Tumbe Group of International Journals

Full Text


Influence and Impact of Culture Hegemony in Celebration of Village Deities.

Thippeswamy M1

1PhD Researcher, Department of History, Kannada University, Hampi.

Email Id:m.thippeswamy.phd@gmail.com

Abstract

The celebration of village deities in the social system signifies cultural uniqueness, harmony, unity in diversity, fusion of local communities. It is a shocking fact that these rituals are associated with the beliefs of protection, prosperity, progeny etc. involving all races of the village. Is the demarcation of upper class or lower class formed by the cultural name in the ritual of village deities? Is this line a random thing? Are these facts being politicized with the title of 'cultural'? An attempt has been made in this article to briefly discuss the differences, nature and dimensions of cultural politics on such practices.

Keywords: Village Deity, Ritual, Cultural, Politics, Mistress.


ಗ್ರಾಮದೇವತೆಗಳ ಆಚರಣೆಯಲ್ಲಿ ಸಾಂಸ್ಕೃತಿಕ ಯಜಮಾನಿಕೆಯ ಪ್ರಭಾವ ಮತ್ತು ಪರಿಣಾಮ

ತಿಪ್ಪೇಸ್ವಾಮಿ  ಎಂ1

1ಪಿಎಚ್.ಡಿ ಸಂಶೋಧನಾರ್ಥಿ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಇಮೇಲ್ ಐಡಿ:m.thippeswamy.phd@gmail.com

ಸಾರಾಂಶ :

ಸಾಮಾಜಿಕ ವ್ಯವಸ್ಥೆಯಲ್ಲಿ ಗ್ರಾಮದೇವತೆಗಳ ಆಚರಣೆ ಎನ್ನುವುದು ಸ್ಥಳೀಯ ಸಮುದಾಯಗಳ ಒಕ್ಕೂಟದ ಸಾಂಸ್ಕೃತಿಕ ಅನನ್ಯತೆ, ಸಾಮರಸ್ಯ, ವೈವಿಧ್ಯತೆಯಲ್ಲಿ ಏಕತೆ, ಸಂಮಿಶ್ರವನ್ನು ಸೂಚಿಸುತ್ತದೆ. ಈ ಆಚರಣೆಗಳು ಗ್ರಾಮದ, ಗ್ರಾಮದ ಸರ್ವಜನಾಂಗಗಳನ್ನು ಒಳಗೊಂಡ ರಕ್ಷಣೆ, ಸಮೃದ್ಧಿ, ಸಂತಾನ ಮುಂತಾದ ನಂಬಿಕೆಗಳಿಂದ ಕೂಡಿರುವುದು ಜರ್ಜ್ಜರಿತವಾದ ಸಂಗತಿ. ಗ್ರಾಮದೇವತೆಗಳ ಆಚರಣೆಯಲ್ಲಿ ಸಾಂಸ್ಕೃತಿಕ ಹೆಸರಿನಿಂದ ಮೇಲ್ವರ್ಗ ಅಥವಾ ಕೆಳವರ್ಗ ಎಂಬ ಗಡಿರೇಖೆ ರೂಪಿತವಾಗಿದೆಯೇ? ಈ ರೇಖೆ ತಲತಲಾಂತರದಿಂದಲೂ ಮೂಡಿಬಂದ ಸಂಗತಿಯೇ? ಈ ಸಂಗತಿಗಳ ಮೇಲೆ ‘ಸಾಂಸ್ಕೃತಿಕ’ ಎಂಬ ಶೀರ್ಷಿಕೆಯಿಂದ ರಾಜಕಾರಣ ಜರುಗುತ್ತಿದೆಯೇ? ಇಂತಹ ಆಚರಣೆಗಳ ಮೇಲೆ ಸಾಂಸ್ಕೃತಿಕ ರಾಜಕಾರಣ ಜರುಗಿದಲ್ಲಿ ಅದರ ಭಿನ್ನತೆ, ಸ್ವರೂಪ, ಆಯಾಮದ ಪ್ರಕಾರಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲು ಪ್ರಯತ್ನಿಸಲಾಗಿದೆ.

ಪ್ರಮುಖ ಪದಗಳು : ಗ್ರಾಮದೇವತೆ, ಆಚರಣೆ, ಸಾಂಸ್ಕೃತಿಕ, ರಾಜಕಾರಣ, ಯಜಮಾನಿಕೆ,  ಮುಂತಾದವು.

 

ಪ್ರಸ್ತಾವನೆ :

‘ಸಂಸ್ಕೃತಿ’ ಎಂಬ ಪದವು ಒಂದು ಸಂಗತಿಗೆ ಸೀಮಿತಗೊಂಡಿಲ್ಲ. ಹಲವಾರು ಪರಿಭಾಷೆಯಲ್ಲಿ ಬಳಕೆಯಲ್ಲಿರುವ ಪದವಾಗಿದೆ. ಸಂಸ್ಕೃತಿ ಎನ್ನುವಂತಹದು ಒಂದು ಸಂಗತಿ ಕಲ್ಲಿನಂತೆ ಗಿಡದಂತೆ ಮೇಜಿನಂತೆ ಹಣ್ಣಿನಂತೆ ಮೂರ್ತರೂಪದಲ್ಲಿಲ್ಲ. ಸಭ್ಯತೆ, ಸಂಸ್ಕಾರ, ಪರಂಪರೆ, ನಾಗರೀಕತೆ, ದೇಶಭಕ್ತಿ, ಧರ್ಮದ್ರೋಹ ಮುಂತಾದವುಗಳಂತೆ ಇದೊಂದು ಬೌದ್ಧಿಕ ರಚನೆ; ಸಂಬಂಧಪಟ್ಟವರು ತಮ್ಮ ಉದ್ದೇಶಗಳಿಗೆ ಅನುಸಾರವಾಗಿ ತುಂಬುವ ಅರ್ಥವನ್ನು ಪಡೆದುಕೊಂಡು ಬಳಕೆಯಾಗುತ್ತಿರುವ ಬಹುರೂಪಿ ಪರಿಭಾಷೆ.01 ಆಗಿದೆ. ಇನ್ನೂ ಲೇಖನದ ಶೀರ್ಷಿಕೆಯಲ್ಲಿರುವ ಯಜಮಾನಿಕೆ ಎಂಬ ಪದವು ಹೆಜಿಮನಿ ಎನ್ನುವ ಪರಿಭಾಷೆಯಲ್ಲಿ ಬಳಸಬಹುದಾಗಿದೆ. ಆರ್ಥಿಕವಾಗಿ ಸದೃಢವಾಗಿರುವ ಒಂದು ವರ್ಗ ಬಲಹೀನವಾಗಿರುವ ಇನ್ನೊಂದು ವರ್ಗವನ್ನು ತನ್ನ ಶಕ್ತಿ ಸಾಮಾರ್ಥ್ಯದ ಮೂಲಕ ದಮನ ಮಾಡುವ ಮತ್ತು ಆ ಮೂಲಕ ತನ್ನ ಅಧಿಕಾರವನ್ನು ಸ್ಥಾಪಿಸುವ ಕ್ರಿಯೆಯನ್ನು ‘ಹೆಜಿಮನಿ’ ಎಂದು02 ಕರೆಯಬಹುದಾಗಿದೆ. ಈಗಾಗಲೆ ವಿವಿಧ ಸ್ಥಾನಮಾನಗಳಲ್ಲಿ ಮೇಲ್ವರ್ಗ ಎಂದು ಗುರುತಿಸಿಕೊಂಡ ವರ್ಗವು ತನಗಿಂತ ಕೆಳವರ್ಗದ ಸಮುದಾಯಗಳ ಮೇಲೆ ಹಿಡಿತ ಸಾಧಿಸುವುದು. ಇದು ಸಾಂಸ್ಕೃತಿಕವಾಗಿ ನಡೆಯುವ ಆಚರಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದರೂ ಸಮುದಾಯಗಳು ಅಸ್ಪಷ್ಟರಾಗಿ ಪ್ರವರ್ತಿಸುವ ಬಗೆಗಳೆ ಹೆಚ್ಚು. ಅದು ಸಂಸ್ಕೃತಿಯೆಂಬ ಪರದೆಯಲ್ಲಿ ಮೂಡುತ್ತಿರುವ ಚಿತ್ರಣವಾಗಿದೆ. ಶಾಕ್ತಲೋಕದ ಈ ಸ್ಥಳೀಯತೆ ಬಹುಸ್ತರೀಯತೆ ಏಣೀಕರಣ ಮತ್ತು ರೂಪಾಂತರ ಪ್ರಕ್ರಿಯೆಯಲ್ಲಿ, ಕರ್ನಾಟಕ ಸಂಸ್ಕೃತಿಯ ಸಮಾಜ, ಧರ್ಮ, ಆರ್ಥಿಕತೆ, ರಾಜಕಾರಣ ಹಾಗೂ ಕಲೆಗಳಿಗೆ ಸಂಬಂಧಿಸಿದ ದಿಟಗಳು ಅಡಗಿವೆ.03 ಈ ಶಾಕ್ತ ಲೋಕದ ನೂರಾರು ರೂಢಿಗಳ ಹಿನ್ನೆಲೆ ಮತ್ತು ಆಶಯಗಳು ಅಸ್ಪಷ್ಟವಾಗಿವೆ.04 ಶಾಕ್ತ ದೇವತಾರಾದನೆ ಎಂಬುವುದು ಸ್ತ್ರೀ, ಕೃಷಿ, ಪ್ರಕೃತಿ, ಮಾತೃ, ಸಮೃದ್ಧಿಯ ಸಂಕೇತವಾಗಿ ಹಲವು ಆಯಾಮಗಳಲ್ಲಿ ತನ್ನ ಪ್ರಭಾವವನ್ನು ಒಳಗೊಂಡಿದೆ. ಇಂತಹ ಹಲವಾರು ಸ್ತ್ರೀ ದೇವತೆಗಳನ್ನು ಗ್ರಾಮದೇವತೆಗಳು ಮತ್ತು ಗ್ರಾಮ್ಯ ದೇವತೆಗಳೆಂದು ವರ್ಗೀಕರಣಗೊಳಸಿ ಆ ಮೂಲಕ ಅವುಗಳ ನಡುವಿನ ಅಂತರಗಳನ್ನು ಗುರುತಿಸಿ-ಗ್ರಹಿಸುವ ಚರ್ಚೆ ವಿದ್ವಾಂಸರುಗಳಲ್ಲಿ ಏರ್ಪಟ್ಟಿದ್ದು ದಿಟ.

ಗ್ರಾಮದೇವತೆಗಳು ಮತ್ತು ಗ್ರಾಮ್ಯದೇವತೆಗಳು:

ಎಂ.ಚಿದಾನಂದಮೂರ್ತಿರವರ ಗ್ರಾಮದೇವತೆ ಮತ್ತು ಗ್ರಾಮ್ಯದೇವತೆಗಳು ಎಂಬ ಲೇಖನದ ಶೀರ್ಷಿಕೆಯಲ್ಲಿರುವಂತೆ ಶಿಷ್ಟದೈವಗಳ ಲೋಕದಲ್ಲಿರುವ ಶ್ರೇಣೀಕರಣವನ್ನು ಗುರುತಿಸಿತ್ತಾರೆ. ಕಟ್ಟಡವಿಲ್ಲದ, ವಿಗ್ರಹವಿಲ್ಲದ, ಕೆಳವರ್ಗದ ಭಕ್ತರುಳ್ಳ, ಸೀಮಿತ ಸ್ಥಳೀಯ ವ್ಯಾಪ್ತಿಯುಳ್ಳ, ನಿತ್ಯ ಪೂಜೆಗಳಿಲ್ಲದ, ಅನಕ್ಷರಸ್ಥ ಅರ್ಚಕರಿರುವ, ಮಾಂಸಹಾರ ಅರ್ಪಣೆವುಳ್ಳ, ದೈವವು ಸ್ಥಳೀಯವಾಗಿದ್ದು, ಯಾವುದೇ ಆಸ್ತಿ, ಆಡಳಿತ, ಬಹುತೇಕ ಸ್ತ್ರೀ ದೇವತೆಗಳುಳ್ಳ, ಅಪೌರಾಣಿಕವುಳ್ಳ, ಲಿಖಿತ ಚರಿತ್ರೆಗಳಿಲ್ಲದೆ ಸಮೃದ್ಧವಾದ ಜನಪದರ ಕಥೆ, ಹಾಡು, ಲಾವಣಿ, ಆಚರಣೆಗಳಾದ ಬೇವಿನುಡಿಗೆ, ಬೈಗುಳಗಳು, ಪೋಲಿ ಶಬ್ದಗಳು, ಬೆತ್ತಲೆ ಸೇವೆಗಳನ್ನು ಒಳಗೊಂಡಿರುವ ದೈವವೇ ಗ್ರಾಮ್ಯದೇವತೆ ಅಥವಾ ಶೀಷ್ಟೇತರ ದೇವತೆ.  ಉದಾಹರಣೆ ಮಾರೆವ್ವ, ಕರಿಯವ್ವ, ದುರುಗವ್ವ, ಮಾಸ್ತಮ್ಮ, ಅಂಕಲಮ್ಮ ಮುಂತಾದವುಗಳು. ಇನ್ನೂ ಗ್ರಾಮದೇವತೆಗಳಿಗೆ ಗ್ರಾಮದಲ್ಲಿ ಪ್ರಮುಖ ಸ್ಥಾನವಿರುವ, ವ್ಯವಸ್ಥಿತ ವಾಸ್ತುಶಿಲ್ಪವುಳ್ಳ ಕಟ್ಟಡ, ವಿಗ್ರಹವುಳ್ಳ, ಎಲ್ಲಾ ವರ್ಗದ ಭಕ್ತ ಸಮೂಹ, ವಿಸ್ತಾರವಾದ ವ್ಯಾಪ್ತಿವುಳ್ಳ, ನಿತ್ಯ ಪೂಜೆಗಳಿರುವ, ವಿದ್ಯಾವಂತ ಅರ್ಚಕರಿರುವ, ಸಸ್ಯಹಾರ ಸಮರ್ಪಣೆಯು ಆಸ್ತಿ, ಆಡಳಿತ, ಪೌರಾಣಿಕವುಳ್ಳ, ಲಿಖಿತ ಚರಿತ್ರೆಯಿರುವ, ಶಾಸ್ತ್ರೋಕ್ತ ಪೂಜೆಗಳಿರುವ, ಕನಿಷ್ಠಮಟ್ಟದ ಜಾನಪದ ಪರಂಪರೆಯುಳ್ಳ ದೈವಗಳೇ ಗ್ರಾಮದೇವತೆ ಅಥವಾ ಶಿಷ್ಟದೇವತೆಗಳು ಎಂದು ತಿಳಿಸಿದ್ದಾರೆ. ಕೆಲವು ಭಾರಿ ಕೆಳವರ್ಗದ ದೇವಾಲಯಗಳು ಯಾವುದೋ ಕಾರಣಗಳಿಂದ ಬೆಳೆದು ಗ್ರಾಮದೇವತೆಗಳಾಗಿರಬಹುದಾದ ಸಾಧ್ಯತೆಗಳಿವೆ. ಗ್ರಾಮದೇವತೆ ಎಂದರೆ ಆ ಗ್ರಾಮದ ನೈಜ ದೈವವಾಗಿದ್ದು, ಗ್ರಾಮದ ಸಂಪತ್ತು, ಒಕ್ಕಲುತನ, ಶಾಂತಿ, ಸಹಬಾಳ್ವೆ, ರಕ್ಷಣೆಯನ್ನು ಮಾಡುವ ದೇವತೆಯಾಗಿರುತ್ತದೆ. ಜಾತಿಯ ಮಿತಿ ಇಲ್ಲದೆ ಎಲ್ಲ ಜಾತಿಯ ಜನರು ಸೇರುತ್ತಾರೆ. ಗ್ರಾಮ್ಯದೇವತೆಗಳು ಬಹುಪಾಲು ಜಲ, ನೆಲ, ಮಳೆ, ಬೆಳೆ, ರೋಗ-ರುಜಿನ, ಬರಗಾಲ ಮುಂತಾದವುಗಳನ್ನು ಒಳಗೊಂಡ ಶಾಪನೀಡುವ ಗ್ರಹಿಕೆಗಳಿವೆ. ಹೀಗಾಗಿ ಜನರಿಗೆ ಗ್ರಾಮ್ಯದೇವತೆ ಮೇಲಿರುವುದು ಭಯ. ಭಯದಿಂದ ಪೂಜಿಸುವುದು ಭಕ್ತಿಯಾಗುತ್ತದೆ.

ಸಂಸ್ಕೃತೀಕರಣ ಪ್ರಭಾವದಿಂದಾಗಿ ಗ್ರಾಮ್ಯದೇವತೆಗಳು ಶಾಸ್ತ್ರೋಕ್ತ ಪೂಜೆ, ವ್ಯವಸ್ಥಿತ ಕಟ್ಟಡ ಮೊದಲಾದ ಮಾರ್ಪಾಡುಗಳಾದರೂ ತಮ್ಮ ಮೂಲವನ್ನು ಹಾಗೆಯೇ ಉಳಿಸಿಕೊಂಡು ಬಂದಿವೆ. ಕೆಲವು ಬಾರಿ ಸಂಪೂರ್ಣವಾಗಿ ಮಾರ್ಪಾಟುಗೊಂಡು ಗ್ರಾಮದೇವತೆಗಳಾಗುತ್ತವೆ. ಜಿ.ಆರ್.ತಿಪ್ಪೇಸ್ವಾಮಿಯವರು ಗ್ರಾಮದೇವತೆಗಳ ಆರಾಧನೆಯು ಆರ್ಯಪೂರ್ವಕಾಲದಿಂದಲೂ ನಡೆಯತ್ತ ಬಂದಿದೆ ಎಂದು ಅಭಿಪ್ರಾಯ ಪಡುವರು. ಗೋರೂರು ರಾಮಸ್ವಾಮಿ ಅಯ್ಯಂಗಾರರು ಗ್ರಾಮದೇವತೆಯ ಕಲ್ಪನೆ ಅತ್ಯಂತ ಪ್ರಾಚೀನವಾದದ್ದು, ಆರ್ಯರ ಉಪನಿಷತ್ತು ವೇದಗಳ ಕಾಲಕ್ಕೆ ಸೇರಿದವು ಎಂದು ಹೇಳಲಾಗುತ್ತದೆ. ಒಟ್ಟಾರೆ ಪ್ರಸ್ತುತ ಗ್ರಾಮದೇವತೆಗಳ ಆಚರಣೆ ಸಾಮಾಜಿಕವಾಗಿ ಜರುಗುತ್ತಿರುವುದು ಸತ್ಯಸಂಗತಿ. ಇಂತಹ ಸಾಮಾಜಿಕ ಆಚರಣೆಯ  ಗ್ರಾಮದೇವತೆಗಳಿಗೆ ತನ್ನದೇ ಆದಂತಹ ಸ್ಥಳೀಯವಾಗಿ ರೂಪಿತಗೊಂಡ ಐತಿಹ್ಯಗಳು, ಪ್ರಾದೇಶಿಕತೆಯೊಂದಿಗಿನ ತಳಕು ಹಾಕಿಕೊಂಡಿರುವ ಐತಿಹ್ಯಗಳು ಗ್ರಾಮದೇವತೆಗಳ ಹಿನ್ನೆಲೆ, ರಚನೆ, ವಿಕಾಸದ ಬಗೆಯನ್ನು ತಿಳಿಸುವ ಪ್ರಯತ್ನಗಳನ್ನು ಮಾಡುತ್ತವೆ. ಗ್ರಾಮದೇವತೆಗಳು ಬಹುತೇಕ ಮೌಖಿಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಮೌಖಿಕ ಚರಿತ್ರೆ, ಪರಂಪರೆ, ಸಾಹಿತ್ಯ, ಸಂಪ್ರದಾಯ, ಐತಿಹ್ಯಗಳನ್ನು ಕೇಂದ್ರಿಕರಿಸಿರುತ್ತವೆ. ಇಂತಹ ಹಲವಾರು ಐತಿಹ್ಯಗಳಲ್ಲಿ ಕೆಲವೊಂದನ್ನು ವಿಶ್ಲೇಷಿಸುವ ಅಗತ್ಯವಿದೆ.

ಐತಿಹ್ಯಗಳು :

ಕರ್ನಾಟಕದಲ್ಲಿ ವಿವಿಧ ಬಗೆಯ ಐತಿಹ್ಯಗಳಲ್ಲಿ ಕೋಣವನ್ನು ಮಾರಿ ದೇವತೆಯ ಗಂಡನಂತೆ ಧೃಡೀಕರಿಸುವ ಸಂಪ್ರದಾಯವಿದೆ. ಗಂಡನನ್ನೇ ಕೊಲ್ಲಲು ಮುಂದಾಗುವ ಮಾರಿ ದೇವತೆಯ ಕೋಪಕ್ಕೆ ಕಾರಣಗಳು ಐತಿಹ್ಯಗಳಲ್ಲಿ ಹಲವಾರು. ಇಂತಹ ಐತಿಹ್ಯಗಳಲ್ಲಿ ಒಂದು ಕರ್ನಾಟಕದಲ್ಲಿ ಕಂಡುಬರುವ ಬ್ರಾಹ್ಮಣ ಜಾತಿಯ ಹೆಣ್ಣು ಮಾದಿಗ ಜಾತಿಯ ಗಂಡನನ್ನು ಮದುವೆಯಾಗುವ ಐತಿಹ್ಯದ ಕತೆಯು ಪ್ರಸಿದ್ಧವಾಗಿದೆ. ಮಾದಿಗ ಜಾತಿಯ ಹುಡುಗನೊಬ್ಬ ವೇದಗಳಲ್ಲಿ ಪಾಂಡಿತ್ಯ ಪಡೆದು, ಬ್ರಾಹ್ಮಣನಂತೆ ಯಜ್ಞೋಪವಿತ ಧರಿಸಿಕೊಂಡು ಬ್ರಾಹ್ಮಣನೆಂದು ಹೇಳಿಕೊಂಡು ಬ್ರಾಹ್ಮಣ ಕನ್ಯೆಯನ್ನು ಮದುವೆಯಾಗುತ್ತಾನೆ. ಒಂದು ದಿವಸ ಅವನ ಜಾತಿಯು ಯಾವುದೆಂದು ತಿಳಿದು ಶಾಪಕೊಡುತ್ತಾಳೆ. ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದು ಕರ್ನಾಟಕದ ಹಾಗೂ ದಕ್ಷಿಣ ಭಾರತ ಬಹುಭಾಗಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಯಿಂದ ಕಂಡುಬರುವ ಕತೆಯಾಗಿದೆ. ಇಲ್ಲಿ ಮಾದಿಗ ಅಥವಾ ಕೆಳಜಾತಿಯ ಜನ ಎನ್ನುವ ಅಂಶಗಳು ಆರ್ಯರು ಬಂದ ನಂತರದಲ್ಲಿ ಸೇರಿಕೊಂಡಿರುವ ಹಾಗೆ ಕಂಡುಬರುತ್ತದೆ.05

ಪ್ರಚಲಿತದಲ್ಲಿ ಮೆಲ್ವರ್ಗದ ಹೆಣ್ಣಿನ ಗಂಡ ದಲಿತ ಅಥವಾ ತಳಸಮುದಾಯದವನು ಎಂದು ಗ್ರಹಿಸುವಲ್ಲಿ ನಾನಾ ಕಥೆಗಳಿವೆ. ಅವು ಗಂಡನ ಆಹಾರ ಪದ್ಧತಿ, ಮಾತುಗಾರಿಕೆ, ವೃತ್ತಿ, ಪಾದರಕ್ಷೆ ತಯಾರಿಕೆ, ಗಂಡನ ಸಂಬಂಧಿಕರ ನಡಾವಳಿ ಮತ್ತು ಭೋಜನಾಬಿರುಚಿ ಮುಂತಾದ ಕಲ್ಪನೆಗಳಲ್ಲಿ ಗ್ರಹಿಸಿ ಗಂಡನನ್ನು ಸಂಹಾರ ಮಾಡುವ ಮಿತ್ ಗಳೆ ಹೆಚ್ಚು. ಮಾರಮ್ಮ-ದ್ಯಾಮವ್ವ ದಲಿತರನ್ನು ಮದುವೆಯಾಗಿ ಸಂಸಾರ ಮಾಡಿದವರು; ಗಂಡನನ್ನು ಕೊಂದು ವಿಧವೆಯರಾದರು. ಇವರು ಅಗ್ನಿಪ್ರವೇಶ ಮಾಡಿದರೂ ಅದು ಸಹಗಮನ ಎನಿಸಿಲ್ಲ. ಇಲ್ಲಿ ಬೆಂಕಿ ಅವರಿಗೆ ಸಾಮಾಜಿಕ ಹಿನ್ನೆಲೆಯಿಂದ ಬಂದಿರುವ ಅಗ್ನಿಸಂಸ್ಕಾರದ ಭಾಗವೂ ಆಗಿದೆ; ತಮ್ಮನ್ನು ಸುಟ್ಟುಕೊಂಡು ಅಸ್ಪೃಶ್ಯ ಸಂಗದಿಂದ ಬಂದ ಮಾಲಿನ್ಯವನ್ನು ತೊಡೆದುಕೊಳ್ಳುವ ಕ್ರಿಯೆಯೂ ಆಗಿದೆ...., ಇಲ್ಲಿರುವ ಅಪರಾಧ ಮತ್ತು ಶಿಕ್ಷೆಯ ಪರಿಕಲ್ಪನೆಯಲ್ಲಿ ದಲಿತರ ರಕ್ತಪಾತವಾದರೆ ಉಚ್ಚಜಾತಿಯ ಸ್ತ್ರೀದೇಹ ಸುಟ್ಟು ಬೂದಿಯಾಗುತ್ತದೆ.06 ಮೊತ್ತೊಂದು ಐತಿಹ್ಯದಲ್ಲಿ ಜಾತಿಯನ್ನು ಮರೆಮಾಚಿ ಮದುವೆಯಾದ ದಲಿತನನ್ನು ಮೇಲ್ಜಾತಿ ಹೆಣ್ಣು ಕೊಲ್ಲುವ ಮತ್ತು ತಾನೂ ಕೊಂದುಕೊಳ್ಳುವ ವಿಧಾನಗಳೂ ಬಹುರೂಪಿಯಾಗಿವೆ. ಹೆಚ್ಚಿನ ಮಿತ್ ಗಳ ಪ್ರಕಾರ, ಹೆಂಡತಿ ಗಂಡನನ್ನು ಕೊಲ್ಲಲ್ಲು ಅಟ್ಟಿಸಿಕೊಂಡು ಹೋಗುವಾಗ ಆತ ಪ್ರಾಣ ಉಳಿಸಿಕೊಳ್ಳಲು ಕೋಣನ ದೇಹವನ್ನೂ ಅವಳ ಮಕ್ಕಳು ಕುರಿಯನ್ನೂ ಹೊಕ್ಕು ವಧೆಯಾಗುವರು. ಮಧುಗಿರಿ ದಂಡಿನ ಮಾರಮ್ಮನ ಕತೆಯಲ್ಲಿ ಗಂಡನಿಗೆ ‘ನಿನ್ನ ಬಲಗಾಲು ಕೊಯ್ದು ಬಾಯಿಗೆ ಕಚ್ಚಿಸ್ತೀನಿ ನಿನ್ನ ನೆಣ ತೆಗೆದು ದೀಪ ಹಚ್ಚಿಸ್ತೀನಿ’ ಎಂದೂ, ತನ್ನ ಐದು ಮಕ್ಕಳಲ್ಲಿ ನಾಲ್ವರು ದೃಷ್ಟಿಮರಿ ಧೂಳುಮರಿ ನಾನದಮರಿ ಎಲ್ಲೆಮರಿಗಳಾಗಿ ಬಲಿಯಾಗಲೆಂದೂ, ಕಿರಿಯವನು ಅಸಾದಿಯಾಗಿ ತನ್ನ ಕಥೆ ಹೇಳುತ್ತ ಲೋಕ ತಿರುಗುವಂತಾಗಲೆಂದೂ ಶಪಿಸುವಳು.07

ಈ ಮೇಲಿನ ಐತಿಹ್ಯಗಳನ್ನು ನೋಡುವುದಾದರೆ ಶಿಕ್ಷಣವೆಂಬುದು ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲಘಟ್ಟಗಳಲ್ಲಿ ತಳಸಮುದಾಯದ ಅಥವಾ ದಲಿತ ಸಮುದಾಯದ ಯುವಕನೊಬ್ಬ ಶಿಕ್ಷಣ ಪಡೆಯಲು ಸಾಧ್ಯವೇ? ಶಿಕ್ಷಣ ಪಡೆದಲ್ಲಿ ದಲಿತ ವ್ಯಕ್ತಿಯ ಸ್ಥಾನಮಾನ ಯಾವುದು? ಎಂಬ ಪ್ರಶ್ನೆಗಳು ಕಾಡುತ್ತವೆ. ಅಲ್ಲದೆ ಗಂಡನನ್ನು ಕೊಂದರೂ ಸತಿಸಹಗಮನ ಎನಿಸದೆ ಇದ್ದಾಗ, ದೈವತ್ವದ ಸ್ಥಾನ ದೊರೆತ್ತಾದರೂ ಹೇಗೆ? ಹಲವಾರು ಮಿತ್ ಗಳಲ್ಲಿ ಕೋಣವೆ ಏಕೆ ಬಲಿಪದ್ಧತಿಗೆ ಮೂಲವಾಯಿತು? ಗಂಡನನ್ನು ಕೊಂದ ಹೆಂಡತಿಗೆ ವಿಧಿಸಿದ ಶಿಕ್ಷೆಗಳು ಏನು? ಗಂಡನನ್ನು ಕೊಂದ ಸ್ತ್ರೀಗೆ ದೈವದ ಕಲ್ಪನೆ ಹುಟ್ಟಿದ್ದು ಹೇಗೆ? ಕೋಣವು ಕೊಲೆಯಾದ ದಲಿತ ಪುರುಷನನ್ನು ಸಂಕೇತಿಸುವುದಾದರೆ ಇಂದಿಗೂ ಮಾರಿ ಜಾತ್ರೆಗಳಲ್ಲಿ ಕೋಣವನ್ನೇಕೆ ದಲಿತ ಸಮುದಾಯ ಬಲಿ ನೀಡುತ್ತದೆ? ಬಲಿ ನೀಡುವುದರ ಜೊತೆಗೆ ಮಾಂಸ ಸೇವನೆ ಏಕೆ ಮಾಡುತ್ತದೆ? ದಲಿತ ಪುರುಷನನ್ನು ಕೊಂದ ಮೇಲ್ವರ್ಗದ ಸ್ತ್ರೀಯನ್ನು ದೈವ ರೂಪಿಗೊಳಿಸಿ, ಪೂಜಿಸಿ ಏಕೆ ಸಂಭ್ರಮಿಸುತ್ತಾರೆ. ಇದು ಪೂರ್ವಜನ ಕೊಲೆಗೆ ಕೊಡುತ್ತಿರುವ ಬಹುಮಾನವೊ ಅಥವಾ ಪಶ್ಚಾತಾಪವೋ? ಮೇಲ್ವರ್ಗ ಎಂಬುದು ತಳಸಮುದಾಯಗಳ ಪುರುಷರು ಇನ್ನೊಮ್ಮೆ ಮೇಲ್ವರ್ಗದ ಸ್ತ್ರೀಯನ್ನು ಯಾವ ದೃಷ್ಟಿಯಲ್ಲಿಯು ಕಲ್ಪಿಸಿಕೊಳ್ಳಬಾರದೆಂಬ ಹಿನ್ನೆಲೆಯಲ್ಲಿ ಕೊಲೆಯಲ್ಲಿ ಅಂತ್ಯವಾದ ತಳಸಮುದಾಯದ ವ್ಯಕ್ತಿಯನ್ನು ಕೋಣಕ್ಕೆ ಏಕೆ ಹೋಲಿಸಿರಬಾರದು? ವಿಲೋಮ ವಿವಾಹಕ್ಕೆ ನೀಡುವ ಮಧ್ಯಂತರ ಕಟ್ಟುಪಾಡುಗಳಾಗಿರಬಹುದಲ್ಲವೆ. ಅಥವಾ ಒಂದೆಡೆ ಕೋಣವು ದ್ರಾವಿಡರನ್ನು ಸೂಚಿಸಿದ್ದಲ್ಲಿ ಆರ್ಯರ ದಾಳಿಯನ್ನು ಮತ್ತು ಕ್ರೌರ್ಯವನ್ನು ಶಾಕ್ತದೇವತೆಗೆ ಹೋಲಿಸಲಾಯಿತೇ? ಉತ್ತರ ಕಂಡುಕೊಳ್ಳಬೇಕಿದೆ. ಇಂತಹ ಹಲವಾರು ಪ್ರಶ್ನೆಗಳು ಮೌಢ್ಯ ಎನ್ನುವ ಕತ್ತಲಕೋಣೆಯಲ್ಲಿ ಬಂಧಿಸಲ್ಪಟ್ಟಿವೆ. ಮೌಢ್ಯತ್ವದ ಹುನ್ನಾರಗಳು ಸಾಮಾಜಿಕವಾಗಿ ಜಾತಿ ಕೇಂದ್ರಿತವಾಗಿ ರಚನೆಗೊಂಡಿದ್ದರು ತೋರ್ಪಡಿಕೆಗಾಗಿ ದೈವತ್ವದ ಹಿನ್ನೆಲೆಯಲ್ಲಿ ಸಮೀಕರಿಸಿ ಒಪ್ಪಿಸುವ ತಂತ್ರಗಳೇ ಹೆಚ್ಚು.

ಮೌಢ್ಯತ್ವದ ಹುನ್ನಾರ :

ಧಾರ್ಮಿಕ ಭಾವನೆಗಳು ಜನಸಮುದಾಯಗಳ ಮನಸ್ಸನ್ನು ಸೆರೆಹಿಡಿದಾಗ ಒಂದು ಭೌತಿಕ ಶಕ್ತಿಯಾಗಿ ಅವು ಪರಿಣಮಿಸುತ್ತವೆ.08 ಇತಂಹ ಶಕ್ತಿಗಳು ಆಚರಣೆಗಳಲ್ಲಿ ಗಾಢವಾಗಿ ನೆಲೆಯೂರಿದೆ ಎಂದರೆ ತಪ್ಪಾಗಲಾರದು. ಜನಸಮುದದಾಯಗಳ ಸಾಮಾಜಿಕ ಸ್ಥಾನಮಾನಗಳಲ್ಲಿ ಆಚರಣೆ ಎಂಬ ಹುನ್ನಾರಗಳನ್ನು ಒಳಗೊಂಡಿರುತ್ತವೆ. ಗ್ರಾಮದೇವತೆಗಳ ಆಚರಣೆಗಳು ಗ್ರಾಮಗಳಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು, ತಾವು ಸುಖವಾಗಿ ಬದುಕಲು ಕೆಳವರ್ಗದವರು ದುಡಿದು ದುಡಿದು ಹಾಕಲು ಅವರನ್ನು ಮೌಢ್ಯ ಅಂಧಶ್ರದ್ದೆಗಳ ಸೆರೆಮನೆಯಲ್ಲಿಡಲು ಗೌಡ ಕುಲಕರ್ಣಿ ಸಾಹುಕಾರ ಶ್ರಿಮಂತರು ಗ್ರಾಮ ದೇವತೆಯನ್ನು ಚೆನ್ನಾಗಿ ಬಳಸಿಕೊಂಡರು. ಅವರು ಜಾಣರಾದರೆ ತಿಳುವಳಿಕೆ ಹೊಂದಿದರೆ ತಮ್ಮ ಮಾತನ್ನೆಂದು ಕೇಳಲಾರರೆಂದು ಅವರನ್ನು ಅಕ್ಷರಗಳಿಂದ ದೂರಿಟ್ಟು, ದೇವಿಯ ಹೆಸರಿನಲ್ಲಿ ತಮ್ಮ ಸಂವಿಧಾನವನ್ನು ರಚಿಸಿದರು.09 ಐತಿಹ್ಯಗಳಲ್ಲಿರುವಂತೆ ಮೇಲ್ವರ್ಗದ ಸ್ತ್ರೀಯು ಶಕ್ತಿ ದೇವತೆಯಾದ ಬಳಿಕ ಆಚರಣೆಯಲ್ಲಿ ಕಂಡುಬರುವ ಸಿಡಿ ಆಡುವುದು, ಗಾವು ಜಿಗಿಯುವುದು, ಕೆಂಡ ಹಾಯುವುದು, ಬಸವಿ, ಜೋಗಮ್ಮ ಮತ್ತು ಬೆತ್ತಲೆಸೇವೆಯನ್ನು ಹೆಚ್ಚಾಗಿ ಕೆಳಸ್ತರದ ಜನರೇ ಮಾಡುತ್ತಿರುವುದರಿಂದ ಇದು ಅವರನ್ನು ಮೌಢ್ಯದಲ್ಲುಳಿಸುವ ಮತ್ತು ಲೈಂಗಿಕ ಶೋಷಣೆ ಮಾಡುವ ಹುನ್ನಾರ.10 ಶಕ್ತಿದೈವಗಳ ಆಚರಣೆಯಲ್ಲಿ ಗೋಚರಿಸುವ ರಂಗಹೊಯ್ಯುವ, ಬಲಿಪಶು ವಧಿಸುವ, ಹಲಗೆ ಬಾರಿಸುವ, ಅಸಾದಿಪದ ಹಾಡುವ, ಚರಗ ಚೆಲ್ಲುವ, ‘ಚಾಜ’ ಗಳೊಂದಿಗೆ ದಲಿತರು ಶಾಕ್ತದಲ್ಲಿ ಮಹತ್ವದ ಬಾಧಸ್ಥಿಕೆ ಪಡೆದಿದ್ದರೂ, ವಾಸ್ತವದಲ್ಲಿ ಅವರಿಗೆ ಗುಡಿಪ್ರವೇಶ ಇರಲಿಲ್ಲ.11 ಅನೇಕ ಶಾಕ್ತ ದೇವತೆಗಳ ಮಕ್ಕಳೆಂದು ಭಾವಿಸುವ ಆಸಾದಿಗಳು ದಲಿತರು ಅದರಲ್ಲೂ ಮಾದಿಗರು ಮಾತ್ರ ಆಸಾದಿಗಳಾಗುವುದು.12 ಈ ಆಸಾದಿಗಳು ಅಮ್ಮನ ಮಕ್ಕಳಾಗಿದ್ದಲ್ಲಿ ಅಮ್ಮನ ಗರ್ಭಗುಡಿಯ ಪ್ರವೇಶವಿದಿಯೇ? ಶಾಕ್ತಪಂಥದ ಅನೇಕ ಸ್ತ್ರೀ ದೇವತೆಗಳು ಗದ್ದಿಗೆಯಲ್ಲಿ ಬಂದು ಪ್ರತಿಷ್ಠಾಪನೆಗೊಳ್ಳುತ್ತಿರುವಂತೆ, ಪರಂಪರಾಗತವಾಗಿ ಕೋಣ ಕಡಿಯಲು ಸಿದ್ಧರಾದ ಕಬ್ಬಲಿಗ, ತಳವಾರ, ಹರಿಜನರು ತಮ್ಮ ತಮ್ಮ ಗಂಡುಗೊಡಲಿ ಖಡ್ಗವನ್ನು ಹಿಡಿದುಕೊಂಡು ಕೋಣ ಕಡಿಯಲು ಸಿದ್ಧರಾಗುವರು.13 ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತರ ಕರ್ನಾಟಕದಲ್ಲಿ ದ್ಯಾವಮ್ಮ, ಲಕ್ಷ್ಮೀ ಹೆಸರಿನಲ್ಲಿ ಕೆಳಜಾತಿಯ(ಹೊಲೆಯರ)ವನು ಗಾವುಸಿಗಿಯುತ್ತಾನೆ. ದಕ್ಷಿಣ ಕರ್ನಾಟಕದಲ್ಲಿ ಗಂಗೆಮತಸ್ಥ, ಮ್ಯಾಸೆಯ ಬೇಡರ ನಾಯಕರವನು ಗಾವುಸಿಗಿಯೋದು ನೆರವೇರಿಸುತ್ತಾನೆ....., ಕರ್ನಾಟಕದಲ್ಲಿ ಮ್ಯಾಸೆಯ ನಾಯಕರು, ಉತ್ತರ ಕರ್ನಾಟಕದಲ್ಲಿ ಹರಿಜನರು ತಮ್ಮ ವಂಶಪಾರಂಪರ್ಯವಾಗಿ ಇದನ್ನು ಧಾರ್ಮಿಕ ವೃತ್ತಿಯನ್ನಾಗಿಸಿಕೊಂಡಿದ್ದಾರೆ.14 ಇನ್ನೂ ಹಲವು ಭಾಗಗಳಲ್ಲಿ ಕಂಡುಬರುವ ಗಾವುಮರಿ ಸಿಗಿಯುವ ಕ್ರಿಯೆ ಜರಗುವ ಮುನ್ನ ಉತ್ತರ ಕರ್ನಾಟಕದಲ್ಲಿ ಬೂತಬಲಿ ಹರಿಯುವುದೂ ಒಂದು ವಿಶೇಷ ಬಲಿ, ಕೆಳವರ್ಗದ ಓರ್ವ ವ್ಯಕ್ತಿ ಉಪವಾಸವಿದ್ದು ಕೋಣ ಬಲಿಯಾದನಂತರ ಬೆತ್ತೆಲೆಯಾಗಿದ್ದುಕೊಂಡು (ಮೇಲ್ಬಾಗಕ್ಕೆ ಕಂಬಳಿ ಸುತ್ತಿಕೊಂಡಿರುತ್ತಾನೆ. ಕೂಳು, ಹುಲಸು, ಕೋಣನ ರಕ್ತಮಿಶ್ರಿತ ಅನ್ನ) ಚರಗ ಚೆಲ್ಲುವ ಸಂದರ್ಭದಲ್ಲಿ ನಿಂತ ನಿಂತಲ್ಲಿ ಹೆಜ್ಜೆಗೊಂದು ಕುರಿಬಲಿ ಆಗಬೇಕು. ಈ ಸಂದರ್ಭದಲ್ಲಿ ಊರಿನ ಜನರ ಆರ್ಭಟ, ಆದಿಮಾನವನೇ ಅಣುಯುಗಕ್ಕೆ ಕಾಲಿಟ್ಟಂತಹ ದೃಶ್ಯ ನಿರ್ಮಾಣಗೊಳ್ಳುವುದನ್ನು ಗುರುತಿಸಬಹುದು.15 ಸಿಡಿ ಆಡುವ ಪದ್ಧತಿ ಗ್ರಾಮದೇವತೆಗಳ ಆಚರಣೆಯಲ್ಲಿದ್ದು, ಇದು ಕೆಳವರ್ಗದವರಾದ ನಾಟೀಕಾರ, ವಾಲೀಕಾರ, ಜಮಾದಾರ, ಉಪ್ಪಾರ, ಬೆಸ್ತ, ಬೇಡ, ವಾಲ್ಮೀಕಿ, ಕಬ್ಬಲಿಗ, ಗಂಗಾಮತ, ರಜಪೂತರು ಹಾಗೂ ಇನ್ನೂ ಹಲವು ಜನಾಂಗದ ಒಳಪಂಗಡಗಳ ಸ್ತ್ರೀ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸಿಡಿ ಆಡಿದ್ದು, ಆಡುತ್ತಿರುವುದು ಕಂಡುಬರುತ್ತದೆ.16 ಅಲ್ಲದೆ ಅಮ್ಮನ ಹಬ್ಬದಲ್ಲಿ ದಲಿತರು ತಮ್ಮ ದೇಹವನ್ನು ದಂಡಿಸಿಕೊಳ್ಳುವ, ಸಿಡಿಯಾಡುವ ಮತ್ತು ಶವ ಮೆರವಣಿಗೆ ಮಾಡುವ ಪದ್ಧತಿಗಳು ದಲಿತರ ನರಬಲಿಯ ಸವೆರೂಪಗಳಾಗಿರುವ ಸಾಧ್ಯತೆಗಳಿವೆ. ಚೆರಗ ಚೆಲ್ಲುವಾಗ ಊರ ಸಮೃದ್ಧಿಗಾಗಿ ದಲಿತ ತರುಣನ ಬಲಿಯನ್ನು ಮಾಡಲಾಗುತ್ತಿತ್ತು ಎಂದು ಕಾಣುತ್ತದೆ. ಇದ್ಕೆ ಚರಗ ಚೆಲ್ಲುವುದಕ್ಕೆ ಹೊರಡುವ ಮುನ್ನ ದಲಿತ ವ್ಯಕ್ತಿಯ ಹೆಂಡತಿಯನ್ನು ವಿಧವೆಯನ್ನಾಗಿ ಮಾಡುವ ಆಚರಣೆಗಳು ಸಾಕ್ಷಿ. ಹಿಂದೆ ಗೋಕಾಕದಲ್ಲಿ ಒಂದೇ ಏಟಿಗೆ ಕೋಣ ಕಡಿಯದಿದ್ದರೆ ರಾಣಿಗ್ಯನನ್ನು ಕೊಲ್ಲುವ ಪದ್ಧತಿಯಿತ್ತೆಂದೂ, ಅದಕ್ಕೆ ಅವನು ಮನೆಯಿಂದ ಬರುವಾಗಲೇ ಹೆಂಡತಿಯ ತಾಳಿ ಕಿತ್ತಿಟ್ಟು ಬರುತ್ತಿದ್ದನೆಂದೂ ಕತೆಯಿದೆ.17 ರೋಗ ರುಜಿನಗಳು ಬಂದಲ್ಲಿ ಸಾಮಾನ್ಯವಾಗಿ ಗ್ರಾಮದೇವತೆಗೆ ಹರಕೆ, ಬುತ್ತಿ, ಎಡೆ, ನೈವೇದ್ಯ ಇಡುವ ಪದ್ಧತಿ ಇದೆ. ಆದರೆ ಇಂತಹ ವೈಚಾರಿಕತೆಯಲ್ಲಿಯು ಮೇಲ್ವರ್ಗವೆಂಬುದು ಅಜ್ಞ, ಬಡ, ನಿರಕ್ಷರಿ ಜನರ ಹೆಣ್ಣುಮಕ್ಕಳ ಭೋಗ ಮಾಡಲು ಶ್ರೀಮಂತರು ಪೂಜಾರಿಗೆ ಹಿಡಿದು ಬಸವಿ ಪದ್ಧತಿ ತಂದದ್ದು ಕಾಣುತ್ತೇವೆ. ಮನೆಯಲ್ಲಿ ಯಾರಿಗೆ ಜ್ವರಬಂದರೂ ಗುಣವಾಗಲೂ ಹೆಣ್ಣು ಮಗಳನ್ನು ದೇವಿಗೆ ಬಿಡಬೇಕು. ಮೇಲ್ವರ್ಗದ ಜನರ ಗಂಡುಮಕ್ಕಳಿಗೆ ಬೇನೆ ಬಂದರೆ, ಅವರು ತಮ್ಮ ಹೆಣ್ಣು ಮಕ್ಕಳನ್ನು ದೇವರಿಗೆ ಬಿಡುವುದಿಲ್ಲ. ಕೇವಲ ಕುರಿಕೋಳಿಗಳ ಬಲಿಕೊಟ್ಟು ಆ ಪೀಡಾ ತಪ್ಪಿಸಿಕೊಳ್ಳುವರು. ಆದರೆ ಕೆಳವರ್ಗದವರೆಲ್ಲ ಇದಕ್ಕೆ ಕುರಿಬಲಿ ಕೊಡುವಂತಿಲ್ಲ. ಹೆಣ್ಣುಮಕ್ಕಳನ್ನೇ ಬಿಡಬೇಕು.18 ಇಂತಹ ಕಠೋರ ಆಚರಣೆಗಳು ಕೆಲವು ಭಾಗದಲ್ಲಿ ಇನ್ನೂ ಹಾಗೆಯೇ ಉಳಿದಿವೆ. ದೇವಿಯ ಭಕ್ತಿ ಹೆಸರಿನಲ್ಲಿ ಮೇಲ್ವರ್ಗದವರಿಗೆ ಸುಖನೀಡಲು ತಾವು ಹುಟ್ಟಿರುವೆವೆಂದು ಜೋಗಮ್ಮರು ತಿಳಕೊಂಡರು.19  ತಳಸಮುದಾಯಗಳು ತಾವು ಮೇಲ್ವರ್ಗದವರಿಗೆ ಸೇವೆ ಮಾಡಲು ಹುಟ್ಟಿ ಬಂದಿರುವೆವೆಂದು ಗಾಢವಾಗಿ ಭ್ರಮಿಸಲಾಯಿತು. ಇನ್ನೂ ಫಲಸಂತಾನವಾಗಲು, ಮಕ್ಕಳಿಗೆ ಬಂದ ರೋಗ ಹೋಗಲು ಬಸವಿಗೆ ಬಿಡುವುದರ ಜೊತೆಗೆ ದೇವಿಯ ಉತ್ಸವದಲ್ಲಿ ಬೆತ್ತಲೆ ಸೇವೆ ಸಲ್ಲಿಸುವ ವಿಚಾರವನ್ನು ನೀಡಿದವರು ಆಚಾರ್ಯರು, ಸ್ವಾಮಿಗಳು, ಪೂಜಾರಿಗಳು.20 ಇಂತಹ ಬೆತ್ತಲೆ ಸೇವೆಗೆ ಐತಿಹ್ಯಗಳ ನಂಟು ಇದೆ. ಚಂದ್ರಗುತ್ತಿಯಲ್ಲಿ ರೇಣುಕಾದೇವಿಯ ಜಾತ್ರೆಯಲ್ಲಿ ನಡೆಯುತ್ತಾ ಬಂದಿರುವ ಬೆತ್ತಲೆ ಸೇವೆಗೆ ರೇಣುಕೆಯ ಪೌರಾಣಿಕ ನಿರೂಪಣೆಯನ್ನು ನೀಡಲಾಯಿತು. ರೇಣುಕೆ ತಪ್ಪು ಮಾಡಿ ಜಮದಗ್ನಿ ಹಾಗೂ ಪರಶುರಾಮನಿಂದ ತಪ್ಪಿಸಿಕೊಳ್ಳಲು ಬೆತ್ತಲೆ ಓಡಿ ಹೋದಳು ಎನ್ನುವ ಪೌರಾಣಿಕ ನಿರೂಪಣೆ ಬೆತ್ತಲೆ ಸೇವೆಗೆ ಸ್ಪಷ್ಟೀಕರಣದ ರೂಪದಲ್ಲಿ ಬಂತು. ಇದು ಬೆತ್ತಲೆ ಸೇವೆಗೆ ಸಾಮಾಜಿಕ ಒಪ್ಪಿಗೆಯನ್ನು ಪಡೆಯುವ ತಂತ್ರವಾಗಿಯೇ ಕಂಡುಬರುತ್ತದೆ. ಇದು ಬೆತ್ತಲೆ ಸೇವೆಗೆ ಧಾರ್ಮಿಕ ಲೇಪನವನ್ನು ಹಚ್ಚಿ, ಸಾಮಾಜಿಕವಾಗಿ ಒಪ್ಪಿಗೆಯನ್ನು ಪಡೆಯುವುದರ ಮೂಲಕ ಅದನ್ನು ನಿರಂತರವಾಗಿ ನಡೆಸಿಕೊಂಡು ಬರಲಾಯಿತು.21 ಈ ರೀತಿಯ ಅಮಾನವೀಯ ಆಚರಣೆಗಳಿಗೆ ಕಾನೂನಾತ್ಮಕ ಕಡಿವಾಳ ಇದ್ದರೂ ಅಲ್ಲಲ್ಲಿ ಜರುಗುವುದು ಸಾಮಾನ್ಯ ಸಂಗತಿಯಾಗಿದೆ.

ಮನುಷ್ಯನ ಒಳಿತಿಗಾಗಿ, ಸುಖಕ್ಕಾಗಿ ಗ್ರಾಮದೇವತೆ ಹುಟ್ಟಿಕೊಂಡರೂ ಕಾಲಾನಂತರದಲ್ಲಿ ಈ ಮೂಲತತ್ವಕ್ಕೆ ಜಂಗುನಟ್ಟು ಹೋಯಿತು. ಜಡತ್ವ ಬಂದು ಕುಳಿತಿತು. “New broom sweeps clean ಹೊಸ ಬಾರಿಗೆ ಚೆನ್ನಾಗಿ ಉಡುಗುವದು ಎಂಬಂತಾಯಿತು. ಸ್ವಾರ್ಥಿ ಪೂಜಾರಿಗಳಿಂದ, ದುಷ್ಟ ಗ್ರಾಮಾಧಿಕಾರಿಗಳಿಂದ, ಸುಖಲೋಲುಪರಾದ ಸಾಹುಕಾರ, ದೇಸಾಯಿ, ದೇಶಮುಖ, ಸುಬೇದಾರ ಶ್ರೀಮಂತರಿಂದ ಜನರಕ್ಷಣೆಗಾಗಿ ಹುಟ್ಟಿದ ಗ್ರಾಮದೇವತೆಯನ್ನು ಶೊಷಣಾ ಅಸ್ತ್ರವನ್ನಾಗಿ ಮಾಡಿದರು. ತಮ್ಮ ದಬ್ಬಾಳಿಕೆ, ಹಿಂಸೆಯಿಂದ ನಿರಕ್ಷರಿ, ಅಜ್ಞ, ಬಡವ, ಮುಗ್ಧಜನರನ್ನು ಸುಲಿದರು, ತುಳಿದರು.22 ಸಾಮಾಜಿಕವಾಗಿ ಆಚರಣೆಗಳಲ್ಲಿರುವ ಜಾತಿ-ಸಮುದಾಯ ಕೇಂದ್ರಿತವಾದ ಪದ್ಧತಿಗಳು ಒಂದು ವರ್ಗಕ್ಕೂ ಇನ್ನೋಂದು ವರ್ಗಕ್ಕೂ ಭಿನ್ನವಾಗಿ ನೆಲೆಗೊಂಡಿದ್ದರ ಬಗೆ ಹೇಗೆ? ಇದು ದೈವತ್ವ ಹಾಗೂ ಅಸ್ಪೃಶ್ಯತೆಯ ಸಂಯೋಜನೆ ಅಲ್ಲದೆ ಬೇರೆನೂ ಆಗಿರಲು ಸಾಧ್ಯ? ಗ್ರಾಮದೇವತೆ ಆ ಗ್ರಾಮದ ಸರ್ವರಿಗೂ ಒಂದೇ ಆಗಿದ್ದಲ್ಲಿ ಆಚರಣೆಗಳಲ್ಲಿಯೂ ಏಕತೆಯ ನೀತಿ ಅನುಸರಿಸುವುದು ನ್ಯಾಯಯುತ ಪ್ರಶ್ನೆಯಾಗಿ ತೋರ್ಪಡಿಸುತ್ತದೆ.

ದೈವತ್ವ ಮತ್ತು ಅಸ್ಪೃಶ್ಯತೆಯ ಸಂಕೋಲೆ :

ಧರ್ಮವೆಂದರೆ ‘ಅಫೀಮು’ ಎಂಬ ಮಾತು ನಿಜವೆನುಸವುದು.23 ಏಕೆಂದರೆ ಅಧಿಕಾರ, ಹಣದ ಬಲ ಉಳ್ಳವರು ಹೇಳಿದ ಹಾಗೆ ಪೂಜಾರಿ, ಸ್ವಾಮಿ, ಆಚಾರ್ಯರು ಅನುಸರಿಸಬೇಕಾಗಿತ್ತು. ದೇವಿ ಪವಿತ್ರಳು, ದೇವಿಯ ಆಡಳಿತಾಧಿಕಾರಿಗಳಾದ ತಾವು ಆಕೆಯಷ್ಟೇ ಪವಿತ್ರರು; ಉಳಿದವರು ಕನಿಷ್ಟರು, ಅಪವಿತ್ರರು, ಅಸ್ಪೃಶ್ಯರೆನ್ನುವಂತೆ ಗ್ರಾಮಾಧಿಕಾರಿಗಳು ನೋಡಿಕೊಂಡರು. ತಮಗಿಂತ ಕೆಳಗಿನ ಜನರಲ್ಲಿ ಒಬ್ಬರಿಗೊಬ್ಬರು ಮುಟ್ಟಿಸಿಕೊಳ್ಳದಂತೆ, ತಾರತಮ್ಯ ಭಾವದಿಂದ ನೋಡುವಂತೆ, ಗ್ರಾಮದೇವತೆಯ ಹೆಸರಿನಲ್ಲಿ ಅಸ್ಪೃಶ್ಯತೆಯನ್ನು ಕಲ್ಪಿಸಿದರು. ಪ್ರವೇಶ ನಿಷೇಧದಲ್ಲು ತಾರತಮ್ಯ ಭಾವ ತಂದರು. ಮೇಲ್ವರ್ಗದವರು ದೇವಿಯ ಗರ್ಭಗುಡಿಯಲ್ಲಿ, ಮಧ್ಯಮವರ್ಗದವರು ದೇವಿಯ ಮುಂಬಾಗಿಲದಲ್ಲಿ ಕೆಳವರ್ಗದವರು ದೇವಿಯ ಒಳಾಂಗಣದಲ್ಲಿ, ಪಂಚಮರು ದೇವಿಯ ಹೊರಾಂಗಣದಲ್ಲಿ ನಿಲ್ಲುವಂತೆ ಮಾಡಿ ದೇವಿಯ ಹತ್ತಿರ ಬರದಂತೆ ಪ್ರವೇಶ ನಿಷೇಧ ತಂದರು. ಇದರಿಂದ ಶ್ರೀಮಂತರು ಬೆಳೆದುಕೊಳ್ಳಲು, ಬಡವರು ತುಳಿಸಿಕೊಳ್ಳಲು ಒಳ್ಳೆಯ ಹಾದಿಯಾಯಿತು.24 ಕೆಳವರ್ಗದಲ್ಲಿ ಕಂಡುಬರುವ ಬಾಜಿ ಊದುವ ಕೊರವ ಇವರಲ್ಲಿ ಅತೀ ಕನಿಷ್ಠ ಎಂದು ಹೇಳುವರು. ಕೆಳವರ್ಗದವರಲ್ಲಿ ಅತೀ ಕನಿಷ್ಠರಾದ ದೇವಿಯ ದೀವಟಿಗೆಯನ್ನು ಹಿಡಿಯಲು ಹೊಲೆಯ ಅತೀ ಕನಿಷ್ಠರಲ್ಲಿ ಹೆಚ್ಚಾದರೆ, ಹಲಗೆ ಬಡಿಯುವ ಮಾದಿಗ ಅತೀ ಕನಿಷ್ಠರಲ್ಲಿ ಕನಿಷ್ಠ. ಅದಕ್ಕಾಗಿ ಕೋಣ ಬಲಿಯಾದಾಗ ದೇವಿಯ ಕೆಳಗಡೆ ಹೊಲೆಯ ಒಲೆಗುಂಪು ಹೂಡಿದರೆ ಅವನ ಕೆಳಗಡೆ ಮಾದಿಗ ಒಲೆಗುಂಪು ಹೂಡಿ, ಕೋಣದಡಿಗೆ ಮಾಡಿಕೊಂಡು ಉಣ್ಣಬೇಕು.25 ಈ ರೀತಿಯ ಮೇಲು-ಕೀಳಿನ ಚಿಂತನೆಗಳಿಂದ ಹಲವು ತಳಸಮುದಾಯಗಳು ತಮ್ಮ ತಮ್ಮಲ್ಲಿಯೇ ಸಂಘರ್ಷಕ್ಕೆ ಎಡೆಮಾಡಿಕೊಟ್ಟು ಸಾಮರಸ್ಯ ಎಂಬುದನ್ನು ಮರೆತು ಜಾತಿಗಳಲ್ಲಿ ಉಚ್ಚ ಸ್ಥಾನಕ್ಕಾಗಿ ಬಡಿದಾಡಿಕೊಳ್ಳುತ್ತಿವೆ. ಹೊಲೆಯರಿಗಿಂತ ಮಾದರು ಕನಿಷ್ಠರೆಂದು ಹೇಳಿ, ಮಾದರನ್ನು ಹೊಲೆಯರು ಅಸ್ಪೃಷ್ಯ ದೃಷ್ಠಿಯಿಂದ ನೋಡುವ, ಹೊಲೆಯರನ್ನು ಮಾದರು ದ್ವೇಷ ದೃಷ್ಠಿಯಿಂದ ನೋಡುವ, ಅಡ್ಡಗೋಡೆ ನಿರ್ಮಿಸಿ ಜಗಳ ಹಚ್ಚಿ ಹೊಡೆದವರಿಗೆ ಜೇಲಿಗೆ ಕಳಿಸಿ, ಸತ್ತವರಿಗೆ ಮಣ್ಣಿಗೆ ಕಳಿಸಿ, ಅವರಿಬ್ಬರ ಹೆಂಡಿರು ಮಕ್ಕಳನ್ನು ಇಟ್ಟುಕೊಂಡು ಹೊಲಮನೆ ತಿನ್ನುತ್ತ ಬಂದದ್ದು ಪ್ರತಿ ಊರಿನಲ್ಲು ಕಾಣುತ್ತೇವೆ. ಹೊಲೆಯ ಮಾದರ ಮಧ್ಯ ಜಗಳ ಇಟ್ಟಂತೆ, ಕುರುಬರಲ್ಲಿ ಉಣ್ಣಿಕಂಕಣ ಕುರುಬರ, ಹತ್ತಿಕಂಕಣ ಕುರುಬರ ಮಧ್ಯೆ, ಬೇಡ ಕಬ್ಬಲಿಗರ ಮಧ್ಯೆ, ಕಂಬಾರ ಕುಂಬಾರರ ಮಧ್ಯೆ, ಬಡಿಗ ಅಕ್ಕಸಾಲಿಗರ ಮಧ್ಯೆ, ಗಾಣಿಗ ಹೂಗಾರರ ಮಧ್ಯೆ, ಹೆಚ್ಚುಕಡಿಮೆಯ ಕಿಚ್ಚಿಟ್ಟು ಉರಿಹಚ್ಚಿದ್ದನ್ನು ಕಾಣುತ್ತೇವೆ.26 ಕೇವಲ ಈ ಸಂಘರ್ಷ ಸಮುದಾಯಗಳಲ್ಲಿ ಅಲ್ಲದೆ ಗ್ರಾಮದೇವತೆಗಳಲ್ಲಿಯು ಒಡಮೂಡಿದೆ ಎಂದರೆ ತಪ್ಪಾಗಲಾರದು. ಎಲ್ಲಮ್ಮ ಪ್ರಭಾವಶಾಲಿ ಗ್ರಾಮದೇವತೆಯಾಗಿ ಬೆಳೆಯುತ್ತ ಹೋದ ಹಾಗೆ ಸಮಾಜದ ನಾನಾ ವರ್ಗಗಳಿಂದ ಆಕರ್ಷಿತಳಾದಳು. ಬ್ರಾಹ್ಮಣರಿಗೆ ರೇಣುಕೆಯಾಗಿ, ವೀರಶೈವರಿಗೆ ಸತ್ಯಕ್ಕಳಾಗಿ, ಜೈನರಿಗೆ ಪದ್ಮಾವತಿಯಾಗಿ, ಕೆಳವರ್ಗದವರಿಗೆ ಹುಲಿಗೆಮ್ಮ, ಸವಾರೆಮ್ಮ, ಮಾಪುರ ತಾಯಿಯಾಗಿ ಪರಿವರ್ತನೆಗೊಂಡಳು.27 ಪ್ರಾದೇಶಿಕವಾಗಿ ಭಿನ್ನ ನಾಮಗಳಿಂದ ದೈವವನ್ನು ಗುರುತಿಸವುದು ಉಂಟು. ಅಮ್ಮನು ಉಜ್ಜಿನಿ ಶಿರಸಿ ಗೋಕಾಕ ಅಲ್ಲೂರ ಪ್ರದೇಶಗಳಲ್ಲಿ ಬ್ರಾಹ್ಮಣಳಾದರೆ ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಲಿಂಗಾಯಿತರವಳು. ಹೀಗಾಗಿಯೇ ಈಗಲೂ ಮಾರಮ್ಮ-ದ್ಯಾಮವ್ವ-ಚೌಡಮ್ಮ-ದುರುಗಮ್ಮರಿಗೆ ಮೇಲ್ಜಾತಿಯವರಿಂದ ಅಗ್ರಪೂಜೆಯ ಹಕ್ಕು ಚಲಾಯಿಸಲ್ಪಡುತ್ತದೆ. ಉಜ್ಜಿನಿ ಗೋಕಾಕ ಶಿರಸಿಗಳಲ್ಲಿ ಬ್ರಾಹ್ಮಣರೂ ಅಂತರಗಟ್ಟೆಯಲ್ಲಿ ಲಿಂಗಾಯತರೂ ಈಗಲೂ ತವರುಮನೆ ಶಾಸ್ತ್ರಗಳನ್ನು ನಡೆಸಿಕೊಡುವರು. ಮಾರಮ್ಮ-ದ್ಯಾಮವ್ವರ ಮಿತ್ ನಲ್ಲಿ ದಲಿತ ತರುಣ ಮಾದಿಗನಾದರೆ ಉಜ್ಜಿನಿಯಲ್ಲಿ ಹೊಲೆಯರವನು; ಭಟ್ಕಳ ಸೀಮೆಯಲ್ಲಿ ಕೊರಗರವನು; ಗೋಕಾಕ ಸೀಮೆಯಲ್ಲಿ ಸಮಗಾರ. ತಮಿಳುನಾಡಲ್ಲಿ ಪರಯನರವನು.28  ಗ್ರಾಮದೇವತೆಗಳ ಆಚರಣೆಯಲ್ಲಿ ಬಳಸುವ ಹಲವಾರು ಸಾಮಾಗ್ರಿಗಳಲ್ಲಿ ಹಾಡಿಕಿಯ ಹಿನ್ನೆಲೆಯಲ್ಲಿ ನೂರಾರು ವಾದ್ಯಗಳು-ಹೆಚ್ಚಿನವು ಚರ್ಮದವು-ಇವೆ. ಚರ್ಮವು ಪ್ರಾಣಿಸಾಕಣೆ, ಬಲಿ, ಮಾಂಸಾಹಾರ ಹಾಗೂ ಚರ್ಮಕಾರಿಕೆಗಳನ್ನು ಕೂಡಿಸುವ ಕೊಂಡಿ. ಶಾಕ್ತಲೋಕದಲ್ಲಿ ಪ್ರತಿ ಎಳೆಯೂ ಹಲವು ಎಳೆಗಳ ಜತೆಗೂಡಿ ನೆಯ್ಗೆಯಾಗುತ್ತದೆ.29 ದಲಿತ ಸಮುದಾಯದವರು ಊರಿನ ಯಾವುದೇ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಗಳಲ್ಲಾದರೂ ಹೊಲೆಯರು ಹುರುಮೆ ಬಡಿದು, ಕಹಳೆ ಊದಿ, ಪಂಜು ಹಿಡಿಯಬೇಕು. ಮಾದಿಗರು ಹಾದಿ-ಬೀದಿಯ ಕಸ ಗುಡಿಸಿ, ಗುಡಿ ಗುಂಡಾರಗಳನ್ನು ಬಳಿದು, ಸರಗ ಹಾಕಿ, ತಪ್ಪಡಿ ಬಡಿದು, ಗ್ಯಾಸುಲೈಟು ಹಿಡಿಯಬೇಕು.30 ದಲಿತರು ಬಾರಿಸುವ ಹಲಗೆ, ಡೊಳ್ಳು, ಊರುಮೆ ಇತ್ಯಾದಿಗಳಿಂದ ದೇವಿ, ದೇವಿಯನ್ನು ಹೊತ್ತ ಪೂಜಾರಿ ಸಂತೃಪ್ತರಾಗಿ ಕುಣಿಯುತ್ತಾರೆ. ಈ ಶಬ್ದಕ್ಕೆ ಅಸ್ಪೃಷ್ಯತೆಯ ಗಡಿ ಇಲ್ಲದಿರುವಾಗ ದಲಿತ ವ್ಯಕ್ತಿ ದೇವಿಯ ಸ್ಪರ್ಶಕ್ಕೆ ಅಸ್ಪೃಷ್ಯನಾಗುತ್ತಾನೆ. ಅಲ್ಲದೆ ದೇವಾಲಯ ಪ್ರವೇಶಕ್ಕೂ ಸಹ ಅಸ್ಪೃಶ್ಯತನ ಅಥವಾ ಎಲ್ಲೆಯನ್ನು ಜಾತಿ ಆಧಾರಿತವಾಗಿ ರಚಿತವಾಗಿರುವುದನ್ನು ಗ್ರಹಿಸುವ ಅಗತ್ಯತೆ ಇದೆ. ಈ ಕೆಳಕಂಡ ಕೋಷ್ಠಕದಲ್ಲಿ ದೇವಿಯ ದರ್ಶನ ಪಡೆಯಲು ಮೇಲ್ವರ್ಗ ನಿಗಧಿಪಡಿಸಿದ ಜಾತಿ ಆಧಾರಿತ ಸ್ಥಾನಮಾನಗಳನ್ನು ಸೂಚಿಸುತ್ತದೆ.

ಮೇಲ್ವರ್ಗದವರು ಗೌಡ ಕುಲಕರ್ಣಿ

ಮೇಲ್ಜಾತಿಯವರು ಸ್ವಾಮಿ, ಆಚಾರಿ

ಗರ್ಭಗುಡಿಯಲ್ಲಿ

 

 

 

ಮಧ್ಯಮ ಜಾತಿಯವರು: ಕಂಬಾರ, ಕುಂಬಾರ

ಮಧ್ಯಮ ವರ್ಗದವರು ಬಡಿಗ, ಹೂಗಾರ

ರಂಗಮಂಟಪದಲ್ಲಿ

 

 

 

ಕೆಳಜಾತಿಯವರು ಕುರುಬ, ಕಬ್ಬಲಿಗ

ಕೆಳವರ್ಗದವರು ಬೇಡ, ಅಗಸ

ಬಾಗಿಲದಲ್ಲಿ

 

 

 

ಪಂಚಮರು : ಹೊಲೆಯ, ಮಾದಿಗ

ಅಸ್ಪೃಶ್ಯರು ಚಾಂಡಾಲ

ಬಾಗಿಲದ ಹೊರಭಾಗದಲ್ಲಿ31

 

           

                   ಇನ್ನೂ ದೇವಿಯ ಮೆರವಣಿಗೆಯ ಸಂದರ್ಭದಲ್ಲಿ ದೇವಿಗೂ ಮುಂಚಿತವಾಗಿ ಬೀದಿಯಲ್ಲಿ ಸಾಗುವ ವಾಧ್ಯ ನುಡಿಸುವ ದಲಿತನ ಪಾದ ಸೋಕಿದ ಮಣ್ಣಿನ ಮೇಲೆ ದೇವತೆ ಕಾಲಿಟ್ಟಾಗ ಮೈಲಿಗೆ ಉಂಟಾಗಲಿಲ್ಲವೇಕೆ? ಒಂದು ವೇಳೆ ಇಂತಹ ಮಡಿಯಿಂದ ದೂರವಿಡಲು ಮಡಿವಾಳರು ದೇವಿಯ ಮೆರವಣಿಗೆಯ ಉದ್ದಕ್ಕೂ ಮಡಿ ಬಟ್ಟೆಯನ್ನು ಹಾಸುತ್ತಾ ಮೈಲಿಗೆಯಿಂದ ಮುಕ್ತಗೊಳಿಸಿದವರು. ಆದರೆ ಈ ಮಡಿವಂತರುಗಳಿಗೆ ದೇವಿಯ ಸ್ಪರ್ಶಕ್ಕೆ ಅನರ್ಹರಾಗಿ ಮೈಲಿಗೆಯಲ್ಲಿ ಅಂತ್ಯವಾಗುತ್ತದೆ.

ದೇವಸ್ಥಾನ ಅಥವಾ ದೇವಿಯ ಮೇಲೆ ದಲಿತ ಅಥವಾ ತಳಸಮುದಾಯದ ವ್ಯಕ್ತಿಯ ನೆರಳು ಸೋಕಿದರೆ ಅಸ್ಪೃಶ್ಯತನ ಮೂಡುವಾಗ ದೇವಾಲಯಕ್ಕೆ ಸುಣ್ಣ-ಬಣ್ಣ ಬಳೆದು ಅಲಂಕಾರ ಮಾಡಿದವರು, ಆವರಣ ಸ್ವಚ್ಚಗೊಳಿಸಿದವರು ಯಾರು? ದೇವಾಲಯದ ಆವರಣಕ್ಕೆ ಕಾಲಿಟ್ಟ ದಲಿತ-ತಳಸಮುದಾಯದ ವ್ಯಕ್ತಿಯಿಂದ ದೇವಿ ಮೈಲಿಗೆ ಆಗುವುದಿಲ್ಲವೆ? ಸಿಡಿ ಆಡುವುದರಿಂದ ದೇವಿ ಸಂತೃಪ್ತಿಯಾಗುತ್ತಾಳೆ ಎಂದರೆ ಸಿಡಿ ಆಡುವ ವ್ಯಕ್ತಿ ದಲಿತ ಅಥವಾ ತಳಸಮುದಾಯದ ವ್ಯಕ್ತಿಯಾಗಿದ್ದಲ್ಲಿ ದೇವಿಯ ಸ್ಪರ್ಶಕ್ಕೆ ಅಸ್ಪೃಷ್ಯರಾಗಿದ್ದು ಮಾತ್ರ ಹೇಗೆ? ಪ್ರಶ್ನೆ ಕಾಡಲೇಬೇಕಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದಿಂದ 1.5 ಕಿ.ಮೀ ದೂರದಲ್ಲಿ ಇರುವ ಒಂದು ಜಮೀನನಲ್ಲಿ ಇರುವ ಶಿಲ್ಪವು ಬಹುಶಃ ವಿಜಯನಗರ ಅರಸರ ಕಾಲದ್ದಾಗಿರಬಹುದು. ಸ್ಥಳೀಯರು ಇದನ್ನು ಬೊಂಬೆ ಕಲ್ಲು ಎಂದು ಗುರುತಿಸುತ್ತಾರೆ. ಈ ಶಿಲ್ಪದಲ್ಲಿರುವಂತೆ ಕೋಣನ ತಲೆಯುಳ್ಳ ವ್ಯಕ್ತಿಯನ್ನು ವಧೆ ಮಾಡುತ್ತಿರುವ ಸ್ತ್ರೀ ದೇವತೆಯನ್ನು ಕಾಣಬಹುದು. ಇದು ಈಗಾಗಲೆ ರಚನೆಗೊಂಡಿರುವ ಐತಿಹ್ಯಗಳಂತೆ ರಾಕ್ಷಸನನ್ನು ಸಂಹಾರ ಮಾಡುವ ಶಕ್ತಿ ದೇವಿಯಾಗಿ ಹೊರಹೊಮ್ಮುತ್ತಿರಬಹುದು. ಆದರೆ ಕಾಡುವ ಕೆಲವು ಗೊಂದಲಗಳಲ್ಲಿ ವಧೆಯಾಗಲ್ಪಡುತ್ತಿರುವ ಕೋಣನ ತಲೆ ಹೊಂದಿರುವ ವ್ಯಕ್ತಿಯ ಕೈಯಲ್ಲಿ ಕತ್ತಿ ಮತ್ತು ಗುರಾಣಿ ಇವೆ. ಕೋಣದ ತಲೆಯ ಮೇಲೆ ಕಿರೀಟವಿದೆ. ಬಹುಶಃ ಇದು ಚರಿತ್ರೆಯಲ್ಲಿನ ಆರ್ಯ ದ್ರಾವಿಡ ಕಲ್ಪನೆಯನ್ನು ಸೂಚಿಸುತ್ತದೆಯೇ? ಅಥವಾ ಪಶುಸಂಗೋಪಕನನ್ನು ಕೊಂದು ಪಶುಗಳನ್ನು ಕಳ್ಳತನ ಮಾಡಿದ್ದರ ಬಗ್ಗೆ ತಿಳಿಸುತ್ತದೆಯೇ? ಚೆನ್ನಣ್ಣ ವಾಲೀಕಾರರವರು ತಮ್ಮ ಸಂಶೋಧನಾ ಕೃತಿಯಲ್ಲಿ ಮಹಿಷಾಸುರ ಮರ್ಧಿನಿ(ಚಾಮುಂಡೇಶ್ವರಿ) ಬ್ರಾಹ್ಮಣರ ದೇವತೆ ಎಂದು ಉಲ್ಲೇಖಿಸಿದ್ದಾರೆ.32 ಚಾಮುಂಡೇಶ್ವರಿ ವೈದಿಕ ನಿರೂಪಣೆಗೆ ಒಳಪಟ್ಟಾಗ ಬ್ರಾಹ್ಮಣ ನಿರೂಪಣೆಯಲ್ಲಿ ವೇದವಿರೋಧಿ ಅಸುರನಾಗುತ್ತಾನೆ ಎಂಬುದಾಗಿ ಗುಂಥೆರ್ ಸೊಂಥೈಮರ್ ಅಭಿಪ್ರಾಯ ಪಡುತ್ತಾರೆ.33 ಸಿದ್ಧಲಿಂಗಯ್ಯನವರು ತಮ್ಮ ಗ್ರಾಮದೇವತೆ ಎಂಬ ಸಂಶೋಧನಾ ಕೃತಿಯಲ್ಲಿ ಈ ರೀತಿ ಉಲ್ಲೇಖಿಸಿದ್ದಾರೆ. ಕೋಣ ದಲಿತನಾಗಿದ್ದರೆ ದೇವತೆ ಬ್ರಾಹ್ಮಣ ಜಾತಿಯವಳು...., ಕೋಣ ಗಂಡ, ವೀರಗಾರರು ಮಕ್ಕಳು, ಗಟೆಯು ಅತ್ತೆ..., ಕೋಣವನ್ನು ಕಡಿದಾಗ ಆಸಾದಿಯು ಶಾಸ್ತ್ರವನ್ನು ಮಾಡಿ ಗಟೆಯಲ್ಲಿ ಇರುವ ಹೆಂಡವನ್ನು ಕುಡಿದು ದೇವತೆಯನ್ನು ಬಯ್ಯುತ್ತಾನೆ. ಅದು ಹೀಗಿದೆ:

ನೀನು ಹಗಲು ಹಾದರಗ್ತಿತ್ಯಲ್ಲೇ

ಇರುಳು ಚಂಚಲಗಿತ್ಯಲ್ಲೇ

ನೀನು ಗಂಡನ ಕೊಂದ್ಯಲ್ಲೇ

ನೀನು ಗ್ರಾಮದ ಮಾರ್ಯಲ್ಲೇ

ಹೀಗೆ ಹೇಳಿ ದೇವತೆಯ ಕಥೆಯನ್ನು ಹೇಳುತ್ತಾನೆ.34 ತೌಲನಿಕವಾಗಿ ಗ್ರಹಿಸುವುದಾದರೆ ಮೇಲ್ವರ್ಗ-ಕೆಳವರ್ಗಗಳ ತಿಕ್ಕಾಟದಲ್ಲಿ ಕೆಲವು ಅವಿನಾಭಾವ ಸಂಬಂಧಗಳು ಅಂರ್ತಗತವಾದಂತೆ ಇದೆ. ಪ್ರಾದೇಶಿಕವಾಗಿ ಮಾಹಿಷಿಕ, ಮಹಿಷಿಕ, ಮಾಹಿಷ್ಮತಿ, ಮಹಿಷಮಂಡಲ, ಮಹಿಷರಾಷ್ಟ್ರ, ಮಹಿಷವಿಷಯ35 ಮಹಿಷಾಪಟ್ಟಣ ಎಂಬುವುದು ಈಗಿನ ಮೈಸೂರಿನ ಪುರಾತನ ಹೆಸರಾಗಿದ್ದಲ್ಲಿ ಮಹಿಷಾ ಎಂದರೆ ಕೋಣ ಎಂದಾಗುತ್ತದೆ. ಕೋಣಗಳುಳ್ಳ ಪ್ರದೇಶಗಳನ್ನು ಆಳುತ್ತಿದ್ದ ವ್ಯಕ್ತಿಯೇ ಮಹಿಷಾಸುರನಾಗಿ ಇವನ್ನು ಸಂಹರಿಸಿದ ಸ್ತ್ರೀ ಚಾಮುಂಡೇಶ್ವರಿಯಾಗಿ ಮೇಲ್ವರ್ಗ ಮತ್ತು ಕೆಳವರ್ಗದ ಚಿಂತನೆಗಳು ಮೂಡಿರಬಹುದಲ್ಲವೇ? ಮೇಲ್ವರ್ಗ ಎಂಬುವುದು ತಳಸಮುದಾಯಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಮೇಲ್ವರ್ಗ ಸ್ತ್ರೀಯನ್ನು ಮೋಹಿಸಿ, ಪ್ರೇಮಿಸಿ, ವಿವಾಹ, ಸಂಭೋಗಿಸಿದಲ್ಲಿ ನಿಮ್ಮನ್ನು ವಧೆ ಮಾಡದೇ ಬಿಡುವುದಿಲ್ಲ ಎಂಬ ಕಲ್ಪನೆಯೇ? ಈ ಸಂಶಯಗಳು ಹುಟ್ಟಲು ಕಾರಣ ಶಾಕ್ತದೇವತೆಯ ಬಲಿ, ಸಿಡಿ, ಗಾವು, ಕೆಂಡ ಹಾಯುವಿಕೆ, ಚಾಟಿ ಹೊಡೆತ, ಕತ್ತಿ ಹೊಡೆತ ಮುಂತಾದ ಕಾರ್ಯಗಳಲ್ಲಿ ತಳಸಮುದಾಯಗಳೇ ಭಾಗವಹಿಸುತ್ತವೆ. ಹಲವಾರು ಶಾಕ್ತ ದೇವಿಗಳಿಗೆ ಬಲಿ ನೀಡುವ ಪದ್ಧತಿ ಇದ್ದು, ಬಲಿ ಪದ್ಧತಿಯಿಂದ ದೇವಿ ಸಂತೃಪ್ತಳಾಗುವುದಾದರೆ ಮೇಲ್ವರ್ದದವರು ಏಕೆ ಬಲಿ ಕಾರ್ಯಮಾಡದೇ ತಳಸಮುದಾಯಗಳಿಗೆ ಆಜ್ಞೆಯನ್ನು ಇಡಲಾಗಿದೆ. ಕೇವಲ ಪೂಜಾರಿಕೆಗೆ ಮಾತ್ರ ತಮ್ಮನ್ನು ಒಗ್ಗೂಡಿಸಿಕೊಂಡಿರುವಾಗ ಕೆಲ ಆಚರಣೆಗಳಿಂದ ದೂರ ಉಳಿಯುವ ಹುನ್ನಾರಗಳೇನು? ಮಾತಂಗಿಗೆ ಮಾದಿಗರ, ಹುಲಿಗೆಮ್ಮನಿಗೆ ಬೆಸ್ತರ, ಮಾಪುರ ತಾಯಿಗೆ ದಲಿತರ, ಅರೋಲಿ ಹುಲಿಗೆಮ್ಮನಿಗೆ ವಡ್ಡರ, ಉಡುಸಲಮ್ಮನಿಗೆ ಮಡಿವಾಳರ, ಹೆಬ್ಬಾರಮ್ಮನಿಗೆ ಹೊಲೆಯರ, ಗಂಗಮ್ಮನಿಗೆ ಬೆಸ್ತರ, ದ್ಯಾಮವ್ವನಿಗೆ ಬಡಿಗೇರರ ಪೂಜೆಯಿದೆ. ದೈವ, ವರ್ಗ ಮತ್ತು ಜಾತಿಗಳ ಈ ಮುಕ್ಕೂಟ ಸಂಬಂಧ ಪ್ರಾದೇಶಿಕವಾಗಿ ಬದಲಾಗುತ್ತದೆ. ಚಾರಿತ್ರಿಕ ಪಲ್ಲಟಗಳೂ ಈ ಸಮೀಕರಣವನ್ನು ಬದಲಿಸುತ್ತವೆ.36 ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬರುವ ಅಂತರಗಟ್ಟೆಯಲ್ಲಿ ಒಂದೇ ಪೌಳಿಯೊಳಗೆ ಮೂಡುಮುಖಕ್ಕೆ ದೊಡ್ಡಗುಡಿಯಲ್ಲಿ ಅಂತರಗಟ್ಟೆಮ್ಮ, ಉತ್ತರ ಮುಖಕ್ಕೆ ಚಿಕ್ಕಗುಡಿಯಲ್ಲಿ ಮಾತಂಗಿ ಮತ್ತು ಮರಾಳಮ್ಮ. ಅಂತರಗಟ್ಟೆಮ್ಮನ ಪೂಜೆಗೆ ಉಪ್ಪಾರರು, ಮಾತಂಗಿಗೆ ಮಾದಿಗರು, ಮರಾಳಮ್ಮನಿಗೆ ಹೊಲೆಯರಾಗಿದ್ದು, ಒಂದೇ ಆವರಣದಲ್ಲಿರುವ ದೈವಗಳು ಜಾತಿವಾರು ಹಂಚಿಹೋಗಿವೆ.37

ಮೇಲ್ವರ್ಗದವರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಳಸಮುದಾಯಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಮೇಲ್ವರ್ಗ ರೂಪಿಸಿದ ಸಂಚು ಎಂದು ಗ್ರಹಿಸಿಕೊಳ್ಳಬಹುದೆ? ಇದಕ್ಕೆ ಉದಾಹರಣೆ ಎಂದರೆ ಹೊನ್ನಾಳಿ ಭಾಗದಲ್ಲಿರುವ ‘ನಿನ್ನ ಚರಗ ಚೆಲ್ತೀನಿ’ ‘ನಿನ್ನ ಕಡದು ಚರಗಚಲ್ಲ’ ಎಂಬ ಬೆದರಿಕೆಗಳು ಈ ಹಿನ್ನೆಲೆಯಿಂದ ಹುಟ್ಟಿದವು.38 ಇನ್ನೂ ಕದ್ದು ವಿದ್ಯೆ ಕಲಿತ ಅಥವಾ ಬ್ರಾಹ್ಮಣ ಹುಡುಗಿಯನ್ನು ಪ್ರೇಮಿಸಿದ ದಲಿತನಿಗೆ ವಿಧಿಸಲಾದ ಮರಣದ ಶಿಕ್ಷೆಗೆ ಕಟ್ಟಿರುವ ಕಥನರೂಪ, ದಲಿತರನ್ನು ದಲಿತರಿಂದಲೇ ಕೊಲ್ಲಿಸುವ ಮೇಲ್ವರ್ಗದವರ ಜಾಣತನ.39ಆಗಿರಬಹುದಲ್ಲವೆ. ಕಬ್ಬಾಳಮ್ಮ ಜಾತ್ರೆಯಲ್ಲಿ ದಲಿತರಿಗೆ ತಲೆಮೇಲೆ ಕೆಂಡಸುರಿಯುವುದು ಜಾತಿಕಟ್ಟನ್ನು ಮುರಿದಿದ್ದಕ್ಕೆ ಕೊಡುತ್ತಿರುವ ಶಿಕ್ಷಾಭಿನಯವೇ? ಶಿರಸಿಯಲ್ಲಿ ಮಾತಂಗಿ ಚಪ್ಪರಕ್ಕೆ ಬೆಂಕಿಹಾಕುವ ಆಚರಣೆ ಏನನ್ನು ಸಂಕೇತಿಸುತ್ತದೆ? ಜಲಸಂಸ್ಕೃತಿಯ ಶಾಕ್ತದಲ್ಲಿ ಈ ಬೆಂಕಿಯ ಪ್ರಸಕ್ತಿ ಏನನ್ನು ಪ್ರತಿನಿಧಿಸುತ್ತದೆ? ಇದು ಮೇಲ್ಜಾತಿ ಮಹಿಳೆಗೆ ಮಾಡಿಕೊಳ್ಳುವ ಪ್ರಾಯಶ್ಚಿತ್ತವೊ ದಲಿತರಿಗೆ ವಿಧಿಸಿದ ಶಿಕ್ಷೆಯ ಭಾಗವೊ? ಪ್ರಶ್ನೆ ಕಾಡದೇ ಇರದು-ಉತ್ತರ ಹುಡುಕಬೇಕಿದೆ.40 ಹೊನ್ನಾಳಿಯಲ್ಲಿ ಕೋಣ ಕಡಿದ ಬಳಿಕ ಅಮ್ಮನನ್ನು ‘ಮುಂಡಮೋಚು’ವ ಪದ್ಧತಿಯಲ್ಲಿ ‘ನೋಡವ್ವಾ ನಂತಾಯಿ, ನಿನ್ನ ಗಂಡ ಸತ್ತೋದ. ನೀನು ಒಬ್ಬಳೇ ಆದೆ. ಎಲ್ಯಾರ ಹುಡಗನ್ನೋಡಿ ಇನ್ನೆಲ್ಡ ವರ್ಷಕ್ಕೆ ಮಾಡಾನ ತಗಳವ್ವ’ ಎಂದು ಸಮಾಧಾನ ಪಡಿಸುವ ನಾಟಕೀಯ ಪ್ರಸಂಗವಿದೆ.41 ಇನ್ನೂ ತುಮಕೂರು ಸೀಮೆಯಲ್ಲಿರುವ ಚೋಮನ ಕುಣಿತವೂ ವಿಲೋಮ ವಿವಾಹ ಪ್ರಕರಣದಲ್ಲಿ ಕೊಡಲಾದ ಶಿಕ್ಷಾರೂಪದಂತಿದೆ. ಗಂಡ ಹೊಲೆಯನೆಂದು ಗೊತ್ತಾದಾಗ ಶಾನುಭೋಗರ ಮಗಳು ಗಂಡ-ಮಕ್ಕಳನ್ನು ಕೊಲ್ಲುವುದಿಲ್ಲ. ಅವರು ಕೋಣ ಮತ್ತು ಚೋಮರಾಗಿ ಹುಟ್ಟುವಂತೆ ಶಪಿಸುವಳು.42 ಕೋಣವಾಗಿ ಹುಟ್ಟುವಂತೆ ಶಪಿಸಿದ ಸ್ತ್ರೀ ಕೋಣವನ್ನೇ ಬಲಿ ಪಡೆಯಬೇಕೆಂದು ಆಶಿಸಿದ್ದರ ಮೂಲ ಕಲ್ಪನೆ ಏನು? ಹಿಂದೂ ಪರಂಪರೆಯಲ್ಲಿ ಮುತೈದೆಗೆ ಇರುವ ಘನತೆ, ಗೌರವ, ಸಂಪನ್ನಗಳು ಒಬ್ಬ ವಿಧವೆಗೆ ಇಲ್ಲ ಎಂದು ತಿಳಿದ ಮೇಲೂ ಗಂಡನನ್ನು ಕೊಂದು ಅಥವಾ ಶಾಪ ನೀಡಿ ತದನಂತರ ದೈವತ್ವಕ್ಕೆ ಏರುವುದು ಸಾಂಸ್ಕೃತಿಕ ರಾಜಕಾರಣದ ಚಕ್ರದಂತಿದೆ.

ಮೇಲ್ವರ್ಗದವರಾದ ಊರಿನ ಆಡಳಿತಾಧಿಕಾರಿಗಳು ತಮ್ಮ ಜನಬಲ, ಧನಬಲದಿಂದ, ಬಡಪೂಜಾರಿಯನ್ನು ಅಂಜಿಸಿ ತಮ್ಮಂತೆ ಹೇಳಿಕೆ ಮಾಡಿಸಿ, ನೀತಿ ನಿಯಮ ರಚಿಸಿ, ಉತ್ಸವ ಪೂಜೆ ಮಾಡಿಸಿದರು. ಕೆಳವರ್ಗದ ಜನರ ಹೆಣ್ಣು, ಹೊನ್ನು ಮಣ್ಣನ್ನು ಲೂಟಿ ಮಾಡಿದರು. ತಮ್ಮ ವರ್ಣ, ವರ್ಗ ಮತ್ತು ವಂಶಪಾರಂಪರ್ಯ ಅಧಿಕಾರವನ್ನು ಉಳಿಸಿಕೊಂಡು ಬಂದರು. ಗ್ರಾಮದೇವತೆಯ ಹೆಸರಿನಲ್ಲಿ ಆ ಜನ ಜಾತೀಯತೆಯ ಸ್ಥಿರೀಕರಣ, ಅನೈಕ್ಯತೆಯ ಬೆಳವಣಿಗೆ, ವ್ಯಾಜ್ಯ ಕಲಹ ಮೌಢ್ಯಗಳನ್ನು ಬೆಳಸಿದರು, ಅಸ್ಪೃಶ್ಯತಾ ಭಾವ ಬೆಳಸಿದರು.43 ಬಹುಶಃ ದಲಿತ ಅಥವಾ ತಳಸಮುದಾಯದ ಐತಿಹ್ಯಗಳು ಮೇಲ್ಜಾತಿಯ ಸಾಮಾಜಿಕ ಗಡಿಯನ್ನು ದಾಟಿಬರಲು ಪ್ರಯತ್ನಿಸುವ ದಲಿತ ಅಥವಾ ತಳಸಮುದಾಯವನ್ನು ಹತಮಾಡುವ ಸಂಚಿಕೆಯಾಗಿ ರೂಪುಗೊಂಡಿರಬಹುದು. ದಲಿತರನ್ನು ಕೋಣಕ್ಕೆ ಸಮೀಕರಿಸಿ ಕೊಲ್ಲುವುದರ ಜಾತಿದ್ವೇಷ ಮಾತ್ರವಿರದೆ, ಸಮೃದ್ಧಿಯ ಆಶಯವೂ ಇದ್ದಿರಬಹುದು. ಸಮೃದ್ಧಿ ಆಶಯಕ್ಕೂ ನರಬಲಿ ಮತ್ತು ಪ್ರಾಣಿಬಲಿಗೂ ಶಾಕ್ತಲೋಕದಲ್ಲಿ ಹತ್ತಿರದ ಸಂಬಂಧವಿದೆ. ಸಮೃದ್ಧಿಯ ಸಂಕೇತವಾಗಿರುವ ಜೋಕುಮಾರ ಸ್ವಾಮಿಯನ್ನು ಕೊಂದು, ಸುಟ್ಟಬೂದಿಯನ್ನು ಹೊಲಗಳಿಗೆ ಚೆಲ್ಲಲಾಗುತ್ತದೆ. ಕೋಣನ ರಕ್ತವನ್ನು ಬೀಜದೊಂದಿಗೆ ಬೆರೆಸಿ ಚರಗವಾಗಿ ಭೂಮಿಗೆ ಚೆಲ್ಲುವಂತೆ, ದಲಿತ ಪುರುಷರನ್ನು ಕೊಂದು ನೆಲದಲ್ಲಿ ಹೂಳಿದರೆ ಸಿರಿವಂತಿಕೆ ಬರುತ್ತದೆ ಎಂಬ ನಂಬಿಕೆಯೂ ಇದೆ. ಕೆರೆಒಡ್ಡನ್ನು ಒಡೆಯದೆ ನಿಲ್ಲಿಸಲು ನರಬಲಿ ಹೋದವರಲ್ಲಿ ಹೆಚ್ಚಿನವರು ಮಾದಿಗರು.44 ಪ್ರಸ್ತುತದವರೆಗೂ ಕಂಡುಬರುವ ದೇವದಾಸಿ, ಜೋಗತಿ, ಮಾತಂಗಿ ಮುಂತಾದವರೆಲ್ಲ ಕೆಳಸಮುದಾಯದವರೇ ಆಗಿರುವುದು ವಿಪರ್ಯಾಸ.  ಈ ಮೇಲಿನ ಐತಿಹ್ಯ, ಮೌಖಿಕ ಆಕರ, ಕಥೆಗಳು, ಹೇಳಿಕೆಗಳನ್ನು ಗಮನಿಸಿದಾಗ ಮೇಲ್ವರ್ಗ ಮತ್ತು ಕೆಳವರ್ಗಗಳ ಮಧ‍್ಯೆ ಒಂದು ತಿಕ್ಕಾಟವಿರುವುದು ಸ್ಪಷ್ಟೀಕರಿಸುವಿಕೆಯತ್ತ ನಿಲುವುಗಳು ತಳೆಯುತ್ತಿವೆ.

ಸಮಾರೋಪ :

ಮನುಕುಲವನ್ನೇ ಸಂಸ್ಕೃತಿ ಗ್ರಹಿಕೆಯಲ್ಲಿ ಮೇಲ್ವರ್ಗ ಜಾದೂಗಾರರಾಗಿ ಕೆಳವರ್ಗವನ್ನು ಬುದ್ಧಿಮಾಂಧ್ಯರನ್ನಾಗಿ ಪರಿವರ್ತಿಸಿದೆ. ಇಲ್ಲಿ ಉದ್ಭವಿಸುವ ನೂರಾರು ಪ್ರಶ್ನೆಗಳಿಗೆ ಸರಳವಾದಂತಹ ಉತ್ತರಗಳಿದ್ದಂತೆ ಇಲ್ಲ. ಶಾಕ್ತ ದೇವತೆಗಳ ನೂರಾರು ರೂಢಿ, ಆಶಯ, ಆಚರಣೆಗಳು ಅಸ್ಪಷ್ಟ ರೇಖೆಯನ್ನು ಒಳಗೊಂಡಿವೆ. ಅದು ಭಕ್ತಿಭಾವದ ಸಮುದಾಯಕ್ಕೆ ಹಲವುಬಾರಿ ಗೊತ್ತಿರುವುದಿಲ್ಲ. ಇಂತಹ ಅಸ್ಪಷ್ಟ ರೇಖೆಯನ್ನು ವಿದ್ವಾಂಸರು ಬಿಡಿಸಿದರೂ ಅದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲವೆನ್ನಬಹುದು. ವರ್ಗಗಳ ಮತ್ತು ಸಾಮಾಜಿಕ ಸಂಘರ್ಷದ ಚಾರಿತ್ರಿಕತೆಯನ್ನು ಐತಿಹ್ಯ, ಪೌರಾಣಿಕಗಳ ಮೂಲಕ ಸ್ಮೃತಿ ಪಲ್ಲಟಗಳಿಗೆ ತಂದುಕೊಡುವ ಶಾಕ್ತಪಂಥದಲ್ಲಿ ದೇವತೆ-ರಾಕ್ಷಸರ, ಮೇಲ್ವರ್ಗ-ಕೆಳವರ್ಗ, ಪುರುಷ-ಸ್ತ್ರೀ ಅನೇಕ ಬಾರಿ ತೀವ್ರ ಮುಖಾಮುಖಿಯಾಗುತ್ತವೆ. ಇವುಗಳು ಮುಕ್ತತೆ-ದಮನತೆ, ವಾಸ್ತಲ್ಯ-ವೈಶಮ್ಯ, ಯುದ್ಧ-ಒಪ್ಪಂದ, ಸಂಭ್ರಮ-ಸೂತಕ, ವರ-ಶಾಪ ಮುಂತಾದ ಹಲವು ಭಿನ್ನ ಆಶಯಗಳನ್ನು ಒಳಗೊಂಡಿರುತ್ತವೆ. ಧಾರ್ಮಿಕ ಗ್ರಹಿಕೆಯ ಭಾಗವಾಗಿರುವ ಹಲವಾರು ಐತಿಹ್ಯಗಳು ಮತ್ತು ಅವುಗಳ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವುದು ಸವಾಲು ಸಂಗತಿ. ಸಮಾಜದಲ್ಲಿ ಅಡಗಿರುವ ವರ್ಗ, ಜಾತಿ, ಲಿಂಗ ತಾರತಮ್ಯಗಳಿಂದ ಕೂಡಿರುವ ಸಾಮಾಜಿಕ ವ್ಯವಸ್ಥೆಗಳಲ್ಲಿ ಐತಿಹ್ಯಗಳು ಚಾರಿತ್ರಿಕವಾಗಿ ಜರುಗಿದ ಸಂಘರ್ಷದ ಸ್ಮೃತಿಗಳಾಗಿ ರೂಪುಗೊಂಡಿದ್ದು, ಅವುಗಳು ಭಯ-ಭಕ್ತಿ-ಮನೋರಂಜನೆ ಮುಂತಾದ ಅಂಶಗಳು ಸೇರಿ ಸಂಘರ್ಷದ ಸ್ಮೃತಿಗಳಿಗೆ ಪರದೆ ಎಳೆದಿರಬಹುದು. ರಹಮತ್ ತರೀಕೆರೆಯವರು ತಮ್ಮ ಕರ್ನಾಟಕ ಶಾಕ್ತಪಂಥ ಕೃತಿಯಲ್ಲಿ ಹೇಳುವ ಪರಿ ಹೀಗೆ. ಶಾಕ್ತಪಂಥವನ್ನು ಗತ-ವರ್ತಮಾನ, ಪುರಾಣ-ವಾಸ್ತವ, ದರ್ಶನ-ಆಚರಣೆಗಳ ನಡುವೆ ಅರ್ಥಮಾಡಕೊಳ್ಳುವ ಅನಿವಾರ್ಯತೆ ಸೃಷ್ಟಿಸಿವೆ; ಗತದ ಸಂಗತಿಯೊಂದು ಕಾಲಘಟ್ಟಗಳಲ್ಲಿ ಹಾಯುತ್ತ, ಆಯಾ ಕಾಲ ಪ್ರದೇಶ ಸಮುದಾಯಗಳ ಆಶೋತ್ತರಗಳನ್ನು ಒಳಗೊಳ್ಳುತ್ತ ಪಡೆದಿರುವ ರೂಪಾಂತರ ಅರಿಯಲು ಹೊಸ ನೋಟಕ್ರಮವನ್ನು ಹುಡುಕಿಕೊಳ್ಳಬೇಕೆಂದು ಧ್ವನಿಸುತ್ತಿವೆ. ಒಟ್ಟಾರೆಯಾಗಿ ಕೇವಲ ಗ್ರಾಮದೇವತೆಗಳ ಆಚರಣೆಗಳಲ್ಲಿ ಅಲ್ಲದೆ ಸಾಮಾಜಿಕವಾಗಿ ಹಲವಾರು ಆಚರಣೆಗಳಲ್ಲಿ ಮೇಲ್ವರ್ಗ ಎಂಬುವುದು ಯಜಮಾನಿಕೆಯ ಸ್ಥಾನವನ್ನು ಪಡೆದಿದೆ. ಮೇಲ್ವರ್ಗ ಹೇಳಿದ ಹಾಗೆ ಕೇಳುವ ಪರಿಪಾಠವನ್ನು ಕೆಳವರ್ಗಕ್ಕೆ ರೂಢಿಗತ ಮಾಡಿಸಿದಂತಿದೆ. ಅದನ್ನು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಚಿತ್ರಿಸಿ ಮನಃಪಲ್ಲಟಗಳಲ್ಲಿ ಅಚ್ಚಾಗಿ ಉಳಿಯುವಂತೆ ಮಾಡಿ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡಿವೆ. ಒಟ್ಟಾರೆಯಾಗಿ ಸಾಂಸ್ಕೃತಿಕ ರಾಜಕಾರಣದ ಭಾಗವಾಗಿ ಗ್ರಹಿಸುವ-ನೋಡುವ ಅಗತ್ಯತೆ ಇದೆ.

ಟಿಪ್ಪಣಿಗಳು:

  1.     ರಹಮತ್ ತರೀಕೆರೆ., (2004), “ಸಾಂಸ್ಕೃತಿಕ ಅಧ್ಯಯನ”, ಅಭಿನವ ಪ್ರಕಾಶನ, ಬೆಂಗಳೂರು. ಪು. 05..
  2.     ವಿಜಯ್ ಪೂಣಚ್ಚ ತಂಬಂಡ., (2017) ವರ್ಗದಿಂದ ಸಂಸ್ಕೃತಿಯೆಡೆಗೆ ಸಬಾಲ್ಟರ್ನ್ ಅಧ್ಯಯನ ಮಾಕ್ಸ್ರಿಸ್ಟ್ ಮತ್ತು ಮಾಕ್ಸ್ರಿಸ್ಟೇತರ ವಿಮರ್ಶೆಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು. 156.
  3.     ರಹಮತ್ ತರೀಕೆರೆ., (2017) ಕರ್ನಾಟಕ ಶಾಕ್ತಪಂಥ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು. 01
  4.     ಅದೇ., ಪು. 07.
  5.     ಕಲವೀರ ಮನ್ವಾಚಾರ., (2020), ಮಾತೃದೇವತೆ ಉಗಮ ಮತ್ತು ವಿಕಾಸ, ಕಾಲುದಾರಿ ಪ್ರಕಾಶನ, ಬೆಂಗಳೂರು. ಪು. 136.
  6.     ರಹಮತ್ ತರೀಕೆರೆ., (2017), ಪೂರ್ವೋಕ್ತ, ಪು. 186.
  7.     ಅದೇ., ಪು. 180.
  8.     ಎಸ್.ಆರ್.ಭಟ್., (2020), ಪ್ರಾಚೀನ ಭಾರತದಲ್ಲಿ ಜನಜೀವನ, ನವಕರ್ನಾಟಕ ಪ್ರಕಾಶನ, ಬೆಂಗಳೂರು. ಪು. 09.
  9.     ಚೆನ್ನಣ್ಣ ವಾಲೀಕಾರ., (1998), ವಾಲೀಕಾರ ಚೆನ್ನಣ್ಣನ ಹೈದರಾಬಾದ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ, ಅಪ್ಪಾ ಸಾಹೇಬ ವಾಲೀಕಾರ, ದಲಿತ ಬಂಡಾಯ ಸಾಹಿತ್ಯ ಪ್ರಕಾಶನ ಕೇಂದ್ರ,  ಗುಲಬರ್ಗಾ. ಪು. 245.
  10. ರಹಮತ್ ತರೀಕೆರೆ., (2017), ಪೂರ್ವೋಕ್ತ, ಪು. 371.
  11. ಅದೇ., ಪು. 372.
  12. ಅದೇ., ಪು. 192.
  13. ಸುಭಾಷಚಂದ್ರ ನಾಟೀಕರ., (2011), ಕರ್ನಾಟಕದಲ್ಲಿ ಸಿಡಿ ಸಂಪ್ರದಾಯ, ಸಾಹಿತ್ಯ ನಂದನ ಪ್ರಕಾಶನ, ಬೆಂಗಳೂರು. ಪು. 48-49.
  14. ಅದೇ., ಪು. 50-51.
  15. ಶಿವಕುಮಾರಸ್ವಾಮಿ ಸಿ.ಎಸ್., (ಸಂ), (1988), ಕರ್ನಾಟಕದ ಜಾತ್ರೆಗಳು,  ಕನ್ನಡ ವಿಭಾಗ, ಬಿ.ಆರ್.ಪ್ರಾಜೆಕ್ಟ್, ಮೈಸೂರು. ಪು. 19.
  16. ಸುಭಾಷಚಂದ್ರ ನಾಟೀಕರ., (2011), ಪೂರ್ವೋಕ್ತ, ಪು. 78.
  17. ರಹಮತ್ ತರೀಕೆರೆ., (2017), ಪೂರ್ವೋಕ್ತ, ಪು.192.
  18. ಚೆನ್ನಣ್ಣ ವಾಲೀಕಾರ., (1998), ಪೂರ್ವೋಕ್ತ, ಪು. 247.
  19. ಅದೇ., ಪು. 243.
  20. ಅದೇ., ಪು. 248.
  21. ಕೆ. ಮೋಹನ್ ಕೃಷ್ಣ ರೈ., (ಸಂ), (2012), ಚರಿತ್ರೆ ಅಧ್ಯಯನ ಸಂ-07, ಸಂಚಿಕೆ-02, ಜನವರಿ-ಜೂನ್ 2012, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು. 58
  22. ಚೆನ್ನಣ್ಣ ವಾಲೀಕಾರ., (1998), ಪೂರ್ವೋಕ್ತ, ಪು. 242-243.
  23. ಅದೇ., ಪು. 247.
  24. ಅದೇ., ಪು. 246.
  25. ಅದೇ., ಪು. 244.
  26. ಅದೇ., ಪು. 244-245.
  27. ಕೆ. ಮೋಹನ್ ಕೃಷ್ಣ ರೈ., (ಸಂ), (2012), ಪೂರ್ವೋಕ್ತ, ಪು. 58.
  28. ರಹಮತ್ ತರೀಕೆರೆ., (2017), ಪೂರ್ವೋಕ್ತ, ಪು. 179.
  29. ಚೆನ್ನಣ್ಣ ವಾಲೀಕಾರ., (1998), ಪೂರ್ವೋಕ್ತ, ಪು. 341.
  30. ಹರ್ತಿಕೋಟೆ ವೀರೇಂದ್ರಸಿಂಹ., ತೇಜಸ್ವಿ ಕಟ್ಟೀಮನಿ., (ಸಂ), (2002), ಘಟ್ಟಿಹೊಸಹಳ್ಳಿ ಗಟ್ಟಿಗ ಸಿ.ಮಲೆಸಿದ್ದಪ್ಪ ಅವರ ಸ್ಮರಣ ಸಂಪುಟ, ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ, ಚಿತ್ರದುರ್ಗ. ಪು. 133.
  31. ಚೆನ್ನಣ್ಣ ವಾಲೀಕಾರ., (1998), ಪೂರ್ವೋಕ್ತ, ಪು. 338.
  32. ಅದೇ., ಪು. 109.
  33. ಕೆ. ಮೋಹನ್ ಕೃಷ್ಣ ರೈ., (ಸಂ), (2012), ಪೂರ್ವೋಕ್ತ, ಪು. 59.
  34. ಸಿದ್ಧಲಿಂಗಯ್ಯ., (2005), ಗ್ರಾಮ ದೇವತೆಗಳು(ಜಾನಪದೀಯ ಅಧ್ಯಯನ), ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು. ಪು. 202-203.
  35. ಟಿ.ವಿ.ವೆಂಕಟಾಚಲ ಶಾಸ್ತ್ರೀ., (2011), ಮೈಸೂರು: ಅರ್ಥ, ನಿಷ್ಪತ್ತಿ, ಸ್ಥಳಪುರಾಣ, ಮೈಸೂರು ದರ್ಶನ ಸಂಪುಟ: ಒಂದು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಪು. 04.
  36. ರಹಮತ್ ತರೀಕೆರೆ., (2017), ಪೂರ್ವೋಕ್ತ, ಪು. 163.
  37. ಅದೇ., ಪು. 169.
  38. ಅದೇ., ಪು. 323.
  39. ಅದೇ., ಪು. 187.
  40. ಅದೇ., ಪು. 186.
  41. ಅದೇ., ಪು. 336-337.
  42. ಅದೇ., ಪು. 189.
  43. ಚೆನ್ನಣ್ಣ ವಾಲೀಕಾರ., (1998), ಪೂರ್ವೋಕ್ತ, ಪು. 243.
  44. ಅದೇ., ಪು. 192.
  45. ಎಸ್.ಎಸ್.ಹಿರೇಮಠ., (1993), ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-ಜಾತ್ರೆಗಳು, ಸಮತಾ ಪ್ರಕಾಶನ, ಹೊಸಪೇಟೆ.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal