Tumbe Group of International Journals

Full Text


ಅಲೆಮಾರಿ ಬುಡುಕಟ್ಟುಗಳ ನ್ಯಾಯಪದ್ಧತಿ

(The Legitimacy of Nomadic Tribes)

1ಮಂಜುನಾಥ

1ಸಂಶೋಧನಾರ್ಥಿ

ಸಮಾಜಶಾಸ್ತ್ರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ ಹಂಪಿ

ವಿದ್ಯಾರಣ್ಯ, ೫೮೩ ೨೭೬.

ಮೊ.ನಂ: 9481652198

manjuuppar661996@gmail.com


Abstract:           

ನಮ್ಮ ಕಾಲದಲ್ಲಿ ಹಾಗಿತ್ತು ನಿಮ್ಮ ಕಾಲದಲ್ಲಿ ಹೀಗಿದೆ ಎಂಬ ಮಾತುಗಳು ವಿದ್ವಾಂಸಾದಿ ಪಂಡಿತರಿಂದ ಹಿಡಿದು ಜನಮಾನ್ಯರವರೆಗೆ ಹಳೆಯ ವಿಷಯಗಳನ್ನು ಹೊಸ ಸಂಗತಿಗಳ ಜೊತೆಗೆ ತಳುಕು ಹಾಕಿ ನೋಡುವ ಪರಿ ಇಂದು ನಿನ್ನೆಯದಲ್ಲ. ಇಂತಹ ತಳುಕಿನ ತಳಮಳದ ಕುರಿತು ಸ್ಪಷ್ಟತೆ ನೀಡುವುದು ಕಷ್ಟಸಾಧ್ಯ. ಕೆಲವು ಬಾರಿ ಹಳೆಯದನ್ನು ಒಪ್ಪುವ ಇಲ್ಲವೇ ನಯವಾಗಿ ತಿರಸ್ಕರಿಸುವ ಹಾಗೆಯೇ ಹೊಸದನ್ನು ಆಹ್ವಾನಿಸುವ ಇಲ್ಲವೇ ಖಂಡಿಸುವ ಬರೆಹಗಳು ಸಾಕಷ್ಟಿವೆ. ಅದರಲ್ಲಿ ಹಲವು ಪ್ರಬಂಧಗಳ ಅಥವಾ ಲೇಖನಗಳ ಶೀರ್ಷಿಕೆಯು ಮುಖ್ಯವಾಗಿ ಮೂರು ಇಲ್ಲವೇ ನಾಲ್ಕು ಅಂಶವನ್ನು ಒಳಗೊಂಡಿರುತ್ತವೆ. ಪ್ರಸ್ತುತ ಬರೆಹವು ಸಹ ಮೂರು ಮುಖ್ಯಾಂಶ(ಅಲೆಮಾರಿ, ಬುಡುಕಟ್ಟು ಸಮುದಾಯ, ಅಲೆಮಾರಿ ಬುಡುಕಟ್ಟುಗಳು)ಗಳನ್ನು ಒಳಗೊಂಡಿದೆ. ಒಂದೊಂದು ಅಂಶಗಳ ಮೇಲೆ ಒಂದೊಂದು ಬೃಹತ್ ಗ್ರಂಥಗಳನ್ನೇ ಬರೆಯಬಹುದು. ಅಧ್ಯಯನದ ಅನುಕೂಲಕ್ಕಾಗಿ ಮತ್ತು ವಿಷಯ ವಿವರಣೆಯ ಉದ್ದೇಶದಿಂದ ಈ ಮೂರು ಅಂಶಗಳನ್ನು ಮೂರು ಭಾಗಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಲು ಮುಂದಾಗಿರುವೆ. ಬಹುಮುಖ್ಯವಾಗಿ ಕುಮುದಾ ಬಿ ಸುಶೀಲಪ್ಪ, ಮೇತ್ರಿ ಕೆ ಎಂ ಮತ್ತು ಸುದರ್ಶನ್ ಸೆಡ್ಮಾಕಿರವರ ಬರೆಹವನ್ನು ಬಳಸಿಕೊಂಡು ಈ ಲೇಖನವನ್ನು ಸಿದ್ಧಪಡಿಸಿರುತ್ತೇನೆ.

ಪ್ರಮುಖ ಪದಗಳು: ಅಲೆಮಾರಿ, ನ್ಯಾಯಪದ್ಧತಿ, ಬುಡುಕಟ್ಟು, ರಾಜಗೊಂಡ, ಹಕ್ಕಿಪಿಕ್ಕಿ.

ಪೀಠಿಕೆ

ಭಾಗ ೧ : ಅಲೆಮಾರಿಗಳು

ಮಾನವ ಸಮುದಾಯಗಳು ನಡೆದು ಬಂದ ಹಾದಿಯನ್ನು ಗಮನಿಸಿದಾಗ ಆದಿಮಾನವರು ಮೊದಲ ಹಂತದಲ್ಲಿ ಬೇಟೆ ಮತ್ತು ಆಹಾರ ಸಂಗ್ರಹಣೆ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡು ನಂತರ ಎರಡನೆಯ ಹಂತದಲ್ಲಿ ಪಶುಪಾಲನೆಯನ್ನು ಅವಲಂಬಿಸಿ ತಮ್ಮ ಜೀವನವನ್ನು ಸಾಗಿಸುತ್ತಾ ಬಂದರು. ನಂತರದಲ್ಲಿ ಕೃಷಿ, ಕೈಗಾರಿಕೆ ಮುಂತಾದ ಚಟುವಟಿಕೆಯ ಹಂತಗಳಲ್ಲಿ ಹಾದು ಬಂದಿರುವುದನ್ನು ನಾವು ಗಮನಿಸಬಹುದು. ಇದು ಸಮುದಾಯಗಳ ಅಲೆಮಾರಿತನದ ಧೋರಣೆಗೆ ಹಿಡಿದ ಕನ್ನಡಿಯಂತಿದೆ. ಮೊದಲ ಹಂತದಲ್ಲಿ ಇವರು ಕೇವಲ ತಮ್ಮ ಉದರ ಪೋಷಣೆಗಾಗಿ ಕಾಡು ಪ್ರಾಣಿಗಳನ್ನು, ಜಲಚರಗಳನ್ನು ಕೊಂದು ತಿನ್ನಲು ಮತ್ತು ಅದನ್ನು ಹುಡುಕಲು ಅಲೆಮಾರಿತನವನ್ನು ಅನಿವಾರ್ಯವಾಗಿ ಅವಲಂಬಿಸಿದ್ದರು. ಎರಡನೆಯದಾಗಿ ಅವರು ಪಶುಪಾಲನೆಯ ಹಂತಕ್ಕೆ ಬಂದಾಗ ಅವರ ಬದುಕು(ಆಡು, ಕುರಿ, ಎಮ್ಮೆ, ಆಕಳು ಇತ್ಯಾದಿ)ಗಳಿಗಾಗಿ ಅಲೆಮಾರಿತನವನ್ನು ಮುಂದುವರೆಸಿದರು. ಮುಂದೆ ಕಲೆಗಳ ಪ್ರದರ್ಶನಕ್ಕಾಗಿ, ವ್ಯಾಪಾರ ವಹಿವಾಟುಗಳಿಗಾಗಿ, ಭಿಕ್ಷಾಟನೆಗಾಗಿ, ಕೌಶಲ್ಯಗಳ ಉಳಿವಿಗಾಗಿ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಕೆಲವು ಸಮುದಾಯಗಳು ಅಲೆಮಾರಿತನವನ್ನು ತಮ್ಮ ಸಂಗಾತಿಗಳಂತೆ ಜೊತೆಯಾಗಿಸಿಕೊಂಡು ಬಂದವು.

ಬೇರೆ ನುಡಿಗಳಲ್ಲಿ ಅಲೆಮಾರಿ ಪದಕ್ಕಿರುವ ಅರ್ಥ

ನುಡಿಗಳ ಪದಕೋಶದಲ್ಲಿರುವ ಅರ್ಥ

ಪ್ರಾದೇಶಿಕ ನುಡಿಗಳಲ್ಲಿರುವ ಅರ್ಥ

ಭಿಕ್ಷಾ ವೃತ್ತಿಯ ಹಿನ್ನೆಲೆಯಲ್ಲಿ

ಭಕ್ತಿಯ ಹಿನ್ನೆಲೆಯಲ್ಲಿ

ಇಂಗ್ಲೀಷ್

ನೊಮ್ಯಾಡ್

ದೇಶ ಸಂಚಾರಿಗಳು

ಕನ್ನಡದಲ್ಲಿ ಭಿಕ್ಷುಕ

ಗೋಸಾಯಿ

ಗ್ರೀಕ್

ನೆಮಿನ್

ನೆಲೆಯಿಲ್ಲದವರು

ತಮಿಳಿನಲ್ಲಿ ಪಿಚ್ಚೈಕರಾ

ಜಂಗಮ

ತಮಿಳು 

ಪೊಕ್ಕನ್

ಪರದೇಶಿ

ಹಿಂದಿಯಲ್ಲಿ ಭಿಕಾರಿ

ಜಂಗಾಲಿ

ತುಳು 

ತೆಂಡುಳಿ

ಪರಸ್ಥಳದವರು

 

ಜೋಗಿ

ತೆಲುಗು

ತಿರುಗುಬೋತು

ವಲಸಿಗರು

 

ದಾಸಯ್ಯ

ಮರಾಟಿ

ಭಟಕ್ಯಾ

ಹೊರಗಡೆಯವರು

 

 

ಮಲೆಯಾಳಂ

ತೆಂಟಿ

 

 

 

ಲ್ಯಾಟಿನ್

ನೋಮಾಸ್

 

 

 

ಹಿಂದಿ

ಸಂಚಾರಿ,ಘುಮಂತು

 

 

 

 

(ಆಧಾರ: ಮೇತ್ರಿ ಕೆ ಎಂ: ೨೦೧೨: ೧).

ಭಾಗ ೨ : ಬುಡುಕಟ್ಟುಗಳು

೨೦೧೧ರ ಭಾರತದ ಜನಗಣತಿಯ ಪ್ರಕಾರ ೮.೦೮% ರಷ್ಟು ಇರುವ ಬುಡಕಟ್ಟು ಸಮುದಾಯಗಳ ಕುರಿತು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ವಿವರಿಸಲಾಗಿದೆ.

“ಬುಡಕಟ್ಟು ಅಥವಾ ಆದಿವಾಸಿ ಎಂಬ ಪದವನ್ನು ಗ್ರೀಕ್ ಮತ್ತು ರೋಮಿನ ಲೇಖಕರು ಲ್ಯಾಟಿಯಂ ಜಿಲ್ಲೆಯಲ್ಲಿ ನೆಲೆಸಿದ ಮೂಲವಾಸಿಗಳ ಬಗ್ಗೆ ಮೊಟ್ಟ ಮೊದಲಿಗೆ ಬಳಸಿದರು”(ಇಂದಿರಾ ಆರ್(ಸಂ): ೨೦೧೨: ೨೫). ಆದರೆ ಭಾರತದಲ್ಲಿ ಮೊದಲು “೧೮೯೧ರ ಜನಗಣತಿಯ ವರದಿಯಲ್ಲಿ ಜನಗಣತಿಯ ಆಯುಕ್ತರಾಗಿದ್ದ ಜೆ ಎ ಬೇನ್ಸ್ ಅವರು ‘ಕೃಷಿ ಮತ್ತು ಪಶು ಸಂಗೋಪನೆ ಕೈಗೊಂಡ ಜಾತಿಗಳ’ ಪ್ರವರ್ಗದಲ್ಲಿ ‘ಅರಣ್ಯ ಬುಡಕಟ್ಟುಗಳು’ ಎಂಬ ಉಪ ಶೀರ್ಷಿಕೆಯೊಂದನ್ನು ನೀಡಿದರು. ಅಲ್ಲಿಂದ ಮುಂದೆ ೧೯೦೧, ೧೯೧೧, ೧೯೨೧, ೧೯೩೧ ಮತ್ತು ೧೯೪೧ರ ಜನಗಣತಿ ವರದಿಗಳಲ್ಲಿ ಬುಡಕಟ್ಟು ಸಮೂಹಗಳನ್ನು ಅನುಕ್ರಮವಾಗಿ, ‘ಸರ್ವಚೇತನವಾದಿಗಳು’, ‘ಬುಡಕಟ್ಟು ಸರ್ವಚೇತನವಾದಿಗಳು’, ‘ಗುಡ್ಡಗಾಡು ಮತ್ತು ಅರಣ್ಯ ಬುಡಕಟ್ಟುಗಳು’, ‘ನಾಗರಿಕಪೂರ್ವ ಬುಡಕಟ್ಟುಗಳು’ ಹಾಗೂ ‘ಬುಡಕಟ್ಟುಗಳು’ ಎಂದು ವರ್ಗೀಕರಿಸಲಾಗಿದೆ. ಮಹಾತ್ಮ ಗಾಂಧೀಜಿಯವರು ‘ಗಿರಿಜನ’ ಎಂದು, ಜಿ ಎಸ್ ಘುರ್ಯೆರವರು ‘ಹಿಂದುಳಿದ ಹಿಂದುಗಳು’ ಎಂದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಪರಿಶಿಷ್ಟ ಪಂಗಡಗಳು’ ಎಂದು ಕರೆದರು”(ಭಾರತೀಯ ಸಮಾಜದ ಸಮಾಜಶಾಸ್ತ್ರ: ೨೦೧೭: ೬೪).

ಹಲವು ಹೆಸರುಗಳನ್ನು ಪಡೆದಿರುವ ಈ ಬುಡಕಟ್ಟು ಎಂದರೇನು? ಎಂಬ ಪ್ರಶ್ನೆಗೆ ಡಾ. ಕೆ ಎಂ ಮೇತ್ರಿಯವರು ‘ಕರ್ನಾಟಕದ ಏಕೀಕರಣ ಮತ್ತು ಬುಡಕಟ್ಟುಗಳು’ ಎಂಬ ಲೇಖನದಲ್ಲಿ ‘ಯಾವ ಸಮುದಾಯ ಗತಕಾಲದಿಂದಲೂ ನಿಸರ್ಗದ ಮಡಿಲಲ್ಲಿ ಸುಖವಾಗಿ ಬದುಕಲು ಬಯಸುವುದೋ, ಪ್ರಕೃತಿಜನ್ಯ ಉತ್ಪನ್ನಗಳನ್ನೇ ಭಕ್ಷಿಸಲು ಯತ್ನಿಸುವುದೋ, ತನ್ನದೆಯಾದ ಒಂದು ವಿಶಿಷ್ಟ ರೀತಿಯ ಜೀವನ ವಿಧಾನದಿಂದ ಜೀವಿಸುವ ಆಶಯವನ್ನು ಹೊಂದಿ ಆ ರೀತಿಯಲ್ಲಿಯೇ ಜೀವನ ನಡೆಸುವುದೋ ಆ ಸಮುದಾಯಗಳಿಗೆ ಆದಿವಾಸಿ ಅಥವಾ ಬುಡಕಟ್ಟು ಎಂದು ಕರೆಯಬಹುದು’ ಎಂದು ಉತ್ತರಿಸಿದ್ದಾರೆ.

ಭಾಗ ೩ : ಅಲೆಮಾರಿ ಬುಡಕಟ್ಟುಗಳು

ಕರ್ನಾಟಕದಲ್ಲಿ ಆದಿವಾಸಿ ಲಕ್ಷಣಗಳಿಂದ ಕೂಡಿದ ಅನೇಕ ಬುಡಕಟ್ಟುಗಳಿದ್ದರು ಭಾರತ ಸರ್ಕಾರದ The Scheduled Castes and Scheduled Tribes (Amendment) Act, 1976 (No.108 of 1976

dated 18th September, 1976) ರ ಪ್ರಕಾರ ಕರ್ನಾಟಕದಲ್ಲಿ ೪೯ ಬುಡಕಟ್ಟುಗಳು ಪರಿಶಿಷ್ಟ(ಅನುಸೂಚಿತ) ಪಂಗಡದ ಪಟ್ಟಿಗೆ ಸೇರಿದವು. ಹಾಗೆಯೇ ಸಿದ್ಧಿ ಸಮುದಾಯವನ್ನು The Scheduled Castes and Scheduled Tribes (Amendment) Act, 2002 ಪ್ರಕಾರ ಭಾರತ ಸರ್ಕಾರ ದಿನಾಂಕ ೦೮.೦೧.೨೦೦೩ರಿಂದ ಅನ್ವಯವಾಗುವಂತೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಗೆ ಸೀಮಿತಗೊಳಿಸಿ ಪರಿಶಿಷ್ಟ(ಅನುಸೂಚಿತ) ಪಂಗಡದ ಪಟ್ಟಿಯ ಕ್ರಮ ಸಂಖ್ಯೆ ೫೦ರಲ್ಲಿರಿಸಿದೆ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ೫೦ ಬುಡಕಟ್ಟು ಸಮುದಾಯಗಳಿವೆ.

“ಭಾರತದಲ್ಲಿ ಒಟ್ಟು ಅಲೆಮಾರಿ ಸಮುದಾಯಗಳ ಸಂಖ್ಯೆ ೨೬೦ (ಪರಿಶಿಷ್ಟ ಜಾತಿ: ೬೫, ಪರಿಶಿಷ್ಟ ಪಂಗಡ: ೩೦, ಹಿಂದುಳಿದ ವರ್ಗ: ೧೬೫) ಕರ್ನಾಟಕದಲ್ಲಿ ಒಟ್ಟು ಅಲೆಮಾರಿ ಸಮುದಾಯಗಳ ಸಂಖ್ಯೆ ೩೨ (ಪರಿಶಿಷ್ಟ ಜಾತಿ: ೫, ಪರಿಶಿಷ್ಟ ಪಂಗಡ: ೩, ಹಿಂದುಳಿದ ವರ್ಗ: ೨೪)”(ಆಧಾರ: ನವದೆಹಲಿ ರಾಷ್ಟ್ರೀಯ ವಿಮುಕ್ತ, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ಆಯೋಗದ ಮಾಹಿತಿ ೨೦೦೬). ಕರ್ನಾಟಕದಲ್ಲಿ ಡುಂಗ್ರಿ ಗರಾಸಿಯ, ರಾಜಗೊಂಡ, ಹಕ್ಕಿಪಿಕ್ಕಿ, ಅಡ್ವಿಚಿಂಚೇರ್, ಪಾರ‍್ಧಿ ಈ ಬುಡಕಟ್ಟುಗಳು ‘ಅಲೆಮಾರಿ ಬುಡಕಟ್ಟುಗಳಾಗಿವೆ’. ಅವುಗಳಲ್ಲಿ ರಾಜಗೊಂಡ, ಹಕ್ಕಿಪಿಕ್ಕಿ ಸಮುದಾಯಗಳ ನ್ಯಾಯಪದ್ಧತಿಯ ಕುರಿತು ಈ ಕೆಳಗಿನಂತೆ ವಿವರಿಸಲಾಗಿದೆ.

ನ್ಯಾಯಪದ್ಧತಿ

ಪ್ರತಿಯೊಂದು ಅಲೆಮಾರಿ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ರೀತಿಯ ಅಲಿಖಿತ ಒಳಾಡಳಿತ ವ್ಯವಸ್ಥೆಯನ್ನು ಒಳಗೊಂಡಿರುತ್ತವೆ. ಸಮುದಾಯದ ಪ್ರತಿನಿಧಿಗಳೆಲ್ಲರೂ ಅದರ ನಿರ್ದೇಶನದಂತೆಯೇ ನಡೆಯಬೇಕು. ಸಮಾಜದ ಕಾರ್ಯಕಲಾಪಗಳು ಸರಿಯಾಗಿ ನಡೆಯಲು ಇವುಗಳು ಹಲವು ನಿಮಯಗಳನ್ನು ಪಾಲಿಸಬೇಕಾಗುತ್ತದೆ. ಸಮುದಾಯದಲ್ಲಿನ ಜೀವನಾವರ್ತಕ ಆಚರಣೆಗಳು ಸಮುದಾಯದ ಹಿರಿಯರ ಮುಖಾಂತರ ನಡೆಯುತ್ತವೆ. ಸಮುದಾಯದಲ್ಲಿ ಉದ್ಭವಿಸುವ ಸಮಸ್ಯೆ(ಕೊಲೆ, ಜಗಳ, ಕಳ್ಳತನ, ಮೋಸತನ, ಗಂಡಹೆಂಡತಿ ಜಗಳ, ಹೊಲ, ಮನೆತನದ ವ್ಯವಹಾರ, ಅನೈತಿಕ ಸಂಬಂಧ ಸೋಡಾಚೀಟಿ)ಗಳನ್ನು ನ್ಯಾಯಗಳು, ಪೋಲಿಸ್ ಠಾಣೆಗಳಿಗೆ ಹೋಗದೆ ಸಮುದಾಯದ ಪಂಚಾಯತಿಯಲ್ಲಿ ಬಗೆಹರಿಸಿಕೊಳ್ಳುತ್ತಾರೆ. ಅವರಲ್ಲಿರುವ ನ್ಯಾಯ ಪದ್ಧತಿ (ನ್ಯಾಯ ಪಂಚಾಯ್ತಿ ವ್ಯವಸ್ಥೆ) ಎಂತಹದ್ದು ಎಂಬುದನ್ನು ಈ ಮುಂದಿನಂತೆ ಗಮನಿಸಬಹುದು.

I. ರಾಜಗೊಂಡ ಸಮುದಾಯ: ರಾಜಗೊಂಡರ ಸಮುದಾಯದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದ ನಂಬಿಕೆಗಳು ಮತ್ತು ಸಂಪ್ರದಾಯಗಳೇ ನ್ಯಾಯ ಪಂಚಾಯಿತಿ ನಡೆಸಲು ಮಾರ್ಗದರ್ಶಿಗಳಾಗಿವೆ. ನಿರಪರಾಧಿಗಳು ನ್ಯಾಯ ಕೇಳಲು ಪಂಚಾಯಿತಿಯ ಮುಖ್ಯಸ್ಥನಿಗೆ ವಿನಂತಿಸಿಕೊಂಡಾಗ ನ್ಯಾಯ ಪಂಚಾಯಿತಿ ಕೂಡಿಸುವನು. ಸಮುದಾಯಕ್ಕೆ ಸಂಬಂಧಿಸಿದ ಕೆಲವು ವಿಧಿವಿಧಾನಗಳನ್ನು ಆಚರಿಸಲು ಕೂಡ ನ್ಯಾಯ ಪಂಚಾಯಿತಿಯ ಅಗತ್ಯತೆಯಿದೆ.

ನ್ಯಾಯಪದ್ಧತಿಯ ಕಾರ್ಯಗಳು

ಗಂಡ ಹೆಂಡಿರ ಜಗಳ: ಗಂಡನು ಹೆಂಡತಿಯ ತಪ್ಪಿಗಾಗಿ ಸಿಟ್ಟಿನಿಂದ ಹೊಡೆದಾಗ, ಹೊಡೆತದಿಂದ ಅವಳ ಕಿವಿ ಮತ್ತು ಮೂಗು ಹರಿದು ರಕ್ತ ಸುರಿದರೆ, ಗಂಡನೇ ಅಪರಾಧಿ ಎಂದು ಪರಿಗಣಿಸಿ ದಂಡ ವಿಧಿಸುವರು.

ಸಾಲಕ್ಕೆ ಸಂಬಧಪಟ್ಟ ನ್ಯಾಯ ತಿರ್ಮಾನ: ಯಾರಾದರೂ ಕೈಕಡ (ಸಾಲ) ಹಣ ಪಡೆದು, ಪಡೆದಿಲ್ಲವೆಂದು ತಿರುಗಿ ಬಿದ್ದರೆ, ಜಾತಿ ಪಂಚಾಯಿತಿಯು ಸಾಲ ಪಡೆದವರಿಗೆ ಸಾಲ ಮರುಪಾವತಿ ಮಾಡುವವರೆಗೂ ಕುಲದಿಂದ ಹೊರಗೆ ಹಾಕುತ್ತದೆ. ಅವರಿಂದ ನೀರು ಚಹಾ, ಊಟ ಸ್ವೀಕರಿಸುವಂತಿಲ್ಲ, ಅವರೊಂದಿಗೆ ಮಾತಾಡುವಂತಿಲ್ಲ ಮತ್ತು ಮುಟ್ಟಿಸಿಕೊಳ್ಳುವಂತಿಲ್ಲ.

ಕುಟುಂಬ ಕಲಹಗಳು: ಕುಟುಂಬದ ಸದಸ್ಯನೊಬ್ಬನಿಗೆ ಅವನ ತಪ್ಪಿನಿಂದಾಗಿ ಇಲ್ಲವೆ ತಪ್ಪಿಸ್ಥನೆಂದು ಬಗೆದು ಅವನಿಗೆ ಹೊಡೆದಾಗ ಹೊಡೆತದಿಂದ ಆತ ಗಾಯಗೊಂಡು ಗಾಯದಲ್ಲಿ ಹುಳುಗಳು ಕಂಡು ಬಂದರೆ ಹೊಡೆದ ವ್ಯಕ್ತಿ ಅಪರಾಧಿಯೆಂದು ತಿಳಿಯುವರು. ಹೊಡೆದ ವ್ಯಕ್ತಿಯು ಪಂಚಾಯಿತಿ ವಿಧಿಸಿದ ಶಿಕ್ಷೆ ಅನುಭವಿಸಬೇಕಾಗಿರುವುದಲ್ಲದೆ ನಿಗದಿತ ದಂಡ ಕಟ್ಟಬೇಕಾಗುವುದು.

ವಿವಾಹಕ್ಕೆ ಸಂಬಧಿಸಿದುದು: ಗಂಧರ್ವ ವಿವಾಹ ಅವರಲ್ಲಿ ಅಪರಾಧವಾಗಿದೆ. ಹಾಗಾದಲ್ಲಿ ಜಾತಿ ಪಂಚಾಯತಿ ಹುಡುಗ ಹುಡುಗಿಗೆ ನಾನಾ ತರಹದ ದೈಹಿಕ ಮಾನಸಿಕ ಶಿಕ್ಷೆ ವಿಧಿಸಿ ದಂಡ ಪಡೆದು ಒಂದು ದಿನದ ವಿವಾಹ (ಉಂದಿ ದಿಯಾತಾಂಗ ಮರಮಿಗ) ಮಾಡಲು ಅವಕಾಶ ಕೊಡುವರು.

ಆಚರಣೆಗಳಿಗೆ ಸಂಬಧಿಸಿದವುಗಳು: ಕಾರಣಾಂತರಗಳಿಂದಾಗಿ ವೃದ್ಧರು ತೀರಿಕೊಂಡಾಗ, ಶವಕ್ಕೆ ಅನ್ಯ ಜಾತಿಯವರು ಮುಟ್ಟಿದ ಇಲ್ಲವೆ ಶವಸಂಸ್ಕಾರ ಮಾಡಿದ ವಿಷಯ ಜಾತಿ ಪಂಚಾಯತಿಯ ಗಮನಕ್ಕೆ ಬಂದಾಗ ಮರಣಾಂತಕನ ವಾರಸುದಾರನಿಗೆ ಕಠಿಣ ಶಿಕ್ಷೆಯಾಗುವುದು. ವಾರಸುದಾರನ ತಲೆ, ಮೀಸೆ ಬೋಳಿಸಲಾಗುವುದು, ಒಂದು ಕೋಳಿಯ ನಾಡಿ(ಕರಳು)ಗಳನ್ನು ಕೊರಳಲ್ಲಿ ಹಾಕಿ ಕತ್ತೆಯ ಮೇಲೆ ಕೂಡಿಸಿ ಮೆರೆಸುವ ಸಂಪ್ರದಾಯವಿದೆ.

ಇತರೆ: ಈ ಹಿಂದೆ ಹೆಣ್ಣು ಮಕ್ಕಳು ಚಪ್ಪಲಿ ಹಾಕಿಕೊಂಡರೆ ಪೋಲ್ಕಾ (ಮೇಲಂಗಿ) ತೊಟ್ಟುಕೊಂಡರೆ ಮನೆಯಲ್ಲಿ ಗೊಂಡಿ ಹೊರತು ಬೇರೆ ಭಾಷೆ ಮಾತಾಡಿದರೆ, ದಂಡ ವಿಧಿಸಲಾಗುತ್ತಿತ್ತು. ಹಿಂದೆ ಕಳವು ಮಾಡಿದವರಿಗೆ ಮರಣದಂಡನೆ ಶಿಕ್ಷೆಯಾಗುತ್ತಿತ್ತೆಂದು ಹೇಳುವರು.

ಜಾತಿಯ ಒಳಗೆ ತೆಗೆದುಕೊಳ್ಳುವುದು: ಜಾತಿ ಬಾಹಿರ ಶಿಕ್ಷೆಯನ್ನು ಅನುಭವಿಸಿದ ಮೇಲೆ ಅವರನ್ನು ಒಂದು ದಿನ ಹಳ್ಳ ಅಥವಾ ಕೆರೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ ಬೆಂಕಿಯಲ್ಲಿ ಬಂಗಾರದ ತುಣುಕೊಂದು ಸುಟ್ಟು ಅನಂತರ ಆ ಬಂಗಾರದ ತುಣುಕನ್ನು ನೀರು ಹೊಂದಿದ ಲೋಟದಲ್ಲಿ ಹಾಕಿ ಅದನ್ನು ಅಪರಾಧಿಗೆ ಕುಡಿಸಿ ಜಾತಿಯಲ್ಲಿ ಪುನಃ ಕರೆದುಕೊಳ್ಳುತ್ತಾರೆ.

ಶಿಕ್ಷೆಗಳು: ಗೊಂಡ, ರಾಜಗೊಂಡರಲ್ಲಿ ಮುಖ್ಯವಾಗಿ ಮೂರು ರೀತಿಯ ಶಿಕ್ಷೆಗಳನ್ನು ಗುರುತಿಸಬಹುದು. ಅವು,

“೧. ಅವಮಾನ: ತಪ್ಪಿತಸ್ಥ(ಅಪರಾಧಿ)ರಿಗೆ ಮೀಸೆ ಬೋಳಿಸುವುದು, ತಲೆ ಬೋಳಿಸುವುದು, ತುರುಬು ಕತ್ತರಿಸುವುದು, ಮುಖಕ್ಕೆ ಕಪ್ಪು ಮಸಿ ಬಳಿಯುವುದು, ಕೊರಳಿಗೆ ಚಪ್ಪಲಿ ಕಟ್ಟುವುದು, ಹೆಂಡಿ ರಾಡಿ ಎರಚುವುದು, ಉಗುಳುವುದು, ಕತ್ತೆಯ ಮೇಲೆ ಕೂಡಿಸಿ ಮೆರೆಸುವುದು, ಅವಾಚ್ಯವಾಗಿ ಸಭಿಕರೆದುರಿಗೆ ಬೈಯುವುದು ಮೊದಲಾದ ರೀತಿಯಲ್ಲಿ ಅವಮಾನಗೊಳಿಸುವುದು.

೨. ದೈಹಿಕ ಶಿಕ್ಷೆ: ಮೂಗು ಕೊಯ್ಯುವುದು, ಮೂಗು ಹಿಡಿದು ಗಲ್ಲಕ್ಕೆ ಹೊಡೆಯುವುದು, ಕಣ್ಣಲ್ಲಿ ಮೆಣಸಿನ ಪುಡಿ ಹಾಕಿ ದಂಡಿಸುವುದು, ಚುರಚುರಿ (ಮೈ ತಿಂಡಿ ಕೊಡುವ ಎಲೆ) ಬಳ್ಳಿಯಿಂದ ದಂಡಿಸುವುದು, ಛಡಿ, ಚಪ್ಪಲಿ ಅಥವಾ ಚಾಟಿ ಏಟಿನಿಂದ ಹೊಡೆಯುವುದು, ಕೋಲದಂಡಿಗೆ ಹಾಕುವುದು, ಒಂದೇ ಕಾಲಿನ ಮೇಲೆ ನಿಲ್ಲಿಸುವುದು, ಕಿವಿ ಹಿಡಿದುಕೊಂಡು ದಂಡು ಹೊಡೆಯುವುದು, ಮರಳಲ್ಲಿ/ಕಲ್ಲಲ್ಲಿ ಮುಳ್ಳಲ್ಲಿ/ಬಿಸಿಲಿನಲ್ಲಿ ಚಪ್ಪಲಿ ಇಲ್ಲದೆ ಓಡಿಸುವುದು, ದೈಹಿಕ ಅಂಗಗಳನ್ನು ಕತ್ತರಿಸುವುದು ಮೊದಲಾದ ದೈಹಿಕ ಶಿಕ್ಷೆಗಳನ್ನು ನೀಡುತ್ತಾರೆ.

೩. ದಂಡ ವಿಧಿಸುವುದು: ದನಕುರಿಗಳನ್ನು ಅಪರಾಧಿಯಿಂದ ದಂಡ ರೂಪದಲ್ಲಿ ಪಡೆಯುವುದು, ಧಾನ್ಯ ಅಥವಾ ಹಣವನನ್ನು ಅಪರಾಧಿಯಿಂದ ದಂಡ ರೂಪದಲ್ಲಿ ಪಡೆಯುವುದು, ಗುಲಾಮಗಿರಿಯ ಸೇವೆ, ಇತ್ಯಾದಿಗಳು”(ಮೇತ್ರಿ ಕೆ ಎಂ ಮತ್ತು ಸುದರ್ಶನ್ ಸೆಡ್ಮಾಕಿ: ೨೦೦೮: ೬೪).

II. ಹಕ್ಕಿಪಿಕ್ಕಿ ಸಮುದಾಯ

ನ್ಯಾಯ ಪಂಚಾಯಿತಿಯ ಹಂತಗಳು

ನ್ಯಾವೋ: ನ್ಯಾವೋ ಸಂಪ್ರದಾಯದಲ್ಲಿ ಹಿರಿಯರಾಗಿದ್ದು ಮಾತುಗಾರಿಕೆಯಲ್ಲಿ, ತಲೆಮಾರು ಹೇಳುವಲ್ಲಿ, ಯೌವನದಿಂದ ಹೆಚ್ಚು ಬೇಟೆ ತರುವಲ್ಲಿ ಉತ್ತಮ ಚತುರತೆ ಹೊಂದಿರುವವರಾಗಿರುತ್ತಾರೆ. ಸಮಸ್ಯೆಗಳಿಗೆ ತಕ್ಕಂತೆ ಸೂಕ್ತ ನ್ಯಾಯ ತೀರ್ಮಾನ ತೆಗೆದುಕೊಳ್ಳುವವರಾಗಿರುತ್ತಾರೆ.

ಘಟಗೀರ್/ರೈಟರ್: ಇವರ ಕೆಲಸ ಪಂಚಾಯ್ತಿಯಲ್ಲಿ ಹಿರಿಯರನ್ನು ಸೇರಿಸುವುದು, ಜಗಳವಾಗದಂತೆ ನೋಡಿಕೊಳ್ಳಲು ಕೈಯಲ್ಲಿ ಬಾರುಕೋಲನ್ನು ಝಳಪಿಸುತ್ತಾ ಪಂಚಾಯ್ತಿಯ ಸುತ್ತ ತಿರುಗುತ್ತಾರೆ. ಆಕಸ್ಮಾತ್ ಬಾಯಿಹಾಕಿ ಮಾತಾಡಿದಾಗ, ಹೆಂಗಸರಿಂದ ಜಗಳವುಂಟಾದರೆ ಪಕ್ಷಪಾತವಿಲ್ಲದಂತೆ, ಕಣ್ಣಿಗೆ ಬಟ್ಟೆ ಕಟ್ಟಿಸಿಕೊಂಡು ಉಳಿದ ನಾಲ್ವರು ರೈಟರ್ ಸಹಾಯದಿಂದ ಬಾರುಕೋಲನ್ನು ಬೀಸುತ್ತ ಪಂಚಾಯ್ತಿ ಸುತ್ತ ತಿರುಗಾಡುತ್ತಾನೆ.

ತಪ್ಪುಗಳ ಪರೀಕ್ಷಾ ವಿಧಾನಗಳು

೧. ತಮ್ಮ ಸಮಾಜದಲ್ಲಿ ಯಾರಾದರೂ ತಪ್ಪು ಮಾಡಿದರೆ, ಅಂಥವರನ್ನು ಪತ್ತೆ ಹಚ್ಚಿ ಶಿಕ್ಷಿಸುವ ನಿಟ್ಟಿನಲ್ಲಿ ಕೊಡಲಿಯನ್ನು ಕೆಂಪಗೆ ಕಾಯಿಸಿ ಅಪರಾಧಿ ಎನ್ನುವವರ ಅಂಗೈಯ ಮೇಲೆ ಒಂದು ವೀಳ್ಯದಲೆ ಇಟ್ಟು ಅದರ ಮೇಲೆ ಕೊಡಲಿ ಇಡುತ್ತಾರೆ. ಆ ವ್ಯಕ್ತಿ ತಪ್ಪು ಮಾಡಿರದಿದ್ದರೆ ಕೈ ಸುಡುವುದಿಲ್ಲ. ಒಂದು ವೇಳೆ ಅವನು ತಪ್ಪು ಮಾಡಿದರೆ ಕೂಡಲೇ ಕೈ ಸುಟ್ಟು ಬಿಡುತ್ತದೆ.

೨. ಒಲೆಯ ಮೇಲೆ ಕಡಾಯಿ ಒಂದನ್ನು ಇಟ್ಟು ಅದರಲ್ಲಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾಯಿಸುತ್ತಾರೆ. ಇಲ್ಲಿಯು ಸಹ ಅವರ ತಪ್ಪನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಆ ಎಣ್ಣೆಯಲ್ಲಿ ತಪ್ಪಿತಸ್ಥನನ್ನು ಕೈ ಹಾಕಲು ಹೇಳುತ್ತಾರೆ. ಆತ/ಆಕೆ ತಪ್ಪು ಮಾಡದಿದ್ದಲ್ಲಿ ಅವರ ಕೈ ಸುಡುವುದಿಲ್ಲ. ಒಂದು ವೇಳೆ ತಪ್ಪು ಮಾಡಿದರೆ. ಅವರ ಕೈ ಕೂಡಲೇ ಸುಟ್ಟು ಹೋಗಿ ಬಿಡುತ್ತದೆ ಎಂದು ಇವರು ಬಲವಾಗಿ ನಂಬಿರುತ್ತಾರೆ.

೩. ಕುಲಪಂಚಾಯಿತಿ ಎದುರು ಪಾತ್ರೆಯೊಂದರಲ್ಲಿ ಸಗಣಿ ನೀರನ್ನು ಚೆನ್ನಾಗಿ ಕಾಯಿಸಿ ಅದರಲ್ಲಿ ಉಂಗುರ ಅಥವಾ ದುಡ್ಡು ಹಾಕಿ ಕುಲಚಾರರು ಅದನ್ನು ತೆಗೆಯುವಂತೆ ಅಪರಾಧಿ ಅಥವಾ ತಪ್ಪಿತಸ್ಥ ಎನಿಸಿಕೊಂಡವನ್ನು ಹೇಳುತ್ತಾರೆ. ಆಗ ಅದನ್ನು ತೆಗೆಯುವಾಗ ಅವರು ತಪ್ಪಿತಸ್ಥರಲ್ಲದಿದ್ದರೆ ಚರ್ಮ ಸುಡುವುದಿಲ್ಲ. ಒಂದು ವೇಳೆ ತಪ್ಪು ಮಾಡಿದ್ದರೆ ಅವರ ಚರ್ಮ ಸುಡುತ್ತದೆಂದು ನಂಬುತ್ತಾರೆ.

ಕೆಂಪಗೆ ಕಾದ ಕಬ್ಬಿಣ, ಕಾದ ಎಣ್ಣೆ ಮತ್ತು ಕಾಯಿಸಿದ ಸಗಣಿಯ ನೀರುನ್ನು ಯಾರ ಕೈಗಳ ಮೇಲೆ ಇಟ್ಟರು/ಹಾಕಿದರು ಸುಡುವುದು ಅವುಗಳ ಹುಟ್ಟು ಗುಣ ಆದರೆ ತಪ್ಪುಗಳು ನಡೆಯದಂತೆ ಜನರಲ್ಲಿ ಭಯ ಹುಟ್ಟಿಸುವುದೇ ಇದರ ಮೂಲ ತಾತ್ಪರ್ಯವಾಗಿದೆ.

ನಿರ್ಬಂಧಗಳು ಮತ್ತು ಶಿಕ್ಷೆಗಳು

೧. ಹಿಂದಿನ ಕಾಲದಲ್ಲಿ ಹಕ್ಕಿಪಿಕ್ಕಿಯರು ಮಾದಿಗರು ಮತ್ತು ಮುಸ್ಲಿಂರ ಮನೆಗಳಲ್ಲಿ ನೀರು ಕುಡಿದರೆ ಅಂಥವರಿಗೆ ೨೦ ರೂಪಾಯಿಗಳಿಂದ ೧೦೧ ರೂ.ಗಳವರೆಗೆ ದಂಡ ವಿಧಿಸುತ್ತಿದ್ದರು. ಯಾಕೆಂದರೆ, ನಾವು ಕ್ಷತ್ರಿಯವಂಶದವರಾಗಿದ್ದು ಅವರುಗಳು ಶೂದ್ರರಾಗಿದ್ದಾರೆ ಎಂದು ಇವರ ವಾದ.

೨. ವಲಸೆಗೆ ಹೋದ ತಾಂಡಾಗಳಲ್ಲಿ, ಒಬ್ಬ ಅಥವಾ ಇಬ್ಬರಿಗೆ ಬೇಟೆ ಸಿಕ್ಕರೆ ಮಾರಿದಂಥ ಹಣದಲ್ಲಿ ಅರ್ಧದಷ್ಟು ಬೇಟೆಯಾಡುವವನಿಗೂ ಉಳಿದರ್ಧದಲ್ಲಿ ಬೇಟೆಗೆ ಹೋಗದೇ ಇದ್ದವರಿಗೂ ಕೊಡಬೇಕು. ಯಾರಿಗೆ ಪಾಲು ಸಿಕ್ಕಿರುವದಿಲ್ಲವೊ ಅಂಥವನು ಪಂಚಾಯಿತಿಯನ್ನು ಕೂರಿಸಿ ದಂಡವನ್ನು ಹಾಕಿಸುತ್ತಾನೆ. ಇದನ್ನು ‘ಭಾಗ್‌ಪಾಡಾನು' (ಭಾಗ ಕೊಡುವುದು, ಹಂಚುವುದು) ಎಂತಲೂ ಕರೆಯುತ್ತಾರೆ.

೩. ಉಟ್ಟು ಬಿಟ್ಟ ಲಂಗವನ್ನು ಗಂಡಸರಿಗೆ ತಾಗುವಂತೆ ಇಟ್ಟರೆ ಅಂಥಹ ಹೆಂಗಸರಿಗೆ ೧೦೧ರೂ. ವರೆಗೆ ದಂಡ ಹಾಕುತ್ತಾರೆ. ಇನ್ನೂ ಋತುಮತಿಯಾಗದ ಹುಡುಗಿಯಾಗಿದ್ದರೆ ಅವಳಿಗೆ ರಿಯಾಯ್ತಿ ಇದೆ. ಈ ರೀತಿ ಅವರು ಯಾಕೆ ಮಾಡುತ್ತಾರೆಂದರೆ ಮಡಿ ಮೈಲಿಗೆಗಳ ಬಗ್ಗೆ ಅವರು ತುಂಬಾ ಕಟ್ಟುನಿಟ್ಟಿನವರಾಗಿದ್ದಾರೆ.

೪. ಗಂಡ ಹೆಂಡತಿಯ ಜಗಳದಲ್ಲಿ ಗಂಡ ಹೆಂಡತಿಗೆ ಹೊಡೆದನೆಂದರೆ, ಹೆಂಡತಿಯಾದವಳು ಯಾವುದೇ ಸಂದರ್ಭದಲ್ಲಿ ಗಂಡನಿಗೆ ತಿರುಗಿ ಹೊಡೆಯುವ ಆಗಿಲ್ಲ, ಒಂದು ವೇಳೆ ಹಾಗೇನಾದರು ಅವಳು ಹೊಡೆದರೆ ೧೦೧ ರೂ.ವರೆಗೆ ದಂಡವನ್ನು ಹಾಕುತ್ತಾರೆ. ದಂಡವನ್ನು ಕಟ್ಟಲು ಆಗದಿದ್ದರೆ ಅಥವಾ ನಿರಾಕರಿಸಿದರೆ ಅಂಥವಳನ್ನು ಜಾತಿಯಿಂದ ಹೊರಗೆ ಹಾಕಿ ಅವಳು ಆ ದಂಡವನ್ನು ಕಟ್ಟಿದ ನಂತರವೇ ಅವಳನ್ನು ಜಾತಿಯ ಒಳಗೆ ಸೇರಿಸಿಕೊಳ್ಳುತ್ತಾರೆ.

೫. ಒಬ್ಬ ಗಂಡಸು ಅಪ್ಪಿತಪ್ಪಿ ತನ್ನ ತಂಗಿ ಅಥವಾ ಅಕ್ಕ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅತ್ತಿಗೆ ಇಂಥವರೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡರೆ ಅವರು ಈ ಕೆಳಗಿನಂತೆ ದಂಡವನ್ನು ಕಟ್ಟಬೇಕಾಗುತ್ತದೆ.

* ಅಕ್ಕ/ತಂಗಿಯವರೊಂದಿ(ಬೆಹನ್ ಚೋದ್)ಗೆ ರೂ ೬೦೦ ರಿಂದ ೮೦೦

* ಅತ್ತಿಗೆಯೊಂದಿಗೆ ರೂ. ೩೦೦ ರಿಂದ ೪೦೦

* ಚಿಕ್ಕಮ್ಮ/ದೊಡ್ಡಮ್ಮಳೊಂದಿಗೆ ರೂ. ೬೦೦ ರಿಂದ ೭೦೦

* ಹೆಣ್ಣು ಕೊಟ್ಟ ಅತ್ತೆಯೊಂದಿಗೆ ರೂ. ೧೦೦೦ವರಗೆ

ಹೆಣ್ಣುಮಗಳು ತಪ್ಪು ಮಾಡಿದ್ದರೆ ಹತ್ತು ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಹಬ್ಬದಲ್ಲಿ ದೇವರ ಮುಂದೆ ಕೂರಿಸಿ ತಲೆಗೆ ಸಗಣಿಯನ್ನು ಬಳಿದು ಶುದ್ಧಿ ಮಾಡಿ, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಇಡೀ ಕುಲದವರೆಲ್ಲಾ ಸೇರಿ ಕುಡಿದು ತಿಂದು ಆ ಹೆಣ್ಣನ್ನು ಕುಲಕ್ಕೆ ಸೇರಿಸಿಕೊಳ್ಳುತ್ತಾರೆ.

೬. ಇವರಲ್ಲಿ ಚಪ್ಪಲಿಯಿಂದ ಹೊಡೆದವನಿಗೂ ಹಾಗೂ ಹೊಡೆಸಿಕೊಂಡವನಿಗೆ ಇಬ್ಬರಿಗೂ ದಂಡವನ್ನು ಹಾಕುತ್ತಾರೆ. ತಪ್ಪಿಲ್ಲದೇ ಹೊಡೆಸಿಕೊಂಡವನಿಗೆ ರೂ. ೧೦೦ಗಳ ದಂಡ ವಿಧಿಸಿದರೆ, ಚಪ್ಪಲಿಯಿಂದ ಹೊಡೆದವನಿಗೆ ರೂ. ೫, ೧೦ರೂ. ದಂಡವನ್ನು ವಿಧಿಸುತ್ತಾರೆ.

೭. ಹೆಂಗಸು ಗಂಡಸಿಗೆ ಕಾಲಿನಿಂದ ಒದ್ದರೆ, ಅಂತಹ ಹೆಣ್ಣಿಗೆ ೫೦೦ ರೂ.ಗಳವರೆಗೆ ದಂಡ ಹಾಕುತ್ತಾರೆ. ಹೆಂಗಸಿನ ಕಾಲಿನಿಂದ ಒದೆಸಿಕೊಂಡವನಿಗೆ ಅವರ ಭಾಷೆಯಲ್ಲಿ ‘ಲಾತ್‌ನಾ ಮಾರ್‌ಖವ್ ಘತೆಲೊ’ ಎಂದು ಕರೆಯುತ್ತಾರೆ.

೮. ಹೆಂಡತಿಯ ಬಾಣಾಂತಿತನ ಮುಗಿಯುವ ಮೊದಲೆ ಸುಮಾರು ಮೂರು ತಿಂಗಳಿನ ಒಳಗಾಗಿ ಆಕೆಯೊಂದಿಗೆ ಸಂಭೋಗಕ್ಕೆ ತೊಡಗಿದ ಗಂಡಸನ್ನು ‘ಮೊಹೊವ್ ವಾಳೊವ್’, ‘ದಚ್ಚನ ಲೊಹಿಮ ಕಲವ್' (ರಕ್ತದೊಳಗೆ ಕಲಸಿಬಿಟ್ಟೆ) ಎಂದು ಕರೆಯುತ್ತಾರೆ.

೯. ಅಂದಿನ ದಿನಗಳಲ್ಲಿ ಮುಟ್ಟಾದ ಹೆಂಗಸನ್ನು ಮೂರು ದಿವಸಗಳ ಕಾಲ ಮುಟ್ಟುವಂತಿಲ್ಲ. ಅವಳು ಯಾವುದೇ ಕಾರಣಕ್ಕೂ ಅಡಿಗೆ ಮತ್ತು ಬೇರಾವ ಕೆಲಸವನ್ನು ಮಾಡುವ ಹಾಗಿಲ್ಲ. ಈ ಮೂರು ದಿನಗಳಲ್ಲಿ ಪುರುಷರೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಹಾಗೇನಾದರೂ ಮುಟ್ಟಿದರೆ ಅಂತಹ ಗಂಡಸಿಗೆ ೨೦೦ರೂಗಳವರಗೆ ದಂಡ ಹಾಕುತ್ತಾರೆ. ಅಷ್ಟೇ ಏಕೆ ಅಂತಹ ಪುರುಷರನ್ನು ಜಾತಿಯಿಂದಲೇ ಒಂದು ತಿಂಗಳು ಕಾಲ ಹೊರಗೆ ಇಡುತ್ತಿದ್ದರು. ಈ ಅಪರಾಧ ಮಾಡಿದ ಗಂಡಸಿಗೆ ಅವರ ಭಾಷೆಯಲ್ಲಿ ‘ಭಾರ್‌ಹುಯ್ ಬಾಯಿಕೋನ ಚೋದು, ಲೊಹಿ ವಾಳೊವ್’ ಎಂದು ಕರೆಯುತ್ತಾರೆ.

೧೦. ಬೇರೆಯವರ ಹೆಂಡತಿಯನ್ನು ಅಪಹರಿಸಿದವನನ್ನು ‘ಚೊಟ್ಟಿಚೋದು, ಉಪ್‌ರೀನ ಉಡಾಯ್‌ಲಿಗೊ' ಎಂದು ಕರೆಯುತ್ತಾರೆ. ಅಪಹರಿಸಿದ ಹೆಣ್ಣಿನೊಂದಿಗೆ ವಾಪಸ್ಸು ಬಂದರೆ, ಅಂಥವರಿಗೆ ಕುಲಸ್ಥರೆಲ್ಲಾ ಸೇರಿ ಅವರನ್ನು ಹಿಡಿದು (ಇಬ್ಬರನ್ನು) ಬೆತ್ತಲು ಮಾಡಿ ಕಂಬಕ್ಕೆ ಕಟ್ಟಿ ಚರ್ಮದ ಬಾರುಕೋಲಿನಿಂದ ಘಟಗೀರರನ ಕೈಲಿ ಗಂಡಿಗೆ ಹನ್ನೆರಡು (೧೨) ಹಾಗೂ ಹೆಣ್ಣಿಗೆ ಇಪ್ಪತ್ತೆಂಟು (೨೮) ಏಟುಗಳನ್ನು ಹೊಡೆಸುತ್ತಿದ್ದರು.

ಇತಿಮಿತಿಗಳು

೧. ಹಕ್ಕಿಪಿಕ್ಕಿ ಸಮುದಾಯದಲ್ಲಿ ಲಗ್ನಕ್ಕಿಂತ ಮೊದಲೇ ಒಂದು ಹೆಣ್ಣು ಅನೈತಿಕವಾಗಿದ್ದಾಳೆಂಬ ಅನುಮಾನವೇನಾದರೂ ಕುಲಸ್ಥರಿಗೆ ಬಂದರೆ, ಅಂಥಹ ಹುಡುಗಿಯನ್ನು ಪರೀಕ್ಷಿಸಲು ಹೆಂಗಸರನ್ನು ಬಿಟ್ಟು ಅಪರಾಧಿ ಎನಿಸಿಕೊಂಡ ಹೆಣ್ಣಿನ ಯೋನಿಯೊಳಗೆ ಕೋಳಿ ಮೊಟ್ಟೆಯನ್ನು ತುರುಕುವ ಮೂಲಕ ಪರೀಕ್ಷೆ ಮಾಡುತ್ತಾರೆ. ಮೊಟ್ಟೆ ಯೋನಿ ಒಳಗೆ ಹೋಗದಿದ್ದರೆ ಆ ಹೆಣ್ಣು ಯಾರೊಂದಿಗೂ ಸಂಭೋಗ ಮಾಡಿಸಿಕೊಂಡಿಲ್ಲವೆಂತಲೂ, ಮೊಟ್ಟೆ ಒಳಗೆ ಹೋಗಿಬಿಟ್ಟರೆ ಅವಳು ಬೇರೆಯವರೊಂದಿಗೆ ಸಂಭೋಗ ಮಾಡಿಸಿಕೊಂಡಿದ್ದಾಳೆಂದು ತಿಳಿದು ಆಕೆಗೆ ದೇವಿನಾ ಟೀಕ್‌ಬಂದ್ ಅಂದರೆ ದೇವಿಯ ಆಶೀರ್ವಾದದ ಬೊಟ್ಟಿನ ಶಾಸ್ತç ಇಲ್ಲವೆಂದು ನಿರ್ಧರಿಸುವುದರಿಂದ ಯಾರೂ ಆಕೆಯನ್ನು ಮದುವೆ ಶಾಸ್ತ್ರದಿಂದ ಲಗ್ನವಾಗುವುದಿಲ್ಲ. ಹಾಗಾಗಿ ಆಕೆ ಟೀಕಂಧಾರಿಣಿ ಆಗುವುದಿಲ್ಲ. ಆದರೆ ಆಕೆ ‘ಸೀರುಡಿಕೆ' ಮಾಡಿಕೊಳ್ಳುವ ಅವಕಾಶವಿದೆ. ಇದಕ್ಕೆ ಆಕೆ ದಂಡವಾಗಿ ಮದುವೆಯಲ್ಲಿ ಕುಲಕ್ಕೆ ಊಟ ಹಾಕಿಸಿ ವೀಳ್ಯದೆಲೆ ಕೊಡಬೇಕಾಗುತ್ತದೆ. ಹೀಗೆ ವೀಳ್ಯದೆಲೆ ಕೊಟ್ಟವಳನ್ನು ‘ಕವಾರೆ ಚೋದಿ'(ಲಗ್ನಕ್ಕಿಂತ ಮೊದಲೆ ನಡತೆಗೆಟ್ಟವಳು) ಎಂದು ಕರೆಯುತ್ತಾರೆ.

೨. ತಮ್ಮ ಅಲೆಮಾರಿ ಬದುಕಿನಲ್ಲಿ ತಮ್ಮ ಊರಿನಿಂದ ಬೇರೆ ಊರಿಗೆ ಹೋದಾಗ ಅವಳು ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದವಳಿಗೆ ‘ಬಹರ್ ಪಹಿಲೆ ಚೋದ ಯ್‌ಗಯ್' ಎಂದು ಕರೆಯುತ್ತಾರೆ. ಅಂತಹ ಹೆಣ್ಣು ಮಕ್ಕಳಿಗೆ ೧೦೧ ರೂ. ದಂಡ ಹಾಗೂ ತಪ್ಪಿನ ಕುಡಿತ, ಹಾಗೂ ಅದರ ದಂಡದ ರೂಪದಲ್ಲಿ ಊಟವನ್ನು ಕುಲಸ್ಥರೆಲ್ಲಾ ಪಡೆಯುತ್ತಾರೆ.

ಪ್ರಸ್ತುತ ದಿನಮಾನಗಳಲ್ಲಿ ಮೇಲೆ ಉಲ್ಲೇಖಿಸಿದ ಕೆಲವು ಶಿಕ್ಷೆ ಹಾಗೂ ನಿಬಂಧನೆಗಳಲ್ಲಿ ಸ್ವಲ್ಪ ಸಡಿಲಿಕೆಯೂ ಕಂಡುಬರುತ್ತಿದೆ. ಕೆಲವು ಮಾತ್ರ ಪೂರ್ತಿಯಾಗಿ ಕೈಬಿಟ್ಟು ಹೋಗಿವೆ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಈ ಸಾಮಾಜಿಕ ಬದಲಾವಣೆಗಳ ನಡುವೆ ಈ ಬದಲಾವಣೆಗಳು ಸರ್ವೆಸಾಮಾನ್ಯ. ದಿನದಿಂದ ದಿನಕ್ಕೆ ಸರಳವಾಗುತ್ತಿರುವ ರಾಜಗೊಂಡ ಮತ್ತು ಹಕ್ಕಿಪಿಕ್ಕಿ ಸಮುದಾಯಗಳ ಜೀವನದಂತೆ ಅವರ ನ್ಯಾಯ ನಿಯಮಗಳೂ ಸರಳವಾಗುತ್ತಿವೆಯೆಂದೇ ಹೇಳಬಹುದಾಗಿದೆ.

ಕಡೆನುಡಿ

ಒಟ್ಟಾರೆಯಾಗಿ ಈ ಮೊದಲು ಉಲ್ಲೇಖಿಸಿದ ಅಂಶಗಳನ್ನು ಗಮನಿಸಿದರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ನ್ಯಾಯಪದ್ಧತಿಯ ಕೆಲವು ಆಚರಣಾ ತತ್ವಗಳು ಹೆಚ್ಚು ಉಪಯುಕ್ತವೆನಿಸುತ್ತದೆ. ಆಧುನಿಕತೆಯ ಸೋಂಕು ತಗುಲಿದ ಕಾರಣಕ್ಕಾಗಿ ಮತ್ತು ಜಾತಿ ಪಂಚಾಯತಿಯ ಶಿಕ್ಷೆಗಳಿಂದ ತಪ್ಪಿಸಿಕೊಳ್ಳಲಾರಂಭಿಸಿದ್ದರಿಂದ ಜಾತಿ ಪಂಚಾಯತಿಯು ಮೊದಲಿನ ಸ್ವರೂಪ ಕಳೆದುಕೊಂಡು ಬದಲಾಗಿದೆ. ಪ್ರಸ್ತುತ ದಿನಮಾನಗಳಲ್ಲಿನ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಕೊಡಮಾಡುವ ಕೆಲವು ನ್ಯಾಯ ತೀರ್ಮಾನಗಳು ಸಮಯವನ್ನು, ಹಣವನ್ನು, ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ ಸಾಮಾಜಿಕ ನಿಯಂತ್ರಣದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗಿವೆ. ಸ್ವಜನಪಕ್ಷಪಾತದ ಮೇಲೆ ನಡೆಯುವ ಕೆಲವು ನ್ಯಾಯ ತೀರ್ಮಾನಗಳು ಹಲವು ಸಾಮಾಜಿಕ ಸಮಸ್ಯೆ (ಪ್ರಾದೇಶಿಕ ಅಸಮಾನತೆ, ಕೊಲೆ, ಸುಲಿಗೆ ದರೋಡೆ ಮೊದಲಾದವು)ಗಳಿಗೆ ಎಡೆಮಾಡಿಕೊಡುವುದರಲ್ಲಿ ಸಂದೇಹವಿಲ್ಲ. ಹಳೆಯ ನ್ಯಾಯಪದ್ಧತಿಯ ಕೆಲವು ಅಂಶಗಳನ್ನು ಹೊಸ ನ್ಯಾಯಪದ್ಧತಿಯೊಂದಿಗೆ ಮೇಳೈಸಿಕೊಂಡು ಸಾಮಾಜಿಕ ಶಾಂತಿ ಸುಭದ್ರತೆಯನ್ನು ಸಾಧಿಸಬೇಕೆಂಬುದು ಪ್ರಸ್ತುತ ಬರೆಹದ ಮೂಲ ಆಶಯವಾಗಿದೆ.

ಪರಾಮರ್ಶನ ಸಾಹಿತ್ಯ

  1. ಇಂದಿರಾ ಆರ್(ಸಂ), ೨೦೧೨, ಸಮಾಜಶಾಸ್ತ್ರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು.
  2. ಕುಮುದಾ ಬಿ ಸುಶೀಲಪ್ಪ, ೨೦೦೮, ಅಲೆಮಾರಿ ಸಮುದಾಯಗಳ ಅಧ್ಯಯನಮಾಲೆ ಹಕ್ಕಿಪಿಕ್ಕಿ, ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.
  3. ಭಾರತೀಯ ಸಮಾಜದ ಸಮಾಜಶಾಸ್ತ್ರ, ದ್ವಿತೀಯ ಪಿ ಯು ಸಿ III ಪರಿಷ್ಕೃತ ಪಠ್ಯಪುಸ್ತಕ, ೨೦೧೭, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು.
  4. ಮೇತ್ರಿ ಕೆ ಎಂ, ೨೦೧೭, ಸೂಕ್ಷ್ಮ ಆದಿವಾಸಿಗಳು, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಬೆಂಗಳೂರು.
  5. ಮೇತ್ರಿ ಕೆ ಎಂ ಮತ್ತು ಗುರುಲಿಂಗಯ್ಯ ಎಂ, ೨೦೧೦, ಅಲಕ್ಷಿತರ ಸಮಾಜಶಾಸ್ತ್ರ, ದೂರಶಿಕ್ಷಣ ನಿರ್ದೇಶನಾಲಯ ಕನ್ನಡ ವಿಶ್ವವಿದ್ಯಾಲಯ ಹಂಪಿ.
  6. ಮೇತ್ರಿ ಕೆ ಎಂ ಮತ್ತು ಸುದರ್ಶನ್ ಸೆಡ್ಮಾಕಿ, ೨೦೦೮, ಅಲೆಮಾರಿ ಸಮುದಾಯಗಳ ಅಧ್ಯಯನಮಾಲೆ ರಾಜಗೊಂಡ’, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.
  7. ಮೋಹನ್‌ಕೃಷ್ಣ ರೈ ಕೆ (ಸಂ), ೨೦೧೫, ಸಮಾಜ ಅಧ್ಯಯನ ಸಂಪುಟ ೧ ಸಂಚಿಕೆ ೧, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ. 


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal