Tumbe Group of International Journals

Full Text


ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು ಒಂದು ಐತಿಹಾಸಿಕ ಅಧ್ಯಯನ

ಡಾ.ಲೋಕೇಶ

ಸಹಾಯಕ ಪ್ರಾಧ್ಯಾಪಕರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು,

ತುಮಕೂರು, ಕರ್ನಾಟಕ

Email: drlokeshrangu@gmail.com


Abstract

ತುಮಕೂರು ಜಿಲ್ಲೆಯು ಶೈಕ್ಷಣಿಕ ಕೇಂದ್ರವಾಗಿ, ಪ್ರವಾಸಿ ಕೇಂದ್ರವಾಗಿ ಹಾಗೂ ಕಲ್ಪತರು ನಾಡೆಂದೇ ಪ್ರಸಿದ್ದವಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ಕೋಟೆ, ಅಮೂಲ್ಯ ಗಿಡಮೂಲಿಕೆಗಳನ್ನು ಹೊಂದಿರುವ ಸಿದ್ದರಬೆಟ್ಟ, ಕುಣಿಗಲ್ ಬಳಿಯ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇಗುಲ, ನಾಡಿಗೆ ತೆಂಗು ಒದಗಿಸುವ ತಿಪಟೂರು. ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನ, ದೇವರಾಯನ ದುರ್ಗದ ನರಸಿಂಹಸ್ವಾಮಿ, ಪಾವಗಡ ಶನಿಮಹಾತ್ಮ ದೇವಸ್ಥಾನ ಮುಂತಾದ ಧಾರ್ಮಿಕ ಕ್ಷೇತ್ರಗಳು ನೆನಪಾಗುತ್ತವೆ. ಪ್ರಸ್ತುತ ಅಧ್ಯಯನವು ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು ಪರಿಚಯಿಸುವುದಾಗಿದೆ. ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳ ಹೆಚ್ಚು ಜಾಗೃತಿ ಮೂಡಿಸಲು ಅಗತ್ಯವಾದ ಮೂಲಭೂತ ಸೌಲಭ್ಯಗಳು ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ತುಮಕೂರು ಜಿಲ್ಲೆಯನ್ನು ಪ್ರಖ್ಯಾತಗೊಳಿಸುವುದಾಗಿದೆ.

ಪ್ರಮುಖ ಪದಗಳು: ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು, ಕಲ್ಪತರು ನಾಡು.

ಪೀಠಿಕೆ

ಪ್ರವಾಸೋದ್ಯಮದ ಇತಿಹಾಸವು ಬಹಳ ಪುರಾತನವಾದ್ದದಾರೂ ಇತ್ತೀಚಿನ ದಿನಗಳಲ್ಲಿ ಇದು ಒಂದು ಉದ್ಯಮವಾಗಿ ತ್ವರಿತಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಮಾನವನು ಆಹಾರ, ವಸತಿ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಪ್ರವಾಸ ಕೈಗೊಳ್ಳುತ್ತಾನೆ. ಮನುಷ್ಯನಿಗೆ ಪ್ರವಾÀಸವು ಆತನ ಮನಸ್ಸಿಗೆ ಉಲ್ಲಾಸವನ್ನು ನೀಡಿ ತನ್ನ ಒತ್ತಡಗಳ ನಿವಾರಣೆಯೊಂದಿಗೆ ಹೊಸ ಚೈತನ್ಯವನ್ನು ಸಹ ನೀಡುತ್ತದೆ. ಕೆಲವರಿಗೆ ಪ್ರವಾಸ ಎಂದರೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದಾಗಿದ್ದು, ಈ ರೀತಿಯ ಭಾವನೆಗಳು ವಿದೇಶಿಯರಲ್ಲೂ ಕಾಣಬಹುದು.

            ಭಾರತವು ಹಲವಾರು ಪವಿತ್ರ ಕ್ಷೇತ್ರಗಳು, ಕಲೆ ಮತ್ತು ವಾಸ್ತುಶಿಲ್ಪ ಕೇಂದ್ರಗಳು, ಐತಿಹಾಸಿಕ ಸ್ಮಾರಕಗಳು, ಗಿರಿಧಾಮಗಳು ಹಾಗೂ ವನ್ಯಜೀವಿಧಾಮಗಳನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಭಾರತ ವೈವಿದ್ಯತೆ ಮತ್ತು ವಿಭಿನ್ನ ಸಂಸ್ಕøತಿಯ ನೆಲೆಯಾಗಿ ಬಹಳಷ್ಟು ವಿದೇಶಿ ಪ್ರವಾಸಿಗರನ್ನು ಆರ್ಕಷಿಸುತ್ತದೆ. ಹಾಗೆಯೇ ಈ ರೀತಿಯ ಎಲ್ಲಾ ವೈವಿದ್ಯತೆಯನ್ನು ಒಗ್ಗೂಡಿಸಿಕೊಂಡಿರುವ ಕರ್ನಾಟಕವು ಸಹ ವೈವಿದ್ಯಮಯವಾದ ಹವಾಮಾನದಿಂದ ಕೂಡಿದ್ದು, ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.

ಕರ್ನಾಟಕದ ಕೆಲವು ಭಾಗಗಳು ದೇವಾಲಯಗಳಿಗೆ, ಹಳೆಯ ಕೋಟೆ-ಕೊತ್ತಲ, ಸ್ಮಾರಕಗಳಿಗೆ, ಜಲಪಾತಗಳು, ಕಡಲ ತೀರ ಪ್ರದೇಶಗಳಿಗೆ, (ಬೀಚ್) ದಟ್ಟ ಆರಣ್ಯಗಳಿಗೆ ಜನಪ್ರಿಯವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಂತಹ ಪ್ರವಾಸಿ ಆಕರ್ಷಣಾ ತಾಣಗಳಲ್ಲಿ ತುಮಕೂರು ಜಿಲ್ಲೆಯು ಸಹ ಒಂದಾಗಿದೆ. ಈ ಜಿಲ್ಲೆಯು ಪುರಾತನ ದೇವಾಲಯಗಳು, ಕೋಟೆ-ಕೊತ್ತಲಗಳು ಮತ್ತು ಐತಿಹಾಸಿಕ ಸ್ಮಾರಕಗಳಿಗೆ ಪ್ರಸಿದ್ಧಿ ಪಡೆದಿದೆ.

ತುಮಕೂರು ಜಿಲ್ಲೆಯ ಪರಿಚಯ

            ಕಲ್ಪತರು ನಾಡು, ವಿದ್ಯಾ ಕ್ಷೇತ್ರಗಳ ಬೀಡು, ನಡೆದಾಡುವ ದೇವರ ಬೀಡು, ತೆಂಗು ಬೆಳೆಯ ಸ್ವರ್ಗ ಎಂದೆಲ್ಲ ಖ್ಯಾತಿ ಗಳಿಸಿರುವ ತುಮಕೂರು ಜಿಲ್ಲೆ ಪ್ರವಾಸೋಧ್ಯಮವಾಗಿ ಹಾಗೂ ಪ್ರವಾಸಿ ತಾಣಗಳಿಗೆ ಪ್ರಮುಖ ಕ್ಷೇತ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ತುಮಕೂರು ಜಿಲ್ಲೆಯನ್ನು 1966ರಲ್ಲಿ ನಂದಿದುರ್ಗಾ ವಿಭಾಗದಿಂದ ಬೇರ್ಪಡಿಸಿ ನಾಮಕರಣ ಮಾಡಲಾಯಿತು. ತುಮಕೂರು ಜಿಲ್ಲೆಯು ಉತ್ತರ ಅಕ್ಷಾಂಶ 120 450 ಮತ್ತು 140 200 ಪಶ್ಚಿಮಾಭಿಮುಖವಾಗಿ 760 200 ಮತ್ತು 770 310 ಅಕ್ಷಾಂಶಗಳನ್ನು ಒಳಗೊಂಡಿದೆ. ತುಮಕೂರು ಜಿಲ್ಲೆಯು ಭೌಗೋಳಿಕವಾಗಿ 10648 ಚ.ಕಿ.ಮೀ ವ್ಯಾಪ್ತಿಯ ವಿಸ್ತಾರವನ್ನು ಒಳಗೊಂಡಿದೆ.

            2011ರ ಜನಗಣತಿಯಂತೆ ತುಮಕೂರು ಜಿಲ್ಲೆಯ ಒಟ್ಟು ಜನಸಂಖ್ಯೆಯು 2678980ರಷ್ಟಿದ್ದು, ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 2079902ರಷ್ಟು ಜನಸಂಖ್ಯೆಯನ್ನು, ನಗರ ಪ್ರದೇಶದಲ್ಲಿ 599078ರಷ್ಟು ಜನಸಂಖ್ಯೆಯನ್ನು ಹೊಂದಿದೆ. 1350594ರಷ್ಟು ಪುರುಷರು ಹಾಗೂ 1328386ರಷ್ಟು ಮಹಿಳೆಯರನ್ನು ಒಳಗೊಂಡಿದೆ. ಲಿಂಗಾನುಪಾತ ಪ್ರಮಾಣವು 1000 ಪುರುಷರಿಗೆ 984ರಷ್ಟು ಪುರುಷರಿರುವುದು ಕಂಡುಬಂದಿದೆ.

ಅಧ್ಯಯನದ ಉದ್ದೇಶಗಳು

ಪ್ರಸ್ತುತ ಅಧ್ಯಯನವು ಈ ಕೆಳಕಂಡಂತೆ ಕೆಲವು ಪ್ರಮುಖ ಉದ್ಧೇಶಗಳನ್ನು ಒಳಗೊಂಡಿದೆ.

  1. ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಅವಲೋಕನ ಮಾಡುವುದು.
  2. ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು, ಪ್ರಾಕೃತಿಕ ಮತ್ತು ವನ್ಯಜೀವಿ ಸಂರಕ್ಷಣಾ ಕೇಂದ್ರಗಳು ಹಾಗೂ ಇತರೆ ಆಕರ್ಷಣೀಯ ತಾಣಗಳನ್ನು ಪರಿಚಯಿಸುವುದು.

ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು

ಮಾರ್ಕೋನಹಳ್ಳಿ ಡ್ಯಾಂ: ಮಾರ್ಕೋನಹಳ್ಳಿಯ ಡ್ಯಾಂನ್ನು ಶಿಂಷಾ ನದಿಗೆ ಕುಣಿಗಲ್ ಬಳಿ ನಿರ್ಮಿಸಲಾಗಿದೆ. ಇದನ್ನು ಮೈಸೂರಿನ ಒಡೆಯರಾದ ನಾಲ್ಕನೇಯ ಕೃಷ್ಣರಾಜ ಒಡೆಯರ್‍ರವರು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕಟ್ಟಿಸಿದರು.

ಪಾವಗಡ ಕೋಟೆ: ಪಾವಗಡ ಕೋಟೆಯು ಪಾವಗಡ ತಾಲ್ಲೂಕಿನ ಕೇಂದ್ರಸ್ಥಾನದಲ್ಲಿದೆ. ಪಾವಗಡ ಕೋಟೆಯು 770 ಮೀಟರ್‍ಗಳಷ್ಟು ಎತ್ತರವಾಗಿದ್ದು, ಇದನ್ನು 14ನೇ ಶತಮಾನದಲ್ಲಿ ವಿಜಯನಗರ ಕಾಲದಲ್ಲಿ ಕಟ್ಟಲಾಯಿತು. ಈ ಕೇಂದ್ರಸ್ಥಾನದಲ್ಲಿ ಶನಿಮಹಾತ್ಮ ದೇವಾಲಯವಿದ್ದು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಲಕ್ಷಾಂತರ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಮಧುಗಿರಿ ಕೋಟೆ: ತುಮಕೂರು ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯಾಗಿ ಮಧುಗಿರಿ ಜಿಲ್ಲೆ ಹೆಚ್ಚು ಪ್ರಖ್ಯಾತಿ ಪಡೆದಿದೆ. ಮಧುಗಿರಿ ಕೋಟೆಯು ಏಕಶಿಲಾ ಬೆಟ್ಟಕ್ಕೆ ಪ್ರಸಿದ್ದ ಪಡೆದಿದೆ. ಕಡಿದಾದ ಮೆಟ್ಟಿಲುಗಳಿಂದ ಕೂಡಿದ ಬೆಟ್ಟದ ತುದಿಯ ಮೇಲೆ ಸೈನಿಕರ ವಿಶ್ರಾಂತಿ ಗೃಹ ಹಾಗೂ ವೀಕ್ಷಣಾ ಕಟ್ಟಡಗಳನ್ನು ಒಳಗೊಂಡಿದ್ದು, ಮಧುಗಿರಿ ಕೋಟೆಯಿಂದ ಪಾವಗಡ ಕೋಟೆಗೆ ಸುರಂಗ ಮಾರ್ಗವನ್ನು ಕೊರೆಯಲಾಗಿದ್ದು, ಪ್ರಸ್ತುತ ಅದು ಮುಚ್ಚಲ್ಪಟ್ಟಿದ್ದು, ಪ್ರವಾಸಿಗರಿಗೆ ಪ್ರವೇಶಿಸದಂತೆ ಮಾಡಲಾಗಿದೆ.

ಬೋರನ ಕಣಿವೆ: ಸುವರ್ಣಮುಖಿ ನದಿಯ ಅಡ್ಡಲಾಗಿ ನಿರ್ಮಿಸಿದ ಕಣಿವೆಯೇ ಸುವರ್ಣಮುಖಿ ಕಣಿವೆ. ಇದು ಪಿಕ್‍ನಿಕ್ ಸ್ಥಳವಾಗಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ.

ದೇವರಾಯನ ದುರ್ಗ: ಯೋಗ ಲಕ್ಷ್ಮೀನರಸಿಂಹಸ್ವಾಮಿಯ ದೇವಾಲಯ, ಭೋಗ ನರಸಿಂಹಸ್ವಾಮಿ ಮತ್ತು ಸಂಜೀವರಾಯ ದೇವಾಲಯಗಳಿಗೆ ಪ್ರಸಿದ್ದ ಪ್ರೇಕ್ಷಣೀಯ ಸ್ಥಳವಾಗಿ ದೇವರಾಯನ ದುರ್ಗ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ನರಸಿಂಹಸ್ವಾಮಿ ದೇವಾಲಯದ ಬಳಿ ಮೂರು ತೀರ್ಥ ಕೇಂದ್ರಗಳನ್ನು ಗುರುತಿಸಲಾಗಿದೆ. ನರಸಿಂಹ ತೀರ್ಥ, ಪರಶಾರ ತೀರ್ಥ ಮತ್ತು ಪಾದ ತೀರ್ಥ.

ನಾಮದ ಚಿಲುಮೆ: ದೇವರಾಯನದುರ್ಗದ ಬಳಿ ನಾಮದ ಚಿಲುಮೆಯನ್ನು ನೋಡಬಹುದು. ಇಲ್ಲಿ ವರ್ಷಪೂರ್ತಿ ಚಿಲುಮೆಯಲ್ಲಿ ನೀರು ಚಿಮ್ಮುತ್ತಿರುವ ದೃಶ್ಯವನ್ನು ಕಾಣಬಹುದು. ಶ್ರೀರಾಮನ ವನವಾಸದ ಸಮಯದಲ್ಲಿ ಸೀತೆಗೆ ಬಾಯಾರಿಕೆಯಾದಾಗ ತನ್ನ ಬಿಲ್ಲಿನಿಂದ ಹೊಡೆದ ರಂದ್ರನಿಂದ ನೀರನ್ನು ಹೊರ ತರಲಾಯಿತೆಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಉದ್ಯಾವನದೊಂದಿಗೆ ಒಂದು ಜಿಂಕೆ ಪಾರ್ಕ್‍ನ್ನು ಹೊಂದಿದೆ.

ಹುಲಿಯೂರು ದುರ್ಗ: ಕೆಂಪೇಗೌಡರ ಹಳೇಯ ಕೋಟೆಯಾಗಿ ಹುಲಿಯೂರು ದುರ್ಗ ಪ್ರಖ್ಯಾತಿಯನ್ನು ಪಡೆದಿದೆ. ಇದು ಸಮುದ್ರಮಟ್ಟದಿಂದ 2771 ಅಡಿಗಳಷ್ಟು ಎತ್ತರದಲ್ಲಿದ್ದು, ಈ ಸ್ಥಳವನ್ನು ಕಣಜ, ಬ್ಯಾರಕ್ ಹಾಗೂ ಆಯುಧಗಳ ಸಂಗ್ರಹ ತಾಣವಾಗಿ ಪ್ರಖ್ಯಾತಗೊಂಡಿದೆ.

ಹುತ್ತರಿದುರ್ಗ: ಇದು ಸಮುದ್ರಮಟ್ಟದಿಂದ 3808 ಅಡಿಗಳಷ್ಟು ಎತ್ತರದಲ್ಲಿದೆ. ಹುತ್ತರಿದುರ್ಗದ ತುದಿಯಲ್ಲಿ ಶಂಕರೇಶ್ವರ ದೇವಾಲಯವಿದೆ.

ಚನ್ನಿರಾಯನ ದುರ್ಗ: ಇದು ಸಮುದ್ರಮಟ್ಟದಿಂದ 3734 ಅಡಿಗಳಷ್ಟು ಎತ್ತರದಲ್ಲಿದ್ದು, ಹಳೆಯ ಕೋಟೆಯೆಂದೇ ಪ್ರಸಿದ್ದಿ ಪಡೆದಿದೆ. ಇಲ್ಲಿ ಕೆರೆ ಮತ್ತು ಈಶ್ವರನ ದೇವಾಲಯವಿದೆ.

ಶಿರಾ: ಶಿರಾ ಪಟ್ಟಣ ಮತ್ತು ಕೋಟೆಯನ್ನು ರಂಗಪ್ಪನಾಯಕ ಎಂಬುವವರು ಕಟ್ಟಿಸಿದನು. ಸಿರಾ ಕೋಟೆಯನ್ನು ನಂತರ ರಣದುಲ್ಲಾ ಖಾನನು ಆಳ್ವಿಕೆಗೆ ಒಳಪಡಿಸಿಕೊಂಡು ಬಿಜಾಪುರ ಸುಲ್ತಾನನ ನಿಯಮದಂತೆ ಜುಮ್ಮಾ ಮಸೀದಿ, ಮಲ್ಲಿಕ್ ರಿಹಾನ್ ಶಿಲೆ ಹಾಗೂ ಇಬ್ರಾಹಿಂ ರೋಜಾ ಗಾರ್ಡನ್‍ನೊಂದಿಗೆ ಹಿಂದೂ ದೇವಾಲಯಗಳನ್ನು ಕಟ್ಟಿಸಿದರು.

ಕಂದಿಕೆರೆ: ಪಾಳುಬಿದ್ದ ಕೋಟೆಯ ಸ್ಥಳವಾಗಿ ಗೋಪಾಲಕೃಷ್ಣ ದೇವಾಲಯವನ್ನು ಹೊಂದಿದೆ.

ಮಿಡಿಗೇಶಿ: ಈ ಸ್ಥಳವು ಬೆಟ್ಟಗಳಿಂದ ಕೋಟೆಯನ್ನು ನಿರ್ಮಿಸಿಕೊಂಡ ಸ್ಥಳವಾಗಿದ್ದು, ವೆಂಕಟರಾಮನ ದೇವಾಲಯವು ಇಲ್ಲಿ ಪ್ರಸಿದ್ದವಾಗಿದೆ.

ನಾಗಲಾಪುರ: ಇಲ್ಲಿ ಚನ್ನಕೇಶವ ಮತ್ತು ಕೇದರೇಶ್ವರ ದೇವಾಲಯಗಳು ಪ್ರಸಿದ್ದವಾಗಿವೆ.

ನಿಡಗಲ್: ನಿಡಗಲ್ ಸಮುದ್ರಮಟ್ಟದಿಂದ 3769 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶವನ್ನು ಕರ್ನಾಟಕದ ದೇವಾಲಯದ ತೊಟ್ಟಿಲು ಎಂದೇ ಕರೆಯುತ್ತಾರೆ.

ತುಮಕೂರು ಜಿಲ್ಲೆಯ ಧಾರ್ಮಿಕ ಕೇಂದ್ರಗಳು

            ತುಮಕೂರು ಜಿಲ್ಲೆಯ ಧಾರ್ಮಿಕ ಕೇಂದ್ರಗಳಾಗಿ ಸಿದ್ದಗಂಗಾ ದೇವಾಲಯ, ಶ್ರೀ ಸಿದ್ದಗಂಗಾ ಮಠ, ಲಕ್ಷ್ಮೀಕಾಂತೇಶಸ್ವಾಮಿ ದೇವಾಲಯ, ಅಮೃತ್ತೂರಿನ ಚನ್ನಕೇಶವ ಮತ್ತು ಪಟ್ಟಲದಮ್ಮ ದೇವಾಲಯ, ಬಾಸ್ಮಂಗಿ ಬಾಸ್ಮಂಗೇಶ್ವರ ದೇವಾಲಯ, ಅರಳಗುಪ್ಪೆ ಕೈಲೇಶ್ವರ ದೇವಾಲಯ, ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ, ಚನ್ನಕೇಶವ ದೇವಾಲಯ-ಕೈದಾಳ, ತುರುವೇಕೆರೆ-ಬ್ರಾಹ್ಮಣರ ಅಗ್ರಹಾರ, ಸಿಬೀ ನರಸಿಂಹಸ್ವಾಮಿ ದೇವಾಲಯ, ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯ, ಚಿಕ್ಕನಾಯಕನಹಳ್ಳಿ-ವೆಂಕಟೇಶ್ವರ ದೇವಾಲಯ, ರೇಣುಕಾದೇವಿ ದೇವಾಲಯ ಹಾಗೂ ಆಂಜನೇಯ ದೇವಾಲಯ, ಗುಳೂರು ಗಣೇಶ, ಶ್ರೀರಂಗನಾಥಸ್ವಾಮಿ ದೇವಾಲಯ-ಹೊಳವನಹಳ್ಳಿ, ಕಾಳೇಶ್ವರ ದೇವಾಲಯ-ಹೊಸಹಳ್ಳಿ, ಹೊಯ್ಸಳ ಶೈಲಿಯ ರಂಗನಾಥಸ್ವಾಮಿ ದೇವಾಲಯ-ಹುಲಿಯೂರು, ದ್ರಾವಿಡ ಶೈಲಿಯ ರಾಮ ದೇವಾಲಯ-ಕಡಬಾ, ಭೈರವೇಶ್ವರ ದೇವಾಲಯ-ಕಡಸೂರು, ಸಂಕೇಶ್ವರ ದೇವಾಲಯ-ಕೆರೆಗೋಡಿ, ಶ್ರೀಗಂಗಾಧರೇಶ್ವರ ಗುಹೆ-ಕೊರಟಗೆರೆ, ಹೊಯ್ಸಳ ಕಾಲದ ನರಸಿಂಹ ದೇವಾಲಯ, ಸೋಮೇಶ್ವರ ದೇವಾಲಯ, ವೆಂಕಟರಾಮ ದೇವಾಲಯ, ಶಿವರಾಮೇಶ್ವರ ದೇವಾಲಯ ಮತ್ತು ಪದಮೇಶ್ವರ ದೇವಾಲಯ-ಕುಣಿಗಲ್, ಸಿದ್ದರಬೆಟ್ಟ-ಸಂತ ಗೋಸಾಲ ಸಿದ್ದೇಶ್ವರಸ್ವಾಮಿಯವರ ಸಮಾಧಿ, ಕಲ್ಲಿನ ಗುಹಾಂತರ ದೇವಾಲಯಗಳು, ಚನ್ನಕೇಶವ ದೇವಾಲಯ-ತಂಡಗ, ಬಸವ ದೇವಾಲಯ, ಗಂಗಾಧರೇಶ್ವರ ದೇವಾಲಯ, ಚನ್ನಗಿರಾಯ ದೇವಾಲಯ ಮತ್ತು ಶಂಕರೇಶ್ವರ ದೇವಾಲಯ-ತುರುವೇಕೆರೆ, ಲಕ್ಷ್ಮೀನರಸಿಂಹ ದೇವಾಲಯ ಮತ್ತು ಬಾಲಲಿಂಗೇಶ್ವರ ದೇವಾಲಯ-ವಿಜ್ನಸಂತೆ ಹಾಗೂ ಗದ್ದೆ ಮಲ್ಲೇಶ್ವರ ದೇವಾಲಯ ಮತ್ತು ಚನ್ನಬಸವೇಶ್ವರ ದೇವಾಲಯ-ಗುಬ್ಬಿ ಪ್ರಸಿದ್ದ ಧಾರ್ಮಿಕ ಕೇಂದ್ರಗಳಾಗಿವೆ.

ಇತರೆ ಪ್ರಸಿದ್ದ ತಾಣಗಳು

            ತುಮಕೂರು ಜಿಲ್ಲೆಯು ಶೈಕ್ಷಣಿಕವಾಗಿ, ಪ್ರವಾಸೋದ್ಯಮವಾಗಿ ಹಾಗೂ ಇತರೆ ಪ್ರಸಿದ್ದ ತಾಣಗಳಾಗಿ ತುಮಕೂರು ಜಿಲ್ಲೆಯನ್ನು ಕಾಣಬಹುದು.

ಪಾವಗಡ ಸೋಲಾರ್ ಪಾರ್ಕ್: ವಿಶ್ವದ ಅತ್ಯಂತ ಎತ್ತರದ ಸೋಲಾರ್ ಪಾರ್ಕ್ ಎಂದೇ ಪಾವಗಡ ತಾಲ್ಲೂಕಿನಲ್ಲಿ ಸುಮಾರು 13,000 ಎಕರೆ ಪ್ರದೇಶದಲ್ಲಿ 2018ರಲ್ಲಿ ಪ್ರಾರಂಭವಾಯಿತು. ಈ ಪಾರ್ಕ್‍ನಿಂದ 2000 ಮೆ.ವ್ಯಾಟ್ ವಿದ್ಯುತ್‍ನ್ನು ಉತ್ಪಾದಿಸಲಾಗುತ್ತದೆ.

ಭಾರತ ಆಹಾರ ಪಾರ್ಕ್: ತುಮಕೂರು ನಗರದ ಸಮೀಪದ ವಸಂತ ನರಸೀಪುರದಲ್ಲಿ ಭಾರತ ಆಹಾರ ಪಾರ್ಕ್‍ನ್ನು ಭಾರತ ಸರ್ಕಾರದ ಆಹಾರ ನಿಗಮ ಹಾಗೂ ಆಹಾರ ಉತ್ಪಾದಿಸುವ ಉದ್ಯಮಗಳನ್ನು ಸ್ಥಾಪಿಸಲಾಗಿದೆ.

ಕೊಕ್ಕರೆ ಬೆಳ್ಳೂರು ಪಕ್ಷಿಧಾಮ: ಕೊಕ್ಕರೆ ಬೆಳ್ಳೂರು ಪಕ್ಷಿಧಾಮವು ಹೆಚ್ಚು ಪ್ರಸಿದ್ದವಾದುದು. ಏಷ್ಯಾದ ಎರಡನೇಯ ಅತಿದೊಡ್ಡ ಬಣ್ಣ ಸಂಗ್ರಹಿತ ಪಕ್ಷಿಧಾಮವಾಗಿ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಅತ್ಯಂತ ಹೆಸರುವಾಸಿಯಾಗಿದೆ.

ಹೀಗೆ ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಹಾಗೂ ಇತರೆ ಪ್ರವಾಸಿ ಕೇಂದ್ರಗಳು ಅತ್ಯಂತ ಪ್ರಮುಖವಾದ ಸ್ಥಳಗಳಾಗಿ ಪ್ರಸಿದ್ಧಿಯನ್ನು ಪಡೆದಿರುವುದನ್ನು ಕಾಣಬಹುದು.

ಅಧ್ಯಯನದ ಸಲಹೆಗಳು

ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸಂಶೋಧಕರು ತಮಗೆ ಕ್ಷೇತ್ರಕಾರ್ಯದಲ್ಲಿ ಗಮನಿಸಿದಂತೆ ಈ ಕೆಳಕಂಡಂತೆ ಕೆಲವು ಮುಖ್ಯ ಸಲಹೆಗಳನ್ನು ನೀಡಲಾಗಿದೆ.

  1. ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳನ್ನು ಕುರಿತು ಹೆಚ್ಚು ಪ್ರಸಿದ್ದಿ ಪಡೆಯಲು ಕೆಲವು ಮೂಲಭೂತ ಸೌಕರ್ಯಗಳು, ಸಾರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಜನಪ್ರಿಯಗೊಳಿಸಬೇಕಾಗಿದೆ.
  2. ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಹೆಚ್ಚು ಪ್ರಸಾರ ಮಾಡುವುದರ ಮೂಲಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದು.
  3. ಕರ್ನಾಟಕ ಸಾರಿಗೆ ನಿಗಮ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಸೂಕ್ತವಾದ ಸಾರಿಗೆ ಸೌಲಭ್ಯವನ್ನು ಒದಗಿಸುವುದರ ಮೂಲಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವುದು.
  4. ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟವನ್ನು ಪ್ರವೇಶಿಸಲು ಎಲ್ಲರಿಗೂ ಅವಕಾಶ ನೀಡುವಂತೆ ಸೂಕ್ತವಾದ ರ್ಯಾಂಪಿಂಗ್ ಸೌಲಭ್ಯವನ್ನು ಒದಗಿಸುವುದರ ಮೂಲಕ ಹೆಚ್ಚು ಜನಪ್ರಿಯಗೊಳಿಸುವುದು.

ಉಪಸಂಹಾರ

ಪ್ರವಾಸೋದ್ಯಮ ಜಗತ್ತಿನಾದ್ಯಂತ ಬೃಹತ್ ಉದ್ಯಮವಾಗಿ ಬೆಳವಣಿಗೆಯಾಗುತ್ತಿರುವ ಕಾಲಘಟ್ಟದಲ್ಲಿ ಹಲವು ವೈಶಿಷ್ಟ್ಯತೆಗಳನ್ನು ನಾವು ಗುರ್ತಿಸಬಹುದಾಗಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಧ್ಯೇಯ ವಾಕ್ಯವಾದ ‘ಒಂದು ರಾಜ್ಯ ಹಲವು ಜಗತ್ತ’ ಎಂಬುದನ್ನು ಬ್ರಾಂಡ್ ಆಗಿ ಮಾಡಿಕೊಂಡು ಹಲವು ವಿಧದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶಗಳನ್ನು ನೀಡುತ್ತಿದೆ. ಹಾಗೆಯೇ ಇಲ್ಲಿನ ಸಂಪದ್ಭರಿತವಾದ ಸಾಂಸ್ಕøತಿಕ ಪರಂಪರೆ ಹಾಗೂ ಅಸಂಖ್ಯ ಸ್ವಾಭಾವಿಕ ಕೊಡುಗೆಗಳನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಮೂರು ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳಾದ ಹಂಪಿ, ಪಟ್ಟದಕಲ್ಲು, ಕರ್ನಾಟಕ ಪಶ್ಚಿಮ ಘಟ್ಟಗಳಿರುವುದು ನಾಡಿಗೆ ಪ್ರವಾಸೋದ್ಯಮದ ಮಹತ್ವವನ್ನು ಸಾರುತ್ತಿವೆ.

ತುಮಕೂರು ಜಿಲ್ಲೆಯು ಪಾರಂಪರಿಕವಾಗಿ ಪ್ರವಾಸೋದ್ಯಮ ಕೇಂದ್ರವಾಗಿ ರಾಜ್ಯದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದರೂ, ಇನ್ನೂ ಸಾಕಷ್ಟು ಪ್ರವಾಸಿಗರಿಗೆ ತುಮಕೂರಿನ ಪ್ರವಾಸಿ ತಾಣಗಳ ಬಗ್ಗೆ ಅರಿವಿಲ್ಲದೆ ಇರುವುದರಿಂದ ಪ್ರವಾಸೋದ್ಯಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಅಭಿವೃದ್ಧಿಯಾಗಿಲ್ಲದಿರುವುದು ಕಂಡುಬಂದಿದೆ. ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು ಶೈಕ್ಷಣಿಕ, ಪ್ರವಾಸೋಧ್ಯಮ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರಸಿದ್ಧಿ ಪಡೆದಿರುವುದನ್ನು ಕಾಣಬಹುದು.

ಪರಾಮರ್ಶನ ಗ್ರಂಥಗಳು

  1. ಅನಂತರಾಮರಾವ್ ಕೆ (ಪ್ರ.ಸಂ)  : ಸುವರ್ಣಕರ್ನಾಟಕ ದರ್ಶನ (50 ಸಂವತ್ಸರಗಳು) ವಿದ್ಯಾಪಬ್ಲಿಷಿಂಗ್ ಹೌಸ್, ಮಂಗಳೂರು, 2006.
  2. ಕೃಷ್ಣರಾವ್ ಎಂ.ವಿ : ಕೇಶವಭಟ್ಟ ಎಂ: ಕರ್ನಾಟಕ ಇತಿಹಾಸ ದರ್ಶನ, ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ, ಬೆಂಗಳೂರು. 1970
  3. ಮರಳು ಸಿದ್ದಯ್ಯ ಎಚ್.ಎಂ: ಸಂಶೋಧನೆಯ ಹೆಜ್ಜೆಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1993
  4. ಚಿದಾನಂದಮೂರ್ತಿ ಎಂ: ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ (ಕ್ರಿ.ಶ.450 ರಿಂದ ಕ್ರಿ.ಶ.1150) ಸ್ವಪ್ನಬುಕ್ ಹೌಸ್, ಬೆಂಗಳೂರು, 2008.
  5. https://www.karnatakatourism.org/tour-item/tumakuru/
  6. https://kannada.oneindia.com/elections/karnataka-assembly-elections2013/constituencies/tumkur-district-assembly-constituency-profile-072571.html.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal