ಶಂಕರಕಲ್ಲು ಗುರು ಸಮಸ್ತಾನದ ರಾಘುವಚಾರ್ಯ ಗುರುಗಳು. ಅವರಗೋತ್ರ ಚನ್ನಗಿರಿಶೆಟ್ಟಿ ಲೋರು ಗುಡಿಕಟ್ಟು ಗುಂಡ್ಲಹಳ್ಳಿ ಹನುಮಂತರಾಯ ಯವರನು ದೇವರು ಚನ್ನಿಗಗರಾಯ ಯಿರೀತಿಯಾ(ಹಾಳೆ ಹಾಳಾಗಿದೆ./ಬರವಣಿಗೆ ಹಾಳಾಗಿದೆ) ಗಾವುಗಳೇರಿಸಿದ ಪತ್ರದಲ್ಲಿಯು ಅದೇ ರೀತಿಯಾಗಿಯಿತ್ತು. ಯಿದುಯಲ್ಲಾಗಾವುಗಳು ಯೋಚನೆ ಮಾಡಿ ನೋಡಲಾಗಿ ಯಾವುದು ದೋಷವುಯಿಲ್ಲ. ಆದ್ದರಿಂದ ಯಿದಿವಸ ಕಟ್ಟೆಸ್ತರು, ಬಳಗದವರು, ಕುಲಸ್ತರು, ದೈವದವರು ಸಹ ಮೇಲಕಂಡ ಗುಂಡ್ಲಹಳ್ಳಿಯವರಲ್ಲಿ ವುಟವುಪಚಾರ ಹೆಣ್ಣು ಗಂಡು ತರುವು ದತ್ತಾಕ್ಷೇಪಣತಿ ಮಾಡಿದಲ್ಲಿಯಿದಕ್ಕೆ ರುಜುಗಳು ಮಾಡಿಯಿರುವ ಕುಲಸ್ತರು ಜರಾಬುರು ಚಲುಳ್ಳವರು ಯಿಂದು ವಪ್ಪಿ ಬರದು ಬರಸಿಕೊಟ್ಟ ಕುಲದಸ್ತ ಅಯಿರಜಿ.
ದೈವದವರ ಸಾಕ್ಷಿಗಳು
ಕುಲದವರ ಸಸ್ತಿಕ
ಕಡೆವುಡೇಜದಾಸಪ್ಪನ ಮಗ ಗೌ|ಪ ಕುರುಂಕಪ್ಪ (ಹೆಬ್ಬಟಿನ ಗುರುತು ಮತ್ತು ಹೆಸರಗಳಿವೆ)
ರುದ್ರಪ್ಪನ ಮಗ ಯಪ್ಪಿಲಪ್ಪ
ನಡುಲುಡಿವು
ಭಮಪ್ಪ
ಶಿವಪ್ಪನ ಸಕ್ಷಿಗೆ ಈರನಗಪ್ಪಬರಅ.......,(ಇನ್ನೂ ಇವೆ)
(ಕೆಳಭಾಗದಲ್ಲಿ ಸಾಕ್ಷಿದಾರರ ಹೆಬೆಟ್ಟಿನ ಗುರುತುಗಳು ಮತ್ತು ಹೆಸರು ಹಾಗೂ ವಿಳಾಸದ ವಿವರಗಳು ಇವೆ.)
ಹಸ್ತಪ್ರತಿ -೨
ಶುಭಮಸ್ತು
ದಿ:೦೭.೦೬.೧೯೪೫
೦೭.೦೬.೧೯೪೫ ತೆದಿ ಲಾಗಾಯ್ತು ದಿನ ದಸ್ತಾವದಿ ಪರಿಪೂಧಿಸಿಲಾಡಲಾಗಿ ಮೇಲ್ಕಾಂಡ ದಸ್ತಾವಜ ನಿಜನಂದು ಯಾಕಳ ರುಜುವು ಮಾಡಿರುವ ಜನಗಳು ವಪ್ಪಿ ರುಜುವು ಮಾಡಿರುತ್ತದೆ.
(ಕೆಳಭಾಗದಲ್ಲಿ ಸಾಕ್ಷಿದಾರರ ಹೆಬೆಟ್ಟಿನ ಗುರುತುಗಳು ಮತ್ತು ಹೆಸರು ಹಾಗೂ ವಿಳಾಸದ ವಿವರಗಳು ಇವೆ.)
ಈ ಮೇಲ್ಕಂಡ ಹಸ್ತಪ್ರತಿಯಲ್ಲಿ ಉಪ್ಪಾರ ಸಮುದಾಯದ ವೈವಾಹಿಕ ಸಂಬಂಧದ ಬಗ್ಗೆ ತಿಳಿಸುತ್ತದೆ. ಉಪ್ಪಾರರ ನ್ಯಾಯಪಂಚಾಯಿತಿ ಸ್ಥಾನಗಳಾದ ಕಟ್ಟೇಮನೆ ಮುಖ್ಯಸ್ತರಿಂದ ವಧು ಮತ್ತು ವರರ ಕೊಡು ತೆಗೆದುಕೊಳ್ಳುವಿಕೆ ಮತ್ತು ಈ ವಿವಾಹಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಗುರುಗಳ ಕಡೆಯಿಂದ ಪತ್ರಿಕೆಯನ್ನು ಬರೆಸಿ ಆ ಮೂಲಕ ವಿವಾಹ ನಿಶ್ಚಯ ಮಾಡುವ ವಿಚಾರವನ್ನು ಇಲ್ಲಿ ಕಾಣಬಹುದಾಗಿದೆ.
ಹಸ್ತಪ್ರತಿಯಲ್ಲಿ ಒಟ್ಟು ೪ ಜನ ವರ, ೪ ಜನ ವಧುಗಳ ವೈವಾಹಿಕ ವಿಚಾರವಾಗಿ ನಿಶ್ಚಯಮಾಡುವ ವಿಷಯವನ್ನು ತಿಳಿಯಬಹುದಾಗಿದೆ. (* ಬೈಲಪ್ಪನಿಗೆ ೫ ಜನ ಗಂಡು ಮಕ್ಕಳು, ೧ ಹೆಣ್ಣು ಮಗಳ ಬಗ್ಗೆ ಉಲ್ಲೇಖವಿದೆ.-೧.ಹನುಮಂತಪ್ಪ, ೨.ಅತಲಪ್ಪ, ೩.ಕಾನಲೆಪ್ಪ, ೪.ಮಾಸಶಲ್ಲಿ ಹನುಮಂತಪ್ಪ, ೫.ಚಿಕ್ಕ ಅತಲೆಪ್ಪ, ೬.ತಾರಲ್ಲೆಮ್ಮ) ಉಪ್ಪಾರ ಸಮುದಾಯದ ಬೈಲಪ್ಪನ ಮಗಳಾದ ತಾರಲ್ಲೆ ಎಂಬ ಕನ್ಯವನ್ನು ನಡವುಲು ಚೇದದಲ್ಲಿರುವ ಪುಲ್ಲಿಕುಂಟೆ ಕಿಮ್ಮಯ್ಯನ ಮೊಮ್ಮಗ ಮಾರಪ್ಪನಿಗೆ ನಿಶ್ಚಯಮಾಡಿಕೊಂಡಲ್ಲಿ ಎಂಬ ಷರತ್ತಿ ಅನ್ವಯ ಚೇದ ಗ್ರಾಮದಲ್ಲಿರುವ ಮೇಲುಸಕ್ಕರೆ ಬಂಗಾರಪ್ಪನ ಮಗಳು ದೊಡ್ಡತಾಯೆಂಬ ಕನ್ಯವನ್ನು ಗುಂಡ್ಲಹಳ್ಳಿ ಬೈಲಪ್ಪನ ಎರಡನೇ ಮಗ ಅತಲೆಪ್ಪನಿಗೆ ನಿಶ್ಚಯಮಾಡಿರುತ್ತಾರೆ. (* ಬಂಗಾರಪ್ಪನಿಗೆ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳ ಬಗ್ಗೆ ಉಲ್ಲೇಖವಿದೆ.-೧.ದೊಡ್ಡತಾಯಿ, ೨.ಎರಡನೇ ಬಡಮಾರಪ್ಪ, ೩.ಕಳ್ಳಪ್ಪ) ಇದರ ಜೊತೆಯಲ್ಲಿ ಬಂಗಾರಪ್ಪನ ಮಗ ಬಡಮಾರಪ್ಪ ಎಂಬಾತನಿಗೆ ದಾಸಪ್ಪನ ಮಗಳು ಸುಬ್ಬಮ್ಮ ಎಂಬಾಕೆಯನ್ನು, ಬಂಗಾರಪ್ಪನ ಮೂರನೇ ಮಗ ಕಳ್ಳಪ್ಪನಿಗೆ ಇರಪ್ಪನ ಮಗಳು ತ್ರಿಚಳಮ್ಮ ಎಂಬಾಕೆಯನ್ನು ನಿಶ್ಚಯ ಮಾಡಲಾಗಿದೆ. (ಹಸ್ತಪ್ರತಿಯಲ್ಲಿ ಗೋರ್ಜೀಮಾಮಡಿ ಎಂದು ನಮೂದಿಸಲಾಗಿದೆ. ಬಹುಶಃ ಗೋರ್ಜೀಮಾಮಡಿ ಎಂದರೆ ಸಂಕ್ಷಿಪ್ತ ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟ ಸಂಖ್ಯೆ ೪೬೫ ರಲ್ಲಿರುವ ಗೋಜು-(ಕ್ರಿ).೧.(ದಾರದ ಎಳೆಯಂತೆ) ಸಿಕ್ಕಾಗು; ಗಂಟಾಗು.(ನಾ). ೨.ತೊಡಕು; ಸಿಕ್ಕು. ೩.ತೊಂದರೆ; ಕಷ್ಟ. ೪.ಗೊಡವೆ; ತಂಟೆ ಎಂದಿದ್ದು, ವಿವಾಹದ ಬಾಂದವ್ಯಗಳು ಅವರರವರ ಜೀವನದಲ್ಲಿ ಗಟ್ಟಿಯಾಗಿರಲಿ ಎಂಬ ಗ್ರಹಿಕೆಯಲ್ಲಿ ಬಳಸುತ್ತಿದ್ದ ಪದವಾಗಿರಬೇಕು.?)
ಈ ಕುಲಸ್ಥರ ಕುಲದಾನ ಅರ್ಜಿಗೆ ೧.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಕಂದಿಕೆರೆ ಗ್ರಾಮದ ಗುಡಿಕಟ್ಟು ತರೆಲ್ಲಕು ಹುಚ್ಚಮಲ್ಲಪ್ಪ ಮೈಲಾರಪ್ಪ ಕರಿಯಾಲಪ್ಪನ ಮಗ ಗೋರಪ್ಪ, ಮೈಲಾರಪ್ಪನ ಮಗ ಮೈಲಾರಪ್ಪ. ೨.ಚಿತ್ರದುರ್ಗ ಜಿಲ್ಲೆಯ ಐಮಂಗಳದಲ್ಲಿ ಸಮ್ಮೆಕು ಕಂದಿಕೆರೆ ಗ್ರಾಮದಲ್ಲಿರುವ ಅರ್ಕಿಕಟ್ಟೆಮನೆ ಕುಂಡಿದೇವರ ಗಣಾಚಾರಿ ಹುಚ್ಚಣ್ಣನ ಮಗ ಕುಂಶಪ್ಪ. ೩.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಗುಡಿಕಟ್ಟುಗೆ ಸೇರಿದ ಗೋರಪ್ಪನ ಮಗ ಅಳ್ಳಿಕೆರೆ ಸಂಕಣ್ಣ. ೪. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕು ಅಮರಾಪುರ ಸಮ್ಮೆಕು (ಕಿಟ್ಟೆಲ್ ಆರ್ ಎಫ್ ರವರ ಕನ್ನಡ- ಇಂಗ್ಲೀಷ್ ನಿಘಂಟು, ಪುಟ ಸಂಖ್ಯೆ ೧೫೧೯ ರಲ್ಲಿ ಸಮ್ಯಕ್ಕು ಎಂಬ ಪದಕ್ಕೆ. samyakku. Tbh. Of ಸಮ್ಯಚ್ (smd. 106 cm)( ಸಮ್ಯಚ್ sami-ac. ಸಮ್ಯಕ್ಕು, ಸಮ್ಯಂಚ್. ಸಮ್ಯಂಚ್ sami-anc ಸಮ್ಯಕ್ Going along with or together. 2, uniform, same, identical. 3.all, entire, whole, complete. 4,correct, accurate, proper, true, righi; pleasant, agreeable. 5.with, together; entirely, fully; accurately, etc - ಎಂಬ ಅರ್ಥಗಳಿವೆ. ಹೀಗೆಂದರೆ ಒಟ್ಟಾರೆ, ಒಂದೇಡೆ, ನಿಗಧಿತ ಚೌಕಟ್ಟು, ಗಡಿ, ವ್ಯಾಪ್ತಿ ಎಂದು ಗ್ರಹಿಸಿಕೊಳ್ಳಬಹುದಾಗಿದೆ. ಗುಡಿಕಟ್ಟು ಎಂಬುವುದು ನಿಗಧಿತ ವ್ಯಾಪ್ತಿಯಲ್ಲಿ ಚಿಕ್ಕದಾಗಿದ್ದು, ಪ್ರಾರಂಭದಲ್ಲಿ ವ್ಯಾಜ್ಯಗಳು ಗುಡಿಕಟ್ಟಿನಲ್ಲಿ ಬಗೆಹರಿಯದೇ ಇದ್ದ ಸಂಧರ್ಭಗಳಲ್ಲಿ ಅದನ್ನು ಕಟ್ಟೇಮನೆಗೆ ಕೊಂಡುಯ್ಯುತ್ತಿದ್ದರು. ಗುಡಿಕಟ್ಟು-ಕಟ್ಟೇಮನೆ ಸೀಮೆಯ ವ್ಯಾಪ್ತಿಗೆ ಇಂತಿಷ್ಟು ಹಳ್ಳಿಗಳೆಂದು ಗುರುತಿಸಿಕೊಂಡು ಆಯಾ ಹಳ್ಳಿಗಳು ನಿಗಧಿಗೊಳಿಸಿದ ಗುಡಿಕಟ್ಟು-ಕಟ್ಟೇಮನೆಗೆ ನಡೆದುಕೊಳ್ಳತಕ್ಕದ್ದು. ಇದನ್ನು ಸಮ್ಮೆಕು ಎಂದು ಬಳಸಿರಬಹುದು?) ವಲಸೆ ಗ್ರಾಮದಲ್ಲಿರುವ ಪೂಜಾರ ಕರಿಯಣ್ಣನ ಮಗ ಮಾಶಪ್ಪ. ಮಾರಪ್ಪ, ಸಾಕಮ್ಮ, ಸಣ್ಣ ಮಾರಪ್ಪ ಇತರರು ಸೇರಿ ಬರೆಸಿದ ಅರ್ಜಿ. ಈ ಅರ್ಜಿಯನ್ನು ಗುಂಡ್ಲಹಳ್ಳಿ ಕಟ್ಟೆಮನೆ ಯಜಮಾನರು ಆದೇಶ ಹೊರಡಿಸುತ್ತಾ ಈ ನಿರ್ಣಯಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮತ್ತು ನಗರದಲ್ಲಿರುವ ಪೆನುಕೊಂಡದಲ್ಲಿದ್ದ ಪೂಜ್ಯ ಗುರುಗಳಾದ ರಾಯರಸಿಂಹಾಸನ ಪೀಠಸ್ತರಾದಂಥ ಶಂಕರಕಲ್ಲು ಗುರು ಸಮಸ್ಥಾನದ ರಾಘವಚಾರ್ಯ ಗುರುಗಳು ಮೂಲಕ ಪತ್ರದಲ್ಲಿ ಈ ವಿಷಯವು ಕುಲಸ್ಥರ, ಬಳಗದವರ, ಕಟ್ಟೇಮನೆ, ದೈವದವರ ಸಮ್ಮುಖದಲ್ಲಿ ಹೆಣ್ಣು-ಗಂಡು ಕೊಡು-ತೆಗೆದುಕೊಳ್ಳುವಿಕೆಗೆ ಸಾಕ್ಷಿದಾರರ ಸಮೇತ ಬರಸಿದ ಪತ್ರವಾಗಿದೆ. ಇದರ ಬೆನ್ನೆಲ್ಲೆ ಇರುವ ಇನ್ನೋಂದು ಹಸ್ತಪ್ರತಿಯಲ್ಲಿ ೦೭.೦೬.೧೯೪೫ ರಲ್ಲಿ ಓರಣವಾಗಿರುವ ಕಡತವು ನೈಜವಾದದ್ದು ಮತ್ತು ನಂಬಲು ಅರ್ಹವಾದದ್ದು ಎಂದು ಒಪ್ಪಿಗೆ ನೀಡಿ ಸಾಕ್ಷಿದಾರರು ಸಹಿ ಮಾಡಲಾಗಿದೆ.
ಮೇಲ್ಕಂಡ ಎರಡು ಹಸ್ತಪ್ರತಿಗಳಲ್ಲಿಯು ಸಾಕ್ಷಿಸಮೇತವಾಗಿ, ವ್ಯವಸ್ಥಿತ ಕಟ್ಟುಗಳಿಗೆ ಜಾತಿ/ಸಮುದಾಯದ ಮುಖಂಡರು ಒಳಪಟ್ಟು ಆ ಮೂಲಕ ಒಪ್ಪಿಗೆ ಸೂಚಿಸಿ ಬರೆದುಕೊಟ್ಟ ಪತ್ರಗಳಾಗಿದ್ದು, ಎರಡು ಹಸ್ತಪ್ರತಿಗಳಲ್ಲಿ ಬರವಣಿಗೆಯ ಶೈಲಿ, ವಿನ್ಯಾಸಗಳಲ್ಲಿ ಭಿನ್ನತೆ ಇದ್ದು, ಒಬ್ಬರಿಗಿಂತ ಹೆಚ್ಚು ಬರವಣಿಗೆಗಾರರು ಇದ್ದರೆಂದು ತಿಳಿಯುತ್ತದೆ. ಮೊದಲನೇ ಹಸ್ತಪ್ರತಿಯಲ್ಲಿ ಇಸವಿಯ ಕೊರತೆ ಇದ್ದು, ಎರಡನೇ ಹಸ್ತಪ್ರತಿಯಲ್ಲಿ ದಿ:೦೭.೦೬.೧೯೪೫ ಎಂದೂ ನಮೂದಾಗಿದ್ದು, ಭಾರತದ ಸ್ವಾತಂತ್ರö್ಯದ ಪೂರ್ವದಲ್ಲೇ ಉಪ್ಪಾರರ ಕಟ್ಟೇಮನೆ ಆಚರಣೆ ಶಾಶ್ವತವಾಗಿತ್ತು ಮತ್ತು ಪ್ರಬಲವಾಗಿತ್ತು ಎನ್ನುವುದಕ್ಕೆ ಈ ಅಪ್ರಕಟಿತ ಹಸ್ತಪ್ರತಿಗಳೆ ಕಾರಣ. ಇತರೆ ಜಾತಿ-ಬುಡಕಟ್ಟುಗಳಲ್ಲಿರುವಂತೆ ಉಪ್ಪಿನ ಕಾರ್ಯ ಮಾಡುತ್ತಿದ್ದ ಉಪ್ಪಾರರಲ್ಲಿಯು ಸಹ ಬುಡಕಟ್ಟು ಆಚರಣೆಗಳು ನಿಯಮಬದ್ಧ ಕಟ್ಟುಪಾಡುಗಳಿಂದ ಒಟ್ಟುಗೂಡಿ ಸಾಗುತ್ತಿದ್ದವು ಎಂಬುದನ್ನು ಹಸ್ತಪ್ರತಿಗಳಿಂದ ತಿಳಿದುಕೊಳ್ಳಬಹುದಾಗಿದೆ.
ಸಮಾರೋಪ :
ಜಾತಿ ಎಂಬುವುದು ಮಾನವ ಬದುಕಿನ ನೆಲೆಯಲ್ಲಿ ಮೂಡಿದ ಚೌಕಟ್ಟು. ಈ ಜಾತಿ ಸಂಕೋಲೆಗೆ ತನ್ನದೆ ಆದ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ನಂಬಿಕೆ, ಕಾನೂನುಗಳನ್ನು ರಚಿಸಿಕೊಂಡು ಸಮಾಜದ ವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಸಾಗುವ ಒಂದು ವ್ಯವಸ್ಥೆ. ಈ ವ್ಯವಸ್ಥೆಯ ಒಂದು ಭಾಗವಾಗುವ ಕಟ್ಟೇಮನೆ ತನ್ನದೆ ಆದ ಸ್ಥಾನವನ್ನು ಹೊಂದಿದ್ದು, ಜಾತಿ-ಬುಡಕಟ್ಟು-ಸಮುದಾಯದ ಜನರು ತಪ್ಪು ದಾರಿ, ಶುಭ-ಅಶುಭ ಕಾರ್ಯಗಳ ಮುಂದಾಳತ್ವ, ನಿರ್ವಹಣೆ ಮುಂತಾದ ಹಲವಾರು ಕಾರ್ಯ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಕೈ ಜೋಡಿಸಿ ಸುವ್ಯವಸ್ಥಿತ ಸಮಾಜವನ್ನು ಮುಂದುವರೆಸಿಕೊಂಡು ಹೋಗುವುದು ಕಟ್ಟೇಮನೆಯ ಜವಾಬ್ದಾರಿಯಾಗಿತ್ತು. ಸ್ವಾತಂತ್ರಯ ಪೂರ್ವದಲ್ಲಿ ಕಾನೂನು, ನ್ಯಾಯಾಲಯಗಳು ಸುವವ್ಯಸ್ಥೆಯಾಗಿ ಇರದ ಕಾರಣ ಪ್ರತಿಯೊಂದು ಜಾತಿ-ಸಮುದಾಯಗಳಲ್ಲಿ ಕಟ್ಟೇಮನೆ ನ್ಯಾಯಾಂಗವ್ಯವಸ್ಥೆ ಗಟ್ಟಿಯಾಗಿ ನೆಲೆಯೂರಿತ್ತು. ಭಾರತದ ಸ್ವಾತಂತ್ರö್ಯದ ಪೂರ್ವದಿಂದ ಹಿಡಿದು ಪ್ರಸ್ತುತದವರೆಗೂ ಉಪ್ಪಾರರ ಕಟ್ಟೇಮನೆಯ ಅಸ್ಥಿತ್ವ ಬಹಳ ಪ್ರಬಲವಾಗಿ ಈಡೀ ಸಮಾಜವನ್ನು ನಿಗಧಿತ ಕಟ್ಟುಪಾಡುಗಳಿಗೆ ಬಂದಿಸುತ್ತಾ ಸುವ್ಯವಸ್ಥಿತ ಸಮಾಜ ಹಾಗು ಸುಗಮ ಕುಂಟುಂಬದ ಪರಿಕಲ್ಪನೆಯನ್ನು ಪಡೆದುಕೊಂಡು ಜೀವನ ಸಾಗಿಸಲಾಗುತ್ತಿತ್ತು. ಇಂದಿಗೂ ಈ ಪದ್ಧತಿ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಜೀವಂತವಾಗಿದೆ.
* ಮೇಲ್ಕಂಡ ಲೇಖನ ರಚಿಸಲು ಸೂಕ್ತ ಸಲಹೆ ಮತ್ತು ಸಹಕಾರ ನೀಡಿದ
ವಕ್ತೃಗಳ ವಿವರ :
ಕ್ರ.ಸಂ |
ಹೆಸರು |
ತಂದೆ ಹೆಸರು |
ಗ್ರಾಮದ ಹೆಸರು |
ತಾಲ್ಲೂಕು |
ಜಿಲ್ಲೆ |
೧ |
ರಂಗನಾಥ ಎ ಆರ್ |
ರಾಮಲಿಂಗಪ್ಪ |
ಅಂತರಘಟ್ಟೆ |
ಕಡೂರು |
ಚಿಕ್ಕಮಗಳೂರು |
೨ |
ದೊಡ್ಮನೆ ಕರಿಯಪ್ಪ |
ದೊಡ್ಮನೆ ನರಸಿಂಹಪ್ಪ |
ಮುಗಳಿಕಟ್ಟೆ |
ಕಡೂರು |
ಚಿಕ್ಕಮಗಳೂರು |
೩ |
ರಂಗನಾಥ ಎ ಆರ್ |
ರಾಮಲಿಂಗಪ್ಪ |
ಅಂತರಘಟ್ಟೆ |
ಕಡೂರು |
ಚಿಕ್ಕಮಗಳೂರು |
೪ |
ಮೋತಿಲಾಲ್ ಗಿರೀಶ್ |
ಚೆನ್ನಕೇಶವಯ್ಯ ಎಂ ಜಿ |
ಬಾಗೂರು |
ಹೊಸದುರ್ಗ |
ಚಿತ್ರದುರ್ಗ |
5 |
ಕೃಷ್ಣಮೂರ್ತಿ.ಕೆ |
ಕಿರಾಳಪ್ಪ |
ಅಂತರಘಟ್ಟೆ |
ಕಡೂರು |
ಚಿಕ್ಕಮಗಳೂರು |
ಕೊನೆ ಟಿಪ್ಪಣಿಗಳು:
ಪರಾಮರ್ಶನ ಗ್ರಂಥಗಳು