Tumbe Group of International Journals

Full Text


ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ ಲಕ್ಷ್ಮೀಕಾಂತ. ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ ಜಾನಪದ ಅಧ್ಯಯನ ವಿಭಾಗ ಕನ್ನಡ ವಿಶ್ವವಿದಾಲಯ,ಹಂಪಿ ವಿದ್ಯಾರಣ್ಯ- 583276 ಮೊ. ಸಂ. 9900389923 ‘ಸುಕೌಶಳ ಸ್ವಾಮಿಯ ಕಥೆ’ಯು ಶಿವಕೋಟ್ಯಾಚಾರ್ಯನು ರಚಿಸಿದ ‘ವಡ್ಡಾರಾಧನೆ’ ಎಂಬ ಗದ್ಯಕೃತಿಯಲ್ಲಿನ ಎರಡನೆಯ ಕತೆಯಾಗಿದೆ. ಹಿಂದೂ ಧರ್ಮದಂತೆಯೇ ಜೈನ ಧರ್ಮದಲ್ಲಿಯೂ ಸಹ ಹೆಣ್ಣು ಶೋಷಣೆ ಹಾಗೂ ನಿರ್ಲಕ್ಷಕ್ಕೆ ಒಳಗಾಗಿದ್ದಾಳೆ. ಆಕೆಯನ್ನು ಮನಸ್ಸಿರುವ ಒಂದು ಜೀವಿ ಎಂದು ಪರಿಗಣಿಸುವ ವಿಚಾರಕ್ಕಿಂತಲೂ ಹೆಚ್ಚಾಗಿ ಆಕೆಯನ್ನು ಒಂದು ವಸ್ತು ಅಥವಾ ಸರಕಿನೋಪಾದಿಯಾಗಿ ಪರಿಭಾವಿಸಿರುವುದು ಎಲ್ಲ ಧರ್ಮಗಳ ಸಾಹಿತ್ಯವನ್ನು ಪರಾಮರ್ಶಿಸಿದರೆ ನಮ್ಮ ಗಮನಕ್ಕೆ ಬರುತ್ತದೆ. ಅಂತೆಯೇ ಜೈನಧರ್ಮವು ಹೆಣ್ಣು ಮೋಕ್ಷಕ್ಕೆ ಅಥವಾ ಮುಕ್ತಿಗೆ ಅರ್ಹಳಲ್ಲ, ಒಂದು ವೇಳೆ ಆಕೆ ಮುಕ್ತಿಯನ್ನು ಪಡೆಯಬೇಕಾದರೆ ಮುಂದಿನ ಜನ್ಮದಲ್ಲಿ ಪುರುಷನಾಗಿ ಜನಿಸಿ ಮುಕ್ತಿಯನ್ನು ಪಡೆಯಬೇಕೆನ್ನುವ ಕಟ್ಟುಪಾಡುಗಳಿವೆ. ಈ ಎಲ್ಲ ನಿಯಮ ಕಟ್ಟುಪಾಡುಗಳ ನಡುವೆಯೇ ವಡ್ಡಾರಾಧನೆ ಸಂಕಲನದಲ್ಲಿನ ಸುಕೌಶಳ ಸ್ವಾಮಿಯ ಕಥೆಯಲ್ಲಿನ ಸುಕೌಶಳ ಸ್ವಾಮಿಯ ಕಥೆಯಲ್ಲಿನ ಸ್ತ್ರೀ ಪಾತ್ರ ಚಿತ್ರಣವನ್ನು ಗಮನಿಸಿದರೆ ಇಲ್ಲಿನ ಹೆಣ್ಣುಗಳಿಗೆ ಹಲವು ಅವಕಾಶಗಳು ಇರುವುದು ಕಂಡುಬರುತ್ತದೆ. ಜೊತೆಗೆ ಇದನ್ನು ಸ್ತ್ರೀಪರವಾದ ಹಾಗೂ ಸ್ತ್ರೀವಾದದ ಹಿನ್ನೆಲೆಯಲ್ಲಿಯೂ ಸಹ ಅಧ್ಯಯನಕ್ಕೆ ಒಳಗು ಮಾಡಬಹುದಾಗಿದೆ.             ‘ಸುಕೌಶಳ ಸ್ವಾಮಿಯ ಕಥೆ’ಯ ಪ್ರಾರಂಭದಲ್ಲಿಯೇ ಸುರೂಪೆ ಮತ್ತು ನಾಗದತ್ತನ ಮಗಳಾದ ‘ಸುಕೇಶಿನಿ’ಯ ವಿವರಗಳನ್ನು ತಿಳಿಸುವಾಗ ಕಥೆಗಾರ ಆಕೆಯನ್ನು “ ನವಯೌವನೆ ದೇವಗಣಿಕೆಯನೆ ಪೋಲ್ವಳ್” ಎಂದು ವರ್ಣಿಸುತ್ತಾನೆ. ‘ಹೆಣ್ಣು ಎಲ್ಲಾ ಕೆಡುಕುಗಳಿಗೆ ಮೂಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ‘ಮಹಾಭಾರತ’ ಕೃತಿಯು ರಚನೆಯಾದ ನೆಲದಲ್ಲಿಯೆ ಹುಟ್ಟಿದ ವಡ್ಡಾರಾಧನೆ ಕೃತಿ ಮತ್ತು ಕೃತಿಕಾರ ಇಲ್ಲಿ ಹೆಣ್ಣು ಮಗಳೊಬ್ಬಳನ್ನು “ದೇವಗಣಿಕೆಯನೆ ಪೋಲ್ವಳ್” ಎಂದು ಹೇಳುವುದು ನಿಜಕ್ಕೂ ಸ್ತ್ರೀ ಪರವಾದ ಹಾಗೂ ಆರೋಗ್ಯಯುತವಾದ ಸಮಾಜ ನಿರ್ಮಾಣದ ಅಂಶಗಳನ್ನು ತಿಳಿಸುತ್ತದೆ.             ಇದರಂತೆಯೆ ಈಕೆ ಒಂದು ದಿನ ದೇವರನ್ನು ಅರ್ಚಿಸಲೆಂದು ಚೈತ್ಯಾಲಯಕ್ಕೆ ಹೋಗಿರುವಂತಹ ಸಂದರ್ಭದಲ್ಲಿ ಆ ಊರಿನ ರಾಜನಾದ ಗಂಧಭಾಜ ಮಹಾರಾಜನು ಈಕೆಯನ್ನು ನೋಡಿ, ಆಕೆಯ ರೂಪು, ಯೌವನಗಳಿಗೆ ಆಶ್ಚರ್ಯಪಟ್ಟು, ಆಕೆಯ ತಂದೆ ತಾಯಿಗಳಿಗೆ ಹೇಳಿ ಕಳುಹಿಸಿ ವಿಚಾರಿಸಿ ಅವಳನ್ನು ಮದುವೆಯಾಗುತ್ತಾನೆ. ಇಲ್ಲಿ ಗಮನಿಸಬೇಕಾದ ಅಂಶ ಸುಕೇಶಿನಿಗೆ ಮದುವೆಯಾಗಲು ಮನಸ್ಫೂರ್ತಿಯಾಗಿ ಒಪ್ಪಿಗೆ ಇತ್ತೆ ?, ಅಥವಾ ಇರಲಿಲ್ಲವೆ ? ಎಂಬ ಅಂಶಗಳನ್ನು ಕಥೆಗಾರ ತಿಳಿಸಿಲ್ಲ. ಕಾರಣ ರಾಜನಾದವನು ಏನು ಆಜ್ಞಾಪಿಸುವನೋ ಅದರಂತೆ ಅವರೆಲ್ಲ ನಡೆಯುವವರಾಗಿದ್ದರೆಂಬುದು ತಿಳಿಯುತ್ತದೆ. ಅಲ್ಲದೆ ಹೆಣ್ಣನ್ನು ಒಂದು ಸರಕು ಮತ್ತು ಭೋಗದ ವಸ್ತು ಎಂಬಂತೆಯೇ ಪರಿಗ್ರಹಿಸಿರುವ ಸಾಂಪ್ರದಾಯಿಕ ದೃಷ್ಟಿಕೋನ ಕಂಡುಬರುತ್ತದೆ. ಇಲ್ಲಿ ಸುಕೆಶಿಯನ್ನು ಕಂಡ ತಕ್ಷಣವೇ ವಿವಾಹವಾಗಲು ಆಸೆಪಡುವ ರೀತಿಯು ಪಂಪಭಾರತದಲ್ಲಿ ಸತ್ಯವತಿಯನ್ನು ಕಂಡ ತಕ್ಷಣ “ಬಾ ಪೋಪಮ್”É ಎಂದು ಆಕೆಯ ಕೈಯನ್ನು ಹಿಡಿಯುವ ಶಂತನುವನ್ನು ನೆನಪಿಗೆ ತರುತ್ತದೆ.             ಕತೆಯಲ್ಲಿ “ಮಲಯ ಕೊಂಬುಗಳುಮಂ ಮುತ್ತುಗಳುಮಂ ಕೊಳ್ಳೆಂದು ಸುಕೇಶಿನಿಯ ಮುಂದೆ ತಂದಿಟ್ಟಾಗ ಸುಕೇಶಿಯುಂ ಹಾ ಮಲಯ ಸುಂದರಾ ಹಾ ಎನ್ನ ನಲ್ಲನೆ ಹಾ ಎನ್ನ ಮಲಯಸುಂದರನಪ್ಪ ಸ್ವಾಮಿಯೆಂದು ಪ್ರಳಾಪಂಗೆಯ್ದು ಎರಡು ಕೊಂಬುಗಳುಮಂ ತಳ್ಕೈಸಿಯಾದಮಾನುಂ ಬಿಗಿದಪ್ಪಿಕೊಂಡು ಸತ್ತಳ್” ಎಂಬ ಈ ಸಾಲುಗಳನ್ನು ಗಮನಿಸಿದಾಗ ತನ್ನ ಹಿಂದಿನ ಜನ್ಮದಲ್ಲಿ ಪತಿಯಾಗಿದ್ದ ಮಲೆಯಸುಂದರನು ಈಗಿನ ಜನ್ಮದಲ್ಲಿ ಆನೆಯಾಗಿದ್ದು, ಅದು ಸತ್ತಾಗ ಆಕೆ ದುಃಖಪಡುವ ರೀತಿ ಆದರ್ಶ ಜೀವನ ಪ್ರೀತಿಯನ್ನು ನಮ್ಮ ಗಮನಕ್ಕೆ ತಂದುಕೊಡುತ್ತದೆ.             ಕತೆಯಲ್ಲಿ ಮುಂದುವರೆದು ಆರ್ಯನಂದಿಸೆಟ್ಟಿ ಮತ್ತು ಪರದಿಯವಿಧಿಯರ ಮಗಳಾದ ಸುಕೀರ್ತಿಯನ್ನು ಪ್ರಿಯದರ್ಶನನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಒಮ್ಮೆ ಪ್ರಿಯದರ್ಶನನು ಕಾಳಿಂಗ ನಾಗವು ಕಚ್ಚಿ ಸತ್ತಾಗ ಸುಕೀರ್ತಿಯು ಸುರಿಗೆಯಿಂದ ತಾನಿರಿದುಕೊಂಡು ಸಾವನ್ನಪ್ಪುತ್ತಾಳೆ. ಇಲ್ಲಿ ಆದರ್ಶ ದಾಂಪತ್ಯ ಹಾಗೂ ಪ್ರೇಮದ ಉತ್ಕಟತೆಯ ಪರಂಪರಾಗತವಾದ ಕಲ್ಪನೆಗಳು ಇದ್ದರೂ ಆಕೆ ಮಾಡಿದ ತಪ್ಪಾದರೂ ಏನು?. ಹಿಂಸೆಯನ್ನು ವಿರೋಧಿಸವ ಜೈನಧರ್ಮವು ಕೂಡ ಹಿಂದೂ ಧರ್ಮದಲ್ಲಿರುವ ಸತಿಸಹಗಮನ ಪದ್ಧತಿಯಂತಹ ಆತ್ಮಾರ್ಪಣಾ ಸನ್ನಿವೇಶಗಳಿಗೆ ಅವಕಾಶವನ್ನು ನೀಡಿತ್ತೆ ? ಎಂಬಂತಹ ಪ್ರಶ್ನೆಗಳು ಮೂಡುತ್ತವೆ.             ಮುಂದುವರೆದು “ಮತ್ತೊಂದು ದಿವಸಂ ಶ್ರೀಧರಂ ಕುಬೇರಕಾಂತನೊಡನೆ ಮ¾ಲುಂದಿಯಾತನ ರತ್ನಕಂಬಳಮಂ ಪೊದೆದು ತನ್ನ ಮನೆಗೆ ಬಪ್ರ್ಪೊನ್ನಂ ಕಂಡು ಸವತಿಯೊಳಪ್ಪ ಶಂಕೆಯಿಂದಂ ಪ್ರಾಸಾದದ ಮೇಗಣಿಂದಂ ನೆಲಕ್ಕಿಕ್ಕಿ ಬಿ¿õÀ್ದು ಸತ್ತೊಳ್” ಅಂದರೆ ಮತ್ತೊಂದು ದಿನ ಶ್ರೀಧರನು ಕುಬೇರಕಾಂತನೊಡನೆ ನಿದ್ರೆಮಾಡಿ ಅವನ ರತ್ನಕಂಬಳಿಯನ್ನು ಹೊದೆದುಕೊಂಡು ತನ್ನ ಮನೆಗೆ ಬಂದನು. ಅವನನ್ನು ಕುಬೇರಶ್ರೀ ಕಂಡು ತನ್ನ ಗಂಡ ಸವತಿಯಲ್ಲಿ ಆಸಕ್ತನಾಗಿರುವನು ಎಂಬ ಸಂಶಯದಿಂದ ಮೇಲುಪ್ಪರಿಗೆಯಿಂದ ಕೆಳ ನೆಲಕ್ಕೆ ಹಾರಿ ಬಿದ್ದು ಸತ್ತಳು. ಎಂಬ ಅಂಶವನ್ನು ಗಮನಿಸಿದಾಗ ಆ ಕಾಲದಲ್ಲಿನ ಹೆಣ್ಣುಗಳಲ್ಲಿನ ಸವತೀ ಮಾತ್ಸರ್ಯದ ಗುಣಗಳು ಹಾಗೂ ಅಂದಿನ ಸಮಾಜದಲ್ಲಿ ಬಹುಪತ್ನಿತ್ವ ವ್ಯವಸ್ಥೆ ಜಾರಿಯಲ್ಲಿದ್ದ ಸಂಗತಿಗಳು ತಿಳಿಯುತ್ತವೆ. ಹಾಗೆಯೆ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡದೆ ಪ್ರಾಣ ಕಳೆದುಕೊಳ್ಳುವ ಕುಬೇರಶ್ರೀಯಂತಹ ಹೆಣ್ಣು ಮಕ್ಕಳಿದ್ದದ್ದೂ ಸಹ ಇದರಿಂದ ತಿಳಿಯುತ್ತದೆ.             ಕಥೆಯಲ್ಲಿ ಮುಂದುವರೆದು ಮನೋಹರಿಯನ್ನು ಯಾರಿಗೆ ಕೊಟ್ಟು ಮದುವೆ ಮಾಡೋಣ ಎಂದು ಅತಿರಥ ಮಹಾರಾಜನು ಮಂತ್ರಿಗಳೊಂದಿಗೆ ಸಮಾಲೋಚಿಸಿದಾಗ ಕುಬೇರಕಾಂತನ ತಂದೆಯಾದ ವಿಜಯನೆಂಬ ಮಂತ್ರಿಯು ಉಳಿದ ಮಂತ್ರಿಗಳು ಹೇಳಿದ ಮದುಮಕ್ಕಳ ಹೆಸರುಗಳನ್ನು ತಿರಸ್ಕರಿಸಿ “ಕೂಸಿಂಗೆ ಸ್ವಯಂಬರಮಂ ಪಣ್ಣುವಂ ಸ್ವಯಂಬರದೊಳ್ ತನ್ನ ಭಾಗ್ಯದೊಳ್ ಮೆಚ್ಚಿದವರಂ ಕಯ್ಗೊಳ್ಗೆಂದು ನುಡಿದೊಡರಸನು ಮಾತಿಂಗೆ ಒಡಂಬಟ್ಟು” ಸ್ವಯಂವರವನ್ನು ಏರ್ಪಡಿಸಿದನು. ಇಲ್ಲಿ ಮನೋಹರಿ ಯಾರನ್ನೂ ಮೆಚ್ಚದೆ “ದಾಂಟಿ ಪೋಗಿ ಕುಬೇರಕಾಂತಂಗೆ ಮಾಲೆಯಂ ಸೂಡಿದಾಗ” ಅರಸುಗಳೆಲ್ಲರು ಬಡವನಿಗೆ ಏನು ಅಲ್ಲದವನಿಗೆ ಮಾಲೆಯನ್ನು ಹಾಕಿದಳೆಂದು ಸಂಗ್ರಾಮದೊಳಗೆ ಯುದ್ಧಕ್ಕೆ ನಿಂತಾಗ ಸುವಮ್ರ್ಮವಮ್ರ್ಮಂ ಮೊದಲಾದವರು ಗೆದ್ದು ಮನೋಹರಿಯನ್ನು ಕುಬೇರಕಾಂತನಿಗೆ ವಿವಾಹ ಮಾಡಿಕೊಡಲಾಯಿತು. ಇಲ್ಲಿ ಹೆಣ್ಣು ತಾನು ಆಸೆ ಪಟ್ಟವನನ್ನು ಮದುವೆಯಾಗಲು ಅವಕಾಶವಿರುವುದು ಕಂಡುಬರುತ್ತದೆ. ಇಲ್ಲಿ ಗಮನಿಸಬೇಕಾದುದು ಈಕೆ ರಾಜನ ಮಗಳಾಗಿರುವ ಕಾರಣವಾಗಿ ಈಕೆಗೆ ತನ್ನ ಗಂಡನಾಗುವವನನ್ನು ಆಯ್ಕೆ ಮಾಡಲು ಅವಕಾಶವಿತ್ತೆಂಬುದು ತಿಳಿಯುತ್ತದೆ. ಆದರೆ ಸಾಮಾನ್ಯ ವರ್ಗದ ಹೆಣ್ಣುಗಳಿಗೆ ಈ ಆಯ್ಕೆಗಳಿದ್ದವೆ ಎಂಬುದು ಚರ್ಚಿಸುವಂತಹ ಸಂಗತಿ. ಏಕೆಂದರೆ ಸುಕೇಶಿನಿಯನ್ನು ಜಿನಾಲಯದಲ್ಲಿ ಕಂಡು ಆಕೆಯನ್ನು ಮದುವೆಯಾಗ ಬಯಸುವ ಗಂಧಭಾಜನ ರಾಜನ ಸಂದರ್ಭದಲ್ಲಿ ಸುಕೇಶಿಗೆ ಮನೋಹರಿಗಿದ್ದಂತಹ ಯಾವುದೇ ಸ್ವಾತಂತ್ರ್ಯಗಳಿಲ್ಲದೆ ಇರುವ ಅಂಶಗಳು ನಮ್ಮ ಗಮನಕ್ಕೆ ಬರುತ್ತದೆ.             ಈ ಕಥೆಯಲ್ಲಿನ ಪತಿ ಪತ್ನಿಯರು ಸುಖ ಸಂತೋಷಗಳಿಂದ ಕಾಲವನ್ನು ಕಳೆಯುವ ಚಿತ್ರಣವಿದೆ. ಸಿದ್ಧಾರ್ಥ ಮತ್ತು ಆತನ ಪತ್ನಿ ಶ್ರೀಕಾಂತೆಯರು “ಸಂಸಾರದ ಪೊಲ್ಲಮೆಯುಮನನಿತ್ಯತೆಯುಮಂ ಬಗೆದು ವೈರಾಗ್ಯಪರರಾಗಿ ಇವ್ರ್ವರುಂ ತಪಂ ಬಡುವ ಬುದ್ಧಿಯನೊಡೆಯರಾಗಿ” ಎಂಬ ಮಾತುಗಳನ್ನು ನೋಡಿದಾಗ ಇಲ್ಲಿ ಗಂಡಿನಂತೆ ಹೆಣ್ಣಿಗೂ ತಪವನ್ನು ಕೈಗೊಳ್ಳಲು ಸಮಾನ ಅವಕಾಶಗಳಿರುವುದು ಕಂಡುಬರುತ್ತದೆ. ಅಲ್ಲದೆ ಸಿದ್ಧಾರ್ಥನ ಹಿರಿಯ ಅರಸಿ ಜಯಾವತಿ ಎಂಬುವವಳು ಮಕ್ಕಳನ್ನು ಬೇಡಿ ದೇವರು ದೇವತೆಗಳನ್ನು ಪರಸಿ ಪೂಜಿಸುವ ಚಿತ್ರಣವಿದೆ.             ಜಯಾವತಿ ಗರ್ಭಿಣಿಯಾಗಿ ನೆಲಮಾಳಿಗೆಯೊಳಗೆ ಮಗನನ್ನು ಹೆತ್ತು ತಾನು ಮತ್ತು ದಾದಿ ಅಲ್ಲಿ ಕೆಲವು ಕಾಲವನ್ನು ಕಳೆಯುತ್ತಿರುತ್ತಾಳೆ. ಇವಳ ಸೇವೆ ಮಾಡುತ್ತಿದ್ದ ತೊ¿õÀ್ತು ಒಂದು ದಿನ ನೀರನ್ನು ತರಲು ಹೋದಲ್ಲಿ ಈಕೆಯ ಗೆಳತಿ ನಾಗಬ್ಬೆಯೆಂಬಾಕೆ ಈಕೆಯನ್ನು ಕಂಡು ಹಲವು ದಿನಗಳಿಂದ ನಿನ್ನನ್ನು ಕಾಣಲಿಲ್ಲವಲ್ಲವೆಂದು ಕೇಳಿದಾಗ ತೊ¿õÀ್ತು ನೀನಾರಿಗೂ ಹೇಳಬಾರದು ಎಂದು ಹೇಳಿ ತನ್ನ ಒಡತಿ ಸಟ್ಟಿತಿ ಜಯಾವತಿ ಬೆಸಲೆಯಾಗಿರುವ ವಿಚಾರವನ್ನು ತಿಳಿಸಿ ಆಕೆ ಯಾರೂ ಅರಿಯಬಾರದೆಂದು ನೆಲಮನೆಯೊಳಗೆ ಅಡಗಿದ್ದಾಳೆಂದು ಹೇಳುತ್ತಾಳೆ. ಈ ಮಾತುಗಳು ಹೆಣ್ಣು ಮಕ್ಕಳಲ್ಲಿ ಗುಟ್ಟು ನಿಲ್ಲುವುದಿಲ್ಲವೆಂಬುದನ್ನು ತಿಳಿಸುತ್ತದೆ.             “ಸುಕೌಳಸ್ವಾಮಿಯಂ ಮೊಲೆಯೂಡುವ ದಾದಿ ಸುಬ್ರತೆಯೆಂಬೊಳ್ ಸುಮತಿಯೆಂಬೊಳೂಡುವ ದಾದಿ ನಂದೆಯೊಂಬೊಳಾಡಿಸುವ ದಾದಿ ಸುಪ್ರಭೆಯೆಂಬೊಳ್ ಮಜ್ಜನಂಬುಗಿಸುವ ದಾದಿ ಮೇಘಮಾಲೆಯೆಂಬೊಳ್ ಪಸದನಂಗೊಳಿಸುವ ದಾದಿ ಇಂತಯ್ವರ್ ದಾದಿಯಕ್ರ್ಕಳ್” ಈ ಸಾಲುಗಳನ್ನು ಪರಾಮರ್ಶಿಸಿದಾಗ ಇಲ್ಲಿ ಸುಕೌಶಳ ಸ್ವಾಮಿಯ ಲಾಲನೆ ಪಾಲನೆ ದಾದಿಯದಾಗಿರುವುದು ಹಾಗೂ ರಾಣಿಯರ ಜೊತೆ ದಾದಿಯರೂ ಕೂಡ ಹಾಲೂಡುವ ತಾಯಿಯರಾಗುತ್ತಿದ್ದರೆಂಬುದಕ್ಕೆ ಇಲ್ಲಿ ಸುಕೌಶಳಸ್ವಾಮಿಗೆ ಮೊಲೆಯೂಡುವ ದಾದಿ ಸುಬ್ರತೆಯೆಂಬುವವಳ ವಿವರಗಳು ನಮಗೆ ಸಾಕ್ಷಿಯಾಗಿವೆ. ಅಲ್ಲದೆ ಅರಮನೆಯೊಳಗೆ ಸೇವೆ ಸಲ್ಲಿಸುತ್ತಿದ್ದ ಹೆಣ್ಣುಗಳ ಸ್ಥಿತಿ ಹೇಗಿತ್ತೆಂಬುದೂ ಸಹ ಇದರಿಂದ ನಮಗೆ ತಿಳಿಯುತ್ತದೆ.             ಕಥೆಯಲ್ಲಿ ಸುಕೌಶಳಸ್ವಾಮಿಗೆ 32  ಮಂದಿ ರಾಜಕುಮಾರಿಯರನ್ನು ಅತಿಶಯವಾದ ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿದವರನ್ನು, ಕೇಳಿ ತಂದು ಒಂದೇ ಹಸೆಯಲ್ಲಿ (ಏಕಕಾಲದಲ್ಲಿ) ಜಯಾವತಿ ಮದುವೆ ಮಾಡಿಸುತ್ತಾಳೆ. ಜಯಾವತಿ ತನ್ನ ಮಗನಿಗೆ ಯಾವುದೇ ಕಾರಣಕ್ಕೂ ವೈರಾಗ್ಯದ ಕಡೆ ಮನಸ್ಸು ಬಂದು ತಪಸ್ವಿಯಾಗದಂತೆ ತಡೆಯಲು ಸದಾ ಸುಖದಲ್ಲಿ, ಭೋಗದಲ್ಲಿಯೆ ಆತ ಕಾಲ ಕಳೆಯುವಂತೆ ಮಾಡಲು ಈ ರೀತಿ ಮಾಡುತ್ತಾಳೆ. ಆದರೆ ಇಲ್ಲಿ ಗಮನಿಸಬೇಕಾದುದು ಅಂದು ಬಹು ಪತ್ನಿತ್ವ ಪದ್ಧತಿ ಜಾರಿಯಲ್ಲಿತ್ತು ಎಂಬುದು ಹಾಗೂ ಅಷ್ಟೂ ಹೆಣ್ಣು ಮಕ್ಕಳಿಗೆ ಸುಕೌಶಳಸ್ವಾಮಿಯನ್ನು ವಿವಾಹವಾಗಲು ಅವರಿಗೆ ಮನಸ್ಫೂರ್ತಿಯಾದ ಒಪ್ಪಿಗೆ ಇತ್ತೇ ? ಎಂಬುದು. ಜೊತೆಗೆ ಮುಂದೆ ಸುಕೌಶಳಸ್ವಾಮಿಯು ವೈರಾಗ್ಯಪರನಾಗಿ ತಪಸ್ಸಿಗೆ ಹೋಗುವಾಗ ಇವರೆಲ್ಲರನ್ನು ಬಿಟ್ಟು ಹೋಗುತ್ತಾನೆ. ಇಲ್ಲಿ ಇವರು ಮಾಡಿದ ತಪ್ಪುಗಳಾದರೂ ಏನು ? ಎಂಬುದು.             ಅಲ್ಲದೆ ಜಯಾವತಿಯು ತಾನು ಎಷ್ಟೇ ಬೇಡವೆಂದು ತಡೆದರೂ ಸಹ ಸುಕೌಶಳಸ್ವಾಮಿಯು ತಪಸ್ಸಿಗೆ ಹೋದಾಗ ತಾಯಿಯಾದ ಜಯಾವತಿಯು ಅತಿಯಾಗಿ ಕೋಪಗೊಳ್ಳುತ್ತಾಳೆ. ಜೈನ ಧರ್ಮವನ್ನು ನಿಂದಿಸುತ್ತಾಳೆ. ಕುಟಿಲವಾದ ಉಪದೇಶದಿಂದ ಆರ್ತಧ್ಯಾನದಲ್ಲಿ ಸತ್ತು ಮೊಗ್ಗುಳಗಿರಿ ಎಂಬ ಪರ್ವತದಲ್ಲಿ ಹೆಣ್ಣು ಹುಲಿಯಾಗಿ ಹುಟ್ಟುತ್ತಾಳೆ. ಇಲ್ಲಿ ಹೆಣ್ಣಿನ ಮನದ ಸಿಟ್ಟು ಹಾಗೂ ಸೇಡಿನ ಭಾವಗಳು ನಮಗೆ ತಿಳಿಯುತ್ತದೆ. ಹೆಣ್ಣು ಹುಲಿಯಾಗಿದ್ದ ಈಕೆ ತನ್ನ ಮಗನನ್ನೆ ತಿಂದ ತಪ್ಪಿಗೆ ಆ ಹೆಣ್ಣು ಹುಲಿ ಮನೋನಿಗ್ರಹಕ್ಕೆ ಒಳಗಾಗಿ ಬದುಕಿರುವವರೆಗೂ ಆಹಾರವನ್ನು ನಿವೃತ್ತಿಗೊಳಿಸಿ ಶುಭಕರವಾದ ಪರಿಣಾಮದಲ್ಲಿ ಕೂಡಿ, ಸತ್ತು ಸೌಧರ್ಮವೆಂಬ ಕಲ್ಪದಲ್ಲಿ ಹುಟ್ಟಿತು. ಇಲ್ಲಿ ಹುಲಿಯಂತಹ ಪ್ರಾಣಿಗೂ ಸಹ ತಪಸ್ಸನ್ನು ಕೈಗೊಳ್ಳಲು, ಉತ್ತಮ ಭವವನ್ನು ಹೊಂದಲು ಅವಕಾಶವಿರುವುದು ತಿಳಿಯುತ್ತದೆ.             ಇದರಂತೆ ಗಂದಭಾಜನನ ದೇವ ಸ್ತ್ರೀಯರಿಗೆ ಸಮಾನರಾದ ನೂರು ಮಂದಿ ರಾಣಿಯರು ಯಶೋಧರ ಕೇವಲಿಗಳನ್ನೇ ಗುರುಗಳನ್ನಾಗಿ ಮಾಡಿಕೊಂಡು ಪದ್ಮಾವತಿ ಕಂತಿಯರು ಮಾರ್ಗದರ್ಶನವಾಗುವ ಸನ್ಯಾಸಿನಿಯರಾಗಿರಲು ತಪಸ್ಸು ಮಾಡಿ ಸಮಾಧಿ ಮರಣದಿಂದ ಸತ್ತು ಸೌಧರ್ಮ ಮುಂತಾಗಿ ಇರತಕ್ಕ ದೇವಲೋಕದಲ್ಲಿ ಹುಟ್ಟಿದರು. ಹೀಗೆ ಇಲ್ಲಿನ ಹೆಣ್ಣುಗಳಿಗೆ ತಪಸ್ಸಿಗೆ ಅವಕಾಶವಿದ್ದು ಉತ್ತಮ ಭವಗಳನ್ನು ಪಡೆಯುವ ಸಂಗತಿಗಳಿವೆ. ಆಕರ ಕೃತಿಗಳು ಕೇಶವ ಭಟ್ಟ. ಟಿ (ಗ)-‘ಶಿವಕೋಟ್ಯಾಚಾರ್ಯರ ವಡ್ಡಾರಾಧನೆ’,2011,ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಡಾ.ನರಸಿಂಹಾಚಾರ್.ಡಿ.ಎಲ್,‘ಶಿವಕೋಟ್ಯಾಚಾರ್ಯವಿರಚಿತವಡ್ಡಾರಾಧನೆ’,1949, ಡಿ.ವಿ.ಕೆ.ಮೂರ್ತಿ ಪ್ರಕಾಶನ::ಮೈಸೂರು.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal