Tumbe Group of International Journals

Full Text


ಹೀಗೊಂದು ಶುನಕ ಪಾಲನೆ ರಮ್ಯ. ಎನ್, ಉಪನ್ಯಾಸಕರು, ಕನ್ನಡ ವಿಭಾಗ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಲಯ, ಮಂಡ್ಯ.             ಎದುರು ಮನೆ ದ್ಯಾವಣ್ಣನವರ ನಾಯಿಯ ಆಟ ಪಾಠಗಳು ಅದು ಶೇಕ್ ಹ್ಯಾಂಡ್ ಮಾಡುತ್ತಿದ್ದ ಬಗೆ ಎಲ್ಲವೂ ನನ್ನ ಮಕ್ಕಳ ಮೇಲೆ ಪ್ರಭಾವ ಬೀರಿತು ನೋಡಿ. ನಮ್ಮ ಮನೆಯಲ್ಲೂ ನಾಯಿ ತಂದು ಸಾಕುವ ಆಸೆ ಸ್ಫುರಿಸಿಬಿಟ್ಟಿತು. ಅದಕ್ಕಾಗಿ ಮನೆಯಲ್ಲಿ ಮಾತುಕತೆಗಳು ನಡೆದು ನಾಯಿ ತರುವ ನಿರ್ಧಾರವೂ ಆಯಿತು.             ನಾಯಿ ಸಾಕುವ ವಿಚಾರದ ಪ್ರಸ್ತಾಪ ಆದಾಗಿನಿಂದಲೂ ನನಗೆ ಬಾಲ್ಯದಲ್ಲಿ ನಾನು ಕಂಡ ಆ ವೀರ ನಾಯಿಯ ನೆನಪಾಗತೊಡಗಿತು ನೋಡಿ. ನಮ್ಮದು ಹಳ್ಳಿ. ಯಾರ ಮನೇಲಿ ನಾಯಿ ಸಾಕಿರದಿದ್ದರೂ ನಮ್ಮ ಮನೇಲಿ ಮಾತ್ರ ಒಂದು ನಾಯಿ ಸಾಕಿದ್ದೆವು. ನಮ್ಮ ಆ ನಾಯಿ ಕುತ್ತಿಗೆಗೆ ಒಂದು ಸರಪಳಿ ಹಾಕಿ ಜಗುಲಿಯ ಕಂಬಕ್ಕೆ ಕಟ್ಟುತ್ತಿದ್ದೆವು. ಮನೆ ಮೆಟ್ಟಿಲನ್ನು ಯಾರಾದರೂ ಮೆಟ್ಟಿದರೆಂದರೆ ಬೌ ಬೌ ಮೊಳಗಿಸಿಬಿಡುತ್ತಿತ್ತು. ಬೀದಿಯಲ್ಲಿ ಹೋಗೋರು ಬರೋರ ತಕರಾರಿಗೆ ಹೋಗದೆ ಮೌನಾವತಾರವನ್ನು ತಾಳುತ್ತಿತ್ತು. ಆದರೆ ಶೆಟ್ರ ಬೀದಿ ಸೀನ, ಟಿಟಿಬ ಇವರಿಬ್ಬರಲ್ಲಿ ಯಾರಾದರೂ ಬೀದಿಗೆ ಪ್ರವೇಶಿಸಿದರೆಂದರೆ ರಣಕಹಳೆಯನ್ನೆ ಊದಿಬಿಡುತ್ತಿತ್ತು. ನಾಯಿ ಕ್ಷಣ ಮಾತ್ರದಲ್ಲಿ ಹುಲಿಯಾಗಿ ಅವರ ಮೇಲೆ ಎರಗುವ ಪ್ರಯತ್ನ ಮಾಡುತ್ತಿತ್ತು. ಆ ಟಿಟಿಬಳ ನಿಜವಾದ ಹೆಸರೆ ಬೇರೆ ಇತ್ತು ನೋಡಿ. ಅದು ಅವಳ ಅಡ್ಡ ಹೆಸರು. ಅದೇಕೆ ಅವಳಿಗೆ ಆ ಹೆಸರಿಟ್ಟಿದ್ದಾರೆ ಎಂದು ನಾನು ನಮ್ಮಮ್ಮನನ್ನು ಪ್ರಶ್ನಿಸಿದ್ದೆ. ಅದಕ್ಕವರು ಅದು ಒಂದು ಪಕ್ಷಿಯ ಹೆಸರು ಅಂತ ಹೇಳಿದ್ದರು. ಆಕೆ ನಮ್ಮ ಪಕ್ಕದ ಮನೆಯಲ್ಲಿದ್ದ ತನ್ನ ಪ್ರಿಯತಮನನ್ನು ನೋಡಲು ಬಂದು ಅನುಮಾನಸ್ಪದವಾಗಿ ಸುಳಿದಾಡುತ್ತಿದ್ದದ್ದು ನಮ್ಮ ನಾಯಿಯನ್ನು ಕೆಂಡಮಂಡಲವಾಗಿಸುತ್ತಿತ್ತು. ಇನ್ನು ಆ ಸೀನನ ನಿಜನಾಮ ಶ್ರೀನಿವಾಸ. ಹುಟ್ಟಿದಾಗ ಅತ್ತರೆ ಬಿಳ್ಳಿ ತೊಟ್ಟಿಲು ಕರೆಯುತ್ತಿತ್ತು. ಹಸಿದರೆ ಚಿನ್ನದ ಚಮಚ ಕಾಯುತ್ತಿತ್ತು. ಅಂತಹ ದೊಡ್ಮನೆ ಹುಡುಗ. ಆದರೆ ಪರಿಸ್ಥಿತಿ ಹದಗೆಟ್ಟು ಕಳ್ಳತನ ಕಲ್ತು ಕೆದರಿದ ತಲೆಗೆ ಬಾಚಣಿಗೆಯನ್ನು ಸೋಕಿಸದೆ ಹುಚ್ಚನ ರೀತಿ ಅಲೆದಾಡುತ್ತಿದ್ದ. ಇವನನ್ನು ನೋಡಿದರೆ ನಮ್ಮ ನಾಯಿಗೆ ಆಗ್ತಾ ಇರಲಿಲ್ಲ ನೋಡಿ. ಇವರಿಬ್ಬರಿಗೂ ನಮ್ಮ ನಾಯಿ ಸಿಂಹಸ್ವಪ್ನ.             ಇನ್ನು ನಮ್ಮ ಮನೆ ಚಾವಡಿ ಇದ್ದ ಹಾಗೆ. ಯಾರಾದರು ಹೋಗೋರು ಬರೋರು ಇರುತ್ತಲೇ ಇದ್ದರು. ನಾಯಿ ಅವರಿಗೆಲ್ಲ ಮುಳ್ಳಾಗಿತ್ತು. ಇದರ ಉಪಟಳ ತಡೆಯಲಾರದೆ ಕೆಲವರು ನಾಯಿಯನ್ನು ಕೊಲೆ ಮಾಡಲು ಪಿತೂರಿ ನಡೆಸಿದರು. ಈ ಸಂದರ್ಭದಲ್ಲಿಯೇ ನಾಯಿ ಟಿಟಿಬಳನ್ನು ಕಚ್ಚಿ ಗಾಯಗೊಳಿಸಿಬಿಟ್ಟಿದ್ದು, ಅದರ ಕೊಲೆ ಸಂಚಿಗೆ ಮತ್ತಷ್ಟು ಕುಮ್ಮಕ್ಕು ದೊರೆತಂತಾಯಿತು. ನಮ್ಮ ಮನೆಯವರ ಅರಿವಿಗೆ ಬಾರದಂತೆ ಕೊಲೆಗೆ ಪೂರ್ವ ತಯಾರಿ ನಡೆಸಿದರು.             ಒಂದು ಸಾಯಂಕಾಲ ಕಿಡಿಗೇಡಿಗಳು ಒಬ್ಬಟ್ಟಿನ ಹೂರಣವನ್ನು ತಯಾರಿಸಿ ಅಪ್ರಯೋಜಕ ವಿದ್ಯುತ್ ಬಲ್ಫನ್ನು ಚಚ್ಚಿ ಪುಡಿಮಾಡಿ ಅದರೊಳಕ್ಕೆ ಸೇರಿಸಿ ನಾಯಿಗೆ ತಿನ್ನಿಸಿದರು. ಆಯಸ್ಸು ತುಂಬಿರದ ನಾಯಿಯ ಬಳಿಗೆ ಸಾವು ಸುಳಿಯಲಿಲ್ಲ. ಟಿಟಿಬಳ ಕಡೆಯವರು ಯಾರಿಗೂ ಗೊತ್ತಿಲ್ಲದ ಹಾಗೆ ನಾಯಿಯನ್ನು ಹಿಡಿದುಕೊಂಡು ಹೋಗಿ ಊರ ಹೊರಗಿನ ಪಾಳು ಬಾವಿಯಲ್ಲಿ ಬಿಟ್ಟುಬಿಡುವುದೆ? ಮನೆಯವರು ನಾಯಿಯನ್ನು ಹುಡುಕಾಡಿ ಬಾರದ ಲೋಕಕ್ಕೆ ತೆರಳಿದೆ ಎಂದು ಸುಮ್ಮನಾದರು. ನಾಯಿ ಕಾಣೆಯಾದ ಎರಡನೆ ದಿನಕ್ಕೆ ಅದು ಅಲ್ಲಿರುವ ವರ್ತಮಾನವನ್ನು ಯಾರೋ ತಂದು ಮನೆಗೆ ಮುಟ್ಟಿಸಿದರು. ಒಂದು ಮಂಕ್ರಿಗೆ ಹಗ್ಗ ಕಟ್ಟಿ ಬಾವಿಯೊಳಕ್ಕೆ ಇಳಿಬಿಟ್ಟರು. ಪ್ರಳಯಾಂತಕ ನಾಯಿ ಚೆಕ್ಕನೆ ನೆಗದು ಮಂಕ್ರಿಯೊಳಗೆ ಕುಳಿತುಕೊಂಡಿತಂತೆ. ನಾಯಿಯನ್ನು ಬದುಕಿಸಿ ಮನೆಗೆ ಕರೆತಂದಿದ್ದಾಯಿತು. ಎರಡು ದಿನಗಳ ಅಜ್ಞಾತ ವಾಸ ಮುಗಿಸಿದರೂ, ಗೃಹಬಂಧನ ಅದರ ಪಾಲಿಗಾಯಿತು. ಒಟ್ಟಿನಲ್ಲಿ ಈ ಬಾರಿಯೂ ನಾಯಿ ದಿಗ್ವಿಜಯ ಸಾಧಿಸಿ ಎದುರಾಳಿಗಳಿಗೆ ಮುಖಭಂಗ ಮಾಡಿದ್ದಂತು ಸತ್ಯ. ಅಂತಹ ಮೃತ್ಯುಂಜಯ ನಾಯಿ ಅದು. ನನಗೆ ಶಾಲೆಯಲ್ಲಿ ‘ಸೋಮನಗೌಡರ ನಾಯಿ’ ಪಾಠವನ್ನು ಕೇಳುತ್ತಿದ್ದಾಗಲೂ ನಮ್ಮ ನಾಯಿಯ ನೆನಪಾಗುತ್ತಿತ್ತು. ಸಾಕಿದರೆ ಅಂತದೊಂದು ವೀರನಾಯಿಯನ್ನು ಸಾಕಬೇಕು ಅನಿಸಿತು.             ಹೀಗೆ ವಾಯುವಿಹಾರ ಮಾಡುತ್ತ ಪಕ್ಕದ ಬೀದೀಲಿ ಒಂದು ದಿನ ಬರುತ್ತಾ ಇದ್ದೆ. ಅಲ್ಲೆ ಕಲ್ಪನಾ ಅವರ ಜೊತೆ ಮಾತನಾಡುತ್ತ ನಿಂತಿದ್ದೆ. ಅವರ ಮಗ ಒಂದು ಬೀದಿ ನಾಯಿ ಮರೀನ ಹಿಡ್ಕೊಂಡು ಸಾಕ್ತೀನಿ ಅಂತ ಓಡಾಡ್ತ ಇದ್ದ. ಕಲ್ಪನಾ ಅವರು ಮೋರಿ ಒಳಗೆ ಮಲಗಿದ್ದ ಆ ನಾಯಿ ಮರಿಯ ಸಹೋದರ ಸಹೋದರಿಯರ ಬಗೆಗೆ ಮಾತಾಡ್ತಾ ಹಾಗೆ ಕಾರ್ನರ್ ಮನೆ ಹೊನ್ನಮ್ಮನವರಿಗೆ ನಾಯಿಗಳ ಬಗ್ಗೆ ಇದ್ದ ನಿಲುವುಗಳನ್ನು ಕುರಿತು ಪ್ರಸ್ತಾಪಿಸತೊಡಗಿದರು. ಹೊನ್ನಮ್ಮನವರ ಮಗ ಆ ಮೋರಿ ಒಳಗೆ ಇದ್ದ ನಾಯಿ ಮರಿಗಳನ್ನು ಎತ್ತಿಕೊಂಡು ಹೋಗಿ ಸ್ಮಶಾನದ ಹತ್ತಿರ ಬಿಟ್ಟುಬಿಟ್ಟರಂತೆ. ತನ್ನ ಪರಿವಾರದಿಂದ ದೂರವಾಗಿರುವ ಈ ನಾಯಿ ಮರಿ ಸಪ್ಪೆಯಾಗಿದೆಯಂತೆ. “ಅವುಗಳ ಅಮ್ಮ ಗರ್ಭಿಣಿಯಾಗಿದ್ದಾಗ ನೋಡ್ರಿ ಹೊನ್ನಮ್ಮನವರು ಒಂದು ದಿನಕ್ಕೂ ಒಂದು ತುತ್ತು ಅನ್ನ ಹಾಕ್ಲಿಲ್ಲ ಕಣ್ರಿ. ಅನ್ನ ಮಿಕ್ಕಿ ಮೋರಿಗೆ ಹಾಕಿದ್ರು ಆ ನಾಯಿಗೆ ಮಾತ್ರ ಹಾಕ್ತಿರಲಿಲ್ಲ. ಮಗ ನಾಯಿ ಮರಿಗಳನ್ನು ಎತ್ತಿಕೊಂಡು ಹೋಗಿ ಬಿಡೋದ್ರಲ್ಲಿ ಮಾತ್ರ ಶೂರ”. ಎಂದು ಆದ್ಯಾವ ಕೋಪವಿತ್ತೊ ಹೊನ್ನಮ್ಮನವರ ಮೇಲೆ ನನ್ನ ಮುಂದೆ ಕಕ್ಕಿಬಿಟ್ಟರು.             ಅದೇ ಹೊತ್ತಿಗೆ ಕುತ್ತಿಗೆ ಮಾತ್ರ ನೇರವಾಗಿದ್ದು ಕಣ್ಣುಗಳು ಮಾತ್ರ ಅತ್ತಿತ್ತ ತೇಲಾಡುತ್ತಾ ಎಲ್ಲರನ್ನು ನೋಡುತ್ತಿದ್ದ ರಿಟೈರ್ಡ್ ಮಾಸ್ಟರ್ ನಾಗಣ್ಣನವರು ನಮ್ಮ ಹತ್ತಿರ ಬಂದರು. ನಾಯಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದು ಅವರಿಗೆ ತಿಳಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಏಕೆಂದರೆ ಅವರ ಶ್ರವ್ಯ ಉಪಕರಣ ಕಿವಿಯಲ್ಲೆ ಇತ್ತು. ಮೋರಿಯಿಂದ ದೂರ ಸರಿದ ನಾಯಿಗಳ ಬಗ್ಗೆ ಅವರು ಸಹ ಕನಿಕರ ವ್ಯಕ್ತಪಡಿಸಿದರು. ಮುಂದುವರೆದು “ನಮ್ಮ ಮನೇಲಿ ಒಂದು ನಾಯಿ ಇತ್ತು, ಅದು ಎಂಥಾ ಪತಿವ್ರತಾ ನಾಯಿ ಅಂತೀರಿ. ಒಂದು ಗಂಡು ನಾಯಿ ಬಂದ್ರು ಅದರ ಕಡೆ ನೋಡುತ್ತಿರಲಿಲ್ಲ” ಎಂದರು. ನಾನು ಮನಸ್ಸಿನಲ್ಲಿಯೇ ನಕ್ಕು ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿದ್ದ ಸಂಚಿ ಹೊನ್ನಮ್ಮನ ಮನೆಯ ನಾಯಿಯ ಕೊನೆಯ ಸಂತತಿ ಇದಾಗಿರಬೇಕು ಎಂದುಕೊಂಡೆ. ನನ್ನ ಮುಖದಲ್ಲಿ ಒಂದು ಸಣ್ಣ ನಗು ಸುಳಿದಾಡಿದ್ದನ್ನು ಕಂಡು ಕಲ್ಪನಾ ಅವರು “ನಮ್ಮ ಮನೇಲಿದ್ದ ನಾಯಿ ಹೊರಗಡೆ ಗಂಡು ನಾಯಿ ನೋಡಿದ್ರೆ ಒಳಗಡೇನೆ ನಿಂತು ಬಾಲ ಅಲ್ಲಾಡಿಸುತ್ತಿತ್ತು ಕಣ್ರಿ” ಎಂದರು. ಕಲ್ಪನಾರವರು ನಾಯಿಗಳ ಪ್ರಣಯ ಪ್ರಸಂಗವನ್ನು ಕುರಿತು ಚೆನ್ನಾಗಿ ಸಂಶೋಧನೆ ನಡೆಸಿದ್ದಾರೆ ಅನಿಸಿತು.             ಸರಿ ಒಂದು ಶುಭಗಳಿಗೆಯಲ್ಲಿ ದ್ಯಾವಣ್ಣನವರ ಮನೆಯ ನಾಯಿಯನ್ನು ಸೈಡ್ ಹೊಡೆಯುವಂತ ಒಂದು ಸುಂದರವಾದ ಜಾತಿ ನಾಯಿ ಮರಿಯನ್ನು ಹಣ ಕೊಟ್ಟು ತಂದದ್ದಾಯಿತು. ಆ ದ್ಯಾವಣ್ಣನವರ ನಾಯಿ ನನ್ನನ್ನೆ ಸೈಡ್ ಹೊಡೆದಿತ್ತು. “ನಮ್ಮ ನಾಯಿ ಏನೇ ತಿಂದ್ರು ನಿಮ್ಮ ಹಾಗೆ ದಪ್ಪ ಆಗೋಲ್ಲ” ಅನ್ನೋರು ದ್ಯಾವಣ್ಣ. “ನಾ ದಪ್ಪ ಆದ್ರು ಆದಾನು, ನಿಮ್ಮ ನಾಯಿ ದಪ್ಪ ಆಗಲಿಕ್ಕೆ ಸಾಧ್ಯವಿಲ್ಲ!” ಅಂದೆ ನೋಡಿ. ಅದೇ ಮಾತು ಅವರ ಕಿವಿಯಲ್ಲಿ ರಿಂಗಣಿಸತೊಡಗಿತು. ಹಠ ಮಾಡೇಬಿಟ್ರು. ದಿನವೂ ಒಂದೊಂದು ಕೋಳಿಮೊಟ್ಟೆ ತಿನ್ಸಿ ತಯಾರು ಮಾಡಿಬಿಟ್ರು. ನಾ ಮಾತ್ರ ನಾಯಿನ ಇವತ್ತಿಗೂ ಓವರ್‍ಟೇಕ್ ಮಾಡಕ್ಕಾಗಿಲ್ಲ ನೋಡಿ.! ಆದರೆ ದ್ಯಾವಣ್ಣನವರ ನಾಯಿ ಅಜಾತಶತ್ರು. ಯಾರು ಬಂದರೂ ಬೊಗಳುತ್ತಿರಲಿಲ್ಲ.             ನಾಯಿ ಮರಿ ಮನೆಗೆ ಹೊಸ ಅತಿಥಿಯಾಗಿ ಮಕ್ಕಳನ್ನು ತನ್ನ ಕಡೆಗೆ ಸೆಳೆದುಬಿಟ್ಟಿತು. ನಾಯಿ ಮರಿ ಮುಂದೆಯೇ ಕಾಲ ಕಳೆಯಲು ಮಕ್ಕಳು ಆರಂಭಿಸಿದರು. ಅದನ್ನು ಹೊತ್ತೊತ್ತಿಗೆ ಸುಸು ಮಾಡಿಸಲು, ಊಟ ಹಾಕಲು, ಬಿಸ್ಕತ್ ತಿನ್ನಿಸಲು, ವಾಕ್ ಮಾಡಿಸಲು ಇಬ್ಬರ ನಡುವೆ ಸಮರವೇ ನಡೆಯುತ್ತಿತ್ತು. “ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ” ಎಂದು ಹಾಡು ಹಾಡಿದರೆ ಅದರ ಪಾಡಿಗದು ಮಿಕಮಿಕನೆ ನೀಡುತ್ತಿತ್ತು. “ತಿಂಡಿ ಬೇಕು ತೀರ್ಥ ಬೇಕು ಎಲ್ಲಬೇಕು” ಹೇಳು, ಊ್ಞಂ ಹೇಳು ಅಂತ ಅದಕ್ಕೆ ಹೇಳಿಕೊಡುತ್ತಿದ್ದರು. ಓದುವುದು, ಬರೆಯುವುದು ಎಲ್ಲವೂ ಸ್ವಲ್ಪಮಟ್ಟಿಗೆ ದೂರವಾಯಿತು. ನಾಯಿಮರಿ ನೋಡಿಕೊಳ್ಳಲು ಶಾಲೆಗೆ ರಜೆ ಹಾಕುತ್ತೇವೆ ಎನ್ನುವ ಮಟ್ಟಿಗಾಯಿತು.             ನಾಯಿಮರಿಗೆ ‘ರಾಜಾಹುಲಿ’ ಎಂದು ನಾಮಕರಣವಾಗಿತ್ತು. ಪಕ್ಕದ ಮನೆ ಸ್ನೇಹಿತ ‘ಡಬ್ಬ ಇಲಿ’ ಎಂದು ಅಣಕ ಮಾಡಲಾಗಿ ಗೋಳೋ ಎಂದು ಅತ್ತೂ ಕರೆದು ಅವನನ್ನು ನಾಯಿಯಿಂದ ‘ಟೂ’ ಬಿಡಿಸಿ ತಾವು ‘ಟೂ’ ಬಿಟ್ಟರು. ಇತ್ತ ದ್ಯಾವಣ್ನನವರಿಗೋ ಒಂದು ರೀತಿ ಅಸೂಯೆ ಬೇರೆ. ಅವರಿಲ್ಲದಿದ್ದಾಗ ಅವರ ನಾಯಿಯ ಸಕಲ ಸೇವೆಗಳನ್ನು ಮಾಡುತ್ತಿದ್ದವರು ಇವರೇ ಅಲ್ಲವೆ?! ಈಗ ಈ ನಾಯಿಮರೀನ ಸಂತೈಸಲು ಸಮಯವೇ ಸಾಲುತ್ತಿರಲಿಲ್ಲವಲ್ಲ. ಪ್ರೀತಿಯೆಲ್ಲ ಈ ನಾಯಿ ಮರಿಯ ಕಡೆಗೆ ವಾಲಿಬಿಟ್ಟಿತ್ತು.             ಅಂತು ಇಂತು ನಾಯಿಮರಿ ಬೆಳೆದು ದೊಡ್ಡದಾಯಿತು. ನಮ್ಮ ಬೀದಿಲಿ ಬೀದಿನಾಯಿಗಳ ಒಂದು ಸೈನ್ಯವೇ ಓಡಾಡುತ್ತಿತ್ತು. ಅವುಗಳನ್ನು ಕಂಡರೆ ಸಮರ ಸಾರಿ ಬಿಡುತ್ತಿತ್ತು ರಾಜಾಹುಲಿ. ಒಂದು ಕರಿಬಣ್ಣದ ಪೆರಕಲು ನಾಯಿ ನಮ್ಮ ಮನೆಯ ಗಡಿ ಗೋಡೆಯ ಮೇಲೆ ಹತ್ತಿ ಸಂಚರಿಸುತ್ತಿತ್ತು. ಅದು ಮಕ್ಕಳನ್ನು ನೋಡಿದರೆ ಓಡಿಸಿಕೊಂಡು ಹೋಗುತ್ತಿತ್ತು. ಅದಕ್ಕೆ ಮಕ್ಕಳೆಲ್ಲ ಸೇರಿ ‘ಹುಚ್‍ನಾಯಿ’ ಎಂದು ಹೆಸರಿಟ್ಟಿದ್ದರು. ಅದನ್ನು ಕಂಡರೆ ಎಗರಿ ಬೀಳುತ್ತಿತ್ತು. ನಮ್ಮ ರಾಜಾಹುಲಿ. ಸರಪಳಿ ಬಿಚ್ಚಿ ಬಿಟ್ಟರೆ ಮನೆ ಹತ್ತಿರ ಓಡಾಡಿಕೊಂಡು ಬಂದು ಮನೆ ಸೇರುತ್ತಿತ್ತು.             ಹೀಗಿರಲು ಒಮ್ಮೆ ನಮ್ಮಣ್ಣ ಕಾರಿನಲ್ಲಿ ಹೊರಗಡೆ ಹೊರಟ. ಅವನು ಕಾರನ್ನು ಚಾಲನೆ ಮಾಡಿಕೊಂಡು ಹಿಂದೆ ತಿರುಗಿ ನೋಡದೆ ಹೊರಟುಬಿಟ್ಟಿದ್ದಾನೆ. ನಾವ್ಯಾರು ಹೊರಗಡೆ ಇರಲಿಲ್ಲ. ಒಂದು ಕಿಲೋಮೀಟರ್ ಹೋದ ನಂತರವೇ ಇವನಿಗೆ ಗೊತ್ತಾಯಿತು ನಾಯಿ ಹಿಂಬಾಲಿಸಿಕೊಂಡು ಬಂದಿರುವ ವಿಚಾರ. ಕಾರನ್ನು ನಿಲ್ಲಿಸಿ “ಮನೆಗೆ ಹೋಗು” ಎಂದು ನಾಯಿಯನ್ನು ಗದರಿಸಿದ್ದಾನೆ. ಅದು ಹಿಂದೆ ತಿರುಗಿ ಮಾರು ದೂರ ಹೋದದ್ದನ್ನು ಕಂಡು ಮನೆಗೆ ಹೋಗಬಹುದೆಂದು ಭಾವಿಸಿ ಕಾರು ಹತ್ತಿ ಹೊರಟು ಹೋದ. ಆದರೆ ನಾಯಿ ಅಜ್ಞಾತ ಪಯಣವನ್ನು ಬೆಳೆಸಿಬಿಟ್ಟಿತು. ನಾಯಿ ದಾರಿ ತಪ್ಪುವುದಿಲ್ಲ ಎಂಬ ಮಾತನ್ನು ಹುಸಿ ಮಾಡಿತು.             ದಾರಿ ತಪ್ಪಿದ ನಾಯಿ ಮನೆಯಲ್ಲಿ ಎಲ್ಲರನ್ನು ದುಃಖಿತರನ್ನಾಗಿಸಿತು. ಸ್ವಲ್ಪ ದಿನ ಮಕ್ಕಳಿಗಂತು ಬಹಳ ಬೇಸರವಾಯಿತು. ನಾಯಿ ಮರೆಯಲಾರದ ನೆನಪಾಯಿತು. ನಮ್ಮ ಬೀದಿಯಲ್ಲಿ ಓಡಾಡುತ್ತಿದ್ದ ಡೊಂಕು ಬಾಲದ ನಾಯಕರುಗಳಿಗೇನು ಕಡಿಮೆ ಇರಲಿಲ್ಲ. ಕಂದು ಮೈ ಬಣ್ಣದ ಬೆಕ್ಕಿನ ಕಣ್ಣಿನ ಒಂದು ನಾಯಿ ಬಹಳ ಆಕರ್ಷಕವಾಗಿತ್ತು. ತಮ್ಮ ಗುಂಪಿನಲ್ಲೇ ಬಹಳ ಸೌಂದರ್ಯವತಿ ಆ ನಾಯಿ. ಅದರ ಜೊತೆಯಲ್ಲೆ ಒಂದು ಕಪ್ಪು ಬಿಳಿ ಮಿಶ್ರಿತ ದಷ್ಟಪುಷ್ಟವಾದ ರಾಜಕಳೆಯಿಂದ ಮಿಂಚುತ್ತಿದ್ದ ಮತ್ತೊಂದು ಗಂಡು ನಾಯಿ ಸುತ್ತಾಡುತ್ತಿತ್ತು. ಅದಕ್ಕೆ ‘ರಂಗನಾಯಿ’ ಎಂದು ನಾಮಕರಣವಾಗಿತ್ತು. ಇವೆರಡರ ಹಿಂದೆ ಒಂದು ಕಪ್ಪು ಬಣ್ಣದ ನಾಯಿ ರಾಜಭಟನಂತೆ ಸುತ್ತಾಡುತ್ತಿತ್ತು. ಆ ನಾಯಿ ಈಗ ನನ್ನ ಮಕ್ಕಳ ಆಕರ್ಷಣೆಯಾಯಿತು.             ನಾಯಿಯ ವ್ಯಾಮೋಹ ಹೋಗಿರದ ಮಕ್ಕಳಿಗೆ ಆ ನಾಯಿಯನ್ನು ಸಾಕಬೇಕೆಂಬ ತವಕ ಮುಗಿಲುಮುಟ್ಟಿತು. ಸರಿ ನಿತ್ಯವು ಅದಕ್ಕೆ ಮಾಡಿದ ತಿಂಡಿ ಅಡುಗೆಗಳನ್ನು ಹಾಕಲಾಗಿ ಅದು ಬಾಲ ಅಲ್ಲಾಡಿಸಿಕೊಂಡು ನಮ್ಮ ಮನೆ ಜನರ ಹಿಂದೆಯೇ ತಿರುಗಾಡುತ್ತಿತ್ತು. ಅದಕ್ಕೆ ‘ಕರಿಯ’ ಎಂದು ಹೆಸರಿಡಲಾಯಿತು. ಯಾವಾಗಲೂ ಮನೆಯ ಬಾಗಿಲಲ್ಲೆ ಕಾಯುತ್ತಾ ಕುಳಿತಿರುತ್ತಿತ್ತು. ಅದಕ್ಕೊಂದು ಸರಪಳಿ ಹಾಕಿ ಕಟ್ಟಿ ಹಾಕಿದ್ದೆವು. ಅದು ಇರುವ ಜಾಗದಲ್ಲೆ ಮಲಮೂತ್ರ ವಿಸರ್ಜನೆ ಮಾಡತೊಡಗಿತು. ಜೊತೆಗೆ ಮನೆಯಲ್ಲಿ ಈಗ ಯಾರೂ ಇಲ್ಲದೆ, ನಾನು ಸಹ ಬೆಳಗ್ಗೆ ಹೋಗಿ ಸಾಯಂಕಾಲ ಬರುವ ಕಾರಣ ನಾಯಿಯನ್ನು ನೋಡಿಕೊಳ್ಳುವುದು ಕಷ್ಟಕರವಾಯಿತು. ಬೀದಿಯಲ್ಲಿ ಮೆರವಣಿಗೆಯಾಗುತ್ತಿದ್ದ ನಾಯಿಗೆ ಕಟ್ಟಿ ಹಾಕಿದ್ದು ಒಂದು ರೀತಿ ಕಿರಿಕಿರಿಯಾಯಿತು. ಇತ್ತ ನಮಗೂ ಕಷ್ಟವಾಯಿತು. ಕೊನೆಗೆ ನಾಯಿ ಸಾಕುವ ಆಸೆ ಕರಗಿಹೋಯಿತು. ನಾಯಿಯನ್ನು ಬಿಚ್ಚಿ ಬಿಡಲಾಯಿತು. ಆದರೂ ಅದು ನಮ್ಮನ್ನು ತೊರೆಯಲಿಲ್ಲ. ಅದು ಇಂದಿಗೂ ಎಲ್ಲೆಂದರಲ್ಲಿ ವಿಹರಿಸಿಕೊಂಡು ಬಂದು ನಮ್ಮ ಮನೆಯಲ್ಲಿ ಹಾಕುವ ಆಹಾರವನ್ನು ತಿಂದು ಗಡಿಗೋಡೆಯ ಒಳಭಾಗದಲ್ಲಿ ತಂಗುತ್ತದೆ. ಮನೆಯ ಹತ್ತಿರ ಯಾರಾದರೂ ಬಂದರೆಂದರೆ ಯಾರನ್ನು ಸೇರ ಬಿಡುವುದಿಲ್ಲ. ಎಷ್ಟೆ ಆದರೂ ನಿಯತ್ತಿಗೆ ಹೆಸರಾದ ಪ್ರಾಣಿಯಲ್ಲವೆ?             ಮೊನ್ನೆಯಷ್ಟೇ ನಾಗಣ್ಣ ಮಾಸ್ತರರ ಮನೆ ಮುಂದೆ ವಾಯುವಿಹಾರ ಮಾಡುತ್ತಾ ಬಂದೆ. ಅವರ ಗೇಟಿನ ಮುಂಭಾಗ ಸುಮಾರು ಏಳೆಂಟು ನಾಯಿಗಳ ಒಂದು ಸೈನ್ಯ ಒಂದಕ್ಕೊಂದು ಒತ್ತಿಕೊಂಡು ಮಲಗಿ ವಿಶ್ರಮಿಸುತ್ತಿತ್ತು. ಅವರು ನಾಯಿಗಳನ್ನು ನೋಡುತ್ತಾ ಬಹಳ ಸಂಭ್ರಮಿಸುತ್ತಿದ್ದರು. ಹೀಗಿರಬೇಕಲ್ಲವೆ ಶ್ವಾನ ಪ್ರೀತಿ ಎನಿಸಿತು. ಬೀದಿನಾಯಿಗಳನ್ನು ಎಂದೂ ಅಸಡ್ಡೆ ಮಾಡಬಾರದು ಎಂಬ ಸಿದ್ಧಾಂತವನ್ನು ನಾಗಣ್ಣ ಮಾಸ್ತರರಿಂದಲೇ ಕಲಿಯಬೇಕು. ಜಾತಿ ನಾಯಿಗಳಷ್ಟೆ ಮನೆ ಕಾಯುವುದಿಲ್ಲ. ಬೀದಿ ನಾಯಿಗಳು ಸಹ ಮನೆ ಕಾಯುತ್ತವೆ. ಜಾತಿ ನಾಯಿ ಸಾಕಿದರೆ ಹಣ ಶ್ರಮ ಜೊತೆಯಲ್ಲಿ ಯಾರಾದರೂ ಜೊತೆಯಲ್ಲಿರಬೇಕು. ಆದರೆ ಬೀದಿನಾಯಿಗಳಿಗೆ ಇದ್ಯಾವುದರ ಅಪೇಕ್ಷೆ ಇಲ್ಲ. ನಾವು ತಿಂದು ಉಳಿದಿದ್ದನ್ನು ಹಾಕಿದರೂ ಸಾಕು, ಆ ಉಪಕಾರಕ್ಕೆ ಚಿರಋಣಿಯಾಗಿರುತ್ತವೆ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal