Tumbe Group of International Journals

Full Text


Oral History(tradition) as Primary Source.

Dr. Anitha T1

1Faculty of History, Department of History, Bangalore University, Bangalore -56

Email Id : laughyani@gmail.com, Mobile No : 8970600676

Abstract

    Oral history is not only a basis for the creation of history but can also act as a bridge between society and education. Oral history can be used in the present day as a means of bringing marginalized social classes, individuals, into the mainstream through oral history. But if we look at the earlier development of oral history, history as an independent discipline of study first appeared in the fifth century BC.

Keywords: Oral history, oral tradition, social classes.


ಪ್ರಾಥಮಿಕ ಆಕರವಾಗಿ ಮೌಖಿಕ ಪರಂಪರೆ

ಡಾ. ಅನಿತ. ಟಿ1

1ಅಥಿತಿ ಉಪನ್ಯಾಸಕರು, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಅಮೂರ್ತ

ಮೌಖಿಕ ಇತಿಹಾಸ ಎಂಬುದು ಚರಿತ್ರೆಯ ರಚನೆಗೆ ಮಾತ್ರ ಆಧಾರವಾಗಿರದೆ ಸಮಾಜ ಮತ್ತು ಶಿಕ್ಷಣದ ಸೇತುವೆಯಾಗಿ ಕೂಡ ಕಾರ್ಯ ನಿರ್ವಹಿಸಬಲ್ಲದು. ತಳ ಅಂಚಿನಲ್ಲಿರುವ ಸಾಮಾಜಿಕ ವರ್ಗಗಳು, ವ್ಯೆಕ್ತಿಗಳು, ಮೌಖಿಕ ಇತಿಹಾಸದಿಂದ ಮುಖ್ಯವಾಹಿನಿಯನ್ನು ಸೇರಬಲ್ಲದು ಅಂದರೆ ಕಡೆಗಣಿತ ವಿಚಾರಗಳನ್ನು ಗಣನೆಗೆ ತರುವ ಸಾಧನವಾಗಿ ಮೌಖಿಕ ಇತಿಹಾಸವನ್ನು ಪ್ರಸ್ತುತ ದಿನಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಆದರೆ ಈ ಮೊದಲು ಮೌಖಿಕ ಇತಿಹಾಸ ಬೆಳೆದು ಬಂದಿರುವುದನ್ನು ನೋಡುವುದಾದರೆ, ಚರಿತ್ರೆ ಒಂದು ಸ್ವತಂತ್ರ ಅಧ್ಯಯನದ ಶಿಸ್ತಾಗಿ ಮೊದಲು ಕಾಣಿಸಿಕೊಂಡಿದ್ದು ಕ್ರಿ.ಪೂ ಐದನೇ ಶತಮಾನದಲ್ಲಿ.

ಕೀವರ್ಡ್ಗಳು: ಮೌಖಿಕ ಇತಿಹಾಸ, ಮೌಖಿಕ ಸಂಪ್ರದಾಯ, ಸಾಮಾಜಿಕ ವರ್ಗಗಳು.

ಪೀಠಿಕೆ

ಭಾರತದ ಜನಪದ ಸಂಶೋಧನೆಯು ಇತ್ತಿಚ್ಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಆದರೆ ಜಾನಪದದ ಅಧ್ಯಯನದ ಬೆನ್ನಲ್ಲಿ ಇತಿಹಾಸಕ್ಕೆ ಮಾಹಿತಿಯನ್ನು ನೀಡುವ “ಮೌಖಿಕ ಪರಂಪರೆ”ಯ ಬೆಳವಣಿಗೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ನಡೆಯದೇ ಇರುವುದು ವಿಶಾದದ ಸಂಗತಿ. ಸುಮಾರು 14 ಮತ್ತು 15 ನೇ ಶತಮಾನದ ಪೂರ್ವದಲ್ಲಿ ಲಾವಣಿಗಳ ಕ್ರಮಬದ್ಧ ಅಧ್ಯಯನಕ್ಕೆ ಒತ್ತು ಕೊಟ್ಟಂತೆ ಜಾನಪದಕ್ಕೆ ಕೊಡಲಿಲ್ಲ. ಬೇರೆ ಬೇರೆ ದೇಶಗಳಲ್ಲಿ ಜಾನಪದ, ಲಾವಣಿಗಳ ಕ್ರಮಬದ್ಧವಾದ ಅಧ್ಯಯನಕ್ಕೆ ಕೊಟ್ಟ ಆಸಕ್ತಿ ನಮ್ಮಲ್ಲಿ ಕೊಡದಿರುವುದು ಅನೇಕ ಸತ್ಯ ಘಟನೆಗಳ ವಿನಾಶಕ್ಕೆ ಕಾರಣವಾಗಿದೆ. ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರು 19 ನೇ ಶತಮಾನದ ನಂತರದಲ್ಲಿ ಜಾನಪದದ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಲ್ಪ ಸ್ವಲ್ಪ ಕೆಲಸಗಳನ್ನು ಆರಂಭಿಸಿ ವಿಚಾರಗಳನ್ನು ಸಂಗ್ರಹಿಸಿ ಪುಸ್ತಕ ಮತ್ತು ದಿನ ಪತ್ರಿಕೆಗಳಲ್ಲಿ ಪ್ರಕಟಿಸತೊಡಗಿದಾಗ ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಇತಿಹಾಸ , ಜನಪದ ಅಧ್ಯಯನದ ವಿಭಾಗಗಳ ಬುದ್ದಿಜೀವಿಗಳು ಮೌಖಿಕ ಪರಂಪರೆಗೆ ನಾಂದಿ ಹಾಡಲಾರಂಭಿಸಿದರು.

  ಚರಿತ್ರೆಯ ರಚನೆಯ ಸಂದರ್ಭದಲ್ಲಿ ಮೌಖಿಕ ಇತಿಹಾಸವನ್ನು ಮೌಖಿಕ ಪರಂಪರೆಯನ್ನು ಭಿನ್ನ ಸ್ಥರಗಳಲ್ಲಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ಚರಿತ್ರೆಯ ನಿರ್ಮಾಣ ಅಥವಾ ಪುನರ್ ನಿರ್ಮಾಣ ಕಾರ್ಯದಲ್ಲಿ ಮೌಖಿಕ ಇತಿಹಾಸ ಎಷ್ಟರ ಮಟ್ಟಿಗೆ ಬಳಕೆಯಾಗಬಲ್ಲದು ಎನ್ನುವುದರ ಮೇಲೆ ಅದರ ಮಹತ್ವ ನಿಂತಿದೆ. ಈವರೆಗೆ ಮೌಖಿಕ ಇತಿಹಾಸ ಬಳಕೆಯಾಗುತ್ತಿರುವ ಕ್ರಮವನ್ನು ಹಾಗೂ ಮುಂದಿನ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು ನೋಡಿದಾಗ ‘ಮೌಖಿಕ ಇತಿಹಾಸ’ ಹಲವು ನಿಟ್ಟಿನಲ್ಲಿ ಚರಿತ್ರೆಯ ರಚನಾ ಪ್ರಕ್ರಿಯೆಯಲ್ಲಿ ಬಳಕೆಯಾಗುತ್ತಾ ಬಂದಿದೆ.  ಇತರೆ ಎಲ್ಲಾ ಆಕರಗಳಂತೆ ಮೌಖಿಕ ಇತಿಹಾಸವನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುವ ಕ್ರಮ, ಜೀವನ ಚರಿತ್ರೆಯನ್ನು ಬರೆಯುವ ವೇಳೆಗೆ ದಿನಚರಿ, ಪತ್ರಿಕಾ ವರದಿ, ಪತ್ರಗಳು, ಸ್ಮøತಿಗಳು ಇವುಗಳೆಲ್ಲದರ ಜೊತೆಗೆ ಮೌಖಿಕ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ. ಇಲ್ಲಿಯೂ ಮೌಖಿಕ ಇತಿಹಾಸದಲ್ಲಿ ಯಾರನ್ನು ಕುರಿತು ಬರೆಯಲಾಗಿರುತ್ತದೆಯೋ ಅವರಿಂದಲೇ ಸಂಗ್ರಹಿಸಿದ ಮಾಹಿತಿಯನ್ನು ಬಳಸುವುದು ಸುಲಭವಾಗುತ್ತದೆ.

   ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಮೌಖಿಕ ಇತಿಹಾಸಕ್ಕೆ ಒತ್ತು ಕೊಟ್ಟು ಲೇಖನಗಳನ್ನು ಬರೆದಿರುವುದನ್ನು ಗಮನಿಸಿ ಅಲ್ಲಿ ಆರಿಸಿಕೊಂಡಿರುವಂತಹ ವಿಷಯಗಳ ಹರವು ಹೊಸದಾಗಿ ಕ್ಷೇತ್ರ ಪ್ರವೇಶಿಸಿದವರನ್ನು ಬೆರಗುಗೊಳಿಸುತ್ತದೆ. ಬಹಳಷ್ಟು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುವ ಈ ನಿಯತಕಾಲಿಕೆಗಳು ಈವರೆಗೆ ಗಮನಿಸದ ಹಲವು ವಿಚಾರಗಳ ಕಡೆ ಗಮನ ಸೆಳೆಯುತ್ತವೆ. ಇವುಗಳಲ್ಲಿ ಕೆಲವು ಲೇಖನಗಳು ಹಾಗೂ ಕೃತಿಗಳಲ್ಲಿ ನೇರವಾಗಿ ಸಂದರ್ಶನಗಳನ್ನೆ ಪ್ರಕಟಿಸಿರುವುದು ಕಂಡುಬಂದರೇ, ಮತ್ತೆ ಕೆಲವು ಲೇಖನಗಳು ಸಂದರ್ಶನಗಳನ್ನು ಆಧರಿಸಿದ ನಿರೂಪಣಾತ್ಮಕ ವಿವರಣೆಯನ್ನು ನೀಡುತ್ತವೆ. ಇಲ್ಲವೆ ಮುಖಾಮುಖಿಯಾಗಿಯೇ ನೋಡಬಹುದು. ಕೃತಿಯ ಒಳಗೆ ಅಭಿಪ್ರಾಯಗಳನ್ನು ಬಳಸಿಕೊಳ್ಳುವಾಗ ಸಂದರ್ಶನದ ಉಲ್ಲೇಖವನ್ನು ಟಿಪ್ಪಣಿಯಲ್ಲಿ ಸೂಚಿಸಬೇಕು. ಮಾಹಿತಿದಾರನು ಸುಪ್ರಸಿದ್ಧ ವ್ಯಕ್ತಿಯಲ್ಲದಿದ್ದರೆ ಅಡಿ ಟಿಪ್ಪಣಿಯಲ್ಲಿ ಅಥವಾ ಪಠ್ಯಭಾಗದಲ್ಲೇ ವ್ಯಕ್ತಿಯ ಪರಿಚಯವನ್ನು ನೀಡಬೇಕಾಗುತ್ತದೆ.  ಹೆಚ್ಚು ಜನರನ್ನು ಸಂದರ್ಶಿಸಿದ್ದಲ್ಲಿ ಪರಾಮರ್ಶನ ಗ್ರಂಥಗಳ ಪಟ್ಟಿಯನ್ನು ನೀಡುವಂತೆ ಸಂದರ್ಶಿಸಿದ ವ್ಯಕ್ತಿಗಳ ಸಂಕ್ಷಿಪ್ತ ಪರಿಚಯವನ್ನು ನೀಡಬೇಕಾಗುತ್ತದೆ.

     ಚರಿತ್ರೆಕಾರರು ಮಾತ್ರವಲ್ಲದೆ ಯಾವುದೇ ಶಿಸ್ತಿನ ಹಿನ್ನಲೆಯಿಂದ ಬಂದ ವಿದ್ವಾಂಸರು ಮಾಹಿತಿಯನ್ನು ಮೌಖಿಕವಾಗಿ ಸಂಗ್ರಹಿಸಿದಾಗ ಮೌಖಿಕ ಇತಿಹಾಸ ಮಾದರಿಯನ್ನು ಬಳಸುವುದರಿಂದ ಸಂಶೋಧನೆಗೊಂದು ಕ್ರಮಬದ್ಧತೆ ಬರುತ್ತದೆ.  ಮೌಖಿಕ ಇತಿಹಾಸದಲ್ಲಿ ಅದರ ಸತ್ಯಾಸತ್ಯತೆ ಅಳೆಯಲು ಇವರ ಸಮಕಾಲೀನ ಆಧಾರಗಳೊಂದಿಗೆ ತುಲನೆ ಮಾಡಲಾಗುತ್ತದೆ. ಮೌಖಿಕ ಇತಿಹಾಸದ ವಿಚಾರದಲ್ಲಿ “ಮರು ಪ್ರಶ್ನೆಯೇ” ಪ್ರಬಲವಾದ ಅಂಶವಾಗಿರುತ್ತದೆ. ಮಾಹಿತಿ ಸಂಗ್ರಹಣೆಯ ಸಂದರ್ಭದಲ್ಲಿ ಮಾಹಿತಿದಾರನಿಂದ ಉತ್ತರ ಪಡೆಯುವಾಗ ಅನೇಕ ರೀತಿಯ ಪ್ರಶ್ನೆಗಳನ್ನು ಕೇಳುತ್ತಾ ಮರು ಪ್ರಶ್ನಿಸುತ್ತಾ ಹೋದಂತೆ ಗಾಢವಾದ ಮಾಹಿತಿಯನ್ನು ಪಡೆಯಬಹುದು. ಇತಿಹಾಸ ಸಂಶೋಧಕರು ಇದನ್ನು ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಸರ್ಕಾರಿ ದಾಖಲೆಯ ಪತ್ರಗಳೊಂದಿಗೆ ತುಲನೆ ಮಾಡಿ ನೋಡಿದಾಗ ಉದ್ದೇಶಿತ ಮಾಹಿತಿ ಒಂದೇ ಆಗಿದ್ದರೂ ಸಹ ಅಂಕಿ-ಅಂಶಗಳಲ್ಲಿ ಏರುಪೇರಾಗುವುದನ್ನು ಕಾಣುತ್ತೇವೆ. ಇಲ್ಲಿ ಒಬ್ಬ ವ್ಯೆಕ್ತಿ ಹೇಳಿದ ವಿಚಾರವನ್ನು ಮತ್ತೊಬ್ಬರಲ್ಲೋ ಅಥವಾ ದಾಖಲೆಗಳಲ್ಲೋ ಇರುವ ವಿಚಾರಕ್ಕೆ ಹೋಲಿಸುವ ಮೂಲಕ ಅದರ ಸತ್ಯಾ ಸತ್ಯತೆಯನ್ನು ಅಳೆದಾಗ ಘಟನೆಯ ಅಥವಾ ಮಾಹಿತಿಯ ದತ್ತಾಂಶಗಳಿಗಿಂತ “ಆಶಯ” ಮುಖ್ಯವಾಗಿರುವುದು ಕಂಡುಬರುತ್ತದೆ. ಇಲ್ಲಿ ಘಟನೆ ನಿರೂಪಣೆಯ ನಿಖರತೆಗಿಂತ ಸಮಾಜದ ಪ್ರತಿಕ್ರಿಯೆ, ಅಭಿಪ್ರಾಯ, ಸಂಸ್ಕøತಿ, ಭಾವನಾತ್ಮಕ ಅಂಶಗಳು ಗಮನೀಯವಾಗುತ್ತವೆ. ಚರಿತ್ರೆಯ ರಚನೆಯ ಸಂದರ್ಭದಲ್ಲಿ ಶಿಷ್ಟ ಮೌಖಿಕ ಪರಂಪರೆಯಲ್ಲಿ ಬಂದ ವಿಚಾರಗಳನ್ನು ಚರಿತ್ರಾಕಾರರು ಧಾರಾಳವಾಗಿ ಬಳಸಿಕೊಂಡಿದ್ದಾರೆ. ವೇದ ಕಾಲೀನ ಸಾಹಿತ್ಯದ ಆಧಾರದ ಮೇಲೆ ಆ ಕಾಲದ ಚರಿತ್ರೆಯನ್ನು ರಚಿಸಲಾಗಿದೆ.

       ಲಿಖಿತ ಪೂರ್ವ ಸಮಾಜ ಅಥವಾ ಮೌಖಿಕ ಸಮಾಜ ಎಂದೂ ಸ್ಮರಣಶಕ್ತಿಯನ್ನು ಅನುಮಾನಿಸುವುದಿಲ್ಲ. ಅದನ್ನು ಸಮಗ್ರವಾಗಿ ಸ್ವೀಕರಿಸುತ್ತಾ ಮುಂದಿನ ಪೀಳಿಗೆಗೆ ನೀಡುತ್ತಾ ಬರುತ್ತದೆ. ವ್ಯೆಕ್ತಿಯ ಸಾಮಾಜಿಕ ಹಿನ್ನಲೆಯೊಂದಿಗೆ ಅವರು ಆಡುವ ಮಾತುಗಳನ್ನು ಸ್ವೀಕರಿಸಬೇಕಾಗುತ್ತದೆ. ಮೌಖಿಕ ಸಮಾಜದಿಂದ ಬಂದ ವ್ಯಕ್ತಿಯು ನೀಡುವ ಮಾಹಿತಿಯನ್ನು ಅನುಮಾನದಿಂದ ಪ್ರಶ್ನಿಸಲಾಗುವುದಿಲ್ಲ. ಹಾಗಾದರೆ ಮೂಢನಂಬಿಕೆಗಳನ್ನು ಹೇಗೆ ನೋಡಬೇಕು? ಮಹಾನ್ ವ್ಯಕ್ತಿಗಳ ಸುತ್ತ ಹುಟ್ಟುವ ಪವಾಡಗಳು ನಂಬಿಕೆಗಳಾಗಿರುತ್ತವೆ. ಅವರ ನಂಬಿಕೆಯನ್ನು ಒಡೆಯುವ ಅಥವಾ ಮುರಿಯುವ ಉದ್ದೇಶ ಮೌಖಿಕ ಇತಿಹಾಸಕಾರನದಲ್ಲ. ಅಂತಹ ಕಡೆ ನಿಗಧಿತ ಸಮಾಜ ನಂಬಿದ ವಿಚಾರಗಳೇನೆಂದು ದಾಖಲಿಸುವುದು ಮಾತ್ರ ಮೌಖಿಕ ಇತಿಹಾಸಕಾರನ ಕರ್ತವ್ಯವಾಗುತ್ತದೆ  . ಪ್ರತಿಷ್ಠಿತ ಸಮಾಜದ ಮೌಖಿಕ ಇತಿಹಾಸದಲ್ಲಿ ಸ್ಮರಣೆಯ ಜೊತೆಗೆ ಆಲೋಚನೆಯೂ ಸೇರಿರುತ್ತದೆ. ಪಾಶ್ಚೀಮಾತ್ಯ ದೇಶದಲ್ಲಿ ಮೌಖಿಕ ಇತಿಹಾಸದ ಬೆಳವಣಿಗೆಯನ್ನು ಗಮನಿಸುವುದಾದರೆ, ಯೂರೋಪ್, ಆಫ್ರಿಕಾ, ಏಷ್ಯಾ ಖಂಡಗಳ ಚರಿತ್ರೆ ಹಾಗೂ ಚರಿತ್ರೆಯ ರಚನೆಯಲ್ಲಿ ಮೌಖಿಕ ಇತಿಹಾಸದ ಪಾತ್ರ ಬಹಳವಾಗಿದೆ. ಈ ಹಿನ್ನಲೆಯಲ್ಲಿ ಮೌಖಿಕ ಇತಿಹಾಸದ ವ್ಯಾಪ್ತಿ ವಿಸ್ತಾರವಾಗಿರುವುದನ್ನು ಗಮನಿಸಬಹುದು.  

   ಇತಿಹಾಸದ ರಚನೆಯ ಕಾರ್ಯದಲ್ಲಿ ತೊಡಗುವಾಗ ಮೌಖಿಕ ಇತಿಹಾಸದ ಮಾಹಿತಿಯನ್ನು ಪಡೆಯಲು ಈ ಕೆಳಕಂಡಂತ ವರ್ಗೀಕರಣದಿಂದ ಮತ್ತಷ್ಟು ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ.

            ಶಿಷ್ಟ ಪರಂಪರೆ  ಮತ್ತು ಮೌಖಿಕ ಪರಂಪರೆ

ಶಿಷ್ಟ ಪರಂಪರೆ 

  1. ಶಿಷ್ಟ ಮೌಖಿಕ ಪರಂಪರೆ –ವೇದಗಳು,ಉಪನಿಷತ್ತುಗಳು, ಸ್ಮøತಿ
  2. ಶಿಷ್ಟ ಲಿಖಿತ ಪರಂಪರೆ- ಶಾಸನಗಳು, ಲಿಖಿತ ರೂಪದ ಶಾಸ್ತ್ರ ಗ್ರಂಥಗಳು
  3. ಶಿಷ್ಟ ಕ್ರಿಯಾ ಪರಂಪರೆ –ಯಜ್ಞ, ಯಾಗ, ಯೋಗ
  4. ಶಿಷ್ಟ ಭೌತಿಕ ಪರಂಪರೆ - ಕೋಟೆಗಳು, ದೇವಾಲಯಗಳು, ವಾಸ್ತುಶಿಲ್ಪದ ಚೌಕಟ್ಟಿನಲ್ಲಿ                                                                         ನಿರ್ಮಾಣವಾದ ಕಟ್ಟಡಗಳು
  5. ಶಿಷ್ಟ ಕಲಾ ಪರಂಪರೆ - ಭರತನಾಟ್ಯ, ಶಾಸ್ತ್ರೀಯ ಸಂಗೀತ

ಮೌಖಿಕ ಪರಂಪರೆ

  1. ಜನಪದ ಮೌಖಿಕ ಪರಂಪರೆ - ಲಾವಣಿ, ಕಥೆ, ಗಾದೆ, ಒಗಟು
  2. ಜನಪದ ಕ್ರಿಯಾ ಪರಂಪರೆ – ವೃತ್ತಿ ಕಸುಬುಗಳು, ಕೃಷಿ, ಕಮ್ಮಾರಿಕೆ
  3. ಜನಪದ ಭೌತಿಕ ಪರಂಪರೆ – ಮಣ್ಣಿನ ಮನೆ, ಗುಡಿಸಲು
  4. ಜನಪದ ಕಲಾ ಪರಂಪರೆ – ಕೋಲಾಟ, ರಂಗವಲ್ಲಿ, ಬಯಲಾಟ

     ಹೀಗೆ ಪರಂಪರೆಯಿಂದ ಬಂದ ವಿಚಾರಗಳಿಗೆ ಹೆಚ್ಚಿನ ಮಾನ್ಯತೆ ಸಿಗುವಷ್ಟು ಜನಪದ ಪರಂಪರೆಯಿಂದ ಬಂದ ವಿಚಾರಗಳಿಗೆ ಸಿಗುತ್ತಿಲ್ಲ ಎಂಬುದು ಈ ಮೇಲಿನ ವರ್ಗೀಕರಣದಿಂದ ಸ್ಪಷ್ಟವಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮೌಖಿಕ ಇತಿಹಾಸದ ವ್ಯಾಪ್ತಿಯನ್ನು ವಿಸ್ತರಿಸಿ ಇತಿಹಾಸದ ರಚನೆಗೆ ಸಂಶೋಧನೆಗಳ ಮೂಲಕ ನೇರವಾದ ಮಾಹಿತಿಯನ್ನು ಸಂಗ್ರಹಿಸುವ ಕೆಲಸಗಳು ತುರ್ತಾಗಿ ಆಗ ಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಪರಂಪರೆಯೆಂದರೆ ಶಿಷ್ಟವೆಂದು ಹಾಗೂ ಮೌಖಿಕ ಎಂದರೆ ಜನಪದವೆಂದು ಸರಳವಾಗಿ ಭಾವಿಸಿರುವುದು ಕಂಡುಬರುತ್ತದೆ. ಮೌಖಿಕ ಸಂಪ್ರದಾಯವನ್ನು ಚರಿತ್ರೆ ನಿರ್ಮಾಣ ಪ್ರಕ್ರಿಯೆಗೆ ತೊಡಗಿಸುವಾಗ ಜನಪದ ಆಕರಗಳಲ್ಲಿ ಸೂಕ್ಷ್ಮ ಒಳನೋಟವಿರಬೇಕಾಗುತ್ತದೆ. ಮೌಖಿಕ ಪರಂಪರೆಯನ್ನು ಇತಿಹಾಸ ರಚನೆಯಲ್ಲಿ ಬಳಸುವಾಗ ಅಧ್ಯಯನದ ಕ್ರಮವಾಗಿ ನೋಡುವುದಾದರೆ,

•          ಜನಪದ ಸಾಹಿತ್ಯವೊಂದನ್ನು ತೆಗೆದುಕೊಂಡು ಅದರ ಐತಿಹಾಸಿಕ ವಿಶ್ಲೇಷಣೆಯನ್ನು ಮಾಡುವುದು.

 ಉದಾಹರಣೆಗೆ :- ಕೆರೆಗೆ ಹಾರದಂತಹ ಐತಿಹ್ಯವನ್ನು ತೆಗೆದುಕೊಂಡು ಅಧ್ಯಯನಕ್ಕೆ ಒಳಪಡಿಸಿ ಅದರ ಕಾಲ, ರಚಿತವಾಗಿರಬಹುದಾದ ಪ್ರದೇಶ, ಕೆರೆಗೆ ಬಲಿ ನೀಡಿರುವ ಉದ್ದೇಶ ಇತ್ಯಾದಿ ಅಂಶಗಳು ಪೂರ್ಣವಾಗಿ ಒಂದು ಜನಪದ ಸಾಹಿತ್ಯವೇ ಅಲ್ಲವೇ ಎಂಬ ವಿಚಾರಗಳನ್ನು ಅಳೆಯಲು ಸಹಾಯಕವಾಗುತ್ತದೆ.

•          ಯಾವುದಾದರು ಒಂದು ಪ್ರದೇಶದ ಇಲ್ಲವೆ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಿಗುವ ಎಲ್ಲಾ ಮೌಖಿಕ ಆಕರಗಳನ್ನು ಸಂಗ್ರಹಿಸಿ ಅನಂತರ ಲಿಖಿತ ಅಥವಾ ಪ್ರಾಕ್ತನ ಆಧಾರದೊಂದಿಗೆ ತುಲನೆ ಮಾಡುವುದು.

•          ಉಳಿದ ಆಕರಗಳ ಜೊತೆಗೆ ಜನಪದ ಆಕರವನ್ನು ಬಳಸುತ್ತಾ ಆರೋಗ್ಯಕರ ವಾದ ಮಂಡನೆ ಮಾಡುವುದು.

  ಈ ಮೇಲಿನ ಕ್ರಮಗಳ ಬಳಕೆಯಿಂದ ಇತಿಹಾಸ ರಚನೆಗೆ ಮೌಖಿಕ ಇತಿಹಾಸವು ಪೂರಕವಾಗಬಲ್ಲದು ಎಂದು ಹೇಳಬಹುದು. ಮೌಖಿಕ ಚರಿತ್ರೆ ಅಥವಾ ಜನಪದ ಚರಿತ್ರೆ ಎಂಬುದು ಅಹರ್ನಿಶಿಯಾದುದು ಅದು ನದಿಯಂತೆ ನಿರಂತರವಾಗಿ ಹರಿಯುತ್ತಾ ಮುಂದೆ ಸಾಗುತ್ತಿರುತ್ತದೆ. ಹೆಸರೇ ಹೇಳುವಂತೆ ಮೌಖಿಕ ಎಂಬುದು “ಮಾತು” ಅರ್ಥವನ್ನು ನೀಡುತ್ತದೆ. ಅಂದರೆ ವಿಚಾರಗಳನ್ನು ಜನರ ಬಾಯಿಂದ ಬಾಯಿಗೆ, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಾಗಿಸುವಂತ ಪ್ರಕ್ರಿಯೆಯಲ್ಲಿ ಮೌಖಿಕ ಇತಿಹಾಸ ಮುಂದುವರೆಯುತ್ತಿರುತ್ತದೆ. ಅದನ್ನು ಗಮನಿಸಿ ಗೌಣವಾಗಿರುವ ಚರಿತ್ರೆ ರಚನೆಯ ಅನೇಕ ಆಕರಗಳನ್ನು , ಮಾಹಿತಿಯನ್ನು ಕಲೆ ಹಾಕುವ ಕೆಲಸವನ್ನು ನಾವು ಮಾಡಬೇಕಾಗಿದೆ. ಬರವಣಿಗೆಯಲ್ಲಿ ದಾಖಲುಗೊಳ್ಳದೆ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬರುವ ಸಾಹಿತ್ಯವನ್ನು ಜನಪದ ಸಾಹಿತ್ಯ ಎಂದಿದ್ದು, ಭಾಷೆಗೆ ಲಿಪಿ ಕಾನೀಸಿಕೊಂಡ ಮೇಲೆ ಲಿಖಿತ ಸಾಹಿತ್ಯವು ರಚನೆಯಾಗಿದೆ.

   ಅಕ್ಷರಬಲ್ಲವರಿಂದ ಮಾತ್ರ ರಚನೆಯಾಗುವ ಶಿಷ್ಟ ಸಾಹಿತ್ಯವು ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯಿಂದ ರಚನೆಯಾಗುವುದರಿಂದ ಇದು ಆಯಾ ಲೇಖಕನ ಸ್ವಾಮ್ಯಕ್ಕೆ ಒಳಪಟ್ಟಿರುತ್ತದೆ. ಆದರೆ ಜನಪದ ಸಾಹಿತ್ಯ ಒಬ್ಬ ವ್ಯಕ್ತಿಯಿಂದ ರಚನೆಯಾದುದಲ್ಲ. ಜನಸಮೂಹದ ನಡುವೆ ಹುಟ್ಟಿ, ಸಮೂಹದಲ್ಲಿ ಪ್ರಸಾರಗೊಳ್ಳುವುದರಿಂದ ಜನಪದ ಸಾಹಿತ್ಯವನ್ನು ಸಮುದಾಯದ ಸೃಷ್ಟಿಯೆಂದು ಭಾವಿಸಲಾಗಿದೆ. ಹಾಗಾಗಿ ಇತಿಹಾಸದ ರಚನೆಗೆ ಮೌಖಿಕ ಆಕರಗಳನ್ನು ಎರವಲು ಪಡೆಯುತ್ತಿರುವುದು ಗೌಣವಾಗಿರುವ ಅನೇಕ ಸಂಗತಿಗಳಿಗೆ ಜೀವ ಬಂದಂತಾಗಿದೆ.  

       ಮೌಖಿಕ ಚರಿತ್ರೆ / ಜನಪದ ಚರಿತ್ರೆ ಎಂಬುದು ಅಹರ್ನಿಶಿಯಾದುದು. ಅದು ನದಿಯಂತೆ ನಿರಂತರವಾಗಿ ಹರಿಯುತ್ತಾ ಮುಂದೆ ಹೋಗುತ್ತಿರುತ್ತದೆ. ಇತಿಹಾಸದಲ್ಲಿ ಮೌಖಿಕ/ಜನಪದ ಆಕರಗಳು ಪ್ರಸ್ತುತದಲ್ಲಿ ಜೀವ ಪಡೆದುಕೊಂಡು ವ್ಯಕ್ತಿಯ ಸ್ಮøತಿಪಟಲದಲ್ಲಿನ ವಿಚಾರಗಳನ್ನು ಸಂಗ್ರಹಿಸಿ ಇತಿಹಾಸಕ್ಕೆ ಮೆರಗು ನೀಡುತ್ತಿವೆ. ನಮ್ಮ ದೇಶ ಕೃಷಿಕರ ದೇಶ ಇಲ್ಲಿ ವಿದ್ಯಾವಂತರು ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಕಡಿಮೆ. ಅಕ್ಷರಸ್ಥರಲ್ಲದ ಇವರು ಇತಿಹಾಸದ ಅನೇಕ ವಿಚಾರಗಳನ್ನು ಕಂಡು ತಿಳಿದುಕೊಂಡು ಕಥೆಯ ರೂಪದಲ್ಲಿ ಮಕ್ಕಳಿಗೆ ಹೇಳುತ್ತಾರೆ. ಆ ಕಥೆಯಲ್ಲಿ ಚರಿತ್ರೆಯ ರಚನೆಗೆ ಆಕರಗಳಿರುವುದನ್ನು ವಿದ್ಯಾವಂತರಾದವರು ಗಮನಿಸಿಯೇ ಇರುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇಂದು ಇತಿಹಾಸದ ರಚನೆಗೆ ಪೂರಕವಾಗಿ ಮೌಖಿಕ ಅಥವಾ ಜನಪದ ಆಕರಗಳ ಮೋರೆ ಹೋಗುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಸ್ವಾತಂತ್ರ್ಯಕ್ಕೂ ಮೊದಲು ಇತಿಹಾಸದ ರಚನೆ ಪ್ರಾರಂಭವಾಗುವುದೇ ಯೂರೋಪಿನ ಚರಿತ್ರೆಯ ನಂತರ. ಇಲ್ಲಿ ಗಮನಿಸಬೇಕಾದದ್ದು ಮೌಖಿಕ ಆಕರಗಳನ್ನು ಇತಿಹಾಸಕ್ಕೆ ಪೂರಕವಾಗಿ ಬಳಿಸಿದ್ದು ಪಾಶ್ಚಿಮಾತ್ಯರೇ ಎಂಬುದು . 

    ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಅವರು ದಾಕಲಿಸಿಕೊಂಡ ವಿಚಾರಗಳನ್ನು ಇತಿಹಾಸ ರಚನೆಗೆ ಆಯ್ಕೆ ಮಾಡಿಕೊಂಡಿದ್ದು.  ಯಾವುದೇ ಘಟನೆಗಳನ್ನು ತಮಗೆ ಕಂಡಂತೆ ತಮ್ಮ ಅನುಕೂಲಕ್ಕೆ ಒಗ್ಗುವಂತೆ ರೂಪಿಸಿಕೊಂಡರೂ ಇದು ಭಾರತಿಯರಿಗೆ ಹೊಸ ವಿಚಾರಗಳನ್ನು ಕಲೆಹಾಕುವ ವಿಧಾನವನ್ನು ಕಲಿಸಿತು. ವಿದೇಶಿಯರ ಬರಹಗಳು ಇತಿಹಾಸ ರಚನೆಗೆ ಆಕರವಾಗಿ ಬಳಸಿಕೊಳ್ಳಲಾರಂಭಿಸಿದರು ಆದರೆ ದೇಶಿಯ ವಿವರ ಮಾಹಿತಿಗಳನ್ನು ಸಂಗ್ರಹಣೆ ಮಾಡುವ ಕೆಲಸವನ್ನು ಕಡೆಗಾಣಿಸಿದರು. ಭಾರತೀಯ ಚರಿತ್ರೆಕಾರರು ಕೂಡ ಅಂದು ಚರಿತ್ರೆಗೆ ಸಮರ್ಥನೀಯ ದಾಖಲೆಗಳು ಮುಖ್ಯವೆಂದು ತಿಳಿದು ದಾಖಲೆಗಳಿಲ್ಲದ, ಆಕರಗಳಿಲ್ಲದ ಚರಿತ್ರೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಪಟ್ಟು ಹಿಡಿದರು. ಆದರೆ ಕಾಲ ಮುಂದುವರೆದಂತೆ ಚರಿತ್ರೆಕಾರರು, ಬುದ್ಧಿಜೀವಿಗಳು, ವಿಚಾರವಂತರು ಸೇರಿ ಮೌಖಿಕ ಚರಿತ್ರೆಯಲ್ಲಿ ಹೊಸ ವಿಚಾರಗಳತ್ತ ಗಮನ ಹರಿಸುವಂತೆ ಮಾಡಿದ್ದಾರೆ. ಜನರ ಸ್ಮøತಿಪಟಲದಲ್ಲಿರುವ ವಿಚಾರಗಳನ್ನು ಸಂಗ್ರಹಿಸಿ, ಚರ್ಚೆಗೆ ಒಳಪಡಿಸುತ್ತಾ ಸ್ಥಳಿಯ ಜನರ ಚರಿತ್ರೆಯನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿಯೇ ಇಂದು ಪದವಿ ಹಂತದಲ್ಲಿಯೇ ಸ್ಥಳಿಯ ಇತಿಹಾಸದ ಅಧ್ಯಯನಕ್ಕೆ ಮಹತ್ವ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ನೇರ ಮತ್ತು ನೈಜ ಮಾಹಿತಿಯನ್ನು ಕಲೆ ಹಾಕುವಂತಹ ಪ್ರವೃತ್ತಿ ಬೆಳೆಸುವುದರ ಜೊತೆಗೆ ಚರಿತ್ರೆಯ ಪುನರ್ ನಿರ್ಮಾಣಕ್ಕೆ ಅಡಿಪಾಯ ಹಾಕಿದಂತಾಗುತ್ತದೆ.

    ಐತಿಹ್ಯ ಭಾವನೆ, ಜನಪದಗೀತೆ, ಕಥೆ, ಕಾವ್ಯಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜದ ಸಂಪ್ರದಾಯ, ನಡಾವಳಿ ಇತ್ಯಾದಿಗಳನ್ನು ಅಭ್ಯಸಿಸುವ ಮೂಲಕ ಮೌಖಿಕ ಚರಿತ್ರೆಯನ್ನು ಚರಿತ್ರೆಕಾರರು ಮತ್ತು ಸಂಶೋಧಕರು ಜೊತೆಗೂಡಿ ರಚಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇವುಗಳೇ ಮೌಖಿಕ ಚರಿತ್ರೆಯ ಆಧಾರಗಳಾಗಿ ರೂಪುಗೊಳ್ಳುತ್ತಿವೆ. ಭಾವನಾತ್ಮಕವಾದ, ಅತಿಮಾನುಷವಾದ, ಸೃಜನಶೀಲತೆಯಿಂದ ಕೂಡಿರುವ ಬಹುತೇಕ ಜನಪದ ಆಕರಗಳು ಇಂದು ಚರಿತ್ರೆಕಾರರಿಗೆ ವರಪ್ರಸಾದವಾಗಿದೆ. ಆಮೂಲಕ ಗ್ರಾಮ-ಗ್ರಾಮಗಳ. ತೀರ ಹಿಂದುಳಿದ ಹಳ್ಳಿಯಿಂದ ಹಿಡಿದು ಬೆಳೆದು ಹೆಮ್ಮರವಾಗಿರುವ ನಗರ ಪ್ರದೇಶಗಳವರೆಗೆ ಸ್ಥಳೀಯ ಚರಿತ್ರೆ, ಪ್ರಾದೇಶಿಕ ಚರಿತ್ರೆ, ರೈತಾಪಿ ಜನರ ಚರಿತ್ರೆಯನ್ನು ದಾಖಲಿಸಲಾಗುತ್ತಿದೆ. ಇದರಿಂದ ಸ್ಥಳಿಯ ಚರಿತ್ರೆಯ ವಿವಿಧ ಮಜಲುಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಉದಾಹರಣೆಗೆ; ಕೆರೆಗೆ ಹಾರ, ಕುಮಾರ ರಾಮನ ಲಾವಣಿ, ಸಂಗೋಳ್ಳಿ ರಾಯಣ್ಣನ ಸಾಂಗತ್ಯ ಹಾಗೂ ಕೋಟೆಗೆ ಹಾರದಂತಹ ಆತ್ಮಾರ್ಪಣೆಯ ಕಥೆಗಳನ್ನು ಮೌಖಿಕದಲ್ಲಿ ಉದಾಹರಿಸಬಹುದು.

   ಚರಿತ್ರೆಕಾರರ ವಿಚಾರವಂತಿಕೆ ಇಂದು ಬದಲಾವಣೆಯ ಕಾಲಘಟ್ಟಕ್ಕೆ ಹೊಂದಿಕೊಂಡಿರುವುದರಿಂದ ಯಾವುದೇ ದಾಖಲೆಗಳನ್ನು ಹೊಂದಿರದ ರೈತಾಪಿ ಜನರ, ಸಾಮಾನ್ಯ ಜನರ ಚರಿತ್ರೆಯನ್ನು ನಿರೂಪಿಸುವುದರೆಡೆಗೆ ಸಾಗಿದಗದಾರೆ. ಹಿಂದೆ ಚರಿತ್ರೆಯೆಂದರೆ ಕೇವಲ ಪ್ರಭುಗಳ, ರಾಜ-ರಾಣಿಯರ ಜೀವನ, ಅವರ ರಾಜ್ಯಗಳ ನಡುವಿನ ಹೋರಾಟ, ಕೆಲವು ಮಹಾಪುರುಷರ ಜೀವನಗಾಥೆ ಬಿಟ್ಟರೆ ಉಳಿದ ಘಟನೆಗಳನ್ನು ಚರಿತ್ರೆಯಡಿಯಲ್ಲಿ ಸೇರಿಸಿದರು. ಪ್ರಜೆಗಳ ಚರಿತ್ರೆಯನ್ನು ಕಡೆಗಾಣಿಸಲಾಯಿತು. ಆದರೆ ಇತ್ತಿಚಿನ ದಿನಗಳಲ್ಲಿ ಪ್ರಜೆಗಳ ಇತಿಹಾಸಕ್ಕೆ ಮಹತ್ವ ನೀಡಲಾಗುತ್ತಿದೆ. ದೇಶದಲ್ಲಿನ ಶೇಕಡಾ 70% ಕ್ಕೂ ಹೆಚ್ಚಿನವರಿಗೆ ಅಕ್ಷರ ಜ್ಞಾನವಿಲ್ಲದ್ದರಿಂದ ಅವರಿಗೆ ಅಕ್ಷರ ಸಂಸ್ಕøತಿಯ ಜ್ಞಾನ ಇಲ್ಲ ಎಂಬುದಾಗಿ ಅವರ ವಿಚಾರಗಳನ್ನು ಕಡೆಗಾಣಿಸಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ಅವರ ಚರಿತ್ರೆಯೂ ಮುಖ್ಯವಾಗಿದ್ದರಿಂದ ಅಕ್ಞರ ಬಾರದ, ಮುಖ್ಯವಾಹಿನಿಯ ಜ್ಞಾನ ಕೇಂದ್ರಗಳಿಂದ ದೂರವಿರುವ ಪ್ರಜೆಗಳ, ಜನಪದರ ಚರಿತ್ರೆಯನ್ನು ರಚಿಸುವುದು ಚರಿತ್ರೆಕಾರರು ಸವಾಲಾಗಿ ಸ್ವೀಕರಿಸಿ ಚರ್ಚೆಗೆ ಒಳಪಡಿಸುತ್ತಾ, ವಿಚಾರ ಸಂಕಿರಣಗಳಲ್ಲಿ ಮೌಖಿಕ /ಜನಪದ ಆಕರಗಳ ಬಗೆಗೆ ವಿಚಾರಗಳನ್ನು ಮಂಡಿಸುತ್ತಿದ್ದಾರೆ. ಇದರಿಂದ ನಮ್ಮ ನಾಡಿನ ಚರಿತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸುವಂತಹ ಕೆಲಸಕ್ಕೆ ನಾಂದಿ ಹಾಡಿದಂತಾಗುತ್ತದೆ.

   ಜನಸಾಮಾನ್ಯರ, ಅದರಲ್ಲಿಯೂ ರೈತಾಪಿ ವರ್ಗಗಳ, ಕೃಷಿ, ಕೂಲಿಕಾರರ ಚರಿತ್ರೆಯನ್ನು ಭಿನ್ನ ಬಗೆಯ ಸೈದ್ಧಾಂತಿಕತೆಯ ಹಿನ್ನಲೆಯಲ್ಲಿ ಅಭ್ಯಾಸ ಮಾಡುವುದು ಚರಿತ್ರೆಯ ರಚನಾಕಾರರಿಗೆ ಒಂದು ರೀತಿಯಲ್ಲಿ ಸವಾಲಾಗಿತ್ತು. ಐತಿಹಾಸಿಕ ದಾಖಲೆಗಳಿಲ್ಲದ ಜನಸಾಮಾನ್ಯರಲ್ಲಿ ಹುದುಗಿದ್ದ ನೆನಪುಗಳನ್ನು ದಾಖಲಿಸುವ ಪ್ರಯತ್ನ ಆರಂಭವಾಗಿ, ಅವುಗಳು ಭೂತಕಾಲ ಹಾಗೂ ವರ್ತಮಾನಗಳಿಗೆ ಸಂಬಂಧಪಟ್ಟಂತೆ ಚರ್ಚೆಗಳನ್ನು ಏರ್ಪಡಿಸಿ, ಅವುಗಳಿಗೆ ಅನೇಕ ಭಾರಿ ಧಾರ್ಮಿಕ, ಸಾಮಾಜಿಕ ಮನ್ನಣೆಯನ್ನು ನೀಡುತ್ತಾ ಹೋದಂತೆ ಇತಿಹಾಸದ ನವ ಶಕೆಗೆ ಮಾರ್ಗವಾಗಿ ಮೌಖಿಕ ಪರಂಪರೆ ಬೆಳೆಯುತ್ತಿದೆ. ಉದಾಹರಣೆಗೆ ಸಂಗೋಳ್ಳಿ ರಾಯಣ್ಣನ ಲಾವಣಿ, ಕುಮಾರ ರಾಮನ ಕಥೆಯನ್ನು ನೀಡಬಹುದು. ಸಾಮಾಜಿಕ ಹಿನ್ನಲೆಯಲ್ಲಿ ನೋಡುವುದಾದರೆ ಅಂದು ಸತಿ ಪದ್ಧತಿ, ಕೆರೆಗೆ ಹಾರದಂತಹ ಕಥೆಗಳಲ್ಲಿ ಒತ್ತಾಯ ಪೂರ್ವಕವಾದ ಮರಣವನ್ನು ನಿಗಧಿ ಮಾಡುತ್ತಿದ್ದುದರ ಬಗೆಗೆ ಅನೇಕ ಲಾವಣಿಗಳು, ಖಂಡಕಾವ್ಯಗಳು ಇರುವುದರಿಂದಲೇ ಇಂದಿಗೂ ಸಹ ಹಳ್ಳಿಗಳಲ್ಲಿ (ಅನಕ್ಷರಸ್ಥರು)ನ ಹಿರಿಯ ವ್ಯೆಕ್ತಿಗಳ ಸ್ಮøತಿಯಲ್ಲಿ ಇರುವ ವಿಚಾರಗಳನ್ನು ದಾಖಲಿಸುವ ಪ್ರಯತ್ನ ನಡೆಯುತ್ತದೆ. ಒಂದು ಸಮಾಧಾನದ ಸಂಗತಿ ಎಂದರೆ ಕಾಲಗರ್ಭದಲ್ಲಿ ಹುದುಗಿ ಹೋಗುತ್ತಿರುವ ಅನೇಕ ಸತ್ಯ ಘಟನೆಗಳಿಗೆ ಈಗಲಾದರೂ ಜೀವ ಬಂದಂತಾಗಿರುವುದು. ಇದಕ್ಕೆ ಬೆಂಬಲವಾಗಿ ಕೆಲಸ ಆಗಬೇಕಾಗಿರುವುದು ವಿಶ್ವವಿದ್ಯಾಲಯಗಳ ಮಟ್ಟದಲ್ಲಿನ ಗುರುಗಳೊಂದಿಗೆ ಸಂಶೋಧಕರು ಹಾಗೂ ಜನ ಸಾಮಾನ್ಯರು ಕೈಗೂಡಿಸಬೇಕು ಆಗ ಮಾತ್ರ ಮೌಖಿಕ ಚರಿತ್ರೆಗೆ ಹೆಚ್ಚು ಪ್ರಾಮುಖ್ಯತೆ ದೊರಕುವಂತಾಗುತ್ತದೆ.

  ಪಾಶ್ಚಿಮಾತ್ಯರ ಪ್ರಭಾವಕ್ಕೆ ಒಳಗಾದ ಚರಿತ್ರೆಯ ಬರವಣಿಗೆಯು ಕಾಲಗಣನೆಯ ಹಂತವನ್ನು ದಾಟುವಂತೆ ಭಾರತೀಯ ಪರಂಪರೆಯಲ್ಲಿ ಅದರಲ್ಲೂ ಮೌಖಿಕ ಪರಂಪರೆಯಲ್ಲಿ ನೈಜ ಘಟನೆಗಳನ್ನು ಚಕ್ರದಂತೆ ಕಾಲಾನುಘಟ್ಟದಲ್ಲಿ ಹೇಳುವ ಕ್ರಮ ವೈಜ್ಞಾನಿಕವಾಗಿರುವುದನ್ನು ಗುರುತಿಸುವ ಕೆಲಸವ್ನು ವಿದ್ವಾಂಸರುಗಳು ಹಾಗೂ ಇತಿಹಾಸತಜ್ಞರು ಕಾರ್ಯಗತಗೊಳಿಸುತ್ತಿದ್ದಾರೆ ಇದು ಮಂದಗತಿಯಲ್ಲಿ ಸಾಗುವ ಬದಲು ಚುರುಕಾಗಿ ನಡೆಯಬೇಕಾಗಿದೆ. ಇತಿಹಾಸದಲ್ಲಿ ಕಾಲಚಕ್ರಕ್ಕೆ ಹೆಚ್ಚಿನ ಮಹತ್ವವಿದ್ದು, ಈ ಕಾಲಚಕ್ರಕ್ಕೆ ಕೊನೆ ಎಂಬುದೇ ಇರುವುದಿಲ್ಲ. ಒಂದು ಕಾಲಚಕ್ರದ ಆವರ್ತನ ಮುಗಿದ ಮೇಲೆ ಇನ್ನೊಂದು ಕಾಲಚಕ್ರದ ಆವರ್ತನ ಆರಂಭವಾಗುತ್ತದೆ. ಈ ಮಾದರಿಯ ಚರಿತ್ರೆಯ ದೃಷ್ಟಿಕೋನ ಭಾರತೀಯರಿಗೆ ಕಾಲಗಣನೆ ಮತ್ತು ಚಾರಿತ್ರಿಕ ಪ್ರಜ್ಞೆಯಿರಲಿಲ್ಲವೆಂದು ತೀರ್ಮಾನಿಸುತ್ತದೆ. ಹಾಗಾಗಿ ಇತಿಹಾಸದಲ್ಲಿ ಕಾಲಗಣನೆ ಹೆಚ್ಚು ಪ್ರಾಮುಖ್ಯತೆ ಕೊಡುವುದು. ಈ ಕಾಲಗಣನೆ ಮತ್ತು ಚಾರಿತ್ರಿಕ ಪ್ರಜ್ಞೆಯ ಬಗೆಗೆ ಜನಪದವು ಸಹ ಪೂರಕವಾಗಿ ನಿಲ್ಲುತ್ತದೆ.

ಜನಪದದಲ್ಲೂ ಕೂಡ ಜನಪದ ಗೀತೆ, ಕಾವ್ಯ, ಲಾವಣಿ ಇನ್ನಿತರ ಆಕರಗಳಲ್ಲಿ ಯುಗಗಳ ಕಲ್ಪನೆಯ ಮೂಲಕ ನೋಡುವ ಚಾರಿತ್ರಿಕ ನೋಟ ಪ್ರಸ್ತುತದಲ್ಲಿ ಅಸ್ತಿತ್ವದಲ್ಲಿದೆ. ಇಂತಹ ಸಂದರ್ಭದಲ್ಲಿ ಅನೇಕ ಹೊಸ ಘಟನೆಗಳು, ಹೊಸ ಪುರಾವೆಗಳು, ದಾಖಲೆಗಳು ಸಹ ಮೌಖಿಕದಲ್ಲಿ ಸೇರಿರುತ್ತದೆ. ಇಲ್ಲಿ ಮೌಖಿಕ ಆಕರಗಳು ಎಷ್ಟೋ ಭಾರಿ ಸಂದರ್ಭಕ್ಕೆ ಅನುಗುಣವಾಗಿ ಮಾರ್ಪಾಡಾಗುತ್ತದೆ ಹಾಗೂ ಅನೇಕ ಬಾರಿ ಕೆಲವು ವ್ಯೆಕ್ತಿಗಳು ಕಾಲವನ್ನು ಮೀರಿರುವುದನ್ನು ಸಹ ಕಂಡುಬರುತ್ತದೆ.

   ಮೌಖಿಕ ಆಕರಗಳು ಇಂದು ಚರಿತ್ರೆಯ ಸತ್ಯಾ ಸತ್ಯೆತೆಗಳನ್ನು ಹೊರ ಪ್ರಪಂಚಕ್ಕೆ ತೋರುವಂತೆ ಮಾಡುತ್ತಿವೆ ವೈಜ್ಞಾನಿಕವಾಗಿ ಪರಿಶೀಲನೆಗೊಳಪಡಿಸಿದ ವಿಚಾರಗಳು ಎಲ್ಲಾ ಸಂದರ್ಭದಲ್ಲಯೂ ಸಹ ಚರಿತ್ರೆಯನ್ನು ರೂಪಿಸಲು ಸಹಾಯವಾಗುತ್ತವೆ. ಸಂಸ್ಕøತಿಯ ನೆಲೆಗಳಲ್ಲಿ ಮನುಷ್ಯ ಬದುಕಿನ ಸಮಸ್ತ ವ್ಯವಹಾರಗಳನ್ನು ಹೀಗೆಯೇ ನಡೆಯಬೇಕೆಂದು ನಡೆಸುತ್ತಿದ್ದನು. ಕೇಳಿದ್ದನ್ನು ನೆನಪಿಸಿಕೊಳ್ಳುತ್ತಾ, ನೋಡಿದ್ದನ್ನು ಅನುಕರಿಸುತ್ತಾ ಸಂಕಲನ ಮತ್ತು ವ್ಯವಕಲನಗಳ ನಡುವೆಯೇ ಹರಿದು ಬಂದಿರುವ ಎಂತಹ ಸಂಪ್ರದಾಯವನ್ನು ಮೌಖಿಕ ಸಂಪ್ರದಾಯ ಎಂದು ಗುರುತಿಸಲಾಗಿದೆ. ಈ ಸಂಪ್ರದಾಯವು ಪರಂಪರಾನುಗತ ಜ್ಞಾನವನ್ನು ಎಲ್ಲಿಯೂ ಸ್ಥಗಿತಗೊಳಿಸದೇ ಸರಾಗವಾಗಿ ಮುಂದುವರೆಸಿಕೊಂಡು ಬಂದಿದೆ. ಪುರಾಣ, ಐತಿಹ್ಯ, ಗೀತೆ, ಕಥೆ, ಲಾವಣಿ, ಆಚರಣೆ, ವ್ಯವಸಾಯ ಕ್ರಮ, ಆಟ ಹೀಗೆ ಎಲ್ಲವೂ ಅನುಕರಣೆ ಹಾಗೂ ನೆನಪಿನ ಮೂಲಕ ಉಳಿದು ಬೆಳೆದುಕೊಂಡು ಬಂದಿದೆ. ಮೌಖಿಕ ಸಂಪ್ರದಾಯಕ್ಕೆ ಇಂದು ಅಕ್ಷರ ಜ್ಞಾನದ ಶಿಷ್ಟ ಸಂಪ್ರದಾಯದ ತಿರುವು ದೊರೆತಿದೆ. ಇದರಿಂದ ಮೌಖಿಕವಾಗಿಯೇ ಉಳಿದಿದ್ದಂತಹ ಅನೇಕ ವಿಚಾರಗಳು ಇಂದು ಗ್ರಂಥಸ್ಥ ರೂಪಗೊಂಡಿವೆ.

ತೀರ್ಮಾನ: ಮೌಖಿಕ ಸಂಪ್ರದಾಯದಲ್ಲಿ ಮಾತು ಮತ್ತು ಕೃತಿ ಈ ಎರಡೂ ಮಾಧ್ಯಮಗಳಲ್ಲಿ ಬೆಳೆದು ಬಂದ ಜ್ಞಾನ ಹಾಗೂ ವಿಜ್ಞಾನವನ್ನು ಮನುಷ್ಯ ಕೇವಲ ಯಾವುದೇ ಒಂದು ಘಟ್ಟದಲ್ಲಿ ಪಡೆದುಕೊಂಡದಲ್ಲಾ, ಸಂಸ್ಕøತಿಯ ವಿವಿಧ ಅವಸ್ಥೆಗಳಲ್ಲಿ ವಿಭಿನ್ನ ಪರಿಸರಗಳ ನಡುವೆ ತನ್ನೆಲ್ಲಾ ಕ್ರಿಯಾಶೀಲತೆ, ಬುದ್ಧಿವಂತಿಕೆ ಹಾಗೂ ಸೃಜನಶಿಲತೆಗಳಿಂದ ಗಳಿಸಿಕೊಂಡಿದ್ದಾನೆ. ವೈಜ್ಞಾನಿಕ ಪ್ರಗತಿಯಿಂದಾಗಿ ಯಂತ್ರ ನಾಗರಿಕತೆಯ ರೂಪದಲ್ಲಿ ಜಗತ್ತಿನಾದ್ಯಂತ ವೈಚಾರಿಕ ಕ್ರಾಂತಿಯ ಚಂಡಮಾರುತ ಬೀಸಿದ್ದರಿಂದ ಗೌಣವಾಗಿ ಅಡಗಿದ್ದ ವಿಚಾರಗಳ ಬಗೆಗೆ ಆಸಕ್ತಿ ಮೂಡತೊಡಗಿತು. ಇದು ಸಾಧ್ಯವಾಗಿದ್ದು ಬ್ರಿಟಿಷರು ಭಾರತಕ್ಕೆ ಬರುವವರೆಗೆ ಸಾಧ್ಯವಾಗಿರಲಿಲ್ಲ. ಕಿಟೆಲ್, ಗೋವರ್, ಪ್ಲೀಟ್, ಅಬೆ ಡುಬಾಯಸ್ ರವರಂತಹ ತಜ್ಞರಿಂದ ನಮಗೆ ಮೌಖಿಕ ಇತಿಹಾಸದ ಬಗೆಗೆ ತಿಳಿಯಲು ಸಾಕಷ್ಟು ನೆರವಾಗಿದೆ. ಹೀಗೆ ಮೌಖಿಕ ಇತಿಹಾಸ ಎಂಬುದು ನಾಗರಿಕತೆಯ ಕೆಳಹಂತದ ಜನರ ಪಾಲಿಗೆ ವಿಶ್ವಕೊಶ ಎಂದೇ ಹೇಳಬಹುದು ಕಾರಣ ಮೌಖಿಕ ಇತಿಹಾಸ ಎಂಬುದು ಪ್ರಜೆಗಳ ಹಾಗೂ ಸಾಮಾನ್ಯ ಜನರುಗಳ ಇತಿಹಾಸವನ್ನು ಚಿತ್ರಿಸುತ್ತದೆ. ಮೌಖಿಕ ಎಂದರೆ ಇಲ್ಲಿ ಕೇಳುವುದು, ನೆನಪಿನಲ್ಲಿಟ್ಟಿಕೊಳ್ಳುವುದು, ನೋಡುವುದು ಹಾಗೂ ಅನುಕರಿಸುವುದು. ಈ ಸಂಕೀರ್ಣ ಪರಂಪರೆಯಿಂದ ನಿಷ್ಪನ್ನವಾದುದೇ ಆಗಿದೆ. ಮೌಖಿಕತೆಯನ್ನು ಜನರ ಮಾತಿನಿಂದಲೇ ತಿಳಿಯಲಾಗುತ್ತದೆ ಕಾರಣ ಜಾನಪದ ಲಿಖಿತ ರೂಪದ ಲಕ್ಷಣವಲ್ಲ ಅದು ಶಾಬ್ಧಿಕ ರೂಪದಲ್ಲಿರುವಂತದ್ದು, ಮೌಖಿಕ ವ್ಯವಸ್ಥೆ ಜನಪದರ ಅಭಿವ್ಯಕ್ತಿ ಮಾಧ್ಯಮವಾಗಿರುತ್ತದೆ. ಹಾಗಾಗಿ ಜಾನಪದ ಸಾಹಿತ್ಯವನ್ನು ಪರ್ಯಾಯವಾಗಿ ಮೌಖಿಕ ಸಾಹಿತ್ಯ ಎಂದು ಗುರುತಿಸಲಾಗುತ್ತದೆ.        ಈ ಮೇಲಿನ ವಿವರಣೆಗಳು ಇತಿಹಾಸ ರಚನೆಗೆ ಪ್ರಾಥಮಿಕ ಆಕರಗಳನ್ನು ನೀಡುವಲ್ಲಿ ಯಶಸ್ವಿಯಾಗಬೇಕೆಂಬುದೇ ಈ ಲೇಖನದ ಆಶಯವಾಗಿದೆ.

ಆಕರಸೂಚಿ

  1. ಹೆಬ್ಬಾಲೆ ಕೆ ನಾಗೇಶ್, 2016. ಜಾನಪದ ಕರ್ನಾಟಕ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  2. ಲಕ್ಷ್ಮಣ್ ತೆಲಗಾವಿ, 2003, ಸ್ಥಳೀಯ ಚರಿತ್ರೆ ಅಧ್ಯಯನದ ತಾತ್ವಿಕತೆ ಮತ್ತು ಸ್ವರೂಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  3. ವಸು ಮಳಲಿ, 2009, ಮೌಖಿಕ ಇತಿಹಾಸ , ಅಂಕಿತ ಪ್ರಕಾಶನ, ಬೆಂಗಳೂರು.
  4. ಗೋವಿಂದ ರಾಜು ಸಿ.ಆರ್ (ಸಂ), 2011, ಚರಿತ್ರೆ ಅಧ್ಯಯನ, ಸಂಪುಟ 6 ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  5. ಮೋಹನ್ ಕೃಷ್ಣ ರೈ (ಸಂ), 2007, ಚರಿತ್ರೆ ಅಧ್ಯಯನ, ಸಂಪುಟ 3, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  6. ಹೊನ್ನು ಸಿದ್ಧಾರ್ಥ ಸಿ.ಬಿ (ಸಂ), 2014, ಸಾಧನೆ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
  7. ಪಿ.ಕೆ ರಾಜ ಶೇಖರ್, 1990, ಪಿರಿಯಾ ಪಟ್ಟಣದ ಕಾಳಗ ಮೈಸೂರು ವಿಶ್ವವಿದ್ಯಾಲಯ ಮೈಸೂರು.
  8. ಲಕ್ಷ್ಮಣ ತೆಲಗಾವಿ, 1987,ಜನಪದ ವೀರ ಸಾಹಿತ್ಯ, ಚಾರಿತ್ರಿಕ ವಿವೇಚನೆ, ಚಿತ್ರದುರ್ಗ.
  9. ರೋಮಿಲಾ ಥಾಪರ್, 1995,ಇಂಟರ್‍ಪ್ರಿಟಿಂಗ್ ಅರ್ಲಿ ಇಂಡಿಯಾ – ಯು.ಎಸ್.ಎ.
  10. ರಾಜಾ ರಾಮ್ ಹೆಗಡೆ, 1999, ದೇಶೀಯ ಹುಡುಕಾಟ, ದೇಶೀಯ ದರ್ಶನಗಳು, ಅಭಿನವ ಪ್ರಕಾಶನ, ಬೆಂಗಳೂರು.

Reference

  1. Bipan Chandra , 2001, India’s struggle for Independence, penguin.
  2. D.D.Kosambi , 1998, An introduction to the study of Indian history, popular prakashana, Bombay.
  3. R.S Sharma, 1996, Material culture and social formations in Ancient India, Macmillan .
  4. Thomas L Charlton, Louis E mice and Rebecca, 2006, thinking about oral history: theories and applications. Belarus University, Russia.
  5. Louis Stars , 1977, Oral History Encyclopaedia of library and information science (Vol-20), New York
  6. Jane Sharron De Hart , 1993, Oral Sources and Contemporary History  Dispelling old  assumption, The journal of American history.
  7. Ronald J Grele , 1975,  Envelops of sound : the art of  oral  history, Precedent publication , Chicago.
  8. Walter J Ong , 1990,Orality and Literacy ,  London & New york publication,
  9. M.L.K.Murthy ; Folk Tradition and Archaeology of Andhra Pradesh , ICHR Publication , Bangalore 2003  .


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal