Tumbe Group of International Journals

Full Text


National Institution for Transforming India (NITI Aayog) : A Symbol for Collective Development of New India.

Dr. Dharnesha S T1

1Assistant Professor of Political Science, Government First Class College, Bellavi

dharaneshast@gmail.com

Abstract

National Institute for Transforming India (NITI Aayog) is a national organization formed for advising on the new policy formulation that came into effect on January 1, 2015. The NITI Aayog is not a body that has come into being by itself, rather it is a body that has been set up in place of the existing Planning Commission with no change in function and little change in procedure. It is a new system found to uphold the co-operative unity in a new form while retaining the original nature of the Planning Commission. To change the future of India after independence, to identify the needs of India in the field of social, economic, educational, agricultural, irrigation, basic facilities, to provide blueprints and programs and figures necessary for policy formulation, the Planning Commission was formed in 1950 by the Prime Minister Pandit Jawahar Lal Nehru as an advisory board. The Planning Commission was centralized and controlled by the Center and did not take into account the states and the needs and demands of the states while formulating the major plans of the country. In this regard, the Chief Ministers of most of the states were criticizing the influence, interference and step-motherly attitude of some of the state governments while formulating policies, programs and projects to the states. Also not all the criticisms are untrue and it is not as if the Planning Commission has done nothing.

Keywords: Policy Aayog, Planning Commission, Governing Body, Think Tank, Evaluation.


ಭಾರತದ ನೀತಿ ಆಯೋಗ: ನೂತನ ಭಾರತಕ್ಕಾಗಿ ಸಂಘಟಿತ ಅಭಿವೃದ್ದಿಯ ಧ್ಯೋತಕ.

ಡಾ. ಧರಣೇಶ. ಎಸ್‌ ಟಿ1

1ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾವಿ

ಅಮೂರ್ತ

ನ್ಯಾಷನಲ್ ಇನ್ಸ್ಟೀಟ್ಯೂಟ್ ಫಾರ್ ಟ್ರಾನ್ಸ್ಪಾರ್ಮಿಂಗ್ ಇಂಡಿಯಾ (National Institution for Transforming India) ಅರ್ಥಾತ್ ನೀತಿ ಆಯೋಗ 2015 ರ ಜನವರಿ ಒಂದರಂದು ಜಾರಿಗೆ ಬಂದ ನೂತನ ನೀತಿ ನಿರೂಪಣೆಯ ಸಲಹೆಗಾಗಿ ರಚನೆಯಾಗಿರುವ ರಾಷ್ಟೀಯ ಸಂಸ್ಥೆ. ನೀತಿ ಆಯೋಗವು ಇದೀಗ ತಾನೆ ಅಸ್ಥಿತ್ವಕ್ಕೆ ಬಂದ ಸಂಸ್ಥೆಯಲ್ಲ, ಬದಲಿಗೆ ಅಸ್ಥಿತ್ವದಲ್ಲಿದ್ದ ಯೋಜನಾ ಆಯೋಗದ ಬದಲಾಗಿ ಸ್ಥಾಪನೆ ಮಾಡಲಾಗಿರುವ ಕಾರ್ಯ ಸ್ವರೂಪ ಬದಲಾಗಿಲ್ಲದ, ಕಾರ್ಯವಿಧಾನದಲ್ಲಿ ಅಲ್ಪ ಬದಲಾವಣೆಯಾಗಿರುವ ಸಂಸ್ಥೆ. ಇದು ಯೋಜನಾ ಆಯೋಗದ ಮೂಲ ಸ್ವರೂಪವನ್ನು ಉಳಿಸಿಕೊಂಡು, ಹೊಸ ಸ್ವರೂಪದಲ್ಲಿ ಸಹಕಾರಿ ಸಂಯುಕ್ತತೆಯನ್ನು ಎತ್ತಿಹಿಡಿಯಲು ಕಂಡುಕೊಂಡ ನೂತನ ವ್ಯವಸ್ಥೆಯಾಗಿದೆ. ಸ್ವತಂತ್ರಾನಂತರದಲ್ಲಿ ಭಾರತದ ಭವಿಷ್ಯವನ್ನು ಬದಲಿಸಲು, ಭಾರತವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕೃಷಿ, ನೀರಾವರಿ, ಮೂಲಭೂತ ಸೌಕರ್ಯಗಳ ಕ್ಷೇತ್ರದಲ್ಲಿ ಅಗತ್ಯತೆಗಳನ್ನು ಗುರುತಿಸಿ, ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳ ನೀಲಿನಕ್ಷೆ ಮತ್ತು ನೀತಿ ನಿರೂಪಣೆಗೆ ಅಗತ್ಯವಾಗಿರುವ ಅಂಕಿ ಅಂಶಗಳನ್ನು ಪೂರೈಕೆಮಾಡಿಕೊಡಲು, ಸಲಹಾ ಮಂಡಳಿಯನ್ನಾಗಿ 1950 ರಲ್ಲಿ ಯೋಜನಾ ಆಯೋಗವನ್ನು (Planning Commission) ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಪಂಡಿತ್ ಜವಹಾರ್ ಲಾಲ್ ನೆಹರೂರವರು ರಚಿಸಿದ್ದರು. ಯೋಜನಾ ಆಯೋಗವು ಕೇಂದ್ರೀಕೃತವಾಗಿ ಮತ್ತು ಕೇಂದ್ರದ ನಿಯಂತ್ರಣದಲ್ಲಿದ್ದು, ದೇಶದ ಪ್ರಮುಖ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ರಾಜ್ಯಗಳನ್ನು ಮತ್ತು ರಾಜ್ಯದ ಅಗತ್ಯತೆ, ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಮುಖ ಆಯೋಗವು ನೀತಿಗಳನ್ನು ರೂಪಿಸುವಾಗ, ಕಾರ್ಯಕ್ರಮ ಮತ್ತು ಯೋಜನೆಯನ್ನು ರಾಜ್ಯಗಳಿಗೆ ಹಂಚಿಕೆಮಾಡುವಾಗ ಕೆಲವು ರಾಜ್ಯ ಸರ್ಕಾರಗಳ ಪ್ರಭಾವ, ಹಸ್ತಕ್ಷೇಪ ಮತ್ತು  ಮಲತಾಯಿ ಧೋರಣೆಯ ಬಗ್ಗೆ ಟೀಕೆಗಳು ಕೇಳುತ್ತಿದ್ದವು. ಅಲ್ಲದೆ ಎಲ್ಲಾ ಟೀಕೆಗಳು ಸತ್ಯಾತೀತವಾದವುಗಳೇನಲ್ಲ ಹಾಗೂ ಯೋಜನಾ ಆಯೋಗ ಏನೂ ಮಾಡಿಲ್ಲ ಎಂಥಲೂ ಅಲ್ಲ.  

ಕೀವರ್ಡ್‌ಗಳು: ನೀತಿ ಆಯೋಗ, ಯೋಜನಾ ಆಯೋಗ, ಆಡಳಿತ ಮಂಡಳಿ, ಚಿಂತನಾ ಚಾವಡಿ, ಮೌಲ್ಯಮಾಪನ.

ಬದಲಾದ ರಾಜಕೀಯ ಮತ್ತು ಸಾಂದರ್ಭಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಯಾವುದೇ ವ್ಯವಸ್ಥೆಯ ಸಹಜ ಧರ್ಮ. ಅಂತೆಯೇ ಯಾವುದೇ ಸಂಸ್ಥೆ, ಯೋಜನೆ ಕಾಲಕ್ಕನುಗುಣವಾಗಿ ಬದಲಾಗಬೇಕಿರುತ್ತದೆ. ಅಧಿಕಾರದ ಕೇಂದ್ರೀಕರಣದ ವಿರುದ್ದದ ದ್ವನಿ ಗಟ್ಟಿಯಾಗತೊಡಗಿದಾಗ, ರಾಜ್ಯನಾಯಕತ್ವ ಕೇಂದ್ರಕ್ಕೆ ಪಸರಿಸಿದಾಗ, ಕೇಂದ್ರೀಕೃತ ಅಧಿಕಾರವನ್ನು ರಾಜ್ಯಾಭಿಮುಖವಾಗಿಸಲು ನಡೆಸಿದ ಪ್ರಥಮ ಪ್ರಯತ್ನದ ಫಲವಾಗಿ ಯೋಜನಾ ಆಯೋಗದ ಜಾಗದಲ್ಲಿ ನೀತಿ ಆಯೋಗವು ಅಸ್ಥಿತ್ವಕ್ಕೆ ಬಂದಿದೆ. ಇದರ ಸಾಂಸ್ಥಿಕ ಮತ್ತು ಕಾರ್ಯಾತ್ಮಕ ಸಂರಚನೆಯಲ್ಲಿ ಎಲ್ಲರನ್ನು ಒಳಗೊಳ್ಳುವ, ರಾಜ್ಯಗಳ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯನ್ನು (Bottom-Up approach) ಕೇಂದ್ರವು ಬೆಂಬಲಿಸುವ ಅವಕಾಶಗಳನ್ನು ಕಾಣಲು ಸಾಧ್ಯವಾಯ್ತು.

 ನವ ಭಾರತ ನಿರ್ಮಾಣಕ್ಕಾಗಿ ಹಾಗೂ ಯೋಜನೆಗಳನ್ನು ನಿರೂಪಿಸುವಲ್ಲಿ ತಳಮಟ್ಟದ ಅಗತ್ಯತೆ ಮತ್ತು ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಭಾರತದ ತಂಡ (Team India) ಹೆಸರಿನಲ್ಲಿ ‘ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಆಡಳಿತ ಪ್ರದೇಶಗಳ ಉಪ ರಾಜ್ಯಪಾಲರು/ಆಡಳಿತಗಾರರನ್ನು ಒಳಗೊಂಡ ಎಲ್ಲರ ಪಾಲ್ಗೊಳ್ಳುವಿಕೆಯ ಪರಿಕಲ್ಪನೆಯನ್ನೊಳಗೊಂಡಂತೆ ರಚಿಸಲಾಗಿದೆ. ಈ ಗೌವರ್ನಿಂಗ್ ಮಂಡಳಿಯನ್ನೊಳಗೊಂಡಂತೆ ರಾಜ್ಯಗಳ ಪಾಲ್ಗೊಳ್ಳುವಿಕೆಗೆ ಅವಕಾಶಮಾಡಿಕೊಡುವ ಮೂಲಕ ಹೊಸ ಸ್ವರೂಪದಲ್ಲಿ ಜಾರಿಗೆ ಬಂದುದಾಗಿದೆ. ‘ಬಲಿಷ್ಠ ರಾಜ್ಯಗಳಿಂದ – ಬಲಿಷ್ಠ ಕೇಂದ್ರದ ಬದಲಾದ ಸಿದ್ಧಾಂತದಲ್ಲಿ, ರಾಜ್ಯಗಳಿಗೆ ಆದ್ಯತೆ ಮತ್ತು ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಿದೆ.

ದೇಶದ ಸಮತೋಲನದ ಅಭಿವೃದ್ಧಿಗೆ ಪರಿಗಣಿಸಬೇಕಾದ ವಿಷಯಗಳು, ಕ್ಷೇತ್ರಗಳು ಮತ್ತು ತಂತ್ರಗಳ ಕುರಿತು ರಾಜ್ಯಗಳ ಸಲಹೆ ಮತ್ತು ಕೋರಿಕೆಯೊಂದಿಗೆ ನೀತಿ ರೂಪಿಸುವುದು ಇದರ ಪ್ರಮುಖ ಕೆಲಸ. ಕೇಂದ್ರ -ರಾಜ್ಯಗಳ ನೀತಿ ನಿರೂಪಣೆಯ ವಿಷಯದಲ್ಲಿ ಚಿಂತಕರ ಚಾವಡಿಯಾಗಿ ಕಾರ್ಯನಿರ್ವಹಿಸಿ ಸಲಹೆ ಸೂಚನೆಗಳನ್ನು ನೀಡುವುದು, ತಳಮಟ್ಟದಿಂದಲೇ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ ಮಾಡುವುದು ಇದರ ಪ್ರಾಥಮಿಕ ಕಾರ್ಯವಾಗಿರುತ್ತದೆ.

            ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕೆಂಪು ಕೋಟೆಯ ಮೊದಲ ಸ್ವತಂತ್ರ್ಯೋತ್ಸವದ ಭಾಷಣದಲ್ಲಿ (ದಿನಾಂಕ 15 ನೇ ಆಗಸ್ಟ್ 2014) ರಾಷ್ಟ್ರೀಯ ಯೋಜನೆಗಳನ್ನು ನಿರೂಪಿಸುವಾಗ ಕೇಂದ್ರದೊಂದಿಗೆ ರಾಜ್ಯಗಳನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಲಾಗುವುದು. ಅದಕ್ಕಾಗಿ ಪ್ರಸ್ತುತ ಯೋಜನಾ ಆಯೋಗವನ್ನು ವಿಸರ್ಜಿಸಿ ಹೊಸ ಸ್ವರೂಪದ ಯೋಜನಾ ಸಂಸ್ಥೆಯನ್ನು ರಚಿಸುವುದಾಗಿ ಘೋಷಿಸಿದ್ದರು. ಅದರಂತೆ 01 ನೇ ಜನವರಿ 2015 ರಂದು ಯೋಜನಾ ಆಯೋಗವನ್ನು ವಿಸರ್ಜಿಸಿ ನೀತಿ ಆಯೋಗವನ್ನು ರಚಿಸಲಾಗಿದೆ. ನೀತಿ ಆಯೋಗದ ಸ್ವರೂಪದಲ್ಲಿ ಬಹುತೇಕ ಬದಲಾವಣೆಗಳಾಗಿದ್ದರೂ ಮೂಲ ಸ್ವರೂಪದಲ್ಲಿ ಬದಲಾವಣೆಯಾಗಿಲ್ಲ.

ನೀತಿ ಆಯೋಗದ ರಚನೆ ಮತ್ತು ಸಂಘಟನೆ

            ಯೋಜನಾ ಆಯೋಗದಂತೆ, ಭಾರತದ ಪ್ರಧಾನ ಮಂತ್ರಿರವರು ನೀತಿ ಆಯೋಗದ ಅಧ್ಯಕ್ಷರಾಗಿರುತ್ತಾರೆ ಮತ್ತು ಪದನಿಮಿತ್ತ ಮುಖಂಡರಾಗಿರುತ್ತಾರೆ, ಆಡಳಿತಾತ್ಮಕ ಮತ್ತು ಖಾಯಂ ಮುಖಂಡರಾಗಿ ಉಪಾಧ್ಯಕ್ಷರು ಕರ್ತವ್ಯನಿರತರಾಗಿರುತ್ತಾರೆ. ಇವರು ಪ್ರಧಾನ ಮಂತ್ರಿಯವರಿಂದ ನೇಮಕವಾಗಿ, ಕೇಂದ್ರ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನು ಹೊಂದಿರುತ್ತಾರೆ. ಪ್ರಸ್ತುತ ಉಪಾದ್ಯಕ್ಷರಾಗಿ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಸುಮನ್‌ ಬೇರಿ ರವರು ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲ ಉಪಾಧ್ಯಕ್ಷರಾಗಿ ಅರವಿಂದ ಪನಗರಿಯರವರನ್ನು ನೇಮಿಸಲಾಗಿದ್ದು, ಇವರ ರಾಜೀನಾಮೆಯಿಂದ ತೆರವಾದ ನಂತರ ಅರ್ಥಶಾಸ್ತ್ರಜ್ಞರಾದ ರಾಜೀವ್ ಕುಮಾರ್‌ ಅವರನ್ನು ನೇಮಿಸಲಾಗಿತ್ತು. ಮುಖ್ಯ ಕಾರ್ಯನಿರ್ವಾಹಕರಾಗಿ ಹಿರಿಯ ಅಖಿಲ ಭಾರತ ಸೇವಾ ವರ್ಗದ ಅಧಿಕಾರಿಯಾದ ಅಮಿತಾಬ್ ಕಾಂತ್ ರವರ ನಂತರ ಶ್ರೀ. ಪರಮೇಶ್ವರನ್‌ ಅಯ್ಯರ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ನೀತಿ ಆಯೋಗದಲ್ಲಿ ಖಾಯಂ ಸದಸ್ಯರಾಗಿ ರಕ್ಷಣಾ ತಜ್ಞ ಶ್ರೀ.ವಿ.ಕೆ ಸಾರಸ್ವತ್‌, ಕೃಷಿ ತಜ್ಞ ಶ್ರೀ.ರಮೇಶ್‌ ಚಂದ್‌ ಮತ್ತು ಆರ್ಥಿಕ ತಜ್ಞ ಡಾ. ವಿ.ಕೆ ಪೌಲ್‌ ಮತ್ತು  ಶ್ರೀ. ಅರವಿಂದ್‌ ವಿರ್ಮಾನಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ತಜ್ಞರಾಗಿದ್ದಾರೆ.   ಪ್ರಸ್ತುತ  ಪದನಿಮಿತ್ತ ಅಧಿಕಾರಸ್ತ ಸದಸ್ಯರಾಗಿ ಕೇಂದ್ರ ಮಂತ್ರಿಮಂಡಲದ ಸದಸ್ಯರಾದ ಶ್ರೀ. ಅಮಿತ್‌ ಶಾ (ಗೃಹ ಮಂತ್ರಿ), ಶ್ರೀ. ರಾಜನಾಥ್‌ ಸಿಂಗ್‌ (ರಕ್ಷಣಾ ಮಂತ್ರಿ) ಶ್ರೀಮತಿ. ನಿರ್ಮಲಾ ಸೀತಾರಾಮನ್‌ (ವಿತ್ತ ಮಂತ್ರಿ), ಶ್ರೀ. ನರೇಂದ್ರ ಸಿಂಗ್‌ ತೋಮರ್ (ಕೃಷಿ ಮಂತ್ರಿ) ಗಳಿದ್ದು, ಆಹ್ವಾನಿತ ಮಂತ್ರಿ ಪರಿಷತ್ತಿನ ಸದಸ್ಯರಾಗಿ  ಶ್ರೀ.ನಿತಿನ್‌ ಗಡ್ಕರಿ, ಶ್ರೀ.ಪೀಯುಷ್‌ ಗೋಯಲ್‌,  ಶ್ರೀ. ವೀರೇಂದ್ರ ಕುಮಾರ್‌, ಶ್ರೀ. ಅಶ್ವಿನಿ ವೈಷ್ಣವ್‌ ಮತ್ತು ಶ್ರೀ.ಇಂದ್ರಜಿತ್‌ ಸಿಂಗ್ ರವರು  ಕಾರ್ಯ ನಿರ್ವಹಿಸುತ್ತಿದ್ದಾರೆ.

ನೀತಿ ಆಯೋಗದ ಆಡಳಿತ ಮಂಡಳಿಯಾದ ಟೀಮ್ ಇಂಡಿಯಾದಲ್ಲಿ 28 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 08 ಕೇಂದ್ರಾಡಳಿತ ಪ್ರದೇಶಗಳ ಉಪ ರಾಜ್ಯಪಾಲರು ಅಥವಾ ಆಡಳಿತಾತ್ಮಕ ಮುಖಂಡರು ಸದಸ್ಯರಾಗಿರುತ್ತಾರೆ. ಆಡಳಿತ ಮಂಡಳಿಯ ಸಭೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ನಡೆಸಬೇಕಾಗಿರುತ್ತದೆ. ಈ ಟೀಮ್ ಇಂಡಿಯಾ ಸಭೆಯಲ್ಲಿ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ, ಖಾಯಂ ಸದಸ್ಯರು, ಮಂತ್ರಿ ಮಂಡಳದ ಸದಸ್ಯರು, ರಾಜ್ಯದ ಮುಖ್ಯ ಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರು ಸದಸ್ಯರಾಗಿ ಭಾಗವಹಿಸುತ್ತಾರೆ. ಇತ್ತೀಚಿಗೆ ಅಂದರೆ, 07 ನೇ ಆಗಸ್ಟ್‌ 2022  ರಂದು ನೀತಿ ಆಯೋಗವು ತನ್ನ 7 ನೇ ಸಭೆಯನ್ನು ನಡೆಸಿರುವುದನ್ನು ಕಾಣಬಹುದು. ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಶ್ರೀ. ಸಿದ್ದರಾಮಯ್ಯ ರವರು ರಾಜಕೀಯ ಕಾರಣಗಳಿಂದ ಹಿಂದಿನ ಕೆಲವು ಸಭೆಗೆ ಗೈರು ಹಾಜರಾಗಿದ್ದನ್ನು ಕಾಣಬಹುದು. ತೆಲಂಗಣದ ಮುಖ್ಯಮಂತ್ರಿ ಶ್ರೀ. ಚಂದ್ರಶೇಖರ್‌ ರಾವ್‌ ಮತ್ತು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಕು.ಮಮತಾ ಬ್ಯಾನರ್ಜಿರವರು ಇದೇ ಕಾರಣದಿಂದ ನಿರಂತರವಾಗಿ ನೀತಿ ಆಯೋಗದ ಸಭೆಗಳಿಗೆ ಹಾಜರಾಗದೆ ನಿರ್ಲಕ್ಷಿಸುತ್ತಿರುವುದು ಸಾಧುವಲ್ಲ.

ಆಯೋಗವು ನೀತಿ ನಿರೂಪಣೆಯಲ್ಲಿ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳಿಗೆ ಅತ್ಯಾಧುನಿಕ ಸಂಪನ್ಮೂಲ  ಅಭಿವೃದ್ದಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕಾಗಿ ನಿರಂತರ ಸಂಶೋಧನೆ ಮತ್ತು ನಾವೀನ್ಯತೆಯ ಕ್ರಮಗಳನ್ನು ಉತ್ತೇಜಿಸಲು, ಸರ್ಕಾರಕ್ಕೆ ಕಾರ್ಯತಂತ್ರ, ನೀತಿಯ ಸಲಹೆ ನೀಡುವುದು ಮತ್ತು ಸಮಸ್ಯೆಗಳನ್ನು ಅರಿತು, ಪರಿಹಾರಾರ್ಥವಾಗಿ ಸಹಕಾರ ನೀಡುತ್ತದೆ. ಅದಕ್ಕಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು Development Monitoring and Evaluation Organisation (DMEO), Atal Innovation Mission (AIM) ಮತ್ತು National Institute of Labour Economics Research and Development  (NILERD) ನಂತಹ ಸ್ವಾಯತ್ತ ಸಂಶೋಧನಾ ಸಂಸ್ಥೆಗಳನ್ನು ರಚಿಸಿಕೊಂಡಿದೆ.

ನೀತಿ ಆಯೋಗದ ಕಾರ್ಯವ್ಯಾಪ್ತಿಯನ್ನು  ನಾಲ್ಕು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು, ಅವುಗಳೆಂದರೆ:

  • ನೀತಿ ನಿರೂಪಣೆ ಮತ್ತು ಕಾರ್ಯಕ್ರಮದ ಚೌಕಟ್ಟಿನ ಕಾರ್ಯಗಳು.
  • ಸಹಕಾರಿ ಸಂಯುಕ್ತತೆಯನ್ನು ಪ್ರೋತ್ಸಾಹಿಸುವುದು.
  • ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ.
  • ಸರ್ಕಾರಕ್ಕೆ ಚಿಂತನಾ ಚಾವಡಿಯಾಗಿ ಜ್ಞಾನ ಮತ್ತು ನಾವೀನ್ಯತೆಯನ್ನು ಮೂಡಿಸುವುದು.

ನೀತಿ ಆಯೋಗದ ಕಾರ್ಯವ್ಯಾಪ್ತಿಯನ್ನು ಮೇಲಿನ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಸರ್ಕಾರದ ವಿವಿಧ ಇಲಾಖೆಯಲ್ಲೂ ಕಾಣಬಹುದಾಗಿದೆ.  ಅವಗಳೆಂದರೆ, ಮೂಲಸೌಕರ್ಯ, ಇಂಧನ, ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ನೈರ್ಮಲ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ರಾಜ್ಯ ಹಣಕಾಸು ಮತ್ತು ಸಮನ್ವಯ, ಸುಸ್ಥಿರ ಅಭಿವೃದ್ಧಿ ಗುರಿಗಳು ಹಾಗೂ ಇತ್ಯಾದಿ. ಮೇಲಿನ ಎಲ್ಲಾ ವಿಭಾಗಗಳ ಕಾರ್ಯಗಳನ್ನು ರಾಜ್ಯಗಳ ಅವಶ್ಯಕತೆಯ ಮೇಲೆ ಸಕ್ರಿಯ ಒಳಗೊಳ್ಳುವಿಕೆಯೊಂದಿಗೆ ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳ ದೃಷ್ಟಿಕೋನದ ಮೇಲೆ ವಿಕಸನಗೊಳಿಸಲು ಕಾರ್ಯನಿರ್ವಹಿಸುತ್ತದೆ.

ನೀತಿ ಆಯೋಗದ ಧ್ಯೇಯೋದ್ಧೇಶಗಳನ್ನು ಈ ಕೆಳಕಂಡಂತೆ ವಿಶ್ಲೇಷಿಸಬಹುದಾಗಿದೆ,

  1. ಸದೃಡ ರಾಜ್ಯಗಳ ಮೂಲಕ ಬಲಿಷ್ಠ ರಾಷ್ಟ್ರವನ್ನು ರೂಪಿಸಲು, ಸಹಕಾರಿ ಸಂಯುಕ್ತತೆಯನ್ನು ರಾಜ್ಯಗಳ ಪಾಲ್ಗೊಳ್ಳುವಿಕೆಯ ಮೂಲಕ ಬಲಪಡಿಸುವುದು.
  2. ಗ್ರಾಮ ಮಟ್ಟದಲ್ಲಿ ಅಗತ್ಯವಾದ ಯೋಜನೆಗಳನ್ನು ರೂಪಿಸಲು ಮತ್ತು ಉನ್ನತ ಹಂತಗಳಲ್ಲಿ ಇವುಗಳನ್ನು ಒಟ್ಟುಗೂಡಿಸಲು ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು.
  3. ನೀತಿ ಆಯೋಗದ ಪ್ರಮುಖ ಕಾರ್ಯಗಳಲ್ಲಿ ಅಂಕಿ ಸಂಖ್ಯೆಗಳ ಸಂಗ್ರಹಣೆ, ಮೌಲ್ಯಮಾಪನ ಮತ್ತು ವೈಜ್ಞಾನಿಕವಾಗಿ ದತ್ತಾಂಶಗಳನ್ನು ವಿಶ್ಲೇಷಿಸಿ, ಸರ್ಕಾರದ ನಿರ್ಧಾರಗಳನ್ನು ಕೈಗೊಳ್ಳಲು ಪೂರಕ ಸಹಕಾರ ನೀಡುವುದು.
  4. ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ನಿರಂತರವಾಗಿ ಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು.
  5. ಕೃಷಿ ಮತ್ತು ಕೃಷಿಕರ ಸಮಸ್ಯೆಗಳನ್ನು ಕುರಿತಾದ ನಿರಂತರ ಸಂಶೋಧನೆ ಮೂಲಕ, ಅಗತ್ಯ ಮಾಹಿತಿ ಮತ್ತು ಸೂಕ್ತ ಸಲಹೆಗಳನ್ನು ಸಂಬಂಧಿಸಿದ ಸಚಿವಾಲಯಕ್ಕೆ ನೀಡುವುದು.
  6. ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃಧ್ಧಿಗಾಗಿ ಯೋಜನೆಗಳನ್ನು ಮತ್ತು ಮಾರ್ಗಸೂಚಿಗಳನ್ನು ನಿರೂಪಿಸುವುದು.
  7. ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡಂತೆ ಕಾರ್ಯಸಾಧ್ಯವಾದ ಯೋಜನೆಗಳನ್ನು ಶಿಪಾರಸ್ಸು ಮಾಡುವುದು ಇದರ ಪ್ರಮುಖ ಕಾರ್ಯವಾಗಿದೆ. ಅದರ ಭಾಗವಾಗಿ ಸಂಶೋಧನೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ.

ನೀತಿ ಆಯೋಗವು ರಾಜ್ಯಗಳಿಗೆ ಅವುಗಳ ಆಡಳಿತದ ಕಾರ್ಯವೈಖರಿಯ ಆಧಾರದಮೇಲೆ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳು ಮತ್ತು ಮಾನವ ಸಂಪನ್ಮೂಲ ಸದ್ಬಳಕೆಯ ಆಧಾರದ ಮೇಲೆ ಶ್ರೇಯಾಂಕ ನೀಡುತ್ತಾ ಬಂದಿದೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಮಾಡಿರುವ, ಮುನ್ನೋಟ 2035 ರಲ್ಲಿ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯದ ಮುನ್ನೋಟವಾಗಿದೆ.

ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾಲ್ಗೊಳ್ಳುವಿಕೆ ಮೂಲಕ 65 ವರ್ಷಗಳ ದೀರ್ಘಕಾಲ ಕಾರ್ಯನಿರ್ವಹಿಸಿದ್ದ ಯೋಜನಾ ಆಯೋಗವನ್ನು ತೆಗೆದು ನೀತಿ ಆಯೋಗವನ್ನು ಸ್ಥಾಪಿಸಿರುವುದು, ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯಲೇ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ ಎನ್ನುವುದನ್ನು, ಅಧಿಕಾರರೂಡ ಮತ್ತು ವಿರೋಧ ಪಕ್ಷಗಳು ಅರಿತುಕೊಳ್ಳಬೇಕಿದೆ. ರಾಜ್ಯ-ರಾಷ್ಟ್ರಗಳ ಆಡಳಿತದಲ್ಲಿ ಪ್ರಮುಖ ಯೋಜನೆಗಳನ್ನು ರೂಪಿಸುವಲ್ಲಿ, ಪಾಲ್ಗೊಳ್ಳಲು ಅವಕಾಶವಿಲ್ಲದ ಸ್ಥಿತಿಯಿಂದ, ನೀತಿಗಳನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರಗಳನ್ನು ತಮ್ಮ ಅವಶ್ಯಕತೆಯೊಂದಿಗೆ ಪಾಲುದಾರರಾಗಲು ಅವಕಾಶ ನೀಡಿದ, ನೀತಿ ಆಯೋಗದ ರಚನಾತ್ಮಕ ವ್ಯವಸ್ಥೆಯನ್ನು, ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕಿದೆ.

ತೀರ್ಮಾನ

ನೀತಿ ಆಯೋಗವೂ ಸಹ ರಾಜಕೀಯ ಪಕ್ಷಗಳ ಧ್ಯೇಯೋದ್ದೇಶಗಳು ಮತ್ತು ಕಾರ್ಯಸೂಚಿಗಳನ್ನು ತನ್ನ ಸಲಹೆಗಳಾಗಿ ಸೂಚಿಸುವ ಒತ್ತಡಕ್ಕೊಳಗಾಗದೆ, ಕೇವಲ ರಾಷ್ಟ್ರ ನಿರ್ಮಾಣ ಕಾರ್ಯದ ಉದ್ಧೇಶದ ಆದಾರದಮೇಲೆ ಕಾರ್ಯನಿರ್ವಹಿಸಿ, ಸಂಶೋಧನಾತ್ಮಕವಾಗಿ ಅಂಕಿ ಸಂಖ್ಯೆಗಳ ಕ್ರೋಡಿಕರಣ, ವಿಶ್ಲೇಷಣೆ ಮತ್ತು ಮೌಲ್ಯಮಾಪನದ ಮೂಲಕ ದೇಶದ, ಕೃಷಿ, ಆರ್ಥಿಕತೆ, ರಕ್ಷಣೆ, ಶಿಕ್ಷಣ, ಮೂಲಭೂತ ಸೌಲಭ್ಯಗಳು, ಸೇವಾವಲಯ ಮತ್ತು ಉತ್ಪಾದನಾ ವಲಯಗಳಲ್ಲಿ ಆಗಬೇಕಾಗಿರುವ ಸುಧಾರಣೆ ಮತ್ತು ಬದಲಾವಣೆಗಳನ್ನು ಕುರಿತಾಗಿ ವರದಿ ತಯಾರಿಸುವ ಮೂಲಕ ತನ್ನ ಅಸ್ಮಿತೆಯನ್ನು ನಿಷ್ಪಕ್ಷಪಾತತೆಯಿಂದ ಉಳಿಸಿಕೊಳ್ಳಬೇಕಿದೆ. ಪ್ರಸಕ್ತ ನೀತಿ ಆಯೋಗವು ಕೇಂದ್ರ ಸರ್ಕಾರದ ಪರವಾಗಿ ವರ್ತಿಸುವ ಸಂಸ್ಥೆಯಾಗದೆ, ದೇಶದ ಪರಿವರ್ತನೆಗೆ ದಿಕ್ಸೂಚಿಯಾಗುವ ರಾಷ್ಟ್ರೀಯ ಸಂಸ್ಥೆಯಾಗಿ ಕಾರ್ಯನಿರ್ವಹಿಸಿಬೇಕಾಗುತ್ತದೆ ಎನ್ನುವುದೇ ಎಲ್ಲರ ಆಶಯವಾಗಿದೆ.

References:

  1. Lakshmikanth M - Indian Polity – 6th Revised Edition, 2022
  2. www.niti.gov.in
  3. https://www.niti.gov.in/working-papers-policy-papers-and-research-papers
  4. https://www.niti.gov.in/documents/reports
  5. https://en.wikipedia.org/wiki/NITI_Aayog
  6. News Papers.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal