Tumbe Group of International Journals

Full Text


ಕನಸಿನೊಳಗೊಂದು ಮನಸು...

ನವೀನಕುಮಾರ ಗು. ತಿಪ್ಪಾ

ಸಂಶೋಧನಾ ವಿದ್ಯಾರ್ಥಿ

ಸಮಾಜಕಾರ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ – 580003

+91 9663247006


 ‘ಕನಸು ಮತ್ತು ಮನಸು’ ಎರಡು ಸ್ಪರ್ಶಿಸಲಾಗದ ಅತ್ಯದ್ಭುತವಾದ ಸಂವೇದನಶೀಲವಾದ ಅಮೂರ್ತ ಪದಗಳು. ಬೆಳಕು ಇಲ್ಲದ ದಾರಿಯಲಿ ನಾವು ನಡೆಯಬಹುದು ಆದರೆ ಕನಸುಗಳು ಇಲ್ಲದ ದಾರಿಯಲಿ ನಾವು ಜೀವನವನ್ನು ಮುನ್ನೇಡಸಲಿಕ್ಕೆ ಸಾಧ್ಯವಿಲ್ಲವೆಂದು, ಕವಿವಾಣಿಗಳ ಮೂಲಕ ಅಶರೀರವಾದ ಪ್ರತಿಧ್ವನಿ ನಿತ್ಯ ಹೊರ ಸೂಸುತ್ತಲಿದೆ.

ಕನಸಿಲ್ಲದೇ ಮನಸಿಲ್ಲ, ಮನಸು ಇಲ್ಲದೇ ಮನುಜ ಪಂಥ ಇಲ್ಲವೆಂದರೆ ತಪ್ಪಾಗಲಿಕ್ಕಿಲ್ಲ. ಪ್ರತಿಯೊಬ್ಬರಿಗೂ ಮನಸಿದೆ, ಆ ಮನಸಿನಲ್ಲಿ ಹೊಂಬೆಳಕು ಬೀರುವ ಕನಸಿನ ಅತ್ಯುದ್ಭುತ ಲಯ ರಾಗ ತಾಳವಿದೆ. ಕಾಣುವ ಕನಸನ್ನು ಅಭಿವ್ಯಕ್ತಗೊಳಿಸುವ ಪಾರದರ್ಶಕ ಸಾಮಥ್ರ್ಯವಿದೆ. ಆದರೆ ಕನಸಿನೊಳಗೆ ಮನಸನ್ನು ಕಟ್ಟುವ ಶಕ್ತಿ ಸಾಮಥ್ರ್ಯವಿರುವವರು ಬಹಳ ವಿರಳ ಹಾಗೂ ಅದರ ವಿವೇಚನೆಯ ಪರಿಯೇ ಇರದ ಹಲವಾರು ಮನಸುಗಳು ಕೇವಲ ಅಸ್ಥಿತ್ವದಲ್ಲಿದ್ದರೂ ಸಹ ನಿಷ್ಪ್ರಯೋಜಕವಾಗಿ ಮನಸುಗಳ ಅಂತರಲೋಕದಲ್ಲಿ ಸಂಚರಿಸುತ್ತಿರುತ್ತವೆ. ಆ ಮನಸುಗಳ ವೇದನೆ ಇಷ್ಟೇ ಅಸ್ಥಿತ್ವದ ಹುಡುಕಾಟ. ಮನಸಿಗೆ ಸ್ಥಿರತೆಯ ಕೊರತೆಯಾದರೆ, ಕನಸಿಗೆ ಮುನ್ನುಗ್ಗುವ ಹಂಬಲದ ಹೆಬ್ಬಯಕೆ, ಗುರುತಿಲ್ಲದ ಮನಸು ಗುರುತಿಸುವಿಕೆಯತ್ತ ಹಾತೊರೆದರೆ, ಕಾಣದ ಕಡಲನ್ನು ಸ್ಪರ್ಶಿಸುವ ತವಕ ಕನಸಿನದ್ದು. ಮನಸು ನಿಯಂತ್ರಣದಲ್ಲಿರದಿದ್ದರೆ ಜೀವನ ಹಾಳಗಬಹುದು, ಕನಸೇ ಇರದೇಯಿದ್ದರೆ ಅಥವಾ ಕೇವಲ ಕಾಲ್ಪನಿಕವಾಗಿ ಕನಸಿನೊಳಗೆ ಜೀವಿಸುತ್ತಿದ್ದರೆ ಆ ಮನಸು ಅವನತಿಯಾಗಬಹುದು.

ಮನಸಿಲ್ಲದಿದ್ದರೂ ಸಹ ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಇದ್ದಾರೆ, ಸಾಧನೆಯ ಉತ್ತುಂಗಕ್ಕೇರಿದವರಿದ್ದಾರೆ, ಕೆಲಸ ಮಾಡುವವರು ಮಾಡುತ್ತಲಿದ್ದಾರೆ, ಮದುವೆಯಾಗಿ ಜೀವನವನ್ನು ಸಾಗಿಸುವವರಿದ್ದಾರೆ, ಶಿಕ್ಷಣದಲ್ಲಿ ಮನಸಿಲ್ಲದಿದ್ದರೂ ಅನಿವಾರ್ಯ ಕಾರಣಗಳಿಂದ ಬಾಹ್ಯ ಒತ್ತಡ ಹಾಗೂ ಪ್ರೇರಕಗಳಿಂದ ಮುನ್ನುಗ್ಗಿದ್ದವರಿದ್ದಾರೆ, ಬಹುಶ: ಕನಸಿಯಿಲ್ಲದೇ ಇರುವ ಒಂದೇ ಒಂದು ಮನಸು ಸಹಿತ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಯುಗದ ಸಾಧನೆಯ ಹಾದಿಯಲ್ಲಿ ಯಶಸ್ಸನ್ನು ಪಡೆದಿಲ್ಲವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಮನಸಿನ ಹತಾಶೆ, ನೋವು- ನಲಿವುಗಳಿಗೆ, ಸುಖ-ದು:ಖಗಳಿಗೆ, ಆನಂದತೆಗೆ, ತುಮುಲತೆಗೆ, ಭಾವೋದ್ವೇಗಗಳಿಗೆ, ನಿರೀಕ್ಷೆಗಳಿಗೆ ಸ್ಪಂದಿಸುವ ಇನ್ನೊಂದು ಸ್ವಚ್ಛಂದವಾದ ಮನಸು ನಿರೀಕ್ಷಿಸಿಸುತ್ತಿರುತ್ತವೆ, ಸ್ಪಂದಿಸುವ ತವಕದಲ್ಲಿರುತ್ತದೆ, ಕೂಡಿಕೊಳ್ಳುವ ವೇಗದ ದಾರಿಯಲ್ಲಿರುತ್ತದೆ. ವಿಚಿತ್ರವೆಂದರೆ, ಮುಂದುವರಿದ ನಾಗರಿಕ ಸಮಾಜದಲ್ಲಿ ಕನಸಿನ ಆದ್ರ್ರನಾದಗಳಿಗೆ ಒಂದೇ ಒಂದು ಕನಸು ಸಹ ಕಿಂಚಿತ್ತೂ ಪ್ರತಿಕ್ರಿಯಿಸುವದಾಗಲಿ ಇಲ್ಲವೇ ಸ್ಪಂದಿಸುವುದಾಗಲಿ ಅಥವಾ ಕರುಣೆಯು ಸಹಿತ ಇಲ್ಲವಾಗಿದೆಂದರೆ ಅದೊಂದು ಸೋಜಿಗವೆನಿಸುವ ವಿದ್ಯಮಾನ.

ಎಲ್ಲೋ ಇರುವ ದೃಶ್ಯವನ್ನು, ಘಟನೆಯನ್ನು, ವಸ್ತುವನ್ನು, ಕಣ್ಣಿನ ಮುಂದೆ ತಂದು ನಿಲ್ಲಿಸುವ ಸಾಮಥ್ರ್ಯ, ತಂತ್ರಗಾರಿಕೆ ಕನಸಿಗಿದೆ. ವಿಪರ್ಯಾಸವೆಂದರೆ, ಹತ್ತಿರವಿರುವ ಮನಸಿನ ನೋವು-ನಲಿವಿನ ಭಾವನೆಗಳಿಗೆ ಅನುಭೂತಿ ಇಲ್ಲವೇ ಸಹಾನುಭೂತಿಯ ಸೌಜನ್ಯವು ಸಹಿತ ಇನ್ನೊಂದು ಮನಸಿಗಿಲ್ಲವೆಂದರೆ ಇದೊಂದು ದುರಂತದ ಸಂಕೇತ. ಕನಸು ಮತ್ತು ಮನಸುಗಳ ತೊಳಲಾಟದಲ್ಲಿ, ಕನಸಿನೊಳಗೆ ಮನಸಿನ ಹುಡುಕಾಟವೊ ಅಥವಾ ಮನಸಿನ ಹೃದಯಾಂತರದೊಳಗೆ ಕನಸುಗಳ ಗೂಡು ಕಟ್ಟುವ ಹೆಬ್ಬಯಕೆಯೋ ಗೊತ್ತಿಲ್ಲ. ಎರಡು ಸಹಿತ ಮಾನವ ಜೀವಿಯ ಅತ್ಯಮೂಲ್ಯ ಮನೋ-ಸಾಮಾಜಿಕ ಅಗತ್ಯತೆಗಳು. ಕಾಣುವ ಕನಸನ್ನು ಮನಸ್ಸು ನನಸಾಗಿಸಬಹುದು. ಮನಸಿಗೆ ಕನಸಿನ ಬೀಜ ಬಿತ್ತುವ ಸಾಮಥ್ರ್ಯವಿಲ್ಲವೆಂದರೆ ಕನಸು ಕನಸಾಗಿಯೇ ಕರಗಿಹೋಗುತ್ತದೆ. ಕನಸಿನ ಗೋಪುರ ಕಟ್ಟಬೇಕಾದರೆ ಅತ್ಯಮೂಲ್ಯವಾದ ವಸ್ತುವಿನ ಅವಶ್ಯಕತೆಯಿದೆ ಅದುವೇ ‘ಮನಸು’. ಇದರ ಗಟ್ಟಿತನ, ಬಲಿಷ್ಟತೆಯು ಅಸಾಧ್ಯವಾದ ಕೆಲಸ ಕಾರ್ಯವನ್ನು ಸಾಧಿಸುವಲ್ಲಿ ಕ್ಷಣ ಕ್ಷಣಕ್ಕೂ ಪ್ರೇರಕ ಶಕ್ತಿಯಾಗಿ ಸದಾ ಜಾಗೃತವಾಗಿರುತ್ತೆದೆ. ಇದುವೇ ಮಾನವ ಶರೀರದ ಮುಖ್ಯ ಅಂಗ. ಇದು ಸದಾಕಾಲ ಸಂತೋಷವಾಗಿರಬೇಕಾದರೆ ಅದಕ್ಕೆ ಕನಸು ಕಾಣುವ ಮನಸಿನ ಅವಶ್ಯಕತೆಯಿದೆ. ವಾಸ್ತವದಲ್ಲಿ ಇದರ ಪ್ರಸ್ತುತತೆಯ ಪ್ರಭಾವವಿದ್ದರೂ ಸಹ ಲೌಕಿಕ ಜಗತ್ತಿನ ಸಂಕೀರ್ಣವಾದ ಬದುಕಿನ ಜೇಡರ ಬಲೆಯೊಳಗೆ ಮಾನವ ಸಿಲುಕಿ ಹೊರಬರದೇ ವಿಲವಿಲನೆ ಚಡಪಡಿಸುತ್ತಿದ್ದಾನೆ. ಲೌಕಿಕ ಜಗತ್ತಿಗೂ ಮೀರಿದ ಮನೋಹರವಾದ ಪ್ರಪಂಚದ ಸವಿಯನ್ನು ಸವಿಯಲು ಕನಸು ಬೇಕೆ ಬೇಕು. ಆದರೆ ಆ ಕನಸು ರೂಪುಗೊಳ್ಳಬೇಕಾದರೆ ಅಲ್ಲಿ ಮನಸಿರಬೇಕು.

ಹೇಗಿದೆ ನೋಡಿ ಕನಸು ಮತ್ತು ಮನಸು ಎಂಬ ಪದಗಳ ಮೋಡಿಯ ಚಮತ್ಕಾರ. ಕನಸು ಕಾಣಿರಿ ಆದರೆ ಅದರಲ್ಲಿಯೆ ಕಾಲಹರಣ ಬೇಡ. ಮನಸಿಟ್ಟು ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಿ ಕಾಣುವ ಕನಸು ಕಾರ್ಯರೂಪಕ್ಕೆ ಬರುತ್ತದೆ. ನಿಮ್ಮೆಲ್ಲ ನವನವೀನ ಕನಸುಗಳು ಬೆಳಕಿನಂತೆ ಪ್ರಜ್ವಲಿಸಿ ಸಮಾಜಕ್ಕೆ ಹೊಸ ಸಂದೇಶ ತರಲಿ, ದಾರಿದೀಪವಾಗಲಿ. ಜೊತೆಗೆ ಈ ಹಣತೆಯ ಬೆಳಕು ಮನುಷ್ಯ ಕುಲದ ಎಲ್ಲ ಮನಸುಗಳಿಗೆ ಹೊಸ ಚೈತನ್ಯ, ಉತ್ಸಾಹ, ಹುಮ್ಮಸ್ಸನ್ನು ದಯಪಾಲಿಸಲಿ.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal