Tumbe Group of International Journals

Full Text


ನರೇಂದ್ರ  - ಸ್ವಾಮಿ ವಿವೇಕಾನಂದ ಭಾರತಿ. ಜನನ ಮತ್ತು ಬಾಲ್ಯ  ನರೇಂದ್ರನ ತಂದೆ ವಿಶ್ವನಾಥ ದತ್ತ, ತಾಯಿ. ಭುವನೇಶ್ವರಿ ದೇವಿ. ವಿಶ್ವನಾಥ ದತ್ತ ವಕೀಲ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ತಾಯಿ ಒಳ್ಳೆಯ ಓದು, ಬರಹ ಕಲಿತವರಾಗಿದ್ದರು. ಭುವನೇಶ್ವರಿಗೆ ಇಬ್ಬರು ಹೆಣ್ಣುಮಕ್ಕಳು ಗಂಡು ಮಕ್ಕಳು ಇರಲಿಲ್ಲ. ಇದರಿಂದ ಭುವನೇಶ್ವರಿಯು ಗಂಡು ಮಗುವಿಗಾಗಿ ಕಾಶಿಯಲ್ಲಿರುವ ತಮ್ಮ ಮನೆದೇವರಾದ ವೀರೇಶ್ವರನಿಗೆ ಕಾಶಿಯಲ್ಲಿದ್ದ ತಮ್ಮ ನೆಂಟರೊಬ್ಬರಿಗೆ ಪೂಜೆ ಮಾಡುವುದಕ್ಕೆ ಹೇಳಿದ್ದಳು. ಭುವನೇಶ್ವರಿಯು ಗಂಡು ಮಗುವಿಗಾಗಿ ಅನೇಕ ರೀತಿಯ ಪೂಜೆ, ಜಪ, ತಪಾದಿಗಳಿಂದ ಭಗವಂತನನ್ನು ಪ್ರಾರ್ಥಿಸತೊಡಗಿದಳು. ಜನವರಿ 12ನೇ ತಾರೀಖು ಸೋಮವಾರ ಕ್ರಿ.ಶ 1863ನೇ ಇಸವಿಯಂದು ಗಂಡು ಮಗುವಿಗೆ ಜನ್ಮ ನೀಡಿದಳು. ಮಗುವಿಗೆ ಅವರ ಮನೆದೇವರಾದ ವೀರೇಶ್ವರ ಎಂದು ರಾಶಿ, ನಕ್ಷತ್ರ ಹೆಸರನ್ನು ಇಟ್ಟರು. ಜನ ಕರೆಯುವುದಕ್ಕೆ “ನರೇಂದ್ರ” ಎಂದು ನಾಮಕರಣ ಮಾಡಿದರು. ಆದರೆ ತಾಯಿ ತನ್ನ ಮುದ್ದಿನ ಮಗನನ್ನು “ಬಿಲೆ” ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನರೇಂದ್ರನು ಮನೆಯಲ್ಲಿ ಹೇಗೆ ಎಲ್ಲರನ್ನು ಪ್ರೀತಿಸುತ್ತಿದ್ದನೋ ಹಾಗೆಯೇ ಅಕ್ಕ-ಪಕ್ಕದ, ನೆರೆ-ಹೊರೆಯ ಜನರನ್ನು ಪ್ರೀತಿಸುತ್ತಿದ್ದನು. ನರೇಂದ್ರನು ಸ್ನೇಹಿತರೊಂದಿಗೆ ಹೇಗೆ ಜೀವನದಲ್ಲಿ ಮುಖ್ಯವೋ ಹಾಗೆಯೆ ಪಕ್ಷಿಗಳು, ಪ್ರಾಣಿಗಳೂ ಕೂಡ ಜೀವನ ಸಂಗಾತಿಗಳಾಗಿದ್ದವು. ಮನೆಯ ಹಸು, ಕರು, ಮೊಲ ಎಲ್ಲವೂ ಅವನ ಸಹಪಾಠಿಗಳೇ.            ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಗ್ರಂಥಗಳನ್ನು ಚೆನ್ನಾಗಿ ಓದಿ ತಿಳಿದುಕೊಂಡಿದ್ದ  ಭುವನೇಶ್ವರಿಗೆ ಅದ್ಭುತವಾದ ಜ್ಞಾಪನ ಶಕ್ತಿ ಇತ್ತು ಒಂದು ಸಲ ಓದಿದ್ದನ್ನು ಮರೆಯುತ್ತಿರಲಿಲ್ಲ. ನರೇಂದ್ರನಿಗೆ ತಾಯಿಯೇ ಮೊದಲು ಮನೆಯಲ್ಲಿ ವಿದ್ಯೆಯನ್ನು ಹೇಳಿಕೊಟ್ಟಳು.              ನರೇಂದ್ರನಿಗೆ ಬಾಲ್ಯದಿಂದಲೂ ಸಾಧುಗಳನ್ನು, ಭಿಕ್ಷುಕರನ್ನು ಕಂಡರೆ ತುಂಬಾ ಪ್ರೀತಿ ಅವರು ಕೇಳಿದ್ದನ್ನು ಕೊಟ್ಟು ಬಿಡುತ್ತಿದ್ದರು. ಒಂದು ಸಲ ಒಬ್ಬ ಭಿಕ್ಷುಕ ಬಟ್ಟೆಯನ್ನು ಕೇಳಿದ ನರೇಂದ್ರನು ತನ್ನ ಮೈಮೇಲೆ ಇರುವ ಬಟ್ಟೆಯನ್ನೇ ಕೊಟ್ಟು ಬಿಟ್ಟರು. ಇದನ್ನು ನೋಡಿದ ಮನೆಯವರು ಭಿಕ್ಷುಕರು ಬಂದರೆ ಸಾಕು ನರೇಂದ್ರನನ್ನು ಒಂದು ಕೋಣೆಯಲ್ಲಿ ಕೂಡಿಹಾಕುತ್ತಿದ್ದರು. ಆದರೆ ನರೇಂದ್ರನು ಭಿಕ್ಷುಕರು ಕೂಗಿದ ಸದ್ದು ಕೇಳಿದರೆ ಸಾಕು ಆ ಕೋಣೆಯಲ್ಲಿ ತನ್ನ ಕೈಗೆ ಏನು ಸಿಗುತ್ತದೆಯೋ ಅದನ್ನೇ ಕಿಟಕಿ ಮೂಲಕ ಕೊಟ್ಟು ಬಿಡುತ್ತಿದ್ದರು.            ಇವರಿಗೆ ಬಾಲ್ಯದಿಂದಲೂ ವೈರಾಗ್ಯ ಜೀವನದ ಮೇಲೆ ಆಸೆ. ತನ್ನ ಸ್ನೇಹಿತರಿಗೆ “ಬಲಗೈ ಅಂಗೈ ಮೇಲೆ ಇರುವ ಗೀಟನ್ನು ತೋರಿಸಿ, ನೋಡಿ ಇದು ನಾನು ಸನ್ಯಾಸಿ ಆಗುತ್ತೇನೆ ಎಂದು ತಿಳಿಸುತ್ತದೆ ಎಂದು ಹೇಳುತ್ತಿದ್ದರು”. ಇವನು ತುಂಬ ತುಂಟನು, ತುಂಬಾ ಚೇಷ್ಟೆಯನ್ನು ಮಾಡುತ್ತಿದ್ದನು.              ನರೇಂದ್ರನಿಗೆ ಎಂಟು ವರ್ಷಗಳಾದಾಗ ಅವನನ್ನು ಈಶ್ವರಚಂದ್ರ ವಿದ್ಯಾಸಾಗರದ ಪಾಠಶಾಲೆಗೆ ಸೇರಿಸಿದರು. ನರೇಂದ್ರನು ತುಂಬಾ ಬುದ್ಧಿವಂತ, ಪ್ರಚಂಡ ಒಂದು ಸಾರಿ ಹೇಳಿದರೆ ಸಾಕು, ಓದಿದರೆ ಸಾಕು ಮತ್ತೆಂದು ಮರೆಯುತ್ತಿಲಿಲ್ಲ ಎಲ್ಲವನ್ನು ತಿಳಿದುಕೊಂಡು ಬಿಡಿತ್ತಿದ್ದ. ಶಾಲೆಯಲ್ಲಿ ಮೆಚ್ಚಿನ ವಿದ್ಯಾರ್ಥಿ ಇವನು. ಒಂದು ಸಲ ಉಪಾಧ್ಯಾಯರು ಶಾಲೆಯ ರೂಮಿನಲ್ಲಿ ಪಾಠ ಮಾಡುವಾಗ ನರೇಂದ್ರನು ಹಿಂದಿನ ಸಾಲಿನಲ್ಲಿ ಕುಳಿತಿದ್ದ. ಕೆಲವು ಹುಡುಗರು ತುಂಬಾ ಗಲಾಟೆಯನ್ನು ಮಾಡುತ್ತಿದ್ದರು ಇದನ್ನು ನೋಡಿದ ಉಪಾಧ್ಯಾಯರು ಹುಡುಗರನ್ನು ನಿಲ್ಲಿಸಿ ಪ್ರಶ್ನೆಯನ್ನು ಕೇಳಿದರು ಪಾಠಕೇಳದ ಹುಡುಗರು ಸುಮ್ಮನೆ ನಿಂತಿದ್ದರು ನರೇಂದ್ರನು ಕೂಡ ಅವರ ಜೊತೆಯಲ್ಲಿ ಕುಳಿತಿದ್ದರು ಅವರನ್ನು ಕೇಳಿದಾಗ ನರೇಂದ್ರನು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುತ್ತಿದ್ದರು. ಉಪಾಧ್ಯಾಯರು ನರೇಂದ್ರಗೆ ಕುಳಿತುಕೊಳ್ಳಲು ಹೇಳಿ ಗಲಾಟೆ ಮಾಡುತ್ತಿದ್ದ ಹುಡುಗರನ್ನು ಬೆಂಚಿನ ಮೇಲೆ ನಿಲ್ಲಲು ಹೇಳುವರು ಆಗ ನರೇಂದ್ರನು ನಾನು ಸಹ ಅವರೊಂದಿಗೆ ಗಲಾಟೆ ಮಾಡುತ್ತಿದ್ದೆ ಎಂದು ಬೆಂಚಿನ ಮೇಲೆ ಎದ್ದು ನಿಲ್ಲುವರು. ಇಲ್ಲಿ ನರೇಂದ್ರನು ಎಂತಹ ಪ್ರಾಮಾಣಿಕರಾಗಿದ್ದರು ಮತ್ತು ಎಂತಹ ಏಕಾಗ್ರತೆ ಶಕ್ತಿಯನ್ನು ಹೊಂದಿದ್ದರು ಎಂದು ತಿಳಿಯಬಹುದು.                   ನರೇಂದ್ರನಿಗೆ ಹಲವು ರೀತಿಯ ಆಟಗಳು ಪ್ರಿಯವಾಗಿದ್ದವು ಅವುಗಳಲ್ಲಿ ಕುಸ್ತಿ ಮಾಡುವುದು, ನೆಗೆಯುವುದು, ಬಾಕ್ಸಿಂಗ್ ಇವುಗಳೆಲ್ಲ ಅವರಿಗೆ ಪ್ರಿಯವಾದ ಆಟಗಳು. ನರೇಂದ್ರ ಮತ್ತು ಅವನ ಸ್ನೇಹಿತರು ಅವರ ಮನೆಯಲ್ಲಿ ಒಂದು ನಾಟಕದ ಪಾರ್ಟಿ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದರು ಆದರೆ ಅವರ ಮನೆಯಲ್ಲಿದ್ದ ಸೋದರ ಮಾವನಿಗೆ ಇದು ಹಿಡಿಸುತ್ತಿರಲಿಲ್ಲ. ಒಂದು ಸಲ ಅಂಗಳದಲ್ಲಿ ಗರಡಿ ಮನೆ ತೆಗೆದರು ಅದಕ್ಕೆ ಬೇಕಾದ ಸಾಮಾನಿನಿಂದ ಮನೆ ತುಂಬಿ ಹೋಯಿತು. ಇದನ್ನು ನೋಡಿದ ಸಹೋದರ ಮಾವ ಎಲ್ಲವನ್ನು ಆಚೆಗೆ ಎಸೆದರು. ನರೇಂದ್ರನು ಅದೇ ಬೀದಿಯಲ್ಲಿದ್ದ ಒಂದು ಗರಡಿ ಮನೆಗೆ ಸೇರಿದರು. ಅಲ್ಲಿ ಕುಸ್ತಿ, ಬೈಠಕ್, ಲಾಠಿ, ಈಜುವುದು ಇವುಗಳನ್ನೆಲ್ಲ ಕಲಿತರು. ನರೇಂದ್ರನಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಥಮ ಬಹುಮಾನ ದೊರಕಿತು. ವಿದ್ಯಾಭ್ಯಾಸ             ಕ್ರಿ.ಶ. 1877ರಲ್ಲಿ ವಿಶ್ವನಾಥ ದತ್ತರಿಗೆ ರಾಯಪುರದಲ್ಲಿ ಕೆಲಸವಾಯಿತು. ಅವರು ಮುಂಚೆ ಹೋಗಿ ಮನೆಯನ್ನು ನೋಡಿಕೊಂಡು ನಂತರ ನರೇಂದ್ರನಿಗೆ ಮನೆಯವರನ್ನು ಕರೆದುಕೊಂಡು ಬರುವಂತೆ ಹೇಳಿದರು. ಕಲ್ಕತ್ತೆಯಿಂದ ಅಲಹಾಬಾದ್, ಜಬ್ಬಲ್ ಪುರದ ಮೇಲೆ ರಾಯಪುರಕ್ಕೆ ಹೋಗಬೇಕಾಗಿತ್ತು. ರಾಯಪುರ ತಲುಪಿದ ಮೇಲೆ ತಕ್ಷಣವೇ ನರೇಂದ್ರನನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗಲಿಲ್ಲ ಇದರಿಂದ ವಿಶ್ವನಾಥ ದತ್ತರು ಮನೆಯಲ್ಲಿಯೇ ಪಾಠವನ್ನು ಹೇಳಿಕೊಡುತ್ತಿದ್ದರು.              ಎರಡು ವರ್ಷಗಳಾದ ಮೇಲೆ 1829ರಲ್ಲಿ ಪುನಃ ವಿಶ್ವನಾಥ ದತ್ತ ಕಲ್ಕತ್ತೆಗೆ ಬಂದರು. ನರೇಂದ್ರ ಓದುತ್ತಿದ್ದ ಹಿಂದಿನ ಸ್ಕೂಲಿನಲ್ಲಿ ಮುಂದಿನ ಹೆಚ್ಚಿನ ತರಗತಿಗೆ ಸೇರಿಸುವ ವಿಷಯದಲ್ಲಿ ತೊಂದರೆ ಬಂದಿತು ಆದರೆ ನರೇಂದ್ರನು ಉಪಾಧ್ಯಾಯರಿಗೆಲ್ಲ ಬೇಕಾದುದರಿಂದ ಹೆಚ್ಚಿನ ತರಗತಿಗೆ ಸೇರಿಸಿದರು. ನರೇಂದ್ರನು 2ವರ್ಷಗಳಿಂದ ಪಾಠವನ್ನು ಓದಿರಲಿಲ್ಲ. ನರೇಂದ್ರನು ಎಂತಹ ಜ್ಞಾನವಂತನೆಂದರೆ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಅವನು ಮೂರು ತಿಂಗಳಲ್ಲಿ ಮೂರು ವರ್ಷಗಳ ಪಾಠವನ್ನು ಓದಿ ಬಿಡುತ್ತಿದ್ದ. ಪರೀಕ್ಷೆಗೆ ಮೂರು ನಾಲ್ಕು ದಿನಗಳಿವೆ ಎಂದಾಗ ಅವರಿಗೆ ರೇಖಾಗಣಿತವನ್ನು ನೋಡಿಕೊಂಡಿಲ್ಲ ಎಂದು ನೆನಪಾಗಿ ರೇಖಾಗಣಿತದ ನಾಲ್ಕು ಭಾಗಗಳನ್ನು ಗ್ರಹಿಸಿದ. ನರೇಂದ್ರನು ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಇದನ್ನು ಕೇಳಿದ ವಿಶ್ವನಾಥ ದತ್ತರಿಗೆ ತುಂಬಾ ಸಂತೋಷವಾಗಿ ನರೇಂದ್ರನಿಗೆ ಒಂದು ಗಡಿಯಾರವನ್ನು ಬಹುಮಾನವಾಗಿ ಕೊಟ್ಟರು.             ನರೇಂದ್ರನು ಎಂಟ್ರೆನ್ಸ್ ಪರೀಕ್ಷೆ ಪಾಸಾದ ನಂತರ ವಿಶ್ರಾಂತಿಗೆಂದು ಕೆಲವು ದಿನಗಳಲ್ಲಿ ಗಯಕ್ಕೆ ಹೋಗಿ ಮರಳಿ ಬಂದರು. 1879ರಲ್ಲಿ ಪ್ರೆಸಿಡೆನ್ಸಿ ಕಾಲೇಜು ಸೇರಿದ. ಅನಂತರ ಸ್ಕಾಟಿಷ್ ಚರ್ಚ್ ಕಾಲೇಜಿಗೆ ಸೇರಿದ, ಕಾಲೇಜಿಗೆ ಸೇರಿದ ಮೇಲೆ ತನ್ನಲ್ಲಿದ್ದ ಆಟಗಳು, ಹಾಸ್ಯಗಳನ್ನು ಎಲ್ಲವನ್ನು ಬಿಟ್ಟು ಜ್ಞಾನಾರ್ಜನೆಯ ಕಡೆಗೆ ಹೆಚ್ಚು ಗಮನ ಕೊಟ್ಟರು. ನರೇಂದ್ರನು ಬರೀ ಪಠ್ಯ ಪುಸ್ತಕಗಳನ್ನು ಓದುತ್ತಿರಲಿಲ್ಲ ಅವರು ಬೇರೆ ಬೇರೆ ರೀತಿಯ ಹಲವಾರು ಪುಸ್ತಕಗಳನ್ನು ಓದುತ್ತಿದ್ದರು. ಇವರು ಪುಸ್ತಕ ಪ್ರಿಯರಾಗಿದ್ದರು. ನರೇಂದ್ರನು ಕಾಲೇಜಿನ ಪ್ರಿನ್ಸಿಪಾಲರಾದ ವಿಲಿಯಂ ಹೇಸ್ಟಿ ಅವರ ಜೊತೆ ಸಾಹಿತ್ಯ, ಇತಿಹಾಸ, ವಿಜ್ಞಾನ, ತತ್ವಶಾಸ್ತ್ರ, ಭೂಗೋಳ ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಆಗ ಪ್ರಿನ್ಸಿಪಾಲರು ನರೇಂದ್ರನ ಬಗ್ಗೆ ಹೀಗೆ ಹೇಳುವರು “ನರೇಂದ್ರನದು ನಿಜವಾಗಿಯೂ ಅದ್ಭುತವಾದ ಪ್ರತಿಭೆ, ತತ್ವಶಾಸ್ತ್ರವನ್ನು ಅಧ್ಯಯನ ಮಾಡುವ ವಿದ್ಯಾರ್ಥಿ ವರ್ಗದಲ್ಲಿಯೂ ಇಷ್ಟೊಂದು ಬುದ್ಧಿವಂತನಾದ ಹುಡುಗನನ್ನು ನಾನು ಕಂಡಿಲ್ಲ. ನರೇಂದ್ರ ಜೀವನದಲ್ಲಿ ಖ್ಯಾತಿಯನ್ನು ಗಳಿಸುವುದರಲ್ಲಿ ಸಂದೇಹವಿಲ್ಲ” ಎನ್ನುವರು.              ನರೇಂದ್ರನು ಒಬ್ಬ ಅದ್ಭುತ ಭಾಷಣಕಾರನೂ ಕೂಡ ಹೌದು. ಒಮ್ಮೆ ಅವರ ಕಾಲೇಜಿನ ಪ್ರಾಧ್ಯಾಪಕರು ನಿವೃತ್ತರಾದರು. ಅವರಿಗೆ ಒಂದು ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಇಲ್ಲಿ ಪ್ರಖ್ಯಾತರಾದ “ಸುರೇಂದ್ರನಾಥ ಬ್ಯಾನರ್ಜಿ” ಎಂಬುವವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಅಂತಹ ಪ್ರಖ್ಯಾತಿಯಾದವರ ಮುಂದೆ ಬಾಯಿ ತೆಗೆದು ಮಾತನಾಡಲು ಎಲ್ಲರೂ ಅಂಜಿದರು. ಆದರೆ ನರೇಂದ್ರ ನಿವೃತ್ತ ಪ್ರಾಧ್ಯಾಪಕರ ಬಗ್ಗೆ ಹೊಗಳಿ ಅವರಿಗೆ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಯನ್ನು ಅರ್ಪಿಸಿದನು. ಭಾಷಣವು ತುಂಬ ಚೆನ್ನಾಗಿತ್ತು. ಸುರೇಂದ್ರ ಬ್ಯಾನರ್ಜಿ ಕೂಡ ನರೇಂದ್ರನ ಭಾಷಣವನ್ನು ಕೇಳಿ ತಲೆದೂಗಿದರು.             ನರೇಂದ್ರನು ಭಾಷಣದಲ್ಲಷ್ಟೆ ಅಲ್ಲ ಸಂಗೀತದಲ್ಲೂ ಅಭಿರುಚಿಯನ್ನು ಹೊಂದಿದ್ದರು. ಈ ಸಂಗೀತದಲ್ಲಿ ನರೇಂದ್ರನಿಗೆ ಇರುವ ಆಸಕ್ತಿಯನ್ನು ಕಂಡು ತಂದೆ ವಿಶ್ವನಾಥ ದತ್ತರು ಸಂಗೀತಾಭ್ಯಾಸವನ್ನು ರೂಢಿಸಿ ಕೊಳ್ಳಲಿ ಎಂದು “ಹಿಂದೂಸ್ಥಾನಿ ಶಾಸ್ತ್ರೀಯ ಅಭ್ಯಾಸಕ್ಕೆಂದು ಉಸ್ತದ್ ಅಹಮ್ಮದ್ ಖಾನ್ ಮತ್ತು ಭಕ್ತಿಗೀತೆಯನ್ನು ಹೇಳಿ ಕೊಡಲು ಬೇಣೀಪಾಲ್” ಎಂಬುವವರನ್ನು ನೇಮಕ ಮಾಡಿದರು.              ಇದಷ್ಟೆ ಅಲ್ಲದೆ ಅವನು ಧ್ಯಾನ ಸಿದ್ಧ. ಧ್ಯಾನಕ್ಕೆ ಕುಳಿತನೆಂದರೆ ಸೊಳ್ಳೆಯ ಗುಂಪೇ ಮೈಮೇಲೆ ಕುಳಿತು ರಕ್ತ ಹೀರುತ್ತಿದ್ದರೂ, ಗಾಢ ಧ್ಯಾನದಲ್ಲಿ ತಲ್ಲೀನನಾಗಬಲ್ಲರು. ಅದ್ಭುತವಾದ ಏಕಾಗ್ರ ಶಕ್ತಿ ಹೊಂದಿದ್ದರು. ಇದರಿಂದ ಅವರ ಜ್ಞಾಪನ ಶಕ್ತಿ ಹೆಚ್ಚುತ್ತಿತ್ತು, ಮನಸ್ಸಿಗೆ ಶಾಂತಿ ಉಂಟಾಗುತ್ತಿತ್ತು. ಇವರು ಎಷ್ಟು ಜ್ಞಾನವಂತರೋ, ಅಷ್ಟೇ ದೊಡ್ಡ ಭಕ್ತರು ಕೂಡ.             ಈ ಹೊತ್ತಿಗೆ ನರೇಂದ್ರ ಬಿ.ಎ.ಕ್ಲಾಸಿನಲ್ಲಿ ಓದುತ್ತಿದ್ದ. ಅನೇಕ ಜನ ಶ್ರೀಮಂತರ ಮನೆಯವರು ಈತನಿಗೆ ಹೆಣ್ಣು ಕೊಡುವುದಕ್ಕೆ ಬಂದರು. ಆದರೆ ನರೇಂದ್ರನು ಪ್ರತಿದಿನವೂ ನಿದ್ದೆ ಮಾಡುವಾಗ ಮನಸ್ಸಿನ ಮುಂದೆ ಎರಡು ದೃಶ್ಯಗಳು ಬಂದು ನಿಲ್ಲುತ್ತಿದ್ದವು. ಮೊದಲನೇ ದೃಶ್ಯ ‘ಸುಖಸಂಸಾರ, ಒಳ್ಳೆಯ ಕೆಲಸ, ಬೇಕಾದಷ್ಟು ಸಂಪಾದನೆ”, ಎರಡನೇಯ ದೃಶ್ಯ “ಸಂಸಾರ ಸುಖವನ್ನು ಎಲ್ಲವನ್ನು ತೊರೆದು ಸನ್ಯಾಸಿಯಾಗಿ ಜೀವನದಲ್ಲಿ ದೇವರೊಬ್ಬನನ್ನೇ ನೆಚ್ಚಿಕೊಂಡು ಇರುವ ಚಿತ್ತ”. ಆದರೆ ನರೇಂದ್ರನಿಗೆ ಎರಡನೇ ದೃಶ್ಯ ಸ್ಥಿರವಾಗಿ ಮನದಲ್ಲಿ ನೆಲೆಸಿತ್ತು. ಗುರುಗಳು ಮತ್ತು ನರೇಂದ್ರ ಶ್ರೀ ರಾಮಕೃಷ್ಣ ಪರಮಹಂಸರ ಪರಿಚಯ                       ಕಲ್ಕತ್ತೆಗೆ ಸಮೀಪ ಇರುವ ಹೂಗ್ಲಿ ಜಿಲ್ಲೆಗೆ ಸೇರಿದ ಕಾಮಾರಪುಕುರವೆಂಬ ಗ್ರಾಮ ಅಲ್ಲಿ “ಖುದೀರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರ ಮಣಿದೇವಿ ಎಂಬ ಬ್ರಾಹ್ಮಣ ದಂಪತಿಗಳಿಗೆ 18ನೇ ಮಾರ್ಚ್ 1836ರಲ್ಲಿ ಗಂಡು ಮಗು ಹುಟ್ಟಿತು ಅವರೇ ಶ್ರೀ ರಾಮಕೃಷ್ಣರು”. ರಾಮಕೃಷ್ಣರಿಗೆ ಓದಿನ ಕಡೆ ಹೆಚ್ಚು ಗಮನವಿರಲಿಲ್ಲ ಅದರ ಬದಲು ದೇವದೇವಿಯರ ಕೀರ್ತನೆ ಮಾಡುವುದು, ನಾಟಕಗಳಲ್ಲಿ ಅಭಿನಯಿಸುವುದು, ಪೂಜೆ, ಪ್ರಾರ್ಥನೆ ಇವುಗಳ ಕಡೆಗೆ ಗಮನ ಜಾಸ್ತಿ. ಇವರು ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು. ಇವರು ಆಧ್ಯಾತ್ಮ ಜೀವನದ ಅನುಭವಿಗಳಾಗಿದ್ದರು. ರಾಮಕೃಷ್ಣ ಮತ್ತು ನರೇಂದ್ರನ ಭೇಟಿ             ನರೇಂದ್ರನಾಥನ ಜೀವನದಲ್ಲಿ ಆಧ್ಯಾತ್ಮಿಕ ಗೊಂದಲ ಕಾಡತೊಡಗಿತು. ಅದರ ತೃಪ್ತಿಗಾಗಿ ಪೌರಸ್ತ್ಯ, ಪಾಶ್ಚಾತ್ಯ, ತತ್ವಶಾಸ್ತ್ರಗಳನ್ನು ಓದಲಾರಂಭಿಸಿದರು. ಯಾವ ಪುಸ್ತಕವನ್ನಾಗಲಿ, ಯಾರೊಡನೆ ಮಾತನಾಡಲಿ, ಚರ್ಚಿಸಿದರೂ ಸಮಾಧಾನ ಸಿಕ್ಕಲಿಲ್ಲ. ಏಕೆಂದರೆ ಯಾರಲ್ಲಿಯೂ ಆಧ್ಯಾತ್ಮದ ಬಗ್ಗೆ ಅನುಭವ ಇರಲಿಲ್ಲ. ನರೇಂದ್ರನಿಗೆ ಪರಿಚಿತರಾದ “ರಾಮಚಂದ್ರ ದತ್ತ” ಎಂಬುವವರು ಅವರಿಗೆ “ನೀನು ದೇವರ ವಿಷಯವನ್ನು ಪ್ರತ್ಯಕ್ಷ ಅನುಭವಿಸಿದವರಿಂದ ಕೇಳಬೇಕಾದರೆ ದಕ್ಷೀಣೇಶ್ವರಕ್ಕೆ ಹೋಗು ಅಲ್ಲಿ ಶ್ರೀ ರಾಮಕೃಷ್ಣರೆಂಬ ಭಕ್ತರಿದ್ದಾರೆ ಅವರು ನಿನಗೆ ತೃಪ್ತಿಯನ್ನು ಕೊಟ್ಟಾರು” ಎಂದನು.             ನರೇಂದ್ರನು ತನ್ನ ಸ್ನೇಹಿತರೊಂದಿಗೆ ರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಹೋದ. ನರೇಂದ್ರ ದಕ್ಷಿಣ ದ್ವಾರದ ಮೂಲಕ ರಾಮಕೃಷ್ಣರ ಕೋಣೆಗೆ ಹೋದ. ಶ್ರೀ ರಾಮಕೃಷ್ಣರು ಕಲ್ಕತ್ತೆಗೆ ಭಕ್ತರೊಬ್ಬರ ಮನೆಗೆ ಹೋದಾಗ ನರೇಂದ್ರನು ಹಾಡುವುದನ್ನು ಕೇಳಿದ್ದರು. ಆ ಹಾಡನ್ನು ಹಾಡು ಎಂದು ಹೇಳಿದಾಗ ನರೇಂದ್ರರು “ಓ ಮನವೇ, ನಿನ್ನೂರಿಗೆ ನೀ ತೆರಳು, ಪ್ರಪಂಚವೆಂಬ ಪರದೇಶದಲ್ಲಿ ಏಕೆ ಅಲೆಯುತ್ತಿರುವೆ” ಎಂಬ ಭಾವದ ಹಾಡು ಹಾಡಿದರು ಹಾಡುತ್ತಲೇ ನರೇಂದ್ರ ಹಾಡಿನ ಭಾವದಲ್ಲಿ ಮುಳುಗಿ ಹೋದರು.              ನರೇಂದ್ರನು ಮನಸ್ಸಿನಲ್ಲಿ ಏನೋ ಆಧ್ಯಾತ್ಮಿಕ ವಿಷಯವನ್ನು ರಹಸ್ಯವಾಗಿ ಹೇಳಬಹುದು ಎಂದು ಭಾವಿಸಿದ. ಶ್ರೀ ರಾಮಕೃಷ್ಣರು ನರೇಂದ್ರನ ಕೈಗಳನ್ನು ಹಿಡಿದುಕೊಂಡು ಆನಂದ ಬಾಷ್ಪವನ್ನು ಸುರಿಸತೊಡಗಿದರು. ಅಯ್ಯೋ ನೀನು ಇಷ್ಟು ದಿವಸ ಆದಮೇಲೆ ಬಂದೆಯಲ್ಲ, ಎಷ್ಟು ನಿರ್ಧಯಿ ನೀನು, ನನ್ನನ್ನು ಎಷ್ಟು ದಿವಸ ಕಾಯಿಸಿದೆ ಪ್ರಪಂಚದೊಂದಿಗೆ ಮಾತನಾಡಿ ನನಗೆ ಸಾಕಾಗಿದೆ ಎಂದರು, ಕಾರಣ ಆಧ್ಯಾತ್ಮಿಕ ಜೀವನದ ಅನುಭವಗಳ ನಂತರ ರಾಮಕೃಷ್ಣರನ್ನು ಜನ ಸರಿಯಾಗಿ ತಿಳಿದು ಕೊಳ್ಳಲು ಸಾಧ್ಯವಾಗಲಿಲ್ಲ. ಸುತ್ತಲೂ ಎಲ್ಲರು ಸಂಸಾರಿಗಳು ಅವರಿಗೆ ಆಧ್ಯಾತ್ಮಿಕ ಅನುಭವ ಇಲ್ಲದಿರುವ ಕಾರಣ ರಾಮಕೃಷ್ಣರನ್ನು ಹುಚ್ಚರು ಎನ್ನತೊಡಗಿದರು.             ಎಲ್ಲರಿಗೂ ಕೇಳುತ್ತಿದ್ದ ಪ್ರಶ್ನೆಯನ್ನೇ ನರೇಂದ್ರನು ರಾಮಕೃಷ್ಣರಿಗೆ ಕೇಳಿದ “ಮಹಾಶಯರೆ, ನೀವು ದೇವರನ್ನು ಕಂಡಿರುವಿರಾ?” ಎಂದು ಕೇಳಿದ. ರಾಮಕೃಷ್ಣರು “ಹೌದು ಮಗು ನಾನು ದೇವರನ್ನು ನೋಡಿದ್ದೇನೆ ಎಂದರು. ನಾನು ನಿನ್ನನ್ನು ನೋಡುವುದಕ್ಕಿಂತ ಸ್ಪಷ್ಟವಾಗಿ ಕಾಣುತ್ತಿದ್ದೇನೆ. ನಾನು ನಿನ್ನ ಜೊತೆ ಮಾತನಾಡುವಂತೆ ಮಾತನಾಡ ಬಹುದು ಎಂದರು”.              ನರೇಂದ್ರ ಪ್ರಥಮ ಬಾರಿ ನಾನು ದೇವರನ್ನು ಕಂಡಿದ್ದೇನೆ ಬೇಕಾದರೆ ನಿನಗೂ ತೋರಿಸಬಲ್ಲೆ ಎಂದು ಹೇಳಿದವರನ್ನು ಕಂಡ. ನರೇಂದ್ರನು ಎರಡನೇ ಬಾರಿ ರಾಮಕೃಷ್ಣರನ್ನು ನೋಡಲು ಒಬ್ಬರೇ ಹೋದರು. ನರೇಂದ್ರನನ್ನು ನೋಡಿ ರಾಮಕೃಷ್ಣರಿಗೆ ತುಂಬಾ ಸಂತೋಷವಾಯಿತು. ನರೇಂದ್ರನನ್ನು ಕರೆದು ಪಕ್ಕಕ್ಕೆ ಕುಳಿಸಿಕೊಂಡು ತಮ್ಮ ಬಲಗಾಲನ್ನು ನರೇಂದ್ರನ ಮೇಲೆ ಇಟ್ಟರು. ತಕ್ಷಣವೇ ನರೇಂದ್ರನು ಎಲ್ಲ ಮರೆತು ಹೋದಂತೆ ಭಾಸವಾಯಿತು ಗೋಡೆ ಮೇಲಿದ್ದ ವಸ್ತುಗಳೂ ಕೂಡ ಮಾಯವಾಗುವಂತೆ ಭಾವಿಸಿತು. ನರೇಂದ್ರರು ಆಗ ರಾಮಕೃಷ್ಣರಿಗೆ ನೀವು ನನಗೆ ಏನೋ ಮಾಡುತ್ತಿರುವಿರಿ ನನಗೆ ತಂದೆ, ತಾಯಿ ಇದ್ದಾರೆ ಎಂದು ಕಿರುಚಿಕೊಂಡ. ಇದನ್ನು ಕೇಳಿದ ರಾಮಕೃಷ್ಣರು ಸ್ವಲ್ಪ ನಕ್ಕು, ಸಾಕು ಇವತ್ತಿಗೆ ಇಷ್ಟೇ ಎಂದು ಮತ್ತೊಮ್ಮೆ ಕೈಯಿಂದ ನರೇಂದ್ರನನ್ನು ಸ್ಪರ್ಶ ಮಾಡಿದಾಗ ಹಿಂದಿನ ವ್ಯಕ್ತಿಯಂತೆ ಆದರು.             ರಾಮಕೃಷ್ಣರು ನರೇಂದ್ರನನ್ನು ಮತ್ತೆ ಮತ್ತೆ ಪರೀಕ್ಷೆಗೆ ಒಳಪಡಿಸುತ್ತಿದ್ದರು ಅವರಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಅನುಭವದ ಮೂಲಕ ತಿಳಿಸುತ್ತಿದ್ದರು. ರಾಮಕೃಷ್ಣರು ಹೇಳಿದ ಎಲ್ಲಾ ಮಾತುಗಳನ್ನು ನರೇಂದ್ರ ಪಾಲಿಸುತ್ತಿದ್ದರು. ನರೇಂದ್ರರಿಗೆ ಅನುಭವಗಳು ಹೆಚ್ಚಾದಂತೆ ಗೊತ್ತಾಯಿತು ರಾಮಕೃಷ್ಣರು ಭಗವಂತನನ್ನು ಕಂಡವರು. ಅವರ ವ್ಯಕ್ತಿತ್ವ ಅದರಲ್ಲಿ ತಲ್ಲೀನವಾಗಿದೆ ಎಂಬುದು. ಆಗ ನರೇಂದ್ರ ರಾಮಕೃಷ್ಣರಿಗೆ ಶಿಷ್ಯರಾಗಿ ಬಿಟ್ಟರು. ರಾಮಕೃಷ್ಣರು ಹೇಳುವ ಪ್ರತಿಯೊಂದು ಮಾತುಗಳನ್ನು ತಿಳಿಯುತ್ತ, ಸೋಲುತ್ತ ಬಂದರು ಕೊನೆಗೆ ಸಂಪೂರ್ಣವಾಗಿ ನರೇಂದ್ರ ತನ್ನನ್ನು ಅರ್ಪಣೆ ಮಾಡಿಕೊಂಡನು.             ರಾಮಕೃಷ್ಣರು ನರೇಂದ್ರನನ್ನು ಕಂಡೊಡನೆಯೆ ನಿರ್ಧರಿಸಿದರು ಇವನು ತಮ್ಮ ಸಂದೇಶವನ್ನು ಜಗತ್ತಿಗೆ ಸಾರುವುದಕ್ಕೆ ಬಂದವನು ಎಂದು. ನರೇಂದ್ರನು ರಾಮಕೃಷ್ಣರನ್ನು ನೋಡಲು ವಾರಕ್ಕೆ, ಎರಡು ಬಾರಿ ದಕ್ಷಿಣೇಶ್ವರಕ್ಕೆ ಹೋಗುತ್ತಿದ್ದರು ಒಂದು ವೇಳೆ ನರೇಂದ್ರನು ಬರದೇ ಹೋದರೆ ರಾಮಕೃಷ್ಣರೇ ನರೇಂದ್ರನನ್ನು ಹುಡುಕಿಕೊಂಡು ಕಲ್ಕತ್ತಕ್ಕೆ ಹೋಗುತ್ತಿದ್ದರು.             ನರೇಂದ್ರನಿಗೆ ಪರೀಕ್ಷೆಯ ಸಮಯ ಇದ್ದುದರಿಂದ ರಾಮಕೃಷ್ಣರನ್ನು ನೋಡಲು ಸಾಧ್ಯವಾಗಲಿಲ್ಲ ಇದರಿಂದ ರಾಮಕೃಷ್ಣರು ನರೇಂದ್ರ ಬರುವ ದಾರಿಯನ್ನು ಕಾದು ಸಾಕಾಗಿ ತಮ್ಮ ಹತ್ತಿರ ಬರುವ ಭಕ್ತರಿಗೆಲ್ಲ ನರೇಂದ್ರನ ಬಗ್ಗೆ ಹೇಳುತ್ತಿದ್ದರು ಕೊನೆಗೆ “ಲಾಟು” ಎಂಬ ಭಕ್ತನನ್ನು ಕರೆದುಕೊಂಡು ನರೇಂದ್ರನನ್ನು ನೋಡಲು ಕಲ್ಕತ್ತಗೆ ಹೋದರು. ನರೇಂದ್ರನು ಒಂದು ಮನೆಯ ಅಟ್ಟದ ಮೇಲೆ ಕುಳಿತು ಓದುತ್ತಿದ್ದ ನರೇಂದ್ರನನ್ನು ಕಂಡು ರಾಮಕೃಷ್ಣರಿಗೆ ತುಂಬಾ ಸಂತೋಷವಾಯಿತು.             ಒಂದು ದಿನ ಶ್ರೀ ರಾಮಕೃಷ್ಣರು ನರೇಂದ್ರನಿಗೆ ನಾನು ಹೇಳುವುದನ್ನು ಚೆನ್ನಾಗಿ ಪರೀಕ್ಷೆ ಮಾಡಿ ತೆಗೆದುಕೊ ಎಂದು ಹೇಳುತ್ತಿದ್ದರು. ಇದನ್ನು ಕೇಳಿದ ನರೇಂದ್ರನು ರಾಮಕೃಷ್ಣರಿಗೆ ಯಾರಾದರೂ ಒಂದು ನಾಣ್ಯವನ್ನು ಮುಟ್ಟಿಸಿದರೆ ಸಾಕು ಚೇಳು ಕಚ್ಚಿದಂತೆ ಯಾತನೆಯಾಗುತ್ತಿತ್ತು ಇದನ್ನು ನೋಡಿದ ನರೇಂದ್ರನು ನಿಜವೋ, ಸುಳ್ಳೋ ಎಂದು ತಿಳಿದುಕೊಳ್ಳಲು ರಾಮಕೃಷ್ಣರು ಹೊರಗಡೆ ಹೋದಾಗ ಹಾಸಿಗೆಯ ಕೆಳಗೆ ಒಂದು ರೂಪಾಯಿಯನ್ನು ಇಟ್ಟು ಕೋಣೆಯ ಹೊರಗೆ ನಿಂತು ರಾಮಕೃಷ್ಣರನ್ನು ವೀಕ್ಷಿಸ ತೊಡಗಿದನು. ರಾಮಕೃಷ್ಣ ಎಂದಿನಂತೆ ಕೋಣೆಯ ಒಳಗೆ ಬಂದು ಹಾಸಿಗೆ ಮೇಲೆ ಕುಳಿತು ತಕ್ಷಣವೇ ಎದ್ದು ಬಿಟ್ಟರು. ನಂತರ ಹಾಸಿಗೆಯನ್ನು ತೆಗೆದು ನೋಡಿದಾಗ ಒಂದು ರೂಪಾಯಿ ನಾಣ್ಯವನ್ನು ಕಂಡು ಇದು ನರೇಂದ್ರನದ್ದೇ ಕೆಲಸವಾಗಿರ ಬಹುದು ಎಂದು ಊಹಿಸಿದರು. ರಾಮಕೃಷ್ಣರು ನರೇಂದ್ರನ ಈ ಪರೀಕ್ಷೆಯನ್ನು ತಿಳಿದು ತುಂಬಾ ಸಂತೋಷಪಟ್ಟರು ಕಾರಣ ರಾಮಕೃಷ್ಣರು ಹೇಳುವ ಮಾತನ್ನು ಪರೀಕ್ಷಿಸಿ ನೋಡಿ ನಂತರ ಅದನ್ನು ಒಪ್ಪಿಕೊಳ್ಳಬೇಕು ಎಂದಿದ್ದರು.              ನರೇಂದ್ರ ಹೇಗೆ ರಾಮಕೃಷ್ಣರನ್ನು ಪರೀಕ್ಷೆ ಮಾಡುತ್ತಿದ್ದನೋ ಹಾಗೆ ರಾಮಕೃಷ್ಣನು ನರೇಂದ್ರನನ್ನು ಪರೀಕ್ಷಿಸುತ್ತಿದ್ದನು. ರಾಮಕೃಷ್ಣರಿಗೆ ನರೇಂದ್ರ ಎಂದರೆ ಪ್ರಾಣ ಅವನಿಗೆ ತಿನ್ನಲು ತರುತ್ತಿದ್ದರು. ನರೇಂದ್ರ ಬರುವುದು ತಡವಾದರೆ ಕಲ್ಕತ್ತಾಗೆ ರಾಮಕೃಷ್ಣರೇ ಸ್ವತಃ ಹೋಗಿ ನೋಡಿಕೊಂಡು ಬರುತ್ತಿದ್ದರು. ರಾಮಕೃಷ್ಣರು ನರೇಂದ್ರನನ್ನು ಪರೀಕ್ಷಿಸುತ್ತಲೇ ಆಧ್ಯಾತ್ಮದ ಬಗ್ಗೆ ತಿಳಿಸುತ್ತಿದ್ದರು ಮತ್ತು ಅನುಭವಗಳ ಮೂಲಕ ತಿಳಿಯುವಂತೆ ಮಾಡುತ್ತಿದ್ದರು. ಹೀಗೆ ಗುರು-ಶಿಷ್ಯರ ಸಂಬಂಧ ಅನ್ಯೊನ್ಯವಾಗಿತ್ತು. ಕಷ್ಟದ ಪ್ರಸಂಗಗಳು             ವಿಶ್ವನಾಥದತ್ತರಿಗೆ ತನ್ನ ಮಗನು ಲಾಯರಾಗಬೇಕೆಂಬ ಆಸೆ. ಅದಕ್ಕಾಗಿ ನರೇಂದ್ರನನ್ನು “ನಿಮಾಯಚರಣ ಬೋಸ್” ಎಂಬ ಕಲ್ಕತ್ತೆಯ ಪ್ರಖ್ಯಾತ ಲಾಯರ್ ಬಳಿ ನರೇಂದ್ರನನ್ನು ಸೇರಿಸಿದರು. ನರೇಂದ್ರನಿಗೆ ಮೊದಲಿನಿಂದಲೂ ತ್ಯಾಗಜೀವನದ ಮೇಲೆ ಆಸಕ್ತಿ ಆದರೆ ನರೇಂದ್ರನಿಗೆ ಮನೆಯವರು ಮದುವೆ ಮಾಡಲು ಹುಡುಗಿಯನ್ನು ಹುಡುಕುತ್ತಿದ್ದರು. ನರೇಂದ್ರನಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಆಧ್ಯಾತ್ಮಿಕ ಜೀವನ ನರೇಂದ್ರನನ್ನು ಕೈ ಬೀಸಿ ಕರೆಯುತ್ತಿತ್ತು. ನರೇಂದ್ರನ ಗುರುಗಳಾದ ರಾಮಕೃಷ್ಣರು “ನರೇಂದ್ರ ಬಂದಿರುವುದು ಮದುವೆಯಾಗಿ ಹೆಂಡತಿ ಮಕ್ಕಳಿಗೆ ಆನಂದ ಕೊಡುವುದಕ್ಕಲ್ಲ. ಅವನ ಜೀವನವೇ ಬೇರೆ. ಅಜ್ಞಾನಿಗಳನ್ನು ಭಗವಂತನ ಕಡೆ ಕರೆದುಕೊಂಡು ಹೋಗಬೇಕಾಗಿದೆ. ಇದಕ್ಕೆ ಮದುವೆ ಬಲೆಗೆ ಬಿದ್ದರೆ ಸಾಧ್ಯವಿಲ್ಲ” ಎಂದು ಚಿಂತಿಸುತ್ತಿದ್ದರು. ನರೇಂದ್ರನಿಗೆ ಅನೇಕ ಜನ ಹುಡುಗಿಯನ್ನು ಕೊಡುವುದಕ್ಕೆ ಬಂದರೂ, ಆದರೆ ಅದು ಯಾವ ಯಾವುದೋ ಕಾರಣದಿಂದ ವಿಫಲವಾಗಿ ಹೋಗುತ್ತಿತ್ತು.             1884 ರಲ್ಲಿ ನರೇಂದ್ರ ಬಿ.ಎ. ಪರೀಕ್ಷೆಗೆ ಕುಳಿತಿದ್ದರು. ಇನ್ನೂ ಫಲಿತಾಂಶ ಬಂದಿರಲಿಲ್ಲ. ಕಲ್ಕತ್ತೆಗೆ ನರೇಂದ್ರನು ಎರಡು ಮೈಲು ದೂರದಲ್ಲಿರುವ ವರಾಹನಗರಕ್ಕೆ ಸ್ನೇಹಿತನನ್ನು ನೋಡಲು ಸಂಜೆ ಹೋಗಿದ್ದರು. ಆ ಹೊತ್ತಿಗೆ ನರೇಂದ್ರನ ಮನೆಯಿಂದ ಯಾರೋ ಬಂದು ಆಘಾತಕಾರಿ ವಿಷಯವನ್ನು ಕೊಟ್ಟರು. ವಿಶ್ವನಾಥದತ್ತ ಹೃದಯ ಸ್ಥಂಭದಿಂದ ತೀರಿಹೋದರು ಎಂದು. ನರೇಂದ್ರ ಮನೆಗೆ ಓಡಿಹೋದರು ಅಲ್ಲಿ ಮನೆಯವರು ಎಲ್ಲ ರೋಧಿಸುತ್ತಿದ್ದರು. ಇವರು ಅದನ್ನು ಕಣ್ಣಾರೆ ಕಂಡರು. ಮನಸ್ಸಿನಲ್ಲಿರುವ ನೋವನ್ನು ನುಂಗಿಕೊಂಡು ನಂತರ ಅಂತ್ಯಕ್ರಿಯೆ ಮಾಡಿದರು.             ವಿಶ್ವನಾಥದತ್ತರು ಎಷ್ಟು ಸಂಪಾದನೆಯನ್ನು ಮಾಡುತ್ತಿದ್ದರೋ ಅಷ್ಟೆ ಹಣವನ್ನು ಖರ್ಚು ಮಾಡಿದ್ದರು ಅದರ ಜೊತೆಯಲ್ಲಿಯೇ ಸಾಲವನ್ನು ಮಾಡಿದ್ದರು ಹೀಗಾಗಿ ವಿಶ್ವನಾಥದತ್ತರು ತೀರಿದ ತಕ್ಷಣವೇ ಎಲ್ಲ ಸಾಲಗಾರರು ಹಣವನ್ನು ವಸೂಲಿ ಮಾಡಲು ಬಂದು ಬಿಟ್ಟರು. ಇವರು ಮನೆಯಲ್ಲಿ ಸುಮಾರು 8 ಜನರಿಗೆ ಊಟ ಒದಗಿಸಬೇಕಾಗಿತ್ತು. ನರೇಂದ್ರ ಸಿಕ್ಕಿದ ಸಣ್ಣ ಪುಟ್ಟ ಕೆಲಸವನ್ನು ಮಾಡಿ ಹೇಗೋ ಮನೆಯವರಿಗೆ ಊಟಕ್ಕೆ ಹಣ ಒದಗಿಸುತ್ತಿದ್ದ. ಬಿ.ಎ. ಪರೀಕ್ಷೆ ಪಾಸಾಗಿ ಲಾ ಕಾಲೇಜನ್ನು ಸೇರಿದ ಆದರೆ ಮೆಟ್ಟಿಕೊಳ್ಳುವುದಕ್ಕೆ ಜೋಡು ಚಪ್ಪಲಿ ಇರಲಿಲ್ಲ, ಹಾಕಿಕೊಳ್ಳಲು ಒಂದೊಳ್ಳೆ ಬಟ್ಟೆ ಇರಲಿಲ್ಲ ಹಾಕಿಕೊಂಡ ಬಟ್ಟೆ ಹರಿದು ಹೋಗಿತ್ತು. ನರೇಂದ್ರನು ತನ್ನ ಊಟದ ಪಾಲನ್ನು ಬಿಟ್ಟರೇ ಮನೆಯಲ್ಲಿರುವ ಮತ್ತೊಬ್ಬರಿಗೆ ಊಟ ಸಿಗುತ್ತದೆ ಎಂದು ತನ್ನ ತಾಯಿಗೆ ಸ್ನೇಹಿತರೊಡನೆ ಊಟ ಮಾಡಿದೆ ಎಂದು ಹೇಳಿ ಪಾರ್ಕಿನಲ್ಲಿ ಸ್ವಲ್ಪ ಹೊತ್ತು ಕುಳಿತು ನಂತರ ನೀರನ್ನು ಕುಡಿದು ಮನೆಗೆ ಬರುತ್ತಿದ್ದರು. ಕೆಲವು ಬಾರಿ ಸ್ನೇಹಿತರ ಮನೆಯಲ್ಲಿ ಊಟಕ್ಕೆ ಕರೆದಾಗ ನರೇಂದ್ರನಿಗೆ ಮನೆಯಲ್ಲಿ ಉಪವಾಸವಿರುವ ನೆಂಟರ ನೆನಪಾಗಿ ಊಟ ಮಾಡುವುದಕ್ಕೆ ಮನಸ್ಸು ಬಾರದೆ ಏನೋ ಕೆಲಸವಿದೆ ಎಂದು ಹೇಳಿ ಮನೆಗೆ ಹೋಗಿ ಬಿಡುತ್ತಿದ್ದರು. ಇಷ್ಟೊಂದು ಕಷ್ಟವಿದ್ದರೂ ತನ್ನ ದುಃಖದ ಸ್ಥಿತಿಯನ್ನು ಯಾರಿಗೂ ಹೇಳುತ್ತಿರಲಿಲ್ಲ. ಮನಸ್ಸಿನ ಒಳಗೆ ದುಃಖವಿದ್ದರೂ ಕೂಡ ಹೊರಗಿನಿಂದ ನೋಡಿದರೆ ಅದೇ ಸಂತೋಷವಾದ ಮುಖ.             ನನ್ನ ತಂದೆ ಸತ್ತ ದುಃಖವನ್ನು ಮರೆಯುವುದಕ್ಕೂ ಮೊದಲೇ ಒಂದು ಕೆಲಸಕ್ಕೆ ಅಲೆಯಬೇಕಾಯಿತು. ಹೊಟ್ಟೆಗೆ ಊಟ ಇಲ್ಲದೆ, ಕಾಲಿಗೆ ಚಪ್ಪಲಿ ಇಲ್ಲದೆ, ಉರಿಬಿಸಿಲಿನಲ್ಲಿ ಕೆಲಸಕ್ಕೆಂದು ಅಲೆದಾಡಬೇಕಾಯಿತು. ಇಷ್ಟೊಂದು ಕಷ್ಟಗಳಿಗೆ ಈಡಾದರೂ, ದೇವ ಈಶ್ವರನಲ್ಲಿ ನಂಬಿಕೆ ಮತ್ತು ಅವನ ದಯೆಯಲ್ಲಿ ನಂಬಿಕೆ ಜಾರಲಿಲ್ಲ. ಬಿಸಿಲು ಕಾಲ ಕಳೆಯಿತು, ಮಳೆಗಾಲ ಬಂದಿತು. ಕೆಲಸ ಹುಡುಕುವುದು ಹಾಗೆಯೇ ಮುಂದುವರೆಯಿತು. ಒಂದು ದಿನ ಸಾಯಂಕಾಲ ದಿನವೆಲ್ಲ ಉಪವಾಸ ಮಾಡಿ ಮಳೆಯಲ್ಲಿ ನೆನೆದು ಸೋತ ಕಾಲುಗಳು ಮತ್ತು ದುರ್ಬಲವಾದ ಮನಸ್ಸಿನಿಂದ ಮನೆಗೆ ಹೋಗುತ್ತಿದ್ದರು.             ನರೇಂದ್ರ ದಕ್ಷಿಣೇಶ್ವರಕ್ಕೆ ಶ್ರೀ ರಾಮಕೃಷ್ಣರನ್ನು ನೋಡಲು ಹೋದರು. ಶ್ರೀ ರಾಮಕೃಷ್ಣರನ್ನು ದೇವಿಗೆ ನನ್ನ ಪರವಾಗಿ ಸ್ವಲ್ಪ ಪ್ರಾರ್ಥನೆ ಮಾಡಿ, ನನಗೆ ಕೆಲಸ ಸಿಗಲಿ ಎಂದು ಕೇಳಿದ. ಅದಕ್ಕೆ ರಾಮಕೃಷ್ಣರು ನೀನೆ ಹೋಗಿ ಅವಳನ್ನು ಕೇಳು ಅವಳು ನಿನಗೂ ತಾಯಿಯೇ ನನ್ನೊಬ್ಬನಿಗೆ ಅಲ್ಲ ಎಂದರು. ನೀನು ಕೇಳಿದರೆ ಖಂಡಿತ ನಿನ್ನ ಆಸೆಯನ್ನು ನಡೆಸಿಕೊಡುತ್ತಾಳೆ ಎಂದರು. ಆಗ ಮೊದಲನೇ ಬಾರಿ ನರೇಂದ್ರ ರಾಮಕೃಷ್ಣರು ಹೇಳಿದಂತೆ ದೇವಿಯ ಬಳಿ ನಿಂತ ಆದರೆ ಅವನ ಮನೆಯ ಕಷ್ಟ-ತಾಪತ್ರಯಗಳೆಲ್ಲ ಮರೆತು ಹೋಗಿ ತಾಯಿ ನನಗೆ ಭಕ್ತಿ, ಜ್ಞಾನ, ವೈರಾಗ್ಯ ಕೊಡು ಎಂದು ಕೇಳಿಕೊಂಡ. ಶ್ರೀ ರಾಮಕೃಷ್ಣರು ಅವನನ್ನು ಕೇಳಿದರು, “ಏನು, ದೇವಿಗೆ ಕೆಲಸಕ್ಕಾಗಿ ಪ್ರಾರ್ಥನೆ ಮಾಡಿದೆಯಾ?” “ಮರೆತು ಹೋಯಿತು” ಎಂದ ನರೇಂದ್ರ, ಎರಡನೇ ಬಾರಿ ಪ್ರಾರ್ಥಿಸಿದ ಆದರೆ ಎರಡನೇ ಬಾರಿಯೂ ಅದನ್ನೇ ಪ್ರಾರ್ಥಿಸಿದ್ದನು. ಮೂರನೇ ಬಾರಿ ನರೇಂದ್ರನ “ಜ್ಞಾಪಕಕ್ಕೆ ಬಂತು; ಆದರೆ ಕೇಳುವುದಕ್ಕೆ ಮನಸ್ಸು ಬರಲಿಲ್ಲ” ಎಂದು ರಾಮಕೃಷ್ಣರಿಗೆ ಹೇಳಿದ ಇದನ್ನು ಕೇಳಿ ರಾಮಕೃಷ್ಣರಿಗೆ ತುಂಬಾ ಸಂತೋಷವಾಯಿತು. ರಾಮಕೃಷ್ಣರು “ನಿಮ್ಮ ಮನೆಯವರಿಗೆ ಬಡತನದಿಂದ ಪಾರಾಗುವುದಕ್ಕೆ ಊಟ ಬಟ್ಟೆ ಸಿಕ್ಕುವುದು” ಎಂದು ಹೇಳಿದರು.             ನರೇಂದ್ರನಿಗೆ ಮೊದಲಿನಿಂದಲೂ ಬುದ್ಧನ ಜೀವನದ ಮೇಲೆ ಅತ್ಯಂತ ಪ್ರೀತಿ. ತನ್ನ ಸ್ನೇಹಿತರಾದ ತಾರಕ ಮತ್ತು ಕಾಳಿಯೊಡನೆ ಬುದ್ಧ, ತಪಸ್ಸು ಮಾಡಿದ ಗಯೆಗೆ ಹೋದರು. ನರೇಂದ್ರನು ಬುದ್ಧ ತಪಸ್ಸು ಮಾಡಿದ ಮರದ ಕೆಳಗೆ ಕುಳಿತುಕೊಂಡು ಧ್ಯಾನ ಮಾಡಿದರು. ಕೆಲವು ದಿನಗಳನ್ನು ಅಲ್ಲಿಯೇ ಕಳೆದರು. ನರೇಂದ್ರ ಕಾಶೀಪುರದ ತೋಟದಲ್ಲಿ ಇಲ್ಲದಿರುವುದನ್ನು ಕಂಡು ರಾಮಕೃಷ್ಣರ ಮನಸ್ಸಿಗೆ ಸಮಾಧಾನವಿಲ್ಲದಾಗಿತು. ಶಿಷ್ಯರೆಲ್ಲ ರಾಮಕೃಷ್ಣರಿಗೆ ಸಮಾಧಾನ ಮಾಡುತ್ತಿದ್ದರು ನರೇಂದ್ರನು ಬಂದೇ ಬರುತ್ತಾನೇ ಎಂದು ಹೇಳುತ್ತಿದ್ದರು. ಅದರಂತೆ ನರೇಂದ್ರ ಹಿಂತಿರುಗಿ ಬಂದು  ಶ್ರೀ ರಾಮಕೃಷ್ಣರ ಸೇವೆಯಲ್ಲಿ ತಲ್ಲೀನನಾದ.             ಶ್ರೀ ರಾಮಕೃಷ್ಣರು, “ಈ ಯುವಕರಿಗಿಂತ ದೊಡ್ಡಸಾಧುಗಳು ಇನ್ನಾರಿದ್ದಾರೆ” ಎಂದು ರುದ್ರಾಕ್ಷಿಮಾಲೆ ಮತ್ತು ಬಟ್ಟೆಗಳನ್ನು ತಮ್ಮ ಶಿಷ್ಯರಿಗೆ ಹಂಚಿದರು. ಸನ್ಯಾಸ ತೆಗೆದುಕೊಂಡವರೆ ರಾಮಕೃಷ್ಣ ಸಂಸ್ಥೆಯ ಮೂಲಪುರುಷರಾದರು. ಅವರುಗಳು ಯಾರೆಂದರೆ, ನರೇಂದ್ರ, ರಾಖಾಲ, ಬಾಬುರಾಮ್, ಯೋಗಿನ್, ನಿರಂಜನ್, ತಾರಕ್, ಶಶಿ, ಲಾಟು, ಕಾಳಿ ಮತ್ತು ಗೋಪಾಲದಾದಾ.             ಶ್ರೀ ರಾಮಕೃಷ್ಣರ ನೇತೃತ್ವದಲ್ಲಿ ನರೇಂದ್ರ ಸಾಧನೆ ಮಾಡತೊಡಗಿದ. ಪ್ರತಿ ದಿನವೂ ಸಾಯಂಕಾಲ ನರೇಂದ್ರನನ್ನು ತಮ್ಮ ಕೋಣೆಗೆ ಕರೆದು ಆಧ್ಯಾತ್ಮಿಕ ಜೀವನದ ವಿಷಯಗಳನ್ನೆಲ್ಲಾ ಹೇಳುತ್ತಿದ್ದರು. ರಾಮಕೃಷ್ಣರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಯಿತು. ಎರಡು ದಿನಗಳ ಮೊದಲೇ ಶ್ರೀ ರಾಮಕೃಷ್ಣರು ನರೇಂದ್ರನಿಗೆ ತಮ್ಮಲ್ಲಿರುವ ಸರ್ವಶಕ್ತಿಯನ್ನು ಧಾರೆದರು. “1886ನೇ ಆಗಸ್ಟ್ ಹದಿನಾರನೆ ತಾರಿಖು ರಾತ್ರಿ ಶ್ರೀ ರಾಮಕೃಷ್ಣರು ಭಗವತಿಯ ನಾಮವನ್ನು ಹೇಳಿ ಸಮಾಧಿಗೆ ಹೋದವರು ಪುನಃ ಬರಲಿಲ್ಲ.” ಶಿಷ್ಯರಿಲ್ಲ ಇನ್ನು ಮೇಲೆ ತಬ್ಬಲಿಯಾದರು. ಶ್ರೀ ರಾಮಕೃಷ್ಣರ ನೆನಪು, ಅವರ ಅಮರ ಸಂದೇಶ, ಅವರ ಪ್ರೇಮ ಒಂದೇ ಶಿಷ್ಯರಿಗೆ ಊರುಗೋಲಾಯಿತು. ಸಾಧನೆಗಳು             ಶ್ರೀ ರಾಮಕೃಷ್ಣರು ಸಕಲ ವಿದ್ಯೆಯನ್ನು ಧಾರೆಯರೆದು ಮರಣ ಹೊಂದಿದ ನಂತರ ನರೇಂದ್ರನು ಕಾಶಿ ಪುರಕ್ಕೆ ತೆರಳಿದರು. ಕೆಲವು ದಿನಗಳಾದ ಮೇಲೆ ನರೇಂದ್ರರು ಮತ್ತು ಅವನ ಗುರುಭಾಯಿಗಳೆಲ್ಲ “ಆಂಟ್ ಪುರಕ್ಕೆ” ಹೋಗಿ ಅಲ್ಲಿ ತೀವ್ರವಾದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. ಆತ್ಮನಮೋಕ್ಷ ಮತ್ತು ಜಗತ್ತಿನಹಿತಕ್ಕಾಗಿ ಸನ್ಯಾಸ ವ್ರತವನ್ನು ಕೈಗೊಂಡರು. ಅನಂತರ ಬಾರಾನಗರಕ್ಕೆ ಒಂದು ದಿನ ವಿರಜಾ ಹೋಮವನ್ನು ಮಾಡಿ ವಿಧಿವತ್ತಾಗಿ ಸನ್ಯಾಸ ಸ್ವೀಕರಿಸಿ ಬೇರೆ ಬೇರೆ ಹೆಸರುಗಳನ್ನು ಸ್ವೀಕರಿಸಿದರು.  “ನರೇಂದ್ರ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡು ವಿವೇಕಾನಂದರಾದರು.”             ಸ್ವಾಮಿ ವಿವೇಕಾನಂದರು ಬಂದದ್ದು ಭರತಖಂಡ ಮತ್ತು ಜಗತ್ತಿನ ಉದ್ಧಾರಕ್ಕಾಗಿ. ವಿವೇಕಾನಂದರಾಗಿ ಇವರು ಎಲ್ಲೆಡೆ ತಮ್ಮಲ್ಲಿರುವ ಆಧ್ಯಾತ್ಮದ ಬಗ್ಗೆ ಮತ್ತು ಭರತಖಂಡ ಉದ್ಧಾರಕ್ಕಾಗಿ ಸಾಧನೆಗಳನ್ನು ಮಾಡಲು ಹೊರಟರು. ಕನ್ಯಾಕುಮಾರಿಯ ದೇವಸ್ಥಾನಕ್ಕೆ ಹೋದರು. ಅಲ್ಲಿ ಧ್ಯಾನಸಕ್ತನಾಗಿ ಕುಳಿತುಕೊಳ್ಳಲು ಸ್ಥಳವನ್ನು ಹುಡುಕುತ್ತಿದ್ದಾಗ ಸಮುದ್ರದ ಮಧ್ಯದಲ್ಲಿ ಒಂದು ದೊಡ್ಡ ಭೀಮಾಕಾರದ ಬಂಡೆ ಎದ್ದು ನಿಂತಿತ್ತು. ಅಲ್ಲಿಗೆ ಹೋಗಬೇಕಾದರೆ ದೋಣಿಯಲ್ಲಿ ಹೋಗಬೇಕು ಆದರೆ ವಿವೇಕಾನಂದರ ಹತ್ತಿರ ಕಾಸು ಇರಲಿಲ್ಲ, ಅವರು ಸಮುದ್ರದಲ್ಲಿ ಈಜಿಕೊಂಡು ಬಂಡೆಯನ್ನು ತಲುಪದರು.              ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಭರತಖಂಡದ ವಿಷಯವನ್ನು ಚಿಂತಿಸತೊಡಗಿದರು. ಎಲ್ಲಾ ಭಾಷೆಗಳು, ಜನರು, ಪ್ರಾಂತ್ಯಗಳು ಇದನ್ನೆಲ್ಲ ಒಂದು ಮಾಡಿದ ಹಿಂದೂ ಸಂಸ್ಕøತಿಯ ಸೂತ್ರವನ್ನು ಕಂಡುಹಿಡಿದರು. ಧರ್ಮವೇ ಭಾರತೀಯನ ಜೀವನದ ಉಸಿರು, ಈ ಧರ್ಮ ಜಾಗೃತಿ ಮೂಲಕ ಭರತಖಂಡ ಜಾಗೃತಿಯಾಗ ಬೇಕು ಎಂದು ಚಿಂತಿಸಿದರು. ಹಿಂದೂ ಧರ್ಮದ ಉದಾತ್ತತತ್ವಗಳು ಎಲ್ಲರಿಗೂ ತಿಳಿಯುವಂತೆ ಮಾಡಬೇಕು ಇದರಿಂದ ನಮ್ಮ ಜೀವನದಲ್ಲಿ ಎಲ್ಲವೂ ಸುಧಾರಿಸುವುದು ಎಂದು ತಮ್ಮ ಇಡೀ ಜೀವನವನ್ನು ಅವರು ಮೀಸಲಾಗಿಟ್ಟರು.             ಮೊದಲು ವಿವೇಕಾನಂದರ ಯೋಗ್ಯತೆಯನ್ನು ಮದ್ರಾಸಿನ ಜನಗಳು ಕಂಡುಹಿಡಿದರು. ವಿವೇಕಾನಂದರನ್ನು ಅಮೇರಿಕಾಕ್ಕೆ ಕಳುಹಿಸಲು ಮನೆ ಮನೆಗೆ ಭಿಕ್ಷೆ ಬೇಡಿ ಹಣವನ್ನು ಸಂಗ್ರಹಿಸಿ ಕಳುಹಿಸಿದರು.             1893 ಸೆಪ್ಟಂಬರ್ 11ನೇ ತಾರೀಖು ಚಿಕಾಗೋ ವಿಶ್ವಧರ್ಮ ಸಮ್ಮೇಳನವು ನಗರದಲ್ಲಿರುವ “ಆರ್ಟ್ ಪ್ಯಾಲೇಸ್” ಎಂಬಲ್ಲಿ ಆರಂಭವಾಯಿತು. ಈ ಸಮ್ಮೇಳನದಲ್ಲಿ ಎಲ್ಲಾ ದೇಶದ ಜನಾಂಗಗಳೂ ಇದ್ದರು. ಈ ಸಮ್ಮೇಳನದಲ್ಲಿ ವಿವೇಕಾನಂದರು ಸದಸ್ಯರಾಗಿದ್ದರು. ಎಲ್ಲ ಸದಸ್ಯರು ಮಾತನಾಡಿ ಮುಗಿಸಿದ ನಂತರ ವಿವೇಕಾನಂದರನ್ನು ಮಾತನಾಡಲು ಹೇಳಿದರು ಆಗ ವಿವೇಕಾನಂದರು, “ಅಮೇರಿಕಾದ ನನ್ನ ಸಹೋದರ ಸಹೋದರಿಯರೇ,” ಎಂದು ಆರಂಭಿಸಿದರು. ಈ ಎರಡು ಪದಗಳನ್ನು ಕೇಳಿದ ಕ್ಷಣವೇ ಕಿವಿ ಕಿವುಡಾಗುವಂತೆ ಚಪ್ಪಾಳೆ ತಟ್ಟಿದರು. ಯಾರೂ ಅಪರಿಚಿತರಲ್ಲ, ಯಾರೂ ಬಾಹಿರರಲ್ಲ, ಎಲ್ಲರೂ ಒಂದೇ ಸಂಸಾರಕ್ಕೆ ಸೇರಿದವರಾಗುವರು, “ಹಿಂದೂ ಯಾರನ್ನೂ ದೂರುವುದಕ್ಕೆ ಹೋಗುವುದಿಲ್ಲ, ದೇವರು ಯಾವುದೋ ಒಂದು ಧರ್ಮಕ್ಕೆ ಮಾತ್ರ ಸತ್ಯವನ್ನು ಕೊಟ್ಟು ಉಳಿದವುಗಳಿಗೆ ಸುಳ್ಳನ್ನು ಹಂಚಿಲ್ಲ ಎಂದು ಹೇಳಿದರು.” ಹಿಂದೂ ಧರ್ಮದ ಬಗ್ಗೆ ಕೇಳುವುದಕ್ಕಿಂತ ಮೊದಲು ಅಮೇರಿಕಾದ ಜನ ಭಾರತ ದೇಶದ ಜನರು ಅನಾಗರಿಕರು, ಕಲ್ಲು, ಮಣ್ಣು ಪೂಜಿಸುವವರು ಅವರಿಗೆ ನಾವು ಧರ್ಮ, ನಾಗರಿಕತೆಯ ಬಗ್ಗೆ ತಿಳಿಸಬೇಕೆಂದು ಭಾವಿಸಿದ್ದರು. ಆದರೆ ವಿವೇಕಾನಂದರ ನುಡಿಗಳನ್ನು ಕೇಳಿದ ಮೇಲೆ ಅವರಿಗೆ ಭಾರತೀಯ ಧರ್ಮದ ಬಗ್ಗೆ ಅರಿವು ಉಂಟಾಯಿತು.             20ನೇ ತಾರೀಖು ವಿವೇಕಾನಂದರು “ಕ್ರೈಸ್ತ ಧರ್ಮವನ್ನು” ಟೀಕಿಸಿ ಮಾತನಾಡಿದರು. 21ನೇ ತಾರೀಖು “ಬೌದ್ಧಧರ್ಮ, ಹಿಂದೂ ಧವರ್iದ ಪೂರೈಕೆ” ವಿಷಯದ ಬಗ್ಗೆ ಮಾತನಾಡಿದರು. ವಿವೇಕಾನಂದರಿಗೆ ಅಮೇರಿಕಾದಲ್ಲಿ ಕೀರ್ತಿ ಬಂದಿತು. ಅದರ ಜೊತೆಯಲ್ಲಿಯೇ ಸಭೆಯನ್ನು ಏರ್ಪಡಿಸಿದ್ದ ಕೆಲವು ಕ್ರೈಸ್ತಪಾದ್ರಿಗಳ ಅಸೂಯೆ ಮೇಲೆದ್ದಿತು, ಕಾರಣ ಕ್ರೈಸ್ತ ಧರ್ಮದ ಮಹಿಮೆಯ ಬಗ್ಗೆ ಮಾತನಾಡುವುದಕ್ಕಾಗಿ ವಿಶ್ವಧರ್ಮ ಸಮ್ಮೇಳನವನ್ನು ಅವರು ಏರ್ಪಡಿಸಿದ್ದರು. ಆದರೆ ವಿವೇಕಾನಂದರು ಭಾರತದ ಮಹಿಮೆಯನ್ನು ಹೇಳಿ ಭಾರತಕ್ಕೆ ಕೀರ್ತಿಯನ್ನು ತಂದರು. ಇದನ್ನು ಸಹಿಸಲಾಗದ ಕ್ರೈಸ್ತಪಾದ್ರಿಗಳಿಬ್ಬರು ಜೊತೆ ಸೇರಿ ವಿವೇಕಾನಂದರ ಮತ್ತು ಹಿಂದೂ ಧರ್ಮದ ಬಗ್ಗೆ ಸುಳ್ಳು ಮಾಹಿತಿಯನ್ನು ಹೇಳುತ್ತಾ ಹೊರಟರು. ಆದರೆ ವಿವೇಕಾನಂದರು ಅದನ್ನು ನಿರ್ಲಕ್ಷ್ಯವಾಗಿ ಕಂಡರು. ಅವರು ಸುಳ್ಳು ಮಾಹಿತಿಗಳಿಗೆ ಹೆದರದೆ, ಅಮೇರಿಕಾ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತ ಮುನ್ನುಗ್ಗ ತೊಡಗಿದರು.              1896ನೇ ಏಪ್ರೀಲ್ 15ಕ್ಕೆ ಲಂಡನ್ನಿಗೆ ವಿವೇಕಾನಂದರು ತೆರಳಿದರು. ಇವರ ಕಾರ್ಯಗಳಿಗೆ ಸಹಾಯಕರಾಗಿ “ಶಾರದಾನಂದರು” ಅಲ್ಲಿಗೆ ಬಂದಿದ್ದರು. ಅಲ್ಲಿ ಕೆಲವು ಕಾಲ ಮಿಸ್ ಮುಲ್ಲರ್ ಮನೆಯಲ್ಲಿ ಇದ್ದರು. ಮೇ ಆರಂಭದಲ್ಲಿ ಇವರು “ಜ್ಞಾನಯೋಗದ” ಮೇಲೆ ಉಪನ್ಯಾಸ ಆರಂಭ ಮಾಡಿದರು. ಅಲ್ಲಿ ‘ಧರ್ಮದ ಅವಶ್ಯಕತೆ,’ ‘ವಿಶ್ವಧರ್ಮ,’ ‘ಮಾನವ ಅವನ ತೋರಿಕೆ,’ ಇವುಗಳ ಬಗ್ಗೆ ಮಾತನಾಡಿದರು. ಇದರೊಂದಿಗೆ “ಭಕ್ತಿಯೋಗ”, “ತ್ಯಾಗ”, “ಆತ್ಮ ಸಾಕ್ಷಾತ್ಕಾರ”, ಮುಂತಾದವುಗಳ ಬಗ್ಗೆ ಮಾತನಾಡಿದರು.             ವಿವೇಕಾನಂದರು ಪೌರಶಾಸ್ರ್ತ ವಿದ್ವಾಂಸರಾದ ಪ್ರೊಫೆಸರ್ “ಮಾಕ್ಸ್‍ಮುಲ್ಲರ್” ಅವರನ್ನು ಆಕ್ಸ್‍ಫರ್ಡ್‍ನಲ್ಲಿ ಕಂಡರು. ಮಾಕ್ಸ್‍ಮುಲ್ಲರ್ ಅವರು ಶ್ರೀ ರಾಮಕೃಷ್ಣರ ಮೇಲೆ “ನಿಜವಾದ ಮಹಾತ್ಮ” ಎಂಬ ಲೇಖನವನ್ನು ಹತ್ತೊಂಬತ್ತನೆಯ ಶತಮಾನ ಮಾಸ ಪತ್ತಿಕೆಯಲ್ಲಿ ಬರೆದಿದ್ದರು. ವಿವೇಕಾನಂದರ ಪರಿಚಯವಾದ ಮೇಲೆ ಅವರು ರಾಮಕೃಷ್ಣರ ಬಗ್ಗೆ ತಿಳಿದುಕೊಂಡು “ಜೀವನ ಮತ್ತು ಸಂದೇಶ” ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕವು ಶ್ರೀ ರಾಮಕೃಷ್ಣರ ಮೇಲೆ ಇಂಗ್ಲೀಷ್‍ನಲ್ಲಿ ಬರೆದ ಮೊದಲನೆ ಪುಸ್ತಕವಾಗಿದೆ. ವಿವೇಕಾನಂದರು ಒಂದು ಸಂಘ ಸ್ಥಾಪನೆಯನ್ನು ಮಾಡುವರು ಅದಕ್ಕೆ “ರಾಮಕೃಷ್ಣ ಮಿಷನ್” ಎಂಬ ಹೆಸರು ಇಟ್ಟರು. ಇದರ ಉದ್ದೇಶ ಶ್ರೀ ರಾಮಕೃಷ್ಣ ಪರಮಹಂಸರು ಯಾವ ತತ್ವಗಳನ್ನು ವಿವರಿಸಿದರೂ ಮತ್ತು ತಮ್ಮ ಜೀವನ, ಅನುಷ್ಠಾನದಲ್ಲಿ ತೋರಿದರೊ, ಅವುಗಳ ಪ್ರಚಾರ ಮತ್ತು ತತ್ವಗಳನ್ನು ಅನುಭವಕ್ಕೆ ತಂದುಕೊಳ್ಳಲು ಭಯಸುವ ಜನರಿಗೆ ದೈಹಿಕ, ಮಾನಸಿಕವಾಗಿ ಉನ್ನತಿಗಳಲ್ಲಿ ಸಹಾಯ ಮಾಡುವುದಕ್ಕೆ ಈ ಮಿಷನ್‍ನನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಗೆ ವಿವೇಕಾನಂದರು ಸಮಿತಿಯ ಸಾಧಾರಣ ಸಭಾಪತಿಗಳಾದರು. “ಬ್ರಹ್ಮಾನಂದ” ಸ್ವಾಮಿಗಳು ಕಲ್ಕತ್ತೆಯ ಕೇಂದ್ರಕ್ಕೆ ಸಭಾಪತಿಗಳೂ, “ಯೋಗಾನಂದರು” ಅವರ ಸಹಾಯಕರೂ ಆದರು. 1899ರಲ್ಲಿ ಬೇಲೂರು ಮಠವನ್ನು ಸ್ಥಾಪಿಸಿದರು. ಅಲ್ಲಿ ಒಂದು ಟ್ರಸ್ಟ್ ಡೀಡಿನ ಮೂಲಕ ಅದನ್ನು ನೋಡಿಕೊಳ್ಳುವುದಕ್ಕೆ ಕೆಲವು ಟ್ರಸ್ಟಿಗಳನ್ನು ನೇಮಕಮಾಡಿದರು. ಶ್ರೀ ರಾಮಕೃಷ್ಣ ಮಿಷನ್ ಮಾಡುತ್ತಿದ್ದ ಕೆಲಸವನ್ನೂ ಇವರೇ ನೋಡಿಕೊಳ್ಳಲು ಪ್ರಾರಂಭಿಸಿದರು. ರಾಮಕೃಷ್ಣ ಮಠ ಎನ್ನುವುದು ಸಾಧು ಜೀವನ, ವೇದಾಂತ ಪ್ರಚಾರ ಮುಂತಾದವುಗಳ ಕಡೆ ಹೆಚ್ಚು ಗಮನವನ್ನು ಕೊಡುವುದು. ಶ್ರೀ ರಾಮಕೃಷ್ನ ಮಿಷನ್ ಸ್ಕೂಲು, ಕಾಲೇಜು, ಆಸ್ಪತ್ರೆ ಮುಂತಾದ ಸಾರ್ವಜನಿಕ ಕೆಲಸಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವುದು. ಇವೆರಡರ ಕೇಂದ್ರವೂ ಈಗ ಬೇಲೂರು ಮಠದಲ್ಲಿದೆ. ಭಾರತೀಯರಲ್ಲಿದ್ದ ಜಾಡ್ಯವನ್ನು ದೂರಮಾಡಲು “ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ಮುಂದೆ ಸಾಗಿ” ಎಂದು ತರುಣರಿಗೆ ಹೇಳಿದರು. ಭಾರತದಾದ್ಯಂತ ಸಂಚರಿಸಿ ಜನ ಜಾಗೃತಿಯ ಕಾರ್ಯ ಮಾಡಿದರು. ಸರ್ವಧರ್ಮ ಸಮಭಾವದ ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅತ್ಯುತ್ತಮ ಕಾರ್ಯವನ್ನು ಸ್ವಾಮಿ ವಿವೇಕಾನಂದರು ಮಾಡಿದರು.             ಇವರು 1902 ಜುಲೈ 4ರಂದು ನಿಧನರಾದರು. ಇವರು ಕೇವಲ 39 ವರ್ಷಗಳವರೆಗೆ ಜೀವಿಸಿದ್ದು, ಅಸಾಧಾರಣ ಧರ್ಮ ಜಾಗೃತಿ ಮಾಡಿದರು. ಉಪಸಂಹಾರ              ನರೇಂದ್ರರ ತಮ್ಮ ಶಕ್ತಿ ಸಾಮಥ್ರ್ಯದಿಂದ ಆಧ್ಯಾತ್ಮಿಕ ಬಲದಿಂದ ಸ್ವಾಮಿ ವಿವೇಕಾನಂದರಾದರು. ಮಗುವನ್ನು ಕಳೆದುಕೊಂಡ ತಾಯಿ, ಮಗುವನ್ನೇ ಹುಡುಕುವಂತೆ, ತಾಯಿಯನ್ನು ಕಳೆದುಕೊಂಡ ಮಗು, ತಾಯಿಯನ್ನೇ ಹುಡುಕುವಂತೆ ಹಂಬಲಿಸಿ, ಗುರು-ಶಿಷ್ಯರ ಸಮಾಗಮವಾದಾಗ, ಈಡೀ ಜಗತ್ತೇ ವಿಸ್ಮಯವಾಗುವಂತಹ ಪುಣ್ಯಕಾರ್ಯಗಳ ಮೂಲಕ ಜನಮನವನ್ನು ಗೆದ್ದಂತವರು ಸ್ವಾಮಿ ವಿವೇಕಾನಂದರು. “ವಿವೇಕಾನಂದ ಎಂದರೆ ಹೆಸರೇ ಹೇಳುವಂತೆ, ಜ್ಞಾನ, ಶಕ್ತಿ, ಬೆಳಕು, ಅಧಮ್ಯ ಚೇತನ, ಯಾವುದೋ ಆಧ್ಯಾತ್ಮಿಕ ಆನಂದ, ಅದನ್ನು ಅನುಭವಿಸಿದವರಿಗೆ ಗೊತ್ತು ಅದರ ಶಕ್ತಿ.” ಅವರ ಚರಿತ್ರೆಯನ್ನು ಓದುತ್ತ ಕುಳಿತರೆ ಯಾವುದೋ ಒಂದು ಶಕ್ತಿ ಓದುಗರಿಗೆ ದರ್ಶನವನ್ನು ನೀಡುತ್ತದೆ. ಹೀಗೆ ಇವೆ ಉಪನ್ಯಾಸ ಧರ್ಮ ಕಾರ್ಯಗಳು, ಹಾಗೂ ಮಾಡಿದ ಸೇವೆಗಳು ಅನನ್ಯ ಮತ್ತು ಅಜರಾಮರ, ಅನಾಧಾರಣೀಯ.              ನಾವೆಲ್ಲರೂ ಜೀವನ ಎಂದರೆ ಏನೇನೋ ಆಸೆ, ಆಮಿಷಗಳ ಕಲ್ಪನೆ ಮಾಡಿಕೊಂಡು ಅದನ್ನು ಅನುಭವಿಸುತ್ತೇವೆ ಅದು ನಿಸ್ಸಾರವೆಂದು ಗೊತ್ತಿದ್ದರು ಅದಕ್ಕೆ ಹಂಬಲಿಸುತ್ತೇವೆ. ಆದರೆ ವಿವೇಕಾನಂದರ ವೈಚಾರಿಕ ದೃಷ್ಟಿಕೋನದಲ್ಲಿ “ಜೀವನ” ಎಂದರೆ ಅವರೇ ಹೇಳುವಂತೆ “ಜೀವನ ಕ್ಷಣಿಕವಾದುದು, ಜಗತ್ತಿನ ಸುಖ-ಭೋಗಗಳೆಲ್ಲವೂ ತಾತ್ಕಾಲಿಕವಾದವು, ಯಾರು ಇತರರ ಒಳಿತಿಗೊಸ್ಕರ ತಮ್ಮ ಜೀವನವನ್ನು ಮುಡುಪಾಗಿಡುತ್ತಾರೆಯೋ? ಅವರದೇ ನಿಜವಾದ ಜೀವನ” ಎಂದರು.             ಆತ್ಮೀಯರೇ ಇದನ್ನು ಅರ್ಥೈಸುತ್ತಾ ಹೋದರೆ ಜೀವನ ಹೇಗೆ ಎಂಬುದು ಇವರಿಂದ ತಿಳಿಯಬೇಕಾಗಿದೆ. ನನಗನ್ನಿಸಿದ್ದನ್ನು ಅಭಿವ್ಯಕ್ತಪಡಿಸಿದ್ದೇನೆ. ಸಹೃದಯರಾದ ತಾವುಗಳು ಈ ಲೇಖನವನ್ನು ಓದಿ ಆನಂದಿಸಿ, ನಮ್ಮ ಸಂಸ್ಕಾರ, ಸನಾತ ಧರ್ಮವನ್ನು ಪುರಸ್ಕರಿಸಬೇಕೆಂದು ತಮ್ಮಲ್ಲಿ ಮನವಿ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal