Tumbe Group of International Journals

Full Text


ಚೆನ್ನದಾಸರ ಸಮುದಾಯ ನ್ಯಾಯ ಪದ್ಧತಿ

ಹನಮಯ್ಯ

ಪಿಎಚ್.ಡಿ ಸಂಶೋಧನಾರ್ಥಿ

ಅಭಿವೃದ್ಧಿ ಅಧ್ಯಯನ ವಿಭಾಗ

ಕನ್ನಡ ವಿಶ್ವವಿಧ್ಯಾಲಯ, ಹಂಪಿ, ವಿದ್ಯಾರಾಣ್ಯ

ಇಮೇಲ್ : hysangati108@gmail.com

ಪೋನ್ ನಂ: 7829775997


 ಪ್ರಸ್ತಾವನೆ

ತಮ್ಮ ಸಮುದಾಯದ ಅನ್ಯಾಯ-ಅಸಮಾನತೆಗಳನ್ನು ನಿವಾರಿಸುವುದು, ಕಟ್ಟುಪಾಡುಗಳನ್ನು ಉಲ್ಲಂಘಿಸಿದವರಿಗೆ ಎಚ್ಚರಿಸಲು, ಅಗತ್ಯವಾದರೆ ಶಿಸ್ತುಕ್ರಮ ಜರಗಿಸಲು, ಬೇರೊಂಬ್ಬರ ಮೇಲೆಯಾಗುವ ದೌರ್ಜನ್ಯ, ದಬ್ಬಾಳಿಕೆ ತಡೆಯಲು ಚೆನ್ನದಾಸರ ಸಮುದಾಯದಲ್ಲಿ ‘ನ್ಯಾಯ ಪಂಚಾಯಿತಿ’ಯು ಅಸ್ತಿತ್ವದಲ್ಲಿದೆ. ಆದಿ ಕಾಲದಿಂದಲೂ ಜಾರಿಯಲ್ಲಿರುವ ನ್ಯಾಯ ಪದ್ಧತಿಯ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯ ಕುರಿತಾಗಿ ಅನಂತಕೃಷ್ಣ ಅಯ್ಯರ್ ಅವರು “ದಾಸರಿಗಳು ಕಟ್ಟೆಮನೆಯೆಂಬ ಕುಲಸಭೆಯನ್ನು ಹೊಂದಿದ್ದಾರೆ. ಈ ಪ್ರತಿ ಅಭಾಮನೆಗಳನ್ನು ಪಿನ್ನಪೆದ್ದ(ಹಿರಿಯ ಅಥವಾ ಕಿರಿಯ) ಗುಡಿಗಾಡನ್ನು ಅಲಂಕರಿಸುತ್ತಾನೆ. ಗುಡಿಗಾಡು ದೇವಸ್ಥಾನದ ಸೇವರಕರು, ಕುಲಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅವಲೋಕನ ಮಾಡುತ್ತಾರೆ. ಅಲ್ಲದೆ ಇವರ ಸಹೋದ್ಯೋಗಿಯಾದ ಪಿನ್ನ ಪೆದ್ದ ವರದಿಯನ್ನು ನೀಡುತ್ತಾನೆ. ಪಿನ್ನ್‍ಪೆದ್ದನ್ನು ಜನರ್ನು ಒಂದೆಡೆ ಸೇರಿಸಿ, ವಿವಾದವನ್ನೊಳಗೊಂಡ ವಿಷಯವನ್ನು ಮತಗಳ ಸಂಖ್ಯೆಯಿಂದ ನೀರ್ಧರಿಸುತ್ತಾನೆ. ಮತಗಳು ಸಮನಾಗಿದ್ದಾರೆ ತಮ್ಮ ಸಭೆಯಲ್ಲಿ ವಿಷಯವನ್ನು ನಿರ್ಧರಿಸಲು ಪ್ರಮಾಣದ ಅಔದಿಯಲ್ಲಿ ಗುರುವಿಗೆ ಬಿಡುತ್ತಾರೆ. ಗುರುವು ಕಟ್ಟೆ ಮನೆಯನ್ನು ವಿಚಾರಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ.” ಎಂದು ಹೇಳಿದ್ದಾರೆ.

ಕೀವರ್ಡ್: ಚೆನ್ನದಾಸರ ಸಮುದಾಯ, ನ್ಯಾಯ ಪದ್ಧತಿ, ನ್ಯಾಯ ಪಂಚಾಯಿತಿ, ಕಟ್ಟೆಮನೆ.

ಪೀಠಿಕೆ

ಕೆ. ಎಸ್. ಸಿಂಗ್ ಅವರು-“ಸಾಂಪ್ರದಾಯಿಕ ಜಾತಿ ಸಮಿತಿ ಅವರಲ್ಲಿದ್ದು ಅದನ್ನು ಕಟ್ಟೆಮನೆ ಎಂದು ಕರೆಯುತ್ತಾರೆ. 15 ರಿಂದ 20 ಸದಸ್ಯರು, ಮುಖ್ಯಸ್ಥರನ್ನು ದೊಡ್ಡ ಯಜಮಾನ ಎಂದು ಕರೆಯುತ್ತಾರೆ. ಈ ದೊಡ್ಡ ಯಜಮಾನನ್ನು ಧ್ವನಿಮತದಿಂದ ಆಯ್ಕೆ ಮಾಡುತ್ತಾರೆ. ಸಮುದಾಯದ ಸಾಮಾಜಿಕ ನಿಯಂತ್ರಣ ಮಾಡುವ ಹಾಗೂ ಕಲಹಗಳ ವಿಚಾರಣೆ ಈ ಸಮಿತಿಯ ವ್ಯಾಪ್ತಿಗೆ ಒಳಪಡುತ್ತಾರೆ. ಅಪರಾಧ ಮಾಡಿದವರಿಗೆ ದಂಡ ಹಾಕುವ, ಶಿಕ್ಷೆ ವಿಧಿಸುವ ಮತ್ತು ಸಾಮಾಜಿಕ ಬಹಿಷ್ಕಾರ ಹಾಕುವ ಅಧಿಕಾರ ಈ ಪಂಚಾಯಿತಿಗಳಿಗೆ ಇರುತ್ತದೆ.” ಎಂದು ವಿವರಿಸಿದ್ದಾರೆ. ‘ದಾಸರಲ್ಲಿ ಕಟ್ಟೆಮನೆಗಳನ್ನು ಕುಲ ಪಂಚಾಯಿತಿಗಳು ಇರುತ್ತವೆ.’ ದಾಸರಲ್ಲಿ

ಕಟ್ಟೆ-ಮನೆಗೆ “ಗುಡಿಗಾಡು” ಎನ್ನುವ ಅಧ್ಯಕ್ಷನಿರುತ್ತಾನೆ. ಅವನ ಕೆಳಗೆ ಪಿನ್ನಪೆದ್ದನೆನ್ನುವ ಹಿರಿಯ ಅಥವಾ ಕಿರಿಯನೊಬ್ಬ ಸಹಾಯಕನಿರುತ್ತಾನೆ. ಗುಡಿಗಾಡು ಅಧ್ಯಕ್ಷ ಜಾತಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಗಮನಿಸುತ್ತಾನೆ. ಅವರನ್ನು ಕೂಡಿಸುವ ಪಿನ್ನಪೆದ್ದನಿಗೆ ಮುಖ ಅಥವಾ ಅದೇಶಗಳನ್ನು ಹೊರಡಿಸುತ್ತಾನೆ. ವಿವಾದಕ್ಕೊಳಗಾದ ವಿಷಯವನ್ನು ಮತಗಳ ಆಧಾರದಿಂದ ನಿರ್ಣಯಿಸಲಾಗುವುದು. ಕೆಲವು ದಂಡಗಳನ್ನು ವಿಧಿಸುವರು ಎಂದು ಪ್ರೊ.ಬಿ.ವ್ಹಿ ಗುಂಜೆಕಟ್ಟೆಯವರು ವಿವರಿಸಿದ್ದಾರೆ.

ನ್ಯಾಯ ಪಂಚಾಯಿತಿ

            ಚೆನ್ನದಾಸರ ಸಮುದಾಯದಲ್ಲಿ ಇಂದಿಗೂ ಕೂಡ ವಿಶಿಷ್ಟವಾದ “ನ್ಯಾಯ ಪಂಚಾಯಿತಿ” ವ್ಯವಸ್ಥೆ ಜಾರಿಯಲ್ಲಿ ಉಳಿದುಕೊಂಡು ಬಂದಿದೆ. ಈ ಸಮುದಾಯದ ಅನುಭವಸ್ಥ ಹಿರಿಯನಾದ ಮತ್ತು ಜಾಣನಾದ ನಿಷ್ಪಕ್ಷಪಾತ ದೃಷ್ಟಿಯುಳ್ಳವರನ್ನು ಕುಲದವರೆಲ್ಲ ಕೂಡಿ ಆರಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ವಂಶಪರಂಪರಾಗತವಾಗಿ ಇದು ಮುಂದುವರೆದು ಕೊಂಡು ಬರುತ್ತದೆ. ಕೊಪ್ಪಳ ಜಿಲ್ಲೆಯ ಪರಿಸರದ ಚೆನ್ನದಾಸದರ ಸಮುದಾಯದಲ್ಲಿ ಇವೆರಡೂ ಪರಂಪರೆಗಳು ಜಾರಿಯಲ್ಲಿವೆ. “ಕುಲಸಭೆಯ ಮುಖ್ಯಸ್ಥನನ್ನು ಪ್ರಾದೇಶಿಕವಾಗಿ ಗುಡೇಗಾಡು, ಕಟ್ಟೆಮನೆ, ಪಿನ್ನಪೆದ್ದ, ಕೊಂಡಿಕೋಲ, ಗುರಿಕಾರ, ಸಮೀಲು ಎಂದು ಕರೆಯುವ ವಾಡಿಕೆ ಇದೆ. ಮುಖ್ಯಸ್ಥನಿಗೆ ಸಹಕಾರಿಯಾಗಿ ಕೆಲಸ ನಿರ್ವಹಿಸಲು ತಳವಾರನನ್ನು ನೇಮಿಸಲಾಗುತ್ತದೆ. ಈತ ಪಂಚಾಯಿತಿಯ ಆದೇಶದಂತೆ ಸಭೆ ನಡೆಸುವ, ಸಮುದಾಯದ ಎಲ್ಲ ಜನರಿಗೂ ಪಂಚಾಯಿತಿಯ ಸಂದೇಶ ತಲುಪಿಸುವ ಕೆಲಸ ಮಾಡುತ್ತಾನೆ. ಇದಲ್ಲದೆ ಒಂದೊಂದು ಬೇಡಗಿನ ಹಿರಿಯರ ಸಲಹಾಸಮಿತಿಯಿದ್ದು ಪಂಚಾಯಿತಯ ತೀರ್ಮಾನವನ್ನು ಜಾರಿಗೆ ತರಲು ಅದು ಕಾರ್ಯ ನಿರ್ವಹಿಸುತ್ತದೆ.” ಎಂಬುದು ಗಮನಾರ್ಹವಾಗಿದೆ. ಇದು ಈ ಸಮುದಾಯದ ವಿಶಿಷ್ಟವಾದ ನ್ಯಾಯ ವ್ಯವಸ್ಥೆಯಾಗಿದೆ.

ಪಂಚಾಯಿತಿಯ ಜವಾಬ್ದಾರಿ

ಸಮುದಾಯದ ಸಾಮಾಜಿಕ ನಿಯಂತ್ರಣ ಮಾಡುವ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ, ಸಾಂಘಿಕ ಒಕ್ಕಟ್ಟು ಕಾಯುವ ಗುರತರವಾದ ಜವಾಬ್ದಾರಿ ನ್ಯಾಯ ಪಂಚಾತಿಯಿಗೆ ಇರುತ್ತದೆ. ಸಮುದಾಯದಲ್ಲಿ ಯಾರು ಎಷ್ಟೇ ದೊಡ್ಡವರಿರಲಿ, ಶ್ರೀಮಂತರಲಿ, ನ್ಯಾಯ ಪಂಚಾಯಿತಿಗಿಂತ ಯಾರು ದೊಡ್ಡವರಲ್ಲ. ಅವರಿಗಿಂತ ಕುಲಸಭೆಯೆ ದೊಡ್ಡದೆಂಬ ತಿಳುವಳಿಕೆ ಇದೆ. ಅಲ್ಲದೆ ಗುಂಪಿನ ನಡುವೆ ಜಗಳ, ಕದನಗಳಾಗಿದ್ದರೆ, ಅವುಗಳನ್ನು ನಿಭಾಯಿಸುವ, ಅಪರಾಧಿಗಳಿಗೆ ಶಿಕ್ಷೆಗೆ ಒಳಪಡಿಸುವ, ಕೊಲೆ, ಸುಲಿಗೆ ಮಾಡಿದವರಿಗೆ, ಕಳ್ಳತನ ಮಾಡಿದವರಿಗೆ, ಅತ್ಯಾಚಾರವೆಸಗಿದ್ದವರಿಗೆ ದಂಡ ಹಾಕುವ, ಅಪರಾಧ ಮಾಡಿ ಶಿಕ್ಷೆಯನ್ನು ವಿರೋದಿಸುವ, ಪಂಚಾಯತಿ ಅಧಿಕಾರವನ್ನು ತೀರಸ್ಕರಿಸುವ, ಕುಲಸಭೆಗೆ ಮಾನ್ಯತೆ ನೀಡದವರಿಗೆ ದಂಡ ವಿಧಿಸುವ, ಸಾಮಾಜಿಕ ಬಹಿಷ್ಕಾರ ಹಾಕುವ ಅಧಿಕಾರ ನ್ಯಾಯ ಪಂಚಾಯತಿಗೆ ಇರುತ್ತದೆ.

ಮದುವೆಯಂಥ ಕೌಟುಂಬಿಕ ಕಾರ್ಯಗಳನ್ನು ನ್ಯಾಯ ಪಂಚಾಯತಿ ನಡೆಸಿಕೊಡುತ್ತದೆ. ವಿವಾಹವು ಸಮುದಾಯದ ಸಾಮಾಜಿಕ ಸಂಪ್ರದಾಯಕ್ಕೆ ಅನುಸಾರವಾಗಿ, ಪರಂಪರೆಗಳನ್ನು ಪರಿಪಾಲಿಸುವ ನಿಬಂಧನೆಗಳಿಗೆ ಒಳಪಟ್ಟು ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯು ನ್ಯಾಯ ಪಂಚಾಯತಿಯದೆ ಆಗಿರುತ್ತದೆ. ಸೋದರ ಸಂಬಂಧಿ ವಿವಾಹ ನಿರ್ಬಂಧಿಸುವ, ಅಂತರ ಜಾತೀಯ ವಿವಾಹವನ್ನು ವಿರೋಧಿಸುವ, ಬಹುಪತಿತ್ವವನ್ನು ತಡೆಗಟ್ಟುವ ಜವಾಬ್ದಾರಿಯು ನ್ಯಾಯ ಪಂಚಾಯತಿಯ ವ್ಯಾಪ್ತಿಗೆ ಬರುತ್ತದೆ.

ಜಾತ್ರೆ, ಉತ್ಸವ, ಹಬ್ಬಗಳಂತ ಧಾರ್ಮಿಕ ಚಟುವಟಿಕೆಗಳನ್ನು ವಿಧವತ್ತಾಗಿ ನಡೆಸುವುದು. ಜಾತ್ರೆಯ ಖರ್ಚುವೆಚ್ಚಗಳನ್ನು ಸರಿದುಗಿಸಲು ಸಮುದಾಯದ ಎಲ್ಲ ಕುಟುಂಬಗಳು, ಮುಖ್ಯಸ್ಥರ ಕತ್ತಿರ ಜಾತ್ರೆಯ ನೇತೃತ್ವ ವಹಿಸಿರುವ ಮುಖಂಡರು ಪಟ್ಟಿ (ಹಣ) ಕೂಡಿಸುವುದು. ಎಷ್ಟು ವಂತಿಗೆ ಎತ್ತಬೇಕು. ಯಾರು ಯಾವ ಕಾರ್ಯ ಮಾಡಬೇಕು, ಮನೋರಂಜನೆಗೆಂದು ಏರ್ಪಡಿಸುವ ಆಟ, ಬಯಲಾಟ ಯಾವುದಿರಿಬೇಕು, ಯಾವ ಕಂಪನಿ ಕರೆಯಿಸಬೇಕು ಮುಂತಾದವುಗಳನ್ನು ತೀರ್ಮಾನಿಸುವುದು: ಅವುಗಳನ್ನು ಅನಿಷ್ಠಾನಗೊಳಿಸುವ ಹೊಣೆಗಾರಿಕೆಯು ನ್ಯಾಯ ಪಂಚಾಯತಿಯ ಸುಪರ್ದಿಗೆ ಒಳಪಡುತ್ತದೆ. ಊರಿಗೆ ಬರಗಾಲ ಬಿದ್ದಾಗ, ಕಾಲರಾ, ಪ್ಲೇಗ್‍ದಂತಹ ಭೀಕರ ರೋಗಗಳು ಬಂದಾಗ, ಸಮುದಾಯದಲ್ಲಿ ದುರ್ಮರಣ ಸಂಭವಿಸಿದರೆ, ಬೇರೆ ಜನಾಂಗದೊಡೆನೆ ಮಾರಾಮಾರಿಯಾದರೆ ಅವುಗಳ ಪರಿಹಾರಕ್ಕೆ ನ್ಯಾಯ ಪಂಚಾಯತಿಯು ಸಭೆ ಸೇರುತ್ತಾರೆ. ಹಿರಿಯರು ತಳವಾರದ ಮುಖಾಂತರ ಪಂಚಾಯತಿ ಸೇರಿಸುತ್ತಾರೆ. ಆಯಾ ವಿಷಯಗಳಿಗೆ ಸಂಬಂಧ ಪಟ್ಟವರಿಂದ ಹೇಳಿಕೆ ಪಡೆದು, ಎರಡು ಪಕ್ಷದವರ ವಿಚಾರ ಮಣಡನೆಗೆ ಅವಕಾಶ ಕಲ್ಪಿಸಿ, ಸಾರಾಸಾರಾ ತೂಗಿನೋಡಿ ನ್ಯಾಯನಿರ್ಣಯವನ್ನು ಕೊಟುವುದು ವಾಡಿಕೆ. ಸಮಸ್ಯೆ ಸಂಕೀರ್ಣವಾಗಿದ್ದರೆ ಕೆಲವೋಮ್ಮೆ ಅತ್ಯಂತ ಜಟಿಲವಾಗಿದ್ದರೆ. ಒಂದೇ ದಿನದಲ್ಲಿ ಪಂಚಾಯತಿ ಸಭೆಯಲ್ಲಿ ನ್ಯಾಯ ನಿರ್ಣಯವಾಗದೇ ಹೋಗಬಹುದು. ಸಮಸ್ಯೆಗೆ ಅನುಗುಣವಾಗಿ ಕೆಲವೊಮ್ಮೆ ಒಂದು ದಿವಸದಿಂದ ವಾರಪರ್ಯಂತರ ಮುಂದುವರಿಯಬಹುದಾಗಿದೆ.

ನ್ಯಾಯ ನಿರ್ಣಯದ ತೀರ್ಪುಗಳು

ನ್ಯಾಯ ಪಂಚಾಯತಿಯ ತೀರ್ಪುಗಳು ಆಯಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಭಿನ್ನ ರೀತಿಯಲ್ಲಿರುತ್ತವೆ. ಸಮುದಾಯದ ಜನರಲ್ಲಿಯೆ ಜಗಳಗಳು ನಡೆದಾಗ, ಸಣ್ಣಪುಟ್ಟ ತಪ್ಪುಗಳು ಘಟಿಸಿದಾಗ, ಸಮುದಾಯದ ಹಿರಿಯರು ಅವುಗಳನ್ನು ಬಗೆಹರಿಸುತ್ತಾರೆ. ಮತ್ತೊಮ್ಮೆ ಅಂಥ ತಪ್ಪು ಮಾಡದಿರುವಂತೆ ಎಚ್ಚರಿಕೆ ನೀಡುತ್ತಾರೆ. ಎರಡು ಪಕ್ಷದವರಿಗೆ ಕಿವಿಮಾತು ಹೇಳಿ ಸರಳವಾದ ತೀರ್ಪು ನೀಡುತ್ತಾರೆ. ಅಣ್ಣ, ತಮ್ಮಂದಿರಲ್ಲಿ, ತಂದೆ-ಮಕ್ಕಳಲ್ಲಿ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯವನ್ನು ಕೂಡ ಸರಳವಾಗಿ ಬಗೆಹರಿಸುತ್ತಾರೆ. ನ್ಯಾಯ ಪಂಚಾಯತಿ ಕೂಡಿಸಿದವರು ಅಂದಿನ ಖರ್ಚಿನ ವೆಚ್ಚ ಭರಿಸಬೇಕಾಗುವುದು.

ಮಹಿಳೆಯರಿಗೆ, ಹಿರಿಯರಿಗೆ ಅಗೌರವ ತೋರಿ ಅಪಮಾನಿಸಿದ್ದರೆ ಕಳವು ಲೂಟಿಯಂತ ಅಪರಾಧವೆಸಗಿದ್ದರೆ ಅಂಥವರಿಗೆ ದಂಡ ವಿಧಿಸುವ ತೀರ್ಪು ತೆಗೆದುಕೊಳ್ಳಲಾಗುತ್ತದೆ. ದಂಡವು ಹಣದ ರೂಪದಲ್ಲಿರುತ್ತದೆ. ಅಪರಾಧದ ಪ್ರಮಾಣದ ಮೇಲೆ ದಂಡ ತೆರಬೇಕಾದ ಹಣ ನಿಗಧಿಯಾಗುತ್ತದೆ. ಅದನ್ನು ನ್ಯಾಯ ಪಂಚಾಯತಿಯೇ ತೀರ್ಪು ನೀಡುತ್ತದೆ. ಅತ್ಯಾಚಾರವೆಸಗಿದ್ದರೆ, ಕೊಲೆಗೈದಿದ್ದರೆ, ಬೇರೋಬ್ಬರ ಹೆಂಡತಿಯನ್ನು ಅಪಹರಿಸಿದ್ದರೆ, ಬೇರೋಬ್ಬಳ ಜೊತೆಗೆ ಓಡಿಹೋಗಿದ್ದರೆ, ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದರೆ, ದೇವರ ವಿಷಯದಲ್ಲಿ ತಪ್ಪೆಸಗಿದ್ದರೆ, ಇಂಥವು ಭೀಕರ ಅಪರಾಧಗಳೆಂದು ಸಾಬೀತಾದರೆ, ಅಂಥವರನ್ನು ಕುಲದಿಂದ ಬಹಿಷ್ಕಾರಿಸುವ ಕಠಿಣ ತೀರ್ಮಾನವನ್ನು ಸಭೆಯು ತೆಗೆದುಕೊಳ್ಳುತ್ತದೆ. ಅಪರಾಧದ ಪ್ರಮಾಣ ಮತ್ತು ಸಭೆಯ ನಡುವಳಿಕೆಗೆ ಅನುಸಾರವಾಗಿ ತೀರ್ಪು ನಿರ್ಣಯವಾಗುತ್ತದೆ. ನ್ಯಾಯ ಪಂಚಾಯತಿ ಸೇರಿದಾಗ, ವಿಷಯವು ಜಟಿಲವಾಗಿದ್ದು, ಇತ್ಯರ್ಥವಾಗದೆ ಹೋದರೆ, ಪಂಚಾಯತಿಯ ಮುಖ್ಯಸ್ಥನು ‘ಕಡ್ಡಿಮುರಿಯುವ’ ಮೂಲಕ ಅಂತಿಮ, ತೀರ್ಪು ನೀಡುವ ನ್ಯಾಯಾಂಗದ ಪದ್ಧತಿ ಈ ಸಮುದಾಯದಲ್ಲಿದೆ.

ಶಿಕ್ಷೆಯ ವಿಧಾನಗಳು

ಸಮುದಾಯ ವ್ಯಕ್ತಿಯು ಮಾಡಿದ ಅಪರಾಧದ ಪ್ರಮಾಣಕ್ಕೆ ಅನುಗುಣವಾಗಿ ವಿಭಿನ್ನವಾದ ಶಿಕ್ಷೆಗಳನ್ನೂ ವಿಧಿಸಲಾಗುತ್ತದೆ. ಸಾಮಾನ್ಯವಾದ ಮತ್ತು ಸಾಧಾರಣವಾದ ಅಪರಾಧವಾಗಿದ್ದಾರೆ ತಪ್ಪಿತಸ್ಥನು ನ್ಯಾಯ ಪಂಚಾಯತಿಯ ಕ್ಷಮೆ ಕೇಳಿ, ತನ್ನಿಂದ ತಪ್ಪಾಯಿತೆಂದು ಹಿರಿಯರ ಕಾಲು ಹಿಡಿಯಬೇಕು. ನ್ಯಾಯ ಪಂಚಾಯತಿಯ ಸಭೆಯ ಖರ್ಚು ಭರಿಸಬೇಕು. ಸಭೆಯಲ್ಲಿದವರಿಗೆಲ್ಲ ಚಹಾಪಾನಿ ಅಥವಾ ಸಾರಾಯಿ ವಿತರಣೆ ಇಲ್ಲವೇ ಊಟಕ್ಕಾಗುವಷ್ಟು ಮೊತ್ತದ ಹಣವನ್ನು ಕೊಡಬೇಕಾಗುತ್ತದೆ. ಸಮುದಾಯದ ಪಂಗಡಗಳಲ್ಲಿ ಭೀಕರವಾದ ಮಾರಕಸ್ತ್ರಗಳಿಂದ ಹೊಡೆದಾಡಿದ್ದರೆ, ಚಪ್ಪಲಿ, ಕೆರವಿನಿಂದ ಹೊಡೆದಿದ್ದರೆ, ಹೆಣ್ಣು ಮಕ್ಕಳಿಗೆ, ಹಿರಿಯರಿಗೆ ಅವಮಾನಗೊಳಿಸಿದ್ದರೆ, ಅನ್ಯಾಯಕ್ಕೆ ಒಳಗಾದವರು ಕೂಡಲೇ ಹೋಗಿ ನ್ಯಾಯ ಪಂಚಾಯತಿಗೆ ಫಿರ್ಯಾದೆ (ತಕರಾರು) ದಾಖಲಿಸಿ, ನ್ಯಾಯ ಪಂಚಾಯತಿ ಸೇರಿಸಿದ್ದರೆ, ಆ ಘಟನೆಗೆ ಕಾರಣರಾದವರಿಗೆ ತಕ್ಷಣಕ್ಕೆ ನ್ಯಾಯ ನಿರ್ಣಯಿಸಿ ಶಿಕ್ಷೆ ವಿಧಿಸಲಾಗುತ್ತದೆ. ತದನಂತರ ನ್ಯಾಯ ಪಂಚಾಯತಿಯಂತೆ ಸಭೆ ಜರುಗಿ ಅಪರಾಧ ಸಾಬೀತಾದರೆ ಎರಡು ಪಟ್ಟು ಹೆಚ್ಚಿನ ದಂಡ ವಿಧಿಸಿ, ಕಟ್ಟುನಿಟ್ಟಾಗಿ ವಸೂಲಿ ಮಾಡಿ ಮಾಡಿಕೊಳ್ಳಲಾಗುವುದು.  ಸರಿಯಾಗಿ ಎರಡು ಭಾಗ ಮಾಡಿ, ಒಂದನ್ನು ಅನ್ಯಾಯಕ್ಕೆ ಒಳಗಾದ ಶೋಷಿತರಿಗೆ, ಇನ್ನೂಲಿದ ಅರ್ಧ ಹಣವನ್ನು ನ್ಯಾ ಪಂಚಾಯತಿಗೆ ಸಂದಾಯ ಮಾಡಲಾಗುತ್ತದೆ.

ಬೇರೊಬ್ಬನ ಹೆಂಡತಿಯನ್ನು ಓಡಿಸಿಕೊಂಡು ಹೋಗಿದ್ದರೆ, ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದರೆ, ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಭೀಕರ ಅಪರಾಧಕ್ಕಾಗಿ ಕೊಡುವ ಶಿಕ್ಷೆಯನ್ನು ‘ಮೋಗಿನಾಲು ಧರ್ಮ’ವೆಂದು ಕರೆಯುತ್ತಾರೆ. ಈ ಶಿಕ್ಷೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಒಬ್ಬ ವ್ಯಕ್ತಿ ಮತ್ತೋಬ್ಬನ ಹೆಂಡತಿಯನ್ನು ಬಲಾತ್ಕರಿಸಿದರೆ, ಓಡಿಸಿಕೊಂಡು ಹೋಗಿದ್ದರೆ ಆತನನ್ನು ಸಮುದಾಯದಿಂದ ಹೊರ ಹಾಕುತ್ತಾರೆ. ಕುಲದಿಂದ ಬಹಿಷ್ಕಾರ ಹಾಕುತ್ತಾರೆ. ಬಹಿಷ್ಕøತನಾದವನು ಪುನಃ ಸಮುದಾಯದಲ್ಲಿ ಪ್ರವೇಶ ಪಡೆಯಬೇಕಾದರೆ ನಾಲ್ವತ್ತೆಂಟು ರೂಪಾಯಿಗಳ ತಪ್ಪುದಂಡ ಕೊಡಬೇಕು. ಅರ್ಧ ಹಣ ಮಾನಭಂಗಕ್ಕೊಳಗಾದವಳ ಪಾಲಿಗೆ ಸಂದಾಯವಾದರೆ, ಇನ್ನೂಳಿದ ಅರ್ಧ ಹಣ ಕುಲಸ್ಥನಿಗೆ, ಉಳಿದದ್ದು ಕುಲಗುರುವಿಗೆ ಸಂದಾಯವಾಗುತ್ತದೆ. ಪರಸ್ಪರ ಮೆಚ್ಚಿ, ಇಷ್ಟ ಪಟ್ಟು ಓಡಿ ಹೋದವರು ಮದುವೆಯಾಗ ಬಯಸಿದರೆ, ಮೊದಲ ಪತಿಗೆ ಮದುವೆಗೆ ಖರ್ಚಾದ ಹಣವನ್ನು ಮೊದಲು ಕೊಡಬೇಕು, ನ್ಯಾಯ ಪಂಚಾಯತಿಗೆ ದಂಡ ಕಟ್ಟಾಬೇಕು ಇದನ್ನು ಒಪ್ಪಿದ್ದಾರೆ, ಕುಲದೊಳಗೆ ಪ್ರವೇಶ ಲಭಿಸುತ್ತದೆ.

ನ್ಯಾಯ ಪಂಚಾಯತಿಯ ತೀರ್ಪನ್ನು ಅಪರಾಧಿಗಳು ಮನ್ನಿಸದಿದ್ದರೆ, ಕುಲಸಭೆಯ ತೀರ್ಮಾನಗಳನ್ನು ನಿರಾಕರಿಸಿದರೆ, ಅಥವಾ ತೀರ್ಪು ನೀಡುವಲ್ಲಿ ಅನುಮಾನ ಗೊಂದಲಗಳು ಇದ್ದರೆ ಮತ್ತೆ ವಿಶೇಷ ನ್ಯಾಯ ಪಂಚಾಯತಿಯು ಸಭೆ ಸೇರುತ್ತದೆ. ಪಂಚಾಯತಿ ಪದ್ಧತಿಯಂತೆ ಪಂಚರು ಸಭೆಯನ್ನು ದೂರದ ಪ್ರಶಸ್ತವಾದ ಸ್ಥಳದಲ್ಲಿ ಸಭೆ ಸೇರುತ್ತಾರೆ. ಊರ ಹೊರಗಿರುವ ದೇವಸ್ಥಾನದಲ್ಲಿಯು ಸಭೆ ಸೇರುವುದುಂಟು. ಈ ವಿಶೇಷವಾದ ಸಭೆಗೆಂದೆ ಬೇರೆ ಬೇರೆ ಗ್ರಾಮಗಳ ಸಮುದಾಯದ ಹಿರಿಯರನ್ನು ಕರೆದು ನ್ಯಾಯ ತೀರ್ಮಾನಿಸಿ ತೀರ್ಪು ನೀಡುತ್ತಾರೆ. ಈ ವಿಶೇಷ ಪಂಚಾಯತಿ ಸಭೆಯ ನ್ಯಾಯ ನಿರ್ಣಯಕ್ಕೆ ಕಾಲ ಮೀತಿ ಇರುವುದಿಲ್ಲ. ಅದಸು ನಡೆದಷ್ಟು ದಿವಸದ ಖರ್ಚು, ವೆಚ್ಚವನ್ನು ದೋಷಾರೋಪಿತರು ಶಿಕ್ಷೆಯ ದಂಡದ ಹಣವನ್ನಲ್ಲದೆ, ಪ್ರತ್ಯೇಕವಾಗಿ ಕೊಡಬೇಕಾಗುವುದು. ದಂಡದ ಮೊತ್ತದ ಅರ್ಧಭಾಗ ಅನ್ಯಾಯಕ್ಕೆ ಒಳಗಾದವರಿಗೆ ಕೊಡುತ್ತಾರೆ. ಇನ್ನೂಳಿದ ಮೊತ್ತದಲ್ಲಿ ಒಂದು ಪಾಲು ನ್ಯಾಯ ಪಂಚಾಯತಿಗೆ, ಒಂದು ಪಾಲು ಗುರುಗಳಿಗೆ, ಉಳಿದಿದ್ದು ದೇವರ ಕಾರ್ಯ, ಧಾರ್ಮಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ.

ಇದು ಸಮುದಾಯದ ಒಳಗಿನ ಮಾತಾಯಿತು. ಇನ್ನೂ ಬೇರೆ ಸಮುದಾಯದವರೊಡನೆ ತಮ್ಮ ಸಮುದಾಯದವಳು ಓಡಿ ಹೋಗಿದ್ದರೆ? ಅಥವಾ ಬೇರೆ ಸಮುದಾಯದ ಹೆಣ್ಣನ್ನು ಈ ಸಮುದಾಯದ ವ್ಯಕ್ತಿ ಓಡಿಸಿಕೊಂಡು ಬಂದಿದ್ದರೆ? ಅದಕ್ಕೂ ನ್ಯಾಯ ಪಂಚಾಯತಿ ತೀರ್ಪನ್ನು ಪ್ರಕಟಿಸಿದೆ. ಅಂಥ ವ್ಯಕ್ತಿಗಳನ್ನು ಸಮುದಾಯವು ಬಹಿಷ್ಕರಿಸುತ್ತದೆ. ಬಹಿಷ್ಕøತರು ಪುನಃ ಸಮುದಾಯದೊಳಗೆ ಸೇರಲು ಬಯಸಿದ್ದರೆ, ನ್ಯಾಯ ಪಂಚಾಯತಿ ತೀರ್ಪಿನಂತೆ ತಪ್ಪು ದಂಡ ವಿಧಿಸಲಾಗುತ್ತದೆ. ಮರಳಿ ಪ್ರವೇಶ ಪಡೆದವರನ್ನು ನಾಲಿಗೆ ಸುಡಿಸಿ (ಚಿನ್ನದುಂಗರ ಅಥವಾ ತಾಮ್ರದ ದುಡ್ಡಿನಿಂದ ನಾಲಿಗೆಗೆ ಬರೆ ಹಾಕಿಸಿ) ಮತ್ತೆ ಸಮುದಾಯದೊಳಗೆ ಸೇರಿಸಿಕೊಳ್ಳುತ್ತಾರೆ. ಚೆನ್ನದಾಸರ ಸಮುದಾಯದೊಳಗೆ ಏನೇ ಜಗಳ ಲದನವಾದರೂ ಹೊಡೆದಾಟ ಬಡಿದಾಟ ಆಗಬಾರದ ಅನಾಹುತಗಳು ನಡೆದರೂ ಈ ಜನಾಂಗ ಪೋಲೀಸ್ ಸ್ಟೇಶನ್‍ಗಳಿಗೆ ಹೋಗುವುದು ಅಪರೂಪ. “ ಈ ಜನರು ಕೋರ್ಟ್ ಕಛೇರಿಗಳಿಗೆ ಹೋಗುವುದು ಕಡಿಮೆ. ಕುಲಸಭೆಯ ಮುಖ್ಯಸ್ಥನೇ ಅಂತಿಮ ತೀರ್ಪುಗಾರ. ಸಮುದಾಯದ ಗುಡೇಕಾರ ಅಥವಾ ಅಧ್ಯಕ್ಷ ನ್ಯಾಯ ಪಂಚಾಯತಿ ಸಂದರ್ಭದಲ್ಲಿ ಕಡ್ಡಿಮುರಿದು ಆದೇಶ ಮಾಡಿದ್ದರೆ  ಅದನ್ನು ಯಾರು ಮೀರುವಂತಿಲ್ಲ. ಮೀರಿದವರು ದಂಡ ತೆರಬೇಕು ಇಲ್ಲ ಬಹಿಷ್ಕಾರಕ್ಕೆ ಒಳಗಾಗಬೇಕು.”ಹೀಗಾಗಿ ಎಲ್ಲರೂ ನ್ಯಾಯ ಪಂಚಾಯತಿಯ ಆದೇಶವನ್ನು ಪಾಲಿಸುವರು.

ಮೂಲ ನ್ಯಾಯ ಸ್ಥಾನದೊಡನೆ ಸಂಪರ್ಕ

ಸಮುದಾಯದ ನ್ಯಾಯ ಪಂಚಾಯತಿಗಳಲ್ಲಿ ವ್ಯಾಜ್ಯ ನಿರ್ಣಯವಾಗದೆ ಇರುವಾಗ, ವಿಶೇಷ ನ್ಯಾಯ ಪಂಚಾಯತಿ ಕರೆಯುತ್ತಾರೆ. ಆ ಸಭೆಯಲ್ಲಿಯೂ ಇತ್ಯರ್ಥವಾಗದೇ ಹೋದಾಗ, ಸಮುದಾಯದ ನ್ಯಾಯ ಕೇಂದ್ರವಾದ ತಮ್ಮ ತಮ್ಮ ಪವಿತ್ರ ದೇವಸ್ಥಾನಗಳಿಗೆ ವರ್ಗಯಿಸುತ್ತಾರೆ. ಗುರುಗಳು ಅಥವಾ ದೇವಸ್ಥಾನದ ಆರ್ಚಕರು ನ್ಯಾಯದ ತೀರ್ಪುಗಾರರಾಗಿರುತ್ತಾರೆ. ಎರಡು ಪಕ್ಷದ ಅಹವಾಲನ್ನು ಆಲಿಸಿದ ಗುರುಗಳು ಎಲ್ಲರಿಗೂ ಸಮ್ಮತವಾಗುವ ಹಾಗೇ ತೀರ್ಮಾನ ನೀಡುತ್ತಾರೆ. ಪೂಜಾರಿಗಳು ದೇವರಿಗೆ ಕೌಲುಕಟ್ಟಿ ನ್ಯಾಯದ ತೀರ್ಪು ನೀಡುತ್ತಾರೆ. ಈ ಸಮುದಾಯಗಳು ನ್ಯಾಯ ಕೇಳುವ ಕಟ್ಟಕಡೆಯ ಸ್ಥಳಗಳಿವು. ಪ್ರಸ್ತುತ “ರಾಯಚೂರು ಜಿಲ್ಲೆಯ ಕುದರಿಮೋತಿ, ಮಹಾರಾಷ್ಟ್ರದ ವಿಶಾಳಗಡ ಅಂತಹ ಕೇಂದ್ರಗಳಾಗಿವೆ.” ಅಲ್ಲಿ ಹೋದಾಗ ಯಾವುದಾದರೂ ಒಂದು ತೀರ್ಮಾನ ಬಂದೇ ಬರುತ್ತದೆ. ದೇವರ ಮೇಲೆ ಪ್ರಮಾಣ ಮಾಡುವುದು, ದೇವಾಲಯದ ಪವಿತ್ರ ವಸ್ತುವನ್ನು ಮುಟ್ಟಿ ಪ್ರಮಾಣಗೈಯುವುದು ಮುಂತಾದವುಗಳ ಮೂಲಕ ನ್ಯಾಯ ನಿರ್ಣಯವಾಗುತ್ತದೆ. ಈ ರೀತಿ ಚೆನ್ನದಾಸರ ಸಮುದಾಯದಲ್ಲಿ ನ್ಯಾಯ ವ್ಯವಸ್ಥೆ ವಿಶೇಷತೆಯಿಂದ ಕೂಡಿದೆ. ಪರಂಪರಾಗತ ನಂಬಿಕೆಗಳಿಂದ ಬದುಕುವ ಜನಾಂಗವಿದು. ಆಧುನಿಕತೆಯ ಸೆಳವಿಗೆ ಬೀಳದಿರುವುದರಿಂದ ಕೋರ್ಟು, ಕಛೇರಿಗಳ ಮೆಟ್ಟಿಲು ಹತ್ತುಉದಿಲ್ಲ. ಇದರಿಂದ ಬುಡಕಟ್ಟುಗಳಲ್ಲಿ ಐಕ್ಯತೆಯಿದೆ. ತನ್ನ ಮೂಲ ಅಸ್ತಿತ್ವ ಮತ್ತು ಸಾಂಸ್ಕøತಿಕ ಅನನ್ಯತೆಯನ್ನು ಚೆನ್ನದಾಸರ ಸಮುದಾಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ.      

ಆಕಾರ ಗ್ರಂಥಗಳು:

  1. ಗುಂಜೆಟ್ಟಿ ಬಿ.ವಿ.- 'ಜಾನಪದ ಸಾಹಿತ್ಯ ದರ್ಶನ', ಭಾಗ ; 6, ಪುಟ-96, 1986
  2. ಥರ್ಸ್ಟನ್-'ಎಷ್ಟೋಗ್ರಾಫಿಕ್ ನೋಟ್ಸ್ ಆನ್ ಸೌಧರ ಇಂಡಿಯಾ, ಕಾಸ್ಟ್ ಆ್ಯಂಡ್
  3. ಟ್ರೈಬ್ ಆಫ್ ಸೌದ ಇಂಡಿಯಾ', ಸಂ-03, 1906
  4. ಅಯ್ಯರ್ ಅನಂತಕೃಷ್ಣ-‘ದಿ ಮೈಸೂರ್ ಟ್ರೈಬ್ ಆ್ಯಂಡ್ ಕಾಸ್ಟ್', ಸಂ-05, 1998
  5. ಹಸನ್ ಸಯ್ಯದ ಸಿರಾಜ್ ಉಲ್- 'ದಿ ಕಾಸ್ಟ್ ಆ್ಯಂಡ್ ಟ್ರೈಬ್ ಆಫ್ ಎಚ್.ಇ.ಎಚ್. ನಿಜಾಮ್ಸ್ ಡೊಮಿನಿಯನ್ಸ್’. 1998
  6. ಗುಂಜೆಟ್ಟಿ ಬಿ.ವಿ.- 'ಜಾನಪದ ಸಾಹಿತ್ಯ ದರ್ಶನ’, ಭಾಗ-6, ಪುಟ-96,1986
  7. ಗೊಳಸಂಗಿ ಅರ್ಜುನ.-'ದಲಿತ ಲೋಕದ ಶೋಧ; ಜಾನಪದೀಯ ಅಧ್ಯಯನ', ಪುಟ-38, 1998
  8. ಹಿಮ್ಮಡಿ ಯಲ್ಲಪ್ಪ-‘ಚೆನ್ನದಾಸರ', ಪುಟ-98, 2008


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal