Tumbe Group of International Journals

Full Text


ಲಾಕ್‌ಡೌನ್ : ಬದುಕು ಕಟ್ಟಿಕೊಳ್ಳಲು ಹಂಬಲಿಸಿದ ಮಹಿಳೆಯರ ಯಶೋಗಾಥೆಗಳು

ಮಂಜುನಾಥ

ಸಂಶೋಧನಾರ್ಥಿ, ಸಮಾಜಶಾಸ್ತ್ರ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ಹಂಪಿ - ೫೮೩ ೨೭೬.

manjuuppar661996@gmail.com


ಪುಗಿಲು’(Introduction)

ಪ್ರಾಚೀನ ಭಾರತೀಯ ಸಮಾಜಗಳ ಮನುಸ್ಮೃತಿದಲ್ಲಿ ಹಾಗೂ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಹೊರತಳ್ಳಲ್ಪಟ್ಟಿರುವ ಮತ್ತು ಅದರ ವ್ಯಾಪ್ತಿಯ ಅಂಚಿನಲ್ಲಿರುವ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಅಲೆಮಾರಿ ಮತ್ತು ಅರೆ ಅಲೆಮಾರಿಗಳು, ರೈತರು ಮತ್ತು ಮಕ್ಕಳು ಮೊದಲಾದವರನ್ನು ಭಾರತ ಸಂವಿಧಾನದ ಚೌಕಟ್ಟಿನ ಒಳಗೆ ತರಲು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸಾಂಘಿಕವಾಗಿ ವಿವಿಧ ಯೋಜನೆಗಳು ಮತ್ತು ಕಾರ್ಯನೀತಿಗಳ ಮೂಲಕ ಶ್ರಮಿಸಿದವು. ಸರ್ಕಾರದ ಮಟ್ಟಿಗೆ ಅಂತಹ ಪ್ರಯತ್ನಗಳಲ್ಲಿ ‘ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯು ಕೂಡ ಒಂದು. ಗ್ರಾಮೀಣ ಬಡತನದ ಬೇರನ್ನು ಅಲುಗಾಡಿಸುವ ಉದ್ದೇಶದಿಂದ ಈ ಯೋಜನೆಯು ಕಾರ್ಯರೂಪಕ್ಕೆ ತರಲಾಯಿತು. ಇಂತಹ ಯೋಜನೆಯು ಮಹಿಳೆಯರ ಬದುಕಿನಲ್ಲಿ ಯಾವ ರೀತಿಯಲ್ಲಿ ಪ್ರಭಾವಿಸುತ್ತದೆ ಎಂಬುದನ್ನು ತಿಳಿಯುವುದಕ್ಕಿಂತ ಮುಂಚೆ ಮಹಿಳೆಯರ ಕುರಿತ ನನ್ನ ಗ್ರಹಿಕೆಯನ್ನು ಸ್ಪಷ್ಟಪಡಿಸುವುದು ಸೂಕ್ತ. ಮಹಿಳೆಯ ಇನ್ನೊಂದು ಹೆಸರೇ ದುಡಿಮೆ. ಅವಳು ಯಾವತ್ತೂ ದುಡಿಯದೆ ಉಂಡವಳಲ್ಲ. ಅವಳು ದುಡಿಮೆಯನ್ನೇ ತನ್ನ ಅಸ್ತಿತ್ವ ಮತ್ತು ಗುರಿಯನ್ನಾಗಿಸಿಕೊಂಡಿದ್ದಾಳೆ. ಆದರೆ ಅವಳ ಬಗ್ಗೆ ಕುಟುಂಬದೊಳಗಿನ ಹಾಗೂ ಸಮಾಜದೊಳಗಿನ ಮೌಲ್ಯಗಳು ಬದಲಾಗಿಲ್ಲ. ಅವಳು ಇದ್ದ ನೆಲೆಯಲ್ಲಿಯೇ ತನ್ನನ್ನು ಸಂಘರ್ಷಕ್ಕೆ ಒಡ್ಡಿಕೊಳ್ಳುತ್ತಾ, ಬದುಕುಳಿಯುತ್ತಾ, ತನ್ನ ಐಡೆಂಟಿಟಿಯನ್ನು ಗಟ್ಟಿಗೊಳಿಸುತ್ತಾ ಮತ್ತು ಜೀವನೋಲ್ಲಾಸವನ್ನು ಕಾಪಿಟ್ಟುಕೊಳ್ಳುವ ಪರಿ ಎಲ್ಲರನ್ನೂ ಬೆರಗು ಮೂಡಿಸುವಂತಹದ್ದು. ‘ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ಯು ಇಂತಹ ಅಸಂಖ್ಯ ಕಿರಿಯ ಮತ್ತು ಹಿರಿಯ ಜೀವಗಳು ಹಳ್ಳ-ಕೆರೆಯಂಗಳದಲ್ಲಿ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳಲ್ಲಿ ಅನುಭವಿ ಪ್ರಬುದ್ಧ ಶ್ರಮಿಕ ನಕ್ಷತ್ರದಂತೆ ಹೊಳೆಯುವ ಹಾಗೆ ಮಾಡಿದೆ. ಈ ಯೋಜನೆಯು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೇಗೆ ಫಲಿತವಾಗಿ ರೂಪುಗೊಂಡಿದೆ, ಫಲಾನುಭವಿಗಳ ಬದುಕಿಗೆ ಆಧಾರವಾಗಿ ನಿಂತಿದೆ ಎಂಬುವುದನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮಪಂಚಾಯಿತಿಯ ವ್ಯಾಪ್ತಿಗೆ ಬರುವ ಬೆದವಟ್ಟಿ ಗ್ರಾಮದಲ್ಲಿನ ಮಹಿಳೆಯರನ್ನು ಪ್ರಕರಣ ಅಧ್ಯಯನದ ಮೂಲಕ ಮಾಹಿತಿ ಪಡೆದುಕೊಂಡು ತಿಳಿಯಪಡಿಸುವ ಪ್ರಯತ್ನ ಮಾಡುವುದಾಗಿದೆ. ಅದಕ್ಕಾಗಿ ಪುಗಿಲು (Introduction), ಉದ್ದೇಶಗಳು (Objectives), ವ್ಯಾಪ್ತಿ (Scope), ವೈಧಾನಿಕತೆ (Methodology), ಫಲಿತಗಳು (Results), ಕಡೆನುಡಿ (Conclusion), ಪರಾಮರ್ಶನ ಸಾಹಿತ್ಯ (Reference literature) ಮೊದಲಾದ ಅಂಶಗಳ ಮೂಲಕ ಲೇಖನದ ಒಟ್ಟು ಸಾರವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತೇನೆ.

  ಪ್ರಾತಿನಿಧಿಕ ಪದಗಳು (Keywords): ಲಾಕ್‌ಡೌನ್, ಮಹಾತ್ಮ ಗಾಂಧೀ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಮಹಿಳೆ.

ಉದ್ದೇಶಗಳು (Objectives)

೧) ಮಹಿಳೆಯರ ಹೋರಾಟದ ಬದುಕಿನ ನೆಲೆಗಳನ್ನು ಶೋಧಿಸುವುದು.

೨) ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಫಲಿತತೆಯನ್ನು ಶೋಧಿಸುವುದು.

ವೈಧಾನಿಕತೆ (Methodology)

  ಪ್ರಸಕ್ತ ಲೇಖನದ ತಾತ್ವಿಕತೆಯನ್ನು ಕಟ್ಟಿಕೊಡಲು ಅನುವಾಗುವಂತಹ ಮಾಹಿತಿಯನ್ನು ಸಂಗ್ರಹಿಸಲು ‘ಏಕವಿಷಯಕ ಅಧ್ಯಯನ ವಿಧಾನ’ ಬಳಸಿಕೊಂಡಿರುತ್ತೇನೆ. ಅದರಲ್ಲಿಯೂ ಏಕವಿಷಯಕ ಅಧ್ಯಯನಕ್ಕಾಗಿ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳುವಾಗ ‘ಉದ್ದೇಶಿತ ಮಾದರಿ’ಯನ್ನು ಬಳಸಿಕೊಂಡು (ವಿಜಯಲಕ್ಷ್ಮೀ ಇವರು ೫ನೇ ತರಗತಿಯವರೆಗೆ ಮಾತ್ರ ಓದಿರುತ್ತಾರೆ. ತಿಪ್ಪವ್ವ ಈಕೆಯು ಹೂವು ಮಾರಾಟ ಮಾಡಿ ಜೀವನ ನಡೆಸುವವಳು. ರೇಣವ್ವ ಚಹಾದ ಅಂಗಡಿ ನಡೆಸುವವಳು ಹೀಗೆ ಬೇರೆ ಬೇರೆ ಕೆಲಸಗಳನ್ನು ಮಾಡುವ ಮಹಿಳೆಯರನ್ನು ಪ್ರಕರಣ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುತ್ತೇನೆ) ವಿವರಣಾತ್ಮಕ ವಿಧಾನದ ಮೂಲಕ ಈ ಲೇಖನವನ್ನು ಸಿದ್ಧಪಡಿಸಿರುತ್ತೇನೆ.

ಸಂಶೋಧನೆಯ ವ್ಯಾಪ್ತಿ (Scope of the Research)

  ಈ ಮೇಲೆ ಹೇಳಿರುವಂತೆ ಪ್ರಸ್ತುತ ಲೇಖನದ ರಚನೆಗಾಗಿ ನಾನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮಪಂಚಾಯಿತಿಯ ವ್ಯಾಪ್ತಿಗೆ ಬರುವ ಬೆದವಟ್ಟಿ ಗ್ರಾಮದಲ್ಲಿನ ಮಹಿಳೆಯರನ್ನು ಪ್ರಕರಣ ಅಧ್ಯಯನದ ಮೂಲಕ ಮಾಹಿತಿ ಪಡೆದುಕೊಂಡಿರುತ್ತೇನೆ. ಅದರಲ್ಲಿಯೂ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಕೇವಲ ೫ಜನ ಮಹಿಳೆಯರನ್ನು ಮಾತ್ರ ಆಧಾರವಾಗಿಟ್ಟುಕೊಂಡು ಲೇಖನವನ್ನು ರಚಿಸಿದ ಕಾರಣಕ್ಕಾಗಿ ಈ ಎರಡು ಅಂಶಗಳೇ ನನ್ನ ಸಂಶೋಧನಾ ವ್ಯಾಪ್ತಿಯನ್ನು ಸೂಚಿಸುತ್ತವೆ.

ಈ ಭಾಗದ ಉದ್ಯೋಗ ಖಾತರಿ ಯೋಜನೆಯ ಸಂಕ್ಷಿಪ್ತ ಅಂಕಿಅಂಶಗಳು

ಈ ಯೋಜನೆಯು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೇಗೆ ಫಲಿತವಾಗಿದೆ. ಫಲಾನುಭವಿಗಳ ಬದುಕಿಗೆ ಆಧಾರವಾಗಿ ನಿಂತಿದೆ ಎಂಬುವುದನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮಪಂಚಾಯಿತಿಯ ವ್ಯಾಪ್ತಿಗೆ ಬರುವ ಬೆದವಟ್ಟಿ ಗ್ರಾಮದಲ್ಲಿನ ಮಹಿಳೆಯರನ್ನು ಪ್ರಕರಣ ಅಧ್ಯಯನದ ಮೂಲಕ ಮಾಹಿತಿ ಪಡೆದುಕೊಂಡು ತಿಳಿಯಪಡಿಸುವ ಉದ್ದೇಶವನ್ನು ಈ ಬರೆಹವು ಹೊಂದಿದೆ. ಅದಕ್ಕಿಂತ ಮುಂಚೆ ಶಿರೂರು ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ‘ಉದ್ಯೋಗ ಖಾತರಿ ಯೋಜನೆ’ಯ ಸಂಕ್ಷಿಪ್ತ ಅಂಕಿಅಂಶಗಳ ವಿವರವನ್ನು ನೋಡಬಹುದಾಗಿದೆ.

ಶಿರೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ‘ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಲ್ಲಿ ಉದ್ಯೋಗ ಚೀಟಿಗಳ ನೋಂದಾಯಿತ ಸಂಖ್ಯೆ ಮತ್ತು ದುಡಿಯುವ ವ್ಯಕ್ತಿಗಳ ಸಂಖ್ಯೆಯ ಕೋಷ್ಠಕ

ಕ್ರಮ ಸಂಖ್ಯೆ

ಗ್ರಾಮಗಳು

ಉದ್ಯೋಗ ಚೀಟಿಗಳ ಸಂಖ್ಯೆ

ವ್ಯಕ್ತಿಗಳು

೦೧

ಅರಕೇರಿ

೪೧೯

೧೬೪೨

೦೨

ಬೆದವಟ್ಟಿ

೩೯೨

೧೩೯೭

೦೩

ಚೆಂಡೂರು

೪೭೩

೧೬೦೫

೦೪

ಶಿರೂರು

೭೩೦

೨೭೩೯

೦೫

ಯಡಿಯಾಪುರ

೬೦೪

೨೧೮೮

 

ಒಟ್ಟು

೨೬೧೮

೯೫೭೧

 

ಮಾಹಿತಿ: Developed By NIC-DRD Informatics Centre, Krishi Bhawan, New Delhi.

ಶಿರೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ‘ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಲ್ಲಿ ಪರಿಶಿಷ್ಟ ಜಾತಿಗಳ ಉದ್ಯೋಗ ಚೀಟಿಗಳ ಸಂಖ್ಯೆ ಮತ್ತು ದುಡಿಯುವ ವ್ಯಕ್ತಿಗಳ ಸಂಖ್ಯೆಯ ಕೋಷ್ಠಕ

ಕ್ರಮ ಸಂಖ್ಯೆ

ಗ್ರಾಮಗಳು

ಪರಿಶಿಷ್ಟ ಜಾತಿಗಳ ಉದ್ಯೋಗ ಚೀಟಿಗಳ ಸಂಖ್ಯೆ

ವ್ಯಕ್ತಿಗಳು

೦೧

ಅರಕೇರಿ

೮೩

೩೩೧

೦೨

ಬೆದವಟ್ಟಿ

೯೧

೩೨೯

೦೩

ಚೆಂಡೂರು

೭೭

೨೮೦

೦೪

ಶಿರೂರು

೯೮

೪೦೮

೦೫

ಯಡಿಯಾಪುರ

೧೧೦

೪೨೪

 

ಒಟ್ಟು

೪೫೯

೧೭೭೨

 

ಮಾಹಿತಿ: Developed By NIC-DRD Informatics Centre, Krishi Bhawan, New Delhi.

ಶಿರೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ‘ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಲ್ಲಿ ಪರಿಶಿಷ್ಟ ಪಂಗಡಗಳ ಉದ್ಯೋಗ ಚೀಟಿಗಳ ಸಂಖ್ಯೆ ಮತ್ತು ದುಡಿಯುವ ವ್ಯಕ್ತಿಗಳ ಸಂಖ್ಯೆಯ ಕೋಷ್ಠಕ

ಕ್ರಮ ಸಂಖ್ಯೆ

ಗ್ರಾಮಗಳು

ಪರಿಶಿಷ್ಟ ಪಂಗಡಗಳ ಉದ್ಯೋಗ ಚೀಟಿಗಳ ಸಂಖ್ಯೆ

ವ್ಯಕ್ತಿಗಳು

೦೧

ಅರಕೇರಿ

೨೯

೧೧೧

೦೨

ಬೆದವಟ್ಟಿ

೧೦

೩೯

೦೩

ಚೆಂಡೂರು

೨೯

೧೦೧

೦೪

ಶಿರೂರು

೩೫

೧೫೦

೦೫

ಯಡಿಯಾಪುರ

೨೪

೮೮

 

ಒಟ್ಟು

೧೨೭

೪೮೯

 

ಮಾಹಿತಿ: Developed By NIC-DRD Informatics Centre, Krishi Bhawan, New Delhi.

ಶಿರೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ‘ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಲ್ಲಿ ಇತರೆ ವರ್ಗಗಳ ಉದ್ಯೋಗ ಚೀಟಿಗಳ ಸಂಖ್ಯೆ ಮತ್ತು ದುಡಿಯುವ ವ್ಯಕ್ತಿಗಳ ಸಂಖ್ಯೆಯ ಕೋಷ್ಠಕ

ಕ್ರಮ ಸಂಖ್ಯೆ

ಗ್ರಾಮಗಳು

ಇತರೆ ವರ್ಗಗಳ ಉದ್ಯೋಗ ಚೀಟಿಗಳ ಸಂಖ್ಯೆ

ವ್ಯಕ್ತಿಗಳು

೦೧

ಅರಕೇರಿ

೩೦೭

೧೨೦೦

೦೨

ಬೆದವಟ್ಟಿ

೨೯೧

೧೦೨೯

೦೩

ಚೆಂಡೂರು

೩೬೭

೧೨೨೪

೦೪

ಶಿರೂರು

೫೯೭

೨೧೮೧

೦೫

ಯಡಿಯಾಪುರ

೪೭೦

೧೬೭೬

 

ಒಟ್ಟು

೨೦೩೨

೭೩೧೦

 

ಮಾಹಿತಿ: Developed By NIC-DRD Informatics Centre, Krishi Bhawan, New Delhi.

ಶಿರೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ‘ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಲ್ಲಿ ಭಾಗವಹಿಸುವ ಮಹಿಳೆಯರ ಮತ್ತು ಪುರುಷರ ಸಂಖ್ಯೆಯ ಕೋಷ್ಠಕ

ಕ್ರಮ ಸಂಖ್ಯೆ

ಗ್ರಾಮಗಳು

ಮಹಿಳೆಯರ ಸಂಖ್ಯೆ

ಪುರುಷರ ಸಂಖ್ಯೆ

೦೧

ಅರಕೇರಿ

೭೫೦

೮೯೨

೦೨

ಬೆದವಟ್ಟಿ

೬೮೩

೭೧೪

೦೩

ಚೆಂಡೂರು

೭೫೨

೮೫೩

೦೪

ಶಿರೂರು

೧೩೦೭

೧೪೩೨

೦೫

ಯಡಿಯಾಪುರ

೧೦೪೪

೧೧೪೪

 

ಒಟ್ಟು

೪೫೩೬

೫೦೩೫

 

ಮಾಹಿತಿ: Developed By NIC-DRD Informatics Centre, Krishi Bhawan, New Delhi.

ಪ್ರಕರಣಗಳ ಪರಿಶೀಲನೆ

ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆದವಟ್ಟಿ ಗ್ರಾಮದಲ್ಲಿ ‘ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯಲ್ಲಿ ಉದ್ಯೋಗ ಚೀಟಿಯನ್ನು ಹೊಂದಿದವರಲ್ಲಿ ವಿಜಯಲಕ್ಷ್ಮೀ, ರತ್ನವ್ವ, ರೇಣವ್ವ, ಲಲಿತವ್ವ, ತಿಪ್ಪವ್ವ ಮೊದಲಾದವರುಗಳಾಗಿದ್ದಾರೆ. ಅವರೇ ಹೇಳಿದ ಹಾಗೇ ಅವರ ಜೀವನದ ನೈಜ ಘಟನೆಗಳು, ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಕೂಲಗಳು, ಅನಾನುಕೂಲಗಳು ಇತ್ಯಾದಿ ಅಭಿಪ್ರಾಯಗಳು ಈ ಕೆಳಗಿನಂತಿವೆ.

ಪ್ರಕರಣ - ಒಂದು

‘ನನ್ನ ಹೆಸರು ವಿಜ್ಜವ್ವ (ವಿಜಯಲಕ್ಷ್ಮೀ) ರಾಟಿ ಅಂತ. ೫ನೇತ್ತರ ತನಕ ಸಾಲಿ ಕಲತಿನಿ. ಚೂರು-ಚೂರು ಕನ್ನಡ ಮತ್ತ ಇಂಗ್ಲೀಶು ಓದಾಕ ಬರತೈತಿ. ನನ್ನ ಹಿಟ್ನಾಳ್‌ಗೆ ಮದಿವಿ ಮಾಡಿ ಕೊಟ್ಟಿದ್ರು. ನನ್ನ ಗಂಡನ ಹೆಸರು ನಾಗರಾಜ. ನನ್ನ ಬಾಳೆವು ಸಜ್ಜ ಇಲ್ಲದಕ ನಾ ತವರ ಮನಿಯಾಗ ಬಂದ ಅದಿನಿ. ಇಲ್ಲೆ ಇದ್ದು ಸನೇಕ ಒಂದ ೮-೧೦ ವರುಷಾಗಿರಬೇಕು. ನನಗ ಸಣ್ಣಾಕಿದ್ದಾಗ ಸಾಲಿ ಕಲಿಬೇಕು ಅಂತ ಬಾಳ ಆಸೆ ಇತ್ತು, ಆದ್ರ ಬಡತನ ಪರಸ್ಥಿತಿ ನಮ್ಮಂತ ಹೆಣಮಕ್ಳನ ಸಾಲಿ ಕಟ್ಟಿ ಹತ್ತಿಸಿಕೊಡಲಿಲ್ಲ.

ನಮ್ಮ ಅಪ್ಪಾಗ ಇಬ್ಬರ ತಮ್ಮನಾರು ಮತ್ತ ಇಬ್ಬರ ತಂಗ್ಯಾರು ಅದಾರ. ಅದರಾಗ ಸಣ್ಣಾಕಿ ಗಂಡ ಸತ್ತ ಹೋಗ್ಯಾನ, ಆಕಿಗೆ ಒಂದ ಗಂಡು, ಒಂದು ಹೆಣ್ಣು ಅದಾವು. ಹೀರೆಕಿ ಗಂಡ ಆಕಿನ ಬಿಟ್ಟು ಹೋಗಿದ್ದ, ಆಕಿಗೆ ೧ ಹೆಣ್ಣು, ೨ ಗಂಡು ಇದ್ದವು. ನಾವು ಎಲ್ಲಾರು ಕೂಡೆ ಇದ್ವಿ. ನಮ್ಮಪ್ಪ ಮನಿಗೆ ಹೀರೆ ಮಗ ಆಗಿದಕ ಎಲ್ಲಾರನೂ ದುಡಿದ ಸಾಕಬೇಕಾಗಿತ್ತು. ನಮ್ಮ ಕಾಕಾನಾರು ಲಗ್ನ ಆಗಿ ಬ್ಯಾರೇ ಆಗಿ ಬಿಟ್ರು. ಅವರ ಲಗ್ನದ ಸಾಲ ನಮ್ಮಪ್ಪ ನಮ್ಮವ್ವನ ಮ್ಯಾಲೇ ಬಿತ್ತು. ಅದರಾಗ ಬ್ಯಾರೇ ನಮ್ಮ ಅವ್ವ ನಮ್ಮ ತಮ್ಮನ್ನ ಹೊಟ್ಟಿಲೆ ಇದ್ಲು.

ನಮ್ಮ ಕಾಕಾ(ಚಿಕ್ಕಪ್ಪ)ನಾರು ಮತ್ತ ನಮ್ಮ ಅತ್ತಿಯಾರು ಎಲ್ಲಾರು ಬ್ಯಾರೇ ಇದ್ರು, ನಮ್ಮಪ್ಪ ತಂದ ಸೆಂತಿನ ಎಲ್ಲಾರು ಹಂಚಿಗೊತಿದ್ರು. ನಮಗ ಒಂದು ಮರದಾಗ ತುಸಾನ ಅಕ್ಕಿ ಬ್ಯಾಳಿ ಕೊಡತಿದ್ರು. ಆದ್ರ ನಾವು ೮ ಮಂದಿ ತದ್ವಿ ನಮಗ ಅವು ಸಾಕಗತಿದ್ದಿಲ್ಲ. ಒಂದು ದಿನ ಹಬ್ಬದಾಗ ನಮ್ಮ ಅತ್ಯಾರು ಚೆಪಾತಿ ಬೆಲ್ಲದ ಬ್ಯಾಳಿ ಮಾಡಿದ್ರು ನಮ್ಮ ತಂಗಿ ಮತ್ತ ನಮ್ಮ ತಮ್ಮ ಇಬ್ಬರು ಅವರ ಮನಿ ಬಾಗಲದಾಗ ನಿಂತು ನೋಡಿ ಒಳಗ ಹೋದ್ರ ನಮ್ಮ ಅತ್ತಿ ಬಡದ ಕಳಸಿದ್ಲು. ಬಾಯಿ ಇಲ್ಲದ ಅವರಿಬ್ಬರೂ ನಮ್ಮ ಅಪ್ಪ ಬಂದ್ರ ಕೈಲೆ ಸೊನ್ನಿ ಮಾಡಿ ಬಾಗಲದ ಹಿಂದ ನಿಂತ ಕೈತುಗೊಂಡು ಬಾಯಿ ಮ್ಯಾಲೇ ಇಟ್ಟಕೊಂಡು ಹೊಟ್ಟಿ ಹಸದೈತಿ ಅಂತ ಸೊನ್ನಿ ಮಾಡಿದ್ರು. ಅವತ್ತ ನನ್ನ ಸಾಲಿ ಪಡಸಾಲಿ ಆಗಿ ಹೋತು ನಾನ ಸಾಲಿ ಬಿಟ್ಟು ಕೆಲಸಕ್ಕ ಹೊಂಟ್ಯಾ. ಕೆಲಸಕ್ಕ ಹೊಂಟಾಗ ನಾನು ಬಾಳ ಸಣ್ಣಾಕಿ ಇರದರಿಂದ ನನ್ನ ಯಾರು ಕೆಲಸಕ್ಕ ಕರಕೊಂತಿರಲ್ಲಿಲ್ಲ. ಆದ್ರ ಕನಕಮ್ಮ ಅನ್ನುವಾಕಿ ನನಗ ತಿಳಿ ಹೇಳಿ ಲಂಗ-ಜಂಪಾರು ಆಕೆಂಡು ಬಂದ್ರ ಕೆಲಸಕ್ಕ ಕರಕೊಳ್ಳ ಲೇ ನೀನು ನಾಳಿಲಿದ್ದ ಸೀರಿ ಉಟಗೊಂಡು ಬಾ ಅಂತ ಹೇಳಿ ಆಕಿನ ನನ್ನ ದಗದ ಮಾಡಕ ಕರಕೊಂಡು ಹೊಂಟ್ಲು.

ಬಡತನ ಪರಸ್ಥಿತಿಯಾಗ ನಮ್ಮಪ್ಪ ಹಿಂದು ಮುಂದು ಯೋಚನೆ ಮಾಡದಾ ಕುಡುಕುಗಾ ನನ್ನ ಲಗ್ನ ಮಾಡಿ ಕೊಟ್ಟ. ಅವ ತುಸಾ ದಿನ ಆದ ಮ್ಯಾಲ ಕುಡುದ ಬಂದ ಹೊಡಿಯಾಕ ನಿಂತ. ಲಗ್ನ ಆಗಿ ಒಂದುವರೆ ವರುಷ ಆದ ಮ್ಯಾಲ ಒಂದ ಹೆಣ್ಣು ಹುಟ್ಟಿತು. ಆ ಕೂಸು ಅವಾಗ ಸತ್ತ ಹೋತು. ನನ್ನ ಗಂಡನೂ ಮತ್ತ ಮನಿಗೆ ಬರಲಿಲ್ಲ. ಈಗ ನನ್ನ ತವರ ಮನಿಯಾಗ ಅದಿನ್ರಿ.

ಬ್ಯಾರೇ ಬ್ಯಾರೇ ಊರಿಗೆ ಕೆಲಸಕ್ಕ ಹೋಕ್ಕಿನಿ, ಬಂದ ರೊಕ್ಕದಾಗನ ನನ್ನ ಮನಿತಾನ ನೆಡಸತಿನಿ. ಬಾಳ ಅಂದ್ರ ಹತ್ತಿ ಕ್ರಾಸು, ತಮಾಟಿ ಕ್ರಾಸು, ಮೆಣಸಿನ ಕ್ರಾಸು ಕಲ್ಲಂಗಡಿ ಪ್ಲಾಟು ಮಾಡಕ ಹೋಕಿವ್ರಿ. ಕುದುರಿಮೋತಿ ಮಂಗಳೂರು ಅಲ್ಲೆಲ್ಲಾ ನಾವು ಮೇಣಸಿನ ಪ್ಲಾಟು ಮಡಾಕ ಹೋಗಿವಿ. ಆದ್ರ ಈ ಕೊರೋನ ಬಂದು ನಮ್ಮ ಹೊಟ್ಟಿ ಮ್ಯಾಲ ಚಪ್ಪಡಿ ಕಲ್ಲು ಎಳದ ಬಿಟ್ಟಿತು. ಮೆಣಸಿನ ಪ್ಲಾಟು, ಕಲ್ಲಂಗಡಿ ಪ್ಲಾಟು ಮಾಡಾಕ ಹೋಕ್ಕಿದ್ವೆಲ್ಲಾ ಅವರು ನಮ್ಮನ್ನ ಕೆಲಸದಿಂದ ಬಿಡಿಸಿಬಿಟ್ರು. ಈ ಲಾಕ್‌ಡೌನ್ ಸಮಯದಾಗ ಎಲ್ಲಾ ಊರಾರು ಬ್ಯಾರೇ ಊರಾನ ಮಂದಿ ನಮ್ಮೂರಿಗೆ ಬರೋದು ಬ್ಯಾಡ ಅಂತ ರೋಡ್ ಕಡುದು ಮುಳ್ಳುಬೇಲಿ  ಆಕಿದ್ರು. ಅದಾ ವೇಳೆದಾಗಾನ ಉದ್ಯೋಗ ಖಾತ್ರಿ ಕೆಲಸ ಬಂದುವ ಅದರಾಗ ಕೆಲಸ ಮಾಡಿದ್ವಿ. ಮೊದಲ ಒಂದು ೧೦-೧೨ ದಿನ ದುಡಿಸಿಕೊಂಡ್ರು ಆ ಮ್ಯಾಲ ನಮಗ ಕೆಲಸಾನ ಕೊಡಲಿಲ್ಲ. ಯಾಕಂತ ಕೆಲಸ ಮಾಡಸ ಮೇಸ್ತಿçನ ಕೇಳಿದ್ರ ಅವಾ ಕೆಲಸ ಮುಗಿತು ಅಂತ ಹೇಳಿದ್ರು. ತುಸಾ ದಿನ ಆದ ಮ್ಯಾಲೇ ನಮ್ಮ ನಮ್ಮ ಪಾಸ್‌ಬುಕ್ಕಾದಗ ರೋಕ್ಕ ಬಂತು ಆಗ ಕೆಲಸ ಮಾಡಿಸಿದ ಮೇಸ್ತಿç ನಮ್ಮ ಹೊಲದಾಗ ಒಡ್ಡು ಹಾಕಿಸಿನಿ ಅದಕ ನಿಮ್ಮ ಹೆಸರು ಹಾಕಿದ್ದಾ ಅದ ರೊಕ್ಕ ಬಂದೈತಿ ಅದನ ನಮಗ ಬಿಡಿಸಿಕೊಡ್ರಿ ಅಂತ ಜಬರಿಸಿ ನಮ್ಮ ಕಡೆಯಿಂದ ರೊಕ್ಕ ತಗೊಂಡ್ರು’ ಅಂತ ವಿಜ್ಜವ್ವ ಹೇಳುತ್ತಾಳೆ.

ಪ್ರಕರಣ ಎರಡು

‘ನನ್ನ ಹೆಸರು ರತ್ನವ್ವ ಫಕೀರಪ್ಪ ಅಳವಂಡಿ. ನನ್ನ ತವರಮನಿ ಬೆಣಕಲ್ಲು. ನನ್ನ ಸಣ್ಣಾಕಿ ಇದ್ದಾಗ ಮದಿವಿ ಮಾಡಿ ಗಂಡನ ಮನಿಗೆ ಕಳಿಸಿದ್ರು. ಆ ಊರು ಭೈರಾಪುರ. ಆ ಊರಾಗ ನಮ್ಮ ಹೀರೆರು ಜಗಳ ಮಾಡಿ ನಾವೆಲ್ಲಾರು ಕೂಡಿ ಹುಲಕೋಟಿಗೆ ಹೋಗಿದ್ವಿ. ಅಲ್ಲಿ ಒಂದ ೧೦-೧೫ ವರುಷ ಇದ್ದು ಹಂಗ ತಮ್ಮ ಅಕ್ಕತಂಗ್ಯಾರು ಕೂಡಾ ನ್ಯಾಯ ಮಾಡಿ ನಮ್ಮ ಮನಿಯಾರು ಬೆದವಟ್ಟಿಗೆ ಬಂದ್ರು. ತುಸಾ ದಿನ ಆದ ಮ್ಯಾಲೇ ನಾನು ನನ್ನ ಮಕ್ಕಳು ಎಲ್ಲಾರು ಕೂಡಿ ಈ ಊರಿಗೆ ಬಂದ್ವಿ. ನನಗ ಒಟ್ಟಾ ೬ ಮಂದಿ ಮಕ್ಕಳು, ಅದರಾಗ ೪ ಮಂದಿ ಹೆಣಮಕ್ಳು ಮತ್ತ ೨ ಗಣಮಕ್ಳು ಅದಾರ. ಹೆಣಮಕ್ಳನ ಎಲ್ಲಾರನ್ನು ಮದುವಿ ಮಾಡಿ ಕೊಟ್ಟಿವಿ.

ನಮಗ ಸ್ವಂತ ಜಾಗಾನು ಇಲ್ಲ, ಹೊಲಾನು ಇಲ್ಲ. ನಮ್ಮ ಅಕ್ಕನ ಜಾಗಾದಾಗ ಅದಿವಿ. ಬಡತನ ಬಾಳ ನಮಗ ಕಾಡೈತಿ. ಹೆಣಮಕ್ಳ ಮದುವಿ ಮಾಡಾದು ಅಂದ್ರ ಸುಮ್ನಲ್ಲ. ಅದಕ ಬಾಳ ರೊಕ್ಕ ಹೊಕೈತಿ ಅದಕ ಈ ಧರ್ಮಸ್ಥಳ ಗುಂಪಿನ್ಯಾಗ ಸಾಲ ತಗೊಂಡು, ಯಲಬುರ್ಗಾ ಮತ್ತ ಕೊಪ್ಪಳ ಬ್ಯಾಂಕಿನ್ಯಾಗ ಸಾಲ ತೊಗೊಂಡು ಮಕ್ಕಳ ಮದಿವಿ ಮಾಡಿವಿ. ಆ ಸಾಲ ತೀರಸಾಕ ಬ್ಯಾರೇ ಬ್ಯಾರೇ ಊರಿಗೆ ಹೋಗಿ ದುಡುದು ಬಂದು ಸಾಲ ಅರದಿವಿ.

ತಿಮ್ಮಾಪುರ ಅಡಿವಿ, ಬನ್ನಿಕೊಪ್ಪದ ಅಡಿವಿಗೆ ಅತ್ತಿಬೀಡಸಾಕ ಹೋಗಿವಿ, ತೊಂಡ್ಯಾಳು-ಬಂಡ್ಯಾಳ ಅಡಿವಿಗೆ ಮತ್ತ ತಳಕಲ್ ಅಡಿವಿಗೆ ಉಳ್ಳಾಗಡ್ಡಿ ಹೊಲದನ ಕಳೆ ತೆಗಿಯಾಕ ಹೋಗಿವಿ. ಕುಕನೂರಲಿದ್ದ ಯಲಬುರ್ಗಾ ಹೊಸಳ್ಳಿ ತನಕ ರೋಡ ಮಾಡ ಕೆಲಸಕ್ಕ ಹೋಗಿವಿ. ಹ್ವಾದ ವರುಷ ಸಿದ್ನೆಕೊಪ್ಪ, ಸೊಂಪುರ ಅಡಿವಿಗೆ ಹೆಸರಬುಡ್ಡಿ ಬಿಡಸಾಕ ಹೋಗಿ ದುಡಕಂದು ಬಂದು ಸಾಲ ಅರದಿವಿ. ನನ್ನ ಜೀವ ಬರೇ ದುಡುದು ರೊಕ್ಕಾನ ಬಡ್ಡಿ ಕಟ್ಟಾಕ ಹೊಗೈತಿ. ಇದ್ದಾರು ೧೦೦೦ ರೂಪಾಕ ೩೦ ರೂಪೆ ಬಡ್ಡಿ ಸಾಲ ಕೊಡತಾರ. ಅವರತಾಕ ಸಾಲ ಮಾಡದು ದುಡುದು ಬಡ್ಡಿ ಕಟ್ಟೊದು ಇದ ನಮ್ಮ ದಗದ ಹಾಗೈತಿ. ಅದರಾಗ ಬ್ಯಾರೆ ನಮ್ಮ ಕಡೆ ಸರಿತ್ನಾಗ ಮಳಿಯಾಗಂಗಿಲ್ಲ ಅದಕ ಬೆಳಿನೂ ಬರಂಗಿಲ್ಲ. ಬ್ಯಾರೇ ಊರಿಗೆ ಹೋಗಿ ದುಡಕಂಬಂದ್ರ ಊರಾಗಿನ ಹೀರೆರೂ ಕಣ್ಣು ಕೆಂಪಗ ಮಾಡತಾರ.

ಹೀಗ ಒಂದ ೬-೭ ವರುಷದಿಂದ ತಿಮ್ಮಾಪುರ ಅಡಿವಿಗೆ ಕೆಲಸಕ್ಕ ಹೋಗಿ ಬರತಿದ್ವಿ. ದಾರಿ ದೂರ ಹಾಕೈತಿ ಅಂತ ಗಾಡಿ ಡೈವರ್ ಸಣ್ಣ ಹುಡುಗ ರಾತ್ರಿ ಗಾಡ್ಯಾಗ ಮಲಗತಿದ್ದ. ಒಂದ ದಿನ ಅತ್ತಿ ಬಿಡಸಕ ಹೋಗಿ ಬಂದ ಮ್ಯಾಲ ನಮ್ಮೂರಿನ ಅಲಕಟ್ ಬಾಡ್ಯಾನಾರು ಗಾಡಿ ಡ್ರೈವರ್‌ನ ರಾತ್ರಿ ಮಲಗಿದಾಗ ಅವನ ಹೆದರಿಸಿ. ನಮ್ಮ ಊರನ್ನ ಎಲ್ಲಾ ಆಳನ ಕರಕಂಡು ನಿಮ್ಮೂರಿಗೆ ಹೋದ್ರ ನಾವೇನು ಕತ್ತಿ ಕಾಯಾನನು. ಇದಾ ಲಾಸ್ಟು ಇನ್ನೊಮ್ಮೆ ನಮ್ಮ ಊರಿಗೆ ಬಂದ್ರ ನಿನ್ನ ಕಾಲ ಕಡಿತಿವಿ ಅಂತ ಹೆದರಕಿ ಹಾಕಿ ಆ ಹುಡುಗನ್ನ ರಾತ್ರಿನ ಜಾಗ ಬಿಡಿಸಿದ್ರು. ಹೊಟ್ಟಿಕಿಚ್ಚಿನ ಮಂದಿ ತಾವು ಕೆಲಸ ಕೊಡಲ್ಲಾ ಬ್ಯಾರೇದಾರಿಗೂ ಬಿಡಲ್ಲ. ‘ಅವರ ಹೆಜ್ಜಾಗ ಚೆಜ್ಜಿ ಬಿತ್ತಲಿ’ ಅಂತ ಕುಲಿಗೆಡಿ ಮಂದಿ ಈ ಊರಾಗ ಐತಿ.

ಅಂತಾದ್ರಾಗ ಈ ಹಾಳದ ಕೋರೋನ ಒಂದು ಬಂತು. ಅವಗಂತ್ರು ನಮ್ಮ ಗತಿ ನೋಡಬಾರ್ದು. ಚೆಂದಾಗ ಕೂಳು ಕುಚಿಕೊಂಡು ತಿನ್ನಾಂಗಿರಲ್ಲಿಲ್ಲ. ಸೆಂತಿ ಮಾಡಾಕ ಹೋಗಬೇಕಂದ್ರ ಎಲ್ಲಾ ಬಂದ ಮಾಡಿದ್ರು. ಬಸ್ಸು-ಪಸ್ಸು ಏನೂ ಇರಲಿಲ್ಲ. ಅಂತಾದ್ರಾಗ ಈ ಗುಂಪಿನ್ಯಾರಿಗೆ ಸಾಲ ಕಟ್ಟಬೇಕು. ಗುರುವಾರ ಬಂತು ಅಂದ್ರ ನನ್ನ ಜೀವ ಹೋದಾಂಗ ಆಗುತ್ತ. ಯಾಕ ಅದಾ ಯ್ಯಾಳಾಕ ಈ ಉದ್ಯೋಗ ಖಾತ್ರಿ ಕೆಲಸ ಬಂತು ಅದರಾಗ ನಾನು ನನ್ನ ಮಗ ಮತ್ತ ಮಗಳು ಕೆಲಸಕ್ಕ ಹೋಗಿದ್ವಿ. ಅದಾ ನಮಗ ಅನ್ನ ಆಕಿತು. ಆದ್ರ ಕೆಲವು ಮಂದಿ ನನಗ ಗೊತ್ತಾಗಂಗಿಲ್ಲ ಅಂತ ನಾ ದುಡಿದಿದ್ದು ಸ್ವಲ್ಪ ಆಳಿಂದು ರೊಕ್ಕ ಕೊಟ್ರು. ಇತ್ತು ೫-೬ ಆಳಿಂದು ರೊಕ್ಕಾನ ಬಂದಿಲ್ಲ. ಇದನ ಯಾರ ಮುಂದಾ ಹೇಳಾಂಗುನೂ ಇಲ್ಲ. ಅಂತ ಪರಿಸ್ಥಿತಿ ಐತಿ ಈಗ ಎಲ್ಲಾ ಇದ್ದಾರ ನಮ್ಮ ರೊಕ್ಕ ನುಂಗಿ ನೀರು ಕುಡಿತಾರ’ ಅಂತ ತನ್ನ ಮನದ ಅಳಲನ್ನು ರತ್ನವ್ವ ತೋಡಿಕೊಳ್ಳುತ್ತಾಳೆ.

ಪ್ರಕರಣ - ಮೂರು

‘ನನ್ನ ಹೆಸರು ರೇಣವ್ವ ಅಂಗಡಿ. ಈಗ ನನಗ ಹೆಚ್ಚು ಕಮ್ಮಿ ಒಂದ ೬೦ ವರಸ್ಸು ಆಗಿರಬೇಕು. ನನ್ನ ಬಾಳ ಸಣ್ಣ ವಯಸ್ಸಿಗೆ ಲಗ್ನ ಮಾಡಿ ವರತಾಟ್ನಾಳಿಗೆ ಕೊಟ್ರು. ನಾನು ಇನ್ನಾ ಆ ಮನಿಗೆ ನೇಡಿಯ್ಯಾಕಾನ ಹೋಗಿದ್ದಿಲ್ಲ ಅವಾಗನ ನನ್ನ ಗಂಡ ಸತ್ತ ಹೋದ. ಮತ್ತ ನಾ ನನ್ನ ಗಂಡನ ಮನಿಗೆ ಹೊಗಲೇ ಇಲ್ಲ. ಅದಾದ ತುಸಾ ದಿನ ನನ್ನ ತವರ ಮನಿಯ್ಯಾಗ ಇದ್ಯಾ. ಒಮ್ಮೆ ಕುಕನೂರ ದವಾಖಾನಿಗೆ ಹೋದಾಗ ನಾನು ಬಾಳ ಚೆಲುವಿ ಅದಿನೆಂತ ಮತ್ತಾಳಿನ ದಳಪತಿಯಾದ ದೇವಪ್ಪ ದೇವಪ್ಪಗೌಡ್ರು ಒಮ್ಮೆ ನನ್ನ ನೋಡಿ ನನ್ನ ಮ್ಯಾಲೇ ಮನಸಾಗಿ ನನ್ನ ಕರಕಂಡ ಬಂದು ಈ ಊರಾಗ ಇಟ್ರು. ನನಗ ಒಂದು ಚಾಹಾದಂಗಡಿ ಇಟ್ಟು ಕೊಟ್ಟ. ಬಾಳ ದಿನ ಆದ ಮ್ಯಾಲೇ ನನಗ ಈ ಸರಕಾರದಾರು ಒಂದು ಜೆಂತಾಮನಿ ಹಾಕಿಸಿ ಕೊಟ್ರು. ಆ ಮನಿಯಾಗ ನನ್ನ ಅಂಗಡಿ ಸಾಮಾನ ಎಲ್ಲಾ ಇಟಕೊಂಡು ಹೆಂಗೊ ಜೀವನ ಸಾಗಿಸಿಕೊಂಡು ಬಂದ್ಯಾ.

            ಮೊದ್ಲ ನನಗ ಮಕ್ಳು ಇದ್ದಿಲ್ಲ. ನನ್ನ ತಂಗಿಗೆ ಬಾಳ ಮಕ್ಳು ಇದ್ದಿದಕಾ ೨ ಹೆಣ್ಣು ಮತ್ತ ೧ ಗಂಡ ಮಗನ್ನ ತಂದು ಸಾಕಿದ್ಯಾ. ಬಬ್ಬಾಕಿ ಮಗಳನ ೧೨ ನೇತ್ತದ ತನಕ ಓದಿಸಿದ್ಯಾ, ಮತ್ತ ಆಕಿನ ಗಂಗಾವತಿಗೆ ಮದುವಿ ಮಾಡಿ ಕೊಟ್ಯಾ. ಆ ಮ್ಯಾಕ ಒಬ್ಬಾಕಿನ ೧೦ ತನಕ ಗಣಮಗನ್ನ ೧೦ ತನಕ ಓದಿಸಿದ್ಯಾ. ಆಮ್ಯಾಲ ಅವ್ರು ಅವ್ರ ಅವ್ವಾ-ಅಪ್ಪಂತಾಕ ಹೋಗಿ ಬಿಟ್ರು. ಇತ್ಲಾಗ ನನ್ನ ಕರಕೊಂಡ ಬಂದಾತ್ನೂ ಕೈ ಬಿಟ್ಟು ಹೋಗಿ ಬಿಟ್ಟ ಆದ್ರ ನಾನೆನು ಹೆದರಲಿಲ್ಲ. ದಿನಾನು ಒಬ್ಬಾಕಿ ಇರಬೇಕು ಒಬ್ಬಾಕಿನಾ ಮಲಗಬೇಕು ಒಮ್ಮೊಮ್ಮೆ ರಾತ್ರಿ ಬಾಳ ಹೆದರಿಕಿ ಬರುತಿತ್ತು. ಅದಕ ಗಟ್ಟಿ ಧೈರ್ಯ ಮಾಡಿ ತೆಲಿಗುಂಬಿನ ಮಗ್ಲ ಕಲ್ಲು, ಚಾಕು, ಬಡಿಗಿ ಇಟಗೊಂಡು ಮಲಗತಿದ್ಯಾ. ಇದು ಈವತ್ತಿಗೂ ಮುಂದುವರದೈತಿ ಒಂದತರಾ ರೂಢಿಯಾಗಿಬಿಟೈತಿ.

            ಇನ್ನೂ ಬದುಕಿಗೆ ದಿನಾನು ನಾಲ್ಕು ಕಪ್ಪು ಚಾ ಕಾಸತ್ತಿನಿ. ಹೊತ್ತ ಮುಣುಗಿದ್ರಾ ಕಾರಮಂಡಾಳ ಮಾಡತಿನಿ, ಏನಾರ ಹಬ್ಬ-ಹುಣಿವಿ, ಯಾರಾರ ಸತ್ತç-ಕೆಟ್ಟç ಊರಿಗೆ ಪರಊರಾಗಿಂದ ಮಂದಿ ಬಂದ್ರ ಚುರು ಅಂಗಡಿ ಗದ್ಲ ಆಗತೈತಿ. ಅವಾಗಾನ ನಾಲ್ಕ ರೂಪಾಯಿ ಸಿಗತಾವು. ಆದ್ರ ಈಗ ಒಂದಾರೇಳು ತಿಂಗಳ ಹಿಂದಾನ ನನಗ ಬಾಳ ಕಷ್ಟ ಆಗಕತೈತಿ.

            ಈ ಮನಿ ಮುರಿಯ ಕೊರೋನಾ ಬಂದು ನನ್ನ ಬಾಯಿಗೆ ಮಣ್ಣು ತುಂಬೈತಿ. ಯಾವಾಗ ಆಳಾಗಿ ಹೊಕೈತಿ ಅಂತ ಕಾಯಕತ್ತಿನಿ ನೋಡಪ್ಪ. ಈ ಸರಕಾರದಾರು ಅಕ್ಕಿ ಒಂದ ಕೊಟ್ಟು ಎಲ್ಲಾ ಲಾಕ್‌ಡೋನ್ ಮಾಡಿಬಿಟ್ರು. ಅಕ್ಕಿ ಒಂದ ತಿಂದ್ರ ಹೊಟ್ಟಿ ತುಂಬತೈತೆನು, ಅದಕ ಖಾರ, ಎಣ್ಣಿ ಏನೂ ಬ್ಯಾಡನೂ. ಸೆಂತಿ ಮಡಾಕ ಕುಕನೂರಿಗೆ ಹೋಗಬೇಕಂದ್ರ ಒಂದ ಗಡಿ ಇಲ್ಲ. ಕಿರಾಣಿ ಸಾಮಾನದ ಅಂಗಡಿ ಎಲ್ಲಾ ಮುಚ್ಚಿದ್ವು. ಹಿಂಗ ಆದ ಮ್ಯಾಲ ನಂದು ಅಂಗಡಿನೂ ನಿಂತ ಬಿಟ್ಟಿತು. ಏನ ಮಾಡಬೇಕು ಅಂತ ತೇಲಿ ಮ್ಯಾಲೇ ಕೈ ಹೊತಗಂಡ ಕುಂತಾಗ ಶಿವಾ ಅಂತ ಕೂಲಿಕಾರ ಕೆಲಸ (ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಚೆಲುವಾದ್ವು.

            ನಾನು ಆ ಕೆಲಸಕ್ಕ ಹೋಗಬೇಕು ಅಂತ ಮುಂದುಕ ಹೋದ್ರ ಕೆಲ ಮಂದಿ ನೀನು ಕೆಲಸಕ್ಕ ಬರೊದು ಬ್ಯಾಡ ಅಂತ ಅಂದ್ರು. ಆದ್ರ ನಾ ಬೀಡಲಿಲ್ಲ. ಎಲ್ಲಾರೂ ಕೆಲಸಕ್ಕ ಬರತಾರ ನಾನು ಬರುವಾಕ್ಯಾ ಅಂತ ಜಗಳ ಮಾಡಿದ್ಯಾ. ಆ ಮ್ಯಾಲೇ ನನ್ನ ಕೆಲಸಕ್ಕ ಕರಕೊಂಡ್ರು. ನಾನು ಕೆಲಸಕ್ಕ ಹೋಗಿದ್ನಾ. ಕೆಲಸ ಮಾಡಾವತ್ನ್ಯಾಗ ಕುಲಿಗೆಡಿ ಮಂದಿ ನನಗ ಬಾಳ ಕಷ್ಟ ಕೊಟ್ಟುç. ಎಲ್ಲಾರ ಮನಿಯಗಿಂದ ಗಣಮಕ್ಳು ಕೆಲಸಕ್ಕ ಗುದ್ಲಿ, ಸೇಲಿಕಿ ತರತಿದ್ರು. ಅವ್ರು ತಮ್ಮ ಕೆಲಸ ದೌಡಾನ ಮುಗಿಸಿ ಹೊಗತಿದ್ರು. ಆದ್ರ ನನಗ ಯಾರು ಇಲ್ಲ ನನ್ನ ಹಣೆಬರಾನ ಹಿಂಗ ಐತಿ ಅಂತ ತಿಳಕೊಂಡು ಮಾದ್ರ ಮಂದಿ ಕೂಡಾ ಕೂಡಿ ದುಡುದು ಹೊತ್ತಾಗಿ ಬರತಿದ್ದೆ’. ಅಂತ ರೇಣವ್ವ ತನ್ನ ಬದುಕಿನ ಕೆಲವು ಸನ್ನಿವೇಶಗಳನ್ನು ಈ ರೀತಿಯಾಗಿ ಹೇಳಿದ್ದಾಳೆ.

ಪ್ರಕರಣ - ನಾಲ್ಕು

‘ನನ್ನ ಹೆಸರು ಲಲಿತವ್ವ ಅಂತ. ನನ್ನ ತವರು ಮನಿಯಾರು ಮಾದೇವಿ ಅಂತ ಕರಿತಾರ. ನನ್ನ ತವರ ಮನಿ ಕನ್ಯಾಳು(ಕನಗಿನಹಾಳ) ನಮ್ಮಪ್ಪ ನಮ್ಮವ್ವ ನನ್ನ ಲಗ್ನ ಮಾಡಿ ಬೆದವಟ್ಟಿಗೆ ಕಳಸಿದ್ರು. ನನಗ ಒಟ್ಟಾ ೩ ಹೆಣ್ಣು, ೧ ಗಂಡು ಐತಿ. ನಾನು ನೆಡಿಯಾಕ ಬಂದಾಗ ನನ್ನ ಗಂಡನ ಮನಿಯಾಗ ನಮ್ಮ ಮನಿಯಾತನ ಅಣ್ಣ-ತಮ್ಮಂದ್ರು ಎಲ್ಲಾರು ಕೂಡೆ ಇದ್ವಿ. ಆದ್ರ ನಮ್ಮ ಮಾವ ಸತ್ತ ತುಸಾ ದಿನಕ್ಕ ಎಲ್ಲಾರು ಬ್ಯಾರೇ ಆದ್ವಿ. ನಮವ ಎತ್ತು, ಎಮ್ಮಿ, ಹೊಲ ಇತ್ತು ನಾನು ನಮ್ಮ ಮನಿಯಾತ ಕೂಡೆ ಕಮತ(ಒಕ್ಕಲತನ) ಮಾಡತಿದ್ವಿ. ಈಗ ಒಂದ ೨೦-೨೫ ವರುಷದಿಂದ ದೊಡ್ಡ ಮಳಿ ಆತು. ಅವಾಗ ನಾವು ನಮ್ಮ ಹಳೆ ಮನಿಯಾಗ ಇದ್ವಿ. ರಾತ್ರಿ ಜರ‍್ಯಾಗಿ ಮಳಿ ಬಂದು ನಮ್ಮ ಮನಿ ನಮ್ಮ್ಯಾಲೇನಾ ಬಿದ್ದ ಬಿಟ್ಟಿತು. ಆಟೋತ್ನ್ಯಾಗ ಎಲ್ಲಾರು ನಮ್ಮ ಕಾಪಾಡಾಕ ಬಂದ್ರು. ನನ್ನ ನಮ್ಮ ಮನಿಯಾತನ್ನ ಹೊರಾಕ ತಂದ್ರು ಆದ್ರ ನನ್ನ ಹೀರೆ ಮಗಳ ಮ್ಯಾಲೇ ಬಿದ್ದ ಮಣ್ಣಿನ ಮ್ಯಾಲೆ ಎಲ್ಲರೂ ಅವಸರದಾಗ ಅಡ್ಯಾಡಿಟ್ರು. ಆ ತುಳುತದಾಗ ನನ್ನ ಮಗಳು ಮಣ್ಣಗ ಮಣ್ಣಾಗಿ ಹೊದ್ಲು. ಈಗ ಆಕಿ ಬದುಕಿದ್ರ ನಾಕ ಮಕ್ಳ ತಾಯಿ ಆಗಿರತಿದ್ಲು. ನಮ್ಮ ಹಣೆಬರದಾಗ ಆಕಿ ಬಳಗ ನೋಡಾದು ದೇವ್ರು ಬರದಿಲ್ಲಂತ ಕಾಣಸುತ್ತಾ. 

ಅದು ಆಗಿ ಒಂದು ತುಸಾ ದಿನಾ ಆದ ಮ್ಯಾಲ ನಮ್ಮ ಮನಿಯಾರಿಗೆ ಆರಾಮಿಲ್ಲದಂಗ ಆತು. ಅತನ ಕಟಿಕೊಂಡು ಬ್ಯಾರೇ-ಬ್ಯಾರೇ ಊರ ದಾವಾಖಾನಿ ತಿರುಗಿ ಬಂದ್ಯಾ. ಗುಡಿ-ಗುಂಡಾರದಾಗ ಇದ್ದ ಬಂದ್ಯಾ, ಅತನ ಹೆಸರಿಲೆ ಮುಡುಪು ಕಟ್ಟಿದ್ಯಾ, ಉಪವಾಸ ಮಾಡಿದ್ಯಾ, ಕೈಯನುವು ರೊಕ್ಕ ಹೊದ್ವ ಹೊರತು ಆತಗ ಬಂದ ಜಡ್ಡು ಹೊಳಾಗಲಿಲ್ಲ. ಅದಕ ಅಂತಾನ ನಮವು ಎತ್ತು, ಬಂಡಿ ಮಾರಿದ್ವಿ, ಹೊಲ ಬಡ್ಯಾಗ ಹಾಕಿದ್ಯಾ ಆದ್ರ ಆತ ಮಾತ್ರ ಗುಣಾನ ಆಗಲಿಲ್ಲ. ಕಡೆಕ ಒಂದ ದಿನ ನಮ್ಮ ಮನಿಯಾರುನು ಹೆಣ್ಣಮಕ್ಳ ಚಿಂತ್ಯಾಗ ಜೀವಾ ಬಿಟ್ಟ. ಆತಂತ್ರು ತನ್ನ ಬಾರ ಕಳಕಂಡ ಆದ್ರ ಆ ಇಬ್ಬರು ಹೆಣ್ಣಮಕ್ಳು ಮತ್ತ ಒಬ್ಬಾತ ಗಣಮಗನ್ನ ನನ್ನ ಹುಡಿಯಾಗ ಹಾಕಿ ಕೈತೊಳಕಂಬುಟ್ಟ.

ಹಿಂಗೆಲ್ಲಾ ಆದ್ರು ನಾನು ಹೆದರಲಿಲ್ಲ ದೇವ್ರು ನನ್ನ ಹಣೆಬರದಾಗ ಹೆಂಗ ಬರದಾನ ಹಂಗ ಆಗಲಿ ಅಂತ ಗಟ್ಟಿಧೈರ್ಯ ಮಾಡಿ ಜೀವನ ನೆಡಸಾಕ್ಕತ್ತಿದ್ಯಾ. ೨ ಹೆಣ್ಣು, ೧ ಗಂಡು ಮಗನ್ನ ಮುಂದಾಕ್ಕೆಂಡು ದುಡಿಯಾಕತ್ತಿದ್ಯಾ. ಕಷ್ಟಪಟ್ಟು ಒಬ್ಬಾಕಿನ ೧೦ನೇತ್ತರ ತನಕ ಓದಿಸಿದ್ಯಾ. ಇನ್ನೊಬ್ಬಾಕಿನ ೮ ತನಕ ನಮ್ಮೂರ ಸಾಲ್ಯಾಗ ಕಲಿಸಿದ್ಯಾ ಮುಂದುಕ ಓದವ್ವ ಅಂತ ಹಲುಬಿದ್ರು ಆಕಿ ನಾನು ಮುಂದುಕ ಓದಲ್ಲ ದುಡಿಯಾಕ ಹೊಕ್ಕಿನಿ ಅಂತ ಅರ್ಧಕ್ಕ ಸಾಲಿ ಬಿಟ್ಲು. ಆದ್ರ ನನ್ನ ಮಗನ ಗೌರ್‌ಮೆಂಟ್ ಸಾಲ್ಯಾಗ ಐ.ಟಿ.ಐ ಓದಿಸಿದ್ಯಾ. ಅವಾ ಈಗ ಕೆಲಸ ಮಾಡಾಕ ಬೆಂಗಳೂರಿಗೆ ಹೋಗ್ಯಾನ. ಬಲು ಬರ ಅಂದ್ರ ಅವಗ ಈಗ ಒಂದ ೧೯ ವರುಷ ಅದಾವ ನೋಡಪ್ಪ.

ಊರ ಗೌಡ್ರಗೆ ಹೊಲ ಬಡ್ಯಾಗ ಹಾಕಿ ಸಾಲ ಮಾಡಿ, ಗರಗಸಪ್ಪನ ಸಂಘದಾಗ, ಧರ್ಮಸ್ಥಳ ಗುಂಪಿನ್ಯಾಗ, ಕೊಪ್ಪಳ ಸಂಘದಾಗ, ಯಲಬುರ್ಗಿ ಚೈತನ್ಯ ಸಂಘದಾಗ ಸಾಲ ಮಾಡಿ ಇಬ್ಬರೂ ಹೆಣ್ಣಮಕ್ಳನೂ ಮದುವಿ ಮಾಡಿನಿ. ಈ ಕೊರೋನಾ ಬಂದು ನಮಗ ದೊಡ್ಡ ಹೊಡತ ಕೊಟ್ಟಿತು. ದುಡಿಯಾಕ ಬ್ಯಾರೇ ಕೆಲಸ ಇಲ್ಲ ಅದರಾಗ ಬ್ಯಾಸಿಗಿ ಬ್ಯಾರೇ, ಲಾಕ್‌ಡೌನ್ ಮಾಡಿದ್ರು ಅಂತ ನನ್ನ ಮಗ ಕೆಲಸ ಬೆಂಗಳೂರುಲಿಂದ ಬಂದ. ಅದರಾಗ ವಾರಾ ಸಂಘಕ್ಕ ರೊಕ್ಕ ಕಟ್ಟಬೇಕು. ಅವರತ್ಯಾಕ, ಇವರತ್ಯಾಕ ಸಾಲ ಮಾಡಿ ಹೆಂಗೂ ಒಂದ ೨ ತಿಂಗಳ ಮುಂದುಕ ಸಾಗಿಸಿದ್ಯಾ. ಆ ಮ್ಯಾಲೇ ಯಾರು ರೊಕ್ಕಾನ ಕೊಡಲಿಲ್ಲ. ಅದಾ ಯ್ಯಾಳೆದಾಗ ದೇವ್ರು ದಯದಿಂದ ಈ ಕೂಲಿಕಾರ ಕೆಲಸ ಸುರು ಮಾಡಿದ್ರು. ಅದರಾಗ ಕಲ್ಲು, ಮುಳ್ಳು ತುಳುದು ಕೆಲಸ ಮಾಡಿದ್ಯಾ.

ಕತ್ತೆ ದುಡುದಂಗ ದುಡುದ್ವೇನೋ ಖರೆ ಆದ್ರ ರೊಕ್ಕ ಮಾತ್ರ ಸರಿತ್ನಾಗ ಬರಲಿಲ್ಲ. ದಿನಾ ೭ ಗಂಟೆಕ್ಕ ಅಡಿಗಿ ಮಾಡಿಕೆಂಡು ಮನೆನ್ವು ಎಲ್ಲಾ ಕೆಲಸ ಮುಗಿಸಿ ದುಡಿಯಾಕ ಹೋದ್ವಿ. ಆದ್ರ ೧೩ ಆಳಿಂದು ರೊಕ್ಕಾನ ಬರಲಿಲ್ಲ. ಯಾಕ ಬರಲಿಲ್ಲ ಅಂತ ಕೆಲಸ ಮಾಡಿಸಿದ ಗುಮಾಸ್ತನ ಕೇಳಿದ್ರ ಇನ್ನೂ ರೊಕ್ಕಾನ ಬಂದಿಲ್ಲಂತ ಹೇಳಿದಾ. ನನ್ನ ಮಗನ ಹೆಸರಿಲೇ ಹೊಲಕ್ಕ ಒಡ್ಡು ಹಾಕಿನಿ ಅಂತ ಸುಳ್ಳು ಹೇಳಿ ಬ್ಯಾಂಕ್ ಪಾಸ್‌ಬುಕ್ ಇಸಕೊಂಡು ಹೋಗಿ ತಮ್ಮ ರೊಕ್ಕ ತಕ್ಕೊಂಡ್ರು. ಆದ್ರ ಮೈ ಬಗ್ಗಿಸಿ ಕೆಲಸ ಮಾಡಿದ್ದು ನಮ್ಮ ರೊಕ್ಕ ನಮಗ ಕೊಡಲಿಲ್ಲ. ಈಗ ಕೇಳಿದ್ರ ನೀನು ಪಂಚ್ಯಾತ್ಯಾಕ ಹೋಗಿ ಬಾ ಅಂತ ಹೇಳತಾರ. ಕಲತಾರ ಹಿಂಗ ಮಾಡಿದ್ರ ನಾವು ಕಲಿಲಾರ ಹೆಬ್ಬಟ್ಟ ಮಂದಿ ನಮಗೆನು ತಿಳಿಬೇಕು. ಅದರಾಗ ನನ್ನ ಮಗಾನು ಬೆಂಗಳೂರಿಗೆ ಹೋಗ್ಯಾನ ನಾನು ಒಬ್ಬಾಕೆ ಅದರಾಗ ಹೆಣ್ಮಗ್ಳು ಏನು? ಮಾಡ್ಲಿ ಅಂತ ಚಿಂತ್ಯಾಗೆತಿ’ ಅಂತ ಲಲಿತವ್ವ ತನ್ನ ಪರಿಸ್ಥಿತಿಯನ್ನು ಮಾತಿನ ಲಹರಿಯ ಮೂಲಕ ಕಣ್ಣಿರಿಡುತ್ತಾ ಹೇಳುತ್ತಾಳೆ.

ಪ್ರಕರಣ ಐದು

ನನ್ನ ಹೆಸರು ತಿಪ್ಪವ್ವ ಅಂತ. ನನ್ನ ತವರ ಮನಿ ಲಕ್ಕುಂಡಿ. ನಾನು ಸಣ್ಣಾಕಿದ್ದಾಗಿದ್ದ ಅಲ್ಲೆ ಆಡಿ ಬೆಳದಿನಿ. ನಮಗ ಸಾಲಿ ಅಂದ್ರನ ಏನು ಅಂತ ಗೊತ್ತಿದ್ದಿಲ್ಲ. ಅಂತಾದ್ರಾಗ ಸಾಲಿ ಕಟ್ಟಿನ ಹತ್ತಿಲ್ಲ. ಆದ್ರ ಜೆಂಡಾ ಹಾರಸಾಕ ಮಾತ್ರ ತಪ್ಪಸಿದಿಲ್ಲ. ಅವಾಗಿನ ಕಾಲಕ್ಕ ಸಾಲಿ ಕಲಿತಿವಿ ಅಂದ್ರು ಮನಿಯಾನ ಮಂದಿ ಒಪ್ಪಿಗೊಂತ್ತಿದ್ದಿಲ್ಲ. ಸಾಲಿ ಬರೇ ಗಣಮಕ್ಳಗೆ ಅಂತ ಅಂತಿದ್ರು. ನಾವು ಒಂದ ಹರೆದ ವಯಸ್ಸಿಗೆ ಬಂದ ಮ್ಯಾಲ ನಮ್ಮೂರಾನ ದೊಡ್ಡಾರ ಮಕ್ಳು ಸಾಲಿಗೆ ಹೋಕಿದ್ರು. ಅವರ ಹೇಳತಿದ್ರು ಸಾಲ್ಯಾಗ ಮಾಸ್ತಾರು ಬಡಿತಾರ, ಕಿವಿ ಹಿಡಕೊಂಡು ಬಗ್ಗಸತಾರ, ಏನಾರ ತೆಪ್ಪ ಮಾಡಿದ್ರ ಮೈ ಉಂಚಿ ಹಣ್ಣಾಗಂತಾಗ ಹೊಡಿತಾರ ಅಂತ ಹೇಳತಿದ್ರು.

ಅವರು ಸಾಲಿಗೆ ಹೋದ್ರ ನಾವು ಮಲ್ಲಿಗಿ ಹೂವಾ, ಸ್ಯಾವಂತಗಿ ಹೂವಾ, ಕಾಕಡಾ, ಕನಕಾಂಬರಿ, ಸುಗಂಧಿ ಹೂವಾ, ಗಲಾಟಿ ಹೂವಾ ಹರಿಯಾಕ ಹೊಕ್ಕಿದ್ವಿ. ಮುಂಜಾಲೆ ದೌಡ ಹೊಲಕ್ಕ ಹೋಗಿ ಹೂ ಹರದ ಬಂದು ಮತ್ತ ಮನಿಯಾಗಿನ ಕೆಲಸ ಮಾಡಿಕೆಂಡು ಮತ್ತ ಹೂವಾ ಕಟ್ಟಾಕ ಕುಂದ್ರುತಿದ್ವಿ. ಆಗಿನ ಕಾಲಕ ೧ ಕೆ.ಜಿ ಮಲ್ಲಿಗಿ ಹೂವಾ ಕಟ್ಟಿದ್ರ ೧-೨ ರೂಪೆ ಕೊಡತಿದ್ರೋ ಏನೋ ನನಗೂ ಅಷ್ಟ ನೆಪ್ಪ ಇಲ್ಲ. ಕನಕಾಂಬರಿ ಹೂವಾ ಕಟ್ಟಿದ್ರ ಅದಕ ಒಂದ ನಾಲ್ಕಣೆ ಹೆಂಟಾಣೆ ಹೆಚ್ಚಿಗಿ ಕೊಡತಿದ್ರು. ನಡಾ ಬ್ಯಾನಿ ಹಾಗಾಂತಾಗ ಯ್ಯಾವದ ಮ್ಯಾಲೇ ಹೂವಾ ಕಟ್ಟತಿದ್ವಿ. ನಾವೇಟ ಕಟ್ಟಿದ್ರು ಆ ರೊಕ್ಕ ಮಾತ್ರ ನಮ್ಮ ಕೈಯಾಗ ಬರತಿರಲಿಲ್ಲ. ನಮ್ಮ ಅಜ್ಜ ಬಾಳ ಬೀಗಿ ಮನುಷಾ, ಆತ ಒಟ್ಟಾ ಒಂದ ಆಣೆ ಕೊಡು ಅಂದ್ರ ಬಡದ ಬುಡುತಿದ್ದ. ಆತನ ದನಿ ಕೇಳಿದ್ರ ನಮವು ಕಾಲ್ಮಡಿನಾ ಹೊಕಿದ್ವು. ಅಂತಾದ್ರಾಗ ನಾನಿನ್ನು ಮೈನೆರ್ತಿದಿಲ್ಲಾ ಅವಾಗ ನನ್ನ ನೋಡಿಕೊಂಡು ಹೊದ್ರು. ನೋಡಕೆಂಡು ಹೋದ ತುಸಾ ದಿನಾ ಆದ ಮ್ಯಾಲ ಲಗ್ನ ಮಾಡಿಕೊಂಡು ಹೋದ್ರು.

ನನಗ ಗಂಡನ ಮನಿಗೆ ಬಂದ ಮ್ಯಾಲ. ಬಾಳ ಕಷ್ಟ ಆತು. ಇಲ್ಲಿ ಬಡತನ ಬಾಳ ಸೊಸಿದ್ಯಾ. ಈ ಊರಾಗ ಬ್ಯಾರೇ ಬರಗಾಲ, ನನಗ ನೋಡಿದ್ರ ಹೂವಾ ಹರಿಯಾದು ಮತ್ತ ಹೂವಾ ಕಟ್ಟಾದು ಬಿಟ್ರ ಬ್ಯಾರೇ ಏನು? ಬರತಿರಲಿಲ್ಲ. ಹಂಗೂ ಹಿಂಗೂ ಜೀವನ ಸಾಗಿಸಿದ್ಯಾ. ಒಂದ ನಾಲ್ಕೆöÊದು ವರುಷ ಆದ ಮ್ಯಾಲ ನನಗ ೨ ಗಂಡು ೧ ಹೆಣ್ಣು ಹುಟ್ಟಿದ್ವು. ಅವುನ ಸಾಕಾದು ನನಗ ದೊಡ್ಡ ಕೆಲಸಾನ ಆಗಿತ್ತು. ನನ್ನ ಗಂಡ ಕುಡುದು ಕುಡುದು ದುಡಿಯಾದ ನಿಲ್ಲಿಸಿ ಬಿಟ್ಟ. ಮತ್ತೇನ ಮಾಡಬೇಕು ಹೊಟ್ಟಿಪಾಡಿಗೆ ಮೂರು ಮಕ್ಳನ ಕರಕೊಂಡು ರತ್ನಗಿರಿಗೆ ದುಡಿಯಾಕ ಹೋದ್ಯಾ. ಆ ಹುಡ್ರು ಸಾಲಿ ಆವಾಗ ಪಡಸಾಲಿ ಆಗಿಬಿಟ್ಟಿತು. ಅಂತದ್ರಾಗ ಮಗಳನ ೮ನೇತ್ತರ ತನಕ ಸಾಲಿ ಮಾಸ್ತಾರು ಪಾಸ್ ಮಾಡಿಕೆಂತ ಬಂದ್ರು. ಮುಂದುಕ ಓದಬೇಕಂದ್ರ ಆಕಿಗೂ ‘ಅ’ ಅನ್ನ ಅಕ್ಷರ ಬರತಿದ್ದಿಲ್ಲ. ಮತ್ತ ಸಾಲಿ ಕಲಿಬೇಕು ಅಂದ್ರ ಶಿರೂರಿಗೆ ಹೋಗಬೇಕಾಗಿತ್ತು. ಅದರಾಗ ದಿನಾ ಹೋಗಾಕ ೪ ಕಿಲೋ ಮೀಟರ್, ಬರಾಕ ೪ ಕಿಲೋ ಮೀಟರ್ ನೆಡಿಬೇಕು. ಅದಕ ಆಕಿನೂ ಸಾಲಿಗೆ ಹೊಕ್ಕಿನಿ ಅಂತ ಕೇಳಲಿಲ್ಲ ನಾವು ಮುಂದುಕ ಕಳಸಲಿಲ್ಲ.

ರತ್ನಗಿರಿ ದೇವಗಡದಾಗ ಬಂದ ೧೦ ವರುಷ ದುಡಕಂದು ಬಂದು ಬೆದವಟ್ಟಿ ಕಂಡ್ವಿ. ಇಲ್ಲಿ ಅದಾ ಬರಗಾಲ. ನನ್ನ ಗಂಡಾನು ಸತ್ತ ಹೋದ. ಅಲ್ಲಿಗೆ ಹೋಗಿ ದುಡುಕಂದು ಬರಾಕ ಮೈಯಾಗ ತ್ರಾಣ ಇಲ್ಲ. ಅದಕ ನಾನು ಸಣ್ಣಾಕಿದ್ದ ಮಾಡಿಕೆಂಡು ಬಂದ ಕಸುಬನಾ ಮುಂದುವರಿಸಿದ್ಯಾ. ಲಕ್ಕಂಡಿಲಿದ್ದಾ ನಮ್ಮವ್ವ ಹೂ ಕಟ್ಟಿಸಿ ಕಳಸತಿದ್ಲು. ನಾನು ಕುಕನೂರಿಗೆ ಹೋಗಿ ಮಾರಿಕೆಂಡ ಬರತಿದ್ನ್ಯಾ. ಅದ ರೊಕ್ಕದಾಗ ನನ್ನ ಮಗಳ ಲಗ್ನ ಮಾಡಿದ್ಯಾ. ದೇವ್ರು ನನ್ನ ಎಷ್ಟು ಪರೀಕ್ಷಾ ಮಾಡಬಕಂತ ತಿಳದಿದ್ದಾನ. ನನ್ನ ಮಗಳ ಮದುವಿ ಆಗಿ ಒಂದು ವರುಷದ ಒಳಗ ನನ್ನ ಹಿರೇ ಮಗ ಗಾಡಿ ಯ್ಯಾಕ್ಸಿಡೆಂಟ್ನ್ಯಾಗ ಸತ್ತ ಹೋದ.

ನನ್ನ ಇನ್ನೊಬ್ಬನ ಮಗನ ಮದುವಿನೂ ಮಾಡಿದ್ಯಾ. ಎಲ್ಲಾ ಕರ್ಚನ ನಾ ಹೂವಾ ಮಾರಿಕೆಂಡ ಬಂದ ರೊಕ್ಕಾದಾಗಾನ ಮಾಡಿದ್ಯಾ. ಬಡ್ಡ್ಯಾಗಾಕಿದ ಹೊಲ ಬಿಡಿಸಿಗೆಂಡು ಅದರಾಗ ಹೂವಾ ಬೇಳಿಯಾಕ ನಿಂತ್ಯಾ. ಹಂಗೂ-ಹಿಂಗೂ ಮೈಲಾರಲಿಂಗ ಅಂತ ನಿಟ್ಟುಸುರು ಬಿಟ್ಟು ತಣ್ಣಾಗ ಜೀವನ ನೇಡಸಾಕತ್ತಿದ್ನಾ ಅಂದ್ರ ಈ ಕೊರೋನಾ ಬಂದು ನನ್ನ ಲೆಕ್ಕಾನ ಹುಸಿ ಮಾಡಿಬಿಟ್ಟಿತು. ದಿನಾ ಕುಕನೂರಿಗೆ ಹೋಗಿ ಹೂವಾ ಮಾರಬೇಕು ಅಂದ್ರ ಎಲ್ಲಾ ಬಂದ ಆಗಿದ್ವು. ಹಳ್ಳಿ ಮ್ಯಾಲೇ ಹೋಗಿ ಬರಬೇಕಂದ್ರ ಬ್ಯಾರೇ ಊರಾನ ಮಂದಿ ಬರಬಾಡ್ದು ಅಂತ ದಾರಿ ಕಡುದು ಅದಕ ಮುಳ್ಳು ಬೇಲಿ ಆಕಿ ಬಿಟ್ರು. ಇತ್ತಲಾಗ ೨ ಎಕರೆ ಹೊಲಕ ಹಾಕಿದ ಗಲಾಟಿ ಹೂವ ಹಾಳಾಗಿ ಹೋತು. ಇನ್ನೇನ ಉಪವಾಸ ಸಾಯಾದ ಒಂದ ಉಳದಿತ್ತು ನೋಡಪ್ಪ.

ಯ್ಯಾಕ ಮೈಲಾರಲಿಂಗಪ್ಪನ ದಯದಿಂದ ಈ ಕೂಲಿಕರ ಕೆಲಸ ಚೆಲುವಾದ್ವು. ಆದ್ರ ನಾನೂ ಒಮ್ಮೆನೂ ಕೂಲಿಕಾರ ಕೆಲಸಕ್ಕ ಹೋದಾಕೆನಾ ಅಲ್ಲ. ಆದ್ರು ಕೆಲಸಕ್ಕ ಹೊಂಟ್ಯಾ, ಇಲ್ಲಂದ್ರ ಹೊಟ್ಟಿ ಕೇಳಬೇಕಲ್ಲ. ಹೂವಿನ ಗೂಡಾ ಆಡಿದ್ಯಾಕಿ, ಮುಳ್ಳಿನ ಗೂಡಾ ಆಡ ಪರಸ್ಥಿತಿ ನನಗ ಬಂತು. ಅದಾ ಉದ್ಯೋಗ ಖಾತ್ರಿ ಕೆಲಸ ತುಸಾ ದಿನ ನನಗ ಅನ್ನಾ ಹಾಕಿತು. ಆದ್ರ ಆ ಕೆಲಸ ಮಾತ್ರ ಬಾಳ ದಿನ ನೆಡಿಲಿಲ್ಲ ಅನ್ನೋದು ಒಂದ ಬ್ಯಾಸರ ತಂತು ನೋಡಪ್ಪ’ ಅಂತ ತಿಪ್ಪವ್ವ ತನ್ನ ಜೀವನದ ಕಥೆನಾ ಹೇಳಿದಳು.

ಕೊನೆಯ ಮಾತು

ಒಂದು ಕಾಯ್ದೆಯನ್ನು ವಾಸ್ತವದ ನೆಲೆಯಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದು ಹೇಗೆಂದರೆ ಅದು ಅವರ ಅನ್ನದ ಪ್ರಶ್ನೆಯಾದಾಗ. ನಂತರ ಅದು ತಂತಾನೆ ಸ್ವಾಭಿಮಾನದ ಪ್ರಶ್ನೆಯಾಗಿ ರೂಪುಗೊಂಡು ಪ್ರಶ್ನಿಸುವ, ಪಡೆದುಕೊಳ್ಳುವ ಛಲವೊಂದು ಹುಟ್ಟಿಕೊಳ್ಳುವುದು. ಈ ಪ್ರಯತ್ನವು ಮಹಿಳೆಯರಲ್ಲಿರುವ ಸಾಮರ್ಥ್ಯವನ್ನು ಅವಳಿಗೆ ಮೊದಲು ಪರಿಚಯವಾಗಿ ತನ್ನೊಳಗೆ ನುಸುಳಿದ ಹೆಣ್ತನವೆಂಬ ಕೀಳರಿಮೆಯನ್ನು ತಂತಾನೇ ತೊಡೆಯುವಲ್ಲಿ ಸಾಧ್ಯವಾಗುವತ್ತ ಮಹಿಳಾ ದಂಡು ಬೆಳೆದು ಬಂದಿರುವುದು ‘ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ಯುದ್ದಕ್ಕೂ ಕಾಣಬಹುದು. ಈ ಬಗೆಯ ಪರಿವರ್ತನೆ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುತ್ತದೆ ಎನ್ನುವಂತಿಲ್ಲ. ಆದರೆ ಮೊದಲ ತಲೆಮಾರಿನವರಿಗಿಂತ ಸ್ವಲ್ಪ ಉತ್ತಮ ಎಂದು ಭಾವಿಸಬಹುದು.

ಮಹಿಳೆಯೊಬ್ಬಳ ಜಗತ್ತು ನಾಲ್ಕು ಗೋಡೆಯಲ್ಲಿ ಎಂಬುವುದನ್ನು ಶ್ರಮದ ದಾರಿಯು ವಿಸ್ತರಿಸಿ ಬೀದಿ, ಗ್ರಾಮ ಪಂಚಾಯಿತಿ, ಹೊಲ ಗದ್ದೆ ಬದು ಕೃಷಿ ಹೊಂಡ, ಕೆರೆ ಕಾಲುವೆ ಹಳ್ಳ ಬಾವಿ, ಚೆಕ್ ಡ್ಯಾಂ, ಹೊಲಕ್ಕೆ ಹೋಗುವ ಹಾದಿ, ಶಾಲೆಯ ಕಂಪೌಂಡು ಮತ್ತು ಊರಿನ ರುದ್ರಭೂಮಿ ಮೊದಲಾದ ಪ್ರದೇಶಗಳಲ್ಲಿ ದುಡಿಯಲು ಈ ಯೋಜನೆಯು ಅವಕಾಶ ಕಲ್ಪಿಸಿಕೊಡುತ್ತದೆ.

ಹೀಗೆ ಗ್ರಾಮೀಣ ಸಮುದಾಯದ ಮಹಿಳೆಯರು ಮನೆ ಮತ್ತು ಕೆಲಸದ ಸ್ಥಳ ಎಂಬೆರಡು ದ್ವೀಪದಲ್ಲಿ ಮಾತ್ರ ಇರುತ್ತಿದ್ದ ಚಿತ್ರಣವನ್ನು ಬದಲಾಯಿಸಿ ಇಡೀ ಗ್ರಾಮ ಮತ್ತು ಗ್ರಾಮಕ್ಕೆ ಸಂಬಂಧಪಟ್ಟ ಸಮಸ್ತ ಭೌಗೋಳಿಕ ಪ್ರದೇಶಕ್ಕೆಲ್ಲ ವಿಸ್ತರಿಸಿಕೊಂಡಿದ್ದಾರೆ. ಆದರೆ ದುರಂತವೆಂದರೆ ಈ ಮಹಿಳೆಯರ ಶ್ರಮವನ್ನು ಆಡಳಿತವು ಅವರು ಶ್ರಮಕ್ಕೆ ಪಡೆದುಕೊಳ್ಳುವ ಕೂಲಿಗೆ ಮಾತ್ರ ತಳುಕು ಹಾಕಲಾಗುತ್ತಿದೆ. ಅವರು ತಮ್ಮ ಶ್ರಮದ ಮೂಲಕ ಸೃಷ್ಟಿಸಿದ ಕೆರೆ, ಕಾಲುವೆ ಮೊದಲಾದವುಗಳಲ್ಲಿನ ನೀರಿನ ಹೆಚ್ಚಳ ದೇಶದ ಸಂಪತ್ತಲ್ಲವೆ? ಹೊಲದಲ್ಲಿನ ಕೃಷಿ ಹೊಂಡ ನಿರ್ಮಾಣದಿಂದಾಗಿ ಮಳೆ ಬಾರದಿದ್ದರೂ ಒಂದಾದರೂ ಬೆಳೆಯನ್ನು ಬೆಳೆಯಲು ಬೇಕಾದ ತೇವಾಂಶ ಮತ್ತು ನೀರಿನ ಲಭ್ಯತೆ ಸಿಗುವುದು. ಬೆಳೆಯ ಇಳುವರಿಯಲ್ಲಿ ಹೆಚ್ಚಳವಾಗುವುದು. ಆದರೆ ಇದೆಲ್ಲದರ ಸಮಗ್ರ ಅಧ್ಯಯನ ನಡೆಸಿ ‘ರಾಷ್ಟಿçÃಯ ಉದ್ಯೋಗ ಖಾತರಿ ಕಾಯ್ದೆ’ಯನ್ನು ಬಲಪಡಿಸಬೇಕಾದ ಆಡಳಿತವು ನಿರ್ಲಕ್ಷ್ಯವನ್ನು ತೋರಿಸುತ್ತಿದೆ. ‘ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ಯು ಒಂದು ಕಾಯ್ದೆಯಾದ ಕಾರಣವಾಗಿ ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಸಮ ಕೂಲಿ ದೊರೆಯುವಂತಾಗಿದೆ. ಆದರೆ ಇಲ್ಲಿ ಮಹಿಳೆಯರ ಶ್ರಮದ ಫಲಿತಗಳನ್ನು ಗೌಣ ಮಾಡುವಲ್ಲಿಯೂ ಲಿಂಗಭೇದ ನೀತಿ ಅಡಗಿದೆ. ಆದ್ದರಿಂದ ಅವಳ ಶ್ರಮದಿಂದ ದೇಶದ ಸಂಪತ್ತು ನಿರ್ಮಾಣವಾಗಿದೆ ಎಂಬ ಅಂಶವನ್ನು ಬದಿಗೊತ್ತಲಾಗಿದೆ.

ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ೫ ಹಳ್ಳಿಗಳ ಮಹಿಳೆಯರು ಅಕ್ಷರ ಜ್ಞಾನದ ಕೊರತೆಯಿಂದಾಗಿ ಮತ್ತು ಸಂಪ್ರದಾಯದ ಹೆಸರಲ್ಲಿ ಸೃಷ್ಟಿಸಿರುವ ಸಂಕೋಲೆಗಳಿಂದಾಗಿ ‘ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ಯು ಅನುಕೂಲಗಳನ್ನು ಪಡೆಯುವಲ್ಲಿ ಹಿಂದೆ ಸರಿಯುತ್ತಿದ್ದಾರೆ ಮತ್ತು ಸರಿದಿದ್ದಾರೆ. ಆದರೆ ಆ ಮಹಿಳೆಯರು ಹಂಗಿನ ಮನಸ್ಥಿತಿಯಿಂದ ಹಕ್ಕಿನ ಮನಸ್ಥಿತಿಗೆ ಬಂದು ತಾವು ಕೆಲಸವನ್ನು ಪಡೆದೇ ತೀರುವ ಮತ್ತು ತಮ್ಮ ದುಡಿಮೆಗೆ ಬಂದ ವೇತನವನ್ನು ತಾವೇ ತಮ್ಮ ಅಗತ್ಯಾಸಕ್ತಿಗಳನ್ನು ಪಡೆದುಕೊಳ್ಳಲು ಬಳಸುತ್ತೇವೆ ಎಂಬ ಹಠಕ್ಕೆ ಬೀಳಬೇಕು. ಮುಂದುವರೆದು ಅನೇಕ ಮಹಿಳೆಯರನ್ನು ಒಳಗೊಂಡು ಸಂಘಟಿತರಾಗಿ ಅರ್ಜಿಯನ್ನು ತುಂಬಿಕೊಂಡು ಗ್ರಾಮ ಪಂಚಾಯಿತಿ ಕಛೇರಿಯ ಮೆಟ್ಟಿಲನ್ನೆರಬೇಕು. ಕೆಲಸ ದೊರೆಯುವವರೆಗೂ ಒಂದಿಲ್ಲ ಒಂದು ರೀತಿಯಲ್ಲಿ ಅವಳ ಸುತ್ತ ನಿರ್ಮಿಸಲ್ಪಟ್ಟ ಸಾಂಪ್ರದಾಯಿಕ ಚೌಕಟ್ಟನ್ನು ದಾಟುತ್ತಲೇ ಲೋಕಾಂತರಕ್ಕೆ ತೆರೆದುಕೊಳ್ಳುವ ಪ್ರಕಿಯೆಯಲ್ಲಿರಬೇಕು. ‘ಈ ಕೂಲಿಕಾರ ಕೆಲಸದಿಂದ ಈಕಿ ನಮ್ಮ ಬಾಯಿ ಮುಚ್ಚಸ್ತಾಳ’ ಅನ್ನುವ ಡೈಲಾಗು ಮನೆಯ ಪುರುಷರಿಂದ ಮತ್ತು ಊರಿನ ಅರೆಪಾಳೆಗಾರರು, ಜಮೀನ್ದಾರರಿಂದ ಹಾಗೂ ಅಧಿಕಾರಿಗಳಿಂದ ಕೇಳಿ ಬರುವಂತಾಗಬೇಕು. ಹಳ್ಳಗಳನ್ನು ಆವರಿಸಿರುವ ಪಾಳೆಗಾರಿಕೆ ಮತ್ತು ಜಮೀನ್ದಾರಿಕೆಯ ಕೊಟೆಯ ಕಲ್ಲುಗಳನ್ನು ಒಂದೊಂದಾಗಿ ಸಡಿಲಗೊಳಿಸಬೇಕು. ಈ ಪ್ರದೇಶದ ಮಹಿಳೆಯರು ವೈಯಕ್ತಿಕ ತಾಯ್ತನದಿಂದ ಜಾಗತಿಕ ತಾಯ್ತನದತ್ತ ಹೊರಳಬೇಕು.

ಮಾಹಿತಿದಾರರ ಪಟ್ಟಿ

ಕ್ರ.ಸಂ

ಹೆಸರು

ಸ್ಥಳ

ವಯಸ್ಸು

ಜಾತಿ

ಕೆಲಸ

೦೧

ವಿಜಯಲಕ್ಷ್ಮೀ ನಾಗರಾಜ ರಾಟಿ

ಬೆದವಟ್ಟಿ

೩೧

ಉಪ್ಪಾರ

ಕೂಲಿ

೦೨

ರತ್ನವ್ವ ಫಕೀರಪ್ಪ ಅಳವಂಡಿ

ಬೆದವಟ್ಟಿ

೪೯

ಉಪ್ಪಾರ

ಕೂಲಿ

೦೩

ಲಲಿತವ್ವ ಕಳಕಪ್ಪ ಸುಂಕದ

ಬೆದವಟ್ಟಿ

೪೬

ಪಂಚಮಸಾಲಿ

ಕೂಲಿ

೦೪

ತಿಪ್ಪವ್ವ ಪರಮೇಶಪ್ಪ ರ‍್ಯಾವಣಕಿ

ಬೆದವಟ್ಟಿ

೪೫

ಕುರುಬ

ಕೂಲಿ

೦೫

ರೇಣವ್ವ ಅಂಗಡಿ

ಬೆದವಟ್ಟಿ

೫೩

ಉಪ್ಪಾರ

ಚಹಾ ಅಂಗಡಿ

 

ಪರಾಮರ್ಶನ ಗ್ರಂಥಗಳು

  1. ವಿಟೋಬ ಮತ್ತು ವಗ್ಗಿ, ೨೦೧೧, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಒಂದು ಅವಲೋಕನ, (ಲೇಖನ) ಹೊಸತು, ನವಕರ್ನಾಟಕ ಪ್ರಕಾಶನ, ಬೆಂಗಳೂರು.
  2. ನಿಖಿಲ್ ಡೇ, ಜ್ಯಾನ್ ದ್ರೆಝ್, ರೀತಿಕಾ ಖೇರಾ, (ಅನುವಾದ) ಸೇತೂರಾವ್.ಎಸ್, ೨೦೦೬, ಉದ್ಯೋಗ ಖಾತರಿ ಕಾಯಿದೆ ಒಂದು ಪರಿಚಯ ಹೊತ್ತಗೆ, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ.
  3. ವೀರಪ್ಪ ಮೊಯಿಲಿ ಎಂ, ೨೦೦೭, ‘ಕಿರುದಾರಿ-ಹೆದ್ದಾರಿ’ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ.
  4. ಶೈಲಜಾ ಹಿರೇಮಠ (ಸಂ), ೨೦೧೨, ಮಹಿಳಾ ಅಧ್ಯಯನ ಸಂಪುಟ-೧೨, ಸಂಚಿಕೆ-೨ ಜುಲೈ-ಡಿಸೆಂಬರ್ -೨೦೧೦ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.
  5. ಭೀಮೇಶ ಮಾಚನೂರು, ೨೦೧೬, ಉದ್ಯೋಗ ಖಾತ್ರಿ ಭರವಸೆ ಮತ್ತು ಬದುಕು, ಸುಮೇಧ ಪ್ರಕಾಶನ, ಕಲಬುರ್ಗಿ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal