Tumbe Group of International Journals

Full Text


A Study on Educational Contributions of Sri Adichunchanagiri Math.

Dr. Chandrashekharaiah B R1

1HOD, Department  of History, Sree Siddaganga College of Arts, Science & Commerce, B H Road, Tumkur - 02. Mobile No : 9620202083

eMail: chandrubghalli@gmail.com

Abstract

Illiteracy is a major problem in India. Former Deputy Prime Minister of India Dr. Zakir Hussain has said that 'the life of every illiterate person is a tragedy'. It can be said that this statement is really close to reality. With literacy, a person makes his life worthwhile and becomes a useful being in the surrounding society. So literacy can be called the hand of human power. Food donation and education are very important for the all-round development of the human race. In this regard, Dr. Many schools and colleges were established during Balagangadharnath Swamiji's time.

Keywords: Balagangadharnath Swamiji, Educational Contributions, Adichunchanagiri Math.


ಶ್ರೀ ಆದಿಚುಂಚನಗಿರಿ ಮಠದ ಶೈಕ್ಷಣಿಕ ಕೊಡುಗೆಗಳು : ಒಂದು ಅಧ್ಯಯನ

ಡಾ. ಬಿ.ಆರ್ ಚಂದ್ರಶೇಖರಯ್ಯ1

1ಇತಿಹಾಸ ಸಹಾಯಕ ಪ್ರಾಧ್ಯಾಪಕರು, ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಬಿ.ಹೆಚ್.ರಸ್ತೆ, ತುಮಕೂರು -572102

ಅಮೂರ್ತ

ನಿರಕ್ಷರತೆ ಎನ್ನುವುದು ಭಾರತದ ಒಂದು ಪ್ರಮುಖ ಸಮಸ್ಯೆಯಾಗಿದೆ. ಭಾರತದ ಮಾಜಿ ಉಪಪ್ರಧಾನಿಯಾಗಿದ್ದ ಡಾ. ಜಾóಕೀರ್ ಹುಸೇನ್‍ರವರು ‘ಪ್ರತಿ ಅನಕ್ಷರಸ್ಥ ಮಾನವನ ಜೀವನ ಒಂದು ದುರಂತ’ ಎಂದಿದ್ದಾರೆ. ಈ ಮಾತು ನಿಜಕ್ಕೂ ವಾಸ್ತವಿಕತೆಗೆ ಹತ್ತಿರವಾದುದಾಗಿದೆ ಎನ್ನಬಹುದು. ಅಕ್ಷರ ಜ್ಞಾನದಿಂದ ವ್ಯಕ್ತಿ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನ ಸಮಾಜದಲ್ಲಿ ಅವನೊಬ್ಬ ಉಪಯುಕ್ತ ಜೀವಿಯಾಗುತ್ತಾನೆ. ಆದುದರಿಂದ ಸಾಕ್ಷರತೆ ಮಾನವನ ಶಕ್ತಿಯ ಕೈ ಎನ್ನಬಹುದು. ಮಾನವ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಅನ್ನದಾನ, ವಿದ್ಯಾದಾನ ಬಹುಮುಖ್ಯವಾದುವು. ಇದನ್ನರಿತು ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಕಾಲಕ್ಕೆ ಸಾಕಷ್ಟು ಶಾಲಾಕಾಲೇಜುಗಳು ಸ್ಥಾಪಿತಗೊಂಡವು.

ಪ್ರಮುಖ ಪದಗಳು: ಬಾಲಗಂಗಾಧರನಾಥ ಸ್ವಾಮೀಜಿ, ಶೈಕ್ಷಣಿಕ ಕೊಡುಗೆಗಳು, ಆದಿಚುಂಚನಗಿರಿ ಮಠ.

ಪೀಠಿಕೆ:

ವಿದ್ಯಾವಿಹೀನಂ ಪಶುಃ

ನಹಿ ಜ್ಞಾನೇನ ಸದೃಶಃ

ಈ ಸೂಕ್ತಿಗಳು ವಿದ್ಯೆ ಮತ್ತು ಜ್ಞಾನದ ಮಹತ್ವವನ್ನು ವ್ಯಕ್ತಗೊಳಿಸುತ್ತವೆ. ವಿದ್ಯೆಯಿಲ್ಲದವರು ಪಶು ಸಮಾನ. ಜ್ಞಾನಕ್ಕೆ ಸಮನಾದುದು ಬೇರೊಂದಿಲ್ಲ. ಆದರೆ ಅವುಗಳನ್ನು ಹೊಂದಲು ಅನುಕೂಲಕರವಾದ ವಾತಾವರಣ, ಪರಿಸರಗಳು ಅತ್ಯಗತ್ಯ.

ನಿರಕ್ಷರತೆ ಎನ್ನುವುದು ಭಾರತದ ಒಂದು ಪ್ರಮುಖ ಸಮಸ್ಯೆಯಾಗಿದೆ. ಭಾರತದ ಮಾಜಿ ಉಪಪ್ರಧಾನಿಯಾಗಿದ್ದ ಡಾ. ಜಾóಕೀರ್ ಹುಸೇನ್‍ರವರು ‘ಪ್ರತಿ ಅನಕ್ಷರಸ್ಥ ಮಾನವನ ಜೀವನ ಒಂದು ದುರಂತ’ ಎಂದಿದ್ದಾರೆ. ಈ ಮಾತು ನಿಜಕ್ಕೂ ವಾಸ್ತವಿಕತೆಗೆ ಹತ್ತಿರವಾದುದಾಗಿದೆ ಎನ್ನಬಹುದು. ಅಕ್ಷರ ಜ್ಞಾನದಿಂದ ವ್ಯಕ್ತಿ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನ ಸಮಾಜದಲ್ಲಿ ಅವನೊಬ್ಬ ಉಪಯುಕ್ತ ಜೀವಿಯಾಗುತ್ತಾನೆ. ಆದುದರಿಂದ ಸಾಕ್ಷರತೆ ಮಾನವನ ಶಕ್ತಿಯ ಕೈ ಎನ್ನಬಹುದು. ಮಾನವ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಅನ್ನದಾನ, ವಿದ್ಯಾದಾನ ಬಹುಮುಖ್ಯವಾದುವು. ಇದನ್ನರಿತು ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಕಾಲಕ್ಕೆ ಸಾಕಷ್ಟು ಶಾಲಾಕಾಲೇಜುಗಳು ಸ್ಥಾಪಿತಗೊಂಡವು.

ಮೊದಲಿಗೆ ಶಿಕ್ಷಣದ ಹಿನ್ನೆಲೆಯನ್ನು ತಿಳಿದುಕೊಳ್ಳಲೇಬೇಕು. ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಗಳ ಪರಂಪರೆಯನ್ನು ಹೊಂದಿರುವ ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಪ್ರಾಶಸ್ತ್ಯವಿದ್ದಿತು. ವೈದಿಕ ಶಿಕ್ಷಣ ಮೊದಲಿನಿಂದಲೂ ಇತ್ತು. ಅಂದಿನ ಮಕ್ಕಳ ಪ್ರಾಥಮಿಕ ಶಿಕ್ಷಣ ಸಾಮಾನ್ಯವಾಗಿ ಗುರುಕುಲಗಳಲ್ಲಿ ನಡೆಯುತ್ತಿತ್ತು. ಅಂದು ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರಿಗೆ ಮಾತ್ರ ಶಿಕ್ಷಣ ದೊರೆಯುತ್ತಿತ್ತು. ಅಂದಿನ ಕಾಲಕ್ಕೆ ದೇವಾಲಯಗಳು ಜೈನ ಬಸದಿಗಳು ಕಲಿಕಾ ಕೇಂದ್ರಗಳಾಗಿದ್ದವು. ಇಂತಹ ಕೇಂದ್ರಗಳಿಗೆ ಮಹಾರಾಜರುಗಳಿಂದ ಪೆÇ್ರೀತ್ಸಾಹ ದೊರೆಯುತ್ತಿತ್ತು.

 ಐತಿಹಾಸಿಕ ಹಿನ್ನೆಲೆ

ರಾಜ್ಯದಲ್ಲಿ ಬ್ರಿಟಿಷರ ಆಳ್ವಿಕೆಯ ಪ್ರಾರಂಭ ಕಾಲವನ್ನು ಶೈಕ್ಷಣಿಕವಾಗಿ ಸಂಕ್ರಮಣ ಕಾಲವೆನ್ನಬಹುದು. ಈ ವೇಳೆಗೆ ಅಗ್ರಹಾರಗಳು ಮಾಯವಾಗುತ್ತಾ ಬಂದವು. ದೇವಾಲಯಗಳಲ್ಲಿ ನೀಡಲ್ಪಡುತ್ತಿದ್ದ ವೈದಿಕ ಶಿಕ್ಷಣವೂ ಸೊರಗಿತು. ಇದರಿಂದಾಗಿ ಅಯ್ಯನವರ ಕೂಲಿ ಮಠಗಳು ತಲೆ ಎತ್ತಿದವು. ಸಾಮಾನ್ಯ ಓದು, ಬರಹ ಹಾಗೂ ಲೆಕ್ಕ ಇವುಗಳು ಶಿಕ್ಷಣದ ವಿಷಯಗಳಾಗಿದ್ದವು. ಈ ವೇಳೆಗಾಗಲೇ ಕ್ರೈಸ್ತಧರ್ಮದ ಪ್ರಸಾರವೂ ಸಾಗಿದ್ದಿತು. ತಮ್ಮ ಮತ ಪ್ರಚಾರಕ್ಕಾಗಿ ಕ್ರೈಸ್ತ ಪಾದ್ರಿಗಳು ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ ಶಿಕ್ಷಣಕ್ಕೆ ಒತ್ತು ನೀಡಿದರು. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉಂಟಾದ ಮತ್ತೊಂದು ಕ್ರಾಂತಿಕಾರಕ ಬದಲಾವಣೆಯಾದ ಇಂಗ್ಲೀಷ್ ಭಾಷೆಯ ಕಲಿಕೆ ಹಾಗೂ ಇಂಗ್ಲೀಷ್ ಶಿಕ್ಷಣ ಪದ್ಧತಿಗಳನ್ನು ಶಿಕ್ಷಣಾರ್ಥಿಗಳು ಹಾರ್ದಿಕವಾಗಿ ಸ್ವಾಗತಿಸಿದರು. ವಿಜ್ಞಾನದ ವಿಷಯಗಳ ಕಲಿಕೆಯ ನೆಪದಲ್ಲಿ ಇಂಗ್ಲೀಷ್ ಶಿಕ್ಷಣ ಭರದಿಂದ ಸಾಗಿತು. ಇದರ ಪ್ರಭಾವದಿಂದಾಗಿ ಸಂಸ್ಕೃತ ತನ್ನ ಪ್ರಾಶಸ್ತ್ಯವನ್ನು ಕಳೆದುಕೊಂಡು ದೇಶೀಯ ಭಾಷೆಗಳು ಎರಡನೇ ದರ್ಜೆಗೆ ಇಳಿಸಲ್ಪಟ್ಟವು. ಆದರೆ ಮುಸ್ಲಿಂ ಶಿಕ್ಷಣ ಪದ್ಧತಿ ಮಸೀದಿ ಹಾಗೂ ಮುಕ್ತ ಭಾಗಗಳಲ್ಲಿ ನಿರಾತಂಕವಾಗಿ ಸಾಗಿತು. ದೇವಾಲಯಗಳು ಹಾಗೂ ಅಗ್ರಹಾರಗಳಲ್ಲಿದ್ದ ಹಿಂದೂ ಶಿಕ್ಷಣ ಅಯ್ಯನವರ ಕೂಲಿ ಮಠಗಳಲ್ಲಿ ಮಾತ್ರ ಉಳಿಯಿತು. ಆದರೆ ಕೂಲಿ ಮಠಗಳು ಸಾರ್ವತ್ರಿಕ ಶಿಕ್ಷಣವನ್ನೇನೂ ನೀಡಲಿಲ್ಲ.

1854 ರಲ್ಲಿ ವುಡ್ಸ್ ವರದಿಯ ನಂತರ ಭಾರತದಲ್ಲಿ ಉಂಟಾದ ಹೊಸ ಸ್ಥಿರ ಶಿಕ್ಷಣ ನೀತಿ ರಾಜ್ಯದ ಎಲ್ಲೆಡೆ ತನ್ನ ಪ್ರಭಾವವನ್ನು ಬೀರಿತು. ಸಂಸ್ಥಾನದಲ್ಲಿ 1857 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾರಂಭವಾಯಿತು. ಅಯ್ಯನವರ ಕೂಲಿ ಮಠಗಳಲ್ಲಿ ಶಿಕ್ಷಣ ಇಲಾಖೆ ರೂಪಿಸಿದ ಇಂಗ್ಲೀಷ್ ಮಾದರಿಯ ಪಠ್ಯಕ್ರಮ ಜಾರಿಗೆ ಬಂದಿತು. ಅಧ್ಯಾಪಕರ ತರಬೇತಿಗಾಗಿ ನಾರ್ಮಲ್ ಶಾಲೆಗಳು ಪ್ರಾರಂಭಗೊಂಡವು.

ಮೊದಲಿಗೆ ಒಂಭತ್ತು ರೂಪಾಯಿ ಮೇಲ್ಪಟ್ಟು ಸಂಬಳ ಪಡೆಯುತ್ತಿದ್ದ ಸರ್ಕಾರಿ ನೌಕರರು ಮಾತೃಭಾಷೆಯಲ್ಲಿ ಓದಲು ಹಾಗೂ ಬರೆಯಲು ಬಲ್ಲವರಾಗಿರಬೇಕೆಂದು ಸರ್ಕಾರ 1864 ರಲ್ಲಿ ಕಾನೂನು ಜಾರಿಗೆ ಮಾಡಿತು. ಇದನ್ನು ಅಂದಿನ ಶಿಕ್ಷಣ ಇಲಾಖೆಯ ಮುಖ್ಯಸ್ಥರಾದ ಬಿ.ಎಲ್. ರೈಸ್‍ರವರು ಅನುಷ್ಠಾನಕ್ಕೆ ತಂದರು. ಪ್ರತಿ ಹೋಬಳಿ ಕೇಂದ್ರದಲ್ಲಿ ಒಂದು ಸರ್ಕಾರಿ ಕಿರಿಯ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜಿಲ್ಲಾ ಕೇಂದ್ರದಲ್ಲಿ ಮೆಟ್ರಿಕ್ಯುಲೇಷನ್‍ವರೆಗೆ ಶಿಕ್ಷಣ ನೀಡುವ ಪ್ರೌಢಶಾಲೆಯೂ ಆರಂಭಗೊಂಡವು. ಇಪ್ಪತ್ತು ರೂಪಾಯಿ ಮಾಸಿಕ ವೇತನ ಪಡೆಯುವ ಸರ್ಕಾರಿ ಹುದ್ದೆಗಳಿಗೆ ಇಂಗ್ಲೀಷ್ ಒಳಗೊಂಡ ಸಾಮಾನ್ಯ ಶಿಕ್ಷಣ ಪರೀಕ್ಷೆ ಕಡ್ಡಾಯವಾಯಿತು. ಇದರಿಂದಾಗಿ ಇಂಗ್ಲೀಷ್ ಶಿಕ್ಷಣದ ಪ್ರಾಮುಖ್ಯತೆ ವೃದ್ಧಿಯಾಯಿತು. ಆದರೂ ಯೋಜನೆಯಿಂದ ಕ್ರಾಂತಿಕಾರಕ ಶೈಕ್ಷಣಿಕ ಬದಲಾವಣೆಗಳೇನೂ ಆಗಲಿಲ್ಲ.

ಈ ಹಿನ್ನೆಲೆಯಲ್ಲಿ ಮಠಗಳು ಮೊದಲಿಗೆ ಆಧ್ಯಾತ್ಮ ಕೇಂದ್ರಗಳೇ ಆಗಿದ್ದು, ಧರ್ಮ ಬೋಧನೆ ಮತ್ತು ಧರ್ಮ ಪ್ರಸಾರವನ್ನು ಮಾಡುತ್ತಿದ್ದು ಕ್ರಮೇಣ ಗುರುಮನೆಗಳಾಗಿಯೂ, ಗುರುಕುಲಗಳಾಗಿಯೂ ಬೆಳೆದು, ನಂತರದಲ್ಲಿ ವಿದ್ಯಾ ಪ್ರಸಾರ ಕೇಂದ್ರಗಳಾಗಿ ಮಾರ್ಪಾಡಾದ ಉದಾಹರಣೆಗಳು ಹೇರಳವಾಗಿವೆ. ಉದಾಹರಣೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅದಿಚುಂಚನಗಿರಿ ಮಠ ಇದಕ್ಕೆ ಸಾಕ್ಷಿಯಾಗಿದೆ. ಆದಿಚುಂಚನಗಿರಿ ಮಠವು ಶೈಕ್ಷಣಿಕವಾಗಿ ದೇಶದಲ್ಲಿ ಅಲ್ಲದೆ ವಿದೇಶಗಳಲ್ಲಿಯೂ ತನ್ನದೇ ಆದ ಹೆಸರು ಗಳಿಸಿದೆ.

ನಚೋರ ಹಾರ್ಯಂನ ಚರಾಜಹಾರ್ಯಂನ ಭ್ರಾತೃಭಾಜ್ಯಂನ ಚ ಬಾರಕಾರಿ

ವ್ಯಯೆಕೃತೇ ವರ್ಧತೇ ಏವ ನಿತ್ಯಂ ವಿದ್ಯಾಧನಂ ಸರ್ವಧನ ಪ್ರಧಾನಂ || (ಸುಭಾಷಿತ)

(ಕಳ್ಳನಿಂದ ಕದಿಯಲಾಗದು, ರಾಜನಿಂದ ಅಪಹರಿಸಲಾಗದು, ಸೋದರರಿಂದ ಭಾಗವಾಗಲಾರದು, ಭಾರವಲ್ಲದ್ದು, ಖರ್ಚು ಮಾಡಿದಷ್ಟೂ ಹೆಚ್ಚಾಗುತ್ತಲೇ ಹೋಗುವ ವಿದ್ಯಾಧನವು ನಿಜಕ್ಕೂ ಎಲ್ಲಾ ಧನಗಳಿಗಿಂತಲೂ ಮಹತ್ತರವಾದದ್ದು)

ಹೀಗೆ ಹೇಳುತ್ತದೆ ಸಂಸ್ಕೃತ ಭಾಷೆಯ ಸುಭಾಷಿತವೊಂದು. ವಿದ್ಯೆ ಎಂಬುದು ಎಲ್ಲಾ ರೀತಿಯ ಸಂಪತ್ತುಗಳಿಗಿಂತಲೂ ಶ್ರೇಷ್ಠವಾದುದು. ಅದಕ್ಕೆ ಸರಿಸಮನಾದ ಐಶ್ವರ್ಯ ಇನ್ನೊಂದಿಲ್ಲ. ವಿದ್ಯೆಯಿದ್ದರೆ ಜಿವನದ ಎಲ್ಲಾ ಉತ್ತಮ ಗುಣಗಳೂ, ವಸ್ತುಗಳೂ ತಾವಾಗಿಯೇ ನಮ್ಮ ಬಳಿ ಬರುತ್ತವೆ.

ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ|

ಪಾತ್ರತ್ವಾದ್ದನಮಾಪೆÇ್ರೀತಿ ಧನಾದ್ಧರ್ಮಃ ತತಃ ಸುಖಂ||

ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಧನ, ಧನದಿಂದ ಧರ್ಮ, ಧರ್ಮದಿಂದ ಸುಖ, ಹೀಗೆ ವಿದ್ಯೆಯಿಂದ ಹಂತ-ಹಂತವಾಗಿ ಜೀವನದ ಎಲ್ಲಾ ಉತ್ತಮ ಗುಣಗಳೂ, ವಸ್ತುಗಳೂ ನಮಗೆ ಲಭ್ಯವಾಗುತ್ತವೆ ಎಂದು ಇನ್ನೊಂದು ಸುಭಾಷಿತ ಹೇಳುತ್ತದೆ.

ಈ ಸುಭಾಷಿತಗಳಿಂದಾಗಿ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ವಿದ್ಯೆಗೆ ನಮ್ಮ ಪೂರ್ವಿಕರು ನೀಡಿದ್ದ ಉನ್ನತ ಸ್ಥಾನದ ಅರಿವುಂಟಾಗುತ್ತದೆ. ವಿದ್ಯೆ ಇಲ್ಲದವರು ಪಶುವಿಗೆ ಸಮಾನ ಎಂದೂ ನಮ್ಮ ಪರಂಪರೆಯಲ್ಲಿ ಹೇಳಿದೆ. ಪ್ರಾಚೀನ ಭಾರತದಲ್ಲಿ ವಿದ್ಯೆಗೆ ಎಲ್ಲದಕ್ಕಿಂತ ಶ್ರೇಷ್ಠ ಸ್ಥಾನವನ್ನು ನೀಡಿದ್ದರು. ಆದ್ದರಿಂದ ಬಾಲ್ಯದಲ್ಲಿ ಮುಖ್ಯವಾಗಿ ವಿದ್ಯೆಯನ್ನು ಕಲಿಸಿಕೊಡುವ ಪರಿಪಾಠವಿತ್ತು. ಅದರಲ್ಲೂ ಬುದ್ಧಿಜೀವಿಗಳಾದ ಬ್ರಾಹ್ಮಣರಿಗೆ ವಿದ್ಯಾಭ್ಯಾಸವೇ ಮೂಲ ವೃತ್ತಿ, ತನ್ಮೂಲಕ ಇತರ ಗ್ರಂಥಗಳಿಗೆ ಪ್ರವೇಶ. ಹೀಗಿತ್ತು ಪರಿಸ್ಥಿತಿ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಗುರುಕುಲದಲ್ಲಿ ಅಭ್ಯಾಸ ಮಾಡಿ ವಿದ್ಯೆಯನ್ನು ಕಲಿಯುತ್ತಿದ್ದರು. ಆದರೆ ನಾಲ್ಕನೇ ವರ್ಣದ ಶೂದ್ರರ ವಿಚಾರವೇ ಬೇರೆಯಾಗಿತ್ತು. ಈ ವರ್ಣದ ಜಾತಿಯ ಪಂಗಡಗಳಿಗೆ ವೃತ್ತಿಗಳಿಗೆ ಮಕ್ಕಳ ವಿದ್ಯಾಭ್ಯಾಸ, ಅಕ್ಷರ ಜ್ಞಾನಕ್ಕಿಂತ ವೃತ್ತಿ ಶಿಕ್ಷಣ, ತರಬೇತಿ ಇವೇ ಪ್ರಮುಖವಾಗಿದ್ದವು. ವಿದ್ಯೆಯನ್ನು ಕಲಿಯುವ ಹುಡುಗ (ಹುಡುಗಿಯರಿಗೆ ವಿದ್ಯಾಭ್ಯಾಸವೆಂಬುದು ಇದ್ದರೂ ಅದು ಮನೆಯಲ್ಲಿ ಮಾತ್ರ) ವಿದ್ಯಾಭ್ಯಾಸಕ್ಕೆ ಗುರುವಿನ ಮನೆಗೆ ಹೋಗಿ ಅಲ್ಲಿ ನೆಲೆಸಿ ಗುರುಸೇವೆ ಮಾಡಿಕೊಂಡು ವಿದ್ಯೆಯನ್ನು ಕಲಿತು ತನ್ನ ಮನೆಗೆ ಹಿಂತಿರುಗುತ್ತಿದ್ದನು. ವೇದ, ಪುರಾಣಗಳ ಕಾಲಗಳಲ್ಲಿ ಮನೆಯೇ ವಿದ್ಯಾಕೇಂದ್ರವಾಗಿದ್ದಿತು. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ದಲಿತರಿಗೆ, ಒಕ್ಕಲಿಗರಿಗೆ, ಹಿಂದುಳಿದವರಿಗೆ ಮತ್ತು ಇನ್ನೂ ಮೊದಲಾದ ಜಾತಿಯವರಿಗೆ ವಿದ್ಯೆ ಇರಲಿಲ್ಲ.

ಶಿಕ್ಷಣ ಕ್ಷೇತ್ರಕ್ಕೆ ಆದಿಚುಂಚನಗಿರಿ ಮಠದ ಕೊಡುಗೆಗಳು

ಈ ಎಲ್ಲಾ ಬೆಳವಣಿಗೆಯನ್ನು ಅರಿತ ಆದಿಚುಂಚನಗಿರಿ ಕ್ಷೇತ್ರದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಿದ್ದಾರೆ. ಜ್ಞಾನಸಂಪಾದನೆ ಶಿಕ್ಷಣದ ಮುಖ್ಯ ಗುರಿಯಾದರೂ ಶೀಲ ಸಂವರ್ಧನೆ, ವ್ಯಕ್ತಿತ್ವ ವಿಕಾಸ, ಧರ್ಮಪರಿಪಾಲನೆ, ಕರ್ತವ್ಯ ನಿಷ್ಠೆ, ಪರೋಪಕಾರ ಇನ್ನೂ ಮೊದಲಾದ ಮೌಲ್ಯಗಳನ್ನು ರೂಢಿಸಿಕೊಳ್ಳಲು ಶಿಕ್ಷಣವು ಪ್ರೇರಣೆಯನ್ನು ನೀಡುತ್ತದೆ ಎಂಬ ಅರಿವು ಸ್ವಾಮೀಜಿಯವರಿಗೆ ಇತ್ತು. ಆದಕಾರಣವೇ ಸಾಕಷ್ಟು ಶಾಲಾಕಾಲೇಜುಗಳನ್ನು ತೆರೆದಿದ್ದಾರೆ. ಶಿಕ್ಷಣವನ್ನು ನೀಡುವುದರಿಂದ ಆತನ ನೈತಿಕ ಮೌಲ್ಯಗಳು ಪ್ರತಿಯೊಬ್ಬ ಮಾನವನ ಯಶಸ್ಸಿಗೆ, ಆತನ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ನಂಬಿದ್ದರು. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದೇ ಶಿಕ್ಷಣ. ಈಗಾಗಲೇ ಶಿಕ್ಷಣವನ್ನು ಯಾರೂ ಅಪಹರಿಸಲಾರರು ಎಂಬುದಾಗಿ ತಿಳಿಸಲಾಗಿದೆ.

ವಿದ್ಯೆಯನ್ನು ಬೇಡಿ ಬಂದವರಿಗೆ ಜ್ಞಾನ ಭಿಕ್ಷೆಯನ್ನು ನೀಡುವವನೇ ಗುರು. ಅದು ಶಿಕ್ಷಣದ ಮೂಲಕ ಜ್ಞಾನದ ದೀಕ್ಷೆಯೂ ಆಗಿರುತ್ತದೆ. ಜ್ಞಾನಾರ್ಥಿಯಾದ ಶಿಷ್ಯನಿಗೆ ದೀಕ್ಷೆ ನೀಡಿ ಜ್ಞಾನಿಯನ್ನಾಗಿ ಮಾಡುವ ಗುರುಶಿಷ್ಯರ ಸಂಬಂಧ ವಾತ್ಸಲ್ಯಭರಿತವೂ ಗೌರವಪೂರಿತವೂ ಆಗಿರುತ್ತದೆ.

ಶಿಕ್ಷಣವನ್ನು ಕಲಿಸುವ ಮಂದಿರಗಳು ಜ್ಞಾನ ದೇಗುಲಗಳಾಗಿರುತ್ತವೆ. ಕಲಿಯುವವರಿಗೆ ಕಲಿಸುವವರಿಗೆ ಶ್ರದ್ಧೆ, ಆಸಕ್ತಿಗಳು ಮುಖ್ಯ. ವಿದ್ಯಾದಾನ ಶ್ರೇಷ್ಠವಾದ ದಾನ. ಇದನ್ನರಿತು ಮಠಗÀಳು ವಿದ್ಯಾಕೇಂದ್ರಗಳಾಗಿ ಶಿಕ್ಷಣವನ್ನು ಪ್ರಚಾರಪಡಿಸಿವೆ.

ಈ ಸಮಾಜದಲ್ಲಿ ಅತಿ ಬಡವರಿಂದ ಹಿಡಿದು ಶ್ರೀಮಂತರಿಗೆ, ನಗರವಾಸಿಗಳಿಗೂ ಹಾಗೆಯೇ ಗ್ರಾಮಾಂತರ ಪ್ರದೇಶದ ವಾಸಿಗಳಿಗೂ ಹೆಚ್ಚು ಉಪಯುಕ್ತವಾಗುವಂತಹ ಉತ್ತಮವಾದ ಶಾಲಾಕಾಲೇಜುಗಳನ್ನು ತೆರೆದು ಯಾವುದೇ ತರಹದ ತಾರತಮ್ಯವಿಲ್ಲದೆ ಜಾತಿ ಭೇದ ಮಾಡದೆ ಪ್ರತಿಯೊಬ್ಬರಿಗೂ ವಿದ್ಯೆಯನ್ನು ದಾನ ಮಾಡುವ ಕಾರ್ಯವನ್ನು ಆದಿಚುಂಚನಗಿರಿ ಮಠ ಮಾಡುತ್ತಿದೆ.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಹಳ್ಳಿಯ ಜನರು ತುಂಬಾ ಹಿಂದೆ ಇದ್ದಾರೆ, ಅವರನ್ನೂ ಸಹ ಶಿಕ್ಷಣದ ಮುಖಾಂತರ ಮುಂದೆ ತರಬೇಕೆಂಬ ಅಭಿಲಾಷೆಯಿಂದ ಹಳ್ಳಿಯ ಜನರಿಗೂ ಉತ್ತಮವಾದ ಮಾದರಿಯಲ್ಲಿ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಶಿಕ್ಷಣ ವಂಚಿತರಿಗೂ ಅವಕಾಶವನ್ನು ದೊರಕಿಸಿಕೊಡಬೇಕೆಂಬ ಸದಾಶಯವನ್ನು ಹೊಂದಿದ್ದರು.

ಹಾಗಾಗಿ ತುಂಬಾ ಹಿಂದುಳಿರುವ ಗ್ರಾಮಗಳಲ್ಲಿ ಸ್ವಾಮೀಜಿಯವರು ಶಾಲಾಕಾಲೇಜುಗಳನ್ನು ತೆರೆದಿದ್ದಾರೆ. ಅವರ ಶಾಲೆಗಳು ಜನರ ಮೌಢ್ಯ ನಿವಾರಣೆಯಲ್ಲಿ ಸಾಕಷ್ಟು ಶ್ರಮಿಸುತ್ತಿವೆ. ಈ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ರೂಢಿಗತವಾಗಿ ಬೆಳೆದುಬಂದಿರುವ ಜಾತೀಯತೆ, ಅಂಧಶ್ರದ್ಧೆ, ಅಪಮೌಲ್ಯಗಳು, ನಿವಾರಣೆಯಾಗಬೇಕಾದರೆ ಒಳ್ಳೆಯ ಶಿಕ್ಷಣವನ್ನು ದೊರಕಿಸಿಕೊಡಬೇಕೆಂಬ ನಿಲುವನ್ನು ಸ್ವಾಮೀಜಿಯವರು ಹೊಂದಿದ್ದು, ಕೆಲವೊಂದು ಕಡೆ ಗಂಡು ಮಕ್ಕಳಿಗೂ, ಕೆಲವೊಂದು ಕಡೆ ಹೆಣ್ಣು ಮಕ್ಕಳಿಗೂ ಶಾಲಾ ಕಾಲೇಜುಗಳನ್ನು ತೆರೆದಿದ್ದಾರೆ. ಅಲ್ಲದೆ ವೃತ್ತಿಪರ ಶಿಕ್ಷಣ, ತಾಂತ್ರಿಕ ಹಾಗೂ ವೈದ್ಯಕೀಯ ಮಹಾವಿದ್ಯಾಲಯಗಳನ್ನು ತೆರೆದಿದ್ದಾರೆ. ಸುಮಾರು 480 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದು ಅವುಗಳ ಮೂಲಕ ಶಿಕ್ಷಣವನ್ನು ನೀಡುತ್ತಿದ್ದಾರೆ.

ಜ್ಞಾನವನ್ನು ಬೆಳೆಸಿಕೊಳ್ಳಲು ಇರುವುದು ಮೂರೇ ದಾರಿ; ಒಂದು ನೋಡಿ ತಿಳಿಯುವುದು, ಎರಡು ಕೇಳಿ ತಿಳಿಯುವುದು, ಮೂರು ಓದಿ ತಿಳಿಯುವುದು. ಇಡೀ ಜಗತ್ತನ್ನೆಲ್ಲ ಇಂದು ನೋಡಿ ತಿಳಿದುಕೊಳ್ಳಲಾಗುವುದಿಲ್ಲ. ಕೆಲವನ್ನು ನೋಡಿ, ಕೆಲವನ್ನು ಕೇಳಿ ತಿಳಿಯಬಹುದು. ಆದರೆ ಎಲ್ಲವನ್ನೂ ಓದಿ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ ಎಂಬ ಮಾತನ್ನು ಜಿ. ನಾರಾಯಣರವರು 16.ಮೇ.1999 ರಂದು ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಜನ ಜಾಗೃತಿ ಶಿಬಿರಗಳ ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆÉ.

ಕೆ. ರಾಜೇಶ್ವರಿಗೌಡರವರು 3.ಸೆಪ್ಟಂಬರ್.1997 ರಂದು ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ನೂರೆಂಟು ನಮನ’ ಗ್ರಂಥ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿ “ಇಂದಿನ ಸಮಾಜದಲ್ಲಿ ಸ್ತ್ರೀಯರು ಯಾರಿಗೂ ಕಡಿಮೆಯಲ್ಲ. ಪುರುಷರಿಗಿಂತ ಕೀಳಲ್ಲ ಎಂಬ ಮನೋಭಾವವನ್ನು ಸ್ವಾಮಿಗಳವರಲ್ಲಿ ಕಾಣಬಹುದು. ಪುರುಷರಿಗಾಗಿ ಜನಜಾಗೃತಿ ಶಿಬಿರಗಳನ್ನು ಆಯೋಜಿಸಿ ಯಶಸ್ವಿಯಾಗಿ ನಡೆಸುತ್ತಿರುವ ಸ್ವಾಮಿಗಳವರು ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಣವನ್ನೊದಗಿಸಿ ಅವರನ್ನು ಜಾಗೃತಗೊಳಿಸುವ ಸಲುವಾಗಿ ಮಹಿಳಾ ಜಾಗೃತಿ ಶಿಬಿರಗಳನ್ನು ನಡೆಸುತ್ತಿದ್ದಾರೆ. ಶಿಬಿರಕ್ಕೆ ಬರುವ ಶಿಕ್ಷಣಾರ್ಥಿಗಳಿಗೆ ಪಠ್ಯ ಪುಸ್ತಕಗಳು, ಊಟ, ವಸತಿ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಿ ಶಿಕ್ಷಣವನ್ನು ನೀಡುತ್ತಿದ್ದಾರೆ. ಇದರಿಂದ ಹೆಣ್ಣು ಮಕ್ಕಳು ಕೂಡ ಸ್ವಾವಲಂಬಿಗಳಾಗಿ ಆತ್ಮಸ್ಥೈರ್ಯವನ್ನು ಹೊಂದಿ ಮನೋವಿಕಾಸ, ವ್ಯಕ್ತಿತ್ವ ವಿಕಾಸಗಳನ್ನು ಹೊಂದಿ ಎಲ್ಲಾ ಕ್ಷೇತ್ರಗಳÀಲ್ಲಿಯೂ ಪ್ರಗತಿಯನ್ನು ಹೊಂದಿ ಗುರಿಯನ್ನು ಕಂಡುಕೊಳ್ಳುವುದಕ್ಕೆ ಸಹಕಾರಿಯಾಗಿದೆ” ಎಂದಿದ್ದಾರೆ.

ಎಚ್.ಜಿ. ಗೋವಿಂದಗೌಡರು  9.ಮೇ.1989 ರಂದು ಶೃಂಗೇರಿಯಲ್ಲಿ ಏರ್ಪಡಿಸಿದ್ದ ಕೋಟಿ ಅರ್ಚನೆಯ ಸಂದರ್ಭದಲ್ಲಿ ವಿವಿಧ ಶಾಲಾ ಕಟ್ಟಡಗಳ ಶಂಕುಸ್ಥಾಪನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಆದಿಚುಂಚನಗಿರಿ ಕ್ಷೇತ್ರದ ಶಿಕ್ಷಣದ ಬಗ್ಗೆ “ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಉನ್ನತ ಮಟ್ಟದವು. ಆದರೆ ಪೂಜ್ಯ ಡಾ. ಬಾಲಗಂಗಾಧರನಾಥಸ್ವಾಮೀಜಿಯವರು ಗ್ರಾಮೀಣ ಪ್ರದೇಶದಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಶಿಕ್ಷಣದ ಜೊತೆಗೆ ಉಚಿತ ಊಟ, ವಸತಿಗಳನ್ನು ಸಹ ವ್ಯವಸ್ಥೆ ಮಾಡಿರುವುದರಿಂದ ಇಂದು ಲಕ್ಷಾಂತರ ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಯನ್ನು ಕಲಿಯುವಂತಾಗಿದೆ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಆದರ್ಶದಂತೆ ಇಂದು ಬೇರೆ ಮಠಾಧಿಪತಿಗಳು ಕೆಲಸಗಳನ್ನು ಮಾಡುತ್ತಿದ್ದಾರೆ. ಆದಿಚುಂಚನಗಿರಿಯ ಸ್ವಾಮಿಗಳು ಅತ್ಯಲ್ಪ ಕಾಲದಲ್ಲಿ ಈ ರಾಜ್ಯದಲ್ಲಿ ವಿದ್ಯಾಸಂಸ್ಥೆಗಳನ್ನು ಬಹು ಎತ್ತರದ ಸ್ಥಾನಕ್ಕೆ ಬೆಳೆಸಿ ಸಮಾಜದಲ್ಲಿ ವಿದ್ಯೆಯಿಂದ ವಂಚಿತರಾಗಿದ್ದ ಜನರಿಗೆ ಅಪಾರವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ” ಎಂದು ಹೇಳುತ್ತಾರೆ.

ಬಿ.ಎನ್. ಬಚ್ಚೇಗೌಡರವರು 6.ಸೆಪ್ಟಂಬರ್.1998 ರಂದು ನಿತ್ಯಾನಂದ ನಗರದಲ್ಲಿ ನಡೆದ ಪೂಜ್ಯ ಶ್ರೀ ಶ್ರೀಗಳವರ ಪಟ್ಟಾಭಿಷೇಕ ರಜತ ಮಹೋತ್ಸವ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ “ಶ್ರೀ ಆದಿಚುಂಚನಗಿರಿ ಕ್ಷೇತ್ರ ಎಪ್ಪತ್ತು ಮಂದಿ ಗುರುಗಳನ್ನು ಹೊಂದಿರುವ ಕ್ಷೇತ್ರವಾದರೂ ಸಮಾಜಕ್ಕೊಂದು ಮಠವಿದೆ, ಪೀಠವಿದೆ ಎಂದು ನಮಗ್ಯಾರಿಗೂ ತಿಳಿದಿರಲಿಲ್ಲ. ಆದರೆ ಪೂಜ್ಯ ಮಹಾಸ್ವಾಮಿಗಳು ಬಂದ ಮೇಲೆ ಸಮಾಜದಲ್ಲಿರುವ ಇತರ ಉಪಜಾತಿಗಳನ್ನೆಲ್ಲಾ ಸೇರಿಸಿ ಸಮಾಜವನ್ನು ದೊಡ್ಡ ಸಮಾಜವನ್ನಾಗಿ ಬೆಳೆಸಬೇಕು. ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಈ ಸಮಾಜವನ್ನು ಬೆಳೆಸಬೇಕೆನ್ನುವ ದಿಸೆಯಲ್ಲಿ ಸ್ವಾಮಿಗಳವರು ಅಪಾರ ಕಾರ್ಯಗಳನ್ನು ಮಾಡಿದ್ದಾರೆ. ಅದನ್ನೆಲ್ಲಾ ನಾವು ಒಪ್ಪಿಕೊಳ್ಳಬೇಕಾಗಿದೆ. ಏಕೆಂದರೆ ಸ್ವಾಮಿಗಳವರು ಸಮಾಜ ಸೇವೆಗಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ಅಲ್ಲದೆ ಶೈಕ್ಷಣಿಕವಾಗಿ ಈ ಸಮಾಜ ಬಹಳ ಹಿಂದುಳಿದಿರುವುದನ್ನು ಮನಗಂಡ ಶ್ರೀಗಳವರು ಇನ್ನೂರೈವತ್ತಕ್ಕು ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ದಾಸೋಹಿಗಳಾಗಿದ್ದಾರೆ. ಪ್ರಾಥಮಿಕ ಶಾಲೆಯಿಂದ ಹಿಡಿದು ತಾಂತ್ರಿಕ, ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಜೊತೆಗೆ ಇಡೀ ದೇಶದಲ್ಲಿಯೇ ಪ್ರಪ್ರಥಮವಾಗಿ ಹಳ್ಳಿಗಾಡಿನಲ್ಲಿ ಸುಸಜ್ಜಿತವಾದ ಆಸ್ಪತ್ರೆಯನ್ನು ತೆರೆದಿರುವುದನ್ನು ನಾವು ಮನಗಾಣಬೇಕು. ಇನ್ನೂರೈವತ್ತು ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಐವತ್ತು ಸಾವಿರ ಮಕ್ಕಳಿಗೆ ನಿತ್ಯ ದಾಸೋಹ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣವನ್ನು ನೀಡುವ, ಧಾರ್ಮಿಕ ಜ್ಞಾನವನ್ನು ನೀಡುವ ಕಾರ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಕಾರ್ಯಗಳನ್ನೆಲ್ಲಾ ಮಾಡುತ್ತಿರುವುದು ಸ್ವಾಮಿಗಳವರ ಭವಿಷ್ಯದ ಕಲ್ಪನೆ. ಹಳ್ಳಿ ಮಕ್ಕಳಿಗೆ ಒಳ್ಳೆಯದಾಗಬೇಕು ಎಂಬ ಮಹದಾಸೆ. ಈ ದೃಷ್ಠಿಯಿಂದ ಸಮಾಜದ ಅಭಿವೃದ್ಧಿಗಾಗಿ ಈ ಕಾರ್ಯಗಳನ್ನೆಲ್ಲ ಶ್ರೀಗಳು ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳವರು ಶಿಕ್ಷಣ ಕ್ಷೇತ್ರದ ಬಗೆಗೆ ಹೊಂದಿರುವ ಅಪಾರ ಕಳಕಳಿಯಿಂದಾಗಿ ಇಂದು ಶ್ರೀ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮಹಾವೃಕ್ಷವಾಗಿ ಬೆಳೆದಿದೆ. ಪೂಜ್ಯರು ಕೇವಲ ಮೂರುವರೆ ದಶಕಗಳಲ್ಲಿ ನಾಡಿನಾದ್ಯಂತ ತೆರೆದಿರುವ ನಾಲ್ಕುನೂರ ಐವತ್ತಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನೊಳಗೊಂಡ ಈ ಮಹಾವೃಕ್ಷದ ಬಿಳಲುಗಳ ನೆರಳಿನಲ್ಲಿ ಆಶ್ರಯ ಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ತಮ್ಮ ಬಾಳಿನಲ್ಲಿ ಬೆಳಕನ್ನು ಕಂಡಿದ್ದಾರೆ. ನಾಗಮಂಗಲ ತಾಲ್ಲೂಕಿನ ಜವರನಹಳ್ಳಿಯಂತಹ ಕುಗ್ರಾಮದಲ್ಲಿ (ಅದೀಗ ಬಿ.ಜಿ. ನಗರವೆಂದೇ ಖ್ಯಾತಿಗೊಂಡಿದೆ) ಪ್ರಾಥಮಿಕ ಶಾಲೆಯಿಂದ ಪ್ರಾರಂಭಿಸಿ ತಾಂತ್ರಿಕ ಹಾಗೂ ವೈದ್ಯಕೀಯದಂತಹ ಉನ್ನತ ಶಿಕ್ಷಣದ ಕಾಲೇಜುಗಳನ್ನು ತೆರೆಯುವುದರಿಂದ ಹಿಡಿದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಾಲೆಯನ್ನು ತೆರೆಯುವವರೆಗೆ ಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮಿಗಳವರ ಶೈಕ್ಷಣಿಕ ಅಭಿಯಾನ ಆರಂಭವಾಗಿ ಡಾ. ನಿರ್ಮಲಾನಂದನಾಥ ಸ್ವಾಮಿಜೀಗಳು ಇದರ ಅಭಿಯಾನವನ್ನು ಮುಂದುವರೆಸಿದ್ದಾರೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶೈಕ್ಷಣಿಕ ಸಂಸ್ಥೆಗಳ ವಿವರ

ಒಂದುನೂರ ಐವತ್ತಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು, ತೊಂಬತೈದಕ್ಕೂ ಹೆಚ್ಚು ಪ್ರೌಢಶಾಲೆಗಳು, ಎಂಬತ್ತಕ್ಕೂ ಹೆಚ್ಚು ಪದವಿಪೂರ್ವ ಕಾಲೇಜುಗಳು, ಹದಿನೇಳು ಪದವಿ ಕಾಲೇಜುಗಳು, ಐದು ನರ್ಸಿಂಗ್ ಕಾಲೇಜುಗಳು, ಹನ್ನೆರಡು ಸಂಸ್ಕೃತ ಪಾಠಶಾಲೆಗಳು, ಕಾಲೇಜುಗಳು, ಹತ್ತು ಶಿಕ್ಷಕರ ತರಬೇತಿ ಕಾಲೇಜುಗಳು, ಮೂರು ವೈದ್ಯಕೀಯ ಕಾಲೇಜುಗಳು, ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳು, ಬಿ.ಎಡ್. ಕಾಲೇಜುಗಳು ಹೀಗೆ ನಾಡು ಹೊರನಾಡುಗಳಲ್ಲೆಲ್ಲಾ ಹರಡಿಕೊಂಡಿರುವ ಶ್ರೀ ಆದಿಚುಂಚನಗಿರಿ ವಿದ್ಯಾದೇಗುಲಗಳಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವುದು ಈ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯೇ ಸರಿ. ವಿದ್ಯೆಯ ಜೊತೆಗೆ ಊಟ ವಸತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಬಡ ಮಕ್ಕಳ ಕಣ್ಣುಗಳಲ್ಲಿ ಬೆಳಕನ್ನು ಮೂಡಿಸಿರುವ ಪೂಜ್ಯ ಸ್ವಾಮಿಗಳವರು ಕುಗ್ರಾಮಗಳಲ್ಲೂ ಶಾಲಾ ಕಾಲೇಜುಗಳನ್ನು ತೆರೆದುದರ ಫಲವಾಗಿ ಅಕ್ಷರ ಜಗತ್ತಿನಿಂದ ಹೊರಗೇ ಉಳಿದುಹೋಗಿದ್ದ ಅಸಂಖ್ಯಾತ ಬಡ ಗ್ರಾಮೀಣ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಿದೆ. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳ ವೈಶಿಷ್ಟ್ಯವೆಂದರೆ ಪಾಠ ಪ್ರವಚನಗಳಿಗೆ ಕೊಡುವಷ್ಟೇ ಪ್ರಾಧಾನ್ಯತೆಯನ್ನು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ನೀಡುತ್ತಿರುವುದು. ಅದರ ಜೊತೆಗೆ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣದ ಕಡೆಗೆ ಹೆಚ್ಚು ಗಮನ ನೀಡುವುದು. ಆದುದರಿಂದಲೇ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳು ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಈ ಸಂಸ್ಥೆಗೆ ತನ್ಮೂಲಕ ರಾಜ್ಯಕ್ಕೆ, ರಾಷ್ಟ್ರಕ್ಕೆ ಗೌರವವನ್ನು ತರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅದಮ್ಯ ಕ್ರೀಡಾ ಪ್ರತಿಭೆಗಳಿಗೆ ಭರವಿಲ್ಲ.

ಶೈಕ್ಷಣಿಕವಾಗಿ ಆದಿಚುಂಚನಗಿರಿಯ ಶ್ರೀಮಠವು ಸುಮಾರು 480 ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ತೆರೆದಿದೆ. ಅವುಗಳಿಗೆ ಸಂಬಂಧಿಸಿದಂತೆ ನಿಲಯಗಳು ಸಹ ಇವೆ. ಅವುಗಳನ್ನು ಪಟ್ಟಿ ಮಾಡಿ ತಿಳಿಸಲಾಗಿದೆ. ನಂತರ ಪ್ರಮುಖ ಕಾಲೇಜುಗಳ ಒಂದು ಹಿನ್ನೆಲೆಯನ್ನು ಪ್ರಸ್ತುತ ಪಟ್ಟಿ ಮಾಡಿ ತಿಳಿಸಲಾಗಿರುತ್ತದೆ.

ಉಪಸಂಹಾರ

ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಅದರ ಬೃಹತ್ ಮತ್ತು ಮಹತ್ತಿಗೆ ಅನುಗುಣವಾದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳು ಮತ್ತು ಸವಾಲುಗಳ ಮುಖ್ಯ ನೆಲೆ ಭಾರತದ ವೈವಿಧ್ಯತೆಯೇ ಆಗಿದೆ. ಈ ವಿಶಾಲ ದೇಶದ ವಿವಿಧ ರಾಜ್ಯಗಳು ಅನೇಕ ಬಗೆಯ ಅಸಮತೋಲನದಿಂದ ಕೂಡಿದೆ. ಈ ಅಸಮತೋಲನವನ್ನು ದೇಶದ ಅಗತ್ಯ, ರಾಜ್ಯದ ಅಗತ್ಯ ಮತ್ತು ಸ್ಥಳೀಯ ಅಗತ್ಯಗಳ ಹಿನ್ನೆಲೆಯಲ್ಲಿ ಕಾಣಬಹುದು. ಈ ಅಗತ್ಯಗಳಿಗೆ ಅನುಗುಣವಾಗಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯ ಉದ್ದೇಶಗಳು ರೂಪಿತಗೊಂಡಿವೆ. ಈ ಹಿನ್ನೆಲೆಯಿಂದ ಶ್ರೀ ಆದಿಚುಂಚನಗಿರಿ ಮಠವು ಶೈಕ್ಷಣಿಕವಾಗಿ ಸಾಕಷ್ಟು ಶಾಲಾಕಾಲೇಜುಗಳನ್ನು ತೆರೆದಿದ್ದಾರೆ. ಸುಮಾರು 450 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಶಿಕ್ಷಣದ ಮೂಲಕ ವ್ಯಕ್ತಿಯ ಅಂತಃಸತ್ವವನ್ನು ಪೆÇೀಷಿಸಿ ಬೆಳೆಸುವ ಮೂಲ ಉದ್ದೇಶವನ್ನು ಶ್ರೀಗಳು ಹೊಂದಿದ್ದರು. ಗ್ರಾಮೀಣ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಕಲಿಯಬೇಕೆಂಬ ಉದ್ದೇಶದಿಂದ ಹಳ್ಳಿಗಾಡಿನಲ್ಲಿಯೂ ಸಾಕಷ್ಟು ಶಿಕ್ಷಣ ಕೇಂದ್ರಗಳನ್ನು ತೆರೆದಿದ್ದಾರೆ. ಮಾನವ ಹಕ್ಕುಗಳ ಧ್ಯೇಯವಾಕ್ಯ ಶಿಕ್ಷಣ ಮೂಲಭೂತ ಹಕ್ಕು, ಶಿಕ್ಷಣವನ್ನು ಆಹಾರ, ವಸತಿ ಮತ್ತು ನೀರಿನಂತೆಯೇ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿದೆ. ಶಿಕ್ಷಣದಿಂದ ಜನರ ಜೀವನ ವಿಧಾನ, ಜೀವನ ಶೈಲಿ ಬದಲಾಗುವುದಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯ ಹಕ್ಕುಗಳನ್ನು ಸಬಲೀಕರಣಗೊಳಿಸುತ್ತವೆ. ಅದನ್ನು ಅರಿತು ಸ್ವಾಮೀಜಿಗಳು ಶಿಕ್ಷಣ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ.

ಆಧಾರ ಗ್ರಂಥಗಳು

  1. ಚಂದ್ರಯ್ಯ ಬಿ.ನಂ., 2000, ನಿರಂಜನ, ಶ್ರೀ ಗುರುಮಲ್ಲೇಶ್ವರರ ಸಂಸ್ಮರಣ ಶತಮಾನೋತ್ಸವ ಸಮಿತಿ, ದೇವನೂರು ಮಠ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ, ಪು.ಸಂ.164.
  2. ಪಾರ್ಥಸಾರಥಿ ಟಿ.ಎ., 2003, ಕರ್ನಾಟಕ ರಾಜ್ಯ ಗೆಜೆóÉಟಿಯರ್, ಮಂಡ್ಯ ಜಿಲ್ಲೆ (ಪರಿಷ್ಕೃತ ಆವೃತ್ತಿ), ಪ್ರಕಟಣೆ ಕಾವೇರಿ ಭವನ, ಬೆಂಗಳೂರು, ಪು.ಸಂ. 648, 649.
  3. ಗೋಪಾಲ ಆರ್., 2004, ಕೋಲಾರ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಪ್ರಕಟಣೆ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು.212.
  4. ಸಿದ್ಧಗಂಗಯ್ಯ ಹೆಚ್.ಕೆ., 1999, ಶುಭಾಶಂಸನಂ ಭಾಗ-2, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಆದಿಚುಂಚನಗಿರಿ ಕ್ಷೇತ್ರ, ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು ಪು.105.
  5. ರಾಜೇಶ್ವರಿಗೌಡ ಕೆ., 2001, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಪು.254.
  6. ದೊಡ್ಡರಂಗೇಗೌಡ, 1998, ಚುಂಚಶೃಂಗ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಪು.85.
  7. ರಾಜೇಶ್ವರಿಗೌಡ ಕೆ., 2001, ಆದಿಚುಂಚನಗಿರಿ: ಒಂದು ಸಾಂಸ್ಕೃತಿಕ ಅಧ್ಯಯನ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಪು.261.
  8. ಮೇಲುಕೋಟೆ ವಿ.ಎನ್. ಗೌಡ, ವಿಜಯನಗರ ಬೆಂಗಳೂರುರವರಿಂದ ದಿನಾಂಕ: 3.2.2020 ರಂದು ಮಾಹಿತಿಗಳನ್ನು ಪಡೆಯಲಾಗಿದೆ.
  9. ಸುಬ್ಬು ಕಾರದಖ, ಮ್ಯಾನೇಜರ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಕಾವೂರು (ಮಂಗಳೂರು) ರವರಿಂದ ದಿನಾಂಕ: 11.3.2020 ರಂದು ಮಾಹಿತಿ ಪಡೆಯಲಾಗಿದೆ.
  10. ಸುಬ್ಬು ಕಾರದಖ, ಮ್ಯಾನೇಜರ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಕಾವೂರು (ಮಂಗಳೂರು) ರವರಿಂದ ದಿನಾಂಕ: 11.3.2020 ರಂದು ಮಾಹಿತಿ ಪಡೆಯಲಾಗಿದೆ.
  11. ಚನ್ನಪ್ಪಗೌಡ ಕೆ., 2003, ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು, ಪು.29, 30.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal