Tumbe Group of International Journals

Full Text


Vachanakarti: Physical Statues.

Dr. Sivakumar R1

1Kannada Assistant Professor, Vidyawardaka First Class College, Seshadri Iyer Road, Mysore

shivublog9@gmail.com

Abstract

Sharan's thoughts are formed on a universal basis so everyone needs to follow them. He was never one to compose vachanas in the background of scholarly display. Experience rather than imagination is the basis of his words. In that background, all the devotees have given life to their thoughts by making proper use of physical images. An attempt has been made through this research paper to identify the necessity and specialty of his base of thought.

Keyword: Vachanakarti, vachana, thoughts.


ವಚನಕಾರ್ತಿಯರು: ದೈಹಿಕ ಪ್ರತಿಮೆಗಳು

ಡಾ. ಶಿವಕುಮಾರ್ ಆರ್1

1ಕನ್ನಡ ಸಹಾಯಕ ಪ್ರಾಧ್ಯಾಪಕರು, ವಿದ್ಯಾವರ್ಧಕ ಪ್ರಥಮದರ್ಜೆ ಕಾಲೇಜು ಶೇಷಾದ್ರಿ ಐಯ್ಯರ್ ರಸ್ತೆ, ಮೈಸೂರು

ಪ್ರಸ್ತಾವನೆ

ಶರಣರ ಚಿಂತನೆಗಳು ಸಾರ್ವತ್ರಿಕ ನೆಲೆಯಲ್ಲಿ ರೂಪುಗೊಳ್ಳುವುದರಿಂದ ಎಲ್ಲರೂ ಅದನ್ನು ಪಾಲಿಸುವ ಅಗತ್ಯವಿದೆ. ಅವರು ಎಂದೂ ಪಾಂಡಿತ್ಯ ಪ್ರದರ್ಶನದ ಹಿನ್ನೆಲೆಯಲ್ಲಿ ವಚನಗಳನ್ನು ರಚಿಸಿದವರಲ್ಲ. ಕಲ್ಪನೆಗಿಂತ ಅನುಭವವೆ ಅವರ ವಚನಗಳಿಗೆ ತಳಹದಿಯಾಗಿದೆ. ಆ ಹಿನ್ನೆಲೆಯಲ್ಲಿ ಶರಣರೆಲ್ಲರೂ ದೈಹಿಕ ಪ್ರತಿಮೆಗಳನ್ನು ಔಚಿತ್ಯಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಚಿಂತನೆಗಳಿಗೆ ಜೀವತುಂಬಿದ್ದಾರೆ. ಅವರ ಈ ನೆಲೆಯ ಚಿಂತನೆಗಳ ಅಗತ್ಯ ಮತ್ತು ವಿಶೇಷತೆಯನ್ನು ಗುರುತಿಸುವ ಪ್ರಯತ್ನವನ್ನು ಈ ಸಂಶೋಧನಾ ಲೇಖನದ ಮೂಲಕ ಮಾಡಲಾಗಿದೆ.

ಕೀ ವರ್ಡ: ಸಬಾಲ್ಟರ್ನ್, ಯಜಮಾನಿಕೆ, ವೈಕಂ, ನಿಗ್ರೊ.

ಪರಿಚಯ

           ವಚನಕಾರ್ತಿಯರು ದೈಹಿಕ ಪ್ರತಿಮೆಗಳ ಮೂಲಕ ಮೌಲಿಕ ಚಿಂತನೆಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅಕ್ಕಮಹಾದೇವಿ, ನೀಲಮ್ಮ, ಅಕ್ಕಮ, ಹಡಪದಪ್ಪಣ್ಣಗಳ ಪುಣ್ಯಸ್ತಿçà ಲಿಂಗಮ್ಮ, ಗೊಗ್ಗವ್ವೆಯವರ ವಚನಗಳಲ್ಲಿ ಬರುವ ದೈಹಿಕ ಪ್ರತಿಮೆಗಳನ್ನು ಕುರಿತು ಈ ಲೇಖನದಲ್ಲಿ ಚರ್ಚಿಸಲಾಗುತ್ತದೆ. ಅಕ್ಕಮಹಾದೇವಿಯವರು ತಮ್ಮ ಅನೇಕ ವಚನಗಳಲ್ಲಿ ದೈಹಿಕ ಪ್ರತಿಮೆಗಳನ್ನು ಬಳಸುತ್ತಾರೆ. ಈ ಪ್ರತಿಮೆಗಳು ಅವರ ಮಾತುಗಳನ್ನು ಮತ್ತಷ್ಟು ಸ್ಪಷ್ಟಗೊಳಿಸುವುದರ ಜೊತೆಗೆ ಪರಿಣಾಮಕಾರಿಯಾಗಿ ಮಾಡುತ್ತವೆ. ಅಕ್ಕನವರು ಬಳಸುವ ದೈಹಿಕ ಪ್ರತಿಮೆಗಳು ಓದುಗರಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕಿ ಮನಃಪರಿವರ್ತನೆಗೂ ಕಾರಣವಾಗುತ್ತವೆ. ಅಂಥ ಪ್ರತಿಮೆಗಳಲ್ಲಿ ಕಣ್ಣು, ಕಿವಿ, ಮೂಗು, ಉದರ(ಹೊಟ್ಟೆ), ತಲೆ, ಮೊಲೆ ಪ್ರಮುಖವಾದಂಥವುಗಳಾಗಿವೆ.

ಭೌತಿಕ ವಸ್ತುಗಳ ಆಕಾರ, ಸ್ವರೂಪವನ್ನು ತಿಳಿಯಲು ಕಣ್ಣು ಸಹಕಾರಿಯಾಗಿದೆ. ಕೆಲವು ವಸ್ತು, ಘಟನೆಗಳಿಗೆ ಮನಸ್ಸು ಸ್ಪಂದಿಸಿ, ಸಂತೋಷ ಹಾಗೂ ಸಂಕಟಗಳನ್ನು ಅನುಭವಿಸಲು ಕಣ್ಣೇ ಮೂಲ ಕಾರಣ. ಕೇವಲ ನೋಟದಿಂದಲೇ ನಮಗೆ ನವರಸಗಳು ವೇದ್ಯವಾಗುತವೆ.

“ಚೆನ್ನಮಲ್ಲಿಕಾರ್ಜುನಯ್ಯಾ,

ನಿಮ್ಮ ಶರಣರನೊಡನೆನ್ನ ಕಣ್ಣ ಮುಂದೆ ಕಂಡು

ಮೊಗೆದುಂಡಮೃತದAತೆ ಅದೆನಯ್ಯಾ.” 

ಎಂಬಲ್ಲಿ ಅಕ್ಕನವರ ಸಂಭ್ರಮಕ್ಕೆ ಕಣ್ಣು ಸಹಕಾರಿಯಾಗಿದೆ. ಶರಣರನ್ನು ಕಾಣಬೇಕೆಂಬ ಅವರ ಮನಸ್ಸಿನ ಹಂಬಲ, ಆತುರವನ್ನು ಕಣ್ಣು ತನ್ನ ನೋಟದ ಮೂಲಕ ಪರಿಪೂರ್ಣಗೊಳಿಸುತ್ತದೆ. ಅಮೃತವನ್ನು ಸವಿದ ಅನುಭವವನ್ನು ಸಹ ಅದು ನೀಡುವುದು ಇಲ್ಲಿ ವಿಶೇಷವಾಗಿದೆ. ನಾವು ಕೂಡ ನಮ್ಮ ಸ್ನೇಹಿತರು, ಸಂಬAಧಿಕರನ್ನು ಬಹುದಿನಗಳ ನಂತರ ಕಂಡಾಗ ಸಂಭ್ರಮಿಸುತ್ತೇವೆ. ಅವರೊಂದಿಗೆ ಫೋನಿನ ಮೂಲಕ ಎಷ್ಟೇ ಮಾತನಾಡಿದರೂ ನೋಡಿದಷ್ಟು ಆನಂದವಾಗುವುದಿಲ್ಲ. ಅಂಥ ಆನಂದಕ್ಕೆ ಕಣ್ಣು ಸಹಕಾರಿಯಾಗಿರುವುದು ಅಕ್ಕನವರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಕೆಲವೊಮ್ಮೆ ಕಣ್ಣು ಇದ್ದರೂ ಅದು ತನ್ನ ಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಲಾಗದೆ ಅಸಹಾಯಕವಾಗಿ ಬಿಡುತ್ತದೆ. ಇದಕ್ಕೆ,

“ಗೂಗೆ ಕಣ್ಣ ಕಾಣಲರಿಯದೆ ರವಿಯ ಬೈಯ್ವುದು.

ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬೈಯ್ವುದು.” 

ಎಂಬ ವಚನವೇ ಸಾಕ್ಷಿ. ಗೂಬೆಗೆ ಕಣ್ಣಿದ್ದರೂ ಹಗಲಿನಲ್ಲಿ, ಕಾಗೆಗೆ ಕಣ್ಣಿದ್ದರೂ ರಾತ್ರಿಯಲ್ಲಿ ನಿರರ್ಥಕವಾಗಿಬಿಡುತ್ತದೆ. ಕಣ್ಣಿದ್ದವರೆಲ್ಲ ಪರಿಪೂರ್ಣರಾಗಲು ಸಾಧ್ಯವಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ. ದೀಪದ ಬೆಳಕು ಅಥವಾ ಬೆಳದಿಂಗಳು ಇಲ್ಲದಿದ್ದರೆ ಮನುಷ್ಯರು ಕಣ್ಣಿದ್ದೂ ಕುರುಡರಾಗುವುದು ಪ್ರಕೃತಿ ಸಹಜ ನಿಯಮವಾಗಿದೆ ಎಂಬುದನ್ನು ನಾವು ಮರೆಯಬಾರದು. ನಮ್ಮ ಅಂದವನ್ನು ಮನದುಂಬಿಕೊಳ್ಳಲು ಕನ್ನಡಿ ಸಹಕಾರಿಯಾಗಿದೆ. ಆದರೆ ನಮಗೆ ಕನ್ನಡಿಯನ್ನು ನೋಡಲು ಕಣ್ಣಿಲ್ಲದಿದ್ದರೆ ಕನ್ನಡಿ ನಮ್ಮ ಪಾಲಿಗೆ ನಿಷ್ಪçಯೋಜಕವಾಗುತ್ತದೆ. ಅದನ್ನೇ ಅಕ್ಕನವರು “ಕುರುಡ ಕಣ್ಣ ಕಾಣಲರಿಯದೆ ಕನ್ನಡಿಯ ಬೈಯ್ವನು.”  ಎನ್ನುತ್ತಾರೆ. ಅದೇ ರೀತಿ ಕೆಲವರಿಗೆ ಪ್ರಕೃತಿ ಸೌಂದರ್ಯವನ್ನು ನೋಡಿದಾಗ ಆನಂದ ಉಂಟಾಗುತ್ತದೆ. ಆಗ ಅವರ ಕಣ್ಣು ಪಾವನ ಎಂದೆನಿಸುತ್ತದೆ. ಮತ್ತೆ ಕೆಲವರಿಗೆ ಧಾರ್ಮಿಕ ಕ್ಷೇತ್ರಗಳು, ವ್ಯಕ್ತಿಗಳನ್ನು ಕಂಡಾಗ ಕಣ್ಣಿಗೆ ಸಾರ್ಥಕ ಭಾವ ಉಂಟಾಗುತ್ತದೆ. ಅದನ್ನೇ ಅಕ್ಕಮಹಾದೇವಿಯವರು “ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು.”  ಎನ್ನುತ್ತಾರೆ. ಶರಣರ ಕಂಗಳು ಗುರುಹಿರಿಯರನ್ನು ನೋಡುವುದರ ಮೂಲಕ ಮಾತ್ರ ಸಾರ್ಥಕ ಭಾವವನ್ನು ಅನುಭವಿಸುತ್ತದೆ ಎಂಬುದು ಅವರ ಮಾತು. ಹೀಗೆ ಮನುಷ್ಯ ಜೀವಿಯ ಬದುಕಿನಲ್ಲಿ ಕಣ್ಣು ಪ್ರಮುಖ ಪಾತ್ರ ನಿರ್ವಹಿಸುವುದನ್ನು ನಾವು ಗಮನಿಸಬಹುದು.

ಮನುಷ್ಯನ ಜೀವ ಅಂದರೆ ಉಸಿರಾಟ ಮೂಗನ್ನೇ ಅವಲಂಬಿಸಿದೆ. ಸಾಮಾನ್ಯವಾಗಿ ನೆಗಡಿ, ಶೀತ ಆದಾಗ ಮೂಗಿನ ಮಹತ್ವ ನಮಗೆ ಅರಿವಾಗುತ್ತದೆ. ಅದು ನಮ್ಮ ದೈಹಿಕ ಸ್ಥಿರತೆಯನ್ನು ಉಸಿರಾಟದ ಮೂಲಕ ಕಾಯ್ದುಕೊಳ್ಳಲು ಅನುವಾಗುತ್ತದೆ. ಅದರ ಅನುಪಸ್ಥಿತಿಯಲ್ಲಿ ನಾವು ಹೆಚ್ಚು ಕಾಲ ಜೀವಿಸಲು ಸಾದ್ಯವಾಗುವುದಿಲ್ಲ. ಅದನ್ನೇ ಅಕ್ಕನವರು,

“ತನುವ ಬೇಡಿದಡೆ ತನುವ ಕೊಟ್ಟು ಶುದ್ಧವಪ್ಪೆ.

ಮನವ ಬೇಡಿದಡೆ ಮನವ ಕೊಟ್ಟು ಶುದ್ಧವಪ್ಪೆ.

ಧನವ ಬೇಡಿದಡೆ ಧನವ ಕೊಟ್ಟು ಶುದ್ಧವಪ್ಪೆ.

ನೀನಾವುದ ಬೇಡಿದಡೂ ಓಸರಿಸಿದಡೆ,

ಕೈವಾರಿಸಿದಡೆ ಹಿಡಿದು ಮೂಗ ಕೊಯಿ.

ಎನ್ನ ಕಲಿತನದ ಬಿನ್ನಪವ ಕಡೆತನಕ ನಡೆಸದಿರ್ದಡೆ

ತಲೆದಂಡ ಕಾಣಾ ಚೆನ್ನಮಲ್ಲಿಕಾರ್ಜುನಾ.” 

ಎನ್ನುತ್ತಾರೆ. ಇಲ್ಲಿ ಮೂಗ ಕೊಯಿ ಎಂಬುದು ತನ್ನನ್ನು ಕುರೂಪಗೊಳಿಸು ಅಥವಾ ತನ್ನ ಅಸ್ತಿತ್ವವನ್ನು ಇಲ್ಲವಾಗಿಸು ಎಂಬ ಅರ್ಥವನ್ನು ಧ್ವನಿಸುತ್ತದೆ. ಚೆನ್ನಮಲ್ಲಿಕಾರ್ಜುನನಿಗಾಗಿ ತನು, ಮನ, ಧನವನ್ನು ನಿವೇದಿಸುವ ನಿರ್ಧಾರವನ್ನು ಅಕ್ಕಮಹಾದೇವಿಯವರು ಕೈಗೊಂಡಿದ್ದರೂ ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ.

ಮೂಗು ಕೇವಲ ನಮ್ಮ ಉಸಿರಾಟಕ್ಕೆ ಮಾತ್ರವಲ್ಲ ಅಂದಕ್ಕೂ ಕಾರಣವಾಗಿದೆ. ನಮ್ಮ ಮುಖ ಲಕ್ಷಣಕ್ಕೆ ಮೂಗು ಭೂಷಣವಾಗಿದ್ದು, ನಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಅದನ್ನೇ ಅಕ್ಕಮಹಾದೇವಿಯವರು, “ಮೊಲೆಮುಡಿಯಿದ್ದಡೇನು ಮೂಗಿಲ್ಲದವಳಿಂಗೆ?”  ಎನ್ನುತ್ತಾರೆ. ಹೆಣ್ಣಿನ ಸ್ವರೂಪ ಹಾಗೂ ಸೌಂದರ್ಯವನ್ನು ಈ ರೀತಿ ಗುರುತಿಸುವ ಮೂಲಕ ಮೂಗಿನ ಅವಶ್ಯಕತೆಯನ್ನು ತಿಳಿಸಿಕೊಟ್ಟಿದ್ದಾರೆ.

ಮನುಷ್ಯರು ಹಸಿವನ್ನು ಗೆಲ್ಲಬಲ್ಲವರಾದರೆ ಎಲ್ಲವನ್ನೂ ಗೆಲ್ಲಬಲ್ಲರು. ಕೆಲವೊಮ್ಮೆ ಹಸಿವೇ ನಮ್ಮ ಸಾಧನೆಗೆ ಮುಳ್ಳಾಗುತ್ತದೆ. ಕೆಟ್ಟ ದಾರಿಗಳನ್ನು ತುಳಿಯುವಂತೆ ಮಾಡುತ್ತದೆ. ಸತ್ಯ, ನ್ಯಾಯ, ಕರುಣೆಗಳಿಗೆ ತಿಲಾಂಜಲಿ ಇಡುವಂತೆ ಮಾಡುತ್ತದೆ. ಉದರ ಪೋಷಣೆಯೇ ಮುಖ್ಯವಾದಾಗ ಸಂಬAಧಗಳಿಗೆ ಬೆಲೆ ನೀಡುವುದಿಲ್ಲ. ಇಂಥ ಉದರ ವೇದನೆಯಿಂದ ಅಕ್ಕಮಹಾದೇವಿಯವರು ಮರುಗುತ್ತಾರೆ. ತಮ್ಮ ಹಸಿವಿಗಾಗಿ ಮನ ತುಡಿಯುವುದಕ್ಕೆ ಬೇಸರವನ್ನು ವ್ಯಕ್ತಪಡಿಸುತ್ತಾರೆ.

“ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು.

ಕಾಣಲಾರೆನಯ್ಯಾ ನಿಮ್ಮುವನು, ಭೇದಿಸಲರಿಯೆ.

ಮಾಯದ ಸಂಸಾರದಲ್ಲಿ ಸಿಲುಕಿದೆನು.

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ,

ನಿಮ್ಮ ಹೊದ್ದುವಂತೆ ಮಾಡಾ, ನಿಮ್ಮ ಧರ್ಮ.” 

ಎನ್ನುತ್ತಾರೆ. ಉದರಕ್ಕೆ ತುಡಿಯುವ ಮನಸ್ಸನ್ನು ನಿಯಂತ್ರಿಸುವ, ಅದರಿಂದ ವಿಮೋಚನೆ ಹೊಂದುವ ಮಾರ್ಗವನ್ನು ಸೂಚಿಸೆಂದು ಚೆನ್ನಮಲ್ಲಿಕಾರ್ಜುನನನ್ನು ಬೇಡುತ್ತಾರೆ. ಉದರ ಪೋಷಣೆಗಾಗಿ ಜನರು ಹಲವಾರು ವೇಷ ಧರಿಸುತ್ತಾರೆ. ಅಂಥವರನ್ನು ಡಾಂಭಿಕರು ಎಂದು ಕರೆಯಲಾಗುತ್ತದೆ. ಅವರ ಅಂತರAಗ ಮತ್ತು ಬಹಿರಂಗ ಭಿನ್ನವಾಗಿರುತ್ತವೆ. ಬಹಿರಂಗದಲ್ಲಿ ಜ್ಞಾನಿಗಳು, ಜಂಗಮರು ಎಂದು ತೋರ್ಪಡಿಸಿಕೊಳ್ಳುವ ಅವರು, ಅಂತರAಗದಲ್ಲಿ ಹಸಿವಿನ ಒಡಲನ್ನು ತುಂಬಿಸುವ ತವಕದಲ್ಲಿರುತ್ತಾರೆ. ಹಾಗಾಗಿ ಅಕ್ಕಮಹಾದೇವಿಯವರು,

“ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು,

ಶಿವಾಚಾರದ ವಿಸ್ತಾರವನು, ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ

ಉದರವ ಹೊರವ ವೇಷಧಾರಿಗಳೆತ್ತಬಲ್ಲರಯ್ಯ?” 

ಎಂದು ಪ್ರಶ್ನಿಸುತ್ತಾರೆ. ಹಸಿವಿಗಾಗಿ ತುಡಿಯುವವರು ವೇಷಧಾರಿಗಳೇ ಹೊರತು, ಶಿವಾಚಾರಿಗಳಾಗಲಾರರು ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಶಿವಾಚಾರಿಗಳಾಗಲು ಉದರ ನಿಯಂತ್ರಣವೊAದೇ ದಾರಿ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಉದರದ ತುಡಿತ ಸ್ವಾರ್ಥಭಾವದ ಸಂಕೇತವಾದರೆ, ಶಿವಾಚಾರವು ನಿಸ್ವಾರ್ಥಿಗಳನ್ನಾಗಿ ಮಾಡುವ ಸಾಧನವಾಗಿದೆ.

ಶಿರವಿಲ್ಲದ ಮನುಷ್ಯರ ಅಸ್ತಿತ್ವವಿಲ್ಲ. ಶಿರದ ಕ್ರಿಯಾಶೀಲತೆ ಮನುಷ್ಯರ ಜೀವಂತಿಕೆಯ ಸಂಕೇತ. ಆ ಶಿರವನ್ನು ಕತ್ತರಿಸುವನು ಎಂದರೆ ವ್ಯಕ್ತಿಯ ಪ್ರಾಣವನ್ನು ತೆಗೆದಂತೆಯೇ ಲೆಕ್ಕ. ಅಮೂಲ್ಯವಾದ ವಸ್ತುಗಳೆಲ್ಲವೂ ನಮ್ಮ ಬದುಕಿಗೆ ಪೂರಕವಲ್ಲ ಅಕ್ಕಮಹಾದೇವಿಯವರ, “ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ?”  ಎಂಬ ಮಾತು ಇದಕ್ಕೆ ಸಾಕ್ಷಿಯಾಗಿದೆ. ಕತ್ತಿ ಚಿನ್ನದ್ದಾದರೂ ಅದು ನಮ್ಮ ತಲೆಯನ್ನು ಕತ್ತರಿಸುವ ಕ್ರೂರ ಗುಣವನ್ನು ಹೊಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಕೆಲವು ವ್ಯಕ್ತಿಗಳು ಅಂತಸ್ತಿನಿAದ ಹಿರಿಯರಾದರೂ ನಡವಳಿಕೆಯಲ್ಲಿ ಸಣ್ಣತನ ತೋರುವ ಮೂಲಕ ಬೇರೆಯವರ ಮನಸ್ಸನ್ನು ಘಾಸಿಗೊಳಿಸುತ್ತಾರೆ. ಅಂಥವರು ಚಿನ್ನದ ಕತ್ತಿಯಂತೆ ಅಪಾಯಕಾರಿಯಾದವರು ಎಂಬುದನ್ನು ಮರೆಯಬಾರದು.

ಕಣ್ಣು, ಕಿವಿ, ಕೈಗಳ ಕ್ರಿಯೆಗಳು ನಮ್ಮನ್ನು ಶೇಷ್ಠರನ್ನಾಗಿ ಮತ್ತು ಕನಿಷ್ಠರನ್ನಾಗಿ ಮಾಡುವ ಎರಡೂ ಗುಣಗಳನ್ನು ಹೊಂದಿವೆ. ಇವುಗಳ ಕ್ರಿಯೆಯನ್ನು ಎಚ್ಚರವಾಗಿ ನಿಭಾಯಿಸಬೇಕು. ಅಕ್ಕಮಹಾದೇವಿಯವರು ಹೇಳುವಂತೆ,

“ಹೆಣ್ಣು ಹೊನ್ನು ಮಣ್ಣು ಮೂರನೂ

ಕಣ್ಣಿನಲಿ ನೋಡಿ, ಕಿವಿಯಲಿ ಕೇಳಿ,

ಕೈಯಲಿ ಮುಟ್ಟಿ, ಮಾಡುವ ಭಕ್ತಿ

ಸಣ್ಣವರ ಸಮಾರಾಧನೆಯಾಯಿತ್ತು.” 

ಹೆಣ್ಣು, ಹೊನ್ನು, ಮಣ್ಣು ಈ ಮೂರರಲ್ಲೂ ಅತಿಯಾದ ವೀಕ್ಷಣೆ, ಅತಿಯಾದ ಆಲಿಕೆ, ಮುಟ್ಟಬೇಕೆಂಬ ಅತಿಯಾದ ಬಯಕೆ ಉಂಟಾದರೆ ಅದು ಗಂಡಿನ ನಾಶಕ್ಕೆ ನಾಂದಿಯಾಗುತ್ತದೆ. ಹೆಣ್ಣು ಕೂಡ ಇದರಿಂದ ಹೊರತಾಗಿಲ್ಲ. ಕಣ್ಣು, ಕಿವಿ ಮತ್ತು ಕೈಗಳು ಮಾಡುವ ದುರ್ವರ್ತನೆಗಳಿಂದ ವ್ಯಕ್ತಿ ನಾಶವಾಗುವ ಸಾಧ್ಯತೆ ಇರುತ್ತದೆ ಎಂಬ ಎಚ್ಚರ ಪ್ರತಿಯೊಬ್ಬರಲ್ಲೂ ಇರಬೇಕು. ಹೆಣ್ಣು, ಹೊನ್ನು, ಮಣ್ಣು ಈ ಮೂರು ವಿಚಾರಗಳಲ್ಲಿ ಕಣ್ಣು, ಕಿವಿ, ಕೈಗಳನ್ನು ನಿಯಂತ್ರಿಸದೇ ಇದ್ದಲ್ಲಿ ವ್ಯಕ್ತಿತ್ವ ಹರಣ ಶತಸಿದ್ಧ ಎಂಬುದನ್ನು ಮರೆಯಬಾರದು.

ಸ್ತನ(ಮೊಲೆ)ವು ಹೆಣ್ತನದ ನೈಸರ್ಗಿಕ ಸಂಕೇತ. ಮಗುವಿನ ಜೀವಂತಿಕೆಯ, ಚೈತನ್ಯದ ಸೆಲೆಯೂ ಆಗಿದೆ. ಅದನ್ನು ಕಾಮದ ದೃಷ್ಟಿಯಿಂದ ಕಂಡು ಲೈಂಗಿಕ ದೌರ್ಜನ್ಯದ ನೆಲೆಯಲ್ಲಿ ನೋಡುವವರಿಗೆ “ಬಟ್ಟಿಹ ಮೊಲೆಯ ಭರದ ಜವ್ವನದ ಚೆಲುವ ಕಂಡು ಬಂದಿರಣ್ಣಾ.”  ಎಂದು ವಿರೋಧವನ್ನು ವ್ಯಕ್ತಪಡಿಸುತ್ತಾರೆ. “ಮೊಲೆ ಬಿದ್ದು, ಮುಡಿ ಸಡಲಿ, ಗಲ್ಲ ಬತ್ತಿ, ತೋಳು ಕಂದಿದವಳ ಎನ್ನನೇಕೆ ನೋಡುವಿರಿ ಎಲೆ ಅಣ್ಣಗಳಿರಾ?” ಎಂದು ಅಕ್ಕಮಹಾದೇವಿಯವರು ಪ್ರಶ್ನಿಸುತ್ತಾರೆ. ಇಲ್ಲಿ ಸ್ತನ(ಮೊಲೆ)ವನ್ನು ಕಾಮದ ಪ್ರತಿಮೆಯಾಗಿ ಬಳಸಲಾಗಿದೆ.

ನೀಲಮ್ಮನವರ ವಚನಗಳಲ್ಲೂ ದೈಹಿಕ ಪ್ರತಿಮೆಗಳ ಬಳಕೆ ಇರುವುದನ್ನು ನಾವು ಗುರುತಿಸಬಹುದು. ಕೆಲವೊಮ್ಮೆ ಯಾವುದೋ ವಸ್ತುವಿಗಾಗಿ ನಾವು ಹುಡುಕಿ ನಿರಾಸೆಯ ಅಂಚನ್ನು ತಲುಪಿರುತ್ತೇವೆ. ಅದು ಇನ್ನಾವುದೋ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಗೋಚರವಾದರೆ ಎಲ್ಲಿಲ್ಲದ ಆನಂದ, ಮನಸ್ಸಿನಲ್ಲಿ ಏನೋ ಉಲ್ಲಾಸ, ತೃಪ್ತ ಭಾವ ಉಂಟಾಗುತ್ತದೆ. ಇದಕ್ಕೆಲ್ಲಾ ಕಣ್ಣು ಸಹಾಯಕವಾಗಿರುತ್ತದೆ. ನೀಲಮ್ಮನವರು ಕೂಡ ಇದೇ ರೀತಿಯ ಅನುಭವವನ್ನು ಎದುರುಗೊಳ್ಳುತ್ತಾರೆ.

“ಅರಸರಸಲು ನಾನು

ಅರಸುವ ವಸ್ತು ಎನ್ನ ಕಣ್ಣಿಂಗೆ ಕಾಣಲಾಯಿತ್ತು.

ಬಯಕೆಯ ಬಯಸಲು ನಾನು

ಬಯಸುವ ವಸ್ತು ಕೈಗೂಡಿತ್ತು.

ನಾನೆಂತಹ ಪುಣ್ಯವುಳ್ಳವಳೋ!

ನಾನೆಂತಹ ಮುಕ್ತಿಯುಳ್ಳವಳೋ!

ನಾನುಭಯದ ಸಂಗವ ಹರಿದು ನಿಸ್ಸಂಗಿಯಾದೇನು

ಸಂಗಯ್ಯನಲ್ಲಿ ದ್ವಂದ್ವಕರ್ಮರಹಿತಳು.”

ಎಂಬಲ್ಲಿ ನೀಲಮ್ಮನವರು ನಿಜ ಸಂಗಯ್ಯ ಸಿಕ್ಕ ಸಂತೋಷದಲ್ಲಿದ್ದಾರೆ. ಇಲ್ಲಿ ಸಂಗಯ್ಯನ ಪ್ರತಿರೂಪವಾದ ಇಷ್ಟಲಿಂಗವು ಇವರ ಕಣ್ಣಿಗೆ ಕಂಡಿರಬಹುದು ಅಥವಾ ಇಷ್ಟಲಿಂಗದ ಸಹಾಯದಿಂದ ಹುಡುಕುತ್ತಿದ್ದ ನಿಜಸಂಗಯ್ಯ ಅಂತರAಗದ ಕಣ್ಣಿಗೆ ಗೋಚರಿಸಿರಬಹುದಾದ ಸಾಧ್ಯತೆಯಿದೆ. ನೀಲಮ್ಮನವರು ಅರಸುವ ವಸ್ತು ಭೌತಿಕ ಅಥವಾ ಅಭೌತಿಕ ನೆಲೆಯದ್ದಾದರೂ ಅದನ್ನು ಕಾಣಲು ಬಹಿರಂಗ ಅಥವಾ ಅಂತರAಗದ ಕಣ್ಣು ತೆರೆದು ನೋಡಲೇ ಬೇಕು.

ನಮ್ಮ ದೃಷ್ಟಿ, ಕೆಲವೊಮ್ಮೆ ನಮ್ಮ ಆಲೋಚನೆ ಹಾಗೂ ನಡೆಯನ್ನು ಸಾಧನೆಗೆ ತದ್ವಿರುದ್ಧವಾಗಿ ರೂಪಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ಅದು ನಮ್ಮ ಅರಿವಿಗೆ ಬಂದೋ ಬಾರದೆಯೋ ಸಹಜ ಕ್ರಿಯೆಯಾಗಿ ನಡೆಯುತ್ತಿರುತ್ತದೆ. ಹಾಗಾಗಿ ನಮ್ಮ ನೋಟದಲ್ಲಿ ಎಚ್ಚರವಿರಬೇಕು. ಅದನ್ನೇ ನೀಲಮ್ಮನವರು,

“ಇಷ್ಟವನು ಅಷ್ಟಮದಲ್ಲಿ ಕಂಡು,

ಕಾಮದ ಕಣ್ಣು ಕಿತ್ತು, ಕರ್ಮದ ಕಾಲ ಮುರಿದು,

ಬಯಕೆಯ ಮುದ್ರಿಸಿ, ಸಂಗಯ್ಯನಲ್ಲಿ

ಇಷ್ಟವನು ಅಷ್ಟಮದಲ್ಲಿಯೇ ನಿಲಿಸಿದಾತ ಬಸವಯ್ಯನು.”

ಎನ್ನುತ್ತಾರೆ. ಕಾಮದ ಕಣ್ಣನು ಪ್ರೋತ್ಸಾಹಿಸುವತ್ತ ನಮ್ಮ ಆಲೋಚನೆಯನ್ನು ಹರಿಸಿದ್ದೇ ಆದರೆ, ಪರಿಪೂರ್ಣವಾದ ಸಂಗಯ್ಯನ(ವಿಶ್ವ) ದರ್ಶನವಾಗುವುದಿಲ್ಲ. ವಿಶ್ವರೂಪದ ದರ್ಶನ ಮಾಡುವ ವಿಶಾಲ ಮನಸ್ಥಿತಿ ಮರೆಯಾಗಿ, ಸಂಕುಚಿತ ಕಾಮದಾಸೆ ಮುಖ್ಯವಾಗುತ್ತದೆ. ಇದರಿಂದ ಮುಕ್ತರಾಗಬೇಕಾದರೆ, ಕಾಮದ ಕಣ್ಣನ್ನು ನಿಯಂತ್ರಿಸುವ ಅಗತ್ಯವಿದೆ ಎಂಬ ಎಚ್ಚರವನ್ನು ನೀಲಮ್ಮನವರ ಈ ವಚನ ನೀಡಿದೆ.

ನಾವು ಸದಾ ನಮ್ಮ ಆಲೋಚನೆಗೆ ಸರಿದೂಗುವ ಸಜ್ಜನರ ದರ್ಶನ ಮಾಡುವುದು ಒಳಿತು. ಇದರಿಂದ ನಮ್ಮ ಮನಸ್ಸಿನಲ್ಲಿ ಸದ್ಭಾವನೆ, ಸಮಾಜಮುಖಿ ಚಿಂತನೆ, ವಿಶ್ವಪ್ರೇಮ, ಸಕಲ ಜೀವಿಗಳಿಗೂ ಲೇಸನ್ನು ಬಯಸುವ ಗುಣ ಬೆಳೆಯುತ್ತದೆ. ದುರ್ಜನರ ಸಹವಾಸ ಮಾಡಿದಲ್ಲಿ ಅಹಂಕಾರ, ಸ್ವಾರ್ಥ ಮನೆ ಮಾಡುತ್ತದೆ. ನಮ್ಮಲ್ಲಿ ಕ್ರೂರ ಭಾವನೆಯನ್ನು ಬೆಳೆಸಿ ಪೋಷಿಸುತ್ತದೆ. ಈ ಕಾರಣಕ್ಕೆ ಇರಬಹುದು ಅಕ್ಕಮ್ಮನವರು,

“ಎನ್ನ ಸಮಗ್ರಾಹಕ ಶೀಲಸಂಪಾದಕರನಲ್ಲದೆ

ಎನ್ನ ಕಣ್ಣಿನಲ್ಲಿ ನೋಡೆ, ಜಿಹ್ವೆಯಲ್ಲಿ ನೆನೆಯೆ”

ಎಂದಿದ್ದಾರೆ. ಅವರು ತಮ್ಮ ಆಲೋಚನೆಗೆ ಹೊಂದಿಕೆಯಾಗುವವರನ್ನು ಹೊರತು ಬೇರೆಯವರನ್ನು ನೋಡುವುದಿಲ್ಲ, ಅವರೊಂದಿಗೆ ಮಾತನಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಇಲ್ಲಿ ಕಣ್ಣು ಮತ್ತು ಜಿಹ್ವೆ(ನಾಲಿಗೆ) ವ್ಯಕ್ತಿಯೊಂದಿಗಿನ ಸಂಬAಧದ ನಿರ್ಬಂಧಿಸುವಿಕೆಗೆ ಸಾಕ್ಷಿಯಾಗಿವೆ. ಅವು ಸಗುಣವನ್ನು ಒಪ್ಪಿ ದುರ್ಗುಣವನ್ನು ವಿರೋಧಿಸುತ್ತಿರುವುದು ಇದರಿಂದ ತಿಳಿಯುತ್ತದೆ. ಕೆಲವರು ತಮ್ಮನ್ನು ತಾವು ಎಲ್ಲವನ್ನೂ ತಿಳಿದ ಜ್ಞಾನಿಗಳು, ಯೋಗಿಗಳು, ಜಂಗಮರು ಎಂದು ಭಾವಿಸಿ, ಇತರರನ್ನು ನಂಬಿಸಿರುತ್ತಾರೆ. ಅಂಥ ವ್ಯಕ್ತಿತ್ವ ಹೊಂದಿದ, ಅಂತರAಗ ಮತ್ತು ಬಹಿರಂಗ ಶುದ್ಧಿ ಇಲ್ಲದವರನ್ನು ಶರಣರು ವಿರೋಧಿಸುತ್ತಾರೆ. ಅಂಥವರ ಸಹವಾಸ ಹಾಗೂ ಬೋಧನೆಯನ್ನು ಟೀಕಿಸಿದ್ದಾರೆ. ಹಡಪದಪ್ಪಣ್ಣಗಳ ಪುಣ್ಯಸ್ತಿçà ಲಿಂಗಮ್ಮನವರ,

“ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ

ಅಣ್ಣಗಳಿರಾ, ನೀವು ಕೇಳಿರೊ.

ಅವರ ಬಾಳುವೆ ಎಂತೆAದಡೆ

ಕುರುಡ ಕನ್ನಡಿಯ ಹಿಡಿದಂತೆ.

ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ,

ಉದರವ ಹೊರೆವ ಚದುರರೆಲ್ಲರೂ ಹಿರಿಯರೆ? ಅಲ್ಲಲ್ಲ.

ಇದ ಮೆಚ್ಚುವರೆ ನಮ್ಮ ಶರಣರು?” 

ಎಂದು ಪ್ರಶ್ನಿಸುವ ವಚನ, ಈ ಸಂದರ್ಭಕ್ಕೆ ಹೆಚ್ಚು ಸೂಕ್ತ ಎನಿಸುತ್ತದೆ. ತಮ್ಮ ಉದರ ಪೋಷಣೆಗಾಗಿ ಹಲವು ವೇಷಗಳನ್ನು ಧರಿಸುವ ಡಾಂಭಿಕರನ್ನು ಪ್ರಶ್ನಿಸುವ ಮೂಲಕ, ಅವರ ಆಧ್ಯಾತ್ಮಿಕ ನಡೆಯನ್ನು ವಿರೋಧಿಸುತ್ತಾರೆ. ಇಲ್ಲಿ ಉದರ ಪೋಷಣೆಯು ಸ್ವಾರ್ಥ, ನಿಷ್ಪçಯೋಜಕತೆಯ ಸಂಕೇತವಾಗಿದ್ದು, ಸತ್ಯ ಹಾಗೂ ನಂಬಿಕೆಗೆ ದೂರವಾದುದು ಎಂಬ ಭಾವವನ್ನುಂಟುಮಾಡುತ್ತದೆ. ಕೆಲವು ಮೈಗಳ್ಳರು ಹಸಿವನ್ನು ನೀಗಿಸಲು, ಜನರಿಗೆ ಮೋಸ ಮಾಡುವ ಮೂಲಕ ತಪ್ಪು ದಾರಿಗೆ ಎಳೆಯುತ್ತಾರೆ. ಕೆಲವೊಮ್ಮೆ ಇಂಥವರೇ ವೇಗವಾಗಿ ಬೆಳೆದು ಹಿರಿಯರು, ಸುಸಂಸ್ಕೃತರು, ಜ್ಞಾನಿಗಳು ಎಂದು ಕರೆಸಿಕೊಳ್ಳುತ್ತಾರೆ. ಇಂಥವರ ವಿಚಾರದಲ್ಲಿ ಎಚ್ಚರವಾಗಿರದಿದ್ದಲ್ಲಿ ನಮ್ಮ ಧನ ಮತ್ತು ಪ್ರಾಣ ಎರಡನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅಂಥ ಅವಘಡಕ್ಕೆ ಎಡೆಯಾಗದಂತೆ ಈ ವಚನ ನಮ್ಮನ್ನು ಎಚ್ಚರಿಸುತ್ತಿದೆ. ಉದರಕ್ಕೆ ವಾಮ ಮಾರ್ಗ ತುಳಿದ ಜೀವ, ಎಂದೆAದೂ ಅಪಾಯಕಾರಿ ಎಂಬ ಸಂದೇಶವನ್ನು ಸಾರುತ್ತಿದೆ.

ಕೆಲವು ದೈಹಿಕ ಪ್ರತಿಮೆಗಳು ನೈಸರ್ಗಿಕವಾಗಿ ಹೆಣ್ಣು ಮತ್ತು ಗಂಡನ್ನು ಸಾಂಕೇತಿಸುವ ಹಾಗೂ ಪ್ರತ್ಯೇಕಿಸುವ ಕಾರ್ಯವನ್ನು ನಿರ್ವಹಿಸುತ್ತವೆ. ಈ ಸಂಕೇತಗಳನ್ನು ವೈರುಧ್ಯವೆಂದು ಭಾವಿಸದೆ ವೈವಿಧ್ಯವೆಂದು ತಿಳಿಯಬೇಕು. ಏಕೆಂದರೆ, ಇವು ಅನಿಯಂತ್ರಿತ ಪ್ರತಿಮೆಗಳಾಗಿವೆ. ಗೊಗ್ಗವ್ವೆಯವರು,

“ಮೊಲೆ ಮುಡಿ ಬಂದಡೆ ಹೆಣ್ಣೆಂಬರು.

ಮೀಸೆ ಕಾಸೆ ಬಂದಡೆ ಗಂಡೆAಬರು

ಈ ಉಭಯದ ಜ್ಞಾನ, ಹೆಣ್ಣೊ ಗಂಡೊ ನಾಸ್ತಿನಾಥಾ?” 

ಎಂಬಲ್ಲಿ, ಹೆಣ್ಣು ಮತ್ತು ಗಂಡಿನ ಎರಡು ನೈಸರ್ಗಿಕ ಲಕ್ಷಣಗಳನ್ನು ಗುರುತಿಸಬಹುದು. ಮೊಲೆ(ಸ್ತನ) ಹೆಣ್ಣಿನ, ಮೀಸೆ ಗಂಡಿನ ನೈಸರ್ಗಿಕ ದೈಹಿಕ ಪ್ರತಿಮೆಯಾಗಿದೆ. ಹಿಂದೆ ಹೆಣ್ಣು ಮುಡಿ(ತುರುಬು) ಕಟ್ಟುವುದು, ಗಂಡು ಕಾಸೆ(ಕೌಪೀನ, ಲಂಗೋಟಿ) ತೊಡುವ ಪದ್ಧತಿಯಿತ್ತು. ಈಗ ಅದು ಮಾಯವಾಗುತ್ತಿದೆ. ಪ್ರಸ್ತುತ ವಚನದಲ್ಲಿ ಈ ದೈಹಿಕ ಪ್ರತಿಮೆಗಳನ್ನು ಅರಿಯುವ ಜ್ಞಾನವನ್ನು ಶೂನ್ಯ ಎಂದು ಗುರುತಿಸಬಹುದು. ಶೂನ್ಯವನ್ನು ತಿಳಿದವರು ಅಥವಾ ಅರಿತವರು ಹೆಣ್ಣು-ಗಂಡು ಎಂಬ ಭೇದವನ್ನು ಅಳಿದು ನಿರ್ಲಿಂಗಿಗಳಾಗುತ್ತಾರೆ ಎಂಬುದು ಈ ವಚನದ ಆಶಯವಾಗಿದೆ.

ಉಪಸಂಹಾರ

ಹೀಗೆ ವಚನಕಾರ್ತಿಯರು ತಮ್ಮ ಮಾತಿನ ಮೌಲ್ಯವನ್ನು ಹೆಚ್ಚಿಸುವ ಹಾಗೂ ಸ್ಪಷ್ಟ ಪಡಿಸುವ ಉದ್ದೇಶದಿಂದ ಅನೇಕ ದೈಹಿಕ ಪ್ರತಿಮೆಗಳನ್ನು ಪ್ರಯೋಗಿಸಿದ್ದಾರೆ. ಇದರಿಂದಾಗಿ ಅವರ ಮಾತಿನ ಅರ್ಥ ವಿಸ್ತಾರಗೊಳ್ಳುತ್ತಾ ಹೋಗುತ್ತದೆ.

ಆಕರ ಗ್ರಂಥಗಳು

  1. ಕಲಬುರ್ಗಿ ಎಂ.ಎ (ಪ್ರ.ಸಂ)     -ಬಸವಯುಗದ ವಚನ ಮಹಾಸಂಪುಟ-೧ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ತೃತೀಯ ಆವೃತ್ತಿ, (ಬೈಬಲ್ ಮುದ್ರಣ ಮಾದರಿ)-೨೦೧೬, ಸಮಗ್ರ ಸಂ. ಸಂಖ್ಯೆ.
  2. ಶಿವಶರಣೆಯರ ವಚನಸಂಪುಟ- ಸಂ. ಡಾ.ವೀರಣ್ಣ ರಾಜೂರ


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal