Tumbe Group of International Journals

Full Text


A Model of Mass Mobilization for Social Transformation.

Manjunath Patil1

1Research Fellow, Institute of Classical Kannada Language Studies, Rani Channamma University, Belgaum-591156

Mail: manju86p@gmail.com

Abstract

For the health of Dalit society, thinkers who meditate day and night should create a strong movement for the cause of Ambedkar. There must be a struggle to create a new history. "I don't mind if my entire community stands hand in hand with the opponents. I stand by the principle. Ambedkar's message of 'I will fight for it alone' as an inspiration, according to his words, the movement should not arise from the background of people, people, community, religion and caste and should be of a nature beyond all these.

Keywords: subaltern, mistress, vice, Negro.


ಸಾಮಾಜಿಕ ಪರಿವರ್ತನೆಗಾಗಿ ಜನಾಂದೋಲನದ ಮಾದರಿ

ಮಂಜುನಾಥ ಪಾಟೀಲ1

1ಸಂಶೋಧನ ವಿದ್ಯಾರ್ಥಿ, ಶಾಸ್ತ್ರೀಯ ಕನ್ನಡ ಭಾಷಾ ಅದ್ಯಯನ ಸಂಸ್ಥೆ, ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯ, ಬೆಳಗಾವಿ-591156

ಮೇಲ್: manju86p@gmail.com

ಪ್ರಸ್ತಾವನೆ

ದಲಿತ ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಧ್ಯಾನಿಸುವ, ಚಿಂತಿಸುವ, ಚಿಂತಕರು ಅಂಬೇಡ್ಕರ್‍ರ ವಾದಕ್ಕೆ ಕಟುಬದ್ಧವಾದ ಆಂದೋಲನ ಸೃಷ್ಟಿಸಬೇಕು. ಹೊಸ ಇತಿಹಾಸವನ್ನು ಸೃಷ್ಟಿಸುವಂತಹ ಹೋರಾಟವಿರಬೇಕು. ‘ನನ್ನಿಡೀ ಸಮುದಾಯವೇ ವಿರೋಧಿಗಳ ಜೊತೆ ಕೈಜೋಡಿಸಿ ನಿಂತರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ತತ್ವದ ಪರ ನಿಲ್ಲುತ್ತೇನೆ. ಅದಕ್ಕೋಸ್ಕರ ಒಬ್ಬಂಟಿಯಾಗೇ ಹೋರಾಡುತ್ತೇನೆ’ ಎಂಬ ಅಂಬೇಡ್ಕರ್ ಅವರ ಸಂದೇಶ ಸ್ಪೂರ್ತಿಯಾಗಿಟ್ಟುಕೊಂಡು ಅವರ ಮಾತಿನಂತೆ ಆಂದೋಲನವು ಜನ, ಜನಪದ, ಸಮುದಾಯ, ಧರ್ಮ ಹಾಗೂ ಜಾತಿ ಹಿನ್ನೆಲೆಯಾಗಿ ಹುಟ್ಟಿಕೊಳ್ಳದೆ ಇವೆಲ್ಲವನ್ನು ಮೀರಿದ ಸ್ವರೂಪದ್ದಾಗಿರಬೇಕು.

ಕೀ ವರ್ಡ: ಸಬಾಲ್ಟರ್ನ್, ಯಜಮಾನಿಕೆ, ವೈಕಂ, ನಿಗ್ರೊ.

ಪರಿಚಯ

ಭಾರತೀಯ ಸಮಾಜದ ಜನರನ್ನು ಎಚ್ಚರಗೊಳಿಸುವ ಕೆಲಸವನ್ನು ಕೇವಲ ಹೋರಾಟದಿಂದ ಮಾತ್ರವಲ್ಲದೆ, ಎಚ್ಚರಗೊಳಿಸುವ ಬರವಣಿಗೆ ಅವರನ್ನು ತಲುಪುವಂತೆ ಮಾಡಬೇಕು. ಭಾರತೀಯ ಸಮಾಜದಲ್ಲಿನ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅಸ್ಪøಶ್ಯತೆ, ದಲಿತ ಮಹಿಳೆಯರ ಸ್ಥಿತಿಗತಿ, ಜಮೀನ್ದಾರರ ದರ್ಪ, ಬ್ರಾಹ್ಮಣರಲ್ಲಿರುವ ಬ್ರಾಹ್ಮಣ್ಯದ ವ್ಯಘ್ರರೂಪ, ಜೀತಗಾರಿಕೆ ನೆಲೆಗಳನ್ನು ಕುರಿತು ಜನಾಂದೋಲನ ಗಟ್ಟಿಗೊಳ್ಳಬೇಕು. ಹಾಗೂ ದಲಿತ ವರ್ಗದವರ ನಿಜವಾದ ಹಕ್ಕುಗಳನ್ನು ಪಡೆಯುವ ಹಾದಿಯನ್ನು ತುಳಿಯುವ ಹೋರಾಟ ಅವಶ್ಯಕವಾಗಿದೆ. ಮಾಕ್ರ್ಸವಾದಿ, ಸಬಾಲ್ಟರ್ನ್ ಪಂಥಗಳ ಮಾದರಿಯ ಹೋರಾಟ ಅವಶ್ಯಕವಾಗಿದೆ. ಆಂಟೋನಿಯೋ ಗ್ರಾಮ್‍ಶಿ ಕೆಳಸ್ತರದ ಜನರ ಚರಿತ್ರೆ ನಿರ್ಲಕ್ಷ್ಯಕ್ಕೆ ಒಳಗಾಗುವುದಕ್ಕೆ ಮೇಲ್ವರ್ಗವು ಸ್ಥಾಪಿಸಿದ ‘ಯಜಮಾನಿಕೆ’ ಮೂಲ ಕಾರಣವೆಂದು ವಾದಿಸುತ್ತಾರೆ. ಈ ಯಜಮಾನಿಕೆಯನ್ನು ಕಿತ್ತೊಗೆಯುವಂತ ಪ್ರಬಲವಾದ ಹೋರಾಟವಾಗಬೇಕಾಗಿದೆ.

            ದಲಿತ ಪ್ಯಾಂಥರ್ಸ್, ಸತ್ಯಶೋಧಕ ಸಮಾಜ, ವೈಕಂ ಸತ್ಯಾಗ್ರಹ, ಅನಾರ್ಯ ದೋಷಪರಿಹಾರ ಸಮಾಜ, ಡಿಪ್ರೆಸ್ಡ್ ಕ್ಲಾಸಸ್ ಮಿಷನ್ ಸೊಸೈಟಿ, ಸನ್ಮಾರ್ಗ ಬೋಧಕ ನಿರಾಶ್ರಿತ ಸಮಾಜ ಸಂಘಟನೆ ಮುಂತಾದ ಸಂಘಟನೆಗಳು ಮಾಡಿದ ಆಂದೋಲನದ ಮಾದರಿಯಲ್ಲಿ ಸಾಕಷ್ಟು ಕೆಲಸ ಸದ್ಯದ ಪರಿಸ್ಥಿತಿಯಲ್ಲಿ ಆಗಬೇಕಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಸ್ವಾಭಿಮಾನಿಗಳನ್ನಾಗಿಸುವ ಹೋರಾಟ ನಡೆಯಬೇಕು. ವ್ಯವಸ್ಥೆಯಲ್ಲಿ ಅಸಮಾನತೆ, ಶೋಷಣೆ, ತಾರತಮ್ಯ ಹಾಗೂ ಅನ್ಯಾಯಗಳು ನಡೆಯುತ್ತಿವೆ. ಅವುಗಳು ವಿರುದ್ಧ ಅಸಹನೆ, ಆಕ್ರೋಶ, ಪ್ರತಿಭಟನೆ, ಹೋರಾಟ ಮತ್ತು ಚಳುವಳಿಗಳು ಸಾಮಾನ್ಯವಾಗಿವೆ. ಆದರೆ ಈ ಚಳುವಳಿಗಳಲ್ಲೇ ಅಸಹನೆ, ಒಡಕು ಇರುವುದು ದೌರ್ಭಾಗ್ಯವೇ ಸರಿ. ನೋವು, ಹಿಂಸೆ, ಅಪಮಾನಗಳ ವಿರುದ್ಧ ವೈಚಾರಿಕವಾಗಿ ಜನಾಂದೋಲನಗಳು ಸೃಷ್ಟಿಯಾಗಬೇಕಾಗಿದೆ. ಶೋಷಿತರಲ್ಲಿ ಮೂಡುವ ಈ ವೈಚಾರಿಕ ಎಳೆಗಳೇ, ವ್ಯವಸ್ಥೆಯನ್ನು ಟೀಕಿಸಲು, ವಿಮರ್ಶಿಸಲು ಮತ್ತು ಅದನ್ನು ಸುಧಾರಿಸಲು, ಪರಿಷ್ಕರಿಸಲು ಹಾಗೂ ಸಮಗ್ರವಾಗಿ ಬದಲಾಯಿಸಲು ಮೂಲವಾಗುತ್ತವೆ. ಈ ವೈಚಾರಿಕ, ವಿಮರ್ಶಾತ್ಮಕ, ಚಿಂತನಾ ಹೋರಾಟಗಳು ಶೋಷಿತರ ಪರವಾಗಿರುತ್ತವೆ.

            ತಮ್ಮ ಶಕ್ತಿ ಸಾಮಥ್ರ್ಯಗಳನ್ನು ಸಾಬೀತುಪಡಿಸುವ ಚಳುವಳಿಗಳು ಗಣನೀಯವಾಗಿ ಕಾಣಿಸಿಕೊಳ್ಳಬೇಕು. ವಂಚಿತ ಹಕ್ಕುಗಳಿಗಾಗಿ, ಸಮಾನತೆಗಾಗಿ, ಪ್ರಜಾತಾಂತ್ರಿಕ ಅರಿವನ್ನು ಮೂಡಿಸುವ ರಾಷ್ಟ್ರೀಯ ಸಂಘಟಿತ ಚಳುವಳಿ ನಡೆಯಬೇಕು. ಭಾರತೀಯ ಸ್ವಾತಂತ್ರ್ಯ ಚಳುವಳಿ ಒಂದು ಪ್ರಮುಖ ಸ್ಥಾನ ಗಳಿಸಿದೆ. ಏಕೆಂದರೆ ಅದು ಬಹುಜನ ಚಳುವಳಿಯಲ್ಲಿ ಒಂದಾಗಿತ್ತು. ಮತ್ತು ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳು ಜಾತಿ ಮತ-ಧರ್ಮಗಳ ಬೇಧವಿಲ್ಲದೆ ಚಳುವಳಿಯಲ್ಲಿ ಭಾಗವಹಿಸಿದ್ದನ್ನು ಕಾಣಬಹುದು. ಈ ಮಾದರಿಯ ಜನಾಂದೋಲನಗಳು ಈಗಿನ ಸಮಾಜಕ್ಕೆ ತುರ್ತಾಗಿವೆ. ಮತ-ಧರ್ಮ, ವರ್ಗ, ಮೇಲು-ಕೀಳು, ಶ್ರೀಮಂತ-ಬಡವ ಎಂಬ ಯಾವುದೇ ಭಿನ್ನ ಮನೋಭಾವನೆ ಇರದ ಜನರನ್ನು ಸಂಘಟಿಸಿ, ಒಂದೇ ಮನಸ್ಸಿನಿಂದ ಸಾಮಾಜಿಕ ಪರಿವರ್ತನೆಗಾಗಿ ದುಡಿಯುವ ವಿಶ್ವಮಾನವರನ್ನು ಒಳಗೊಂಡ ಜನಾಂದೋಲನಗಳು ಸೃಷ್ಟಿಯಾಗಬೇಕು. ಅಂಬೇಡ್ಕರ್‍ರು ತೋರಿಸಿದ ವಿಮೋಚನಾ ಮಾದರಿಯನ್ನು ಅನುಸರಿಸಬೇಕು. ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಜನರಿಗೆ ಅರಿವು ಮೂಡಿಸುವದರೊಂದಿಗೆ, ಪ್ರಸ್ತುತ ಸಮಾಜವಾದಿ ಚಳುವಳಿಯ ವೈಪಲ್ಯಗಳನ್ನು ಗುರುತಿಸಿ ಆ ವೈಪಲ್ಯಗಳಿಗೆ ಕಡಿವಾಣ ಹಾಕಬೇಕು. ಆದರೆ ಈ ಸಾಹಸವನ್ನು ಯಾವ ಚಿಂತಕರು ಮಾಡಲಿಲ್ಲ. ಸಾಮಾಜಿಕ ಭೇದಗಳನ್ನು ಸೃಷ್ಟಿಸುವ ಅತೃಪ್ತ ರಾಜಕಾರಣಿಗಳು ಜನರನ್ನು ವಿಭಜಿಸುತ್ತಿದ್ದಾರೆ. ಇಂಥ ರಾಜಕಾರಣಿಗಳು ತಮ್ಮ ಮಾತುಗಳಿಗೆ ಇಲ್ಲದ ವಾದಗಳನ್ನು ಮಂಡಿಸುತ್ತಾ ಸಮಾಜದ ಅಮಾಯಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೊದಲು ದಿಕ್ಕು ತಪ್ಪಿಸುವವರ ವಿರುದ್ಧ ಜನರಿಗೆ ಅರಿವು ಮೂಡಿಸುವುದರಿಂದ ಹೋರಾಟಗಳನ್ನು ಯಶಸ್ವಿಗೊಳಿಸಬಹುದು.

            ದಲಿತ ಚಳುವಳಿ ಮೊದಲಿನಂತೆ ಉಳಿಯಬೇಕಾದರೆ ಕಳಂಕಿತ ನಾಯಕರು ಹಿಂದೆ ಸರಿದು ಹೊಸ ನಾಯಕತ್ವಕ್ಕೆ ಅವಕಾಶ ಕೊಡಬೇಕು. ದಲಿತ ನಾಯಕರು ರಾಜಕೀಯ ನಾಯಕರ ಆಶ್ರಯ ಬಿಡಬೇಕು. ಒಂದೊಂದು ಕಾಲು ಒಂದೊಂದು ಪಕ್ಷದಲ್ಲಿದ್ದು ಒಂದಾಗುತ್ತೇವೆ, ಒಗ್ಗೂಡುತ್ತೇವೆ ಎಂದು ಕಾಲ ಹರಣ ಮಾಡುವುದು ಸರಿಯಲ್ಲ. ಕಳಂಕಿತ ನಾಯಕರನ್ನೇ ಮುಂಚೂಣೆಗೆ ಇಟ್ಟು ಚಳುವಳಿ ಮುಂದುವರೆದರೆ ಭವಿಷ್ಯವಿಲ್ಲ. ಅಷ್ಟಾಂಗ ಮಾರ್ಗ ತುಳಿಯಬೇಕಾದುದ್ದು ಅನಿವಾರ್ಯವಾಗಿದೆ. ಹಾಗೂ ದಲಿತ ಲೇಖಕ ಮತ್ತು ಕಲಾವಿದರ ಸಮ್ಮೇಳನ ನಡೆಸಬೇಕು. ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು, ಲೇಖಕ ಕಲಾವಿದರ ಶಿಬಿರಗಳನ್ನು ನಡೆಸುವುದು, ಕವಿಗೋಷ್ಠಿಗಳನ್ನು ಏರ್ಪಡಿಸುವುದು, ದಲಿತ ಬರಹಗಾರರ ಕೃತಿಗಳನ್ನು ಪ್ರಕಟಿಸುವುದರ ಮೂಲಕ ಸಾಮಾಜಿಕ ಪರಿವರ್ತನೆಗೆ ಜನರಲ್ಲಿ ಪ್ರಜ್ಞೆಯನ್ನು ಬೆಳೆಸಬೇಕು. ದಲಿತರ ಚಿಂತನೆ, ದಲಿತ ಪ್ರಜ್ಞೆ, ಶೋಷಣಾ ನಿರ್ಮೂಲನೆ ಪ್ರಜ್ಞೆಗಳಿಗೆ ಸಾಮೂಹಿಕ ರೂಪ ಕೊಟ್ಟು ಅವು ಹೋರಾಟದ ರೂಪ ತೆಳೆಯುವಂತೆ ಮಾಡಬೇಕು. ‘ಸಾಮಾಜಿಕ ಪರಿವರ್ತನೆ’ ಕುರಿತು ಬರೆದ ಬರಹ ಮತ್ತು ಬರಹಗಾರರಿಗೆ ವಿಮರ್ಶೆ, ಚರ್ಚೆ ಹಾಗೂ ಬೆಂಬಲ ದಕ್ಕುವಂತೆ ಮಾಡಬೇಕಾಗಿದೆ. ಇಂಥ ಒಳ್ಳೆಯ ಬರಹಗಳಿಂದ ಒಳ್ಳೆಯ ವಿಚಾರಧಾರೆಯು ಜನರಿಗೆ ತಲುಪುವುದರಿಂದ ಜನಾಂದೋಲನ ಪ್ರಬಲವಾಗಿ ನೆಲೆ ನಿಲ್ಲಲು ಮಾತ್ರ ಸಾಧ್ಯವಾಗುತ್ತದೆ.

            ಮೂಢನಂಬಿಕೆಗಳನ್ನು, ಮತೀಯ ವಿಧಿವಿಧಾನಗಳನ್ನು, ಸಾಮಾಜಿಕ ಅನಿಷ್ಠ ಪದ್ಧತಿಗಳನ್ನು ಮತ್ತು ಕೆಟ್ಟ ಸಂಪ್ರದಾಯಗಳನ್ನು ಮೊದಲು ವಿರೋಧಿಸುವ ಮನೋಭಾವ ಬೆಳೆಸಬೇಕು. ಜನರ ಜೀವನ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಲು ಉಗ್ರವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ, ಅಂತರ್‍ಜಾತಿ ಮದುವೆಗೆ ಪ್ರೋತ್ಸಾಹಿಸುವಂತೆ, ಎಲ್ಲಾ ಕ್ಷೇತ್ರಗಳಲ್ಲಿ ಶೋಷಿತರನ್ನು ನೇಮಿಸುವಂತೆ ಜನಾಂದೋಲನದ ಮೂಲಕ ಒತ್ತಾಯಿಸಬೇಕು. ಶೋಷಿತರ ದಲಿತರ ಪರಿಸ್ಥಿತಿಗಳನ್ನು ಸುಧಾರಿಸುವ, ಉತ್ತಮಪಡಿಸುವ, ಗುಲಾಮಗಿರಿಯ ಕೋಳಗಳನ್ನು ಕತ್ತರಿಸುವ, ಮಾನವೀಯ ಮೌಲ್ಯಗಳನ್ನು ಸ್ಥಾಪಿಸುವ, ಸಮಾಜವಾದದ ಸಮಾಜ ಸ್ಥಾಪಿಸುವ, ಹಿಂದೂಗಳ ಅಸ್ಪøಶ್ಯತೆಯ ಪಾಪವನ್ನು ನಿವಾರಣೆ ಮಾಡುವ ಈ ಎಲ್ಲ ಗುಣಗಳನ್ನು ತತ್ವಗಳನ್ನು ಒಳಗೊಂಡ ಪ್ರಜಾಪ್ರಭುತ್ವ ಸಮಾಜವಾದದ ಪೂರ್ಣ ಮಾನವೀಯ ಆಂದೋಲನ ಅವಶ್ಯಕವಾಗಿದೆ. ಸಾಮಾಜಿಕ ರಚನೆಯ ಬದಲಾವಣೆಯಾಗದೆ ಪ್ರಜಾಪ್ರಭುತ್ವ ಸಮಾಜವಾದ ಮತ್ತು ಆಧುನಿಕ ಸಮಾಜಗಳ ಬಗೆಗೆ ಮಾತನಾಡುವುದು ವ್ಯರ್ಥ.

ಬಡವರ, ನಿರ್ಗತಿಕರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಅರ್ಜಿ, ಮನವಿ ಪತ್ರಗಳನ್ನು ಬರೆದು ಸಂಬಂಧಪಟ್ಟ ಅಧಿಕಾರಿಗಳಲ್ಲಿ, ಸಚಿವರಲ್ಲಿ ಅರ್ಜಿಗಳನ್ನು ಮನವಿ ಪತ್ರಗಳನ್ನು ಸಲ್ಲಿಸಿ ಕೆಲಸವಾಗುವ ತನಕ ಅವರಿಂದ ಕೆಲಸವನ್ನು ಮಾಡಿಸಬೇಕು. ಮತ್ತು ಯಾವುದೇ ಪ್ರತಿಫಲ ಅಪೇಕ್ಷಿಸದೆ ಸಮಸ್ಯೆಗಳ ಪರಿಹಾರಕ್ಕಾಗಿ ದುಡಿಯುವ ಆಂದೋಲನವಾಗಬೇಕಾಗಿದೆ. ಜನರ ಸಮಸ್ಯೆಗಳನ್ನು ಸಮುದಾಯದ ಸಮಸ್ಯೆಗಳನ್ನು ಆಲಿಸಲು ಒಂದು ಪ್ರಾಮಾಣಿಕ ಕಛೇರಿ ಮಾಡುವುದು ಅವಶ್ಯಕವಾಗಿದೆ. ಶೋಷಿತ ಸಮುದಾಯಗಳನ್ನು ಸಧೃಢಗೊಳಿಸಬೇಕಾದರೆ ಅವರಲ್ಲಿ ಹುದುಗಿರುವ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಂದೋಲನದ ಪ್ರಥಮ ಕೆಲಸವಾಗಬೇಕು. ಮೊದಲ ಹೆಜ್ಜೆಯಾಗಿ ದಲಿತ ಸಂಘಟನೆಗಳು, ದಲಿತ ಸಮುದಾಯ ಒಕ್ಕೂಟದ ಮನೋಭಾವ, ಒಕ್ಕೂಟದ ಕಾರ್ಯ ಚಟುವಟಿಕೆ ಪಡೆದುಕೊಳ್ಳುವುದು ಇಂದಿನ ತುರ್ತಾಗಿದೆ. ‘ಸಂವಿಧಾನವೇ ಭಾರತದ ಧರ್ಮವಾಗಲಿ’, ಎಂಬ ಉಳಿವಿನ ವಾಕ್ಯವನ್ನು ಮನೆ ಮನೆಗೂ ತಲುಪಿಸಲು ರಾಜ್ಯದ ಉದ್ದಗಲಕ್ಕೂ ಜಾಥಾ, ಮೆರವಣಿಗೆ, ಸಂಕಿರಣ, ಇದಕ್ಕಾಗಿ ಹಾಡು, ಲಾವಣಿ, ನಾಟಕ, ತಮಟೆ, ಪ್ರಚಾರ ಇತ್ಯಾದಿ ಇತ್ಯಾದಿ. ಇದನ್ನು ಸ್ಪರ್ಧೆ ಇಲ್ಲದೆ ಹಂಚಿಕೊಂಡು, ಮಾಡುವುದನ್ನು ಹಾಗೂ ಒಟ್ಟಾಗಿ ಮಾಡುವುದನ್ನು ಆಂದೋಲನಗಳು ಪಳಗಿಸಿಕೊಳ್ಳಬೇಕಾಗಿದೆ.

            ಆಂದೋಲನವು ಪ್ರಜಾಸತ್ತಾತ್ಮಕ ಅಭಿವ್ಯಕ್ತಿ ಮಾರ್ಗ ಹಾಗೂ ಬದ್ಧತೆ ಮತ್ತು ಆದರ್ಶವನ್ನು ಹೊಂದಿರಬೇಕು. ಸೈದ್ಧಾಂತಿಕ ನೆಲೆಯ ಚಳುವಳಿ ಒಂದು ವಿಶಾಲ ಆಯಾಮದಲ್ಲಿ ನಡೆಯಬೇಕು. ಸಂಘರ್ಷವನ್ನು ಮೂಲವಾಗಿಟ್ಟುಕೊಂಡು ಆರೋಗ್ಯಕರ ಚಳುವಳಿ ಬರಬೇಕು. ಸಂಘಟನಾತ್ಮಕ ಜನ ಸಮುದಾಯದ ಆಶೋತ್ತರಗಳನ್ನು ಪ್ರತಿನಿಧಿಸುವ ಒಂದು ಸಮಗ್ರ ದೃಷ್ಟಿಕೋನ ಹೊಂದಿದ ಆಂದೋಲನದ ಅವಶ್ಯಕತೆ ಇದೆ. ಇದನ್ನು ಸಿದ್ಧಾಂತ, ತತ್ವ, ನೀತಿ, ನಿಯಮ ಯಾವ ಹೆಸರಿನಿಂದಲೂ ಗುರುತಿಸಬಹುದು. ಆದರೆ ಮೂಲಭೂತವಾಗಿ ಈ ನೆಲೆಗಟ್ಟಿನ ಸುಭದ್ರ ತಳಹದಿಯೇ ಜನಾಂದೋಲನದ ಮೂಲ ಸ್ವರೂಪವನ್ನು ನಿರ್ಧರಿಸುತ್ತದೆ ಎನ್ನುವುದು ಸರ್ವ ವಿದಿತ.

            ಸೈದ್ಧಾಂತಿಕ ಯಶಸ್ಸು ಇರುವೆಡೆ ಜನಾಂದೋಲನಗಳು ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುವುದಿಲ್ಲ. ಮೂಲ ಆಶಯಗಳು ಜಲಾಂದೋಲನದ ಆರಂಭದಲ್ಲಿ ಸ್ಪಷ್ಟವಾದರೆ ವೈಫಲ್ಯ ಎದರಾಗುವುದಿಲ್ಲ. ಸಂಘಟನಾತ್ಮಕ ಹೊಣೆಗಾರಿಕೆ ಜನಾಂದೋಲನಕ್ಕೆ ಬೇಕು. ದಲಿತ ಸಮುದಾಯವನ್ನು ಕಾಡುವ ಸಾಮಾಜಿಕ ಬಹಿಷ್ಕಾರ, ಜಾತಿ ತಾರತಮ್ಯ, ಅಸ್ಪøಶ್ಯತೆ ಈ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಒಂದು ಸಾಮಾಜಿಕ ಪ್ರಜ್ಞೆ ಮೂಡಿಸುವ ಆಂದೋಲನ ಅವಶ್ಯಕವಾಗಿದೆ. ಇಂತಹ ಸಂಧರ್ಭದಲ್ಲಿ ಬೇಕಿರುವುದು ದಲಿತ ಚಿಂತನೆಗಳ ಐಕ್ಯತೆ ಹೊರತು ಬೇರೆ ಏನು ಅಲ್ಲ. ಸ್ವಾಭಿಮಾನ ರಕ್ಷಣೆ, ಉದ್ಯೋಗದ ಹಕ್ಕು, ಸಾಮಾಜಿಕ ನ್ಯಾಯ ಸ್ಥಾಪನೆಯ ಗುರಿಯನ್ನಿಟ್ಟುಕೊಂಡು ಆಂದೋಲನ ಮುನ್ನಡೆಯಬೇಕಾಗಿದೆ. ಅಮೆರಿಕಾ ಮತ್ತು ಆಫ್ರೀಕಾಗಳ ನಿಗ್ರೊ ಕಪ್ಪು ಲೇಖಕರು ವರ್ಣಭೇದ ನೀತಿ ವಿರೋಧಿಸಿ ಸಾಹಿತ್ಯ ರಚಿಸುತ್ತಾ ‘ಸ್ವಾಭಿಮಾನಿ ಹೋರಾಟ’ ನಡೆಸಿದ ರೀತಿಯಲ್ಲಿ ಒಂದು ಕ್ರಾಂತಿಕಾರಿ ಪುಸ್ತಿಕೆಯ ಪ್ರಕಟನೆಯೊಂದಿಗೆ ಸ್ವಾಭಿಮಾನ, ಆತ್ಮಗೌರವ, ಸಂಘರ್ಷ ಮತ್ತು ಪರಿವರ್ತನೆ ಎಂಬ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡು ಆಂದೋಲನದಲ್ಲಿ ತೊಡಗಿಕೊಳ್ಳುವುದು ಅವಶ್ಯಕವಾಗಿದೆ.

ಆಧಾರ ಗ್ರಂಥಗಳು

  1. ದಲಿತ ಚಳುವಳಿ ಚರಿತ್ರೆ, ಸಂ-2, ಡಾ. ವಿ. ಮುನಿವೆಂಕಟಪ್ಪ, 2012.
  2. ದಲಿತ ಚಳುವಳಿ ಚರಿತ್ರೆ, ಸಂ-3, ಡಾ. ವಿ. ಮುನಿವೆಂಕಟಪ್ಪ, 2012.

Reference

  1. History of Dalit Movement, Vol-2, Dr. V. Munivenkattapa, 2012.
  2. History of Dalit Movement, No-3, Dr. V. Munivenkattapa, 2012.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal