Tumbe Group of International Journals

Full Text


ಕಿನ್ನರ (ಮಂಗಳಮುಖಿಯರ) ವಿಮರ್ಶೆ ಶ್ರೀನಿವಾಸ .ಎನ್             ಹೆಣ್ಣು ಅಲ್ಲದ ಗಂಡು ಅಲ್ಲದ ಮನಃಸ್ಥಿತಿಯಲ್ಲಿರುವ ಒಬ್ಬ ವ್ಯಕ್ತಿಯನ್ನು ಮಂಗಳಮುಖಿ ಎಂದು ಕರೆಯುತ್ತೇವೆ. ಸಮಾಜದಲ್ಲಿ ಇವರಿಗೆ ಈ ಹೆಸರಲ್ಲದೆ ಚಕ್ಕ, ಕೋಜಾ, ಹಿಜಡಾ, ಹಿಜ್ರಾ, ಕೋಥಿ, ಶಿಖಂಡಿ, ನಪುಂಸಕ ಮುಂತಾದಂತಹ ಹೆಸರುಗಳಿಂದ ಗುರುತಿಸುವುದು ಉಂಟು. ಇವರು ತಮ್ಮ ಬದುಕನ್ನು ಸಾಗಿಸಲು ಹೆಚ್ಚಾಗಿ ನಗರಗಳನ್ನು ಅವಲಂಭಿಸಿರುವುದು ಕಂಡುಬರುತ್ತದೆ. ಅಂತಹ ಪ್ರಮುಖ ನಗರ (ಪಟ್ಟಣ)ಗಳೆಂದರೆ ಮುಂಬೈ, ದೆಹಲಿ, ಬೆಂಗಳೂರು, ಆಂಧ್ರದ ಪ್ರಮುಖ ನಗರಗಳು ಇವರ ನೆಲೆಗಳು.             ಭಾರತದ ಸಮಾಜದಲ್ಲಿ ತಿರಸ್ಕøತ ಪಟ್ಟಂತಹ ಹಲವಾರು ಪಂಥ, ವರ್ಗದವರ ಹೋರಾಟವನ್ನು ನಾವು ನೋಡಿದ್ದೇವೆ ಮತ್ತು ಅವರ ದಾಖಲೆಗಳನ್ನು ಓದಿದ್ದೇವೆ ಅಂತಹವುಗಳಲ್ಲಿ ಪ್ರಮುಖವಾಗಿ ದಲಿತ ಚಳುವಳಿ, ಸ್ತ್ರೀ ಚಳುವಳಿಗಳನ್ನು ನಾವು ನೋಡಬಹುದು. ಈ ಚಳುವಳಿಗಳ ಸಂದರ್ಭದಿಂದ ಇವರ ನೋವು ಅವಮಾನಗಳನ್ನು ನಾವು ತಿಳಿದುಕೊಂಡಿದ್ದೇವೆ ಆದರೆ ಮಂಗಳಮುಖಿಯರ ಹೋರಾಟ ಬದುಕನ್ನು ನೋಡುವಾಗ ಎಲ್ಲಾ ಸಮುದಾಯಗಳಿಗಿಂತ, ವರ್ಗಗಳಿಗಿಂತ ಹೆಚ್ಚಿನ ನೋವನ್ನು ಈ ಸಮುದಾಯದವರು ಪಡುತ್ತಿರುವುದು ಸುಳ್ಳಲ್ಲ. ಇದನ್ನು ಅರಿತ ಕೆಲವರು ಸಿನಿಮಾಗಳನ್ನು ಮಾಡಿ ಜನರನ್ನು ಆಲೋಚನೆಯತ್ತ ತರಲು ಪ್ರಯತ್ನಿಸಿದರೆ ಇನ್ನೂ ಕೆಲವು ಹಿಜ್ರಾ ಸಂಘಸಂಸ್ಥೆಗಳು ಹಿಜ್ರಾ ಬದುಕನ್ನು ಬರವಣಿಗೆಯ ಮುಖಾಂತರ ಜನರ ಮುಂದಿಡುತ್ತಿದೆ. ಅಂತವುಗಳಲ್ಲಿ ಎ. ರೇವತಿ ಎಂಬ ಹಿಜ್ರಾ ಒಬ್ಬಳ ಆತ್ಮಕತೆಯಾದ ‘ಬದುಕು ಬಯಲು’ ಮತ್ತು ಲಿವಿಂಗ್ ಸ್ಮೈಲ್ ವಿದ್ಯಾರವರ ಬದುಕನ್ನಾಧರಿಸಿದ ‘ನಾನು ಅವನಲ್ಲ ಅವಳು’ ಎಂಬಂತಹ ಸಿನಿಮಾದ ಬಗ್ಗೆ ಚರ್ಚಿಸಲು ಬಯಸುತ್ತೇನೆ.             ಮಂಗಳಮುಖಿಯರಾಗಿ ರೇವತಿ ಬದುಕಿದ ಬದುಕಿಗೂ ಇವಳು ಪಟ್ಟ ಯಾತನೆ, ಕಷ್ಟಗಳು ವಿದ್ಯಾರವರ ಜೀವನಕ್ಕೆ ಹೋಲಿಸಿದಾಗ ಇವರಿಬ್ಬರಲ್ಲಿ ಅಷ್ಟೇನು ವ್ಯತ್ಯಾಸಗಳು ಕಂಡುಬರುವುದಿಲ್ಲ. ಇವರು ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ವಿವಿಧ ಪ್ರವೃತ್ತಿಯಲ್ಲಿ ತೊಡಗಿದ್ದರು ಇವರಿಬ್ಬರ ನೋವು ಮಾತ್ರ ಒಂದೆ. ಇದು ಬರಿ ಇವರಿಬ್ಬರ ನೋವು ಮಾತ್ರವಲ್ಲದೆ ಇಡೀ ಇವರ ‘ಸಮುದಾಯದ ನೋವಾಗಿ ಇವತ್ತು ನಮ್ಮ ಮುಂದೆ ನಿಂತಿದೆ. ರೇವತಿ, ವಿದ್ಯಾ ಮುಂತಾದ ಎಷ್ಟೋ ಮಂಗಳಮುಖಿಯರು ‘ನಮ್ಮನ್ನು ಮನುಷ್ಯರಂತೆ ಕಾಣಿ’ ಎಂಬುವುದೊಂದೆ ಕೂಗನ್ನು ಕೂಗಿ ಸಮಾಜದ ಹಾಗೂ ಕೋರ್ಟ್‍ಗಳ ಮುಂದೆ ಇಡುತ್ತಿದ್ದಾರೆ. ಇವರ ಈ ಮಾನವತ್ವದ ಪ್ರಜ್ಞೆ ಇತರ ವರ್ಗದ ಜನರಿಗಿಲ್ಲವಲ್ಲ ಎಂಬುವುದನ್ನು ನೋಡಿದರೆ ಇಲ್ಲಿ ನಿಜವಾಗಿಯು ಯಾರು ಮನುಷ್ಯರು? ಎಂಬಂತಹ ಪ್ರಶ್ನೆ ನಮ್ಮನ್ನು ಕಾಡುತ್ತದೆ.             ಭಾರತ ದೇಶ ಬಹು ಸಂಸ್ಕøತಿಯ ದೇಶ ಎಂಬೆಲ್ಲ ವೈಭವಿಸುತ್ತಿದ್ದರು ಭಾರತ ಸಮಾಜದ ನಿಜವಾದ ಚಿತ್ರಣವನ್ನು ತಿಳಿಯಲು ರೇವತಿ ಮತ್ತು ವಿದ್ಯಾರವರಂತಹ ಮಂಗಳಮುಖಿಯರ ಅಧ್ಯಯನ ಬಹಳ ಮುಖ್ಯವಾದುದ್ದು. ಇವರಿಬ್ಬರ ಬದುಕಿನ ಅನುಭವವು ಯಾವುದೇ ಸೂಫಿ ಸಂತರ ಕಿರ್ತನಾಕಾರರ, ವಚನಕಾರರ, ಮನವತವಾದದ ಹರಿಕಾರರ ಜ್ಞಾನಕ್ಕೆ ಕಡಿಮೆಯಾದುದಲ್ಲ. ಇದಕ್ಕೆ ಉದಾಹರಣೆಯಂತೆ ರೇವತಿಯ ಬಳಿ ಬಂದ ಮಯೂರಿ, ಫಮಿಲಾ ರಿತು ತಾವು ಹೆಣ್ಣಾಗಿ ಬದುಕಬೇಕೆಂದಿದ್ದೇವೆ ನಮಗೆ ಆಪರೇಷನ್ ಮಾಡಿಸಿ ನಿಮ್ಮ ಚೆಲಾಗಳಾಗಿ ಸ್ವೀಕರಿಸಿ ಎಂದಾಗ ಅವಳು ಹೇಳಿದ ಬುದ್ಧಿವಾದದ ಮಾತು ಕಂಡರೆ ಆ ಹೊತ್ತಿಗಾಗಲೆ ಅವಳು ಸಮಾಜವನ್ನು ಬಹಳಷ್ಟು ಅಧ್ಯಯನ ಮಾಡಿದ ಸಂಶೋಧಕಿಯಂತೆ ಕಂಡುಬರುತ್ತಾಳೆ. ಇನ್ನು ವಿದ್ಯಾ ಸಿನಿಮಾದ ಮೊದಲಲ್ಲೇ ‘ಹೆಣ್ಣಾಗಿ ಹುಟ್ಟೋದು ಕಷ್ಟ ಅಲ್ಲ, ಆದ್ರೆ ಹುಟ್ಟಿದ್ಮೇಲೆ ಹೆಣ್ಣಾಗೋದು ಕಷ್ಟ’ ಎಂಬಂತಹ ತಮ್ಮ ಅನುಭವದ ಮಾತಿನಿಂದ ವಾಸ್ತವದ ಸತ್ಯವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಸಮಾಜದಲ್ಲಿ ಹೆಣ್ಣು ಹುಟ್ಟಿದರೆ ಮಗಳಂತೆ ಸ್ವೀಕರಿಸುವುದು ಅದೇ ಒಂದು ಗಂಡು ಹೆಣ್ಣಾಗಿ ಬದಲಾಗುತ್ತೇನೆಂದರೆ ಮಗಳಾಗಿ ಸ್ವೀಕರಿಸಲು ತಯಾರಿರುವುದಿಲ್ಲ. ಹಾಗಾದರೆ ನಾವು ಇಷ್ಟಪಟ್ಟಂತಹ ಬದುಕನ್ನು ಬದುಕುವುದಕ್ಕೆ ನಮಗೆ ಸ್ವಾತಂತ್ರ್ಯ ಬಂದಿದೆಯಾ? ಕಂಡಿತವಾಗಿಯು ಇಲ್ಲ ಯಾಕೆಂದರೆ ಕುಟುಂಬದವರು ಮಾನ, ಮರ್ಯಾದೆ ನೆಪದಲ್ಲಿ ತನಗಿಷ್ಟವಾಗುವಂತೆ ಬದುಕಲು ಒತ್ತಾಯ ಏರಿದರೆ ಸಮಾಜದಲ್ಲಿನ ಜನರು ತಮ್ಮ ಹೀಯಾಳಿಸುವಿಕೆಯಿಂದ ನಿಕೃಷ್ಟವಾಗಿ ಕಾಣುವುದರಿಂದ ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಹೊರಹಾಕದಂತೆ ಮಾಡಿ ಕಟ್ಟಿಹಾಕುತ್ತಾರೆ ಹಾಗಾದರೆ ಅವರು ತಾವು ಇಷ್ಟಪಟ್ಟಂತಹ ಬದುಕು ಎಲ್ಲಿ ಬದುಕಿದಂತಾಯಿತು? ಇಂತಹ ಮನಃಸ್ಥಿತಿಯಲ್ಲಿರುವಂತಹ ಸಮುದಾಯದವರಿಗೆ ಒಂಟಿತನ, ಅನಾಥಪ್ರಜ್ಞೆ, ನೋವು, ಹತಾಶಯ ಕಾಡುತ್ತಿರುತ್ತದೆ.             ಈ ರೇವತಿಯ ಆತ್ಮಕಥೆಯನ್ನು ಓದಿದಾಗ ಕಂಡುಬರುವ ಇನ್ನೊಂದು ಬಹುಮುಖ್ಯವಾದ ಪ್ರಶ್ನೆ ಎಂದರೆ ಇಲ್ಲಿ ಗಂಡೆಂದರೆ ಯಾರು? ಹೆಣ್ಣೆಂದರೆ ಯಾರು? ಎಂಬುವುದು ಗಡ್ಡ, ಮೀಸೆ, ಶಿಶ್ನ, ಜನನಾಂಗ, ಧ್ವನಿ ಮುಂತಾದ ಲಕ್ಷಣಗಳ ಮೇಲೆ ಅಥವಾ ಉಡುಗೆ ತೊಡುಗೆಗಳ ಮೇಲೆ ಗಂಡು ಹೆಣ್ಣು ಎಂದು ನಿರ್ಧರಿಸಲು ಆಗುತ್ತದೆಯೇ? ಇಲ್ಲ ಇದು ಸಮಾಜ ನಮ್ಮನ್ನ ರೂಪಿಸಿರುವ ರೀತಿ ಇದನ್ನೇ ನಿಜವೆಂಬ ಭ್ರಮೆಯಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಪ್ರತಿಯೊಬ್ಬ ಗಂಡಿನಲ್ಲಿಯು ಹೆಣ್‍ತನವಿರುತ್ತೆ ಹಾಗೆ ಪ್ರತಿಯೊಬ್ಬ ಮಹಿಳೆಯಲ್ಲು ಗಂಡುತನ ವಿರುತ್ತದೆಯೆಂದು ಅನೇಕರು ಹೇಳಿದ ಮಾತನ್ನು ನಾನಿಲ್ಲಿ ಗೌರವಿಸುತ್ತೇನೆ. ಆದ್ದರಿಂದ ಲಿಂಗ ಸಮಾನತೆಯ ಹಕ್ಕು ಎಂದು ಬಂದಾಗ ಮಂಗಳಮುಖಿ ಸಮುದಾಯದವರಿಗೂ ಸಮಾನತೆಯ ಹಕ್ಕು ದೊರೆಯಬೇಕು ಅದು ಬರಿ ಗಂಡು-ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು. ಈ ನಿಟ್ಟಿನಲ್ಲಿ 2014 ಏಪ್ರಿಲ್ 15ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಐತಿಹಾಸಿಕವಾದದ್ದು.             ಹಲವು ಮಂದಿ ಮಂಗಳಮುಖಿಯರು ಬಿಕ್ಷೆ ಬೇಡುತ್ತಾರೆ ಅವರು ಹೇಳಿದಷ್ಟೇ ಹಣವನ್ನು ಕೊಡೋಕೆ ಪೀಡಿಸುತ್ತಾರೆ. ಸೆಕ್ಸ್‍ವರ್ಕರ್ ಆಗಿರುತ್ತಾರೆ ಎಂದೆಲ್ಲ ಕೀಳಾಗಿ ನೋಡಿದರೆ, ಹೇಳಿದಷ್ಟೇ ಹಣವನ್ನು ಕೊಡೋಕೆ ಪೀಡಿಸುವುದನ್ನು ಬಿಟ್ಟು ಮಿಕ್ಕೆಲ್ಲ ಪ್ರಶ್ನೆಗಳಿಗೂ ಈ ರೇವತಿಯ ಆತ್ಮಕಥೆ ಮತ್ತು ವಿದ್ಯಾ ಅವರ ಜೀವನ ಆಧಾರಿತ ಸಿನಿಮ ಉತ್ತರವಾಗಿ ನಿಂತಿದೆ. ಹಾಗೆಯೇ ಇವರಿಂದ ಮಂಗಳಮುಖಿಯರ ಆಚರಣೆಗಳ ಬಗ್ಗೆ ಅದರ ವೈಶಿಷ್ಟ್ಯಗಳ ಬಗ್ಗೆ ಇತರ ವರ್ಗಗಳಿಗೆ ತಿಳಿಸಿದಂತಾಗಿದೆ. ಹಸಿವು ಅದರ ಜೊತೆ ತಾನು ಬದುಕಲು ತನ್ನ ದೇಹವನ್ನೆ ಮಾರಿ ಗಿರಾಕಿಗಳಿಂದ ಪೊಲೀಸರಿಂದ ತನ್ನ ಜೊತೆಗಿದ್ದವರಿಂದ ಕಿರುಕುಳ ಅವಮಾನ, ನೋವನ್ನು ಅನುಭವಿಸಿದ ರೇವತಿ ನಂತರದ ಕಾಲದಲ್ಲಿ ತನ್ನ ಸಮುದಾಯದವರು ಈ ರೀತಿ ಕಷ್ಟಪಡಬಾರದೆಂದು ‘ಸಂಗಮ’ ಸಂಸ್ಥೆಯೊಂದಿಗೆ ಸೇರಿ ಹೋರಾಡಿದ ರೀತಿ ಹಾಗೂ ಮಂಗಳಮುಖಿಯರಿಗೆ ಸೆಕ್ಸ್‍ವರ್ಕ್ ಭಿಕ್ಷೆ ಬೇಡುವುದು ಮಾತ್ರವಲ್ಲ ಗೊತ್ತಿರುವುದು ಅವರಲ್ಲಿಯು ಹಲವಾರು ಪ್ರತಿಭೆಗಳಿವೆ ಸ್ವಾಭಿಮಾನವಾಗಿ ನಾವು ಬದುಕಬಹುದು ಎಂದು ತನ್ನ ಅಭಿನಯದ ಮೂಲಕ ಸುಮಾರು 20 ನಾಟಕಗಳಲ್ಲಿ ಅಭಿನಯಿಸಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಎಷ್ಟೋ ಮಂದಿ ಮಂಗಳಮುಖಿಯರ ಬದುಕಿಗೆ ಚೈತನ್ಯವನ್ನು ತುಂಬಿದ್ದಾರೆ. ರೇವತಿ, ವಿದ್ಯಾರವರ ಜೊತೆ ಪ್ರಸ್ತುತ ಕಾಲದಲ್ಲಿ ಹಿಜ್ರಾ ಹಿತಾಸಕ್ತಿಯ ಮುಖ್ಯಸ್ಥೆಯಾದ ಲಕ್ಷ್ಮಿ ಮುಂತಾದ ಇಂತಹ ಅನೇಕ ಮಂದಿ ಹಿಜ್ರಾಗಳ ಹೋರಾಟದಿಂದ 2014ರಲ್ಲಿ ಸುಪ್ರೀಂಕೋರ್ಟ್‍ನ ಕಣ್ಣನ್ನು ತೆರಸಿದ್ದಾರೆ. ಇವರ ಫಲವಾಗಿಯೇ ದೇಶದಲ್ಲಿ ಮೊದಲ ಬಾರಿಗೆ ಪ್ರೀತಿಕಾ ಯಾಶಿನಿ ಸಬ್ ಇನ್ಸ್‍ಪೆಕ್ಟರ್ ಉದ್ಯೋಗ ಪಡೆದರೆ ಬರುವ ಮುಂದಿನ ಲೋಕಸಭೆ ಚುನಾವಣೆಗೆ ಮಂಗಳಮುಖಿಯರಾದ ಭಾವನಾ ಚಿತ್ರದುರ್ಗ (ಕರ್ನಾಟಕ)ದಲ್ಲಿ, ಕಲ್ಕಿ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ. ಈ ಸಮುದಾಯಕ್ಕೆ ಶಿಕ್ಷಣದ ಸಮಾನತೆಯನ್ನು ನೀಡಲು ಯು.ಜಿ.ಸಿ. ಕಾರ್ಯದರ್ಶಿ ಜಸ್ಪಾಲ್ ಅವರು ದೇಶದ ಎಲ್ಲಾ ಕುಲಪತಿಗಳಿಗೂ ಪತ್ರ ಬರೆದು ಹಿಜ್ರಾ ಸಮುದಾಯದವರಿಗೆ ಸಮಾನತೆಯ ಹಕ್ಕು ನೀಡುವ ಕ್ರಮಗಳನ್ನು ಮಾಡಬೇಕಾದ ಕಿವಿ ಮಾತು ಹೇಳಿದ್ದಾರೆ. ಕಾನೂನು ತಕ್ಕ ಮಟ್ಟಿಗೆ ಮಂಗಳಮುಖಿಯರಿಗಾಗಿ ಒಂದು ಹೆಜ್ಜೆ ಮುಂದಿಟ್ಟಿದ್ದರು ಇದನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal