Tumbe Group of International Journals

Full Text


ಬೆಳ್ವಾವೆಯ ಮಹನೀಯರು

ಅರ್ಚನ ಬಿ.ಆರ್.

ದ್ವಿತೀಯ ಬಿ.ಎ. (ಹೆಚ್.ಇ.ಕೆ.)

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.

archanaarchu1829@gmail.com   Ph: 7624946208

            ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುಮಕೂರು ತಾಲ್ಲೂಕಿನ ಬೆಳ್ಳಾವಿ ಗ್ರಾಮ ದೇವಾಲಯಗಳ ಆಗರ ಎಂದರೆ ಅತಿಶಯೋಕ್ತಿಯಲ್ಲ ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಬೆಳ್ಳಾವಿ ಎಂಬ ಇಂದಿನ ಗ್ರಾಮ ಹಿಂದೆ ಒಂದು ದೊಡ್ಡ ವ್ಯಾಪಾರ ಕೇಂದ್ರ ಧಾರ್ಮಿಕ ಹಾಗೂ ದೈವ ನಿಷ್ಠೆಯ ಪರಂಪರೆಯ ಒಂದು ಅದ್ಭುತ ಪವಾಡಗಳ ಸುಕ್ಷೇತ್ರ. ಇಲ್ಲಿ 101 ದೇವಾಲಯ 101 ಬಾವಿಗಳನ್ನು ಹೊಂದಿರುವ ಶ್ರೀಮಂತ ಧಾರ್ಮಿಕ ಪರಂಪರೆಯ ಸುಕ್ಷೇತ್ರ ಬೆಳ್ಳಾವಿಯಾಗಿದೆ. ಶ್ವೇತ ಕಮಠಾಪುರಿ ಎಂಬುದು ಬೆಳ್ಳಾವಿಗಿದ್ದ ಪುರಾತನ ಹೆಸರು.

 ಈ ಊರಿನಲ್ಲಿ ಜನಿಸಿದ ವೀರಪ್ಪಗೌಡರು ಊರಿನ ಸುತ್ತ-ಮುತ್ತ ಜಮೀನನ್ನು ಎಲ್ಲರೊಂದಿಗೆ ಒಟ್ಟಿಗೆಯಾಗಿ ಊರಿನ ಶ್ರೇಯಾಭಿವೃದ್ಧಿಗೋಸ್ಕರ ತಮ್ಮ ಪ್ರೀತಿಯ ಜನಗಳೊಂದಿಗೆ ಬೇಸಾಯ ಮಾಡುತ್ತಿದ್ದರು. ಎಲ್ಲರ ಬದುಕಿಗೆ ಗೌಡರು ಮಾರ್ಗದರ್ಶಕರಾಗಿದ್ದರು. ಗ್ರಾಮದಲ್ಲಿನ ಎಲ್ಲರ ಕಷ್ಟ ಸುಖಗಳಿಗೆ ಗೌಡರು ಭಾಗಿಯಾಗುತ್ತಿದ್ದರು. ಒಮ್ಮೆ ಗೌಡರು ಗ್ರಾಮದ ಜನರೆಲ್ಲಾ ಸೇರಿಕೊಂಡು ಹೊಲ-ಗದ್ದೆಗಳಿಗೆ ಮಣ್ಣು ಗೊಬ್ಬರಗಳನ್ನು ಗಾಡಿ ಕಟ್ಟಿಕೊಂಡು ತುಂಬಿ ಹೊಡೆಯುತ್ತಿದ್ದರು. ಪ್ರತಿದಿನದಂತೆ ಮಣ್ಣು ತೆಗೆಯುವಾಗ ಆ ಸ್ಥಳದಲ್ಲಿ ಒಂದು ಬಿಳಿ ಆಮೆ ಸಿಕ್ಕಿತು. ಅದನ್ನು ನೋಡಿದ ಜನರು ಬೆರಗಾದರು. ಆಮೆ ತುಂಬಾ ವಯಸ್ಸಾದ ಕಾರಣದಿಂದ ಒದ್ದಾಡತ್ತಾ ಸತ್ತು ಹೋಯಿತು. ಇದು ಊರಿನ ಸೋಮೇಶ್ವರ ದೇವಾಲಯದ ಮುಂದೆ ಮುಚ್ಚಿದರು. ಇದು ಇಂದು ಬಿಳಿಯ+ಆಮೆ=ಬೆಳ್ಳಾಮೆ+ಬೆಳ್ಳಾವೆ = ಬೆಳ್ಳಾವಿ ಆಗಿದೆಯೆಂದು ವಿದ್ವಾಂಸರ ಅಭಿಪ್ರಾಯ.

            ಒಂದು ಕಾಲಕ್ಕೆ ಬೆಳ್ಳಾವಿ ವ್ಯಾಪಾರ ವಾಣಿಜ್ಯ ಕೇಂದ್ರವಾದ ಪಟ್ಟಣವಾಗಿತ್ತು. ಸಾಹಿತಿಗಳ, ವಿಚಾರವಂತರ, ಸಾದು ಸಂತರ ನೆಲೆ ಬೀಡಾಗಿತ್ತು. ಇಲ್ಲಿನ ಪೇಟೆ ಬೀದಿಗಳು ವಿಜಯನಗರದ ಪೇಟೆ ಬೀದಿಗಳಂತೆ ವೈಭವೋಪೇತವಾಗಿದ್ದವು. ಮೈಸೂರು, ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ ಮುಂತಾದ ಕಡೆಗಳಿಂದ ವ್ಯಾಪಾರಿಗಳು ಬರುತ್ತಿದ್ದರು. ಪ್ರತಿ ಸೋಮವಾರದಂದು ಇಲ್ಲಿ ಸಂತೆ ನಡೆಯುತ್ತಿತ್ತು. ಉಳಿದ ಆರು ದಿನಗಳ ಕಾಲ ವಸ್ತುಗಳ ತೂಕ ನಡೆಯುತ್ತಿತ್ತು. ಬೆಳ್ಳಾವಿಯಲ್ಲಿ ನೂರಾರು ಹುರಿಗಡಲೆ ಹುರಿಯುವ ಭಟ್ರುಗಳಿದ್ದು ಇಲ್ಲಿನ ಹುರಿಗಡಲೆ ದೆಹಲಿಯವರೆಗೆ ಪ್ರಖ್ಯಾತಿಯನ್ನು ಹೊಂದಿದ್ದುದು ಒಂದು ಇತಿಹಾಸ. ನೂರೊಂದು ದೇವಾಲಯಗಳು ನೂರೊಂದು ಬಾವಿಗಳಿಂದ ಕೂಡಿದ ಶ್ವೇತಾ ಕಮಠಾಪುರಿ ಒಳ್ಳೆಯ ವ್ಯಾಪಾರ ಕೇಂದ್ರ ಮತ್ತು ನೆಮ್ಮದಿಯ ನೆಲೆಬೀಡಾಗಿತ್ತು.

            ತುಮಕೂರು ಕಲ್ಪತರು ನಾಡು ಎಂದು ಪ್ರಸಿದ್ಧಿಯಾಗಿದೆ. ಅಂತಹ ತುಮಕೂರಿನಿಂದ ಹದಿನೈದು ಕಿ.ಲೋ.ಮೀಟರ್ ದೂರದಲ್ಲಿರುವ “ಬೆಳ್ಳಾವಿ” ಇದು ಒಂದು ಐತಿಹಾಸಿಕ ಸ್ಥಳವಾಗಿ ಇಂದು ಮೆರೆಯುತ್ತಿದೆ.

            ಬೆಳ್ಳಾವಿಯು ಕವಿಗಳ ನೆಲೆಯ ಸ್ಥಳವಾಗಿತ್ತು. ಬೆಳ್ಳಾವಿಯಲ್ಲಿ ಹಲವಾರು ಕವಿಗಳು ಜನಿಸಿದ್ದಾರೆ. ಇದು ಕವಿಗಳ ಬೀಡಾಗಿದೆ, ಇಲ್ಲಿ ಜನಿಸಿದ ಮಹಾನ್ ಕವಿಗಳು ಜಗತ್ತಿನ ಮತ್ತು ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ.

 

ಬೆಳ್ಳಾವಿಯ ಮಹತ್ವ

            ಬೆಳ್ಳಾವಿಯಲ್ಲಿ ನಾವು ಅಚ್ಚರಿ ಪಡುವಂತಹ ಅನೇಕ ಧಾರ್ಮಿಕ ವಿಚಾರಗಳನ್ನು ಕಾಣಬಹುದಾಗಿದೆ. ಉದಾ:- ಪವಿತ್ರವಾದ ಪುಣ್ಯಭೂಮಿ ಎಂದು ಸಹ ಹೇಳುವ ಈ ಬೆಳ್ಳಾವಿಯಲ್ಲಿ ಬೇರೆ ಎಲ್ಲಿಯೂ ನೋಡದಂತಹ 101 ವಿಭಿನ್ನವಾದ ದೇವಾಲಯಗಳು ಮತ್ತು 101 ವಿಭಿನ್ನ ರೀತಿಯ ಬಾವಿಗಳನ್ನು ನಾವು ಕಾಣಬಹುದಾಗಿದೆ. ದೇವಾಲಯಗಳು ಇಂದಿಗೂ ಬಳಕೆಯಲ್ಲಿದ್ದು ಪ್ರತಿನಿತ್ಯವೂ ವಿಭಿನ್ನವಾದ ಪೂಜೆಗಳು, ದೇವತಾ ಕಾರ್ಯಗಳು ನಡೆಯುತ್ತಾ ಬಂದಿದೆ. ಉದಾ:- ಕೆಲವೊಂದು ದೇವಾಲಯಗಳು ಹೀಗಿವೆ.

1. ಕಾರದ ಸ್ವಾಮಿ ದೇವಾಲಯ : ಇದು ಸಹ ಸಿದ್ಧಗಂಗಾ ಮಠದ ಹಾಗೆ ಅನೇಕ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ವ್ಯವಸ್ಥೆ, ವಸತಿ, ಊಟದ ವ್ಯವಸ್ಥೆ ಮಾಡಿ ಆಶ್ರಯ ಸ್ಥಳವಾಗಿದೆ. ಹಾಗೂ ಇನ್ನಿತರ ದೇವಾಲಯಗಳು ಹೀಗಿವೆ. ಸೋಮೇಶ್ವರಸ್ವಾಮಿ, ಮಾರಮ್ಮ, ಆಂಜನೇಯ, ರಾಮದೇವರು, ಕೆಂಪಮ್ಮ, ವೆಂಕಟರಮಣಸ್ವಾಮಿ ಹಾಗೆ ಇನ್ನಿತರ ದೇವಾಲಯಗಳು ಇವೆ. ಈ ಎಲ್ಲಾ ದೇವಾಲಯಗಳಿಗೂ ವರ್ಷಕ್ಕೊಂದು ಬಾರಿ ಜಾತ್ರಾ ಮಹೋತ್ಸವ, ಜನರಿಗೆ ಮನೋರಂಜನೆ ನೀಡುವ ವಿಶೇಷವಾದ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಇಲ್ಲಿ ಬಂದಂತಹ ಭಕ್ತಾಧಿಗಳಿಗೆ ಉಚಿತವಾದ ಪ್ರಸಾದ ವ್ಯವಸ್ಥೆ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ.

ಬೆಳ್ಳಾವಿಯಲ್ಲಿ ಜನಿಸಿದ ಮಹಾನ್ ಕವಿಗಳು

ಬೆಳ್ಳಾವಿ ನರಹರಿಶಾಸ್ತ್ರೀ : (1882 ಸೆಪ್ಟೆಂಬರ್ 21 ಜನನ, 1961 ಜೂನ್ 21 ಮರಣ) ಕನ್ನಡ ಚಿತ್ರರಂಗದ ಪ್ರಮುಖ ಚಿತ್ರಸಾಹಿತಿಗಳಲೊಬ್ಬರು. ಕೆಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದ ಪ್ರಥಮ ಚಿತ್ರಸಾಹಿತಿಯೂ ಹೌದು. ನರಹರಿಶಾಸ್ತ್ರೀಯವರು 1882ರಂದು ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಹುಟ್ಟಿದರು.

ವೃತ್ತಿ ರಂಗಭೂಮಿ : ವೃತ್ತಿಯಲ್ಲಿ ಶಿಕ್ಷಕರಾಗಿದ್ದ ನರಸಿಂಹಶಾಸ್ತ್ರೀಯವರು ಕನ್ನಡ ಮತ್ತು ಸಂಸ್ಕೃತದಲ್ಲಿ ಹೆಚ್ಚಿನ ಪಾಂಡಿತ್ಯ ಪಡೆದಿದ್ದರು. ಗುಬ್ಬಿ ಕಂಪನಿಯಲ್ಲಿ ನಾಟಕ ರಚಿಸಿ ತರಬೇತಿ ನೀಡುತ್ತಿದ್ದ ಶಾಸ್ತ್ರೀಗಳು ಯಾವುದೇ ವಸ್ತುವಿನ ಕುರಿತು ಅಲ್ಪ ಸಮಯದಲ್ಲೇ ಸೊಗಸಾದ ನಾಟಕ ರಚಿಸಬಲ್ಲರೆಂದು ಪ್ರಸಿದ್ಧರಾಗಿದ್ದರು ಎಂದು ವಿಮರ್ಶಕರ ಅಭಿಪ್ರಾಯ. ಇವರು ಖ್ಯಾತ ರಂಗನಟ ಮಹಮ್ಮದ್ ಫೀರ್ ಅವರಿಗೆ ಒಂದೇ ರಾತ್ರಿಯಲ್ಲಿ “ಭಕ್ತ ಮಾರ್ಕಂಡೇಯ” ನಾಟಕ ರಚಿಸಿದರು. ಅಲ್ಲದೇ “ಸತಿ ಸುಲೋಚನ” ಎಂಬ ಚಲನಚಿತ್ರ ರಚಿಸಿದ್ದಾರೆ. ಇವರ ನಾಟಕಗಳು 1) ಕೃಷ್ಣರುಕ್ಮಿಣಿ ಸತ್ಯಭಾಮ.  2) ಮಹಾಸತಿ ಅನುಸೂಯ  3) ಆಂಗ್ಲ ನಾಟಕ ಕಥಾವಳಿ.

 ಕನ್ನಡ ಚಿತ್ರರಂಗ :

  • ಇವರು ಸತಿ ಸುಲೋಚನ ಚಿತ್ರಕಥೆ ರಚಿಸಿದ್ದಾರೆ. ಇದಕ್ಕೆ ಬೇಕಾದ ಗೀತೆಗಳನ್ನು ಸಹ ರಚಿಸಿದ್ದಾರೆ.
  • ಕನ್ನಡದ ಮೂರನೆಯ ವಾಕ್‍ಚಿತ್ರ ಸದಾರಮೆಗೆ ಇವರೇ ಸಾಹಿತ್ಯ ರಚಿಸಿದ್ದಾರೆ.
  • ಇವರು ಪುರಂದರದಾಸರ ಕತೆ ಆಧರಿಸಿದ ದೇವಿ ಫಿಲಂಸ್ ಚಿತ್ರಕ್ಕೆ ಸಾಹಿತ್ಯವನ್ನು ನೀಡಿದ್ದರು.
  • ನಂತರ ಕಲೈವಾಣಿ ಫಿಲಂಸ್‍ನ ಪ್ರಹ್ಲಾದ ಚಿತ್ರಕ್ಕೆ ಸಾಹಿತ್ಯ ನೀಡಿದ್ದರು.
  • ಕೃಷ್ಣಸುಧಾಮ ಚಿತ್ರಕ್ಕೆ ಸಾಹಿತ್ಯವನ್ನು ನೀಡಿದ್ದರು.
  • ಶಾಸ್ತ್ರೀಗಳು ಗುಬ್ಬಿ ಕಂಪನಿಗಾಗಿ 1945ರಲ್ಲಿ ಹೇಮರೆಡ್ಡಿ ಮಲ್ಲಮ್ಮ ಚಿತ್ರಕ್ಕೆ ಸಾಹಿತ್ಯ ನೀಡಿದ್ದರು.

ನಿಧನ : ನರಹರಿಶಾಸ್ತ್ರೀಗಳು ತಮ್ಮ 59ನೇ ವಯಸ್ಸಿನಲ್ಲಿ 1961ರ ಜೂನ್ 21ರಂದು ನಿಧನರಾದರು.

                                                              

ಬೆಳ್ಳಾವಿ ವೆಂಕಟನಾರಾಣಪ್ಪ :  ರಾಜಾ ಸೇವಾಸಕ್ತ ಬೆಳ್ಳಾವೆ ವೆಂಕಟನಾರಾಣಪ್ಪರವರು ತುಮಕೂರು ತಾಲ್ಲೂಕಿನ ಬೆಳ್ಳಾವೆಯಲ್ಲಿ 10-02-1872ರಲ್ಲಿ ಜನಿಸಿದರು. ಇವರ ತಂದೆ ವೆಂಕಟ ಕೃಷ್ಣಯ್ಯ ಮತ್ತು ತಾಯಿ ಲಕ್ಷ್ಮೀದೇವಿ. ಇವರ ವಿದ್ಯಾಭ್ಯಾಸ ಪ್ರಾರಂಭವಾದುದು ಕೂಲಿ ಮಠದಲ್ಲಿ ತುಮಕೂರು ಹಾಗೂ ಬೆಂಗಳೂರುಗಳಲ್ಲಿ ವ್ಯಾಸಂಗ ಮಾಡಿ ಎಂ.ಎ. ಪದವಿ ಪಡೆದರು. ಕೆಲಸ:- ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಸಿಟಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು 1937ರಲ್ಲಿ ಜಮಖಂಡಿಯಲ್ಲಿ ಜರುಗಿದ 22ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ವಿಶೇಷ ಸಾಧನೆ : ಕನ್ನಡದ ಮೊದಲ ವಿಜ್ಞಾನ ಪತ್ರಿಕೆ “ವಿಜ್ಞಾನ”ವನ್ನು ಹೊರತಂದ ಹೆಗ್ಗಳಿಕೆ ಇವರದು. ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷತ್ ಪತ್ರಿಕೆಯಲ್ಲಿ ಸಹ ಇವರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಕೆಳಕಂಡ ಪ್ರಾಚೀನ ಕೃತಿಗಳ ಸಂಪಾದನೆಯಲ್ಲಿ ಇವರು ಸಲ್ಲಿಸಿದ ಸೇವೆ ಅಪಾರ.  * ಪಂಪ ರಾಮಾಯಣ * ಪಂಪ ಭಾರತ * ಚಾವುಂಡರಾಯ ಪುರಾಣ  * ಸೋಮೇಶ್ವರ ಶತಕ  * ಕುಸುಮಾವಳಿ ಕಾವ್ಯ  * ಶಬ್ದಮಣಿ ದರ್ಪಣ.

            1940ರ ವರ್ಷದಲ್ಲಿ ಮೈಸೂರು ಮಹಾರಾಜರು ಈ ಹಿರಿಯರನ್ನು ರಾಜಸೇವಾಸಕ್ತ ಬಿರುದಿನ ಮೂಲಕ ಸನ್ಮಾನಿಸಿದರು. ಎಲ್ಲಾ ಶ್ರೇಷ್ಠಗಳಿಂದಲೇ ಕೂಡಿದ್ದರೂ ದೇಹವೆಂಬ ಈ ಬದುಕಿಗೆ ಅಂತ್ಯವಿದೆ ಎಂಬುದನ್ನು ಸಾರುವಂತ ಈ ಮಹಾನ್ ಸಾಧಕ ಆಗಸ್ಟ್ 3 1943ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಕನ್ನಡ ನಾಡಿಗೆ ಅವರು ಕೊಟ್ಟ ಅನನ್ಯ ಕೊಡುಗೆಗಳಿಂದಾಗಿ ಅವರು ಈ ನಾಡಿನ ಆಂತರ್ಯದ ಚೇತನದೊಂದಿಗೆ ನಿರಂತರವಾಗಿದ್ದಾರೆ. ಈ ಮಹಾನ್ ಚೇತನ ಇಂದು ಸ್ಮರಣೀಯವಾಗಿದೆ.

ಜಿ.ಎಸ್.ಸಿದ್ಧಲಿಂಗಯ್ಯ (1931-1992) : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಖ್ಯಾತ ವಿಮರ್ಶಕ ಕವಿ ಸಾಹಿತಿ ಡಾ: ಜಿ.ಎಸ್.ಸಿದ್ಧಲಿಂಗಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅದರ ಚಟುವಟಿಕೆಗಳನ್ನು ತಾಲ್ಲೂಕು ಮಟ್ಟದವರೆಗೂ ಕೊಂಡೊಯ್ದ ಸಿದ್ಧಲಿಂಯ್ಯ ಅವರು ಪರಿಷತ್ತಿನ ಹಣಕಾಸಿನ ವ್ಯವಹಾರದ ಬಗ್ಗೆ, ಕೈಗೊಂಡ ನಿರ್ಣಯಗಳು ಮಹತ್ವವಾದುದು. ಜಿ.ಎಸ್.ಸಿದ್ಧಲಿಂಗಯ್ಯ ಜನನ: 20ನೇ ಫೆಬ್ರವರಿ 1931 “ಬೆಳ್ಳಾವೆ” ತುಮಕೂರು ಜಿಲ್ಲೆ.  ವೃತ್ತಿ:- ಪ್ರಧ್ಯಾಪಕ, ಪ್ರಾಂಶುಪಾಲ, ಪ್ರವೃತ್ತಿ:- ಕವಿ, ಲೇಖಕ. ರಾಷ್ಟ್ರೀಯತೆ: ಭಾರತೀಯ. ಕಾಲ: 20ನೇ ಶತಮಾನ. ಪ್ರಶಸ್ತಿ: ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ.  ಕೃತಿಗಳು: ಕವನ ಸಂಕಲನಗಳು: 1. ರಸಗಂಗೆ,  2. ಉತ್ತರ,  3. ಚಿತ್ರವಿಚಿತ್ರ  4. ಐವತ್ತರ ನೆರಳು.  5. ಋಷ್ಯಶೃಂಗ  6. ಹೇಂಕೂಟ  7. ಬಿಂದು  8. ಮುಖಾಮುಖಿ  9 ಮಣ್ಣಿಗಿಳಿದ ಆಕಾಶ.

ಚಿಂತನೆ: 1. ಬಿಂದುವಿನಿಂದ.

ಜೀವನ ಚರಿತ್ರೆ: 1) ಮಹಾನುಭಾವಬುದ್ಧ 2) ವಿರತಿಯ ಸಿರಿ ಸಪ್ಪಣ್ಣ 3) ಬಸವಣ್ಣ  4) ವಚನ ಗುಮ್ಮಟ  5) ಬಾಲ್ಕಿಯ ಪಟ್ಟದೇವರು.  ಅನುವಾದಗಳು:- 1) ಸ್ವಾಮಿನಿಗಮಾನಂದ 2) ನೂರೊಂದು ಕಥೆಗಳು 3) ದಾದಾ ಉತ್ತರಿಸುತ್ತಾರೆ.  4) ಯೋಗಿಗುರು 5) ಪ್ರಕಟಿಸುವ ಸ್ಥೈರ್ಯ. ಸಂಪಾದನೆ: 1) ಶತಾಬ್ದದೀಪ 2) ಸಾಲು ದೀಪಗಳು 3) ಜಂಗಮಜ್ಯೋತಿ 4) ಬಸವಸಂದೇಶ  5) ಜನ್ನ 6) ಮುರುಗೋಡು.

ಪ್ರಶಸ್ತಿಗಳು: 1) ಕಾವ್ಯಾನಂದ ಪ್ರಶಸ್ತಿ. 2) ರಾಜ್ಯೋತ್ಸವ ಪ್ರಶಸ್ತಿ  3) ರಾಜರತ್ನ 4) ಮಾಸ್ತಿ ಪ್ರಶಸ್ತಿ  5) ಬಸವಶ್ರೀ  ಪ್ರಶಸ್ತಿ  6) ಬಾಪು ಪ್ರಶಸ್ತಿ 7) ಕೆಂಪೇಗೌಡ ಪ್ರಶಸ್ತಿ  8) ಶರಣ ಪ್ರಶಸ್ತಿ  9) ಮೂಜಗಂ ಪ್ರಶಸ್ತಿ.

ಪ್ರೊ. ಆರ್.ರಾಜಪ್ಪ : ಶ್ವೇತಾ ಕಮಟಾಪುರಿಯ ಮತ್ತೊಬ್ಬರು ಕಿರೀಟ ಪ್ರಾಯರಾದವರೆಂದರೆ ಪ್ರೊ.ಆರ್. ರಾಚಪ್ಪನವರು. ಇವರು ಇದೇ ಅಂದರೆ 2012ರಲ್ಲಿ ನಡೆದ ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ಬಡವರು ಹಾಗೂ ದೈವದಲ್ಲಿ ನಂಬಿಕೆವುಳ್ಳ ಸಂಪ್ರದಾಯಸ್ಥ ಮನೆತವರು. ತಂದೆ ರೇವಣ್ಣ ತಾಯಿ ಸಿದ್ದಮ್ಮಣ್ಣಿಯವರಿಗೆ ದಿನಾಂಕ:10-09-1935ರಲ್ಲಿ ಜನಿಸಿದರು. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರುವೆಂಬಂತೆ ತಾಯಿಯಿಂದ ಇವರಿಗೆ ಒಳ್ಳೆಯ ಸಂಸ್ಕಾರ ಜೀವನ ದೊರಕಿತು. ಬೆಳ್ಳಾವೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಇವರು ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಪದವಿ ಪಡೆಯುವುದರ ಜೊತೆ ಸಂಸ್ಕೃತವನ್ನು ಅಧ್ಯಯನ ಮಾಡಿದ್ದರು. ಕನ್ನಡ ಸಾಹಿತ್ಯದ ಪಂಪ ಕವಿಯಿಂದ ಪ್ರಭಾವಿತರಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. 1) ಸಾಹಿತ್ಯ ಮನನ  2) ಯಾರುತ್ತರ 3) ಗುಬ್ಬಿ ತೋಟದಪ್ಪನವರು- ಜೀವನ ಚರಿತ್ರೆ  4) ಶರಣಾ ಕಥಾ ಪಂಚಕ - ಹರಿಹರನ ರಗಳೆಗಳ ಸಂಪಾದಿತ ಕೃತಿ. 5) ಜೇಡರ ದಾಸೀಮಯ್ಯನ ವಚನಗಳು - ಸಂಪಾದಿತ ಕೃತಿ 6) ಬೆಳ್ಳಾವೆಯ ನರಹರಿಶಾಸ್ತ್ರೀಗಳು-ಜೀವನ ಚರಿತ್ರೆ 7) ವಚನಗಂಗಾ - 400 ವಚನಗಳು - ಆಧುನಿಕ ವಚನಗಳು  8) ಸಮಾಕರ್ಷ ಸಂಪುಟ 12 ಲೇಖನಗಳ ಸಂಕಲನ 9) ವೀರಶೈವ ಚಂಪೂಕಾವ್ಯಗಳ - ಕರ್ನಾಟಕ ವಿ.ವಿ. ಧಾರವಾಡ 10) ಸ್ನೇಹ ಕಾರ್ತಿಕ - ಸಂಪಾದಿತ ಕೃತಿ 11)ಸಿದ್ಧಗಂಗಾಶ್ರೀ -ಸಂಪಾದಿತ ಕೃತಿ 12) ಶಿವಗಂಗಾ ಸಿರಿ - ಸಂಪಾದಿತ ಕೃತಿ 13) ವಿವಿಧ ಸಂಪಾದನಾ ಲೇಖನಗಳು ವಿಮರ್ಶಾ ಲೇಖನಗಳು.

ಪ್ರಶಸ್ತಿಗಳು : 1) ಕೆಂಪೇಗೌಡ ಪ್ರಶಸ್ತಿ 2) ಕಿರಣ ಪ್ರಭಾಪ್ರಶಸ್ತಿ 3) ಗೋರೂರು ಪ್ರತಿಷ್ಠಾನ ಪ್ರಶಸ್ತಿ 4) ತುಮಕೂರು ಜಿಲ್ಲಾ ಸಾಹಿತಿ - ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಮುಂತಾದ ಗೌರವ ಪುರಸ್ಕಾರಗಳಿಗೆ ಭಾಜನರಾದ ಇವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಬೆಳ್ಳಾವಿಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.

ಬೆಳ್ಳಾವೆ ರುದ್ರಪ್ಪ ಶಾಸ್ತ್ರಿಗಳು : ಶ್ವೇತ ಕಮಠಾಪುರಿ (ಬೆಳ್ಳಾವಿ)ಯ ಅಶ್ವಿನಿದೇವತೆಗಳೆಂದರೆ ಬೆಳ್ಳಾವಿ ಶ್ರೀ ನರಹರಿಶಾಸ್ತ್ರೀಗಳು ಹಾಗೂ ರುದ್ರಪ್ಪಶಾಸ್ತ್ರೀಗಳು. ಇವರಿಬ್ಬರು ಗ್ರಾಮದ ಅಧಿದೇವತೆಯಾದ ಶ್ರೀ ಸೋಮೇಶ್ವರನನ್ನು ತಮ್ಮ ಕೃತಿಗಳಲ್ಲಿ ಸ್ತುತಿಸಿದ್ದಾರೆ. ಶ್ರೀ ರುದ್ರಶಾಸ್ತ್ರೀಗಳು ಶಿವಲಿಂಗಕ್ಕೆ ತಾವೇ ಕಾಂತಿಯಿಡುತ್ತಿದ್ದರು. ಉತ್ತಮ ತೈಲವರ್ಣ ಚಿತ್ರಕಾರರಾಗಿದ್ದರು, ಇವರ ಬಳಿ ಗ್ರಂಥ ಸಂಪತ್ತು ಅಪಾರವಾಗಿತ್ತು. ಕಾರದಾಸ್ವಾಮಿ ಚರಿತ್ರೆ, ಸಿದ್ಧಗಿರಿ ಮಹಾತ್ಮೆ, ಸಂಕ್ಷಿಪ್ತ ಪೂಜಾವಿಧಿ, ಇತ್ಯಾದಿ ಕೃತಿಗಳು ಗ್ರಂಥಗಳಾಗಿವೆ. ಇವರು ಶ್ರೀ ಮುದ್ರಂರಂಭಾಪುರಿ ಪೀಠದ ಆಸ್ಥಾನ ವಿದ್ವಾಂಸರಾಗಿದ್ದರು. ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳಲ್ಲಿ ಉದ್ಧಾಮ ಪಂಡಿತರಾಗಿದ್ದರು. ಬೆಳ್ಳಾವಿಯ ಆಸ್ಥಾನದ ವಿದ್ವಾನ್, ಆಸ್ಥಾನ ಪುರೋಹಿತರಾಗಿದ್ದ ಪಂಡಿತ ರುದ್ರಶಾಸ್ತ್ರೀಗಳು ತುಮಕೂರು ಮಂಡಳದ ವೀರಶೈವ ಸಾಹಿತ್ಯಾಂಬರದಲ್ಲಿ ದೃವತಾರೆಯಾಗಿ ಬೆಳಗುತ್ತಿದ್ದಾರೆ. ಇವರು 1938ರಲ್ಲಿ ಲಿಂಗೈಕ್ಯರಾದರು.

            ಬೆಳ್ಳಾವಿಯ ಕೀರ್ತನ ಕೇಸರಿ ಗುರುಪಾದ ಸ್ವಾಮಿಗಳು: ಇವರು ಕರಿಕಥೆಯಲ್ಲಿ ಶ್ರೇಷ್ಠ ವಿದ್ವಾಂಸರು. ಇವರು ಒಳ್ಳೆಯ ಸಂಗೀತ ತಾಳಕ್ಕೆ ತಕ್ಕಂತೆ ಕುಣಿತ ಸಂದರ್ಭಕ್ಕೆ ತಕ್ಕಂತೆ ಉಪಕಥೆಗಳನ್ನು ರಚಿಸಿದ್ದಾರೆ. ಇವರ ಕಥೆಗಳು ಎಂದರೆ ಸುತ್ತ-ಮುತ್ತಲ ಹಳ್ಳಿಯ ಜನರು ಮೈಮರೆತು ಕೇಳುತ್ತಿದ್ದರು. ಗುರುಪಾದ ಸ್ವಾಮಿಗಳು ನೋಡಲು ಬಹಳ ದಡೂತಿ ಆಕಾರ, ಗುಂಡುಮುಖ ಒಳ್ಳೆಯ ವಾಕ್‍ಚಾತುರ್ಯ ಅಲ್ಲದೇ ಒಳ್ಳೆಯ ಪಿಟೀಲು ವಾದಕರು ಇವರು ಇಡೀ ಕರ್ನಾಟಕದ ಉದ್ದಕ್ಕೂ ತಮ್ಮ ಕಲೆಯನ್ನು ಪ್ರದರ್ಶಿಸಿ “ಕೀರ್ತನ ಕೇಸರಿ” ಎಂಬ ಬಿರುದನ್ನು ಗಳಿಸಿದಂತೆ ಮಹಾತ್ಮರಾಗಿದೆ. ಇವರು ಅನೇಕ ಶಿಷ್ಯರನ್ನು ಒಳಗೊಂಡಿದ್ದಾರೆ. ಅವರೆಲ್ಲಾ ಡಾ: ಲಕ್ಷ್ಮಣ್‍ದಾಸ್ ಪ್ರಮುಖರಾಗಿದ್ದಾರೆ. ಇಂದಿಗೂ ಕೂಡ ಅವರ ಕಲೆಯ ಮೂಲಕ ಅಮರರೆನಿಸಿದ್ದಾರೆ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal