Tumbe Group of International Journals

Full Text


Famous Poet Jambanna Amarchinta.

Dr. Prempallavi C B1

1Kannada Assistant Professor, Government Arts College (Autonomous), Chitradurga

Email: palvisahithya14@gmail.com

Abstract

Amarchinta, who had read protest poetry in Telugu, matured and changed the forms of poetry in the way of composing his poetry. He composed ghazals inspired by Urdu poetry. By writing protest poetry using the ghazal form centered on melodious romance, he created a rational attitude among poetry lovers. Even though he wrote two and four line verses, he began to speak the philosophy of life in a sattvic voice. He tried to tell the lesson of humanity through his poems to the present generation who are forgetting humanity. He used the novel genre to depict life that poetry could not capture.

Keywords: Amarchinta, Jambanna Amarchinta, Famous Telugu Poet.


ಪ್ರಖ್ಯಾತ ಕವಿ ಜಂಬಣ್ಣ ಅಮರಚಿಂತ

ಡಾ. ಪ್ರೇಮಪಲ್ಲವಿ ಸಿ. ಬಿ1

1ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ), ಚಿತ್ರದುರ್ಗ

email: palvisahithya14@gmail.com

ಅಮೂರ್ತ

ತೆಲುಗಿನ ಪ್ರತಿಭಟನಾ ಕಾವ್ಯವನ್ನು ಓದಿಕೊಂಡಿದ್ದ ಅಮರಚಿಂತರು ತಮ್ಮ ಕಾವ್ಯ ಕಟ್ಟುವಿಕೆಯ ದಾರಿಯಲ್ಲಿ ಮಾಗುತ್ತಾ ಕಾವ್ಯದ ರೂಪುಗಳನ್ನು ಬದಲಾಯಿಸಿಕೊಳ್ಳುತ್ತಾ ಭಿನ್ನವಾಗುತ್ತಲೇ ಸಾಗಿದರು. ಉರ್ದು ಕಾವ್ಯದ ಪ್ರೆರಣೆಯಿಂದ ಗಜಲ್ ಗಳನ್ನು ರಚಿಸಿದರು. ಮಧುರ ರಮ್ಯ ಕೇಂದ್ರಿತವಾಗಿದ್ದ ಗಜಲ್ ರೂಪವನ್ನು ಬಳಸಿ ಪ್ರತಿಭಟನಾ ಕಾವ್ಯವನ್ನು ಬರೆಯವ ಮೂಲಕ ಕಾವ್ಯಾಸಕ್ತರಲ್ಲಿ ವೈಚಾರಿಕ ಮನೋಭಾವ ಮೂಡಿಸಿದರು. ಎರಡು  ಮತ್ತು ನಾಲ್ಕು ಸಾಲಿನ ಪದ್ಯಗಳನ್ನು ಬರೆದರೂ ಅದರಲ್ಲಿ ಬದುಕಿನ ತತ್ವವನ್ನು ಸಾತ್ವಿಕ ಧ್ವನಿಯಲ್ಲಿ ಹೇಳತೊಡಗಿದರು. ಮನುಷ್ಯತ್ವವನ್ನು ಮರೆಯುತ್ತಿರುವ ಇಂದಿನ ಪೀಳಿಗೆಯವರಿಗೆ ಮಾನವೀಯತೆಯ ಪಾಠವನ್ನು ತಮ್ಮ ಕಾವ್ಯಗಳ ಮೂಲಕ ಹೇಳಲು ಪ್ರಯತ್ನಿಸಿದರು. ಕಾವ್ಯ ಹಿಡಿಯಲಾರದ ಬದುಕನ್ನು ಚಿತ್ರಿಸಲು ಕಾದಂಬರಿ ಪ್ರಕಾರವನ್ನು ಬಳಸಿದರು.

ಕೀವರ್ಡ್‌ಗಳು: ಅಮರಚಿಂತ, ಜಂಬಣ್ಣ ಅಮರಚಿಂತ, ಪ್ರಸಿದ್ಧ ತೆಲುಗು ಕವಿ.

ಪೀಠಿಕೆ:

``ಜೀವಂತವಿರುವವರೆಗೆ ಜಗವೆಲ್ಲ ನಮ್ಮದೆನ್ನೋಣ

ಸಾಯುವಾಗ ನಮ್ಮದೇನಿಲ್ಲವೆಂಬಂತೆ ಸಾಯೋಣ`` -

ಇದು ಪ್ರಖ್ಯಾತ ಕವಿ ಜಂಬಣ್ಣ ಅಮರಚಿಂತ ಅವರ ಚಿಂತನೆ. ಜಂಬಣ್ಣ ಅಮರಚಿಂತ ಅವರ ಅಜ್ಜ 150 ವರ್ಷಗಳ ಹಿಂದೆಯೇ ನೆರೆಯ ಆಂಧ್ರಪ್ರದೇಶದಿಂದ ಬದುಕನ್ನು ಅರಸಿ ರಾಯಚೂರಿಗೆ ಬಂದು ನೆಲೆಸಿದರು. ಅವರ ತಂದೆ-ತಾಯಿ ಕುಲಕಸುಬಾದ ಮಡಿವಾಳ ಕಾಯಕವನ್ನೇ ನಂಬಿ ಬದುಕಿದ್ದರು. ಅಮರಚಿಂತ ಅವರು 1945ರ ಏಪ್ರಿಲ್ 7 ರಂದು ಜನಿಸಿದರು. ತಂದೆ-ತಾಯಿಯ ಏಕೈಕ ಮಗನಾಗಿದ್ದು ರಾಯಚೂರಿನ ಹಮದರ್ದ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿದ ನಂತರ ಎಲ್‍ವಿಡಿ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರು. ಮಹಾರಾಷ್ಟ್ರದ ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಎಂಎ ಕನ್ನಡ ವ್ಯಾಸಂಗ ಮಾಡಿದರು. ಆರೋಗ್ಯ ಇಲಾಖೆಯಲ್ಲಿ ಗೆಜೆಟೆಡ್ ಅಸಿಸ್ಟಂಟ್ ಆಗಿ ಸೇವೆಗೆ ಸೇರಿದರು. 35 ವರ್ಷಗಳವರೆಗೆ ನಾನಾ ಹುದ್ದೆ ನಿರ್ವಹಿಸಿ ಆರೋಗ್ಯ ನಿರೀಕ್ಷಕರಾಗಿ ನಿವೃತ್ತರಾದರು.

ಉದ್ದೇಶ:

ಎಪ್ಪತ್ತರದ ದಶಕದ ಬಂಡಾಯ-ದಲಿತ ಸಾಹಿತ್ಯ ಚಳುವಳಿ ಆರಂಭವಾದಾಗ ಅಮರಚಿಂತರು ಆ ಅಲೆಯ ಪ್ರಮುಖ ಬರಹಗಾರರಾಗಿ ಮೂಡಿದರು. ಆ ರಯಚೂರಿನ ಜನರ ಬದುಕು ಪ್ರಭುತ್ವ ಮತ್ತು ಭೂಮಾಲೀಕರಿಂದ ಕೆಳವರ್ಗದ ನಿತ್ಯ ಬೆವರಿಳಿಸಿ ನಿಟ್ಟುಸಿರು ಬಿಡುತ್ತಿದ್ದ ನೆಲವಾಗಿತ್ತು. ಜನ ನೋವಿನ ಈ ನಿಟ್ಟುಸಿರನ್ನೇ ಕಾವ್ಯವಾಗಿಸಿದವರು ಅಮರಚಿಂತರನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಉದ್ದೇಶ ಈ ಬರಹದ್ದು.

ವಿಷಯ ನಿರೂಪಣೆ:

``ನಾನು ಸದಾ ಬೇಟೆಯ ಜೊತೆಗಿದ್ದೇನೆ. ಬೇಟೆಗಾರನ ಜೊತೆಯಲ್ಲ`` ಎಂಬುದು ಅವರ ಕಾವ್ಯದ ಧೋರಣೆಯಾಗಿತ್ತು. ಶೋಷಿಸುವ ಮತ್ತು ಆ ಶೋಷಣೆಗೆ ಒಳಗಾಗುವ ಎರಡು ವರ್ಗದದವರ ಬದುಕನ್ನು ಮುಖಾಮುಖಿಯಾಗಿಸಿ ಕಾವ್ಯ ಹೆಣೆಯುವ ಅಮರಚಿಂತರ ಕಾವ್ಯದಲ್ಲಿ ಬೇಟೆಗಾರನ ಕ್ರೌರ್ಯ ಮತ್ತು ಬೇಟೆಯ ಆರ್ಥನಾದದ ಧ್ವನಿ ಎರಡೂ ಅಡಕವಾಗಿದ್ದವು. ದಲಿತ-ಬಂಡಾಯ ಸಂದಭ್ದಲ್ಲಿ ಈ ರೀತಿಯ ಕಾವ್ಯವನ್ನು ನೆಯುವಲ್ಲಿ ಅಮರಚಿಂತರಿಗೆ ಅಮರಚಿಂತರೇ ಸಾಕ್ಷಿ.

ತೆಲುಗಿನ ಪ್ರತಿಭಟನಾ ಕಾವ್ಯವನ್ನು ಓದಿಕೊಂಡಿದ್ದ ಅಮರಚಿಂತರು ತಮ್ಮ ಕಾವ್ಯ ಕಟ್ಟುವಿಕೆಯ ದಾರಿಯಲ್ಲಿ ಮಾಗುತ್ತಾ ಕಾವ್ಯದ ರೂಪುಗಳನ್ನು ಬದಲಾಯಿಸಿಕೊಳ್ಳುತ್ತಾ ಭಿನ್ನವಾಗುತ್ತಲೇ ಸಾಗಿದರು. ಉರ್ದು ಕಾವ್ಯದ ಪ್ರೆರಣೆಯಿಂದ ಗಜಲ್ ಗಳನ್ನು ರಚಿಸಿದರು. ಮಧುರ ರಮ್ಯ ಕೇಂದ್ರಿತವಾಗಿದ್ದ ಗಜಲ್ ರೂಪವನ್ನು ಬಳಸಿ ಪ್ರತಿಭಟನಾ ಕಾವ್ಯವನ್ನು ಬರೆಯವ ಮೂಲಕ ಕಾವ್ಯಾಸಕ್ತರಲ್ಲಿ ವೈಚಾರಿಕ ಮನೋಭಾವ ಮೂಡಿಸಿದರು. ಎರಡು  ಮತ್ತು ನಾಲ್ಕು ಸಾಲಿನ ಪದ್ಯಗಳನ್ನು ಬರೆದರೂ ಅದರಲ್ಲಿ ಬದುಕಿನ ತತ್ವವನ್ನು ಸಾತ್ವಿಕ ಧ್ವನಿಯಲ್ಲಿ ಹೇಳತೊಡಗಿದರು. ಮನುಷ್ಯತ್ವವನ್ನು ಮರೆಯುತ್ತಿರುವ ಇಂದಿನ ಪೀಳಿಗೆಯವರಿಗೆ ಮಾನವೀಯತೆಯ ಪಾಠವನ್ನು ತಮ್ಮ ಕಾವ್ಯಗಳ ಮೂಲಕ ಹೇಳಲು ಪ್ರಯತ್ನಿಸಿದರು. ಕಾವ್ಯ ಹಿಡಿಯಲಾರದ ಬದುಕನ್ನು ಚಿತ್ರಿಸಲು ಕಾದಂಬರಿ ಪ್ರಕಾರವನ್ನು ಬಳಸಿದರು.

`ಕುರುಮಯ್ಯ ಮತ್ತು ಅಂಕುಶದೊಡ್ಡಿ` ಹಾಗೂ `ಬೂಟುಗಾಲಿನ ಸದ್ದು` ಜಂಬಣ್ಣ ಅಮರಚಿಂತರ ಕಾದಂಬರಿಗಳು. ಹೈದರಾಬಾದ್ ಕರ್ನಾಟಕದ ದಮನಿತರ ದಯನೀಯ ಬದುಕು ಮತ್ತು ಹೋರಾಟದ ಕೆಚ್ಚನ್ನು ಬಿಚ್ಚಿಟ್ಟರು.  `ಮುಂಜಾವಿನ ಕೊರಳು`, `ಅಧೋಜಗತ್ತಿನ ಆ ಕಾವ್ಯ`, `ಮಣ್ಣಲ್ಲಿ ಬಿರಿದ ಅಕ್ಷರ`, `ಅಮರಚಿಂತರ ಕಾವ್ಯ`, `ಪದಗಳು ನಡೆದಾಡುತ್ತಿವೆ ಪಾದಗಳಾಗಿ`, `ಹರಿಯುವ ನದಿಗೆ ಮೈಯೆಲ್ಲಾ ಕಾಲು` ಎಂಬ ಕವನ ಸಂಕಲನಗಳು ಮೂಲಕ ಕನ್ನಡ ಕಾವ್ಯದಲ್ಲಿ ಸಮಚಲನ ಮೂಡಿಸಿದವರು. `ಮುಳ್ಳಿನ ಬಾಯಲ್ಲಿ ಹೂ ನಾಲಿಗೆ` ಹಾಗೂ `ಬಾಧೆಯ ವೃಕ್ಷದಲ್ಲಿ ಬೋಧಿಯ ಪರಿಮಳ` ಎಂಬ ಗಜಲ್ ಸಂಕಲನಗಳೊಂದಿಗೆ ಕನ್ನಡ ಗಜಲ್ ಪರಂಪರೆಗೆ ಹೊಸ ಮಜಲು ನೀಡಿದವರು. ಕೊನೆಯುಸಿರಿನವರೆಗೂ ಸದಾ ಸಾಹಿತ್ಯದ ಧ್ಯಾನದಲ್ಲೇ ಲೀನವಾದವರು. `ಕನ್ನಡ ಕಾವ್ಯದ ಸಂತ` ಎಂದೇ ಪ್ರಖ್ಯಾತರಾದ ಅಮರಚಿಂತರು ಸದ್ದಿಲ್ಲದೆ ಬದುಕಿದವರು. ಬಹುಷ್ಯಃ ಸದ್ದು ಎಂಬುದು ಅವರ ಮೈ-ಮನಕ್ಕೆ ಒಗ್ಗಲಿಲ್ಲ ಎಂದು ತೋರುತ್ತದೆ. ಅವರು ನಡೆದರೂ ಕಾವ್ಯ ಬರೆದರೂ ಸದ್ದಾಗಲಿಲ್ಲ. ದನಿಯಿಲ್ಲದವರ ಪಾಲಿಗೆ ಕಾವ್ಯದ ಮೂಲಕ ಜೀವನವಿಡೀ ದನಿಯಾಗಿ ತಮ್ಮ ಅಂತ್ಯಕಾಲದಲ್ಲಿ ತಾವೇ ದನಿ ಕಳೆದುಕೊಂಡರು. ಸಾಹಿತ್ಯಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆದು ಹೈದರಾಬಾದ್ ಕರ್ನಾಟಕ ಭಾಗದ ಬಂಡಾಯ ಸಾಹಿತ್ಯದ ಸಂಪರ್ಕ ಸೇತುವೆಯಾದರೂ ರಾಯಚೂರಿನ ಯಾವುದೋ ಒಂದು ಮೂಲೆಯಲ್ಲಿ ಸದ್ದಿಲ್ಲದೇ ಬದುಕಿ ನಿಶ್ಯಬ್ದದಲ್ಲಿಯೇ 2017 ಫೆಬ್ರವರಿ 14 ರಂದು ಇಹಲೋಕ ತ್ಯಜಿಸಿ ಕನ್ನಡ ಕಾವ್ಯ ಪರಂಪರೆಯಲ್ಲಿ ಅಮರಚಿಂತರಾಗಿಯೇ ಉಳಿದ ಸಂತ. ವೃತ್ತಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನೌಕರರಾಗಿದ್ದ ಅವರು ಹಲವು ದಶಕಗಳವರೆಗೆ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಗಳಿಗೆ ಸಂಜೀವಿನಿಯಾದರು.

``ರಕ್ತಸಿಕ್ತ ಖಡ್ಗ ನಿಮ್ಮ ಒರೆಯಲ್ಲಿ,

ಯಾರೆಂದು ಮತ್ತೆ ಕೇಳುವಿರಿ.

ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ,

ಬೆಳೆಯಾಕೆ ಬರಲಿಲ್ಲವೆಂದು ಮತ್ತೆ ಕೇಳುವಿರಿ``--ಹೀಗೆ ವಿರೋಧಿಯನ್ನು ಪ್ರಶ್ನಿಸುವ ಈ ನೆಲೆ ಜಂಬಣ್ಣ ಅವರ ಚಿಂತನೆಗೆ ಮಾತ್ರ ಸಾಧ್ಯವಿತ್ತು. ಹಸಿವಿನ ಬವಣೆಯನ್ನು ಅಮರಚಿಂತರು ಕೇವಲ ಎಂಟು ಪದಗಳಲ್ಲಿ ಹಿಡಿದಿಟ್ಟಿದ್ದಾರೆ. ``ರೊಟ್ಟಿ ವಿಸ್ತಾರದಲ್ಲಿ ಭೂಮಿಗಿಂತ ಮಿಗಿಲು, ಇದರ ಎತ್ತರ ಎವರೆಸ್ಟಿಗೂ ದಿಗಿಲು`` ಅವರ ಲೋಕದ ಗ್ರಹಿಕೆಯೇ ವಿಶಿಷ್ಟವಾಗಿತ್ತು.

ಸ್ಥೂಲ ಶರೀರದ ಅಮರಚಿಂತರ ಆರೋಗ್ಯ ಕೊನೆಯ ದಿನಗಳಲ್ಲಿ ಅಷ್ಟೆನೂ ಸರಿಯಿರಲಿಲ್ಲ. ಅದಕ್ಕೆ ಅವರೆಂದೂ ಚಿಂತಿಸುತ್ತಿರಲಿಲ್ಲ. ಅವರಿಗಿದ್ದದ್ದು ಒಂದೇ ಚಿಂತೆ ಅದು ಕಾವ್ಯ ರಚನೆಯದ್ದು. ನಿಜಾಮರ ಪ್ರಾಂತ್ಯದಲ್ಲಿ ಹುಟ್ಟಿ ಬೆಳೆದಿದ್ದರಿಂದ ಹೈದರಾಬಾದ್ ಸಂಸ್ಥಾನದಲ್ಲಿ ಗಟ್ಟಿಯಾಗಿ ಬೇರೂರಿದ್ದ ಉರ್ದು ಮತ್ತು ತೆಲುಗು ಭಾಷೆಗಳಲ್ಲಿನ ಕಾವ್ಯ ಪ್ರಕಾರಗಳನ್ನು ಓದಿಕೊಂಡು ಅದನ್ನು ಕನ್ನಡದಲ್ಲಿ ಪ್ರಯೋಗ ಮಾಡತೊಡಗಿದರು. ಗಜಲ್, ರುಬಾಯಿ, ಖಿತಾ ಮುಂತಾದ ಕಾವ್ಯ ಪ್ರಕಾರಗಳನ್ನು ಕನ್ನಡಕ್ಕೆ ತಂದು ತಮ್ಮ ಚಿಂತನೆಗಳನ್ನು ಬೆರೆಸಿ ಆ ಹೊಸ ಕಾವ್ಯ ಪ್ರಕಾರಗಳಲ್ಲಿ ಕಲ್ಯಾಣದ ಕಾರುಣ್ಯವನ್ನೇ ಅಭಿವ್ಯಕ್ತಿಸಿದರು. ಈ ಕಾವ್ಯ ಪ್ರಕಾರಗಳ ಹುಟ್ಟುವಿಕೆಗೆ ಮೂಲ ಕಾರಣ ಬೇರೆಯೇ ಇದ್ದರೂ ಅದನ್ನು ಬದಿಗಿಟ್ಟು ತಮ್ಮ  ಸಂವೇದನೆಗೆ ಅದನ್ನು ಬಳಸಿಕೊಂಡರು.

ಒಳ್ಳೆಯ ಕವಿತಾ ಗುಣವಿರುವ ಯಾರೇ ಇರಲಿ ಅವರನ್ನು ಮತನಾಡಿಸಿ, ಅವರ ಸ್ನೇಹ ಬಯಸಿ ಕಾವ್ಯ ಸಂವಾದ ನಡೆಸಲು ಹಂಬಲಿಸುವ ಅವರ ಗುಣ ಮಾದರಿಯದ್ದು. ಅವರ ಆರೋಗ್ಯವನ್ನು ವಿಚಾರಿಸಲು ಹೋದವರ ಜೊತೆ ತಮ್ಮ ದೇಹಸ್ಥಿತಿಯನ್ನು ಕುರಿತು ಒಂದೂ ಮಾತನಾಡುತ್ತಿರಲಿಲ್ಲ. ಬದಲಿಗೆ ಈಗ ಕನ್ನಡದಲ್ಲಿ ಯಾರು ಚೆನ್ನಾಗಿ ಬರೆಯುತ್ತಿದ್ದಾರೆ, ಅವರ ಕಾವ್ಯವನ್ನು ನಾನು ಓದಬೇಕು ಎಂದು ಹಂಬಲಿಸುತ್ತಾ ಕಾವ್ಯದ ಗುಂಗಿನಲ್ಲಯೇ ಕೊನೆಯುಸಿರೆಳೆದರು. 

ಅಮರಚಿಂತರು ರಚಿಸಿದ `ಪೆಟ್ರೋಮ್ಯಾಕ್ಸ್ ಹೊತ್ತವರು` ಕವನ ದ್ವಿತೀಯ ಪಿಯುಸಿ ಪಠ್ಯಕ್ಕೆ ಆಯ್ಕೆಯಾಗಿತ್ತು. `ಪುಟ್ಟ ಹಕ್ಕಿ`, `ಅಮ್ಮ`, ಕವನಗಳು `ಕುರುಮಯ್ಯ ಮತ್ತು ಅಂಕುಶದೊಡ್ಡಿ` ಕಾದಂಬರಿ ಸೇರಿ ಇತರ ಸಾಹಿತ್ಯ ಕೃತಿಗಳು ರಾಜ್ಯದ ನಾನಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. 

ಅಮರಚಿಂತ ಅವರ ಸಾಹಿತ್ಯ ಸೇವೆ ಹಾಗೂ ಸಾಮಾಜಿಕ ಕಳಕಳಿಗೆ ಧ್ಯೋತಕವಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರ ಮುಡಿಗೇರಿವೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸುಧೀಂದ್ರ ಸಾಹಿತ್ಯ ಪ್ರಶಸ್ತಿ, ಕನಕಸಿದ್ಧಿಶ್ರೀ ಪ್ರಶಸ್ತಿ, ತರಾಸು ಸಾಹಿತ್ಯ ಪ್ರಶಸ್ತಿ, ಆರ್ಯಭಟ್ಟ ಪ್ರಶಸ್ತಿ, ಕಾಯಕ ಸಮ್ಮಾನ್ ಪ್ರಶಸ್ತಿ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರಶಸ್ತಿಗೆ ಅವರು ಭಾಜನರಾದರು. 1997 ರಲ್ಲಿ ನಡೆದ ರಾಯಚೂರು ಜಿಲ್ಲಾ ನಾಲ್ಕನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. 1999 ರಲ್ಲಿ ಉತ್ತರ ಪ್ರದೇಶದ ಲಖ್ನೋದಲ್ಲಿ ನಡೆದ ಅಖಿಲ ಭಾರತ ಆಕಾಶವಾಣಿ ಕವಿ ಸಮ್ಮೇಳನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. 2009ರಲ್ಲಿ  ಚನೈನಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಿಸಿದ್ದ ಹಿರಿಮೆ ಅವರದು.

ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಮೊದಲು ಕೇಳಿಬಂದ ಹೆಸರೇ ಜಂಬಣ್ನ ಅಮರಚಿಂತ ಅವರದು. ಆದರೆ ಹಲವರ ಒತ್ತಾಸೆಯನ್ನು ಸೌಜನ್ಯದಿಂದ ತಿರಸ್ಕರಿಸಿದರು. ತಾವು ಸಮ್ಮೇಳನಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ತಮ್ಮ ಹೆಸರನ್ನು ಪರಿಗಣಿಸಬೇಡಿ ಎಂದು ಕೇಳಿಕೊಂಡ ಅವರ ಸೌಜನು ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೇ ಅಪರೂಪ.

ಅಮರಚಿಂತರ ಪ್ರಸಿದ್ಧ ಕಾದಂಬರಿ `ಬೂಟುಗಾಲಿನ ಸದ್ದು`

ಈ ಕಾದಂಬರಿಯು ಸ್ವಾತಂತ್ರ್ಯ ನಂತರದ ಭಾರತದ ಚಿತ್ರಣವನ್ನು ನೀಡುವುದರ ಜೊತೆಗೆ ಭಾರತದೊಂದಿಗೆ ವಿಲೀನವಾಗದೆ ದಬ್ಬಾಳಿಕೆ ಮತ್ತು ರಾಜನೀತಿಯನ್ನು ಮುಂದುವರೆಸಿಕೊಂಡು ಹೋಗುವ ನಿಜಾಮನ ನಿಜ ರೂಪವನ್ನು ಪರೋಕ್ಷವಾಗಿ ಅನಾವರನಗೊಳಿಸುತ್ತದೆ. ಕಾದಂಬರಿಯ ವಸ್ತು ಸ್ಥಿತಿ ಸ್ವಾತಂತ್ರ್ಯ ನಂತರದ್ದಾದರೂ ಇದು ನಡೆಯುವ ಕಾಲಘಟ್ಟ 1947 ರಿಮದ 1952 ರವರೆಗಿನದ್ದು. ಅಂದರೆ ಆ ಕಾಲಘಟ್ಟದ ಅಂತ್ಯದಲ್ಲಿ ನಿಜಾಮನ ಆಡಳಿತ ಕೊನೆಗೊಂಡು ಕೊನೆಗೂ ಭಾರತದೊಂದೊಗೆ ವಿಲೀನವಾದ ಸಮಯ. ನಿಜಾಮನ ಆಡಳಿತ ಮುಂದುವರೆದರೆ ತಮ್ಮಿಚ್ಚೆಯಂತೆ ಬದುಕಬಹುದೆನ್ನುವ ಕುರುಡು ನಂಬಿಕೆಯನ್ನು ಕಟ್ಟಿಕೊಂಡ ರಜಾಕಾರರು, ನಿಜಾಮನ ಆಳ್ವಿಕೆಯನ್ನು ಬಯಸದ ಹಿಂದೂವಾಗಲಿ, ಮುಸಲ್ಮಾನನಾಗಲಿ ಅಥವಾ ಕೆಂಪು ಬಾವುಟ ಕಟ್ಟುವ ಯಾವನನ್ನೇ ಆಗಲಿ ಜೀವಂತ ಬಿಡುವವರಲ್ಲ. `ಹಿಡಿ, ಕೊಲ್ಲು` ಸೂತ್ರಗಳನ್ನು ಬದ್ಧವಾಗಿ ಪಾಲಿಸಿಕೊಂಡು ಬರುವ ರಜಾಕಾರರು ಆಡಿದ್ದೇ ಅಟ್ಟಾಹಾಸ. ಅವರ ಕುಕೃತ್ಯಗಲ ಹಿನ್ನಲೆಯಲ್ಲಿ ಹಿಂದು ಮುಸಲ್ಮಾನರೆಂಬ ಭೇದಭಾವವಿಲ್ಲದೆ ಸೌಹಾರ್ದತೆಯಿಂದ ಬದುಕು ನಡೆಸುವ ಮುಗ್ಧ ಮನಸ್ಸಿನ ಜನಸಾಮಾನ್ಯರಲ್ಲಿ ಪ್ರೀತಿ, ವಿಶ್ವಾಸ, ಸಹಾಯ, ರಕ್ಷಣಗಳೇ ಮೂಲ ಧ್ಯೇಯಗಳಾಗಿದ್ದವು. ಈ ಕಾದಂಬರಿಯಲ್ಲಿ ರಜಾಕಾರರ ವಿರುದ್ಧ ಹೋರಾಡಿದ ಸ್ಥಳಿಯರ ಸ್ಥಿತಿ-ಗತಿಗಳು ಮತ್ತು ಸ್ವಾತಂತ್ರ್ಯಪೂರ್ವ ಆನಂತರದ ಕಾಲವನ್ನು ನೆನೆಪಿಸಿಕೊಡುತ್ತದೆ. ಜಮೀನ್ದಾರರ ಶೋಷಣಡ, ಬದುಕಿಗಾಗಿ ತಾತ್ವರ, ಏನನ್ನು ಪೂರೈಸಿಕೊಳ್ಳಲಾಗದ ವಾಸ್ತವತೆಜನರನ್ನು ಇನ್ನಷ್ಟು ಬಡತನಕ್ಕೆ ತಳ್ಳಿ ಅವರನ್ನು ಬಲಹೀನರನ್ನಾಗಿಸುವ ದ್ರಶ್ಯಗಳು ಕಾದಂಬರಿಯುದ್ದಕ್ಕೂ ಕಾಣಸಿಗುತ್ತವೆ.

ರಜಾಕಾರರ ಬೂಟುಗಾಲಿನ ಸದ್ದು ಮತ್ತು ಅದರಡಿ ಅಮಾಯಕರ ನರಳಾಟದ ಆತ್ನಾದವನ್ನು ಈ ಕಾದಂಬರಿ ಸಶಕ್ತವಾಗಿ ಚಿತ್ರಿಸುತ್ತದೆ. ರಾಯಪುರದ ಮಕ್ತಲ್ ಪೇಟೆಯ ಒಂದು ಅಗಸರ ಕುಟುಂಬದ ದಂಪತಿಗಳಾದ ರಂಗಪ್ಪ , ಮಂಗಮ್ಮ ಹಾಗೂ ಇವರ ಮಗ ನಲ್ಲಜೋಮರನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿಯ ಕತೆ ಸಾಗುತ್ತದೆ.

ಭೂಮಾಲೀಕ ದರೂರು ರಾಮಿರೆಡ್ಡಿಯ ಬಳಿ ಸಾಲಗಾರನಾದ ರಂಗಪ್ಪನ ಕುಟುಂಬ ಒಂದೆಡೆ ಭೂಮಾಲೀಕನ ಬೆದರಿಕೆಯಿಂದ ಬಳಲಿ ಹೋಗಿದ್ದರೆ ಮತ್ತೊದೆಡೆ ರಜಾಕಾರರ ಕಿರುಕುಳಗಳಿಗೆ ಈಡಾಗುತ್ತದೆ. ಈ ನಡುವೆ ರಜಾಕಾರರ ದ್ವರ್ಜನ್ಯದ ವಿರುದ್ಧ ಜನರ ಆಕ್ರೋಶ ಭುಗಿಲೇಳುವ ಸೂಚನೆಗಳು ಕಾಣುತ್ತಿರುತ್ತವೆ. ಕೆಲ ಕಾಂಗ್ರೆಸ್ ಪುಡಾರಿಗಳೂ, ಆರ್ಯಸಮಾಜದವರೂ ಸ್ಥಳೀಯ ಹಿಂದೂಗಳ:ನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿರುತ್ತಾರೆ. ಇದರ ಮಧ್ಯದಲ್ಲಿ ಹಿಂದೂ-ಮುಸ್ಲಿಂ ಇಬ್ಬರಿಂದಲೂ ಒಳ್ಳೇ ವ್ಯಕ್ತಿ ಎನಿಸಿಕೊಂಡ ಮದರ್ ಸಾಬ್ ಮಾನವೀಯತೆಯ ಸಾಕಾಮೂರ್ತಿಯಂತೆ ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿರುತ್ತಾನೆ. ರಜಾಕರರ ವಿರುದ್ಧ ಯಾರೊಬ್ಬರೂ ಬಾಯಿ ಬಿಡದ ಪರಿಸ್ಥಿತಿಯಲ್ಲಿ ಮುಬಾರಕ್ ಎನ್ನುವ ಹುಚ್ಚು ಬಾಲಕ ಮರವೊಂದನ್ನು ಹತ್ತಿ ಜೈಕಾರ ಕೂಗುತ್ತಲೇ ಮರದ ಟೊಂಗೆ ಮುರಿದು ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ. ಹೀಗೆ ಕತೆ ನಾನಾ ರೀತಿಯಲ್ಲಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.

ಅಂತ್ಯದಲ್ಲಿ ಮಾಯಾದಂತ ಮಳೆಯಾಗುವುದು ರಜಾಕಾರರ ದಾಳಿಯನ್ನು ಸೂಚಿಸುತ್ತಾದರೂ ಆ ದಾಳಿಯ ಹಿಂದೆಯೆ ಅಲ್ಲಿಯವರೆಗೂ ಸುಪ್ತವಾಗಿದ್ದ ಜನರ ಕ್ರಾತಿಯು ಕಿಡಿ ಹೊತ್ತಿ ಉರಿಯುತ್ತದೆ. ಅದೇ ಸಂದರ್ಭದಲ್ಲಿ ಭಾರತ ಸರ್ಕಾರದ ಮಿಲಿಟರಿಯ ಪ್ರವೇಶವಾಗಿ ನಿಜಾಮನ ದಬ್ಬಾಳಿಕೆಯ ದರ್ಬಾರು ಕೊನೆಗೊಳ್ಳುತ್ತದೆ. ರಜಾಕಾರರ ಕಾರುಬರು ಕೊನೆಗೊಂಡು ಜೀವ ಭಯದಿಂದ ಅವಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾನವಾಗುತ್ತದೆ. ಅದರ ಜೊತೆಜೊತೆಗೇ ಜಮಿನ್ದಾರಿಕೆಯ ಶೋಷಣೆಯೂ ಸಮಾಪ್ತಿಯಾಗುತ್ತದೆ.

ಇಷ್ಟಲ್ಲವೂ ಇದ್ದು ಕಾದಂಬರಿಯೂ ಧ್ವನಿಸುವಂತದ್ದು ಚಾರಿತ್ರಿಕತೆಯನ್ನು. ಇದು ಹೈದರಾಬಾದ್ ಕರ್ನಾಟಕವನ್ನು ಒಳಗೊಂಡಂತೆ ದಖನ್ ಪ್ರದೇಶದ ಬಹುಭಾಗವನ್ನು ತತ್ತರಗೊಳಿಸಿದ ರಜಾಕಾರರ ಪ್ರಕರಣ ಕುರಿತು ಬರೆದ ಕಾದಂಬರಿಯಾಗಿತುವುದರಿಂದ ಚರಿತ್ರೆಯ ಅಂಶವಾಗಿಯೇ ಓದಿಸಿಕೊಳ್ಳುತ್ತದೆ. ಇತಿಹಾಸದ ಪುಟಗಳನ್ನು ತಿರುಚಿದಾಗ ಮಾನವೀಯತೆಯ ಮೌಲ್ಯಗಳು ಸತ್ವ ಕಳೆದುಕೊಂಡದ್ದನ್ನು ಕೇಳಿಸುವ ಈ ಕೃತಿಯು `ಸೆಕ್ಯುಲರಿಸಂ` ನ್ನು ತೋರಿಸುತ್ತದೆ. ಇಲ್ಲಿಯ ಪ್ರಭುತ್ವದ ವಿನಾಶ ಕೇವಲ ಒಮದು ಧರ್ಮ ಅಥವಾ ಒಂದು ಕಾಲದ ಆಡಳಿತಕ್ಕೆ ಸೀಮಿತವಾದುದ್ದಲ್ಲ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಕಾಣುವ ಪ್ರಭುತ್ವದ ಮಾದರಿಯೇ ಈ ಕಾದಂಬರಿಯಲ್ಲಿ ಚರಿತ್ರೆಯಾಗಿ ಹೊರಹೊಮ್ಮಿದೆ.

ಉಪಸಂಹಾರ:

ಹೀಗೆ ಕಾದಂಬರಿ ಕೊನೆಗೊಂಡರೂ ಓದುಗ ಆ ಕಾಲಘಟ್ಟದ ಬದುಕು, ಪರಿಸ್ಥಿತಿ, ಘಟನೆಗಳು, ಕಷ್ಟಗಳು, ತೊಂದರೆಗಳು ಇವೆಲ್ಲವುಗಳಿಂದ ಹೊರಬರಲು ಸಮಯ ತೆಗೆದುಕೊಳ್ಳುತ್ತಾನೆ. ಕಣ್ಣಿಗೆ ಕಟ್ಟಿದಂತಹ ವರ್ಣನೆಗಳು ಅವನ ಮನಸ್ಸಿಗೆ ತಟ್ಟಿ ಆಲೋಚಿಸುವಂತೆ ಮಾಡುತ್ತವೆ. ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಕಾದಂಬರಿ ಧ್ವನಿಸುವುದರಿಂದ ಒಂದು ಗಟ್ಟಿ ಕಥಾಹಂದರದ ಕಾದಂಬರಿ ಚಾರಿತ್ರಿಕತೆಯನ್ನು ತೆರೆದಿಟ್ಟಂತೆ ಆಗಿನ ವಾಸ್ತವವನ್ನೂ ತಿಳಿಸಿಕೊಡುವಂತೆ ಮಾಡುತ್ತದೆ. ಅಮರೇಶ್ ನುಗುಡೋಣಿಯವರ ಮುನ್ನುಡಿ ನೆಪದ ಕೆಲವು ಮಾತಗಳಲ್ಲಿ ಆ ಕೃತಿ ಮತ್ತು ಅದು ನಿರ್ಮಾಣಗೊಂಡ ಸಂದರ್ಭದ ಸಾಂಸ್ಕøತಿಕ ಬಿಕ್ಕಟ್ಟುಗಳನ್ನು ಗ್ರಹಿಸುವ ಪ್ರಯತ್ನವೆಂದು ಹೇಳುವ ಅವರ ಮಾತು ಸತ್ಯವೆನಿಸುತ್ತದೆ.

ಪರಾಮರ್ಶನ ಗ್ರಂಥಗಳು:

  1. ಡಾ.ಅರವಿಂದ ಮಾಲಗತ್ತಿ, ದಲಿತ ಸಾಹಿತ್ಯ ಚಳುವಳಿಯ ತಾತ್ವಿಕ ಚಿಂತನೆ.
  2. ಡಾ.ಅರವಿಂದ ಮಾಲಗತ್ತಿ, ಸಾಹಿತ್ಯ ಸಾಂಸ್ಕøತಿಕ ಮತ್ತು ದಲಿತ ಪ್ರಜ್ಞೆ.
  3. ಡಾ.ಅರ್ಜುನ ಗೊಳಸಂಗಿ, ದಲಿತ ಚಿಂತನೆ.
  4. ಓ.ಎಲ್.ನಾಗಭೂಷಣಸ್ವಾಮಿ, ವಿಮರ್ಶೆಯ ಪರಿಭಾಷೆ.
  5. ರಾಜಪ್ಪ ದಳವಾಯಿ, ಕನ್ನಡ ಸಾಹಿತ್ಯ ಕೋಶ.
  6. ಸಂ.ಡಾ.ಅರ್ಜುನ ಗೊಳಸಂಗಿ, ಲೇ:ರಂಗರಾಜು ವನದುರ್ಗ, ಕನ್ನಡ ದಲಿತ ಸಾಹಿತ್ಯ ಸಮಾಲೋಕನ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal