Tumbe Group of International Journals

Full Text


                            ಚಕೋರಿ ಕಾದಂಬರಿಯಲ್ಲಿ ಸ್ತ್ರೀ ಪಾತ್ರ

ಡಾ. ಕೃಷ್ಣಮೂರ್ತಿ .ಎನ್‌ .ಪಿ

ಕನ್ನಡ ಸಹಾಯಕ ಪ್ರಾದ್ಯಾಪಕ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವನಹಳ್ಳಿ

9844367304  Email: npkgfgc17@gmail.com


ಪ್ರಸ್ತಾವನೆ

     ಆಧುನಿಕತೆಯು ಮನುಷ್ಯನ ಸಹಜವಾದ ಪ್ರೀತಿ, ವಿಶ್ವಾಸ, ಸಂಂಬಧಗಳು ಛಿದ್ರಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಚಂದ್ರಶೇಖರ ಕಂಬಾರ ಕಾವ್ಯ ಮತ್ತು ನಾಟಕಗಳಲ್ಲಿ ಸಮುದಾಯದ ಅಖಂಡತೆಯನ್ನು ಎತ್ತಿ ಹಿಡಿಯುವ ಮತ್ತು ದೇಸಿ ಮೌಲ್ಯಗಳನ್ನು, ಅದರ ಸತ್ತ್ವವನ್ನು ಉಳಿಸುವ ಹಂಬಲವನ್ನು ಕಾಣಬಹುದು. ನವ್ಯದ ಉತ್ತುಂಗದ ಆಧುನಿಕತೆಯ ವ್ಯಾಮೋಹಕ್ಕೆ ಒಳಗಾಗದೇ ತಮ್ಮ ಸಾಹಿತ್ಯದಲ್ಲಿ ʼಶಿವಾಪುರʼ ದಂತ ಪಾರಂಪರಿಕ ಜಗತ್ತುನ್ನು ಸೃಷ್ಠಿ ಮಾಡಿದವರು. ನವ್ಯ ಸಾಹಿತ್ಯದ ಮಾದರಿಗಳನ್ನು ನಿರಾಕರಣೆ ಮಾಡುತ್ತಲೇ ಭಿನ್ನವಾದ  ಶಿವಾಪುರ ವೆಂಬ  ದೊಡ್ಡ ರೂಪಕವಾದ ಜಗತ್ತನ್ನು ಆದುನಿಕತೆಯ ಎದುರಿಗೆ ನಿಲ್ಲಿಸಿದವರು. ಈ ಜಗತ್ತು ಪ್ರತಿಪಾದಿಸುವ ಜಾನಪದ ಪುರಾಣಗಳ ಮರುಸೃಷ್ಟಿ, ಅತಿಮಾನುಷ ವಸ್ತು ತಂತ್ರಗಳು, ದೈವಿಕ ಮತ್ತು ಮಾನವ ಜಗತ್ತು ನ್ನು ತಮ್ಮ ಕೃತಿಗಳಲ್ಲಿ ಮಂಡಿಸಿದವರು. ಡಾ. ಕೆ . ಸಿ ಶಿವಾರೆಡ್ಡಿ ಯವರು ಹೇಳುವಂತೆʼ ಸ್ಧಳೀಯತೆಯ ಸತ್ತ್ವಗಳನ್ನು ಕೇಂದ್ರ ಪ್ರಜ್ಞೆಯನ್ನಾಗಿಸಿಕೊಂಡು ಸಾಹಿತ್ಯ ಕೃಷಿ ಕಂಬಾರರದ್ದು”.  ಅಂತಹ ದೇಸಿ ಸಂಸ್ಕೃತಿಯಲ್ಲಿನ ನಂಬಿಕೆಗಳು, ಬಿಕ್ಕಟ್ಟುಗಳು, ಆಚಾರ-ವಿಚಾರಗಳು, ಕಲೆ, ಮತ್ತು ಕಲೆಗಾರರ ನೆಲೆಗಳನ್ನು ಚಕೋರಿ ಕಾದಂಬರಿಯಲ್ಲಿ ಕಾಣಬಹುದು. ಚಕೋರಿ ಕೃತಿಯ ರಚನೆಯೆ  ಕನ್ನಡಸಾಹಿತ್ಯದ  ವಿಶಿಷ್ಟ ಪ್ರಕಾರ. ಈಗಾಗಲೇ ಸಾಹಿತ್ಯ ರಚನೆಯ ಸಿದ್ದ ಮಾದರಿಯನ್ನ ಮೀರಿ ಹೊಸದಾದ ರಚನೆಯಾಗಿದೆ. ಕಂಬಾರರೇ  ಈ ಕೃತಿಯನ್ನು ʼ ವಚನ ಕಾದಂಬರಿ ʼ ಎಂದು ಕರೆದಿದ್ದಾರೆ. ಆದರೆ ಅದರ ಸ್ವರೂಪವನ್ನು ಗಮನಿಸಿದಾಗ ಕಾದಂಬರಿಯಾಗಿರುವುದನ್ನು ಕಾಣಬಹುದು. ಪ್ರಸ್ತುತ ಲೇಖನದಲ್ಲಿ ಚಕೋರಿ ಕಾದಂಬರಿಯಲ್ಲಿನ ಸ್ತ್ರೀ ಪಾತ್ರದ   ವಿವಿಧ ನೆಲೆಗಳನ್ನು  ವಿಶ್ಲೇಷಿಸುವುದಾಗಿದೆ.

ಕೀವರ್ಡ್: ಅಂತರಾಷ್ಟ್ರೀಯ, ರಾಷ್ಟ್ರಪಿತ, ಜಾಗತೀಕ, ದೀಮಂತ.

ಪೀಠಿಕೆ

ಕನ್ನಡದ ನವ್ಯ ಕಾದಂಬರಿಕಾರರು ಹೆಣ್ಣುನ್ನು ಕಾಲಕೇಂದ್ರಿತ ದೃಷ್ಟಿಯಲ್ಲಿ ನೋಡಿದವರೇ ಹೆಚ್ಚು. ನವ್ಯ ಕಾದಂಬರಿಯಲ್ಲಿನ ಹೆಣ್ಣನ್ನು ಸ್ತ್ರೀವಾದೀ  ವಿಮರ್ಶಾ ಮಾನದಂಡಗಳ ಮೂಲಕ ವಿವರಿಸಬಹುದು ಆದರೆ ಕಂಬಾರರ ಕೃತಿಗಳಲ್ಲಿನ ಹೆಣ್ಣಿನ ಪಾತ್ರಗಳನ್ನು ವಿಶ್ಲೇಷಿಸಲು ಕನ್ನಡದ ವಿಮರ್ಶಾ ಮಾನದಂಡಗಳು ಸಾಕಾಗುವುದಿಲ್ಲ. ಏಕೆಂದರೆ ಅವರ ಸಿಂಗಾರವ್ವ ಮತ್ತು ಆರಮನೆ ಯಲ್ಲಿನ ಸಿಂಗಾರವ್ವ, ಜೋಕುಮಾರ ಸ್ವಾಮಿಯಲ್ಲಿನ ಗೌಡ್ತಿ, ಶಾರಿ , ಕರಿಮಾಯಿಯಂತ ಪಾತ್ರಗಳು ಪುರಾಣ ಇಲ್ಲವೇ ಆಚರಣೆಗಳ ಜೊತೆ ತಳಕು ಹಾಕಿಕೊಂಡತವುಗಳು. ಚಕೋರಿ ಕಾದಂಬರಿಯಲ್ಲಿ ಬರುವ  ಲಕ್ಕಬ್ಬೆ ಮತ್ತು ಯಕ್ಷಿಯ ಪಾತ್ರಗಳು ಅಂತಹ ಪುರಾಣದ ಜೊತೆ ತಳಕು ಹಾಕಿಕೊಂಡವು. ಹೆಣ್ಣನ್ನು ಕಾಮದ ದೃಷ್ಟಿಯಿಂದ ಅಲ್ಲದೇ ಬದುಕನ್ನು ರೂಪಿಸುವ, ಬೆಳೆಸುವ, ಸಂಬಂದಗಳನ್ನು ಕೂಡಿಸುವ ಸಲುವಾಗಿಯೇ ಹೆಣ್ಣನ್ನು ಈ ಕೃತಿಯಲ್ಲಿ ಮುಖ್ಯ ಪಾತ್ರವಾಗಿಸಿದ್ದಾರೆ. ಆದರೆ ಕೆಲವು ಕಡೆಯಲ್ಲಿ ಕೂಡ ಹೆಣ್ಣು ಕೂಡ ಕಾಮದ, ಕೇವಲ ಲೈಂಗಿಕತೆಯ ನೆಲೆಯಲ್ಲಿಯು ಚಿತ್ರಿಸಿದ್ದಾರೆ. ಈ ಕಾದಂರಿಯ ಲಕ್ಕಬ್ಬೆಯು ತನ್ನ ಗಂಡನ ನೆನಪೆ ಇಲ್ಲದಿರುವಂತೆ ಮಾಡಿರುವುದೇ ಮನುಷ್ಯನ ಅದಿಮ ಸ್ಥಿತಿಯಲ್ಲಿ ಹೆಣ್ಣು ಗಂಡಿನ ಹಂಗಿಲ್ಲದೇ ಸ್ವತಂತ್ರವಾಗಿ ಬದುಕಬಲ್ಲಳು ಎಂಬುದನ್ನು ಹೇಳುತ್ತಿದ್ದಾರೆ.

ಲಕ್ಕಬ್ಬೆಯು ಚಂದಮುತ್ತನ ತಾಯಿಯಾಗಿ ಅವನಿಗೆ ಮನೆಯ ಆಚರಣೆಗಳು, ಸಂಪ್ರದಾಯ ವಿಧಿಗಳು,ಅವುಗಳ ಪಾವಿತ್ರತೆ ಎಲ್ಲವನ್ನು ತುಂಬುತ್ತಾಳೆ. ಲಕ್ಕಬ್ಬೆಯು ಇಡೀ ಕಾದಂಬರಿಯಲ್ಲಿ ʼಆದಿಮಾಯೆʼಯ ನಕಲು ಅಥವಾ ಪ್ರತಿರೂಪ. ಇದರ ಜೊತೆಯಲ್ಲಿಯೇ ಮಗನ ತಾಯಿಯು ಹೌದು. ಮಗನ ಸುಖ ಸಂತೋಷ ಕ್ಕಾಗಿ ಹಂಬಲಿಸುವ ಜೊತೆಯಲ್ಲಿಯೇ ಅವನು ಯಕ್ಷಿಯ ಜೊತೆಗಿನ ಸಂಬಂಧ ತಿಳಿದಾಗ ಆತಂಕಕ್ಕೆ ಒಳಗಾಗುತ್ತಾಳೆ. ಇದಕ್ಕೆ ಯಕ್ಷಿಯು ಚಂದಮುತ್ತನನ್ನು ಲಕ್ಕಬ್ಬೆಯಿಂದ ದೂರ ಮಾಡುತ್ತಿರುವುದು ಕಾರಣ. ಲಕ್ಕಬ್ಬೆಯ ದುಃಖಕ್ಕೆ ಇನ್ನೊಂದು ಕಾರಣ ದೈವವಾದ ಯಕ್ಷಿಯ ಜೊತೆಗಿನ ಸೇಡು ಮಾಡಿಕೊಳ್ಳುವುದು ಕೆಡಕೆನಿಸುತ್ತೆ. ಅದನ್ನು ಈ ಮಾತುಗಳಲ್ಲಿ ಕಾಣಬಹುದು.

ಕದ ಮುಚ್ಚಿರೇ ಬ್ಯಾಗ ಕನ್ನ ಹಾಕುತ್ತಾಳೆ

ಚಂದ್ರಲೋಕದ ಯಕ್ಷಿ ಬಂದು ಕಂದನ್ನ

 ಕಿನ್ನರ ಲೋಕೊಯ್ದಳು. ೨

ಲಕ್ಕಬ್ಬೆಯು ತನ್ನ ಮಗನು ತನ್ನಿಂದ ದೂರವಾದುದರ ಬಗ್ಗೆ ಆತಂಕಗೊಳ್ಳುತ್ತಲೇ ಯಕ್ಷಿಯ ಜೊತೆ ಮದುವೆ ಆದಾಗಲೂ ಅವಳನ್ನು ಆತ್ಮೀಯತೆ ನೋಡುವ ಗುಣವಿದೆ.

ನಿನಗ್ಯಾರೂ ಸರಿಯಾಗದ ಸೊಸೆಮುದ್ದೇ

ಬಳಗವೆಲ್ಲವ ತೊರೆದು ಮಗನ ಬಳಿ ಬಂದೆ

ನರಲೋಕದ ನಡಾವಳಿ ನಿನಗರಿಯದೆ ?

ಮಗಬೇಕು , ಮಗನ ತಾಯಿ ಬ್ಯಾಡೆಂದರೆ ಹ್ಯಾಂಗವ್ವ

ಅವನ ಜೊತೆ ಮಾತನಾಡುತ್ತೀ ನನ್ನೊಂದಿಗ್ಯಾಕಿಲ್ಲ

ನನಗೊಮ್ಮೆ ಬಾಯಿತುಂಬ ಅತ್ತೆ ಅನಬಾರದ ನನ್ನವ್ವ

ಗೊಲ್ಲಕುಲದ ನಡತೆ ಸೇರದೆ ನಿನಗೆ ?೩

ಲಕ್ಕಬ್ಬೆಯ  ಈ ಸಹಜ ಮಾತುಗಳಲ್ಲಿ ಭಕ್ತಿ ,ಸಲಿಗೆ, ಅಧಿಕಾರ ಎಲ್ಲವೂ ಇದೆ. ಆದರೆ ಯಕ್ಷಿಯು ಮಾನವ ರೂಪ ಪಡೆದು ಮಗನೊಂದಿಗೆ ಸಂಸಾರ ಮಾಡಿ ಮೊಮ್ಮಗನನ್ನು ಪಡೆಯಲಾರಳು ಎಂಬ ನೋವು ಕೂಡ ಇದೆ.

 ತನ್ನ ಮಗನು ಹೇಳದೇ ಕೇಳದೇ  ಕಣ್ಮರೆಯಾದಾಗ ತಳಮಳಕ್ಕೆ ಒಳಗಾಗುತ್ತಾಳೆ. ಇದಕ್ಕೆ ಕಾರಣಳಾದ ಯಕ್ಷಿಯ ಶಿಲೆಯ ಮೇಲೆ ಸಗಣಿ ಮತ್ತು ಮೆಣಸಿನ  ನೀರನ್ನು ಹುಯ್ದು ತನ್ನ ಪ್ರತಿಭಟನೆಯನ್ನು ಮಾಡುತ್ತಾಳೆ. ಮಗನು ಹಿಂದಿರುಗಿ ಬರದೇ ಇದ್ದಾಗ ಮಾತೃಪ್ರೇಮದ ಶಕ್ತಿಯು ದೇವತೆಯಾದ ಯಕ್ಷಿಯನ್ನು ಕೂಡಾ ದಹಿಸುವಂತದ್ದು .ಕೊನೆಗೆ ಚಂದಮುತ್ತ ಶಿಲೆಯಾದಾಗ ಲಕ್ಕಬ್ಬೆ ತಲ್ಲಣಗಳಿಗೆ ಒಳಗಾಗುತ್ತಲೇ  ತನ್ನ ದಿನನಿತ್ಯದ ಬದುಕಿಗೆ ಮತ್ತೆ ಮುಖಾಮುಖಿಯಾಗುತ್ತಾಳೆ.

 ಚಕೋರಿಯ ಇನ್ನೊಂದು ಪಾತ್ರ ʼಚಕೋರಿʼ ಅಥವಾ ಯಕ್ಷಿ. ಇವಳು ಏಕಕಾಲಕ್ಕೆ ಹೆಣ್ಣು ಮತ್ತು ದೈವವೂ ಆಗಿದೆ. ಚಂದಮುತ್ತನ ಜೊತೆಗಿನ ಸಂಬಂಧ  ಮತ್ತು ಲಕ್ಕಬ್ಬೆಯ ಜೊತೆಗಿನ ಇವಳ ಒಡನಾಟ ಮುಖ್ಯವಾದದು. ತಾನು ದೈವ ವೆಂಬುದನ್ನ ಮರೆತು ಚಂದಮುತ್ತನಿಗೆ ಸೋಲುವ, ಅನುರಕ್ತಳಾಗುವ ಚಕೋರಿಯು ಅನೇಕ ರೀತಿಯ ಅಪಾಯಗಳನ್ನು ತಂದುಕೊಳ್ಳುತ್ತಾಳೆ. ’ಮಂದೀ  ಏನಂದಾರು ನಾ ಹಿಂದೆ ಬರಲು …. ವಾರೀಗಿ ದೇವರು ಕೋಪಗೊಂಡಾರು೪ʼ ಎಂಬ ಅವಳ ಮಾತುಗಳಲ್ಲಿ ದೈವ ಮತ್ತು ಮನುಷ್ಯ ಜಗತ್ತಿನಿಂದಲೂ ತಿರಸ್ಕಾರಕ್ಕೆ ಒಳಗಾಗುವ ಅತಂಕ ಅವಳದ್ದು.  ಆದರೆ ಚಂದಮುತ್ತನ ಪ್ರೀತಿ ಅವಳನ್ನು ಗಾಡವಾಗಿ ಪ್ರೀತಿಸುವದೇ ಮುಖ್ಯವಾಗುತ್ತೆ ಅವಳಿಗೆ. ತಿಂಗಳರಾಗವನ್ನು ಕಲಿಯ ಹೊರಟ ಚಂದಮುತ್ತನಿಗೆ  ಅದನ್ನು ಕಲಿಸುತ್ತಾ ಕಾಮದ ಆತುರದಲ್ಲೇ ಅವನನ್ನು ನೋಡಿ ಅಪ್ಪಿ, ಒಂದಾಗುತ್ತಾರೆ. ಮಾನವನ ಶಕ್ತಿಯ ಅರಿವಾಗುವುದೇ ಅವಳಿಗೆ ಇಂತಹ ಗಳಿಗೆಯಲ್ಲಿ. ದೈವತ್ವದಿಂದ ಮಾನವಳಾಗುವ ಆ ಮೂಲಕ ದುರಂತದ ಕಡೆಗೆ ಸಾಗುವುದನ್ನು ಕಾಣಬಹುದು. ಕಾದಂಬರಿಯ ದುಷ್ಟರೂಪವಾದ  ಮಹಾನುಭಾವ ಚಿನ್ನ ಮುತ್ತನು  ಚಕೋರಿಯನ್ನು ದುಷ್ಟಮಾರ್ಗದಿಂದ ಒಲಿಸಿಕೊಳ್ಳ ಹೊರಟಾಗ ಅವಳು ಶಿಲೆಯಾಗುತ್ತಾಳೆ. ಮತ್ತೆ ಇವಳಿಗೆ ಜೀವ ಬರಬೇಕಾದರೆ ಚಂದಮುತ್ತ ಶಿಲೆಯಾಗಬೇಕು. ತನ್ನ ತಿಂಗಳರಾಗವನ್ನು ನುಡಿಸುವ ಮೂಲಕ ಚಕೋರಿಯು ಯಕ್ಷಿಯ ರೂಪ ಧರಿಸಿ

ಪ್ರೀತಿ ಮತ್ತು ಅಭಿಮಾನದ ಕಡೆಗಣ್ಣು ಕುಡಿನೋಟದಲ್ಲಿ

ಚಂದಮುತ್ತನ ನೋಡಿ

ಮೋಹದಲ್ಲಿ ಅವನ ಹಾಡಿಗೆ ತಾಳ ಬಾರಿಸಿದಂತೆ

ರೆಕ್ಕೆ ಬಡಿಯುತ್ತ

ಎಳೆಯ ಬೆಳ್ದಿಂಗಳಲ್ಲಿ ಮೇಲು ಮೇಲಕ್ಕೆ ಈಜುತ್ತ ಹಾರಿದಳು ೪

ಚಕೋರಿಯು ಚಂದಮಯತ್ತನಿಂದ ದೂರವಾದರೂ ಪಡೆಯುವ ಹಂಬಲವೂ ಇದೆ. ಅದಕ್ಕೆ ಕಾರಣ ಚಂದಮುತ್ತ ಹೆಂಗರಳಿನವನು ಎಂದು. ಆದರೆ ಯಕ್ಷಿಯಲ್ಲಿಯೇ ಗಂಡಾಳಿನ ಮೌಲ್ಯಗಳನ್ನು ಉಳ್ಳವಳು. ಚಿನ್ನಮುತ್ತನ ಕುತಂತ್ರಕ್ಕೆ ಬಲಿಯಾಗಿ ಅನಂತತೆಯನ್ನು ತಲುಪುತ್ತಾಳೆ.

ಸಮಾರೋಪ

ಚಕೋರಿಯ ಲಕ್ಕಬ್ಬೆ ಮತ್ತು ಯಕ್ಷಿಯ ಪಾತ್ರಗಳು ಪುರುಷಾಧಿಕಾರದ ನೆಲೆಗಳನ್ನು ನಿರಾಕರಿಸಿ ತಮ್ಮದೇ ಆದ ನೆಲೆಗಳನ್ನು ಕಂಡುಕೊಂಡ ಪಾತ್ರಗಳು. ದೈವಿಕ ನೆಲೆಯಾಗಿ ಕಾಣದ ಯಕ್ಷಿಯು ಕೂಡಾ ಸಹಜ ಸ್ತ್ರೀ ಯಾಗಿ ಕಂಡರೆ, ಲಕ್ಕಬ್ಬೆ ತಾಯಿಯಾಗಿ ತನ್ನ ಸಂಕಟಗಳು, ನೋವುಗಳ ನಡುವೆಯು ಬದುಕಿ ಉಳಿಯುವ ಚೈತನ್ಯವಾಗುತ್ತಾಳೆ.

ಅಡಿ ಟಿಪ್ಪಣಿ

  1. ಕೆ.ಸಿ ಶಿವಾರೆಡ್ಡಿ- ಚಕೋರಿ ಒಂದು ಅಧ್ಯಯನ , ಪುಟ42
  2. ಚಂದ್ರ ಶೇಖರ ಕಂಬಾರ – ಚಕೋರಿ , ಪುಟ 61
  3. ಚಂದ್ರ ಶೇಖರ ಕಂಬಾರ – ಚಕೋರಿ , ಪುಟ 11
  4. ಚಂದ್ರ ಶೇಖರ ಕಂಬಾರ – ಚಕೋರಿ , ಪುಟ 167 

ಪರಾಮರ್ಶನ ಗ್ರಂಥಗಳು

  1. ಡಾ. ಚಂದ್ರಶೇಖರ ಕಂಬಾರ : ಚಕೋರಿ .ಅಕ್ಷರ ಪ್ರಕಾಶನ , ಹೆಗ್ಗೋಡು ೧೯೯೬
  2. ಕೆ.ಸಿ ಶಿವಾರೆಡ್ಡಿ ( ಸಂ) - ಚಕೋರಿ ಒಂದು ಅಧ್ಯಯನ , ಸಿ.ವಿ.ಜಿ ಪ್ರಕಾಶನ ೧೯೯೮
  3. ಹೆಚ್‌. ಎಸ್‌ . ಶಿವಪ್ರಕಾಶ್‌ (ಸಂ) : ಸಿರಿಸಂಪಿಗೆ ಕಂಬಾರ -೬೦ . ರಂಗನಿರಂತರ ೧೯೯೭   


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal