Tumbe Group of International Journals

Full Text


ಊರುಕೇರಿ ಮತ್ತು ಸಾಮಾಜಿಕ ಪ್ರಜ್ಞೆ

ಪ್ರೊ. ಅಜಿತ್ಕುಮಾರ್

ಸಹ ಪ್ರಾಧ್ಯಾಪಕರು,

ಕನ್ನಡ ವಿಭಾಗ, ಸ.ಪ್ರ.ದ. ಕಾಲೇಜು, ತುಮಕೂರು.

            ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಸಿದ್ಧಲಿಂಗಯ್ಯನವರು ಪ್ರಮುಖರಾದವರು. ಬೆಂಗಳೂರಿನ ಮಾಗಡಿ ಸಮೀಪದ ಮಂಚನಬೆಲೆ ಇವರ ಊರು. ಸಮಾಜದ ಕೆಳಸ್ತರದ ಸಮುದಾಯದ ನೋವನ್ನು ಹಾಡನ್ನಾಗಿಸಿ, ಇತರರ ಕಿವಿಗೆ ತಲುಪಿಸಿ, ಕಣ್ತೆರೆಸಿದ ಕಾರಣದಿಂದ `ದಲಿತ ಕವಿ’ ಎನ್ನುವ ಅಭಿದಾನ ಇವರಿಗೆ ಅನ್ವರ್ಥವಾಗಿದೆ.

            ಸಿದ್ಧಲಿಂಗಯ್ಯನವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ಸಹಾಯಕರಾಗಿ, ಅಧ್ಯಾಪಕರಾಗಿ, ಮುಖ್ಯಸ್ಥರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ರಚನಾತ್ಮಕ ಕರ್ತವ್ಯ ನಿರ್ವಹಿಸಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದಾರೆ. ನೃಪತುಂಗ ಪ್ರಶಸ್ತಿ ಹಾಗೂ ನಾಡೋಜ ಗೌರವಕ್ಕೂ ಭಾಜನರಾಗಿದ್ದಾರೆ.

            `ಹೊಲೆಮಾದಿಗರ ಹಾಡು’ ಕವನ ಸಂಕಲನದೊಂದಿಗೆ ಆರಂಭವಾದ ಇವರ ಸಾಹಿತ್ಯ ಕೃಷಿ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಮೆರವಣಿಗೆ, ಏಕಲವ್ಯ, ನೆಲಸಮ, ಹಕ್ಕಿನೋಟ, ಗ್ರಾಮದೇವತೆ ಮೊದಲಾದ ಅನನ್ಯ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದೆ. ತನ್ನ ಸಮುದಾಯದ ಅನುಭವವನ್ನು ಕಾವ್ಯವಾಗಿಸಿ, ಕಾವ್ಯ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡಿದ ಸಿದ್ಧಲಿಂಗಯ್ಯನವರಿಂದ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಿದೆ.

            ಡಾ. ಸಿದ್ಧಲಿಂಗಯ್ಯನವರು ತಮ್ಮ ಆತ್ಮಚರಿತ್ರೆಯನ್ನು `ಊರುಕೇರಿ’ ಎನ್ನುವ ಹೆಸರಿನಿಂದ ಪ್ರಕಟಿಸಿದ್ದಾರೆ. ಇದು ಎರಡು ಭಾಗಗಳಲ್ಲಿ ಪ್ರಕಟವಾಗಿದೆ. ಈ ಕೃತಿಯು ಹಲವಾರು ಕಾರಣಗಳಿಂದ ಗಮನ ಸೆಳೆಯುತ್ತದೆ. ಪ್ರಸ್ತುತ  ಲೇಖನದಲ್ಲಿ `ಊರುಕೇರಿ ಮತ್ತು ಸಾಮಾಜಿಕ ಪ್ರಜ್ಞೆ’ ಎನ್ನುವ ವಿಷಯದಲ್ಲಿ ಕೆಲವೊಂದು ಪ್ರಮುಖ ಅಂಶಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಇಂಗ್ಲೀಷ್‍ನ ಂuಣo ಃiogಡಿಚಿಠಿhಥಿಗೆ ಸಂವಾದಿಯಾಗಿರುವ ಆತ್ಮಚರಿತ್ರೆ ಎಂದರೆ ತಮ್ಮ ಜೀವನ ಚರಿತ್ರೆಯನ್ನು ತಾವೇ ಬರೆಯುವುದು. ಇಂತಹ ಬರಹಗಳಲ್ಲಿ ಸ್ವಪ್ರಶಂಸೆ, ವ್ಯಕ್ತಿತ್ವದ ವೈಭವೀಕರಣವೂ ನಡೆಯಬಹುದು. ಆದರೆ `ಊರುಕೇರಿ’ ಕೃತಿಯು ಇದಕ್ಕೆ ಅಪವಾದವೆಂದರೆ ತಪ್ಪಾಗಲಾರದು. ಇಲ್ಲಿನ ಬಿಡಿಬಿಡಿಯಾದ ಪ್ರಸಂಗಗಳ ನಿರೂಪಣಾ ಕ್ರಮ, ಯಾವುದೇ ಕೃತಕತೆ ಇಲ್ಲದ ಭಾಷಾ ಪ್ರಯೋಗ, ಸಹೃದಯರಿಗೆ ಆಪ್ತವೆನಿಸುತ್ತದೆ. ಆತ್ಮಚರಿತ್ರೆಯಲ್ಲಿ ಲೇಖಕರು ತಮಗೆ ಸಂಬಂಧಿಸಿದ ಬಾಲ್ಯ, ಉದ್ಯೋಗ, ಬದುಕಿನ ವಿವಿಧ ಘಟ್ಟಗಳು, ರಸಗಳಿಗೆಗಳು, ಸ್ನೇಹಿತರು ಹೀಗೆ ವೈವಿಧ್ಯಮಯ ವಿವರಗಳನ್ನು ಕೊಡುತ್ತಾರೆ. ಇಂತಹ ವಿವರಗಳಲ್ಲಿ ಸಮಾಜದ ಸ್ಥಿತಿ-ಗತಿಯನ್ನು ತೋರಿಸುವ ಮತ್ತು ಅಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಹೇಗೆ ಸಾಧ್ಯವಾಗಿಸಬಹುದೆಂಬುದನ್ನು ಸೂಕ್ಷ್ಮವಾಗಿ ತೋರಿಸಿಕೊಡುತ್ತಾರೆ. ಸಿದ್ಧಲಿಂಗಯ್ಯನವರು ವೈಯಕ್ತಿಕ ನೆಲೆಯಲ್ಲಿ ಮತ್ತು ತಮ್ಮ ಸಂಪರ್ಕಕ್ಕೆ ಬಂದ ಇತರರ ವ್ಯಕ್ತಿತ್ವಗಳಲ್ಲಿ ಅಂತರ್ಗತವಾದ `ಸಾಮಾಜಿಕ ಪ್ರಜ್ಞೆ’ಯನ್ನು ಪರಿಚಯಿಸುವ ಮೂಲಕ ಈ ಕೆಳಗಿನ ವಿವರಗಳ ಮೂಲಕ ಮನಗಾಣಿಸುತ್ತಾರೆ.

            ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಸಂಜೆ ತರಗತಿಗಳನ್ನು ನಡೆಸುವುದು. ಇದರಿಂದ ಶಿಕ್ಷಣದ ಮಹತ್ವವನ್ನು ತಿಳಿಸುವ ಮೂಲಕ ಅಕ್ಷರಕ್ರಾಂತಿಯ ಪ್ರಕ್ರಿಯೆಯ ಒಳಗಡೆ ತೊಡಗಿಸಿಕೊಳ್ಳುವುದು.

            ಸ್ಥಾನಮಾನ ಅಂತಸ್ತಿನ ಹಂಗು ಇಲ್ಲದೆ ಎಲ್ಲರೊಳಗೊಂದಾಗುವ, ಶ್ರೀಮಂತಿಕೆಯ ಪ್ರದರ್ಶನವಿಲ್ಲದೆ ಸಹಜ ಜೀವನ ನಡೆಸುವುದೂ ಬದಲಾವಣೆಗೆ ಹಾತೊರೆಯುವ ವ್ಯಕ್ತಿತ್ವಗಳಲ್ಲಿ ಕಂಡುಬರುತ್ತದೆ. ಬೀದಿಯಲ್ಲಿ ನಿದ್ದೆ, ಬಸ್‍ಸ್ಟಾಂಡಿನಲ್ಲಿ ನಿದ್ದೆ, ಬೀದಿಯಲ್ಲಿ ಊಟ ಮೊದಲಾದ ಪ್ರಸಂಗಗಳು ಸಾಮಾನ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ವಿಚಾರವಾಗಿ ಕಂಡುಬರುತ್ತದೆ.

            ಸಮಸಮಾಜದ ಆಶಯ ಉಳ್ಳವರಲ್ಲಿ ವೈಚಾರಿಕ ಪ್ರಜ್ಞೆಯು ಸದಾ ಎಚ್ಚರವಾಗಿರುತ್ತದೆ. ಸಿದ್ಧಲಿಂಗಯ್ಯನವರ ಊರುಕೇರಿಯಲ್ಲಿ ಮತ್ತೆ ನಮ್ಮ ದೇವತೆಯ ಪ್ರಸಂಗ, ದೇವಾಲಯ ಪ್ರವೇಶದ ಪ್ರಸಂಗ, ದೇವರು ಕೊಂಡಕ್ಕೆ ಬಿದ್ದದ್ದು, ಜ್ಯೋತಿಷಿಯ ಮಗಳು, ಕತ್ತೆ ಮತ್ತು ಧರ್ಮ, ಜಾತಿಯ ವಿಷ ಕುಡಿದವರು, ಇಂತಹ ಕಡೆಗಳಲ್ಲಿ ಸಾಮಾನ್ಯರ ಬದುಕು ಹಸನಾಗಲು ಮೌಢ್ಯಗಳಿಂದ ಬಿಡುಗಡೆ ಒಂದೇ ದಾರಿ ಎಂದು ಪ್ರತಿಪಾದಿಸುತ್ತಾರೆ.

            ಸಮಾಜದಲ್ಲಿನ ಅಸಮಾನತೆಗೆ ಅಧಿಕಾರದ ದರ್ಪವೂ ಕಾರಣವಾಗಿದ್ದು ಅದನ್ನು ಹೋಗಲಾಡಿಸಲು, ಲಂಚ/ಭ್ರಷ್ಟಾಚಾರದ ವಿರುದ್ಧದ ಮನೋಭಾವ ಪ್ರದರ್ಶಿಸಿದ ಪ್ರಸಂಗಗಳಾದ ಜೇಬಿನಿಂದ ಕೈತೆಗಿ, ಕವಿತೆಯ ಲಂಚ ಮೊದಲಾದವುವನ್ನು ಉದಾಹರಿಸಬಹುದು.

            ಬಡತನದ ಕಾರಣದಿಂದ ಬಡಜೀವನಗಳು ನಲುಗುವ ಸಾಲದ ಮಗು, ಬೆಂಕಿ ಹಚ್ಚಿಕೊಂಡವರು ಮೊದಲಾದ ಪ್ರಸಂಗಗಳನ್ನು ಕಟ್ಟಿಕೊಡುವ ಮೂಲಕ ನಮ್ಮ ಸಮಾಜದಲ್ಲಿನ ಶೋಷಣೆಯ ಭೀಕರ ಮುಖಗಳನ್ನು ಪರಿಚಯಿಸುತ್ತಾರೆ.     ಆಡಂಬರದ ವಿವಾಹದ ಬದಲು ಸರಳ ವಿವಾಹದ ಏರ್ಪಾಡಿಗೆ ಮನಸ್ಸು ಮಾಡಬೇಕು ಎಂದು ಉನ್ನತ ಹುದ್ದೆಯಲ್ಲಿರುವವರ, ಸಾಮಾಜಿಕವಾಗಿ ಗೌರವದ ಸ್ಥಾನದಲ್ಲಿರುವವರು ಸರಳ ವಿವಾಹ ಮಾಡಿಕೊಂಡಿರುವುದನ್ನು ಉಲ್ಲೇಖಿಸುತ್ತಾರೆ. ಅದಕ್ಕೆ ಸಾಕ್ಷಿಗಳಾಗಿದ್ದ ಕೆ.ಎಚ್.ರಂಗನಾಥ್, ಪೂರ್ಣಚಂದ್ರ ತೇಜಸ್ವಿ ಮೊದಲಾದವರನ್ನು ನೆನಪಿಸಿಕೊಳ್ಳುತ್ತಾರೆ.

            ಆತ್ಮಹತ್ಯೆಯಂತೆ ವಿಚಾರಗಳನ್ನು ಜಾಣ್ಮೆಯಿಂದ ನಿರ್ವಹಿಸುವ ಸಿದ್ಧಲಿಂಗಯ್ಯನವರಲ್ಲಿದ್ದ ಸಮಾಜಮುಖಿ ಜೀವಪರ ಪ್ರಜ್ಞೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ.    ನಾಟಕದ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ ಎನ್ನುವುದನ್ನು ಪ್ರಸನ್ನ ಅವರ ರಂಗಚಟುವಟಿಕೆಗಳನ್ನು ಉಲ್ಲೇಖಿಸುತ್ತಾರೆ.

            ಕಾಳೇಗೌಡ ನಾಗವಾರ ಕ್ಷೌರಿಕನಿಗೆ ಸ್ವಂತ ಅಂಗಡಿ ಆರಂಭಿಸಲು ಸಾಲ ತೆಗೆಸಿಕೊಡುವುದು, ದಲಿತನೊಬ್ಬನಿಗೆ ಹೋಟೆಲ್ ಆರಂಭಿಸಲು ನೆರವಾಗುವುದು ಇದು ಸಾಮಾಜಿಕ ಕಾಳಜಿಯಿಂದಲೇ ಒಡಮೂಡಿರುವುದು ಎನ್ನುವುದನ್ನು ಕಂಡುಕೊಳ್ಳಬಹುದು.

            ಸಾಮಾಜಿಕ ಬದಲಾವಣೆಗೆ ಅಧಿಕಾರದಲ್ಲಿರುವವರು ಕಾರಣರಾಗಬೇಕು ಎನ್ನುವುದನ್ನು ತಿಳಿಸಲು ಐ.ಎ.ಎಸ್. ಶ್ರೇಣಿಯ ಅಧಿಕಾರಿಗಳಾದ, ವಿಶೇಷ ಅಧಿಕಾರಿಗಳಾಗಿದ್ದ, ಡಾ. ಮುಡಬಿ ಹಾಗೂ ಕೆ.ಎಂ.ಕೋಟಿ ಎನ್ನುವವರು ಬಸ್ಸಿನಲ್ಲಿ ಪ್ರಯಾಣಿಸುವಾಗ ಬಡವರ ಬಗೆಗೆ ವ್ಯಕ್ತಪಡಿಸಿದ ಕಾಳಜಿಯನ್ನು ಉಲ್ಲೇಖಿಸುತ್ತಾರೆ.

            ಈ ಕೃತಿಯಲ್ಲಿ ಸಮಾಜದಲ್ಲಿದ್ದ ವಿಕೃತಿಯ ಜಾತಿಯ ವಿಷ ಕುಡಿದವರು, ಜಾತಿಯ ಕಾರಣಕ್ಕಾಗಿ ಬಾಡಿಗೆಗೆ ಮನೆ ಕೊಡಲು ನಿರಾಕರಿಸಿದ್ದು ಇತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿ ಸಾಮಾಜಿಕ ಎಚ್ಚರವನ್ನು ಒಡಮೂಡಿಸಲು ಪ್ರಯತ್ನಿಸಿದ್ದಾರೆ ಮತ್ತು ಆತ್ಮಕತೆ ವೈಯಕ್ತಿಕ ನೆಲೆಗಟ್ಟಿನಿಂದ ಸಾಮುದಾಯಿಕ ಚೌಕಟ್ಟಿನೆಡೆಗೆ ಸಾಗಿರುವುದನ್ನು ಕಾಣಬಹುದು.

            ಹೀಗೆ ಆತ್ಮಕತೆಯೊಂದು ಸಮಾಜ ಕ್ರಮಿಸಬೇಕಾದ ಗತಿಯನ್ನು ಸೂಕ್ಷ್ಮವಾಗಿ ನಿರ್ದೇಶಿಸಿರುವುದನ್ನು ಕೃತಿಯಲ್ಲಿ ಕಾಣಬಹುದು.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal