Tumbe Group of International Journals

Full Text


Nolambar Art and Architecture: A Study of Heritage Monuments

Malleshappa T S1

1Asst Prof of History

Government First Grade College, Tumkur – 572102, Karnataka(India)

malleshappats1969@gmail.com

Abstract

In this article, the Nolamba Pallavas have earned their place in the history of South India. After the Satavahanas came to prominence in the 2nd century AD with Vatapi as their capital. By the 4th century AD the Chalukyas had besieged Vatapi from the Ajanta region (Agamisi) and the Pallavas ruled in splendor with Kanchia as their capital in Tamil Nadu. (S. Parashivamurthy-Pallava-Nolamba Pre-History, Nolamba Itihasha Darshan Bangalore-1976, pp. 9-10) Pallava Simhavishnu invaded parts of Karnataka and laid the foundation for the Nolamba Pallava branch in the Hemavati parts. From the 8th century to the 18th century AD, the Pallavas Mularaja of Kanchi fought with the contemporary Banas, Vaidumbas, Pandyas, Kadambas, Rashtrakutas, Chalukyas (Badami, Kalyani) with the Ganges - increasing matrimonial ties, the Cholas were battered by the great victories of the Kalyani Chalukyas, the Hoysalas and suffered setbacks. Lambavadi subjugated 32000 parts of Samskhatika. He has made outstanding contributions to the sector. The Nolamba kings were the emperors of the great empire. (Bada Village Inscription) Nolamba kings were vassals as per occasion in political chess during Vijayanagar period as Nadagouda, Nadaprabhu, Mahanada lords of Madhugiri, Bijavara - Gubbi Hosahalli, Nolamba town of Chitradurga district, Uchchandidurga, Baraguru Shivadevalaya, Aimangal, Nonavinakere, Garudanagari, Kampili Autonomous State, Cha. Narayana Durga, Nidgallu , Dharmapuri, Avani, ruled and served as subjects. (Royal families of Nolamba dynasty Dr|| D.N Yogeeshwarappa, Sri.Gurusiddharameswara Sahitya Sampada, Tumkur-2021). This article is based on secondary data.

Keywords: Nolambar, Art and Architecture, Heritage Monuments.

ನೊಳಂಬರ ಕಲೆ ಮತ್ತು ವಾಸ್ತುಶಿಲ್ಪ: ಐತಿಹಾಸಿಕ ಪಕ್ಷಿನೋಟ

(ಪರಂಪರೆ ನೊಳಂಬ ಸ್ಮಾರಕಗಳ ಒಂದು ಅಧ್ಯಯನ)

ಮಲ್ಲೇಶಪ್ಪ ಟಿ ಎಸ್1

1ಇತಿಹಾಸದ ಸಹಾಯಕ ಪ್ರಾಧ್ಯಾಪಕರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು - 572102, ಕರ್ನಾಟಕ (ಭಾರತ)

malleshappats1969@gmail.com

ಅಮೂರ್ತ

ಈ ಲೇಖನವು ದಕ್ಷಿಣ ಭಾರತದ ಚರಿತ್ರೆಯಲ್ಲಿ ನೊಳಂಬ ಪಲ್ಲವರು ತಮ್ಮದೆ ಸ್ಥಾನಮಾನ ಪಡೆದಿದ್ದಾರೆ. ಶಾತವಾಹನರ ನಂತರ ಪ್ರವರ್ದಮಾನಕ್ಕೆ ಬಂದರು ಕ್ರಿ.ಶ 2ನೇ ಶತಮಾನದಲ್ಲಿ ವಾತಾಪಿಯನ್ನು ರಾಜಧಾನಿಯಾಗಿ ಹೊಂದಿದ್ದರು. ಕ್ರಿ.ಶ 4ನೇ ಶತಮಾನದ ವೇಳೆಗೆ ಚಾಲುಕ್ಯರು ಅಜಂತಾ ಭಾಗದಿಂದ (ಆಗಮಿಸಿ) ವಾತಾಪಿಗೆ ಮುತ್ತಿಗೆ ಹಾಕಲಾಗಿ ಪಲ್ಲವರು ತಮಿಳುನಾಡಿನ ಕಂಚಿಯನ್ನ ಕೇಂದ್ರಸ್ಥಾನವಾಗಿಸಿಕೊಂಡು ವೈಭವದಿಂದ ಆಡಳಿತ ನಡೆಸಿದರು. (ಎಸ್. ಪರಶಿವಮೂರ್ತಿ-ಪಲ್ಲವ-ನೊಳಂಬರ ಪೂರ್ವ ಇತಿಹಾಸ, ನೊಳಂಬ ಇತಿಹಾಸ ದರ್ಶನ ಬೆಂಗಳೂರು-1976, ಪುಟ 9-10) ಪಲ್ಲವರ ಸಿಂಹವಿಷ್ಣು ಕರ್ನಾಟಕದ ಭಾಗಗಳನ್ನು ಆಕ್ರಮಿಸಿ ಹೇಮಾವತಿ ಭಾಗಗಳಲ್ಲಿ ನೊಳಂಬ ಪಲ್ಲವ ಶಾಖೆಗೆ ಮೂಲ ಅಸ್ಥಿಭಾರ ಹಾಕಿದನು. ಕಂಚಿಯ ಪಲ್ಲವರ ಮೂಲರಾಜ ವಂಶಸ್ಥರಾಗಿದ್ದು ಕ್ರಿ.ಶ 8ನೇ ಶತಮಾನದಿಂದ 18ನೇ ಶತಮಾನದವರೆವಿಗೂ ಸಮಕಾಲೀನ ಬಾಣರು, ವೈದುಂಬರು, ಪಾಂಡ್ಯರು, ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು (ಬಾದಮಿ, ಕಲ್ಯಾಣಿ) ಗಂಗರೊಂದಿಗೆ ಹೋರಾಟ - ವೈವಾಹಿಕ ಬಾಂದವ್ಯ ವೃದ್ಧಿಸಿಕೊಂಡು, ಚೋಳರು ಕಲ್ಯಾಣಿ ಚಾಲುಕ್ಯರು, ಹೊಯ್ಸಳರ ದಿಗ್ವಿಜಯಗಳಿಂದ ಜರ್ಜರಿತರಾಗಿ ಹಿನ್ನಡೆ ಅನುಭವಿಸಿದರಾದರೂ ನೊಳಂಬವಾಡಿ 32000 ಭಾಗವನ್ನು ತನ್ನ ಅಧೀನಕ್ಕೊಳಪಡಿಸಿಕೊಂಡು ಸಾಂಸ್ಕೃತಿಕ ವಲಯಕ್ಕೆ ವಿಶಿಷ್ಠ ಕೊಡುಗೆಗಳನ್ನು ನೀಡಿದ್ದಾರೆ. ನೊಳಂಬ ಅರಸರು ಮಹಾಸಾಮ್ರಾಜ್ಯದ ಚಕ್ರವರ್ತಿಗಳಾಗಿದ್ದರು. (ಬಾಡ ಗ್ರಾಮದ ಶಾಸನ) ನೊಳಂಬ ರಾಜರುಗಳು ರಾಜಕೀಯ ಚದುರಂಗಾಟದಲ್ಲಿ ಸಂದರ್ಭಕ್ಕನುಸಾರವಾಗಿ ಸಾಮಂತರು ವಿಜಯನಗರ ಕಾಲದಲ್ಲಿ ನಾಡಗೌಡ, ನಾಡಪ್ರಭು, ಮಹಾನಾಡ ಪ್ರಭುಗಳಾಗಿ ಮಧುಗಿರಿ, ಬಿಜ್ಜಾವರ - ಗುಬ್ಬಿ ಹೊಸಹಳ್ಳಿ, ಚಿತ್ರದುರ್ಗ ಜಿಲ್ಲೆಯ ನೊಳಂಬ ಪಟ್ಟಣ, ಉಚ್ಚಂಗಿದುರ್ಗ, ಬಾರಗೂರು ಶಿವದೇವಾಲಯ, ಐಮಂಗಲ, ನೊಣವಿನಕೆರೆ, ಗರುಡನಗಿರಿ, ಕಂಪಿಲಿ ಸ್ವಾಯತ್ತ ರಾಜ್ಯ, ಚನ್ನರಾಯನ ದುರ್ಗ, ನಿಡಗಲ್ಲು, ಧರ್ಮಪುರಿ, ಆವನಿ, ಮೊದಲಾದ ಭಾಗಗಳಲ್ಲಿ ಆಳ್ವಿಕೆ ನಡೆಸಿ ಪ್ರಜಾನುರಾಗಿಗಳಾಗಿ ಸೇವೆಗೈದಿದ್ದಾರೆ. (ನೊಳಂಬ ವಂಶದ ಅರಸು ಮನೆತನಗಳು ಡಾ|| ಡಿ.ಎನ್ ಯೋಗೀಶ್ವರಪ್ಪ, ಶ್ರೀ.ಗುರುಸಿದ್ಧರಾಮೇಶ್ವರ ಸಾಹಿತ್ಯ ಸಂಪದ, ತುಮಕೂರು-2021). ಈ ಲೇಖನವು ದ್ವಿತೀಯ ಅಂಕಿ ಅಂಶಗಳ ಆಧಾರದ ಮೇಲೆ ರಚನೆಗೊಂಡಿದೆ. 

ಕೀವರ್ಡ್‌ಗಳು: ನೊಳಂಬರ್, ಕಲೆ ಮತ್ತು ವಾಸ್ತುಶಿಲ್ಪ, ಪರಂಪರೆಯ ಸ್ಮಾರಕಗಳು.

ಪಿಠೀಕೆ

ನೊಳಂಬರು ಕನ್ನಡದ ಅರಸರಾಗಿದ್ದು 328 ಶಾಸನಗಳನ್ನು ಕನ್ನಡದಲ್ಲಿ ದಾಖಲಿಸಿದ್ದಾರೆ. ಸಂಸ್ಕೃತ ಭಾಷೆಗೆ ಬದಲಾಗಿ ಸ್ಥಳೀಯ ಕನ್ನಡ ಭಾಷೆಯಲ್ಲಿ ಶಾಸನಗಳಿದ್ದು, ಕನ್ನಡ ವಿಕಸನಕ್ಕೆ ಮತ್ತು ಹೆಂಜೇರು ಮಹಾ ಘಟಿಕ ಸ್ಥಾನದಲ್ಲಿಯೂ ಕನ್ನಡ ಮಾಧ್ಯಮದಲ್ಲಿ ವಿದ್ಯಾ ಭೋಧನೆಗೆ ಅಪಾರ ದತ್ತಿ ನೀಡಿ ಪ್ರೋತ್ಸಾಹಿಸಿದ್ದಾರೆ. 

ನೊಳಂಬ ರಾಜರು ಮಹಾದಂಡನಾಯಕರು ಪ್ರಚಂಡ ಸೇನಾಧಿಪತಿಗಳು ಸಮರ್ಥ ಆಡಳಿತಗಾರರಾಗಿ ಮಿಗಿಲಾಗಿ ತಮ್ಮ ಸ್ವಾಧೀನಕೊಳಪಟ್ಟ ನೊಳಂಬ ಸಾಸಿರ, ನೊಳಂಬಳಿಗೆ, ನೊಳಂಬವಾಡಿ ಪ್ರಾಂತ್ಯಗಳಲ್ಲಿ ಯಾವೊಂದು ರಾಜಮನೆತನದ ಶ್ರೇಷ್ಠ ಸಾಧಕನಿಗೂ ಕಡಿಮೆ ಇಲ್ಲದಂತೆ ಸಿರಿವಂತ ಸಂಸ್ಕೃತಿಯ ಪಾಲುದಾರರಾಗಿ ಕಾಣಿಕೆ ನೀಡಿದ್ದಾರೆ. ನೊಳಂಬರ ಸಾಧನೆಗಳಲ್ಲಿ ಅಚ್ಚಳಿಯದೆ ಪ್ರಭಾವಬೀರಿದ ಹಾಗೂ ಜೀವಂತ ನಿದರ್ಶನವಾಗಿ ಕಾಣಿಸಿಗುವ ಶ್ರೇಷ್ಠ ಸ್ಮಾರಕಗಳು ಅವರ ಕಲಾಭಿರುಚಿಯನ್ನು ಅಭಿವ್ಯಕ್ತ ಪಡಿಸುತ್ತವೆ.

ನೊಳಂಬ ವಾಸ್ತುಶಿಲ್ಪಿಗಳು ಸಮಕಾಲೀನ ವಾಸ್ತುಶಿಲ್ಪ ಶೈಲಿಗಳಿಂದ ಪ್ರಭಾವಿತರಾಗಿದ್ದರು. ವಿವಿಧ ವಾಸ್ತುಶಿಲ್ಪ ಶೈಲಿಗಳ ಉತ್ತಮ ಅಂಶಗಳನ್ನು ಅರ್ಥೈಸಿಕೊಂಡು ಅವುಗಳನ್ನು ಯಥಾವತ್ತಾಗಿ ಪಾಲಿಸುವ ಬದಲೂ ವಿನೂತನವಾದ ಹೊಸರೂಪರೇಷೆಗಳನ್ನು ನೊಳಂಬರು ನಿರೂಪಿಸುವ ಮೂಲಕ ತಮ್ಮದೆ ಪ್ರತ್ಯೇಕ ವಾಸ್ತುಶಿಲ್ಪ ಶೈಲಿಯಲ್ಲಿ ಸ್ಮಾರಕಗಳನ್ನು ನಿರ್ಮಿಸಿರುತ್ತಾರೆ. ನೊಳಂಬ ವಾಸ್ತುಶಿಲ್ಪಿಗಳು ಮುಂದಿನ ಹೊಯ್ಸಳ ಮತ್ತು ಕಲ್ಯಾಣಿ ಚಾಲುಕ್ಯ ಹಾಗೂ ಚೋಳರ ವಾಸ್ತುಶಿಲ್ಪ ಕಲಾ ಶೈಲಿಯ ಪರಾಕಾಷ್ಠೆತೆಗೆ ಮೂಲ ಪ್ರೇರಕರಾಗಿದ್ದಾರೆ.

ನೊಳಂಬ ವಾಸ್ತುಶಿಲ್ಪ ಶೈಲಿಯ ಪ್ರಧಾನ ಲಕ್ಷಣಗಳಂದರೆ.

ಅಧಿಷ್ಟಾನ: ನೊಳಂಬರು ನಿರ್ಮಿಸಿದ ದೇವಾಲಯಗಳ ತಳ ವಿನ್ಯಾಸ ಏಕರೂಪದಲ್ಲಿವೆ. ದೇವಾಲಯಗಳನ್ನು 2 ರಿಂದ 5 ಅಡಿ ಎತ್ತರವಾದ ಜಗತಿಯ ಮೇಲೆ ನಿರ್ಮಿಸಿದ್ದಾರೆ. ತಳವಿನ್ಯಾಸವನ್ನು ಗ್ರಾನೈಟ್ ಶಿಲೆಯಿಂದ ಕಟ್ಟಿದ್ದಾರೆ. ಅದಿಷ್ಠಾನದಲ್ಲಿ ವಿವಿಧ ಪ್ರಾಣಿಗಳು, ಪಕ್ಷಿಗಳ ಸಾಲುಶಿಲ್ಪಿಗಳಿಂದ ಕೂಡಿರುತ್ತವೆ. ಗರ್ಭಗುಹಗಳು ಚೌಕಟ್ಟಾಗಿರುತ್ತವೆ. ದೇವಾಲಯಕ್ಕೆ ಭವ್ಯತೆ ಕಲ್ಪಿಸಲು ಅದಿಷ್ಠಾನದ ಮೇಲೆ ದೇವಾಲಯ ನಿರ್ಮಿಸಿದ್ದಾರೆ.

ಗೋಡೆಗಳು ದೇವಾಲಯದ ಗೋಡೆಗಳಲ್ಲಿ ಮಧ್ಯೆ ಮಧ್ಯೆ ಸುಂದರ ಉದ್ಭವ ಮೂರ್ತಿ ಶಿಲ್ಪಿಗಳು, ಅರೆಗಂಬಗಳು, ಗೋಡೆಯ ಮೇಲ್ಬಾಗದಲ್ಲಿ ಗಣಗಳು, ಪ್ರಾಣಿಗಳು, ಲತಾ ಬಳ್ಳಿಗಳ ಶಿಲ್ಪಿಗಳನ್ನು ಹೊಂದಿವೆ. ಜಾಲಂದ್ರಗಳು, ದೇವಾಲಯದಲ್ಲಿ ಗಾಳಿ-ಬೆಳಕಿನಿಂದ ಕೂಡಿದ ಹಿತಕರ ವಾತಾವರಣಕ್ಕೆ ಸಹಕಾರಿಯಾಗಲೆಂದು ಅರ್ಧಮಂಟಪ, ನವರಂಗದ ಗೋಡೆಗಳಲ್ಲಿ ಕಲ್ಲಿನಲ್ಲಿಯೇ ಮಾಡಿದ್ದಾರೆ. ಜಾಲಾಂದ್ರಗಳಲ್ಲಿ ವಾಸ್ತುಶಿಲ್ಪ ಅಲಂಕರಣದ ಜಾಗವಾಗಿ ಅರೆಗಂಬಗಳು ಆ ಕಂಬದ ಬುಡಗಳಲ್ಲಿ ಶಂಖ, ಪದ್ಮನಿಧಿ, ಗಂಗಾ, ವಿಷ್ಣು, ಮಿಥುನ, ದುರ್ಗಾ, ಕಾರ್ತಿಕೇಯ, ಬ್ರಹ್ಮ, ಲತಾ ಬಳ್ಳಿಗಳು ಹಾಗೂ ಶಿಲ್ಪಿಗಳನ್ನು ಕೆತ್ತಲಾಗಿದೆ.

ಶಿಲ್ಪಿಗಳು ಆಕರ್ಷಕವಾಗಿವೆ. ಉಬ್ಬು ಶಿಲ್ಪಿಗಳ ಜೋತೆಗೆ ದುಂಡು ಹಾಗೂ ಬಿಡಿಶಿಲ್ಪಿಗಳ ನಿರೂಪಣೆ ನೊಳಂಬ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣವಾಗಿದೆ. ಮದ್ರಾಸ್ ಮ್ಯೂಸಿಯಂನ ಸಂಗ್ರಹದಲ್ಲಿವೆ. ಶಿಲ್ಪಿಗಳಲ್ಲಿ ಆಕರ್ಷಕ ಅಂಗಸಾಷ್ಠವ, ಮುಗ್ದ ಮುಖಭಾವ ನಿಲುವಿನ ರಮಣೀಯತೆ, ವಿಶಾಲ ಎದೆ, ಕಿರುನಗೆ ತುಂಬಿದ ತುಟಿ, ವಿವರಣೆ ಪೂರ್ಣ ಅಂಗಸಾಷ್ಠವ ವೃತ್ತಾಕಾರದ ಪ್ರಭಾವಳಿ ಮತ್ತು ಸೊಗಸಾದ ಆಕಾರಗಳಿಂದ ಕೂಡಿರುವ ಶಿಲ್ಪಿಗಳು ಅಂದಿನ ಸಾಂಸ್ಕೃತಿಕ ಉಚ್ಛ್ರಾಯತೆಯನ್ನು ಮೇಳೈಸಿವೆ. ಬಿಡಿಶಿಲ್ಪಿಗಳು, ಸಾಲುಶಿಲ್ಪ, ಉಬ್ಬುಶಿಲ್ಪಿಗಳು, ಉತ್ತಮ ನಿದರ್ಶನಗಳಾಗಿವೆ. ಪ್ರಮುಖ ಶಿಲ್ಪಗಳೆಂದರೆ ಪೆನುಗೊಂಡೆಯ ಉಮಾಮಹೇಶ್ವರ, ದಕ್ಷಿಣಾಮೂರ್ತಿ, ಶಿವಪಾರ್ವತಿ, ಸೂರ್ಯಶಿಲ್ಪ, ಕಾಶಿ, ರಾಮ ಸೀತೆ, ಅಷ್ಟದಿಕ್ಪಾಲಕರಿಂದ ಸುತ್ತುವರಿದ ಶಿವ, ವಿಷ್ಣು, ಭೈರವ, ಶಕ್ತಿ ದೇವತೆ ಸಪ್ತ ಮಾತೃಕೆಯರ ಶಿಲ್ಪಿಗಳನ್ನು ಕಾಣಬಹುದು.

ನಟರಾಜನ ಶಿಲ್ಪಿಗಳನ್ನು ಮೇಲ್ಚಾವಣಿ ಬಾಗಿಲುವಾಡ, ಸ್ತಂಭ, ದೇವಕೋಷ್ಠಕ ಜಾಲಾಂದ್ರಗಳ ಮೇಲೆ ಕೆತ್ತಿದ್ದಾರೆ. ಹದಿಮೂರು ನಟರಾಜ ಶಿಲ್ಪಿಗಳು ನೊಳಂಬವಾಡಿ ಭಾಗಗಳಲ್ಲಿ ಕಾಣಸಿಗುತ್ತಿವೆ. ಬಹು ಭುಜನಟಕಾರನ ಶಿಲ್ಪ ಉತ್ತರ ಮತ್ತು ದಕ್ಷಿಣ ಕಲಾ ಲಕ್ಷಣಗಳ ಸಂಯೋಜನೆಯಿಂದ ಕೂಡಿದೆ. ಪೃಷ್ಠ, ಸ್ವಸ್ತಿಕ, ವೀಣಾದಾರಿ, ಚತುರ್ ಭಂಗಿಯ ನೃತ್ಯಾನಟರಾಜ, ಅಷ್ಠಭುಜಭೂಷಿತ, ಲಲಿತಭಂಗಿ, ನಟರಾಜ ಶಿಲ್ಪಿಗಳು ನೊಳಂಬ ಶೈಲಿಯ ಪ್ರೌಢ ಶಿಲ್ಪಿಗಳಾಗಿವೆ.

ನಂದಿ ಶಿಲ್ಪಿಗಳು ವಿಗ್ರಹಗಳು ಸುಂದರವಾಗಿ ಮೂಡಿಬಂದಿವೆ, ನಂದಿಗೆ ಕಿವಿ ಕುಚ್ಚು, ಹಣೆಪಟ್ಟಿ, ಘಂಟಾಹಾರ, ಗೆಜ್ಜೆಯಹಾರಗಳು ನೈಜ ಕುಶಲೆಯನ್ನು ಅಭಿವ್ಯಕ್ತಗೊಳಿಸಿವೆ. ಚಿಕ್ಕ ನಂದಿ ಶಿಲ್ಪಿಗಳಿಂದ 6 ಅಡಿ ಎತ್ತರದ ನಂದಿಗಳನ್ನು ಕಾಣಬಹುದು. ಗರ್ಭಗೃಹದ ಮೇಲ್ಭಾಗದಲ್ಲಿ ವಿಮಾನ ಶಿಖರವನ್ನ ಕೆಲವು ದೇವಾಲಯಗಳಲ್ಲಿ ನಾಲ್ಕುಮುಖಗಳನ್ನು ಹೊಂದಿರುವಂತೆ ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ್ದಾರೆ.

ಕಂಬಗಳು ಶಿಲ್ಪಕೌಶಲ್ಯದ ಸಾಕ್ಷಿಗಳಾಗಿವೆ. ಕಂಭಗಳಲ್ಲಿ ಪೀಠ ಪ್ರಮುಖ ದಿಂಡು, ಬೋಧಿಗೆ ಮತ್ತು ಅಬಾಕಸ್ ಭಾಗಗಳಿಂದ ಕೂಡಿದ್ದು ಸಾಮಾನ್ಯವಾಗಿ 10 ಅಡಿ ಎತ್ತರ ಹೊಂದಿವೆ. ಕಂಬಗಳನ್ನು ಐದು ರೂಪಗಳಲ್ಲಿ ಕೆತ್ತಿಸಿದ್ದಾರೆ. ಕಂಬಗಳನ್ನು ಅರ್ಧಮಂಟಪ, ದ್ವಾರ ಮಂಟಪ, ನವರಂಗಗಳಲ್ಲಿ ಕಾಣಬಹುದು. ಕಂಬದ 3/4 ಭಾಗ ಚೌಕಾಕಾರವಾಗಿದ್ದು 1/4 ಭಾಗ ದುಂಡಾಗಿರುವ ಕಂಭ, ಕೆಲವು ಕಂಬಗಳು ಕಮಲದ ಅಲಂಕಾರಹೊಂದಿರುವ ಹಲವು ಮುಖಗಳು, ಅರೆಗೊಳಾಕಾರದ ಕೆತ್ತನೆ, ಮತ್ತೆ ಕೆಲವು ಕಂಬಗಳು ಚೌಕಟ್ಟಾದ ತಳಭಾಗ ಮತ್ತು ಕಂಬದ ಮಧ್ಯಭಾಗವು 8 ರಿಂದ 32 ಮುಖಗಳನ್ನು ಹೊಂದಿರುವ ಅಡ್ಡಪಟ್ಟಿಗಳು, ಮಣಿ ಮಾಲೆ, ನೃತ್ಯಗಾರರ ಶಿಲ್ಪಗಳನ್ನು ಕಾಣಬಹುದು.

ನಾಲ್ಕನೆ ವಿಧದ ಕಂಬಗಳು ಕಂಬದ ತಳಭಾಗ ಚೌಕಟ್ಟಾಗಿದ್ದು, ಉಳಿದ ಭಾಗ ದುಂಡಾಗಿರುತ್ತದೆ. ಮಣಿಹಾರ ಅಲಂಕಾರಗಳನ್ನು ಕಾಣಬಹುದು. ಐದನೇ ರೂಪದ ಕಂಬಗಳು ತಳಭಾಗ ಚೌಕಾಕಾರ ದಿಂಡು ಅಷ್ಟ ಮುಖಿ ಮಧ್ಯೆ, ದುಂಡುಕಾರದ, ಮೇಲ್ಬಾಗ ಮತ್ತೆ ಚೌಕಾಕಾರದಲ್ಲಿ ಪುರಾಣ ಪ್ರಸಿದ್ಧ ಶಿಲ್ಪಿಗಳನ್ನು ಕಂಬಗಳಲ್ಲಿ ಕೆತ್ತನೆ ಮಾಡಿರುತ್ತಾರೆ. ವೃತ್ತಗಳ ಮಧ್ಯೆ ಎಡಕಟ್ಟು ಕಂಭಗಳನ್ನು ಕೆತ್ತಿದ್ದಾರೆ. ಸುರುಳಿಯಾಗಿ ಹೂಬಳ್ಳಿಗಳು, ಪ್ರಾಣಿ, ಪಕ್ಷಿಗಳು, ನೃತ್ಯಗಾರರು ಮುಂತಾದ ಚಿತ್ರಣ ಕಾಣಸಿಗುತ್ತವೆ.

ಬಾಗಿಲ ವಾಡಗಳು ವಿನೂತನ ಅಲಂಕಾರಗಳಿಂದ ಕೂಡಿವೆ, ಹೂಬಳ್ಳಿಗಳ ಸುರಳಿ, ಮುತ್ತಿನ ಹಗ್ಗಗಳು, ಕಮಲದಳ, ಮಣಿಹಾರ, ನೀಳವಾಗಿರುವ ಸಿಂಹಗಳ ನಡುವೆ ಮಹಿಷಮರ್ಧಿನಿ, ಅರೆಗಂಭ ಕಚ್ಚುಗಳು, ಗಜಲಕ್ಷ್ಮಿ, ಛತ್ರ ಚಾಮರ, ನಂದಿ ದೀಪ ಕಪೂರಿತ ಶಂಖ ಪದ್ಮನಿಧಿ ದ್ವಾರಪಾಲಕರು, ನಿಧಿ ಗಂಗೆಯ ಶಿಲ್ಪಿಗಳನ್ನು ಕಾಣಬಹುದು. ಗರ್ಭಗೃಹ, ನವರಂಗದ ಪ್ರವೇಶ ದ್ವಾರದ ಬಾಗಿಲುಗಳು ಮಕರಗಳಿಂದ ಸೂಡಿನ ಬಾಗಿಲವಾಡಗಳು, ಹೆಚ್ಚು ಅಲಂಕೃತವಾಗಿವೆ. ಮೃದುವಾದ, ನುಣುಪಾದ ಹಸಿರು ಕಲ್ಲಿನಿಂದ ಬಾಗಿಲುವಾಡಗಳನ್ನು ಮಾಡಿರುವುದು ನೊಳಂಬರ ಸೂಕ್ಷ್ಮ ಕೆತ್ತನೆಗೆ ನಿರ್ದಶನ ಮತ್ತು ದೇವಾಲಯಗಳ ಸೌಂದರ್ಯವನ್ನು ಹೆಚ್ಚಿಸಿವೆ. ದೇವಾಲಯದ ಪ್ರಾಂಗಣದಲ್ಲಿ ನಂದಿ ಪೀಠ, ಧ್ವಜಸ್ತಂಭ, ಮಾನಸ್ತಂಭಗಳನ್ನು ಕೆಲವು ಕಡೆ ನಿರ್ಮಿಸಿದ್ದಾರೆ. ಅವನಿಯಲ್ಲಿನ ಸ್ತಂಭ 25 ಅಡಿ ಎತ್ತರದ ಗ್ರಾನೈಟ್ ಸ್ತಂಭವಾಗಿದ್ದು ದಿಂಡು ಚೋಳರ ಮಾದರಿ ಅಬಾಕಸ್ ಹೊಂದಿದೆ. ನವರಂಗದ ಮಧ್ಯದ ಅಂಕಣವು ಸಾಧಾರಣವಾಗಿ ಅಷ್ಟದಿಕ್ಪಾಲಕರಿಂದ ಸುತ್ತುವರಿದ ಶಿವ ಪಾರ್ವತಿಯರ ಉಬ್ಬು ಶಿಲ್ಪಿವನ್ನು ಹೊಂದಿರುತ್ತದೆ. ನವರಂಗದ ಮೇಲ್ಛಾವಣಿಯಲ್ಲಿ ನಟರಾಜಶಿಲ್ಪಿಗಳಿವೆ. ದೇವಾಲಯಗಳು ಅಂತರಾಳಗಳನ್ನು ಹೊಂದಿವೆ.

ಕೂಟಗಳು, ನೊಳಂಬ ಅರಸನ ನಿರ್ದೇಶನದ ಮೇರೆಗೆ ನೊಳಂಬ ಜಯ ಗೌಣ್ಜ ನಾರಾಯಣ ಎಂಬುವನು ಕ್ರಿ.ಶ 869 ರಲ್ಲಿ ಶ್ರೀನಿವಾಸ ಪುರ ತಾ|| ಅರಲುಕುಂಟೆ ಬಳಿಯಲ್ಲಿ ತ್ರಿಕೂಟ ದೇವಾಲಯ ನಿರ್ಮಿಸಿ ಅದರ ನಿರ್ವಹಣೆಗಾಗಿ ಬಿದಿರ ಕುಳ ಗ್ರಾಮವನ್ನು ದಾನವಾಗಿ ನೀಡಿದ ಬಗೆ ಉಲ್ಲೇಖಿಸಿದೆ.  1, 2, 3 ಗರ್ಭಗುಡಿಗಳನ್ನು ಹೊಂದಿರುವ ದೇವಲಾಯಗಳ ರಚನೆಯನ್ನ ನೊಳಂಬರು ಪ್ರಾರಂಭಿಸಿ ಮುಂದಿನ ರಾಜ ಮನೆತನದವರಿಗೆ ಮಾದರಿ ಹಾಕಿದರು.

ನೊಳಂಬ ರಾಜರು ಕಲಾಭಿಮಾನಿಗಳಾಗಿದ್ದು ಧಾರ್ಮಿಕ ವಾಸ್ತುಶಿಲ್ಪಕ್ಕೆ ಪ್ರೋತ್ಸಾಹ ನೀಡಿದ್ದಾರೆ.  ಒಂದನೆ ಅಯ್ಯಪ್ಪ ದೇವ, ಇರಿವ ನೊಳಂಬ, ದಿಲೀಪ ದೀವಬ್ಬರಿಸಿ, ಪೊಳಲ್ಚೋರ, ನನ್ನಿ ನೊಳಂಬ, ಅಣ್ಣಗ, ಬೀರ ನೊಳಂಬ, ಘಂಟೆಯಕಾರ, ಜಗದೇಕಮಲ್ಲ ಉದಯಾದಿತ್ಯ, ಇಮ್ಮುಡಿ ನೊಳಂಬ, ತ್ರೈಲೋಕ್ಯಮಲ್ಲ, ಮೊದಲಾದ ರಾಜರು ಸಮಕಾಲೀನ ನೆರೆಹೊರೆಯ ರಾಜ್ಯಗಳೊಡನೆ ಸನ್ನಿವೇಶಕ್ಕನುಗುಣವಾಗಿ ಯುದ್ಧ, ಒಪ್ಪಂದ, ವೈವಾಹಿಕ, ವ್ಯಾಪಾರ, ರಾಜಕೀಯ, ಸಾಂಸ್ಕೃತಿಕ ಸಂಬಂಧಗಳನ್ನ ಸಾಧಿಸಿ ರಾಜ್ಯದ ವಿವಿಧ ಸ್ಥಳಗಳಲ್ಲಿ ದೇವಾಲಯಗಳು, ಬಸದಿಗಳು ಘಟಿಕಸ್ಥಾನಗಳು ಕೆರೆ ಕಟ್ಟೆಗಳನ್ನು ನಿರ್ಮಿಸಿದರು. ನೊಳಂಬರ ಶಿಲ್ಪಾವಲೋಕನಷ್ಟೆ ಲಭ್ಯವಿರುವ ಶಾಸನಗಳು ವಿವಿಧ ಸ್ಮಾರಕಗಳು, ಭಗ್ನಾವಶೇಷಗಳು ಅವರ ಕೊಡುಗೆಗಳನ್ನ ಸಾರಿಹೇಳುವ ಸಾಕ್ಷಿಗಳಾಗಿವೆ. ನೊಳಂಬರಿಂದ ನಿರ್ಮಿಸಲ್ಪಟ್ಟ ದೇವಾಲಯಗಳು ಮೂಲಸ್ಥಿತಿಯಲ್ಲಿರುವುದು ಬಹಳಷ್ಠ ಕಡಿಮೆ ಇದೆ. ಆದರೆ ಇಂದಿಗೂ ಜೀವಂತವಾಗಿ ದೇವತಾಕಾರ್ಯ ಪೂಜೆಗಳು ನಡೆಯುತ್ತಿರುವುದನ್ನು ಹೆಂಜೇರು, ಆವನಿ, ನಂದಿ, ಬರಗೂರು, ಅರಳಗುಪ್ಪೆ ಧರ್ಮಪುರಿ ಪ್ರಸಿದ್ಧ ಇತರೆ ಸ್ಥಳಗಳಲ್ಲಿ ಕಾಣಬಹುದು.

ನೊಳಂಬರು ನಿರ್ಮಿಸಿದ ಪ್ರಮುಖ ದೇವಾಲಯಗಳನ್ನು ಕೆಳಕಂಡಂತೆ ತಿಳಿದುಕೊಳ್ಳಬಹುದು. ಅನಂತಪುರ ಜಿಲ್ಲೆಯ ಕಂಬದೂರಿನ ಮಲ್ಲಿಕಾರ್ಜುನ ದೇವಾಲಯ, ಹೆಂಜೇರು ಆಂದ್ರ ಪ್ರದೇಶದ ಅನಂತಪುರ ಜಿಲ್ಲೆ ಮಡಕಶಿರಾ ತಾಲ್ಲೂಕಿನಲ್ಲಿರುವ ಇಂದಿನ ಹೇಮಾವತಿ ನೊಳಂಬರ ರಾಜಧಾನಿಯಾಗಿತ್ತು. ಇಲ್ಲಿರುವ ದೇವಾಲಯಗಳಲ್ಲಿ ದೊಡ್ಡೇಶ್ವರ ದೇವಾಲಯ ವಿಸ್ತಾರವಾದ ಮತ್ತು ನೊಳಂಬ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ಅತ್ಯುತ್ತಮ ನಿದರ್ಶನ ಸಾರುವ ಸ್ಮಾರಕವಾಗಿದೆ.

ದೋಡ್ಡೇಶ್ವರ ದೇವಾಲಯವು ಅಚ್ಚು ಪಟ್ಟೆಗಳುಳ್ಳ ಅದಿಷ್ಠಾನ ಚೌಕಾಕಾರದ ತಲವಿನ್ಯಾಸ, ಗರ್ಭಗೃಹ, ತೆರೆದ ಅಂತರಾಳ, ನವರಂಗ ನಂದಿ ಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಸಿದ್ದೇಶ್ವರ ಮೂರ್ತಿ, ಅಂತರಾಳದಲ್ಲಿ ನಾಲ್ಕು ಕಂಬಗಳು, ನವರಂಗದಲ್ಲಿ 16 ಕಂಬಗಳ ಸುಂದರವಾದ ಕೆತ್ತನೆಗಳಿಂದ ಕೂಡಿವೆ. ವಾತಾನುಕೂಲ ಬೆಳಕಗಾಗಿ ಅಂತರಾಳದಲ್ಲಿ ಮೂರು ನವರಂಗದ ಎರಡೂ ಬದಿಗಳಲ್ಲಿ ಎರಡೆರೆಡು, ಮುಂಭಾಗದಲ್ಲಿ ಮೂರು ಜಾಲಾಂದ್ರಗಳನ್ನು ಗೋಡೆಗೆ ಹೊಂದಿಸಲಾಗಿದೆ. ಜಾಲಾಂದ್ರಗಳಲ್ಲಿ ಗಂಗಾ – ಯಮುನಾ, ವಿಷ್ಣು, ಬ್ರಹ್ಮ, ಲತಾ ಪಟ್ಟಿ ಕಾರ್ತಿಕೇಯ, ಮಿಥುನ ಶಿಲ್ಪಿಗಳಿಂದ ಅಲಂಕರಿಸಲಾಗಿದೆ. ಅರೆಗಂಬಗಳು, ನಿಧಿ, ಗರ್ಭಗೃಹ ಮತ್ತು ನವರಂಗದಲ್ಲಿ ಪಂಚಶಾಲಾ ಬಾಗಿಲವಾಡಗಳನ್ನು ಹೊಂದಿದೆ. ಲಲಾಟದಲ್ಲಿ ಅಷ್ಠ ದಿಕ್ವಾಲಕರಿಂದ ಕೂಡಿದ ನರ್ತಿಸುತ್ತಿರುವ ನಟರಾಜ ಶಿಲ್ಪ ಆಕರ್ಷಕವಾಗಿವೆ.

ಹೇಮಾವತಿಯ ಇತರ ದೇವಾಲಯಗಳೆಂದರೆ ಸಿದ್ದೇಶ್ವರ, ವಿರೂಪಾಕ್ಷ, ಮಲ್ಲೇಶ್ವರ, ಮತ್ತು ಅಕ್ಕತಂಗಿ ದೇವಾಲಯಗಳು ಮುಖ್ಯವಾದವು. ಕಪ್ಪು ಕಲ್ಲಿನಿಂದ ಬಾಗಿಲವಾಡವನ್ನು ಅಲಂಕೃತವಾಗಿ ಕೆತ್ತಲಾಗಿದೆ. ಗರ್ಭಗೃಹ, ಅರ್ಧಮಂಟಪ, ನವರಂಗ, ಮುಖ ಮಂಟಪವನ್ನು ಹೊಂದಿರುವ ಮಲ್ಲೇಶ್ವರ ದೇವಾಲಯದ ಬಾಗಿಲವಾಡ ಕುಸುರಿ ಕಲೆಗಳಿಂದ ಕೂಡಿದೆ.

ಬರಗೂರಿನಲ್ಲಿ ಮಹೇಂದ್ರನು ನಿರ್ಮಿಸಿದ ದೇವಾಲಯವು ಗರ್ಭಗೃಹ ಅಂತರಾಳ, ನವರಂಗ ಮತ್ತು ಮುಖ ಮಂಟಪಗಳಿಂದ ಕೂಡಿದ್ದು ಶಿಕ್ಷಣ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿತ್ತು.

ಅವನಿಯಲ್ಲಿ ಲಕ್ಷ್ಮಣೇಶ್ವರ, ಭರತೇಶ್ವರ, ಶತೃಘ್ನೇಶ್ವರ ಅಂಜನೇಶ್ವರ ಸೇರಿದಂತೆ 50 ದೇವಾಲಯಗಳನ್ನು ನಿರ್ಮಿಸಿದ್ದರೆಂದು ಅಲ್ಲಿನ ಶಾಸನದಿಂದ ತಿಳಿಯುತ್ತದೆ. ವರುಣ ಶಿವ ಭಟ್ಟಾರನು, ಇಮ್ಮುಡಿ ಪೊಳಲ್ಚೋರ, ಇಮ್ಮುಡಿ ಮಹೇಂದ್ರ ದೀವಬ್ಬರಿಸಿ ಇತರರು ದೇವಾಲಯಗಳನ್ನು ನಿರ್ಮಿಸಿ ಅಪಾರ ದತ್ತಿ ನೀಡಿ ಪ್ರೋತ್ಸಾಹಿಸಿದರು. ಲಕ್ಷ್ಮಣೇಶ್ವರ ದೇವಾಲಯವು ನೊಳಂಬ ವಾಸ್ತುಶಿಲ್ಪ ಶೈಲಿಯ ಎಲ್ಲಾ ಲಕ್ಷಣಗಳಿಂದ ಕೂಡಿದ ಸುಂದರ ದೇವಾಲಯವಾಗಿದೆ.

ನೊಣವಿನಕೆರೆಯಲ್ಲಿ ನೊಣಬೇಶ್ವರ, ಶಾಂತೇಶ್ವರ ಗರ್ಗೇಶ್ವರ, ಕಲ್ಲೇಶ್ವರ ದೇವಾಲಯಗಳಿದ್ದು ನೊಳಂಬ ವಾಸ್ತುಶಿಲ್ಪ ಶೈಲಿಯಲ್ಲಿ ನೊಣಬೇಶ್ವರ ಮತ್ತು ಗರ್ಗೇಶ್ವರ ದೇವಾಲಯಗಳನ್ನು ಗರ್ಭಗೃಹ, ತೆರೆದ ಅಂತರಾಳ ಮತ್ತು ನವರಂಗ ಬ್ರಹ್ಮಕಾಂತ ಕಂಭಗಳು ಬಿತ್ತಿ ಶಿಲ್ಪಗಳನ್ನು ಹೊಂದಿರುವಂತೆ ನಿರ್ಮಿಸಿದ್ದಾರೆ.

ಅರಳಗುಪ್ಪೆಯಲ್ಲಿ ಐದು ದೇವಾಲಯಗಳಿವೆ, ಇಲ್ಲಿನ ಕಲ್ಲೇಶ್ವರ ದೇವಾಲಯ ಗರ್ಭಗೃಹ, ತೆರೆದ ಅಂತರಾಳ, ನವರಂಗ ಶಂಖನಿಧಿ, ಪದ್ಮನಿಧಿ, ಬಾಗಿಲವಾಡಗಳಲ್ಲಿ ಗಂಗಾಯಮುನಾ ಶಿಲ್ಪಿಗಳು ಹೊಂದಿ ಕೊಂಡಂತೆ ಉಮಾಮಹೇಶ್ವರ, ಸೂರ್ಯ ವಿಷ್ಣು ಮಂಟಪಗಳನ್ನು ರಚಿಸಲಾಗಿದೆ. ನವರಂಗದಲ್ಲಿನ ನಟರಾಜ ಶಿಲ್ಪವು ಅಷ್ಟ ದಿಕ್ಪಾಲಕ ಶಿಲ್ಪಗಳ ಮಧ್ಯೆ ಉತ್ಕೃಷ್ಟ ಶಿಲ್ಪವಾಗಿದೆ.

ಧರ್ಮಪುರಿ ನೊಳಂಬರ ಆಡಳಿತಕೊಳಪಟ್ಟಿತ್ತು. ನೊಳಂಬರು ಜೈನ ಧರ್ಮದಿಂದ ಪ್ರಭಾವಿತರಾಗಿದ್ದರು. ಮಹೇಂದ್ರ ರಾಜನ ಅಧಿಕಾರಿಗಳಾದ ಚಂಡಿಯಣ್ಣ, ನಿಧಿಯಣ್ಣ ಎಂಬುವರು ಬಸದಿಗಳನ್ನು ನಿರ್ಮಿಸಿ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸಿದರು. ನೊಳಂಬ ವಾಸ್ತ ಶಿಲ್ಪ ಶೈಲಿಯಲ್ಲಿ ಕಾಮಾಕ್ಷಿ ದೇವಾಲಯ ಮತ್ತು ಮಲ್ಲಿಕಾರ್ಜುನ ದೇವಾಲಯಗಳನ್ನ ನಿರ್ಮಿಸಿದ್ದರು. ಚೌಕಾಕಾರದ ಗರ್ಭಗೃಹ, ಅದಿಷ್ಠಾನ, ಅಚ್ಚುಪಟ್ಟಿಕೆಗಳು, ನವರಂಗ, ಅರ್ಧ ಮಂಟಪಗಳಿಂದ ಕೂಡಿದೆ. ಅಷ್ಠ ದಿಕ್ಪಾಲಕರ ಮಧ್ಯೆ ನಟರಾಜ ರಾಮಾಯಣದ ಶಿಲ್ಪ ಕಂಬಗಳು ಬಾಗಿಲು ವಾಡಗಳು, ಕಪೋತಗಳು ಆಕರ್ಷಕವಾಗಿವೆ.

ಕಂಪಿಲಿ ನೊಳಂಬರ ಸ್ವಾಯತ್ತ ರಾಜ್ಯದ ರಾಜಧಾನಿ ಕೇಂದ್ರವಾಗಿತ್ತು. ಇಲ್ಲಿನ ಸೋಮೇಶ್ವರ ದೇವಾಲಯವು ಮೂರ್ತಿಶಿಲ್ಪದಿಂದ ಕೂಡಿದೆ. ಬ್ರಹ್ಮಕಾಂತ ಮಾದರಿಯ ಕಂಬಗಳಿಂದ ಕಟ್ಟಲಾಗಿದೆ. ತೆಕ್ಕಲ ಕೋಟೆ ಬಳಿಯ ಹರವಿನ ಮಲ್ಲೇಶ್ವರ ದೇವಾಲಯದÀ ಸುತ್ತ 4 ದೇವಾಲಯಗಳಿವೆ. ಇಲ್ಲಿ ಮೈಲಾರನ ದೇವಾಲಯಕ್ಕೆ ನೊಳಂಬ ಉದಯಾದಿತ್ಯನು ಸಿರಿಯೂರನ್ನು ದತ್ತಿಯಾಗಿ ನೀಡಿದನು. ನೊಳಂಬ ಶೈಲಿಯ ಲಕ್ಷಣಗಳಲ್ಲಿರುವುದನ್ನು ಕಾಣಬಹುದು. ಬೃಹತ್ತಾದ ನಂದಿ ಮಂಟಪವಿದೆ.

ಹಂಪೆಯಲ್ಲಿ ಉದಯಾದಿತ್ಯನು ದುರ್ಗಾ ಮತ್ತು ನಾಗೇಶ್ವರ ದೇವಾಲಯಗಳನ್ನು ಕ್ರಿ.ಶ 1018 ರ ಅವಧಿಯಲ್ಲಿ ನಿರ್ಮಿಸಿದನು. ಈ ದೇವಾಲಯಗಳಲ್ಲಿ ಕುಮುದಗಳು ಪಟ್ಟಿಕೆ, ಉಬ್ಬುಗಂಬಗಳು, ಗೂಡುಗಳು ಅಂತರಾಳ, ನವರಂಗ, ಬಾಗಿಲವಾಡಗಳಿಂದ ಅಲಂಕೃತವಾಗಿವೆ ಮಹಿಷಮರ್ದಿನಿ ಶಿಲ್ಪವನ್ನ ಕಾಣಬಹುದು.

ಬಾಗಳಿಯ ಕಲ್ಲೇಶ್ವರ ದೇವಾಲಯವನ್ನ ನೊಳಂಬ ಉದಯಾದಿತ್ಯನು ನೊಳಂಬಾ ಚಾರಿಯಿಂದ ರಚಿಸಿದನು. ನೊಳಂಬ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣವಾಗಿದೆ ಮತ್ತು ನೊಳಂಬರ ಕೇಳೆ ಎಂಬ ಶಾಸನ ಉಲ್ಲೇಖವಿದೆ. ಗಂಗಾವತಿಗೆ ತೀರದ ದೇವಘಾತÀ ಬಳಿಯ ವಿಪ್ರ ಗ್ರಾಮದಲ್ಲಿ ಅಮೃತೇಶ್ವರ ದೇವಾಲಯದ ಸಂಕೀರ್ಣವಿದೆ. ಶಂಕರ ಲಿಂಗನ ಗುಡಿ, ದುರ್ಗಾ ದೇವಾಲಯಗಳಲ್ಲಿ ಗರ್ಭಗೃಹ, ಅಂತರಾಳ, ನವರಂಗ, ಸರಳ ಬಾಗಿಲವಾಡ, ದ್ವಾರಪಾಲಕರು ಲಲಾಟದಲ್ಲಿ ಗಜಲಕ್ಷ್ಮಿ, ಗೋಡೆಗಳಲ್ಲು ಉಬ್ಬಿದ ಕಂಬಗಳ ಗರ್ಭಗೃಹದ ಮೇಲೆ ಶಿಖಿರಗಳನ್ನು ಹೊಂದಿದೆ.

ನಂದಿ ಶೈವ ಕೇಂದ್ರ ತಾಣ, ನೊಳಂಬ, ಗಂಗ, ಚೋಳ ಮತ್ತು ವಿಜಯನಗರದ ಅರಸರಿಂದ ದೇವಾಲಯ ಮತ್ತು ಅದರ ಸಂಕೀರ್ಣ ಸ್ಮಾರಕಗಳು ನಿರ್ಮಿಸಲ್ಪಟ್ಟಿವೆ. ನಂದಿಯ ಶಾಸನದಿಂದ ನೊಳಂಬಾಧಿರಾಜ ಪೋಳ ಲ್ಚೋರನು ನಂದಿ ದೇವಾಲಯಕ್ಕೆ ಗೋಪುರ ಕಟ್ಟಿಸಿದನೆಂದು ದಾಖಲಿಸಲಾಗಿದೆ. ನೊಳಂಬ ವಾಸ್ತುಶಿಲ್ಪ ಶೈಲಿಯ ಲಕ್ಷಣಗಳನ್ನು ಹೊಂದಿರುವ ಭೋಗ ನಂದಿಶ್ವರ ಮತ್ತು ಅರುಣಾ ಚಲೇಶ್ವರ ದೇವಾಲಯಗಳಿವೆ. ಚೌಕಾಕಾರದ ಗರ್ಭಗೃಹ ಅರ್ಧಮಂಟಪ 2 ಕಂಬಗಳಿಂದ ಮತ್ತು ನವರಂಗವು ನಾಲ್ಕು ಕಂಬಗಳಿದ್ದು ದೇವಾಲಯದ ಮುಂದೆ ಪ್ರತ್ಯೇಕ ನಂದಿ ಮಂಟಪವನ್ನು ಹೊಂದಿದೆ. ಬಾಣರು, ವಿಜಯನಗರ ಅರಸರು ಈ ದೇವಾಲಯಗಳ ಆವರಣದಲ್ಲಿರುವ ವಿವಿಧ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ ಪಡಿಸಿದರು. ದೇವಾಲಯದಲ್ಲಿ ಅದಿಷ್ಠಾನ ಅಚ್ಚುಪಡಿಕೆಗಳು ಬಿತ್ತಿಯಲ್ಲಿ ಜಾಲಾಂದ್ರಗಳು, ಅರೆಗಂಬಗಳು ಬಿತ್ತಿ ಚಿತ್ರಗಳು ಅಲಂಕಾರಿಕ ಮಂಟಪಗಳ ಹಾರ ಗರ್ಭಗೃಹದ ಮೇಲಿನ ಶಿಖರದಲ್ಲಿ ಶಿವನ ವಿಗ್ರಹಗಳನ್ನು ಹೊಂದಿರುವಂತೆ ನಿರ್ಮಿಸಿದ್ದಾರೆ. ಕಂಬಗಳು, ಅಷ್ಟದಿಕ್ಪಾಲಕರಿಂದ ಕೂಡಿದ ಶಿವ ಪಾರ್ವತಿಯರ ವಿಗ್ರಹವಿದೆ. ಬಾಗಿಲವಾಡಗಳಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಅಷ್ಟಭುಜ ನಟರಾಜನ ಶಿಲ್ಪ ಸುಂದರವಾಗಿದ್ದ. ಪ್ರಾಣಿಗಳಿಂದ ಸುತ್ತುವರಿದೆ ಮಾರಬ್ಬೆ, ಬಾರುಪೊನ್ನೇರನ ಪತ್ನಿ ಗವಣಬ್ಬೆ ಮದಕರಿ ಕಲ್ಲು ಎಂಬಲ್ಲಿ ಗವಣೇಶ್ವರ ದೇವಾಲಯನ್ನ ಕಟ್ಟಿಸಿದ ಬಗ್ಗೆ ಚಿಕ್ಕ ಮದುರೆ ಶಾಸನಗಳಿಂದ ತಿಳಿದು ಬರುತ್ತದೆ.

ಮುಷ್ಠಪುರದಲ್ಲಿ ಹಿರೇಮದರಿ ಕಲ್ಲಿನಲ್ಲಿ ಅಣ್ಣಿಗ ನೊಳಂಬನು ದೇವಾಲಯ ನಿರ್ಮಿಸಿ ಭೂದಾನ ನೀಡಿದನು. ಕುರುಬೂರಿನಲ್ಲಿ ಭೀಮಯ್ಯ ಮತ್ತು ಶಿವಾರ ಪಟ್ಟಣದಲ್ಲಿ ದಿಲೀಪರಸ ನನ್ನೇಶ್ವರ ಮತ್ತು ಭೀಮೇಶ್ವರ ದೇವಾಲಯಗಳನ್ನು ಕಟ್ಟಿಸಿ ಪಾಠ ದತ್ತಿ ನೀಡಿ ಪ್ರೋತ್ಸಾಹ ನೀಡಿದ ಬಗ್ಗೆ ಅಲ್ಲಿನ ಶಾಸನಗಳಿಂದ ತಿಳಿಯಬಹುದು.

ನೊಳಂಬ ಪಲ್ಲವ ಪೆರ್ಮಾನಡಿ ದೇವನು, ಮುದಿಹಡದಿ, ಸೋಗಿಗಳಲ್ಲಿ ದೇವಾಲಯಗಳನ್ನ ನಿರ್ಮಿಸಿದನು. 2ನೇ ಮಹೇಂದ್ರನು ಉತ್ತನೂರಿನಲ್ಲಿ ವಿಷ್ಣುವಿನ ದೇಗುಲ ನಿರ್ಮಿಸಿ ದೇವಾಲಯ ನಿರ್ವಹಣೆಗೆ ಭೂದಾನ ನೀಡಿದ ಬಗ್ಗೆ ಬೆಳಗಲ್ಲಿನ ಶಾಸನದಿಂದ ವೇದ್ಯವಾಗುತ್ತದೆ. ಮೊರೆಗೇರಿಯಲ್ಲಿ ನೊಳಂಬೇಶ್ವರ ಮತ್ತು ಲೆಂಕೇಶ್ವರ ದೇವಸ್ಥಾನಗಳನ್ನು ವಾರಿನವರು ರಾಜ ಉದಯಾದಿತ್ಯನ ಪರವಾಗಿ ನಿರ್ಮಿಸಿ ತಿಕಣ್ನ ಮತ್ತು ಲೆಂಕಸಾಸಿರ್ವರು ವಿರೂಪಕ್ಷ ದೇವಾಲಯ, ಛತ್ರ, ಬಾವಿ ಮತ್ತು ವಿದ್ಯಾಕೇಂದ್ರಗಳನ್ನು ನಿರ್ಮಿಸಿ ಶಿವಪುರ ಗ್ರಾಮವನ್ನು ದತ್ತಿಯಾಗಿ ನೀಡಿದ್ದಾರೆ. 

ವೀರನೊಳಂಬ ಉದಯಾದಿತ್ಯನು ಕಲ್ಕೇರಿಯಲ್ಲಿ ಮತ್ತು ರಾಣಿ ಮಾಳಲದೇವಿಯರು ಶಿವಾಲಯ, ಆದಿತ್ಯಾಲಯ, ವಿದ್ಯಾಲಯ, ಮಹಾಭವನ, ವಿಷ್ಣುಗೃಹಾಲಯ ಹಾಗೂ ಕೆರೆಯನ್ನ ಕಟ್ಟಿಸಿ ಅವುಗಳ ನಿರ್ವಹಣೆಗೆ ಭೂದಾನ ನೀಡಿದ ಬಗ್ಗೆ ಕಲ್ಕೆರೆ ಶಾಸನ (1076) ದಿಂದ ರಾಜರುಗಳ ಕಲಾಸಕ್ತಿಯನ್ನ ತಿಳಿಯಲು ಸಹಾಯಕವಾಗಿದೆ.

ಅಗಳಿಯಲ್ಲಿ ನೊಳಂಬ ದಂಡಾಧಿಕಾರಿ ಕೋಟಯ್ಯ ವಿಷ್ಣುದೇವಾಲಯ ಕಟ್ಟಿಸಿ ಭೂದಾನ ನೀಡಿದ ಬಗ್ಗೆ 950ರ ಅಗಳಿ ಶಾಸನದಿಂದ ತಿಳಿಯಬಹುದು. ಚಿರಸ್ತಹಳ್ಳಿಯ ಮಲ್ಲಿಕಯ್ಯ, ನೊಳಂಬರಾಣಿ ದೀವಬ್ಬರಸಿ ಅವನಿಯಲ್ಲಿ ನೊಳಂಬ ನಾರಾಯಣೇಶ್ವರ ದೇವಾಲಯ ನಿರ್ಮಿಸಿ ಧಾರ್ಮಿಕ ಸಮನ್ವಯತೆ ಸಾಧಿಸಿದರು.

ಹುಲಿಕುಂಟೆಯಲ್ಲಿ ಒಂದನೇ ಮಹೇಂದ್ರ ರಾಜನು 880 ರಲ್ಲಿ ಬಸದಿಯನ್ನು ನಿರ್ಮಿಸಿ ದಾನದತ್ತಿ ನೀಡಿದನು. ಧರ್ಮಪುರಿಯಲ್ಲಿ ನೊಳಂಬರಾಜ ಮಹೇಂದ್ರನ ಅಧಿಕಾರಗಳಾದ ಚಂದಿಯಣ್ಣ ಮತ್ತು ನಿಧಿಯಣ್ಣರು ಬಸದಿ ನಿರ್ಮಿಸಿದರು. ಮೂಲಹಳ್ಳಿ ಎಂಬ ಗ್ರಾಮವನ್ನು ಜಿನಾಲಯ ನಿರ್ವಹಣೆಗೆ ದತ್ತಿಯಾಗಿ ನೀಡಿದರು. ನೊಳಂಬ ರಾಜರು, ರಾಣಿಯರು, ದಂಡನಾಯಕರು, ಅಧಿಕಾರಿಗಳು, ಮಹಿಳೆಯರು, ಧರ್ಮಗುರುಗಳು ರಾಜ್ಯದ ಹಲವು ಕಡೆ 100 ಕ್ಕೂ ಹೆಚ್ಚು ದೇವಾಲಯಗಳನ್ನು, ಬಸದಿ, ಸ್ತೂಪ, ವಿಹಾರ, ಮಠ ಇತರ ಲೌಕಿಕ ಸ್ಮಾರಕಗಳನ್ನು ನಿರ್ಮಿಸಿದ್ದಾರೆ.

ನೊಳಂಬರು ಶೈವ, ವೈಷ್ಣವ, ಜೈನ ಮತ್ತು ಕಲ್ಕೆರೆಯಲ್ಲಿ ಬೌದ್ಧ ವಿಹಾರ ಇವುಗಳನ್ನು ನಿರ್ಮಿಸಿ ಅವುಗಳ ನಿರ್ವಹಣೆಗೆ ಉದಾರ ದಾನ ದತ್ತಿ ನೀಡಿ ಪ್ರೋತ್ಸಾಹ ನೀಡಿದ್ದರಿಂದ ಧಾರ್ಮಿಕ ಸಮನ್ವಯತೆ ಮತ್ತು ಸಾಂಸ್ಕೃತಿಕ ಪ್ರೌಡಿಮೆ ಬೆಳೆದು ದಕ್ಷಿಣ ಭಾರತದ ಉತ್ಕೃಷ್ಟ ಕಲೆಯ ಬೆಳವಣಿಗೆಗೆ ಅವರು ನೀಡಿದ ಅಮೂಲ್ಯ ಕಾಣಿಕೆ ಬಹಳ ಗಮನಾರ್ಹವಾದುದು.

ಉಪಸಂಹಾರ:

ಭಾರತದ ವಾಸ್ತುಶಿಲ್ಪ ಕಲಾ ಶೈಲಿಯಲ್ಲಿ ನೊಳಂಬರು ಸಮಕಾಲೀನ ರಾಜವಂಶಗಳ ಕಲಾಶೈಲಿಗಳ ಉತ್ತಮ ಅಂಶಗಳನ್ನು ಸ್ವೀಕರಿಸಿ, ತಮ್ಮ ಕಲಾ ಸ್ಮಾರಕಗಳ ನಿರ್ಮಾಣದಲ್ಲಿ ಅಂಧಾನುಕರಣೆಗೆ ಬದಲಾಗಿ ವಿನೂತನ ಪ್ರಯೋಗವನ್ನು ಮಾಡಿದರು. ಬಾಗಿಲುವಾಡಗಳ ನಿರ್ಮಾಣ, ಪದ್ಮ ನಿಧಿ ಶಿಲ್ಪಗಳು, ನೊಳಂಬ ನಟರಾಜ, ಕಪೋತ ಅಲಂಕಾರಿ ಹೂವು, ಬಳ್ಳಿ, ಪ್ರಾಣಿ ಪಕ್ಷಿ, ನೃತ್ಯಗಾರರ ಶಿಲ್ಪಗಳ ಕೆತ್ತನೆಯಲ್ಲಿ ಮುಗ್ದತೆ ಆಕರ್ಷಕ ವೈಭವ, ನೈಜತೆ, ಕಂಬಗಳ ನಿರ್ಮಾಣದಲ್ಲಿ ಐದು ರೂಪದಲ್ಲಿ ನಿರ್ಮಿಸುವ ಪ್ರಯೋಗ ನಡೆಸಿ ತಮ್ಮದೆ ವೈಶಿಷ್ಟ್ಯತೆ ಸಾಧಿಸಿದರು. ನೊಳಂಬರು ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ನೆಲೆಯೂರಿರಲು ಅವರ ಕಲಾ ಸ್ಮಾರಕಗಳ ಜೀವಂತ ಸಾಕ್ಷಿಗಳಾಗಿ ಮೇಳೈಸುತ್ತಿವೆ.

ಆಕರ ಗ್ರಂಥಗಳು:

  1. ಎಪಿಗ್ರಾಫಿಯಾ ಕರ್ನಾಟಿಕಾ ಸಂಪುಟಗಳು, ಸಂ.ಬಿ.ಎಲ್.ರೈಸ್ ರಾಜ್ಯ ಪುರಾತತ್ವ ಇಲಾಖೆ, ಕರ್ನಾಟಕ ಸರ್ಕಾರ, ಮೈಸೂರು.
  2. ಎಪಿಗ್ರಾಫಿಯಾ ಇಂಡಿಕಾ ಸಂಪುಟಗಳು ಭಾರತೀಯ ಪುರಾತತ್ವ ಇಲಾಖೆ, ಮೈಸೂರು.
  3. ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟಗಳು, ಕನ್ನಡ ವಿಶ್ವವಿದ್ಯಾಲಯ ಹಂಪೆ.
  4. ದಿ. ನೊಳಂಬಾಸ್, ಡಾ. ಎ.ಎಸ್. ಕೃಷ್ಣಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.
  5. ನೊಳಂಬ ಇತಿಹಾಸ ದರ್ಶನ, ಸಂ. ಬಸವರಾಜು, ನೊಳಂಬ ವೀರಶೈವ ಸಂಘ (ರಿ) ಬೆಂಗಳೂರು – 1976.
  6. ನೊಳಂಬರ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಡಾ|| ಜಯಮ್ಮ ಕರಿಯಣ್ಣ, ಕರ್ನಾಟಕ ಇತಿಹಾಸ ಮಂಡಳಿ, ಧಾರವಾಡ.
  7. ನೊಳಂಬರು, ಎ.ವಿ ನರಸಿಂಹಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.
  8. ನೊಳಂಬರ ಮಹಾನಾಡ ಪ್ರಭುಗಳ ಪಕ್ಷಿನೋಟ, ಸಂ. ಬಸವರಾಜು, ಕೆ.ಆರ್ ಪ್ರ ಶ್ರೀಗುರುಸಿದ್ದರಾಮೇಶ್ವರ ಸೇನೆ ಗುಬ್ಬಿ – 2019.
  9. ಕರ್ನಾಟಕ ಸಂಸ್ಕೃತಿ ಸಾಹಿತ್ಯ ಸಮೀಕ್ಷೆ, ಎಂ.ಎಂ ಕಲ್ಬುರ್ಗಿ
  10. ಕರ್ನಾಟಕ ಇತಿಹಾಸ ದರ್ಶನ, ಕೃಷ್ಣರಾವ್
  11. ನೊಳಂಬ ಮಹಾದೇವಿ ಎಂ.ಎಸ್ ಕೃಷ್ಣಮೂರ್ತಿ
  12. ಪ್ರೋ. ಡಿ.ವಿ ಪರಮಶಿವ ಮೂರ್ತಿ, ಡಿ. ಸಿದ್ಧಗಂಗಯ್ಯ ನೊಳಂಬರ ಶಾಸನಗಳು, ಪ್ರ-ಗುರುಸಿದ್ದರಾಮೇಶ್ವರ ಸೇನೆ ಹೇರೂರು ಗುಬ್ಬಿ – 2019.
  13. ಡಾ|| ಡಿ.ಎನ್ ಯೋಗೀಶ್ವರಪ್ಪ, ನೊಳಂಬ ವಂಶದ ಅರಸು ಮನೆತನಗಳು ಪ್ರ. ಶ್ರೀ ಗುರುಸಿದ್ದರಾಮೇಶ್ವರ ಸಾಹಿತ್ಯ ಸಂಪದ – 2021.
  14. ಡಾ|| ಆರ್.ವಿ ರವೀಂದ್ರನಾಥ್ ಮತ್ತು ಡಾ|| ಗೋವಿಂದ ಶೆಟ್ಟಿ ಶಾಸನಗಳ ಹಿನ್ನಲೆಯಲ್ಲಿ ಆವನಿಯ ಸಾಂಸ್ಕೃತಿಕ ಪರಂಪರೆ, ಪ್ರ. ಮನೋಜ್ ಪಬ್ಲಿಕೇಷನ್ ಬೆಂಗಳೂರು-2015.
  15. ಡಾ|| ದೇವರ ಕೊಂಡಾರೆಡ್ಡಿ, ಪ್ರ.ಸಂ ಕನ್ನಡ ವಿಶ್ವವಿದ್ಯಾಲಯ, ಪ್ರ.ಪ್ರಸಾರಾಂಗ, ಹಂಪಿ - 1998.
  16. Studies medieval deacon history dr. H.N Ramesh
  17. Karnataka through the ages published govt of mysore
  18. Glimpses of Karnataka M.V Krishna Rao.
  19. M.S Krishna Murthy, A Political and cultural study of the nolamloas.
  20.  Andrewe L. cohen. Temple architecture and sculpture of the Nolambas.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal