Tumbe Group of International Journals

Full Text


Livelihood Challenges of Women Agricultural Labours

Manjunath1

1Research Fellow, Department of Sociology,

Kannada University, Hampi-583 276

manjuuppar661996@gmail.com


Abstract

Many proverbs and sayings that glorify women are often found in our social environment. In this, they are formed in two places called Shishth and Parishishth. Nodamdaddare ithihyavyam nodamdadare, 'The women who did agriculture for the first time in the world' are formed including the total women's group. But today how many women own the land? By putting the question, the answer that comes out will make you dance. Even today many women are working as agricultural laborers despite not having land ownership. The women of the urban area are engaged in many different businesses to meet the requirements of their lives. A large number of women in rural areas lead their lives depending on agriculture. This essay aims to solve the livelihood challenges of the women agricultural laborers of Bedavatti village under Kukanur taluka of Koppal district of Karnataka state, who are living like this.

Key words: Woman, Agriculture, Coolie, Dudime in Prathani Hole, Purush priority, Bedvatti.

ಮಹಿಳಾ ಕೃಷಿ ಕೂಲಿಕಾರ್ಮಿಕರ ಜೀವನೋಪಾಯ ಸವಾಲುಗಳು

ಮಂಜುನಾಥ

ಸಂಶೋಧನಾರ್ಥಿ, ಸಮಾಜಶಾಸ್ತ್ರ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ಹಂಪಿ -583 276

manjuuppar661996@gmail.com

ಪ್ರಸ್ತಾವನೆ (Introduction)

 ಮಹಿಳೆಯನ್ನು ವೈಭವೀಕರಿಸುವ ಅನೇಕ ಐತಿಹ್ಯ ಹಾಗೂ ಉಕ್ತಿಗಳನ್ನು ನಮ್ಮ ಸಾಮಾಜಿಕ ಪರಿಸರದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅದರಲ್ಲಿ ಶಿಷ್ಟ ಮತ್ತು ಪರಿಶಿಷ್ಟ ಎಂಬ ಎರಡು ನೆಲೆಯಲ್ಲಿ ಅವುಗಳು ರೂಪುಗೊಂಡಿರುತ್ತವೆ. ಒಟ್ಟು ಮಹಿಳಾ ಸಮೂಹವನ್ನು ಒಳಗೊಂಡಂತೆ ರೂಪಗೊಂಡಿರುವ ಐತಿಹ್ಯವನ್ನು ನೋಡುವುದಾದರೆ, ‘ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೃಷಿಯನ್ನು ಮಾಡಿದವಳು ಮಹಿಳೆ’ ಎಂಬುದು. ಆದರೆ ಇವತ್ತು ಎಷ್ಟು ಜನ ಮಹಿಳೆಯರು ಭೂಮಿಯ ಒಡೆತನವನ್ನು ಹೊಂದಿದ್ದಾರೆ? ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗ ಬರುವ ಉತ್ತರ ನಾಚಿಕೆ ತರುವಂತಹದ್ದು. ಇವತ್ತಿಗೂ ಭೂಮಿಯ ಒಡೆತನವಿಲ್ಲದಿದ್ದರೂ ಸಾಕಷ್ಟು ಮಹಿಳೆಯರು ಕೃಷಿಕೂಲಿಗಳಾಗಿ ದುಡಿಯುತ್ತಿದ್ದಾರೆ. ನಗರ ಪ್ರದೇಶದ ಮಹಿಳೆಯು ತನ್ನ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅನೇಕ ವೈವಿಧ್ಯಮಯ ದುಡಿಮೆಗಳಲ್ಲಿ ತೊಡಗಿಕೊಂಡಿರುತ್ತಾಳೆ. ಗ್ರಾಮೀಣ ಪ್ರದೇಶದ ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಾರೆ. ಹೀಗೆ ಜೀವನ ಸಾಗಿಸುತ್ತಿರುವ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬೆದವಟ್ಟಿ ಗ್ರಾಮದ ಮಹಿಳಾ ಕೃಷಿಕೂಲಿ ಕಾರ್ಮಿಕರನ್ನು ಒಳಗೊಂಡಂತೆ ಅವರ ಜೀವನೋಪಾಯ ಸವಾಲುಗಳನ್ನು ಕಟ್ಟಿಕೊಡುವ ಉದ್ದೇಶವನ್ನು ಈ ಪ್ರಬಂಧವು ಒಳಗೊಂಡಿದೆ.

ಪ್ರಾತಿನಿಧಿಕ ಪದಗಳು (Keywords): ಮಹಿಳೆ, ಕೃಷಿ, ಕೂಲಿ, ಸ್ವಂತ ಹೊಲದಲ್ಲಿನ ದುಡಿಮೆ, ಪರುಷ ಪ್ರಾಧಾನ್ಯತೆ, ಬೆದವಟ್ಟಿ.

ಇದುವರೆಗಿನ ಸಾಹಿತ್ಯ ಸಮೀಕ್ಷೆ (Review of Literature)

ನನ್ನ ಓದಿನ ಗ್ರಹಿಕೆಯ ಪ್ರಕಾರ ಪ್ರಸ್ತುತ ಲೇಖನವಾದ ‘ಮಹಿಳಾ ಕೃಷಿ ಕೂಲಿಕಾರ್ಮಿಕರ ಜೀವನೋಪಾಯ ಸವಾಲುಗಳು’ ಎಂಬ ತಲೆಬರೆಹವನ್ನು ತೆಗೆದುಕೊಂಡು ಇದುವರೆಗೂ ಯಾರು ಸಂಶೋಧನಾ ಬರವಣಿಗೆಯನ್ನು ಮಾಡಿರುವುದಿಲ್ಲ. ಒಂದು ವೇಳೆ ಅಧ್ಯಯನ ಮಾಡಿದರೂ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆದವಟ್ಟಿ ಗ್ರಾಮದ ಮಹಿಳೆಯರನ್ನು ಅನುಲಕ್ಷಿಸಿ ಸಂಶೋಧನಾ ಬರವಣಿಗೆಯನ್ನು ಮಾಡಿರುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಲೇಖನಗಳು ಪ್ರಕಟವಾಗಿವೆ. ಅವುಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ವಿವರಿಸಲಾಗಿದೆ,

1. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಸಾರಾಂಗವು 2010 ರಲ್ಲಿ ಪ್ರಕಟಿಸಿದ ಚಂದ್ರಶೇಖರ್ ಟಿ ಆರ್ ಅವರು ಬರೆದ ‘ಲಿಂಗಸಂಬಂಧಗಳು ಮತ್ತು ಅಭಿವೃದ್ಧಿ’ ಎಂಬ ಪುಸ್ತಕದಲ್ಲಿ ‘ಮಹಿಳೆಯರ ದುಡಿಮೆಯ ಸಾಮಾಜಿಕ ಆಯಾಮಗಳು’ ಎಂಬ ಲೇಖನದಲ್ಲಿ ಮಹಿಳೆಯರ ಒಟ್ಟು ದುಡಿಮೆಯ ಕುರಿತು ಹೇಳುತ್ತಾ, ಕೂಲಿ ಸಹಿತ ದುಡಿಮೆ ಮತ್ತು ಕೂಲಿರಹಿತ ದುಡಿಮೆಗಳ ನಡುವಿನ ಸಂಬಂಧ, ವ್ಯತ್ಯಾಸ ಮೊದಲಾದವುಗಳ ಕುರಿತು ತಿಳಿಸಿರುತ್ತಾರೆ.

2. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2016 ರಲ್ಲಿ ಪ್ರಕಟಿಸಿದ ಚಂದ್ರಶೇಖರ್ ಟಿ ಆರ್ ಅವರು ಬರೆದ ‘ಮಹಿಳಾ ಅಧ್ಯಯನ ಪರಿಭಾಷೆ’, ಎಂಬ ಪುಸ್ತಕದಲ್ಲಿ ‘ಮಹಿಳೆಯರ ದುಡಿಮೆ’, ‘ಮಹಿಳೆಯರ ದುಡಿಮೆಯ ಸಹಭಾಗಿತ್ವ ಪ್ರಮಾಣ’, ‘ಸಂಭಾವನಾಸಹಿತ ದುಡಿಮೆ ಮತ್ತು ಸಂಭಾವನಾರಹಿತ ದುಡಿಮೆ’ ಎಂಬ ಮೂರು ಪರಿಕಲ್ಪನೆಗಳ ಕುರಿತು ಭಾರತದ ಮಹಿಳೆಯರನ್ನು ಒಳಗೊಂಡಂತೆ ಮಾಹಿತಿ ವಿಶ್ಲೇಷಣೆ ಮಾಡಿರುತ್ತಾರೆ.

3. ಶೈಲಜ ಹಿರೇಮಠ ಅವರು ಸಂಪಾದಿಸಿದ, ‘ಮಹಿಳಾ ಅಧ್ಯಯನ ಸಂಪುಟ-12, ಸಂಚಿಕೆ-1’ಯನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಸಾರಾಂಗವು 2011 ರಲ್ಲಿ ಪ್ರಕಟಿಸಿದೆ. ಈ ಪುಸ್ತಕದಲ್ಲಿ ಚನ್ನಮ್ಮ ಕೆ ಸಿ ಅವರು ‘ಮಹಿಳಾ ದುಡಿಮೆಯ ಸಿದ್ಧಾಂತ ಮತ್ತು ವಾಸ್ತವ’ ಎಂಬ ಲೇಖನವನ್ನು ಬರೆದಿರುತ್ತಾರೆ. ಸ್ತ್ರೀವಾದಿ ಚಿಂತನೆಗಳು ಮಹಿಳೆಯರ ದುಡಿಮೆಯ ಬಗ್ಗೆ ಹೇಗೆ ಚರ್ಚಿಸಿವೆ ಮತ್ತು ಮಾರುಕಟ್ಟೆಯಲ್ಲಿ ಮಹಿಳೆಯರ ಸಹಭಾಗಿತ್ವ ಮೊದಲಾದ ಅಂಶಗಳ ಕುರಿತು ತಿಳಿಸಿದ್ದಾರೆ.

4. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಸಾರಾಂಗವು 2012 ರಲ್ಲಿ ಪ್ರಕಟಿಸಿದ, ಶೈಲಜ ಹಿರೇಮಠ ಅವರು ಸಂಪಾದಿಸಿದ, ‘ಮಹಿಳಾ ಅಧ್ಯಯನ ಸಂಪುಟ-12, ಸಂಚಿಕೆ-2’ರಲ್ಲಿ ಸಂಪಾದಕರೆ ಬರೆದ ‘ಮಹಿಳೆ ದುಡಿಮೆ, ಉತ್ಪಾದನೆ, ಆರ್ಥಿಕತೆ, ಸ್ವಾವಲಂಬನೆ ಇತ್ಯಾದಿ’ ಎಂಬ ಲೇಖನದಲ್ಲಿ ಉತ್ಪಾದನೆ ಚಟುವಟಿಕೆಗಳಿಂದ ಮಹಿಳೆಯರು ಹೊರಗಿಟ್ಟಿದ್ದು, ದುಡಿಮೆಯ ಅರ್ಥ ಪಲ್ಲಟಗಳು ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿರುತ್ತಾರೆ.

ಆಧಾರಕಲ್ಪನೆಗಳು (Hypothesis)

ವಿಜ್ಞಾನ, ಸಾಮಾಜಿಕ ಹಾಗೂ ಮಾನವಿಕ ಸಂಶೋಧನೆಗಳಲ್ಲಿ ಪ್ರಾಕ್ ಕಲ್ಪನೆಗಳು ಹಾದಿಹಣತೆಗಳಿದ್ದಂತೆ. ಪ್ರಸ್ತುತ ಲೇಖನವು ತನ್ನ ಹಾದಿಯನ್ನು 2 ಪ್ರಾಕ್ ಕಲ್ಪನೆಗಳ ಮೂಲಕ ತನ್ನ ಹಾದಿಯನ್ನು ಗುರುತಿಸಿಕೊಂಡಿದೆ. ಅವುಗಳು ಈ ಕೆಳಗಿನಂತಿವೆ,

  • ಬೆದವಟ್ಟಿ ಗ್ರಾಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೃಷಿಕೂಲಿ ಮಾಡುತ್ತಿರಬಹುದು. ಇದಕ್ಕೆ ಅನಕ್ಷರತೆಯು ಕಾರಣವಾಗಿರಬಹುದು.
  • ಈ ಮಹಿಳೆಯರಿಗೆ ವಿವಿಧ ಕೌಶಲ್ಯಗಳ ಕೊರತೆಯಿರಬಹುದು ಮತ್ತು ಇವರು ತಮ್ಮ ಮನೆಯ ಪುರುಷರ ಒತ್ತಡದಿಂದ ಬೇರೆ ಕೆಲಸಕ್ಕೆ ಹೋಗದೆ ಕೇವಲ ಕೃಷಿ ಕೂಲಿಕಾರ್ಮಿಕರಾಗಿರಬಹುದು.

ಉದ್ದೇಶಗಳು (Objectives)

  • ಬೆದವಟ್ಟಿ ಗ್ರಾಮದಲ್ಲಿ ಕೃಷಿ ಕೂಲಿಕಾರ್ಮಿಕರಾಗಿ ದುಡಿಯುತ್ತಿರುವ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಶೋಧಿಸುವುದು.
  • ಯಾವ ಯಾವ ಸಮುದಾಯದ ಮಹಿಳೆಯರು ಎಲ್ಲೆಲ್ಲಿ ಕೃಷಿ ಕೂಲಿ ಮಾಡುತ್ತಾರೆ ಮತ್ತು ಅವರಿಗೆ ಎದುರಾಗುವ ಸಮಸ್ಯೆ ಹಾಗೂ ಸವಾಲುಗಳ ಕುರಿತು ಶೋಧಿಸುವುದು.

ವೈಧಾನಿಕತೆ (Methodology)

  ಪ್ರಸಕ್ತ ಲೇಖನದ ತಾತ್ವಿಕತೆಯನ್ನು ಕಟ್ಟಿಕೊಡಲು ಅನುವಾಗುವಂತಹ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲು ‘ಸಮೀಕ್ಷಾ ವಿಧಾನ, ಸಂದರ್ಶನ ವಿಧಾನ, ಏಕವಿಷಯಕ ಅಧ್ಯಯನ ವಿಧಾನವನ್ನು’ ಬಳಸಿಕೊಂಡಿರುತ್ತೇನೆ. ಆನುಷಂಗೀಕ ಮಾಹಿತಿಯನ್ನು ಪಡೆಯಲು ಲೇಖನ ಹಾಗೂ ಪುಸ್ತಕಗಳನ್ನು ಪರಾಮರ್ಶಿಸಿ ವಿವರಣಾತ್ಮಕ ವಿಧಾನದ ಮೂಲಕ ಈ ಲೇಖನವನ್ನು ಸಿದ್ಧಪಡಿಸಿರುತ್ತೇನೆ. ಈ ಲೇಖನದ ಮಾದರಿ ವಿಧಾನವು ಸರಳ ಯಾದೃಚ್ಛಿಕ ಮಾದರಿ ಮತ್ತು ಪ್ರಕರಣ ಅಧ್ಯಯನದಲ್ಲಿ ಉದ್ದೇಶಿತ ಮಾದರಿಯನ್ನು ಒಳಗೊಂಡಿರುತ್ತದೆ. ಉದ್ದೇಶಿತ ಮಾದರಿಯಲ್ಲಿ ಸ್ವಂತ ಹೊಲದಲ್ಲಿ ಕೆಲಸ ಮಾಡುವ, ಕೇವಲ ಕೂಲಿಯನ್ನು ಮಾಡುವ ಹಾಗೂ ಸ್ವಂತ ಹೊಲದಲ್ಲಿ ಮತ್ತು ಕೂಲಿ ಕೆಲಸ ಮಾಡುವವರಲ್ಲಿ ಅನಕ್ಷರಸ್ಥ ಮಹಿಳೆಯರು, ಪ್ರಾಥಮಿಕ ಶಿಕ್ಷಣ ಪಡೆದವರು, ಪ್ರೌಢ ಶಿಕ್ಷಣವನ್ನು ಪಡೆದವರು ಮತ್ತು ಕಾಲೇಜು ಶಿಕ್ಷಣವನ್ನು ಪಡೆದ ಒಬ್ಬ ಮಹಿಳೆಯನ್ನು ಅಧ್ಯಯನಕ್ಕೆ ತೆಗೆದುಕೊಂಡಿರಲಾಗಿದೆ.

ಸಂಶೋಧನೆಯ ವ್ಯಾಪ್ತಿ (Scope of the Research)

  ಪ್ರಸ್ತುತ ಲೇಖನದ ರಚನೆಗಾಗಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆದವಟ್ಟಿ ಗ್ರಾಮದಲ್ಲಿರುವ ಮಹಿಳಾ ಕೃಷಿ ಕೂಲಿಕಾರ್ಮಿಕರನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರಲಾಗುತ್ತದೆ. ಆ ಮಹಿಳೆಯರ ಸಾಮಾಜೋ-ಆರ್ಥಿಕ ಜೀವನವನ್ನು ಆಧಾರವಾಗಿಟ್ಟುಕೊಂಡು ಲೇಖನ ರಚಿಸಿದ ಕಾರಣಕ್ಕಾಗಿ ಇವುಗಳೇ ನನ್ನ ಸಂಶೋಧನಾ ವ್ಯಾಪ್ತಿಯನ್ನು ಸೂಚಿಸುತ್ತವೆ.

ಬೆದವಟ್ಟಿ ಗ್ರಾಮದ ಸಂಕ್ಷಿಪ್ತ ಪರಿಚಯ

ಪ್ರತಿಯೊಂದು ಗ್ರಾಮವು ದಿನನಿತ್ಯದ ಸನ್ನಿವೇಶ/ವಿದ್ಯಮಾನಗಳಿಗೆ ಒಳಗಾಗಿ ತನ್ನ ಸಾಮಾಜಿಕ ರಚನೆಯಲ್ಲಿನ ಸ್ವರೂಪಗಳನ್ನು ಬದಲಾಯಿಸಿಕೊಳ್ಳತ್ತಾ ಸಾಗಿವೆ ಮತ್ತು ಸಾಗುತ್ತಲಿವೆ. ಅದರಂತೆ ಬೆದವಟ್ಟಿ ಗ್ರಾಮವು ಕೂಡ ಬದಲಾವಣೆಯ ಪ್ರಕ್ರಿಯೆಗೆ ಒಳಪಟ್ಟಿದೆ. ಈ ಗ್ರಾಮಕ್ಕೆ ಮೊದಲು ‘ವೇದವಟಿ’ ಎಂಬ ಹೆಸರು ಇತ್ತು ನಂತರ ಬೆದವಟ್ಟಿ ಎಂದು ಬದಲಾಯಿತು ಎಂದು ಹೇಳುತ್ತಾರೆ. ಈಗಲೂ ಮಠದ ಜಾತ್ರೆಯ ಆಹ್ವಾನ ಪತ್ರಿಕೆಯಲ್ಲಿ ಬೆದವಟ್ಟಿ (ವೇದವಟಿ) ಎಂದು ಬರೆಯಲಾಗಿರುತ್ತದೆ. ಪ್ರಸ್ತುತ ದಿನಮಾನಗಳ ದಾಖಲೆ ಮತ್ತು ಕಡತದಲ್ಲಿ, ಅಷ್ಟೆ ಅಲ್ಲದೇ ಪ್ರಾಚೀನ ಕಾಲದ ಶಾಸನಗಳಲ್ಲಿ ಬೆದವಟ್ಟಿ, ಕೋಣನ ಬೆದವಟ್ಟಿ ಎಂತಲೂ ಉಲ್ಲೇಖಗೊಂಡಿದೆ. ಅದೇನೆ ಇದ್ದರೂ ಇರುವ ಕೆಲವು ಮಾಹಿತಿಯನ್ನು ಸಂಖ್ಯಾತ್ಮವಾಗಿ ಈ ಕೆಳಗಿನ ಕೋಷ್ಟಕ-1 ರಲ್ಲಿ ಉಲ್ಲೇಖಿಸಲಾಗಿದೆ.

(ಕೋಷ್ಟಕ – 1)

ವಿವರಗಳು

ಮಹಿಳೆಯರು

ಪುರುಷರು

ಒಟ್ಟು

ಒಟ್ಟು ಮನೆಗಳ ಸಂಖ್ಯೆ

-

-

193

ಜನಸಂಖ್ಯೆ

453

462

915

ಮಕ್ಕಳು (0-6)

51

55

106

ಪರಿಶಿಷ್ಟ ಜಾತಿ

165

152

317

ಪರಿಶಿಷ್ಟ ಪಂಗಡ

8

8

16

ಸಾಕ್ಷರತೆ ಸಂಖ್ಯೆ ಮತ್ತು (ಶೇಕಡಾವಾರು)

243 (60.45%)

329 (80.84%)

572 (70.70%)

ಅನಕ್ಷರಸ್ಥರ ಸಂಖ್ಯೆ

210

133

343

ಒಟ್ಟು ಕೆಲಸಗಾರರು

249

255

504

ಒಕ್ಕಲುತನ ಮಾಡುವವರ ಸಂಖ್ಯೆ

19

22

41

Main Worker

-

-

83

Manrginal Worker

223

198

412

ಆಧಾರ: 2011 Census of India : Primary Census Abstract

 

2011ರ ಜನಗಣತಿಯ ಪ್ರಕಾರ ಬೆದವಟ್ಟಿ ಗ್ರಾಮದಲ್ಲಿ 0-6 ವರ್ಷ ವಯಸ್ಸಿನ ಮಕ್ಕಳ ಜನಸಂಖ್ಯೆಯು 106 ಆಗಿದೆ, ಇದು ಗ್ರಾಮದ ಒಟ್ಟು ಜನಸಂಖ್ಯೆಯ 11.58% ರಷ್ಟಿದೆ. ಈ ಗ್ರಾಮದ ಸರಾಸರಿ ಲಿಂಗಾನುಪಾತವು 981 ಆಗಿದೆ, ಹಾಗೇಯೆ ಮಕ್ಕಳ ಲಿಂಗಾನುಪಾತವು 927 ಆಗಿದೆ. ಇಲ್ಲಿ ಪರಿಶಿಷ್ಟ ಜಾತಿ (SC) 34.64 % ರಷ್ಟಿದ್ದರೆ ಪರಿಶಿಷ್ಟ ಪಂಗಡ (ST) 1.75 % ಒಟ್ಟು ಜನಸಂಖ್ಯೆಯನ್ನು ಹೊಂದಿದೆ.

ಬೆದವಟ್ಟಿ ಗ್ರಾಮದಲ್ಲಿ ಇರುವ ಕೃಷಿ ಕೂಲಿಕಾರ್ಮಿಕರ ಸಂಖ್ಯೆ

ಪ್ರಸ್ತುತ ಬೆದವಟ್ಟಿ ಗ್ರಾಮದಲ್ಲಿ ವಾಸಿಸುವ ಒಟ್ಟು ಮಹಿಳೆಯರ ಸಂಖ್ಯೆ : 213 ಅದರಲ್ಲಿ ಕೃಷಿ ಕಾರ್ಮಿಕ ಮಹಿಳೆಯರ ಸಂಖ್ಯೆ : 139. ಇಲ್ಲಿರುವ ಮಹಿಳೆಯರು ಕೃಷಿಕೂಲಿ ಕಾರ್ಮಿಕರಾಗಲು ಇರುವ ಮುಖ್ಯ 3 ಕಾರಣಗಳನ್ನು ಕೆಳಗಿನಂತೆ ನೋಡಬಹುದಾಗಿದೆ,

  1. ಕೌಟುಂಬಿಕ ದುಡಿಮೆಯ ಜವಾಬ್ದಾರಿ ಹಾಗೂ ಮಕ್ಕಳ ಮತ್ತು ವೃದ್ಧರ ಜವಾಬ್ದಾರಿಯು ಮಹಿಳೆಯರ ಮೇಲಿರುವುದರಿಂದ ಅವರು ಬೇರೆ ಕಡೆ ವಲಸೆ ಹೋಗಿ ಬೇರೆ ಕೆಲಸಗಳನ್ನು ಮಾಡಲು ಆಗುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ಅವರು ಕೃಷಿಯನ್ನು ಅನುಸರಿಸುತ್ತಾರೆ.
  2. ಅತೀ ಕಡಿಮೆ ಅಕ್ಷರತೆ, ಅನಕ್ಷರತೆಯಿಂದಾಗಿ ಮತ್ತು ಬೇರೆ ಬೇರೆ ಕೌಶಲ್ಯಗಳು ಬರದಿರುವುದರಿಂದ ಅವರು ಕೃಷಿ ಕೂಲಿಯನ್ನು ಅವಲಂಬಿಸಿದ್ದಾರೆ.
  3. ಪುರುಷ ಪ್ರಧಾನ ವ್ಯವಸ್ಥೆಯು ಅವರ ದುಡಿಮೆಯ ಸಾಮರ್ಥವನ್ನು ಕಡೆಗಣಿಸಿ ಹೊರಗಡೆ ಕಳುಹಿಸದಿರುವುದು.

ಈ ಮೇಲಿನ ಕಾರಣಗಳಿಂದ ಇಲ್ಲಿನ ಮಹಿಳೆಯರು ತಮ್ಮ ಬದುಕಿನ ಬವಣೆಯನ್ನು ಕೃಷಿಯ ಆಧಾರದಿಂದಲೇ ಸಾಗಿಸುತ್ತಾರೆ. ಯಾವ ಯಾವ ಸಮುದಾಯದ ಎಷ್ಟು ಮಹಿಳೆಯರು ಕೃಷಿ ಕಾರ್ಮಿಕ ಕೆಲಸ ಮಾಡುತ್ತಾರೆ ಎಂಬುದನ್ನು ಈ ಕೆಳಗಿನ ಕೋಷ್ಟಕ – 2 ರಲ್ಲಿ ನೋಡಬಹುದಾಗಿದೆ.

ಕೃಷಿಯನ್ನೆ ದುಡಿಮೆಯನ್ನಾಗಿಸಿಕೊಂಡವರ ಪ್ರಮಾಣ (ಕೋಷ್ಟಕ – 2)

ಕ್ರ.ಸಂ

ಮೀಸಲಾತಿ ಆಧಾರದಲ್ಲಿ

ಜಾತಿ

ಸಂಖ್ಯೆ

ಒಟ್ಟು ಮಹಿಳೆಯರ ಸಂಖ್ಯೆ

01

ಪರಿಶಿಷ್ಟ ಜಾತಿ

ಕೊರವ

11

28

ಮಾದಿಗ

17

02

ಪರಿಶಿಷ್ಟ ಪಂಗಡ

ವಾಲ್ಮೀಕಿ

01

01

03

ಪ್ರವರ್ಗ - 1

ಉಪ್ಪಾರ

03

03

04

ಪ್ರವರ್ಗ - 2 ಎ

ಕುರುಬ

08

55

ಹಡಪದ

03

ವಿಶ್ವಕರ್ಮ

04

ಹೂವಾಡಿಗರು/ಜೀರ

03

ಗಾಣಿಗ

37

05

ಪ್ರವರ್ಗ – 2 ಬಿ

ಮುಸ್ಲಿಂ

18

18

06

ಪ್ರವರ್ಗ – 3 ಬಿ

ವೀರಶೈವ ಲಿಂಗಾಯತ

16

34

ಪಂಚಮಸಾಲಿ

18

ಒಟ್ಟು

139

 

ಈ ಮೇಲಿನ ಪಟ್ಟಿಯಲ್ಲಿ ಕಾಣಿಸಿರುವಂತೆ ಕರ್ನಾಟಕ ಸರ್ಕಾರದ ಮೀಸಲಾತಿಯ ಪ್ರಕಾರ ನೋಡುವುದಾದರೆ ಪವರ್ಗ – 2 ಎ ದಲ್ಲಿ ಬರುವ ಸಮುದಾಯಗಳಲ್ಲಿನ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವುದು ಕಂಡುಬರುತ್ತದೆ. ಇವರು ಒಟ್ಟು ಕೃಷಿ ಕೂಲಿ ಕಾರ್ಮಿಕರ ಪ್ರಮಾಣದಲ್ಲಿ ಶೇಕಡಾ 39.56% ರಷ್ಟು ಇವರೇ ಇದ್ದಾರೆ, ಇವರ ನಂತರ ಪ್ರವರ್ಗ – 3 ಬಿ ರ ಮಹಿಳೆಯರು ಶೇಕಡಾ 24.46% ರಷ್ಟು, ನಂತರದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರು ಶೇಕಡಾ 20.14% ರಷ್ಟು, ಪ್ರವರ್ಗ – 2 ಬಿ ಮಹಿಳೆಯರು ಶೇಕಡಾ 12.94% ರಷ್ಟು, ಪ್ರವರ್ಗ – 1 ಮಹಿಳೆಯರು ಶೇಕಡಾ 2.15% ರಷ್ಟು, ಪರಿಶಿಷ್ಟ ಪಂಗಡದ ಮಹಿಳೆಯರು ಶೇಕಡಾ 0.71% ರಷ್ಟಿದೆ.

ಈ ಮೇಲೆ ಬೆದವಟ್ಟಿ ಗ್ರಾಮದಲ್ಲಿ ಒಟ್ಟಾರೆಯಾಗಿ ಕೃಷಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುವುದನ್ನು ತಿಳಿಸಲಾಗಿದೆ. ಈ ಮೊದಲೇ ತಿಳಿಸಿದಂತೆ ಒಟ್ಟು 139 ಮಹಿಳೆಯರು ತಮ್ಮ ಬದುಕಿನ ನಿರ್ವಹಣೆಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ, ಆದರೆ ಹೀಗೆ ಕೃಷಿಯನ್ನು ಅವಲಂಬಿಸಿದ ಕೆಲವು ಮಹಿಳೆಯರು ಕೇವಲ ತಮ್ಮ ಸ್ವಂತ ಹೊಲದಲ್ಲಿ ಮಾತ್ರ ಕೆಲಸ ಮಾಡುತ್ತಾರೆ. ಇನ್ನೂ ಕೆಲವರು ಭೂಮಿ ಇಲ್ಲದ ಕಾರಣ ಕೇವಲ ಕೂಲಿಯನ್ನೇ ಅವಲಂಬಿಸಿದ್ದಾರೆ. ಕೆಲವರು ತಮ್ಮ ಸ್ವಂತ ಹೊಲದಲ್ಲಿಯೂ ದುಡಿದು ಬೇರೆಯವರ ಹೊಲದಲ್ಲಿಯೂ ಕೂಲಿಗಾಗಿ ದುಡಿಯುವವರು ಇದ್ದಾರೆ. ಯಾವ ಯಾವ ಸಮುದಾಯದ ಮಹಿಳೆಯರು ಯಾವ ಯಾವ ರೀತಿಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂಬುವುದನ್ನು ಈ ಕೆಳಗಿನ ಕೋಷ್ಟಕ – 3ರಲ್ಲಿ ದಾಖಲಿಸಲಾಗಿದೆ.

ಒಟ್ಟು ಕೆಲಸ ಮಾಡುವವರ ಪ್ರಮಾಣ (ಕೋಷ್ಟಕ – 3)

ಕ್ರ.ಸಂ

ಮೀಸಲಾತಿ ಆಧಾರದಲ್ಲಿ

ಜಾತಿ

ಕೇವಲ ಸ್ವಂತ ಜಮೀನಿನಲ್ಲಿ ದುಡಿಯುವವರ ಸಂಖ್ಯೆ

ಕೂಲಿ ಮಾಡುವವರ ಸಂಖ್ಯೆ

ಎರಡೂ ಕೆಲಸ ಮಾಡುವವರ ಸಂಖ್ಯೆ

ಒಟ್ಟು ಕೆಲಸಗಾರರ ಸಂಖ್ಯೆ

01

ಪರಿಶಿಷ್ಟ ಜಾತಿ

ಕೊರವ

-

10

01

11

ಮಾದಿಗ

-

11

06

17

02

ಪರಿಶಿಷ್ಟ ಪಂಗಡ

ವಾಲ್ಮೀಕಿ

-

-

01

01

03

ಪ್ರವರ್ಗ - 1

ಉಪ್ಪಾರ

-

03

-

03

04

ಪ್ರವರ್ಗ - 2 ಎ

ಕುರುಬ

03

03

02

08

ಹಡಪದ

03

-

-

03

ವಿಶ್ವಕರ್ಮ

04

-

-

04

ಹೂವಾಡಿಗರು/ಜೀರ

02

01

-

03

ಗಾಣಿಗ

27

02

08

37

05

ಪ್ರವರ್ಗ – 2 ಬಿ

ಮುಸ್ಲಿಂ

10

-

08

18

06

ಪ್ರವರ್ಗ – 3 ಬಿ

ವೀರಶೈವ ಲಿಂಗಾಯತ

12

-

04

16

ಪಂಚಮಸಾಲಿ

08

09

01

18

ಒಟ್ಟು

69

39

31

139

ಈ ಮೇಲಿನ ಕೋಷ್ಟಕದಲ್ಲಿ ದಾಖಲಿಸಿದಂತೆ ಬೆದವಟ್ಟಿ ಗ್ರಾಮದಲ್ಲಿ ಒಟ್ಟು ದುಡಿಯುವ ಮಹಿಳೆಯ (ಶೇ.100) ಪ್ರಮಾಣದಲ್ಲಿ ಕೇವಲ ಸ್ವಂತ ಹೊಲದಲ್ಲಿ ದುಡಿಯುವವರ ಪ್ರಮಾಣ ಶೇ 49.64% ರಷ್ಟಿದೆ. ಕೇವಲ ಕೃಷಿ ಕೂಲಿ ಮಾಡುವವರ ಪ್ರಮಾಣ ಶೇ 28.05% ರಷ್ಟಿದೆ ಹಾಗೂ ಎರಡು ಕೆಲಸ ಮಾಡುವವರ ಪ್ರಮಾಣ ಶೇ 22.30% ರಷ್ಟಿದೆ.

ಇದರಲ್ಲಿ ಒಟ್ಟು ದುಡಿಮೆಗಾರರಲ್ಲಿ ಸ್ವಂತ ಹೊಲದಲ್ಲಿಯೇ ಅತೀ ಹೆಚ್ಚಿನ (ಶೇಕಡ 39.13% ರಷ್ಟು) ಪ್ರಮಾಣದಲ್ಲಿ ದುಡಿಯುವವರ ಸಂಖ್ಯೆ ಗಾಣಿಗ ಸಮುದಾಯದಾಗಿದೆ. ನಂತರದಲ್ಲಿ ವೀರಶೈವ ಲಿಂಗಾಯತರು ಶೇ 17.39%, ಮುಸ್ಲಿಂರು ಶೇ 14.49%, ಪಂಚಮಸಾಲಿಗಳು ಶೇ 11.59%, ವಿಶ್ವಕರ್ಮರು ಶೇ 5.79%, ಹಡಪದ ಮತ್ತು ಕುರುಬರು ಶೇ 4.34%, ಹೂವಾಡಿಗರು/ಜೀರ ಶೇ 2.89%, ಕ್ರಮವಾಗಿ ಬರುತ್ತಾರೆ. ಕೊರವರು, ಮಾದಿಗರು, ವಾಲ್ಮೀಕಿ ಮತ್ತು ಉಪ್ಪಾರರು ಭೂಮಿಯನ್ನು ಹೊಂದದೆ ಇರುವ ಕಾರಣಕ್ಕೆ ಇವರ ಪ್ರಮಾಣ 0% ಆಗಿದೆ.

ಮುಂದುವರೆದು ಕೇವಲ ಕೂಲಿ ಕೆಲಸ ಮಾಡುವವರಲ್ಲಿ ಅತೀ ಹೆಚ್ಚಿನ (ಶೇಕಡ 28.20% ರಷ್ಟು) ಪ್ರಮಾಣದಲ್ಲಿ ದುಡಿಯುವವರ ಸಂಖ್ಯೆ ಮಾದಿಗ ಸಮುದಾಯದಾಗಿದೆ. ನಂತರದಲ್ಲಿ ಕೊರವರು ಶೇ 25.64%, ಪಂಚಮಸಾಲಿಗಳು ಶೇ 23.07%, ಉಪ್ಪಾರ ಮತ್ತು ಕುರುಬರು ಶೇ 7.69%, ಗಾಣಿಗರು ಶೇ 5.12%, ಹೂವಾಡಿಗರು/ಜೀರ ಶೇ. 2.56% ಕ್ರಮವಾಗಿ ಬರುತ್ತಾರೆ. ವಾಲ್ಮೀಕಿ, ಹಡಪದ, ವಿಶ್ವಕರ್ಮ, ಮುಸ್ಲಿಂ ಮತ್ತು ವೀರಶೈವ ಲಿಂಗಾಯತರು ಕೂಲಿ ಕೆಲಸಕ್ಕೆ ಹೋಗದ ಕಾರಣ ಇವರ ಪ್ರಮಾಣ 0% ಆಗಿದೆ.

ಇನ್ನೂ ಸ್ವಂತ ಹೊಲ ಮತ್ತು ಕೂಲಿ ಕೆಲಸ ಮಾಡುವವರಲ್ಲಿ ಅತೀ ಹೆಚ್ಚಿನ (ಶೇಕಡ 25.80% ರಷ್ಟು) ಪ್ರಮಾಣದಲ್ಲಿ ದುಡಿಯುವವರ ಸಂಖ್ಯೆ ಗಾಣಿಗರು ಮತ್ತು ಮುಸ್ಲಿಂ ಸಮುದಾಯದಾಗಿದೆ. ನಂತರದಲ್ಲಿ ಮಾದಿಗರು ಶೇ 19.35%, ವೀರಶೈವ ಲಿಂಗಾಯತರು ಶೇ 12.90%, ಕುರುಬರು ಶೇ 6.45%, ಕೊರವ, ವಾಲ್ಮೀಕಿ ಮತ್ತು ಪಂಚಮಸಾಲಿಗಳು ಶೇ 3.22%, ಕ್ರಮವಾಗಿ ಬರುತ್ತಾರೆ. ಉಪ್ಪಾರರು ಭೂಮಿ ಇಲ್ಲದಕ್ಕಾಗಿ ಹಡಪದ, ವಿಶ್ವಕರ್ಮ, ಹೂವಾಡಿಗರು/ಜೀರರು ಕೇವಲ ಸ್ವಂತ ಹೊಲದಲ್ಲಿ ದುಡಿಯುತ್ತಿರುವ ಕಾರಣಕ್ಕಾಗಿ ಇಲ್ಲಿ ಇವರ ಪ್ರಮಾಣ 0% ಆಗಿದೆ.

ಪರಿಶಿಷ್ಟ ಜಾತಿಯಲ್ಲಿ ಬರುವ ಕೊರವರು, ಮಾದಿಗರು, ಪರಿಶಿಷ್ಟ ಪಂಗಡದಲ್ಲಿ ಬರುವ ವಾಲ್ಮೀಕಿ ಹಾಗೂ ಪ್ರವರ್ಗ – 1 ರಲ್ಲಿ ಬರುವ ಉಪ್ಪಾರ ಸಮುದಾಯದ ಮಹಿಳೆಯರಿಗೆ ಸ್ವಂತ ಹೊಲ ಇರದ ಕಾರಣ ಸ್ವಂತ ಹೊಲದಲ್ಲಿ ದುಡಿಯುವ ಪ್ರಮಾಣ 0% ಆಗಿದೆ. ಪ್ರವರ್ಗ - 2 ಎ, 2 ಬಿ, ಮತ್ತು 3 ಬಿ ಯಲ್ಲಿ ಬರುವ ಒಟ್ಟು ದುಡಿಯುವ ಮಹಿಳೆಯರ ಪೈಕಿ ಕುರುಬರು ಶೇ 37.5%, ಹಡಪದ ಹಾಗೂ ವಿಶ್ವಕರ್ಮರು ಶೇ 100%, ಹೂವಾಡಿಗರು/ಜೀರ ಶೇ 66.66%, ಗಾಣಿಗರು ಶೇ 72.97%, ಮುಸ್ಲಿಂರು ಶೇ 55.55%, ವೀರಶೈವ ಲಿಂಗಾಯತರು ಶೇ 75%, ಪಂಚಮಸಾಲಿಗರು 44.44% ರಷ್ಟು ಸ್ವಂತ ಹೊಲದಲ್ಲಿ ದುಡಿಯುತ್ತಿರುವುದು ಕಂಡುಬರುತ್ತದೆ.

ಸಮುದಾಯದ ಒಟ್ಟು ದುಡಿಯುವವರ ಪೈಕಿ ಸ್ವಂತ ಹೊಲ ಇರದ ಪರಿಶಿಷ್ಟ ಜಾತಿಯಲ್ಲಿ ಬರುವ ಕೊರವರು ಶೇ 90.90% ರಷ್ಟು, ಮಾದಿಗರು ಶೇ 64.70% ರಷ್ಟು, ಹಾಗೂ ಪ್ರವರ್ಗ – 1 ರಲ್ಲಿ ಬರುವ ಉಪ್ಪಾರರು 100% ರಷ್ಟು, ಪರಿಶಿಷ್ಟ ಪಂಗಡದಲ್ಲಿ ಬರುವ ವಾಲ್ಮೀಕಿ ಮಹಿಳೆಯು ಎರಡು ಕೆಲಸವನ್ನು ಮಾಡುವುದರಿಂದ  ಕೂಲಿ ಮಾಡುವ ಪ್ರಮಾಣ 0% ಆಗಿದೆ. ಪ್ರವರ್ಗ - 2 ಎ ದಲ್ಲಿ ಬರುವ ಹಡಪದ ಹಾಗೂ ವಿಶ್ವಕರ್ಮರು ಪ್ರವರ್ಗ - 2 ಬಿ ಯಲ್ಲಿ ಬರುವ ಮುಸ್ಲಿಂರು, ಪ್ರವರ್ಗ – 3 ಬಿ ಯಲ್ಲಿ ಬರುವ ವೀರಶೈವ ಲಿಂಗಾಯತರು ಕೇವಲ ಸ್ವಂತ ಹೊಲಗಳಲ್ಲಿ ಮಾತ್ರ ದುಡಿಯುವುದರಿಂದ ಕೂಲಿ ಮಾಡುವ ಪ್ರಮಾಣ 0% ಆಗಿದೆ. ಪ್ರವರ್ಗ - 2 ಎ ದಲ್ಲಿ ಬರುವ ಕುರುಬರು ಶೇ 37.5%, ಹೂವಾಡಿಗರು/ಜೀರ ಶೇ 33.33%, ಗಾಣಿಗರು ಶೇ 5.40%, ಪ್ರವರ್ಗ – 3 ಬಿ ಯಲ್ಲಿ ಬರುವ ಪಂಚಮಸಾಲಿ 50% ರಷ್ಟು ಕೇವಲ ಕೂಲಿ ದುಡಿಯುತ್ತಿರುವುದು ಕಂಡುಬರುತ್ತದೆ.

ಈ ಮೇಲಿನ ಕೋಷ್ಟಕದ ಪ್ರಕಾರ ಸಮುದಾಯದ ಒಟ್ಟು ದುಡಿಯುವವರ ಪೈಕಿ ಪರಿಶಿಷ್ಟ ಜಾತಿಯಲ್ಲಿ ಬರುವ ಕೊರವರು ಶೇ 9.09% ರಷ್ಟು, ಮಾದಿಗರು ಶೇ 35.29% ರಷ್ಟು, ಪರಿಶಿಷ್ಟ ಪಂಗಡದಲ್ಲಿ ಬರುವ ವಾಲ್ಮೀಕಿಯರಲ್ಲಿ 100% ಆಗಿದೆ. ಪ್ರವರ್ಗ – 1 ರಲ್ಲಿ ಬರುವ ಉಪ್ಪಾರರು ಭೂಮಿ ಇಲ್ಲದ ಕಾರಣಕ್ಕಾಗಿ ಕೇವಲ ಕೂಲಿಯನ್ನು ಅವಲಂಬಿಸುವುದರಿಂದ ಇವರ ಪ್ರಮಾಣ 0% ಆಗಿದೆ.  ಪ್ರವರ್ಗ - 2 ಎ ದಲ್ಲಿ ಬರುವ ಹಡಪದ ಹಾಗೂ ವಿಶ್ವಕರ್ಮ ಹೂವಾಡಿಗರು/ಜೀರರ ಮಹಿಳೆಯರು ಕೇವಲ ಸ್ವಂತ ಹೊಲಗಳಲ್ಲಿ ದುಡಿಯುತ್ತಿರುವುದರಿಂದ ಇವರ ಪ್ರಮಾಣವೂ ಕೂಡ 0% ಆಗಿದೆ. ಪ್ರವರ್ಗ - 2 ಎ ದಲ್ಲಿ ಬರುವ ಕುರುಬರು ಶೇ 25%, ಪ್ರವರ್ಗ - 2 ಬಿ ಯಲ್ಲಿ ಬರುವ ಮುಸ್ಲಿಂರು ಶೇ 44.44%, ಪ್ರವರ್ಗ – 3 ಬಿ ಯಲ್ಲಿ ಬರುವ ವೀರಶೈವ ಲಿಂಗಾಯತರು ಶೇ 25%, ಹಾಗೂ ಪಂಚಮಸಾಲಿಗಳು ಶೇ 5.55% ರಷ್ಟು ಎರಡೂ ಕೆಲಸಗಳಲ್ಲಿ ದುಡಿಯುತ್ತಿರುವುದು ಕಂಡುಬರುತ್ತದೆ.

ಈ ಮಹಿಳೆಯರು ಹೊಲದಲ್ಲಿ ಮಾಡುವ ಕೆಲಸಗಳೆಂದರೇ, ಒಣ ಭೂಮಿಯಲ್ಲಿ ಕಾಸಗಿ ಆಯುವುದು, ಬೀಜ ಊರುವುದು, ಕಳೆ ತಗೆಯುವುದು, ಗೊಬ್ಬರ ಹಾಕುವುದು, ತೆನೆ ಕೊಯ್ಯುವುದು, ರಾಶಿ ಮಾಡುವುದು. ಇತ್ತಿಚಿಗೆ ಈ ಮಹಿಳೆಯರು ವಿದೇಶಗಳಿಗೆ ಹೋಗುವ ಕ್ರಾಸ್ ಬ್ರಿಡ್ ತಳಿಗಳ ಬೆಳೆಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಹೋಗಿ ಗಂಡು ಮಗ್ಗಿ ಅರಿದುಕೊಂದು ಅವುಗಳನ್ನು ಕತ್ತರಿಸಿ ಅದರ ಒಳಗಡೆ ಇರುವ ಮೋಪನ್ನು ತೆಗೆದು ಬಿಸಿಲಿಗೆ ಒಣಗಿಸಿ ಅದರಿಂದ ಬರುವ ಪೌಡರನ್ನು ಮತ್ತೆ ಹಿಂದಿನ ದಿನ ಸುಲಿದ ಹೆಣ್ಣು ಮಗ್ಗಿಗೆ ಹಚ್ಚುತ್ತಾರೆ. ಈ ರೀತಿಯಾಗಿ ಹತ್ತಿ, ಟಮೋಟ, ಚಿಲ್ಲಿ, ಕಲ್ಲಂಗಡಿ, ಸೊರೆಕಾಯಿ, ಸೌತೆಕಾಯಿ, ಬೆಂಡೆ, ಆಗಲಕಾಯಿ ಈ ತಳಿಗಳನ್ನೇ ಅತೀ ಹೆಚ್ಚಾಗಿ ಕ್ರಾಸಿಂಗ್ ಮಾಡುತ್ತಾರೆ.

ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು

ಪ್ರಾಚೀನ ಕಾಲದಿಂದಲೂ ಇವತ್ತಿನ ಕಾಲದವರೆಗೂ ಮಹಿಳೆ ಅನೇಕ ಸಮಸ್ಯೆಗಳ ಸುಳಿಗೆ ಸಿಕ್ಕು ಬಳಲುತ್ತಲೆ ಬಂದಿದ್ದಾಳೆ. ಕೃಷಿಯನ್ನು ಕಂಡುಹಿಡಿದ ಈಕೆ ಕೃಷಿಯ ರಂಗದಲ್ಲಿಯೇ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಪುರುಷ ಪ್ರಧಾನ ವ್ಯವಸ್ಥೆ, ಬಂಡವಾಳಶಾಹಿ ಆಧುನಿಕ ತಂತ್ರಜ್ಞಾನ ಮೊದಲಾದವುಗಳು ತಂದೊದಗಿಸುತ್ತಿವೆ. ಅಂತಹ ಕೆಲವು ಸಮಸ್ಯೆ ಮತ್ತು ಸವಾಲುಗಳನ್ನು ಈ ಮುಂದಿನಂತೆ ಬರೆಯಲಾಗಿದೆ,

  1. ಕೆಲಸಕ್ಕೆ ತಕ್ಕನಾದ ಕೂಲಿಯನ್ನು ಕೊಡದೇ ಇರುವುದು ಕೂಲಿ ಕಾರ್ಮಿಕರ ಸಮಸ್ಯೆಯಾದರೇ, ಕೂಲಿಯು ಇಲ್ಲದೇ ಕೇವಲ ಊಟವೇ ಕೂಲಿ ಎನ್ನುವಂತೆ ಸ್ವಂತ ಹೊಲದಲ್ಲಿ ದುಡಿಯುವವರ ಸಮಸ್ಯೆಯಾಗಿದೆ.
  2. ವರ್ಷದಲ್ಲಿ ಕೇವಲ 5 ರಿಂದ 6 ತಿಂಗಳು ಮಾತ್ರ ಕೂಲಿ ಸಿಗುವುದರಿಂದ ಉಳಿದ ಸಮಯದಲ್ಲಿ ಕೂಲಿಗಾಗಿ ಪರೆದಾಡುವ ಸವಾಲು ಎದುರಾಗಿದೆ.
  3. ದುಡಿಸಿಕೊಂಡವರು ಸರಿಯಾದ ವೇಳೆಗೆ ಹಣ ಕೊಡದೇ ಇರುವುದು. ದುಡಿದವರು ಗದರಿಸಿ ಕೂಲಿಯನ್ನು ಕೇಳುವಂತಿಲ್ಲ ಹಾಗೇ ಕೇಳಿದರೆ ಮರುದಿನವೇ ಅವರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವುದಿಲ್ಲ.
  4. ಪ್ರಬಲ ಜಾತಿಯ ಮತ್ತು ಅಧಿಕ ಭೂಮಿಯುಳ್ಳವರು ಕೂಲಿಗಾಗಿ ಬೇರೆ ಬೇರೆ ಗ್ರಾಮಗಳಿಗೆ ಕೂಲಿ ಹೋಗಲು ಬಿಡದೇ ದುಡಿಮೆಗಾರರನ್ನು ಕೆರದುಕೊಂಡು ಹೋಗಲು ಬರುವವರನ್ನು ಗದರಿಸಿ ಓಡಿಸುತ್ತಿರುವುದು.
  5. ಒಂದು ವೇಳೆ ಬೇರೆ ಊರಿಗೆ ಕೆಲಸಕ್ಕೆ ಹೋದರೆ ಆ ಮಹಿಳೆಯರ ಬಗ್ಗೆ ಊರಿನಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಹಾಕಿ ಅವರ ಮಾನಸಿಕತೆಯನ್ನು ಕೆಡಿಸುವುದು.
  6. ಕಡಿಮೆ ಕೂಲಿ ನೀಡಿ ಹೆಚ್ಚು ಸಮಯ ದುಡಿಸಿಕೊಳ್ಳುವುದು.
  7. ಆರೋಗ್ಯದಲ್ಲಿ ವ್ಯತ್ಯಾಸವಾಗಿ ಅನಾರೋಗ್ಯದಿಂದ ಬಳಲುವುದು ಮತ್ತು ವಿಷಜಂತುಗಳ ಕಾಟ.
  8. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿರುವ ಸಮುದಾಯಗಳಿಂದ ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವುದು.

ಫಲಿತಗಳು (Findings)

  1. ಪ್ರಸ್ತುತ ಬೆದವಟ್ಟಿ ಗ್ರಾಮದಲ್ಲಿ ಒಟ್ಟು ದುಡಿಯುವ ಮಹಿಳೆಯ (ಶೇ.100) ಪ್ರಮಾಣದಲ್ಲಿ ಕೇವಲ ಸ್ವಂತ ಹೊಲದಲ್ಲಿ ದುಡಿಯುವವರ ಪ್ರಮಾಣ ಶೇ 49.64% ರಷ್ಟಿದೆ. ಕೇವಲ ಕೃಷಿ ಕೂಲಿ ಮಾಡುವವರ ಪ್ರಮಾಣ ಶೇ 28.05% ರಷ್ಟಿದೆ ಹಾಗೂ ಎರಡು ಕೆಲಸ ಮಾಡುವವರ ಪ್ರಮಾಣ ಶೇ 22.30% ರಷ್ಟಿದೆ.
  2. ಪ್ರಸ್ತುತ ಬೆದವಟ್ಟಿ ಗ್ರಾಮದ ಒಟ್ಟು ದುಡಿಮೆಗಾರರಲ್ಲಿ ಸ್ವಂತ ಹೊಲದಲ್ಲಿಯೇ ಅತೀ ಹೆಚ್ಚಿನ (ಶೇಕಡ 39.13% ರಷ್ಟು) ಪ್ರಮಾಣದಲ್ಲಿ ದುಡಿಯುವವರ ಸಂಖ್ಯೆ ಗಾಣಿಗ ಸಮುದಾಯದಾಗಿದೆ. ನಂತರದಲ್ಲಿ ವೀರಶೈವ ಲಿಂಗಾಯತರು ಶೇ 17.39%, ಮುಸ್ಲಿಂರು ಶೇ 14.49%, ಪಂಚಮಸಾಲಿಗಳು ಶೇ 11.59%, ವಿಶ್ವಕರ್ಮರು ಶೇ 5.79%, ಹಡಪದ ಮತ್ತು ಕುರುಬರು ಶೇ 4.34%, ಹೂವಾಡಿಗರು/ಜೀರ ಶೇ 2.89%, ಕ್ರಮವಾಗಿ ಬರುತ್ತಾರೆ. ಕೊರವರು, ಮಾದಿಗರು, ವಾಲ್ಮೀಕಿ ಮತ್ತು ಉಪ್ಪಾರರು ಭೂಮಿಯನ್ನು ಹೊಂದದೆ ಇರುವ ಕಾರಣಕ್ಕೆ ಇವರ ಪ್ರಮಾಣ 0% ಆಗಿದೆ.
  3. ಕೇವಲ ಕೂಲಿ ಕೆಲಸ ಮಾಡುವವರಲ್ಲಿ ಅತೀ ಹೆಚ್ಚಿನ (ಶೇಕಡ 28.20% ರಷ್ಟು) ಪ್ರಮಾಣದಲ್ಲಿ ದುಡಿಯುವವರ ಸಂಖ್ಯೆ ಮಾದಿಗ ಸಮುದಾಯದಾಗಿದೆ. ನಂತರದಲ್ಲಿ ಕೊರವರು ಶೇ 25.64%, ಪಂಚಮಸಾಲಿಗಳು ಶೇ 23.07%, ಉಪ್ಪಾರ ಮತ್ತು ಕುರುಬರು ಶೇ 7.69%, ಗಾಣಿಗರು ಶೇ 5.12%, ಹೂವಾಡಿಗರು/ಜೀರ ಶೇ. 2.56% ಕ್ರಮವಾಗಿ ಬರುತ್ತಾರೆ. ವಾಲ್ಮೀಕಿ, ಹಡಪದ, ವಿಶ್ವಕರ್ಮ, ಮುಸ್ಲಿಂ ಮತ್ತು ವೀರಶೈವ ಲಿಂಗಾಯತರು ಕೂಲಿ ಕೆಲಸಕ್ಕೆ ಹೋಗದ ಕಾರಣ ಇವರ ಪ್ರಮಾಣ 0% ಆಗಿದೆ.
  4. ಸ್ವಂತ ಹೊಲ ಮತ್ತು ಕೂಲಿ ಕೆಲಸ ಮಾಡುವವರಲ್ಲಿ ಅತೀ ಹೆಚ್ಚಿನ (ಶೇಕಡ 25.80% ರಷ್ಟು) ಪ್ರಮಾಣದಲ್ಲಿ ದುಡಿಯುವವರ ಸಂಖ್ಯೆ ಗಾಣಿಗರು ಮತ್ತು ಮುಸ್ಲಿಂ ಸಮುದಾಯದಾಗಿದೆ. ನಂತರದಲ್ಲಿ ಮಾದಿಗರು ಶೇ 19.35%, ವೀರಶೈವ ಲಿಂಗಾಯತರು ಶೇ 12.90%, ಕುರುಬರು ಶೇ 6.45%, ಕೊರವ, ವಾಲ್ಮೀಕಿ ಮತ್ತು ಪಂಚಮಸಾಲಿಗಳು ಶೇ 3.22%, ಕ್ರಮವಾಗಿ ಬರುತ್ತಾರೆ. ಉಪ್ಪಾರರು ಭೂಮಿ ಇಲ್ಲದಕ್ಕಾಗಿ ಹಡಪದ, ವಿಶ್ವಕರ್ಮ, ಹೂವಾಡಿಗರು/ಜೀರರು ಕೇವಲ ಸ್ವಂತ ಹೊಲದಲ್ಲಿ ದುಡಿಯುತ್ತಿರುವ ಕಾರಣಕ್ಕಾಗಿ ಇಲ್ಲಿ ಇವರ ಪ್ರಮಾಣ 0% ಆಗಿದೆ.
  5. ಪರಿಶಿಷ್ಟ ಜಾತಿಯಲ್ಲಿ ಬರುವ ಕೊರವರು, ಮಾದಿಗರು, ಪರಿಶಿಷ್ಟ ಪಂಗಡದಲ್ಲಿ ಬರುವ ವಾಲ್ಮೀಕಿ ಹಾಗೂ ಪ್ರವರ್ಗ – 1 ರಲ್ಲಿ ಬರುವ ಉಪ್ಪಾರ ಸಮುದಾಯದ ಮಹಿಳೆಯರಿಗೆ ಸ್ವಂತ ಹೊಲ ಇರದ ಕಾರಣ ಸ್ವಂತ ಹೊಲದಲ್ಲಿ ದುಡಿಯುವ ಪ್ರಮಾಣ 0% ಆಗಿದೆ. ಒಟ್ಟು ದುಡಿಯುವ ಮಹಿಳೆಯರ ಪೈಕಿ ಕುರುಬರು ಶೇ 37.5%, ಹಡಪದ ಹಾಗೂ ವಿಶ್ವಕರ್ಮರು ಶೇ 100%, ಹೂವಾಡಿಗರು/ಜೀರ ಶೇ 66.66%, ಗಾಣಿಗರು ಶೇ 72.97%, ಮುಸ್ಲಿಂರು ಶೇ 55.55%, ವೀರಶೈವ ಲಿಂಗಾಯತರು ಶೇ 75%, ಪಂಚಮಸಾಲಿಗರು 44.44% ರಷ್ಟು ಸ್ವಂತ ಹೊಲದಲ್ಲಿ ದುಡಿಯುತ್ತಿರುವುದು ಕಂಡುಬರುತ್ತದೆ.
  6. ಸ್ವಂತ ಹೊಲ ಇರದ ಪರಿಶಿಷ್ಟ ಜಾತಿಯಲ್ಲಿ ಬರುವ ಕೊರವರು ಶೇ 90.90%ರಷ್ಟು, ಮಾದಿಗರು ಶೇ 64.70 ರಷ್ಟು%, ಹಾಗೂ ಪ್ರವರ್ಗ – 1 ರಲ್ಲಿ ಬರುವ ಉಪ್ಪಾರರು 100%ರಷ್ಟು, ಪರಿಶಿಷ್ಟ ಪಂಗಡದಲ್ಲಿ ಬರುವ ವಾಲ್ಮೀಕಿ ಮಹಿಳೆಯು ಎರಡು ಕೆಲಸವನ್ನು ಮಾಡುವುದರಿಂದ  ಕೂಲಿ ಮಾಡುವ ಪ್ರಮಾಣ 0% ಆಗಿದೆ. ಪ್ರವರ್ಗ - 2 ಎ ದಲ್ಲಿ ಬರುವ ಹಡಪದ ಹಾಗೂ ವಿಶ್ವಕರ್ಮರು ಪ್ರವರ್ಗ - 2 ಬಿ ಯಲ್ಲಿ ಬರುವ ಮುಸ್ಲಿಂರು, ಪ್ರವರ್ಗ – 3 ಬಿ ಯಲ್ಲಿ ಬರುವ ವೀರಶೈವ ಲಿಂಗಾಯತರು ಕೇವಲ ಸ್ವಂತ ಹೊಲಗಳಲ್ಲಿ ಮಾತ್ರ ದುಡಿಯುವುದರಿಂದ ಕೂಲಿ ಮಾಡುವ ಪ್ರಮಾಣ 0% ಆಗಿದೆ. ಪ್ರವರ್ಗ - 2 ಎ ದಲ್ಲಿ ಬರುವ ಕುರುಬರು ಶೇ 37.5%, ಹೂವಾಡಿಗರು/ಜೀರ ಶೇ 33.33%, ಗಾಣಿಗರು ಶೇ 5.40%, ಪ್ರವರ್ಗ – 3 ಬಿ ಯಲ್ಲಿ ಬರುವ ಪಂಚಮಸಾಲಿ 50% ರಷ್ಟು ಕೇವಲ ಕೂಲಿ ದುಡಿಯುತ್ತಿರುವುದು ಕಂಡುಬರುತ್ತದೆ.
  7. ಸಮುದಾಯದ ಒಟ್ಟು ದುಡಿಯುವವರ ಪೈಕಿ ಪರಿಶಿಷ್ಟ ಜಾತಿಯಲ್ಲಿ ಬರುವ ಕೊರವರು ಶೇ 9.09% ರಷ್ಟು, ಮಾದಿಗರು ಶೇ 35.29% ರಷ್ಟು, ಪರಿಶಿಷ್ಟ ಪಂಗಡದಲ್ಲಿ ಬರುವ ವಾಲ್ಮೀಕಿಯರಲ್ಲಿ 100% ಆಗಿದೆ. ಪ್ರವರ್ಗ – 1 ರಲ್ಲಿ ಬರುವ ಉಪ್ಪಾರರು ಭೂಮಿ ಇಲ್ಲದ ಕಾರಣಕ್ಕಾಗಿ ಕೇವಲ ಕೂಲಿಯನ್ನು ಅವಲಂಬಿಸುವುದರಿಂದ ಇವರ ಪ್ರಮಾಣ 0% ಆಗಿದೆ.  ಪ್ರವರ್ಗ - 2 ಎ ದಲ್ಲಿ ಬರುವ ಹಡಪದ ಹಾಗೂ ವಿಶ್ವಕರ್ಮ ಹೂವಾಡಿಗರು/ಜೀರರ ಮಹಿಳೆಯರು ಕೇವಲ ಸ್ವಂತ ಹೊಲಗಳಲ್ಲಿ ದುಡಿಯುತ್ತಿರುವುದರಿಂದ ಇವರ ಪ್ರಮಾಣವೂ ಕೂಡ 0% ಆಗಿದೆ. ಪ್ರವರ್ಗ - 2 ಎ ದಲ್ಲಿ ಬರುವ ಕುರುಬರು ಶೇ 25%, ಪ್ರವರ್ಗ - 2 ಬಿ ಯಲ್ಲಿ ಬರುವ ಮುಸ್ಲಿಂರು ಶೇ 44.44%, ಪ್ರವರ್ಗ – 3 ಬಿ ಯಲ್ಲಿ ಬರುವ ವೀರಶೈವ ಲಿಂಗಾಯತರು ಶೇ 25%, ಹಾಗೂ ಪಂಚಮಸಾಲಿಗಳು ಶೇ 5.55% ರಷ್ಟು ಎರಡೂ ಕೆಲಸಗಳಲ್ಲಿ ದುಡಿಯುತ್ತಿರುವುದು ಕಂಡುಬರುತ್ತದೆ.
  8. ಈ ಗ್ರಾಮದ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಹೆಚ್ಚು ಜಮಿನು ಹೊಂದಿರುವವರು ಮತ್ತು ಪ್ರಬಲ ಜಾತಿಗಳು, ಅವರಲ್ಲಿರುವ ಅನಕ್ಷರತೆ ಮತ್ತ ಕೌಶಲ್ಯ ರಹಿತತೆ ಮೊದಲಾದವುಗಳು ಕಾರಣವಾಗಿವೆ.

ಸಲಹೆಗಳು (Suggestions)

ಇಷ್ಟೇಲ್ಲ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿರುವ ಈ ಮಹಿಳೆಯರ ಬುದುಕು ಸ್ವಲ್ಪವಾದರೂ ನೆಮ್ಮದಿಯ ಜೀವನ ನಡೆಸಲು ಸಮಾಜ ಮತ್ತು ಸರ್ಕಾರಗಳು ಕೆಲವು ಅಂಶಗಳನ್ನು ಪರಿಗಣಿಸಬೇಕು. ಅದಕ್ಕಾಗಿ ಕೆಲವು ಸಲಹೆಗಳನ್ನು ಈ ಕೆಳಗಿನಂತೆ ಬರೆಯಲಾಗಿದೆ.

  • ಕೆಲಸಕ್ಕೆ ಬಂದ ಮಹಿಳೆಯರಿಗೆ ಅವರ ಕೆಲಸಕ್ಕೆ ತಕ್ಕಂತೆ ಕೂಲಿಯನ್ನು ಒಂದೇರಡು ದಿನಗಳಲ್ಲಿ ನೀಡಬೇಕು ಮತ್ತು ಸರಿಯಾದ ಸಮಯಕ್ಕೆ ಕಳುಹಿಸಬೇಕು. ಸ್ವಂತ ಹೊಲದಲ್ಲಿ ದುಡಿಯುವ ಮಹಿಳೆಗೂ ಕೂಡ ಬಂದ ಫಲದಲ್ಲಿ ಸಮನಾಗಿ ಹಂಚಿಕೊಳ್ಳಬೇಕು.
  • ವರ್ಷದ ಅರ್ಧ ಭಾಗವನ್ನು ಕೃಷಿಯ ಜೊತೆಗೆ ಇನ್ನರ್ಧ ಭಾಗವನ್ನು ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳುವುದು ಉತ್ತಮ. ಈ ಕುರಿತು ಸರ್ಕಾರವು ಅನೇಕ ಸಾಲ-ಸೌಲಭ್ಯಗಳನ್ನು ತಳಮಟ್ಟದ ಹಂತದಲ್ಲಿ ತಲುಪುವಂತೆ ಕ್ರಮಜರುಗಿಸಬೇಕು.
  • ದುಡಿಯುವುದು ಅವರ ಹಕ್ಕು. ಅವರ ಬದುಕಿಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿರುವುದರಿಂದ ಪ್ರಬಲ ಜಾತಿಯ ಮತ್ತು ಅಧಿಕ ಭೂಮಿಯುಳ್ಳವರು ಕೂಲಿಗಾಗಿ ಬೇರೆ ಬೇರೆ ಗ್ರಾಮಗಳಿಗೆ ಹೋಗುವ ಮಹಿಳೆಯರು ಹೋಗಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೇ ತಾವುಗಳೆ ಅವರಿಗೆ ಅಗತ್ಯವಿರುವ ಜೀವನಾಧಾರವನ್ನು ಕಲ್ಪಿಸಿಕೊಡಬೇಕು, ಇಲ್ಲವಾದರೇ ಸುಮ್ಮನೇ ಕುಳಿತುಕೊಳ್ಳಬೇಕು.
  • ದುಡಿಯುವ ಮಹಿಳೆಯರ ಬಗ್ಗೆ ಇಲ್ಲ ಸಲ್ಲದ ಆರೋಪಗಳ್ನು ಮಾಡಿ ಅವರ ಚಾರಿತ್ಯವನ್ನು ಕಳೆಗುಂದಿಸುವ ಕೆಲಸ ಮಾಡಕೂಡದು.
  • ಹಣದ ಆಸೆಯನ್ನು ತೊರೆದು ಕಾಯಿಲೆ ಬಂದ ತಕ್ಷಣವೇ ಸೂಕ್ತ ಚಿಕಿತ್ಸೆ ಪಡೆಯಬೇಕು.
  • ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿರುವ ಸಮುದಾಯಗಳು ಬೇರೆ ಸಮುದಾಯದವರನ್ನು ಸಮನಾಗಿ ಕಾಣಬೇಕು.

ಕಡೆನುಡಿ (Conclusion)

ದುಡಿಮೆಯ ಇನ್ನೊಂದು ರೂಪವೇ ಮಹಿಳೆ. ಅಂತಹ ಮಹಿಳೆಯರ ದುಡಿಮೆಯನ್ನು ಗಮನಕ್ಕೆ ತೆಗೆದುಕೊಳ್ಳದ ಮನಸ್ಸುಗಳು ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಅವಳು ಯಾವಾಗೂ ದುಡಿಯದೇ ಉಂಡವಳಲ್ಲ. ಗ್ರಾಮೀಣ ಸಮುದಾಯದಲ್ಲಿ ಒಬ್ಬ ಮಹಿಳೆ ಮನೆಯಿಂದ ಹೊರಗೆ ಹೋದರೆ ಬರಿ ಕೈಯಲ್ಲಿ ಬಂದ ಉದಾಹರಣೆಗಳೆ ಇಲ್ಲ. ಕಟ್ಟಿಗೆಯನ್ನೊ, ಕುಳ್ಳನೊ ಏನೊ ಒಂದು ವಸ್ತುವನ್ನು ತಂದೇತರುತ್ತಾಳೆ. ಹೀಗೆ ಮಹಿಳೆಯರು ಮೊದಲಿನಿಂದಲೂ ಒಂದಲ್ಲ ಒಂದು ದುಡಿಮೆಯಲ್ಲಿ ನಿರತರಾಗಿದ್ದಾರೆ. ಅವಳ ದುಡಿಮೆಯಿಂದ ಅವರ ವೈಯಕ್ತಿಕ ಅಗತ್ಯಕ್ಕೆ ಆದಾಯ ದೊರೆಯುತ್ತದೆಯೊ ಇಲ್ಲವೊ, ಆದರೆ ಕುಟುಂಬದ ಒಳಿತಿಗೆ ಅವರ ದುಡಿಮೆ ಅನಿವಾರ್ಯವಾಗಿದೆ. ಹೀಗೆ ಕುಟುಂಬದ ಅಬಿವೃದ್ಧಿಗೆ, ಕುಟುಂಬದ ನಿರ್ವಹಣೆಗೆ ತೊಡಗಿಕೊಳ್ಳುವ ಜೀವನಾಧಾರದ ದುಡಿಮೆಯಲ್ಲಿ ಆಕೆ ಅನೇಕ ಏಳುಬೀಳುಗಳನ್ನು ಎದುರಿಸುತ್ತಾಳೆ. ಅಂತಹ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೀ ಸಮಾಜ ಮತ್ತು ಸರ್ಕಾರಗಳು ಮುಂದೆ ನಿಂತು ಪರಿಹರಿಸಿದರೆ ಆ ಮಹಿಳೆಯರ ಬದುಕು ಯಾವಾಗಲೂ ಲವಲವಿಕೆಯಿಂದ ಕೂಡಿರುತ್ತದೆ ಎಂದು ಹೇಳಬಹುದಾಗಿದೆ.

ತಿಳುವಳಿಕೆದಾರರ ಪಟ್ಟಿ

ಕ್ರ.ಸಂ

ಹೆಸರು

ವಯಸ್ಸು

ವೃತ್ತಿ

ಸಮುದಾಯ

01

ಫಕೀರವ್ವ ಹರಿಜನ

56

ಕೃಷಿ ಕೂಲಿ

ಮಾದಿಗ

02

ರೇಣುಕವ್ವ ಹರಿಜನ

43

ಕೃಷಿ ಕೂಲಿ

ಮಾದಿಗ

03

ಹುಲಿಗೆವ್ವ ಭಜಂತ್ರಿ

53

ಬುಟ್ಟಿ ತಯಾರಿಕೆ ಮತ್ತು ಕೃಷಿ ಕೂಲಿ

ಕೊರವ

04

ಮಂಜವ್ವ ಭಜಂತ್ರಿ

42

ಕೃಷಿ ಕೂಲಿ

ಕೊರವ

05

ಭೀಮವ್ವ ತಳವಾರ

50

ಕೃಷಿ ಕೂಲಿ

ವಾಲ್ಮೀಕಿ

06

ರತ್ನವ್ವ ಅಳವಂಡಿ

48

ಕೃಷಿ ಕೂಲಿ

ಉಪ್ಪಾರ

07

ವಿಜಯಲಕ್ಷ್ಮೀ ರಾಟಿ

34

ಕೃಷಿ ಕೂಲಿ

ಉಪ್ಪಾರ

08

ಪಾರವ್ವ ರ್ಯಾವಣಕಿ

28

ಕೃಷಿ ಕೂಲಿ

ಕುರುಬ

09

ರೇಣವ್ವ ಬಂಗಾರಿ

42

ಕೃಷಿ ಕೂಲಿ

ಕುರುಬ

10

ದ್ರಾಕ್ಷಾಣೆವ್ವ ಹಡಪದ

51

ಸ್ವಂತ ಜಮೀನಿನಲ್ಲಿ ಕೆಲಸ

ಹಡಪದ

11

ಪದ್ದವ್ವ ಬಡಿಗೇರ

45

ಸ್ವಂತ ಜಮೀನಿನಲ್ಲಿ ಕೆಲಸ

ವಿಶ್ವಕರ್ಮ

12

ಪ್ರೇಮವ್ವ ಬಡಿಗೇರ

52

ಸ್ವಂತ ಜಮೀನಿನಲ್ಲಿ ಕೆಲಸ

ವಿಶ್ವಕರ್ಮ

13

ಪಾರವ್ವ ಬುಗಿಟಿಗಾರ್

62

ಕೃಷಿ ಕೂಲಿ

ಹೂವಾಡಿಗರು/ಜೀರ

14

ಸುಲೊಚನೆವ್ವ ಚಿಲ್ಕಮುಕ್ಕಿ

46

ಸ್ವಂತ ಜಮೀನಿನಲ್ಲಿ ಕೆಲಸ

ಗಾಣಿಗ

15

ದ್ರಾಕ್ಷಾಣೆವ್ವ ಚಿಲ್ಕಮುಕ್ಕಿ

47

ಕೃಷಿ ಕೂಲಿ

ಗಾಣಿಗ

16

ಚೆಂದವ್ವ ರಾಟಿ

48

ಕೃಷಿ ಕೂಲಿ

ಮುಸ್ಲಿಂ

17

ಫಾತಿಮಾ ಮುಜಾವಾರ

39

ಸ್ವಂತ ಜಮೀನಿನಲ್ಲಿ ಕೆಲಸ

ಮುಸ್ಲಿಂ

18

ಸುರೇಖ ಬನ್ನಿಮಠ

36

ಸ್ವಂತ ಜಮೀನಿನಲ್ಲಿ ಕೆಲಸ

ವೀರಶೈವ ಲಿಂಗಾಯತ

19

ಲಲಿತವ್ವ ಸುಂಕದ

45

ಕೃಷಿ ಕೂಲಿ

ಪಂಚಮಸಾಲಿ

ಪರಾಮರ್ಶನ ಸಾಹಿತ್ಯ (References)

  1. ಚಂದ್ರಶೇಖರ್ ಟಿ ಆರ್, 2010, ಲಿಂಗಸಂಬಂಧಗಳು ಮತ್ತು ಅಭಿವೃದ್ಧಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
  2. ಚಂದ್ರಶೇಖರ್ ಟಿ ಆರ್, 2016, ಮಹಿಳಾ ಅಧ್ಯಯನ ಪರಿಭಾಷೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.
  3. ಶೈಲಜ ಹಿರೇಮಠ (ಸಂ), 2011, ಮಹಿಳಾ ಅಧ್ಯಯನ ಸಂಪುಟ-12, ಸಂಚಿಕೆ-1, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
  4. ಶೈಲಜ ಹಿರೇಮಠ (ಸಂ), 2012, ಮಹಿಳಾ ಅಧ್ಯಯನ ಸಂಪುಟ-12, ಸಂಚಿಕೆ-2, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
  5. https://www.census2011.co.in/data/village/601325-bedwatti-karnataka.html
  6. 2011 Census of India : Primary Census Abstract


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal