ಕನ್ನಡ ಭಾಷೆಯ ಸುತ್ತಮುತ್ತ ಕೃಷ್ಣನಾಯ್ಕ ಕನ್ನಡ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಈ ಒಂದು ವಿಷಯವನ್ನು ಕುರಿತು ಬರೆಯಲು ಬಹು ಮುಖ್ಯ ಕಾರಣ ನನ್ನ ವೈಯಕ್ತಿಕ ಅನುಭವ. ನನ್ನ ಶೈಕ್ಷಣಿಕ ಭಾಷೆ ಕನ್ನಡ, ಪರಿಸರದ ಭಾಷೆ ತೆಲಗು, ಮನೆಯಲ್ಲಿ ಬಳಸುವ ಭಾಷೆ ಲಂಬಾಣಿ. ಕೆಲವು ಸಂದರ್ಭದಲ್ಲಿ ಈ ಮೂರು ಭಾಷೆಗಳು ಸಂಗಮವಾಗುವುದುಂಟು, ಈ ಮೂರು ಭಾಷೆ ಬಲ್ಲ ನನ್ನಂತಹ ಮತ್ತೊಬ್ಬ ಗೆಳೆಯನ ಜೊತೆ ಮಾತನಾಡುವಾಗ ಲಿಪಿಯಿರದ ಜೀವಂತ ಭಾಷೆಯಾಗಿರುವ ಲಂಬಾಣಿ ಭಾಷೆಯಲ್ಲಿ ನಾನು ಗಮನಿಸಿದಂತೆ ವ್ಯವಸಾಯಕ್ಕೆ ಸಂಬಂದಿಸಿದ ಪದಗಳು ಅಂದರೆ ನೇಗಿಲು, ಕುಂಟೆ ಇತ್ಯಾದಿ ಪದಗಳು ಇಲ್ಲ. ತಾವು ವಾಸಿಸುವ ಪ್ರದೇಶದ ಪ್ರಾದೇಶಿಕ ಭಾಷೆಯಲ್ಲಿ ಇರುವ ಪದಗಳನ್ನೇ ಬಳಸುತ್ತಾರೆ. ಉದಾಹರಣೆಗೆ ಕರ್ನಾಟಕದ ಲಂಬಾಣಿಗಳಾದರೆ ನೇಗಿಲು, ಕುಂಟೆ ಕನ್ನಡ ಪದಗಳನ್ನೇ ಸ್ವೀಕರಿಸಿ ಅವುಗಳನ್ನೇ ಬಳಸಿ ಅವಗಳನ್ನೇ ತಮ್ಮ ಭಾಷೆಗಳಲ್ಲಿ ಬಳಸುತ್ತಾರೆ. ಆಂಧ್ರ್ರಪ್ರದೇಶದ ಲಂಬಾಣಿಗಳಾದರೆ ಮಡಕ, ಗುಂಡಕ (ನೇಗಿಲು, ಕುಂಟೆ) ತಮ್ಮ ಭಾಷೆಯದೇ ಎಂದು ಭಾವಿಸಿ ತಮ್ಮದಾಗಿಸಿಕ್ಕೊಳುತ್ತಾರೆ. ಕನ್ನಡದಲ್ಲಿ ಬಸ್ಸು, ಕಾರು, ಮೋಟಾರು ಬಳಕೆಯ ಹಾಗೆ, ತಮಿಳು ನಾಡಿನ ಲಂಬಾಣಿಗರಾದರೆ ತಮಿಳಿನ ಪದಗಳನ್ನು ತಮ್ಮ ಭಾಷೆಯ ಪದಗಳನ್ನಾಗಿಸಿಕೊಳುತ್ತಾರೆ. ಈ ಮೇಲಿನ ಅಂಶಗಳನ್ನು ಪರಿಶೀಲಿಸಿ ನೋಡಿದರೆ ಮೂಲದಲ್ಲಿ ಈ ಜನಾಂಗದವರ ವೃತ್ತಿ ವ್ಯವಸಾಯ ಆಗಿರುವುದಿಲ್ಲ ಎಂದು ತಿಳಿಯಬಹುದು. ಯಾವುದೇ ಒಂದು ಜನಾಂಗವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಆ ಜನಾಂಗದ ಭಾಷೆಯನ್ನು ವೈಜ್ಞಾನಿಕವಾಗಿ ತಿಳಿದುಕೊಂಡರೆ ಸಾಕು. ಜನಾಂಗವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬಹುದು. “ಭಾರತವನ್ನು ಮಣಿಸಲು ಬ್ರಿಟಿಷರು ಕೈಗೊಂಡ ಪ್ರಮೂಖ ಮಾರ್ಗಗಳಲ್ಲಿ ಇದು ಒಂದು”. ಕರ್ನಾಟಕದ ಗಡಿ ಪ್ರದೇಶದ ತೆಲಗು ಕನ್ನಡ ಮಿಶ್ರತ ಭಾಷೆಯ ಮತ್ತೊಂದು ಮುಖ ನೋಡಬಹುದು. ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗಡಿ ಅಂಚಿನಲ್ಲಿರುವ ಜನ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಕಲ್ಯಾಣದುರ್ಗ ತಾಲ್ಲೂಕಿನ ಗಡಿ ಅಂಚಿನ ಜನ ಬಳಸುವ ಭಾಷೆ ತುಂಬ ವಿಷಿಷ್ಠವಾಗಿರುತ್ತದೆ. ಬಿರಬಿರನೆ ಹತ್ತು - ಬೇಗಬೇಗನೆ ಹತ್ತು, ಬಿರ ತೆಲಗುಪದ, ಹತ್ತು ಕನ್ನಡಪದ. ಚಂಚಿ ತಗೊಂಬ- ಚಂಚಿ- ಸಂಚಿ (ತೆಲಗು) ತಗೊಂಬ (ಕನ್ನಡ) , ಬಾಳೆ ಹಣ್ಣು – ತೆಲಗಿನಲ್ಲಿ ಅರಟ ಪಂಡು- ಗಡಿ ಭಾಗಗಳಲ್ಲಿ ಬಾಳಪಂಡು, ಬಾಳೆ- ಬಾಳ- ಹಣ್ಣು- ಪಂಡು ಇವು ಮಿಶ್ರವಾಗಿ ಬಾಳ ಪಂಡು ಆಗಿಬಿಡುತ್ತದೆ. ಕನ್ನಡದ ಬಟ್ಟೆ ತೆಲಗಿನಲ್ಲಿ ಗುಡ್ಡಲು ಗಡಿ ಭಾಗಗಳಲ್ಲಿ ಬಟ್ಟಲು ಆಗಿಬಿಡುತ್ತದೆ. ತೆಲುಗಿನ (ಮಡಕ)ನೇಗಿಲು ಪದ ಗಡಿ ತಾಲ್ಲೂಕುಗಳಾದ ಸಿರಾ, ಮಧುಗಿರಿ , ಚಳ್ಳಕೆರೆ, ಹಿರಿಯೂರಿನ ಕೆಲವು ಪ್ರದೇಶಗಳಳ್ಲಿ ಮಡಕೆ ಎಂದು ಬಳಕೆಯಾಗುತ್ತದೆ (ಅವನು ಮಡಿಕೆ ಹೊಡೆಯುವುದಕ್ಕೆ ಹೋಗಿದ್ದಾನೆ) ಇಲ್ಲಿ ಕೊಡುಕೊಳ್ಳುವ ಸಂಸ್ಕøತಿ ಎದ್ದು ಕಾಣುತ್ತದೆ. ಜೊತೆಗೆ ಇಲ್ಲಿನ ಜನಗಳಲ್ಲಿ ಭಾಷೆಯ ಬಗ್ಗೆ ತಾರತಮ್ಯ, ವೈಶಮ್ಯ, ದ್ವೇಷ ಇಲ್ಲ. ಪರಸ್ಪರ ಸಾಮಾಜಿಕ ಪರಿಸರದಲ್ಲಿ ಹೆಣ್ಣನ್ನು ಕೊಡುವುದು, ತೆಗೆದುಕೊಳ್ಳುವುದು ಸಾಮಾನ್ಯ. ಭಾಷೆ ಸಂಬಂಧಗಳನ್ನು ಬೆಸೆಯುತ್ತದೆ. ಇಲ್ಲಿ ಸಾಮಾಜಿಕ ಸಂಬಂಧದ ಬೆಸುಗೆ ಎದ್ದು ಕಾಣುತ್ತದೆ. ಭಾಷೆಯ ಕೆಲಸ ಸಂವಹನ ಮಾತ್ರವಲ್ಲ ಸಾಮಾಜಿಕ ಸಂಭಂದಗಳನ್ನ ಬೆಳೆಸುವುದು, ಬೆಸೆಯುವುದು, ಎಲ್ಲಾ ಜೀವಿಗಳಲ್ಲೂ ಇದು ನಡೆಯುತ್ತದೆ. ಅದಕ್ಕೆ ಭಾಷಾ ಶಾಸ್ತ್ರಜ್ಞನೊಬ್ಬ ಹೇಳುವುದು ಭಾಷೆ ಎಂಬ ಬೆಳಕು ಇಲ್ಲದಿದ್ದರೆ ಮನುಷ್ಯ ಅಜ್ಞಾನದ ಕತ್ತಲಲ್ಲಿ ಮುಳುಗಿರುತ್ತಿದ್ದ ಎಂದು. ಮನುಷ್ಯ ಪ್ರಾಣಿಗಳೆಲ್ಲೆಲ್ಲಾ ಅತ್ಯುತ್ತಮ ಸ್ಥಾನ ಪಡೆಯಲು ಭಾಷೆಯೂ ಒಂದು ಪ್ರಮುಖ ಕಾರಣ. ಪ್ರಪಂಚದಲ್ಲಿ ಸುಮಾರು 7000 ಭಾಷೆಗಳಿದೆ ಎಂದು ಕೆಲವು ವರದಿಗಳು ಹೇಳುತ್ತವೆ. ಇವುಗಳಲ್ಲಿ ಅನೇಕ ಭಾಷೆಗಳು ನಶಿಸಿ ಹೋಗುತ್ತಿವೆ. ಕಾರಣ ಅವುಗಳನ್ನ ಬಳಸುವ ಜನಾಂಗ ಬೇರೆ ಭಾಷೆಗಳ ಪ್ರಭಾವಕ್ಕೆ ಒಳಗಾದಾಗ ತಮ್ಮ ಮೂಲ ಭಾಷೆಯನ್ನ ಕೈ ಬಿಡುತ್ತಾರೆ. ಯಾವುದೇ ಒಂದು ಭಾಷೆ ಉಳಿಯ ಬೇಕಾದರೆ ದೊಡ್ಡ ಹೋರಾಟ ಮಾಡುವ ಅಗತ್ಯವೇನೂ ಇಲ್ಲ. ತಮ್ಮ ತಮ್ಮ ಮನೆಗಳಲ್ಲಿ ತಮ್ಮ ತಮ್ಮ ಪರಿಸರದಲ್ಲಿ ತಮ್ಮ ಭಾಷೆಯನ್ನ ಬಳಸಿದರೆ ಸಾಕು ಭಾಷೆ ಉಳಿಯುತ್ತದೆ ಬೆಳೆಯುತ್ತದೆ. ಇನ್ನು ಕನ್ನಡ ಭಾಷೆಯ ಬಗ್ಗೆ ಎಲ್ಲರಿಗೂ ತಿಳಿದಿರುವಂತೆ ಕನ್ನಡ ತುಂಬಾ ಪ್ರಾಚೀನ ಭಾಷೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ತುಂಬಾ ವೈಜ್ಞಾನಿಕವಾಗಿ ರಚನೆಗೊಂಡ ಭಾಷೆ, ಉಚ್ಚರಿಸಿದಂತೆಯೇ ಬರೆಯುವ ಭಾಷೆ. ಕ್ರಿ.ಪೂ. 230ರ ಕಾಲದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿಯೂ ಕನ್ನಡದ ಉಲ್ಲೇಖವಿದೆ. ಗ್ರೀಕ್ ಮತ್ತು ಸಂಸ್ಕøತ ಭಾಷೆಗಳನ್ನ ಬಿಟ್ಟರೆ ತುಂಬಾ ಪ್ರಾಚೀನತೆಯನ್ನ ಉಳ್ಳ ಭಾಷೆ ಕನ್ನಡ. ವಿನೋಬಬಾವೆರವರ ಪ್ರಕಾರ ವಿಶ್ವ ಲಿಪಿಗಳ ರಾಣಿ ಕನ್ನಡ . ಹಿಂದಿಯನ್ನ ಬಿಟ್ಟರೆ ಭಾರತದ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳನ್ನ ಪಡೆದ ಭಾಷೆ ಕನ್ನಡ.