Tumbe Group of International Journals

Full Text


ಕನಸುಗಳ ಬೆನ್ನೇರಿ..


ನಿತ್ಯಶ್ರೀ  ಆರ್

 ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ,

 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.

ನಿದ್ದೆಯಲ್ಲಿ ಕಾಣುವಂತಹದ್ದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು

-.ಪಿ.ಜೆ. ಅಬ್ದುಲ್ ಕಲಾಂ.

ಕಲಾಂರ ಈ ಮಾತುಗಳು ಎಷ್ಟು ಸತ್ಯ! ಹೌದು, ಕನಸು ಕಾಣುವುದು ಬೇರೆ, ಕನಸು ಬೀಳುವುದು ಬೇರೆ. ಆಸೆಗಳಿಗೆ ಕನಸಿನ ರೂಪಕೊಟ್ಡು, ಅವು ನೆರವೇರುವ ಲಕ್ಷಣಗಳಿಲ್ಲವೆಂದು, ಕೊನೇಪಕ್ಷ ಕನಸಲ್ಲಾದರೂ ಈಡೆರಿಸಿಬಿಡುವಾ ಎಂದು ಕನಸುಕಾಣುವುದಿದೆ. ಹಾಗೆ, ಭವಿಷ್ಯದಲ್ಲಿ ನಾನು ಹೀಗಿರಬೇಕು, ಹಾಗಿರಬೇಕು ಎಂದೂ ಕನಸು ಕಾಣುತ್ತೇವೆ. ಗುರಿಗೋ, ಸಾಧನೆಗೋ ಕನಸಿನ ರೂಪಕೊಟ್ಟು ಅದನ್ನು ಈಡೇರಿಸಿಕೊಳ್ಳುವ ಸಲುವಾಗಿ ಪ್ರಯತ್ನಿಸಿ ಕ0ಡ ಕನಸು ನಿಜವಾಗಲಿಲ್ಲವೆ0ದು ನಿದ್ದೆಗೆಟ್ಟು, ಶ್ರಮಪಟ್ಟು ಯಶಸ್ಸುಗಳಿಸುತ್ತೇವೆ.

ಇರಲಿ, ಕನಸು ಕಾಣುವ ವಿಷಯಕ್ಕೆ ಬರೋಣ, ಮನುಷ್ಯನ ದಿನನಿತ್ಯದ ಚಟುವಟಿಕೆಗಳನ್ನು ನಿದ್ದೆಯಲ್ಲಿ ಮೆಲಕುಹಾಕುತ್ತಿರುತ್ತೇವೆ. ಉದಾಹರಣೆಗೆ: ನೋವು-ನಲಿವುಗಳು, ಜಗಳ,ಭಯಾನಕ ಸನ್ನಿವೇಷಗಳು, ಪ್ರಕೃತಿ ತಾಣಗಳು ಹೀಗೆ ಅನೇಕ ಚಟುವಟಿಕೆಗಳ ಮರುಸೃಷ್ಟಿ ನಿದ್ದೆಯಲ್ಲಿ ಚಿತ್ರಗಳ ಮೂಲಕ ಹಾದುಹೋಗುತ್ತವೆ. ಹ್ಹಾ! ಇವೆಲ್ಲಾ ಭಾವಜೀವಿಗಳ ಅನುಭವಕ್ಕೆ ಮಾತ್ರ ಬರುವಂತಹವು. ಕೆಲವರಿರುತ್ತಾರೆ ನಿದ್ದೆಗೆ ಜಾರಿದರೆಂದರೆ ತಾವು ಎಲ್ಲಿ? ಹೇಗೆ? ಮಲಗಿರುತ್ತಿರುತ್ತಾರೆ ಎಂಬ ಅರಿವಿಲ್ಲದೆಯೇ ನಿದ್ರಿಸುತ್ತಿರುತ್ತಾರೆ. ಹೀಗೆ ದಿನಪತ್ರಿಕೆಯಲ್ಲೊಂದು ಸುದ್ದಿ-ನಾಯಿಯೆಂದು ತಿಳಿದು ಚಿರತೆಯ ಪಕ್ಕ ಮಲಗಿದ್ದ ಒಬ್ಬ ಆಸಾಮಿಯ ಬಗ್ಗೆ ಇತ್ತು. ಅವನ ಮನೆಯ ಸಾಕುನಾಯಿಯ ತಲೆನೇವರಿಸುತ್ತಿರುವೆನೆಂದು ಚಿರತೆಯ ತಲೆ ನೇವರಿಸಿದ್ದ. ಅಬ್ಬಾ! ಕೇಳೋದಿಕ್ಕೆ ಎದೆ ಝಲ್ ಎನ್ನುತ್ತೆ. ಪುಣ್ಯಕ್ಕೆ ಅವನ ಮುದ್ದಿಗೋ ಏನೋ ಚಿರತೆ ಅತನನ್ನ ಏನೂ ಮಾಡದೆ ಬಿಟ್ಟಿದೆ. ಮೈಮೇಲೆ ಪ್ರಜ್ಞೆಯಿಲ್ಲದಂತೆ ಗೊರಕೆ ಹೊಡೆಯುತ್ತಾ ಮಲಗಿದರೆ ಹೀಗೆ ಆಗುವುದು, ಯಾವ ಕನಸಿನ ಅರಿವು ಸಹ ಇರಿವುದಿಲ್ಲ. ಅದಕ್ಕೇ ಏನೋ ಕನಸು ಬಿದ್ದಿರುವುದೇ ನೆನಪಿಲ್ಲ ಎನ್ನುತ್ತಾರೆ ಸುಖಪುರುಷರು.

ಇನ್ನು, ಕನಸು ಕಾಣುವ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಪುಟ್ಟ ಕಥೆಯಿದೆ. ಅದೇನೆಂದರೆ, ಪುಟ್ಟ ಬಾಲಕ ಅಪ್ಪಣ್ಣ ತನ್ನ ತಂದೆಯ ಜೊತೆ ಕುದುರೆಗಳನ್ನು ನೋಡಿಕೊಳ್ಳುವ ಕಲಸಕ್ಕೆ ಹೋಗುತ್ತಿದ್ದ. ಆದ ಕಾರಣ ಶಾಲೆಗೆ ಆತ ನಿರಂತರವಾಗಿ ಅಲ್ಲದಿದ್ದರೂ ಸಾಧ್ಯವಾದಷ್ಟು ತರಗತಿಗಳಿಗೆ ಹಾಜರಾಗುತಿದ್ದ. ಒಮ್ಮೆ ತರಗತಿಯಲ್ಲಿ ಅತನ ಗುರುಗಳು ಒಂದು ಪ್ರಬಂಧ ಬರೆಯಲು ಹೇಳಿದರು. ಪ್ರಬಂಧದ ವಿಷಯ-ಕನಸು. ಎಲ್ಲರೂ ಬರೆದರು, ನಮ್ಮ ಅಪ್ಪಣ್ಣನೂ ಬರೆದ. ಗುರುಗಳು ಎಲ್ಲರ ಪ್ರಬಂಧವನ್ನು ಓದಲಾರಂಭಿಸಿದರು. ಒಬ್ಬ ಟೀಚರ್, ಇನ್ನೊಬ್ಬ ಡಾಕ್ಟರ್, ಮತ್ತೊಬ್ಬ ಲಾಯರ್ ಹೀಗೆ ತಮ್ಮ ತಮ್ಮ ಕನಸುಗಳನ್ನು ಬರೆದಿದ್ದರು. ಆದರೆ ಅಪ್ಪಣನ ಪ್ರಬಂಧದಲ್ಲಿ ಹೀಗೆ ಬರೆದಿತ್ತು -"ನಾನೊಬ್ಬ ಸುಂದರ ಬಂಗಲೆಯ ಮತ್ತು ನೂರಾರು ಕುದುರೆಗೆಳ ಮಾಲೀಕನಾಗುತ್ತೇನೆ". ಗುರುಗಳಿಗೆ ತಮಾಷೆಯೆನಿಸಿತು, "ಏನೋ ಇದು, ನೀನೊಬ್ಬ ಕುದುರೆ ಲಾಯಗಳಲ್ಲಿ ಕೆಲಸಮಡುವವನ ಮಗ ನೀನು ಹೇಗೋ ಈ ರೀತಿ ದೊಡ್ಡ ಕನಸನ್ನು ಬರೆದಿದ್ದೀಯ? ನಾನು ಹೇಳಿದ್ದು ನನಸಾಗುವ ಕನಸಿನ ಬಗ್ಗೆ ಬರೀ ಎಂದು, ನಿನ್ನ ಕನಸು ನನಸಾಗದು, ಇದಕ್ಕೆ ನಾನು ಅಂಕಗಳನ್ನು ಕೊಡೋದಿಲ್ಲ ನೀನೇ ಇಟ್ಟುಕೋ" ಎಂದರು. ಅದಕ್ಕೆ ಅಪ್ಪಣ್ಣ "ಹೋಗಲಿ ಬಿಡಿ ಗುರುಗಳೇ ನಿಮ್ಮ ಅಂಕಗಳು ನಿಮಗಿರಲಿ, ನನ್ನ ಕನಸುಗಳು ನನಗಿರಲಿ" ಎಂದ.

ಸುಮಾರು ವರ್ಷಗಳ ನಂತರ, ವಯಸ್ಸಾದ ಗುರುಗಳು ತಮ್ಮ ವಿದ್ಯಾರ್ಥಿಗಳನ್ಣು ಹೊರ ಸಂಚಾರಕ್ಕೆಂದು ಒಂದು ದೊಡ್ಡ ಕುದುರೆ ಸಾಕಣಿಕೆ ಲಾಯಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಬಹಳ ಸುಂದರವಾದ ಬಂಗಲೆ ಸುತ್ತಲೂ ನೂರಾರು ಕುದುರೆಗಳು.ಎಲ್ಲವನ್ನೂ ನೋಡಿದ ನಂತರ ಗುರುಗಳು ಆ ಮನೆ ಮಾಲೀಕರ ಅತಿಥ್ಯ ಸ್ವೀಕರಿಸಲು ಒಳ ಹೋಗುತ್ತಾರೆ. ಗುರುಗಳು, ಗೋಡೆಯ ಮೇಲೆ ನೇತಾಕಿರುವ ಪತ್ರವನ್ನು ಕಂಡು ಓದಲು ಶುರುಮಾಡುತ್ತಾರೆ,ಮನೆ ಮಾಲೀಕ ಇದನ್ನು ನೋಡಿ " ಗುರುಗಳೇ ನೀವು ಇದನ್ನು ಎರಡನೇ ಬಾರಿ ಓದುತ್ತಿರುವಿರಿ" ಎನ್ನುತ್ತಾನೆ. ಅದಕ್ಕೆ ಗುರುಗಳು ಹೇಗೆ? ಎಂದು ಪ್ರಶ್ನಿಸಿದಾಗ ಆ ಮಾಲೀಕ, ತಾನು ಅಪ್ಪಣ್ಣ ತನಗೆ ಅಂಕಗಳನ್ನು ನೀಡದೆ ಕೊಟ್ಟ ಪ್ರಬಂಧವಿದು ಎಂದಾಗ ಗುರುಗಳಿಗೆ ಹಳೆಯದೆಲ್ಲ ನೆನಪಾಗಿ "ಹೌದಪ್ಪಾ ನೀನು ಹೇಳಿದ ಆ ಮಾತು ಖಂಡಿತಾ ಸತ್ಯ ನಿಮ್ಮ ಅಂಕಗಳು ನಿಮಗಿರಲಿ, ನನ್ನ ಕನಸುಗಳು ನನಗಿರಲಿ ಎಂದು, ನಿನ್ನ ಕನಸುಗಳನ್ಣು ನನಸು ಮಾಡಿದ ಛಲಗಾರ ನೀನು, ನಾನು ನಿನ್ನ ಕನಸುಗಳನ್ನು ಕಿತ್ತುಕೊಳ್ಳೋಕೆ ಪ್ರಯತ್ನಿಸಿದ್ದೆ, ಆದರೆ ಯಾರಿಂದಲೂ ಅದನ್ನು ಕಸಿಯಲಾಗಲಿಲ್ಲ ನೋಡು" ಎಂದು ಆತನನ್ನು ಕಂಬನಿ ತುಂಬಿದ ಕಣ್ಣುಗಳಿಂದ ಅಪ್ಪಿಕೊಂಡರು.

ನಮ್ಮ ಈಗಿನ ವಿದ್ಯಾರ್ಥಿಗಳು ಒಂದು ಆಂಕ ಹೆಚ್ಚಾಗಿ ಬರಲಿಲ್ಲವೆಂದು ಬೇಜಾರುಮಾಡಿಕೊಳ್ಳುತ್ತಾರೆ. ಅಂಕಗಳಿಲ್ಲದೆ ನಪಸಾದೆನೆಂದು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಾರೆ. ಇಂತಹವರು ಅಂಕಗಳಿಗಿಂತ ಜೀವನದ ಕನಸುಗಳು ದೊಡ್ಡವು, ದೊಡ್ಡ ಕನಸುಗಳನ್ನು ಕಟ್ಟಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದರೆ ತಮ್ಮ ಜೀವನದ ಗುರಿಗಳನ್ನು ಮುಟ್ಟಬಹುದು, ಸಾಧನೆಯ ಮೆಟ್ಟಿಲೇರಬಹುದು.

ಈಗ ನಿಮ್ಮ ಕನಸುಗಳ ಬೆನ್ನೇರಿ ಕೊಂಚ ಆಲೋಚಿಸಿ ನೋಡಿ, ಏಕೆಂದರೆ? ಅವು ನಿಮ್ಮವೇ...


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal